ಸಲೀಮ ಭಾರತಿ ಅವರ “ಕಾರ್ಲ್ ಮಾರ್ಕ್ಸ್ ಜೀವನ ಪರಿಚಯ” ಒಂದು ಮರು ಓದು.: ಅಶ್ಫಾಕ್ ಪೀರಜಾದೆ.

ಕಮ್ಯೂನಿಸಂ : ಎಲ್ಲ ಸ್ವತ್ತೂ ಸಮುದಾಯಕ್ಕೆ ಸೇರಿದುದೆಂದೂ ಪ್ರತಿಯೊಬ್ಬ ವ್ಯಕ್ತಿಯೂ ಶಕ್ತ್ಯನುಸಾರವಾಗಿ ದುಡಿದು ಆವಶ್ಯಕತೆಗೆ ಅನುಸಾರವಾಗಿ ಪ್ರತಿಫಲ ಪಡೆಯಬೇಕೆಂದೂ ಪ್ರತಿಪಾದಿಸುವ ತತ್ತ್ವ (ಸಾಮ್ಯವಾದ).ಮಾರ್ಕ್ಸ್ ಮತ್ತು ಎಂಗೆಲ್ಸ್‌ ರಿಂದ ಪ್ರಪ್ರಥಮವಾಗಿ ಶಾಸ್ತ್ರೀಯವಾಗಿ ಪ್ರತಿಪಾದಿತವಾದ ಈ ತತ್ತ್ವಕ್ಕೆ ವೈಜ್ಞಾನಿಕ ಸಮಾಜವಾದವೆಂದೂ ಹೆಸರಿದೆ. (ವಿಕಿಪಿಡಿಯಾ)

ಕಾಲ ಎಂಬುದು ಎಂದಿಗೂ ನಿಂತ ನೀರಲ್ಲ. ಸದಾ ಹರಿಯುತ್ತಲೇ ಇರುವ ಮಹಾ ಪ್ರವಾಹ. ಹಲವಾರು ತಿರುವು, ಹಲವಾರು ಘಟ್ಟಗಳು ಮತ್ತು ಪಲ್ಲಟಗಳು ಸಂಭವಿಸುತ್ತಲೇ ಹೊಸ ಹೊಸ ಸಾಮಾಜಿಕ, ರಾಜಕೀಯ, ಸಾಹಿತ್ಯಿಕ ಸಿದ್ಧಾಂತಗಳು, ಆಯಾಮಗಳು ಕೊನೆಗೆ ಒಂದು ತಾರ್ಕಿಕ ಮನ್ವಂತರದಲ್ಲಿ ಅಂತ್ಯ ಕಾಣುವುದು ಒಂದು ಚಾರಿತ್ರಿಕ ದಾಖಲೆಯಾಗಿ ಉಳಿಯುವಂಥದ್ದು.

ಈ ನಿಟ್ಟಿನಲ್ಲಿ ಸಲೀಂ “ಭಾರತಿ” ಎಂಭತ್ತರ ದಶಕದಲ್ಲಿ ರಚಿಸಿರುವ ವ್ಯಕ್ತಿ ಪರಿಚಯ ಕನ್ನಡ ಸಾಹಿತ್ಯದಲ್ಲಿ ಒಂದು ಐತಿಹಾಸಿಕ ಮೈಲುಗಲ್ಲಾಗಿ ಉಳಿಯಬಲ್ಲದ್ದು. ಅವರು ರಚನೆಗೆ ಆಯ್ದುಕೊಂಡ ವ್ಯಕ್ತಿ ಕೂಡ ಜಗತ್ಪ್ರಸಿದ್ಧ ನಾಯಕ. ಎಂಭತ್ತರ ದಶಕದಲ್ಲಿ ಭಾರತದಲ್ಲಿ ಎಡಪಂಥೀಯ ಸಿದ್ಧಾಂತ ಉಚ್ಛ್ರಾಯ ಸ್ಥತಿಯಲ್ಲಿದ್ದ ಕಾಲ. ಈ ಕಾಲದಲ್ಲಿ ಭಾರತೀಯ ಯುವಕರು ಎಡಪಂಥೀಯ ವಿಚಾಧಾರೆಯ ಸಮ್ಮೋಹನಕ್ಕೆ ಆಕರ್ಷಿತರಾಗುತ್ತಿದ್ದರು.ಕಾರ್ಲ್ ಮಾರ್ಕ್ಸ ಮತ್ತು ಲೆನಿನ್ ಎಂಬ ಇಬ್ಬರು ಮಹಾನಾಯಕರ ಜೀವನ ಮತ್ತು ಸಿದ್ಧಾಂತ ಕ್ಕೆ ಜನ ಮಾರು ಹೋಗುತ್ತಿದ್ದರು. ಅದರಲ್ಲೆ ವಿಶೇಷವಾಗಿ ಕಾರ್ಲ್ ಮಾರ್ಕ್ಸ್ ಎಂಬ ಎಡಪಂಥೀಯ ಮಹಾನಾಯಕ ಭಾರತೀಯ ಯುವ ಜನಾಂಗದ ಆದರ್ಶ ಮತ್ತು ಅವನ ಸಿದ್ದಾಂತವೇ ತಮಗೆಲ್ಲ ಅಂತಿಮ ಗುರಿ ಎನ್ನುವಂಥ ಪರಿಸ್ಥಿತಿ ನಿರ್ಮಾನವಾಗಿತ್ತು. ಹದಗೆಟ್ಟು ಹೋದ ಸಾಮಾಜಿಕ ವ್ಯವಸ್ಥೆಗೆ ಮಾರ್ಕ್ಸ ವಾದ ಒಂದೇ ಕೊನೆ ಪರಿಹಾರವೆನ್ನುವುದು ಯುವ ಮನಸ್ಸುಗಳಲ್ಲಿ ಅಚ್ಚಾಗಿ ಹೋಗಿತ್ತು. ಗೋಕಾವಿ ನಾಡಿನಲ್ಲಿ ಸಮದರ್ಶಿ ಪತ್ರಿಕೆಯ ಸಂಪಾದಕರಾದ ಬಿ. ಎನ್. ಧಾರವಾಡಕರ ಆಗಿನ ಕಾಲದಲ್ಲಿ ಒಬ್ಬ ಮುಂಚೂಣಿಯ ನಾಯಕರಾಗಿದ್ದರು. ಸಾಮಾಜಿಕ ಅಸಮಾನತೆ ಅನ್ಯಾಯಗಳು ಹೋಗಲಾಡಿಸುವ ನಿಟ್ಟಿನಲ್ಲಿ ಅವರು ಸದಾ ಕ್ರಿಯಾಶೀಲರಾಗಿರುತ್ತಿದ್ದರು. ಅನ್ಯಾಯ, ಅತ್ಯಾಚಾರ, ಭ್ರಷ್ಟಾಚಾರ ಕಂಡು ಬಂದಲೆಲ್ಲ ಅವರು ಹೋರಾಟ,ಚಳವಳಿ, ಸತ್ಯಾಗ್ರಹಗಳ ಮೂಲಕ ಸಾಮಾಜಿಕ ನ್ಯಾಯವನ್ನು ಸ್ಥಾಪಿಸಲು ಮುಂದಾಗುತ್ತಿದ್ದರು. ಜನ ಧಾರವಾಡಕರರ ಸಾಮಾಜಿಕ ಕಳಕಳಿ ಗುರುತಿಸಿದ್ದರು. ಅವರ ಸರಳತೆ ಮತ್ತು ಹೋರಾಟದ ಶಕ್ತಿಗೆ ಆಕರ್ಷಿತರಾದ ಆ ಭಾಗದ ಯುವಕರು ಅವರ ಗರಡಿಯಲ್ಲಿ ಸೈದ್ಧಾಂತಿಕ ಪಟ್ಟಗಳನ್ನು ಕಲಿಯುತ್ತಿದ್ದರು. ಗೋಕಾವಿ ನಾಡಿನಲ್ಲಿ ಈಗ ಹಿರಿಯ ಸಾಹಿತಿಯಾಗಿ ಹೆಸರು ಮಾಡಿರುವ ಕಾರ್ಮಿಕ ನಾಯಕ ಮಹಾಲಿಂಗ ಮಂಗಿ, ನಾಡಿಗೆ “ಕೊನೆ ಎಚ್ಚರಿಕೆ”(ಕವನ ಸಂಕಲನ) ಕೊಟ್ಟ ಜಿ. ಕೆ. ಬಡಿಗೇರ, ಬಲಿಷ್ಟ ಭಾರತ ಪತ್ರಿಕೆಯ ಸಂಪಾದಕ ಬಸಪ್ಪ ಹೂಗಾರ ಮತ್ತು ಹೊಸ ತೆಲೆಮಾರಿನ ಹಲವಾರು ಸಾಹಿತಿಗಳು ಎಡಪಂಥೀಯ ನಾಯಕರಾಗಿ ಹೊರ ಹೊಮ್ಮುತ್ತಿದ್ದರು. ಇವರೆಲ್ಲರ ಆಗಾಧ ಅಪರಿಮಿತ ಕ್ರಾಂತಿಕಾರಿ ನಿಲುವುಗಳು ಮತ್ತು ಸಾಮಾಜಿಕ ಹೋರಾಟಗಳು ಯುವ ಸಮುದಾಯವನ್ನು ಎಡಪಂಥೀಯ ವಿಚಾರಧಾರೆಯತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದವು. ಇದೇ ವಿಚಾರಧಾರೆಯ ಕಾರಣದಿಂದಾಗಿ ” ಗೋಕಾವಿ ನಾಡಿನ ಪ್ರಗತಿಶೀಲ ಬರಹಗಾರರ ಬಳಗ” ಸೃಷ್ಟಿಯಾಗಿತ್ತು.

ಹಿರಿಯ ಸಾಹಿತಿ ಬಸವರಾಜ ಕಟ್ಟಿಮನಿ, ಪ್ರೋ. ಚಂದ್ರಶೇಖರ್ ಅಕ್ಕಿ, ಸಿದ್ಧನಗೌಡ ಪಾಟೀಲ, ಮಹಾಲಿಂಗ ಮಂಗಿ, ಡಾ. ನಿಂಗಣ್ಣ ಸಣಕ್ಕಿ, ದು. ನಿಂ. ಬೆಳಗಲಿ ಮುಂತಾದ ಪ್ರಸಿದ್ಧ ಸಾಹಿತಿಗಳ ಮಾರ್ಗ ದರ್ಶನದಲ್ಲಿ ಇದೇ ವಿಚಾರಧಾರೆಯ ಕಾರಣದಿಂದಾಗಿ ” ಗೋಕಾವಿ ನಾಡಿನ ಬರಹಗಾರರ ಬಳಗ”ದ ಸದಸ್ಯ ಸಾಹಿತಿಗಳು ಜನರಲ್ಲಿ ವೈಚಾರಿಕತೆ, ಕ್ರಾಂತಿಕಾರಿ ಮನೋಭಾವ ಬಿತ್ತುವ ಕಾರ್ಯ ಮಾಡುತ್ತಿದ್ದರು. ಇದರಲ್ಲಿ ಸದಸ್ಯರಾಗಿದ್ದ ಈಶ್ವರ ಮಗದುಮ್, ಲಕ್ಷ್ಮಣ ಕಾಪ್ಸೆ, ನಿಸಾರ ಪೀರಜಾದೆ, ಶಂಕರ ತಲ್ಲೂರ, ಈಶ್ವರ ಮಮದಾಪೂರ, ಪ್ರಕಾಶ ಕೋಟಿನತೋಟ ಮುಂತಾದವರೆಲ್ಲ ಸಾಮಜಿಕ ನ್ಯಾಯಕ್ಕಾಗಿ, ಅನಿಷ್ಟ ಕಂದಾಚಾರಗಳನ್ನು ಹೋಗಲಾಡಿಸುವ ನಿಟ್ಟಿನಲ್ಲೇ ಸಾಹಿತ್ಯ ರಚಿಸುವುರೇ ಆಗಿದ್ದರು. ಆಗ ಕಮ್ಯೂನಿಸಂನ ದಟ್ಟ ಪ್ರಭಾವ ಕನ್ನಡ ಸಾಹಿತ್ಯದ ಮೇಲೂ ಆಗಿತ್ತು. ಕೇವಲ ಶಿಷ್ಟ ಸಾಹಿತ್ಯ ಮಾತ್ರ ಸಾಹಿತ್ಯವೆಂದು ಕರೆಸಿಕೊಳ್ಳುತ್ತಿದ್ದ ಕಾಲದಲ್ಲಿ ಪ್ರಗತಿಪರ, ದಲಿತ, ಬಂಡಾಯ, ಪ್ರಗತಿ, ನವ್ಯ ಮುಂತಾದ ತಿರುವುಗಳು ಸಾಹಿತ್ಯ ಪಡೆದುಕೊಳ್ಳುವ ಮೂಲಕ ಸಾಹಿತ್ಯ ಪಾರಂಪರಿಕ ಶಿಷ್ಟಾಚಾರವನ್ನು ಮುರಿಯಿತು. ಬಸವರಾಜ ಕಟ್ಟಿಮನಿ ಜರತಾರಿ ಜಗದ್ಗುರುದಂಥ ಕ್ರಾಂತಿಕಾರಿ ಕಾದಂಬರಿಗಳು ಬರೆಯುವ ಮೂಲಕ ಗದ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದರೆ ಸಿದ್ಧಲಿಂಗಯ್ಯನವರು ಒದಿರಲಾ.. ಇಕ್ಕರಲಾ.. ಎನ್ನುವ ಪದ್ಯಗಳ ಮೂಲಕ ಕಾವ್ಯ ಪರಂಪರೆಗೆ ಹೊಸ ನಾಂದಿ ಹಾಡಿದರು. ಆಗ ಇಡೀ ರಾಜ್ಯಕ್ಕೆ ನಾಯಕರಾಗಿ ಗುರುತಿಸಿಕೊಳ್ಳುತ್ತಿದ್ದ ಬಿ. ಎನ್. ಧಾರವಾಡಕರರ ಪ್ರಭಾವ ತಮ್ಮ ಮನೆ, ಊರು, ಪ್ರದೇಶದ ಮೇಲೆ ಬೀರದೆ ಇರುತ್ತದೆಯೇ ಯುವಕರಲ್ಲಿ ಪ್ರಶ್ನಿಸುವ ಹೋರಾಟ ಮಾಡುವ ಮನೋಬಲವನ್ನು ಬಿತ್ತಿದ್ದರು, ಕಾರ್ಲ್ ಮಾರ್ಕ್ಸ್, ಲೆನಿನ್, ಮ್ಯಾಕ್ಸಿಮ್‌ ಗಾರ್ಕಿ, ಎಂಜೆಲ್ಸ್ ಮುಂತಾದವರ ಸಿದ್ದಾಂತ ವಿಚಾರ ಸಾಹಿತ್ಯ, ಜೀವನ ಗಾಥೆ ಆತ್ಮ ಚರಿತ್ರೆಗಳನ್ನು ಓದುವ ಹುಚ್ಚು ಹತ್ತಿಸಿದರು. ತಮ್ಮ ಪತ್ರಿಕೆಯಲ್ಲಿ ಕ್ರಾಂತಿಕಾರಿ ಲೇಖನಗಳು ಪ್ರಕಟಿಸಿ ಸಮಾಜದ ಕಣ್ಣು ತೆರೆಸುವ ಕಾರ್ಯ ಮಾಡಿದರು. ಯುವಕರಲ್ಲಿ ಮುಖ್ಯವಾಗಿ ಈಶ್ವರ ಮಗದುಮ್ಮ, ಈರಣ್ಣ ಗಣೇಶವಾಡಿ, ಶ್ರೀಶೈಲ್ ಬೂದಿಹಾಳ ಮುಂತಾದವರು ಎಡಪಂಥೀಯ ವಿಚಾರ ಧಾರೆಗೆ ಮಾರು ಹೋಗಿ ಸಾಹಿತ್ಯಿಕ ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಳ್ಳಲು ಆರಂಭಿಸಿದ್ದರು.

ತಮ್ಮ ಬರೆಹಗಳ ಮೂಲಕ ಸಾಮಾಜಿಕ ಅಸಮಾನತೆ, ಅನಿಷ್ಟತೆಗಳನ್ನು ಖಂಡಿಸಿದರು. ಮತ್ತು ಸಾಮಾಜ ಸುಧಾರಣೆಗೆ ಕಟಿಬದ್ಧರಾಗಿ ನಿಂತರು. ಇದರ ಪರಿಣಾಮವಾಗಿಯೇ ಮೂಡಲಗಿಯಲ್ಲಿ “ಕ್ರಾಂತಿ ಸಂಘ” ಎಂಬ ಸಂಘಟನೆ ಮೈದಾಳಿತು. ಅಂದಿನ ಹಲವಾರು ಯುವಕರು ಮುಖ್ಯವಾಗಿ ಸಯೀದ ಪೀರಜಾದೆ, ಗಜಾನನ ಪತ್ತಾರ, ನಿಂಗಪ್ಪ, ಶಂಕ್ರಯ್ಯಾ ಹಿರೇಮಠ, ಭೀಮಶಿ ಗಡಾದ, ನಿಸಾರ ಪೀರಜಾದೆ, ಪ್ರಕಾಶ ಬೆಳಕೂಡ, ಇಸಾಕ ಪೀರಜಾದೆ ಮುಂತಾದವರು ಈ ಸಂಘಟನೆಯ ಸಕ್ರೀಯ ಸದಸ್ಯರಾಗಿ ತಮ್ಮ ಮೂಡಲಗಿ ನಾಡಿನ ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸಿದರು. ಇಷ್ಟಕ್ಕೆಲ್ಲ ಮೂಲ ಕಾರಣಿಭೂತರಾಗಿದ್ದ ಕಾಮರೇಡ್ ಬಿ. ಎನ್ ರ ಪ್ರಭಾವ ಸ್ವತ: ತಮ್ಮ ಮಕ್ಕಳ ಮೇಲೆ ಆಗದೇ ಇರಲು ಹೇಗೆ ಸಾಧ್ಯ. ಮಕ್ಕಳಾದ ಶಾಹಿದ್ ಮತ್ತು ಸಲೀಂ ಅವರು ಕೂಡ ಇವರ ಪ್ರಭಾವಕ್ಕೆ ಒಳಗಾಗಿ ಕಮ್ಯೂನಿಸಂ ದ ಕಡೆಗೆ ವಾಲಿದರು. ತಂದೆಯವರು ಹೋರಾಟ ಶಕ್ತಿ ಅವರಿಗೆ ಸ್ಪೂರ್ತಿಯಾದರೆ ಅವರು ಸಂಗ್ರಹಿಸಿಟ್ಟಿದ ಪುಸ್ತಕ ಭಂಡಾರ ಇವರಿಗೆ ದಾರಿದೀಪವಾದವು. ಯುಕರಿದ್ದಾಗಲೇ ಹೋರಾಟ ಮತ್ತು ಸಾಹಿತ್ಯದ ಸಂಗಾತಿಗಳಾದರು. ಓದು ಅವರಿಗೆ ಹುಚ್ಚು ಹಿಡಿಸಿದಂತೆ ಬರವಣಿಗೆ ಕೂಡ ಅವರ ಕೈ ಹಿಡಿಯಿತು. ಶಾಹಿದ ಮುಂದೆ ಸಮದರ್ಶಿ ಪತ್ರಿಕೆ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು ಅವರಕ್ಕಿಂತ ಚಿಕ್ಕವನಾದ ಸಲೀಂ ಸಾಹಿತಿಯಾಗಿ ಗುರುತಿಸಿಕೊಂಡರು. ಅವರು ಸಲೀಂ”ಭಾರತಿ” ಎನ್ನುವ ಕಾವ್ಯನಾಮದಿಂದ ಹಲವಾರು ಮೌಲಿಕ ಕ್ರಾಂತಿಕಾರಿ ಕೃತಿಗಳು ರಚಿಸಿದರು. ಅದರಲ್ಲಿ ಮುಖ್ಯವಾಗಿ “ಕಾರ್ಲ್ ಮಾರ್ಕ್ಸ್ ಜೀವನ ಪರಿಚಯ” ಎನ್ನುವ ೧೯೮೭-೮೮ ಸಾಲಿನಲ್ಲಿ ಪೂರ್ಣಿಮಾ ಪ್ರಕಾಶದಿಂದ ಪ್ರಕಾಶಿತವಾಗಿತ್ತು. ಸಾಮಾಜಿಕ ಬದಲಾವಣೆ ಬಯಸುವವರಿಗೆ, ಸಾಮಾಜಿಕ ನ್ಯಾಯ ಬಯಸುವರಿಗೆ ಈ ಕೃತಿ ಈಗಲೂ ಪ್ರಸ್ತುತ ಅನಿಸುವಂಥದ್ದು. ಕಾರ್ಲ್ ಮಾರ್ಕ್ಸ್ ಎಂದಿಗೂ ಅಮರ, ಈ ಹೆಸರು ಈ ಭೂಮಿಯ ಮೇಲೆ ಇರುವವರೆಗೂ ಈ ಕೃತಿ ಕೂಡ ಅಮರವಾಗಿರುತ್ತದೆ. ಕಮ್ಯುನಿಸ್ಟ್ ವಿಚಾರಧಾರೆ ಎಲ್ಲ ಕಾಲಕ್ಕೂ ಪ್ರಸ್ತುತವೇ ಆದರೂ ಈ ಸಿದ್ಧಾಂತ ಹುಟ್ಟಿಕೊಂಡಿದ್ದು ಶ್ರಮಿಕ ಸಂಸ್ಕೃತೀಯ ಒಂದು ಭಾಗವಾಗಿ. ಬಂಡವಾಳಶಾಹಿ ಮತ್ತು ಅಧಿಕಾರಶಾಹಿ ವ್ಯವಸ್ಥೆಗೆ ವಿರುದ್ಧವಾಗಿ. ಒಂದು ಕಾಲದಲ್ಲಿ ಭಾರಿ ಸದ್ದು ಮಾಡುತ್ತಿದ್ದ ಕಮ್ಯುನಿಸಮ್ ಈಗ ತನ್ನ ಆರ್ಭಟ ಕಳೆದುಕೊಳ್ಳುತ್ತಿದೆಯೇ?. ಹಲವು ಕಮ್ಯುನಿಸ್ಟ್ ದೇಶಗಳು ಅಳಿವಿನ ಅಂಚಿಗೆ ಬಂದು ನಿಂತಿರುವುದು ಈ ಸಿದ್ಧಾಂತದ ಅವನತಿ ಎನ್ನಬಹುದೇ?,

ಕನ್ನಡ ನಾಡಿನಲ್ಲಿ ಕೂಡ ಒಂದು ಕಾಲಕ್ಕೆ ಆಶಾಕಿರಣವಾಗಿ ಕಂಡಿದ್ದ ಕಮ್ಯುನಿಸ್ಟ್ ಸಿದ್ಧಾಂತ ಈಗ ನೈಪಥ್ಯಕ್ಕೆ ಸರಿಯುತಿದೆ. ಕಮ್ಯುನಿಸ್ಟ್ ದ ಭದ್ರಕೋಟೆ ಎಂದುಕೊಂಡಿದ್ದ ಕೇರಳ ರಾಜ್ಯದಲ್ಲಿಯೂ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಜಾಗತೀಕ ಮಟ್ಟದಲ್ಲಿ ಇದಕ್ಕೆ ಕಾರಣಗಳು ಹಲವು ಇರಬಹುದು. ಮುಖ್ಯವಾಗಿ ಶ್ರಮ ಸಂಸ್ಕೃತಿಯನ್ನೇ ಅಳಿಸಿ ಹಾಕುವ ಪ್ರಯತ್ನದಲ್ಲಿರುವ ಇಂದಿನ ಸರ್ಕಾರಗಳು. ಅಗ್ಗದ ಯೋಜನೆಗಳ ಮೂಲಕ ಜನರನ್ನು ಆಲಸಿಗಳಾಗಿಸಿದರೆ, ಯುವಕರನ್ನು ನಿರುದ್ಯೋಗಿಗಳನ್ನಾಗಿ ರೂಪಿಸುತ್ತಿರುವ ಶಿಕ್ಷಣ ನೀತಿಗಳು. ಮನುಷ್ಯ ಶಕ್ತಿಗಿಂತ ಯಂತ್ರ ಶಕ್ತಿಯನ್ನು ನಂಬಿಕೊಂಡಿರುವ ಫ್ಯಾಕ್ಟರಿಗಳು, ಕಾರ್ಪೋರೇಟ್ ಕಂಪನಿಗಳು ದಿನೆ ದಿನೇ ಕಾರ್ಮಿಕರನ್ನು ಬೀದಿಗೆ ತಂದು ಬಿಟ್ಟು ರೋಬೋಟಿಕ್ ಶಕ್ತಿಗೆ ಜೈ ಅನ್ನುತ್ತಿರುವ ಜಗತ್ತಿನಲ್ಲಿ ಶ್ರಮ ಸಂಸ್ಕೃತಿಯ ಅಸ್ತಿತ್ವಾದರೂ ಏನು? ಜನರ ಕೈಗೆ ದುಡಿಮೆಯೇ ಇಲ್ಲವಾದ ಮೇಲೆ ದುಡಿಯು ಜನರ ಪರವಾಗಿ ಯಾವ ಸಿದ್ಧಾಂತ ಕೆಲಸ ಮಾಡುತ್ತದೆ. ಕಾರ್ಮಿಕರ ಕಲ್ಯಾಣಕ್ಕಾಗಿ ಹುಟ್ಟಿಕೊಂಡ ಕಮ್ಯುನಿಸಂ ಕಾರ್ಮಿಕರೇ ಇಲ್ಲವೆಂದ ಮೇಲೆ ಅದೆಹೇಗೆ ಬದುಕುಲು ಸಾಧ್ಯ. ಈ ಕಾರಣಕ್ಕಾಗಿಯೇ ಮಾರ್ಕ್ಸ್ ಉತ್ಪಾದನೆಯ ಹೆಚ್ಚಿಸುವ ಬಗ್ಗೆ ಹೇಳಿದ್ದ. ಅವನ ಹೇಳಿಕೆಯಂತೆ ಉತ್ಪಾದನೆಯಂತೂ ಸಾಕಷ್ಟು ಹೆಚ್ಚಿದೆ ಆದರೆ ಅದು ಮನಷ್ಯನ ಬೆವರಿನಿಂದ ಅಲ್ಲ, ಮಶಿನ್ ಗಳ ಕೃತಕ ಬುದ್ಧಿಮತ್ತೆ ಮತ್ತು ಶಕ್ತಿಯಿಂದ. ಎಲ್ಲಡೆ ಯಂತ್ರಗಳು ಸದಿಲ್ಲದೆ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಕಮ್ಯುನಿಸ್ಟ್ ಮತ್ತು ಅದರ ಸಿದ್ಧಾಂತಗಳು ಕೇವಲ ಇತಿಹಾಸವಾಗಿ ಉಳಿಯುವ ಅಪಾಯ ಎದುರಾಗಿದೆ. ಇದನ್ನೆಲ್ಲ ಯೋಚಿಸಿದಾಗ ಕಮ್ಯುನಿಸ್ಟ್ ಸಿದ್ದಾಂತವನ್ನು ಹೊಸ ಶೋಧ,ಪ್ರಯೋಗ ಮತ್ತು ಅವಲೋಕನಕ್ಕೆ ಒಡ್ಡಿ ಜಾಗತೀಕರಣಕ್ಕೆ ಸವಾಲಾಗಿ ಪುನರ್ಪಿಸಬೇಕಾದ ಅಗತ್ಯವಿದೆ ಎನ್ನುವುದು ಇಂದಿನ ತುರ್ತುಗಳಲ್ಲಿ ಒಂದು ಎಂದು ಅನಿಸುತ್ತದೆ. ಸಲೀಂ ಅವರ ಈ ಪುಸ್ತಕದಲ್ಲಿ ಕಾರ್ಮಿಕರು ಯಾರು? ಎನ್ನುವುದಕ್ಕೆ ತುಂಬಾ ಸ್ಪಷ್ಟವಾದ ವಿವರಣೆ ನೀಡಲಾಗಿದೆ. *”ಕಾರ್ಮಿಕರು ಅಥವಾ ಶ್ರಮಿಕರು ಎಂದು ಯಾರನ್ನು ಕರೆಯಬಹುದೆಂಬುದರ ಬಗ್ಗೆ ‘ಕಮ್ಯುನಿಷ್ಟ ಪ್ರಣಾಳಿಕೆ’ ಯಲ್ಲಿ ಹೀಗೆ ಹೇಳಲಾಗಿದೆ. ‘ಕಾರ್ಮಿಕರು ಸಮಾಜದ ಒಂದು ವರ್ಗ, ಅವರು ತಮ್ಮ ಜೀವನೋಪಾಯವನ್ನು ಕೇವಲ ತಮ್ಮ ಶ್ರಮ (ದುಡಿಮೆ) ಮಾರುವುದರಿಂದಷ್ಟೇ ಪಡೆಯುತ್ತಾರೆ. ವಿನಃ ಯಾವುದೋ ಬಂಡವಾಳದಿಂದ ದೊರೆತ ಲಾಭದಿಂದಲ್ಲ. ಅವರ ಕಷ್ಟ-ಸುಖ, ಜೀವನ-ಮರಣ, ಬಾಳು-ಬದುಕು ಎಲ್ಲವೂ ಅವರ ಶ್ರಮಕ್ಕೆ ಎಷ್ಟು ಕೇಳಿಕೆ ಇದೆ ಎಂಬುದರ ಮೇಲೆ ಅವಲಂಬಿಸಿದೆ. ಈ ಕೇಳಿಕೆಯು ವ್ಯಾಪಾರ ಚೆನ್ನಾಗಿರುವ ಹಾಗೂ ಚೆನ್ನಾಗಿಲ್ಲದ ಸಮಯಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ.

ಹದಿನೆಂಟನೇ ಶತಮಾನದ ದ್ವಿತಿಯಾರ್ಧದಲ್ಲಿ ಇಂಗ್ಲೆಂಡಿನಲ್ಲಿ ಮತ್ತು ಜಗತ್ತಿನ ಇತರ ಎಲ್ಲ ನಾಗರಿಕ ದೇಶಗಳಲ್ಲಿ ಆದ ಕೈಗಾರಿಕಾ ಕ್ರಾಂತಿಯ ಫಲವಾಗಿ ಕಾರ್ಮಿಕ ವರ್ಗ ಹುಟ್ಟಿತು. ಉಗಿ ಎಂಜಿನ್ನಿನ ಅವಿಷ್ಕರಣೆಯಿಂದ ನಾನಾ ಬಗೆಯ ಯಂತ್ರಗಳು ಬಂದವು. ಇವು ಅತ್ಯಂತ ದುಬಾರಿ ಆಗಿದ್ದರಿಂದ ಭಾರಿ ಬಂಡವಾಳಗಾರರಷ್ಟೇ ಅವುಗಳನ್ನು ಕೊಳ್ಳಲು ಸಾಧ್ಯವಿತ್ತು. ಈ ಯಂತ್ರಗಳು ಅದುವರೆಗೂ ಅಸ್ತಿತ್ವದಲ್ಲಿದ್ದ ಇಡೀ ಉತ್ಪಾದನಾ ವಿಧಾನವನ್ನೇ ಬದಲಿಸಿದವು. ಈ ಮೊದಲಿದ್ದ ಕಾರ್ಮಿಕರ ಅಲ್ಪ ಸ್ವಲ್ಪ ಆಸ್ತಿ ಅಂದರೆ ಚಿಕ್ಕ ಉಪಕರಣ ಕೈಮಗ್ಗ
ಆದಿಗಳನ್ನು ನಿಷ್ಟ್ರಯೋಜಕವನ್ನಾಗಿ ಮಾಡಿ ಅವರನ್ನೂ ಬೀದಿಗೆ ಅಟ್ಟಿದವು. ಗುಡಿ ಕೈಗಾರಿಕೆಗಳೆಲ್ಲ ನಶಿಸಿತೊಡಗಿದವು. ಏಕೆಂದರೆ ಆಧುನಿಕ ಯಂತ್ರಗಳು ಗುಡಿ ಕೈಗಾರಿಕಾ ಕಾರ್ಮಿಕರಿಗಿಂತ ಹೆಚ್ಚು ಅಗ್ಗವಾದ ಹಾಗೂ ಉತ್ತಮವಾದ ಸರಕುಗಳನ್ನು ಉತ್ಪಾದಿಸಿದವು. ಹೀಗಾಗಿ ಈ ಯಂತ್ರಗಳ ಒಡೆಯರಾದ ಬಂಡವಾಳಗಾರರು ಬೇಗನೆ ಎಲ್ಲದಕ್ಕೂ ತಾವೇ ಒಡೆಯರಾದವರು.ಯಂತ್ರಗಳ ಮೂಲಕ ಶ್ರಮವನ್ನು ಹೆಚ್ಚಾಗಿ ವಿಭಜಿಸಿದ್ದರಿಂದ ಈ ಮೊದಲು ಕಾರ್ಮಿಕನೊಬ್ಬ ಇಡೀ ಒಂದು ವಸ್ತುವನ್ನು ತಯಾರಿಸುತ್ತಿದ್ದರೆ ಈಗ ಆತ ಅದರ ಒಂದು ಭಾಗವನ್ನಷ್ಟೇ ತಯಾರಿಸುವವನಾದ. ಇದು ವಸ್ತುವನ್ನು ಹೆಚ್ಚು ಶೀಘ್ರವಾಗಿಯೂ, ಹೆಚ್ಚು ಅಗ್ಗವಾಗಿಯೂ ಪೂರೈಸಲು ಸಾಧ್ಯ ಮಾಡಿಕೊಟ್ಟಿತು. ಇದರಿಂದ ಕಾರ್ಮಿಕನ ಶ್ರಮ ಒಂದು ಯಂತ್ರವಾಗಿ ಮಾರ್ಪಟ್ಟಿತು.

ನೂಲುವ ಯಂತ್ರಗಳಿಂದ ಆರಂಭವಾದ ಈ ಸ್ಪರ್ಧೆ ನಂತರ ಒಂದಾದ ಮೇಲೊಂದರಂತೆ ಇತರ ಕೈಗಾರಿಕೆಗಳಿಗೂ ವ್ಯಾಪಿಸಿ ಎಲ್ಲವೂ ಕಾರ್ಖಾನೆ ಪದ್ಧತಿಯ ಅಧಿಪತ್ಯಕೊಳ್ಳಗಾದವು. ಹಾಗೂ ಅವೆಲ್ಲ ಬಂಡವಾಳಶಾಹಿಗಳ ಆಧೀನವಾದವು. ಪರಿಣಾಮವಾಗಿ ಸಮಾಜದಲ್ಲಿ ಎರಡು ಹೊಸ ವರ್ಗಗಳು ಉದ್ಭವಿಸಿದವು. ಒಂದು ಬಂಡವಾಳಗಾರರ ವರ್ಗ, ಇನ್ನೊಂದು ಕಾರ್ಮಿಕರ ವರ್ಗ, ಈ ಎರಡೂ ವರ್ಗಗಳ ಹಿತಾಸಕ್ತಿಗಳು ಹೊಂದಿಕೆಯಾಗಲಾರದಂತೆ ಪರಸ್ಪರ ವಿರುದ್ಧವಾದವು” ಮತ್ತು ಇದೇ ಕ್ರಾಂತಿಗೆ ನಾಂದಿಯಾಯಿತು ಎಂದು ಹೇಳಬಹುದು. ಆದರೆ ಈಗ ಪರಿಸ್ಥಿತಿ ಇನ್ನಷ್ಟು ಕೈಮೀರಿದೆ. ಇಲ್ಲಿಯವರೆಗೆ ಕಾರ್ಮಿಕ ಯಾಂತ್ರೀಕೃತ ಅಧುನಿಕ ಜಗತ್ತಿನ ಒಂದು ಭಾಗವಾಗಿ ಅಷ್ಟೂ ಇಷ್ಟೂ ಅಸ್ತಿತ್ವ ಉಳಿಸಿಕೊಂಡವನು ಈಗ ಎಲ್ಲವೂ ಡಿಜಿಟಲಿಕರಣಗೊಳ್ಳುತ್ತಿರು ಕಾಲದಲ್ಲಿ ತನ್ನ ಅಸ್ತಿತ್ವೇ ಕಳೆದುಕೊಂಡು ಬೀದಿ ಪಾಲಾಗುತ್ತಿದ್ದಾನೆ. ದುಡಿಯುವ ವರ್ಗಕ್ಕೆ ದುಡಿಮೆಯೇ ಬಂಡವಾಳ ಅದನ್ನೇ ಮಾರಾಟ ಮಾಡಿ ಬದುಕುಬೇಕು. ಮನುಷ್ಯ ಮಾಡುವ ಎಲ್ಲ ಕೆಲಸಗಳನ್ನು ಯಂತ್ರಗಳೇ ಮಾಡಹತ್ತಿದರೆ ಮನುಷ್ಯನ ಬೆವರಿಗೆ, ದುಡಿಮೆಗೆ ಎಲ್ಲಿಯ ಬೆಲೆ. ಭಾರತದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ದೊಡ್ಡ ದೊಡ್ಡ ಫ್ಯಾಕ್ಟರಿಗಳು ಮಾಡರ್ನ್ ಟೆಕ್ನಾಲಜಿಗಳನ್ನು ಅವಲಂಬಿಸುವ ಮೂಲಕ ಕಾರ್ಮಿಕರನ್ನು ಮನೆಗೆ ಕಳಿಸುವ ಕೆಲಸ ಮಾಡುತ್ತಿವೆ. ಅಷ್ಟೇ ಏಕೆ ಸಣ್ಣ ಪುಟ್ಟ ಉದ್ಯಮಗಳಲ್ಲಿ, ಹೊಟೇಲ್ ರೆಸ್ಟಾರೆಂಟ್ ಗಳು ಕೂಡ ರುಬೂಟ್ ಗಳ ಮೂಲಕ ಕಾರ್ಯ ನಿರ್ವಹಿಸುವ ಮೂಲಕ ಶ್ರಮಿಕ ವರ್ಗವನ್ನು ಕಡೆಗಣಿಸುತ್ತಿವೆ. ಇಲ್ಲಿ ಕಾರ್ಮಿಕ ಶಕ್ತಿ ಮಹತ್ವ ಕಡಿಮೆ ಆದಂತೆ ಕಮ್ಯುನಿಸ್ಟ್ ದ ಅಳಿವು ಉಳಿವಿನ ಪ್ರಶ್ನೆ ಕೂಡ ಮಹತ್ವ ಪಡೆದುಕೊಳ್ಳುತ್ತಿದ್ದೆ. ಹಾಗಾದರೆ ಇಂದಿನ ದಿನಮಾನಗಳಲ್ಲಿ ಕಮ್ಯುನಿಸ್ಟ್ ದ ಅಗತ್ಯ ಇದಯೋ ಇಲ್ಲವೋ ಎನ್ನುವುದು ಈ ಕಾಲದ ಅತಿ ದೊಡ್ಡ ಮತ್ತು ಪ್ರಶ್ನೆಯಾಗುತ್ತದೆ. ತಮ್ಮ ಸಿದ್ದಾಂತದ ಕುರಿತು ಇನ್ನೂ ಆಶಾವಾದಿಗಳಾಗಿರುವ ಎಡಪಂಥೀಯ ನಾಯಕರು ಇದರತ್ತ ಗಮನ ಹರಿಸಬೇಕಾಗಿದೆ. ದುಡಿಯುವ ಕೈಗಳಿಗೆ ಕೆಲಸ ಕೊಡಿಸುವ ನಿಟ್ಟಿನಲ್ಲಿ ಅವರು ಆಲೋಚಿಸಬೇಕಾಗಿದೆ. ಮತ್ತು ನಿರುದ್ಯೋಗಿ ಯವಕರಿಗೆ ಉದ್ಯೋಗ ದೊರಕಿಸುವ ದಿಶೆಯಲ್ಲಿ ಅಂದೋಲನಗಳನ್ನು ಹೋರಾಟಗಳನ್ನು ರೂಪಿಸುವ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುಲು ಹೋರಾಡಬೇಕಿದೆ ಅನಿಸುತ್ತದೆ. ಕೃಷಿ ಪ್ರಧಾನ ಭಾರತದಲ್ಲಿ ಬಹು ದೊಡ್ಡ ದುಡಿಯುವ ವರ್ಗವೆಂದರೆ ರೈತಾಪಿ ವರ್ಗವೊಂದೇ. ಅವರ ಕಷ್ಟ ಸುಖಗಳಲ್ಲಿ ಒಂದಾಗುವ ಮೂಲಕ, ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತ ಅವುಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುವ ಮೂಲಕ ಕಮ್ಯುನಿಸ್ಟ್ ಸಿದ್ದಾಂತವನ್ನು ಜೀವಂತ ಇಡಬೇಕಾದ ಅಗತ್ಯವಿದೆ.

ಗೋಕಾಕ ನಾಡಿನ ಖ್ಯಾತ ಸಾಹಿತಿ ಮಹಾಲಿಂಗ ಮಂಗಿ ಅವರ ಕೋರಿಕೆಯ ಮೇರೆಗೆ ಸಲೀಂ “ಭಾರತಿ” ಅವರ “ಕಾರ್ಲ್ ಮಾರ್ಕ್ಸ” ಜೀವನ ಪರಿಚಯ ಪುಸ್ತಕವನ್ನು ಓದಿ ಬರೆಯಲು ಕುಳಿತಾಗ ಯೋಚನಾ ಲಹರಿ ಪೂರ್ಣವಿರಾಮ ಇಲ್ಲದಂತರ ಹರಿದಿದ್ದು ಹೀಗೆ. ಬರಹಕ್ಕೆ ಒಂದು ಮಿತಿ ಇರುವದರಿಂದ ಲೇಖನವನ್ನು ಸಿಮೀತಗೊಳಿಸಬೇಕಾದ ಅನಿವಾರ್ಯತೆ. ಪುಸ್ತಕವನ್ನು ಪುನರ್ ಮುದ್ರಿಸುವ ನೆಪದಲ್ಲಿ ಮತ್ತೊಮ್ಮೆ ಕಮ್ಯುನಿಸ್ಟ್ ಸಿದ್ದಾಂತದತ್ತ ಹೊರಳಿ ನೋಡುವಂತೆ ಮಾಡಿದ ಹಿರಿಯ ಸಾಹಿತಿ ಮಹಾಲಿಂಗ ಮಂಗಿ ಸರ್ ಅವರಿಗೂ, ಪುಸ್ತಕ ಲೇಖಕರಾದ ಸಲೀಂ “ಭಾರತಿ” ಅವರಿಗೂ ಅನಂತಾನಂತ ಅಭಿನಂದನೆಗಳು ಮತ್ತು ಧನ್ಯವಾದಗಳು.

-ಅಶ್ಫಾಕ್ ಪೀರಜಾದೆ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x