ತಮಿಳಿನಲ್ಲಿ: ವಣ್ಣನಿಲವನ್
ಕನ್ನಡಕ್ಕೆ: ಕೆ. ನಲ್ಲತಂಬಿ
“ಹೋಗಲಿಕ್ಕೆ ಒಂದು ಗಂಟೆ, ಬರಲಿಕ್ಕೆ ಒಂದು ಗಂಟೆ. ಅಲ್ಲಿ ಅಣ್ಣನ ಮನೆಯಲ್ಲಿ ಹತ್ತು ನಿಮಿಷ ಆಗುತ್ಯೇ? ಈಗ ಗಂಟೆ ಹತ್ತೂವರೆ ಆಗಲಿದೆ. ಎರಡು ಎರಡುವರೆಯೊಳಗೆ ಬಂದು ಬಿಡಬಹುದು. ಹೋಗಿ ಹಣ ತೆಗೆದುಕೊಂಡು ಬಾ” ಎಂದ ಸೆಲ್ಲಚ್ಚಾಮಿ. ಸರೋಜಳಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಅಲ್ಲಿ ಕಲ್ಲಿಡೈಕುರುಚ್ಚಿ ರಾಮಸಾಮಿಯನ್ನು ನೆನಪು ಮಾಡಿಕೊಂಡರೆ ವಾಕರಿಕೆ ಬರುತ್ತದೆ.
“ನಾನು ಅಂಗಡಿಯನ್ನು ನೋಡಿಕೊಳ್ಳುತ್ತೇನೆ. ನೀವು ಹೋಗಿ ಕೇಳಿ ತೆಗೆದುಕೊಂಡು ಬನ್ನಿ” ಎಂದಳು ಸರೋಜ.
“ಅದು ಗೊತ್ತಿಲ್ಲವೇನು. ನಾನು ನಿನ್ನನ್ನು ಹೋಗಲು ಹೇಳುತ್ತಿದ್ದೇನೆ. ಸಂಕ್ರಾಂತಿ ಸಮಯ, ಇನ್ನೂ ಸ್ವಲ್ಪ ಹೊತ್ತಲ್ಲಿ ಕೀಳೂರು ಬಸ್ ಬಂದು ಬಿಡುತ್ತೆ. ಒಂದೆರಡು ಯಾಪಾರ ನಡೆಯುತ್ತೆ. ಹನ್ನೆರಡು ಗಂಟೆಗೆ ಛತ್ರಪಟ್ಟಿ ಸೀರೆಯವರು ಬಂದು ಬಿಡುತ್ತಾರೆ. ಅವರಿಗೆ ಉತ್ತರ ಹೇಳಬೇಕು.”’
“ನನಗೆ ಅಲ್ಲಿ ಹೋಗೋದಿಕ್ಕೆ ಒಂದು ಥರಾ ಇದೆ. ಆ ಹತ್ತು ಸಾವಿರವನ್ನ ಇಲ್ಲೇ ಹೊಂದಿಸೋದಿಕ್ಕೆ ಆಗೋದಿಲ್ಲವೇ?”
“ಇಲ್ಲಿ ಹೊಂದಿಸದರೆ ಬಡ್ಡಿ ಯಾರು ಕೊಡೋದು? ಅಣ್ಣನ ಬಳಿ ಅಂದರೆ ಬಡ್ಡಿ ಇಲ್ಲದೆ ತೆಗೆದುಕೊಳ್ಳಬಹುದು… ನಿಧಾನವಾಗಿ ಹಿಂತಿರುಗಿಸಿ ಕೊಟ್ಟರೂ ಅವರು ಏನೂ ಹೇಳೋದಿಲ್ಲ… ಮಾತಾಡ್ತಾ ಇರೋ ಸಮಯದಲ್ಲಿ ಸರಸರಾಂತ ಬಸ್ ಹತ್ತಿ ಹೋಗಿ ಬರಬಹುದು… ಫೋನಿಡಲೇ?”
ರಾಮಸಾಮಿ ಅಕೌಂಟ್ನಿಂದ ಇವನ ಅಕೌಂಟ್ಗೆ ಹಣ ಟ್ರಾನ್ಸಪರ್ ಮಾಡಬಹುದು. ಛತ್ರಪಟ್ಟಿಯವರಿಗೆ ಚೆಕ್ ಕೊಟ್ಟರೆ ತೆಗೆದುಕೊಳ್ಳೋದಿಲ್ಲವೇ ಎಂದು ಸರೋಜಳಿಗೆ ತೋಚಿತು. ಆದರೆ ಕೇಳಲಿಲ್ಲ. ಅವನು ಅವಳನ್ನು ತನ್ನ ಅಣ್ಣನ ಮನೆಗೆ ಕಳುಹಿಸುವುದರಲ್ಲೇ ಗುರಿಯಾಗಿದ್ದ.
“ನನಗೆ ನಾಚಿಕೆಯಾಗುತ್ತಿತ್ತು… ಹೆಣ್ಣನ್ನು ಹೋಗಿ ಸಾಲ ಬೇಡಲು ಕಳುಹಿಸುತ್ತಿದ್ದಾನಲ್ಲ… ಅಂಗಡಿ ಹುಡುಗನನ್ನು ಕಳುಹಿಸಿದರೆ ಏನಂತೆ?”
“ಅಂಗಡಿಯಿಂದ ಯಾರನ್ನೂ ಕಳುಹಿಸೋದಿಕ್ಕೆ ಆಗೋದಿಲ್ಲ. ಯಾಪಾರದ ಹೊತ್ತು. ನೀನು ಮನೆಯಲ್ಲಿ ಸುಮ್ಮನೆತಾನೇ ಇದ್ದೀಯಾ? ಅವನ ಮನೆಗೆ ಹೋಗೋದಿಕ್ಕೆ ಏನು ನಾಚಿಕೆ? ಹೋಗಿ ಬಾ… ಫೋನಿಡಲೇ?”
ಅವಳು ಏನೂ ಹೇಳಲಿಲ್ಲ. ಅವನೇ ಸಂಪರ್ಕವನ್ನು ಕಡಿದುಬಿಟ್ಟ. ಬೇರೆ ದಾರಿ ಇರಲಿಲ್ಲ. ಕಲ್ಲಿಡೈಕುರುಚ್ಚಿಗೆ ಹೋಗಲೇಬೇಕು. ಹ್ಯಾಂಡ್ಬ್ಯಾಗಿನಲ್ಲಿ ಹಣ ಇದೆಯೇ ಎಂದು ನೋಡಿಕೊಂಡಳು. ನೂರು ರೂಪಾಯಿ ನೋಟುಗಳಿದ್ದವು. ಸೆಲ್ ಫೋನನ್ನು ಚೀಲದೊಳಗೆ ಹಾಕಿಕೊಂಡಳು. ತಲೆ ಬಾಚಿ, ಪೌಡರ್ ಹಾಕಿಕೊಳ್ಳಬೇಕೆ? ಸಾಧಾರಣವಾಗಿದ್ದರೇನೇ ನುಂಗಿಹಾಕೋ ಥರಾ ನೋಡ್ತಾನೆ. ಅಲಂಕಾರ ಎಲ್ಲಾ ಮಾಡಿಕೊಂಡು ಹೋದರೆ ಅವನಿಗೆ ಮೇವು ಹಾಕಿದಂತೆ ಆಗುತ್ತದೆ. ಬೀರೋ ಕನ್ನಡಿಯ ಮುಂದೆ ನಿಂತು ಹಣೆಯಲ್ಲಿ ಬೊಟ್ಟು ಮಾತ್ರ ಇದೆಯೇ ಎಂದು ನೋಡಿಕೊಂಡಳು. ಕಂಗಳ ಸುತ್ತ ಸಣ್ಣ ಕಪ್ಪು ವಲಯ. ಗುಂಗುರು ಕೂದಲು ಇವೆಲ್ಲಾ ಅವನನ್ನು ಸೆಳೆಯುತ್ತದೆಯೇ? ಕಿಟಕಿಗಳನ್ನು ಮುಚ್ಚಿದಳು. ಉರಿಯುತ್ತಿದ್ದ ದೀಪದ ಬತ್ತಿಯನ್ನು ಒಳಗೆ ಸರಿಸಿ ಆರಿಸಿದಳು. ಯಾವಾಗ ಹೊರಗೆ ಹೊರಟರು ದೇವರ ಪಟಗಳ ಮುಂದೆ ನಿಂತು ನಮಸ್ಕಾರ ಮಾಡುತ್ತಾಳೆ. ಆರಿಸಿದ ಬತ್ತಿಯ ವಾಸನೆ ಬಂದಿತು. ಎಲ್ಲೋ ಅಳಿಲು ಕೂಗಿತು. ಬಾಗಿಲಿಗೆ ಬೀಗ ಹಾಕಿದಳು. ಉಟ್ಟಿದ್ದ ಸೀರೆ ಬಹಳ ಸೊಗಸಾಗಿ ಕಾಣುತ್ತಿದೆಯೇ ಎಂದು ಯೋಚಿಸಿದಳು.
ಸಾಧಾರಣವಾದ ನೂಲು ಸೀರೆಯನ್ನುಅಥವಾ ಹಗ್ಗದಲ್ಲಿ ಒಣಗಲು ಹಾಕಿದ್ದ ಸೀರೆಯನ್ನು ಅದರ ಮಡಿಕೆಗಳ ಸುಕ್ಕು ಕಳೆಯದೆ ಹಾಗೆಯೇ ಉಟ್ಟುಕೊಂಡಿದ್ದರೆ, ಸ್ವಲ್ಪ ಅಸ್ತವ್ಯಸ್ತವಾಗಿ ಅವನ ಮುಂದೆ ಸಹಜವಾಗಿ ಹೋಗಿ ನಿಲ್ಲಬಹುದು ಎಂದು ತೋಚಿತು. ಆದರೆ ದೊಡ್ಡ ಕಣ್ಣುಗಳನ್ನು ಗುಂಗುರು ಕೂದಲನ್ನು ಏನು ಮಾಡುವುದು?
ಹೊಸ ಬಸ್ ಸ್ಟ್ಯಾಂಡ್ ನಡೆದು ಹೋಗುವಷ್ಟು ದೂರದಲ್ಲಿತ್ತು. ಕಲ್ಲಿಡೈಕುರುಚ್ಚಿಗೆ ಆಗಾಗ ಬಸ್ ಇದೆ. ಪಾಪನಾಶಕ್ಕೆ ಐದು ನಿಮಿಷಕ್ಕೆ ಒಂದು ಹೊರಡುತ್ತದೆ. ಆದ್ದರಿಂದ ಸೆಲ್ಲಚ್ಚಾಮಿಯ ಬಳಿ ‘ಬಸ್ ಸಿಗಲು ತಡವಾಯಿತು’ ಎಂದು ಹೇಳಲು ಸಾಧ್ಯವಿಲ್ಲ. ಕಲ್ಲಿಡೈಕುರುಚ್ಚಿಗೆ ಹೋಗಲು ತಡಮಾಡಲು ಆಗುವುದೇ ಇಲ್ಲ. ನಾಲ್ಕನೆಯ ಅಡ್ಡ ರಸ್ತೆಯಲ್ಲಿ ತಿರುಗುವಾಗ ಆಂಬುಲನ್ಸ್ ಒಂದು ವೇಗವಾಗಿ ಹೋಯಿತು. ಸೈರನ್ ಬಾರಿಸದೆ ಹೋಯಿತು. ಸಂಚಾರದ ಸಂದಡಿ ಇಲ್ಲದ ಕಾರಣ ಸೈರನ್ ಹಾಕಿಕೊಂಡು ಹೋಗಲಿಲ್ಲವೋ ಏನೋ? ರಸ್ತೆಯಲ್ಲಿ ಜನಗಳ ಓಡಾಟವೇ ಇಲ್ಲ. ರಸ್ತೆಯ ಬದಿಯಲ್ಲಿ ಮನೆಯ ಗೋಡೆಗಳಿಗೆ ಆತುಕೊಂಡು ಯಾವ್ಯಾವುದೋ ಪೊದರು ಗಿಡಗಳು ನಿಂತಿದ್ದವು. ಮೆಲ್ಲಗೆ ಗಾಳಿ ಬೀಸುತ್ತಿತ್ತು. ಹಳದಿ ಬಣ್ಣದ ಸ್ಕೂಲ್ ಬಸ್ಸನ್ನು ಡ್ರೈವರ್ ಮಾತ್ರ ಓಡಿಸುತ್ತ ಹೋಗುತ್ತಿದ್ದ. ವಾಣಿ ವಿದ್ಯಾಲಯ ಎಂದು ಬಸ್ಸಿನ ಮೇಲೆ ಬರೆದಿತ್ತು. ಅವಳಿಗೆ ಮಗು ಇದ್ದಿದ್ದರೆ ಈಗ ಅದು ಎರಡನೆಯ ತರಗತಿ ಓದುತ್ತಿರುವುದು. ಕಲ್ಲಿಡೈಕುರುಚ್ಚಿಯಲ್ಲಿಅವನಿಗೂ ಮಕ್ಕಳಿಲ್ಲ. ಅಣ್ಣ ತಮ್ಮ ಇಬ್ಬರಿಗೂ ಮಕ್ಕಳಿಲ್ಲದೆ ಇರುವುದು ಯಾವುದೋ ಶಾಪವಿರಬೇಕು ಎಂದುಕೊಂಡಳು.
ಮಕ್ಕಳಿಲ್ಲದ ಚಿಂತೆಯಲ್ಲಿ ಲಕ್ಷ್ಮಿ ಅಕ್ಕ ತೀರಿಕೊಂಡಳು ಎಂದು ನೆಂಟರು ಮಾತನಾಡಿಕೊಂಡರು. ಭಾವ ರಾಮಸಾಮಿಗಿಂತಲೂ ಲಕ್ಷ್ಮಿ ಅಕ್ಕ ಬಹಳ ಒಳ್ಳೆಯವಳು. ಲಕ್ಷ್ಮಿ ಅಕ್ಕಳಿಗೆ ಅತಿಸಾರ ಉಂಟಾಗುವುದು. ಆಗಾಗ ಆಗುವುದು. ಯಾವ ಔಷಧಕ್ಕೂಅದು ತಗ್ಗಲೇ ಇಲ್ಲ. ಕೊನೆಗೆ ಅವಳು ಸತ್ತೂ ಹೋದಳು. ಕ್ರಿಶ್ಚಿಯನ್ ಆರ್ಫನೇಜಿನಲ್ಲಿ ಮಗುವನ್ನು ದತ್ತು ತೆಗೆದುಕೊಳ್ಳೋಣ ಎಂದು ಲಕ್ಷ್ಮಿ ಅಕ್ಕನ ಅಪ್ಪ ಹೇಳಿದರು. ಆದರೆ ರಾಮಸಾಮಿ ಭಾವನಿಗೆ ಅದು ಇಷ್ಟವಾಗಲಿಲ್ಲ. ಅದಕ್ಕೆ ಅಣ್ಣನ ಹಾಗಯೇ ಸೆಲ್ಲಚ್ಚಾಮಿಯೂ ದತ್ತು ತೆಗೆದುಕೊಳ್ಳಲಿಲ್ಲ. ನಾಗರ್ಕೋಯಿಲ್ ರಸ್ತೆಯಲ್ಲಿ ವಾಹನಗಳು ವೇಗವಾಗಿ ಚಲಿಸಿದವು. ರಸ್ತೆಯನ್ನು ದಾಟಿ ಬಸ್ ಸ್ಟ್ಯಾಂಡ್ ಕಡೆ ಹೋಗಲು ಕಷ್ಟವಾಯಿತು.
ಬಸ್ ಸ್ಟ್ಯಾಂಡ್ ಒಳಗೆ ಬಹಳ ಶಬ್ಧವಾಗಿತ್ತು. ಸ್ಪಷ್ಟವಿಲ್ಲದ ಮಾತಿನ ದನಿಗಳ ನಡುವೆ ಕಂಡಕ್ಟರ್ಗಳು ಊರ ಹೆಸರನ್ನು ಹೇಳಿ ಕೂಗುತ್ತಿದ್ದರು. ನಾಲ್ಕನೇ ಪ್ಲಾಟ್ಫಾರಂನಲ್ಲಿ ಪಾಪನಾಶಕ್ಕೆ ಹೋಗುವ ಎರಡು ಬಸ್ಗಳು ನಿಂತಿದ್ದವು. ಯಾವುದು ಮೊದಲು ಹೊರಡುತ್ತದೆ ಎಂದು ಗೊತ್ತಿಲ್ಲ. ಎರಡನೇಯ ಬಸ್ಸಿನಲ್ಲಿ ಸಹ ಅವಸರವಿಲ್ಲದೆ ಹತ್ತಿಕೊಂಡು ಹೋಗಬಹುದು. ಅವಸರದಿಂದ ಹತ್ತಿಕೊಂಡು ಹೋಗಿ ಭಾವನ ಕಣ್ಣುಗಳಿಗೆ ಔತಣವಾಗುವ ಆಗತ್ಯವೇನು ಎಂದು ತೋಚಿತು. ಆದರೆ ಅವಳು ಕುಳಿತಿದ್ದ ಬಸ್ಸೇ ಮೊದಲು ಹೊರಟಿತು. ಲಕ್ಷ್ಮಿ ಅಕ್ಕ ಇದ್ದಿದ್ದರೆ ಹೆದರಿಕೆ ಇಲ್ಲದೆ ಆ ಮನೆಗೆ ಹೋಗಬಹುದು.
ಅದು ನಡೆದು ಏಳೆಂಟು ತಿಂಗಳುಗಳಿರಬಹುದೇ? ಪಂಗುನಿ ಉತ್ತರಕ್ಕೆ (ಪಾಲ್ಗುಣ ಉತ್ತರ ಬಾದ್ರಪದ ನಕ್ಷತ್ರಕ್ಕೆ ಚಂದ್ರ ಬರುವ ದಿನ. ಆ ದಿನ ಷಣ್ಮುಖ, ಅಯ್ಯಪ್ಪ, ಶಿವ, ವಿಷ್ಣು ಇವರನ್ನು ವಿಶೇಷವಾಗಿ ಪೂಜಿಸುತ್ತಾರೆ) ಸಾಸ್ತಾ ಗುಡಿಗೆ ಹೋಗಲು ಅವಳು ಚೆಲ್ಲಚ್ಚಾಮಿಯೂ ಕಲ್ಲಿಡೈಕುರುಚ್ಚಿಗೆ ಹೋಗಿದ್ದರು. ಅಲ್ಲಿಂದ ಸ್ವಲ್ಪ ದೂರದಲ್ಲಿ ದೇವಸ್ಥಾನ ಇತ್ತು. ಭಾವ ಪಡಸಾಲೆಯಲ್ಲಿ ಲೇವಾದೇವಿ ಮಾಡಲು ಬಂದವರ ಬಳಿ ಪ್ರೊನೋಟ್-ನಲ್ಲಿ ಸಹಿ ಹಾಕಿಸಿಕೊಳ್ಳುತ್ತಿದ್ದ. ಮನೆ ಉದ್ದನೆಯ ಮನೆ. ಭಾವ ಇವಳ ಬಳಿ “ಸರೋ… ನನಗೂ ಇವರಿಗೂ ಕಾಫಿ ತೆಗೆದುಕೊಂಡು ಬಾ…” ಎಂದರು. ಸರೋಜ ಕಾಫಿ ಮಾಡಲು ಅಡುಗೆಯ ಮನೆಗೆ ಹೋದಳು. ಕಾಫಿಗೆ ನೀರಿಟ್ಟು ಕುದಿಯುತ್ತಿರುವಾಗ ಯಾರೋ ಹಿಂದೆ ಬಂದು ನಿಂತಂತೆ ಇತ್ತು. ತಕ್ಷಣ ತಿರುಗಿದಳು. ಭಾವ ಬಹಳ ಸಮೀಪದಲ್ಲಿ ನಿಂತಿದ್ದ. “ಏನು ಹೆದರಿಕೊಂಡೆಯಾ?… ಹಮಾಮ್ ಸೋಪ್ ವಾಸನೆ ನಿನ್ನ ಮೈಮೇಲಿಂದ ಬರುತ್ತಿದೆಯಲ್ಲಾ?.., ಹಮಾಮ್ ಮಾತ್ರ ಉಪಯೋಗಿಸುತ್ತೀಯಾ?” ಎಂದು ಕೇಳಿದ. “ಹೌದು ಇದ್ದಲು ಸೋಪ್ ಸಹ ಹಚ್ಚುತ್ತೇನೆ..,” ಎಂದು ಸಿಡುಕಿನಿಂದ ಹೇಳಿದಳು. “ಹಿ… ಹೀ… ಭಾವ ನಾದಿನಿ ಬಳಿ ತಮಾಷೆಯಾಗಿ ಮಾತನಾಡಕೂಡದೇ?”
“ಈಗ ನಾನು ಕಾಫಿ ಮಾಡಬೇಕೆ ಬೇಡವೇ?” ಎಂದು ಅವನ ಮೇಲೆ ರೇಗಿದಳು. ಅವನು ನಗುತ್ತಲೇ ಹೊರಟುಹೋದ. ಅಂದು ನಡೆದದ್ದನ್ನು ಸರೋಜ ಸೆಲ್ಲಚ್ಚಾಮಿಯ ಬಳಿ ಹೇಳಲಿಲ್ಲ. ಹೇಳಿದರೂ,”ಭಾವ ಅಲ್ಲವೇ ನಿನಗೆ? ನಾದಿನಿ ಬಳಿ ತಮಾಷೆ ಮಾಡ್ತಾ ಇದ್ದಾನೆ” ಎಂದು ಅಣ್ಣನನ್ನು ಬಿಟ್ಟುಕೊಡುತ್ತಿರಲಿಲ್ಲ ಚೆಲ್ಲಚ್ಚಾಮಿ. ಬಸ್ ದಡ ದಡ ಎಂದು ಶಬ್ಧ ಮಾಡುತ್ತಾ ಹೋಗುತ್ತಿತ್ತು. ಹೆಚ್ಚಾಗಿ ಜನ ಇರಲಿಲ್ಲ. ಸೆಲ್ಫೋನ್ ಅರಚಿತು. ಸೆಲ್ಲಚ್ಚಾಮಿಯೇ. “ಏನಮ್ಮಾ ಬಸ್ ಹತ್ತಿದೆಯಾ?” ಎಂದು ಕೇಳಿದ. ‘ಹತ್ತಿದೀನಿ. ಮೇಲಪ್ಪಾಳಯಂ ದಾಟಿದೆ” ಎಂದಳು. “ಹುಷಾರಾಗಿ ಹೋಗು. … ಹಣ ಭದ್ರ…” ಎಂದ.
ಮುನ್ನೀರ್ ತಗ್ಗಿನಲ್ಲಿ ಇಬ್ಬರು ಹೆಂಗಸರು ಹತ್ತಿದರು. ಕಣ್ಣು ಮುಚ್ಚಿಕೊಂಡು ಮಲಗಲೇ ಎಂದುಕೊಂಡಳು. ಆದರೆ ನೆನಪುಗಳು ಹಂತ ಹಂತವಾಗಿ ಬರುತ್ತಲೇ ಇದ್ದವು. ನಿದ್ದೆ ಮಾಡಲಾಗಲಿಲ್ಲ. ಏನೆಲ್ಲವನ್ನೋ ನೆನಪು ಮಾಡಿಕೊಳ್ಳುತ್ತಿದ್ದಳು. ಚೇರ್ಮಾದೇವಿಯಲ್ಲಿ ಎಷ್ಟು ಹೊತ್ತು ನಿಲ್ಲಿಸುತ್ತಾನೋ ಗೊತ್ತಿಲ್ಲ. ಬೇಗನೆ ಕಲ್ಲಿಡೈಕುರುಚ್ಚಿಗೆ ಹೋಗಿ ಅವನನ್ನು ಭೇಟಿಯಾದರೆ ಸಾಕೆನಿಸಿತು. ಬಸ್ ಮೆಲ್ಲಗೆ ಹೋಗುವಂತೆ ಕಂಡಿತು.
ಕಲ್ಲಿಡೈಕುರುಚ್ಚಿಯಲ್ಲಿ ಅವಳೊಂದಿಗೆ ಏಳೆಂಟು ಜನ ಇಳಿದರು. ಯಾರ ಮನೆಗೆ ಹೋದರು ಸಿಹಿಯನ್ನೋ ಹಣ್ಣನ್ನೋ ತೆಗೆದುಕೊಂಡೆ ಹೋಗುತ್ತಾರೆ. ಸೆಲ್ಲಚ್ಚಾಮಿ ಪಾಳೈಯಂಕೋಟ್ಟೈಯಲ್ಲಿ ಬಸ್ ಹತ್ತುವುದಕ್ಕೆ ಮೊದಲೇ ಏನನ್ನಾದರೂ ಕೊಂಡುಕೊಳ್ಳುತ್ತಿದ್ದ. ಅವಳಿಗೆ ಏನನ್ನು ಖರೀದಸಲು ತೋಚಲಿಲ್ಲ.
ರಾಮಸಾಮಿ ಮನೆಗೆ ಕೆಲವು ಗಲ್ಲಿಗಳನ್ನು ಹಾದು ಹೋಗಬೇಕು. ವೇಗವಾಗಿ ನಡೆದಳು. ರಾಮಸಾಮಿಯನ್ನು ಬೇಗನೆ ಭೇಟಿಯಾಗುವುದು ಒಳ್ಳೆಯದಲ್ಲವೇ. ರಸ್ತೆಯ ಮಧ್ಯೆ ಕೊಚ್ಚೆ ನೀರು ಹರಿಯುತ್ತಿತ್ತು. ಅದು ಎತ್ತರವಾದ ಮನೆ. ನಾಲ್ಕೈದು ಮೆಟ್ಟಿಲುಗಳನ್ನು ಹತ್ತಿದಳು. ಮುಂಬಾಗಿಲು ತೆರೆದೇ ಇತ್ತು. ಒಳಗೆ ಹೋದಳು. ಒಂದು ಸ್ಟೂಲಿನಲ್ಲಿ ಅಂಗಿ ಹಾಕದೆ ಬರೀ ಪಂಚೆ ಟವಲ್ ನೊಂದಿಗೆ ಒಬ್ಬ ಆಸಾಮಿ ಇದ್ದ.
“ನಿಮಗಾಗಿಯೇ ಅಮ್ಮ ಕಾಯುತ್ತಿದ್ದೇನೆ… ನೀವು ಸರೋಜಾ?… ಅಯ್ಯಾ ಹೊರಗೆ ಹೋಗಿದ್ದಾರೆ…” ಎಂದು ಹೇಳಿ, ಅಲಮಾರದಿಂದ ಚಿಕ್ಕ ಚೀಲವನ್ನು ತೆಗೆದಕೊಟ್ಟ.
-ಕೆ. ನಲ್ಲತಂಬಿ