ಕವಿತೆ ಮತ್ತು ವಿಮರ್ಶೆ: ಅಜಿತ್ ಹರೀಶಿ, ಎನ್. ಎಸ್. ಶ್ರೀಧರ ಮೂರ್ತಿ

ಒಂದು ಸತ್ಯ ಕವಿತೆ

ಕವಿಯೊಬ್ಬ ಬಯಸಿದ್ದ ಸತ್ತು ಹೋಗಲು
ಅದೂ ಹಾಡುಹಗಲು
ಜೇಡದ ಉದರದ ಎಳೆ ಕಾಣಲು
ದಾರಿಯೊಂದು ತೋರಲು

ಹೇಳಿ ಹೋಗಬೇಕು ಕಾರಣ
ನನ್ನ ಸಾವಿಗೆ ನಾನೇ ಕಾರಣ
ಕೆಟ್ಟ ಸಂಯೋಗದಿಂದ ನಾನೀಗ ಬಸಿರು
ಲಜ್ಜೆಯಾಗಿದೆ ಬೇಡ ಉಸಿರು

ಕುಣಿಕೆ ಬಿಗಿದು ಕುರ್ಚಿ ಒದ್ದು
ವಿದಾಯ ಹೇಳಬಯಸಿದ್ದು
ಪಾಪದ ಕೊಡ ಬಲು ಭಾರ
ಅಂಗುಷ್ಟ ನೆಲ ತಾಗಿ ಹಗ್ಗ ಹಾರ

ಜಗತ್ತು ಜಾಗೃತವಾಯಿತು ಜರೆಯಿತು
ಎಲ್ಲ ನಾಟಕ ಕವಿ ಕಟುಕ
ದಯೆ ತೋರದಿರಿ ಹೂತುಹಾಕಿರಿ
ಬೆಳೆಯದಿರಲಿ ರಕ್ಕಸ ಸಂತತಿ

ಕರುಣೆ ಇದ್ದವರು ಲೇಖನಿ ಹಿಡಿದರು
ಕವಿ ಸಾಯಬಹುದು ಕವಿತೆ ಅಮರ
ಬದುಕು ಬರಹ ಒಂದೆಯೋ ಬೇರೆಯೋ
ಕೊಲ್ಲಬೇಡಿರೆಂದರು ಪರಿಸ್ಥಿತಿಯ ಶಿಶುವ

ಕವಿ ಬಯಸಿದಂತೆ ಆಗದು ಅಂತ್ಯ
ಕಳೆದುಕೊಳ್ಳಲಿ, ಪಡೆಯಲು ಸಾತತ್ಯ
ಪುನರ್ಜನ್ಮಕ್ಕೆ ಆಗಲಿ ಪಿಂಡ ಬಲಿ
ತಪ್ಪು ಮಾಡಿದವರಿಗೆ ಸಂದೇಶ ಹೋಗಲಿ

ಕವಿತೆ ಹೇಳುತ್ತದೆಯೇ
ಸುಳ್ಳು ಕೆಟ್ಟದ್ದು ಅತಿಶಯ ಅಶ್ಲೀಲವ?
ಇಲ್ಲ ಇಲ್ಲ ನೀಡುತ್ತದೆ
ಶಾಸ್ತ್ರಕ್ಕೆ ಮೀರಿದ ದರ್ಶನವ

-‌ಅಜಿತ್ ಹರೀಶಿ

ಅಜಿತ್ ಹರೀಶಿಯವರ ‘ಒಂದು ಸತ್ಯ ಕವಿತೆ’ಯಲ್ಲಿನ ಕೊನೆಯ ಸಾಲು ‘ಶಾಸ್ತ್ರಕ್ಕೆ ಮೀರಿದ ದರ್ಶನ’ ನನ್ನ ಗಮನವನ್ನು ಸೆಳೆಯಿತು. ಶಾಸ್ತ್ರ ಮತ್ತು ದರ್ಶನದ ಕುರಿತು ಮೀಮಾಂಸಕಾರರ ಕಾಲದಿಂದಲೂ ಚರ್ಚೆ ನಡೆದಿದೆ. ಕುವೆಂಪು ತಮ್ಮ ಚಿಂತನೆಗಳನ್ನು ದರ್ಶನ ಮೀಮಾಂಸೆ ಎಂದೇ ಕರೆದಿದ್ದಾರೆ. ತಮ್ಮ ಕಾವ್ಯವನ್ನು ರಾಮಾಯಣ ದರ್ಶನವೆಂದಿದ್ದಾರೆ.

ಕವಿತೆಯ ಆರಂಭದಲ್ಲಿ ಕವಿ ಸತ್ತು ಹೋಗಲು ಬಯಸುವ ಚಿತ್ರಣ ಬರುತ್ತದೆ. ಅದೂ ಹಾಡ ಹಗಲು, ಸಾವಿನ ಕಾರಣ ಜೇಡದ ಉದರದ ಎಳೆ ಕಾಣಲು.. ದಾರಿಯ ತೋರಲು ಮೀಮಾಂಸಾ ಶಾಸ್ತ್ರದಲ್ಲಿ ಶಬ್ದ ಪ್ರಮಾಣಕ್ಕೆ ಮಹತ್ವದ ಸ್ಥಾನವಿದೆ , ಪ್ರತ್ಯಕ್ಷ, ಅನುಮಾನ, ಉಪಮಾನ, ಪ್ರಮಾಣಗಳಿಂದ ತಿಳಯಲಾಗದ್ದನ್ನು ‘ಶಬ್ದ ಪ್ರಮಾಣ’ದಿಂದ ತಿಳಿಯಬಹುದು . ಕಾರಣ ಧರ್ಮ ಭೌತವಸ್ತುವಲ್ಲ. ಧರ್ಮವನ್ನು ತಿಳಿಯಲು ವೇದ -ಅರ್ಥಾತ್ ಶಬ್ದ ವೊಂದೇ ಸಾಧನ ಅಥವಾ ಪ್ರಮಾಣ. ಬೇರೆ ಪ್ರಮಾಣಗಳು ಅನುಪಯುಕ್ತವೆಂದು ತೋರಿಸಲು ಅವುಗಳನ್ನು (ಶಬ್ದ ಪರಮಾಣವನ್ನು) ಉಪಯೋಗಿಸಬೇಕಾಗುವುದು. ಈ ದಾರಿಯ ತೋರುವ ಕ್ರಿಯೆಗೂ ಸಾವಿಗೂ ಇರುವ ಸಂಬಂಧವನ್ನು ಗಮನಿಸ ಬೇಕು. ಪ್ರತಿ ಸೃಷ್ಟಿ ಕೂಡ ಸಾವಿಗೆ ಹತ್ತಿರವಾಗುವ ಕ್ರಿಯೆ. ಇಲ್ಲಿ ಕವಿ ಸಾಯುತ್ತಿರುವುದು ದಾರಿಯನ್ನು ತೋರಲು ಎನ್ನುವುದನ್ನು ಗಮನಿಸ ಬೇಕು.

ಈಗ ಶಾಬ್ದಿಕ ಕ್ರಿಯೆ ಜರುಗುತ್ತದೆ. ಹೇಳಿ ಹೋಗು ಕಾರಣ ಬರುತ್ತದೆ. ಸೃಷ್ಟಿಯ ಹಿಂದೆ ಒಂದು ಕೆಟ್ಟ ಸಂಯೋಗದ ಕಾರಣವಿದೆ. ಶಬ್ದ ಎಂದರೆ ಮಾತು. ಅದು ಎರಡು ವಿಧ . ಪೌರುಷೇಯ ಮತ್ತು ಅಪೌರುಷೇಯ .ಪೌರುಷೇಯ ಲೌಕಿಕ ವಿಷಯಕ್ಕೆ ಸಂಬಧಿಸಿದ ಪ್ರಮಾಣ. ಅದನ್ನು ಆಪ್ತ ವಾಕ್ಯ ವೆಂದು ಕರೆಯಬಹುದು . ಆದರೆ ಅದು ಸಾಪೇಕ್ಷ ಸತ್ಯ. ಕವಿತೆ ಇಂತಹ ಭಾವನಾತ್ಮಕವಾದ ಆಪ್ತ ವಾಕ್ಯದಲ್ಲಿ ಬೆಳೆಯುತ್ತದೆ.

ಶಬ್ದ ಪ್ರಕಟವಾದ ನಂತರ ಜಗತ್ತು ಜಾಗೃತವಾಗುತ್ತದೆ. ಅಪೌರುಷೇಯ ವಾಕ್ಯಗಳು ವೇದಗಳು ವೇದಗಳು ಈಶ್ವರನಿಂದ ಬಾರದಿದ್ದರೂ, ಅವು ಸ್ವತಃ ಸಿದ್ಧ ವಾಕ್ಯಗಳು . ಮೀಮಾಂಸಕರು ಈಶ್ವರನನ್ನು ಒಪ್ಪುವುದಿಲ್ಲ. ಆದರೆ ವೇದವನ್ನು ಒಪ್ಪುತ್ತಾರೆ . ಸೃಷ್ಟಿ ಕ್ರಿಯೆಯನ್ನೂ ಸಾವಿನ ಸಿದ್ದತೆಯನ್ನೋ ನಾಟಕ ಎಂದು ಜರೆಯುತ್ತಾರೆ. ಋಷಿಗಳು ಸ್ವತಃ-ಸಿದ್ಧ ವಾಕ್ಯಗಳನ್ನು ಕಂಡವರು.; ದೃಷ್ಠಾರರು ಅವರು ಕರ್ತೃಗಳಲ್ಲ .ಶಬ್ದ- ಅರ್ಥ, ಅದರ ಸಂಬಂಧಗಳು ನಿತ್ಯ ವಾದದ್ದು . ವರ್ಣ(ಅಕ್ಷರ)(ಲಿಪಿ ) ರೂಪವುಳ್ಳದ್ದು . ವರ್ಣಗಳ ಸಮೂಹವೇ ಪದ. ಧ್ವನಿಯು ಮತ್ತು ರೂಪಗಳು ವರ್ಣದ ಅಭಿವ್ಯಕ್ತಿ ರೂಪ. ಧ್ವನಿಯು ಅನಿತ್ಯ ವರ್ಣವು ನಿತ್ಯ. ಈ ಹಿನ್ನೆಲೆಯಲ್ಲಿಯೇ ಕವಿತೆಯಲ್ಲಿ ಪರಿಸ್ಥಿತಿಯ ಶಿಶು ಎನ್ನುವ ಮಾತು ಬಂದಿದೆ.
ಕವಿ ಬಯಸಿದಂತೆ ಆಗುವುದಿಲ್ಲ ಅಂತ್ಯ ಏಕೆಂದರೆ ಈ ಶಬ್ದಗಳು ತಿಳಿಸುವ ಅರ್ಥವೂ ನಿತ್ಯವೇ. ಶಬ್ದ ಮತ್ತು ಅರ್ಥಗಳ ಸಂಬಂಧವೂ ನಿತ್ಯ. ಕಾರಣ, ‘ದನ’, ಎಂಬ ಶಬ್ದಕ್ಕೆ ಅದೇ ಅರ್ಥಬರಲು ಮಾನವೇಚ್ಛೆ ಅಥವಾ ಈಶ್ವರೇಚ್ಛೆ ಕಾರಣವಲ್ಲ. ಅದು ಸ್ವತಃಸಿದ್ಧ. ಭಾಷೆ ಸಹಜವಾದದ್ದು. ಶಬ್ಧಾರ್ಥಗಳ ಸಂಬಂಧವು ತನ್ನಿಂದತಾನೆ ಹುಟ್ಟಿಕೊಂಡಿದೆ. ರೂಢಿ -ಅರ್ಥವನ್ನು ತಿಳಿಸುವ ಸಾಧನ ಮಾತ್ರಾ. ವಸ್ತುವನ್ನು ತಿಳಿಯಲು ಬೆಳಕಿದ್ದಂತೆ. ಅದಕ್ಕಾಗಿ ‘ತಪ್ಪು ಮಾಡಿದವರಿಗೆ ಸಂದೇಶ ಹೋಗಲಿ ಎನ್ನುವ ಮಾತು ಬರುತ್ತದೆ.

ವೇದಗಳಲ್ಲಿ ಐದು ಪ್ರಕಾರದ ವಿಷಯಗಳಿವೆ : ವಿದಿ , ಮಂತ್ರ , ನಾಮಧೇಯ , ನಿಷೇಧ , ಮತ್ತು ಅರ್ಥವಾದ ; :ಮಾಡಬೇಕಾದ್ದು , ‘ವಿಧಿ’ ; ಮಾಡಬಾರದ್ದು ‘ನಿಷೇಧ’ ; ಅನುಷ್ಠಾನಕಾರಕಗಳು, ‘ಮಂತ್ರಗ’ಳು (ಅರ್ಥಸ್ಮಾರಕ) , ಯಜ್ಞದ ಹೆಸರು, ‘ನಾಮಧೇಯ’. ಇವೆಲ್ಲವೂ ಶಾಸ್ತ್ರಗಳು. ಆದರೆ ಸೃಜನಶೀಲ ಕ್ರಿಯೆ ಅದನ್ನಯ ಮೀರಿದ್ದು ಸಿದ್ದಾರ್ಥ ವ್ಯಾಕ್ಯವೆಂದರೆ ಇದ್ದದ್ದನ್ನು ಇದ್ದ ಹಾಗೆ ಹೇಳುವುದು ‘ಸತ್ಯಂ ಜ್ಞಾನಮನಂತಂ ಬ್ರಹ್ಮ’ ಎನ್ನುತ್ತದೆ ಕಠೋಪನಿಷತ್. ಇದನ್ನು ಮೀರಿದ್ದೇ ದರ್ಶನ. ಈಗ ದೇವದತ್ತನು ಹಗಲಿನಲ್ಲಿ ಊಟ ಮಾಡುವುದಿಲ್ಲ ಎನ್ನುವ ವಾಕ್ಯವಿದೆ. ಇದು ಸುಳ್ಳು ಎಂದು ಹೇಳ ಬಹುದೆ? ಅವನಿನ್ನೂ ಕೃಶಕಾಯನಾಗದೆ ಬದುಕಿರುವುದರಿಂದ ರಾತ್ರಿಯಲ್ಲಿ ಊಟ ಮಾಡುತ್ತಿರ ಬಹುದಲ್ಲವೆ? ಅದು ದರ್ಶನ.

ಕವಿತೆಯನ್ನು ಸೃಷ್ಟಿ ಕ್ರಿಯೆಯ ಸ್ವರೂಪದ ಬಗ್ಗೆ ನಡೆದ ಚರ್ಚೆಗಳ ಹಿನ್ನೆಲೆಯಲ್ಲಿ ಹೀಗೆ ಓದ ಬಹುದು ಎನ್ನಿಸಿತು. ಕವಿಯ (ಕವಿತೆಯ ಸಾವು) ಇಲ್ಲಿನ ವಸ್ತು ಎನ್ನಿಸಿದರೂ ಅದರ ಸಂರಚನೆ ಬೇರೆಯದನ್ನೇ ಹೇಳುತ್ತದೆ. ಇಲ್ಲಿ ಜ್ಞಾನ ಮತ್ತು ಸೃಜನಶೀಲತೆಯ ಸಮೀಕರಣವನ್ನೂ ಗಮನಿಸ ಬಹುದು.
ಜ್ಞಾನದ ಪ್ರಾಮಾಣಿಕತೆಯು, ಬಾಹ್ಯ ವಸ್ತುಗಳಿಂದ ಉಂಟಾಗುವುದಿಲ್ಲ. ಆದರೆ ಅದು ಜ್ಞಾನಗಳನ್ನು ಉಂಟುಮಾಡುವ ವಸ್ತುಗಳ ಜೊತೆಗೇ ಹುಟ್ಟುತ್ತದೆ. (ಪ್ರಮಾಣಂ ಸ್ವತಃ ಉತ್ಪದ್ಯತೇ)
ಜ್ಞಾನವು ಹುಟ್ಟಿದ ಕ್ಷಣದಲ್ಲಿಯೇ ಅದರ ಪ್ರಮಾಣ್ಯದ ಜ್ಞಾನವೂ ಉಂಟಾಗುತ್ತದೆ. ಅದಕ್ಕೆ ಇತರ ಪ್ರಮಾಣದ ಅವಶ್ಯಕತೆ ಇಲ್ಲ. (ಪ್ರಮಾಣ ಸ್ವತಃ ಜ್ಞಾಯತೇ) ; ಇದು ಮೀಮಾಂಸಕರ ಸ್ವತಃ ಪ್ರಾಮಾಣ್ಯವಾದ.
ಜ್ಞಾನವೆಲ್ಲವೂ ಸತ್ಯವಾದುದು ಎಂಬುದು ಮೀಮಾಂಸಕರ ನಿಲುವು. ಒಮೆ ಅದು ತಪ್ಪಾಗಿದ್ದರೆ , ಸರಿಪಡಿಸಿಕೊಂಡಿದ್ದು ಸತ್ಯ ಜ್ಞಾನ . -ಅಲ್ಲಿಯವರೆಗೆ ಅದು ಸತ್ಯ. (ಕಪ್ಪೆ ಚಿಪ್ಪು -ಬೆಳ್ಳಿಯಂತೆ) (ಅಪ್ರಾಮಣ್ಯಂ ಪರತಃ) ಇತರೆ ಪ್ರಮಾಣಗಳಿಂದ ಜ್ಞಾನದ ಪ್ರಾಮಾಣಿಕತೆಯನ್ನು ತಿಳಿಯುತ್ತೇವೆ.
ಪರತಃ ಪ್ರಾಮಾಣ್ಯವನ್ನು ನ್ಯಾಯದಂತೆ ಇವರು ಒಪ್ಪುವುದಿಲ್ಲ. ನೀರನ್ನು ಕುಡಿದಾಗ ಮಾತ್ರಾ ಪ್ರಮಾಣವೆಂದು ಒಪ್ಪುವುದು ನ್ಯಾಯದ ನಿಲುವು. ನೋಡಿದರೆ ಸಾಕೆಂದು ಮೀಮಾಂಸಕರು. ; ಏಕೆಂದರೆ ಅದು ಅವ್ಯವಹಾರಿಕ. ಎಲ್ಲವನ್ನೂ ದೃಢಪಡಿಸುವುದೇ ಬೇರೆ. ನೀರನ್ನು ಕುಡಿದದ್ದರಿಂದ ತಿಳಿಯಿತೋ ದೃಢಪಟ್ಟಿತೋ ? ಲೋಕವ್ಯವಹಾರವು ನಡೆಯುವುದು ನಾವು ತಿಳಿದಿದ್ದು ಸತ್ಯವೆಂಬ ನಂಬುಗೆಯಿಂದ . ಅಂದರೆ ಜ್ಞಾನವು ಸ್ವತಃ ಸಿದ್ಧವಾಗಿದೆ.

ಮೀಮಾಂಸಕರ ಈ ವಾದಕ್ಕೆ ಕಾರಣವೇನೆಂದರೆ.-ಪರತಃ ಜ್ಞಾನವನ್ನು (ಪರೀಕ್ಷಿಸದ) ಒಪ್ಪಿದರೆ, ವೇದ ವಾಕ್ಯಗಳ , ಸ್ವತಃ ಸಿದ್ಧ ಸತ್ಯತೆಯನ್ನು ಸಂದೇಹಿಸಬೇಕಾಗುತ್ತದೆ. ಸ್ವತಃ ಪ್ರಾಮಾಣ್ಯ ವಾದವನ್ನು ಅವಲಂಬಿಸಿದರೆ ಸಂದೇಹಿಸುವ ಅಗತ್ಯವಿಲ್ಲ. :ಪೌರುಷೇಯ ಪ್ರಾಮಾಣ್ಯವನ್ನು ಪರೀಕ್ಷಿಸಬೇಕಾಗುತ್ತದೆ. ಆದರೆ ಅಪೌರುಷೇಯ ವೇದ ವಾಕ್ಯಗಳು ಸ್ವತಃ ಸಿದ್ಧವಾದ್ದರಿಂದ ಪರೀಕ್ಷಿಸದೆ ನಂಬಬೇಕಾಗುತ್ತದೆ. ಆದರೆ ಕವಿತೆ ಹಾಗಲ್ಲ ದರ್ಶನ ಮೀಮಾಂಸೆಯಲ್ಲಿ ಬರುವುದು ಅದನ್ನು ಸುಳ್ಳ ಎಂದು ಅನುಮಾನಿಸಿಯೇ ನೋಡುವುದೇ ಸರಿಯಾದ ಕ್ರಮ.

ಎನ್. ಎಸ್. ಶ್ರೀಧರ ಮೂರ್ತಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x