ಕನ್ನಡಿಯೊಳಗಿನ ಬಿಂಬ
ಇಷ್ಟು ದಿನ ಸುಂದರವಾಗಿಯೇ
ಕಾಣುತ್ತಿದ್ದ ಚಹರೆ
ಇದ್ದಕ್ಕಿದ್ದಂತೆ ಇಂದೇಕೋ
ವಿಕಾರವಾಗಿ ಕಾಣುತಿದೆ,
ಒರೆಸೊರೆಸಿ ಕನ್ನಡಿಯ ದಿಟ್ಟಿಸಿದರೆ
ಅದೇನೋ ಹೇಳಿ ಅಣಕಿಸುತಿರುವಂತೆ
ಭಾಸವಾಗುತಿದೆ..
ಒಮ್ಮಿಂದೊಮ್ಮೆಲೇ
ಭುಗಿಲೆದ್ದಿದ್ದೇಕೆ ಆತ್ಮಸಾಕ್ಷಿಯ ಬಿಂಬ?
ಸರಿದುಹೋಗುತಿರುವ ಕಾಲದ ನಡುವೆ
ನಿಂತ ನೆಲವ ಕುಗ್ಗಿಸಿ
ಅಸ್ತಿತ್ವವ ಅಲುಗಾಡಿಸುತಿರುವ ಪ್ರಶ್ನೆಗಳೇ
ಮನಸು ಮಸ್ತಿಷ್ಕದ ತುಂಬ..
ಅಸುನೀಗಿಹೋಗಿರುವ ಕನಸುಗಳ
ಮತ್ತೆ ಬಡಿದೆಬ್ಬಿಸುತ ಅಂತರಂಗವೇ ನಾಚುವಂತೆ
ಪ್ರಶ್ನಿಸುತಿಹುದು ನೀನ್ಯಾರು?ನೀನ್ಯಾರೆಂದು,
ಇಟ್ಟ ಹೆಸರು ಹೇಳಿದರೂ ಬಿಡಲೊಲ್ಲದಲ್ಲ
ಗುರುತು ಹೇಳಿ ಬಿಡಿಸಿಕೊಳ್ಳಲು
ಗುರಿಯೇ ಇಲ್ಲವಲ್ಲ
ತಲೆ ಬೆಳೆಸದ ದೇಹ
ಸವೆದಿದ್ದಷ್ಟೇ ಸಾಧನೆಯೇ ಇಲ್ಲ..
ಹುಡುಕಾಟದ ತೊಳಲಾಟಗಳ ನಡುವೆಯೇ
ಕಂಡ ವಿಕಾರ ಮುಖವೇ
ಉತ್ತರದಂತಿದೆ,
ವಿರಮಿಸಿದ್ದು ಸಾಕಿನ್ನು
ನೆಟ್ಟಾನೇರ ಹೊರಟುಬಿಡು ಪಟ್ಟುಬಿಡದೇ
ಸಾರ್ಥಕ ಬದುಕಿನೆಡೆಗಿನ್ನು ಎಂದು
ಪ್ರೇರೇಪಿಸುತಿರುವ ಹಾಗಿದೆ..
ಲಘುಬಗೆಯಲಿ ನಡೆಯಬೇಕಿದೆ ಗಮ್ಯದತ್ತ
ಹದುಳಗೊಂಡ ಬದುಕಿನಾಚೆಯಿಂದು
ಅಸ್ಮಿತೆಗೊಂದು ತಳಹದಿ ಸಿಗುವಂತೆ,
ಲೆಕ್ಕವಿಲ್ಲದ ಕ್ಷಣಗಳು
ಕಳೆದುಹೋಗಿವೆ ಸುಮ್ಮನೇ
ಅಂತರಾಳದಿಂದ ಹೊರಬಂದ ಪ್ರೇರಣೆಗೆ
ಸಾಧನೆಯ ಶಿಖರವೇರಿ ಕಿರೀಟವೊಂದ
ಹೊತ್ತು ತರಲೇಬೇಕಿದೆ
ಬಿಂಬವದು ಮತ್ತೆ ತಕರಾರೇ ಮಾಡದಂತೆ.
-ಆಶಾ ಹೆಗಡೆ
ನನ್ನ ಹೂವೇ
ನೀ ನಕ್ಕರೆ
ಹೂ ಅರಳಿದಂತೆ
ನಿನ್ನ ಪ್ರೀತಿ
ಹೂವಿನ
ಪರಿಮಳದಂತೆ
ನಿನ್ನ ಕಣ್ಣೋಟ
ನಕ್ಷತ್ರ ಮಿನುಗಿದಂತೆ
ಕತ್ತಲೆಯ ಬಾನಲ್ಲಿ
ಚಿತ್ತಾರ ಬಿಡಿಸಿದಂತೆ
ನಿನ್ನ ಜೊತೆಯ
ಬಾಳ ಪಯಣ
ಸಾಗುತ್ತಲೇ ಇರಬೇಕೆಂಬ
ಸುಂದರ ಯಾನ
ನೀನಿಲ್ಲದೆ ನಾನಿಲ್ಲ
ನೀ ಎನ್ನ ಜಗವೆಲ್ಲ
ನೀ ಸದಾ ಕಾಲ
ನಗುತಿರು
ನಿನ್ನ ನಗುವೇ
ನನಗೆ ಕಾಣಿಕೆ
ಬದಲಾಗಿ ನನ್ನಿಂದ
ಹೂ ಗುಚ್ಛ
ನಿನಗೆ ಕಾಣಿಕೆ!!
ಸದಾ ನಗುತಿರು
ನನ್ನ ಹೂವೇ
ಸದಾ ನಗುತಿರು
ನನ್ನ ಪ್ರೇಮವೇ!!
-ವಿದ್ಯಾ ಗಾಯತ್ರಿ ಜೋಶಿ
ಸ್ವಲ್ಪ ಮಾತನಾಡಬೇಕಿದೆ..
ಅವನೊಬ್ಬ ಕಂಡರೆ ಒಂದಿಷ್ಟು ಬೈಯಬೇಕಿದೆ
ಎದುರುಬದುರಾಗಿ ಕೂತು ಸ್ವಲ್ವ ಚರ್ಚೆ ನಡೆಸಬೇಕಾಗಿದೆ
ಗೊತ್ತು ಗೊತ್ತಿದ್ದು ಅವನು ತಪ್ಪು ನಡೆಸುತ್ತಿದ್ದಾನೆ
ಕರುಣೆ, ಕನಿಕರ ಇರದ ಅವನಿಗೆ ಪೂಜೆ ನಿಲ್ಲಿಸಬೇಕಾಗಿದೆ
ಪ್ರೀತಿ,ಪ್ರೇಮ ತೋರದ ಅವನಿಗೆ ಮಂತ್ರಗಳೇಕೆ
ಅವನ ಜೊತೆ ಕೂತು ಒಂದಿಷ್ಟು ಮಾತನಾಡಬೇಕಿದೆ
ರಕ್ಕಸರಂತೆ ಮೆರೆಯುವ ಜನರನು ಅದ್ಧೂರಿಯಿಂದಿಟ್ಡಿದ್ದಾನೆ
ಅದಕ್ಕಾಗಿ ಅವನ ಜೊತೆ ಕೂತು ಒಂದಿಷ್ಟು ಮಾತನಾಡಬೇಕಿದೆ
ಮಹಮಾರಿ ಕಾಯಿಲೆಯೆಂಬ ನೆಪ ಒಡ್ಡಿ ಎಷ್ಟೋ ಜನರನ್ನ
ನಿನ್ನತ್ತ ಕರೆದುಕೊಂಡಿರುವೆ,ಇದರ ಬಗ್ಗೆ ಮಾತನಾಡಬೇಕಾಗಿದೆ
ಮೋಸ,ಕೊಲೆಗಡುಕರಿಗೆ ಆಯಸ್ಸು ಹೆಚ್ಚು ಮಾಡುತಲಿರುವೆ
ಹೀಗೇಕೆ ಮಾಡುವೆ ಎಂದು ಸ್ವಲ್ಪ ನಿನಗೆ ಕೇಳಬೇಕಿದೆ
ಚಿಗುರುತ್ತಿರುವ ಚಿಗರೆಲೆಗಳನ್ನ ಚಿವುಟಿ ಹಾಕುತ್ತಿರುವ ನೀನು
ಇದರ ಬಗ್ಗೆ ಬಹು ದೊಡ್ಡ ನ್ಯಾಯ ಮಾಡಬೇಕಾಗಿದೆ
ಬೆಳೆ ಬೆಳೆಯುವ ರೈತನಿಗೆ ಕಣ್ಣೀರು ಸುರಿಸುಂತೆ ಮಾಡಿರುವೆ
ಅವನ ಪರವಾಗಿ ಎದುರು ನಿಂತು ಗದರಿಸಿ ಕೇಳಬೇಕಿದೆ
ಇಷ್ಟೆಲ್ಲಾ ನಡೆದು ಹೋದರೂ ನಿನಗಿನ್ನು ಕನಿಕರ ಬಾರದಿದ್ದರೆ
ನೀನು ದೇವರಲ್ಲ,ಕಲ್ಲೆಂದು ನಾವುಗಳು ನಿರ್ಧರಿಸಬೇಕಾಗಿದೆ
-ಉಮಾ ಸೂಗೂರೇಶ ಹಿರೇಮಠ
ಅಕ್ಕಪಕ್ಕದವರು
ಕಸದ ಕೈಗಾಡಿಯೊಳಗೆ ಬಿಸುಟಿದ್ದ
ಹಳಸಲು ಅನ್ನದ ಘಮ
ರಂಗಣ್ಣನ ನಾಸಿಕದೊಳಗೆ
ತುಂಬಾ ಹೊತ್ತು ವಿರಮಿಸುತ್ತಿತ್ತು
ಒಡೆದ ಮೊಟ್ಟೆ ಮಾಂಸದ
ಚೂರುಗಳನ್ನು ತುಂಬಿಸಿಕೊಂಡಿದ್ದ ಪ್ಲಾಸ್ಟಿಕ್ ಕವರ್ರು
ಮಹಡಿಯಿಂದಲೇ ಕಸದ ಬುಟ್ಟಿಗೆ ಎಸೆಯಲ್ಪಟ್ಟಿತ್ತು
ರಂಗಣ್ಣನ ಅಂಗೈಗಳಿಗೆ ಅಂಟುವ ಊರಿನ ನಾತಕ್ಕೆ
ನೂರು ಸಾಬೂನು ಬೇಕೇ?
‘ಕಸ’ ಎಂದು ಕೂಗುವ ತಲೆಗಳು
ರಂಗಣ್ಣನನ್ನು ನೋಡುವುದಿಲ್ಲ
ಬುಟ್ಟಿಯಿಂದ ಬಂಡಿಗೆ ಬೀಳುವ
ಒಡೆದ ಕನ್ನಡಿಯ ಚೂರುಗಳ ಜೊತೆಗೆ
ಹಣ್ಣಿನ ಸಿಪ್ಪೆಗಳು ಸೇರಿರುತ್ತದೆ
ಗಾಜು ಅಂಗೈ ಗೀರುವಾಗ
ರಂಗಣ್ಣನ್ನ ಗಮನ ನೆತ್ತರಿನೆಡೆಗಿರುವುದಿಲ್ಲ.
ಗೌರಕ್ಕನ ಮಾಸಿದ ಸೀರೆಯ ಮುಂದೆ
ಲೋಟಗಳಿಗೆ ಮೆತ್ತಿರುವ ಕಾಫಿ ಕೆನೆ
ಸಿಂಕ್ ಒಳಗೆ ಸಿಲುಕಿರುವ ರಾಶಿ ಪಾತ್ರೆಗಳು
ಟೀ ಬೋಸಿಯ ತಬ್ಬಿಹಿಡಿದಿರುವ ಗಷ್ಟ
ಉಳಿದ ಸೊಪ್ಪಿನ ಸಾರು
ಮುದ್ದೆ ಪಾತ್ರೆ
ಜಾದು ಮಾಡುತ್ತದೆ
ಒಡೆದ ಹಿಮ್ಮಡಿಯ ಬಳಿಯೂ
ಉಳಿ ಸಂಪ್ಲ ಸುರಿದಿರುವ ಇಡ್ಲಿ ಪಾತ್ರೆ
ಬಾಂಡ್ಲಿ ಕುಕ್ಕರ್ರು ಕೂತಿರುತ್ತದೆ.
ತಂತಿಯ ಮೇಲೆ ಒಗೆದು ಹಾರಕ್ಕಿರುವ
ಬಟ್ಟೆಗಳು ಗ್ರಾನೈಟು ನೆಲ ಒರೆಸುವ ಮಾಪು
ಅಂಗಳ ಗುಡಿಸುವ ಬರ್ಲು
ಗೌರಕ್ಕನ ಗೆಳೆಯರಾಗುತ್ತಾರೆ
ಸಿಮೆಂಟ್ ಮೂಟೆಗಳ ಹೊತ್ತ ಸೀನ
ಜಲ್ಲಿಕಲ್ಲುಗಳ ದಾಟಿಕೊಂಡು
ಕಬ್ಬಿಣದ ರಾಡುಗಳ ನಡುವೆ ಸಾಗಿ
ಬಲ್ಲಿದನ ಮನೆಯ ಬುನಾದಿಯ
ಕಟ್ಟುವವರ ನಡುವೆ ಬಂದು ನಿಂತಾಗ
ರವಗುಟ್ಟುವ ಬಿಸಿಲು ಒಂದೆಡೆ
ಒಣಗಿದ ಗಂಟಲು ಮತ್ತೊಂದೆಡೆ
ಕಾದ ರಸ್ತೆಯ ಮೇಲೆ ಪಾರಿ
ಸವೆದ ಅವಾಯ್ ಚಪ್ಲಿ
ಬೊಬ್ಬೆ ಎದ್ದ ಸೋತ ಪಾದಗಳು
ತಳ್ಳುಗಾಡಿಯಲ್ಲಿ ಹಣ್ಣು-ತರಕಾರಿ
ಬದುಕು ಕಟ್ಟಿಕೊಡುವ ಬಂಡಿ
ಚೌಕಾಸಿ ಮಾಡುವ ಜನರ ನಡುವೆ
ಜೇಬಿಗಿಳಿಯದು ಕಾಸು
ಅಕ್ಕಪಕ್ಕದವರು ನಾವು
ಅಕ್ಕಪಕ್ಕದಲ್ಲೇ ಇರುವೆವು
ಹೆಚ್ಚೇನು ನಿರೀಕ್ಷಿಸುವುದಿಲ್ಲ
ಸಾಕು ಬೊಗಸೆಯಷ್ಟು ಅಕ್ಕರೆ
ನಿರೀಕ್ಷಿಸಬಹುದೇ ಒಂದು ಸಣ್ಣ ಕಿರುನಗೆ
-ಯಶಸ್ವಿನಿ. ಎಂ. ಎನ್.
ನಮ್ಮ-ನಿಮ್ಮ ನಡುವೆ…
ನಮ್ಮ-ನಿಮ್ಮ ನಡುವೆ
ಏರ್ಪಟ್ಟಿದೆ ಪ್ರೀತಿಯ ಸೇತುವೆ,
ನಿಮ್ಮ ಜೊತೆ ನಿತ್ಯ ಸಾಗುತಿರುವೆ..
ನಸು ನಗುವಿನಿಂದ ಆಮಂತ್ರತೆ,
ಆದರಾತಿಥ್ಯತೆ-ಆತ್ಮೀಯತೆ-ಮಧುರವಾದ ಮಾತುಕತೆ,
ಈ ಪ್ರೀತಿ-ವಾತ್ಸಲ್ಯ ಮಮತೆ,
ಈ ದಿನ ಮತ್ತೆ ಸಿಕ್ಕೀತೇ,
ಬೇರೆಡೆ ದೊರಕಿತೆ…
ಸಂಬಂಧಗಳ ಪ್ರೀತಿಯ ಸೇತುವೆ
ಹೀಗೇ ಮುಂದುವರೆಯಲಿ ನಮ್ಮ ನಿಮ್ಮ ನಡುವೆ,
ಬೇಡ ಅಂತರ-ಎಲ್ಲರೂ ಸೇರಲಿ ಹತ್ತಿರ,
ಪ್ರೀತಿಯ ಹರಿವು ಇರಲಿ ನಿರಂತರ…
ಆಹಾ! ಈ ಕ್ಷಣಗಳೇ ಅತೀ ಸುಂದರ,
ಸಿಕ್ಕ ನೀವೇ ದೇವರಿರುವ ಗೋಪುರ,
ಸಂಬಂಧಗಳು ಹೀಗೆ ಇರಲೆಂದು ನಾನೇ ತಲೆಬಾಗುವೆ,
ಗೌರವದಿ ನಮಸ್ಕರಿಸುವೆ..
–ಶಾಂತಾರಾಮ ಶಿರಸಿ,
ಉನ್ಮತ್ತ ರಾತ್ರಿಯ ಸ್ವಗತ
ಎದೆಯ ಬಣಿವೆಗೆ ಎದೆ ತಾಕಿದ ಚಣವೆ
ಬೆಂಕಿ ದಿಗ್ಗನೆ ಬುಗಿಲೆದ್ದಂತೆ
ಕೈಗಳೆರಡೂ ಇರುಳ ನಡ ಬಳಸಿ
ಎದೆ ತತ್ರಾಣಿ ಸ್ಪರ್ಶಿಸಲು
ತುಂಬಿದ ಸೇಂದಿಯ ಮಗಿ ಬಾಯಿಗೆ
ಸುರಿ, ಸುರಿದಂತೆ
ಮತ್ತೆಂದರೆ ಮತ್ತು
ಸುಖದ ದಾರದಲಿ ಹೊಲಿದಂತೆ ಕಣ್ಣು
ಸ್ವರ್ಗ ಮೂರುಗೇಣು!
ಕಳೆದು, ಕೂಡಿಸಿ, ಭಾಗಿಸಿ, ಗುಣಿಸಿದರೂ
ಒಂದೇ ಉತ್ತರ
ಓದುವವರಿಗೂ ತತ್ತರಬತ್ತರ
ಸರಿದ ಉತ್ತರೆಯ ಮೇಲೆ
ಅಚ್ಚೊತ್ತಿದ್ದ ತುಟಿ, ಹಲ್ಲುಗಳ ಗುರುತು
ಗಾಯದಲ್ಲೂ ಸುಖದ ನಳಿಕೆ ಸೊಲ್ಲು
ಎಷ್ಟು ಕೇಳಿದರೂ ಸ್ವರದಲಿ
ಒಂದಿಷ್ಟೂ ಪರಕು ಇಲ್ಲ
ಉನ್ಮತ್ತ ರಾತ್ರಿಗೆ ಇದು ಬಿಟ್ಟು
ಬೇರೆ ಏನೂ ಗೊತ್ತಿಲ್ಲ
ಗುಡ್ಡ ಹತ್ತಿ ಇಳಿದವರ
ನೋವು, ನೋವಲ್ಲ?
ಯಾವ ಕಡ್ಡಿಯ ಹಿಡಿದು ಅಳೆದರೂ
ಅಳತೆ ಸಿಗುವುದಿಲ್ಲ
ಸುಖದ ಹೊಕ್ಕುಳ ಹೂವಲಿ
ಬೆರಳಾಡಿ ಬೆವರ ಗಂಧ ಕೊರಳಾಡಿ,
ಎದೆಗಿಳಿದು
ಎಲೆ ತೇಯ್ದು ತಪ್ಪಡಿಯಾಗಿ
ಉಸಿರು ಉಸಿರಲಿ ಬಿಸಿಯು ಬಸಿದು
ಬೆಸೆದಿರಲು ದೇಹ ಬಳ್ಳಿ
ಮೂಡಲ ಕೆನ್ನೆ ಕೆಂಪು
ಬಿಚ್ಚಿದ ಜಡೆಯ
ಕೈಯ ಬಾಚಣಿಕೆಯಲಿ ಬಾಚಿ
ಕಟ್ಟಿ, ಮೈ ಮುರಿದಾಗಲೇ
ಹಣೆಯಲ್ಲಿ ಸೂರ್ಯ ಮೂಡಿದ ಬೆಡಗು
ಉನ್ಮತ್ತ ರಾತ್ರಿಯ ಮೊಗದಲಿ
ಇನ್ನಿಲ್ಲದ ನಲಿವು
-ಡಾ. ಸದಾಶಿವ ದೊಡಮನಿ
ಅವಿತು ಕೂತ ಕವಿತೆ ಹೆಣ್ಣು
ಸಂಸಾರವ ತೇಲಿಸಿ ತೀರಕೆ ಒಯ್ಯುವ ನಾವೆ
ಪುರುಷರ ದರ್ಫ ದಳ್ಳುರಿಯಲಿ ಬೇಯುವ
ಬೆಳಗಿನ ಮುಗ್ದ ಮುಂಜಾವೆ
ಅಂಜಿ ಅಂಜಿಯೇ ಗಂಡನಿಗೆ ಗಂಜಿಯಾಗಿಹಳು
ಬಳಲಿ ಬೇಸತ್ತು ಮುಸ್ಸಂಜೆಯಾಗಿಹಳು
ಬದುಕ ಕಣಿವೆಗೆ ಕವಿದ ಇರುಳಲಿ
ಕಾಣುತಿಹಳು
ಭಯದಲೆ… ಅವಿತು ಕೂತ ಕವಿತೆಯಂತೆ
ಆವರ್ತಿಸುವ ಕಾಲಘಟ್ಟದಿ ವರ್ತಿಸುತ್ತಿಹಳು
ಸಬಲೆಯಾದರೂ ತಾ ಅಬಲೆಯೆಂದು
ಅಂದುಕೊಂಡಿಹಳು ಇನ್ನೂ ಅಲ್ಲಲ್ಲಿ
ತಾ ಇನ್ನೂ
ಪುರುಷ ನುಡಿಸುವ ತಬಲವೆಂದು
-ಅಯ್ಯಪ್ಪ ಬಸಪ್ಪ ಕಂಬಾರ
ಪ್ರಶಸ್ತಿಗಳು ಮಾರಾಟಕ್ಕಿವೆ!
ಕೇಳ್ರಪ್ಪೊ… ಕೇಳಿ…
ಸಾಹಿತಿಗಳಿಗೆ ಸುವರ್ಣವಕಾಶ
ಉಪಯೋಗಿಸಿಕೊಳ್ಳಿ ಸದವಕಾಶ
ಸಿಕ್ಕವರಿಗೆ ಸಿರುಂಡೆ
ಸಿಗದವರಿಗೆ ಬಾಸುಂಡೆ
ಆ-ರತ್ನ, ಈ-ವಜ್ರ,
ಕಾರ್ಯಕ್ರಮಗಳ ನೆಪದಲ್ಲಿ
ಪ್ರಸಿದ್ಧ ಸಾಹಿತಿಗಳ ಹೆಸರಿನಲ್ಲಿ
ಕೊಡು ಕೊಳ್ಳುವಿಕೆಯ ವ್ಯಾಪಾರ
ಪ್ರಶಸ್ತಿಗಳು ಮಾರಾಟಕ್ಕಿವೆ
ನಮ್ಮಲ್ಲಿ ಅಪಾರ
ಸ್ವಾಭಿಮಾನ ಬಿಟ್ಟವರು
ನಾಚಿಕೆ ಮಾನ ತೊರೆದವರು
ನಿಜ ಸಾಹಿತಿಗಳಲ್ಲದವರು
ಬೇಕಾದವರು ಬನ್ನಿ ಮುಂದೆ
ಇಲ್ಲದಿದ್ದರೆ ಉಳಿಯುತ್ತಿರಿ
ಎಂದಿಗೂ ಹಿಂದೆ
ವರ್ಚಸ್ಸಿಗೆ, ಅಭಿಮಾನಕ್ಕೆ,
ಶಿಫಾರಸ್ಸು ಇದ್ದೋರಿಗೆ,
ಹೆಚ್ಚು ಹಣ ಕೊಟ್ಟವರಿಗೆ
ಮೊದಲ ಆದ್ಯತೆ
ಇದೆಲ್ಲಾ ಇದ್ದೋರಿಗೆ
ಪ್ರಶಸ್ತಿಯ ಜೊತೆಗೆ ಪ್ರತಿಷ್ಠಿತರಿಂದ
‘ಇಂತಿರ್ಪ’ ಬಿರುದು ಬಾವಲಿ ನಿಮ್ಮ ಹೆಸರಿಗೆ
ಗರಿಗರಿ ರಂಗಿನ ರೇಷ್ಮೆ ಶಾಲಿನ
ಹೊದಿಕೆ ಹೆಗಲಿಗೆ
ಹೂವಿನ ಹಾರ ಕೊರಳಿಗೆ
ತುರಾಯಿ ಕೈಗೆ
ಮೈಸೂರು ಪೇಟ ತಲೆಗೆ
ಇಷ್ಟೆಲ್ಲಾ ಸನ್ಮಾನ ಜೊತೆಗೆ
ಲೆಕ್ಕವಿಲ್ಲದಷ್ಟು ಚಪ್ಪಾಳೆ ಕಿವಿಗಳಿಗೆ
ಮರು ದಿನ ಮುಂಜಾನೆ
ಕೆಲವು ಪತ್ರಿಕೆಗಳಲ್ಲಿ ಪ್ರಕಟಣೆ
ನಂತರ ವಾಟ್ಸಾಪ್ ಸ್ಟೇಟಸ್
ಕಂಡಕಂಡವರಿಗೆಲ್ಲ ರವಾನೆ
ಟ್ವಿಟ್ಟರ್, ಇನ್ಸ್ಟಾಗ್ರಾಮ್
ಫೇಸ್ಬುಕ್ನಲ್ಲಿ ಇಷ್ಟುದ್ದದ ಒಕ್ಕಣೆ
ಯಾರಿಗುಂಟು ಯಾರಿಗಿಲ್ಲ
ಇಂತಹ ಅವಕಾಶ
ಇದ್ದರೆ ಸಾಕು ಆಯೋಜಕರ
ಕೃಪಾ ಕಟಾಕ್ಷ!
ಕೇಳ್ರಪ್ಪೊ… ಕೇಳಿ…
-ಜಬೀವುಲ್ಲಾ ಎಮ್. ಅಸದ್
ರುಗ್ಣನ ರಾತ್ರಿ
ನೋವು
ನಿರ್ದಯವಾಗಿದೆ
ಕ್ರೂರಿಯಾಗಿದೆ
ಅದು ಏನೂ ಹೇಳದು
ಏನೂ ಕೇಳದು
ಅನುಭವ ಮಾತ್ರ
ಆಗುವುದು
ನೋವಿನಿಂದ ನರಳಿದ
ನೋವಿನಿಂದ ಬಳಲಿದ
ಶರೀರವೀಗ ಸೋತಿದೆ
ಹಟಮಾರಿಯಾತ್ಮ
ಹೋರಾಡುತ್ತಲೇಯಿದೆ
ನರಳುವ ನಡಗುವ
ಭಯಭೀತಗೊಂಡ
ನೋವಿನ ಒತ್ತಡಕ್ಕೆ
ಮಣಿದ ದೇಹಕ್ಕೆ
ತಬ್ಬಿಕೊಂಡು
ಹೇಳವುದು
ಬಿಡಲಾರೆ
ಸಾವೇ
ಹೊಸಿಲಿಗೆ ನಿಂತು
ತಾಳ್ಮೆಯಿಂದ
ನೋಡುತಿದೆ
ಅವನಿಗೆ
ಇಂದು ರಾತ್ರಿ
ಅದೇನು ಆಗುವುದು..
ಮೂಲ; ಜಾವೇದ್ ಅಖ್ತರ್
ಅನುವಾದ; ಅಶ್ಫಾಕ್ ಪೀರಜಾದೆ.
ನಾನು ಸತ್ತಾಗ
ನಾನು ಸತ್ತಾಗ
ಅಳುವರ್ಯಾರು ನಗುವರ್ಯಾರು
ಹಲವು ಜನ ಅತ್ತರೆ
ಕೆಲವು ಜನ ನಗುವರು
ಇಷ್ಟೇ ಅಲ್ಲವೇ
ನಾನು ಸತ್ತಾಗ
ಮುಖ ನೋಡಲು
ಬರುವರ್ಯಾರು ಬಿಡುವರ್ಯಾರು
ಮುಖನೋಡಿ ನೊಂದುಕೊಳ್ಳುವರು ಹಲವರು
ಸತ್ತರೆ ಸಾಯಲಿ
ಅನ್ನುವರು ಕೆಲವರು
ಇಷ್ಟೇ ಅಲ್ಲವೇ
ನಾನು ಸತ್ತಾಗ
ನನ್ನ ಮಂಟಪ ಸಿದ್ಧತೆಯಾದಾಗ
ದುಃಖಿಸುವರ್ಯಾರು ಕುಣಿದು ಕುಪ್ಪಳಿಸುವರ್ಯಾರು
ನನ್ನಿಂದ ಪ್ರೀತಿ ಪಡೆದವರು ದುಃಖಿಸುವರು
ನನಗೆ ತಿಳಿಯದೇ ನನ್ನಿಂದ ನೋವಿಗೋಳಗಾದವರು
ಕುಣಿದುಕುಪ್ಪಳಿಸಿ ನಗುವರು
ಇಷ್ಟೇ ಅಲ್ಲವೇ
ನಾನು ಸತ್ತಾಗ
ನನ್ನ ಮಂಟಪಕ್ಕೆ
ಹೆಗಲು ನೀಡುವರ್ಯಾರು ನೀಡದಿರುವರ್ಯಾರು
ನನ್ನ ಒಳ್ಳೆತನ ಅರಿತುಕೊಂಡವರು
ಹೆಗಲು ನೀಡಲು ಮುಂದೆ ಬರುವರು
ನನ್ನ ಒಳ್ಳೆತನವನ್ನು ಕೆಟ್ಟದಾಗಿ ಅರ್ಥೈಸಿಕೊಂಡವರು
ಸತ್ತಿದ್ದು ಒಳ್ಳೆಯದಾತೆಂದು ಸುಮ್ಮನಿರುವರು
ಇಷ್ಟೇ ಅಲ್ಲವೇ
ನಾನು ಸತ್ತಾಗ
ಒಡ ಹುಟ್ಟಿದವರೇ ನನ್ನವರಾಗುವುದಿಲ್ಲ
ಹೊಟ್ಟೆಯಲ್ಲಿ ಹುಟ್ಟಿದವರೂ ನನ್ನವರಾಗುವುದಿಲ್ಲ
ನನ್ನ ಚಿತೆಗೆ ಬೆಂಕಿ ಇಡುವ ಮುನ್ನವೇ
ಆಸ್ತಿಪತ್ರಗಳ ಲೆಕ್ಕ ಹಾಕುವರು
ಇದು ನನಗೆ ಗೊತ್ತಿಲ್ಲವೇ
ಇರುವಷ್ಟು ದಿನ
ಮನುಜರಾಗೋಣ
ಮನುಷ್ಯತ್ವದಿಂದ ಬಾಳೋಣ
ಸರ್ವಜನಾಂಗದವರ ಶಾಂತಿಗಾಗಿ ಬದುಕೋಣ
ನೊಂದವರ ಹಕ್ಕಿಗಾಗಿ ಹೊರಾಡೋಣ
ನಮ್ಮ ಜೀವನ
ಇಷ್ಟೇ ಆಗಬೇಕಲ್ಲವೇ
-ಜಿ.ಎಸ್.ಶರಣು