ನನ್ನ ಗೊಂದಲ ಏನೆಂದರೆ: ಶೈಲಜ ಮಂಚೇನಹಳ್ಳಿ

AC ಅಂದರೆ Assistant Commissioner ಎನ್ನುವ ಪದಕ್ಕೆ ಸರಿಯಾದ ಕನ್ನಡ ಪದದ ಬಗ್ಗೆ .

ಈ ಬಗ್ಗೆ ನನಗೆ ಗೊಂದಲ ಶುರುವಾಗಿದ್ದು ನಮ್ಮ ಜಮೀನುಗಳಲ್ಲಿ ಒಂದು ರಸ್ತೆ ಅನಧಿಕೃತವಾಗಿ ಹಾದು ಹೋಗಿ ಪಿ.ಎಂ.ಜಿ.ಎಸ್.ವೈ. ವತಿಯಿಂದ ಅಗಲೀಕರಣ ಕೂಡ ಆಗುತ್ತಿರುವುದರಿಂದ, ಭೂಸ್ವಾಧೀನವಾಗದೇ ರಸ್ತೆ ಇಲ್ಲದ ಖಾಸಗಿ ಜಮೀನುಗಳಲ್ಲಿ ರಸ್ತೆ ಮಾಡಲು ನಮ್ಮ ಒಪ್ಪಿಗೆ ಇಲ್ಲ ಎಂದು ತಿಳಿಸಿದಾಗ ಪಿ.ಎಂ.ಜಿ.ಎಸ್.ವೈ. ಯ ಅಧಿಕಾರಿಗಳು ಕೆಲ ರಾಜಕೀಯ ಪುಡಾರಿಗಳನ್ನು ಮತ್ತು ಕೆಲ ಕೆಟ್ಟ ಹಳ್ಳಿ ಜನರನ್ನು ಸೇರಿಸಿಕೊಂಡು ನಮಗೆ ತೊಂದರೆ ಕೊಟ್ಟಿರುವ ಬಗ್ಗೆ ಕ್ರಮ ಕೈಗೊಳ್ಳಲು ಚಿಕ್ಕಬಳ್ಳಾಪುರದ AC ರವರಿಗೆ ಒಂದು ಮನವಿ ಪತ್ರವನ್ನು ಅಂಚೆಯ ರಿಜಿಸ್ಟರ‍್ಡ್ ಪೋಸ್ಟ್ ಮುಖಾಂತರ ರವಾನಿಸಿದ್ದೆ. AC ಆಫೀಸಿಗೆ ಅಂಚೆಯ ರವಾನೆಯಾಗಿರುವುದು ರವಾನೆ ಸಂಖ್ಯೆಯ ಸ್ಥಿತಿಯನ್ನು ಪರಿಶೀಲಿಸಿದಾಗ ತಿಳಿಯಿತು. ಆದರೆ ಸುಮಾರು ದಿನಗಳಾದರೂ ಅವರಿಂದ ಯಾವುದೇ ಉತ್ತರ ಬಾರದೇ ಇದ್ದಾಗ ನಾನೇ ಖುದ್ಧಾಗಿ AC ಆಫೀಸಿಗೆ ಹೋಗಿ ವಿಚಾರಿಸಿದಾಗ ಟಪಾಲು ಸ್ವೀಕರಿಸುವ ಸಿಬ್ಬಂದಿ ಮಹಿಳೆ ನನ್ನ ಮನವಿ ಪತ್ರದ ನಕಲು ಪ್ರತಿಯನ್ನು ನೋಡಿ ನಾನು ಈ ಪತ್ರವನ್ನು ನೋಡಿದ ನೆನಪಿದೆ ACರವರಿಂದ ಸಹಿ ಸಹ ಮಾಡಿಸಿದ್ದೇ ಆದರೆ ಈಗ ಈ ಪತ್ರ ಸಿಗುತ್ತಿಲ್ಲವೆಂದಳು. ಟಪಾಲು ರಿಜಿಸ್ಟರ್ ನಲ್ಲಿ ಹುಡುಕಾಡಿದಾಗ ನನ್ನ ಪತ್ರ ಸ್ವೀಕೃತಗೊಂಡದ್ದು ನಮೂದಾಗಿತ್ತು. ಆದರೆ ಆ ಪತ್ರ ಕಛೇರಿಯಲ್ಲಿಲ್ಲದೇ ಕಾಣೆಯಾಗಿತ್ತು. ತುಂಬಾ ಹೊತ್ತು ಹುಡುಕಾಡಿದ ನಂತರ ನಿಮ್ಮ ಹತ್ತಿರವಿರುವ ನಕಲು ಪ್ರತಿಯನ್ನು ಕೊಡಿ ಝೆರಾಕ್ಸ್ ಮಾಡಿಕೊಂಡು ಬರುತ್ತೇನೆ ಮತ್ತೊಮ್ಮೆ ಟಪಾಲಿನಲ್ಲಿ ಈ ಪತ್ರವನ್ನು ನೀಡಿ ಎಂದು ಸಹಾಯ ಮಾಡಿದಳು. ಸರ್ಕಾರಿ ಕಛೇರಿಯಲ್ಲಿ ಅದು AC ಆಫೀಸಿನಲ್ಲಿ ಈ ಸಿಬ್ಬಂದಿ ಸಹಾಯ ಮಾಡುತ್ತಿರುವ ಬಗ್ಗೆ ಆಶ್ಚರ್ಯವೆನಿಸಿತು, ಅದನ್ನು ಆಕೆಯೊಂದಿಗೆ ಕೇಳಿಯೂ ಬಿಟ್ಟೆ, ಆಕೆ ಸುಮ್ಮನೆ ನಗುಬೀರಿದಳು.

ಆಕೆ ಝೆರಾಕ್ಸ್ ಮಾಡಿ ತಂದ ಪತ್ರವನ್ನು ನಾನು ಸಹಿ ಮಾಡಲು ನೀಡಿದಳು. ಸಹಿ ಮಾಡಿದ ಪತ್ರವನ್ನು ತೆಗೆದುಕೊಂಡು ನೋಡುತ್ತಾ ನೀವು Assistant Commissioner ಗೆ ಕನ್ನಡದಲ್ಲಿ ’ಸಹಾಯಕ ಆಯುಕ್ತರು’ ಎಂದು ಬರೆದಿದ್ದೀರ ಅದು ಸರಿಯಿಲ್ಲ ’ಉಪವಿಭಾಗಾಧಿಕಾರಿಗಳು’ ಎಂದಿರಬೇಕು ಎಂದು ಹೇಳಿದಳು. ಅದ್ದರಿಂದ ಸಹಾಯಕ ಆಯುಕ್ತರು ಎನ್ನುವ ಪದವನ್ನು ಹೊಡೆದು ಹಾಕಿ ಪೆನ್ನಿನಲ್ಲಿ ಉಪವಿಭಾಗಾಧಿಕಾರಿ ಎಂದು ಬರೆಯಿರಿ ಎಂದು ಬರೆಸಿಕೊಂಡಳು. ಆಗ ನಾನು ಸಹಾಯಕ ಆಯುಕ್ತರು ಎಂದು ಬರೆದಿದ್ದ ಪತ್ರವನ್ನು ಯಾರೋ ತೆಗೆದುಕೊಂಡಿದ್ದಾರಲ್ಲ ಎಂದೆ, ಬಹುಶಃ ನಾನೇ ತೆಗೆದುಕೊಂಡಿರಬೇಕು, ಅದಕ್ಕೆ ಅದು ಸಿಗದೇ ಇರಬಹುದು ಅಂದಳು. ಆದರೆ ಮತ್ತೊಮ್ಮೆ ಟಪಾಲಿನಲ್ಲಿ ನೀಡಿದ ಮೇಲೂ ಆ ಕಡೆಯಿಂದ ನನಗೆ ಯಾವುದೇ ಪ್ರತ್ಯುತ್ತರ ಬರಲಿಲ್ಲ ಅದು ಬೇರೆ ವಿಷಯ, ಆದರೆ ನನ್ನ ತಲೆ ತಿನ್ನುತ್ತಿರುವುದು AC ಎನ್ನುವ ಆಂಗ್ಲ ಪದದ ಸರಿಯಾದ ಕನ್ನಡ ಪದ.

ಮುಂದೆ ACರವರಿಗೆ ಬೇರೆ ಬೇರೆ ವಿಷಯಗಳಿಗಾಗಿ ಅನೇಕ ಆರ್.ಟಿ.ಐ. ಹಾಗು ಆರ್.ಟಿ.ಐ.ಯ ಪ್ರಥಮ ಮೇಲ್ಮನವಿ ಪತ್ರಗಳನ್ನು ಅಂಚೆಯ ರಿಜಿಸ್ಟರ‍್ಡ್ ಪೋಸ್ಟ್ ಮುಖಾಂತರ ರವಾನಿಸಿದ್ದೆ, ಮತ್ತೆ ಇವುಗಳಿಗೂ ಆ ಕಡೆಯಿಂದ ಯಾವುದೇ ಪ್ರತ್ಯುತ್ತರಗಳು/ಮಾಹಿತಿಗಳು ಬರಲಿಲ್ಲ ಹಾಗು ಇವುಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಅದು ಬೇರೆ ವಿಷಯ.

ಕನ್ನಡದಲ್ಲೇ ಉಪವಿಭಾಗಾಧಿಕಾರಿಯವರಿಗೆ ಆರ್.ಟಿ.ಐ. ಮೇಲ್ಮನವಿಗಳನ್ನು ಬರೆಯುತ್ತಿದ್ದೆ. ಹಾಗೆಯೇ ಅಂಚೆಯ ಕವರ್ ಮೇಲೆ ವಿಳಾಸ ಬರೆಯುವಾಗ ಸಹ ಕನ್ನಡದಲ್ಲಿ ಉಪವಿಭಾಗಾಧಿಕಾರಿಯವರಿಗೆ ಎಂದು ಬರೆಯುತ್ತಿದ್ದೆ., ಹಾಗು ಆವರಣ ಚಿಹ್ನೆಯಲ್ಲಿ (AC) ಎಂದು ಬರೆಯುತ್ತಿದ್ದೆ, ಹಾಗೊಂದು ವೇಳೆ ಮರೆತಾಗ ಅಂಚೆ ಕಛೇರಿಯಾದ್ದರಿಂದ ಕನ್ನಡ ಬಾರದವರಿಗೆ ಇಂಗ್ಲೀಷ್‍ನಲ್ಲಿ AC ಎಂದು ರಿಜಿಸ್ಟರ್ ಮಾಡಿ ಎಂದು ಹೇಳುತ್ತಿದೆ. ಹಾಗೊಂದು ದಿನ ಒಂದು ಆರ್.ಟಿ.ಐ.ಯ ಪ್ರಥಮ ಮೇಲ್ಮನವಿ ಪತ್ರವನ್ನು ರಿಜಿಸ್ಟರ‍್ಡ್ ಪೋಸ್ಟ್ ಮಾಡುತ್ತಿರಬೇಕಾದರೆ ನಾನು ಕನ್ನಡದಲ್ಲಿ ಉಪವಿಭಾಗಾಧಿಕಾರಿಯವರಿಗೆ ಎಂದು ಬರೆದಿದ್ದ ಪತ್ರವನ್ನು ಅತಿ ಶೀಘ್ರವಾಗಿ ರಿಜಿಸ್ಟರ್ ಮಾಡಿ ಸ್ವೀಕೃತಿ ಪತ್ರವನ್ನು ನನಗೆ ನೀಡಿದಳು. ಕನ್ನಡ ಬಲ್ಲ ಅಂಚೆ ಇಲಾಖೆಯ ಸಿಬ್ಬಂದಿ ಸ್ವೀಕೃತಿ ಪತ್ರದಲ್ಲಿ Sub Divisional Officer ಎಂದು ಇಂಗ್ಲೀಷಿನಲ್ಲಿ ಬರೆದು ರಿಜಿಸ್ಟರ್ ಮಾಡಿದ್ದರು. ಸ್ವೀಕೃತಿ ಪತ್ರವನ್ನು ತೆಗೆದುಕೊಂಡ ಮೇಲೆ ಇದು ನನ್ನ ಅರಿವಿಗೆ ಬಂದಿದ್ದು. ಆ ಬಗ್ಗೆ ವಿಚಾರಿಸಲು ಹೋದೆ, ಆದರೆ ಬೇಡವೆಂದು ನಿರ್ಧರಿಸಿ ಹೊರಗೆ ಬಂದೆ ಏಕೆಂದರೆ ಆಕೆ ಕನ್ನಡದ ಉಪವಿಭಾಗಾಧಿಕಾರಿ ಪದವನ್ನು ಸರಿಯಾಗೆ ಇಂಗ್ಲಿಷ್‍ಗೆ ತರ್ಜುಮೆ ಮಾಡಿ ಬರೆದಿದ್ದಳು, ವಾದ ಮಾಡುವುದು ಸರಿಯಿಲ್ಲ ತಿಳಿದು ಸುಮ್ಮನೆ ಹೊರಬರುವ ನಿರ್ಧಾರ ತೆಗೆದುಕೊಂಡೆ. ಆದರೆ ಆವಾಗಲಿಂದ ನನ್ನ ತಲೆಯಲ್ಲಿ AC ಪದದ ಸರಿಯಾದ ಕನ್ನಡ ಪದ ಏನು? ಎನ್ನುವ ಪ್ರಶ್ನೆ ತಲೆ ತಿನ್ನುತ್ತಿದೆ. ಏಕೆಂದರೆ ಇಲ್ಲಿಯವರೆಗೂ ಉಪವಿಭಾಗಾಧಿಕಾರಿ ಕನ್ನಡ ಪದವನ್ನು ಈ ರೀತಿಯಾಗಿ ಇಂಗ್ಲೀಷಿಗೆ ತರ್ಜುಮೆ ಮಾಡಬಹುದು ಎಂದು ನಾ ಯೋಚಿಸಿಯೂ ಇರಲಿಲ್ಲ. ಆದರೆ ಅವಾಗಲಿಂದ ಈ ಪೂರಕ ಪದಗಳು ನನ್ನ ತಲೆ ತಿನ್ನುತ್ತಿವೆ.

Assistant Commissioner ಮತ್ತು Sub Divisional Officer ಎರಡೂ ಹುದ್ದೆಗಳು ಒಂದೇ ಇರಬಹುದ? ಅದಕ್ಕೂ ಉತ್ತರ ಗೊತ್ತಿಲ್ಲ.

ಇಂಗ್ಲೀಷ್ ನ Assistant Commissionerನ ಪೂರಕ ಪದ ಕನ್ನಡದಲ್ಲಿ “ಉಪವಿಭಾಗಾಧಿಕಾರಿ = ಉಪ+ವಿಭಾಗ+ಅಧಿಕಾರಿ”.
ಆದರೆ ಕನ್ನಡದ ಉಪವಿಭಾಗಾಧಿಕಾರಿ ಪದ ಇಂಗ್ಲೀಷ್ ನಲ್ಲಿ “Sub Divisional Officer = Sub+Divisional+Officer”.

ಸಾಮಾನ್ಯವಾಗಿ ಇಂಗ್ಲೀಷ್‍ನ Assistant Commissioner ಅನ್ನು ಕನ್ನಡಕ್ಕೆ ನೇರವಾಗಿ ಭಾಷಾಂತರಿಸಿದಾಗ ಸಹಾಯಕ ಆಯುಕ್ತರು ಎಂದೇ ತಿಳಿಯಬಹುದಾದರೂ ಅವರ ಹುದ್ದೆಯ ಪದನಾಮ ಕನ್ನಡದಲ್ಲಿ ಉಪವಿಭಾಗಾಧಿಕಾರಿ ಎಂದೇ ಪರಿಚಿತವಾಗಿ ಅನುಮೋದನೆಯಾಗಿದೆ.

ಆದರೆ ಇಂಗ್ಲೀಷ್ ನ Sub Divisional Officerಗೆ ಪೂರಕವಾದ ಪದನಾಮ ನನಗೆ ಗೊತ್ತಿಲ್ಲ.

ಈ ಗೊಂದಲವನ್ನು ತಿಳಿದವರು ಪರಿಹರಿಸಿಕೊಡಿ ಎಂದು ಮನವಿ.

-ಶೈಲಜ ಮಂಚೇನಹಳ್ಳಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x