ನಮ್ಮೂರು ಕಾವೇರಿ ತೀರದಲ್ಲಿ ಬರುವ ಸುಮಾರು ನಲವತ್ತು ಮನೆಗಳಿರುವ ಪುಟ್ಟ ಊರು. ಊರಿನ ಸುತ್ತೆಲ್ಲಾ ಬಂಡೆಗಳೇ ಸುತ್ತುವರಿದಿರುವ ಕಾರಣ ಊರಿನ ಯಾವ ಕಡೆ ನಿಂತು ಪೋಟೋ ಕ್ಲಿಕ್ಕಿಸಿದರೂ ಸಹ ಯಾವುದೋ ಕಾಡಿನಿಂದ ಪೋಟೋ ತೆಗೆದಂತೆ ಕಾಣುವುದು ವಿಸ್ಮಯವೇ ಸರಿ.
ಸಾರಿಗೆ ಸಂಪರ್ಕವಿಲ್ಲದ ಕಾರಣ ಸಾಕ್ಷರತೆಯ ಪ್ರಮಾಣ ಕಡಿಮೆಯಿದೆ. ಹಾಗಾಗಿ ನಾನು ಹತ್ತನೇ ತರಗತಿಯಾಚೆಗಿನ ಮೆಟ್ಟಿಲು ತುಳಿಯಲಿಲ್ಲ.
ಅತಿ ಹೆಚ್ಚು ಕರಡಿಗಳು ವಾಸಿಸುವ ಗವಿಗಳಿರುವ ಕಾರಣ ಊರಿನ ಸಮೀಪದ ಬಂಡೆ ಸಾಲಿಗೆ ಕರಡಿಕಲ್ಲು ಎಂಬ ಹೆಸರಿದೆ. ಊರಿಗೆ ಕರಡಿಕಲ್ ದೊಡ್ಡಿ ಎಂಬ ಹೆಸರು ಬಂದಿದೆ.
ನನಗೆ ಚಿಕ್ಕಂದಿನಿಂದ ಏನಾದರೂ ಸಾಧನೆ ಮಾಡುವ ಆಸೆ ಹಾಗಾಗಿ ಆ ಬಂಡೆ ಸಾಲುಗಳನ್ನೇ ಪ್ರೇಕ್ಷಕರಾಗಿರಿಸಿ ಹಾಡಿದ್ದೇನೆ ಕುಣಿದಿದ್ದೇನೆ, ಮನಸು ಹಗುರ ಮಾಡಿಕೊಂಡಿದ್ದೇನೆ. ನನಗೆ ಅಚ್ಚು ಮೆಚ್ಚಾದ ಗವಿಯೊಂದರಲ್ಲಿ ಎಷ್ಟೋ ಸಮಯ ಕಳೆದಿದ್ದೇನೆ. ಅದು ಸಿನೆಮಾ ಸೂಟಿಂಗಿಗೆ ಹೇಳಿ ಮಾಡಿಸಿದ ಜಾಗ. ಅಲ್ಲಿಂದ ಕಾಣುವ ಸೂರ್ಯೋದಯಾಸ್ತಮಾನಗಳನ್ನು ನೋಡುವುದೇ ಒಂದು ರೀತಿಯ ಯೋಗ.
ಹೀಗಿರುವ ಕೆಲವು ವರ್ಷಗಳ ಹಿಂದೆ ಅಂದರೆ ಬಟನ್ ಪೋನ್ಗಳ ಯುಗ ಆಗಷ್ಟೇ ಸ್ಕ್ರೀ ಟಚ್ಚ್ ಪೋನ್ಗಳು ಕಾಲಿಟ್ಟಿದ್ದ ಕ್ಷಣ. ನಮ್ಮೂರಿನಲ್ಲೆಲ್ಲೂ ಆ ಮೊಬೈಲ್ ಇರಲಿಲ್ಲ. ನನಗಂಥೂ ಬಳಸುವುದೇ ಗೊತ್ತಿರಲಿಲ್ಲ. ಇಂಥ ಸಮಯದಲ್ಲಿ ನಮ್ಮೂರಿಗೆ ಸುಮಾರು ಮೂವತ್ತು ಮೈಲು ದೂರದಲ್ಲಿರುವ ಕನ್ನಸಂದ್ರದ ಹುಡುಗ ಬೆಂಗಳೂರಿನಿಂದ ಬಂದಿದ್ದ. ಅವನಿಗೆ ವಿಪರೀತ ಸಿನಿಮಾ ಹುಚ್ಚು ತಲೆಯೆಲ್ಲಾ ಕೆಂಚು ಕೆಂಚು ಮಾಡಿಕೊಂಡಿದ್ದ ಅವನ ಹೆಸರು ರಾಘವ. ಬಂದವನೇ ನನ್ನ ಭೇಟಿ ಮಾಡಿ ನನ್ತಾವ್ ಕ್ಯಾಮ್ರಾ ಅದೆ ಒಂದ್ ಸಾರ್ಟ್ ಪಿಲಂ ಮಾಡ್ವ ಎಂದು ಹೇಳಿದನು. ನಾನು ತಲೆಯಾಡಿಸಿದೆ ಕಥೆ ಹೇಳಿದ. ಅದು ಬೆಟ್ಟದ ಭೂತ.
ಕರಡಿ ಕಲ್ದೊಡ್ಡಿಯ ಕರಡಿಕಲ್ಲಿನಲ್ಲಿ ಅಮವಾಸ್ಯೆ, ಹುಣಿಮೆ ದಿನಗಳಲ್ಲಿ ಒಂದು ರೀತಿಯ ವಿಚಿತ್ರ ನರಳುವ ಧ್ವನಿ ಕೇಳಿ ಬರುತ್ತಿತ್ತು ಅದರ ಮೂಲ ಹುಡುಕಲು ಹೋದ ಮುನಿಯಪ್ಪ, ರಾಮಪ್ಪ ಎಂಬ ಗಟ್ಟಿ ಎದೆಯವರು ಹಾಸಿಗೆ ಹಿಡಿದ ಕಾರಣ ಯಾವ ನರ ಪ್ರಾಣಿಯೂ ಅತ್ತ ಸುಳಿಯುತ್ತಿರಲಿಲ್ಲ ಅದು ಹಲವು ದಂತಕಥೆಗಳ ತಾಣವಾಗಿ ಅದು ಭೂತಗಲ್ಲು ಎಂಬ ಹೆಸರು ಪಡೆಯಿತು.
ಇದು ಯಾರೋ ಮನುಷ್ಯರ ಕೈವಾಡವಿರಬಹುದೆಂದು ತನಿಖೆಗಳಿದ ಪ್ರಗತಿ ಪರ ಹುಡುಗರು ಭೂತದ ಗುಟ್ಟನ್ನು ಬಯಲು ಮಾಡುವುದೇ ಕಥೆಯ ಸಾರಾಂಶ. ಒಂದು ರೀತಿ ಹೊಸ ಹಾರರ್ ಸಾರ್ಟ್ ಮೂವಿಯಾಗುವುದರಲ್ಲಿ ಸಂದೇಹವಿಲ್ಲ ಎನ್ನಿಸಿ ನಾನು ಮತ್ತು ಅವನು ನಮ್ಮಂತೆಯೇ ಇರುವ ಹುಚ್ಚು ಹುಡುಗರನ್ನು ಕಲೆ ಹಾಕಿ ಮೀಟಿಂಗ್ ಮಾಡಿ ಬೆಟ್ಟದ ಭೂತಕ್ಕೆ ಮುಹೂರ್ತ ಪಿಕ್ಸ್ ಮಾಡಿದೆವು.
ನಾವು ಹಾರರ್ ಸಿನಿಮಾಗಳನ್ನು ನೋಡಿ ಹಾಗೂ ದೆವ್ವದ ಕತೆಗಳನ್ನು ಕೇಳಿ ಬೆಳೆದಿದ್ದರಿಂದ ದೆವ್ವ ಸೃಷ್ಟಿಸಲು ತಡವಾಗಲಿಲ್ಲ. ನಮ್ಮೂರಿನಲ್ಲಿ ಒಬ್ಬ ನರಪೇತಲ ವಾನರನಿದ್ದ ಅವನು ನೋಡಿದರೆ ಥೇಟ್ ದೆವ್ವದಂತೆಯೇ ಇದ್ದ. ಅವನ ಹೆಸರು ಪ್ರತಾಪ.
ಒಂದು ದಿನ ರಾತ್ರಿಯಲ್ಲಿ ನಮ್ಮ ಮನೆಯ ಹಿತ್ತಲಿಗೆ ಹೋಗಿದ್ದ ನನ್ನಪ್ಪ ಕಣ್ಣಿಗೆ ಹಾದಿಯಲ್ಲಿ ಆಕೃತಿಯೊಂದು ಬರುತ್ತಿರುವುದು ಕಂಡು ದೆವ್ವ ಎಂದು ಕೂಗಿ ಬೀದಿಗೆ ಬಂದರು. ಅದೇ ಸಮಯಕ್ಕೆ ಬಹಿರ್ದೆಸೆಗೆ ಹೋಗಿದ್ದ ಮಹಿಳೆ ಚೀರಿ ಪರಾರಿಯಾಗಿದ್ದಾರೆ. ಊರಿಗೆ ಊರೇ ದೊಣ್ಣೆ ಮಚ್ಚು ಹಿಡಿದು ನಿಂತಾಗ ಹೆದರಿದ ಆ ಆಕೃತಿ ನಾನು ಪ್ರತಾಪ ಎಂದಾಗ ಎಲ್ಲರೂ ನಗಲಾರಂಭಿಸಿದರು. ಅಂದಿನಿಂದ ಅವನು ದಯ್ಯ ಪ್ರತಾಪನಾದ. ಹಾಗಾಗಿ ಹೆಚ್ಚೇನು ಮೇಕಪ್ ಅವಶ್ಯಕತೆಯಿರಲಿಲ್ಲ
ನಾನು ಅದು ಇದು ತಲೆ ತಿಂದ ಕಾರಣ ನನ್ನನ್ನು ಮೊದಲನೇ ಸೀನಿನಲ್ಲಿ ಸಾಯಿಸಲಾಯಿತು ಅದು ಹೀಗೆ.
ನಾನು ಮಾವಿನ ಮರದ ಅಡಿಯಲ್ಲಿ ಎಣ್ಣೆ ಹೊಡೆಯುತ್ತ ಕುಳಿತಿರುವಾಗ ಆ ಮರದ ಬುಡದಲ್ಲಿ ಬಿದ್ದಿದ್ದ ತರಗೆಲೆಯಿಂದ ಭಯಂಕರ ಭೂತ ಎದ್ದು ಬಂದು ನನ್ನ ಕುತ್ತಿಗೆ ಹಿಚುಕಿತು. ಹಾಗಾಗಿ ನನ್ನ ಪಾತ್ರ ಸತ್ತು ಹೋಯಿತು. ನಾನೀಗ ಸಹ ನಿರ್ದೇಶಕನಷ್ಟೆ.
ನನ್ನ ಪಾತ್ರ ಸತ್ತ ನಂತರ ಆ ಭೂತ ಕರಡಿಕಲ್ಲು ಸೇರಿತು. ಎರಡನೇ ಸೀನ್ ತೆಗೆಯಬೇಕೆನ್ನುವಷ್ಟರಲ್ಲಿ
“ಬಲರೆ ಬಲರೆ ಬಲು ಸಾಹಸದಿಂದ ಬಲರೆ ಮೆರೆವೆ ಛಲದಿಂ” ಅಬ್ಬರದ ಧ್ವನಿ ಕೇಳಿತು. ಅದು ನಮ್ಮೂರಿನ ಕುಡುಕ ರಂಗಣ್ಣದು ಅವನು ಅವಾಂತರ ಮಾಡಬಹುದೆಂಬ ಅಂಜಿಕೆ ಶುರುವಾಯಿತು.
ರಂಗಣ್ಣ ಹುಚ್ಚು ಕುಡುಕ. ಅರೆಬರೆ ಇಂಗ್ಲೀಷು ತಿಳಿದಿತ್ತು ಮಹಾಶಯನಿಗೆ. ಬೊಗಳುವ ನಾಯಿಗಳಿಗೆ ಅಧ್ಯಕ್ಷ. ನಮ್ಮೂರಿನ ಗೂರ್ಕ ಅವನು ಒಂದು ದಿನ ಜೋರಾಗಿ ಕುಡಿದು ಟೈಟಾಗಿದ್ದ. ಯಾರೋ ಬೀದಿ ನಾಯಿಗೆ ಗದರಿದಾಗ ” ಯೋಯ್ ಡಾಗ್ಗೆ ಯಾಕೊಡಿತಿರ? ಗಾಡ್ ಕಾಣ್ರಲೇ ಅದು.! ಡಾಗ್ಗೂ ಮೂರಕ್ಷರ ಗಾಡ್ಗೂ ಮೂರಕ್ಷರ ಜಿ.ಒ.ಡಿ. ಗಾಡಂತೆ ಡಿ.ಒ.ಜಿ. ಡಾಗಂತೆ ಡಿವೊಜಿನ ಉಲ್ಟಾ ಮಾಡುದ್ರೆ ಜಿ.ಒ.ಡಿ ಅಂದ್ರೆ ಗಾಡ್! ಡಿ.ಒ.ಜಿ. ಉಲ್ಟ ಮಾಡುದ್ರೆ ಜಿ.ಒ.ಡಿ ಅಂದ್ರೆ ಡಾಗು. ಗಾಡ್ನು ಪೂಜೆ ಮಾಡಿ ಡಾಗ್ನು ಪೂಜೆ ಮಾಡಿ ನನ್ನು ಪೂಜೆ ಮಾಡಿ ಅಯಾಮ್ ಗಾಡ್ ಗಾಡ್ ಈಸ್ ಗ್ರೇಟ್ ಗಾಡ್ ಈಸ್ ಗೇಟ್” ಊರಲ್ಲೆಲ್ಲ ಅವನದೇ ಹವಾ…!
ಇದೆಲ್ಲಾ ನೆನಪಾಗುತ್ತಿದ್ದಂತೆ ಅವನು ನಾವಿದ್ದ ಕಡೆಗೆ ಬಂದು
ಓಯ್ ಏನ್ ಮಾಡ್ತ ಇದೀರಿ
ಸೂಟಿಂಗ್ ರಾಘವ ಹೇಳಿದ
ನನಗೂ ಪಾರ್ಟ್ ಕೊಡಿ
ಕೊಡುಕ್ಕಾಗಲ್ಲ ರಾಘವ ಮತ್ತೆ ಹೇಳಿದ
ಸೂಟಿಂಗ್ ಮಾಡೂಕೆ ಬಿಡಲ್ಲ ಇಲ್ಲೆ ಬೆಟ್ದಿಂದ ಬಿದ್ದೋಯ್ತಿನಿ ಎಲ್ಲರೂ ಹೆದರಿದರು
“ಅಣ್ಣಾ ನಾನು ನಿನ್ಗೊಂದು ಪಾರ್ಟ್ ಕೊಡ್ತೀನಿ ಪಿಲಂ ಪೂರ್ತಿ ನೀನು ಮಲಿಕಂಡಿರ್ಬೇಕು. ನೀನು ಡೈಲಾಗು ಹೇಳ್ವಂಗಿಲ್ಲ. ನೀನು ಈ ಪಾರ್ಟ್ ಮಾಡುದ್ರೆ ಕರ್ನಾಟ್ಕದಲ್ಲಿ ದೊಡ್ಡೆಸ್ರು ಮಾಡ್ಬೋದು’ ಎಂದು ಹೇಳಿದೆ. ಹುಡುಗರೆಲ್ಲರೂ ಎಣ್ಣೆ ಕೊಡಿಸುವುದಾಗಿ ಹೇಳಿದಾಗ ಹಾಗೇ ಮಲಗಿಕೊಂಡ ಕ್ಷಣಮಾತ್ರದಲ್ಲೇ ಗೊರಕೆ ಹೊಡೆಯಲಾರಂಭಿಸಿದ.
ರಂಗಣ್ಣನ ಅವಾಂತರದ ಬಳಿಕ ಮತ್ತೆ ನಾವು ಸೂಟಿಂಗ್ ಆರಂಭಿಸಿದೆವು
ಐದು ಜನ ಹುಡುಗರು ಆ ಗವಿಯೊಳಗೆ ಓಡಬೇಕು. ಕ್ಯಾಮಾರ ಸ್ಟಾರ್ಟಾಯಿತು ಆಕ್ಸನ್ ಹೇಳಾಯಿತು ಐವರು ಗವಿಯೊಳಗೆ ಓಡಿ ಹೋದರು. ಈಗ ಕಟ್ ಹೇಳಲಾಯಿತು. ನಾವು ವೀಡಿಯೋ ನೋಡಿದೆವು. ಒಂದೇ ಟೇಕ್ನಲ್ಲಿಯೇ ಅದು ಅದ್ಭುತವಾಗಿತ್ತು. ಇದೊಂದೇ ಸೀನ್ ಸಾಕಾಗಿತ್ತು ಬೆಟ್ಟದ ಭೂತ ಕಿರುಚಿತ್ರ ಯಶಸ್ವಿಯಾಗಲು.
ಈಗ ನಾವು ಕ್ಯಾಮೆರಾ ರೆಡಿ ಮಾಡಿ ಆಕ್ಸನ್ ಹೇಳಿದವು. ವಾಪಸ್ ಹುಡುಗರು ಓಡಿಬಂದರು. ಈಗ ಬಂದವರು ನಾಲ್ಕು ಜನ ಮಾತ್ರ ಅವನು ಬರಲೇ ಇಲ್ಲ. ಅವನು ನನ್ನ ತಮ್ಮ ಪರಮೇಶಿ.
ನಾವೆಲ್ಲರೂ ಗವಿಯೆಲ್ಲ ತಡಕಾಡಿದೆವು. ಎಲ್ಲಿಯೂ ಅವನು ಸಿಗಲಿಲ್ಲ. ಅಲ್ಲಿದ್ದ ಗವಿಗಳನೆಲ್ಲಾ ತಡಕಾಡಿದೆವು. ಎಲ್ಲಿಯೂ ಸಿಗಲಿಲ್ಲ. ಏಕಾದರೂ ಹೆಸರಿಟ್ಟೆವೋ ಬೆಟ್ಟದ ಭೂತವೆಂದು ಸಾಕ್ಷಾತ್ ದಯ್ಯ ಪ್ರತಾಪನೇ ಹೆದರಿದ. ನಾವು ಕೂಗುವಂತಿಲ್ಲ. ಕೂಗಿದರೆ ಊರಿನ ಜನರಿಗೆಲ್ಲ ವಿಷಯ ಗೊತ್ತಾಗಿಬಿಡುತ್ತದೆಂದು ರಹಷ್ಯವಾಗಿಯೇ ತನಿಖೆ ನಡೆಸಿದೆವು.
ಅವನು ಎಲ್ಲಿಯಾದರೂ ಅವಿತುಕೊಂಡಿರಬಹುದೆಂದು ನಾನು ಹುಡುಕುತಿರುವಾಗ ಅವನ್ಯಾವನೋ ವೀಡಿಯೋ ಮಾಡುತ್ತಿದ್ದ. ನಾನು ನಿನ್ ವೀಡಿಯೋ ಮನೆ ಹಾಳಾಗ ಬೆಟ್ಟದ ಭೂತ ಸತ್ತೋಗ ನನ್ ತಮ್ಮನ ಹುಡುಕಿ ಎಂದೆ ಎಲ್ಲರೂ ಹುಡುಕಿದೆವು. ಎಲ್ಲಿಯೂ ಅವನಿಲ್ಲ. ಸುಸ್ತಾದ ನಾನು ಪ್ಯಾಂಟು ಜೇಬಿಗೆ ಕೈ ಹಾಕಿದೆ. ಆನ್ ಆಗದ ಬಟನ್ ಪೋನಿದೆ. ಬ್ಯಾಟರಿ ತೆಗೆದು ನಾಲಿಗೆ ಸ್ಷರ್ಸಿಸಿದೆ ಬ್ಯಾಟರಿಯ ಹೃದಯ ಬಡಿಯುತ್ತಿದೆ. ಅದರ ಅಂಡಿಗೆ ಪೇಪರ್ ತುರುಕಿದೆ ಮೊಬೈಲಿಗೆ ಜೀವ ಬಂತು. ನನ್ನ ತಮ್ಮನಿಗೆ ಪೋನ್ ಮಾಡಿದೆ. ಅವನು “ನಾನು ಮನೇಲಿ ಹಿಟ್ಟುಣ್ತಾಯಿದ್ದೀನಿ” ಎಂದ. ಬೆಟ್ಟದ ಭೂತ ಕಿರುಚಿತ್ರ ನಿಂತು ಹೋಯಿತು. ನಾನು ಆ ಗವಿಯ ಕಡೆ ಹೋದಾಗಲೆಲ್ಲಾ ಬೆಟ್ಟದ ಭೂತದ ಸಾಹಸ ಅರಿವಾಗುತ್ತದೆ. ಬೆಟ್ಟದ ಭೂತ ನನ್ನ ಲೇಖನಿಯಲ್ಲಿ ಕಥೆಯಾಗಿದೆ. ಬೆಟ್ಟದ ಭೂತವ ಹುಡುಕುತ್ತಲೇ ಇದ್ದೇನೆ. ಎಲ್ಲಿದೆ ಆ ಬೆಟ್ಟದ ಭೂತ?!
-ಮೇದರದೊಡ್ಡಿ ಹನುಮಂತ