ಹೃದಯದ ಭಾಷೆ –ಕನ್ನಡ ಉಳಿಸಿ ಬೆಳೆಸಿ: ನಾಗರೇಖಾ ಗಾಂವಕರ

ಕನ್ನಡ ಎನೆ ಕುಣ ದಾಡುವುದೆನ್ನೆದೆ
ಕನ್ನಡವೆನೆ ಕಿವಿ ನಿಮಿರುವುದು!!
ಕಾಮನ ಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು- ಪ್ರಾಥಮಿಕ ಹಂತದಲ್ಲಿ ಕಲಿತ ಕುವೆಂಪು ಕವಿತೆಯ ಈ ಸಾಲುಗಳು ಬಾಯಲ್ಲಿ ಇಂದಿಗೂ ಮೆರೆದಾಡುತ್ತವೆ. ಯಾಕೆಂದರೆ ಅದು ಮಾತೃಭಾಷೆಯ ಬಗ್ಗೆ ನಮ್ಮಲ್ಲಿದ್ದ ಪ್ರೀತಿ ಅದರಲ್ಲಿದ್ದ ಸೊಗಡುತನ ಹಾಗೂ ಕನ್ನಡ ಎದೆಯ ಭಾಷೆಯಾಗಿರುವುದು ಅದಕ್ಕೆ ಕಾರಣ. ಆದರೆ ಇಂದು ಕನ್ನಡದ ಬಳಕೆ ಕಡಿಮೆಯಾಗುತ್ತಿದೆ. ಕನ್ನಡವೆಂದರೆ ಯುವ ಜನರಲ್ಲಿ ಒಂದು ರೀತಿಯ ತಾತ್ಸಾರ ಬೆಳೆಯುತ್ತಿರುವಂತೆ ಅನಿಸುತ್ತಿದೆ. ಹಾಗಾಗಿ ಕನ್ನಡ ಕಟ್ಟುವ ಕೆಲಸವಾಗಬೇಕಿದೆ.ಮಾತೃಭಾಷೆ ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ಏನು ಮಾಡಬಹುದು ಪ್ರಶ್ನೆ ನಮ್ಮ ಮುಂದಿದೆ.

ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಮಾತ್ರ ಕನ್ನಡ ನೆನಪಾದರೆ ಅದು ವಿಡಂಬನಾತ್ಮಕ ಪ್ರಯತ್ನವಾಗುತ್ತದೆ. ಹಾಗಾದರೆ ಕನ್ನಡ ಉಳಿಸಬೇಕಾದರೆ ಮೊದಲ ಪ್ರಯತ್ನಗಳು ಎಲ್ಲಿ ನಡೆಯಬೇಕು ಎಂದರೆ ಅದು ನಿತ್ಯದ ಕೆಲಸಗಳಲ್ಲಿ, ನಮ್ಮ ನಮ್ಮ ಮನೆಗಳಲ್ಲಿ. ನಮ್ಮ ನಮ್ಮ ಮನಗಳಲ್ಲಿ. ಮನೆಮನಗಳಲ್ಲಿ ಅದಕ್ಕೆ ಹೊಳಪು ನೀಡುವ ಕೆಲಸವಾಗಬೇಕು.ಕವಿ ಡಿ ಎಸ್.ಕರ್ಕಿ ಯವರು ಹಚ್ಚೇವು ಕನ್ನಡದ ದೀಪ ಕವಿತೆಯಲ್ಲಿ ಇದನ್ನೆ ಹೇಳಿದ್ದಾರೆ. ನಮ್ಮ ಕವಿ ಮಹೋದಯರು ಕನ್ನಡದ ಕಂಪನ್ನು ಎಷ್ಟೆಲ್ಲಾ ಹಾಡಿಹೊಗಳಿದ್ದಾರೆ. “ಕನ್ನಡಕೆ ಹೋರಾಡು ಕನ್ನಡದ ಕಂದ,ಕನ್ನಡವ ಕಾಪಾಡು ನನ್ನ ಆನಂದ. ಜೋಗುಳದ ಹರಕೆಯಿದು ಮರೆಯದಿರು ಚಿನ್ನ ಮರತೆಯಾದರೆ ಅಯ್ಯೋ ಮರತಂತೆ ನನ್ನ” ಅಂತಾ ಕುವೆಂಪು ಹಾಡಿದ್ದಾರೆ. ಮೊದಲು ಮಕ್ಕಳಲ್ಲಿ ಈ ಜ್ಞಾನೋದಯವಾಗುವಂತೆ ನಾವೆಲ್ಲ ಪ್ರಯತ್ನಿಸಬೇಕಾಗಿದೆ.

ಮನೆಯಲ್ಲಿ ನಮ್ಮ ಮಾತೃಭಾಷೆಗೆ ಹೆಚ್ಚು ಒಲವುಳ್ಳ ಪರಿಸರವಿರುವಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ.ಅದರಲ್ಲೂ ಕನ್ನಡದ ಮಟ್ಟಿಗೆ ಹೇಳುವುದಾದರೆ ಕನ್ನಡದ ಭಾಷಾ ಸೊಗಡು ಪ್ರಾದೇಶಿಕ ಶ್ರೀಮಂತಿಕೆಯನ್ನು ಹೊಂದಿರುವಷ್ಟು ಬಹುತೇಕ ಬೇರೆ ಭಾಷೆಗಳಲ್ಲಿ ಕಾಣಲು ಸಾಧ್ಯವಿಲ್ಲವೇನೋ? ಈ ಮೂಲಕ ನಮ್ಮ ಸಂಸ್ಕೃತಿಯನ್ನು ಬೆಳೆಸಬಹುದಾಗಿದೆ. ಭಾಷೆ ಸಂಸ್ಕೃತಿ ಪರಸ್ಪರ ಒಂದಕ್ಕೊಂದು ಪೂರಕವಾಗಿವೆ. ಹಾಗಾಗಿ ಸಂಸ್ಸೃತಿಯ ಬೆಳವಣ ಗೆಯಲ್ಲಿ ಭಾಷೆ ಪ್ರಮುಖ ಸಾಧನ. ಭಾಷೆಯಿಂದ ಸಂಸ್ಕೃತಿಗೆ ಹೆಚ್ಚು ಮಾನ್ಯತೆ ಸಿಗುತ್ತದೆ.ಸಂಸ್ಕೃತಿಯನ್ನು ಮನೆಯಲ್ಲಿಯೇ ಕಲಿಸಲಾಗುತ್ತದೆ. ಹಾಗೇ ಭಾಷೆ ಮಾತೃಭಾಷೆಯ ಮಹತ್ವ ಅದರ ಸೊಗಡು ಇತ್ಯಾದಿಗಳ ಬಗ್ಗೆ ಮನೆಯಿಂದಲೆ ಅಭಿಮಾನ ಅಭಿಯಾನ ಬೆಳೆಸಬೇಕಾದದ್ದು ಅಗತ್ಯ. ತನ್ ಮಗುವಿಗೆ ಕನ್ನಡದಲ್ಲಿ ಸರಾಗವಾಗಿ ವ್ಯವಹರಿಸುವಷ್ಟು ಭಾಷಾ ಜ್ಞಾನವನ್ನು ನೀಡುವ ಮೂಲಕ ಪ್ರತಿಯೊಬ್ಬ ಪೋಷಕನೂ ತನ್ನ ತಾಯ್ನೆಲದ ನುಡಿಯನ್ನು ಕಾಪಾಡುವ ಪ್ರಯತ್ನ ಮಾಡಬಹುದು. ಇನ್ನು ವ್ಯವಹಾರಿಕ ಭಾಷೆಯಾಗಿ ಸಮಾಜದಲ್ಲಿ ಕನ್ನಡವನ್ನೇ ಬಳಸುವುದು. ಇತರ ಭಾಷೆಗಳ ಬಲ್ಲೆೆವಾದರೂ ನಮ್ಮತನವನ್ನು ಕಾಯ್ದುಕೊಳ್ಳುವುದು.

ಕನ್ನಡ ಮಾತೃಭಾಷಿಗರಲ್ಲಿ ಸಹಜವಾಗಿ ಮಾತೃ ಬಾಷೆಯ ಅಭಿಮಾನ ಇರುವುದನ್ನು ನಾವ್ಯಾರು ಅಲ್ಲಗಳೆಯಲಾಗದು. ಆದರೆ ಎಂಬ ಪ್ರಶ್ನೆ ಬಂದಾಗ ಎದ್ದು ನಿಲ್ಲುವ ವಿಚಾರ ಇಂದಿನ ಯುವ ಮನಸ್ಸುಗಳು ಪರಭಾಷೆಯ ವ್ಯಾಮೋಹದಲ್ಲಿ ಮೂಲ ನೆಲೆಯನ್ನು ತೊದಲು ನುಡಿಯನ್ನು ಮರೆತು ಹಿತ್ತಲ ಗಿಡ ಮದ್ದಲ್ಲ ಎಂಬಂತೆ ವರ್ತಿಸುತ್ತಿರುವುದು ನಮ್ಮೆಲ್ಲರ ಗ್ರಹಿಕೆಗೆ ಬಂದ ಸಂಗತಿ. ಆ ಕಾರಣಕ್ಕಗಿಯೇ ಕನ್ನಡ ಕಟ್ಟುವ ಕೆಲಸ ಮತ್ತೆ ಮತ್ತೆ ಆಗಬೇಕಾಗಿದೆ.. ಮಕ್ಕಳಲ್ಲಿ ಕನ್ನಡ ಪುಸ್ತಕಗಳ ಓದುವ ಹವ್ಯಾಸ ಬೆಳೆಯಬೇಕು. ಮಾತೃಭಾಷೆಯಲ್ಲಿಯೇ ಮನೆಯ ಜನ ಮಾತನಾಡುವುದರಿಂದ ಭಾಷಾ ಜ್ಞಾನ ಸ್ವಾಮಿತ್ವ ಪಡೆಯಬಹುದು. ಉತ್ಯಮ ಕನ್ನಡ ಪುಸ್ತಕಗಳ ಆಯ್ಕೆ ಮಾಡಿ ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಓದುವ ಚಟ ಬೆಳೆಸುವುದು, ನಾವೆಲ್ಲ ಸಣ್ಣವರಿದ್ದಾಗ ಪಂಚತಂತ್ರದ ಕಥೆಗಳು, ಬಾಲಮಂಗಳ, ಚಂದಮಾಮನ ಕಥೆ ಪುಸ್ತಕಗಳು ಇವೆಲ್ಲ ನಮ್ಮ ಜ್ಷಾನ ಮಾರ್ಗದ ಮೂಲ ಸ್ತರಗಳೆಂದು ಖಂಡಿತ ಒಪ್ಪಬೇಕಾಗಿದೆ. ಆದರೆ ಇವತ್ತು ಹೊಸ ಹೊಸ ಉಪಕರಣಗಳು ಆಧುನಿಕ ತಾಂತ್ರಿಕತೆಯಲ್ಲಿ ನಮ್ಮ ಮುಂದೆ ಬಂದು ನಿಂತಿವೆ. ಅದರಲ್ಲೂ ಆಂಗ್ಲ ಭಾಷೆಯನ್ನೆ ಸಂವಹನ ಮಾಧ್ಯಮವಾಗಿ ಇಲ್ಲೆಲ್ಲಾ ಬಳಸುವುದರಿಂದ ಕನ್ನಡದ ಬಗ್ಗೆ ಇಂದಿನ ಯುವ ಪೀಳಿಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡುಬರುತ್ತಿದೆ.. ಹಾಗಾಗಿ ನಮ್ಮತನ ಎನ್ನುವ ಅತೀ ಅಗತ್ಯವಾದ ಪ್ರಜ್ಞೆಯುಳ್ಳ ಯುವ ಪೀಳಿಗೆಯನ್ನು ನಾವು ಬೆಳೆಸಬೇಕಾಗಿದೆ.

ಆಧುನಿಕ ಜಗತ್ತಿನ ಸದ್ಯದ ಸವಾಲುಗಳಿಂದ ಕನ್ನಡದ ಭಾಷೆಯ ಮೇಲೆ ವಿಪರೀತ ಪರಿಣಾಮ ಉಂಟಾಗುತ್ತಿರುವುದು. ಸರ್ಕಾರದ ಕೆಲವು ನಿರ್ಧಾರಗಳು ಮಾತೃಭಾಷೆಗೆ ಮಾರಕವಾಗಿರುವುದು ಕಂಡುಬರುತ್ತಿದೆ.. ಮುಂದಿನ ದಿನಮಾನಗಳಲ್ಲಿ ಕನ್ನಡ ಭಾಷೆ, ಕನ್ನಡ ಶಾಲೆ, ಕನ್ನಡ ಮಾಧ್ಯಮ, ಇವೆಲ್ಲ ಏನಾಗಬಹುದೆಂಬ ಬಹುದೊಡ್ಡ ಪ್ರಶ್ನೆ ನಮ್ಮ ಮುಂದೆ ನಿಂತಿದೆ ಎನ್ನುತ್ತಾರೆ ಡಾ. ಚಂದ್ರಶೇಖರ ಕಂಬಾರರು. ನಮ್ಮ ಸಂಸ್ಕೃತಿಯ ಸೂಕ್ಷ್ಮಗಳು ನಿಂತಿರುವುದೇ ನಾವು ಬಳಸುವ ಭಾಷೆಯ ತಳಹದಿಯ ಮೇಲೆ. ನಾವು ಯೋಚಿಸುವುದು, ಆಚರಿಸುವುದು, ನುಡಿಯುವುದು ನಮ್ಮ ತಾಯಿ ಭಾಷೆಯಲ್ಲಿ. ಆದರೆ ಈಗಾಗುತ್ತಿರುವ ಸ್ಥಿತ್ಯಂತರ ಗಮನಿಸಿದರೆ ಯೋಚಿಸುವುದು ಒಂದು ಭಾಷೆಯಲ್ಲಿ, ಆಚರಣೆಗೆ ಮತ್ತೊಂದು ಭಾಷೆ, ಮಾತನಾಡಲು ಬಳಸುವುದು ಇನ್ನೊಂದು ಭಾಷೆ. ನುಡಿ ನಡೆ ಜೀವನಗಳ ನಿತ್ಯದಲ್ಲಿ ಬಳಸುವ ನಮ್ಮ ಭಾಷಿಕ ನೆಲೆಗಳು ಸ್ಪೋಟಗೊಂಡಿವೆ. ಇದರಿಂದ ಆಗುವ ಅನಾಹುತಗಳ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಕಂಬಾರರು ಅಭಿಪ್ರಾಯಿಸುತ್ತಾರೆ.

ಭಾಷೆಯನ್ನು ಬದುಕಿಸಬೇಕಾದದ್ದು ಜನ ಆಯ್ಕೆ ಮಾಡಿ ಕಳಿಸಿದ ಸರ್ಕಾರದ ಗುರುತರ ಜವಾಬ್ದಾರಿ. ಅದರ ಜೊತೆ ಕ್ಷೀಣ ಸುತ್ತಿರುವ ಕನ್ನಡ ಮಾಧ್ಯಮ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವತ್ತ ಜನಸಾಮಾನ್ಯರೂ ಕೈಜೋಡಿಸಬೇಕು. ಮಕ್ಕಳನ್ನು ಪೋಷಕರು ಕನ್ನಡದಲ್ಲಿಯೇ ವ್ಯಾಸಂಗಕ್ಕೆ ತೊಡಗಿಸಬೇಕು. ಇದರರ್ಥ ಇಂಗ್ಲೀಷನ್ನು ಪೂರ್ಣವಾಗಿ ತೊಡೆಯಿರಿ ಎಂದಲ್ಲ. ಹಿಂದಿಯನ್ನು ಭಾಷಾ ಸಂಯೋಜನೆಯಿಂದಲೇ ದೂರವಿಡಿ ಎಂತಲೂ ಅಲ್ಲ. ಬದಲಿಗೆ ಅವುಗಳನ್ನು ಕಲಿಕೆಯ ಮುಂದಿನ ಹಂತಗಳಲ್ಲಿ ವಿದ್ಯಾರ್ಥಿಗೆ ತನಗೆ ಬೇಕಾದ ಇತರ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇರುವಂತೆ ಪಠ್ಯಕ್ರಮಗಳಲ್ಲಿ ಹೊಂದಿಸುವುದು ಅಗತ್ಯ.

ಕಲಿಕೆಯ ಮಾಧ್ಯಮ ಇವತ್ತು ಬಹುತೇಕರದ್ದು ಆಂಗ್ಲಮಾದ್ಯಮವಾಗಿರುವುದು.ಕನ್ನಡಿಗರಾದ ನಾವು ತಂದೆತಾಯಿಗಳೆ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸಿ ಅದೂ ಖಾಸಗಿ ಶಾಲೆಗಳಿಗೆ ಸೇರಿಸುತ್ತಿರುವುದು ಕಂಡುಬರುತ್ತಿದೆ. ಇದೆಲ್ಲ ಬದಲಾದ ಜಾಗತಿಕ ನೆಲೆಯಲ್ಲಿ ಹೊಸ ಜಗತ್ತಿನೊಡನೆ ಬದುಕಬೇಕಾದ ಅನಿವಾರ್ಯತೆಗೆ ಸಿದ್ದಗೊಂಡ ವೇದಿಕೆಗಳು. ಇದರಿಂದ ಇಂಗ್ಲೀಷ ಮಾತ್ರದಿಂದಲೇ ಉನ್ನತ ವ್ಯಾಸಂಗ ಪಡೆಯಬಹುದು ಎಂಬ ಧೋರಣೆ ಅಥವಾ ಜಗತ್ತಿನ ಜ್ಞಾನಗಳೆಲ್ಲ ಇಂಗ್ಲೀಷನಲ್ಲಿಯೇ ಇರುವುದೆಂಬ ಭ್ರಮೆಯಿಂದ ನಾವು ಹೊರಬರಬೇಕಾಗಿದೆ. ಎಲ್ಲ ಭಾಷೆಗಳಲ್ಲೂ ಸಂಸ್ಕೃತಿಯಲ್ಲೂ ತನ್ನದೇ ಆದ ಶ್ರೀಮಂತಿಕೆ ಜ್ಞಾನ ಕೌಶಲ್ಯ ಇರುವುದು. ಕಾಲೇಜು ಹಂತಗಳಲ್ಲಿ ಇಂಗ್ಲೀಷನಲ್ಲಿಯೇ ತರಗತಿಗಳು ನಡೆಯುವುದರಿಂದ ಇರುವ ಒಂದು ಕನ್ನಡ ಭಾಷಾ ವಿಷಯದ ಶಿಕ್ಷಕರು ಉಪನ್ಯಾಸಕರು ತಮ್ಮ ವಿದ್ಯಾರ್ಥಿಗಳಲ್ಲಿ ಕನ್ನಡದ ಬಗ್ಗೆ ಆಸ್ಥೆ ಆಸಕ್ತಿ ಮೂಡಿಸುವಂತಹ ಪ್ರಯುತ್ನಗಳನ್ನು ಮಾಡಬೇಕಾಗಿದೆ. ಕನ್ನಡ ಅಲ್ಲವೇ ಮಕ್ಕಳು ತಾವೇ ಓದಿದರೂ ಓದಿ ಪಾಸಾಗುವರೆಂಬ ನಿಷ್ಕಾಳಜಿಯ ಶಿಕ್ಷಕ ವೃಂದವೂ ನಮ್ಮಲ್ಲಿದೆ.

ಬೇರೆ ಭಾಷಿಗರಲ್ಲಿ ತಮ್ಮ ಭಾಷೆಯ ಬಗ್ಗೆ ಇರುವ ಅಭಿಮಾನ ನಮ್ಮ ಜನರಲ್ಲಿ ಇಲ್ಲ ಎಂಬುದು ಬಹುಮಟ್ಟಿಗೆ ನಿಜ. ಅನ್ಯಭಾಷಿಗರು ನಮ್ಮೊಂದಿಗೆ ಮಾತನಾಡುವ ಪ್ರಮೇಯ ಬಂದಾಗ ನಾವು ಆ ಭಾಷೆ ಬಲ್ಲವರಾಗಿದ್ದರೆ ಅವರ ಭಾಷೆಯಲ್ಲಿ ವ್ಯವಹರಿಸಿ ನಮ್ಮ ಹೆಚ್ಚುಗಾರಿಕೆಗೆ ವೇದಿಕೆ ಸಿಕ್ಕಂತೆ ಸಂಭ್ರಮಿಸಿ ಮಾತನಾಡುತ್ತೇವೆ. ಇಲ್ಲ ನಮ್ಮ ಇಂಗ್ಲೀಷ ಪ್ರಾವೀಣ್ಯ ತೋರ್ಪಡಿಸಲು ಇಂಗ್ಲೀಷನಲ್ಲಿ ಉತ್ತರಿಸಿ ಅದು ಬಹುದೊಡ್ಡ ನತೆಯೆಂಬಂತೆ ವರ್ತಿಸುತ್ತೇವೆ. ಇದು ಭಾಷಾಭಿಮಾನದ ಕೊರತೆ.ಇವತ್ತಿಗೆ ಕೆಲವರಿಗೆ ಅನ್ನ ನೀಡುವ ಭಾಷೆ ಇಂಗ್ಲೀಷಾಗಿರಬಹುದು. ಅದು ಬದಲಾದ ಜಾಗತಿಕ ನೆಲೆಯಲ್ಲಿ ನಾವೆಲ್ಲ ಅದರೊಂದಿಗೆ ಸಾಗಬೇಕಾದ ಅನಿವಾರ್ಯತೆ ಇದೆ. ಆದರೆ ನಮ್ಮ ಹೃದಯದ ಭಾಷೆ ಕನ್ನಡ , ನೆಲದ ಭಾಷೆ ಕನ್ನಡ, ಆಡಳಿತ ಭಾಷೆ ಕನ್ನಡ. ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಕನ್ನಡವನ್ನು ಕೀಳಾಗಿ ಕಾಣುವ ಮನಸ್ಸುಗಳು ಕೂಡಾ ನಮ್ಮ ಕನ್ನಡದ ಮನಸ್ಸುಗಳೇ ಎಂಬುದು ವಿಪರ್ಯಾಸ. ಈ ನಿಟ್ಟಿನಲ್ಲಿ ಕನ್ನಡತನ ಅದನ್ನು ಕಟ್ಟುವ ಕೆಲಸ ಆಗಲೆಬೇಕಾದ ಅಗತ್ಯ ಜರೂರತ್ತು ಬಹಳ ಇದೆ. ಕನ್ನಡವನ್ನು ಗಟ್ಟಿಯಾಗಿ ನೆಲೆಗೊಳಿಸುವ ಪ್ರಯತ್ನವನ್ನು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಕನ್ನಡಕ್ಕೆ ಪ್ರಾಧಾನ್ಯ ಸ್ಥಾನವನ್ನು ನೀಡುವ ಮೂಲಕ ಮಾಡಲು ಸರಕಾರ ಮುಂದಾಗಬೇಕು.

ಇನ್ನೂ ಒಂದು ಸಂಗತಿ. ಒಂದು ಭಾಷೆ ಅನ್ಯ ಭಾಷೆಯಿಂದ ಏನನ್ನೂ ಎರವಲು ತೆಗೆದುಕೊಳ್ಳಬಾರದೆಂದು ಯಾರೂ ತಿಳಿಯಬಾರದು. ನೆರೆಹೊರೆಯಲ್ಲಿ ಕೊಳುಕೊಡುಗೆಯ ವ್ಯವಹಾರ ನಡದೇ ನಡೆಯುತ್ತದೆ ಅದು ಸಜೀವ ಭಾಷೆಯ ಲಕ್ಷಣ. ಎಂದು ಎಂ ಮರಿಯಪ್ಪ ಭಟ್ಟರು ಹೇಳುತ್ತಾರೆ. ಹಾಗೇ “ ಒಂದು ಭಾಷೆ ಸತ್ವಪೂರ್ಣವಾಗಿ ಬೆಳೆಯಬೇಕಾದರೆ ಅದನ್ನಾಡುವ ಜನ ಅಭಿಮಾನಧನರೂ, ಬುದ್ದಿಶಾಲಿಗಳು ಪ್ರಯೋಗಶೀಲರೂ ಆಗಿರಬೇಕು ನಾಲ್ಕೈದು ಶತಮಾನಗಳ ಹಿಂದೆ ಆಂಗ್ಲಭಾಷೆ ಯುರೋಪಿನ ಸಾಮಾನ್ಯ ಭಾಷೆಗಳಲ್ಲಿ ಒಂದಾಗಿತ್ತು. ಆದರೆ ಆಂಗ್ಲ ಜನತೆ ದೇಶ ವಿದೇಶಗಳ ಭಾಷೆ ಸಾಹಿತ್ಯ ಸಮಸ್ಕೃತಿಯನ್ನ ಅಭ್ಯಸಿಸಿ ತನ್ಮೂಲಕ ತಮ್ಮ ಭಾಷೆಯನ್ನ ಹಿಗ್ಗಿಸಿದರು ಅರಳಿಸಿದರು. ಆದರೆ ಅವರಲ್ಲಿಯ ಶ್ರೇಷ್ಟ ವಿಜ್ಞಾನಿಗಳು, ಮೇಧಾವಿಗಳು, ರಾಜಕಾರಣ ಗಳು, ಅರ್ಥಶಾಸ್ತಜ್ಞರು ತಮ್ಮ ಭಾಷೆಯ ಮುಖಾಂತರವೇ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದ ಕಾರಣ ಇಂದು ಪ್ರಪಂಚದ ದೊಡ್ಡ ಭಾಷೆಗಳಲ್ಲಿ ಒಂದಾಗಿ ಅಂತರಾಷ್ಟ್ರೀಯ ಮಟ್ಟದ ಭಾಷೆಯಾಯಿತು. ಎಂಬಂತಹ ವಿಚಾರವನ್ನು ಮರಿಯಪ್ಪ ಭಟ್ಟು ತಮ್ಮ “ಕನ್ನಡ ಸಂಸ್ಕೃತಿ” ಎಂಬ ಕೃತಿಯಲ್ಲಿ ಹೇಳಿದ್ದಾರೆ.ನಾವೂ ಕೂಡಾ ಅತಿಯಾದ ಮಡಿವಂತಿಕೆ ಇಟ್ಟುಕೊಳ್ಳದೇ ಬದಲಾದ ಕಾಲಮಾನ, ಮಾತು ಬರವಣಿಗೆ ಇತ್ಯಾದಿಗಳಿಗೆ ಹೊಂದಿ ಕನ್ನಡವನ್ನ ಬೆಳೆಸಬೇಕಿದೆ. ಮಾತೃಭಾಷೆ ಕನ್ನಡದ ಸತ್ವವನ್ನು ಸಾರವನ್ನು ಮಕ್ಕಳಿಗೆ ಉಣಿಸಬೇಕಿದೆ.

-ನಾಗರೇಖಾ ಗಾಂವಕರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x