ನಾಗರಾಜಪ್ಪ ಠೀವಿಯಿಂದ ತನ್ನೂರಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಆರಡಿ ಎತ್ತರದ ಗಟ್ಟಿ ದೇಹ, ವಯಸ್ಸು ಅರುವತ್ತು ದಾಟಿದ್ದರೂ ಕುಂದದ ಕಸುವು, ತಲೆಯ ಮುಕ್ಕಾಲು ಭಾಗ ಆವರಿಸಿದ್ದ ಕಪ್ಪು ಕೂದಲು, ನೇರ ನಿಲುವು ಇವೆಲ್ಲಾ ನಾಗರಾಜಪ್ಪನನ್ನು ಯುವಕನಂತೆಯೇ ಕಾಣಿಸುತ್ತಿದ್ದವು. ಆದರೆ ನಾಗರಾಜಪ್ಪನ ಮನಃಸ್ಥಿತಿ ತೀರಾ ಭಿನ್ನವಾಗಿತ್ತು. ಮುಂದಿನ ಯುಗಾದಿಗೆ ಅರವತ್ತಾರಕ್ಕೆ ಕಾಲಿಡುವ ಆತ
ಹತ್ತು ವರ್ಷ ಹೆಚ್ಚಾಗಿದೆ ತನಗೆ ಎಂದು ಭ್ರಮಿಸಿಕೊಂಡು ಖುಷಿಪಡುತ್ತಿದ್ದ. ವಯಸ್ಸಷ್ಟು ಹೆಚ್ಚಾದರೆ ಜೀವನಾನುಭವವನ್ನೂ ಹೆಚ್ಚಾಗಿ ಗಳಿಸಿಕೊಂಡಿದ್ದೇನೆ ಎಂಬ ಭಾವ ಆತನೊಳಗೆ ಮೂಡಿ, ಹೆಮ್ಮೆಪಟ್ಟುಕೊಳ್ಳುವಂತಾಗುತ್ತಿತ್ತು. ಇಂತಹ ನವಿರು ಭಾವವನ್ನು ಆಗಾಗ ಅನುಭವಿಸಿ ಖುಷಿಪಡುತ್ತಿದ್ದವ ನಾಗರಾಜಪ್ಪ.
ಆತ ಗುರುವಪ್ಪನ ಅಂಗಡಿ ತಲುಪಿದ್ದನಷ್ಟೇ, ಬೆಲ್ಲಕ್ಕೆ ಮುತ್ತಿದ ಇರುವೆಗಳಂತೆ ಜನರೆಲ್ಲಾ ಗುಂಪು ಸೇರಿದ್ದರು. ದಿನಸಿ ಕಟ್ಟಿಕೊಡುತ್ತಿದ್ದ ಗುರುವಪ್ಪ ಆಗಾಗ “ಸ್ವಲ್ಪ ಸರಿದು ನಿಂತ್ಕೊಳ್ರಪ್ಪ” ಎಂದು ಹೇಳುತ್ತಿದ್ದ. ವ್ಯಾಪಾರ ಚೆನ್ನಾಗಿ ನಡೆಯುತ್ತಿರುವ ಸಂತಸ ಅವನಲ್ಲಿತ್ತು. ಜೊತೆಗೆ, ಅವ್ಯವಸ್ಥಿತವಾಗಿ ನಿಂತು ಇಲ್ಲದ ರಗಳೆ ಎಬ್ಬಿಸುತ್ತಿದ್ದ ಜನರ ಬಗ್ಗೆ ರೇಜಿಗೆಯೂ ಇದ್ದಂತಿತ್ತು. ಗುರುವಪ್ಪ ಮತ್ತು ಅವನ ಕಡೆಯ ಹುಡುಗರಿಗೆ ಇದ್ದ ಎರಡು ಕೈ ಸಾಲದಂತಹ ಪರಿಸ್ಥಿತಿ. ಯಾವಾಗ ಅಂಗಡಿಯ ತೀರಾ ಸನಿಹಕ್ಕೆ ನಾಗರಾಜಪ್ಪ ಹೋದನೋ ಸೇರಿದ್ದ ಜನರೆಲ್ಲಾ ನಿಧಾನವಾಗಿ ಶಿಸ್ತಿನ ಕಟ್ಟುಪಾಡಿಗೆ ಒಳಗಾದವರಂತೆ ನಿಂತುಕೊಂಡು, ನಾಗರಾಜಪ್ಪನನ್ನೇ ನೋಡತೊಡಗಿದರು. ಇದರಿಂದಾಗಿ ಅಘೋಷಿತ ಕ್ಯೂ ಒಂದು ಅಲ್ಲಿ ಏರ್ಪಟ್ಟಿತು. ಸೇರಿದ್ದ ಜನರಿಗೂ ತನಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ನಾಗರಾಜಪ್ಪ ಮುಂದೆ ಹೋದ.
ಯಾರಿಂದಲೋ ದುಡ್ಡು ತೆಗೆದುಕೊಂಡು ಕೊಡಬೇಕಾದ ಚಿಲ್ಲರೆ ಎಣಿಸುತ್ತಿದ್ದ ಗುರುವಪ್ಪ ಅದನ್ನು ಮುಗಿಸಿ, ಸಂಪೂರ್ಣವಾಗಿ ನಾಗರಾಜಪ್ಪನೆಡೆಗೆ ತಿರುಗಿನಿಂತು, “ನಾಗರಾಜಣ್ಣ ಏನು ಬೇಕಿತ್ತು? ಹೇಳಿ” ಎಂದ. ನಾಗರಾಜಪ್ಪ ತನಗೆ ಬೇಕಾದದ್ದೆಲ್ಲವನ್ನೂ ಹೇಳಿ ಮುಗಿಸಿ, ಅವನು ಕಟ್ಟಿಕೊಟ್ಟದ್ದನ್ನು ತೆಗೆದುಕೊಂಡು, ಹಣ ಕೊಟ್ಟು ಅಲ್ಲಿಂದ ಹೊರಟ. ಶಾಸಕ ನರಸಿಂಗಪ್ಪನ ಜೊತೆಗಿನ ಅವನ ಸಂಘರ್ಷದ ಅರಿವಿದ್ದ ಜನರೆಲ್ಲ
ಅವನಿಗೆ ಮತ್ತೆ ಮೊದಲಿನಂತೆ ಬದಿಗೆ ಸರಿದು ನಿಂತು ಹೋಗಲು ಅನುವು ಮಾಡಿಕೊಟ್ಟರು.
ಮನೆಯ ಕಡೆಗೆ ಹಿಂದಿರುಗುತ್ತಿದ್ದ ನಾಗರಾಜಪ್ಪ ಒಂದು ಪಕ್ಕಕ್ಕೆ ವಾಲಿಕೊಂಡಿದ್ದ ತನ್ನ ನೆರಳನ್ನು ಗಮನಿಸಿದ. ಈ ಜಗತ್ತಿನಲ್ಲಿ ತನಗೂ ಒಂದು ಅಸ್ತಿತ್ವವಿದೆ ಎಂಬ ಭಾವನೆ ಆತನಲ್ಲಿ ಮೂಡಿತು. ತನ್ನ ಸಂಗಾತ ನಡೆಯುತ್ತಿದ್ದ ನೆರಳು ತನಗಿಂತಲೂ ದೊಡ್ಡದಾಗಿ ಬೆಳೆದಂತೆ, ಸುತ್ತಲಿದ್ದ ಮನೆಗಳೆಲ್ಲವನ್ನೂ ಆವರಿಸಿಕೊಳ್ಳುವಷ್ಟು ವಿಸ್ತಾರವಾದಂತೆ ಗ್ರಹಿಸಿಕೊಂಡು ಸೋಜಿಗಕ್ಕೆ ಒಳಗಾದ.
*
ನಾಗರಾಜಪ್ಪನೆಂದರೆ ಊರವರ ಪಾಲಿಗೆ ಮಹತ್ವಾಕಾಂಕ್ಷೆಯ ವ್ಯಕ್ತಿ. ಉಳಿದವರಿಂದ ಸಾಧ್ಯವಾಗದ್ದನ್ನು ಸಾಧಿಸಬೇಕೆಂಬ ವಿಪರೀತ ಬಯಕೆ. ಅದುವೇ ಅವನ ಹೆಗ್ಗುರುತು. ಚಿಕ್ಕಂದಿನಿಂದಲೂ ಕೂಡಾ ಹಾಗೆಯೇ. ಆಗಿನ್ನೂ ಅವನಿಗೆ ಹದಿನಾರೋ ಹದಿನೇಳೋ. ಊರ ಜಾತ್ರೆಗೆ ನಾಟಕ ಆಡುವುದೆಂದು ನಿರ್ಧಾರವಾಗಿತ್ತು. ನಾಗರಾಜಪ್ಪ ಆ ತಂಡದಲ್ಲಿದ್ದ. ‘ಭಕ್ತ ಪ್ರಹ್ಲಾದ’ ನಾಟಕ. ನಾಟಕದ ಮೇಷ್ಟ್ರು ಇವನನ್ನು ಕರೆದು “ನಿನಗೆ ಪ್ರಹ್ಲಾದನ ಪಾತ್ರ” ಎಂದರೆ ಇವನು ಒಪ್ಪಿಕೊಳ್ಳುವುದಕ್ಕೇ ಸಿದ್ಧನಿಲ್ಲ. ಹಿರಣ್ಯ ಕಶಿಪುವಿನ ಪಾತ್ರ ಮಾಡುತ್ತೇನೆ ಎಂದು ಇವನ ಹಠ. “ಎಣಿಸಿದರೆ ಕಾಲು ಕೆಜಿ ಮೀಸೆ ಮುಖದ ಮೇಲಿಲ್ಲ. ನೀನು ಹೇಗೋ ಅಷ್ಟು ದೊಡ್ಡ ಪಾತ್ರ ಮಾಡುತ್ತೀಯ” ಎಂದು ಮೇಷ್ಟ್ರು ನಗೆಯಾಡಿದರೂ ಇವನ ನಿಲುವು ಬದಲಾಗಲಿಲ್ಲ. ಮೇಷ್ಟಿಗೀಗ ಉಭಯ ಸಂಕಟ. ಇವನ ತಂದೆ ಅವರಿಗೆ ತೀರಾ ಆತ್ಮೀಯರು. ಪಾತ್ರ ಕೊಡದಿದ್ದರೆ ಅವರೆಲ್ಲಿ ನೊಂದುಕೊಳ್ಳುತ್ತಾರೋ ಎಂಬ ಯೋಚನೆ. ಹಾಗೆಂದು ಪಾತ್ರ ಕೊಟ್ಟರೆ ಇವನು ನಿಭಾಯಿಸಿಯಾನಾ ಎಂಬ ಗೊಂದಲ.
ಒಂದಷ್ಟು ಹೊತ್ತು ತಲೆ ಕೆಡಿಸಿಕೊಂಡ ಮೇಷ್ಟ್ರು ಕೊನೆಗೂ ಕಿರಿದು ತಲೆಗೆ ಹಿರಿದು ಮುಂಡಾಸು ಇಡುವ ನಿರ್ಧಾರ ಕೈಗೊಂಡರು. ಹಿರಣ್ಯ ಕಶಿಪು ನಾಗರಾಜಪ್ಪನ ಕೈ ವಶವಾದ. ಇನ್ನೂ ಲಂಗೋಟಿ ಬಿಚ್ಚಿ ಕೆಳಗಿಡದ ಪೋರನಿಗೆ ಆ ಪಾತ್ರ ಕೊಟ್ಟಿದ್ದಾರಲ್ಲ ಮೇಷ್ಟ್ರು ಎಂದು ಊರಿನ ಕೆಲವು ಹಣ್ಣು ಹಣ್ಣು ತಲೆಗಳು ಆಡಿಕೊಂಡವಾದರೂ ನಾಗರಾಜಪ್ಪ ಚೆನ್ನಾಗಿಯೇ ಪಾತ್ರ ಮಾಡಿದ್ದಾನೆ ಎಂದು ಹೆಚ್ಚಿನವರು ಮಾತನಾಡಿಕೊಂಡರು.
*
ನಾಟಕದಲ್ಲಿ ಆಗಾಗ ಕೈಕಾಲಾಡಿಸಿ ಎದೆ ಗಟ್ಟಿ ಮಾಡಿಕೊಂಡಿದ್ದ ನಾಗರಾಜಪ್ಪ ಅದೊಂದು ದಿನ ಇದ್ದಕ್ಕಿದ್ದಂತೆ ಊರು ಬಿಟ್ಟು ಹೋದ. ನಾಟಕದ ಪರಸಂಗದಲ್ಲಿದ್ದವನು ಪರದೇಶಿಯಾದ ಎಂದು ಊರವರು ಅಪಹಾಸ್ಯದ ನಗೆ ಬೀರುವಷ್ಟರಲ್ಲಿಯೇ ಊರಿನ ಒಂಟಿ ಟಾಕೀಸಿನ ಗೋಡೆಗೆ ಅಂಟಿಸಲ್ಪಟ್ಟ ಪೋಸ್ಟರ್‌ನಲ್ಲಿ ಅವನ ಹೆಸರು ಕಾಣಿಸಿಕೊಂಡಿತು. ಸಿನಿಮಾವೊಂದನ್ನು ನಿರ್ದೇಶಿಸಿದ್ದ ನಾಗರಾಜಪ್ಪ. ಅದೇ ದಿನ ಊರಿಗೂ ಕಾಲಿಟ್ಟ. ಮೈಯ್ಯಲ್ಲಿ ಲೆಕ್ಕಕ್ಕಿಂತ ಹೆಚ್ಚೇ ಹುರುಪಿಟ್ಟುಕೊಂಡಿದ್ದ ಹತ್ತಿಪ್ಪತ್ತು ಮಂದಿ ಯುವಕರು ಸೇರಿ ನಾಗರಾಜಪ್ಪನ ದೊಡ್ಡ ಕಟೌಟ್ ಮಾಡಿಸಿ, ಟಾಕೀಸಿನ ಮುಂದೆ ನಿಲ್ಲಿಸಿದರು. ಊರಿನವರೆಲ್ಲರೂ “ನಮ್ಮ ನಾಗರಾಜಪ್ಪ ಮಾಡಿದ ಪಿಚ್ಚರ್ರು” ಎಂದು ಹೇಳುತ್ತಾ, ಖುಷಿಖುಷಿಯಿಂದ ಹೋಗಿ ಸಿನಿಮಾ ನೋಡಿದರು. ನಾಗರಾಜಪ್ಪನ ಊರಿನಲ್ಲಿ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡಿದರೂ, ಉಳಿದ ಕಡೆಗಳಲ್ಲಿ ಮಕಾಡೆ ಮಲಗಿತು. ನಿರ್ಮಾಪಕರು ನಷ್ಟದ ಹಣವನ್ನು ವಸೂಲು ಮಾಡುವುದಕ್ಕಾಗಿ ನಾಗರಾಜಪ್ಪನ ಮೇಲೆ ಕೇಸು ಜಡಿದ ಸುದ್ದಿ ಕನ್ನಡದ ಎಲ್ಲಾ ಪತ್ರಿಕೆಗಳಲ್ಲೂ ಕಾಣಿಸಿಕೊಂಡಿತು.
*
ಸಿನಿಮಾ ಭರಾಟೆ ಮುಗಿಸಿ, ಊರಿಗೆ ಅಪರಿಚಿತನಂತಾದ ನಾಗರಾಜಪ್ಪನ ತಲೆಯ ದಿವ್ಯದರ್ಶನ ಮತ್ತೆ ಊರವರಿಗೆ ಲಭಿಸಿದ್ದು ಎರಡು ವರ್ಷ ಕಳೆದ ಮೇಲೆ. “ನೇರ ನುಡಿ” ಎನ್ನುವಂಥದ್ದೇನೋ ಹೆಸರಿನ ಪತ್ರಿಕೆಯ ಬಂಡಲನ್ನು ಓಮಿನಿ ಕಾರಿನಲ್ಲಿ ತುಂಬಿಕೊಂಡು ಊರಿಗೆ ಬಂದಿದ್ದ. ಚಿಳ್ಳೆಪಿಳ್ಳೆ ಮಕ್ಕಳು ‘ಹೋ’ ಎನ್ನುತ್ತಾ ಕಾರಿನ ಹಿಂದೆಯೇ ಓಡತೊಡಗಿದರೆ, ಆಲದ ಮರದ ಕಟ್ಟೆಯ ಗಟ್ಟಿತನಕ್ಕೆ ಪೈಪೋಟಿ ಕೊಡುವಂತೆ ಕುಳಿತಿದ್ದ ಹಿರಿಯರು ಅಚ್ಚರಿಯಿಂದ ನೋಡಿದ್ದರು. ನಗುತ್ತಲೇ ಕಾರಿನಿಂದಿಳಿದ ನಾಗರಾಜಪ್ಪ ಆಲದ ಮರದ ನೆರಳಲ್ಲೇ ನಿಂತುಕೊಂಡು, ಸರ್ಕಾರದ ಬಗ್ಗೆ, ರಾಜಕಾರಣಿಗಳ ಕೀಳುತನದ ಬಗ್ಗೆ, ಆಡಳಿತ ವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ನಿರಂತರವಾಗಿ ಇಪ್ಪತ್ತೈದು ನಿಮಿಷ ಮಾತನಾಡಿದ. ಅದಕ್ಕಾಗಿಯೇ ತಾನೀಗ ಹೊಸ ಪತ್ರಿಕೆ ಆರಂಭಿಸಿರುವುದಾಗಿ ಹೇಳಿದ. ಕಾರಿನಿಂದ ಬಂಡಲ್‌ಗಟ್ಟಲೆ ಪತ್ರಿಕೆಗಳನ್ನು ತೆಗೆದು ಊರಿನವರಿಗೆಲ್ಲರಿಗೂ ಉಚಿತವಾಗಿ ಹಂಚಿದ. ಇನ್ನುಮುಂದಕ್ಕೆ ಪತ್ರಿಕೆ ಬೇಕಾದರೆ ಕರಿಸಿದ್ದನ ಅಂಗಡಿಯಲ್ಲಿ ಸಿಗುತ್ತದೆ ಎಂದು ಹೇಳಿ, ಆತ್ಮೀಯತೆಯ ನಗುಬೀರಿ ಕಾರನ್ನೇರಿದ.
ಇದಾಗಿ ಮೂರು ವಾರ ಕಳೆಯುವಷ್ಟರಲ್ಲಿ ಅವನ ಪತ್ರಿಕೆಗೆ ಕುತ್ತು ಬಂದಿರುವ ಸುದ್ದಿ ಇನ್ನೊಂದು ಪತ್ರಿಕೆಯಲ್ಲಿ ಪ್ರಕಟವಾಗಿ, ಅವನ ಊರವರನ್ನು ತಲುಪಿತು. ಒಬ್ಬ ಮಂತ್ರಿ ನಟಿಯ ಜೊತೆಗೆ ಸಲ್ಲದ ಸಂಬಂಧ ಇಟ್ಟುಕೊಂಡಿರುವುದನ್ನು ಹೈಲೈಟ್ ಮಾಡಿ ಈತ ಬರೆದಿದ್ದ. ಈ ವಿಷಯ ರಾಜ್ಯದ ಎಲ್ಲರಿಗೂ ಗೊತ್ತಿತ್ತು. ಆದರೆ ಮಂತ್ರಿಯ ಮರ್ಜಿಯ ಅರಿವಿದ್ದ ಯಾರೂ ಅದರ ಬಗ್ಗೆ ಬರೆಯುವ ಧೈರ್ಯ ಮಾಡಿರಲಿಲ್ಲ. ನಾಗರಾಜಪ್ಪ ಮಾಡಿದ. ಇದರಿಂದಾಗಿ ಸಂಕಷ್ಟಕ್ಕೂ ಸಿಲುಕಿಕೊಂಡ. ಈತ ಅದ್ಯಾರದ್ದೋ ಕೈಕಾಲು ಹಿಡಿದು ಜಾಮೀನು ಪಡೆದು ಹೊರಬರುವ ಹೊತ್ತಿಗೆ ಆ ಮಂತ್ರಿಯ ಕಡೆಯವರು ಇವನ ಕಛೇರಿಗೆ ಬೆಂಕಿಯಿಟ್ಟು, ಇವನ ಪತ್ರಿಕೆಯ ಕನಸನ್ನು ಬೂದಿಯಾಗಿಸಿದ್ದರು. ಜೊತೆಗೆ ಆ ಮಂತ್ರಿ ಇವನ ಮೇಲೆಯೇ ಮಾನನಷ್ಟ ಮೊಕದ್ದಮೆ ದಾಖಲು ಮಾಡಿ, ಲಕ್ಷ ಲಕ್ಷ ಹಣವನ್ನೂ ಕಿತ್ತುಕೊಂಡ.
*
ಊರಿಗೆ ಮತ್ತೆ ನಾಗರಾಜಪ್ಪ ಮರಳಿದಾಗ ಊರವರೆಲ್ಲರೂ ಆತನಿನ್ನಾದರೂ ಸುಮ್ಮನಿರುತ್ತಾನೆ ಎಂದುಕೊಂಡಿದ್ದರು. ಐದು ತಿಂಗಳು ಕಳೆಯುವಷ್ಟರಲ್ಲಿಯೇ ಈ ಊಹೆ ಸುಳ್ಳಾಗಿತ್ತು. ಊರಿನ ಒಂದು ಬದಿಯಲ್ಲಿ ಕಟ್ಟಡವೊಂದು ತಲೆ ಎತ್ತಲಾರಂಭಿಸಿತ್ತು. ಕಟ್ಟಡ ಬುಡವೂರಿದ್ದ ನೆಲ ಮುನಿಯನಿಗೆ ಸೇರಿದ್ದು. ನಾಲ್ಕಾರು ಮನೆಗಳ ಕೂಲಿ ಮಾಡುತ್ತಾ, ಇದ್ದುದರಲ್ಲಿಯೇ ಸುಖ ಕಂಡುಕೊಳ್ಳುತ್ತಿದ್ದ ಅವನ ಭೂಮಿಯನ್ನು
ಬಲವಂತವಾಗಿ ಒತ್ತುವರಿ ಮಾಡಿಕೊಳ್ಳಲಾಗಿತ್ತು. ಆ ಕಟ್ಟಡ ನಿರ್ಮಾಣದ ಹಿಂದೆ ಶಾಸಕ ನರಸಿಂಗಪ್ಪನವರ ಪಾತ್ರ ಇತ್ತು. ಈ ಕಾರಣದಿಂದಾಗಿ ಮುನಿಯ ಅಸಹಾಯಕನಾಗಿದ್ದ. ಈ ಪರಿಸ್ಥಿತಿಯಲ್ಲಿ ಅವನ ಸಹಾಯಕ್ಕೆ ಬಂದವನು ನಾಗರಾಜಪ್ಪ. ಬಂಡೆಗೆ ತಲೆ ಗುದ್ದಿಕೊಳ್ಳಲು ಹೊರಟಿದ್ದೇನೆಂಬ ಅರಿವು ನಾಗರಾಜಪ್ಪನಿಗೆ ಇತ್ತು. ಆದರೂ ಅವನ ಮೂಲಸ್ವಭಾವ ಆತನನ್ನು ಸುಮ್ಮನಿರಲು ಬಿಡಲಿಲ್ಲ. ಒಂದಷ್ಟು ಮಂದಿಯನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸಿದ. ಈ ಸುದ್ದಿ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವಂತಾಯಿತು. ಒಂದಷ್ಟು ಜನ ಚಿಂತಕರು, ಪ್ರಜ್ಞಾವಂತರು ಈ ಹೋರಾಟದಲ್ಲಿ ಸೇರಿಕೊಂಡರು.
*
ಹೀಗೆ ಹೋರಾಟ ತೀವ್ರವಾಗಿದ್ದ ಅದೊಂದು ಸಂಜೆ ನಾಗರಾಜಪ್ಪನನ್ನು ಹುಡುಕಿಕೊಂಡು ಬಂದ ವ್ಯಕ್ತಿಯೊಬ್ಬ ಅವನ ಜೊತೆಗೆ ಜಗಳಕ್ಕೆ ನಿಂತ. ತನಗೆ ನಾಗರಾಜಪ್ಪ ಐದು ಲಕ್ಷದಷ್ಟು ಸಾಲ ಕೊಡುವುದು ಬಾಕಿ ಇದೆ ಎಂದು ಅವನು ಬೊಬ್ಬೆ ಹೊಡೆಯತೊಡಗಿದ. ಅದಕ್ಕೆ ದಾಖಲೆ ಏನಿದೆ ಎಂದು ಯಾರೋ ದಬಾಯಿಸಿ ಕೇಳಿದ್ದಕ್ಕೆ ಬಾಂಡ್ ಪೇಪರ್ ಒಂದನ್ನು ತೋರಿಸಿದ. ಅದರಲ್ಲಿ ನಾಗರಾಜಪ್ಪನ ಸಹಿ ಇತ್ತು.
ನಾಗರಾಜಪ್ಪನಿಗೀಗ ನೆನಪಾಯಿತು. ಅಪರೂಪಕ್ಕೊಮ್ಮೆ ಕುಡಿಯುವ ಚಟ ಇವನಿಗಿತ್ತು. ವಾರದ ಹಿಂದೆ ಊರಾಚೆಯ ಬಾರೊಂದರಲ್ಲಿ ಕುಡಿಯುತ್ತಾ ಕುಳಿತಿದ್ದ. ಆಗ ಅವನ ಎದುರಿನ ಕುರ್ಚಿಯಲ್ಲಿ ಬಂದು ಕುಳಿತ ಇಬ್ಬರು ಮಾಮೂಲಿಯಾಗಿ ಮಾತನಾಡತೊಡಗಿದ್ದರು. ಇದ್ದಕ್ಕಿದ್ದಂತೆ ನಾಗರಾಜಪ್ಪನಿಗೆ ವಿಪರೀತ ಅಮಲು ಬಂದಂತಾಗಿತ್ತು. ಆಗ ಮದ್ಯದ ನಶೆಯಲ್ಲೇ ಹಾಗಾಗಿದೆ ಎಂದುಕೊಂಡಿದ್ದ. ಆದರೆ ಈಗ ಈ ವ್ಯಕ್ತಿ ಬಂದು ಸಾಲದ ಕಥೆ ಕಟ್ಟಿದಾಗ ಅವತ್ತು ನಡೆದದ್ದೇನು ಎನ್ನುವ ಊಹೆ ಮಾಡಿಕೊಂಡ. ಸಾಲದ ಹಣ ಕೊಡದೆ ಬೇರೆ ದಾರಿ ಇರಲಿಲ್ಲ. ಕೊಟ್ಟ. ಇದಾಗಿ ತಿಂಗಳು ಕಳೆದಿರಲಿಲ್ಲ, ನಾಗರಾಜಪ್ಪ ಊರ ಹೊರಗಿನ ಲಾಡ್ಜ್ ಒಂದರಲ್ಲಿ ತನ್ನ ಮಗಳ ಪ್ರಾಯದ ಹುಡುಗಿಯೊಬ್ಬಳ ಜೊತೆಗೆ ಇದ್ದುದು, ಪೋಲೀಸರು ಬಂಧಿಸಿದ್ದು ಸುದ್ದಿಯಾಯಿತು. ಸತ್ಯ ಏನೆಂದು ನಾಗರಾಜಪ್ಪನಿಗೆ ಗೊತ್ತಿತ್ತು. ಆದರೆ ಸಾಬೀತುಪಡಿಸುವಲ್ಲಿ ಸೋತುಹೋದ.
ಈ ಘಟನೆಗಳೆಲ್ಲಾ ನಡೆದ ಮೇಲೆ ನಾಗರಾಜಪ್ಪನ ಹೋರಾಟ ಒಂದಷ್ಟು ಶಕ್ತಿ ಕಳೆದುಕೊಂಡಿತು. ಕೆಲವು ಜನ ಅವನ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದರು. ನರಸಿಂಗಪ್ಪನ ಜೊತೆ ಅವನು ಒಪ್ಪಂದ ಮಾಡಿಕೊಂಡಿದ್ದಾನೆ, ಹಣ ತೆಗೆದುಕೊಂಡಿದ್ದಾನೆ ಎಂಬ ಸುದ್ದಿಯೂ ಹರಡಿತು. ಒಂದಷ್ಟು ಜನ ನಂಬಿದರು. ಒಂದಷ್ಟು ಜನ ನಂಬಲಿಲ್ಲ. ಮುನಿಯನ ಭೂಮಿಯನ್ನು ಅವನಿಗೆ ಮತ್ತೆ ದೊರಕುವಂತೆ ಮಾಡಲು ನಾಗರಾಜಪ್ಪನ ಹೋರಾಟ ನಡೆಯುತ್ತಲೇ ಇತ್ತು.
*
ತನ್ನ ನೆರಳಿನ ಅಗಾಧತೆಯ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಾ, ಅಚ್ಚರಿಪಡುತ್ತಾ ಸಾಗುತ್ತಿದ್ದ ನಾಗರಾಜಪ್ಪನ ನಡಿಗೆ ಅದೊಂದು ಬಿಂದುವಿನಲ್ಲಿ ಸ್ಥಗಿತವಾಯಿತು. ಅವನೀಗ ತನ್ನ ಜಮೀನಿನ ಮಧ್ಯಭಾಗದಲ್ಲಿ ನಿಂತುಕೊಂಡಿದ್ದ. ಅವನ ಫೋನು ಬಡಿದುಕೊಳ್ಳತೊಡಗಿತು. ನರಸಿಂಗಪ್ಪನ ಕರೆ. ಹೋರಾಟ ಬಿಟ್ಟುಬಿಡು, ಜೀವ ಉಳಿಸಿಕೋ ಎಂಬ ಎಚ್ಚರಿಕೆ. ಹೋರಾಟ ನಿಲ್ಲಿಸುವುದಿಲ್ಲ ಎಂದು ಆವೇಶದಿಂದ ನುಡಿದವನು ತನ್ನ ನೆರಳು ತನ್ನ ಇಡೀ ಜಮೀನನ್ನು ಆವರಿಸಿಕೊಂಡಂತಹ ಭಾವಕ್ಕೊಳಗಾಗಿ ರೋಮಾಂಚನಗೊಂಡ.
ನರಸಿಂಗಪ್ಪನ ಜೊತೆಗಿನ ಮಾತನ್ನು ಕೊನೆಗೊಳಿಸಿ ಜಮೀನಿನ ತುದಿಯನ್ನು ಮುಟ್ಟಿದ್ದನಷ್ಟೇ, ಹಿಂದಿನಿಂದ ಆಕ್ರಮಿಸಿ ಬಂದ ನಾಲ್ಕೈದು ದೈತ್ಯ ನೆರಳುಗಳು ನಾಗರಾಜಪ್ಪನ ನೆರಳನ್ನು ಇನ್ನಿಲ್ಲವಾಗಿಸಿದವು.
-ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಕತೆಯ ಹೆಸರು ಚೆನ್ನಾಗಿದೆ. ನೆರಳುಗಳೇ ನಮಗೆ ಶತ್ರು ಮತ್ತು ಮಿತ್ರ.
ಅಭಿನಂದನೆಗಳು. ಬರೆದ ನಿಮಗೂ ಮತ್ತು ಪ್ರಕಟಿಸಿದ ಪಂಜುವಿಗೂ.
ನೆರಳಿನ ಕಥೆ ಸೊಗಸಾಗಿದೆ. ಕೊನೆಗೆ ದೈತ್ಯ ನೆರಳುಗಳಲ್ಲಿ ಈ ನೇರಳು ವಿಲೀನ ವಾದಂತಾಗಿ ಆದಾಗ ಅಯ್ಯೋ ಪಾಪ ಎನಿಸಿತು.