“ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 5)”: ಎಂ.ಜವರಾಜ್

-೫-

ಒಂದ್ಸಲ ನಮ್ಮಣ್ಣ ಕೆಲಸದ ಅಪಾಯಿಂಟ್ಮೆಂಟ್ ಲೆಟರಿಗೆ ಕಾಯ್ತಾ ಇದ್ದ. ಟ್ರೈನಿಂಗ್ ಮಾಡಿ ಎರಡು ವರ್ಷವಾದರು ಕೆಲಸದ ಆಸೆಯಿಂದ ಇದ್ದವನಿಗೆ ಅಪಾಯಿಂಟ್ಮೆಂಟ್ ಲೆಟರ್ ಬರಲೇ ಇಲ್ಲ. ಅದೇ ಹೊತ್ತಿಗೆ ಸರ್ಕಾರದ ಕೃಷಿ ನೀರಾವರಿ ಯೋಜನೆಯಡಿ ಬಲದಂಡೆ ನಾಲೆ ಕೆಲಸ ಶುರುವಾಗಿತ್ತು. ಇದರಿಂದ ನಮಗಿದ್ದ ಎರಡು ಮೂರು ಎಕರೆ ಡ್ರೈಲ್ಯಾಂಡಿಗೆ ನೀರು ಸಿಕ್ಕಿ ಭತ್ತದ ಫಸಲು ಕಾಣುವ ಹಂಬಲದಿಂದ ರಂಗೋಲಿ ಕಲ್ಲಿನ ಹೊಲ ಅಗೆದು ಮಟ್ಟ ಮಾಡುವ ಕೆಲಸವೂ ನಡೆಯುತ್ತಿತ್ತು. ಇದರ ದೆಸೆಯಿಂದ ಅಪ್ಪ ಮತ್ತು ಇಬ್ಬರು ಅಣ್ಣಂದಿರ ಕೈಗಳು ಹಾರೆ ಪಿಕಾಸಿ ಹಿಡಿದು ಅವರ ಕೈ ಹಸ್ತಗಳೂ ಸವೆದು ಗಾಯವಾಗಿ ಜಡ್ಡಿಡಿದಿದ್ದವು.

ಇದರೊಂದಿಗೆ ಪಿಯುಸಿ ಓದಿ ಡಿಗ್ರಿಗೆ ಹೋಗಬೇಕಾಗಿದ್ದ ಅಣ್ಣ ಬಾವನ ಒತ್ತಾಸೆಗೆ ಬಿದ್ದು ಅವರ ಮಗಳನ್ನೇ ಮದುವೆಯಾಗಿ ಕೆಲಸವಿಲ್ಲದೆ ಆ ಈ ಕೆಲಸ ಮಾಡಿಕೊಂಡು ಹೆಣಗುತ್ತ ಒಂದಿನ ಪೇಪರ್ ಸುದ್ದಿ ನೋಡಿ ವೆಟರಿನರಿ ಡಿಪಾರ್ಟ್ಮೆಂಟ್ ಇನ್ಸ್ ಪೆಕ್ಟರ್ ಪೋಸ್ಟಿಗೆ ಅರ್ಜಿ ಹಾಕಿ ಮೈಸೂರಲ್ಲಿ ಕೆಇಬಿ ಆಫೀಸಲ್ಲಿ ಕೆಲಸಕ್ಕಿದ್ದ ಮಾವನ ರೂಮಿನಲ್ಲಿ ಇದ್ದುಕೊಂಡು ಟ್ರೈನಿಂಗ್ ಮುಗಿಸಿದ್ದ. ಮದುವೆಯಾಗದೆ ಒಂಟಿಯಾಗಿದ್ದ ಆ ಮಾವನ ರೂಮಿನಲ್ಲಿ ಬುದ್ದನ ಫೋಟೊ ಬಿಟ್ಟರೆ ಯಾವ ದೇವರ ಫೋಟೋನೂ ಇರದೆ ಊಟಕ್ಕೆ ಒಂದೆರಡು ಸಿಲ್ವರ್ ಪಾತ್ರೆ ತಟ್ಟೆ ಲೋಟ ಒಂದು ಸೀಮೆಣ್ಣೆ ಬತ್ತಿ ಸ್ಟೌ ಇರುವವುದನ್ನು ವಾರಕ್ಕೊಮ್ಮೆ ಬಂದು ಹೋಗಿ ಮಾಡುತ್ತಿದ್ದ ಅಣ್ಣ, ಅವ್ವ ಅಪ್ಪನೊಂದಿಗೆ ಹೇಳುತ್ತಿದ್ದುದ ಕೇಳೋಕೆ ಒಂಥರಾ ಮಜ ಅನ್ನಿಸ್ತಿತ್ತು. ಅಪ್ಪ, ಅಣ್ಣ ಹೇಳಿದ್ದನ್ನು ಹೂಂಕಂಡು “ನಾವು ಓದು ಬರಾ ಮಾಡ್ದೆ ಈ ಕೊಂಪೆಲೆ ಇದ್ಕಂಡು ದೇವ್ರು ದಿಂಡ್ರು ಮಾಡುದ್ರ ಓದ್ದೋರೆಲ್ಲ ಮಾಡ್ದರಾ..? ನಮ್ತರ ಮಡ್ರ ಅವ್ರು..? ಬುದ್ದ ಅಂದ್ರ ಸಿದ್ದ ಅಂತ. ಮಾಂಸ ಮಡ್ಡಿ ತಿಂದವ್ನಲ್ಲ. ತಿನ್ನವ್ರಿಗೆ ಬ್ಯಾಡ ಅಂದೆದಂವ. ಭಿಕ್ಸ ಎತ್ತಿ ಜೀವ್ನ ಮಾಡ್ದಂವ. ಅದು ಅವನಿಗೆ ಬಿಕ್ಸ ಅಲ್ಲ ಜನ್ರು ಕೊಟ್ಟ ಪ್ರಸಾದ ಅನ್ಕಂಡಿದ್ದ. ಮಾರಾಜ್ರ ಕುಲ್ದಂವ. ಎಲ್ಲನು ತಿಳ್ದಂವ. ಹೀಗಂತ ನಾನು ಗಗ್ಗೇಶ್ವರಿ ಸಾಬ್ರು ಕಾಲಕಪ್ಪನ ಮನಲಿ ಜೀತುಕ್ಕಿದ್ದಾಗ ಕಾಲಕ್ಕಪ್ಪೋರು ಎಲ್ಲ ದೇಸುದ್ ಕತನು ಹೇಳವ್ರು. ನಾವು ಕೈಕಟ್ಗಂಡು ಕೇಳ್ತ ಇದ್ವಿ. ಕಾಲಕಪ್ಪೋರು ಅಸ್ಟೆ, ಯಾವ್ ದೇವ್ರು ದಿಂಡ್ರುನು ಪೂಜ ಮಾಡ್ದವ್ರಲ್ಲ. ಆದ್ರ ಯಾವ್ ದೇವ್ರುನು ಮಾಡ್ಬೇಡಿ ಅಂದವ್ರಲ್ಲ. ಹಬ್ಬಗಿಬ್ಬ ಅಂತ ಸುತ್ಮುತ್ಲ ಜನ ಬಂದ್ರ ಬತ್ತ ರಾಗಿ ದುಡ್ಡು ಕಾಸು ಕೊಟ್ಟು, “ಮಾಡಿ ಒಳ್ಳೆದಾಗ್ಲಿ” ಅನ್ನವ್ರು. ಅಂತಾ ದೊಡ್ಮನ್ಸ. ಹಂಗ ನಿಮ್ ಮಾವ್ನು ಅಸ್ಟಿಸ್ಟ್ ಓದನ. ಅದ್ಕ ಸಿಲ್ವರ್ ಪಾತ್ರ ಇಟ್ಕಂಡು ಬದುಕ್ತಾ ಅವ್ನ. ಎಲ್ಲ ಸರಿ, ಆದ್ರ ಅಂವ ಒಂದ್ ಮದ್ವ ಗಿದ್ವ ಆಗಿದ್ರ ಸರಿಯಾಗದು” ಅಂತ ಮಾವನ ಬಗ್ಗೆ ಮಾತಾಡ್ತ ಇದ್ದ.

ಮಾವನ ರೂಮಿನಲ್ಲಿದ್ದ ಅಣ್ಣ, ಮಾವನಿಗೆ ಬಾಡಿಗೆ ಅಂತ ಏನೂ ಕೊಡ್ತಿರಲಿಲ್ಲ. ಮಾವನು ಅಷ್ಟೆ ಕೇಳಿಯೂ ಇರಲಿಲ್ಲ. ಅದಕ್ಕೆ ಅಪ್ಪ “ಅಂವ ಕೇಳಲ್ಲ ಅಂತ ನಾವು ಹಂಗೆ ಇರಕಾದ್ದ..?” ಅಂತ ಮಾವನಿಗೆ ಹೇಳದೆ ಅಣ್ಣ ಬಂದಾಗೆಲ್ಲ ಒಂದು ಚೀಲ ಎರಡು ಚೀಲ ಭತ್ತ ಮಿಲ್ ಮಾಡಿಸಿ ಅಕ್ಕಿ ಕೊಟ್ಟು ಕಳಿಸ್ತಿದ್ದ. ಅದು ಮಾವನಿಗೂ ಖುಷಿಯಾಗಿತ್ತು. ಹಾಗಂತ ಮಾವ ಎಂದೂ ಬಾಯಿ ಬಿಟ್ಟು ಹೇಳಲಿಲ್ಲ ಎಂಬುದು ಬೇರೆ ಮಾತು.

ಊರಿಗೆ ಪೋಸ್ಟ್ ಆಫೀಸ್ ಬಂದ ಹೊಸದರಲ್ಲಿ ಮಾವನಿಗೆ ಕೆಲಸ ಸಿಕ್ಕಿತ್ತು. ಇದೇ ಗಂಗಣ್ಣ ಕೆಲಸದ ಆರ್ಡರ್ ಕಾಪಿ ತಂದು ಕೊಟ್ಟು ಮಾವನಿಂದ ಸೈ ಅನಿಸಿಕೊಂಡು ಐದು ರೂಪಾಯಿನು ಈಸಿಕೊಂಡಿದ್ದ. ಮಾವನ ಮನೆ ಹಿಂದಿನ ಬೀದಿಯಲ್ಲಿತ್ತು. ಅವ್ವಳ ಮನೆಯೂ ಅದರೊತ್ತಿಗೆ ಇತ್ತು. ಅದು ಊರಿಗೇ ದೊಡ್ಡ ಮನೆ. ಮಾವನ ಅಪ್ಪ ಊರಿಗೆ ಯಜಮಾನ. ಅವ್ವ, ಮಾವ – ಇಬ್ಬರೂ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು. ಹಾಗಾಗಿ ಅಣ್ಣನಿಗೆ ಮಾವ ತನ್ನ ರೂಮಿನಲ್ಲೇ ಇರಿಸಿಕೊಂಡದ್ದಕ್ಕೆ ಕಾರಣವಾಗಿತ್ತು. ಮಾವನ ಮನೆಯ ಜಗುಲಿ ದೊಡ್ಡದಾಗಿ ಒಂಥರ ಗೌಡರ ಮನೆಯ ದೊಡ್ಡಸ್ತಿಕೆ ತರ ಕಾಣ್ತಿತ್ತು. ಆ ಈ ಬೀದಿ ಸುತ್ತಿಕೊಂಡು ನಿಧಾನಕೆ ಬಾಡಿಗೆ ಸೈಕಲ್ ಏರಿ ಬಂದು ಆ ಮನೆಯ ಜಗುಲಿ ಅಂಚಿಗೆ ಒರಗಿಸಿದ ಗಂಗಣ್ಣ ಆ ಜಗುಲಿ ಮೇಲೆ ತನ್ನ ಬ್ಯಾಗಲಿದ್ದ ಕಾಗದ ಪತ್ರ ಚೆಲ್ಲಿಕೊಂಡು ಆ ಬೀದಿಲಿದ್ದವರನ್ನು ಕರೆದು ಓಲ್ಡೇಜು, ವಿಡೊ ಪೆನ್ಸನ್ ಹಂಚುತ್ತಿದ್ದ. ಎಲ್ಲರಿಗೂ ಹಂಚಿ ಎಂಓ ಕಾರ್ಡುಗಳ ಹೆಬ್ಬೆಟ್ಟು ಒತ್ತಿಸಿಕೊಂಡು ಆ ಗುರುತಿನ ಮೇಲೆ ಮಾವನ ಅಪ್ಪ ಕೂಸಯ್ಯ ಕನ್ನಡಕ ಧರಿಸಿ ತೂಗುವ ಬಟ್ಟೆ ಕುರ್ಚಿಯಲ್ಲಿ ಕುಂತು ಗಂಗಣ್ಣನ ಸಮಾಚಾರ ವಿಚಾರಿಸುತ್ತ ಎಲ್ಟಿಎಂ ಬರೆದು ಸೈನ್ ಮಾಡುತ್ತಿದ್ದ. ಆಗ ಅಕ್ಕಪಕ್ಕದವರು ಬಂದು “ಗಂಗ ಊಟ ಮಾಡು ಬಾ ಬಾಡ್ನೆಸ್ರು ಗಮ್ ಅಂತ ಅದ” ಅಂದರೆ “ಏ ಬೇಡ ಕಂಡ್ರಪ್ಪ.. ನಾವು ನಿಮ್ಮನೇಲಿ ಮಾಡಂಗಿಲ್ಲ.. ” ಅಂತ ಗೊಣಗುಟ್ಟುತ್ತಿದ್ದ. “ಯಾಕಪ್ಪ ಮಾಡಂಗಿಲ್ಲ ನಿನಗಿಂತ ನಾವ್ ಚೆನ್ನಾಗಿಲ್ವ” ಅಂದರೆ “ನೀವೆಲ್ಲ ದನಪನ ತಿಂತಿದರಿ. ಕಸಗಿಸ ಕಕ್ಕಸ್ ಗಿಗ್ಗಸ್ ಕ್ಲೀನ್ ಮಾಡ್ತ ಚಪ್ಲಿಗಿಪ್ಲಿ ಹೊಲಿತಿದ್ದರಿ ಅದ್ಕ ನಾವು ನಿಮ್ಮನೆತವ್ಕ ಬರಂಗಿಲ್ಲ ಕಣಪ್ಪೋವ್” ಅಂತ ಲೆಟರ್ ಜೋಡುಸ್ತನೇ ಇದ್ದ. ಕೂಸಯ್ಯ “ಈಗ ಕುಂತಿರದು ಯಾರ್ ಜಗುಲಿನ ಗಂಗಾ” ಅಂತ ಮುಖದಲ್ಲೆ ನಕ್ಕರೆ “ಏನ್ಮಾಡದಪ್ಪ ಗೌರ್ಮೆಂಟ್ ಆಡ್ರು… ಗೌರ್ಮೆಂಟ್ ಹೇಳುದ್ರ ಎಲ್ಲನು ಮಾಡ್ಬೇಕು” ಅಂತ ಮೇಲೇಳುತ್ತಿದ್ದ.

ಅಣ್ಣ ಪೋಸ್ಟಾಫೀಸಿಗೆ ತಿರುಗಿದ್ದೇ ಆಯ್ತು. ಹಿಂಗೆ ಪದೆಪದೆ ಪೋಸ್ಟಾಫೀಸ್ ಮುಂದೆ ಹೋಗಿ ಇಣುಕಿದರೆ ಪೋಸ್ಟ್ ಮೇಷ್ಟ್ರು ಷಣ್ಮುಖಸ್ವಾಮಿ “ನೋಡಪ್ಪ ಏನೇ ಬಂದ್ರು ನಾವು ಇಟ್ಗಂಡು ಏನ್ಮಾಡದು.. ಅದೇನಾದ್ರ ಬಂದ್ರೆ ಪೋಸ್ಟ್ ಮ್ಯಾನ್ ತಂದು ಕೊಡ್ತಾರೆ ಹೋಗಿ ನಿನ್ಗ ಕೆಲ್ಸ ಸಿಕ್ಕುದ್ರ ಈ ಪೋಸ್ಟ್ ಆಫೀಸ್ಗ ನಮ್ಗ ಒಳ್ಳೆ ಹೆಸ್ರಲ್ವ” ಅನ್ನೋರು. ಅಣ್ಣ ಸುಮ್ಮನೆ ಹೋಗೋನು. ಆಗ ನಾನು, ಜೊತೆಗೆ ಒಂದಷ್ಟು ಹುಡುಗರು ಉಚ್ಚೆ ಉಯ್ಯಲು ಮಾನಿಟರ್ ಪರ್ಮಿಷನ್ ತಗೊಂಡು ಪೋಸ್ಟ್ ಆಫೀಸ್ ಎದುರಿಗಿದ್ದ ಎಲಗಳ್ಳಿ ಬೇಲಿಗೆ ಮರೆಯಾಗಿ ನಿಂತು ಉಚ್ವೆ ಉಯ್ಯುತ್ತ ಅಣ್ಣನನ್ನು ನೋಡಿ ಹಿಗ್ಗುತ್ತಿದ್ದುದು ಉಂಟು. ಇನ್ನೊಂದ್ಸಲ ಅಣ್ಣ ಅಪ್ಪನೊಂದಿಗೆ ಬಂದು ಪೋಸ್ಟ್ ಮೇಷ್ಟ್ರು ಜೊತೆ ಗಲಾಟೆ ಮಾಡ್ತ ಇದ್ದರು. ಅದು ಜೋರಾಗೆ ಕೇಳ್ತಿತ್ತು. ಅದನ್ನು ಕೇಳಿಸಿಕೊಂಡು ಬಾಗಿಲ ಸೈಡಿಂದ ನೋಡಿದ ವೈಜಯಂತಿ ಮೇಡಂ ನನ್ನ ಕಡೆ ನೋಡಿ “ಏ ನಿಮ್ಮಪ್ಪ ಅಣ್ಣ ಪೋಸ್ಟ್ ಮೇಷ್ಟ್ರುನ ಬೈಯ್ತ ಗಲಾಟೆ ಮಾಡ್ತಿದ್ದರಲ್ಲೊ” ಅಂದಾಗ ನನಗೆ ಗಾಬರಿಯಾಯ್ತು. ಆಗ ನಟರಾಜು ಮೇಷ್ಟು ಇನ್ನೊಂದು ರೂಮಿಂದ ರೂಲ್ ದೊಣ್ಣೆ ಹಿಡಿದುಕೊಂಡು ಹೊರ ಬಂದು “ಏನ್ ಮೇಡಂ” ಅಂದ್ರು. ವೈಜಯಂತಿ ಮೇಡಂ “ಏನೊ ಗೊತ್ತಿಲ್ಲ ಸರ್” ಅಂತ ನೋಡುತ್ತಲೇ ಇದ್ದರು. ನಾನು ಗಾಬರಿಯಲ್ಲೇ ಪೋಸ್ಟಾಫೀಸ್ ಹತ್ರ ಅಪ್ಪ ಅಣ್ಣ ಪೋಸ್ಟ್ ಮೇಷ್ಟ್ರು ಜೊತೆ ತಗಾದೆ ತೆಗೆಯುತ್ತಿದ್ದದ ಕೇಳಿಸಿಕೊಳ್ಳುತ್ತಿರುವಾಗಲೆ “ದನ ತಿಂದು ಕೊಬ್ಬು ಅವ್ಕೆ.. ಜಾತಿ ಬುದ್ದಿ ಎಲ್ಲಿ ಬಿಡ್ತವೆ” ನಟರಾಜು ಮೇಷ್ಟ್ರು ರೂಲು ದೊಣ್ಣೆ ತೋರಿಸ್ತಾ ಹೇಳುತ್ತಿದ್ದರು. ವೈಜಯಂತಿ ಮೇಡಂ ನಟರಾಜು ಮೇಷ್ಟ್ರು ಮಾತಿಗೆ ಮರು ಮಾತಾಡದೆ ಸುಮ್ಮನೆ ಒಳ ಬಂದು ಮರದ ಕುರ್ಚಿಯಲ್ಲಿ ಕುಂತು ಲೊಚಗುಟ್ಟಿದರು. ಸೋಸಲೆ ಮೇಷ್ಟ್ರು ವರ್ಗ ಆಗಿ ಹೋದ ಮೇಲೆ ಆ ಸೀಟಿಗೆ ಹೆಡ್ ಮೇಷ್ಟ್ರಾಗಿ ಬಂದವರೆ ನಟರಾಜು ಮೇಷ್ಟ್ರು.‌

ನಟರಾಜು ಮೇಷ್ಟ್ರು ದಪ್ಪಗೆ ಕೆಂಪಗೆ ಇದ್ದರು. ಅವರ ಮೈ ಕೈ ಕಾಲು ಎಲ್ಲೆಂದರಲ್ಲಿ ರೋಮವೇ ತುಂಬಿತ್ತು. ಅವರು ಗದರುತ್ತಿದ್ದರೆ ಅವರ ಮೈ ರೋಮ ನಿಗುರಿ ನಿಂತು ಸ್ಕೂಲೇ ನಡುಗುತ್ತಿತ್ತು. ಅವರಿಗೆ ಯಾರ ಮೇಲೆ ಸಿಟ್ಟಾಗುತ್ತಾರೊ ಏನೂ ಮಾತಾಡದೆ ಕಣ್ಣಿಗೆ ಹಾಕಿಕೊಂಡಿದ್ದ ಕನ್ನಡವನ್ನು ಒಂದು ಸೈಡ್ ಮೇಲೆತ್ತಿ ಗುರಾಯಿಸುತ್ತಿದ್ದರು. ಅಂಬರೀಷುಗೆ ಸೋದರ ಮಾವನಂತೆ. ಹಂಗಂತ ಯಾರೊ ಹೇಳ್ತಿದ್ದರು.

ಒಂದ್ಸಲ ಹೆಣ್ಣೊಳ ಗಂಡೊಳ ಸೇತುವೆ ಮೇಲೆ ಗೂಂಡಾಗುರು ಪಿಚ್ಚರ್ ಶೂಟಿಂಗ್ ನಡೀತಿತ್ತು. ನಾವೆಲ್ಲ ಜನರ ಮಧ್ಯೆ ಸೀಳಿಕೊಂಡು ಸೇತುವೆ ಅಂಚಿಗೆ ಹೋಗಿ ಕಂಬಿ ಮೇಲೆ ನಡೆಯುತ್ತ ನೇತಾಡುತ್ತ ಶೂಟಿಂಗ್ ನೋಡುವಾಗ ಪೋಲಿಸರು ನಾಲ್ಕು ಬಿಗಿದಿದ್ದರು. ಅಷ್ಟಾದರು ಅಂಬರೀಷ್ ನೋಡಲು ಮಾತಾಡಲು ಕೈಕುಲುಕಲು ಸಿಕ್ಕಸಿಕ್ಕ ಕಡೆ ನುಗ್ಗಿ ಅಂಬರೀಷ್ ಎದುರು ನಿಂತು ಅವರ ಕೈಮುಟ್ಟಿದ್ದೇ ತಡ ನನ್ನ ಮೈ ಜುಂ ಅಂತು. ಆಗ ಈ ನಟರಾಜು ಮೇಷ್ಟ್ರು ಅಂಬರೀಷ್ ಜೊತೆ ಕೈಹಿಡಿದುಕೊಂಡು ನಗ್ತಾ ಮಾತಾಡುತ್ತಿದ್ದದ್ದ ನೋಡಿ ಹಿರಿಹಿರಿ ಹಿಗ್ಗಿ ಸ್ಕೂಲಿಗೆ ಬಂದಾಗ ಅವರ ಜೊತೆ ನಗ್ತಾ ಕೇಳುತ್ತಿದ್ದರೆ “ನೋಡುದ್ರ ಹ್ಞಹ್ಞ ಗುಡ್” ಅಂದರೆ ನಮಗದೇ ಖುಷಿ. ಈ ನಟರಾಜ ಮೇಷ್ಟ್ರು ತಿರುಮಕೂಡಲಿನ ಚೌಡೇಶ್ವರಿ ಹಬ್ಬ ಬಂದರೆ ಯಾರ‌್ಯಾರಿಗೊ ಹೇಳಿ ಸ್ಕೂಲಿಗೆ ರಜೆ ಕೊಡಿಸುತ್ತಿದ್ದರು. ಗೌಡರಿಗೆ ಅದು ದೊಡ್ಡ ಹಬ್ಬ. ರಜೆಯ ಮಜದಿಂದ ನಾವು ಒಂದಷ್ಟು ಹುಡುಗರು ತಿರುಮಕೂಡಲಿನ ಬೀದಿಬೀದಿ ಸುತ್ತಿ ನೋಡುವಾಗ ಇಡೀ ತಿರುಮಕೂಡಲಿನ ಮನೆಮನೆಯಲ್ಲಿ ಬಾಡ್ನೆಸ್ರು ಕುದಿತಾ ಗಮ್ ಅಂತಿತ್ತು. ಆಗ ನಮ್ಮ ಸ್ಕೂಲಿನ ಹುಡುಗಿಯರು ಅವರ ಮನೆ ಬಾಗಿಲಲ್ಲಿ ನಿಂತು ನೋಡಿದರೆ ನಾವು ಅಂಗಿ ಮರೆಮಾಡಿಕೊಂಡು ಬೀದಿ ಕೊನೇ ತನಕ ಓಡ್ತಾ ಇದ್ದೆವು. ನಮ್ಮೂರಲ್ಲು ದೊಡ್ಡ ದೊಡ್ಡ ಹಬ್ಬನೆ ಮಾಡ್ತಿದ್ದರು. ಆಗ ಸ್ಕೂಲಿಗೆ ರಜೆ ಕೊಡುವುದಿರಲಿ ಹಬ್ಬ ಇದೆ ಸರ್ ರಜೆ ಬೇಕು ಅಂದರೆ “ಎಂಥ ಹಬ್ಬ ಎಮ್ಮೆಕೋಣ ತರುದು ದನ ಕೂದು ತಿನ್ನದೂ ಒಂದಬ್ಬನ.. ಕೂತ್ಕ ಹೋಗಿ” ಅಂತ ಮೇಲೆ ಗೋಡೆಗೆ ತಗಲಾಕಿದ್ದ ಅಂಬೇಡ್ಕರ್ ಫೋಟೊ ಕಡೆ ಕೈತೋರಿ “ಅವ್ರು ಯಾರ್ ಗೊತ್ತಾ..?” ಅಂತ ಅಂದರೆ ನಾವು ಕಣ್ಣೀರು ಸುರಿಸುತ್ತ ಹೆಬ್ಬೆರಳಲ್ಲಿ ನೆಲ ಕೆಂಟುತ್ತ ನಿಲ್ಲುತ್ತಿದ್ದೆವು. “ನೋಡಿ, ನಿಮ್ಗೆ ಅವ್ರು ಯಾರು ಅಂತ ಗೊತ್ತಿಲ್ಲ.. ಓದಂಗಿಲ್ಲ ಬರೆಯೊ ಹಂಗಿಲ್ಲ ತಿಂಗ್ಳಿಗೆ ವಾರಕ್ಕೆ ಹಬ್ಬ ಅಂತ ಮಾಡ್ಕೊಂಡು ದನ ತಿನ್ಕಂಡು ಇರೊದಷ್ಟೆ” ಅಂತ ನಾವೆಲ್ಲ ಮೈಮರೆತು ಕೇಳೊ ತರ ರೋಚಕವಾಗಿ ಅಂಬೇಡ್ಕರ್ ಬಗ್ಗೆ ಕಥೆ ಹೇಳ್ತಾ ಇದ್ದರು. ಆಗ ವೈಜಯಂತಿ ಮೇಡಂ ಬಂದು ನಗ್ತಾ “ಸರ್ ಬೈರಾಪುರದವ್ರಿಗೆಲ್ಲ ರಜೆ ಕೊಡ್ಬಿಡಿ ಸರ್.. ಪಾಪ ಅವ್ಕೂ ಆಸೆ ಇರುತ್ತಲ್ವ” ಅಂತ ನಟರಾಜು ಮೇಷ್ಟ್ರು ಒಪ್ಪಿಗೆಗೂ ಕಾಯದೆ “ಹಬ್ಬ ಯಾರ‌್ಯಾರಿಗಿದೆ ಅವ್ರೆಲ್ಲ ಹೋಗಿ” ಅನ್ನೋರು. ಹಬ್ಬ ಮುಗಿದು ಅದರ ಮಾರನೆ ದಿನ ಸ್ಕೂಲಿಗೆ ಹಾಜರಾದರೆ ವೈಜಯಂತಿ ಮೇಡಂ ಬಾರೊ ಇಲ್ಲಿ ಅಂತ ಹತ್ತಿರ ಕರೆದು “ನಿಮ್ಮನೇಲಿ ಎಷ್ಟ್ ದನ ಕೂದಿದ್ರಿ” ಅಂತ ಯಾರಿಗೂ ಗೊತ್ತಾಗದ ಹಾಗೆ ಮುಖದಲ್ಲೇ ಮೆಲ್ಲಗೆ ನಗೋರು. ನಾನು ನಾಚಿ “ಮೂರು ಮನೆಯಿಂದ ಒಂದು ಮೇಡಂ” ಅಂತ ಹೇಳಿ ಮೆಲ್ಲಗೆ ನನ್ನ ಸೀಟಿಗೆ ಹೋಗಿ ಕೂರುತ್ತಿದ್ದೆ.

ಇಂಥ ವೈಜಯಂತಿ ಮೇಡಂ ನಟರಾಜ ಮೇಷ್ಟ್ರು ಒಳ ಹೋದ ಮೇಲೆ ನನ್ನನ್ನು ಕರೆದು”ಏಯ್ ಬಾರೊ ಇಲ್ಲಿ ಹೋಗಿ ಅದೇನು ಅಂತ ನೋಡ್ಕೊ ಬಾ” ಅಂದದ್ದೇ ತಡ ಗಾಬರಿಯಲ್ಲಿದ್ದ ನಾನು ಪಣ್ಣಂತ ಹಾರಿ ಪೋಸ್ಟಾಫೀಸ್ ಹತ್ರ ನಿಂತಾಗ ಪೋಸ್ಟ್ ಮೇಷ್ಟ್ರು ಅಪ್ಪನಿಗು ಅಣ್ಣನಿಗು ದನಿ ತಗ್ಗಿಸಿ ಸಮಜಾಯಿಸಿ ನೀಡುತ್ತಿದ್ದರು. ಪದೆಪದೆ ಪೋಸ್ಟ್ ಮ್ಯಾನ್ ಗಂಗಣ್ಣನ ಬಗ್ಗೆ ಮಾತಾಡ್ತಿದ್ದ ಅಣ್ಣ ಕಂಪ್ಲೆಂಟ್ ಕೊಡ್ತಿನಿ ಹಾಗೆ ಹೀಗೆ ಅಂತ ಮಾತಾಡ್ತಿದ್ದ. ಅಪಾಯಿಟ್ಮೆಂಟ್ ಲೆಟರ್ ಬಂದು ಮೂರು ನಾಲ್ಕು ದಿನವಾದರು ಅಣ್ಣನ ಕೈಗೆ ಸೇರಿರಲಿಲ್ಲ. ಕ್ಯಾಸ್ಟ್ ಸರ್ಟಿಫಿಕೇಟ್ ಈಸಿಕೊಳ್ಳಲು ತಾಲ್ಲೊಕಾಫೀಸಿನ ಕಡೆ ಹೋಗಿದ್ದ ಅಣ್ಣನಿಗೆ ಅವನ ಜೊತೆ ಟ್ರೈನಿಂಗ್ ಮಾಡಿದ್ದ ಮೂಗೂರಿನವ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ಅದಕ್ಕೆ ಸಂಬಂಧಪಟ್ಟ ಯಾವುದೊ ಸರ್ಟಿಫಿಕೇಟಿಗೆ ಸೈನ್ ಹಾಕಲೊ ಇನ್ಯಾವುದಕ್ಕೊ ಬಂದು ತಾಲೋಕಾಫೀಸಿನ ಒಳಗೇ ಇದ್ದ ಪೊಲೀಸ್ ಸ್ಟೇಷನ್ ಬಾಗಿಲಲ್ಲಿ ನಿಂತಿದ್ದ. ಅವನು “ಬಂತ ಅಪಾಯಿಟ್ಮೆಂಟ್ ಲೆಟ್ರು. ನನಗೆ ಮೊನ್ನೆನೆ ಬಂತು. ನಾನು ನಾಳೆ ನಾಳಿದ್ದು ಹೋಗ್ತಿನಿ. ನೀನ್ ಯಾವಾಗ ಡ್ಯೂಟಿ ರಿಪೋರ್ಟ್ ಮಾಡ್ಕೊತಿಯ” ಅಂದಾಗಲೇ ಅಣ್ಣನಿಗೆ ಗೊತ್ತಾಗಿದ್ದು. ಗಾಬರಿ ಬಿದ್ದ ಅಣ್ಣ ಅಲ್ಲೆ ತಾಲ್ಲೋಕ್ ಆಫೀಸಿನ ಮುಂಭಾಗ ಬಾಡಿಗೆ ಸೈಕಲ್ ಎತ್ತಿಕೊಂಡು ಭರ‌್ರಂತ ಮನೆಗೆ ಹೋಗಿ ಅಪ್ಪನನ್ನು ಕರೆದುಕೊಂಡು ಬಂದು “ಸಾರ್ ಅಪಾಯಿಂಟ್ಮೆಂಟ್ ಲೆಟರ್ ಬಂದು ಎರಡು ಮೂರು ದಿನಾ ಆಯ್ತಂತಲ್ಲ. ದಿನಾ ಬಂದು ಬಂದು ಕೇಳ್ದಾಗ ಪೋಸ್ಟ್ ಮ್ಯಾನ್ ಕೊಡ್ತಾನ ಹೋಗಿ ಅಂದ್ರೆಲ್ವ ಸಾರ್” ಅಂತ ಒಂದೇ ಸಮನೆ ಪ್ರಶ್ನೆ ಮೇಲೆ ಪ್ರಶ್ನೆ ಹಾಕುತ್ತಲೇ ಇದ್ದರು.

ಪೋಸ್ಟ್ ಮೇಷ್ಟ್ರು ಷಣ್ಮುಖಸ್ವಾಮಿ ಸಮಾಧಾನದಿಂದ ‘ಇರಿ ಇರಿ’ ಅಂತ ಟಪಾಲು ತೆಗೆದು ಎರಡು ಮೂರು ದಿನದ ರೂಲ್ ಕಡೆ ಕಣ್ಣಾಡಿಸಿದರು. ಮೂರು ದಿನದ ಹಿಂದೆನೆ ಎರಡು ರಿಜಿಸ್ಟರ್ಡ್ ಲೆಟರಲ್ಲಿ ಒಂದು ಡಿಸ್ಪ್ಯಾಚ್ ಆಗಿದೆ. ಅದರ ಷರಾ ಕೂಡ ಬರೆದದ್ದಾಗಿದೆ. ಅದನ್ನು ತೋರಿಸಿ ‘ನೋಡಿ ಇಲ್ಲಿ ಡಿಸ್ಪ್ಯಾಚ್ ಆಗಿದೆ. ನೀವು ತಗೊಂಡಿಲ್ವ” ಅಂದರು. ಅಪ್ಪನಿಗೆ ರೇಗಬೇಕೆಂಬ ಸಿಟ್ಟು ಮುಖದಲ್ಲಿತ್ತು. ಅದರೂ “ಸಾ ಸಣ್ಮುಕಪ್ಪೋರೆ ಹಿಂಗಾದ್ರ ಹೆಂಗೇಳಿ. ಹೆಂಗೊ ಕೆಲ್ಸ ಆಯ್ತುದ ಅಂತ ನಾವು ಕಾಯ್ತ ಅಂವಿ. ಅದ್ಕೆ ಅಲ್ವ ಅಳಿ ನಿಮ್ಮತ್ರುಕ ಬಂದು ಬಂದು ಕೇಳ್ತ ಇದ್ದುದು” ಅಂತ “ಈಗ ಏನ್ಮಾಡದು ಯೇಳಿ.. ಪ್ರಾಣ ವೋಗತರ ಆಗದ.” ಅಂತ ಗೊಣಗುಟ್ಟುತ್ತಲೇ ಇದ್ದ. ಯೋಚನೆಗೆ ಬಿದ್ದ ಪೋಸ್ಟ್ ಮೇಷ್ಟ್ರು ಷಣ್ಮುಖಸ್ವಾಮಿ “ನೋಡಿ ಅಂವ ಪೋಸ್ಟ್ ಹಂಚೋಕೆ ಹೋಗಿದಾನೆ ಬರಲಿ. ಅದ್ಯಾರಿಗೆ ಕೊಟ್ಟಿದಾನೊ ಕೇಳಿ ವಾಪಸ್ ತರ‌್ಸೋಣ” ಅಂತ ಸಮಾಧಾನದ ಮಾತಾಡಿದರು. ಅಷ್ಟೊತ್ತಿಗೆ ಹಳೆ ತಿರುಮಕೂಡಲಿಂದ ಅಗಸ್ತೇಶ್ವರ ದೇವಸ್ತಾನದ ಅರ್ಚಕರು, ಪಂಚಾಯ್ತಿ ಮಾಜಿ ಛೇರ್ಮನ್ ಚೌಡಯ್ಯ ಸೈಕಲ್ ತುಳಿಯುತ್ತಾ ಬಂದರು. ಬಂದವರಿಗೆ ಒಂದು ಮರದ ಕುರ್ಚಿ ಕೊಟ್ಟು ಇನ್ನೊಬ್ಬರಿಗೆ ಪೆನ್ನು ಪೇಪರು ಇಂಕ್ ಪ್ಯಾಡು ಒಂದೆರಡು ಟಪಾಲುಗಳಿದ್ದ ದೊಡ್ಡದಾದ ಅಗಲವಾಗಿದ್ದ ಮರದ ಬಾಕ್ಸ್ ಮೇಲೆ ಅವೆಲ್ಲವನ್ನು ಕೆಳಗಿಟ್ಟು ಕೂರಿಸಿದರು.

ಅರ್ಚಕರು ಬೆಂಗಳೂರಿಗೆ ಟೆಲಿಗ್ರಾಂ ಮಾಡುವುದಿತ್ತು. ಷಣ್ಮುಖಸ್ವಾಮಿ ಟೆಲೆಗ್ರಾಂ ಫಾರಂ ತೆಗೆದು ಅದೇನೊ ಫಿಲ್ ಮಾಡುತ್ತ ಅರ್ಚಕರು ಹೇಳುವ ಸಂದೇಶವನ್ನು ಇಂಗ್ಲೀಷಿನಲ್ಲಿ ಬರೆದು ಅಕ್ಷರಗಳನ್ನು ಎಣಿಸಿ ಅದಕ್ಕೆ ತಗಲುವ ವೆಚ್ಚ ಹೇಳ್ತಾ ಇದ್ದರು. ಅಣ್ಣನ ಮುಖದಲ್ಲಿ ಬೆವರಿಳಿದು ಒರೆಸಿಕೊಳ್ಳುತ್ತ ‘ಸಾರ್ ನಾಳೆನೆ ಡ್ಯೂಟಿ ರಿಪೋರ್ಟ್ ಮಾಡ್ಕಬೇಕು ಅದೇನ ಹೇಳಿ ದೊಡ್ ಪೋಸ್ಟಾಫೀಸಿಗೆ ಹೋಗಿ ಕೇಳುದ್ರ ಸಿಕ್ಕುದ್ದ ಹೆಂಗ್ಯಾ” ಅಂದ. ಅದಕ್ಕೆ ಅವರು “ನೋಡಿ ಅಲ್ಲಿಗೋದ್ರೆ ನಾಳೆ ನೀವು ಡ್ಯೂಟಿ ರಿಪೋರ್ಟ್ ಮಾಡ್ಕೊಳಕಾಗುತ್ತಾ ಹೇಳಿ..? ಸುಮ್ನ ಧಣ್ದು ಸಾಯ್ತಿರಿ. ನನ್ಗೂ ಗೊತ್ತಿಲ್ಲ. ಅಂವ ಬಂದಾಗ ಡಿಸ್ಪ್ಯಾಚ್ ಆಗಿರೊ ಜಾಗಕ್ಕೆ ಕರಕೊಂಡು ಹೋಗಿ ಒಂದು ವ್ಯವಸ್ಥೆ ಮಾಡೋಣ ಇರಿ. ಸದ್ಯ ಅವತ್ತು ಎರಡೇ ರಿಜಿಸ್ಡರ್ಡ್ ಬಂದಿರದು. ಅವೆರಡರಲ್ಲಿ ಒಂದು ಅದ್ಯಾರಿಗೆ ಕೊಟ್ಟಿದ್ದಾನೊ ಕೇಳ್ತಿನಿ” ಅನ್ನುವಾಗ ಪಂಚಾಯ್ತಿ ಮಾಜಿ ಛೇರ್ಮನ್ ಚೌಡಯ್ಯ “ಏನ್ ಸ್ವಾಮಿ ಗಲಾಟೆ..ಗಂಗಶೆಟ್ಟಿ ಏನ ಮಾಡನ ಅನ್ಸುತ್ತ ?” ಅಂದರು. “ಸಾರ್ ನಾನು ಅವುನ್ನ ಪೋಸ್ಟ್ ಮ್ಯಾನಾಗಿ ಅಲ್ಲಿಂದ ಇಲ್ಲಿಗ ವರ್ಗ ಮಾಡುವಾಗ್ಲೆ ಬೇಡ ಬೇಡ ಸಾರ್, ನನಗೆ ತಗಲಾಕಬೇಡಿ ಅಂದ್ರು ನನ್ನ ಮಾತ ಕೇಳ್ದೆ ನನ್ ತಲೆಗೆ ಕಟ್ಟುದ್ರು.. ಈಗ ನೋಡಿ ಒಂದಾ ಎರಡಾ ಎಡವಟ್ಟು.. ನೋಡಿ ಇವ್ರಿಗೆ ವೆಟರಿನರಿ ಡಿಪಾರ್ಟ್ಮೆಂಟ್ಗೆ ಜಾಬಾಗಿದೆ..ನಾಳ ನಾಳಿದ್ದು ಡ್ಯೂಟಿ ರಿಪೋರ್ಟ್ ಮಾಡ್ಕಬೇಕು. ಅವ್ರಿಗೆ ಬಂದಿರ ಅಪಾಯಿಟ್ಮೆಂಟ್ ಲೆಟರನ್ನ ಅದ್ಯಾರಿಗೊ ಕೊಟ್ಟು ಬಂದನ. ಡಿಸ್ಪ್ಯಾಚ್ ಡೇಟೂ ಇದೆ” ಅಂತ ರೆಕಾರ್ಡ್ ಆಗಿರೊ ಟಪಾಲು ತೋರಿದರು. ಈ ನಡುವೆ ಅರ್ಚಕರ ಟೆಲಿಗ್ರಾಂ ಕೆಲಸ ಮುಗಿದಿತ್ತು. ಚೌಡಯ್ಯ “ಏ ನೀನು ಕಾಲಕ್ ಮಾದ ಅಲ್ವ ಗಾಡಿ ಹೊಡಿತಿದ್ದಯಲ್ಲ.. ಇಂವ ನಿನ್ ಮಗನಾ.. ಪರವಾಗಿಲ್ಲ ನಿಮ್ಮೂರೊರೆಲ್ಲ ನಮ್ಮೂರ‌್ಲಿ ಜೀತ ಮಾಡುದ್ರ ನೀ ಮಾತ್ರ ನಿನೈಕ್ಳ ಜೀತುಕ್ಕಳಿಸ್ದೆ ಓದ್ಸಿ ಕೆಲ್ಸ ಸಿಗ ಮಟ್ಗ ಮಾಡಿದೈ ಭೇಸ್ ಕಲ” ಅಂತ ಅಪ್ಪನಿಗೆ ಬೆನ್ನು ತಟ್ಟುವವರಂತೆ ಮಾತಾಡಿ ಇನ್ನು ಏನೋ ಹೇಳಲು ಬಾಯ್ತೆರೆಯುವಷ್ಟರಲ್ಲಿ ಅರ್ಚಕರು ಸಡನ್ ಬಾಯಾಕಿ ನಗುತ್ತಲೇ ಯಾರಿಗೂ ಹೇಳದ ಗಂಗಣ್ಣನ ಪೋಸ್ಟ್ ಪುರಾಣ ಒದರಿದರು.

(ಮುಂದುವರಿಯುವುದು)

-ಎಂ.ಜವರಾಜ್


[ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. “ಕತ್ತಲ ಹೂವು” (ನೀಳ್ಗತೆ) ಪ್ರಕಟಣೆಗೆ ಸಿದ್ದಗೊಳ್ಖುತ್ತಿದೆ. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಪ್ರಸ್ತುತ “ಪೋಸ್ಟ್ ಮ್ಯಾನ್ ಗಂಗಣ್ಣ” ಎಂಬ ನೀಳ್ಗತೆ ಮುಗ್ಧ ಪೋಸ್ಟ್ ಮ್ಯಾನ್ ಒಬ್ಬನ ಜೀವನ ಚಿತ್ರವನ್ನು ಹೇಳುವ ಒಂದು ಕುತೂಹಲಕಾರಿ ಕಥೆಯಾಗಿದೆ]


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x