ನಮ್ಮೂರಂದರ ಅದು ನಮ್ಮೂರು ಮಾತ್ರ ಅಲ್ಲ, ನಿಮ್ಮೂರೂ ಆಗಿರಬಹುದಾದಂತಹ ಒಂದು ಸಾಮಾನ್ಯ ಹಳ್ಳಿ, ವರದಾ ನದಿಯ ದಡದ ಮ್ಯಾಲಿರೋ ಒಂದು ಚಿಕ್ಕ ಊರು. ನಾವೆಲ್ಲಾ ಚಿಕ್ಕವರಿದ್ದಾಗ, ನಿಮ್ಮೂರಲ್ಲಿನ ವಿಶೇಷತೆ ಹೇಳರೀ ಅಂದರೆ, ನಮ್ಮೂರಿಗೆ ದಿನಕ್ಕೆ ಒಂದು ಬಸ್ಸು ಬರತದ ಅಂತಿದ್ವಿ, ಅದು ಸ್ವರ್ಗ ಲೋಕದಿಂದ ಬಂದ ಪುಷ್ಪಕ ವಿಮಾನಕ್ಕೂ ವಿಶೇಷದ್ದು, ಅದು ಗರ್ಭಿಣಿ ಸ್ತ್ರೀಯಂತೆ ಸದಾ ಹೊಟ್ಟೆ ಊದಿಸಿಕೊಂಡಿರುತ್ತಿತ್ತು, ಅಲ್ಲದೇ, ಇನ್ನು ಯಾರೂ ಹತ್ತಲಿಕ್ಕೆ ಸಾಧ್ಯವಿಲ್ಲ ಅನಿಸುವಷ್ಟು ಜನರನ್ನ ತನ್ನ ಉದರದೊಳಗ ತುಂಬಿಕೊಂಡು ಪರಮಾತ್ಮನಂಗ ನಮಗ ಕಾಣತಿತ್ತು, ಇನ್ನೊಂದು ವಿಶೇಷ ಅಂದರ, ಈ ಬಸ್ಸನ್ನು ನಾವು ಪರಮಾತ್ಮನ “ಅತ್ಯತಿಷ್ಟ ದಶಾಂಗೂಲಂ” ಎಂಬ ಗುಣಕ್ಕೂ ಸುಲಭವಾಗಿ ಹೋಲಿಸಬಹುದು. ಯಾಕೆಂದರೆ, ಈ ಬಸ್ಸು ಅನುದಿನವೂ ತುಂಬಿಕೊಂಡು ಬರೋದರಿಂದನೇ, ಅದು ಬಸ್ ಸ್ಟಾಪ್ ಅನ್ನೋ ಬೇವಿನ ಮರದ ಕೆಳಗೆ ಜನರು ಕಾದು ಕೊಂಡು ನಿಂತು, ಕೂತು, ಮಲಗಿದ್ದರೂ ಆ ಬಸ್ಸು ಮಾತ್ರ, ಬಸ್ ಸ್ಟಾಪ್ ನಿಂದ ದಶ ಅಂಗುಲ ಹಿಂದೆಯೋ ಮುಂದೆಯೋ ನಿಲ್ಲುತ್ತದೆ. ಅದನ್ನು ಬಸ್ಸು ನಿರ್ಧರಿಸುತ್ತದೆ, ಜನರಲ್ಲ. ಅನ್ನೋದಂತೂ ಸತ್ಯ. ಇರಲಿ, ನಾವೀಗ ಮಾತಾಡುವುದು ಬಸ್ಸಿನ ಬಗ್ಗೆಯಲ್ಲವಲ್ಲ, ನಮ್ಮೂರಿನಲ್ಲಿ ಊರಿನ ಜನರೆಲ್ಲರೂ ತುಂಬ ಉಬ್ಬಿನಿಂದ ಅನೇಕ ಹಬ್ಬಗಳನ್ನು ಜಾತ್ರೆಗಳನ್ನೂ ಒಟ್ಟಾಗಿ ಆಚರಿಸುತ್ತಾರೆ. ಆದರೆ. ಈ ರಾಷ್ಟ್ರೀಯ ಹಬ್ಬಗಳನ್ನು ಮಾತ್ರ ನಮ್ಮೂರಿನ ಪ್ರಾಥಮಿಕ ಶಾಲೆಯಲ್ಲಿನ ಮಕ್ಕಳೊಂದಿಗೆ, ಶಿಕ್ಷಕರು ಮಾತ್ರ ಆಚರಿಸುತ್ತಾರೆ. ಊರ ತುಂಬಾ ಪ್ರಭಾತ ಫೇರಿ ಹೋಗುತ್ತಾರೆ. ಯಾರಾದರೂ ಪಂಚಾಯಿತಿ ಛೇರಮನ್ ಅಥವಾ ಸದಸ್ಯರು ಅಧ್ಯಕ್ಷರಾಗಿ, ಶಾಲೆಗೆ ಬಂದಿರುತ್ತಾರೆ, ಮಕ್ಕಳು ನಾಲ್ಕು ದೇಶ ಭಕ್ತಿ ಗೀತೆಗಳನ್ನು ಹಾಡುತ್ತಾರೆ. ನಂತರ ಶಿಕ್ಷಕರು ಆಯಾ ಹಬ್ಬಗಳ ವಿಷಯವಾಗಿ ನಾಲ್ಕು ಮಾತಾಡುತ್ತಾರೆ. ಗಾಂಧೀಜಿಯ ಫೋಟೋಗೆ ಹೂ ಏರಿಸಿ, ಗಂಧದ ಕಡ್ಡಿ ಬೆಳಗುತ್ತಾರೆ. ಅಧ್ಯಕ್ಷರು, ಶಿಕ್ಷಕರುಗಳಿಗೆ ಚಹಾ ತರಿಸುತ್ತಾರೆ, ಅಲ್ಲಿಗೆ ಆಚರಣೆಯ ಮುಕ್ತಾಯವಾಗುತ್ತದೆ.
ಇದೇನು ವಿಶೇಷ, ಅದನ್ನೇನು ಅಷ್ಟು ದೊಡ್ಡದಾಗಿ ಹೇಳುತ್ತೀರಿ, ಅನ್ನಬೇಡಿರಿ, ಒಮ್ಮೆ ನಮ್ಮೂರಿನ ಒಬ್ಬ ಪಡ್ಡೆ ಹುಡುಗನಿಗೆ ಒಂದು ಹುಡುಗಿಯ ಮೇಲೆ ಮನಸ್ಸಾಯಿತು, ಅಂದರೆ, ಅಣ್ಣಂಗೇ ಲವ್ವಾಗಿದೆ, ಅಣ್ಣಂಗೇ ಲವ್ವಾಗಿದೆ, ಅಂತ ಆಯ್ತು. ಅವನೇನು ನಮ್ಮೂರಿನ ವರದಾ ನದಿಯ ದಂಡೆಯ ಮೇಲೆ, ವಡಗಲ್ ನ ಹಾಸು ಕಲ್ಲುಗಳ ಮೇಲೆ ಮಲಗಿ ವಿರಹ ಗೀತೆಯನ್ನು ಹಾಡಲಿಲ್ಲ, ಊರ ಮುಂದಿನ ತಿಮ್ಮಪ್ಪನ ಬೆಟ್ಟದ ಮೇಲೆ ಪ್ರೇಮಿಯಂತೆ ತಿರುಗಾಡಲಿಲ್ಲ. ಆದರೆ, ನೇರವಾಗಿ, ಆ ಹುಡುಗಿಯ ಮನೆಗೆ ಹೋಗಿ, ಅವಳ ಹೆಸರನ್ನು ಕೂಗಿದ. ಆ ಹುಡುಗಿ ಹೆಸರು, ಕಸ್ತೂರಿ, ಅಕೀ ಹೆಸರಿನ ಹಿಂದೆಯೂ ಒಂದು ದೊಡ್ಡ ಕತಿ ಅದ. ಅದೇನು ಅನ್ನಬೇಡರಿ, ನವೆಂಬರ – ಒಂದು ಆಚರಣೆಯ ವಿಶೇಷತೆಗೂ ಮೊದಲು ಅದೇ ಕತಿ ಹೇಳತೇನಿ.
ನಮ್ಮ ಕಸ್ತೂರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ, ಐದನೆ ತರಗತಿಯೊಳಗ ಓದುತ್ತಿದ್ದಳು. ಆಗ ಕಸ್ತೂರಿ ಇಂಗ್ಲೀಷ್ ನ ಎಬಿಸಿಡಿ ಕೂಡಾ ಕಲಿತಿದ್ದಳು, ವಾರ್ಷಿಕ ಇನ್ಸಪೆಕ್ಷನ್ ಮಾಡಲಿಕ್ಕೆ ಮೇಲಾಧಿಕಾರಿಗಳು ಬಂದಾಗ, ಶಿಕ್ಷಕರು ಕಸ್ತೂರಿಯನ್ನ ಮುಂದೆ ಕೂಡಿಸಿದರು, ಇನ್ಸಪೆಕ್ಟರ್ ಕೇಳುವ ಎಲ್ಲಾ ಪ್ರಶ್ನೆಗಳಿಗೂ ನೀನೇ ಉತ್ತರ ಹೇಳಬೇಕು, ನೀನೇನು ಹೇಳುತ್ತೀಯೋ ಅದನ್ನೇ ಉಳಿದವರು ಹೇಳಲಿ ಅಂದರು, ಇನ್ಸಪೆಕ್ಟರ್ ಬಂದರು, ವಾಟ್ ಈಸ್ ಯುವರ್ ನೇಮ್ ಅಂದರು. ಕೂತಿದ್ದ ಕಸ್ತೂರಿ, ಭಯ ಭಕ್ತಿಯಿಂದ ಎದ್ದು ನಿಂತು, ಮೈ ನೇಮ್ ಈಸ್ ಕಸ್ತೂರಿ, ಅಂದಳು. ನಮ್ಮ ಇನ್ಸಪೆಕ್ಟರ್ ಸಾಹೇಬರು ಭಾಳಂದ್ರ ಭಾಳೇ ಖುಷಿಯಾದರು, ಬಾಜೂಕ ಕೂತಿದ್ದ ಇನ್ನೊಬ್ಬಾಕಿನ್ನ ಎಬ್ಬಿಸಿದರು, ವಾಟ್ ಈಸ್ ಯುವರ್ ನೇಮ್ ಅಂತ ಕೇಳಿದರು. ಆ ಹುಡುಗಿನೂ ಭಯ ಭಕ್ತಿಯಿಂದ ಎದ್ದು ನಿಂತು, ಮೈ ನೇಮ್ ಈಸ್ ಕಸ್ತೂರಿ, ಅಂದಳು. ಓ, ಇವರಿಬ್ಬರೂ ಕಸ್ತೂರಿನೇ ಅಂದವರು ಹಿಂದಿನ ಸಾಲಿನ ಹುಡುಗಿಯನ್ನು ವಾಟ್ ಈಸ್ ಯುವರ್ ನೇಮ್ ಅಂತ ಕೇಳಿದರು. ಆಕೀನೂ ಭಯ ಭಕ್ತಿಯಿಂದ ಎದ್ದು ನಿಂತು, ಮೈ ನೇಮ್ ಈಸ್ ಕಸ್ತೂರಿ, ಅಂದಳು. ಆಂ…. ಅಂದರವರು, ಬಾಜೂಕಿನ ಹುಡುಗಿನ್ನ ಕೇಳಿದರು, ಆಕೀನೂ ಭಯ ಭಕ್ತಿಯಿಂದ ಎದ್ದು ನಿಂತು, ಮೈ ನೇಮ್ ಈಸ್ ಕಸ್ತೂರಿ, ಅಂದಳು.
ಇನ್ಸಪೆಕ್ಟರ್ ತಲೀ ತಿರಿಗಿತು. ತಮ್ಮ ತೋರು ಬೆರಳನ್ನು ತೋರಿಸಿ, ವಾಟ್ ಈಸ್ ದಿಸ್ ಅಂದರು, ಎಲ್ಲಾ ಹುಡುಗೀರೂ ಕಸ್ತೂರಿ ಮಾರಿ ನೋಡಿದರು, ಕಸ್ತೂರಿ ಧೈರ್ಯಾದಿಂದ ಎದ್ದು ನಿಂತು, ದಿಸ್ ಇಸ್ ಎ ಅಂದಳು, ಅಷ್ಟೊತ್ತಿಗೇ, ಇನ್ಸಪೆಕ್ಟರ್, ಕಸ್ತೂರಿಗೆ ನೀ ಬ್ಯಾಡ, ಕೂಡು, ಅಂದು, ಹಿಂದಿನ ಸಾಲಿನ ಹುಡುಗಿಗೆ ನೀನು ಹೇಳು ಅಂದು ಬಿಟ್ಟರು. ಪಾಪ ಕಸ್ತೂರಿಯಾದರೂ ಏನು ಮಾಡಬೇಕು, ಕೂತು ಬಿಟ್ಟಳು, ಹಿಂದಿನ ಸಾಲಿನ ಹುಡುಗಿ ಎದ್ದವಳೇ, ಕಸ್ತೂರಿ ಹೇಳಿದಂತೆಯೇ ಹೇಳಿದಳು. ದಿಸ್ ಈಸ್ ಎ …… ಇನ್ಸಪೆಕ್ಟರ್ ಖುಷಿಯಿಂದ ಮುಂದ ಹೇಳು ಅಂದರು, ನಮ್ಮ ಹುಡುಗಿ ಮುಂದೇನು ಹೇಳಬೇಕು, ಕಸ್ತೂರಿ ಹೇಳೇ ಇಲ್ಲ, ಇಕೀ ಹೇಳವಲ್ಲಳು, ಇನಸ್ಪೆಕ್ಟರ್ ಬಿಡವಲ್ಲರು. ಕಡೀಕ ಅಕಿನೂ ಧೈರ್ಯ ಮಾಡಿ, ಇನ್ಸಪೆಕ್ಟರ್ ತೋರು ಬೆರಳನ್ನೇ ತೋರಿಸಿ, ದಿಸ್ ಈಸ್ ಎ ಬಟ್ ಅಂದು ಬಿಟ್ಟಳು. ಖರೇ ಅದ, ನಮ್ಮೂರಾಗ, ಬೆರಳಿಗೆ, ಬಟ್ಟು ಅಂತಾರ. ಆಗಿಂದ ನಮ್ಮ ಕಸ್ತೂರಿಗೆ ಎಲ್ಲಾರೂ ಕಸ್ತೂರಿ ಅಂದರೆ, ಆ ಇನ್ನೊಂದು ಹುಡುಗಿಗೆ, ಕಸ್ತೂರಿಯ ಪರಿಮಳ ಅಂತ ಕರೀತಿದ್ದರು. ಇರಲಿ, ಈಗ, ನಮ್ಮೂರಾಗಿನ ನವೆಂಬರ ಒಂದರ ಆಚರಣೆಗೆ ಬರೋಣಂತ.
ಅದೇ, ನಾನು ನಿಮಗೆ ಹೇಳಿದೆನಲ್ಲಾ, ನಮ್ಮೂರಿನ ಪಡ್ಡೆ ಹುಡುಗನಿಗೆ, ಈ ಕಸ್ತೂರಿಯ ಮ್ಯಾಲೆ ಲವ್ವಾಗಿತ್ತು, ಅದನ್ನೇ ಕೇಳೋದಕ್ಕೋ, ಹೇಳೋದಕ್ಕೋ ಆ ಕಸ್ತೂರಿಯ ಮನೆಗೆ ಹೋದ, ಕಸ್ತೂರಿ ಅಂದ, ಆದರ, ದುರ್ದೈವ, ಬಾಗಲದಾಗ, ಕಸ್ತೂರಿ ಇರಲಿಲ್ಲ, ಇದ್ದರೂ ಪಾಪದ ಕಸ್ತೂರಿಗೆ ಈ ಲವ್ವೂ ಗೊತ್ತಿಲ್ಲ, ಪಿವ್ವೂ ಗೊತ್ತಿಲ್ಲ. ಏನಣ್ಣಾ ಅಂತಿದ್ದಳೋ ಏನೋ, ಈ ರಾಖೀ ಸೆಷೆನ್ ಬ್ಯಾಡ ಅಂತನೇ ದೇವರು, ಬಾಗಲದಾಗ ಕಸ್ತೂರಿಯನ್ನು ಕೂಡಸಲಿಲ್ಲ. ಅಲ್ಲೆ ನಮ್ಮ ಹುಡುಗನ ಮಾವ ನಿಂತಿದ್ದ, ಪಾಪ, ಮಾವ ಯಾವ ಮೂಡನ್ಯಾಗಿದ್ದನೋ ಗೊತ್ತಿಲ್ಲ, ಸರ್ರನೇ, ಯಾವಾನಲೇ ನೀನು, ಕಸ್ತೂರಿಯಂತ, ಕಸ್ತೂರಿ, ಅಕಿಗೇನು ನೀನು ಹೆಸರಿಟ್ಟಿದ್ದೇನು, ಹೆಸರ ಹಿಡದು ಕರೀಲಿಕ್ಕೆ ಅಕಿಯೇನು ನಿನ್ನ ಮಾಡಿಕೊಂಡ ಹೆಂಡತಿಯೇನಲೇ ಮಂಗ್ಯಾನ ಮಗನ. ಹೋಗಲೇ ಹೋಗು, ಅಂತ ಬೈದು ಬಿಟ್ಟ, ಇನ್ನೇನು ಮಾಡಲಿಕ್ಕಾಗತದ. ನಮ್ಮ ಹುಡುಗ ಸಪ್ಪಗ ಬಂದ. ಇವನ ಈ ಸಪ್ಪಗಿನ ಮಾರೀ ನೋಡಿದ ಗೆಳೆಯರೆಲ್ಲಾ, ನೀಯಾಕಲೇ ಹೆದರತೀದಿಲೇ, ನಿನಗ, ಆ ಕಸ್ತೂರಿ ಅಂತ ಕರೀ ಬ್ಯಾಡ ಅಂದನೋ ಇಲ್ಲೋ ನಿಮ್ಮ ಮಾವ. ನೀ ಒಬ್ಬನಲ್ಲಾ, ಇಡೀ ಊರು ತುಂಬಾ ಕಸ್ತೂರಿ, ಕಸ್ತೂರಿ ಅಂತ ಕೂಗೋ ಹಂಗ ಮಾಡೋಣ ಬಿಡು ಅಂತ ಸಮಾಧಾನ ಮಾಡಿದರು. ಆದರೆ, ಅದು ಹೆಂಗ.
ಅದು ದೀಪಾವಳಿ ದಿನಗಳು, ನಮ್ಮ ಹುಡುಗ, ಒಂದು ವಿಚಾರ ಮಾಡಿದ. ಎರಡೇ ದಿನಕ್ಕೆ ಕನ್ನಡ ರಾಜ್ಯೋತ್ಸವ. ಮಾಮೂಲಿ ಆಚರಣೆ ಶಾಲಿಯೊಳಗಿತ್ತು, ಸಂಜೆಗೆ ಊರಿನ ಅಗಸೀ ಬಾಗಿಲದ ಬೈಲಿನೊಳಗ, ಆ ಹುಡುಗನ ಗೆಳೆಯರೆಲ್ಲಾ ಸೇರಿ ಹಂದರಾ ಹಾಕಿದರು, ನಮ್ಮ ಖಾದ್ರಿ ದಾದಾನ ಕೇಳಿ ಮನವಿ ಮಾಡಿಕೊಂಡು ಕೆಲವು ಲೈಟಿನ ಸರಾ ಮತ್ತ ಮೈಕ ಸೆಟ್ಟು ತಂದರು, ನವೆಂಬರ ಒಂದನೇ ತಾರೀಖು, ಇಡೀ ಊರಿಗೇ ಸಂಭ್ರಮದ ಕನ್ನಡ ರಾಜ್ಯೋತ್ಸವದ ಆಚರಣೆ ಮಾಡಬೇಕು ಅಂತ ಊರ ತುಂಬ ಸಾರಿದರು, ನಮ್ಮೂರಿನ ಶಾಲೆಯ ಮಕ್ಕಳಿಗೆ, ಕನ್ನಡದ ಹಾಡು ಹಾಗೂ ನೃತ್ಯದ ಸ್ಪರ್ಧೆ ಅಂತ ಹೇಳಿದರು, ಸಂಜೆ ಆಗೋದಕ್ಕೂ ಮೊದಲೇ ಊರಿನ ಜನರೆಲ್ಲಾ ಅಗಸೀ ಬಾಗಲದಾಗ ಪೆಂಡಾಲಿನ ಮುಂದ ಸೇರಿದರು, ಆಗಲೇ ಅಲ್ಲಿ ಒಂದು ಸ್ಲೋಗನ್ ಶುರುವಾತು. ನಮ್ಮ ಹುಡುಗಾ ಕೂಗಿದಾ, ಕೂತಿದ್ದವರೆಲ್ಲಾ ಹೇಳಿದರು, ಕನ್ನಡಾ ಕನ್ನಡಾ ಕಸ್ತೂರಿ ಕನ್ನಡಾ. ಒಂದಲ್ಲಾ, ಎರಡಲ್ಲಾ, ಹತ್ತಲ್ಲಾ, ನೂರಲ್ಲಾ, ಸಾವಿರವಲ್ಲಾ. ಒಂದೆರಡು ಗಂಟೆಯ ಕಾರ್ಯಕ್ರಮದೊಳಗೆ, ಕನಿಷ್ಟ ಒಂದು ಲಕ್ಷ ಸಲ ಊರಿನ ಜನರ ಬಾಯಿಯೊಳಗೆ ಬಂದಿದ್ದ ಶಬ್ದ, ಕನ್ನಡ ಕನ್ನಡ ಕಸ್ತೂರಿ ಕನ್ನಡ, ಕನ್ನಡ ಕನ್ನಡ ಕಸ್ತೂರಿ ಕನ್ನಡ.
ಈ ಘೋಷವಾಕ್ಯ ಮಕ್ಕಳಿಗೆ ಭಾಳಂದರ ಭಾಳ ಸೇರಿತ್ತು, ಈ ಕನ್ನಡ ರಾಜ್ಯೋತ್ಸವ ಆಚರಣೆಯೊಳಗ, ಪ್ರತಿ ಕ್ಷಣಾನೂ ಕನ್ನಡಾ ಕನ್ನಡಾ ಕಸ್ತೂರಿ ಕನ್ನಡ ಅನ್ನೋ ವಾಕ್ಯ ಮಕ್ಕಳ ಬಾಯಿ ತುಂಬಿತ್ತು. ಹಳ್ಳಿಯ ಜನರು ಕುರಿತೋದದೆಯೂ ಕಾವ್ಯ ಪ್ರಯೋಗ ಪರಿಣಿತ ಮತಿಗಳಾದ್ದರಿಂದ, ಈ ಸಾಂಸ್ಕೃತಿಕ ಕಾರ್ಯಕ್ರಮ ಭಾಳ ಚಂದ ನಡೀಲಿಕ್ಕತ್ತಿತ್ತು, ಯಾರೋ ಹಿರೇ ಮನಷ್ಯಾರು ಬಂದರು, ಒಂದು ಭಜನೀ ಹಾಡಿದರು, ಇನ್ನೊಬ್ಬರು ಬಂದರು ತಾವು ತಾಳ ಹಿಡದು ಒಂದು ಲಾವಣೀ ಹಾಡಿದರು, ಕೂತವರಿಗೂ ಹುರುಪೆದ್ದಿತು, ಡೊಳ್ಳಿನ ಪದಗಳು ಅದಕ್ಕ ನರ್ತನ ಎಲ್ಲಾ ಶುರುವಾತು, ನಮ್ಮೂರಿನವರೆಲ್ಲಾ ರಸಿಕರು, ಕಲಾವಿದರು, ಬೆಳಗಿನ ತನಕಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದೇ ನಡದವು, ಯಾರಿಗೂ ಬ್ಯಾಸರಾಂಬೋಣಿಲ್ಲ, ಎಲ್ಲಾರೂ ತಾವೇ ಪಾಳಿ ಮ್ಯಾಲ ಬಂದಂಗ, ಒಬ್ಬರಾದ ಮ್ಯಾಲೆ ಒಬ್ಬರು ತಾವೇ ಸ್ವಯಂ ಪ್ರೇರಣೆಯಿಂದ ಬಂದು ಕಾರ್ಯಕ್ರಮ ನೀಡಿದರು.
ಒಂದು ವಿಶೇಷ ಅಂದರ, ಒಬ್ಬರ ಪ್ರತಿಭಾ ಪ್ರದರ್ಶನ ಆದ ಕೂಡಲೇ ಇನ್ನೊಬ್ಬಾವ ಅಥವಾ ಇನ್ನೊಬ್ಬಾಕಿ ಬರೋ ಮೊದಲು, ಇಡೀ ಸ್ಟೇಜ್ ತುಂಬಾ ಕೂಗೋದು ಮಾತ್ರ ಕನ್ನಡ ಕನ್ನಡ ಕಸ್ತೂರಿ ಕನ್ನಡ ಅಂತ, ಆಮ್ಯಾಲೆ ಆಮ್ಯಾಲೆ, ಈ ಕನ್ನಡಾ ಕನ್ನಡಾ ಕಸ್ತೂರಿ ಕನ್ನಡಾ ಅನ್ನೋದು ಸೇರಿದ್ದ ಜನರೊಳಗೆ ಉತ್ಸಾಹ ತುಂಬುವ ಪ್ರೋತ್ಸಾಹಿಸುವ ಹಾಡಿನಂಗಾಗಿ ಹೋತು, ಈ ಟೀವಿ ಧಾರಾವಾಹಿಗಳ ನಡುನಡುವ ಜಾಹೀರಾತು ಬರೋ ಹಂಗ, ಗೀಗೀ ಪದಗಳ ನಡುವೆ, ಅರೆ ಗೀಯ್ ಗೀಯ್ ಗಾ ಗೀಯ್ ಗೀಯ್ ಅಂತ ಹೇಳೋ ಹಂಗ, ಕನ್ನಡಾ ಕನ್ನಡಾ ಕಸ್ತೂರಿ ಕನ್ನಡಾ ಅಂತ ಒಂದೊಂದು ಹಾಡಿನ ನಡುವೆಯೂ ಬರಲಿಕ್ಕೆ ಶುರುವಾತು. ಮುಖ್ಯಂದರ, ಕನ್ನಡದ ಕಾರ್ಯಕ್ರಮ, ನಮ್ಮ ಮಣ್ಣಿನ ಸೊಗಡು, ಕನ್ನಡ ಜಾತ್ರಿ ಹಂಗಾತಿದು.
ಆವಾಗ ನಮ್ಮೂರಾಗ ಇನ್ನೂ ಕನ್ನಡ ಶಾಲಿ ಮಾತ್ರ ಇದ್ದವು, ಊರ ತುಂಬ ನೂರಾರು ಚಾನಲ್ ಇರೋ ಟೀವಿ ಬಂದಿರಲಿಲ್ಲ, ಎಫ್ ಎಂ ರೆಡಿಯೋ ಇರಲಿಲ್ಲ, ಜನರಿನ್ನೂ ಆಕಾಶವಾಣಿಯ ಕರಿಯತ್ತು ಕಾಳಿಂಗ ಬಿಳಿಯತ್ತು ಮಾಲಿಂಗ ಸರದಾರದೆತ್ತು ಅಂತ ಕೃಷಿರಂಗ ಕೇಳತಿದ್ದರು, ಹೀಂಗಾಗಿ ಜನರೊಳಗ, ಸ್ವಂತ ಕಲೆನೂ ಇತ್ತು, ಅನುಕರಣೆಯ ಬುದ್ಧಿ ಇರಲಿಲ್ಲ, ಹಿಂಗಾಗಿ, ಪೂರ್ತಿ ಕನ್ನಡದ ಕಾರ್ಯಕ್ರಮ ಆಗಿತ್ತು, ಇನ್ನೇನು ಬೆಳ್ಳಿ ಮೂಡೋ ಹೊತ್ತಿಗೆ, ನಮ್ಮ ಪಡ್ಡೆ ಹುಡುಗ ಮೈಕಿನ ಮುಂದೆ ಬಂದ, ಮಾವ ಮೊನ್ನೆ ನಾನು ಕಸ್ತೂರಿ ಅಂದ ಕೂಡಲೇ, ಮಾರಿ ತಿರಗಿಸಿದೆಲ್ಲ, ಈಗ ನೋಡು ಊರ ಜನರೆಲ್ಲಾ ಒಂದು ಸಾವಿರ ಬಾರಿ ಕಸ್ತೂರಿ ಕನ್ನಡಾ ಅಂದಾರ, ಈಗೇನಂತೀಯಪಾ ಅಂದೇ ಬಿಟ್ಟ.
ನಮ್ಮ ಮಾವಗೂ, ಈ ಹುಡುಗನ ಚಾಣಾಕ್ಷತನ ಭಾಳ ಹಿಡಿಸಿತು, ಭಪ್ಪರೇ ಮಗನ, ಹುಡುಗಂದರ ಹೀಂಗಿರ ಬೇಕು ನೋಡು ಧೀಮಂತ ಭೀಮಸೇನನಂಗ, ನನಗ ಅಳಿಯಾ ಆಗಲಿಕ್ಕೆ ಯೋಗ್ಯ ಇದ್ದೀ ಅಂತ ಒಪ್ಪಿಕೊಂಡ ಬಿಟ್ಟ, ಯಾಕಂದರ, ನಮ್ಮೂರವರು ವರದಾ ನದಿ ನೀರು ಕುಡಿದವರು, ಗುಣಕೆ ಮತ್ಸರ ಉಂಟೇ ಅಂತ ನಮ್ಮೂರಿನ ರಸಿಕರನ್ನ ನೋಡಿಯೇ ಮಾಡಿದ ವಾಕ್ಯ ಇದು, ಮುಂದಿನ ನವೆಂಬರ್ ಒಂದನೇ ತಾರೀಖೀಗೂ ಮೊದಲೇನೇ ನಮ್ಮ ಪಡ್ಡೆ ಹುಡುಗನಿಗೆ ಕಸ್ತೂರಿ ಜೊತೆ ಮದುವ್ಯಾತು. ಈಗ ಆ ದಂಪತಿಗಳಿಗೆ ಸುಖೀ ದಾಂಪತ್ಯದ ಲಕ್ಷಣವಾಗಿ ಎರಡು ಮಕ್ಕಳೂ ಅವ. ಮತ್ತ ಹಂಗ ಇನ್ನೊಂದು ಹೇಳಲಿಕ್ಕೆ ಮರೆತೆ, ನಮ್ಮ ಕಸ್ತೂರಿಯ ಲಗ್ನಾದ ಮ್ಯಾಲೆ, ರಾಜ್ಯೋತ್ಸವನೂ ಇಲ್ಲ, ಕನ್ನಡ ಕನ್ನಡಾ ಕಸ್ತೂರಿ ಕನ್ನಡನೂ ಇಲ್ಲ, ಈಗೀಗಂತೂ ಇಂಗ್ಲೀಷ ಮೀಡಿಯಂ ಶಾಲೆಗಳ ಜಾಸ್ತಿ ಆಗಿ, ರಾಜ್ಯೋತ್ಸವ ಅಂದರ ಒಂದು ರಜಾ ಅನ್ನೋ ಹಂಗದ, ಅದಕ್ಕ ನಮ್ಮೂರ ಇತಿಹಾಸದಾಗೇ ಇದುವರೆಗೂ ಎಲ್ಲಾ ಜನಾ ಸೇರಿ ರಾಜ್ಯೋತ್ಸವದ ಆಚರಣೆ ಮಾಡಿದ್ದು ಕೇವಲ ಒಂದೇ ಬಾರಿ. ಅದೇ ನಮ್ಮ ಕಸ್ತೂರಿ ರಾಜ್ಯೋತ್ಸವ. ಹೆಂಗಿತ್ತು ನಮ್ಮೂರಿನ ನವೆಂಬರ್ ಒಂದು.
-ಡಾ.ವೃಂದಾ ಸಂಗಮ್.
ಅಂತೂ ಇಂತೂ ಕಸ್ತೂರಿ ಮದುವೆ ಆಯ್ತು. ಕನ್ನಡದ ಮಹಿಮೆ ಅಂದರೆ ಹಾಗೇ. ಎಲ್ಲರಿಗೂ ಒಳ್ಳೆಯದನ್ನೇ ಮಾಡುವ, ಒಳ್ಳೆಯದನ್ನೇ ಬಯಸುವ ಜಾಯಮಾನ. ಜೈ ಕನ್ನಡಾಂಬೆ!!