ಬದುಕಿನಲ್ಲಿ ಪರಿವರ್ತನೆಯೆಂಬುದು ನಿರಂತರವಾಗಿದೆ. ಈ ಪರಿವರ್ತನೆಗಳು ಸವಾಲುಗಳನ್ನು ನಾವು ಬಹುತೇಕ ಸಮಸ್ಯೆಗಳು ಎಂತಲೇ ಪರಿಗಣಿಸುತ್ತೇವೆ. ಆದ್ದರಿಂದಲೇ ನಾವು ಅದರಿದ ಬಳಲುವುದು ಕುಗ್ಗಿಹೋಗುವುದೇ ಇದೆ. ಇದರಿಂದ ನಮಗೆ ಮತ್ತೂ ಹಾನಿಯಾಗುತ್ತದೆ. ಸವಾಲನ್ನು ಎದುರಿಸಲು ಅಗತ್ಯವಾಗಿರುವ ಸಂಪನ್ಮೂಲಗಳನ್ನು ನಾವು ದುರ್ಬಲಗೊಳಿಸಿಕೊಳುತ್ತೇವೆ. ಈಗ ನಾವು ಮಾಡುವುದಾದರೂ ಏನು? ಗಮನಿಸಿದರೆ ಇಲ್ಲಿ ಎಲ್ಲವೂ ಫಲಿತಾಂಶಗಳೇ ಆಗಿವೆ. ನಮ್ಮ ದೃಷ್ಟಿಯಲ್ಲಿ ಸೋಲೆಂದರೆ ನಾವು ಅಂದುಕೊಂಡದ್ದು ಆಗದಿರುವುದು. ಸಮಸ್ಯೆಯೆಂದರೆ ನಾವು ಅದನ್ನು ಎದುರಿಸಲಾರವೇನೋ ಇದರಿದ ನಮಗೆ ಹಾನಿಯೇ ಆಗುವುದೇನೋ ಹಾನಿಯಾದರೆ ಏನು ಮಾಡುವುದು ಎಂಬ ಊಹೆ ಕಲ್ಪನೆಗಳೇ ಬಹುತೇಕ ಇವೆ. ಇದಕ್ಕೆ ಹೊರತಾಗಿ ಇಲ್ಲಿ ಬೇರೇನೂ ಜಗತ್ತಿನ ತಾನೇ ತಾನಾಗಿರುವ ವಾಸ್ತವವೇನೂ ಇಲ್ಲ.
ಗಮನಿಸಿದರೆ ಹೊರ ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಸಂಗತಿಗೂ ಅರ್ಥ ನೀಡುವವರು ನಾವೇ ಆಗಿದ್ದೇವೆ. ಅದನ್ನು ಸಮಸ್ಯೆಯೆಂದರೂ, ಸವಾಲೆಂದರೂ, ಅವಕಾಶವೆಂದರೂ, ಪರಿವರ್ತನೆಯನ್ನು ಸಾಧ್ಯವಾಗಿಸುವ ಪರಿಸ್ಥಿತಿಯೆಂದರೂ ನಮಗೆ ಅದ್ಭುತವಾದ ತೀವ್ರತೆ ಶಕ್ತಿಯನ್ನು ನೀಡುವ ಪ್ರೇರೇಪಣೆ ಎಂದರೂ ಎಲ್ಲವೂ ಸರಿಯೇ ಆಗಿವೆ. ಆದ್ದರಿಂದ ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ಯಾವುದು ನಮಗೆ ಪೂರಕವಾಗಿದೆಯೋ, ಯಾವುದು ನಮಗೆ ಸಂಪನ್ಮೂಲ ಮನಃಸ್ಥಿತಿಯನ್ನು ತರುವುದೋ, ಯಾವುದು ನಮಗೆ ಇದನ್ನು ನಿಭಾಯಿಸಲು ಸ್ಫೂರ್ತಿ, ಧೈರ್ಯ, ಆತ್ಮವಿಶ್ವಾಸಗಳನ್ನು ನೀಡುವುದೋ ಅಂತಹ ಅರ್ಥವನ್ನು ನಾವು ಯಾವುದೇ ಸಂಗತಿಗೆ ನೀಡುವುದು ಬುದ್ಧಿವಂತಿಕೆಯಾಗಿದೆ.
ಗಮನಿಸಿದರೆ ನಾವು ಗ್ರಹಿಸುವುದೆಲ್ಲವೂ ಹೊರಜಗತ್ತಿನ ವಾಸ್ತವಗಳೇ ಎಂಬ ಕಲ್ಪನೆಯೇ ದೋಷಪೂರಿತವಾಗಿದೆ. ಹೊರಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಸಂಗತಿಯೂ ಅದನ್ನು ಗ್ರಹಿಸುವ ಪ್ರತಿಯೊಬ್ಬ ವ್ಯಕ್ತಿಗೂ ಭಿನ್ನವಾಗಿದೆ. ವ್ಯಕ್ತಿಯು ತಾನು ಈ ಸಂಗತಿಯನ್ನು ತನ್ನ PIR (ವ್ಯಕ್ತಿ ವೈಶಿಷ್ಟ್ಯವೆಂಬ ವೈಯಕ್ತಿಕ ಆಂತರಿಕ ಪ್ರಾತಿನಿಧಿಕ) ವ್ಯವಸ್ಥೆಯ ಮೂಲಕ ತನ್ನ ಮನದಲ್ಲಿ ಪುನರ್ ಕಲ್ಪಿಸಿಕೊಂಡು ಇದರಂತೆ ತಾನು ಆ ಸಂಗತಿಯ ಅನುಭವವನ್ನು ಹೊಂದುತ್ತಾನೆ. ಇದು ನಮಗೆ ಮನವರಿಕೆಯಾದರೆ ನಾವು ಬಹುಕಾಲದಿಂದ ಹೊತ್ತುಕೊಂಡು ಬರುತ್ತಿರುವ ನಮ್ಮ ಕಹಿ ಅನುಭವಗಳಿಂದ ಮುಕ್ತಿ ಹೊಂದಿ ಸ್ವಾತಂತ್ರ್ಯೆವನ್ನು ಹೊಂದುತ್ತೇವೆ. ನಮ್ಮ ದೈನಂದಿನ ಬದುಕಿನಲ್ಲಿ ಹೇರಿಕೊಳ್ಳುತ್ತಿರುವ ಒತ್ತಡ ಪೂರ್ವಕ ಮನಸ್ಥಿತಿಯಿಂದ ಪಾರಾಗುತ್ತೇವೆ.
ಪರಿಶೀಲಿಸಿದರೆ ನಮ್ಮನ್ನು ಸಮಸ್ಯೆಯೆಂಬ ನಿರಂತರವಾಗಿ ಸುಳಿಯಂತೆ ಸುತ್ತುವ ಅದೇ ಆಲೋಚನ ಸರಣಿಗಳಿಂದ ಅದೇ ರೀತಿಯ ನಕಾರಾತ್ಮಕ ಅನುಭಾವಗಳಿಂದ ನಮ್ಮನ್ನು ಹೊರಬರುವಂತೆ ಮಾಡುವ ಸಾಧನವೆಂದರೆ ನಮಗೆ ಈ ಕುರಿತಂತೆ ಮೂಡುವ ಅರಿವು ಮತ್ತು ಜ್ಞಾನ.
ನಮಗೆ ಯಾವುದಾದರೂ ಸಮಸ್ಯೆಯು ಬಂದೊದಗಿದೆ ಎನ್ನಿಸಿದರೆ, ಅಪಾಯವು ಸಂಕಷ್ಟವು ಬಂದೊದಗಿದೆಯೆಂದು ಅನ್ನಿಸಿದರೆ ಮೊದಲಿಗೆ ನಾವು ಮಾಡಬೇಕಾದ ಕಾರ್ಯವೆಂದರೆ ಈ ಸಂಗತಿಯಲ್ಲಿ ನಮ್ಮ ಫೋಕಸ್ (ಗಮನ) ಯಾವ ಕಡೆಗಿದೆ? ಎಂಬುದು. ಇಲ್ಲಿ ನಮ್ಮ ಗಮನವು ಆಪಾದನೆ/ ಸಮಸ್ಯೆಯ ಹುಟ್ಟಿನ ಕಡೆಗಿದೆಯಾ? ಅಥವಾ ಪರಿಹಾರದ ಕಡೆಗಿದೆಯಾ ಎಂಬುದು ಇಲ್ಲಿ ನಾವು ಯಾವ ಕಡೆಗೆ ಗಮನ ಹರಿಸಿದರೂ ಅವರವರ ಪ್ರಕಾರ ಸರಿಯೇ? ಇಲ್ಲಿ ನಮ್ಮ ಗಮನ (ಫೋಕಸ್) ಸಮಸ್ಯೆಯ ಪರಿಹಾರದ ಕಡೆಗಿದ್ದರೆ ನಾವು ಸರಿಯಾದ ದಾರಿಯಲ್ಲಿ ಮೊದಲ ಹೆಜ್ಜೆಯಿಟ್ಟಂತೆ. ಏಕೆಂದರೆ ಇದು ನಮ್ಮ ಪ್ರಬಲವಾದ ಸುಪ್ತ ಮನಸ್ಸನ್ನು ಈ ಪರಿಹಾರ ಹುಡುಕುವ ಕಾರ್ಯಕ್ಕೆ ತೊಡಗಿಸಲಿದೆ.
ಎರಡನೆಯ ಸಂಗತಿಯೆಂದರೆ ನಾವು ಈ ಸಮಸ್ಯೆಯೆಂಬ ಸಂಗತಿಗೆ ಯಾವ ಅರ್ಥವನ್ನು ನೀಡುತ್ತಿದ್ದೇವೆ ಎಂಬುದು. ನಾವು ಸಮಸ್ಯೆಗೆ ನಾವು ಇದೊಂದು ಯಾರಿಗೂ ಇಲ್ಲದ ನನಗೇ ಬಂದೊದಗಿದ ನಷ್ಟವೆಂದರೆ ಅಪಾಯವೆಂದರೆ ಕೇಡಾಗುವುದಿದೆ ಎಂದುಕೊಂಡರೆ ನಾವು ಇರುವ ಧೈರ್ಯ ಆತ್ಮವಿಶ್ವಾಸಗಳನ್ನು ದುರ್ಬಲಗೊಳಿಸಿಕೊಳ್ಳುವುದಲ್ಲದೆ ಇದರ ಪರಿಹಾರಕ್ಕಾಗಿ ಅಗತ್ಯವಾಗಿರುವ ನಮ್ಮೊಳಗೇ ಇರುವ ಎಲ್ಲಾ ಸಂಪನ್ಮೂಲಗಳನ್ನು ದುರ್ಬಲಗೊಳಿಸಿಕೊಂಡಂತಾಗುತ್ತದೆ. ಇದಲ್ಲದೆ ನಾವು ಸಮಸ್ಯೆಯೆಂಬ ಸಂಗತಿಗೆ ಎಲ್ಲವೂ ಒಳ್ಳೆಯದಕ್ಕೇ ಆಗುತ್ತಿದೆ. ನಮ್ಮ ಜಿಡ್ಡುಗಟ್ಟಿದ ಬದುಕಿನಲ್ಲಿ ಇದೊಂದು ನಮ್ಮನ್ನು ಬಡಿದೆಬ್ಬಿಸಿಡುವಂತೆ ಮಾಡುವ ಮೂಲಕ ನಾವು ಇದುವರೆಗೂ ಬಯಸುತ್ತಿರುವ ಪರಿವರ್ತನೆಗೆ ನಾವು ಪ್ರಬಲರಾಗುವಂತೆ ಮಾಡುತ್ತಿದೆ. ನಮ್ಮನ್ನು ಈಗಿರುವ ಜಿಡ್ಡುಗಟ್ಟಿದ ಪರಿಸ್ಥಿತಿಯಿಂದ ಸಿಡಿದು ಹೊರಬಂದು ಹೊಸ ಬದುಕನ್ನು ಕಟ್ಟಿಕೊಳ್ಳುವುದನ್ನು ಸಾಧ್ಯವಾಗಿಸುತ್ತಿದೆ ಎಂದು ಅರ್ಥ ನೀಡಿದರೆ ಪ್ರಾಮಾಣಿಕ ಪ್ರಯತ್ನ ಪರಿಕ್ರಮಗಳಿಗೆ ಯಾವಾಗಲೂ ಬೆಲೆ ಇದೆ ಎಂದುಕೊಂಡರೆ ಇದೊಂದು ನಮಗೊದಗಿ ಬಂದ ಅವಕಾಶವೇ ಎಂದುಕೊಂಡರೆ ನಾವು ಸಂಪನ್ಮೂಲ ಮನಸ್ಥಿತಿಯನ್ನು ಹೊಂದುತ್ತೇವೆ. ನಮ್ಮ ಉತ್ಸಾಹ ಆತ್ಮವಿಶ್ವಾಸಗಳು ಪ್ರಬಲವಾಗುತ್ತವೆ. ನಾವು ಪರಿಹಾರದ ಹಾದಿಯಲ್ಲಿ ನಮ್ಮಲ್ಲಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಸಾಧ್ಯವಾಗಿಸುತ್ತದೆ. ನಮ್ಮ ಬದುಕು ಉತ್ಸಾಹಭರಿತವಾಗುತ್ತದೆ. ಇಂತಹ ಸ್ಥಿತಿಯಲ್ಲಿ ನಾವು ಯಾವುದನ್ನೂ ನಮ್ಮ ಯಶಸ್ಸಿನ ಅವಕಾಶವಾಗಿಯೇ ಬಳಸಿಕೊಂಡು ಯಶಸ್ಸು ಗಳಿಸುತ್ತೇವೆ.
ಮೂರನೇಯದಾಗಿ ನಾವು ಇಂತಹ ಪರಿಸ್ಥಿತಿಯಲ್ಲಿ ಸಮಸ್ಯೆಯ ಪರಿಹಾರಕ್ಕಾಗಿ ನಾವೇನು ಕ್ರಮಗೊಳ್ಳಲು ಸಾಧ್ಯವಿದೆ? ಎಂದು ವಿಶ್ಲೇಷಿಸುವುದು ಹಾಗೂ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟು ಆ ಕಾರ್ಯವನ್ನು ಮಾಡಲು ತೊಡಗುವುದು ನಮ್ಮನ್ನು ನಾವಂದುಕೊಂಡಿರುವ ಸಮಸ್ಯೆಯೆಂಬ ಸಂಗತಿಯಿAದ ಸಂಪೂರ್ಣವಾಗಿ ಹೊರಕ್ಕೆ ತರುತ್ತದೆ. ವಿಶ್ಲೇಷಿಸಿದರೆ ಇಲ್ಲಿ ಎಲ್ಲದಕ್ಕೂ ನಾವೇ ಕಾರಣರಾಗಿದ್ದೇವೆ. ಇದು ಬಹುತೇಕ ನಮ್ಮ ಗಮನದಲ್ಲೇ ಇಲ್ಲವಾದರೂ ಇದನ್ನು ತಿಳಿದುಕೊಳ್ಳುವಲ್ಲಿ ನಮ್ಮದೊಂದು ಪ್ರಾಮಾಣಿಕ ಪ್ರಯತ್ನವೂ ನಮಗೆ ನಮ್ಮ ಎಲ್ಲದಕ್ಕೂ ನಾವೇ ಸಂಪೂರ್ಣವಾಗಿ ಜವಾಬ್ದಾರರಾಗಿದ್ದೇವೆ ಎಂಬುದನ್ನು ಅರಿವು ಮೂಡಿಸಲು ಸಾಧ್ಯವಿದೆ. ಹೀಗಾದರೆ ನಾವು ಯಾವುದನ್ನು ನಿಭಾಯಿಸುವುದೂ ನಮಗೆ ಸಾಧ್ಯವಾಗುತ್ತದೆ.
-ಕೆ ಶ್ರೀನಿವಾಸ ರೆಡ್ಡಿ
ಲೇಖಕರ ಪರಿಚಯ
ಕೆ. ಶ್ರೀನಿವಾಸ ರೆಡ್ಡಿ ಅವರು ೨೦೦೬ರಲ್ಲಿ ಕರ್ನಾಟಕ ನಾಗರೀಕ ಸೇವೆಗೆ ಸೇರಿ ಕೆಎಎಸ್ ಅಧಿಕಾರಿಯಾಗಿ ಬಾಗಲಕೋಟೆ, ಚಾಮರಾಜನಗರ, ಮಂಗಳೂರು, ಮೈಸೂರು, ಚಿತ್ರದುರ್ಗ ಜಿಲ್ಲೆಗಳು ಸೇರಿದಂತೆ ಬೆಂಗಳೂರು ಬಿಬಿಎಂಪಿಯಲ್ಲಿ ಉಪ ಆಯುಕ್ತರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಮಂಡ್ಯ ಜಿಲ್ಲೆಯ ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಣ್ಣಿನ ಮೆರವಣಿಗೆ',
ಕಾಡುವ ಕ್ಷಣಗಳ’ ನಡುವೆ ಕವನ ಸಂಕಲನ ಸೇರಿದಂತೆ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. NIP ಮಾಸ್ಟರ್ ಪ್ರಾಕ್ಟೀಷಿನರ್ ಆಗಿರುವ ಇವರು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ‘ಒಂದು ಹೆಜ್ಜೆ ಮುಂದೆ’, ‘ವಿಸ್ತಾರ’, ‘ನಿರಂತರ’, ಅಂತರಂಗ’,
ಅನ್ವೇಷಣೆ’ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಕೃತಿಗಳು ಆಂಗ್ಲಭಾಷೆಗೂ ಅನುವಾದಗೊಂಡಿವೆ. ಇವರ ನಿರಂತರ' ಕೃತಿಗೆ ಪ್ರತಿಷ್ಠಿತ
ಅಡ್ವೆಸರ್’ ಪ್ರಶಸ್ತಿ ಲಭಿಸಿದೆ.