“ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 3)”: ಎಂ.ಜವರಾಜ್

-೩-
ಸೋಸಲೆ ಮೇಷ್ಟ್ರು ಹಸಿಹುಣಸೇ ಕಡ್ಡಿಲಿ ಹೊಡೆದ ಹೊಡೆತದ ನೆಪ ಮಾಡಿಕೊಂಡು ಮಲಗಿದ್ದವನು ಏಳದೆ ನರಳುತ್ತ ರಗ್ಗು ಮುದುಡಿ ಮಲಗಿದ್ದೆ.

ರಾತ್ರಿ ಅಪ್ಪ ನನ್ನ ಕೈಲಿದ್ದ ಬಾಸುಂಡೆ ನೋಡಿ ಆ ಸೋಸಲೆ ಮೇಷ್ಟ್ರನ್ನು ಅವ್ವನಿಗೆ ಒಪ್ಪಿಸುತ್ತ “ಆ ಬೋಳಿಮಗ ಐಕುಳ್ಗ ಕೊಡೊ ಉಪ್ಪಿಟ್ನು ಕೊಡ್ದೆ ಕಳಿಸನ. ಉಪ್ಪಿಟೇನು ಅವ್ರಪ್ಪನ ಮನೆಯಿಂದ ತಂದಿದ್ನ” ಅಂತ ಅಪ್ಪ ಮೇಷ್ಟ್ರನ್ನು ಬೈತಿದ್ದರೆ ನನಗೆ ಒಳಗೊಳಗೆ ಹಿಗ್ಗು. ಹಂಗೆ “ಆ ಗಂಗ ಬೋಳಿಮಗ ಬರ‌್ಲಿ ಮಾಡ್ತಿನಿ ಅವುನ್ಗ. ಸಣ್ಮುಕಪ್ಪವ್ರು ಪೋಸ್ಟಾಪಿಸ್ ತಂದ್ರು. ಅವ್ರೆ ಇಲ್ಲಿಗಂಟ ಅನ್ನಿಲ್ಲ ಆಡ್ನಿಲ್ಲ ಪಾಪ ಒಳ್ಳಿ ಮನ್ಸ. ಇವ್ರು ನಮ್ಮೂರ್ ಸ್ಕೂಲ್ಗೆ ಬಂದು ನಮೈಕ್ಳುನ್ನೆ ಹೊಡಿಯದು ಬಡಿಯದು ಚಾಡಿ ಮಾತ್ ಕೇಳದು. ಏನ ಇಂಗಾದ್ರ.. ಕೈ ನೋಡು ಹೆಂಗಾಗದ. ಆ ಕುಂಟ್ಸಿದ್ದಪ್ನು ಕುಂತ್ಗ ಹೊಡಿಸನ. ಅಂವ ನಮ್ಮೂರವ್ನಲ್ವ.. ಬುಡಿ ಸಾ ಅನ್ಬಾರ‌್ದ.. ಎಲ್ಲ ರಾಜ್ಕೀಯ ಕಲ್ತರ ಏನ್ಮಾಡದು” ಅಂತಂತ ಕೈಗೆ ಕೈಯೆಣ್ಣೆ ಸವರಿ ಉರುಬಿ ರಗ್ಗೊದ್ಸಿ ಮಲಗಿಸಿದ್ದ.

ಕೆಲವು ಸಲ ನಾನು ಸ್ಕೂಲಿಗೆ ಹೋಗಬೇಕಾಗುತ್ತದೆ ಅಂತ ಆಗಾಗ ಏನಾದರು ನೆಪವೊಡ್ಡಿ ಈತರ ಆಗದಿದ್ದರು ನರಳುವವನಂತೆ ನಟಿಸುತ್ತ ಮಲಗಿದ್ದಿದೆ. ಅವ್ವ ಅಪ್ಪನಿಗೆ ಇದು ಗೊತ್ತಾಗಿ ಏಳಿಸಿದರು ಏಳದೆ ಅವರು ಅಲ್ಲಿಂದ ಹೋಗುವ ತನಕ ಮಾತಾಡದೆ ನಿದ್ದೆ ಬಂದವರಂತೆ ಮಲಗಿದ್ದೂ ಇದೆ.

ಆ ನೆಪ, ಯೂನಿಫಾರಂ ಕೊಳೆಯಾಗಿದೆ ಅಂತಲೊ, ಚಡ್ಡಿ ಹರಿದಿದೆ ಅಂತಲೊ, ಬಾವುಟ ತಗೊಬೇಕು ಕಾಸು ಕೊಡಿ ಇಲ್ಲಾಂದ್ರೆ ಮೇಷ್ಟ್ರು ಬೈತಾರೆ ಅಂತಾಲೊ, ಪೆನ್ನಿಲ್ಲ ಪೆನ್ಸಿಲಿಲ್ಲ ಜಾಮಿಟ್ರಿ ಬಾಕ್ಸಿಲ್ಲ ಅಂತಲೊ ಏನೇನೊ ಕಾರಣವೊಡ್ಡಿ ಸ್ಕೂಲಿಗೆ ಚಕ್ಕರ್ ಹೊಡೆಯುವುದು ರೂಢಿಯಾಗಿತ್ತು. ಆತರ ಚಕ್ಕರ್ ಹೊಡೆದಾಗಲೆಲ್ಲ ಅಪ್ಪ ಗಾಡಿ ಕಟ್ಟಿದ್ಮೇಲ ಅವ್ವ ಹೊಲುದ್ಕಡ ಹೋದಾಗ ನಾವೊಂದಷ್ಟು ಹುಡುಗ್ರು ತಂತಿಕೊಕ್ಕೆ ಎತ್ತಿಕೊಂಡು ಹೊಳೆಗೋಗಿ ನೀರಂಜಿ ಮರದತ್ರ ಹೊಳೆಗೆ ಇಳಿದು ನಿಧಾನಕ್ಕೆ ನೀರು ಹಾದು ಆಚ ಕರ ಹೊಳೆಯ ಅಂಚಿನ ಉದ್ದಕ್ಕು ಇದ್ದ ಕಾಡುಣಸೆ ಮರದಲ್ಲಿ ಕೆಂಪು ಕೆಂಪಾಗಿ ಹಣ್ಣಾಗಿ ನೇತಾಡುತ್ತಿದ್ದ ಕಾಡುಣಸೆ ಹಣ್ಣು ಕಿತ್ತುಕೊಂಡು ಬಂದು ಶಿಶುವಾರದ ಜಗುಲಿ ಮೇಲೊ ಬಾವಿಕಟ್ಟೆ ಜಗುಲಿ ಮೇಲೊ ಗುಡ್ಡೆ ಹಾಕಿ ಮಾರಿ ಆ ದುಡ್ಡ ಗೋಲಕ ಡಬ್ಬಿಗೆ ಹಾಕಿಟ್ಟು ಶನಿವಾರ ಭಾನುವಾರದ ದಿನಕ್ಕೆ ಪಿಚ್ಚರ್ ಪ್ರೋಗ್ರಾಂ ಹಾಕೊತಿದ್ವಿ.

ಅವತ್ತು ಶಿಶುವಾರದ ಜಗುಲಿ ಮೇಲೆ ಕಾಡುಣಸೆ ಹಣ್ಣು ಗುಡ್ಡೆ ಹಾಕಿ ಕುಂತಿರುವಾಗ ಶಿಶುವಾರದ ಮೇಡಂ ‘ಏ ಇಲ್ಲೆಲ್ಲ ತರಬೇಡಿ ಕಸ ಆಗುತ್ತೆ ಎತ್ಕವೋಗ್ರೊ’ ಅಂತನ್ನುತ್ತ ಅದೆ ನೆಪದಲ್ಲಿ ಅವರು ಕಾಸನ್ನೂ ಕೊಡದೆ ಒಂದು ಗುಡ್ಡೆ ಕಾಡುಣಸೆ ಹಣ್ಣು ಎತ್ತಿಕೊಂಡು ಒಳ ಹೋಗುತ್ತಿದ್ದಾಗ “ನಮಸ್ತೆ ಮೇಡಂ” ಅಂತ ಗಂಗಣ್ಣ ಬರುವನು. ಕಾಡುಣಸೇ ಹಣ್ಣು ಬಿಡಿಸಿ ತಿನ್ನುತ್ತಿದ್ದ ಮೇಡಂ “ಬಾ ಗಂಗಣ್ಣ” ಅಂತ ಕರೆಯುತ್ತಲೇ ಒಳ ಹೋಗುತ್ತಿದ್ದರೆ ಗಂಗಣ್ಣ ಅವರ ಹಿಂದೆನೆ ಬ್ಯಾಗನ್ನು ಕೈಯಲ್ಲೇ ಹಿಡಿದು ಶಿಶುವಾರದ ಒಳಗೆ ಹೋಗಿ ಕಸಪೊರಕೆ ತಂದು ಜಗುಲಿ ಗುಡಿಸಿ ಗೋಡೆ ಒರಗಿ ಕುಂತದ್ದೆ ತಡ ಹೂವಿನಕೊಪ್ಪಲಕ್ಕ, ದೊಡ್ಡಬಸವಯ್ಯ, ಕೊರಕಬಲ್ಲಯ್ಯ, ಉಳಿಬಸವಯ್ಯ, ಸಿದ್ದಕ್ಕ, ಮಾದಕ್ಕ, ಗುಡುಗಾಜಮ್ಮ, ನರಸಮ್ಮ ಬಂದು ಕುಂತು ‘ಗಂಗ ನಂದ್ ನೋಡು ಬಂದಿದ್ದ’ ಅಂತ ಒಬ್ಬರ ಮೇಲೊಬ್ಬರು ಒಂದೇ ಸಮನೆ ಕೇಳುತ್ತ ಮೇಲೆ ಮೇಲೆ ಬೀಳೋರು.

ಗಂಗಣ್ಣ, ಅವರು ಮೇಲೆ ಬೀಳುವುದನ್ನು ನೋಡಿ ಗಾಬರಿಯಾಗಿ ಕೆಳಗಿಟ್ಟು ಓದುತ್ತ ವಿಂಗಡಿಸುತ್ತ ಜೋಡಿಸುತ್ತಿದ್ದ ಎಂ.ಓ ಫಾರಂ, ಲೆಟರುಗಳು, ಪೋನ್ ಬಿಲ್ಗಳು ಎಲ್ಲವನ್ನು ಮುದುರಿ ಒಟ್ಟಿಗೆ ಬ್ಯಾಗೊಳಗೆ ಹಾಕೊಂಡು ಸೈಕಲ್ ಹ್ಯಾಂಡಲ್ ಗೆ ಬ್ಯಾಗು ಸಿಕ್ಕಿಸಿ ಸ್ಟ್ಯಾಂಡ್ ಒದ್ದು ತಳ್ಳುತ್ತ “ಹೋಗಿ ಹೋಗಿ ನಾಳ ಬರೋಗಿ” ಅಂತ ಸೈಕಲ್ ಹತ್ತಲು ಒಂದು ಕಾಲಲ್ಲಿ ಪೆಡಲ್ ತುಳಿಯುತ್ತಿದ್ದಂತೆ ಅಲ್ಲಿದ್ದವರು ಸೈಕಲ್ ಹಿಂದಿನ ಕ್ಯಾರಿಯರ್ ಹಿಡಿದು ‘ನಿಂತ್ಕ’ ಅಂತ ರೇಗಿ ನಿಲ್ಲಿಸುವರು. ದುಡ್ಡು ಬಂದಿದೆ ಅನ್ನೊ ಆಸೆಯಿಂದ ಹೆಬ್ಬೆಟ್ಟೊತ್ತಿ ದುಡ್ಡು ಈಸಿಕೊಳ್ಳಲು ಬಂದು ಕುಂತಿದ್ದವರು ಕ್ಯಾರಿಯರ್ ಹಿಡಿದೇ ಗಂಗಣ್ಣನಿಗೆ ಸುತ್ತುವರಿದು “ಏಯ್ ಗಂಗ ಅದ್ಯಾಕ ನಾಳ.. ಈಗೇನಾಗಿದ್ದು ನಿಂಗ.. ಜಿನಜಿನ ಇಂಗೆ ಆಡ್ತಿದೈ ನೀನು. ತಾಡಿಲ್ಲಿ ಸಣ್ಮುಕಪರವ್ರ್ ಗ ಯೇಳ್ತಿನಿ” ಅನ್ನೊರು. ಅವನು “ಏ.. ಹೇಳಿ ಹೋಗಿ. ನಾ ಕೊಡಾಣ ಅಂದ್ರೆ ನೀವೆಲ್ಲ ಮೇಲೆ ಬೀಳ್ತಿರಲ್ಲ ಏನಾದ್ರು ಹೆಚ್ಚು ಕಮ್ಮಿ ಆದ್ರ ನೀವ್ ಬರ್ತಿರಾ..” ಅಂತ ಮಂಡಿಯಿಂದ ಕೆಳಕ್ಕೆ ತತ್ತಿಯಿಂದ ಮೇಲಕ್ಕಿದ್ದ ತನ್ನ ತುಂಡು ಪ್ಯಾಂಟನ್ನು ಮೇಲೆಳೆದುಕೊಂಡು ಅವರಿಗೇ ತಿರುಗೇಟು ನೀಡುತ್ತಿರುವಾಗ ಒಂದಷ್ಟು ಐಕಳು ಕಲ್ಲು ಆಯ್ದು ಮೆಲ್ಲಗೆ ಹಿಂದೆ ಹೋಗಿ ತಿಕದ ಕುಂಡಿಯಲ್ಲಿ ಹರಿದು ಹೋಗಿದ್ದ ಅವನ ಪ್ಯಾಂಟ್ ಒಳಗೆ ಕಲ್ಲು ಹಾಕಿ ‘ಗಂಗ ಪೋಸ್ಟ್’ ಅನ್ನುತ್ತ ಕೇಕೆ ಹಾಕುತ್ತವೆ. ಅವನು ಚಂಗನೆ ನೆಗೆದು ‘ಏಯ್’ ಅಂತ ಮತ್ತೆ ಸೈಕಲ್ ಸ್ಟ್ಯಾಂಡ್ ಹಾಕಿ ಪ್ಯಾಂಟ್ ಒದರಿದರೆ ತಿಕದ ಕುಂಡಿಯಲ್ಲಿ ಹಾಕಿದ್ದ ಕಲ್ಲು ತಿಕವನ್ನು ಹಾದು ತೊಡೆ ಸವರಿಕೊಂಡು ಕಾಲಿನ ಕೆಳಗೆ ಬೀಳುತ್ತಿತ್ತು.

ಕಲ್ಲು ಹಾಕಿದ ಐಕಳು ಹರಿದು ಹೋಗಿದ್ದ ತಿಕದ ಕುಂಡಿಗೆ ಕೈ ಹಾಕಿ ಎಳೆದು “ಗಂಗ ಪೋಸ್ಟ್.. ಪೋಸ್ಟ್.. ಗಂಗ ಪೋಸ್ಟ್.. ಪೋಸ್ಟ್..” ಅಂತ ಕುಣಿಯುತ್ತ “ಗಂಗಣ್ಣ ಪೋಸ್ಟಾಕಿನಿ ನಮ್ಮೂರ‌್ಗ ಕಳಿಸ್ಬುಡು” ಅಂತ ನಗಾಡುತ್ತಿದ್ದವು. ಅಲ್ಲಿ ಅಷ್ಟೂ ಹೊತ್ತು ಗಂಗಣ್ಣನನ್ನು ಬೈತಿದ್ದ ವಯಸ್ಸಾದವರು ಕಲ್ಲು ಹಾಕಿ ಕೇಕೆ ಹಾಕಿ ಕುಣೀತಿದ್ದ ಐಕಳನ್ನು ಬೆದರಿಸಿ ಕಳುಹಿಸಿ ಗಂಗನ ಪರ ವಕಾಲತ್ತು ವಹಿಸಿ “ಛೇ ಪಾಪ.. ಮುದೇವ್ಗಳ ಅದೇನ ಕಲ್ತಿರದು ನೀವು” ಅಂತ ಲೊಚಗುಟ್ಟಿದರೆ ಗಂಗಣ್ಣನ ಮನಸ್ಸು ಕರಗಿ “ಬನ್ನಿ ಬನ್ನಿ ಆಯ್ತು ಕೊಡ್ತಿನಿ.. ಮೇಡಂ ಕರೀರಿ ಎಲ್ಟಿಎಂ ಹಾಕ್ಲಿ. ಅವ್ರು ಎಲ್ಟಿಎಂ ಹಾಕುದ್ರ ಕೊಡ್ತಿನಿ” ಅನ್ನುತ್ತಿದ್ದ. ಈಗ ಅವರು, ಚೇರ್ ಬಿಟ್ಟು ದೊಡ್ಡ ಟೇಬಲ್ ಮೇಲೆ ಕುಂತು ಕಾಡುಣಸೆ ಹಣ್ಣು ತಿಂತಾ ತಿಂತಾನೆ “ಒಂದು ಎರಡು ಬಾಳೆಲೆ ಹರಡು ಮೂರು ನಾಕು ಅನ್ನ ಹಾಕು” ಅಂತ ಐಕಳಿಗೆ ರಾಗವಾಗಿ ಹಾಡು ಹೇಳಿಕೊಡುತ್ತಿದ್ದ ಶಿಶುವಾರದ ಮೇಡಂರನ್ನು ಕರೆವರು. ಆ ಮೇಡಂ ಹಾಡನ್ನು ನಿಲ್ಲಿಸಿ ಹೊರ ಬಂದು ಗಂಗಣ್ಣನ ತಾಪತ್ರಯ ನೋಡಿ “ಕೊಡಿಲ್ಲಿ ಗಂಗ” ಅಂತ ಎಲ್ಲ ಎಂ.ಓ ಫಾರಂ ಈಸಿಕೊಂಡು ಒಬ್ಬೊಬ್ಬರ ಹೆಸರನ್ನು ನೋಡಿ ಇಂಕ್ ಪ್ಯಾಡಲ್ಲಿ ಅವರ ಹೆಬ್ಬೆಟ್ಟು ಅದ್ದಿಸಿ ಅದೇ ಹೆಬ್ಬೆಟ್ಟನ್ನು ಎಂ.ಓ ಫಾರಂಗೆ ಎರಡೆರಡು ಕಡೆ ಒತ್ತಿಸಿ ಕೊನೆಯ ಭಾಗವನ್ನು ಹರಿದು ಹೆಬ್ಬೆಟ್ಟು ಒತ್ತಿದವರಿಗೆ ಕೊಡುವರು. ಗಂಗಣ್ಣ ಅವರಿಗೆ ಕೊಟ್ಟಿದ್ದ ಹರಿದ ಚೀಟಿ ಈಸಿಕೊಂಡು ನೋಡಿ ‘ತಗಾ ಲೆಕ್ಕ ಹಾಕ’ ಅಂತ ಒಂದು ರೂಪಾಯಿದು ಎರಡು ರೂಪಾಯಿದು ಐದು ಹತ್ತು ರೂಪಾಯಿದು ನೋಟುಗಳನ್ನು ಜೋಡಿಸಿ ನಿಧಾನಕೆ ಲೆಕ್ಕ ಹಾಕಿ ಕೊಡುವನು. ಅದರಲ್ಲಿ ಅವನ ಎರಡು ರೂಪಾಯಿ ಕಮಿಷನ್ ಹಿಡಿದುಕೊಂಡು ಉಳಿದದ್ದ ಕೊಟ್ಟು ‘ಮೇಷ್ಟ್ರಿಗೇಳ್ಬೇಡಿ ನಾನ್ ಹಿಡ್ಕೊಂಡದ್ದು.. ಗೊತ್ತಾಯ್ತ” ಅಂತ ಒತ್ತಿ ಒತ್ತಿ ಹೇಳ್ತಿದ್ದ. ಅವರಿಗೆ ಕೊಟ್ಟ ಮೇಲೂ ಅವನಿಗೇ ಅನುಮಾನ ಬಂದು ‘ಏ ಕೊಡಿಲ್ಲಿ’ ಅಂತ ಮತ್ತೆ ಈಸಿಕೊಂಡು ಎರಡೆರಡು ಸಲ ಲೆಕ್ಕ ಹಾಕಿ ಕೊಟ್ಟು ‘ನಿಂದಾಯ್ತ.. ಏಳು ಮೇಲೆ. ಹೋಗು’ ಅನ್ನೋನು. ಹಾಗೆ ಹೇಳಿಸಿಕೊಂಡವರು ಹೋಗದೆ ಅಲ್ಲೇ ಕುಂತಿದ್ದರೆ ಮತ್ತೆ ಮತ್ತೆ ಹೇಳ್ತಿದ್ದ. ಅವರು ಹೋಗುವ ತನಕ ಇನ್ನೊಬ್ಬರು ಹೆಬ್ಬೆಟ್ಟು ಒತ್ತಿ ಚೀಟಿ ಹಿಡಿದು ನಿಂತಿದ್ದರು ದುಡ್ಡು ಕೊಡದೆ ದುಡ್ಡು ಜೇಬಿಗೆ ಹಾಕೊಂಡು ಲೆಟರ್ ತುಂಬಿದ್ದ ಬ್ಯಾಗನ್ನು ಭದ್ರವಾಗಿ ಒತ್ತಿ ಹಿಡಿದು ಗೋಡೆಗಂಟಿ ಕುಂತಿರುತ್ತಿದ್ದ. ಇದನ್ನು ನೋಡುತ್ತ ಹೆಬ್ಬೆಟ್ಟು ಒತ್ತಿ ದುಡ್ಡಿಗಾಗಿ ಕಾದು ಕುಂತಿದ್ದವರು ಹೋಗದಿದ್ದವರನ್ನು”ನಿಂದು ಆದ್ಮೇಲ ಹೋಗು” ಅಂತ ರೇಗಿ ಕಳುಹಿಸುತ್ತಿದ್ದರು. ಇದರೊಂದಿಗೆ ಶಿಶುವಾರದ ಮೇಡಂ ರಿಕವರಿ ಆದ ಎಲ್ಲರ ಎಂ.ಓ. ಫಾರಂ ಗೆ ಒತ್ತಿಸಿಕೊಂಡಿದ್ದ ಹೆಬ್ಬೆಟ್ಟಿನ ಗುರುತಿನ ಮೇಲೆ ‘ಎಲ್ಟಿಎಂ ಆಫ್’ ಅಂತ ಇಂಗ್ಲಿಷ್ ಕ್ಯಾಪ್ಟಲೆಟರಲ್ಲಿ ಬರೆದು ತಮ್ಮ ಸಹಿ ಹಾಕಿ ಗಂಗಣ್ಣನಿಗೆ ಕೊಡುತ್ತಿದ್ದರು.

ಗಂಗಣ್ಣ ಎಲ್ಲ ಆದ ಮೇಲೆ ಇನ್ನು ಲೆಟರ್ ಹಂಚಬೇಕು. ಅವನ್ನೆಲ್ಲ ಸೀರಿಯಲ್ಲಾಗಿ ಜೋಡಿಸಿಕೊಂಡು ಉಳಿದವ ಬ್ಯಾಗಲ್ಲಿ ಹಾಕೊಂಡು ಮೇಲೆದ್ದು ಸುತ್ತಾ ಮುತ್ತಾ ಹತ್ತಾರು ಬಾರಿ ನೋಡುವನು. ಅವನನ್ನೇ ನೋಡುತ್ತಿದ್ದವರು “ಏನು ಬಿದ್ದಿಲ್ಲ ಹೋಗು ಗಂಗಣ್ಣ.. ಏನಾದ್ರು ಸಿಕ್ಕುದ್ರ ಕೊಡ್ತಿವಿ” ಅಂದಾಗ ಉಳಿದವರು ನಗುವರು. ಅವನು ‘ಏನಿಲ್ಲ ಸುಮ್ನೆ’ ಅಂತ ನೋಡ್ತ ನೋಡ್ತಾನೆ ಸೈಕಲ್ ತಳ್ಳುತ್ತಾ ಊರೊಳಕ್ಕೆ ಹೋಗುತ್ತಿದ್ದ.

                          --------

ನೆನ್ನೆ ಸೋಸಲೆ ಮೇಷ್ಟ್ರು ಹೊಡೆದ ಹೊಡೆತಕ್ಕೆ ನನ್ನ ಕೈಯೂತ ಕರಗದೆ ಜೋಮು ಹಿಡಿದು ಉರಿಯುತ್ತಿತ್ತು. ಗಾಡಿ ಕೆಲಸದಿಂದ ಬಂದು ಸ್ವಲ್ಪ ಹೊತ್ತು ದಿಂಬಿಗೆ ತಲೆ ಕೊಟ್ಟು ಮೇಲೆದ್ದ ಅಪ್ಪ “ಕುಂಟ್ಸಿದ್ದಪ್ನೂ ಗಂಗಣ್ಣೂ ಅದೇನಂತ ಕೇಳ್ತಿನಿ ಆಮೇಲ ಸೋಸ್ಲೆ ಮೇಸ್ಟ್ರು ಕಾಣ್ತಿನಿ ಬಾ” ಅಂತ ನನ್ನನ್ನು ಏಳಿಸಿದ್ದ.

ಸಂಜೆಯ ಕೆಂಪಲ್ಲಿ ಅಪ್ಪನ ಕೈಹಿಡಿದು ಕುಂಟ ಸಿದ್ದಪ್ಪನ ಮನೆ ಮುಂದೆ ನಿಂತಾಗ ಅವನು ಏನೊ ಕೆಲಸದ ಒತ್ತಡದಲ್ಲಿರುವ ಹಾಗೆ ಅಪ್ಪನ ಮುಖನೂ ನೋಡದ ಹಾಗೆ ರೂಮು ಬೀಗ ಹಾಕಿ ‘ಬಂದೆ ಬಂದೆ ಮಾತಾಡೋಣ’ ಅಂತ ನಡೆದದ್ದು ಆಯ್ತು. ಅಪ್ಪ “ನಿಂತ್ಕಪ ಇಲ್ಲಿ ಅದೆಲ್ಲಿಗೋದರಿ.. ನನ್ ಗಂಡುನ್ ಕೈ ನೋಡಿದರ‌್ಯಾ.. ಏನಿಲ್ಲ ಯತ್ತಿಲ್ಲ ಕುಂತ್ಕ ಹೊಡಿಸಿದ್ದರೆಲ್ಲ..” ಅಂತಂದರು ನನಗೇ ಅಲ್ಲವೇನೊ ಅನ್ನೊ ತರ ಪಂಚೆ ತುದಿ ಕೈಲಿಡಿದು ಸ್ಟೈಲಾಗಿ ಕುಂಟುತ್ತ ಸರ್ಕಲ್ ಬಿಟ್ಟು ಟೌನ್ ಕಡೆಗಿನ ರಸ್ತೆ ದಾಟಿದ. ನನ್ನ ಕೈಯೂತ ಕರಗದೆ ಜೋಮು ಹಿಡಿದು ಉರಿಉರಿ ಉರಿಯುತ್ತಿತ್ತು. ಆ ಉರಿವ ಕೈನ ಇನ್ನೊಂದು ಕೈಲಿ ಹಿಡಿದು ಗಂಗಣ್ಣನ ಮನೆ ಕಡೆ ಅಪ್ಪನ ಹಿಂದೆ ನಡೆದೆ.

ಆ ಗಂಗಣ್ಣ ಬಾಡಿಗೆ ಮನೇಲಿದ್ದ. ಆ ಬಾಡಿಗೆ ಮನೆ ಇದ್ದುದು ನಮ್ಮ ಓಣಿ ಹೊಲದ ಕಡೆಗಿದ್ದ ಸಿಲ್ಕ್ ಫ್ಯಾಕ್ಟರಿ ಹಿಂಭಾಗದ ಚಿಣ್ಣಕೊಪ್ಪಲು ಮಾಳದ ಕೆಳಗಿದ್ದ ನೆಟ್ಟಗಿಲ್ಲದ ಸೊಟ್ಟು ಸೊಟ್ಟಾಗಿದ್ದ ಎರಡು ಬೀದಿಯುಳ್ಳ ಇನ್ನೊಂದು ಒಕ್ಕಲಗೇರಿಯ ಒಕ್ಕಲಿಗರ ಸಣ್ಣಂಚು ಮನೆಯ ಜಗುಲಿ ಅಂಚಿನ ಚಿಕ್ಕ ರೂಮಿನಲ್ಲಿ.

ಅದು ಹೆಸರಿಗಷ್ಟೇ ಒಕ್ಕಲಗೇರಿ. ಆದರೆ ಅಲ್ಲಿ ಇದ್ದದ್ದು ಮೂರು ನಾಲ್ಕು ಕುಳದಂಗೆ ಕುರುಬರು ಅಗಸರು ಲಿಂಗಾಯಿತರು ಮತ್ತು ಅಗಸರ ಮತ್ತೊಂದು ಬಣ ಮಡಿವಾಳಶೆಟ್ಟರು. ಹಂಗೆನೆ ಒಕ್ಕಲಿಗರದು ಒಂದೆರಡು ಕುಳವಿತ್ತು.

ಅಂಥ ಒಕ್ಕಲಗೇರಿಯಲ್ಲಿ ಅವನಿದ್ದ ಮನೆಯೋ ವಯಸ್ಸಾದ ಮದುಕ ಮುದುಕಿಯಂತೆ ಸೂರಿನಲ್ಲಿದ್ದ ಕೈಯಂಚು ಉದುರಿ ಬೀಳುವಂಗೆ ಬಗ್ಗಿ ನಿಂತಿತ್ತು. ಕಲ್ಲು ಚಪ್ಪಡಿಯ ಅಂತಸ್ತಿನ ಎರಡೂ ಕಡೆ ತೊಪ್ಪೆ ಸಾರಿಸಿದ ಜಗುಲಿ. ಅವನಿದ್ದ ರೂಮಿನ ಈಚೆ, ಜಗುಲಿ ಗೋಡೆಗೆ ಒತ್ತರಿಸಿದಂತೆ ಸುತ್ತ ಒಂದಡಿ ಅಳತೆಯ ಆಯತಾಕಾರದ ಹಸೆ ಕಲ್ಲು. ಅದರ ಜೊತೆಗೆ ಒಂದು ಗುಂಡುಕಲ್ಲೂ ಇತ್ತು. ಗಂಗ ಆ ಗುಂಡುಕಲ್ಲಿನಿಂದ ಹಸೆಕಲ್ಲಿನ ಮೇಲೆ ಕಾಯಿ ಟಿಮೊಟೊ ಈರುಳ್ಳಿ ಕೊತ್ತಂಬರಿಸೊಪ್ಪು ಸುಂಟಿ ಬೆಳ್ಳುಳ್ಳಿ ಮಿಕ್ಸ್ ಮಾಡಿ ನೀರು ಚಿಮುಕಿಸಿ ಮಸಾಲೆ ಅರೆದುಕೊಳ್ಳುತ್ತಿದ್ದುದು ಆ ಬೀದಿಯ ಜನ ನೋಡಿದ್ದುಂಟು. ಅವನು ಮಸಾಲೆ ಅರೆಯುವುದನ್ನು ನೋಡುತ್ತಿದ್ದರೆ ಎಲ್ಲರಿಗೂ ನಗು ಬರುತ್ತಿತ್ತೇನೊ.. ಅಂತೂ ನಗಾಡುತ್ತಿದ್ದರು. ಅದು ಪಂಚಾಯ್ತಿ ಕಟ್ಟೆಯಲ್ಲಿ, ಪೆಟ್ಟಿಗೆ ಅಂಗಡಿಯಲ್ಲಿ, ನೀರು ಸೇದುವ ಬಾವಿಕಟ್ಟೆಯಲ್ಲಿ, ಇಸ್ಪೀಟು ಆಡುತ್ತಿದ್ದ ರಾಮಂದಿರದ ಪಡಸಾಲೆಯಲ್ಲಿ, ಮನೆ ಮುಂದೆ ನಾಕಾರು ಚೇರು ಹಾಕಿಕೊಂಡು ಒಂದಿಬ್ಬರನ್ನು ಕೂರಿಸಿಕೊಂಡು ಪೇಪರ್ ಓದುತ್ತ ರಾಜಕೀಯ ಅದೂ ಇದು ಮಾತಾಡುತ್ತಾ ಕುಂತಿದ್ದ ಕುಂಟ ಸಿದ್ದಪ್ಪನ ಅಂಗಳ ಮತ್ತು ಊರಿನ ಜನರ ಮುಂದೆ ಜಗಜ್ಜಾಹೀರಾಗುತ್ತಿತ್ತು. ಕುಂಟ ಸಿದ್ದಪ್ಪನಂತೂ ಇಡೀ ಬೀದಿಗೆ ಕೇಳುವಂತೆ ಗಂಗಣ್ಣನ ಬಗ್ಗೆ ನೆನೆದು, ಗಂಗಣ್ಣನ ಬಗ್ಗೆನೆ ಅಂತಲ್ಲ ಎಲ್ಲ ವಿಚಾರಕ್ಕು ಜೋರಾಗಿ ಅಂಗುಳು ಹರಿದು ಹೋಗುವ ಹಾಗೆ ಗಹಗಹಿಸಿ ಹಹ್ಹಹ್ಹಹ್ಹಹ್ಹಹ ಅಂತ ನಗುತ್ತಿದ್ದುದು ರೂಢಿಯಾಗಿ ಅದು ಸಿದ್ದಪ್ಪನ ನಗುವೇ ಅಂತ ಗುರುತು ಹಿಡಿಯುವಷ್ಟು ಫೇಮಸ್ಸಾಗಿತ್ತು.

ಊರೊಳಗೊ ಎದುರಿಗೊ ತನ್ನ ಬಗ್ಗೆ ಈತರ ಗೇಲಿ ಮಾಡುವುದು ಗಂಗಣ್ಣನಿಗೆ ಗೊತ್ತಿತ್ತೊ ಏನೊ.. ಅಥವ ಗೊತ್ತಿದ್ದರು ಇದ್ಯಾವುದಕ್ಕು ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿದ್ದುದು ಗಂಗಣ್ಣನನ್ನು ಬಲ್ಲವರಿಗೆ ಗೊತ್ತು.

ಆಗ ಹಾಲು ಮಾರುವ ಲಿಂಗಾಯಿತರ ಅಮ್ಮಣಪ್ಪ ಸಿಲ್ಕ್ ಫ್ಯಾಕ್ಟರಿಗೆ ಹೊಗ್ತಿದ್ದ ಒಕ್ಕಲಿಗರ ಚೌಡಪ್ಪ ಗಂಗಣ್ಣನ ಮನೆ ಮುಂದಕ್ಕೆ ಬಂದು ಜಗುಲಿಲಿ ಕುಂತು ಬೀಡಿ ಕಚ್ಚಿ ಸೇದುತ್ತಾ “ಏನಪ್ಪ ಗಂಗ ಮಸಾಲ ಗಿಸಾಲ ಜೋರಾಗದ. ಮಾಂಸಗೀಂಸ ಜೋರು ಅನ್ಸುತ್ತಾ” ಅಂದರೆ “ಬನ್ನಿ ಇವ್ರೆ ಯಾವ್ ಮಾಂಸನು ಇಲ್ಲ.. ಮಾಂಸ ತರೊಕೆ ದುಡ್ಡು ಬ್ಯಾಡ್ವ.. ನಾವ್ ತಕ್ಕಳ ಸಂಬ್ಳದಲ್ಲಿ ಏನ್ ಮಾಡದೇಳಿ” ಅಂತ ಮುಲುಗುಟ್ಟುತ್ತ ಮಾತಾಡೋನು. ಆ ಅಮ್ಮಣಪ್ಪ ಚೌಡಪ್ಪನ ಮಾತು ಅಲ್ಲಿಗೇ ನಿಲ್ಲದೆ “ಅಲ್ಲಪ್ಪ ಕೈಯಲ್ಲಿ ಕೆಲ್ಸ ಅಂತ ಒಂದದ ಮದ್ವಗಿದ್ವ ಮಾಡ್ಕಂಡು ಸಂಸಾರ ಕಟ್ಕಂಡು ತಳ ಊರದ್ಬುಟ್ಟು ಇದೇನ ನಿನ್ ಕತ” ಅಂದರೆ “ಅಯ್ಯೊ ಬಿಡಿ ಅದೆಲ್ಲ ಮುಗ್ದೋದ್ ಕತೆ. ಅದೆಲ್ಲ ಯಾಕೆ?” ಅಂತ ಮಾತು ಮರೆಸಲೊ ಅಡಿಗೆ ಮಾಡಲೊ ಯಾವುದ್ಯಾವುದೊ ನೆವದ ಮಾತಾಡುತ್ತ ಒಳ ಹೋದರೆ ಮುಗಿತು. ಕುಂತು ಮಾತಾಡುತ್ತಿದ್ದವರು ಎದ್ದು ಹೋಗುವ ತನಕ ಹೊರಗೆ ಬರುವ ಮಾತೇ ಇಲ್ಲ.

                       --------

ನೆನ್ನೆ ಸ್ಕೂಲಲ್ಲಿ ಸೋಸಲೆ ಮೇಷ್ಟ್ರು ಹೊಡೆದು ಒಂಟಿ ಕಾಲಲ್ಲಿ ನಿಲ್ಲಿಸಿದ್ದು ನೋಡಿದ್ದ ಗಂಗಣ್ಣ ಅಯ್ಯೋ ಪಾಪ ಅಂತ ಅಂದಿದ್ದು ಅಪ್ಪನಿಗೆ ಹೇಳಿರದೆ ಅಪ್ಪನ ಹಿಂದೆ ಬಂದಾಗಿತ್ತು. ಈಗ ಹೇಳಿದರೆ ಅಪ್ಪನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಅಂತ ಸುಮ್ಮಬಿರುವಾಗ “ಗಂಗ.. ಯೋಯ್ ಗಂಗಣ್ಣ” ಅಂತ ಕೂಗಿದ. ಗಂಗಣ್ಣ ಒಳಗಿಂದಲೇ “ಯಾರಪ್ಪ.. ನಾಳ ಬನ್ನಿ ಪೋಸ್ಟಾಫಿಸ್ಗೆ” ಅಂದ. ಅಪ್ಪ “ಅಯ್ ನಿನ್ ಪೋಸ್ಟಾಪಿಸ್ ಮನ ಹಾಳಾಯ್ತು ಬಾಯಿಲ್ಲಿ” ಅಂದ. ಅಪ್ಪನ ಗದರಿದ ದನಿ ಕೇಳಿದ ಗಂಗಣ್ಣ “ಯಾರಪ್ಪ ಹಿಂಗ್ ಮಾತಾಡದು.. ಏನಪ್ಪ.. ಏನ್ ಬೇಕು” ಅಂತ ಮಾತಾಡುತ್ತ ಚಿಕ್ಕ ಬಾಗಿಲಿನಲ್ಲಿ ತಲೆ ಬಗ್ಗಿಸಿ ಬಂದು ಜಗುಲಿಲಿ ನಿಂತು “ಓ ಗಾಡಿ ಮಾದನ.. ಏನು.. ಏ ಏನಪ್ಪ ಕೈಯಿಡ್ಕಂಡಿಯಾ ಏನಾಯ್ತು” ಅಂತ ಕೇಳಿದ. ಅಪ್ಪ ಮತ್ತೆ ಗದರಿ ಸ್ಕೂಲಲ್ಲಿ ಆದದ್ದ ಕೇಳಿದ. ಗಂಗ “ಏ ಮಾದಯ್ಯ ಪಾಪ ನಾನೆ ಮೇಷ್ಟ್ರಿಗೇಳಿದೆ ಕಣಯ್ಯ.. ಪಾಪ ಹುಡುಗ್ರು ಏನ್ಮಾಡ್ತವೆ ಅಂತ ಹೇಳ್ದೆ ಕಣಯ್ಯ.. ನಿನ್ ಮಗುನ್ದು ಏನು ತಪ್ಪಿಲ್ಲ.. ಹುಡುಗ್ರಲ್ವ ಏನ್ ಮಾಡೊಕಾಗುತ್ತೆ. ಆ ಚೌಡಮ್ಮ ಇದಾರಲ್ಲ ಸುಮ್ನೆ ಬೆದರಿಸೋಕೆ ಅಂತ ಹೇಳಿದಾರೆ. ಆ ಮೇಷ್ಟ್ರು ಒಂಟಿಕಾಲ್ಲಿ ನಿಲ್ಸಿ ಹೊಡ್ದಿದಾರೆ. ನಿಮ್ ಸಿದ್ದಪ್ಪೋರು ಅಲ್ಲೆ ಇದ್ರು ಕಣಯ್ಯ.. ಅವ್ರು ಸುಮ್ನೆ ಕುಂತಿದ್ರು. ಈಗಂದು ಏನು ಪ್ರಯೋಜನ ಆಸ್ಪತ್ರೆಗೆ ತೋರ‌್ಸು ಹೋಗಿ” ಅಂದ. ಅಪ್ಪ ಗಂಗಣ್ಣನ ಮಾತಿಗೆ ಮುರು ಮಾತಾಡದೆ ಕುಂಟು ಸಿದ್ದಪ್ಪನನ್ನು ಬೈಯುತ್ತ ಹಿಂತಿರುಗುವಾಗ ಸೂರ್ಯ ಮುಳುಗಿ ಕತ್ತಲು ಕವಿಕೊಳ್ತಿತ್ತು.

(ಮುಂದುವರಿಯುವುದು)

‌-ಎಂ.ಜವರಾಜ್


[ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. “ಕತ್ತಲ ಹೂವು” (ನೀಳ್ಗತೆ) ಪ್ರಕಟಣೆಗೆ ಸಿದ್ದಗೊಳ್ಖುತ್ತಿದೆ. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಪ್ರಸ್ತುತ “ಪೋಸ್ಟ್ ಮ್ಯಾನ್ ಗಂಗಣ್ಣ” ಎಂಬ ನೀಳ್ಗತೆ ಮುಗ್ಧ ಪೋಸ್ಟ್ ಮ್ಯಾನ್ ಒಬ್ಬನ ಜೀವನ ಚಿತ್ರವನ್ನು ಹೇಳುವ ಒಂದು ಕುತೂಹಲಕಾರಿ ಕಥೆಯಾಗಿದೆ]


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x