ಮನಸ್ಸು ಮೌನವಾಗಿದೆ ಅಂದ್ರೆ ಯಾವುದು ಬೇಡ ಅಂತಲ್ಲ.ಯಾವುದನ್ನು ತಲೆಗೆ ಹಚ್ಚಿಕೊಳ್ಳದೆ ನಿರಾಳವಾಗಿರು ಅಂತ ಅರ್ಥ.
ಒಂದೊಂದು ಸಲ ಇಂತಹ ಮೌನಗಳು ಬದುಕಿಗೆ ಅನಿವಾರ್ಯ.. ಎಲ್ಲ ನೋವುಗಳೂ ಖುಷಿಗಳು ಮರೆಯಾದಾಗ ಅಲ್ಲೊಂದು ನಿಶ್ಯಬ್ದವಾದ ಮೌನ ಆವರಿಸಿ ಬಿಡುತ್ತದೆ.
ಅದನ್ನು ಅನುಭವಿಸಿ ನೋಡುವಾಗ ಮನಸಿಗೆ ಅನಿಸುವುದು ಇಷ್ಟೆ.ಇಲ್ಲಿ ಎಲ್ಲವೂ ಶೂನ್ಯ. ಯಾವುದು ಶಾಶ್ವತವಲ್ಲ. ನಾವು ಬಯಸಿದಂತೆ ಎಲ್ಲವೂ ಆಗುತ್ತದೆ ಅಂದುಕೊಳ್ಳುವುದು ಮೂರ್ಖತನ. ಬದುಕೆಂಬ ಕತೆಯನ್ನು ಬರೆಯುವ ಬರಹಗಾರರು ನಾವೇ ಆದರೂ ಅದರೊಳಗಿರುವ ಪಾತ್ರಗಳು ಮಾತ್ರ ಹಲವಾರು.
ಈ ಬದುಕಲ್ಲಿ ನಮಗಾಗಿ ಏನೂ ಪಾಲು ಇದೆಯೋ ಅದನ್ನಷ್ಟೆ ಸ್ವೀಕರಿಸಿ ಬದುಕಬೇಕು. ಇದೆ ಅಲ್ವಾ ಜೀವನ ಮರ್ಮ.. ಇದೇನಿದೂ ಪತ್ರದಲ್ಲಿ ವೇದಾಂತವೇ ತುಂಬಿಸಿದ್ದೇನೆ ಅನಿಸುತ್ತ. ???
ನಿಜ ನಾನು ಅದೆಷ್ಟೋ ಬಾರಿ ಹೀಗೆ ಯೋಚಿಸುವ ರೀತಿಗೆ ಕಾಣದ ಮುಗುಳುನಗು ನನ್ನ ಅರಿವಿಗಷ್ಟೆ ಗೋಚರವಾಗುತ್ತದೆ.
ನಿನ್ನ ಮೇಲೆ ಇರಿಸಿದ ಆ ಪ್ರೀತಿಯಂತೆ. ಅದು ಯಾರ ಅರಿವಿಗೂ ಬಾರದೆ ನನ್ನೊಳಗಿನ ಅಂತರಾಳವನ್ನು ಅಪ್ಪಿರುವಂತೆ. ನೋಡು ಮತ್ತೆ ಈ ಪತ್ರವಷ್ಟೆ ನನ್ನ ಮನಸಿನ ಭಾರವನ್ನು ಕಮ್ಮಿ ಮಾಡುವ ಭರವಸೆಯನ್ನು ಕೊಟ್ಟಿದೆ.ಅದಕ್ಕೆ ಅಲ್ವಾ ನಾನು ಇನ್ನೂ ಹಾಯಾಗಿ ಇರುವುದು. ನೀನು ಏನೂ ಅಂದುಕೊಂಡರೂ ಸರಿ.. ನಿನ್ನ ಗೈರುಹಾಜರಿ ನನ್ನತನವನ್ನು ಯಾವತ್ತು ಕುಗ್ಗಿಸಿಲ್ಲ.
ತೀರ್ಮಾನ ನೀನು ಮಾಡಿದ ಮೇಲೆ ಪರಿವರ್ತನೆ ನನ್ನಿಂದಾಗಿದೆ. ನಿನ್ನ ನೆನಪುಗಳು ಬದುಕಿನಲ್ಲಿ ಮೂಡಿಸಿದ ಹೆಜ್ಜೆ ಗುರುತಷ್ಟೆ. ಅದು ಕ್ರಮೇಣ ಮಾಸಿ ಹೋಗಬಹುದು. ಅದು ಕಾಲವೇ ನಿರ್ಧರಿಸುತ್ತದೆ.. ಮುಂದೆ ನನ್ನ ಬದುಕಿನ ದಾರಿಯೇ ಬದಲಾಗಿದೆ. ನನಗಾಗಿ ತೆರೆದಿರುವ ಬದುಕಿನ ಬಾಗಿಲಲ್ಲಿ ಹೊಸ ಹೆಜ್ಜೆಯನ್ನು ಇಟ್ಟಿರುವೆ..
ನೀನು ನನ್ನಿಂದ ಅದೆಷ್ಟು ದೂರವಾಗಲೂ ಪ್ರಯತ್ನಿಸಿದರು ನಿನ್ನ ಅಂತರಾತ್ಮಕ್ಕೆ ಅದು ಮೆಚ್ಚಿಗೆಯಾಗಿದೆ ಅಂತ ನನಗೆ ಅನಿಸದು. ಯಾರಿಗಾಗಿ ಈ ಮೌನ? ಎಲ್ಲಿವರೆಗೆ ಈ ಮೌನ? ಬಹುಶಃ ಉತ್ತರವೂ ನಿನ್ನಲ್ಲಿಯೇ ಇರಬಹುದು. ಇರಲಿಬಿಡು. ನಿನ್ನ ನಿರ್ಧಾರ ನಿನಗೆ ಸರಿ ಅನಿಸಿದರೆ ಸಾಕು. ಎಲ್ಲಿದ್ದರೂ ಆರಾಮವಾಗಿ ಬದುಕಿಬಿಡು. ಗೊಂದಲಗಳು ನನಗಷ್ಟೆ ಇರಲಿ.
ನನ್ನ ಜೀವನದ ಪ್ರತಿ ಪುಟದಲ್ಲೂ ನಿನ್ನ ನೆನಪಿನ ಅಕ್ಷರವನ್ನು ಪ್ರತಿಬಾರಿ ದಾಖಲಿಸುತ್ತೇನೆ. ಒಂದು ದಿನ ಈ ಬದುಕು ಮುಗಿದು ಹೋದಾಗಲೂ ನಿನ್ನ ಸುಂದರವಾದ ನೆನಪಿನ ಜೊತೆಯೇ ಎದ್ದು ನಡೆದುಬಿಡುತ್ತೇನೆ. ಇದೆಲ್ಲವನ್ನೂ ನಾನು ನಿನಗೆ ಯಾಕೆ ತಿಳಿಸಬೇಕು ? ಯಾಕೆಂದರೆ ಇದೆಲ್ಲವೂ ನಿನ್ನ ಗೋಚರದಲ್ಲಿರುವ ಸತ್ಯ..
ಅದೊಂದು ಮುಸ್ಸಂಜೆಯಲ್ಲಿ ನೀನು ಆಡಿದ ಮಾತುಗಳು ನೆನಪಿದೆಯಾ?
ಒಮ್ಮೆ ಕಿವಿಗೊಟ್ಟು ಆಲಿಸು ಈ ಅಂತರಂಗದ ಕೋಲಾಹಲವನ್ನು. ನಿನ್ನ ಸನಿಹಕ್ಕೆ ಲಯ ತಪ್ಪುವ ಈ ಹೃದಯದ ಬಡಿತವನ್ನು. ಅದ್ಯಾವ ಘಳಿಗೆಯಲ್ಲಿ ಜೊತೆಯಾದೆಯೇ ನೀನು… ನೀನಿಲ್ಲದೆ ಹೋದರೆ ಬದುಕೆಲ್ಲವೂ ಖಾಲಿ ಖಾಲಿ..
ನೀನು ಇದನ್ನು ತಮಾಷೆಯಾಗಿ ಹೇಳಿದ್ದರೂ ಅದು ನಿನ್ನಂತರಾಳದ ಮಾತುಗಳು ಅನ್ನುವುದಕ್ಕೆ ಆ ನಿನ್ನ ಕಣ್ಣಿಂದ ಉದುರಿದ ಹನಿಗಳೆ ಸಾಕ್ಷಿ..
ನೀನು ಕವಿಯಲ್ಲ. ಆದರೂ ಆ ಘಳಿಗೆಯಲ್ಲಿ ನಿನ್ನ ಭಾವನೆಗಳಿಗೆ ಜೀವ ತುಂಬಿ ನನ್ನೊಡಲಿಗೆ ಸಮರ್ಪಿಸಿದ ಆ ಪದಗಳು ಇವತ್ತಿಗೂ ಜೀವಂತ. ಬೀಸುವ ಗಾಳಿಗೂ ಮಾತು ಬರುತ್ತಿದರೆ? ಹಾರುವ ಹಕ್ಕಿಗೆ ನೋವಿನ ಕೂಗು ಕೇಳುತ್ತಿದ್ದರೆ? ಎಲ್ಲವೂ ನಿನಗೆ ನಿನ್ನರಿವಿಗೆ ಬರುತ್ತಿತು.
ಬಾಳ ಪಯಣದಲ್ಲಿ ಎಲ್ಲರೂ ಒಬ್ಬಂಟಿಯೇ. ಇದು ನಿನ್ನ ಕೊನೆಯ ಮಾತು. ಅದು ನಿಜವೂ ಕೂಡ. ಇಲ್ಲಿ ನಾನು ನಿನ್ನ ಯಾವತ್ತಿಗೂ ದೂರಲಾರೆ. ನಿನ್ನ ಬದುಕಿನ ಪ್ರತಿಯೊಂದು ನಿರ್ಧಾರಗಳು ಅದು ನಿನ್ನದೇ.
ಒಂಟಿಯಾದದ್ದು ಬರೀ ಭಾವನೆಗಳು ಮಾತ್ರ. ಆ ಭಾವಗಳಿಗೆ ಇನ್ನೂ ಜೀವವಿದೆ.
ನೋಡು ನಿನ್ನನ್ನು ಕೆಣಕಲು ಈ ಪತ್ರವನ್ನು ಬರೆಯುತ್ತಿಲ್ಲ ನಾನು.. ಆದರೂ ಒಂದೇ ಒಂದು ಸಲ ಅರ್ಥವಾಗದೇ ಉಳಿದ ಮಾತುಗಳಿಗೆ ಒಂದು ಉತ್ತರವನ್ನು ಕೊಟ್ಟು ಸುಮ್ಮನಿದ್ದು ಬಿಡು.ಮತ್ತೆಂದೂ ನಿನ್ನ ಊರಿಗೆ ನನ್ನ ಪತ್ರಗಳು ಬರಲಾರದು.
ನೀನು ಹೀಗೆ ಸುದ್ದಿಯಿಲ್ಲದೆ ಮೌನವಾಗಲೂ ಅರ್ಥವಾದರೂ ಏನೂ? ನನ್ನಿಂದ ಅಂತಹ ತೊಂದರೆಯಾದರೂ ಏನಾಗಿತ್ತು? ನಿನ್ನ ಬದುಕು ನಿನ್ನದೇ ಆಯ್ಕೆಯೂ ನಿನ್ನದೇ ಅದನ್ನು ಒಪ್ಪಿಕೊಂಡು ಬದುಕುವ ಜೀವಿ ನಾನು.ಆದರೂ ನಿನ್ನೊಳಗಿನ ಈ ಅಖಂಡ ಮೌನಕ್ಕೆ ಕಾರಣವಾದರೂ ಇರಲೇಬೇಕಲ್ಲವೇ?
ನನಗೊತ್ತು “ನಿರೀಕ್ಷೆ”ಗಳೂ ಕೊನೆಯಾದಾಗ “ಮೌನ” ಆರಂಭವಾಗುತ್ತದೆ. ಈ ಮೌನ ನಿನಗೆ ಸಮ್ಮತವಾಗಿದೆ ಅಂದರೆ ನನ್ನಿಂದ ನಿನಗೆ ಮತ್ತೆ ಯಾವ ತೊಂದರೆಯು ಆಗದು.ನಿನ್ನ ಸುಂದರವಾದ ಬದುಕಿಗೆ ನನ್ನ ನೆರಳು ಕೂಡ ಸೋಕದಷ್ಟು ದೂರವೇ ಬಂದಾಗಿದೆ..
ಈ ಬದುಕು ತುಂಬಾ ವಿಚಿತ್ರ.. ಯಾವುದು ಬೇಕು ಅದು ಯಾವತ್ತು ನಮ್ಮದಾಗದು. ಸಿಗಲಾರದನ್ನು ಬಯಸಬಾರದು. ನಿನ್ನದೆನ್ನುವ ಬದುಕನ್ನು ಆರಾಮವಾಗಿ ಬದುಕಿಬಿಡು ಯಾವುದೇ ಜಂಜಾಟಗಳಿಲ್ಲದೆ.. ಅದೇ ಚಂದ. ನಿನ್ನ ನಗುವಿನ ಮುಂದೆ ನನ್ನ ನೋವುಗಳಿಗೆ ಆಯಸ್ಸು ಕಮ್ಮಿಯೇ.. ಯಾಕೆ ಗೊತ್ತ. ನಿನ್ನ ನಗು ನನ್ನ ಬದುಕನ್ನು ಗೆಲುವಾಗಿಸಿತ್ತು.ನೋವನ್ನು ಬದಿಗಿತ್ತು ಬದುಕುವುದನ್ನು ಕಲಿಸಿತ್ತು…
ಇರಲಿ ಬಿಡು ಅದೆಲ್ಲವೂ ಬದುಕಿಗೆ ಸಂದ ಸುಂದರ ಕ್ಷಣಗಳು.. ಈ ಪತ್ರ ನಿನ್ನವರೆಗೂ ತಲುಪುತ್ತದೆ ಅನ್ನುವ ಭರವಸೆ ನನಗಿದೆ. ಇದಕ್ಕಾದರೂ ಒಂದು ಉತ್ತರವನ್ನು ಬರೆಯುವ ಪ್ರಾಮಾಣಿಕ ಪ್ರಯತ್ನ ನಿನ್ನಿಂದಾಗಲಿ.. ಅದೆಷ್ಟೋ ಕಾಲವೇ ಆಗಿಹೋಯಿತು ನಿನ್ನ ಪತ್ರವನ್ನು ಓದದೆ.. ನಿನ್ನ ಬದುಕಿನ ಒಂದಷ್ಟು ಸಮಯವನ್ನು ಮೀಸಲಿಡಲು ಸಾಧ್ಯವೇ? ಇದೊಂದು ಕೊನೆಯ ಕೋರಿಕೆ.. ಮತ್ತೆಂದೂ ಇಂತಹ ಸಮಯ ಬಾರದು.
ಭಯ ಬೇಡ ಬದುಕು ನನ್ನನ್ನು ತುಂಬಾ ಗಟ್ಟಿಯಾಗಿಸಿದೆ. ನೋವಲ್ಲು ನಗುವನ್ನು ಕಲಿತವರು ಮಾತ್ರ ಬದುಕನ್ನು ಅದ್ಬುತವಾಗಿ ಬದುಕುತ್ತಾರೆ.. ನನ್ನ ಅಕ್ಷರಗಳು ನಿನ್ನ ಅಂತರಂಗವನ್ನು ಮುಟ್ಟದಿದ್ದರೆ ಮತ್ತೆ ಅಲ್ಲಿ ಭಾವನೆಗಳು ಸಮಾಧಿಯಾಗಿದೆ ಎಂದು ಅಂದುಕೊಂಡು ಸುಮ್ಮನಿದ್ದು ಬಿಡುವೆ. ಇಂತೀ ನಿನ್ನ ಉತ್ತರದ ನಿರೀಕ್ಷೆಯಲ್ಲಿ ….
–ಪೂಜಾ ಗುಜರನ್ ಮಂಗಳೂರು..
ನಾನು ಮೊದಲ ಸಾಲಿನಿಂದ ಕೊನೆಯವರೆಗೆ ಗಂಭೀರವಾಗಿಯೇ ಓದಿದ್ದೇನೆ. ಅವುಗಳಲ್ಲಿ ‘ನಿರೀಕ್ಷೆಗಳು ಕೊನೆಯಾದಾಗ ಮೌನ ಪ್ರಾರಂಭವಾಗುತ್ತದೆ’. ಏಂಬುದು ಅರ್ಥ ಗರ್ಭಿತ ಮತ್ತು ಸೂಚ್ಯ ಕೂಡಾ. ಬಹುಶಃ ನಿಮ್ಮ ಅಕ್ಷರ ಬತ್ತಳಿಕೆಯಲ್ಲಿ ಸೂಕ್ಷ್ಮ ತೀಕ್ಷ್ಣ ಬಾಣಗಳಿವೆ ಏಂದನಿಸಿತು. ಅಭಿನಂದನೆಗಳು.
ಲೇಖನ ಮತ್ತು ಅಕ್ಷರಗಳ ಜೋಡಣೆ ಸಮಂಜಸವಾಗಿದ್ದು ಮೆರುಗು ಮೂಡಿಸಿವೆ. ಅಭಿನಂದನೆಗಳು ಮೇಡಂ.