ಅಂದು ಜಯಣ್ಣ ಎಂದಿನಂತೆ ಇರಲಿಲ್ಲ. ಕೊಂಚ ವಿಷಣ್ಣನಾಗಿ ಕೂತಿದ್ದ. ಅವನ ತಲೆಯಲ್ಲಿ ಮಗಳ ಶಾಲಾ ಶುಲ್ಕ, ಮನೆಗೆ ಬೇಕಾಗಿರುವ ದಿನಸಿ ಪದಾರ್ಥಗಳಿಗೆ ಯಾರ ಬಳಿ ಹಣಕ್ಕಾಗಿ ಅಂಗಲಾಚುವುದು? ಎಂಬ ಚಿಂತೆ ಆವರಿಸಿತ್ತು. ಇತ್ತೀಚೆಗೆ ಯಾಕೋ ಮೊದಲಿನಂತೆ ಲಾರಿಗಳು ಟ್ರಕ್ ಲಾಬಿಯಲ್ಲಿ ಸರಿಯಾಗಿ ನಿಲ್ಲುತ್ತಿರಲಿಲ್ಲ. ಹೀಗಾಗಿ ಲಾರಿಗಳಿಗೆ ಗ್ರೀಸ್ ತುಂಬುವ ಕೆಲಸವು ಸರಿಯಾಗಿ ನಡೆಯದೆ ಸಂಸಾರದ ನಿರ್ವಹಣೆ ಕಷ್ಟವಾಗಿತ್ತು. ಅದರಲ್ಲೂ ಜಯಣ್ಣನ ಅಕ್ಕಪಕ್ಕದ ವೃತ್ತಿಸ್ನೇಹಿತರೇ ಅವನಿಗೆ ಪೈಪೋಟಿಯಾಗಿ ನಿಂತಿದ್ದರು. ಲಾರಿ ತಮ್ಮ ಮುಂದೆ ನಿಲ್ಲುವುದೇ ತಡ ತಾ ಮುಂದು, ನಾ ಮುಂದು ಎಂದು ಗ್ರೀಸ್ ಟ್ರಾಲಿ ಎಳೆದುಕೊಂಡು ಹೋಗಿ ಲಾರಿ ಚಕ್ರದಮುಂದೆ ನಿಲ್ಲುತ್ತಿದ್ದರು. ಜಯಣ್ಣದೋ ಸಂಕೋಚ ಹಾಗೂ ಸ್ವಾಭಿಮಾನದ ಸ್ವಭಾವ. ತಾನು ನಿಂತಿರುವ ಸ್ಥಾನಕ್ಕೆ ಲಾರಿ ಬಂದು ನಿಂತರೆ ಮಾತ್ರ ಗ್ರೀಸ್ ಸರ್ವೀಸ್‍ಗೆ ಡ್ರೈವರ್‍ನ್ನು ಕೇಳುತ್ತಿದ್ದ. ಇಲ್ಲದಿದ್ದರೆ ಸಂಜೆಯಾದರೂ ಅದೇ ಜಾಗದಲ್ಲಿ ನಿಂತು ಮನೆಗೆ ಬರಿಗೈಯಲ್ಲಿ ವಾಪಸ್ಸಾಗುತ್ತಿದ್ದ. ಬಡತನದ ಬದುಕು, ಬಾಡಿಗೆ ಮನೆ ಜಂಜಾಟ, ಹೆಂಡತಿಯ ಮುನಿಸು ಎಲ್ಲವೂ ಜಯಣ್ಣನಿಗೆ ಸಾಕು ಸಾಕಾಗಿ ಹೋಗಿದ್ದವು. “ಎಷ್ಟು ಕೂತರು ಅಷ್ಟೇ” ಎಂದವನೆ ಶತಮಾನಗಳ ಹಿಂದೆ ಸಂರಕ್ಷಿಸಲ್ಪಟ್ಟ; ಯಾರೋ ಮಹಾನ್ ಹೋರಾಟಗಾರನ ನೆನಪಿಗಾಗಿ ಇಟ್ಟ ಸಮವಸ್ತ್ರದಂತೆ ಇದ್ದ ತನ್ನ ಕೊಳೆ ಹಾಗೂ ಗ್ರೀಸ್‍ನಿಂದ ಅಲಂಕೃತಗೊಂಡು ಮೂಲ ಬಣ್ಣ ಯಾವುದೆಂದು ಕಾಣಲಾರದಷ್ಟು ಹಳತಾದ ಸಮವಸ್ತ್ರವನ್ನು ತೊಟ್ಟು, ಹರಿದ ಷೂ ಧರಿಸಿ ನಿತ್ಯ ಕಾಯಕ್ಕೆ ತನ್ನ ಮನೆಗೆ ಸಮೀಪದಲ್ಲೇ ಇದ್ದ ಹೆದ್ದಾರಿಯ ಟ್ರಕ್ ಲಾಬಿ ಬಳಿ ಬಂದು ನಿಂತ. ಆ ಹೊತ್ತಿಗಾಗಲೇ ಜಯಣ್ಣನ ವೃತ್ತಿಸ್ನೇಹಿತ ನಾಗರಾಜ ಬಂದೇ ಬಿಟ್ಟಿದ್ದ. “ಏನೋ ಜಯಾ ತಿಂಡ ಆಯ್ತಾ” ಎಂದ. ನೆನ್ನೆಯ ಸಾಂಬಾರಿಗೆ ಬೆಳಿಗ್ಗೆ ಅನ್ನವನ್ನು ಮಾಡಿ ಬಡಿಸಿದ ಹೆಂಡತಿಯನ್ನು ನೆನೆದು ಬಿರಿಯಾನಿ ತಿಂದು ಸಂತುಷ್ಟನಾಗಿ ಹೇಳುವಂತೆ “ಹೋ ಗಡದ್ದಾಗಿ ಆಯ್ತು ಮಾರಾಯ, ನಿಂದು ಆಗಿರ್ಬೇಕು ನಿನ್ ಮುಖ್ದಲ್ಲಿ ಕಾಣೋ ಕಳೆ ನೋಡಿದ್ರೆ ಗೊತ್ತಾಗುತ್ತೆ” ಎಂದ ಜಯಣ್ಣ. ನಾಗರಾಜನು “ಓಹೋ ಆಗಿದೆ, ಆಗಿದೆ” ಎಂದವನೆ ಮತ್ತೆ ಜಯಣ್ಣನನ್ನು ಮಾತಿಗೆ ಕೆದಕಿ “ಲೋ ನೆನ್ನೆ ನಂದು ಐದು ಕೆ.ಜಿ ಗ್ರೀಸ್ ಖಾಲಿಯಾಯ್ತು; ನಿಂದು ಎಷ್ಟು ಖಾಲಿಯಾಯ್ತು” ಎಂದ. ಜಯಣ್ಣ “ಅಯ್ಯೋ ಸುಮ್ನಿರಪ್ಪ ಮೂರು ಕೆ.ಜಿ ಖಾಲಿಯಾಗೋದೇ ಕಷ್ಟ ಆಯ್ತು; ನಾವೋ, ನಮ್ಮ್ ಕೆಲ್ಸಾನೋ ನಮ್ಮನ್ನ ನೋಡಿದ್ರೆ ಜನ ತಿಂಗ್ಳುಗಟ್ಲೆ ಊಟ ಬಿಟ್ಬಿಡ್ತಾರೇ ಅಷ್ಟೇ. ಅದ್ರಲ್ಲೂ ನಾನು ಊಟ ಮಾಡೋವಾಗ ಹೊಟ್ಟೆ ಯಾವಾಗ್ಲೂ ತೊಳ್ಸ್ದಂಗಾಗುತ್ತೆ” ಎಂದ.
ಅದಕ್ಕೆ ನಾಗರಾಜ “ಹೇಯ್ ಬಿಡೋ ಅವರವರ ವೃತ್ತಿ ಅವರವರಿಗೆ ಹೆಚ್ಚು, ನಮ್ ವೃತ್ತಿ ನಮ್ಗೇ ಹೆಚ್ಚು, ನಾವು ತಿನ್ನೋ ಅನ್ನ ಇದ್ರಾಗೆ ಬರ್ದಿದೆ ಅಷ್ಟೇ; ಮಾಡೋ ಕೆಲ್ಸದ ಮೇಲೆ ಅಸಹ್ಯ, ಕೀಳಿರಿಮೆ ಇಟ್ಕೋಬಾರ್ದು” ಎಂದು ಉದ್ದುದ್ದ ಭಾಷಣ ಶುರುಮಾಡಿದ. ಅಷ್ಟರಲ್ಲಿ ಅವನ ಮೊಬೈಲ್ ಪೋನು ರಿಂಗಣ ಸಿತು. ನಾಗರಾಜ ತನ್ನ ಕೈಯನ್ನು ಬಟ್ಟೆಯಿಂದ ಶುಚಿಮಾಡುತ್ತಾ ಪೋನ್ ತೆಗೆದುಕೊಂಡ. ಆದರೆ ಆತನ ಕೈಯಿಂದ ಜಾರಿ ಮೊಬೈಲ್ ಪೋನು ನೆಲಕ್ಕೆ ಬಿದ್ದು ಮೂರು ಹೋಳಾಯಿತು. “ಥೂ ನನ್ಮಗಂದು ಹೋಯ್ತು, ಈ ಹಾಳಾದ್ ಗ್ರೀಸು ಎಷ್ಟ್ ಕ್ಲೀನ್ ಮಾಡಿದ್ರೂ ಹೋಗ್ಲೇ ಇಲ್ಲ ಕೈ ಜಾರಿ ಹೋಯ್ತು” ಎಂದು ಪೋನಿನ ಅವಶೇಷಗಳನ್ನು ಆಯ್ದುಕೊಂಡು ಮತ್ತೆ ತನ್ನ ಪೋನು ಸರಿ ಆಗಬಹುದೆಂಬ ಭರವಸೆಯಿಂದ ಅದನ್ನು ಸರಿಮಾಡಲು ಅಲ್ಲೇ ಪಕ್ಕದಲ್ಲಿ ನಿಂತಿದ್ದ ಲಾರಿಯ ಬಳಿ ಕೂತ. ಜಯಣ್ಣ ನಗುತ್ತಲೇ ರಸ್ತೆ ಬದಿಗೆ ತಿರುಗಿದ. ನಾಗರಾಜನ ಮಾತುಗಳನ್ನು ಸ್ಮರಿಸುತ್ತಲೇ ಜಯಣ್ಣ “ ನಿಜ, ನಾಗರಾಜ ಹೇಳೋದು ಸರಿ, ಸರಿಯಾಗಿ ಲಾರಿಗಳು ಬಂದ್ರೆ ದಿನಕ್ಕೆ 500, 1000 ದ ವರ್ಗೂ ಸಂಪಾದನೆ ಮಾಡ್ಬಹುದು; ಆದ್ರೆ ಲಾರಿಗಳು ಸಿಗ್ಬೇಕಲ್ಲ” ಎಂದು ಮನದಲ್ಲಿಯೇ ಆಲೋಚಿಸತೊಡಗಿದ. ಅಷ್ಟರಲ್ಲಿಯೇ ಹೆಂಡತಿಯಿಂದ ಪೋನ್ ಕರೆ ಜಯಣ್ಣನಿಗೆ ಬಂತು. “ಹಲೋ.. ಹೇಳೇ” ಎಂದ ಜಯಣ್ಣ. ಹೆಂಡತಿಯು “ರೀ.. ಬೆಳಿಗ್ಗೆ ಹೇಳಿದ್ನಲ್ಲ ಇವತ್ತೂ ನನ್ ಪೋನ್ದು ಕರೆನ್ಸಿ ಖಾಲಿ ಆಗತ್ತೆ ಅನ್ಲಿಮಿಟೆಡ್ ಕಾಲ್, ನೆಟ್ ಪ್ಯಾಕ್ ಎಲ್ಲ ಹಾಕ್ಸಿ, ಪಾಪುದು ಸ್ಕೂಲ್ ಫೀ, ಮನೆ ಸಾಮಾನು ಎಲ್ಲದಕ್ಕೂ ಏನಾದ್ರೂ ಮಾಡಿದ್ರ” ಎಂದು ಮತ್ತೆ ಅದನ್ನೆ ನೆನಪಿಸಿದಳು. ಜಯಣ್ಣ “ಅಯ್ಯೋ ಈಗ್ತಾನೇ ಬಂದಿದ್ದೀನಿ ಇರು ಸ್ವಲ್ಪ, ಏನಾದ್ರು ಮಾಡ್ತೀನಿ” ಎಂದ. “ಆಯ್ತು ಏನಾದ್ರೂ ಮಾಡಿ ನಂಗೇನು” ಎಂದು ಹೆಂಡತಿ ಪೋನ್ ಕರೆಯನ್ನು ಕಟ್ ಮಾಡಿದಳು. ಜಯಣ್ಣ ತಲೆಯಲ್ಲಿ ಹಾಕಿದ್ದ ಹರಳೆಣ್ಣೆ, ಬಿಸಿಲಿಗೆ ಬಂದ ನೆತ್ತಿಯ ಬೆವರು ಎರಡು ಸೇರಿ ನೆತ್ತಿಯ ಮಾರ್ಗವಾಗಿ ಮುಖದ ಮೇಲೆ ಜಾರತೊಡಗಿತ್ತು ಶರ್ಟಿನಿಂದಲೇ ಅದನ್ನು ಒರೆಸಿಕೊಳ್ಳುತ್ತ ರಸ್ತೆ ಬದಿ ನೋಡುತ್ತಾ ನಿಂತ. ಜಯಣ್ಣನ ಮತ್ತೊಂದು ಬದಿಯಲ್ಲಿ ಏನೋ ಟ್ರಾಲಿಯ ಶಬ್ದವಾಗುವಂತೆ ಜಯಣ್ಣನಿಗೆ ಅನ್ನಿಸಿತು ತಿರುಗಿ ನೋಡಿದಾಗ ಷರೀಫ ಎಂಬ ಮತ್ತೊಬ್ಬ ಸ್ನೇಹಿತ ತನ್ನ ಗ್ರೀಸ್ ಟ್ರಾಲಿ ಜೊತೆ ಬರುತ್ತಿದ್ದ. ಆದರೆ ಆತನ ಕಾಲು ಗಾಯವಾಗಿ ಬ್ಯಾಂಡೇಜ್ ಮಾಡಲಾಗಿತ್ತು.
ಜಯಣ್ಣ “ಏನೋ ಷರೀಫ ಇದು ಗಾಯ” ಎಂದು ಕೇಳಿದ. ಅದಕ್ಕೆ ಷರೀಫನು “ಅಣ್ಣ ನೆನ್ನೆ ನಿಮ್ಗೆ ಹೇಳ್ನೇ ಇಲ್ಲ. ನಾನು ನೆನ್ನೆ ಲಾರಿಗೆ ಗ್ರೀಸ್ಗೆ ಮಾಡ್ತಾ ಇದ್ನ, ಆಗ ನಮ್ದು ಕಾಲ್ಗೆ ಲಾರೀದು ಪ್ಲೇಟ್ಗೆ ಅಯ್ತಲ್ಲ ಅದು ಕಟ್ಟಾಗಿತ್ತು ಅಂತ ಕಾಣ್ತದೆ ಅದು ಬಿದ್ಬಿಟ್ಟಿ ಗಾಯ ಆಗಿತ್ತು. ಮನೆಗೆ ಹೋಗಿ ಟಿಂಚರ್ಗೆ ಹಾಕ್ದೆ ನನ್ಮಗಂದು ವಾಸೀನೇ ಆಗ್ನಿಲ್ಲ. ಅದುಕ್ಕೇ ನಮ್ದೂ ಏರಿಯಾಗೆ ಐತಲ್ಲ ಗೌರ್ಮೆಂಟ್ ಆಸ್ಪತ್ರೆ ಅಲ್ಲಿ ಹೋಗಿ ಬ್ಯಾಂಡೇಜು ಮಾಡ್ಸಿ ಒಂದ್ ಇಂಜಕ್ಷನ್ ತಗೊಂಡಿದ್ದೀನಿ ಅಣ್ಣ ನೋವು ಇನ್ನೂ ಐತೆ ಮನೇಲಿ ಕೂರಕ್ಕಾಗಲ್ಲ ಹೊಟ್ಟೇ ಪಾಡು ಅಯ್ತಿಲ್ಲ ನಡೀ ಬೇಕಲ್ಲ ಅದು ಅದ್ಕೆ ಬಂದೆ” ಎಂದ. ಜಯಣ್ಣನಿಗೆ ಷರೀಫನ ಕಾಲು ನೋಡಿ ಬೇಸರವಾಯಿತು. “ಪಾಪ ಆಯ್ಕೊಂಡು ತಿನ್ನೋ ಕೋಳಿಗೆ ಕಾಲು ಮುರ್ದಂಗೆ ಆಯ್ತು” ಎಂದು ಮರುಗಿದ. ಒಂದು ಲಾರಿ ಜಯಣ್ಣನು ನಿಂತಿದ್ದ ಜಾಗಕ್ಕೆ ಬರತೊಡಗಿತು. ಅದನ್ನು ಕಂಡ ಷರೀಫ “ಅಣ್ಣ ಇದ್ಕೇ ನಾನೇ ಗ್ರೀಸ್ ಹಾಕ್ತೀನಿ ಮನೆಗೇ ಒಂದ್ ಪೈಸಾನೂ ಇಲ್ದೇ ಭಾರಿ ಕಷ್ಟ ಆಗದೆ” ಎಂದ. ಜಯಣ್ಣನಿಗೂ ಇದೇ ಪರಿಸ್ಥಿತಿ ಇದ್ದರೂ ಷರೀಫನ ಕೋರಿಕೆಗೆ ಇಲ್ಲವೆನ್ನುವ ಮನಸ್ಸು ಜಯಣ್ಣನಿಗೆ ಬರಲಿಲ್ಲ. “ಹೋಗು ನೀನೆ ಗ್ರೀಸ್‍ಮಾಡು” ಎಂದು ನಿಂತಲ್ಲಿಯೇ ನಿಂತ. ನಾಗರಾಜ ಮಾತ್ರ ಒಡೆದುಹೋದ ಪೋನ್ ಸ್ವಿಚ್ ಆನ್ ಆಗದೆ ಇದ್ದಿದ್ದರಿಂದ ಕೋಪಗೊಂಡು ಏನೇನೋ ಗೊಣಗುತ್ತಿದ್ದ. ಷರೀಫನು ಗ್ರೀಸ್ ಟ್ರಾಲಿ ಎಳೆದುಕೊಂಡು ಲಾರಿಗೆ ಗ್ರೀಸ್ ತುಂಬಲು ಶುರುಮಾಡಿದ. ಲಾರಿಡ್ರೈವರ್ ಹಾಗೂ ಕ್ಲೀನರ್ ಇಬ್ಬರೂ ಊಟಮಾಡಿ ಬರುತ್ತೇವೆಂದು ಪಕ್ಕದಲ್ಲಿರೋ ಡಾಬಾಗೆ ಹೋದರು. ಷರೀಫ ಲಾರಿಯ ತಳಬಾಗದಲ್ಲಿ ಕೂತು ಗ್ರೀಸ್‍ನ್ನು ಬ್ರೇಕ್ ಮೊದಲಾದ ಭಾಗಗಳಿಗೆ ತುಂಬಲು ಕಾಲು ನೋವು ಇದ್ದುದರಿಂದ ಬಹಳ ಸಂಕಟಪಡುತ್ತಿದ್ದ. ಇದನ್ನು ಕಂಡ ಜಯಣ್ಣ “ಬಿಡೂ ಷರೀಫ ನಾನೇ ಗ್ರೀಸ್ ಹಾಕ್ತೀನಿ” ಎಂದ. ಷರೀಫ “ಅಯ್ಯೋ, ಬಯ್ಯಾ ಅಂಗ್ಮಾಡ್ಬೇಡಿ ನಂಗೆ ಇವತ್ತು 1000 ರೂಪಾಯಿ ದುಡ್ ಬೇಕೇ ಬೇಕು, ಮನೇಲಿ ರೇಷನ್ ಇಲ್ಲ” ಎಂದು ಅಂಗಲಾಚಿದ. ಅದಕ್ಕೆ ಜಯಣ್ಣ “ಅಂಗಲ್ಲಪ್ಪ, ದುಡ್ಡು ನೀನೆ ಇಸ್ಕೋ ನಂಗೆ ನಿನ್ ಕಷ್ಟ ನೋಡಕ್ಕಾಗ್ತಿಲ;್ಲ ನಾನು ನಿಂಗೆ ಸಹಾಯ ಮಾಡ್ತೀನಿ ಅಷ್ಟೇ” ಎಂದ. ಷರೀಫನಿಗೆ ಜಯಣ್ಣನ ಮಾತು ಕೇಳಿ ಆನಂದವಾಯಿತು. “ಸರಿ ಅಣ್ಣ ಇವತ್ತೊಂದಿನ ಸಹಾಯ ಮಾಡಿ ಅಲ್ಲಾ ನಿಮ್ಗೆ ಒಳ್ಳೇದು ಮಾಡ್ತಾನೆ” ಎಂದು ಲಾರಿ ಅಡಿಯಿಂದ ರಸ್ತೆ ಪಕ್ಕಕ್ಕೆ ತೆವಲಿಕೊಂಡು ಬಂದ. ಜಯಣ್ಣ ಲಾರಿಯ ಮುಂದೆ ಎಡಭಾಗದ ಚಕ್ರದ ಬ್ರೇಕ್ ಬಳಿ ನುಸುಳಿ “ಲೋ ಷರೀಫ ಲಾರೀಲಿ ಏನಾದ್ರು ಸ್ವಲ್ಪ ವೇಸ್ಟ್ ಇದ್ರೆ ಎತ್ಕೋ” ಎಂದ. ಷರೀಫ “ಆಯ್ತಣ್ಣ” ಎಂದವನೆ ಲಾರಿ ಒಳಗೆ ನೋಡಿದ ಎಲ್ಲೂ ವೇಸ್ಟ್ ಬಟ್ಟೆ ಕಾಣಲಿಲ್ಲ.
“ಮೇಲೆ ಏನಾದ್ರೂ ಲಾಕರ್‍ನಲ್ಲಿ ಇಟ್ಟಿರ್ಬಹುದಾ” ಎಂದು ಲಾಕರ್ ತೆಗೆಯುವ ಪ್ರಯತ್ನ ಮಾಡಿದ. ಲಾರಿಯ ಆ ಲಾಕರ್ ಬೀಗ ಹಾಕುವಂತದ್ದಾಗಿದ್ದರೂ ಅಂದು ಏಕೋ ಡ್ರೈವರ್ ಮತ್ತು ಕ್ಲೀನರ್ ಇಬ್ಬರ ಮರೆವೆಯಿಂದಲೋ ಏನೋ ಒಪನ್ ಆಗಿಯೇ ಇತ್ತು. ಷರೀಫ ಬಾಗಿಲು ತೆಗೆಯುತ್ತಿದ್ದಂತೆಯೇ ದಿನಪತ್ರಿಕೆಯಿಂದ ಸುತ್ತಿದ್ದ ಬೆಲ್ಲದ ಪಿಂಡಿಯಂತಹ ವಸ್ತು ಕಾಣ ಸಿತು. ಅದನ್ನು ತೆಗೆದು ಕೆಳಗೆ ಇಟ್ಟು ಒಳಗೆ ಹುಡುಕಿದ ವೇಸ್ಟ್ ಸಿಗಲಿಲ್ಲ. ಸರಿ ಎಂದವನೆ ಆ ಬೆಲ್ಲದ ಪಿಂಡಿಯಂತಹ ವಸ್ತುವನ್ನು ಮತ್ತೆ ಲಾಕರ್‍ನಲ್ಲಿ ಇಡಲು ಮೇಲೆತ್ತಿದ ಪೇಪರ್‍ನ ತಳಬದಿ ಲಾರಿಯ ಬಾನೆಟ್ಟಿನ ತಗಡಿನ ಚೂಪಾದ ತುದಿಗೆ ಸಿಕ್ಕಿ ಪರ್ರೆಂದು ಹರಿದು ಹೋಯಿತು. “ಅರೇ ಥೂ ತ್ತೇರಿ” ಎಂದು ಉದ್ಗಾರ ತೆಗೆಯುತ್ತ ತಳಭಾಗವನ್ನು ತಿರುಗಿಸಿ ನೋಡಿದ. ಹರಿದ ಕಾಗದದ ಭಾಗದಿಂದ 2000 ಮುಖ ಬೆಲೆಯ ನೋಟುಗಳು ಕಾಣ ಸಿದವು. ಈ ನೋಟವನ್ನು ಕಂಡ ಷರೀಫನ ಕೈ ನಡುಗಲಾರಂಭಿಸಿದವು ಮೈಯೆಲ್ಲ ಭಯದಿಂದ ಬೆವರಲಾರಂಭಿಸಿತು. ಗಂಟಲು ಒಣಗಿತು. ಲಾರಿಯ ತಳದಲ್ಲಿದ್ದ ಜಯಣ್ಣ ಮಾತ್ರ “ಲೋ ಎಷ್ಟೊತ್ತು ಮಾಡ್ತೀಯ ವೇಷ್ಟು ಕೊಡೋ” ಎನ್ನುತ್ತಲಿದ್ದ. ಆದರೆ ಷರೀಫನಿಂದ ತಕ್ಷಣಕ್ಕೆ ಯಾವ ಪ್ರತಿಕ್ರಿಯೆಯನ್ನು ನೀಡಲಾಗಲಿಲ್ಲ. ಒಂದು ರೀತಿಯ ದಿಗ್ಭ್ರಮೆಗೆ ಷರೀಫ ಒಳಗಾಗಿದ್ದ. ತಡಮಾಡದೆ ನೋಟುಗಳಿಗೆ ಸುತ್ತಿದ್ದ ಕಾಗದವನ್ನು ಬಿಚ್ಚಿದ. ಇಡೀ ಕಟ್ಟಿನಲ್ಲಿ 2000 ರೂ ಮುಖಬೆಲೆಯ ನೋಟುಗಳೇ ಇದ್ದವು. ಕೈಯಲ್ಲಿ ಅದನ್ನು ಹಿಡಿದುಕೊಂಡು ಕಾಲಿನ ನೋವನ್ನು ಮರೆತು ಲಾರಿಯಿಂದ ಇಳಿಯುವುದರ ಬದಲಾಗಿ ನೆಗೆದ. ನೆಗೆದ ರಭಸಕ್ಕೆ ಕಾಲಿನ ಗಾಯಕ್ಕೆ ಮತ್ತಷ್ಟೂ ನೋವಾಗಿ “ಅಯ್ಯೋ” ಎಂದ. ಷರೀಫನು ನೆಗೆದ ಶಬ್ದ, ಅವನ ಚೀರಾಟ ಎಲ್ಲವನ್ನು ಕೇಳಿ “ಜಯಣ್ಣ ಏನಾಯ್ತು ನಿಧಾನಕ್ಕೆ ಇಳಿಬಾರ್ದೆ” ಎಂದು ಲಾರಿಯ ತಳಭಾಗದಿಂದ ಹೊರಬಂದು ಷರೀಫನನ್ನು ನೋಡಿದ. ವೇಸ್ಟಿರಬೇಕಾಗಿದ್ದ ಕೈಯಲ್ಲಿ ದುಡ್ಡಿನ ಕಂತೆಯ ಕಟ್ಟು ಇತ್ತು. ದುಡ್ಡಿನ ನಾಲ್ಕು ಕಡೆಗಳಲ್ಲಿಯೂ ಬ್ಯಾಂಕಿನಲ್ಲಿ ಕಟ್ಟುವ ಪ್ಲಾಸ್ಟಿಕ್‍ದಾರದಂತಹ ದಾರದಿಂದ ಕಟ್ಟಲಾಗಿತ್ತು. ಈ ದೃಶ್ಯ ಕಂಡ ಜಯಣ್ಣನೂ ಗಾಬರಿಯಿಂದ “ಇದೇನೋ ಷರೀಫ, ಹಣ! ಎಲ್ಲ್ಲಿತ್ತೋ ಇದು” ಎಂದ. ಅದಕ್ಕೆ ಷರೀಫ “ನೋಡಿ ಅಣ್ಣ ಇದ್ರಲ್ಲಿ ಅಮ್ಮಮ್ಮಾಂದ್ರೆ 25 ಲಕ್ಷ ಗ್ಯಾರಂಟಿ ಇದೆ. ಡ್ರೈವರ್ರೂ, ಕ್ಲೀನರ್ರೂ ದುಡ್ಡ್ನ ಲಾಕರ್ನಲ್ಲಿಟ್ಟು ಬೀಗ ಹಾಕೋದ್ನ ಮರ್ತವ್ರೆ” ಅಂದ. ಮೊಬೈಲ್ ಪೋನು ಹಾಳಾದ ಬೇಸರದಲ್ಲಿ ಕುಳಿತಿದ್ದ ನಾಗರಾಜ ಈ ದೃಶ್ಯಗಳನ್ನೆಲ್ಲಾ ದೂರದಿಂದಲೇ ನೋಡಿ ಓಡಿ ಬಂದು “ಇದೇನೋ ಇದು ನನ್ ಜೀವ್ಮಾನ್ದಲ್ಲೇ ಇಷ್ಟ್ ದುಡ್ಡು ನೋಡಿಲ್ಲ ನಾನು” ಎಂದು ಬೆಕ್ಕಸ ಬೆರಗಾಗಿ ನಿಂತ. ಲಾರಿ ಮರೆಯಾಗಿ ಇದ್ದುದರಿಂದ ರಸ್ತೆಗೆ ಈ ದೃಶ್ಯ ಕಾಣುತ್ತಿರಲಿಲ್ಲ. ಎದುರಿಗೆ ಬರುವವರಿಗೆ ಇವರು ಎನೋ ಸಂಭಾಷಣೆ ಮಾಡುತ್ತಿರುವಂತೆ ಕಾಣುತ್ತಿತ್ತು. ಷರೀಫ “ಅಣ್ಣ ಏನಾರ ಮಾಡುವ ನೋಡಿ” ಅಂದ. ನಾಗರಾಜನು “ನೋಡು ಗುರು ನಮ್ಮ ಕಷ್ಟ ಎಲ್ಲ ಪರಿಹಾರ ಆಗ್ತದೆ, ಸುಮ್ನೆ ಒಂದೈದು ಲಕ್ಷ ತಕ್ಕಂಡು ಅಂಗೆ ಇಟ್ಬಿಡೋಣ” ಎಂದ.
ಜಯಣ್ಣನಿಗೆ ಈ ವಿಷಯ ಕೇಳಿ ಮೈ ಬೆವರತೊಡಗಿತು. ಷರೀಫ “ಏನೂ ಹೆದ್ರ್ಕೋ ಬೇಡಿ ಅಣ್ಣ ನಾನು ಮೊದ್ಲು ಹೆಂಗಿತ್ತು ಅಂಗೆ ಪೇಪರ್ ಸುತ್ತಿ ಇಡ್ತೀನಿ, ಅವ್ರಿಗೆ ಒಂಚೂರು ಅನ್ಮಾನ ಬರ್ದೇ ಇರಂಗೆ” ಎಂದ. ನಾಗರಾಜನು “ಡ್ರೈವರ್ರೂ, ಕ್ಲೀನರ್ರೂ ಇಬ್ಬರೂ ಬರೋ ಹೊತ್ತಾಯ್ತು ಈಗ ಅದ್ನ ಕೊಡು ಇಲ್ಲಿ” ಎಂದು ಷರೀಫನಿಗೆ ಹೇಳಿದ. ಜಯಣ್ಣನ ಒಪ್ಪಿಗೆಯನ್ನು ಕಾಯದೆ ಷರೀಫನನ್ನು ಪಕ್ಕಕ್ಕೆ ಸರಿಸಿ “ನೀನು ಇರು ನಿನಗೆ ಕಾಲು ನೋವಾಗಿದೆ ನಾನೇ ಆ ಕೆಲಸ ಮಾಡುತ್ತೇನೆ” ಎಂದ ನಾಗರಾಜ. 2000 ರೂ ನ ಐದು ನೋಟಿನ ಕಂತೆಗಳನ್ನು ಆ ಬಂಡಲ್‍ನಿಂದ ತೆಗೆದುಕೊಂಡು ಅಲ್ಲೇ ಬಿದ್ದಿದ್ದ ರಟ್ಟಿನ ತುಂಡುಗಳನ್ನು ಸೇರಿಸಿ ಪೇಪರಿನಿಂದ ಸುತ್ತಿ ಮೊದಲಿದ್ದ ಯಥಾ ಸ್ಥಿತಿಗೆ ತಂದ. ಅದನ್ನು ಷರೀಫನಿಗೆ ಲಾರಿಯ ಲಾಕರಿನಲ್ಲಿ ಯಥಾಸ್ಥಿತಿಯಲ್ಲಿ ಇಡುವಂತೆ ಸೂಚಿಸಿದ. ಜಯಣ್ಣ ತಟಸ್ಥವಾಗಿರುವಂತೆಯೇ ಇವೆಲ್ಲವೂ ಕ್ಷಣಮಾತ್ರದಲ್ಲಿ ನಡೆದೇ ಹೋದವು. ಲಾರಿಗೆ ಗ್ರೀಸ್ ಮಾಡಿಲ್ಲದಿದ್ದುದರಿಂದ ನಾಗರಾಜನೇ “ಬಿಡು ಷರೀಫ ನಾನೇ ಗ್ರೀಸ್ ಹಾಕ್ತೀನಿ” ಎಂದು ಲಾರಿ ಕೆಳಗೆ ನುಗ್ಗಿದ. ಅಷ್ಟೊತ್ತಿಗೆ ಡ್ರೈವರ್, ಕ್ಲೀನರ್ ಇಬ್ಬರೂ ದೂರದಲ್ಲಿ ಕಾಣ ಸಿದರು. ಷರೀಫನೂ ಲಾರಿಯ ತಳಭಾಗಕ್ಕೆ ನುಗ್ಗಿ ತನ್ನ ಕಾಲು ನೋವನ್ನೂ ಮರೆತು ತರಾತುರಿಯಲ್ಲಿ ಗ್ರೀಸ್ ತುಂಬಿದ. ಡ್ರೈವರ್, ಕ್ಲೀನರ್ ಇಬ್ಬರೂ ಸಿಗರೇಟು ಸೇದಿ ಮುಗಿಸುವಷ್ಟರಲ್ಲಿ ನಾಗರಾಜ, ಷರೀಫ ಇಬ್ಬರೂ ತಮ್ಮ ಕೆಲಸ ಮುಗಿಸಿದರು. ಡ್ರೈವರ್ ಗ್ರೀಸ್ ಸರ್ವೀಸ್ ಮಾಡಿದ್ದಕ್ಕಾಗಿ ಷರೀಫನ ಕೈಯಲ್ಲಿ ಹಣವಿತ್ತು ಲಾರಿ ಸ್ಟಾರ್ಟ್ ಮಾಡಿದ. ಕ್ಲೀನರ್ ಕೂಡ ಲಾರಿ ಒಳಗೆ ಕೂತ. ಲಾರಿ ಹೊರಟಿತು. ಇತ್ತ ಮೂವರಿಗೂ ಒಳಗೊಳಗೆ ಭಯ ಆವರಿಸಿತು. ಲಾರಿ ಬಹು ದೂರ ಸಾಗಿ ಮರೆಯಾಯಿತು. “ಮೂವರೂ ಸಂಜೆ ಒಂದು ಕಡೆ ಸೇರೋಣ ಈಗ ಆದಷ್ಟು ಬೇಗ ಮನೆಗೆ ಹೊರಡುವುದೇ ಸರಿ” ಎಂದ ನಾಗರಾಜ. ಅದಕ್ಕೆ ಜಯಣ್ಣ “ಆ ಹಣ ನಂಗೆ ಬೇಡ, ನಾನು ಯಾರಿಗೂ ಹೇಳಲ್ಲ; ನೀವು ಹೊರಡಿ ನಾನು ಇಲ್ಲೇ ಇರ್ತೇನೆ” ಎಂದ. ಈ ಮಾತುಗಳಿಗೆ ಒಪ್ಪದ ಷರೀಫ “ಇಲ್ಲಾ ಅಣ್ಣ ನೀವು ಬರ್ಲೇ ಬೇಕು; ನಾವು ಮೂರು ಜನ ಸಮ್ನಾಗಿ ಹಂಚ್ಕೊಳ್ಳಣ” ಎಂದು ಒತ್ತಾಯ ಮಾಡಿದ.
ಸುಮಾರು ಸಂಜೆ ಆರು ಗಂಟೆ ಇರಬಹುದು ನಾಗರಾಜ, ಷರೀಫ ಇಬ್ಬರೂ ಸಾಕಷ್ಟು ಸಮಯದ ವರೆಗೆ ಜಯಣ್ಣನನ್ನು ಒತ್ತಾಯಿಸಿದ್ದರಿಂದ ಬೇರೆ ದಾರಿಯಿಲ್ಲದೆ ಜಯಣ್ಣ ಅವರ ಜೊತೆ ಹೊರಟ. ಹೆದ್ದಾರಿಗೆ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ತೋಟದ ಬದಿಯಲ್ಲಿರುವ ನಿರ್ಜನ ಪ್ರದೇಶಕ್ಕೆ ಹೋದರು. ಆದರೂ ಜಯಣ್ಣ “ಇದು ಯಾಕೋ ಸರಿ ಅನ್ನಿಸ್ತಾ ಇಲ್ಲ ಬೇಡ ಅವ್ರು ಮತ್ತೇ ಬಂದೇ ಬರ್ತಾರೆ ಸಿಕ್ಕಾಕಂಡ್ರೆ ಕಷ್ಟ ನನ್ ಮಾತ್ ಕೇಳಿ” ಎಂದ. ನಾಗರಾಜ ಹಣ ಲೆಕ್ಕಾಹಾಕಿ ತಲಾ 1,65,000 ರೂ ಗಳನ್ನು ಹಂಚಿಕೊಂಡು ಉಳಿದ ಐದು ಸಾವಿರ ರೂ ಅನ್ನು ಷರೀಫನಿಗೆ ಇತ್ತ. ಬೇರೆ ದಾರಿ ಕಾಣದೆ ಜಯಣ್ಣ ಹಣವನ್ನು ತನ್ನ ಕಿಸೆಯೊಳಗೆ ಸೇರಿಸಿದ. ದೂರದಿಂದಲೇ ಟ್ರಕ್‍ಲಾಬಿಯತ್ತ ಕಣ್ಣುಹಾಯಿಸಿದ ಜಯಣ್ಣನಿಗೆ ಎರಡು ಲಾರಿಗಳು ನಿಂತಿರುವುದು ಕಂಡಿತು. ಆದರೂ ಯಾರಿಗೂ ಮತ್ತೆ ಆ ಕಡೆ ಹೋಗುವ ಮನಸಾಗಲಿಲ್ಲ. ಲಾರಿಗಳು ಹೊರಡುವ ವರೆವಿಗೂ ಅಲ್ಲೇ ಇದ್ದು ಅನಂತರ ತಮ್ಮ ಗ್ರೀಸ್ ಟ್ರಾಲಿಗಳನ್ನು ತಗೆದುಕೊಂಡು ಮನೆಗಳಿಗೆ ಹೊರಟರು. ಇತ್ತ ಷರೀಫ ಹಣಸಿಕ್ಕ ಖುಷಿಯಲ್ಲಿದ್ದ. ಮುಂದಿನ ಯಾವುದೇ ಆಗುಹೋಗುಗಳ ಬಗ್ಗೆ ಅವನಿಗೆ ಅರಿವಿರಲಿಲ್ಲ. ನಾಗರಾಜನೂ ಕೂಡ ಅಷ್ಟು ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಜಯಣ್ಣ ಈ ಹಣವನ್ನು ಮನೆಗೆ ತೆಗೆದುಕೊಂಡು ಹೋದರೆ ಹೆಂಡತಿ ನೂರೆಂಟು ಪ್ರಶ್ನೆ ಕೇಳಿದರೆ ಏನು ಮಾಡುವುದು ಎಂಬ ಭಯ ಆವರಿಸಿತ್ತು. ಬೇರೆ ದಾರಿ ಕಾಣದೆ ಮನೆ ತಲುಪಿ ಗುಪ್ತವಾಗಿ ಯಾರಿಗೂ ಕಾಣದಂತೆ ಹಣವನ್ನು ಬಚ್ಚಿಡುವ ಆಲೋಚನೆ ಮಾಡಿದ. ಇಷ್ಟು ದಿನ ರಾತ್ರಿ ಒಂಬತ್ತಾದರೂ ಬಾರದಿದ್ದ ಗಂಡ ಇಂದು ಏಳುಗಂಟೆಗೆ ಬಂದದ್ದನ್ನು ಕಂಡು “ಇದೇನು ಇಷ್ಟು ಬೇಗ ಬಂದ್ರಿ ಇವತ್ತು; ಏನು ಹಣ ಸಿಕ್ಲಿಲ್ವ.
ಅದೇನೋ ನಂಗೊತ್ತಿಲ್ಲ ಈಗ ಪಾಪೂ ಸ್ಕೂಲ್ ಫೀಜು, ಮನೆ ಬಾಡಿಗೆ, ಮನೆ ಅಡಿಗೆ ಸಾಮಾನಿಗೆ ದುಡ್ಡು ಬೇಕೇ ಬೇಕು” ಎಂದು ಜಗಳ ಆರಂಭಿಸಿದಳು. ಜಯಣ್ಣ “ಇರು ಮಾರಾಯ್ತಿ, ತಂದಿದ್ದೀನಿ” ಎಂದ. ಗಂಡನ ಮಾತಿಗೆ ಸಮಾಧಾನ ತಂದುಕೊಂಡು “ಮೊದ್ಲೇ ಹೇಳಕ್ಕಾಗ್ಲಿಲ್ವ” ಎಂದು ಮನೆ ಒಳಗೆ ಹೋದಳು. ಮನೆ ಒಳಗೆ ರಹಸ್ಯ ಜಾಗವನ್ನು ಹುಡುಕಿದ ಜಯಣ್ಣನಿಗೆ ಕೆಟ್ಟು ಹೋಗಿದ್ದ ತನ್ನ ಹಳೆ ಟಿ.ವಿ. ಕಾಣ ಸಿತು. ಟಿ.ವಿ. ಬಿಚ್ಚಿ 2000 ರೂನ ಐದು ನೋಟುಗಳನ್ನು ತೆಗೆದುಕೊಂಡು ಉಳಿದ ಹಣವನ್ನು ಒಂದು ಪ್ಲಾಸ್ಟಿಕ್ ಕವರ್‍ನಿಂದ ಸುತ್ತಿ ಇಟ್ಟ. ಮುಖತೊಳೆದುಕೊಂಡು ಬಟ್ಟೆ ಬದಲಿಸಿ ಬಂದ. ಹೆಂಡತಿ “ಅದೇನೂ ಇವತ್ತು ನಿಮ್ ತಾತನ ಆಸ್ತಿ ಟಿ.ವಿ ಬಿಚ್ಕೊಂಡು ಕುಂತಿದ್ರಲ್ಲ ಪಾಪೂನು ಮಾತಾಡಸ್ದೆ” ಎಂದಳು. “ಏನೂ ಇಲ್ಲ ಬಿಡು ಇನ್ ಯಾಕೆ ಅದು ಮಾರೋಣ ಅಂತ ನೋಡ್ದೆ ಅಷ್ಟೆ” ಎಂದ ಜಯಣ್ಣ. ಹೆಂಡತಿಯ ಕೈಗೆ 2000 ರೂ ನ ನಾಲ್ಕು ನೋಟುಗಳನ್ನು ಕೊಟ್ಟ. ಒಂದು ನೋಟನ್ನು ಹೊಸ ಗ್ರೀಸ್ ಡಬ್ಬವನ್ನು ಖರೀದಿಸಲು ಇಟ್ಟುಕೊಂಡ. ಹೆಂಡತಿ ಆಶ್ಚರ್ಯದಿಂದ “8000 ಸಾವಿರ ಹಣ ಯಾರ್ ಕೊಟ್ರು? ಎಷ್ಟ್ ಬಡ್ಡಿ? ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿದಳು. ಜಯಣ್ಣ “ಬಡ್ಡಿ ಕಡಿಮೆ ಮೂರು ಪರ್ಸೆಂಟು ಕಣೇ, ಹೋಗು ನಿಂಗೆ ದುಡ್ಡು ಕೊಟ್ಟಾಯ್ತಲ್ಲ ಅದೇನೋ ಮಾಡು” ಎಂದ. ಹೆಂಡತಿ ಖುಷಿಯಿಂದ ಅಡುಗೆ ಮನೆಗೆ ಹೋದಳು. ಇತ್ತ ಗ್ರೀಸ್ ಡಬ್ಬ ತರಲೆಂದು ತನ್ನ ಸ್ಕೂಟರ್ ಸ್ಟಾರ್ಟ್‍ಮಾಡಿಕೊಂಡು ಜಯಣ್ಣ ಹೊರಟ.
ಕೈತುಂಬ ಹಣ ತೆಗೆದುಕೊಂಡು ಹೋದ ಷರೀಫನು ಕೂಡ ಹೆಂಡತಿಗೆ ಕಾಣದಂತೆ ಹಣ ಬಚ್ಚಿಟ್ಟು 2000 ರೂ ಮಾತ್ರ ತೆಗೆದುಕೊಂಡು ಹೆಂಡತಿಗೆ ಕೊಟ್ಟ. ಷರೀಫನ ಹೆಂಡತಿ “1000 ಕೇಳಿದ್ರೆ 2000 ಕೊಡ್ತಾ ಇದೀರಿ ಆಮೇಲೆ ಏನೂ ಇವತ್ತೂ ಬೇಗ ಬೇರೆ ಬಂದಿದ್ದೀರಿ? ಬಾಳ ಜೋರಾಗಿ ನಿಮ್ದು ಗ್ರೀಸ್ಗೆ ಕೆಲ್ಸ ನಡಿತಾ ಇದೆ ಅನ್ಸತ್ತೆ” ಎಂದಳು. ಷರೀಫ “ಹಂಗೇನಿಲ್ಲ ಕಣೇ ಈಗ ಆಯುಧ ಪೂಜೆ ಹತ್ರ ಬರ್ತಾ ಇದೆ ನೋಡು ಅದುಕ್ಕೆ ಸ್ವಲ್ಪ ಗಾಡಿಗಳು ಜಾಸ್ತಿ” ಎಂದ. “ಸರೀ ನಡೀರಿ ಮಗಳಿಗೆ ಕಾಲ್ಚೈನು ತರ್ಬೇಕು ನಾಳೆ ಅವಳ್ದು ಹುಟ್ಟಿದ್‍ಹಬ್ಬ” ಎಂದಳು ಷರೀಫನ ಹೆಂಡತಿ. ಷರೀಫ “ರೇಷನ್ ಇಲ್ಲ, ಮನಗೆ ಅಡ್ಗೆ ಸಾಮಾನು ತರ್ಬೇಕು ಅಂದೆ ಸುಳ್ಳು ಹೇಳ್ದಾ ನಂಗೆ ಪಾಪ ಜಯಣ್ಣಂಗೆ ಇದ್ದ ಕೆಲ್ಸ ನಾನು ಮಾಡಿ ದುಡ್ಡು ತಗೊಂಡು ಬಂದೀನಿ” ಎಂದ. ಹೆಂಡತಿ “ಮನೆ ಸಾಮಾನು ತೀರೋಗಿವೆ ಅದ್ನು ತರ್ಬೇಕು. ಪಾಪ ಮಗ್ಳು ಹುಟ್ಟಿದ್ ಹಬ್ಬ ನಡಿರಿ ನಾನು ರೆಡಿಯಾಗಿ ಬರ್ತಿನಿ” ಎಂದು ಅಂಗಡಿಗೆ ಹೊರಡಲು ಸಿದ್ಧವಾಗಲು ರೂಮಿನ ಕಡೆ ನಡೆದಳು. ಷರೀಫ “ಆಯ್ತಾಯ್ತು ನಡಿ” ಎಂದ. ಗಂಡ-ಹೆಂಡತಿ ಇಬ್ಬರೂ ತಮ್ಮ ಮನೆಗೆ ಸಮೀಪದಲ್ಲೇ ಇರೋ ಸೇಟುವಿನ ಅಂಗಡಿಗೆ ಹೋಗಿ ಕಾಲಿನ ಬೆಳ್ಳಿ ಚೈನು ಖರೀದಿಸಿದರು. ಸೇಟು 1250ಕ್ಕೆ ಕಡಿಮೆ ಆಗೋದೆ ಇಲ್ಲ ಎಂದುಬಿಟ್ಟ. ಷರೀಫನ ಹೆಂಡತಿ ಎಷ್ಟೇ ಚೌಕಾಸಿ ಮಾಡಿದರೂ ಸೇಟು ಜಗ್ಗಲಿಲ್ಲ. ಷರೀಫ “ಸರಿ ತಗೋಳಿ ಸಾಬ್” ಎಂದು ಹೆಂಡತಿ ಕೈಯಿಂದ 2000 ನೋಟು ಕಿತ್ತು ಸೇಟುವಿನ ಕೈಗೆ ಇತ್ತ. ಸೇಟು ಆ ನೋಟನ್ನು ಹಿಂದೆ, ಮುಂದೆ ಎಲ್ಲ ಪರೀಕ್ಷಿಸಿ ಏನೋ ಅನುಮಾನ ಬಂದಂತೆ ಮತ್ತೆ ಮತ್ತೆ ಪರೀಕ್ಷಿಸತೊಡಗಿದ. ಸೇಟುವಿನ ಅನುಮಾನಕ್ಕೆ ಅಲ್ಲಿ ಬಲ ಬಂದಿತ್ತು. ಸೇಟು “ಅರೇ ಸ್ವಾಮಿ ಈ ನೋಟು ಬ್ಯಾಡಿ ನಮ್ಗೆ ಬ್ಯಾರೆ ನೋಟು ಕೊಡಿ” ಎಂದ. ಷರೀಫ “ಯಾಕೇ ಸಾಬ್ ಇದು ಹೊಸ ನೋಟ್ಗೆ ಐತೆ ತಗಳಿ” ಎಂದ. ಸೇಟು “ಇಲ್ಲಾ ಸ್ವಾಮಿ ಇದು ಯಾಕೋ ಕಳ್ ನೋಟಂಗೆ ಕಾಣ್ತಾ ಅದೆ ನಮ್ದು ಮಷೀನು ಅದ್ನೇ ಹೇಳ್ತಾ ಇದೆ ಯಾರೋ ನಿಮ್ಗೆ ಕಳ್ ನೋಟು ಕೊಟ್ಟಿ ಯಾ ಮಾರ್ಸವ್ರೆ” ಎಂದ. ಷರೀಫನಿಗೆ ಗಾಬರಿಯಾಯ್ತು. “ಇಲ್ಲಾ ಸಾಬ್ ಅದು ಲಾರಿದು ಡ್ರೈವರ್ ಕೊಟ್ಟಿದ್ದು ಇನ್ನು ಒಂದ್ಸಲ ಚೆಕ್ ಮಾಡಿ” ಎಂದ. ಆದರೆ ಸೇಟು “ಇಲ್ಲ ಸ್ವಾಮಿ ನಾನು ಸುಳ್ ಹೇಳುದ್ರು ನನ್ ಮಷೀನು ಸುಳ್ ಹೇಳಲ್ಲ ನೀವೆ ನೋಡಿ ಕುಯ್ ಕುಯ್ ಅಂತ ಬಡ್ಕೋತಾ ಐತೆ, ಬ್ಯಾರೆ ನೋಟು ಕೊಡಿ” ಎಂದ.
ಷರೀಫನು ಹೆಂಡತಿಯ ಮುಖವನ್ನೊಮ್ಮೆ ನೋಡಿದ ಆಕೆಯ ಕಣ್ಣಾಲಿಗಳು ಕೋಪದಿಂದ ಕೆಂಪಗಾಗಿದ್ದವು. ಮುಖ ಕುದಿಯುತ್ತಿತ್ತು. ಕೈ, ಕೈ ಹಿಸುಕಿಕೊಳ್ಳುತ್ತಿದ್ದಳು. “ಇದ್ರೇ ತಾನೆ ಇನ್ನೊಂದು ನೋಟು ನಿಮ್ಗೆ ಕೊಡಕೆ ನಿಮ್ ಚೈನು ನೀವೆ ಮಡಿಕಳಿ” ಎಂದು ಅಂಗಡಿಯಿಂದ ಹೊರನಡೆದಳು. ಷರೀಫ “ನೀನು ಮುಂದೆ ನಡಿ ಬತ್ತೀನಿ” ಎಂದ. ಹೆಂಡತಿ “ಏನಾದ್ರು ಮಾಡ್ಕೊಂಡು ಸಾಯಿ” ಎಂದು ಬಿರುಬಿರನೆ ಹೆಜ್ಜೆ ಹಾಕಿ ಮನೆ ಕಡೆ ಹೊರಟಳು. ಷರೀಫ ತಕ್ಷಣವೇ ಜಯಣ್ಣನಿಗೆ ಪೋನು ಮಾಡಿದ. ಜಯಣ್ಣ ಗ್ರೀಸ್ ಅಂಗಡಿಯಲ್ಲಿ ಗ್ರೀಸ್ ಖರೀದಿ ಮಾಡಿ 2000 ರೂ ನೋಟನ್ನು ಅಂಗಡಿ ಮಾಲೀಕನಿಗೆ ಕೊಡಲು ಬಲಗೈಯಲ್ಲಿ ಹಿಡಿದುಕೊಂಡು ಎಡಗೈಯಲ್ಲಿ ಪೋನ್ ಕರೆ ಸ್ವೀಕರಿಸಿದ. ಜಯಣ್ಣ ಕರೆ ಸ್ವೀಕರಿಸಿದ ಮರುಕ್ಷಣವೇ ಷರೀಫ “ಅಣ್ಣ ನಾವು ತೊಂದ್ರೆಗೆ ಸಿಕ್ಕಾಕೊಂಡ್ವಿ. ನಾವು ಲಾರಿಲಿ ತಗೊಂಡ್ವಲ್ಲ ಆ ದುಡ್ಡು ಖೋಟಾ ನೋಟಂತೆ” ಎಂದ. ಜಯಣ್ಣ ಅಂಗಡಿ ಮಾಲೀಕನಿಗೆ 2000 ರೂ ನೋಟನ್ನು ಕೊಡುತ್ತಲೇ ಷರೀಫನ ಮಾತುಗಳನ್ನು ಆಲಿಸುತ್ತಿದ್ದ. ತಕ್ಷಣವೇ ತನ್ನ ಕೈಯಿಂದ ಮಾಲೀಕ ನೋಟನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದು ಅನುಭವಕ್ಕೆ ಬಂದು ತನ್ನ ಕೈಯಲ್ಲಿಯೇ ಆ ನೋಟನ್ನು ಬಿಗಿಗೊಳಿಸಿ ಗಟ್ಟಿಯಾಗಿ ಹಿಡಿದುಕೊಂಡು “ಸಾರ್ ಎನೋ ತುಂಬ ಅರ್ಜೆಂಟಂತೆ ಮನೆಯಿಂದ ಪೋನ್ ಬಂದಿದೆ ಹೋಗ್ಬೇಕು ನಾಳೆ ಬಂದು ತಗೋತೀನಿ ಸ್ವಲ್ಪ ಅಮೌಂಟ್ ಕಡಿಮೆ ಇದೆ” ಎಂದ. ಅಂಗಡಿ ಮಾಲೀಕ ಪರಿಚಯಸ್ತನಾಗಿದ್ದರಿಂದ “ಇರ್ಲಿ ಬಿಡಿ ಜಯಣ್ಣ ಗ್ರೀಸ್ ತಗೊಂಡು ಹೋಗಿ ನಾಳೇನೆ ದುಡ್ಡು ಕೊಡಿ” ಎಂದ. ಆದರೆ ಜಯಣ್ಣ “ಇಲ್ಲ ಸಾರ್ ನಾಳೇನೆ ಬಂದು ದುಡ್ಡು ಕೊಟ್ಟು ತಗೊಂಡು ಹೋಗ್ತೀನಿ” ಎಂದು ಹೇಳಿ ಅಂಗಡಿಯ ಗ್ರೀಸ್ ತುಂಬಿದ ಡಬ್ಬವÀನ್ನು ಹಿಂತಿರುಗಿಸಿ ಅಂಗಡಿಯಿಂದ ಹೊರನಡೆದ. ಷರೀಫನು ಪೋನ್ ಕರೆಯಲ್ಲಿಯೇ ಇದ್ದ. ಜಯಣ್ಣ “ಷರೀಫ ಏನೋ ನೀನು ಹೇಳ್ತಾ ಇರೋದು” ಎಂದ. ಷರೀಫ ತಾನು ಕಾಲುಚೈನು ತರಲು ಹೋದಾಗ ಸೇಟು ಹೇಳಿದ ಮಾತುಗಳೆಲ್ಲವನ್ನು ಹೇಳಿದ.
ಹಾಗೆಯೇ “ಅಣ್ಣ ನೀವು ಯಾರಿಗೂ ಆ ದುಡ್ಡು ಕೊಡ್ಬೇಡಿ ನಾನು ಈಗ್ಲೇ ನಾಗರಾಜಣ್ಣಂಗೆ ಪೋನ್ ಮಾಡಿ ಹೇಳ್ತೀನಿ” ಎಂದ. ಜಯಣ್ಣ “ಅಯ್ಯೋ ಅವ್ನತ್ರ ಪೋನ್ ಇಲ್ಲ ಕಣೋ ಬೆಳಿಗ್ಗೆ ಬಿದ್ದು ಹಾಳಾಯ್ತು” ಎಂದ. “ಅರೇ ಇಸ್ಕಿ, ಈಗ ಏನ್ಮಾಡೋದು ಅಣ್ಣ” ಎಂದ ಷರೀಫ. ಜಯಣ್ಣ “ಅವನ ಮನೆಗೆ ಹೋಗಿ ಹೇಳ್ಬೇಕು ಅವ್ನು ಎಲ್ಲಾರ ದುಡ್ಡು ತಗೊಂಡು ಏನಾದ್ರು ಖರೀದಿ ಮಾಡೋಕೆ ಹೋಗ್ಬಿಟ್ರೆ ಕಷ್ಟ” ಎಂದ. ಷರೀಫ “ಅರೆರೇ ಹೌದು ಅಣ್ಣ ನಮ್ದು ಏರಿಯಾದಿಂದ ನಾನು ಈಗ ಹೊರಟ್ರೆ ಒಂದು ಗಂಟೆ ಮೇಲೆ ಆಗ್ತದೆ ಏನ್ಮಾಡ್ಲಿ” ಎಂದ. ಜಯಣ್ಣ “ನಾನು ಫಸ್ಟು ಮನೆಗೆ ಹೋಗ್ತೀನಿ ನನ್ ಹೆಂಡ್ತಿ ಬೇರೆ ಅಂಗಡಿ ಸಾಮಾನು ತರ್ಬೇಕು ಅಂತ ಇದ್ಲು ನಾನೆ ಏನಾದ್ರು ಲೇಟಾಗಿ ಹೋದ್ರೆ ಅವ್ಳೆ ಅಂಗ್ಡಿಗೆ ಹೋಗ್ಬಿಡ್ತಾಳೆ ಅಮೇಲೆ ಇನ್ನೂ ಕಷ್ಟ. ನಿಂಗೆ ಅಮೇಲೆ ಪೋನ್ ಮಾಡ್ತೀನಿ ಇರು” ಎಂದು ಷರೀಫನ ಪೋನ್ ಕರೆಯನ್ನು ಕಟ್ ಮಾಡಿ ವೇಗವಾಗಿ ಸ್ಕೂಟರ್ ಚಲಾಯಿಸಿಕೊಂಡು ಹೊರಟ. ಮನೆ ಬಾಗಿಲಿಗೆ ಜಯಣ್ಣನ ಸ್ಕೂಟರ್ ಬರುತ್ತಿದ್ದಂತೆ “ನಡೀರಿ ಅಂಗಡಿಗೆ ಹೋಗಿ ದಿನಸಿ ಸಾಮಾನು ತರೋಣ” ಎಂದಳು. ಆದರೆ ಜಯಣ್ಣ ಗಾಬರಿಯಿಂದಲೇ “ಅಯ್ಯೋ ಆ ಹಣ ವಾಪಸ್ ಮಾಡ್ಬೇಕು ಹಣ ಕೊಟ್ರಲ್ಲ ಅವರ್ಗೆ ಆಕ್ಸಿಡೆಂಟ್ ಆಗಿ ಸೀರಿಯಸ್ ಆಗಿದೆಯಂತೆ. ಅವರ ಹೆಂಡತಿ ಪೋನ್ ಮಾಡಿ ಇಸ್ಕೊಂಡಿರೋ ದುಡ್ಡು ಈಗ್ಲೇ ತಂದ್ಕೊಡಿ ಆಸ್ಪತ್ರೆಗೆ ದುಡ್ಡು ಜಾಸ್ತಿ ಬೇಕು ಅಂತಂದ್ರು” ಎಂದ. ಜಯಣ್ಣನ ಮಾತಿಗೆ ಬೇಸರ, ಕೋಪ ಎರಡು ಥಟ್ಟನೆ ಅವನ ಹೆಂಡತಿಯ ಮುಖದಲ್ಲಿ ಮೂಡಿದವು. ತನ್ನ ಪರ್ಸಿನಿಂದ 8000 ರೂನ್ನು ಜಯಣ್ಣನ ಕೈಗೆ ತುರುಕಿ ಮನೆ ಒಳಗೆ ಹೋದಳು. ಜಯಣ್ಣ ತನ್ನ ಹಳೇ ಟಿ.ವಿ ಒಳಗೆ ಇಟ್ಟಿದ್ದ ದುಡ್ಡು ನೋಡಲು ಹೋದ.
ಇತ್ತ ನಾಗರಾಜ “ಇವತ್ತು ಒಂದ್ ಒಳ್ಳೆ ಹೊಸ ಪೋನು ತಗೊಂಡೇ ತಗೋತೀನಿ” ಎಂದು ಖುಷಿಯಿಂದ 10000 ರೂಗಳನ್ನು ಮಾತ್ರ ಜೇಬಿನಲ್ಲಿಟ್ಟುಕೊಂಡು ಉಳಿದ ಹಣವನ್ನು ಮನೆಯವರಿಗೆ ಕಾಣದಂತೆ ಬಚ್ಚಿಟ್ಟು ಮೊಬೈಲ್ ಅಂಗಡಿಗೆ ರಾತ್ರಿ ಅನ್ನುವುದನ್ನು ಲೆಕ್ಕಿಸದೆ ಹೆಂಡತಿಗೆ ಹೇಳದೆ ಮೆಲ್ಲಗೆ ಹೊರಟ. ಮೊಬೈಲ್ ಅಂಗಡಿಯಲ್ಲಿ ಜನಸಂದಣ ಇರಲಿಲ್ಲ. ಮಾಲೀಕ ಟಿ.ವಿ.9 ವಾರ್ತೆ ನೋಡುತ್ತ ಕುಳಿತಿದ್ದ. ಅಂಗಡಿಯ ಕೆಲಸದಾತ ಗ್ರಾಹಕರಿಬ್ಬರಿಗೆ ಹೊಸ ಮೊಬೈಲ್ ತೋರಿಸುತ್ತ ಆಗೊಮ್ಮೆ, ಈಗೊಮ್ಮೆ ಮಾಲೀಕನನ್ನು, ಟಿ.ವಿಯನ್ನು ನೋಡುತ್ತಿದ್ದನು. ಟಿ.ವಿಯಲ್ಲಿ ಥಟ್ಟನೆ ಇದೀಗ ಬಂದ ಸುದ್ದಿ, ಬ್ರೇಕಿಂಗ್ ನ್ಯೂಸ್ ಎಂದು ವಾರ್ತಾ ನಿರೂಪಕಿಯೊಬ್ಬಳು ಕಿರುಚಲು ಆರಂಭಿಸಿದಳು. ನಗರದ ಹೊರವಲಯದಲ್ಲಿ ಚಲಿಸುತ್ತಿದ್ದ ಲಾರಿಯೊಂದನ್ನು ಪೋಲೀಸರು ಪರೀಕ್ಷಿಸಲಾಗಿ ಅದರಲ್ಲಿ 100 ಕೋಟಿಗೂ ಅಧಿಕ ಮೌಲ್ಯದ ಖೋಟಾನೋಟು ಪತ್ತೆಯಾಗಿದ್ದು ಡ್ರೈವರ್, ಕ್ಲೀನರ್ ಇಬ್ಬರು ತಮಿಳುನಾಡಿನಿಂದ ಕರ್ನಾಟಕ ಮಾರ್ಗವಾಗಿ ಕೇರಳಕ್ಕೆ ಹೋಗುತ್ತಿದ್ದು, ಅವರನ್ನು ಪೋಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆಂದು, ಈ ಇಬ್ಬರೂ ಕರ್ನಾಟಕದ ವಾಹನ ಚಾಲನಾ ಪರವಾನಗಿ ಪಡೆದವರಾಗಿದ್ದಾರೆಂದು, ಅವರ ವಿಳಾಸ ಬೆಂಗಳೂರೆಂದು ಅವರ ಭಾವಚಿತ್ರ, ವೀಡಿಯೋ ತುಣುಕುಗಳ ಸಮೇತ ಪದೇ ಪದೇ ತೋರಿಸಲಾಗುತ್ತಿತ್ತು. ಒಂದೆರಡು ನಿಮಿಷ ನಾಗರಾಜ ಈ ಮಾತುಗಳನ್ನು ಆಲಿಸಿ, ದೃಶ್ಯಗಳನ್ನು ಟಿ.ವಿಯಲ್ಲಿ ನೋಡಿದ. ಆ ಲಾರಿಯ ದೃಶ್ಯ, ಡ್ರೈವರ್, ಕ್ಲೀನರ್ ಅವರ ಬಟ್ಟೆ, ಅವರ ವೇಷ ಭೂಷಣವನ್ನು ಗಮನಿಸಿ ಅಂಗಡಿಯಿಂದ ಹೊರಬಂದು ಭಯದಿಂದ ಬೆವರಲಾರಂಭಿಸಿದ. ತನ್ನ ಬಳಿ ಈಗಾಗಲೇ ಪೋನ್ ಇಲ್ಲದ್ದರಿಂದ ಯಾರಿಗೂ ನಾಗರಾಜ ಪೋನು ಮಾಡಲು ಸಾಧ್ಯವಾಗದೆ ಜಯಣ್ಣನ ಮನೆಗೆ ಹೋಗುವ ನಿರ್ಧಾರಕ್ಕೆ ಬಂದ. ನಾಗರಾಜ ಜಯಣ್ಣನ ಮನೆ ತಲುಪಿದಾಗ ರಾತ್ರಿ 8 ಗಂಟೆ ಆಗಿತ್ತು.
ಜಯಣ್ಣ ಇಂದು ನಡೆದ ಎಲ್ಲ ಘಟನೆಗಳಿಂದ ಬೇಸರಗೊಂಡು ಮನೆ ಮುಂದೆ ಇದ್ದ ಹಳೆ ಪ್ಲಾಸ್ಟಿಕ್ ಗ್ರೀಸ್ ಡಬ್ಬಗಳನ್ನೇ ನೋಡುತ್ತ ಕುಳಿತಿದ್ದ. ನಾಗರಾಜನ ಆಗಮನದಿಂದ ಜಯಣ್ಣನಿಗೆ ಕೊಂಚ ಸಮಾಧಾನವೂ ಆಯ್ತು. ಜಯಣ್ಣ ಮೆಲ್ಲನೆ “ಲೋ ಮಾರಾಯ ನಿಂಗೆ ಪೋನ್ ಮಾಡನ ಅಂತಂದ್ರೆ ಬೆಳಿಗ್ಗೆ ನಿನ್ ಪೋನು ಹೋಯ್ತು, ಇನ್ನು ನಿನ್ ಹೆಂಡ್ತಿಗೆ ಕಾಲ್ ಮಾಡನ ಅಂದ್ರೆ ಯಾವತ್ತೂ ಮಾಡ್ದೆ ಇರೋರು ಇವತ್ತು ಏನು ಪೋನ್ ಮಾಡವ್ರೆ ಅಂತ ಅನುಮಾನ ಅಂತ ಮಾಡ್ಲಿಲ್ಲ ನೀ ಏನಾರ ದುಡ್ನ ಎಲ್ಲಾರ ಕೊಟ್ಟೇನು? ಎಂದ. ನಾಗರಾಜ ಜಯಣ್ಣನ ಮನೆಯ ಮುಖ್ಯದ್ವಾರವನ್ನೇ ನೋಡುತ್ತ ಮೆಲ್ಲನೆ “ಅಯ್ಯೋ, ಮೊಬೈಲ್ ತಗಳನ ಅಂತ ಅಂಗ್ಡಿಗೆ ಹೋಗಿದ್ದೆ ಗುರು ಅಲ್ಲಿ ಅಂಗ್ಡಿಯೊಳ್ಗೆ ಟಿ.ವಿಲಿ ಯಾವ್ದೋ ಲಾರಿ ತುಂಬ ಖೋಟಾನೋಟು ಇತ್ತಂತೆ ಅಂತ ಟಿ.ವಿ.9ಲ್ಲಿ ಬ್ರೇಕಿಂಗ್ ನ್ಯೂಸ್ ಅಂತಾ ತೋರಿಸ್ತಾ ಇತ್ತು. ನೋಡಿದ್ರೆ ಅದೇ ಲಾರಿ, ಅದೇ ಡ್ರೈವರ್ರು, ಕ್ಲೀನರ್ರು ನಂಗೆ ಒಂದ್ ಕ್ಷಣ ಎದೆ ನಿಂತಂಗಾಯ್ತು, ಅದ್ಕೆ ನಾವು ತಗೊಂಡಿರೋ ದುಡ್ಡು ಖೋಟಾನೋಟಾಗಿರ್ಬೇಕು ಫಸ್ಟು ನಿಂಗೆ ಹೇಳನ ಅಂತ ಬಂದೆ. ಇಲ್ನೋಡಿದ್ರೆ ನೀನೆ ನಂಗೆ ಹೇಳ್ತಾ ಇದಿಯ” ಎಂದ. ಅದಕ್ಕೆ ಜಯಣ್ಣ “ಅಯ್ಯೋ ನಂಗೆ ಷರೀಫ ಹೇಳ್ದ ಕಣೋ” ಎಂದ. “ಜಯ ಈಗ ಏನ್ಮಾಡೋದು” ಎಂದ ನಾಗರಾಜ. ಜಯಣ್ಣ “ಷರೀಫನಿಗೆ ಬರೇಳಿ ದುಡ್ನ ಯಾರ್ಕಣ ್ಣಗೂ ಕಾಣ್ದಂಗೆ ಸುಟ್ಟಾಕೋಣ” ಎಂದು ಷರೀಫನಿಗೆ ಕರೆ ಮಾಡಿದ. ಜಯಣ್ಣನ ಹೆಂಡತಿ ಮನೆಯ ಈಚೆ ಬಾರದೆ ಅಡುಗೆ ಮನೆಯಲ್ಲಿ ಪಾತ್ರೆಗಳ ಜೊತೆ ಯುದ್ಧ ಮಾಡುತ್ತಿದ್ದಳು. ಜಯಣ್ಣನ ಮಗಳು ಅಮ್ಮನ ಪೋನಿನಲ್ಲಿ ನಾಳೆ ಇಂಟರ್ನೆಟ್ ಇರಲ್ಲವೆಂದು ಅಮ್ಮನಿಂದ ಖಾತ್ರಿಪಡಿಸಿಕೊಂಡು ಟಾಮ್ ಅಂಡ್ ಜೆರ್ರಿ ಕಾರ್ಟೂನ್ ನೋಡುತ್ತಾ ಕಿಲಕಿಲ ನಗುತ್ತಿದ್ದಳು. ಷರೀಫನು ಆತುರ ಆತುರವಾಗಿ ಬಚ್ಚಿಟ್ಟಿದ್ದ ಹಣವನ್ನು ತೆಗೆದುಕೊಂಡು ಸ್ಕೂಟರ್ನಿಂದ ಇಳಿದು ಕುಂಟುತ್ತಲೇ ಬಂದ. ಜಯಣ್ಣ ಹೆಂಡತಿಗೆ ಏನೂ ಹೇಳದೆ ಮನೆಯಿಂದ ಹೊರಟ. ಮೂವರು ನಡೆದುಕೊಂಡು ನಾಗರಾಜನ ಜೊತೆ ಅವನ ಮನೆಗೆ ಬಂದರು. ಏಕೆಂದರೆ ನಾಗರಾಜನು ಈಗ ಬಚ್ಚಿಟ್ಟಿದ್ದ ಹಣ ತೆಗೆದುಕೊಳ್ಳಬೇಕಿತ್ತು. ನಾಗರಾಜ ಮನೆಗೆ ಹೋದಾಗ ಹೆಂಡತಿ ಬಾಗಿಲು ತೆಗೆದು “ಎಲ್ಲಿ ಹೋಗ್ತೀನಿ ಅಂತಾನೂ ಹೇಳ್ದೆ ಹೋಗಿದ್ದೀರಲ್ಲ ನಾವ್ ಏನ್ ಅನ್ಕೋಬೇಕು” ಎಂದು ಗಟ್ಟಿಧ್ವನಿಯಲ್ಲಿ ಮಾತನಾಡತೊಡಗಿದಳು.
ಆದರೆ ನಾಗರಾಜನ ಹಿಂದೆ ಇದ್ದ ಜಯಣ್ಣ ಮತ್ತು ಷರೀಫನನ್ನು ನೋಡಿ ಧ್ವನಿ ತಗ್ಗಿಸಿ “ಬನ್ನಿ ಅಣ್ಣ ಒಳಗೆ” ಎಂದಳು. ಆದರೆ ಜಯಣ್ಣ “ಇಲ್ಲಮ್ಮ ಸ್ವಲ್ಪ ಕೆಲ್ಸ ಇದೆ ಹೊರ್ಗಡೆ ಒಂದ್ ಅರ್ಧಗಂಟೇಲಿ ಬರ್ತೀವಿ” ಎಂದು ಮಾತನಾಡತೊಡಗಿದ. ಇವರು ಮಾತು ಆರಂಭಿಸುತ್ತಿದ್ದಂತೆ ನಾಗರಾಜ ಮೆಲ್ಲನೆ ಮನೆ ಒಳಗೆ ಹೋಗಿ ಬಚ್ಚಿಟ್ಟ ಖೋಟಹಣವನ್ನು ತೆಗೆದುಕೊಂಡು ಬಂದ. ಮೂವರು ಆ ಕಗ್ಗತ್ತಲ ರಾತ್ರಿಯಲ್ಲಿ ಒಂದು ನಿರ್ಜನವಾದ ಪ್ರದೇಶದ ಕಡೆ ಹೊರಟರು. ಮೂವರು ತಮ್ಮ ತಮ್ಮ ಕಿಸೆಯಿಂದ ಖೋಟಹಣವನ್ನು ತೆಗೆದು ನೆಲದಲ್ಲಿಟ್ಟು ಬೆಂಕಿ ಹಚ್ಚಿದರು. ಗಾಳಿಗೆ ಬೆಂಕಿ ಸರಿಯಾಗಿ ಹೊತ್ತದೆ ಸುಮಾರು ಸಮಯ ಹಿಡಿಯಿತು. ಅಂತೂ ಮೂವರು ತಂದ ಹಣವೆಲ್ಲವೂ ಬೆಂಕಿಯಲ್ಲಿ ಬೂದಿಯಾಯ್ತು. ಇದರ ಜೊತೆಗೆ ಮೂವರು ದುಡ್ಡು ಸಿಕ್ಕ ಮೇಲೆ ಕಂಡಿದ್ದ ಕನಸುಗಳು ಆ ಬೆಂಕಿಯಲ್ಲಿಯೇ ಬೂದಿಯಾದವು. ಮೂವರಲ್ಲಿಯೂ ಎನೋ ಒಂದು ಥರಹದ ನೀರವ ಮೌನ ಆವರಿಸಿತು. ಎಲ್ಲರೂ ನಿಟ್ಟುಸಿರು ಬಿಟ್ಟು ಮರುಮಾತಾಡದೆ ತಮ್ಮ ತಮ್ಮ ಮನೆಕಡೆ ಹೊರಟರು. ಜಯಣ್ಣ ಮನೆಗೆ ಬರುತ್ತಿದ್ದಂತೆ ಪಕ್ಕದ ಮನೆಯ ಟಿ.ವಿ.ಯ ಶಬ್ದ ಮೆಲ್ಲನೆ ಕೇಳುತ್ತಿತ್ತು. ಟಿ.ವಿ.9 ವಾರ್ತೆಯಲ್ಲಿ ಮತ್ತದೆ ವಾರ್ತೆ ನಗರದಲ್ಲಿ ಬೃಹತ್ ಪ್ರಮಾಣದ ಖೋಟಾ ನೋಟಿನ ಲಾರಿ ಜಪ್ತಿ, ನಗರದಲ್ಲಿ ವ್ಯಾಪಕವಾಗಿ ಖೋಟಾನೋಟಿನ ವ್ಯವಹಾರ ಹರಡಿರುವ ಶಂಕೆ ಎನ್ನುವ ವಿಷಯಗಳು ಪ್ರಸ್ತಾಪವಾಗುತ್ತಿದ್ದವು. ಇದು ಜಯಣ್ಣನ ಕಿವಿಗೆ ಬಡಿಯುತ್ತಿದ್ದಂತೆ ಜಯಣ್ಣನಿಗೆ ಒಂದು ರೀತಿಯ ಭಯ, ಸಂಕಟ ಎಲ್ಲವೂ ಆವರಿಸಿದವು. ಮನೆಗೆ ಹೊಕ್ಕ ಜಯಣ್ಣನಿಗೆ ಬಾಗಿಲ ಪಕ್ಕದಲ್ಲಿಯೇ ಇಟ್ಟಿದ್ದ ಗ್ರೀಸ್ ಟ್ರಾಲಿ ಕಾಣ ಸಿತು. ಅದನ್ನು ನೋಡಿದ ಜಯಣ್ಣ “ಪ್ರಾಮಾಣ ಕತೆಯ ಹಾದಿ ಬದಲಿಸಿದರೆ ಎಂತಹ ಅಪಾಯಗಳು ಎದುರಾಗುತ್ತವೆ ಎಂಬುದನ್ನು ಇಂದು ಕಲಿತೆನೆಂದು” ಮನದಲ್ಲಿಯೇ ಅಂದುಕೊಂಡು ತನ್ನ ಜೀವನಾಧಾರವಾದ ಗ್ರೀಸ್‍ಟ್ರಾಲಿಯನ್ನೇ ನೋಡುತ್ತ ನಿಂತ.
-ಡಾ. ಶಿವಕುಮಾರ ಡಿ.ಬಿ
ಕತೆ ಸ್ವಾರಸ್ಯವಾಗಿದೆ.