“ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 6)”: ಎಂ.ಜವರಾಜ್

-೬-

ಅವತ್ತು ಸುಡು ಬಿಸಿಲ ಒಂದು ಮದ್ಯಾಹ್ನ ಗಂಗಣ್ಣ ಸುಸ್ತಾದವನಂತೆ ಸೈಕಲ್ ಏರಿ ಬಂದವನು ಅಗಸ್ತೇಶ್ವರ ದೇವಸ್ಥಾನದ ಉತ್ತರ ದಿಕ್ಕಿನ ಬಾಗಿಲ ಪಕ್ಕದ ಪಶ್ಚಿಮದ ಕಡೆ ಮುಖ ಮಾಡಿದ್ದ ಬಸಪ್ಪನ ವಿಗ್ರಹದ ಜಗುಲಿ ಅಂಚಿಗೆ ಕುಂತು ಕಾಗದ ಪತ್ರ ಚೆಲ್ಲಿಕೊಂಡು ತೊಟ್ಟಿಕ್ಕುತ್ತಿದ್ದ ಬೆವರು ಒರೆಸಿಕೊಳ್ಳುತ್ತ ಓದುತ್ತ ಜೋಡಿಸುತ್ತಿದ್ದ. ಬಿಸಿಲು ಧಗಧಗಿಸುತ್ತಿತ್ತು. ಅದೇ ಹೊತ್ತಿಗೆ ಭರ ್ರಂತ ಬಂದ ಅರ್ಚಕರು ಅವನಿಗೆ ಎದುರಾಗಿ ಕುಂತು “ಏನಪ್ಪ ಗಂಗ ಲೆಟ್ರು ಗಿಟ್ರು ಬಂದಿದಿಯಾ” ಅಂದರು. ಗಂಗಣ್ಣನ ಮುಖ ಇನ್ನಷ್ಟು ಬೆವರಿ ತೊಟತೊಟ ತೊಟ್ಟಿಕ್ಕುತ್ತಿತ್ತು. ಗಂಗಣ್ಣ ತಲೆ ಎತ್ತಿ ನೋಡಿ ನಿಧಾನಕ್ಕೆ “ಬನ್ನಿ ಸ್ವಾವ್ಗಳೇ ನಿಮ್ಗೆ ಅಂತ ಯಾವ್ದೂ ಇಲ್ಲ. ಆದ್ರೆ ದೇವರ ಹೆಸರಲ್ಲೆ ಒಂದು ಲೆಟರ್ ಬರ‌್ದಿದಾರೆ.. ಹಾಗೆ ಅದೆ ಹೆಸರಲ್ಲಿ ಮನಿಯಾಡ್ರು ಕೂಡ ಇದೆ. ಆ್ಞ.. ಐವತ್ತು ರೂಪಾಯಿ. ತಕ್ಕಳಿ ಹುಂಡಿಗೆ ಕಳಿಸಿರ‌್ಬೇಕು ಯಾರೋ.. ಅವರಿಗೆ ಪ್ರಸಾದ ಕಳಿಸ್ಬುಡಿ” ಅಂತ ಅರ್ಚಕರಿಂದ ಸೈನ್ ಪಡೆದು ಐವತ್ತು ರೂಪಾಯಿ ಕೊಟ್ಟು ಕೆಳ ಭಾಗದ ಚೀಟಿ ಹರಿದು ಕೊಟ್ಟ. ಎಲ್ಲ ಆದ ಮೇಲೆ ಅರ್ಚಕರು “ಏನ್ ಗಂಗಣ್ಣ ಲೆಟರೆಲ್ಲ ಹಂಚಾಯ್ತ ಇಲ್ಲ ಇನ್ನು ಇದಾವ..” ಅಂದರು. “ಅಯ್ಯೋ ಬನ್ನಿ ಯಾವತ್ಗೊ ಒಂದಿನ ಸಾಯೊರ‌್ಗೆ ಅಳಬೋದು ದಿನಾ ಸಾಯೊರ‌್ಗೆ ಯಾರಳ್ತಾರೆ ಸ್ವಾಮ್ಗಳೇ” ಅಂತ ಗಂಗಣ್ಣ ನೀಟಾಗಿ ಬ್ಯಾಗಿಗೆ ತುಂಬಿಕೊಂಡು ಕೆಲವು ಎಂಓ ಫಾರಂ ತೆಗೆದು ಹೆಬ್ಬೆಟ್ಟು ಒತ್ತಿದ್ದವರ ಗುರುತಿನ ಮೇಲೆ ಎಲ್ಟಿಎಂ ಹಾಕುವಂತೆ ಕೊಟ್ಟ. ಅರ್ಚಕರು “ಏನ್ ಗಂಗಣ್ಣ ಒಳ್ಳೆ ಲಾಟ್ರಿ ಅನ್ಸುತ್ತ.. ಇಪ್ಪತು ಎಂಓ..! ಒಂದೊಂದಕ್ಕು ಎರಡು ರೂಪಾಯಿ ಕಮಿಷನ್ ಅಂದ್ರು ನಲವತ್ತು ರೂಪಾಯಿ ಗಿಟ್ಸಿದ್ದಿಯ. ನೀನೆ ಪುಣ್ಯವಂತ. ಇರಲಿ, ಇವೆಲ್ಲುಕು ನಾನೆ ಎಲ್ಟಿಎಂ ಹಾಕುದ್ರೆ ಅಬ್ಸಕ್ಷನ್ ಆಗಲ್ವ.. ನೀನು ಎಲ್ಲೆಲ್ಲೊ ಯಾರ‌್ಯಾರಿಗೊ ಕೊಟ್ಬಂದು ನನ್ಗ ಎಲ್ಟಿಎಂ ಹಾಕು ಅಂತ ಕೊಟ್ಟಿದ್ದಿಯಲ್ಲ ನೀನು ಅವ್ರಿಗೇ ಕೊಟ್ಟಿದಿಯ ಅಂತ ಏನ್ ಗ್ಯಾರಂಟೀ..?” ಅಂತ ಹುಸಿನಗೆ ನಕ್ಕರು. ಗಂಗಣ್ಣ ” ಏನ್ ಸ್ವಾಮ್ಗಳೇ ನನ್ಮೇಲೆ ನಂಬ್ಕೆ ಇಲ್ವ.. ನಿಮ್ಗೆ ನಂಬ್ಕೆ ಇಲ್ಲ ಅಂದ್ರೆ ಬೇಡ ಬಿಡಿ ಎಲ್ಲಾರು ಹಾಕುಸ್ಕೊತಿನಿ” ಅಂತ ಅರ್ಚಕರ ಕೈಲಿದ್ದ ಎಂಓ ಕಾರ್ಡ್ಗಳನ್ನು ಕಸಿದುಕೊಳ್ಳಲು ಯತ್ನಿಸಿದ. ಅರ್ಚಕರು ಕೊಸರಿ “ಗಂಗಣ್ಣ ಇದೇನ್ ಗೊತ್ತಾ, ಎಲ್ಟಿಎಂ ಹಾಕೋರು ನೀನು ಓಲ್ಡೇಜೊ ವಿಡೊ ಪೆನ್ಸನ್ನೊ ಕೊಡುವಾಗ ನೋಡಿ ಸಾಕ್ಷಿದಾರರಾಗಿರಬೇಕು. ಅದು ಪ್ರೊಸಿಜರು..” ಅಂತ ಬಿಡಿಸಿ ಹೇಳಿದರು. ಗಂಗ “ಅಯ್ಯೊ ಅವ್ರ್ ಕೊಡೊ ಸಂಬ್ಳಕ್ಕೆ ಅವ್ರ್ ಮಾಡಿರೊ ಕಾನೂನ್ ಪಾಲ್ಸೊಕಾಗುತ್ತಾ.. ಎಲ್ಲ ಪಾಲುಸ್ತಾರ? ಏನಿಲ್ಲ ಹಾಕಿ ನಡಿಯುತ್ತೆ” ಅಂದ. “ಅದ್ಕೆ ನೀನೂ ಈ ಬಿಸುಲ್ಲಿ ಅದ್ಯಾರ್ ಹಂಚೋರು ಅಂತ ಎಲ್ಲ ಪೋಸ್ಟು ಕಾಗ್ದನೆಲ್ಲ ಸೇತ್ವಯಿಂದ ಎಸೆದೆ ಅಲ್ವ..?” ಅರ್ಚಕರು ಥಟ್ ಅಂತ ಹೇಳಿದರು. ಈಗ ಗಂಗಣ್ಣ ಬೆವರು ಒರೆಸಿಕೊಳ್ಳುತ್ತ ಸುಸ್ತಾದವನಂತೆ ಕಂಡ.

ಗಂಗಣ್ಣ ಪೋಸ್ಟಾಫೀಸ್ ಬಿಟ್ಟು ಹೊಸ ತಿರುಮಕೂಡಲು ಸುತ್ತಿಕೊಂಡು ದ್ವಾರ್ಕಿ ಗ್ಯಾರೆಜ್ ಬಳಸಿಕೊಂಡು ಸಣ್ಣಪ್ಪನ ಗುಳ್ಳೋಟಲಲ್ಲಿ ಇಡ್ಲಿ ತಿಂದು ಟಿ ಕುಡಿದಾದ ಮೇಲೆ ತಾನು ಕುಂತು ನಿಂತ ಜಾಗನೆಲ್ಲ ಮತ್ತೆಮತ್ತೆ ಉರುಗಿ ತಿರುಗಿ ನೋಡಿ ಕಣ್ಣಾಡಿಸಿ ಬ್ಯಾಗನ್ನು ಹ್ಯಾಂಡಲ್ಲಿಗೆ ಸಿಕ್ಕಿಸಿ ಸೈಕಲ್ ತಳ್ಳಿಕೊಂಡು ಗಂಡೊಳೆ ಸೇತುವೆ ಮೇಲೆ ಎಡಭಾಗ ಜೋಪಾನವಾಗಿ ನಡೆದುಕೊಂಡು ಸೇತುವೆಯ ನಡು ಮಧ್ಯೆ ಸ್ಟ್ಯಾಂಡ್ ಹಾಕಿ ಸೈಕಲ್ ನಿಲ್ಲಿಸಿದ. ಈ ಗಂಗಣ್ಣ ಸಣ್ಣಪ್ಪನ ಹೋಟೆಲ್ ಹೊರಗೆ ನಿಂತಿದ್ದಾಗಲೇ ಅರ್ಚಕರು ಅರಳೀ ಮರದತ್ರ ಯಾರೊಂದಿಗೊ ನಿಂತು ಮಾತಾಡುತ್ತಾ ನೋಡಿದ್ದರು. ಅಲ್ಲೆ ಅವನನ್ನು ಮಾತಾಡಿಸಿ ಯಾವುದೊ ಪೋಸ್ಟ್ ಬಗ್ಗೆ ವಿಚಾರಿಸಬೇಕೆಂದುಕೊಂಡಿದ್ದರು. ಮಾತಾಡುತ್ತಿದ್ದವರ ಜೊತೆ ಮಾತಾಡುತ್ತ ಮೈಮರೆತಿದ್ದರು. ಈ ನಡುವೆ ಗಂಗಣ್ಣ ನಿಧಾನಕೆ ಸೈಕಲ್ ತಳ್ಳಿಕೊಂಡು ಹಳೇ ತಿರುಮಕೂಡಲಿನ ಕಡೆಗೆ ತಿರುಗಿದ್ದು ನೋಡಿದ್ದಷ್ಟೆ, ಅರ್ಚಕರು ಮಾತಾಡುತ್ತಿದ್ದವರ ಜೊತೆ ಅರ್ಧಕ್ಕೆ ಮಾತು ನಿಲ್ಲಿಸಿ ದೂರದಿಂದ ಗಂಗಣ್ಣನ ಹಿಂದೆನೆ ಹೋಗಿದ್ದರು. ಹೋಗ್ತಾ ಹೋಗ್ತಾ ಈ ಗಂಗಣ್ಣ ಈ ಉರಿಯೊ ಬಿಸಿಲಲ್ಲಿ ಅದೂ ಯಾರೂ ಇಲ್ಲದ ಸೇತುವೆ ನಡುಮಧ್ಯೆ ಸೈಕಲ್ ಸ್ಟ್ಯಾಂಡ್ ಹಾಕಿ ನಿಲ್ಲಿಸಿದ್ದು ಕಂಡು ಬಿರಬಿರ ಸೈಕಲ್ ತುಳಿಯುತ್ತಿದ್ದ ಅರ್ಚಕರು ಚಕ್ಕಂತ ಇಳಿದು ಸೈಕಲ್ ಒರಗಿಸಿಕೊಂಡೇ ಅಲ್ಲೆ ಸೇತುವೆ ಕಂಬಿ ಹಿಡಿದು ಕೆಳಗೆ ನೋಡುವವರಂತೆ ನಟಿಸಿದರು. ಗಂಗಣ್ಣ ತನ್ನ ಬ್ಯಾಗಲ್ಲಿದ್ದದನ್ನು ತೆಗೆದು ಆಕಡೆ ಈಕಡೆ ನೋಡುತ್ತ ಏನನ್ನೊ ಎಸೆದದ್ದು ಕಂಡಿತು. ಮೊದಲೆರಡು ಸಲ ಹಿಂಗೆ ಮೊಕ್ಕತ್ತಲ ಬೆನ್ನಿಗೆ ಯಾರೂ ಇಲ್ಲದಾಗ ಎಸೆದದ್ದು ಅರ್ಚಕರು ಕಂಡಿದ್ದು ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಇದು ಮೂರನೆ ಸಲ. ನೋಡಿದ್ದು ಇಷ್ಟು. ಈತರ ಎಷ್ಟು ಸಲ ಎಸೆದಿದ್ದಾನೊ ಏನೊ ಯಾರಿಗ್ಗೊತ್ತು? ಗಂಗಣ್ಣ ಎಸೆದು ಸುತ್ತಮುತ್ತ ನೋಡಿ ಸೈಕಲ್ ಸ್ಟ್ಯಾಂಡ್ ಒದ್ದು ಬ್ಯಾಗು ಸಿಕ್ಕಿಸಿಕೊಂಡು ಸೈಕಲ್ ಏರಿ ಭರ‌್ರಂತ ಹೋದ. ಅರ್ಚಕರು ಅವನು ಅತ್ತ ಹೋದದ್ದೇ ಇವರೂ ಸೈಕಲ್ ಏರಿ ಭರ‌್ರಂತ ಹೋಗಿ ಅವನು ಎಸೆದ ಜಾಗದಲ್ಲಿ ನಿಂತು ಕೆಳ ಬಗ್ಗಿದರು. ಟೆಲಿಫೋನ್ ಬಿಲ್ಗಳು, ಇನ್ಲ್ಯಾಂಡ್ ಲೆಟರು, ಪೋಸ್ಟ್ ಕಾರ್ಡು, ಯಾವುದ್ಯಾವುದೊ ತೆರೆದ ಅಂಚೆ ಅಂತ ಸೀಲ್ ಇದ್ದ ವ್ಹೀಕ್ಲಿ ಪೇಪರು, ಮಾಸ ಪತ್ರಿಕೆ – ಇನ್ನು ಏನೇನೊ ನೀರಿನಲ್ಲಿ ತೇಲ್ತಾ ಹೋಗ್ತಿದ್ದವು. ಈ ಅರ್ಚಕರು ಸೇತುವೆಯ ಬಲಪಾಸಿಗೆ ಬಂದು ಬಗ್ಗಿದರು. ಆಕಡೆಯಿಂದ ಈಡೆ ಕೆಳಮುಖವಾಗಿ ತೇಲ್ತ ಬಿಸಿಲಿನ ಝಳಕ್ಕೆ ನೀಟಾಗಿ ಕಾಣ್ತಿದ್ದವು. ಅಲ್ಲಿ ಒಂದಷ್ಟು ಐಕಳು, ಎಮ್ಮೆಗಳು, ಹಸುಗಳು ರವಗುಟ್ಟುವ ಬಿಸಿಲ ಝಳಕ್ಕೆ ಮೈ ತಂಪಾಗಿಸಿಕೊಳಲು ನೀರು ಮುಳುಗುತ್ತ ಈಜುತ್ತ ಕೇಕೆ ಹಾಕುತ್ತ ತೇಲುತ್ತ ಹೋಗುತ್ತಿದ್ದ ಪೋಸ್ಟ್ಗಳನ್ನು ಎತ್ತಿ ಎತ್ತಿ ನೋಡುತ್ತ “ಗಂಗುನ್ ಪೋಸ್ಟ್ ತೇಲ್ತ ಹೋಯ್ತ ಅವೆ ನೋಡ್ರಪ್ಪೋ” ಅಂತ ತೂದಿ ಎಸೆದು ಆಟ ಆಡುತ್ತಿದ್ದವು. ಮೇಲಿಂದ ಕೆಳಕ್ಕೆ ನೋಡುತ್ತಿದ್ದ ಅರ್ಚಕರು ತೊಟ್ಟಿಕ್ಕುತ್ತಿದ್ದ ಬೆವರು ಒರೆಸಿಕೊಳ್ಳುತ್ತ ಪಂಚೆ ಎತ್ತಿ ಸರಿ ಮಾಡಿಕೊಂಡು ಸೈಕಲ್ ಏರಿ ಭರ‌್ರಂತ ಬಂದದ್ದ ಬಿತ್ತರಿಸಿದಾಗ ಗಂಗಣ್ಣನ ಮುಖ ಇನ್ನಷ್ಟು ಬೆವರಿ “ಅಯ್ಯೋ ಸ್ವಾಮ್ಗಳೇ ಅವೆಲ್ಲ ವೇಸ್ಟು.. ಲೆಟರಲ್ಲ ನಮ್ ಹೆಡ್ ಪೋಸ್ಟಾಫೀಸಲ್ಲಿ ಮೂಲೇಲಿ ಬಿದ್ದಿರ‌್ತವೆ ವೇಸ್ಟಾಗಿ. ನಾನು ಈಕಡೆ ಬರ‌್ತಿನಲ್ಲ ಅಂತ ನನ್ ಬ್ಯಾಗಿಗೆ ತುಂಬಿ ಬಿಸಾಕ್ಬುಡಪ್ಪ ಅಂತಾರೆ ಏನ್ಮಾಡದು ಸ್ವಾಮ್ಗಳೇ… ಸಾಹೇಬ್ರು ಹೇಳುದ್ರ ಬೇಡ ಅನ್ನೊಕಾಗುತ್ತಾ..” ಅಂತ ಏನೊ ಸಮಜಾಯಿಸಿ ಹೇಳಿ ಜಾಗ ಖಾಲಿ ಮಾಡಿದ್ದನ್ನು ಅರ್ಚಕರು ನಗ್ತಾನೆ ಹೇಳ್ತಾ “ಅವ್ನೇನಾರ ಇವ್ರ ಅಪಾಯಿಂಟ್ಮೆಂಟ್ ರಿಜಿಸ್ಟರ್ಡ್ ಪೋಸ್ಟನ್ನ ಯಾರಿಗೊ ಕೊಟ್ಟಿದ್ರ ಸರಿ ಹೇಗೊ ಕಲೆಕ್ಟ್ ಮಾಡ್ಕೊಬೋದು. ಅಕಸ್ಮಾತ್ ನಾನ್ ನೋಡ್ದಾಗೆ ಡಿಸ್ಪ್ಯಾಚ್ ಕಾಪಿಗೆ ಇವ್ನೇ ಸೈನ್ ಹಾಕಿ ಅದನ್ನ ಆ ಆತರ ನೀರಿಗೆ ಬಿಸಾಕಿದ್ರೆ..” ಅಂತ ಅಂದಾಗ ನನಗೂ ಅಳುಕಾದಂಗೆ ಅಪ್ಪನಿಗೂ ಅಣ್ಣನಿಗೂ ಅಳುಕಾದುದ ಕಂಡೆ.

ಆಗ ಗಂಗಣ್ಣ ಪೋಸ್ಟ್ ಹಂಚಿ ನಿಧಾನಕೆ ಬಂದು ಸೈಕಲ್ ಸೈಡಿಗೆ ಒರಗಿಸಿ ಜಗುಲಿ ಮೇಲೆ ಹತ್ತಿ ಒಳಗೆ ಕುಂತಿದ್ದ ಚೌಡಯ್ಯ ಮತ್ತು ಅರ್ಚಕರನ್ನು ನೋಡಿ “ನಮಸ್ಕಾರ ಸಾರ್ ಇಬ್ರುಗೂ. ಏನು ಇಷ್ಟು ದೂರ ಬಂದ್ಬಿಟ್ಟಿದ್ದೀರಾ ಸ್ವಾಮ್ಗಳೇ..” ಅಂದ. ಅಪ್ಪನು ಅಣ್ಣನು ಹತ್ತಿರ ಹೋದರು. ಪೋಸ್ಟ್ ಮೇಷ್ಟ್ರು ಷಣ್ಮುಖಸ್ವಾಮಿ ಮುಖ ಗಂಟಿಕ್ಕಿಕೊಂಡು “ಏಯ್ ಬಾಯಿಲ್ಲಿ ನಿನ್ ನಮಸ್ಕಾರ ಅಲ್ಲಿರ‌್ಲಿ ಮೊನ್ನೆ ಎರಡು ರಿಜಿಸ್ಟರ್ ಲೆಟರ್ ಬಂದಿದ್ವಲ್ಲ ಅದರಲ್ಲಿ ಒಂದು ಡಿಸ್ಪ್ಯಾಚ್ ಆಗಿದೆ ಅಂತ ಹೇಳ್ದೆ. ಅದ್ಕೆ ಸಹಿ ಕೂಡ ಆಗಿದೆ. ಅದನ್ನ ಯಾರಿಗ್ ಕೊಟ್ಟೆ” ಅಂದರು. ಗಂಗ “ಅವ್ರಿಗೆ ಕೊಟ್ಟಿದ್ದಿನಲ್ಲ.. ಸೈನ್ ಕೂಡ ಹಾಕಿದ್ದಾರಲ್ಲ ನೀವ್ ಷರಾ ಬರೆದಿಲ್ವ” ಅಂದ. “ನಾನ್ ಷರಾ ಬರ‌್ದಿದ್ದೀನಪ್ಪ.. ನೋಡಿಲ್ಲಿ ಅದು ಇವ್ರ್ ರಿಜಿಸ್ಟ್ರು ನೀನ್ಯಾರಿಗೆ ಕೊಟ್ಟೆ” ಅಂತ ಅಷ್ಟೂ ಹೊತ್ತಿಂದ ಆದ ರಗಳೆ ಬಗ್ಗೆ ಹೇಳಿದರು. ಗಂಗಣ್ಣ ದಂಗಾದ. ಅವನು ಆ ಲೆಟರನ್ನು ಯಾರಿಗೆ ಕೊಟ್ಟ ಅನ್ನೊದನ್ನೆ ಮರೆತು ಜ್ಞಾಪಿಸಿಕೊಳ್ಳುತ್ತಲೊ ಇನ್ನೇನೊ ಯೋಚನೆ ಮಾಡೋ ತರ ಗೊಣಗುಟ್ಟುತ್ತಿದ್ದ. ಷಣ್ಮುಖಸ್ವಾಮಿ ಒಂದೆರಡು ಸಲ ಗದರಿದರು. ಅಲ್ಲಪ್ಪ ಇವರ ಹೆಸರಿದೆ ಊರೆಸ್ರಿದೆ ನೀನು ಹುಡುಕೊ ಹಾಗೇ ಇಲ್ಲ ಬೈರಾಪುರುದ್ದೆ. ಪಕ್ದಲ್ಲೆ.. ಇಂಥ ಗೊತ್ತಿರ ಅಡ್ರೆಸ್ನೆ ಹುಡುಕಿ ಕೊಡಕಾಗ್ದೆ ಇದ್ಮೇಲ ನಿನ್ನ ಇಲ್ಲಿ ಯಾಕೆ ಇಟ್ಕೋಬೇಕು. ಈಗ ಇವ್ರು ನಿನ್ ಮೇಲ ಕಂಪ್ಲೆಂಟ್ ಕೊಡ್ತಿನಿ ಅಂತವ್ರ. ಅವ್ರೇನಾರ ಕಂಪ್ಲೆಂಟ್ ಕೊಟ್ರ ನಿನ್ ಕೆಲ್ಸ ವಜಾ ಆಗಿ ಶಿಕ್ಷೆ ಅನುಭವಿಸಬೇಕಾಗುತ್ತೆ. ಜೊತ್ಗ ನಂಗೂ ಅನ್ಫಿಟ್ ಪೋಸ್ಟ್ ಮೇಷ್ಟ್ರು ಅಂತ ರಿಪೋರ್ಟ್ ಹಾಕುದ್ರೆ ಏನ್ ಮಾಡೋದು? ಬೇಗ ಜ್ಞಾಪಿಸ್ಕೊ ಮೊನ್ನೆ ಡೇಟು…ಯಾರಿಗೆ ಕೊಟ್ಟಿದ್ದಿಯ ಅಂತ” ಅಂದರು.

ಈ ಗಂಗಣ್ಣ ಇಲ್ಲಿಗೆ ಬರುವ ಮುನ್ನ ನರಸೀಪುರದ ಎನ್ಸಿ ಸುಬ್ಬಣ್ಣನ ಅಂಗಡಿ ಹಿಂಭಾಗವಿದ್ದ ಹೆಡ್ ಪೋಸ್ಟಾಫಿಸಲ್ಲಿ ಇದ್ದಾಗಲೇ ತಮ್ಮದೊಂದು ಸೊಸೈಟಿ ಲೆಟರನ್ನು ಮಿಸ್ ಮಾಡಿದ ಬಗ್ಗೆ ಚೌಡಯ್ಯ ಹೇಳ್ತಾ “ಏರಿಯಾ ದೊಡ್ಡದಾಗಿರೊದ್ರಿಂದ ಅಡ್ರೆಸ್ ಹುಡುಕೋದು ಕಷ್ಟ ಬುಡು ಅಂತ ನಾವೂ ಕಂಪ್ಲೆಂಟು ಗಿಂಪ್ಲೆಂಟ್ ಬಗ್ಗೆ ಮಾತಾಡ್ದೆ ಮಾತ್ಗೆ ಇರಲಿ ಅಂತ ಪೋಸ್ಟ್ ಮೇಷ್ಟ್ರು ಗಮನಕ್ಕೆ ತಂದಿದ್ದೆ. ಆಮೇಲೆ ಇವ್ನ ಆ ತಪ್ಪನ್ನ ಬಿಟ್ಟಾಕಿ ಸುಮ್ನಾದಿ. ಅದೇ ಹೊತ್ತಿಗೆ ಷಣ್ಮುಖಸ್ವಾಮಿ ಪಂಚಾಯ್ತಿ, ಜನಸಂಖ್ಯೆ ಅಂತ ಏನೇನೊ ಕಾನೂನು ನೋಡಿ ಸಬ್ ಪೋಸ್ಟಾಫೀಸ್ ಬೇಕು ಅಂತ ಅರ್ಜಿ ಹಾಕಿದಾಗ ಆ ಶಿಫಾರಸ್ಸನ್ನ ಪಾಸ್ ಮಾಡೋಕೆ ನಾನೂ ಹೇಳಿದ್ದಿ. ಇಲ್ಲಿಗೆ ಬಂದ್ರೂ ಈತರ ಆದ್ರ ಜನ ಒಪ್ಪಿರ” ಅಂತ ಗಂಗಣ್ಣನಿಗೆ ಬುದ್ದಿ ಹೇಳ್ತಾ “ಸಾರ್ ಸಣ್ಮುಕಸ್ವಾಮೋರೆ ಹೋಗಿ, ನಮ್ ಕಾಲಕ್ ಮಾದ ಬಾಳ ಕಸ್ಟ ಪಟ್ಟನ. ಹೆಂಗೊ ಮಗುನ್ನ ಓದ್ಸಿ ಕೆಲ್ಸ ಅಂತ ಒಂದ್ ಬಂದುದ… ಈಗ್ಲೆ ಅವ್ನ ಜೊತನೇ ಹೋಗಿ ಪಾಪ ಅವ್ರುಗೆ ಅಪಾಯಿಂಟ್ಮೆಂಟ್ ಅಂತರಲ್ಲ ಅದ್ನ ಪತ್ತೆ ಮಾಡಿ” ಅಂದರು. ಅಷ್ಟೊತ್ತಿಗೆ ಗಂಗಣ್ಣನಿಗೆ ಅರಿವಾಯ್ತೊ ಏನೊ “ಸಾರ್ ಬನ್ನಿ ಗೋಪಾಲಪುರುಕ್ಕೆ” ಅಂದ. ಪೋಸ್ಟ್ ಮೇಷ್ಟ್ರು ಷಣ್ಮುಖಸ್ವಾಮಿ “ಅಪ್ಪಾ ಸ್ವಾಮಿ ಬೈರಾಪುರ ಅನ್ನದು ಗೋಪಾಲಪುರ ಅಂತ ಕಾಣ್ತಾ.. ಅಯ್ಯೋ ಪಾಪ್ಮುಂಡೆ ಗಂಡೆ.. ಸದ್ಯ ಜ್ಞಾಪಿಸಿಕೊಂಡೆಲ್ಲ ನಡಿ ಈಗ್ಲೆ. ಮತ್ತೇನಾರ ಮರ‌್ತೊದ್ರ ಕಷ್ಟ” ಅಂತ ದಡಗುಟ್ಟುತ್ತ ಬಾಗಿಲಾಕಿದರು.

ಅಣ್ಣ ಅಪ್ಪ ಅವರಿಂದೇ ಹೋದರು. ನಾನು ಸ್ಕೂಲಿಗೆ ಹೋಗಿ ವೈಜಯಂತಿ ಮೇಡಂ ಗೆ ಎಲ್ಲನು ಹೇಳ್ದಾಗ “ಓಹೊ ನಿಮ್ಮಣ್ಣನಿಗೆ ಗೌರ್ನಮೆಂಟ್ ಕೆಲ್ಸ ಸಿಕ್ತಾ.. ಶ್ರೀಮಂತ ಆದ್ರಲ್ಲೊ ಇನ್ನೇನು… ನಾಳೆ ಬರುವಾಗ ಸ್ವೀಟ್ ತಗೊಬಾ. ಗೊತ್ತಾಯ್ತ..” ಅಂದರು. ಆಗ ಇಡೀ ಕ್ಲಾಸೇ ನನ್ನ ಕಡೆ ನೋಡ್ತಿತ್ತು. ಆಗ ನಂಗೊಂತರಾ ಒಳಗೊಳಗೆ ಖುಷಿಯಾಗಿ ಬೀಗತೊಡಗಿದೆ.

-ಎಂ.ಜವರಾಜ್

(ಮುಂದುವರಿಯುವುದು)


[ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. “ಕತ್ತಲ ಹೂವು” (ನೀಳ್ಗತೆ) ಪ್ರಕಟಣೆಗೆ ಸಿದ್ದಗೊಳ್ಖುತ್ತಿದೆ. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಪ್ರಸ್ತುತ “ಪೋಸ್ಟ್ ಮ್ಯಾನ್ ಗಂಗಣ್ಣ” ಎಂಬ ನೀಳ್ಗತೆ ಮುಗ್ಧ ಪೋಸ್ಟ್ ಮ್ಯಾನ್ ಒಬ್ಬನ ಜೀವನ ಚಿತ್ರವನ್ನು ಹೇಳುವ ಒಂದು ಕುತೂಹಲಕಾರಿ ಕಥೆಯಾಗಿದೆ]


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x