ಜಾದು ಕಾರ್ಯಕ್ರಮ: ಹೆಚ್. ಶೌಕತ್ ಆಲಿ ಮದ್ದೂರು


ಒಂದು ದಿನ ಶಾಲೆಗೆ ಒಬ್ಬ ಜಾದುಗಾರ ಬಂದ. ಬಂದವನೇ ಅದು ಇದು ಎನ್ನದೆ ಸೀದಾ ತನ್ನ ಪರಿಚಯ ಮಾಡಿಕೊಂಡ “ಎಲ್ಲರಿಗೂ ನಮಸ್ಕಾರ ನನ್ನ ಹೆಸರು ರಾಜ, ನಾನು ಮನರಂಜನೆಗಾಗಿ ಜಾದು ಮಾಡುತ್ತೇನೆ. ಶಾಲೆಯ ಮಕ್ಕಳಿಗೆ ಒಂದು ಅವಧಿ ಬಿಡುವು ಮಾಡಿಕೊಡಿ ಹಾಗೆ ಮಕ್ಕಳನ್ನು ಒಂದು ಕಡೆ ಸೇರಿಸಿ, ನಾನು ನಿಮ್ಮಿಂದ ಏನನ್ನು ನಿರೀಕ್ಷಿಸುವುದಿಲ್ಲ ದಯಮಾಡಿ ಅವಕಾಶ ಮಾಡಿಕೊಡಿ ಮೇಡಂ “ಎಂದು ಮುಖ್ಯ ಶಿಕ್ಷಕಿಯಲ್ಲಿ ಬೇಡಿಕೊಂಡಾಗ ಮುಖ್ಯ ಶಿಕ್ಷಕಿ ಕೆಲವು ಶರತ್ತುಗಳನ್ನು ಹೇಳಿ ಸಮಯ ಒಂದು ಅವಧಿ ಮಾತ್ರವೇ ಎಂದು ಹೇಳಿ ಅನುಮತಿ ಕೊಟ್ಟರು.

ಎಲ್ಲಾ ಶಿಕ್ಷಕ ಶಿಕ್ಷಕಿಯರು ತಮ್ಮ ತಮ್ಮ ತರಗತಿಯಲ್ಲಿ ಬೋಧಿಸುತ್ತಿದ್ದರು. ಅಟೆಂಡರ್ ಮೆಮೋ ತಂದು ಶಿಕ್ಷಕರಿಗೆ ಸಹಿ ಹಾಕಿ ಎಲ್ಲಾ ಮಕ್ಕಳನ್ನು ತರಗತಿವಾರು ಲೈನ್ ಮಾಡಿಕೊಂಡು ಹಾಲಿಗೆ ಬರಲು ತಿಳಿಸಿದರು.
ಒಂದು ಅವಧಿ ಮಕ್ಕಳಿಗೆ ಮನರಂಜನೆ. ಹಾಗೆಯೇ ಶಿಕ್ಷಕರಿಗೂ ಸ್ವಲ್ಪ ಬಿಡುವು ಸಿಕ್ಕಿತು. ಐದು ನಿಮಿಷದಲ್ಲಿ ಎಲ್ಲಾ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಸೇರಿದರು ಮುಖ್ಯ ಶಿಕ್ಷಕಿಯರು ನನ್ನನ್ನು ಕರೆದು” ಜಾದುಗಾರನ ಪರಿಚಯ ಎಲ್ಲರಿಗೂ ಮಾಡಿ ಅವರಿಗೆ ಎಲ್ಲರ ಪರವಾಗಿ ಸ್ವಾಗತ ಕೋರಿ ಸರ್ “ಎಂದರು ನಾನು ಆಯಿತು ಎಂದೆ.

ಜಾದುಗಾರನ ಪರಿಚಯ ಹಾಗೂ ಸ್ವಾಗತ ಮಾಡಿದ ನಂತರ ಎಲ್ಲಾ ವಿದ್ಯಾರ್ಥಿಗಳಿಂದ ಜೋರಾದ ಚಪ್ಪಾಳೆಯಿಂದ ಸ್ವಾಗತಿಸಲಾಯಿತು. ಜಾದುಗಾರ ಒಂದೊಂದಾಗಿ ತನ್ನ ಕೈಚಳಕದಿಂದ ಕರಾಮತ್ತು ತೋರಿಸುತ್ತಿದ್ದ ತನ್ನ ಜೇಬಿನಲ್ಲಿ ಒಂದು ಕರ್ಚೀಫ್ ಇದೆ, ಇದು ಯಾರಾದರೂ ತೆಗೆದುಕೊಳ್ಳಿ ಎಂದಾಗ ಮುಂದಿನ ಸಾಲಿನಲ್ಲಿ ಕುಳಿತಿದ್ದ ತುಂಟ ಹುಡುಗ ಎದ್ದಿದ್ದೆ ಅವನ ಬಳಿ ಬಂದು ಜೇವಿಗೆ ಕೈ ಹಾಕಿ ತೆಗೆಯಲು ಪ್ರಾರಂಭಿಸಿದಂತೆ ಸುಮಾರು 30 ಕರ್ಚಿಫ್ ಗಳು ಬಂದವು ಎಲ್ಲರೂ ಚಪ್ಪಾಳೆ ಹೊಡೆದರು.ಇನ್ನೊಂದು ಹುಡುಗನನ್ನು ಜಾದೂಗಾರನೇ ಆಯ್ಕೆ ಮಾಡಿ ನೀನು ಬಾ ಇಲ್ಲಿ ಎಂದಾಗ ಇನ್ನೊಬ್ಬ ಹುಡುಗ ವೇದಿಕೆಯಲ್ಲಿ ಹೋಗಿ ಅವನ ಮುಂದೆ ನಿಂತುಕೊಂಡ. ಹುಡುಗ ಜಾದುಗಾರನನ್ನು ನೋಡುತ್ತಿದ್ದಾನೆ. ಜಾದುಗಾರ ಹುಡುಗನ ಸುತ್ತ ಒಂದು ಸುತ್ತು ಹಾಕಿ ಅನುಮಾನಿಸಿ ನೋಡುತ್ತಾನೆ. ಅಷ್ಟಕ್ಕೇ ಸೇರಿದ ವಿದ್ಯಾರ್ಥಿಗಳಿಗೆ ನಗು ಮತ್ತು ಏನೋ ಕುತೂಹಲ.

ಜಾದುಗಾರ ‘ನೀನು ಕೋಳಿನೋ ಹುಂಜನೋ?’ ಎಂದು ಕೇಳಿದ ಹುಡುಗ ಎಲ್ಲರನ್ನೂ ನೋಡಿ ‘ನಾನು ಕೋಳಿ ಅಲ್ಲ ಹುಂಜ’ ಎಂದ. ಜಾದುಗಾರ ಆ ಹುಡುಗನ ಸುತ್ತ ಇನ್ನೊಂದು ಸುತ್ತು ಹಾಕಿ’ಇಲ್ಲ ನನಗೆ ಅನುಮಾನ ನೀನು ಕೋಳಿನೆ’ ಎಂದ ಹುಡುಗ ‘ಇಲ್ಲ ನಾನು ಹುಂಜನೆ’ ಎಂದ.

ಜಾದುಗಾರ ‘ನೀವೇನ್ ಅಂತೀರಾ?’ ಎಂದಾಗ ಎಲ್ಲರೂ ‘ಕೋಳಿ ಅಲ್ಲ ಹುಂಜ’ ಎಂದೇ ಹೇಳಿದರು ಜಾದುಗಾರ ‘ಇಲ್ಲ ಇಲ್ಲ ಇದು ನಾಟಿ ಮೊಟ್ಟೆ ಕೋಳಿ’ ಎಂದ ಹುಡುಗನ ಜೇಬಿಗೆ ಜಾದುಗಾರ ಕೈ ಹಾಕಿ ಒಂದು ಮೊಟ್ಟೆ ತೆಗೆದು ಎಲ್ಲರಿಗೂ ತೋರಿಸಿದ ಎಲ್ಲರಿಗೂ ಆಶ್ಚರ್ಯ ಹುಡುಗನಿಗೂ ದಿಗಿಲು ಜಾದುಗಾರ ಇನ್ನೊಂದು ಜೇಬಿಗೆ ಕೈ ಹಾಕಿ ಇನ್ನೊಂದು ಮೊಟ್ಟೆ ತೆಗೆದು ಎಲ್ಲರಿಗೂ ತೋರಿಸಿದ. ವಿದ್ಯಾರ್ಥಿಗಳು ಚಪ್ಪಾಳೆ ಶಿಲ್ಲೆ ಹೊಡೆದು ಮಜಾ ಅನುಭವಿಸಿದರು. ಜಾದುಗಾರ ಎಲ್ಲರನ್ನೂ ಹೇಳಿದ ‘ಇದು ಕೋಳಿ ಹುಂಜ ಪ್ರಶ್ನೆ ಅಲ್ಲ ನಮ್ಮ ಜಾದುಗಾರಿಕೆಯ ಮನರಂಜನ ವಿಧಾನ ಇಷ್ಟ ಆಯ್ತಾ? ಎಂದ

ಈಗ ಒಂದು ಹುಡುಗಿನ ಜಾದುಗಾರ ಕರೆದ ‘ಏನಮ್ಮ ನಿನ್ನ ಹೆಸರು?’ ಅವಳು ‘ಸುಮಾ’ ಎಂದಳು. ‘ಒಳ್ಳೆ ಹೆಸರು’ ಜೋರಾಗಿ ಚಪ್ಪಾಳೆ ಆಯಿತು.

‘ಸುಮಾ ನಿನಗೆ ರೂ.5 ಕೊಡ್ತೀನಿ ನನಗೆ ನೀನು ಚಿಲ್ಲರೆ ಕೊಡಬೇಕು’ ಮಧ್ಯದಲ್ಲೆ ಸುಮಾ ‘ನನ್ನ ಹತ್ತಿರ ದುಡ್ಡಿಲ್ಲ’ ಎಂದಳು. ‘ ಸರಿ ಐದು ರೂಪಾಯಿ ನಾಣ್ಯ ಕೈಯಲ್ಲಿ ಗಟ್ಟಿಯಾಗಿ ಮುಂಚಿಕೊಂಡಿರು’ ಎಂದಾಗ ಜಾದುಗಾರ ಹೇಳಿದಂತೆ ಗಟ್ಟಿಯಾಗಿ ನಾಣ್ಯ ಮುಷ್ಟಿಯಲ್ಲಿ ಮುಚ್ಚಿಕೊಂಡಳು. ಜಾದುಗಾರ ‘ಏನ್ರಪ್ಪ ನಾನು ಐದು ರೂಪಾಯಿ ನಾಣ್ಯ ಕೊಟ್ಟೆ ನೋಡಿದ್ರಲ್ಲ’ ವಿದ್ಯಾರ್ಥಿಗಳು ಹುಂ ಎಂದರು. ಅದೇನು ಶಬ್ದಗಳನ್ನು ಬಡ ಬಡ ಉಚ್ಚಾರಿಸಿ ಶಬ್ದ ಮಾಡಿದಂಗೆ ಮಾಡಿ ಮಂತ್ರ ಹೇಳಿ ಆ ಹುಡುಗಿಗೆ ಕಣ್ಣು ಮುಚ್ಚಲು ಹೇಳಿ ಮತ್ತೆ ಪ್ರಶ್ನೆ ಕೇಳಿದನು. ‘ಜಾದುಗಾರ ಏನಮ್ಮ ಐದು ರೂಪಾಯಿ ಚಿಲ್ಲರೆ ಇದಿಯಾ?’ಎನ್ನುತ್ತಾನೆ. ಸುಮ ‘ರೂ. 5 ಗೆ ಇಲ್ಲ ಅಂದ್ರೆ ರೂ.50 ಗೆ ಚಿಲ್ಲರೆ ಬೇಕಾದರೆ ಹೇಳಿ ಕೊಡುತ್ತೇನೆ ‘ ಎಂದು ಕಣ್ಮುಚ್ಚಿ ಹೇಳುತ್ತಾಳೆ. ಜಾದುಗಾರ ‘ನನಗೆ ರೂ.5 ಚಿಲ್ಲರೆ ಸಾಕು ಕೊಡಮ್ಮ’ ಎನ್ನುತ್ತಾನೆ ಸುಮಾ ತನ್ನ ಮುಷ್ಟಿಯಲ್ಲಿ ಮುಚ್ಚಿದ್ದ ನಾಣ್ಯ ತೆಗೆದು ಒಂದೊಂದು ರೂಪಾಯಿಯ ನಾಣ್ಯ ಎಣಿಸಿ ಕೊಡುತ್ತಾಳೆ.’ ಕೊಡುವಾಗ ಒಂದು ಎರಡು ಮೂರು ನಾಲ್ಕು ಎಂದು ಹೇಳಿಕೊಡು’ಎಂದ ಅವನು. ಇವಳು ‘ಆಯ್ತು ‘ಎನ್ನುತ್ತಾಳೆ.

ಜಾದುಗಾರ ‘ನಾನು ಕೊಟ್ಟಿದ್ದು ಐದು ರೂಪಾಯಿ ನಾಣ್ಯ ನೀನು ಕೊಟ್ಟಿದ್ದು 4 ಒಂದು ರೂಪಾಯಿ ನಾಣ್ಯ ಒಂದು ರೂಪಾಯಿ ಇಲ್ಲ ಅದನ್ನು ಕೊಡು’ ಎನ್ನುತ್ತಾನೆ.

ಸುಮಾ ನಾನು ಸರಿಯಾಗಿಯೇ ಕೊಟ್ಟಿದ್ದೇನೆ ಎನ್ನುತ್ತಾಳೆ ಆಗ ಜಾದುಗಾರ ತನ್ನ ಮಂತ್ರಶಕ್ತಿಯಿಂದ ಸುಮಾ ಮುಡಿದಿರುವ ಗುಲಾಬಿ ಹೂವಿನಲ್ಲಿ ಒಂದು ರೂಪಾಯಿ ನಾಣ್ಯ ಬಚ್ಚಿಟ್ಟಿರುವ ಸಂಗತಿ ಗೊತ್ತಾಗಿ ಅದನ್ನು ತೆಗೆದು ಇನ್ನೊಂದು ಹುಡುಗನಿಗೆ ಕೊಟ್ಟು ಎಣಿಸುವಂತೆ ಹೇಳುತ್ತಾನೆ. ಹುಡುಗ ಒಂದೊಂದು ರೂಪಾಯಿ ಐದು ನಾಣ್ಯ ಸರಿಯಾಗಿದೆ ಎಂದಾಗ ಜೋರಾದ ಚಪ್ಪಾಳೆ ಮೊಳಗುತ್ತದೆ. ಮತ್ತೆ ಒಂದು ಭಾರಿ ಸುಮಳ ಮುಖದ ಮುಂದೆ ಕೈಗಳ ಚಮತ್ಕಾರ ಮಾಡಿ ಮಂತ್ರಿಸಿ ಕಣ್ಣು ಬಿಡುವುದಾಗಿ ಜಾದುಗಾರ ಹೇಳುತ್ತಾನೆ

ಸುಮಾ ನಿಧಾನವಾಗಿ ಕಣ್ಣು ಬಿಟ್ಟು ಎಲ್ಲರನ್ನೂ ನೋಡುತ್ತಾಳೆ, ಜಾದುಗಾರ ಈಗ ಇಲ್ಲಿ ಏನಾಯ್ತು ಎಂದು ಕೇಳುತ್ತಾನೆ ಸುಮ ಏನು ಆಗಿಲ್ಲ ಎಂದಾಗ ಮತ್ತೊಮ್ಮೆ ಜೋರಾದ ಚಪ್ಪಾಳೆ ಆಗುತ್ತದೆ. “ಪ್ರೀತಿಯ ಮಕ್ಕಳೇ ಖುಷಿಯಾಯ್ತಾ? ಇನ್ನೊಂದು ಜಾದೂ ಮಾಡಿ ನನ್ನ ಕಾರ್ಯಕ್ರಮ ಮುಗಿಸುತ್ತೇನೆ” ಎಂದು ಮುಖ್ಯ ಶಿಕ್ಷಕಿಯ ಕಡೆ ಒಂದು ನೋಟ ಜಾದುಗಾರ ಹಾಕುತ್ತಾನೆ. “ಈಗ ಮಾಡುವ ಜಾದುಗೆ ದೊಡ್ಡವರು ಬೇಕು ಶಿಕ್ಷಕರು ಯಾರಾದ್ರೂ ಬನ್ನಿ” ಎಂದು ಆಹ್ವಾನಿಸುತ್ತಾನೆ. ‘ನಿಮಗೇನು ತೊಂದರೆ ಆಗುವುದಿಲ್ಲ ಇದೊಂದು ಕಲೆ ಅಷ್ಟೇ’ ಎಂದು ಕರೆ ಕೊಡುತ್ತಾನೆ. ಶಿಕ್ಷಕರು ‘ನೀವು ಹೋಗಿ, ನೀವು ಹೋಗಿ, ನಾನು ಹೋಗೋದಿಲ್ಲಪ್ಪಾ ಏನಾದರೂ ಹೆಚ್ಚು ಕಡಿಮೆ ಆದರೆ ಮೇಡಂ, ನಾನು ಹೋಗೋದಿಲ್ಲ, ನಾನು ಹೋಗೋದಿಲ್ಲ ‘ಎಂದು ಹೇಳಿಕೊಳ್ಳುತ್ತಿದ್ದರು ‘ಬೇಡ ಸುಮ್ಮನೆ ಇರಿ ಮಕ್ಕಳ ಮುಂದೆ ಅವನು ಜೇಬಿಗೆ ಕೈ ಹಾಕಿ ಇನ್ನೇನು ತೆಗೆದುಬಿಟ್ಟರೆ ಬ್ಯಾಡಪ್ಪ ರಂಪಾಟ ನಮ್ಮ ಹುಡುಗರು ಆಡ್ಕೊಂಡು ನಗ್ತಾರೆ’ ಎಂದೆಲ್ಲ ತಮ್ಮ ತಮ್ಮಲ್ಲಿ ಮಾತನಾಡಿ ಕುಳಿತುಕೊಂಡಿದ್ದರು. ವಿದ್ಯಾರ್ಥಿಗಳು ಅವರವರ ಫೇವರೆಟ್ ಶಿಕ್ಷಕರಿಗೆ ಕೂಗಿ ಕೂಗಿ ಹೇಳುತ್ತಿದ್ದರು ‘ಸರ್, ನೀವು ಹೋಗಿ,ಸರ್ ನೀವು ಹೋಗಿ ಏನು ಆಗೋಲ್ಲ ‘ ಎಂದು ಹೇಳುತ್ತಿದ್ದರು. ಅಷ್ಟರಲ್ಲೇ ಈ ಕಾರ್ಯಕ್ರಮದಲ್ಲಿ ‘ನನ್ನ ನನಗೆ ಕರೆ ಕೊಟ್ಟ ನನ್ನನ್ನು ಒಳ್ಳೆ ಮಾತುಗಳಿಂದ ಸ್ವಾಗತ ಮಾಡಿದ ಶಿಕ್ಷಕರು ಸರ್ ತಾವೇ ದಯಮಾಡಿ ಬನ್ನಿ ಸಾರ್ ನಾನು ನಿಮಗೆ ಸ್ವಾಗತ ಕೋರುತ್ತೇನೆ ಪ್ಲೀಸ್ ವೆಲ್ಕಮ್ ಸರ್ ವಿದ್ಯಾರ್ಥಿಗಳಿಂದ ಜೋರಾಗಿ ಚಪ್ಪಾಳೆ ನಿಮ್ಮ ಸರ್ ಗೆ’ ಎಂದು ತಾನೇ ಆಯ್ಕೆ ಮಾಡಿಕೊಂಡ.

ನಾನು ಅಳಿದುಳಿದವರಲ್ಲಿ ಕಂಡಂತೆ ನಾನೊಬ್ಬನೇ ಎಂದು ಮನಸ್ಸಿನಲ್ಲಿ ಅಂದುಕೊಂಡು ಒಂದೊಂದು ಹೆಜ್ಜೆ ಹಾಕುತ್ತಿದ್ದಾಗ ಎಲ್ಲಿ ನಗೆ ಪಾಟಲಾಗುತ್ತೇನೋ ಶಿಕ್ಷಕರು ಆಡಿಕೊಳ್ಳುವರು ಅಥವಾ ಜಾದುವಿನಂತೆ ನನಗೆ ಏನಾದರೂ ತೊಂದರೆ ಆದಿತೋ ಏನೋ ಎಂಬ ದಿಗಿಲುಗಳೊಂದಿಗೆ ವೇದಿಕೆಯಲ್ಲಿ ಹೋಗಿ ನಿಂತೆ ಎಲ್ಲಾ ಮಕ್ಕಳು ಚಪ್ಪಾಳೆ ಹಾಕಿದರು ಶಿಕ್ಷಕ ಶಿಕ್ಷಕಿಯರೆಲ್ಲರೂ ಮೌನವಾದರು.

‘ ಮೇಷ್ಟ್ರೇ ಹೆದರಬೇಡಿ ನಿಮ್ಮ ಜೊತೆ ಇಬ್ಬರು ನಿಮ್ಮ ಶಿಷ್ಯರು ಇರುತ್ತಾರೆ ಇಬ್ಬರು ಹುಡುಗರು ಬನ್ನಿ’ ಎಂದಾಗ ನಾನು ನಾನು ಎಂದು ಒಂದು 20 ವಿದ್ಯಾರ್ಥಿಗಳು ಓಡೋಡಿ ಬಂದರು. ಜಾದುಗಾರ ಅವರಲ್ಲಿ ಇಬ್ಬರನ್ನು ಮಾತ್ರ ಆಯ್ಕೆ ಮಾಡಿಕೊಂಡ. ನನ್ನ ಎಡ ಬಲಕ್ಕೆ ನಿಲ್ಲಿಸಿದರು ಆವಾಗ್ಲೇ ನನಗೆ ಧೈರ್ಯ ಬಂದಿದ್ದು. ವಿದ್ಯಾರ್ಥಿಗಳಿಗೆ ಶಿಕ್ಷಕರ ಶಕ್ತಿ. ಅದೇ ಶಿಕ್ಷಕರಿಗೆ ಮಕ್ಕಳಿಂದಲೇ ಧೈರ್ಯ ಎಂಬುದು ನನ್ನ ಜೀವನದಲ್ಲಿ ಎಂದು ಸಾಬೀತಾಯಿತು.

ಜಾದುಗಾರ ನನ್ನ ತನ್ನ ಪೆಟ್ಟಿಗೆಯಲ್ಲಿ ಒಂದು ಕಪ್ಪು ಬ್ಯಾಗ್ ತಂದು ನನ್ನ ಮುಖಕ್ಕೆ ಮುಚ್ಚುವಂತೆ ಹಾಕಿದ ‘ಏನಾದರೂ ಕಾಣಿಸುತ್ತಿಯ ಸರ್?’ ಎಂದಾಗ ನಾನು ಸಹಜವಾಗಿ ‘ಹೌದು ಕಾಣ್ತಾ ಇದೆ’ ಎಂದೆ. ‘ನೋಡಿ ನಿಮ್ಮ ಸರ್ ಸುಳ್ಳು ಹೇಳೊಲ್ಲ ಮತ್ತೊಮ್ಮೆ ಅವರಿಗೆ ಚಪ್ಪಾಳೆ ಹಾಕಿ’ ಎಂದು ಜಾದುಗಾರ ಸಾರಿದ.

ಈಗ ಆ ಕಪ್ಪು ಬ್ಯಾಕ್ ತೆಗೆದು ಕಣ್ಣಿಗೆ ಪಟ್ಟಿ ಕಟ್ಟಿ ನಂತರ ಆ ಕಪ್ಪುಬ್ಯಾಗ್ನಿಂದ ಮುಖವನ್ನು ಸಂಪೂರ್ಣ ಮುಚ್ಚಿದ. ವಿದ್ಯಾರ್ಥಿಗಳು ಶಿಕ್ಷಕ ಶಿಕ್ಷಕಿಯರು ಶಿಕ್ಷಕೇತರರು ಎಲ್ಲರೂ ಕುತೂಹಲ ಜಾಸ್ತಿ ಆಯ್ತು. ಹಾಲಿನಲ್ಲಿ ತುಂಬಿಕೊಂಡಿದ್ದ ವಿದ್ಯಾರ್ಥಿಗಳಿಂದ ಸದ್ದು ಗದ್ದಲ ಅಡಗಿ ಹೋಯಿತು. ನಿಶಬ್ದ ಎಲ್ಲಡೆಯೂ ಆವರಿಸಿಕೊಂಡಿತು. ನಂತರ ಜಾದುಗಾರ ಹೋಗಿ ತನ್ನ ಪೆಟ್ಟಿಗೆಯಲ್ಲಿ ಒಂದು ಹಗ್ಗ ತಂದು ಅದನ್ನು ನೇಣಿಗೆ ಹಾಕಿದಂತೆ ಗಂಟು ಹಾಕಿ ನನ್ನ ಕುತ್ತಿಗೆಗೆ ಹಾಕಿ ಹಗ್ಗದ ಎರಡು ಕಡೆಯ ತುದಿಯನ್ನು ಇಬ್ಬರು ವಿದ್ಯಾರ್ಥಿಗಳಿಗೆ ಜೋರಾಗಿ ಎಳೆಯಲು ಜಾದುಗಾರ ಹೇಳಿದಾಗ ಮುಂದೆ ಕುಳಿತಿದ್ದ ವಿದ್ಯಾರ್ಥಿಗಳು ಜೋರಾಗಿ ಕೂಗಿ ಹೇಳುತ್ತಿದ್ದರು. ” ಬೇಡ ಬೇಡ ಸರ್ ಗೇನಾದರೂ ಆಗಿ ಹೋಗುತ್ತದೆ ಬಿಡಿ ಅವರನ್ನ ಬಿಡಿ ಬಿಟ್ಟು ಬಿಡಿ” ಎಂದು ಕುಳಿತಿದ್ದ ಅವರೆಲ್ಲ ಅಳುವುದಕ್ಕೆ ಶುರು ಮಾಡಿದರು. ಗಲಾಟೆ ಜಾಸ್ತಿ ಆಯ್ತು.ಪಿ ಟಿ ಸರ್ ಮುಖ್ಯ ಶಿಕ್ಷಕರು ಮತ್ತು ಕೆಲ ಶಿಕ್ಷಕರು ಸಮಾಧಾನ ಮಾಡಿದರು. ಕೆಲ ಮಕ್ಕಳು ಅಳುತ್ತಲೇ ಇದ್ದವು ಜಾದುಗಾರ ನನ್ನ ಬಲ ಮತ್ತು ಎಡಕ್ಕೆ ನಿಂತಿರುವ ವಿದ್ಯಾರ್ಥಿಗಳನ್ನು ಕುರಿತು ಇನ್ನೊಮ್ಮೆ ಜೋರಾಗಿ ಹಗ್ಗ ಎಳೆಯಲು ಹೇಳಿದಾಗ ಅವರು ಹಾಗೆ ಮಾಡಿದಾಗ ಹಗ್ಗ ಎರಡು ತುಂಡಾಗಿ ಹೋಯಿತು ‘ಇದೆಲ್ಲ ಹೇಗಾಯಿತು? ಎಂದು ಕುತೂಹಲ ಎಲ್ಲರಿಗೂ.

ಈಗ ನನಗೆ ಹಾಕಿರುವ ಮುಖವಾಡದಲ್ಲಿರುವ ಕಪ್ಪು ಬ್ಯಾಂಡನ್ನು ತೆಗೆದು ನಂತರ ಕಣ್ಣಿಗೆ ಕಟ್ಟಿರುವ ಬಟ್ಟೆಯನ್ನು ಸಹ ತೆಗೆಯಲಾಯಿತು. ನಾನು ಎಲ್ಲರನ್ನ ಒಮ್ಮೆ ದೃಷ್ಟಿಸಿದೆ ಮಕ್ಕಳೆಲ್ಲ ಓಡಿ ಬಂದು ಎಲ್ಲರೂ ನನ್ನನ್ನು ತಬ್ಬಿಕೊಂಡರು ನಿಮಗೇನು ಆಗ್ಲಿಲ್ಲ ಎಂದೆಲ್ಲ ಕೇಳಿದರು ನನ್ನ ಅನುಭವಕ್ಕೆ ಏನೂ ಬರಲಿಲ್ಲ ನಾನು ‘ನನಗೆ ಏನೂ ಆಗಿಲ್ಲಪ್ಪ ಚೆನ್ನಾಗಿದ್ದೇನೆ ‘ಎಂದಾಗ ಜಾದುವಿನ ಮಹತ್ವ ಎಲ್ಲರಿಗೂ ತಿಳಿಯಿತು. ನಡೆದ ಸಂಗತಿ ನಾನು ಮನೆಗೆ ಹೋಗಿ ನನ್ನ ಮಡದಿ ಮಕ್ಕಳಲ್ಲಿ ಹೇಳಿಕೊಂಡೆ. ಜಾದು ಕಾರ್ಯಕ್ರಮ ಮರೆಯಲಾಗದಂತಹ ಪ್ರಯೋಗ ಆಗಿತ್ತು.

-ಹೆಚ್. ಶೌಕತ್ ಆಲಿ ಮದ್ದೂರು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x