ಧರ್ಮದ ಆಚರಣೆ ಆಸ್ತಿಕವೂ ಅಲ್ಲ.. ನಾಸ್ತಿಕವೂ ಅಲ್ಲ.. ಎನ್ನುವ ವಿಭಿನ್ನ ಕೃತಿ “ಯಡ್ಡಿ ಮಾಮ ಬರಲಿಲ್ಲ”: ಡಾ. ನಟರಾಜು ಎಸ್‌ ಎಂ

ಇಡೀ ವಾರ ನಾಲ್ಕೈದು ಪುಸ್ತಕಗಳ ಮೇಲೆ ಕಣ್ಣಾಡಿಸಿದ್ದೇನಾದರೂ ಪೂರ್ತಿಯಾಗಿ ಯಾವ ಪುಸ್ತಕವನ್ನು ಓದಲಾಗಿರಲಿಲ್ಲ. ಇತ್ತೀಚೆಗೆ ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಲೇಖಕರಿಗೆ ಪ್ರಾಶಸ್ತ್ಯ ಕೊಡಲಿಲ್ಲ ಎನ್ನುವ ದನಿಗಳು, ಪರ್ಯಾಯ ಸಮ್ಮೇಳನ ಎಂಬಂತೆ ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನವೊಂದನ್ನು ಹಮ್ಮಿಕೊಂಡಿದ್ದರು. ಎರಡೂ ಸಮ್ಮೇಳನಗಳ ಆಹ್ವಾನ ಪತ್ರಿಕೆಗಳ ಮೇಲೆ ಕುತೂಹಲಕ್ಕೆ ಕಣ್ಣಾಡಿಸಿದಾಗ ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಬ್ಬೇ ಒಬ್ಬ ಮುಸ್ಲಿಂ ಕವಿಯ ಹೆಸರಿತ್ತು. ಆ ಕವಿಯೂ ಕೂಡ ಸಮ್ಮೇಳನದಿಂದ ಹಿಂದೆ ಸರಿದಿದ್ದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಇನ್ನೂ ಬೆಂಗಳೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಲೇಖಕರಿಗೆ ವೇದಿಕೆ ಕೊಟ್ಟಿದ್ದುದು ಹೆಚ್ಚು ಚರ್ಚಿತ ವಿಷಯವೇನೂ ಆಗಲಿಲ್ಲ. ಹೀಗೆ ಸಾಹಿತ್ಯದ ಹೆಸರಲಿನಲ್ಲಿ ಸಮ್ಮೇಳನಗಳಲ್ಲಿ ಧರ್ಮಗಳು ನುಸುಳಿಕೊಂಡಾಗ ಲೇಖಕನ ಬರವಣಿಗೆಗಳನ್ನು ಪರಿಗಣಿಸದೇ ಅವನ ಜಾತಿ, ಧರ್ಮವನ್ನು ನೋಡಿ ಮಣೆ ಹಾಕುವುದು ಒಂದು ಕೆಟ್ಟ ಬೆಳವಣಿಗೆ ಎಂಬುದನ್ನು ತೋರುತ್ತದೆ.

ಓಟ್‌ ಬ್ಯಾಂಕ್‌ ಗಳಲ್ಲಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಧರ್ಮದವರ ಓಲೈಕೆಗೆ ಎಲ್ಲರೂ ಹೀಗೆ ನಿಂತರೆ, ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕದ ಇತರ ಧರ್ಮಗಳ ಜನರು ತಮಗೆ ಪ್ರಾಶಸ್ತ್ಯ ಕೊಡಲಿಲ್ಲ ಎಂದು ಜಗಳಕ್ಕೆ ನಿಲ್ಲುವ ಕಾಲ ದೂರವಿಲ್ಲ. ಕನ್ನಡ ಸಾಹಿತ್ಯ ಮತ್ತು ಸಾಹಿತ್ಯ ಸಮ್ಮೇಳನಗಳು ಹೃದಯಗಳನ್ನು ಬೆಸೆಯುವ ಕೆಲಸ ಮಾಡುವ ಬದಲು ಮನಸ್ಸುಗಳ ಒಡೆಯುವ ಕೆಲಸ ಮಾಡಿದರೆ ಸಾಹಿತ್ಯದ ಸಾರ್ಥಕತೆಯಾದರು ಏನು ಎಂಬುದು ಪ್ರಶ್ನಾರ್ಥಕವಾಗಿ ಕಾಣುತ್ತದೆ. ಹೀಗೆ ಸಾಹಿತಿಗಳ, ಸಮ್ಮೇಳನಗಳ ಪರ ವಿರೋಧಗಳ ಅಲೆಯನ್ನು ಗಮನಿಸುತ್ತಾ ಇರುವಾಗ ಎಫ್‌ ಎಂ ನಂದಗಾವ ಅವರು ಬರೆದಿರುವ “ಯಡ್ಡಿ ಮಾಮ ಬರಲಿಲ್ಲ” ಎಂಬ ವಿಶಿಷ್ಟ ಕೃತಿ ನನಗೆ ಓದಲು ಸಿಕ್ಕಿತು.

“ಯಡ್ಡಿ ಮಾಮ ಬರಲಿಲ್ಲ” ಸಣ್ಣ ಕತೆ, ನಾಟಕ, ಅನುವಾದ, ಜನಪದ ಮತ್ತು ಮಕ್ಕಳ ನಾಟಕ ಸೇರಿದಂತೆ ಮೂವತ್ತು ಕೃತಿಗಳನ್ನು ರಚಿಸಿರುವ ಕನ್ನಡದ ಹಿರಿಯ ಪತ್ರಕರ್ತರಾದ ಎಫ್‌ ಎಂ ನಂದಗಾವ ಅವರ ೩೧ನೇ ಕೃತಿ. ಈ ಕೃತಿ 196 ಪುಟಗಳನ್ನು ಹೊಂದಿದ್ದು, ಮೈಸೂರಿನ ಪೆನ್ಸಿಲ್‌ ಬುಕ್‌ ಹೌಸ್‌ ನವರು ಈ ಕೃತಿಯನ್ನು ಪ್ರಕಟಿಸಿದ್ದಾರೆ. ಮುಖ ಪುಟ ವಿನ್ಯಾಸವನ್ನು ಎಸ್‌ ವಿ ಹೂಗಾರ್‌ ರವರು ಮಾಡಿದ್ದರೆ, ಒಳಪುಟ ವಿನ್ಯಾಸವನ್ನು ಆಶಾ ಎಮ್‌ ಸಿ ಯವರು ಮಾಡಿದ್ದಾರೆ. ಈ ಕೃತಿಗೆ ಒಂದು ದೀರ್ಘವಾದ ಮುನ್ನುಡಿಯನ್ನು ಎಸ್‌ ದಿವಾಕರ್‌ ರವರು ಬರೆಯುವ ಮೂಲಕ ಈ ಪುಸ್ತಕದ ಆಶಯದ ಮೇಲೆ ಬೆಳಕು ಚೆಲ್ಲಿದ್ದಾರೆ. “ಯಡ್ಡಿ ಮಾಮ ಬರಲಿಲ್ಲ” ಕೃತಿಯಲ್ಲಿ ಒಟ್ಟು ಹತ್ತು ಕತೆಗಳಿದ್ದು, ಲೇಖಕರೇ ಕತೆಗಳನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದಾರೆ. ಅವರೇ ಹೇಳುವಂತೆ ಮೊದಲ ಭಾಗದ ಐದು ಕತೆಗಳು ಸಾಮಾಜಿಕ ಹಿನ್ನೆಲೆಯಲ್ಲಿ ಮೂಡಿ ಬಂದ ಕತೆಗಳಾದರೆ, ಎರಡನೇ ಭಾಗದಲ್ಲಿ ಮೂಡಿ ಬಂದ ಕತೆಗಳು ಐತಿಹಾಸಿಕ ಹಿನ್ನೆಯಲೆಯುಳ್ಳ ಕತೆಗಳಾಗಿವೆ. ಈ ತರಹದ ವಿಭಾಗ ಲಿಯೋ ಟಾಲ್‌ ಸ್ಟಾಲ್‌ ಅವರ ಕಥಾಸಂಕಲನದ ಪುಸ್ತಕವೊಂದರಲ್ಲಿ ಇದೆ.

ಪುಸ್ತಕದ ಮೊದಲ ಭಾಗದ ಐದು ಕತೆಗಳಲ್ಲಿ “ಯಡ್ಡಿ ಮಾಮ ಬರಲಿಲ್ಲ” ಕತೆಯು ರಾಜಕೀಯ ವಿಡಂಬನೆ ಕುರಿತ ಕತೆಯಾಗಿದ್ದರೆ, “ಸಿಸ್ಟರ್‌ ಸಿಸಿಲಿಯಾ”, “ಸಿಸಿ ಟಿವಿ ತಂದ ಫಜೀತಿ”, ಮತ್ತು “ಪಾದ್ರಿಯ ಪ್ರಸಂಗ ಮತ್ತು ಆಗ್ನೇಸಮ್ಮ” ಕತೆಗಳು ಮುಖ್ಯವಾಗಿ ಸ್ತ್ರೀ ಸ್ವಾತಂತ್ರ್ಯದ ಕುರಿತು ಮಾತನಾಡುತ್ತವೆ. “ಪುಟ್ಟನ ಮೌನ ಮತ್ತು ಸಂತರ ಅವಶಿಷ್ಟ” ಕತೆ ಮಕ್ಕಳ ಕತೆಯ ಹಾಗೆ ಇದೆ.

“ಸಿಸ್ಟರ್‌ ಸಿಸಿಲಿಯಾ” ಕತೆಯಲ್ಲಿ ವಿಮಲಾ ಎಂಬ ಹುಡುಗಿ ಹೇಗೆ ನನ್‌ ಆದಳು ಎನ್ನುವುದನ್ನು ಲೇಖಕರು ಸಿಸಿಲಿಯಾಳಿಂದಲೇ ಕತೆಯನ್ನು ನಿರೂಪಿಸಿರುವ ರೀತಿ ಅನನ್ಯವಾಗಿದೆ. “ಅಗತ್ಯವಿದ್ದವರಿಗೆ, ದೀನ ದಲಿತರಿಗೆ ದಿಕ್ಕು ದೆಸೆ ಇಲ್ಲದವರಿಗೆ ದಿಕ್ಕಾಗುವ ಸಾಮಾಜಿಕ ಸೇವೆ, ಕ್ರೈಸ್ತ ಧರ್ಮದ ಒಂದು ಹಿರಿದಾದ ಮೌಲ್ಯ, ಸ್ವಸ್ವೀಕೃತ ದಾರಿದ್ರ್ಯ ಎರಡನೇ ದೊಡ್ಡ ಮೌಲ್ಯ” ಎನ್ನುವುದ ಪ್ರತಿಪಾದಿಸಿದ ಮದರ್‌ ತೆರೇಸ ಅವರ ಉದಾಹರಣೆ ನೀಡಿ ವಿಮಲಾ, ಕನ್ಯಾಸ್ತ್ರೀ (ನನ್‌) ಆಗಲು ಮನಸ್ಸು ಮಾಡುವುದು ಕತೆಯ ಹೈಲೈಟ್.‌ ಜೊತೆಗೆ ಎಲ್ಲಾ ಧರ್ಮಗಳಲ್ಲಿ ಇರುವಂತೆ ದೇವರ ಆರಾಧನೆಯ ವಿಷಯಕ್ಕೆ ಸಿಸ್ಟರ್‌ ಸಿಸಿಲಿಯಾಳನ್ನು ಕೆಟ್ಟವಳನ್ನಾಗಿ ಮಾಡುವ ಹುನ್ನಾರವನ್ನು ಲೇಖಕರು ತುಂಬಾ ಚೆನ್ನಾಗಿ ತೆರೆದಿಟ್ಟಿದ್ದಾರೆ. ವಯಸ್ಸಾದವರು ಕೈಗೆ ಉಗುರು ಬಣ್ಣ ಹಚ್ಚಬೇಕಾ ಬೇಡವಾ ಎನ್ನುವ ತರ್ಕವನ್ನು ಮಂಡಿಸುವ ಪಾದ್ರಿಯ ಕತೆ “ಪಾದ್ರಿಯ ಪ್ರಸಂಗ ಮತ್ತು ಆಗ್ನೇಸಮ್ಮ” ಕತೆಯಲ್ಲಿ ವಿಭಿನ್ನವಾಗಿ ಚಿತ್ರಿತವಾಗಿದೆ. ಮೊದಲ ಭಾಗದ ಈ ಎಲ್ಲಾ ಕತೆಗಳಲ್ಲಿ ಸಾಮಾನ್ಯವಾಗಿ ಕ್ರೈಸ್ತ ಧರ್ಮದ ಮನೆಯ ವಾತಾವರಣ, ಅವರ ಆಚರಣೆಗಳು, ಅವರ ಪೂಜಾ ವಿಧಾನಗಳು ಅತ್ಯಂತ ಸುಂದರವಾಗಿ ಚಿತ್ರಿತವಾಗಿವೆ. ಪ್ರತೀ ಕತೆಗಳಲ್ಲೂ ಚರ್ಚ್‌ ನ ವಿಷಯ ಇದ್ದೇ ಇರುತ್ತದೆ. ಬೈಬಲಿನ ನೀತಿಗಳು ಅಲ್ಲಲ್ಲಿ ಕಾಣಸಿಗುತ್ತವೆ. ಈ ಕತೆಗಳಲ್ಲಿ ಬರುವ ಪಾತ್ರಗಳ ಹೆಸರುಗಳು ಕೂಡ ವಿಶಿಷ್ಟವಾಗಿವೆ.

ಪುಸ್ತಕದ ಮೊದಲ ಭಾಗದ ಕತೆಗಳಲ್ಲಿ ಮನೆ, ಕ್ರೈಸ್ತ ಧರ್ಮದವರ ಕುಟುಂಬ, ಊರು ಮತ್ತು ಚರ್ಚಿನ ಸುತ್ತ ಕತೆಗಳನ್ನು ಹೆಣೆದ ಲೇಖಕರು ಎರಡನೇ ಭಾಗದ ಕತೆಗಳಲ್ಲಿ ನಮ್ಮನ್ನು ಬೇರೊಂದು ಪ್ರಪಂಚಕ್ಕೆ ಕರೆದೊಯ್ಯುತ್ತಾರೆ. “ಸ್ವಾಮಿಯ ನಿಧಿಯೂ ದೇವ ಸಹಾಯಂ ಪಿಳ್ಳೆಯೂ” ಕತೆಯಲ್ಲಿ ಲೇಖಕರು ದೇವಸಹಾಯಂ ಪಿಳ್ಳೆಯ ಮೂಲವನ್ನು ಹುಡುಕುವ ಪ್ರಯತ್ನ ಮಾಡುತ್ತಾರೆ. ಮತಾಂತರ ಈಗಿನ ದಿನಗಳಲ್ಲಿ ಹೆಚ್ಚು ಚರ್ಚಿತ ವಿಷಯವಾಗುತ್ತಿರುವ ಸಂಧರ್ಭದಲ್ಲಿ ದೇವಸಹಾಯಂನ ಮೂಲಕ ಲೇಖಕರು ಹೇಳುವ ಐತಿಹಾಸಿಕ ಘಟನೆಗಳು ಇತಿಹಾಸದ ಪುಟಗಳನ್ನು ಮತ್ತೊಮ್ಮೆ ತಿರುವಿ ಹಾಕಲು ಪ್ರೇರೇಸುತ್ತವೆ ಎನ್ನಬಹುದು. ೧೪೯೮ ರಲ್ಲಿ ಸಾಂಬಾರ ಪದಾರ್ಥಗಳನ್ನು ಹುಡುಕಿಕೊಂಡು ದಕ್ಷಿಣ ಭಾರತದ ತೀರಕ್ಕೆ ಬಂದ ವಾಸ್ಕೊ ಡ ಗಾಮಾನ ಇತಿಹಾಸದಿಂದ ಹಿಡಿದು ಕೇರಳದ ತಿರುವಂತನಪುರದಲ್ಲಿನ ದೇವಸ್ಥಾನದ ಆಸ್ತಿ ವಿಚಾರಕ್ಕೆ ಸರ್ಕಾರ ಮತ್ತು ರಾಜಮನೆತನದವರ ನಡುವೆ ಉಂಟಾದ ಕೋರ್ಟ್‌ ಕೇಸಿನವರೆಗಿನ ಇತಿಹಾಸವನ್ನು ದೇವಸಹಾಯಂನ ನಿರೂಪಣೆಯ ಮೂಲಕ ಲೇಖಕರು ಬರೆದಿದ್ದಾರೆ. ಇದರಿಂದ ಕ್ರೈಸ್ತ ಧರ್ಮವನ್ನು ಬೇರೆ ಧರ್ಮದವರು ಹೇಗೆ ಸ್ವೀಕರಿಸಿರಬಹುದು ಮತ್ತು ತದ ನಂತರ ಸಾಮಾಜಿಕ ಪರಿಣಾಮಗಳು ಏನು ಎನ್ನುವುದನ್ನು ಈ ಕತೆ ಹೇಳುತ್ತದೆ.

“ಸ್ವಾಮಿ ನಿಧಿಯೂ….” ಕತೆಯಲ್ಲಿ ಮತಾಂತರತೆಯನ್ನು ವಿವರಿಸಿದ ಲೇಖಕರು “ಪುಲಕೇಶಿ ಮತ್ತು ಭೋಧಿಧರ್ಮ” ಎನ್ನುವ ಕತೆಯಲ್ಲಿ ತುಂಬಾ ಅಧ್ಬುತವಾಗಿ ಭೋಧಿಧರ್ಮನ ಇತಿಹಾಸವನ್ನು ವಿವರಿಸಿದ್ದಾರೆ. ಒಬ್ಬ ಪ್ರವಾಸಿಗನಾಗಿ ಭೌದ್ದಧರ್ಮದ ಒಳಹೊರವುಗಳನ್ನು ನೋಡುತ್ತಾ ಹೋಗುವ ನಿರೂಪಕನ ಪಾತ್ರವನ್ನು ಲೇಖಕರು ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ. ಈ ಕತೆಯನ್ನು ಓದುತ್ತಿದ್ದಂತೆ ಕತೆ ತೋರುತ್ತಾ ಹೋಗುವ ಗ್ಯಾಂಗ್‌ ಟಾಕ್‌, ವಾತಾಪಿ, ಝೇನ್‌ ಧಾನ್‌ (ಚೀನಾ) ಭೌದ್ದವಿಹಾರ ಎಲ್ಲವೂ ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದೊಯುತ್ತವೆ. ನಂದಗಾವರವರು “ಬೇಗೂರಿನಲ್ಲೊಬ್ಬ ಛದ್ಮವೇಷದ ಬುದ್ಧ” ಕತೆಯಲ್ಲಿ ಬುದ್ದನ ಕುರಿತು, ಭೌದ್ಧ ಧರ್ಮದ ಕುರಿತು ಮಾತನಾಡುತ್ತಲೇ ಭೌದ್ದ ಧರ್ಮಕ್ಕೂ, ಕ್ರೈಸ್ತ ಧರ್ಮಕ್ಕೂ ಇರುವ ಸಂಬಂಧವನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ. ಹಾಗೆಯೇ ಜಪಾನ್‌ ಮತ್ತು ಭಾರತ ದೇಶದ ಕ್ರೈಸ್ತರ ಸ್ಥಿತಿಗತಿಗಳ ಇತಿಹಾಸವನ್ನು ತೆರೆದು ನೋಡುತ್ತಾ ಹೋಗುತ್ತಾರೆ. ಸ್ವಾಮಿ ನಿಧಿಯೂ ಕತೆಯಲ್ಲಿ ದೇವಸಹಾಯಂ ಪಿಳ್ಳೆ ತನ್ನ ತಾತಂದಿರನ್ನು ನೆನದರೆ ಬೇಗೂರಿನಲ್ಲೊಬ್ಬ ಕತೆಯಲ್ಲಿ ತನ್ನ ಪೂರ್ವಜರ ಮೂಲವನ್ನು ಹುಡುಕುವ ಪ್ರಯತ್ನವನ್ನು ನಿರೂಪಕ ಮಾಡುತ್ತಾನೆ.

ಪುಸ್ತಕದ ಕೊನೆಯ ಕತೆ “ಆಸಂಗಿಯ ಬಡಗಿ ಜಾತ್ರೆ” ಕತೆಯನ್ನು ಓದುತ್ತಿದ್ದಂತೆ ಉತ್ತರ ಕರ್ನಾಟಕದ ಕ್ರೈಸ್ತರ ಆಚರಣೆಗಳು ನಮಗೆ ಕಾಣಲು ಸಿಕ್ಕರೆ “ಸಂತ ಫಿಲೋಮಿನ ಮತ್ತು ಪರದೇಶಪ್ಪನ ಗದ್ದುಗೆ” ಕತೆಯಲ್ಲಿ ಮೈಸೂರು ಮತ್ತು ಚಿತ್ರದುರ್ಗದಲ್ಲಿನ ಕ್ರೈಸ್ತರ ಇತಿಹಾಸಗಳು ದಾಖಲಾಗಿವೆ. “ಸಂತ ಫಿಲೋಮಿನ….” ಕತೆ ಪ್ರಬಂಧದ ತರಹ ಭಾಸವಾಗಿ ಅದಕ್ಕೆ ಪುಷ್ಟಿ ಎಂಬಂತೆ ಕತೆಯ ಕೊನೆಯ ಅನೇಕ ಆಕರಗಳ ಅಡಿ ಟಿಪ್ಪಣಿಗಳನ್ನು ನಾವು ಕಾಣಬಹುದು. “ಆಸಂಗಿ…” ಕತೆಯೂ ಸಹ ಪ್ರಬಂಧವಾಗಿ ಬಿಡುವ ಸಾಧ್ಯತೆಯನ್ನು ಕ್ರಮೇಣ ಕಳಚಿಕೊಂಡು ಒಂದೊಳ್ಳೆ ಕತೆಯಾಗಿ ಕೊನೆಗೆ ಸಮಾಪ್ತಿಗೊಳ್ಳುತ್ತದೆ.

ಒಟ್ಟಿನಲ್ಲಿ ಕ್ರೈಸ್ತ ಧರ್ಮವೆಂದರೆ ಇತ್ತೀಚೆಗೆ ನಮಗೆ ಓದುಲು ನೋಡಲು ಕಾಣಸಿಗುವ ಮತಾಂತರದ ವರದಿಗಳಾಗಲಿ, ಆ ಕಾರಣಕ್ಕೆ ಆಗುವ ಚರ್ಚ್‌ ಗಳ ಮೇಲಿನ ದಾಳಿಯಾಗಲಿ, ಇಲ್ಲ ಯಾವುದೋ ಕಾರ್ಯಕ್ರಮದಲ್ಲಿ ರೋಗಿಗಳನ್ನು ಗುಣ ಪಡಿಸಲು ಆಡುವ ನಾಟಕಗಳಾಗಲಿ ಅಲ್ಲ ಎಂಬುದನ್ನು ಎಫ್‌ ಎಂ ನಂದಗಾವ ಅವರ ಈ ಕೃತಿ ಹೇಳುತ್ತದೆ. ಒಬ್ಬ ಪತ್ರಕರ್ತರಾಗಿ ಅವರು ಕಂಡುಂಡ ಅನುಭವ, ಅವರ ಧರ್ಮದ ಮೇಲಿನ ಶ್ರದ್ಧೆ, ಕ್ರೈಸ್ತ ತೀರ್ಥ ಸ್ಥಳಗಳ ಕುರಿತ ಅವರ ತಿಳುವಳಿಕೆ, ಸಂಶೋಧನೆ ಮತ್ತು ಅವುಗಳ ಭೇಟಿ ಇತ್ಯಾದಿ ಅಂಶಗಳಿಗೆ ಮಾನವೀಯತೆಯ ಮೌಲ್ಯಗಳನ್ನು ಹಚ್ಚಿ ಈ ಪುಸ್ತಕ ರೂಪದಲ್ಲಿ ನೀಡಿದ್ದಾರೆ. ತಮ್ಮ ವಿಭಿನ್ನ ಬರವಣಿಗೆಯ ಶೈಲಿಯಲ್ಲಿ ಉತ್ತರ ಕರ್ನಾಟಕದ ಕನ್ನಡದಲ್ಲಿ, ಅಚ್ಚ ಕನ್ನಡದ ಅನೇಕ ಹೊಸ ಪದಗಳನ್ನು ಬಳಸಿ ಕ್ರೈಸ್ತ ಧರ್ಮದ, ಜನಾಂಗದ ಕುರಿತು ನಂದಗಾವ್‌ ರವರು ಬರೆದಿರುವ ಈ ಕೃತಿಯನ್ನು ಕನ್ನಡದ ಓದುಗರು ಓದಬೇಕು. ನಂದಗಾವ್‌ ಅವರು ಕ್ರೈಸ್ತ ಧರ್ಮದ ಒಳಹೊರವುಗಳ ಕುರಿತು ಬರೆಯುತ್ತಲೇ ಅವುಗಳಿಗೆ ಐತಿಹಾಸಿಕ ನೆಲೆಯನ್ನೂ ಕೂಡ ಒದಗಿಸಿ, ಈ ಕೃತಿಯ ಕಥೆಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕಟ್ಟಿಕೊಟ್ಟಿದ್ದಕ್ಕೆ ಅಭಿನಂದಿಸುತ್ತೇನೆ. ಹಾಗೆಯೇ ಅವರಿಂದ ಇನ್ನೂ ಹೆಚ್ಚು ಕೃತಿಗಳು ಬರಲಿ ಎಂದು ಹಾರೈಸುತ್ತೇನೆ.

-ಡಾ. ನಟರಾಜು ಎಸ್.‌ ಎಂ.

ಕೃತಿ: ಯಡ್ಡಿ ಮಾಮ ಬರಲಿಲ್ಲ

ಪ್ರಕಾರ: ಕಥಾ ಸಂಕಲನ

ಪ್ರಕಾಶಕರು: ಪೆನ್ಸಿಲ್‌ ಬುಕ್‌ ಹೌಸ್‌, ಮೈಸೂರು

ಬೆಲೆ: 190/-

ಪ್ರತಿಗಳಿಗಾಗಿ: 8762414676

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x