ಶಾಮುನ ತಂದೆ ತಾಯೀ ಅದಾಗಲೇ ಹಿರಿಯ ನಾಗರೀಕರಾಗಿದ್ದರು. ತಾವು ಮಾಡುತ್ತಿರುವ ಶ್ರಮದ ಕೆಲಸಗಳಿಂದ ಮುಕ್ತಿ ಹೊಂದಬೇಕೆಂದು, ತಮ್ಮ ಪುತ್ರನನ್ನು ಕರೆದು ಒಂದು ವಿಷಯ ಚರ್ಚಿಸೋದಿದೆ ಬಾ ಎಂದು ಕರೆದರು. ಆಗ ಆತ ಬಂದು;
‘ಅದೇನಮ್ಮಾ ಚರ್ಚಿಸುವಂಥಹ ವಿಷಯ ?’ ಎಂದ.
‘ಅಂದ ಹಾಗೆ ನಿನಗೆಷ್ಟು ವಯಸ್ಸು ?’ ಎಂದಳು ಅಮ್ಮ.
‘ಹತ್ರ..ಹತ್ರ ಇಪ್ಪಂತ್ತೆಂಟು’ ಎಂದ.
‘ನಿನ್ನಈ ವಯಸ್ಸಿಗೆ ಏನು ಆಗಬೇಕು ಅದು ಆಗಬೇಕಲ್ಲವೇ ?’ ಎಂದ ಅಪ್ಪ.
‘ಉದ್ಯೋಗವಂತೂ ಸಿಕ್ಕಿದೆ, ಸರಿಯಾದ ಸಂಬಳ ಕೂಡ ಸಿಗುತ್ತಿದೆ, ಮತ್ತಿನ್ನೇನು ಬೇಕು ?’ ಎಂದ ಶಾಮು.
‘ಅಲ್ವೋ.. ದಡ್ಡ.. ಮದುವೆ ಎಂಬುದು ಸೃಷ್ಟಿಯ ನಿಯಮ ಕಣೋ. ಈ ವಯಸ್ಸಿನಲ್ಲಿ ನಿನ್ನಮ್ಮನನ್ನು ನಾನು ಕಟ್ಟಿಕೊಂಡಿದ್ದೆ’ ಎಂದ ಅಪ್ಪ.
‘ಬಿಡಪ್ಪಾ ನಿಮ್ಮ ಕಾಲ ಬೇರೆ, ಈಗಿನದು ಬೇರೆ. ಏನಿದ್ರೂ ಮೂವತ್ತರ ನಂತರ ಅದರ ಯೋಚನೆ ಮಾಡಬೇಕು. ಅದೇನೋ ಹೇಳ್ತಾರೆ; ಮದುವೆಯಾದ ಮೇಲೆ ಗಂಡಸನ್ನು ಪಂಜರದಲ್ಲಿ ಇಟ್ಟ ಹಾಗೆ ಎಂದು’. ಎಂದ ಶಾಮು.
‘ಥೂ… ನಿನ್ನದು ಎಂಥಹ ಕೆಟ್ಟ ಯೋಚನೆ ಮತ್ತು ಕಲ್ಪನೆ ?’ ಎಂದ ಅಪ್ಪ.
‘ಏನಪ್ಪಾ ಮದುವೆಯಾಗಿ ನೀನು ಸುಖವಾಗಿ ಇದ್ದೀಯಾ ?’
‘ಏಯ್ ದಡ್ದ, ನಮ್ಮ ಸಂಸಾರದ ಸುಖ ದುಃಖ ಸಮಯಕ್ಕೆ ತಕ್ಕಂತೆ ಇರುತ್ತವೆ, ಯಾವಾಗಲೂ ಸುಖವನ್ನೇ ಬಯಸುವದು ಮೂರ್ಖತನ ಮತ್ತು ದುಃಖಕ್ಕೆ ಕಾರಣವಾಗುತ್ತದೆ. ಯಾವ ವಯಸ್ಸಿನಲ್ಲಿ ನಮಗೆ ಮದುವೆ ಮತ್ತು ಮಕ್ಕಳಾಗಬೇಕೋ ಅವು ಆಗಿವೆ. ಸಂಬಂಧಿಗಳಿಂದ ಸಿಗಬೇಕಾದ ಪ್ರೀತಿ ಸಿಕ್ಕಿದೆ. ಈಗ ನೀವೆಲ್ಲ ದೊಡ್ಡವರಾಗಿ ಗಳಿಕೆ ಮಾಡ್ತಾ ಇದ್ದೀರಿ. ಇದೇ ಅಲ್ವೇನೋ ಸುಖ ಸಂತೋಷ. ಇನ್ನೇನು, ನಮಗೆ ವಯಸ್ಸಾಯಿತು ಮತ್ತು ಶ್ರಮದಿಂದ ನಾವು ಬಿಡುಗಡೆ ಆಗಬೇಕು ಎಂಬುದೇ ನಮ್ಮಿಚ್ಛೆ. ಅಷ್ಟಾದರೆ, ನಾವು ನೂರಕ್ಕೆ ನೂರು ತೃಪ್ತಿವಂತರು ಅಲ್ವ ?’ ಎಂದ ಅಪ್ಪ.
‘ ಏಕೋ, ನನಗೆ ಮದುವೆ ಬಂಧನ ಇಷ್ಟವಿಲ್ಲ.’ ಎಂದ ಶಾಮು.
‘ಅಯ್ಯೋ ಹಾಗೆಂದರೆ ಹ್ಯಾಗೋ ? ಮುಂದಿನ ಸಂತತಿ ಬರಬೇಕಲ್ಲ. ಆಗ ನಾವು ಆನಂದಗೊಳ್ಳಬೇಕಲ್ಲ.’ ಎಂದಳು ಅಮ್ಮ.
‘ಅಮ್ಮ, ನಿನಗೆ ಸೊಸೆ ಬಂದರೆ, ನೀನು ಸುಖವಾಗಿ ಇರ್ತೀಯಾ ಅಂತ ಏನು ಗ್ಯಾರಂಟೀ ?’ ಎಂದ ಶಾಮು.
‘ಯಾವುದು ಗ್ಯಾರಂಟೀ ಅಲ್ಲ, ಆದರೇ, ಸಮಯಕ್ಕೆ ತಕ್ಕಂತೆ ಹೊಂದಿಕೊಳ್ಳಲು ಮದುವೆಯ ಬಂಧನ ಅವಶ್ಯ’ ಎಂದ ಅಪ್ಪ.
‘ಅಂದ್ರೇ, ನೀವಿಬ್ಬರು ನಿಮ್ಮ ಅನುಕೂಲಗಳನ್ನು ನೋಡಿಕೊಳ್ಳುತ್ತಾ ನನಗೆ ಮದುವೆ ಮಾಡಬೇಕೆಂದಿರುವಿರಿ ಆಲ್ವಾ ?’ ಎಂದ ಶಾಮು.
‘ಅದು ಲೋಕ ಸಹಜ ಕಣೋ. ಅದಕ್ಕೆ ಯಾರೂ ಹೊರತಿಲ್ಲ ‘
‘ಬೇಡಪ್ಪ, ನನ್ನ ಮಾತು ಕೇಳಿ. ನಾನು ನನ್ನ ಆಫೀಸಿನಲ್ಲಿ ಯಾವುದೇ ಚಿಂತೆ ಇಲ್ಲದೇ ಕೆಲಸ ಮಾಡುತ್ತಿದ್ದೇನೆ. ಮನೆಗೆ ಬಂದು ನಿಮ್ಮನ್ನು ನೋಡಿಕೊಳ್ಳುತ್ತಿದ್ದೇನೆ. ನೀವಿಬ್ಬರೂ ಮತ್ತು ನಾನು ಸಂತೋಷವಾಗಿಯೇ ಇದ್ದೇವಲ್ಲ ಅಷ್ಟು ಸಾಕು. ಮದುವೆ ಹೆಸರಿನಲ್ಲಿ ಕಾಲಿನ ಮೇಲೆ ಯಾಕೆ ಕಲ್ಲು ಹಾಕಿಕೊಳ್ಳೋದು ?’
‘ಒಮ್ಮೆಲೇ ಕೆಟ್ಟ ನಿರ್ಧಾರಕ್ಕೆ ಬರಬೇಡ. ವಿಚಾರ ಮಾಡು. ನಿನ್ನ ಒಳ್ಳೆಯ ಸ್ನೇಹಿತರಲ್ಲಿ ಇದರ ಬಗ್ಗೆ ಚರ್ಚೆ ಮಾಡು. ಆಮೇಲೆ ನಿರ್ಧಾರಕ್ಕೆ ಬಾ.’ ಎಂದರು ಅಪ್ಪ.
‘ಸರಿ, ಈಗ ಇದರ ಚರ್ಚೆ ಸಾಕು ‘ ಎಂದು ಶಾಮು ಅಲ್ಲಿಂದ ಕದಲಿದ.
ಮಾರನೆಯ ದಿನ ತನ್ನ ಬಾಲ್ಯ ಸ್ನೇಹಿತ ಶಿವುನ ಬಳಿಗೆ ಹೋದ. ತನ್ನ ಅಳಲನ್ನು ತೋಡಿಕೊಂಡ. ಅದಕ್ಕೆ ಅವನು ಹೀಗೆ ಹೇಳಿದ;
‘ನೋಡೋ, ಯಾವುದೇ ಕೆಲಸ ಆಯಾ ಸಮಯದಲ್ಲಿ ಅದರೇನೇ ಒಳ್ಳೆಯದು. ಹೀಗೆ ಹಿರಿಯರಂತೂ ಹೇಳ್ತಾರೆ, ಆದರೆ ನಾನು ಅನುಭವಗೊಂಡಿದ್ದೇನೆ. ನಾನು ಒಂದು ಪುಟ್ಟ ಸಂಸಾರ ಮಾಡಿಕೊಂಡಿದ್ದೇನೆ. ನೀನೂ ಮಾಡಿಕೊಂಡು ಬಿಡು’ ಎಂದ ಶಿವು.
‘ಏನೋ…. ನೀನು ಮೊದಲ ಬೌಲಿಗೆಯೇ ಬೌನ್ಸರ್ ಹಾಕಿಬಿಟ್ಟೆ. ಅದೇನೋ ಸಲಹೆ ಕೊಡು ಅಂದ್ರೆ, ನ್ಯಾಯಾಧೀಶನ ಹಾಗೆ ತೀರ್ಮಾನ ಕೊಟ್ಟುಬಿಟ್ಟೆಯಲ್ಲ !’
‘ಹೌದು ಕಣೋ ಇವೆಲ್ಲ ನಮ್ಮ ಬದುಕಿನ ತೀರ್ಮಾನಗಳು. ನಮ್ಮ ತೀರ್ಮಾನಗಳುನ್ನು ನಾವೇ ತೆಗೆದುಕೊಳ್ಳಬೇಕು. ಸಲಹೆ ಕೇಳಬೇಕು ನಿಜ, ಆದರೇ ಎಲ್ಲರೂ ಅವರವರ ಅನುಭವಕ್ಕೆ ತಕ್ಕಂತೆ ಸಲಹೆ ಕೊಡುತ್ತಾರೆ, ಆದರೆ, ಆಯ್ಕೆ ಮಾತ್ರ ನಮ್ಮದೇ ಆಗಿರಬೇಕು ತಿಳಿಯಿತಾ ? ಇದರ ಮೇಲೆ ನಿನ್ನ ಇಷ್ಟ.! ‘
‘ಸರಿಯಪ್ಪ .. ನೀನು ನನ್ನ ಮನಸ್ಸನ್ನು ಕದಡಿದೆ ಎಂಬುವದು ಅಪ್ಪಟ ಸತ್ಯ. ‘ ಎಂದು ಹೇಳಿ ಅಲ್ಲಿಂದ ಹೊರಟ.
ಶಾಮು ಇನ್ನೊಂದು ಲೈಫ್ ಲೈನ್ ಹುಡುಕಲು ಮುಂದಾಗಿ ಇನ್ನೊಬ್ಬ ಮಿತ್ರ ಶಂಕರನ ಮನೆಗೆ ಹೋದ. ಆತನ ಜೊತೆಗೂ ಮದುವೆಯ ಲಾಭ-ನಷ್ಟಗಳ ಬಗ್ಗೆ ಚರ್ಚೆ ಮಾಡಿದ. ಆತ ಹೀಗೆ ಹೇಳಿದ;
‘ಶಾಮು ತಪ್ಪು ತಿಳಿದುಕೊಳ್ಳಬೇಡ. ಮದುವೆ ಎಂಬುದು, ಒಂದು ವರ್ತುಲ ಇದ್ದಂತೆ. ಅದರೊಳಗೆ ಹೋಗುವ ಕುತೂಹಲ ಬಹಳ ಜನರಿಗೆ ಇರುತ್ತದೆ ಮತ್ತು ಸುಲಭ ಕೂಡ. ಒಮ್ಮೆ ಒಳ ಹೊಕ್ಕರೆ, ಹೊರಕ್ಕೆ ಬರಲಾಗುವುದಿಲ್ಲ. ನಾವು ಗಂಡಸರಾಗಿಯೂ ನಮ್ಮ ಸ್ವಾತಂತ್ರ ಕಳೆದುಕೊಳ್ತೇವೆ. ಕುಟುಂಬದ ಅಧೀನರಾಗಿ ಬಿಡುತ್ತೇವೆ. ಇದನ್ನು ಯೋಚಿಸಿ ನೋಡುವದು ಒಳಿತು. ಮಿತ್ರಾ ಈಗ ಆಯ್ಕೆ ನಿನ್ನದು. ‘ ಎಂದ.
‘ಈಗ ನಿನಗೆಷ್ಟು ಮಕ್ಕಳು ?’ ಶಾಮು ಪ್ರಶ್ನಿಸಿದ.
‘ಒಬ್ಬನೇ ‘
‘ಅವನು ಮುದ್ದಾಗಿರಬೇಕಲ್ಲ ?’
‘ತುಂಬಾ ಮುದ್ದು’ ಎಂದ.
‘ಅರೇ, ಮಗು ಮುದ್ದಾಗಿದೆ ಅಂತೀಯಾ , ಸಂಸಾರ ಮುದ್ದಾಗಿ ಏಕಿಲ್ಲ ?’ ಎಂದ ಶಾಮು.
‘ಅದನ್ನು ಹೇಳಿಕೊಳ್ಳಲು ಕಷ್ಟ ಬಿಡು, ನಿನಗಾದರೂ ಒಳ್ಳೆಯದಾಗಲಿ’ ಎಂದು ಸುಮ್ಮನಾದ. ಅಷ್ಟರಲ್ಲಿ ಶಂಕರನ ಶ್ರೀಮತಿ ಒಂದು ಲೋಟ ಕಾಫಿಯೊಂದಿಗೆ ಬಂದಳು. ಕಾಫಿಯನ್ನು ಶಾಮುಗೆ ಕೊಟ್ಟಳು ‘
‘ಅಯ್ಯೋ ಅತ್ತಿಗೆ ಶಂಕರನಿಗೆ ಕಾಫಿ ಇಲ್ವಾ ?’
‘ಅವರಾಗಲೇ ಕುಡಿದಾಗಿದೆ. ಅವರು ಒಂದೇ ಬಾರಿ ಕುಡಿಯೋದು’ ಎಂದಳು.
‘ಅಯ್ಯೋ… ಹಾಗೆ ನೋಡಿದರೇ ನಾನೂ ಬರುವಾಗ ಕುಡ್ಕೊಂಡು ಬಂದಿದ್ದೇನೆ’ ಎಂದಾಗ.
‘ನೀವು ನಮ್ಮ ಅತಿಥಿ, ಅವರಲ್ಲ’ ಎಂದು ಒಳಕ್ಕೆ ಹೊರಟು ಹೋದಳು. ಆಗ ಶಂಕರ ಹೇಳಿದ;
‘ಶಾಮು, ಇದೇ ಕಣೋ ಮದುವೆಯಾದವರ ಸ್ಥಿತಿ !’ ಎಂದ.
‘ಅರ್ಥವಾಯಿತು ! ಸರಿ, ಶಂಕ್ರು ಬರ್ತೀನಿ ‘ ಎಂದು ಅಲ್ಲಿಂದ ಹೊರಟ.
ಶಿವೂ ಮತ್ತು ಶಂಕರ ಇಬ್ಬರ ತದ್ವಿರುದ್ಧ ಅಭಿಪ್ರಾಯಗಳನ್ನು ಶಾಮು ಮೆಲುಕು ಹಾಕುತ್ತಲೇ ಹೆಜ್ಜೆ ಹಾಕುತ್ತಿದ್ದ. ಆಗ ಇನ್ನೊಬ್ಬ ಸ್ನೇಹಿತ ರಾಮು ಎದುರಿಗೆ ಬಂದ.
‘ಏನೋ, ಶಾಮು ಯಾಕೋ ನಿನ್ನ ಮುಖ ಸಪ್ಪೆ ಆಗಿದೆ’ ಎಂದು ಅನ್ನಬೇಕೇ ?
‘ಏಯ್, ಇಲ್ಲೇ ಹತ್ತಿರ ಗಾರ್ಡನ್ ಇದೆ. ಅಲ್ಲಿ ಕುಳಿತುಕೊಂಡು ಮಾತಾಡೋಣ ಬಾ ‘ ಎಂದ ಶಾಮು. ಇಬ್ಬರೂ ಹಚ್ಚನೆಯ ಹುಲ್ಲು ಹಾಸಿನ ಮೇಲೆ ಕುಳಿತುಕೊಂಡರು.
‘ನಿನ್ನ ಸಮಸ್ಯೆ ಏನೋ ? ‘ ಎಂದ ರಾಮು.
‘ಅದು ಮನೆಯಲ್ಲಿ ಅಪ್ಪ ಅಮ್ಮ ನನಗೆ ಮದುವೆ ಮಾಡಿಕೋ ಎಂದು ಒತ್ತಾಯ ಮಾಡುತ್ತಿದ್ದಾರೆ. ನೀನೂ ಸಲಹೆ ಕೊಡು ಮಿತ್ರ’ ಎಂದು ಗೋಗರೆದ.
‘ಏನೋ, ನೀನು ಮದುವೆ ಒಲ್ಲೆಯಂತೀಯಾ ? ನಾನು ಆಗಬೇಕೆಂದಿದ್ದೇನೆ ನನಗೆ ಯಾರೂ ಹೇಳುತ್ತಿಲ್ಲ ಕೇಳುತ್ತಿಲ್ಲ ಮತ್ತು ಯಾವ ಹುಡುಗೀನೂ ಹತ್ತಿರ ಬರುತ್ತಿಲ್ಲ.’ ಎಂದು ತನ್ನ ಕಷ್ಟ ತೋಡಿಕೊಂಡ.
‘ಅಯ್ಯೋ, ನನಗೆ ಸಲಹೆ ಕೊಡು ಎಂದರೇ ನಿನ್ನದೇ ಅಳಲು ಹೇಳುತ್ತೀಯಲ್ಲಾ ?’ಎಂದಾಗ;
‘ನೀನು ಒಳ್ಳೆಯ ಮತ್ತು ಸುಂದರವಾದ ಹುಡುಗಿಯನ್ನು ಆಯ್ಕೆ ಮಾಡಿಕೊಂಡು ಮದುವೆಯಾಗು. ನಿನ್ನ ಮದುವೆಯನ್ನಾದರೂ ನೋಡಿ ನಾನು ಸಂತೋಷ ಪಡುತ್ತೇನೆ’ ಎಂದ ರಾಮು.
‘ಹಾಗಾದರೆ, ನಾನು ಮದುವೆಯಾದರೆ ಸುಖವಾಗಿ ಇರುತ್ತೇನೆಯೇ ?’ ಶಾಮು ಕೇಳಿದ.
‘ಒಂದು ವರ್ಷವಂತೂ ಗ್ಯಾರಂಟೀ, ಆಮೇಲೆ ಹೇಳಲಿಕ್ಕಾಗದು.’ ಎಂದ.
‘ಹಾಗೆಂದರೆ ಏನೋ ?’
‘ಅದು ಹಾಗೆಯೇ !. ವಾರಂಟೀ ಪಿರಿಯಡ್ ಅಂತಾರಲ್ಲ ಹಾಗೆಯೇ ! ಇದನ್ನು ಎಷ್ಟೋ ಮಿತ್ರರು ಹೇಳಿರುವಂಥಹದು. ಅಲ್ಲದೇ, ಮುಂದಿನ ಬದುಕನ್ನು ನೀನು ಸುಂದರವಾಗಿ ಕಟ್ಟಿಕೊಳ್ಳಬಹುದು. ಒಂದು ವರ್ಷದ ನಂತರದ ಬದುಕನ್ನು ಈಗಲೇ ಯಾಕೆ ಯೋಚಿಸಬೇಕು ? ಹಾಗೆ ಯೋಚಿಸಿದರೂ ಅದು ಹೊಳೆಯುವದಿಲ್ಲ. ಹಾಗಾಗಿ, ನಿನ್ನ ಅಪ್ಪ ಅಮ್ಮ ಹೇಳಿದ ಮಾತು ಸರಿಯಾಗಿದೆ. ನೀನು ಈ ವಿಷಯದಲ್ಲಿ ಮುಂದೆ ಹೋಗು. ಎಲ್ಲಿಯಾದರೂ, ಯಾವ ಹುಡುಗಿಯನ್ನಾದ್ರೂ ನೋಡಿದೆಯಾ ?’
‘ಇಲ್ಲ, ಇನ್ಮುಂದೆ ನೋಡಬೇಕು ಅಷ್ಟೇ ‘ ಎಂದ.
‘ಮೊದಲು ಹುಡುಗಿಯನ್ನು ನೋಡುವ ಕಾರ್ಯಕ್ರಮ ಆರಂಭವಾಗಲಿ. ದೇವರು ನಿನಗೆ ಒಳ್ಳೆಯದನ್ನು ಮಾಡಲಿ. ನನಗೆ ಕೆಲಸ ಇದೆ ಬರ್ತೀನಿ ‘ ಎಂದು ರಾಮು ಅಲ್ಲಿಂದ ನಡೆದ.
ಅಪ್ಪ ಅಮ್ಮ ಮತ್ತು ಶಾಮು ಯಥಾ ಪ್ರಕಾರ ಮನೆಯಲ್ಲಿ ಕುಳಿತು ಚರ್ಚೆ ಮಾಡತೊಡಗಿದರು.
‘ಅಪ್ಪಾ, ನನಗೆ ಮದುವೆಯಾಗಲು ಒಪ್ಪಿಗೆ ಇದೆ. ನೀವು ನನ್ನ ಸಲುವಾಗಿ ಹುಡುಗಿಯನ್ನು ನೋಡಬಹುದು’ ಎಂದ. ಅದಕ್ಕೆ ಅವರು;
‘ಅಲ್ವೋ, ನೀನೇ ಹುಡುಗಿಯನ್ನು ನೋಡು. ನಾವು ನೋಡುವದು ನಿನಗೆ ಇಷ್ಟವಾಗುತ್ತೋ ಇಲ್ವೋ ಗೊತ್ತಿಲ್ಲ’ ಎಂದ ಅಪ್ಪ.
‘ಸರಿ, ಒಟ್ಟಿನಲ್ಲಿ ಎಲ್ಲರ ಮನಸ್ಸಿಗೆ ಬರಲಿ ‘ ಎಂದ ಶಾಮು.
‘ನನ್ನ ತವರಿನ ಕಡೆಗೆ ಒಂದು ಹುಡುಗಿ ಇದೆ, ಅದನ್ನು ನೋಡಬಹುದಲ್ಲ ‘ ಎಂದಳು ಅಮ್ಮ ಖುಷಿಯಿಂದ.
‘ಆಗಬಹುದು ಏಕಿಲ್ಲ?’ ಎಂದ ಅಪ್ಪ. ಅವರಿಗೆ ಹೇಳಿ ಕಳಿಸು, ಅವರು ಬರುತ್ತಾರೋ ಅಥವಾ ನಾವೇ ಅಲ್ಲಿಗೆ ಹೋಗಬೇಕಾ ಎಂಬುದು ತಿಳಿದುಕೋ ‘ ಎಂದು ಹಿಗ್ಗಿ ಹೀರೆಕಾಯಿ ಆದ ಅಪ್ಪ.
ಮುಂದೊಂದು ದಿನ ಶಾಮುನ ಕಡೆಯವರು ಹುಡುಗಿಯನ್ನು ನೋಡಿದರು, ಮದುವೆಯ ನಿಷ್ಕರ್ಷೆಯೂ ಆಯಿತು. ಮದುವೆ ಇನ್ನೂ ಒಂದು ವಾರ ಇರೋವಾಗ ಶಾಮು ಹುಡುಗಿಯ ಊರಿಗೆ ಹೋಗಿ ಹುಡುಗಿಯನ್ನು ಕಂಡು ಮಾತಾಡಿದ;
‘ನೋಡು ಅಂಜಲಿ, ನನ್ನ ಅಪ್ಪ ಅಮ್ಮ ಅಂದ್ರೇ ನನಗೆ ಪ್ರಾಣ, ನೀನೂ ನನ್ನ ಹಾಗೆಯೇ ನೋಡಿಕೊಳ್ಳಬೇಕು ‘ ಎಂದ.
‘ಆದಿನವೇ, ನಿಶ್ಚಿತಾರ್ಥದಲ್ಲಿ ಮಾತಾಡಬೇಕಿತ್ತಲ್ವಾ ? ಈಗೇನು ಹೊಸ ನಿಯಮಗಳು ?’ ಎಂದಳು ಹುಡುಗಿ.
‘ಅರೆ ! ಇದು ಜೀವನದ ವಿಷಯ. ಮಾತಾಡಲೇಬೇಕಲ್ವಾ ?’ ಎಂದ ಶಾಮು.
‘ಮಾತುಗಳು ಆಗಲೇ ಆಗಿವೆ. ಹೆಚ್ಚಿನ ಮಾತು ನನಗೆ ಬೇಕಿಲ್ಲ. ಇದರ ಮೇಲೆ ಏನಾದರೂ ಹೇಳೋದಿದ್ದರೆ, ನನ್ನ ಅಪ್ಪಯ್ಯಗೆ ಹೇಳಿ ‘ ಎಂದು ಎದ್ದು ಆಕೆ ಹೊರಟು ಹೋದಳು.
ಆಗ ಶಾಮು ವಿಚಲಿತನಾದ. ಅವಳು ಹೇಳಿದ್ದುದರ ಬಗ್ಗೆ ಚಿಂತಿಸಿದ. ಅಷ್ಟರಲ್ಲೇ, ಹುಡುಗಿಯ ತಂದೆ ಬಂದ. ಶಾಮುನನ್ನು ಕಂಡು ;
‘ಏನು ಅಳಿಯಂದಿರೇ.. ಏನಾದ್ರು ವಿಷಯ ಇತ್ತಾ ?’ ಎಂದ.
‘ನಮ್ಮ ಮನೆಗೆ ಬರುವವಳನ್ನು ನನ್ನ ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳಬೇಕು ಎಂದು ಕೇಳಿದರೆ, ಅದು ಮಾತು-ಕತೆಯಲ್ಲಿ ಬಂದಿಲ್ಲ, ಅದರ ಬಗ್ಗೆ ಏನೂ ಹೇಳಬೇಡಿ ಎಂದಳು ನಿಮ್ಮ ಮಗಳು’ ಎಂದ.
‘ಅವೆಲ್ಲಾ ಆಮೇಲೆ ಸರಿ ಹೋಗುತ್ತವೆ, ಅವುಗಳ ಬಗ್ಗೆ ಕೇಳೋದು ಅವಶ್ಯಕತೆ ಇಲ್ಲ ಅಳಿಯಂದಿರೇ. ಇದನ್ನು ನನ್ನ ಕಿವಿ ಮಾತು ಎಂದುಕೊಳ್ಳಿರಿ. ಈಗ ನೀವು ಹೋರಡಿ’ ಎಂದು ಹೇಳಿ ಆತನನ್ನು ಕಳಿಸಿಕೊಟ್ಟ ಮಾವ.ಶಾಮುಗೆ ಸ್ವಲ್ಪ ಸಂದಿಗ್ಧ ಪರಿಸ್ಥಿತಿ ಬಂದ ಹಾಗೆ ಅನಿಸಿತು. ಆತ ಮನೆಗೆ ಬಂದು ಆ ವಿಷಯವನ್ನು ಅಪ್ಪ ಅಮ್ಮಗೆ ತಿಳಿಸಿದಾಗ ಅವರು ನಕ್ಕುಬಿಟ್ಟರು.
ಮದುವೆಯ ದಿನ ಬಂದಿತು. ಬೀಗರ ಊರಿಗೆ ಹೋಗಿ ಅಲ್ಲಿಯೇ ಮದುವೆ ಮಾಡಿಕೊಂಡು ತಮ್ಮ ಮನೆಗೆ ಬಂದರು. ಆ ರಾತ್ರಿ, ಶಾಮು ತನ್ನನ್ನು ಮದುವೆಯಾದ ಹುಡುಗಿಯನ್ನು ಹೀಗೆ ಕೇಳಿದ;
‘ನೋಡು ಅಂಜಲಿ.. ನನ್ನ ಅಪ್ಪ ಅಮ್ಮ ಅವರನ್ನು…. ‘ ಎಂದು ಹೇಳುವಷ್ಟರಲ್ಲಿ, ಅಂಜಲಿ ಮಧ್ಯದಲ್ಲಿ ಆತನನ್ನು ತಡೆದು ಹೇಳಿದಳು;
‘…….ತುಂಬಾ ಪ್ರೀತಿಸುತ್ತೇನೆ, ಅವರನ್ನು ಸರಿಯಾಗಿ ನೋಡಿಕೋ ಎಂದಲ್ಲವೇ.?. ‘ ಅದಕ್ಕೆ ಶಾಮು ಹೌದು ಎಂದು ತಲೆ ಹಾಕಿದ. ಮತ್ತು ಆಕೆ ಮುಂದುವರೆಸಿದಳು;
‘ನೀವು ನಿಮ್ಮ ಅಪ್ಪ, ಅಮ್ಮನನ್ನು ನಾನು ಪ್ರೀತಿಸಿದರೆ ಸಾಕೆ, ಮದುವೆಯಾದ ನನ್ನನ್ನು ನೀವು ಪ್ರೀತಿಸಬೇಕಲ್ಲವೇ ?’ ಎಂದಳು.
‘ಅದರ ಬಗ್ಗೆ ನಾನು ಭಾಷೆ ಕೊಡುತ್ತೇನೆ, ನೀನು ನನ್ನ ಅಪ್ಪ ಅಮ್ಮ ಅವರ ಬಗ್ಗೆ ಹೇಳು ‘ ಎಂದ.
‘ಈಗ ಇದು ನನ್ನ ಮನೆ, ನಿಮ್ಮ ಅಪ್ಪ ಅಮ್ಮ ನನಗೂ ಅಪ್ಪ, ಅಮ್ಮಂದಿರ ಸಮಾನ…. ಆಯಿತಾ ? ‘ ಎಂದಳು.
‘ನನಗೆ ಈಗ ಸಂತೋಷ ಆಯಿತು’ ಎಂದು ಹೇಳಿದಾದ ಮೇಲೆ ಇಬ್ಬರೂ ಒಂದು ಗೂಡಿದರು.
ಅವರ ಸಂಸಾರದಲ್ಲಿ ಬೆಳಕು ಮೂಡಿತು, ಶಾಮು ಮತ್ತು ಅಂಜಲಿ ಒಬ್ಬರನ್ನೊಬ್ಬರು ಅರಿತುಕೊಂಡು ಸಂಸಾರ ನಡೆಸಿಕೊಂಡು ಸುಖಿಯಾಗಿದ್ದರು. ಶಾಮುನ ಅಪ್ಪ, ಅಮ್ಮನ ಸಂತೋಷಕ್ಕೆ ಪಾರವಿಲ್ಲದಂತಾಗಿತ್ತು !
-ಬಿ.ಟಿ.ನಾಯಕ್
ಮದುವೆಯ ಬಗ್ಗೆ ಅನೇಕ ಅಭಿಪ್ರಾಯ ಮತ್ತು ಪರಿಹಾರ ಸೊಗಸಾಗಿ ಚಿತ್ರಿಸಿದ್ದೀರಿ ನಾಯಕರೇ. ಈಜು ಕಲಿಯಲು ನೀರಿಗೆ ಬೀಳಬೇಕು.
ಮದುವೆಗೆ ಒಂದಿಷ್ಟು ಯುವ ಜನತೆ ಇತ್ತೀಚೆಗೆ ಯಾಕೋ ಅಷ್ಟಾಗಿ ಮನಸ್ಸು ಮಾಡದಿರುವುದು ವಿಷಾದನೀಯ ಸಂಗತಿ. ಹೆತ್ತವರ ಅಳಲು ಕೆಲವೊಬ್ಬರ ಮನ ಮುಟ್ಟುವುದಿಲ್ಲ. ಜವಾಬ್ದಾರೀನೇ ಬೇಡ ಅಂತ ಕೆಲವೊಬ್ಬರ ಅನಿಸಿಕೆ. ಮದುವೆಯ ಬಂಧನದಲ್ಲಿ ಸಿಲುಕದೇ ಲೈಂಗಿಕ ಸುಖ ಅನುಭವಿಸಬೇಕೆಂಬ ಕೆಲವರ ಹಪಹಪಿ.
ಕಾಲಾಯ ತಸ್ಮೈ ನಮಃ.
Story is good. To get married or not is an age old question every one faces at some stage of life. No one making decision on either side feels absolute happiness.