ನಾಡು ನುಡಿ
ಮಣ್ಣ ಪ್ರತಿಯ ಕಣದಿ ಪ್ರೇಮ ಭಾವ
ದೇವನು ನೋಡಿಹ ಬೆರಗಲಿ ಈ ಸ್ವಭಾವ
ಹಳದಿ ಕೆಂಪಿನ ಅಂದಕೆ ಸಮವಲ್ಲ ಹೊನ್ನ ಭಾರ
ನಾಡ ದೇವಿಗೆ ಹೊನ್ನುಡಿಯ ಸಿಂಗಾರ.
ನಾಡ ಹೃದಯ ತಬ್ಬಿರಲು ವಚನ ಗಾನ
ಬಾಳ ಹಾದಿಗೆ ಬೆಳಕ ಚೆಲ್ಲಿದೆ ಸುಗಾನ
ಕೀರ್ತನೆಯಲಿ ತುಂಬಿರಲು ಭಕ್ತಿಯ ರಸ ಸಾರ
ತೊಳೆದಿಹಳು ಕಾವೇರಿ ಕಲ್ಮಷಗಳ ಭಾರ.
ಇತಿಹಾಸ ಮರೆಯದು ನಾಡ ಚರಿತೆಯ
ಬರಿಯ ಒನಕೆ ಬರೆದ ಸಾಹಸ ಗಾಥೆಯ
ಕದಂಬರು ಪೋಣಿಸಿದ ನುಡಿಯ ಸಿರಿಯ
ಜಲವು ಹಸಿರಿಗೊಲಿದ ಸೊಬಗ ರಾಜವೈಖರಿಯ.
ಜ್ಞಾನದಿ ವಿಜ್ಞಾನವಿಂದು ಅರಿತು ಬೆರೆತಿದೆ
ಪ್ರಗತಿಯ ಪಥದಿ ನಾಡನು ನಡೆಸಿದೆ
ಭಾವಗಳ ಬೆಸೆವ ಭಾಷೆ ಒಂದೇ ಆಗಿದೆ
ಅಮ್ಮನ ನುಡಿಯ ಸಕ್ಕರೆಯೇ ಕನ್ನಡವಾಗಿದೆ.
-ನಿರಂಜನ ಕೇಶವ ನಾಯಕ
ನಾವು ಸೋಲಬೇಕು…..
ಸೋತ ಕಂಗಳ ಕೆಳಗಿಳಿಸಿ ತಲೆಯ
ಮುಖದಿ ನಗುವ ಅಡಗಿಸಿ
ಮಾತುಗಳಲ್ಲೇ ಕಲ್ಪನೆ ಹುಟ್ಟಿಸಿ
ಬದುಕುವ ಆಸೆಗೆ ನಾವು ಸೋಲಬೇಕು
ಅಳುವ ಕಂದನ ಎತ್ತಿ ಹೆಗಲಲ್ಲಿಟ್ಟು
ಹಸಿವೆಯ ಅಳುವಿಗೆ ತುತ್ತನ್ನೀವ ಅಮ್ಮ
ತಾನು ಉಪವಾಸವಿರೆ ಅದು ದೇವರಿಗೆ
ಎಂದು ಸುಮ್ಮನಾಗುವ ಮನಸಿಗೆ ಸೋಲಬೇಕು
ಕಲಿತಿರದ ವಿದ್ಯೆ ಬಳಸಿ ಕಟ್ಟುವ ಗೂಡಿಗೆ
ಪ್ರೀತಿಯರಸಿ ಹೊರಟ ಹಕ್ಕಿಗೆ
ಸೋಲರಿಯದ ದಣಿವಿಗೆ ಹಾಗೆ
ಜಗ ಗೆದ್ದ ಖುಷಿಗೆ ನಾವು ಸೋಲಬೇಕು
ಮುಗ್ಧ ಮಗುವಿನ ನಗುವಿಗೆ
ಪ್ರೀತಿ ಕೊಟ್ಟ ಒಡಲಿಗೆ
ಬೆವರು ಗೆದ್ದ ಉಸಿರಿಗೆ
ಸೋಲರಿಯದ ಬದುಕಿಗೆ ಸೋಲಬೇಕು
ಗಾಳಿ ಗಗನ ಮೋಡಕೆ
ನದಿ ಜಲಧಿಯ ನೋಟಕೆ
ನಿಕಟತೆಯ ಬೆಳಕಿಗೆ
ದಿನದಿನದ ನಂಟಿಗೆ ಸೋಲಬೇಕು.
-ನಾಗರಾಜ ಬಿ.ನಾಯ್ಕ
ಹೆಣ್ಣೇ ನೀನು ನೀನಾಗಿರು
ಉಪ್ಪು ವಾರಿಧಿಯ
ಮನೆಯಲ್ಲಿ
ಹಾಯಾಗಿರುವ
ಬಣ್ಣದ ಮೀನಾಗಿರು
ನೊರೆ ಹಾಲಲ್ಲಿ
ಬರುವ ಕೆನೆಯಾಗಿ
ಮೊಸರಾಗಿ
ಬೆಣ್ಣೆಯಾಗಿ ತರುವಾಯ
ನೀ ಘೃತವಾಗಿರು
ಬಣ್ಣ ಬಣ್ಣದ
ಹೂಗಳಿಗೆ
ಕಥೆಯ ಹೇಳಿ
ಹೂಗಳ ಬಣ್ಣ ಪಡೆದ
ಸುಂದರ ಚಿಟ್ಟೆಯಾಗಿರು
ಭೂಮಿಯಲ್ಲಿ ಅಡಗಿದ
ಬೀಜ ಮೊಳೆತು
ಸಸಿಯಾಗುವ
ಅಚ್ಚರಿಯೇ ನೀನು
ತಂಪು ನೀಡುವ
ಹಸಿರು ಮರವಾಗಿರು
ಜಗವ ನಡೆಸುವ
ಶಕ್ತಿಯೇ ನೀನು
ಪ್ರೇಮಜೇನ
ಮಾಧುರ್ಯ ನೀನು
ಸದಾ ಪ್ರೇಮಸುಧೆಯಾಗಿರು
ಹೆಣ್ಣೇ ನೀನು ನೀನಾಗಿರು!
ಪ್ರೆಮಸೌಧಕೆ ಹುಣ್ಣಾಗದೇ
ಜಗದ ಕಣ್ಣಾಗಿರು!
-ವಿದ್ಯಾ ಗಾಯತ್ರಿ ಜೋಶಿ
“ಮುನ್ನರಿವಿಲ್ಲದ ಬದುಕು”
ಕಚ್ಚುವ ಸೊಳ್ಳೆಗೇನು ಗೊತ್ತು
ನಾನು ಹಲ್ಲಿಗೆ ಆಹಾರವಾಗುವೆನೆಂದು
ಕೋಳಿ ಮರಿಗೇನು ತಿಳಿದಿತ್ತು
ನನ್ನನ್ನು ಗಿಡುಗ ತಿನ್ನುವುದೆಂದು||
ಮೇಯುವ ಮೇಕೆಗೆ ಗೊತ್ತಿತ್ತೇನು
ನನ್ನನ್ನು ಯಾವ ಗುಡಿಗೆ ಬಲಿ ಕೊಡುವರೆಂದು
ಈಜುವ ಕಪ್ಪೆಗೆ ಹೊಳಿದಿತ್ತೇನು
ತಾನು ಹಾವಿಗೆ ಆಹಾರವಾಗುವೆನೆಂದು||
ಬೆಳೆಯುವ ವೃಕ್ಷಕ್ಕೆ ತಿಳಿದಿತ್ತೇನು
ತನ್ನ ಫಲ ಅದಾರು ಸೇವಿಸುವರೆಂದು
ಬೆಳೆವ ಪೈರಿಗೆ ಅರಿವಿತ್ತೇನು
ಅನ್ನವಾಗಿ ಯಾರ ಹಸಿವು ನೀಗಿಸುವೆನೆಂದು||
ಹರಿವ ನೀರಿಗೆ ತಿಳಿದಿತ್ತೇನು
ನಾ ಯಾವ ನದಿಗೆ ಸೇರುವೆನೆಂದು
ಬೀಸುವ ವಾಯುಗೆ ಗೊತ್ತಿತ್ತೇನು
ನಾ ಯಾವ ದಿಕ್ಕಿನ ಕಡೆಗೆ ಚಲಿಸುವೆನೆಂದು||
ಬೀಳುವ ಮಳೆ ಬಿಸಿಲಿಗೆ ಅರಿವಿತ್ತೇನು
ನಾ ಯಾರ ಮೇಲೆ ಬೀಳುವೆನೆಂದು
ಪುಷ್ಪ ಅರಳಿಸಿದ ಗಿಡಕ್ಕೇನು ಗೊತ್ತು
ತಾನು ಯಾರ ಮುಡಿಗೆ ಹೂವಾಗುವೆ ಎಂದು||
ಯಾವುದರ ಬದುಕು ಯಾರಿಗೆ ಗೊತ್ತು
ತನ್ನ ಜೀವನ ಬೇರೆವರಿಗೆ ದಾನವೆಂದು
ಬದುಕು ಒಂದು ಊಹಿಸಲಾಗದ ಕ್ಷಣಗಳು
ಶಾಶ್ವತವಿಲ್ಲದ ಅನಿರೀಕ್ಷಿತ ಜೀವಗಳು||
-ಚಲುವೇಗೌಡ ಡಿ ಎಸ್
“ಉಯ್ಯೋ ಉಯ್ಯೋ ಮಳೆರಾಯ”
ನೆತ್ತಿಯು ಸುಡುತಾದೆ
ಅಂಗಾಲು ಉರಿತಾದೆ ಮಳೆರಾಯ
ಬೆಳೆಯು ಬೆಳೆಯಾಲಿ-
ಭುವಿಯು ಉಳಿಯಾಲಿ ಮಳೆರಾಯ
ಸಂಕಾಟ ಕಳೆಯಾಲಿ-
ಸಂಪೂಗ ಅರಳಾಲಿ ಮಳೆರಾಯ
ಸುಳ್ಳೆಲ್ಲ ಅಳಿಯಾಲಿ-
ಸತ್ಯಾವೇ ಗೆಲ್ಲಾಲಿ ಮಳೆರಾಯ
ಮಣಿಯಮ್ಮ ತಂಪು ತರಲಿ-
ವೀರ ಮಕ್ಕಳ ಖೇಲು ಕುಣಿಯಾಲಿ ಮಳೆರಾಯ
ಹೊಂಬಾಳೆ ಹೊಡೆಯಾಲಿ-
ಭೂಮ್ತಾಯಿ ನಗಾಲಿ ಮಳೆರಾಯ
ಕೆಟ್ಟ ಕಾಲ ಹೋಗಿ-
ಒಳ್ಳೇ ಕಾಲ ಬರಲಿ ಮಳೆರಾಯ
-ಗೋಳೂರ ನಾರಾಯಣಸ್ವಾಮಿ