-೪-
ಅವತ್ತು ಸ್ಕೂಲಿಗೆ ರಜೆ ಅಂತ ಎಲ್ಲ ಮಾತಾಡುತ್ತಿದ್ದರು. ಸ್ಕೂಲಿಗೆ ಅಂತಲ್ಲ ಎಲ್ಲರಿಗೂ ಗೌರ್ಮೆಂಟ್ ರಜೆ ಅಂತ ಸಿಕ್ಕಸಿಕ್ಕವರು ಹೇಳ್ತಾ ಇದ್ದರೆ ನಮಗೆ ಹಿಗ್ಗೊ ಹಿಗ್ಗು. ಅದನ್ನು ಕೇಳ್ತಾ ಕೇಳ್ತಾ ಪಂಚಾಯ್ತಿ ಆಫೀಸ್ ಮುಂದಿದ್ದ ಮರಯ್ಯನ ಟೀ ಅಂಗಡಿ ಹತ್ತಿರ ಬಂದಾಗ ಆ ಟೀ ಅಂಗಡಿ ಮುಂದೆ ಒಂದಷ್ಟು ಜನ ಹೆಚ್ಚಾಗೇ ನಿಂತು ಟೀ ಕುಡಿತಾ ಬೀಡಿ ಸೇದುತ್ತಾ ಪೇಪರ್ ಓದುತ್ತಾ ರಾಜ್ ಕುಮಾರ್ ಬಗ್ಗೆ ಜೋರಾಗೇ ಮಾತಾಡ್ತ ಇದ್ದರು. ಎಲ್ಲರು ರಾಜ್ ಕುಮಾರ್ ಬಗ್ಗೆ ಮಾತಾಡುತ್ತಿದ್ದರೆ ಒಂಥರಾ ಮಜ ಆಗುತ್ತಿತ್ತು. ಇವತ್ಯಾಕೆ ಎಲ್ಲ ರಾಜ್ ಕುಮಾರ್ ಬಗ್ಗೆ ಮಾತಾಡುತ್ತಾ ಇದಾರೆ ಅಂತ ಅರ್ಥ ಆಗದೆ ರಜೆಯ ಗುಂಗಿನಲ್ಲಿ ಪೆಕರು ಪೆಕರಾಗಿ ನೋಡುತ್ತಾ ಆಟ ಆಡ್ತಾ ಆಡ್ತಾ ಅದೇನಾದರು ಆಗಲಿ ಸ್ಕೂಲ್ ಕಡೆ ಹೋಗಿ ಬರಲು ಹೆಗಲಲ್ಲಿದ್ದ ಬ್ಯಾಗನ್ನು ಅತ್ತಿತ್ತ ಆಡಿಸುತ್ತ ಜಾಡಮಾಲಿ ರಂಗಯ್ಯನ ಗುಡಿಸಲು ಕಡೆಯಿಂದ ಸಿಲ್ಕ್ ಫ್ಯಾಕ್ಟರಿ ಕಾಂಪೌಂಡ್ ಸವರುತ್ತ ದಂಡಿನಮಾರಿಗುಡಿ ಸುತ್ತ ಇದ್ದ ಮುಂಡಗಳ್ಳಿ ಬೇಲಿ ದಾಟಿ ಅಲ್ಲಿದ್ದ ದಂಡಿನಮಾರಿಗುಡಿ, ದೊಡ್ಡಾಲದ ಮರದ ಕೆಳಗಿದ್ದ ಸೊಸ್ಮಾರಿಗುಡಿಗೆ ಕೈಮುಗಿದು ಹಂಗೆ ಪೋಸ್ಟ್ ಆಫೀಸ್ ಮಗ್ಗುಲಿಂದ ಸ್ಕೂಲಿಗೆ ಹೋಗಲು ಬೇಲಿ ದಾಟಬೇಕು ಅಷ್ಟರಲ್ಲಿ ಆ ಕಡೆಯಿಂದ ಬರುತ್ತಿದ್ದ ನಮ್ಮೂರವರು ಗಾಬರಿಯಿಂದಲೊ ಉತ್ಸಾಹದಿಂದಲೊ “ಹೋಗಿ ಹೋಗಿ ಸ್ಕೂಲ್ಗ ರಜಕಣ ಹೋಗಿ.. ನೀವೇನಾರ ಹೋದ್ರ ಕಲ್ಲೇಟ್ ಬೀಳ್ತವ ಮಕ್ಳ..” ಅಂತ ಬಿರಬಿರನೆ ಊರ ಕಡೆ ಹೋಗುತ್ತಿದ್ದರು.
ಆಗ ಉಪ್ಪಿಟಮ್ಮ ಸೊಪ್ಪಿಟಮ್ಮ ದೇವಸ್ಥಾನದತ್ತಿರವಿದ್ದ ರೇಷ್ಮೆಗೂಡಿನ ಮಾರುಕಟ್ಟೆ ಎದುರಿಗಿನ ಕ್ರಾಸ್ ತಿರುಗಿ ಅಷ್ಟು ದೂರದಲ್ಲಿ ಬರುತ್ತಿದ್ದ ಗಂಗಣ್ಣ ಕಾಣಿಸಿದ.
ಅರೆ, ನಾವೆಲ್ಲ ಹೋದ್ಮೇಲೆ ಅಲ್ವ ಪೋಸ್ಟ್ ಮೇಷ್ಟ್ರು ಷಣ್ಮುಖಸ್ವಾಮಿ ಪೋಸ್ಟ್ ಆಫೀಸ್ ಬಾಗಿಲು ತೆಗೆಯುತ್ತಿದ್ದುದು. ನಾವು ಜಾಗ ಖಾಲಿ ಮಾಡುದ್ಮೇಲಲ್ವ ಪೋಸ್ಟ್ ಮ್ಯಾನ್ ಗಂಗಣ್ಣ ಬರುತ್ತಿದ್ದುದು. ಇದೇನ ಇವತ್ತು ಇಷ್ಟೊತ್ತಿಗೆ ಬಂದಿದನು ಅಂತ ನಾವು ನಾವೇ ಮಾತಾಡಿಕೊಂಡು ಅತ್ತಗು ಹೋಗದೆ ಇತ್ತಗು ಹೋಗದೆ ಮುಂಡಗಳ್ಳಿ ಬೇಲಿಲಿ ಹಬ್ಬಿದ್ದ ಹಾಲಕುಡಿ ಹಂಬು ಎಳೆದು ಅಲ್ಲಿದ್ದ ಹಾಲಸೊಪ್ಪ ಊರಿ ಅಲ್ಲಿ ಅಂಟಿದ್ದ ಧೂಳು ಕಸವನ್ನು ಅಂಗಿ ಬಟ್ಟೇಲಿ ಸೀಟಿ ಸೀಟಿ ಎಲ್ಲ ಸೊಪ್ಪನ್ನು ಉಂಡೆ ಮಾಡಿ ಬಾಯಿಗಾಕಿಕೊಂಡು ಅಗಿಯುತ್ತಿದ್ದರೆ ಬಾಯಿತುಂಬ ಹಾಲ್ನೊರೆ ತುಂಬಿ ಸೋರುತ್ತ ಎಲ್ಲರ ಕಟಬಾಯಿಲಿ ಹಾಲಸೊಪ್ಪಿನ ಹಾಲ್ನೊರೆ ಮೆತ್ತಿಕೊಂಡಿದ್ದರು ಸೊಪ್ಪು ಅಗಿಯುತ್ತಲೇ ದೂರದಲ್ಲಿ ಬರುತ್ತಿದ್ದ ಗಂಗಣ್ಣನನ್ನೇ ನೋಡುತ್ತ ಅವನು ಹತ್ತಿರ ಬರುವುದನ್ನೇ ಕಾಯುತ್ತ.. ಇಷ್ಟು ದಿನ ಬಾಡಿಗೆ ಸೈಕಲಲ್ಲಿ ಬ್ಯಾಗು ನ್ಯಾತಾಕಿಕೊಂಡು ಬೇಕುಬೇಕಾದ ಲೆಟರ್ ಕೈಯಲ್ಲಿಡಿದು ಬರುತ್ತಿದ್ದವನು ಇವತ್ತು ಕಂಕುಳಲ್ಲಿ ಉಂಡೆ ಉಂಡೆಯಾಗಿ ಸುತ್ತಿಕೊಂಡಿದ್ದ ಬ್ಯಾಗು, ಕೈಯಲ್ಲೊಂದು ಲೆಟರು ತುಂಬಿದ ಬ್ಯಾಗು, ಇನ್ನೊಂದು ಕೈಯಲ್ಲಿ ಅರ್ಜೆಂಟ್ ಕೊಡಬೇಕಾದ ಒಂದಷ್ಟು ಲೆಟರು, ಎಂ.ಓ ಕಾರ್ಡುಗಳನ್ನು ಭದ್ರವಾಗಿ ಹಿಡಿದು ಉರುಗಿಸಿ ತಿರುಗಿಸಿ ಓದುತ್ತಾ ಓದುತ್ತಾ ತನ್ನೊಳಗೆ ಮಾತಾಡಿಕೊಳ್ಳುತ್ತ ನಿಧಾನಕೆ ನಡೆದುಕೊಂಡು ಬರುತ್ತಿದ್ದ. ಹತ್ತಿರ ಬರುತ್ತಿದ್ದಂತೆ “ಗಂಗ ಪೋಸ್ಟ್… ಗಂಗ ಪೋಸ್ಟ್.. ಪೋಸ್ಟ್.. ಪೋಸ್ಟ್..” ಅಂತ ರಾಗವಾಗಿ ಅರಚುತ್ತ “ಏನ್ ಗಂಗಣ್ಣ ಇವತ್ತು ಇಸ್ಟೊತ್ಗೆ ಬಂದ್ಬುಟ್ಟಿದೈ” ಅಂತ ಅವನ ಅಂಗಿ ಹಿಡಿದೆಳೆದಾಗ ಕುಂಕುಳಲ್ಲಿ ಇದ್ದ ಬ್ಯಾಗು ಬಿದ್ದು ಹೋಯ್ತು. ನಾವು ಗೊಳ್ಳೆಂದು ಕಿರುಚುತ್ತ ಕ್ಕಿಕ್ಕಿಕ್ಕಿ ನಗುತ್ತಿದ್ದರೆ ಅವನು “ಏಯ್ ಸ್ಕೂಲ್ ರಜೆ ಹೋಗಿ” ಅಂತ ಬಿದ್ದ ಬ್ಯಾಗು ಎತ್ತಿಕೊಳ್ಳಲು ಹೋದ. ಆಗ ಕೈಲಿದ್ದ ಲೆಟರುಗಳು ಕೈತಪ್ಪಿ ಬಿದ್ದವು. ಅವನು ಗಾಬರಿಗೊಂಡು ತರಬರ ಆಯ್ದುಕೊಳ್ಳಲು ಬಗ್ಗಿದ. ಆಗ ಅವನ ಹಿಂದೆ ಪ್ಯಾಂಟು ಹರಿದು ಎರಡೂ ಕುಂಡಿ ಕಾಣುತ್ತಿತ್ತು. ಅದನ್ನು ಆಡಾಡಿಕೊಂಡು ರೇಗಿಸುತ್ತಿದ್ದರು ಅವನು ಯಾವುದಕ್ಕು ಕೇರು ಮಾಡದೆ ಸುತ್ತಮುತ್ತ ನೋಡುತ್ತ ಬಿದ್ದು ಹೋದ ಲೆಟರುಗಳ ಆಯ್ದು ಅವು ಸರಿ ಇದ್ದಾವೊ ಇಲ್ಲವೊ ಅಂತ ಚೆಕ್ ಮಾಡಿಕೊಳ್ಳುತ್ತಿದ್ದ. ನಾವು ಎಷ್ಟು ರೇಗಿಸಿದರು ಲೆಟರು ಆಯ್ದುಕೊಳ್ಳಲು ಹೋದರೆ “ಬಿಡ್ರಪ್ಪ ನಿಮಗ್ಯಾಕ್ ತೊಂದ್ರೆ.. ಮಕ್ಳತ್ರ ಕೆಲ್ಸ ಮಾಡಿಸ್ಬಾರ‌್ದು” ಅಂತಿದ್ದರೆ ಹೋಗುವವರು ಬರುವವರು ಗಂಗಣ್ಣನಿಗೆ ಸಪೋರ್ಟ್ ಮಾಡುತ್ತ ನಮ್ಮನ್ನು ರೇಗುತ್ತ ಅಟ್ಟಾಡಿಸುತ್ತ ಕಲ್ಲು ಬೀರುತ್ತಿದ್ದರೆ ಅದರಿಂದ ತಪ್ಪಿಸಿಕೊಳ್ಳಲು ದಂಡಿನಮಾರಿಗುಂಡಿ ಸುತ್ತಲಿದ್ದ ಮುಂಡಗಳ್ಳಿ ಬೇಲಿ ಆಚೆಗೆ ಪಣ್ಣನೆ ನೆಗೆದು ಪರಾರಿಯಾಗಿ ಪೋಸ್ಟ್ ಆಫೀಸ್ ಬಾಗಿಲ ಬಳಿ ಬಂದಾಗ ಪೋಸ್ಟ್ ಮೇಷ್ಡ್ರು ಪೇಪರ್ ಓದುತ್ತ ಚೌಡಮ್ಮನ ಜೊತೆ ರಾಜ್ ಕುಮಾರ್ ಬಗ್ಗೆನೆ ಮಾತಾಡುತ್ತಿದ್ದರು. ಇದೇನ ಇವತ್ತು ಎಲ್ಲ ರಾಜ್ ಕುಮಾರ್ ಬಗ್ಗೆನೆ ಮಾತಾಡ್ತ ಇದ್ದಾರಲ್ಲ ಅಂತ ನಾವ್ ನಾವೇ ಮಾತಾಡಿಕೊಳ್ಳುವಾಗ ಆ ಪೋಸ್ಟ್ ಮೇಷ್ಟ್ರು ಮಾತು ಮುಂದುವರಿದು ಗಂಗಣ್ಣನ ಕಡೆ ತಿರುಗಿತು.
ಗೋಕಾಕ್ ಚಳುವಳಿ ಎಲ್ಲ ಕಡೆ ವ್ಯಾಪಿಸಿತ್ತು. ಡಾ.ರಾಜ್ ಕುಮಾರ್ ನೇತೃತ್ವದಲ್ಲಿ ಜನ ಬೀದಿಗೆ ಬಂದಿದ್ದರು. ಸರ್ಕಾರ ರಜೆ ಘೋಷಣೆ ಮಾಡದಿದ್ದರು ಎಲ್ಲ ಕಡೆ ರಜೆಯ ವಾತಾವರಣವಿತ್ತು. ಲೋಕಲ್ಲಾಗಿ ಪೋಸ್ಟ್ ಆಫೀಸ್ ತನ್ನ ಎಲ್ಲ ಚಟುವಟಿಕೆಯನ್ನು ಜನ ಬೀದಿಗೆ ಬರುವ ಮುನ್ನವೇ ವಿಲೇವಾರಿ ಮಾಡಲು ಸ್ವಯಂ ಆಗಿ ವಿಭಾಗವಾರು ಅರ್ಧಬಾಗಿಲು ಓಪನ್ ಮಾಡಿ ಅಥವಾ ಬಾಗಿಲು ಹಾಕಿಕೊಂಡೇ ಆರಂಭಿಸಿತ್ತು. ಹಂಗೆ ಹೆಡ್ ಪೋಸ್ಟ್ ಆಫೀಸಿನ ಆದೇಶದಂತೆ ನಮ್ಮೂರ್ ಪೋಸ್ಟ್ ಮೇಷ್ಟ್ರು ಬಹಳ ಜಾಗರೂಕತೆಯಿಂದ ಅರ್ಧ ಬಾಗಿಲು ತೆಗೆದು ಪೋಸ್ಟ್ ಆಫೀಸ್ ಕೆಲಸ ಮಾಡುತ್ತ ಗಂಗಣ್ಣನಿಗೂ ಎರಡೆರಡು ಸಲ ಹುಷಾರು ಹುಷಾರು ಅಂತ ಹೇಳಿ ಕಳಿಸಿದ್ದರು. ಗಂಗಣ್ಣ “ಆಯ್ತು ಬುಡಿ ಸಾರ್ ಯಾಕ್ ತಲೆ ಕೆಡುಸ್ಕೊತಿರಾ ನೀವ್ ಹುಷಾರು ಸರ್ ಯಾರಾದ್ರು ಬಂದು ಕಲ್ಲುಗಿಲ್ಲು ಹೊಡ್ದಾರು ನಾ ಬರಗಂಟ ಬಾಗಿಲಾಕೊಂಡೆ ಇರಿ ಸರ್..”
ಅಂತ ಅಂದರೆ ಪೋಸ್ಟ್ ಮೇಷ್ಟ್ರು “ಆಯ್ತಪ್ಪ.. ನಾನ್ ನಿನ್ಗ ಹುಷಾರು ಅಂದ್ರ ನನ್ಗೇ ಹುಷಾರು ಅಂತಿಯಾ.. ಸರಿ ಕಣಪ್ಪ ಹೋಗ್ ಬಾ” ಅಂತ ಮುಖದಲ್ಲೆ ನಗುತ್ತಿದ್ದರೆ ಗಂಗಣ್ಣ ಕಂಕುಳಿಗೊಂದು ಸುತ್ತಿದ ಉಂಡೆ ಬ್ಯಾಗು ಕೈ ತೋಳಿಗೊಂದು ಲೆಟರ್ ತುಂಬಿದ ಬ್ಯಾಗು ಒಂದಷ್ಟು ಕಾರ್ಡು, ಎಂ.ಓ ಕಾರ್ಡು ಹಿಡಿದು ಹೋದದ್ದು ಆಯ್ತು.
ಇತ್ತ ಗಂಗಣ್ಣನ ನೆನೆದು ಲೊಚಗುಟ್ಟುತ್ತಲೇ ಪೇಪರ್ ಓದುತ್ತಾ ಚೌಡಮ್ಮನ ಜೊತೆ ಮಾತಾಡುತ್ತಿದ್ದ ಪೋಸ್ಟ್ ಮೇಷ್ಟ್ರು ಚೌಡಮ್ಮನ ಕಡೆ ನೋಡುತ್ತ “ನಂಗೆ ಈ ಗಲಾಟೆವೊಳ್ಗೆ ನಮ್ ಗಂಗ್ಸೆಟ್ಟಿದೆ ಚಿಂತೆ. ಹೆಡ್ಡಾಫಿಸಿನೋರು ಇವ್ನ ಬೇಡ ಬೇಡ ಅಂದ್ರು ನನ್ಗೇ ಗಂಟಾಕುದ್ರು. ಇವ್ನ ಕಟ್ಕಂಡು ನಾನೇನ್ ಮಾಡ್ಲಿ. ಇವತ್ತು ಎಲ್ಲ ಕಡೆ ಸ್ಟ್ರೈಕ್ ಬೇರೆ. ನೋಡಿ, ನಮ್ ನೆಲಕ್ಕೋಸ್ಕರ ನಾವೇ ಹೋರಾಡ ಕಾಲ ಬಂತು” ಅಂತ ಪೇಪರ್ ಪೇಜ್ ತಿರುಗಿಸಿದರು. ಅವರ ಮಾತನ್ನು ನಿಂತು ಕೇಳುತ್ತಿದ್ದ ನಮಗೆ ಪೇಪರ್ ಮೇಲೆ ರಾಜ್ ಕುಮಾರ್ ಫೋಟೊ ದೊಡ್ಡದಾಗಿ ಕಾಣ್ತಿತ್ತು. ಅವರು ನಮ್ ಕಡೆ ತಿರುಗಿ “ಏಯ್ ಹೋಗ್ರಪ್ಪ ಮನೆಗೆ. ಇವತ್ತು ಸ್ಕೂಲ್ ರಜೆ ಇದೆ. ನೋಡಿ ನಿಮ್ ಸೋಸಲಿ ಮೇಷ್ಟ್ರು ವರ್ಗ ಆಗಿ ಇವತ್ತಿಂದ ಹೊಸ ಹೆಡ್ ಮೇಷ್ಟ್ರು ಬಂದರ. ನೋಡ್ತಿರಾ ಆಫೀಸ್ ರೂಮಲ್ಲಿ ಒಬ್ರೆ ಕುಂತರ ..” ಅಂತ ಹೇಳ್ತ “ಬೇಡ ಹೋಗಿ ಸ್ಕೂಲ್ ಓಪನ್ ಆದ್ಮೇಲ ನಿಮ್ಗೆ ಗೊತ್ತಾಯ್ತುದ.. ಆಕಡೆ ಎಲ್ಲೂ ಹೋಗ್ಬೇಡಿ ಗ್ರಾಚಾರ ಕೆಟ್ರ ಏನ್ರಪ್ಪ ಮಾಡ್ದರಿ.. ಬಸ್ಗೆಲ್ಲ ಕಲ್ಕೊಡಿತವ್ರ.. ಪೋಲೀಸವ್ರು ಬಂದು ಹೊಡ್ದವ್ರ್ ಜೊತ್ಗ ನಿಮ್ನುನ್ನು ಎತ್ಕ ಹೋದರು ಹೋಗಿ ಮನೆಗೆ” ಅಂದರು. ನಾವು ಅವರ ಮಾತಿಗೆ ಬೆಲೆ ಕೊಟ್ಟೊ ರಜೆಯ ಮಜದಲ್ಲೊ ಮುಖಮುಖ ನೋಡಿಕೊಂಡು ಮೆಲ್ಲಗೆ ಸರಿದು “ಏ ಸೋಸ್ಲಿ ಮೇಸ್ಟ್ರು ವರ್ಗನಂತ.. ಸದ್ಯ ಹೋದ್ರಲ್ಲ.. ಅಲ್ಲಿ ಬಸ್ಗ ಕಲ್ಲೊಡಿತಿದ್ದರಂತ ನಡಿರಿ ಬ್ಯಾಗಿಟ್ಬುಟ್ಟು ನೋಡ್ಕ ಬರಂವ್” ಅಂತ ನಾವ್ ನಾವೆ ಗುಸುಗುಸು ಮಾತಾಡಿಕೊಂಡು ಅಲ್ಲಿಂದ ಕಾಲ್ಕಿತ್ತು ಎಲಗಳ್ಳಿ ಬೇಲಿ ನೆಗೆದು ಮೊದಲು ಬಂದ ದಾರಿಯಲ್ಲೆ ಮನೆ ಕಡೆ ಗುಡುಗುಡನೆ ಓಡಿದೆವು.
ಅಲ್ಲಿ ಪಂಚಾಯ್ತಿ ಆಫೀಸ್ ಸರ್ಕಲ್ ತುಂಬ ಜನವೊ ಜನ. ಎಲ್ಲ ಕಡೆ ಗಲಾಟೆ ಅಂತ ಜನ ಮಾತಾಡ್ತ ಇದ್ದರು. ವಿದ್ಯೋದಯ ಕಾಲೇಜ್ ಸರ್ಕಲಲ್ಲಿ ಸ್ಟ್ರೈಕ್ ಅಂತೆ. ಬಸ್ಸುಗಿಸ್ಸು ಓಡಾಡ್ತ ಇಲ್ವಂತ. ಟೌನ್ ಕಡೆ ಹೋದ್ರೆ ಬುರುಡೆ ಬಿಚ್ಚಾಕ್ತರ ಅಂತ ಸುದ್ದಿ ಹಬ್ಬುತ್ತಿತ್ತು. ಎಲ್ಲ ಕನ್ನಡದಲ್ಲೆ ಮಾತಾಡಬೇಕು. ಕನ್ನಡದಲ್ಲೆ ಓದಬೇಕು. ಎಲ್ಲ ಊರಲ್ಲು ಕನ್ನಡದವರೇ ಇರಬೇಕು. ತಮಿಳ್ ಜನ, ತೆಲುಗ್ ಜನ, ಸಾಬರು, ಮರಾಠಿ ಜನ ಎಲರನ್ನು ಇಲ್ಲಿಂದ ಓಡಿಸಬೇಕು ಅಂತ ರಾಜ್ಕುಮಾರ್ ಹೇಳಿದ್ದಾನಂತ. ಪಿಚ್ಚರ್ ಮಾಡೋರೆಲ್ಲ ಒಂದು ಕಡೆಯಿಂದ ಹೇಳ್ತಾ ಬತ್ತಿದರಂತ ನಮ್ಮೂರಿಗೂ ಬಂದರಂತ ಅಂತ ಎಲ್ಲಿ ನೋಡಿದರಲ್ಲಿ ಮಾತಾಡಿಕೊಳ್ಳುತ್ತಿದ್ದರು.
ಪಂಚಾಯ್ತಿ ಆಫೀಸ್ ಮಗ್ಗುಲು ಬೀದಿಲಿದ್ದ ಕುಂಟ ಸಿದ್ದಪ್ಪನ ಮನೆಯ ಅಂಗಳದಲ್ಲಿ ಒಂದಷ್ಟು ಜನ ಮಾತಾಡ್ತ ನಿಂತಿದ್ದರು. ಅಲ್ಲಿಗೆ ನಾಕಾರು ಪೇಪರು ಬರುತ್ತಿದ್ದವು. ಕುಂಟ ಸಿದ್ದಪ್ಪ ಬಿಳಿಪಂಚೆ ಬಿಳಿ ಶರ್ಟು ಹಾಕೊಂಡು ಕ್ರಾಪ್ ತಲೆ ಬಾಚ್ಕೊಂಡು ಕಾಲಿನ ಮೇಲೆ ಕಾಲು ಹಾಕಿಕೊಂಡು “ಇದು ಗೋಕಾಕ್ ಚಳುವಳಿ ಅಂತ. ಅವ್ರೊಬ್ಬ ದೊಡ್ ಕವಿ. ಅವ್ರು ಸರ್ಕಾರಕ್ಕೆ ಬರ‌್ದಿರ ಪತ್ರನ ಇಟ್ಕೊಂಡು ನಡಿತಿರ ಹೋರಾಟ ಇದು. ಏಯ್ ನೋಡ್ರಪ್ಪ.. ಬಾಯಿಲ್ಲಿ” ಅಂತ ಕರೆದು “ನೀನು ಐದ್ನೆ ಕ್ಲಾಸಾ ನಾಕ್ನೆ ಕ್ಲಾಸಾ” ಅಂದ. ನಾನು “ಹು.” ಎನ್ನುವವನಂತೆ ತಲೆದೂಗಿದೆ. “ಹೌದಾ ಹೋಗು.. ಇನ್ಮೇಲ ಇಂಗ್ಲಿಸ್ ಗಿಂಗ್ಲಿಸ್ ಓದಂಗಿಲ್ಲ ಬರೀ ಕನ್ನಡ.. ನಿನ್ತವು ಇಂಗ್ಲಿಸ್ ಬುಕ್ಸ್ ಇದ್ರ ತೂದು ಬಿಸಾಕಿ ಕನ್ನಡ ಇಟ್ಗ” ಅಂದ. ಅಲ್ಲೊಬ್ಬ ಕೇಳ್ತಿದ್ದವನು “ಇದ್ಕ ರಾಜ್ಕುಮಾರ್ ಯಾಕ್ ಮದ್ಯಕ್ ಬಂದ..” ಅಂತ ಕೇಳಿದ. ಅದಕ್ಕೆ ಕುಂಟ ಸಿದ್ದಪ್ಪ “ಏಯ್.. ರಾಜ್ಕುಮಾರ್ ಅಂದ್ರ ಏನಂದ್ಕಂಡೆ.. ರಾಜ್ಕುಮಾರ್ ಇರವತ್ಗೆ ಎಲ್ಲ ಗಡಗಡ ನಡುಗ್ತ ಇರದು..” ಅಂತ ಹೇಳ್ತ ಸಡನ್ ದನಿ ತಗ್ಗಿಸಿ “ಜೊತ್ಗ ನಾವು ಕನ್ನಡಿಗರು ಒಟ್ಟಾಗಿ ಇರಬೇಕು ಅಂತ. ಬೇರೆ ಬೇರೆ ಕಡೆಯಿಂದ ಬಂದವರೆಲ್ಲ ಇಲ್ಲಿ ಸೇರ‌್ಕಂಡು ನಮ್ಗೇ ಜಾಗ ಇಲ್ಲ. ಶೇಟುಗಳು ಮಾರ‌್ವಾಡಿಗಳು ಟೌನ್ ತುಂಬ ಅವ್ರೆ ಅಲ್ವ.. ಬಟ್ಟ ಅಂಗ್ಡಿ, ದಿನ್ಸಿ ಅಂಗ್ಡಿ ಚಿನ್ದಂಗ್ಡಿ ಎಲ್ಲ. ಅಲ್ನೋಡಿ.. ಎಳುರುಂಡಿತವು ತಾಯೂರೋಣಿ ಸರೌಂಡಿಂಗ್ಲಿ ಮಾರ್ಕಾಕಿ ರೆಡ್ಡಿ ಕಾಲೋನಿ ಅಂತ ಮಾಡ್ತ ಅವ್ರ. ಬರಿ ತಮಿಳ್ರೆ.. ನೋಡಿದ್ದರ‌್ಯಾ ಹೆಂಗಿದೆ ಅಂತ.. ಅದು ಸಿಟಿ.. ಸಿಟಿ ತರ ಅದ. ಹಿಂಗೆ ಕಾಲೋನಿ ಮಾಡ್ಕಂಡ್ ಮಾಡ್ಕಂಡು ಬತ್ತಿದ್ರ ಇಡಿ ನರಸೀಪುರನೇ ಆವರಿಸಿಕೊಂಡಂಗೆ ಎಲ್ಲ ಊರ‌್ಲು ಇದೆ ತರ ಆದ್ರ ಇಡಿ ಕರ್ನಾಟಕನೇ ತಮುಳ್ರುದು ಆಯ್ತುದ.. ಗೊತ್ತಾ.? ಅದ್ಕ ರಾಜ್ಕುಮಾರ್ ಅಂತೆವ್ರು ಬೀದಿಗ ಇಳ್ದಿರದು.. ಆ ರಾಜ್ಕುಮಾರ್ ದೆಸ್ಗ ಏನ್ ಜನ..! ನಾನು ರಾತ್ರ ಟಿ.ಪಿ.ಬೋರಯ್ಯೋರ್ ಮನ ಟೆಲಿವಿಸನ್ಲಿ ನೋಡ್ದಿ. ರಾಜ್ಕುಮಾರ್ ಕಾಲಿಟ್ಟ ಜಾಗ್ವೆಲ್ಲ ಜನ. ಆ ಜನ ನೋಡ್ತಿದ್ರಾ.. ಬೋರಯ್ಯನವ್ರು ಬೀಳುತ್ತೆ ಸರ್ಕಾರ.. ಕಂಡ್ತ ಬೀಳುತ್ತೆ. ಗುಂಡುರಾವ್ ಮುಗುದ್ನ.. ಅಂತಿದ್ರು. ನಮ್ ಪಕ್ಷ ಅಂತ ನಾ ವಯಿಸ್ಕಳಲ್ಲ.. ಇಂದ್ರಗಾಂಧಿ ಮನುಸ್ ಮಾಡಿ ರಾಜ್ಕುಮಾರ್ ಜೊತ ಮಾತಾಡಿ ಓಕೆ ಆಯ್ತು ಅಂದ್ರ ಅವ ಗೆದ್ದಂಗಿ. ಇಲ್ಲಾಂದ್ರ ಅವ್ಳೂ ಮುಗಿತಳ” ಅಂತ ಹೇಳುತ್ತಿದ್ದರೆ ಎಲ್ಲರು ಕಿವಿ ನೆಟ್ಟಗೆ ಮಾಡಿಕೊಂಡು ಕೇಳುತ್ತಿದ್ದರು.
ಅಷ್ಟೊತ್ತಿಗೆ ಗಂಗಣ್ಣನ ದನಿ ಕೇಳ್ತು. ಗಂಗಣ್ಣ ಈಗಾಗಲೆ ಊರಿನ ಬೀದಿ ಬೀದಿ ಸುತ್ತಿ ಕಾಗದ ಪತ್ರ ಕೊಟ್ಟು ಗುರುತಿದ್ದ ಮುದುಕ ಮುದುಕೀಯರಿಗೆ ಓಲ್ಡೇಜು ವಿಡೊ ಪೆನ್ಸನ್ ಕೊಟ್ಟು ಅವರಿಂದ ಹೆಬ್ಬೆಟ್ಟು ಒತ್ತಿಸಿಕೊಂಡಿದ್ದ ಎಂ.ಓ ಕಾರ್ಡನ್ನು ಕೈಲಿಡಿದಿದ್ದ. ಗಂಗಣ್ಣನ ದನಿ ಕೇಳ್ತಿದ್ದಂಗೆ ಕುಂಟ ಸಿದ್ದಪ್ಪ ತಿರುಗಿ “ಏಯ್ ಗಂಗಾ ಇದೇನ ಇವತ್ತೂ ಬಂದಿದಯ್.. ಜನ ಕಲ್ತಕ್ಕ ಹೊಡ್ದು ನಿನ್ತವ್ ಇರಬರ ದುಡ್ನೆಲ್ಲ ಕಿತ್ಕಂಡು ಕಳ್ಸುದ್ರ ಏನ್ ಮಾಡ್ದಯ್.. ಬೇಗ ಮನ ಸೇರ‌್ಕ” ಅಂತ ನಗಾಡಿದ. ಗಂಗಣ್ಣ ಅವನ ಮುಂದಿದ್ದ ಮರದ ಕುರ್ಚಿಯಲ್ಲಿ ಕುಂತು “ತಕ್ಕಳಿ ಸಿದ್ದಪ್ಪೋರೆ ನನ್ಯಾಕ್ ಹೊಡಿತಾರೆ.. ಕೆಲ್ಸ ಇಲ್ಲ. ಜನುಕ್ಕೆ ಎಸ್ಟ್ ತೊಂದ್ರೆ ನೋಡಿ. ಅದಿರ‌್ಲಿ ಒಂದೈದಾರ್ ಎಂಓ ಕಾರ್ಡಿದೆ ಎಲ್ಟಿಎಂ ಹಾಕೊಡಿ” ಅಂದ. ಕುಂಟ ಸಿದ್ದಪ್ಪ “ಏಯ್ ಎಂತ ಎಲ್ಟಿಎಮ್ಮಾ..? ಸ್ಟ್ರೈಕು ಇವತ್ತು. ಹಿಂಗೆಲ್ಲ ನಾನ್ ಸೈನಾಕೊಟ್ರ ಜೈಲಿಗಾಕ್ತರ ಅಸ್ಟೆ. ನಾನಂತು ಹಾಕಲ್ಲ” ಅಂತ ಗೇಲಿ ಮಾಡಿ ತಮಾಷೆ ಮಾಡ್ದ. ನಿಂತಿದ್ದ ಜನ ಗೊಳ್ಳೆಂದರು. ಆಗ ಸಿದ್ದಪ್ಪ “ಆಯ್ತು ಕೊಡಿಲ್ಲಿ” ಅಂತ ಎಲ್ಲವನ್ನು ಈಸಿಕೊಂಡು ಒಂದೊಂದಾಗಿ ಓದುತ್ತ ಹೆಬ್ಬೆಟ್ಟು ಗುರುತಿನ ಮೇಲೆ ಎಲ್ಟಿಎಂ ಆಫ್ ಅಂತ ಇಂಗ್ಲಿಷಲ್ಲಿ ಬರೆದು ಸೈನ್ ಮಾಡ್ತಿದ್ದರೆ ಗಂಗಣ್ಣ ಮೇಲೆದ್ದು ಸುತ್ತ ನೋಡಿ ಹಂಗೆ ಕುಂತು ಜೇಬಿಗೆ ಕೈಹಾಕಿ ಉಂಡುಂಡೆಯಾಗಿ ಮಡಚಿದ್ದ ದುಡ್ಡಿನ ಕಂತೆ ಎತ್ತಿಕೊಂಡು ಉರುಗಿಸಿ ತಿರುಗಿಸಿ ನೋಡಿ ಮತ್ತೆ ಜೇಬಿಗಾಕಿಕೊಂಡು ಕುರ್ಚಿ ಮೇಲೆ ಕುಂತು “ಸಿದ್ದಪ್ಪೋರೆ ನಾಸ್ಟ ಮಾಡುದ್ರಾ..” ಅಂದ. ಅದಕ್ಕೆ ಸಿದ್ದಪ್ಪ “ಎಲ್ಲಿ ಗಂಗ ನಾಸ್ಟ.. ರಾಜ್ಕುಮಾರೇ ಅನ್ನ ನೀರಿಲ್ದೆ ಹೋರಾಡ್ತ ಅವ್ನ ಅಂತದ್ರಲ್ಲಿ ನಾವ್ ನಾಸ್ಟ ಮಾಡಕಾದ್ದ” ಅಂತ ನಕ್ಕ. ಗಂಗ “ಅಯ್ಯೋ ಅವ್ರೆಲ್ಲಿ ಅನ್ನ ನೀರು ಬಿಟ್ಟಿದ್ದಾರು ಅವ್ರಿರೊ ಜಾಗುಕ್ಜೆ ಎಲ್ಲ ಬತ್ತುದೆ ಕಣಪ್ಪೊ… ಅವ್ರೆಲ್ಲ ದೊಡ್ಡವ್ರು” ಅಂತ ಸೈನಾಕಿದ್ದ ಎಂ.ಓ ಕಾರ್ಡನ್ನು ಒಂದೊಂದಾಗಿ ಈಸಿಕೊಂಡು ಜೋಡಿಸಿಕೊಂಡು “ಬರ್ತಿನಿ ಸಿದ್ದಪ್ಪವ್ರೆ ಹಳೆ ತಿರುಮಕೂಡ್ಲಿಗೆ ಬೇರೆ ಹೋಗ್ಬೇಕು ಅಲ್ಲಿ ಲೆಟರ್ ಬಾಕ್ಸ್ ಬಿಚ್ಚಿ ಚೆಕ್ ಮಾಡ್ಬೇಕು ಅಲ್ಲೊಂದಷ್ಟು ಎಂ ಓ ಕೊಡ್ಬೇಕು ಲೇಟಾದ್ರೆ ನಮ್ ಮೇಷ್ಟ್ರು ಬೈತಾರೆ ಬತ್ತಿನಿ ” ಅಂತ ಮೇಲೆದ್ದು ಪುರಪುರನೆ ನಡೆದ. ನಾವು ಗಂಗಣ್ಣನ ಹಿಂದೆನೆ ಪಂಚಾಯ್ತಿ ಆಫೀಸ್ ತನಕ ಹೋದ್ವಿ. ಆಗ ಎದುರುಗಡೆಯಿಂದ ದಂಡಿನಮಾರಿಗುಡಿಯ ಮುಂಡಗಳ್ಳಿ ರೋಡಲ್ಲಿ ಧೂಳೆಬ್ಬಿಸುತ್ತ ಮಾಮೂಲಿಯಂಗೆ ಹೆಂಡದ ಲಾರಿ ಬರ್ತಿತ್ತು. ಮುಂದೆ ಹೋಗುತ್ತಿದ್ದ ಗಂಗಣ್ಣ ಧೂಳಿಂದ ತಪ್ಪಿಸಿಕೊಳಲೊ ನಾವು ಬರುತ್ತಿದ್ದುದ ನೋಡಲೊ ಕೈಯಲ್ಲಿದ್ದ ಬ್ಯಾಗನ್ನು ಮೇಲೆತ್ತಿ ಮುಖ ಮುಚ್ಚಿ ನಮ್ಮತ್ತ ತಿರಗಿ ನಿಂತ. ನಾವು ಹತ್ತಿರಾಗುತ್ತಿದ್ದಂಗೆ “ನೋಡ್ರಪ್ಪ ನಿಮ್ ರಾಜ್ಕುಮಾರ ಅಲ್ಲಿ ಸ್ಡ್ರೈಕ್ ಮಾಡ್ತವ್ರಂತೆ ಹೆಂಗ್ಯಪ್ಪ ನಿಮ್ಮೂರ‌್ಗೆ ಹೆಂಡ ಬಂತು.?” ಅಂದ. ಗಂಗಣ್ಣನ ಮಾತು ಕೇಳಿತೊ ಇಲ್ಲ ರಾಜ್ಕುಮಾರ್ ಹೋರಾಟದ ಕಿಚ್ಚೊ ಏನೊ ಆ ಧೂಳಿನ ಸಂದಿಯಲ್ಲಿ ಕಣ್ಣು ಮುಚ್ಚಿ ಬಿಡೊ ಅಷ್ಟರಲ್ಲಿ ಟಳ್ ಅನ್ನೊ ಸದ್ದಾಯ್ತು. ಲಾರಿ ಸಡನ್ ನಿಂತಿತು. ಅದರ ಮುಂದಿನ ಗಾಜು ಒಡೆದು ಚೂರಾಗಿ ಉದುರುವಾಗಲೆ ಇನ್ನೊಂದೆರಡು ಕಲ್ಲುಗಳು ತೂರಿ ಹೋದವು. ನಾವೂ ಅಲ್ಲೆ ಸುತ್ತಮುತ್ತ ಬೆಣಚು ಕಲ್ಲು ಹುಡುಕಿ ರೊಂಯ್ ಅಂತ ಲಾರಿ ಕಡೆ ಬೀಸಿದೆವು. ಆ ಕಲ್ಲು ಲಾರಿಯ ಗಾಜಿಗೆ ಬೀಳೊ ಬದಲು ಲಾರಿಯಲ್ಲಿ ತುಂಬಿದ್ದ ಹೆಂಡದ ಬಾಟಲಿಗಳಿಗೆ ಬಿದ್ದು ಹೆಂಡದ ಬಾಟಲಿ ಟಳೀರೆಂದು ಒಡೆದು ಹೆಂಡ ಸೋರಿ ಹೆಂಡದ ವಾಸನೆ ಸರ್ಕಲ್ ತುಂಬ ಹಬ್ಬಿತು.ಆ ಡ್ರೈವರೋ ಇಡಿ ಊರಿಗೇ ಗೊತ್ತಿದ್ದವನು. ಅವನು ಬೇಡ ಕಂಣ್ರಣ್ಣೊ ಅಂತ ಗೋಳೊ ಅಂತ ಅಳಲು ಶುರು ಮಾಡಿದ. ಅತ್ತ ಪುಂಡುಡುಗರು ಹಿಂದಿನಿಂದ ಲಾರಿ ಮೇಲತ್ತಿ ಹೆಂಡದ ಬಾಟಲಿ ಎತ್ತಿ ಎತ್ತಿ ಕೆಳಗಿಡುತ್ತ ರಾಜ್ಕುಮಾರ‌್ಗೆ ಜೈ ಅಂತ ಅನ್ನುತ್ತಿದ್ದವು. ಗಂಗಣ್ಣ “ಏಯ್ ಬಿಡ್ರಪ್ಪ ಪಾಪ ಅವ್ನೇನ್ ಮಾಡ್ದ.. ” ಅಂದ. ಅವನ ಮಾತಿಗೆ ಪ್ರತಿಯಾಗಿ “ಗಂಗ ಸುಮ್ನ ಹೊಂಟೋಗು ನಿಂಗು ಅಸ್ಟೆ ಏನಾ ಹೋಗ್ಲಿ ಅಂತ ಬುಟ್ಟಂವಿ.. ಕನ್ನಡಕ್ಜೋಸ್ಕರ ಇಸ್ಟೂ ಮಾಡ್ನಿಲ್ಲ ಅಂದ್ರ ಹೆಂಗ್ಯಾ.. ಆ ತಮಿಳ್ರ ಕೊಬ್ನೆಲ್ಲ ಇಳಿಸಗಂಟ್ಲು ಇಂಗೆ. ಹೋಯ್ತ ಇರು ನೀನು ಇಲ್ಲ ಅಂದ್ರ ನಿನ್ ಲೆಟ್ರು ಪಟ್ರನೆಲ್ಲ ಕಿತ್ತು ಬೆಂಕಿಗಾಕ್ತಿಂವಿ” ಅಂತ ಅಂದರು. ಗಂಗಣ್ಣನಿಗೆ ಅದೇನು ಅನ್ನಿಸಿತೊ ಏನೊ ದುಡ್ಡಿದ್ದ ಜೇಬನ್ನು ಭದ್ರವಾಗಿ ಅಮುಕಿ ಹಿಡಿದು ಪೋಸ್ಟಾಫೀಸ್ ಕಡೆ ಸರಸರ ಹೆಜ್ಹೆ ಹಾಕಿದ.
ಇತ್ತ ಹೆಂಡದ ಗುಳ್ಳಲ್ಲಿ ಬಿಳಿಪಂಚೆ ಬಿಳಿ ಅಂಗಿ ತೊಟ್ಟು ಜಬರ್ದಸ್ತಾಗಿ ಗಲ್ಲದ ಮೇಲೆ ಕುಂತು ಹೆಂಡದ ಲಾರಿಗೆ ಕಾಯ್ತಿದ್ದ ಉದ್ದದ ಬಿಳೀ ಗಡ್ಡದಂವ ಲಾರಿಗೆ ಕಲ್ಲು ಬಿದ್ದಿರೊ ವಿಚಾರ ತಿಳಿದು ಗಿರ್ಕಿ ಜೋಡು ಗಿರಿಕ್ಕು ಗಿರಿಕ್ಜು ಅನ್ನಿಸುತ್ತ ಕೂಗುತ್ತ ಓಡೋಡಿ ಬರುತ್ತಿದ್ದ. ಇತ್ತ ಅಡ್ಡ ಬಳಸಿ ಸಿಲ್ಕ್ ಫ್ಯಾಕ್ಟರಿ ಹಿಂಭಾಗದ ಕಲ್ಲು ಮುಳ್ಳಿನ ಚಿಣ್ಣಕೊಪ್ಪಲು ಮಾಳದ ದಾರಿಯಿಂದ ಉಳ್ಳಾಡುತ್ತ ಪೋಲೀಸ್ ಜೀಪೊಂದು ಭರ‌್ರಂತ ಬಂತು. ಪೋಲೀಸ್ ಜೀಪ್ ನೋಡ್ತಿದ್ದಂಗೆ ಅಲ್ಲಿದ್ದ ಜನರೆಲ್ಲ ಚೆಲ್ಲಾಪಿಲ್ಲಿಯಾಗಿ ದಂಡಿನಮಾರಿಗುಡಿಯ ಮುಂಡ್ಗಳ್ಳಿ ಬೇಲಿಯಲ್ಲದೆ ಅವರಿವರ ಹಿತ್ತಲು ಕಡೆ ಓಡತೊಡಗಿದರು. ನಾವೂ ಹೆದರಿ ಸ್ಕೂಲು ಬ್ಯಾಗು ನ್ಯಾತಾಕಿಕೊಂಡು ಯಾರ‌್ಯಾರದೊ ಹಿತ್ತಲು ಬಳಸಿ ಕಾಲಿಗೆ ಮುಳ್ಳು ಚುಚ್ಚುತ್ತದೆ ಎನ್ನುವುದನ್ನು ಕಾಣದೆ ಹೆದರಿ ಮನೆ ಸೇರಿದಾಗ ಅವ್ವ ಅಪ್ಪ ಗಾಬರಿಗೊಂಡಿದ್ದರು. ಅವರು ಒಳಕ್ಕೆಳೆದು ಬಾಗಿಲು ತಳ್ಳಿ ಚಿಲಕ ಹಾಕಿ ಕಿಟಕಿಯಲ್ಲಿ ಬೀದಿದಿಕ್ಕ ಮುಖ ಹಾಕಿದರು. ಅಲ್ಲಿ ಪೋಲೀಸರು ಕಿತ್ತೋಗಿ ಧೋಳೇಳುವ ರೋಡಿನಲ್ಲಿ ಬೂಟು ಕಾಲಿನಲಿ ಸಿಕ್ಕಸಿಕ್ಕ ಕಲ್ಲು ಒದ್ದು ಸೈಡಿಗೆ ತಳ್ಳುತ್ತ ಲೈನಿಗಿದ್ದ ಎಲ್ಲರ ಮನೆಗಳ ಕಡೆ ಗುರಾಯಿಸುತ್ತ ಬರುತ್ತಿತ್ತು. ಅಪ್ಪ ಇನ್ನಷ್ಟು ಗಾಬರಿ ಬಿದ್ದವನಂತೆ ಕಿಟಕಿ ಬಾಗಿಲು ಅರ್ಧ ತಳ್ಳಿಡಿದು ಇಣುಕಿ ಬೀದಿಯ ಸುದ್ದಿಯನ್ನು ಗುಸಗುಸನೆ ನನಗೂ ಅವ್ವಳಿಗೂ ಹೇಳತೊಡಗಿದ.
(ಮುಂದುವರಿಯುವುದು)
-ಎಂ.ಜವರಾಜ್
[ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. “ಕತ್ತಲ ಹೂವು” (ನೀಳ್ಗತೆ) ಪ್ರಕಟಣೆಗೆ ಸಿದ್ದಗೊಳ್ಖುತ್ತಿದೆ. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಪ್ರಸ್ತುತ “ಪೋಸ್ಟ್ ಮ್ಯಾನ್ ಗಂಗಣ್ಣ” ಎಂಬ ನೀಳ್ಗತೆ ಮುಗ್ಧ ಪೋಸ್ಟ್ ಮ್ಯಾನ್ ಒಬ್ಬನ ಜೀವನ ಚಿತ್ರವನ್ನು ಹೇಳುವ ಒಂದು ಕುತೂಹಲಕಾರಿ ಕಥೆಯಾಗಿದೆ]