ವಿಶ್ವಪ್ರಸಿದ್ಧ ಪಶುವೈದ್ಯರು: ಪ್ರೊ. ಎಂ. ನಾರಾಯಣಸ್ವಾಮಿ

ಪ್ರತಿ ವರ್ಷದ ಏಪ್ರಿಲ್ ತಿಂಗಳ ಕೊನೆಯ ಶನಿವಾರದಂದು ವಿಶ್ವ ಪಶುವೈದ್ಯಕೀಯ ದಿನವನ್ನು ಆಚರಿಸಲಾಗುತ್ತಿದೆ. ಕಳೆದ 25 ವರ್ಷಗಳಿಂದ ಅಂತಹ ಆಚರಣೆ ನಡೆಯುತ್ತಿದೆ. ಆದು ಆರಂಭವಾದದ್ದು 2000ನೇ ಇಸವಿಯಲ್ಲಿ. ಅಂತಹ ದಿನದ ಆಚರಣೆಗೊಂದು ಧ್ಯೇಯವಾಕ್ಯವನ್ನು ವಿಶ್ವ ಪಶುವೈದ್ಯಕೀಯ ಸಂಘವು ಕೊಡುತ್ತದೆ. ಅದರಂತೆ, 2024 ರ ವಿಶ್ವ ಪಶುವೈದ್ಯಕೀಯ ದಿನದ ಧ್ಯೇಯವಾಕ್ಯವು ‘ಪಶುವೈದ್ಯರು ಅತ್ಯಗತ್ಯ ಆರೋಗ್ಯ ಕಾರ್ಯಕರ್ತರಾಗಿದ್ದಾರೆ’ ಎಂಬುದಾಗಿದೆ. ಪಶುವೈದ್ಯರು ಪ್ರಾಣಿಗಳ ಆರೋಗ್ಯವನ್ನು ಕಾಪಾಡುತ್ತಿದ್ದಾರೆ. ಅದಷ್ಟೇ ಅಲ್ಲದೆ ಮಾನವನ ಆರೋಗ್ಯವನ್ನೂ ಕಾಪಾಡುತ್ತಿದ್ದಾರೆ. ಪ್ರಾಣಿಗಳ ರೋಗಗಳನ್ನು ಹತೋಟಿಯಲ್ಲಿಟ್ಟಿದ್ದರಿಂದಾಗಿ ಮಾನವನ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯವನ್ನು ಕಾಪಾಡಲಾಗಿದೆ ಎಂಬ ಹಿತೋಕ್ತಿಯಿದೆ.

ಪಶುವೈದ್ಯಕೀಯ ವಿಜ್ಞಾನದ ಮೂಲಕ ಸಮಾಜದ ಒಳಿತಿಗಾಗಿ ದುಡಿದ ವಿಶ್ವಪ್ರಸಿದ್ಧ ಪಶುವೈದ್ಯರಿದ್ದಾರೆ. ಅಂತಹ ಕೆಲವರನ್ನು ಈ ಸಂದರ್ಭದಲ್ಲಿ ನೆನೆಯೋಣ.

ಪಶುವೈದ್ಯರಿಗೆ ವೈದ್ಯಕೀಯ ನೊಬೆಲ್

ಆಸ್ಟ್ರೇಲಿಯಾದ ಪಶುವೈದ್ಯರಾದ ಡಾ. ಪೀಟರ್ ಚಾರ್ಲ್ಸ್ ಡೊಹರ್ಟಿ ಅವರು ರೋಗನಿರೋಧಕ ಶಾಸ್ತ್ರ (ಇಮ್ಮುನಾಲಜಿ) ಕ್ಕೆ ಕೊಟ್ಟ ಕೊಡುಗೆಗಾಗಿ 1996ರ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಮತ್ತೊಬ್ಬ ವಿಜ್ಞಾನಿಯಾದ ಸ್ವಿಟ್ಸರ್ಲ್ಯಾಂಡಿನ ರೋಲ್ಫ್ ಝಿಂಕರ್ನಾಗೆಲ್ ಅವರೊಂದಿಗೆ ಹಂಚಿಕೊಂಡರು. ದೇಹದಲ್ಲಿ ವೈರಸ್ ಪೀಡಿತ ಜೀವಕೋಶಗಳನ್ನು ಕಿಲ್ಲರ್ ಟಿ ಲಿಂಫೋಸೈಟುಗಳು ಪತ್ತೆಹಚ್ಚಿ, ನಾಶಪಡಿಸಿ ರೋಗನಿರೋಧಕ ಶಕ್ತಿಯನ್ನು ಉತ್ಪಾದಿಸುತ್ತವೆ ಎಂಬುದು ಅವರ ಸಂಶೋಧನೆಯ ಸಾರಾಂಶ. ಈ ಪ್ರಕ್ರಿಯೆಯಲ್ಲಿ ಮೇಜರ್ ಹಿಸ್ಟೋಕಂಪಾಟಿಬಿಲಿಟಿ ಕಾಂಪ್ಲೆಕ್ಸ್ (ಎಂ.ಎಚ್.ಸಿ.) ಭಾಗಿಯಾಗುತ್ತದೆ ಎಂದು ಅವರು ವಿವರಿಸಿದರು. ಅವರ ಸಂಶೋಧನೆಯಿಂದ ಎಲ್ಲಾ ಜೀವಿಗಳ ಆರೋಗ್ಯ ವಿಜ್ಞಾನದ ರೋಗ ನಿರೋಧಕ ಶಕ್ತಿಯ ಅರಿವಿಗೆ ಇನ್ನಷ್ಟು ವಿಸ್ತಾರ ಸಿಕ್ಕಂತಾಗಿದೆ.

ಬಿಸಿಜಿ ಲಸಿಕೆ ಕೊಡುಗೆಯ ಡಾ. ಗೆರಿನ್

ಕ್ಷಯರೋಗದಿಂದ ರಕ್ಷಿಸಿಕೊಳ್ಳಲು ಮಕ್ಕಳಿಗೆ ಬಿಸಿಜಿ ಲಸಿಕೆಯನ್ನು ಶೈಶಾವಸ್ಥೆಯಲ್ಲಿಯೇ ಕೊಡಲಾಗುತ್ತಿದೆ. ಈ ಬಿಸಿಜಿ ಲಸಿಕೆಯ ವಿಸ್ತರಣೆಯ ರೂಪವು ‘ಬ್ಯಾಸಿಲಸ್ ಕಾಮೆಟ್ಟೆ – ಗೆರಿನ್’ ಆಗಿದೆ. ಕಾಮೆಟ್ಟೆ ಮತ್ತು ಗೆರಿನ್ ಎಂಬುದು ಇಬ್ಬರು ವಿಜ್ಞಾನಿಗಳ ಹೆಸರು. ಫ್ರಾನ್ಸ್ ದೇಶದ ಪಶುವೈದ್ಯರಾದ ಡಾ. ಗೆರಿನ್ ಅವರ ಪೂರ್ಣ ಹೆಸರು ಡಾ. ಜೀನ್ ಮೇರಿ ಕಾಮಿಲ್ಲೆ ಗೆರಿನ್. ಇವರು ಡಾ. ಆಲ್ಬರ್ಟ್ ಕಾಮೆಟ್ಟೆ ಜತೆ ಸೇರಿ ಬಿಸಿಜಿ ಲಸಿಕೆಯನ್ನು 1923ರಲ್ಲಿ ಕಂಡುಹಿಡಿದರು.

ಗೆರಿನ್ ಅವರ ತಂದೆ ಮತ್ತು ಪತ್ನಿ ಕ್ಷಯರೋಗದಿಂದ ಕ್ರಮವಾಗಿ 1882 ಮತ್ತು 1918ರಲ್ಲಿ ತೀರಿಕೊಂಡರು. ತಮ್ಮ ಕುಟುಂಬದಲ್ಲಿ ಕ್ಷಯರೋಗದ ಮರಣಗಳನ್ನು ಕಂಡು ಮರುಗಿದ ಗೆರಿನ್ ಅವರು 1908 ರಿಂದ 1923 ರವರೆಗೆ ಸತತ ಸಂಶೋಧನಾ ಪ್ರಯೋಗಗಳನ್ನು ನಡೆಸಿದರು. ಫ್ರಾನ್ಸಿನ ಪಾಶ್ಚರ್ ಸಂಸ್ಥೆಯ ನಿರ್ದೇಶಕರಾದ ಡಾ. ಆಲ್ಬರ್ಟ್ ಕಾಮೆಟ್ಟೆಯವರೊಂದಿಗೆ ಸಂಶೋಧನೆ ನಡೆಸಿ ಕ್ಷಯರೋಗದ ವಿರುದ್ಧ ಪರಿಣಾಮಕಾರಿ ಲಸಿಕೆಯನ್ನು 1923ರಲ್ಲಿ ಬಿಡುಗಡೆ ಮಾಡಿದರು. ಅಂದಿನಿಂದ ಇಂದಿನವರೆಗೂ ವಾರ್ಷಿಕವಾಗಿ ಕ್ಷಯರೊಗದಿಂದಾಗುವ ಮಿಲಿಯನ್ಗಟ್ಟಲೆ ಮಾನವನ ಸಾವುಗಳನ್ನು ಬಿಸಿಜಿ ಲಸಿಕೆಯು ತಡೆಯುತ್ತಿದೆ.

ಕೋವಿಡ್ 19 ಲಸಿಕೆ ಉತ್ಪಾದನೆಯಲ್ಲಿ ಪಶುವೈದ್ಯರು

ವಿಶ್ವ ಸಾಂಕ್ರಾಮಿಕ ರೋಗವಾದ ಕೋವಿಡ್ 19ರ ವಿರುದ್ಧ ಫೈಜರ್ ಕಂಪನಿ ತಯಾರಿಸಿದ ಲಸಿಕೆ ಉತ್ಪಾದನೆಯಲ್ಲಿ ಅಮೇರಿಕಾದ ಪಶುವೈದ್ಯರಾದ ಡಾ. ಫ್ರೆಡ್ ಆಂಗುಲೋ ಅವರು ಭಾಗಿಯಾದರು. ಡಾ. ಆಂಗುಲೋ ಅವರು ‘ನಾವು ವಿಜ್ಞಾನದ ಮೂಲಕ ಮಾತ್ರ ಕೋವಿಡ್ ಸಾಂಕ್ರಾಮಿಕ ರೋಗವನ್ನು ಹಿಮ್ಮೆಟ್ಟಿಸಬೇಕು, ವಿಜ್ಞಾನ ಗೆಲ್ಲಬೇಕು’ ಎಂದು ಕರೆ ಕೊಟ್ಟರು. ಹೈಟಿಯ 2010ರ ಕಾಲರಾ ಸಾಂಕ್ರಾಮಿಕದಲ್ಲಿ ಹಾಗೂ ಆಫ್ರಿಕಾದ 2014ರ ಎಬೋಲಾ ಸಾಂಕ್ರಮಿಕದ ಹತೋಟಿಯಲ್ಲೂ ಕೂಡ ಡಾ. ಆಂಗುಲೋ ಶ್ರಮಿಸುವ ಮೂಲಕ ಈ ವರ್ಷದ ಧ್ಯೇಯವಾಕ್ಯವಾದ ಮಾನವನ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯಕ್ಕಾಗಿ ಶ್ರಮಿಸಿದ್ದಾರೆ.

ಡನ್ಲಪ್ ಟೈರ್ ಕಂಡುಹಿಡಿದಿದ್ದು ಪಶುವೈದ್ಯ

ವಾಹನಗಳ ಚಕ್ರಗಳಿಗೆ ಅಳವಡಿಸುವ ಡನ್ಲಪ್ ನ್ಯೂಮ್ಯಾಟಿಕ್ ಟೈರುಗಳು ಎಲ್ಲರಿಗೂ ಪರಿಚಿತ. ಅಂತಹ ಟೈರ್ಗಳನ್ನು 1887 ರಲ್ಲಿ ಕಂಡುಹಿಡಿದವರು ಬ್ರಿಟನ್ನಿನ ಪಶುವೈದ್ಯರಾದ ಡಾ. ಜಾನ್ ಬಾಯ್ಡ್ ಡನ್ಲಪ್. ಬ್ರಿಟನ್ನಿನ ಮತ್ತೊಬ್ಬ ಪಶುವೈದ್ಯರಾದ ಡಾ. ಜೇಮ್ಸ್ ಹೆರಿಯಟ್ ಅವರು ತಮ್ಮ ವೃತ್ತಿಜೀವನದ ಅನುಭವಗಳಿಗೆ ಆತ್ಮಚರಿತ್ರೆಯ ರೂಪ ಕೊಟ್ಟರು. ಆಲ್ ಕ್ರಿಯೇಚರ್ಸ್ ಗ್ರೇಟ್ ಅಂಡ್ ಸ್ಮಾಲ್, ಆಲ್ ಥಿಂಗ್ಸ್ ವೈಸ್ ಅಂಡ್ ವಂಡರ್ಫುಲ್ ಮತ್ತು ಆಲ್ ಥಿಂಗ್ಸ್ ಬ್ರೈಟ್ ಅಂಡ್ ಬ್ಯೂಟಿಫುಲ್ ಅವರ ಪ್ರಸಿದ್ಧ ಕೃತಿಗಳು. ಈ ಸಾಹಿತ್ಯ ಕೃತಿಗಳ ಓದು ದೇಶಭಾಷೆಗಳ ಮೀರಿ ಪ್ರಾಣಿಪ್ರಿಯ ಮಾನವರಿಗೆ ಮಾನಸಿಕ ಆರೋಗ್ಯದ ಸ್ಥಿಮಿತಕ್ಕೆ ಕಾರಣವಾಗಿರಬಹುದು.

ಬ್ರಿಟಿಷ್ ಭಾರತದ ಪಶುವೈದ್ಯ ಡಾ. ಹಲೆನ್

ಕರ್ನಲ್ ಡಾ. ಜೇಮ್ಸ್ ಹಲೆನ್ ಬ್ರಿಟನ್ನಿನ ಪಶುವೈದ್ಯರಾಗಿ ಬ್ರಿಟಿಷ್ ಭಾರತದಲ್ಲಿ 1868ರಲ್ಲಿ ದೊಡ್ಡರೋಗದ ನಿವಾರಣೆಗೆ ಶ್ರಮಿಸಿದರು. ಮುಖ್ಯ ಪಶುವೈದ್ಯರಾಗಿ 1880ರ ಕಾಲಘಟ್ಟದಲ್ಲಿ ಭಾರತದಲ್ಲಿ ಕುದುರೆಗಳ ಸಂತಾನೋತ್ಪತ್ತಿ ತಜ್ಞರಾಗಿ ಕಾರ್ಯನಿರ್ವಹಿಸಿದರು. ಕುದುರೆ ಮತ್ತು ಜಾನುವಾರುಗಳ ಚಿಕಿತ್ಸೆಗಾಗಿ ಹಲವು ಕೈಪಿಡಿಗಳನ್ನು ಪ್ರಕಟಿಸಿದರು. ಪುಣೆಯಲ್ಲಿ 1862ರಲ್ಲಿ ಸೈನಿಕ ಪಶುವೈದ್ಯ ಶಾಲೆ ಸ್ಥಾಪನೆಯಲ್ಲಿ ಪಾಲ್ಗೊಂಡರು. ಆ ಮೂಲಕ ಭಾರತದಲ್ಲಿ ಪಶುವೈದ್ಯಕೀಯ ಶಿಕ್ಷಣದ ಪ್ರಾರಂಭಕ್ಕೆ ಕಾರಣಕರ್ತರಾದರು. ಉತ್ತರ ಪ್ರದೇಶದ ಮುಕ್ತೇಶ್ವರದಲ್ಲಿ 1893ರಲ್ಲಿ ಇಂಪೀರಿಯಲ್ ಬ್ಯಾಕ್ಟೀರಿಯಾಲಾಜಿಕಲ್ ಲ್ಯಾಬೊರೇಟರಿಯ ಸ್ಥಾಪನೆಗೆ ಕಾರಣಕರ್ತರಾದರು.

ವಿಶ್ವದ ಪ್ರಥಮ ಪಶುವೈದ್ಯಕೀಯ ಮಹಾವಿದ್ಯಾಲಯ

ಇಡೀ ಪ್ರಪಂಚದಲ್ಲಿಯೇ ಮೊಟ್ಟಮೊದಲ ಪಶುವೈದ್ಯಕೀಯ ಮಹಾವಿದ್ಯಾಲಯವನ್ನು ಫ್ರಾನ್ಸಿನ ಲಿಯಾನ್ ಎಂಬ ನಗರದಲ್ಲಿ 1761ರಲ್ಲಿ ಸ್ಥಾಪಿಸಲಾಯಿತು. ಫ್ರೆಂಚ್ ಪಶುವೈದ್ಯನಾದ ಡಾ. ಕ್ಲಾಡ್ ಬರ್ಜ್ಲಾಟ್ ಅವರು ಅದರ ಸಹಸ್ಥಾಪಕರಲ್ಲೊಬ್ಬರು. ಇಡೀ ಪ್ರಪಂಚದಲ್ಲಿಯೇ ಮೊಟ್ಟಮೊದಲ ಪಶುವೈದ್ಯಕೀಯ ಆಸ್ಪತ್ರೆಯನ್ನು ಸ್ಥಾಪಿಸಿದ್ದು ಭಾರತದ ಸಾಮ್ರಾಟ್ ಅಶೋಕ ಎಂಬುದರ ಹಿನ್ನಲೆಯಲ್ಲಿ ಡಾ. ಬರ್ಜ್ಲಾಟ್ ಅವರ ಸಾಧನೆಯನ್ನು ಗಮನಿಸಬೇಕಿದೆ.

ಬ್ರುಸೆಲ್ಲಾ ಬ್ಯಾಕ್ಟೀರಿಯಾ ಕಂಡುಹಿಡಿದ ಪಶುವೈದ್ಯ

ಡೆನ್ಮಾರ್ಕಿನ ಡಾ. ಬೆರ್ನ್ಹಾರ್ಡ್ ಬ್ಯಾಂಗ್ ಅವರು 1897ರಲ್ಲಿ ಜಾನುವಾರುಗಳಲ್ಲಿ ಗರ್ಭಪಾತಕ್ಕೆ ಕಾರಣವಾದ ಬ್ರುಸೆಲ್ಲಾ ಅಬಾರ್ಟಸ್ ಎಂಬ ಬ್ಯಾಕ್ಟೀರಿಯಾವನ್ನು ಪತ್ತೆಹಚ್ಚಿದರು. ಅದನ್ನು ‘ಬ್ಯಾಂಗ್ಸ್ ಬ್ಯಾಸಿಲ್ಲಸ್’ ಎಂದು ಕರೆಯಲಾಗಿದೆ. ಅದರ ಸೋಂಕು ಮನುಷ್ಯರಿಗೆ ತಗುಲಿದರೆ ಏರಿಳಿತದ ಜ್ವರ ಬರುತ್ತದೆ. ಅಪಾಯಕಾರಿ ಬ್ಯಾಕ್ಟೀರಿಯಾವನ್ನು ಪತ್ತೆಹಚ್ಚುವ ಮೂಲಕ ಬ್ಯಾಂಗ್ ಅವರು ಮಾನವನ ಆರೋಗ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಪಶುವೈದ್ಯರ ಇನ್ನಷ್ಟು ಕೊಡುಗೆಗಳು

ಪ್ರಪಂಚದ ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಜನರು ಕೊಟ್ಟ ನಾಯಿ, ಬೆಕ್ಕು, ಮೇಕೆ, ಮೊಲ, ಮಂಗ, ಗಿಳಿ ಮುಂತಾದ ಅಸಂಖ್ಯಾತ ಪ್ರಾಣಿಗಳನ್ನು ಪ್ರೀತಿಯಿಂದ ಸಾಕಿದವರು ಬ್ರಿಟನ್ನಿನ ಡಾ. ಬುಸ್ಟರ್ ಲಾಯ್ಡ್ ಜೋನ್ಸ್. ಯುದ್ದ ಮುಗಿದ ಮೇಲೆ ಯಾವ ಮಾಲೀಕನೂ ತಮ್ಮ ಪ್ರಾಣಿಗಳನ್ನು ಮರಳಿ ಪಡೆಯಲು ಒಪ್ಪದಾದಾಗ ಅವುಗಳನ್ನು ಮುತುವರ್ಜಿಯಿಂದ ಸಾಕಿದವರು ಅದೇ ಜೋನ್ಸ್. ಪೋಲಿಯೋ ಪೀಡಿತರಾಗಿದ್ದ ಜೋನ್ಸ್ ಅವರಿಗೆ ಅಪಾರವಾದ ಪ್ರಾಣಿಪ್ರೀತಿಯಿತ್ತು.

ಅಮೇರಿಕಾದ ಪಶುವೈದ್ಯರಾದ ಡಾ. ಮೇರಿ ಡನ್ಲಪ್ ಅವರು 1947ರಲ್ಲಿ ಮಹಿಳಾ ಪಶುವೈದ್ಯರ ಸಂಘವನ್ನು ಸ್ಥಾಪಿಸಿದರು. ಅಮೆರಿಕಾದ ಪಶುವೈದ್ಯೆಯಾದ ಡಾ. ಸೋಫಿಯಾ ಇನ್ ಅವರು ಪ್ರಾಣಿಗಳ ವರ್ತನಾ ವಿಜ್ಞಾನದ ತಜ್ಞೆಯಾಗಿ ಮುದ್ದುಪ್ರಾಣಿಗಳನ್ನು ಪಳಗಿಸುವುದರಲ್ಲಿ ಛಾತಿ ಹೊಂದಿದ್ದಳು. ಆಸ್ಟ್ರೇಲಿಯಾದ ಡಾ. ಹಗ್ ವರ್ತ್ ಅವರು ಪ್ರಾಣಿ ಕಲ್ಯಾಣದ ವಕೀಲರಾಗಿ ಸೇವೆ ಸಲ್ಲಿಸಿದರು. ಅಮೆರಿಕಾದ ಡಾ. ರಿಚರ್ಡ್ ಲಿನ್ನೆಹಾನ್ ನಾಸಾದಲ್ಲಿ ಗಗನಯಾತ್ರಿಯಾಗಿ ಸೇವೆ ಸಲ್ಲಿಸಿದರು. ಅಮೆರಿಕಾದ ಡಾ. ಜೆಫ್ರಿ ಬಾರ್ಲೊ ಅವರು ಕಾದಂಬರಿಕಾರರಾಗಿ ಪ್ರಸಿದ್ಧಿಯಾದರು.
ಡಾ. ಲೂಯಿಸ್ ಕಮೋಟಿಯವರು ಅಮೇರಿಕಾದ ಬೆಕ್ಕು ಚಿಕಿತ್ಸಕರು. ಡಾ. ಕತ್ರಿನಾ ವಾರೆನ್ ಅವರು ಆಸ್ಟ್ರೇಲಿಯಾದ ಟಿವಿ ಕಾರ್ಯಕ್ರಮಗಳ ನಿರೂಪಕಿಯಾಗಿ ಹೆಸರು ಮಾಡಿದರು. ಈಜಿಪ್ಟಿನ ಪಶುವೈದ್ಯರಾದ ಡಾ. ಅಮಿರ್ ಖಲೀಲ್ ಅವರು ಯುದ್ದಪೀಡಿತ ಹಾಗೂ ನೈಸರ್ಗಿಕ ವಿಪತ್ತು ಪೀಡಿತ ಪ್ರದೇಶಗಳ ನಿರಾಶ್ರಿತ ಪ್ರಾಣಿಗಳ ಆರೈಕೆ ಮಾಡಿದರು.

ವಿಶ್ವದ ಗಮನ ಸೆಳೆದ ಭಾರತದ ಪಶುವೈದ್ಯರು

ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಾಲಯದ ಕುಕ್ಕುಟ ವಿಜ್ಞಾನದ ಪಶುವೈದ್ಯರಾದ ಡಾ. ಲೋಕನಾಥ್ ಅವರು ಕುಕ್ಕುಟ ವಿಜ್ಞಾನಿ ಡಾ. ಬಿ. ಎಸ್. ರಾಮಪ್ಪ ಅವರೊಂದಿಗೆ ಸೇರಿ 1988-89ರ ಸುಮಾರಿಗೆ ಗಿರಿರಾಜ ಮತ್ತು ಗಿರಿರಾಣಿ ಕೋಳಿಗಳನ್ನು ಉತ್ಪಾದಿಸಿದರು. ಈ ಕೋಳಿಗಳು ದೇಶ ವಿದೇಶಗಳಲ್ಲೆಲ್ಲ ಸಾಕಲ್ಪಡುತ್ತಿವೆ. ಅದರಿಂದ ಗ್ರಾಮೀಣ ಜನರ ಆರ್ಥಿಕ ಸಬಲೀಕರಣವಾಗಿದೆ. ಇದೇ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಭಾರತದ ಆಡಳಿತ ಸೇವೆಯ ಅಧಿಕಾರಿಯಾದ ಡಾ. ರಾಧಾಕೃಷ್ಣ ಅವರು 2004ರಲ್ಲಿ ತಮಿಳುನಾಡಿಗೆ ಆಪ್ಪಳಿಸಿದ ಸುನಾಮಿ ನಂತರದ ಪರಿಹಾರ ಕಾರ್ಯಕ್ರಮಗಳನ್ನು ಅದ್ಭುತವಾಗಿ ಅನುಷ್ಟಾನ ಮಾಡಿದರು. ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪರಿಹಾರಗಳ ಕುರಿತು ಅಮೇರಿಕಾದ ತಜ್ಞರು ಡಾ. ರಾಧಾಕೃಷ್ಣರವರಿಂದ ಮಾಹಿತಿ ಪಡೆದರು.

ಹೀಗೆ ಅಸಂಖ್ಯಾತ ಹೆಸರಾಂತ ಪಶುವೈದ್ಯರು ಮಾನವ ಆರೋಗ್ಯ ಸುಧಾರಣೆಗೆ ವಿವಿಧ ರೀತಿಯಲ್ಲಿ ಹಲವು ಕೊಡುಗೆಗಳನ್ನು ಕೊಟ್ಟಿದ್ದಾರೆ. ಹೊಸ ತಲೆಮಾರಿನ ಪಶುವೈದ್ಯರು ಅಂತಹವರಿಂದ ಪ್ರೇರಣೆ ಪಡೆದು ಸಾಧಕರಾಗಲಿ ಎಂದು ಆಶಿಸೋಣ.

ಪ್ರೊ. ಎಂ. ನಾರಾಯಣಸ್ವಾಮಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
3.8 4 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಸುವ್ರತಾ ಅಡಿಗ
ಸುವ್ರತಾ ಅಡಿಗ
17 days ago

ಒಳ್ಳೆಯ ವೈಚಾರಿಕ ಲೇಖನ ಬರೆದ ಪ್ರೊ. ಎಂ. ನಾರಾಯಣಸ್ವಾಮಿಯವರಿಗೆ ಅಭಿನಂದನೆಗಳು . ಚೆನ್ನಾಗಿ ಬರೆದಿದ್ದಾರೆ.

ಬಿ.ಟಿ.ನಾಯಕ್
ಬಿ.ಟಿ.ನಾಯಕ್
17 days ago

ಪಶು ವೈದ್ಯಕೀಯ ಇಲಾಖೆಯ ವೈದ್ಯರು ಜಾಗತಿಕವಾಗಿ ಯಾವಾಗಲೂ ನೇಪಥ್ಯಕ್ಕೆ ಸರಿಸಲ್ಪಟ್ಟಿರುತ್ತಾರೆ. ಅಲ್ಲಿಯೂ ನೋಬೆಲ್ ಪಾರಿತೋಷಕ ಬಂದಿರೋದು ಬಹುಶಃ ಬಹಳೇ ಜನರು ಕೇಳಿರಲಿಕ್ಕಿಲ್ಲ. ಇವೆಲ್ಲಾ ಮಾಹಿತಿಗೆ ಧನ್ಯವಾದಗಳು.

2
0
Would love your thoughts, please comment.x
()
x