ನಮ್ಮಲ್ಲೊಂದು ವಿಚಿತ್ರವಾದ ಆದರೆ ಎಲ್ಲರೂ ಒಪ್ಪಿ ಆಚರಿಸುವ ನಡವಳಿಕೆಯ ಲೋಪವಿದೆ. ಇದು ಎಲ್ಲರ ಗಮನಕೂ ಬಂದಿರಬಹುದು. ಆದರೆ ಇದನ್ನು ಕುರಿತು ಬರೆದವರು ಕಡಮೆ. ಗೊತ್ತಿದ್ದರೆ ನೀವೇ ತಿಳಿಸಬೇಕು. ಯಾರನ್ನಾದರೂ ಭೇಟಿಯಾದಾಗ, ಲೋಕಾಭಿರಾಮ ಮಾತಾಡುವಾಗ, ಎದುರಿನವರು ಹೇಳುವುದನ್ನು ಕೇಳಿಸಿಕೊಳ್ಳುವಾಗ ಮತ್ತು ನಮ್ಮೊಂದಿಗೆ ತಮ್ಮ ಅನುಭವವನ್ನು ಹಂಚಿಕೊಳ್ಳುವಾಗ ನಾವು ಮಾಡುವ ಅತಿ ದುಷ್ಟವರ್ತನೆಯೆಂದರೆ ಪೂರ್ತ ಕೇಳಿಸಿಕೊಂಡು, ಪ್ರತಿಕ್ರಿಯಿಸುವ ಮುನ್ನವೇ ಅಂಥದೇ ಪ್ರಸಂಗ-ಪರಿಪರಿ ಪರಸಂಗಗಳನ್ನು ನಾವೇ ಮುಂದೊಡಗಿ ಹೇಳಲು ಉತ್ಸುಕರಾಗುವುದು; ಪೂರ್ತ ಕೇಳಿಸಿಕೊಳ್ಳದೇ ಆ ಸಂಬಂಧದ ನಮ್ಮ ಅನುಭವ ಮತ್ತು ನೆನಪುಗಳನ್ನು ಚೆಲ್ಲಿ ರಂಪ ಮಾಡುವುದು. ಇದು ಸದ್ವರ್ತನೆಯಲ್ಲ; ಜೊತೆಗೆ ಪ್ರಬುದ್ಧ ನಡವಳಿಕೆಯೂ ಅಲ್ಲ. ಇದೊಂದು ಶುದ್ಧ ಸೈಕಾಲಜಿ ವಿಷಯ. ನೇರವಾಗಿ ನಮ್ಮ ವರ್ತನೆಯನ್ನು ಆಧರಿಸಿರುವಂಥದು. ಆ ಮೂಲಕ ನಾವೇನು ಎಂಬುದನ್ನು ಸಾಬೀತು ಮಾಡುವಂಥದು! ಈ ವಿಚಾರದಲ್ಲಿ ವರ್ಗ, ಜಾತಿ, ಲಿಂಗ, ವಿದ್ಯೆ, ಅಂತಸ್ತುಗಳ ಭೇದವಿಲ್ಲದೇ ನಾವೆಲ್ಲರೂ ಸರಿ ಮಾಡಿಕೊಳ್ಳಬಹುದಾದ ತಪ್ಪಿದು. ಇದಕ್ಕೆ ಬೇಕಾಗಿರುವುದು ಸ್ವಅರಿವು; ಸ್ವಂತ ಕತೆ ಚಿಂತನೆಯಲ್ಲ!
ಯಾವುದೇ ಮಾತು-ಕತೆಗಳು ಇಷ್ಟದಿಂದ ಕೂಡಿದ್ದರೆ ಆಗ ಅದು ಮಾನಸೋಲ್ಲಾಸ. ಇಲ್ಲದಿದ್ದರೆ ಮನಸಿಗೂ ಹೃದಯಕೂ ಸಹಿಸಲಸಾಧ್ಯ ಆಯಾಸ! ಕೆಲವೊಮ್ಮೆ ಹೀಗೂ ಆಗುವುದು. ಇಷ್ಟವಿಲ್ಲದಿದ್ದರೂ ಕಷ್ಟಪಟ್ಟು ಸಹಿಸಿಕೊಳ್ಳುವಂತಾಗುವುದು. ನಮ್ಮ ಅಧಿಕಾರಿಗಳು ಮಾತಾಡುವಾಗ, ಗುರು ಹಿರಿಯರು ಬುದ್ಧಿವಾದ ಹೇಳುವಾಗ, ಅಷ್ಟೇಕೆ? ನಮ್ಮ ಆತ್ಮೀಯರೇ ಹಿತೋಪದೇಶ ಮಾಡುವಾಗ ಅಹುದಹುದೆಂದು ಗೋಣಾಡಿಸಿ, ನಸು ನಕ್ಕು, ಆಗಲಿ ಮಹಾಪ್ರಸಾದವೆಂದು ಜಾಗ ಖಾಲಿ ಮಾಡಬೇಕು. ಏಕೆಂದರೆ ಮಾತು ಕೆಲಸವಾಗಬೇಕು; ಮಾತೇ ಕೆಲಸವಾಗಬಾರದು. ವ್ಯವಸ್ಥೆಯೇ ಹಾಗಿದೆ. ತಮ್ಮ ಮೇಲಿನವರು ಹೇಳಿದ್ದನ್ನು ತಮ್ಮ ಕೆಳಗಿನವರಿಗೆ ಮುಟ್ಟಿಸುತ್ತಾ, ಅವರಿಗಿಂತಲೂ ಇವರೇ ಅರುಜೆಂಟು ಮಾಡುತ್ತಾ, ತಾವೇ ಮಾಡಿದೆವೆಂಬ ಕೀರ್ತಿ ಪತಾಕೆ ಹಾರಿಸುತ್ತಾ ಒಟ್ಟಿನಲ್ಲಿ ಮಾತಾಡುವ ಕಾಯಕದಲ್ಲಿ ತಾವೂ ದಣಿದು, ತಮ್ಮ ಸುತ್ತಲಿನವರನ್ನೂ ದಣಿಸಿ, ಕೊನೆಗೆ ಮರಣಿಸುತ್ತಾರೆ. ಇಂಥವರ ಬಗ್ಗೆ ನಾನು ಹೇಳುತ್ತಿಲ್ಲ. ಇದು ಲೋಕಸತ್ಯ. ಅಂಗೈ ಹುಣ್ಣಿಗೆ ಕನ್ನಡಿಯೇಕೆ?
‘ಕೆಲವರು ಲಿಜ಼ನಿಂಗ್ ಕೆಪಾಸಿಟಿಯ ಬಗ್ಗೆ ಕೇವಲ ಮಾತಾಡುತ್ತಿರುತ್ತಾರೆ’ ಎಂದು ವಿಡಂಬನೆಯ ಮಾತೊಂದನ್ನು ಹೊಸೆದಿದ್ದೆ. ಅಂದರೆ ಆಲಿಸುವಿಕೆಯ ಸಾಮರ್ಥ್ಯವನ್ನು ಕುರಿತು ಮಾತಾಡುವುದು ಬೇರೆ; ಆ ಸಾಮರ್ಥ್ಯವನ್ನು ಹೊಂದುವುದು ಬೇರೆ. ಅದರಲ್ಲೂ ನಮ್ಮಂಥ ಪಾಠ ಮಾಡುವ ಅಧ್ಯಾಪಕರು ಮಾತಾಡಿ, ಮಾತಾಡಿ ಅಭ್ಯಾಸವಾದವರು ಎಲ್ಲೆಂದರಲ್ಲಿ ತಮ್ಮ ಲೆಕ್ಚರಿಂಗ್ ಶುರು ಮಾಡಿ ಬಿಡುವರು. ‘ತರಗತಿಗಳಲ್ಲಿ ಪಾಠ ಮಾಡಿದ್ದಕ್ಕಿಂತ ಹೊರಗಡೆ ಮಾತಾಡಿದ್ದೇ ಜಾಸ್ತಿ’ ಎಂತಲೂ ಇನ್ನೊಂದು ಸಾರಿ ನಮ್ಮನ್ನು ನಾವೇ ವಿಡಂಬಿಸಿಕೊಳ್ಳಬಹುದು. ನಮ್ಮಂಥವರಿಗೆ ಇನ್ನೊಬ್ಬರ ಮಾತನ್ನು ಕೇಳುವ ವ್ಯವಧಾನವೇ ಇರುವುದಿಲ್ಲ. ಇನ್ನು ಹಲವರಿದ್ದಾರೆ: ಎದುರಿನವರು ಮಾತಾಡುವ ವಿಷಯವನ್ನು ಕುರಿತ ತಮ್ಮ ಅನುಭವ ಮತ್ತು ಹಿತನುಡಿಗಳನ್ನು ಒದರಲು ಕಾಯುತ್ತಿರುತ್ತಾರೆಯೇ ವಿನಾ ಏನು ಹೇಳುತ್ತಿದ್ದಾರೆಂಬುದನ್ನು ಅಸಲಿಗೆ ಆಲಿಸುವುದೇ ಇಲ್ಲ. ನಮಗೆ ಅಭಿವ್ಯಕ್ತಿಸಬೇಕೆಂಬ ತಹತಹ. ನಮ್ಮ ಮಾತನ್ನು ಇನ್ನೊಬ್ಬರು ಕೇಳಬೇಕೆಂಬ ಮತ್ತು ಕೇಳಲೇಬೇಕೆಂಬ ಕೆಟ್ಟ ಹಟ. ಯಾರೂ ಕೇಳದಿದ್ದರೂ ‘ನಮ್ಮದೊಂದಿರಲಿ’ ಅಂತ ನಡುವೆ ಬಾಯಿ ಹಾಕಿ ಸಂವಾದವನ್ನು ವಿವಾದ ಮಾಡುವ ಮನೋರೋಗ. ‘ಅವನೇನು ಸಾಚಾನಾ?’ ಎಂದು ಶುರುವಾಗುವ ಚರ್ಚೆಯು ಕೊನೆಗೆ ‘ನೀನೇನು ಸಾಚಾನಾ!?’ ಎಂಬಲ್ಲಿಗೆ ಬಂದು ಮುಟ್ಟಿ ಮನುಷ್ಯ ಸಂಬಂಧಗಳಿಗೇ ಗುಡ್‌ಬೈ ಹೇಳಿ ಬಿಡುವಂಥ ನೆಗಟೀವ ನೋವು. ಹಿತಮಿತವಾದ ಭಾವ ಸ್ವಭಾವಗಳ ಅರ್ಥಪೂರ್ಣ ವಿನಿಮಯವೆಂಬ ‘ಎಳನೀರು ಕುಡಿಯಿರಿ’ ಎಂದರೆ ಗಲಾಟೆ ಗದ್ದಲಗಳ ನಿರರ್ಥಕ ಅಹಮನ್ನು ಹೊರಗೆಸೆದು, ಸೌಹಾರ್ದಕೇ ‘ಎಳ್ಳೂನೀರು ಬಿಡುವವರೇ’ ಹೆಚ್ಚು. ಪಡೆವ ಶಿಕ್ಷಣದಿಂದ ಜ್ಞಾನವನ್ನೂ ಜ್ಞಾನದಿಂದ ವಿವೇಕವನ್ನೂ ಹೊಂದದ ನಮ್ಮ ಚಿತ್ತವೃತ್ತಿಯ ಅಸ್ವಸ್ಥತೆಯೇ ಇದಕ್ಕೆ ಮೂಲ. ಏನು ಮತ್ತು ಎಷ್ಟು ಮಾತನಾಡಬೇಕೆಂಬುದು ಜ್ಞಾನವಾದರೆ ಏನನ್ನು ಮತ್ತು ಎಲ್ಲಿ ಮಾತನಾಡಬಾರದೆಂಬುದು ವಿವೇಕ. ಇದರಾಚೆಗೆ ಇನ್ನೊಂದಿದೆ. ಅದು ವಿವೇಚನೆ. ‘ನಿಂಗಿದು ಬೇಕಿತ್ತಾ ಮಗನೇ?’ ಎಂದು ಅಪರಾಧೀ ಭಾವ ಕಾಡದಂತೆ ನಮ್ಮನ್ನು ಸದಾ ಪೊರೆಯುವ ಹೃದಯದ ಬೆಳಕು ಇದು.
‘ಹೀಗೇಕಾಗುವುದು?’ ಇದನ್ನು ನನಗೆ ನಾನೇ ಕೇಳಿಕೊಂಡಾಗ: ಇದು ನಮ್ಮ ಅಹಮು. ನಾವೇ ಸಾಕಿಕೊಂಡಿರುವ ವಿಷದ ಹಾವು. ಕಚ್ಚುವುದ ಬಿಟ್ಟರೆ ಬೇರೆ ಗೊತ್ತಿಲ್ಲದ ನಾವು, ಮತ್ತೊಬ್ಬರಿಗೆ ಕಿವಿಯಾಗಬೇಕು; ಬಾಯಾಗಬಾರದು. ಅವರು ಹೇಳವುದನು ಪೂರ್ತ ಕೇಳಿಸಿಕೊಳ್ಳುವ ವ್ಯವಧಾನ ನಮ್ಮಲಿ ಕಡಮೆಯಾಗುವುದಕೆ ಕಾರಣ ನಾವೂ ಅಭಿವ್ಯಕ್ತಿಸಬೇಕೆಂಬ ತುಡಿತ. ಇದು ಮೆಚ್ಚತಕ್ಕದ್ದೆ. ಆದರೆ ಅವರನ್ನು ಸೈಡು ಹೊಡೆದು ಅಲ್ಲ; ಹೀಗಾದರದು ಅವರಿಗೆ ಮಾಡುವ ಅವಮಾನ. ‘ಜಗತ್ತಿನಲಿ ಅಷ್ಟೊಂದು ಜನರಿದ್ದಾರೆ. ಅವರು ಯಾಕೆ ನಮ್ಮನು ಹುಡುಕಿಕೊಂಡು ಬಂದು ಅಲವತ್ತುಕೊಳ್ಳುವರು?’ ಎಂದು ಒಂದು ಕ್ಷಣ ಯೋಚಿಸಿದರೂ ಸಾಕು, ಮಾನವ ಸ್ನೇಹಸಂಬಂಧಗಳ ಬೆಲೆ ಗೊತ್ತಾಗುವುದು. ನಮ್ಮಿಂದ ಏನೋ ಸಾಂತ್ವನ ಬೇಕಾಗಿದೆ, ನಮ್ಮೊಂದಿಗೆ ಅವರು ತಮ್ಮ ಅನಿಸಿಕೆ ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಬಯಸಿದ್ದಾರೆ. ಮಾತು ಮುಗಿಸಿದ ಮೇಲೆ ನನ್ನನ್ನೊಮ್ಮೆ ದೃಷ್ಟಿಸುತ್ತಾರೆ. ‘ನೀವೀಗ ಹೇಳಿ!’ ಎನ್ನುತಾರೆ. ಆಗ ನಮ್ಮ ಸರದಿ. (ಆಗಲೂ ಆಗಬಾರದು ಅವರು ಹೇಳಿದ್ದರ ವರದಿ!!) ಅವರು ಹೇಳಿದ್ದನ್ನೇ ಮತ್ತೆ ರಿಪೀಟಿಸುವುದು ಉತ್ತಮ ಸಂವಾದದ ಲಕ್ಷಣವಲ್ಲ. ಅವರ ಮಾತಿನ ಮರ್ಮವನ್ನು ಗ್ರಹಿಸಿ, ಸಲಹೆ-ಅಭಿಪ್ರಾಯಗಳನ್ನು ಸಂಕ್ಷೇಪಿಸಿ ಆತ್ಮೀಯವಾಗಿ ತಿಳಿ ಹೇಳುವುದು ಹೃದಯವಂತಿಕೆ. ನಮ್ಮ ಬುದ್ಧಿವಂತಿಕೆಯ ಪ್ರದರ್ಶನಕ್ಕೆ ಅದು ಸಂದರ್ಭವಾಗಬಾರದು; ನಾವೇ ಡಾಮಿನೇಟ್ ಆಗಬಾರದು. ಇಬ್ಬರ ನಡುವೆಯೂ ಒಂದು ಆತ್ಮೀಯ ಆವರಣ ಸೃಷ್ಟಿಯಾಗಬೇಕು ನಮ್ಮ ಸಂಭಾಷಣೆಯ ಮೂಲಕವೇ. ಅವರಿಗೆ ಕಿವಿಯಾಗಿ, ಹೃದಯದ ಭಾವವಾಗಿ, ಕರುಳ ಕರುಣೆಯನು ಉಣಬಡಿಸುವುದು ಸಹೃದಯತೆಯ ಸೂಚನ. ನಮ್ಮದೇ ಸ್ವಕಥನಗಳು ವಿಜೃಂಭಿಸಿದಾಗ ‘ಯಾಕಾದರೂ ಇವರಿಗೆ ಹೇಳಲು ಬಂದೆನೋ?’ ಎಂದು ಬೇಸರಿಸಿಕೊಂಡು ಅವರು ಹೊರಟು ಬಿಡುವಂತಿರುತ್ತದೆ. ನನ್ನ ಮಾತಿನ ತಾತ್ಪರ್ಯವಿಷ್ಟೇ: ಹೇಳಲು ಮತ್ತು ಕೇಳಲು ಸಮಯ ಇರಬೇಕು. ಹೇಳುವ ಮತ್ತು ಕೇಳುವ ಮುಂಚೆ ಇದು ಸುಸಮಯವೇ? ಔಚಿತ್ಯಪೂರ್ಣವೇ? ವಿವೇಚಿಸಬೇಕು. ಆಮೇಲೆ ಹೇಳುತ್ತಿರುವ ಅಥವಾ ಹೇಳಿಕೊಳ್ಳುತ್ತಿರುವವರಿಗೆ ಅವಕಾಶ ಕೊಡಬೇಕು. ಅವರೂ ಅಷ್ಟೇ; ಕೇಳಿಸಿಕೊಳ್ಳುವವರ ತಾಳುಮೆ ಪರೀಕ್ಷಿಸದೇ ಅವರು ಹೇಳಲು ಅವಕಾಶ ನೀಡಬೇಕು. ಇದು ಸಂವಾದದ ಲಕ್ಷಣ; ಇಲ್ಲದಿರೇ ವಿವಾದಕೆ ಭಕ್ಷಣ.
ನಿಜ, ಅವರು ಹೇಳುತ್ತಿರುವಂಥ ಘಟನೆ, ಉದಾಹರಣೆಗಳು ನಮಗೂ ಆಗಿರುವುದು ಸತ್ಯವೇ. ಆದರೆ ಸಮಯ ಮತ್ತು ಔಚಿತ್ಯಪ್ರಜ್ಞೆಗಳಿಟ್ಟುಕೊಂಡು ಅವರೊಂದಿಗೆ ಹಂಚಿಕೊಳ್ಳಬೇಕು. ಸುಮ್ಮನೆ ಓತಪ್ರೋತ ತನ್ನದನ್ನೇ ಹೇಳಿಕೊಳ್ಳುತ್ತಾ ವಿಷಯಾಂತರ ಮಾಡಿ, ಕೊನೆಗೆ ಯಾವ ವಿಚಾರ ಮಾತಾಡಲು ಹೊರಟೆವೆಂಬುದನು ಎಲ್ಲರೂ ಮರೆಯುವಂಥ ಪವಾಡ ಕೈಗೊಳ್ಳಬಾರದು. ಕೆಲವು ಸಂದರ್ಭಗಳಲ್ಲಿ ಮಾತಾಡುತ್ತಿರುವವರು ಎಲ್ಲಿಂದ ಎಲ್ಲಿಗೋ ಹಾರಿ, ನೆಗೆದು, ಕೊನೆಗೆ ಎದುರಿರುವವರಿಗೆ ‘ನಾನು ಏನು ಹೇಳುತ್ತಿದ್ದೆ?’ ಎಂದು ಪ್ರಶ್ನಿಸಿ ತಬ್ಬಿಬ್ಬುಗೊಳಿಸಿ ಬಿಡುತ್ತಾರೆ. ಇದರಂಥ ವಿಷಾದ ಇನ್ನೊಂದಿಲ್ಲ. ಹೇಳುವುದಕೂ ಕೇಳುವುದಕೂ ಒಂದು ಸಮಯ ಅಂತ ಇರುತ್ತದೆ. ಈ ವಿಚಾರದಲಿ ನನಗೂ ಇಂಥ ಅನುಭವ ಆಗಿದೆ. ‘ನೀವು ಮುಗಿಸಿ; ಆಮೇಲೆ ಟೈಮು ಮತ್ತು ಮೂಡು ಎರಡೂ ಇದ್ದರೆ ಹಂಚಿಕೊಳ್ಳುವೆ’ ಎಂಬ ವಿನೀತತೆ ನಮ್ಮಲ್ಲಿ ಇಲ್ಲದೇ ಹೋದರೆ ನಮ್ಮಲ್ಲಿ ಉತ್ತಮ ಸಂವಹನ ಗುಣಗಳಿಲ್ಲ ಎಂದೇ ಅರ್ಥ. ಎಲ್ಲರೂ ಮಾತಾಡಬಲ್ಲರು; ಆದರೆ ಕೆಲವರಷ್ಟೇ ಮಾತಿನ ಪರಿಮಳವನ್ನು ಸುತ್ತೆಲ್ಲ ಚೆಲ್ಲಿ ಸುಗಂಧರಾಜ, ಸುಗಂಧರಾಣಿಯರಾಗುವರು. ಇದೊಂದು ಕಲೆ ಮತ್ತು ಕೌಶಲ್ಯ; ಬೇಕು ಸಂಯಮ ಮತ್ತು ಅರಿವಿನೆಚ್ಚರ.
ನನ್ನ ಮಾತನ್ನು ಎಲ್ಲರೂ ಕೇಳುತ್ತಾರೆ ಎಂಬುದು ಶುದ್ಧ ಭ್ರಮೆ; ಎಲ್ಲರೂ ಕೇಳಬೇಕೆಂಬುದು ಅಧಿಕಾರದಹಂಕಾರ. ಅಭಿವ್ಯಕ್ತಿಸುವುದು ಎಷ್ಟು ಮುಖ್ಯವೋ ಸ್ಪಂದಿಸುವುದು ಅದಕಿಂತ ಮುಖ್ಯ. ಇಂದಿನ ವಿದ್ಯುನ್ಮಾನ ಯುಗದಲ್ಲಿ ಎಲ್ಲರೂ ತಂತಮ್ಮ ಅನಿಸಿಕೆಗಳನ್ನು ಒಂದಲ್ಲ ಒಂದು ಮಾಧ್ಯಮದಲ್ಲಿ ಅಭಿವ್ಯಕ್ತಿಸುವವರೇ. ಮಾತು, ಬರೆಹ, ಚಿತ್ರಕಲೆ ಎಲ್ಲವೂ ಅಭಿವ್ಯಕ್ತಿಗಳೇ. ಇವು ಸೃಜನಶೀಲವಾಗಿ ಬಂದರೆ ನಾವು ಪ್ರಬುದ್ಧರು; ಹಸಿಹಸಿಯಾಗಿಯೇ ಕಾರಿದರೆ ಪೆದ್ದರು ಅಷ್ಟೇ. ಈ ವಿಚಾರದಲ್ಲಿ ಹೇಳಬೇಕಾದ ಇನ್ನೊಂದು ಸಂಗತಿಯೆಂದರೆ ಟಾರ್ಗೆಟ್ ಮಾಡುವುದು ಮತ್ತು ಟಾರ್ಗೆಟ್ ಆಗುವುದು. ಯಾರಿಗೋ ತಲಪಲು ಮತ್ತು ತಲಪಿಸಲೆಂದು ಗುರಿ ಇಡುವ ಬಾಣವಿದು. ‘ಸಂಬಂಧಪಟ್ಟವರಿಗೆ ತಲಪುವವರೆಗೂ ಶೇರ್ ಮಾಡಿ’ ಎಂದಂತೆ. ಮನುಷ್ಯರಾಡುವ ಇನ್ನೊಂದು ತೆರನಾದ ಆಟೋಟವಿದು. ನೇರವಾಗಿ ಹೇಳಲು ಸಾಧ್ಯವಾಗದೇ ಹೋದಾಗ ಅಥವಾ ಮುಖಾಮುಖಿ ಎದುರಿಸಲು ಅಂಜಿಕೆಯಾದಾಗ ಇಂಥ ಅಡ್ಡದಾರಿ ಹಿಡಿವ ಕೃತ್ರಿಮತೆ ಕಾಣಿಸುತ್ತದೆ. ಮಾತಲ್ಲಿ ಬಳಸುವ ಪದಗಳು, ಧ್ವನಿಯೇರಿಳಿತ, ಒಂದೆರಡು ಪದಗಳಿಗೆ ಮಾತ್ರ ಒತ್ತುಕೊಟ್ಟು ಉಚ್ಚರಿಸುವುದು, ವಾಕ್ಯದೊಳಗೆ ಮಿಳಿತಗೊಂಡ ವಕ್ರೋಕ್ತಿ……….ಇವೆಲ್ಲಾ ನಾವಾಡುವ ಸ್ಟಂಟುಗಳು; ನಮ್ಮ ಅಸ್ವಸ್ಥಮನಸಿನ ಮತ್ತು ಅಪ್ರಬುದ್ಧ ಚಿಂತನೆಯ ಪಲುಕುಗಳು. ಇದನ್ನು ಆಧುನಿಕ ಸಂವಹನ ಕೌಶಲದಲ್ಲಿ ಜಾಣತನ ಎಂದು ಕರೆದು ಗೌರವಿಸಲಾಗುತ್ತದೆ! ಸೂಕ್ಷ್ಮತೆ ಮತ್ತು ಸಂವೇದನಾಶೀಲತೆಗಳಿರುವ ಯಾರೂ ಹೀಗೆ ಕುಹಕವಾಡುವುದಿಲ್ಲ. ಕೆಲವೊಮ್ಮೆ ಇಂಥ ‘ತಮಾಸೆಗಳೇ ಅಮಾಸೆ’ಗಳಾಗಿ ಜೀವ ಹಿಂಡುತ್ತವೆ; ಅಪಾರ್ಥಗೊಂಡು ವಿರಸಕ್ಕೆ ನಾಂದಿಯಾಗುತ್ತವೆ. ವೇದಿಕೆಯ ಭಾಷಣಗಳಲ್ಲಿ ಇಂಥವು ಹೆಚ್ಚು. ಮಾತಾಡಬೇಕಾದದ್ದೇ ಒಂದಾಗಿ, ಮಾತಾಡಿದ್ದೇ ಇನ್ನೊಂದಾಗಿ, ಈ ಬಿರುಕು ನಮ್ಮಲ್ಲಿ ಅಪರಾಧೀ ಭಾವವನ್ನು ತಂದಿಕ್ಕುವುದಲ್ಲದೇ, ಪರಿಚಿತರೊಡನೆ ಹಂಚಿಕೊಂಡು, ನಾನು ಮಾತಾಡಿದ್ದು ಸರಿಯಾಯಿತೆ? ಎಂದು ಕೇಳುವಂತಾಗುತ್ತದೆ. ಇಂಥ ಗಿಲ್ಟುಗಳೆಂಬ ಹೊಂಡಗಳನ್ನು ನಾವೇ ಸೃಷ್ಟಿಸಿಕೊಂಡು, ನಾವೇ ಅದರಲ್ಲಿ ಬಿದ್ದು ಹೊರಳಾಡುತ್ತೇವೆ. ಆಮೇಲೆ ಹೊಂಡದಲ್ಲಿ ಬಿದ್ದರೂ ಯಾರೂ ಮೇಲೆತ್ತಲಿಲ್ಲ ಎಂದು ನಿಂದಿಸುವುದು ಬೇರೆ! ಇವೆಲ್ಲ ನಾವಾಡುವ ಡ್ರಾಮಾದ ರಿಹರ್ಸಲ್ಲುಗಳು ಎಂದರೂ ತಪ್ಪಾಗದು.
‘ಎಲ್ಲಿದೆ ನಂದನ? ಎಲ್ಲಿದೆ ಬಂಧನ? ಎಲ್ಲಾ ಇದೆಯೋ ನಮ್ಮೊಳಗೆ; ಒಳಗಿನ ತಿಳಿಯನು ಕಲಕದೆ ಇದ್ದರೇ ಅಮೃತದ ಸವಿ ಇದೆ ನಾಲಗೆಗೆ!’ ಎಂದಿಲ್ಲವೇ ಕವಿ ನುಡಿ. ಆದರೂ ನಮ್ಮದು ಹುಚ್ಚು ಖೋಡಿ ವರ್ತನೆ. ತಿಳಿನೀರಿಗೆ ಕಲ್ಲೆಸೆದು ರಾಡಿಯೆಬ್ಬಿಸಿ ಮಜ ನೋಡುವಾಸೆ. ಅವರನೂ ಡಿಸ್ಟರ್ಬಿಸಿ, ನಾವೂ ಡಿಸ್ಟರ್ಬಾಗಿ ಯಾತನೆಯನ್ನೇ ಉಂಡು, ಹೊದ್ದು, ಮಲಗುವ ತನಕ ನೆಮ್ಮದಿ ಇರುವುದಿಲ್ಲ! ವಾಸ್ತವವಾಗಿ ಇಂಥ ವಿಘ್ನಸಂತೋಷಿಗರಿಗೆ ನೆಮ್ಮದಿ ಸಿಗುವುದಿಲ್ಲ ಕೂಡ! ಇಂಥವನ್ನು ಕುರಿತೇ ಖ್ಯಾತಮನೋವಿಜ್ಞಾನಿ ಎರಿಕ್ ಬರ್ನ್ ಎಂಬುವವನು (ಇವನು ಸಿಗ್ಮಂಡ್ ಫ್ರಾಯ್ಡ್ ಮಂಡಿಸಿದ ಮನೋವಿಶ್ಲೇಷಣಾತ್ಮಕ ಸಿದ್ಧಾಂತವನ್ನು ಒಪ್ಪದೇ ತನ್ನದೇ ಹೊಸ ಮಾರ್ಗವನ್ನು ಅನ್ವೇಷಿಸಿದ ಅಧ್ವರ್ಯು) ‘ಗೇಮ್ಸ್ ಪೀಪ್ಲ್ ಪ್ಲೇ’ ಎಂಬ ಪುಸ್ತಕದಲ್ಲಿ ಮನುಷ್ಯರಾಡುವ ಒಳಗೊಂದು ಹೊರಗೊಂದು ಆಟಗಳನ್ನು ವಿಶ್ಲೇಷಿಸಿದ್ದಾನೆ.
‘ಎ’ ಎಂಬುವವರು ‘ಬಿ’ ಎಂಬುವವರಿಗೆ ನಿನ್ನೆಯ ತಮ್ಮ ಬಸ್ ಪ್ರಯಾಣದ ಅನುಭವವನ್ನು ಹೇಳುವಾಗ ಅದನ್ನು ಸ್ವಲ್ಪ ಹೊತ್ತು ಕೇಳಿಸಿಕೊಳ್ಳುವ ನಾಟಕವಾಡಿದ ಬಿ, ತನ್ನ ಗತವೈಭವದ ನೆನಪುಗಳಿಗೆ ಜಾರುತ್ತಾನೆ. ಅಂಥದೇ ಸಿಮಿಲಾರಿಟಿ ಇರುವ ತನ್ನ ಅನುಭವ ಕಥನವನ್ನುಹೇಳಲು ಶುರುವಿಡುತ್ತಾನೆ. ಆಗ ‘ಎ’ ಗೆ ಹೇಗಾಗಬೇಡ? ಕೊನೆಗೆ ಎ ಗೆ ಮಹತ್ವವೇ ಹೊರಟು ಹೋಗುತ್ತದೆ. ‘ಬಿ’ ವಿಜೃಂಭಿಸುತ್ತಾನೆ. ಇನ್ನು ಇವರ ಜೊತೆ ‘ಸಿ’ ಇದ್ದರಂತೂ ಮುಗಿದೇ ಹೋಯಿತು. ಈ ಮೂರರಲ್ಲಿ ಯಾರು ಆಕ್ರಮಿತರೋ, ಗಡಿರೇಖೆ ಮೀರುವ ಮಹಾನ್ ಪ್ರಭೃತಿಗಳಾಗಿದ್ದಾರೋ ಅವರು ಇಡೀ ಸಂವಾದವನ್ನು ನುಂಗಿ ನೀರು ಕುಡಿಯುತ್ತಾರೆ. ಇದು ವರ್ತನಾ ದೋಷ. ಮಾತು ಬಲ್ಲವರು ಮತ್ತು ಸಂವಾದ ನಡೆಸುವ ಯೋಗ್ಯತೆ ಇರುವವರು ಇಂಥವನ್ನೆಲ್ಲ ಸದಾ ಎಚ್ಚರದಲಿದ್ದು ಗಮನಿಸಿಕೊಳ್ಳುವರು. ಎದುರಿರುವವರ ಮಾತಿನ ಲಹರಿ ಮತ್ತು ಉದ್ದೇಶಗಳನ್ನು ಅರಿತ ಮೇಲೆ, ‘ಕತೆ ದೀರ್ಘವಾಗುತ್ತಿದೆ’ ಎನಿಸಿದಾಗ ಒಟ್ಟೂ ಸಾರಾಂಶವನ್ನು ತಾವೇ ಹೇಳಿ, ಇದರ ಧಾಟಿ ಮತ್ತು ಆಶಯಗಳು ನನಗೀಗ ಮನದಟ್ಟಾಗಿದೆ ಎಂದು ಕಣ್ಣಿನಲ್ಲೇ ಖಾತ್ರಿಪಡಿಸುವರು. ಇವರಲಷ್ಟೇ ಇಂಥ ಸೂಕ್ಷ್ಮತೆ ಇದ್ದರೆ ಸಾಲದು; ಹೇಳುತ್ತಿರುವವರೂ ಈಗ ಜಾಗೃತರಾಗಬೇಕು. ‘ನನ್ನ ಕತೆ ಉದ್ದವಾಯಿತು’ ಎಂಬುದನ್ನು ಅರಿಯಬೇಕು. ಇಲ್ಲಿಯ ತನಕ ಕೇಳಿಸಿಕೊಳ್ಳುತ್ತಿದ್ದವರಿಗೆ ಹೇಳಲು ಆಸ್ಪದ ನೀಡಬೇಕು.
‘ನಾವು ಹೀಗೆ ಮಾಡುತ್ತೇವೆಯೇ? ಅರಿತು ನುಡಿವ ಸಂವಹನ ಕೌಶಲ್ಯ ನಮ್ಮಲ್ಲಿದೆಯೇ? ಅಥವಾ ಇಲ್ಲವೇ?’ ಕೇಳಿಕೊಳ್ಳಬೇಕು. ಕೇವಲ ಮಾತು ಬಂದರೆ ಸಾಲದು; ಮಾತಾಡಲೂ ಬರಬೇಕು. ಕಣ್ಸನ್ನೆ, ಬಾಯ್ಸನ್ನೆ, ಕೈಸನ್ನೆಗಳನ್ನು ಅರ್ಥಮಾಡಿಕೊಳ್ಳುವ ಅರ್ಹತೆ ಸಂಪಾದಿಸಬೇಕು. ಬಾಯಿ ಸುಳ್ಳಾಡಬಹುದು; ಆದರೆ ಬಾಡಿ ಲಾಂಗ್ವೇಜು ಸುಳ್ಳಾಡದು. ನಾವೆಲ್ಲ ಈ ವಿಚಾರದಲ್ಲಿ ಕತೆಗಾರರೇ. ನಡೆದದ್ದನ್ನು ಹೇಳುವ ಭರದಲ್ಲಿ ಉತ್ಪ್ರೇಕ್ಷೆ, ಸುಳ್ಳುಗಳು ನುಸುಳುತ್ತವೆ. ಕೇಳುತ್ತಿರುವವರನ್ನು ಒಪ್ಪಿಸುವ ಜರೂರತ್ತು ಇಂಥವನ್ನು ಸೃಷ್ಟಿಸುತ್ತವೆ. ಇಲಿ ಹೋದರೆ ಹುಲಿ ಹೋಯಿತು ಎಂದಾಗ ಸುಳ್ಳು ವದಂತಿಯಾಗಿ, ಹತ್ತಾರು ಜನರ ಬಾಯಲ್ಲಿ ಕೋತಿಯಾಗಿ ಕುಣಿಯುತ್ತದೆ. ಮೂಲ ಪಠ್ಯ ಮರೆತೇ ಹೋಗುತ್ತದೆ. ಇದರ ಸೃಷ್ಟಿಕರ್ತರೇ ಇಂಥ ಸೃಷ್ಟಿಯ ಮುಂದೆ ಅಧೀರರಾಗಿ ಅಸಹಾಯಕರಾಗಿ ಬಿಡುತ್ತಾರೆ. ಇವೆಲ್ಲ ಬೇಡವೇ ಬೇಡ ಎಂದುಕೊಂಡು ಮೌನಕ್ಕೆ ಶರಣಾಗಿ, ಮೂಕರಾಗಿ ಬಿಡುತ್ತೇವೆ. ಏನೇ ಮಾತಾಡಿದರೂ ಅನರ್ಥಗಳೂ ಅಪಾರ್ಥಗಳೂ ಸಂಭವಿಸುತ್ತವೆಂದು ಹೆದರುತ್ತೇವೆ. ರಸ್ತೆಗಿಳಿದರೆ ಅಪಘಾತವಾಗುತ್ತದೆಂದು ಮನೆಯಲ್ಲೇ ಎಲ್ಲರೂ ಇದ್ದರೆ, ನಿದ್ರೆ ಮಾಡುವಾಗ ಜೀವ ಹೋದೀತೆಂದು ಕಣ್ಣು ಮುಚ್ಚದಿದ್ದರೆ ಎಂಥ ಮೂರ್ಖತನವೋ ಹಾಗೆಯೇ ಮಾತಾಡದೇ ಮೌನಕ್ಕೆ ಶರಣಾಗುವುದು! ಯಾವಾಗ ಮಾತಾಡಬೇಕು, ಯಾವ ಮಾತನಾಡಬೇಕು? ಎಲ್ಲಿ ಮೌನವಾಗಬೇಕು? ಎಂಬುದನ್ನು ಇಷ್ಟು ವರುಷಗಳಾದರೂ ತಿಳಿಯದೇ ಹೋದರೆ ಅನುಭವದಿಂದ ನಾವು ಕಲಿತ ಪಾಠವೇನು? ಬರೀ ಇನ್ನೊಬ್ಬರಿಗೆ ಬೋಧನೆ ಮಾಡಿದರೆ ಸಾಕೆ? ನಾವು ಪಾಠ ಕಲಿಯುವುದು ಯಾವಾಗ?
ಹೀಗಾಗಿ, ಒಂದು ಆರೋಗ್ಯಕರವಾದ ಮತ್ತು ಪ್ರಫುಲ್ಲವಾದ ಸಂವಾದ ಮತ್ತು ಸಂಭಾಷಣೆಯು ಇಂಥ ದೋಷಗಳನ್ನೆಲ್ಲ ಮೀರಿ ಮುಂದುವರಿಯುವುದು. ಹಿತವೂ ಮಿತವೂ ಆದದ್ದು ಸುಂದರವೂ ಆಗಿರುವುದು. ನಮ್ಮ ಮಾತನ್ನು ಇನ್ನೊಬ್ಬರು ಕೇಳಲು ಕಾತರರಾಗುವಂತಿರಬೇಕು; ಮಾತಾಡಲು ಶುರುವಿಟ್ಟರೆ ಮೂಲವ್ಯಾಧಿ ಪೀಡಿತರಂತೆ ನರಳಬಾರದು. ಜಗತ್ತಿನ ಸಮಸ್ಯೆಗಳಲ್ಲಿ ಬಾಯಿ ಚಪಲದ್ದೇ ಬಹು ದೊಡ್ಡ ರಾದ್ಧಾಂತ. ಬಾಯಿ ಚಪಲದಲ್ಲಿ ಎರಡು ಬಗೆ: ಒಂದು ಅಡ್ಡಾದಿಡ್ಡಿ ಮಾತಾಡುವುದು. ಇನ್ನೊಂದು ಸಿಕ್ಕಿದ್ದನ್ನೆಲ್ಲಾ ಮೇಯುವುದು! ಚೋಟುದ್ದ ನಾಲಗೆಯ ನಿರ್ವಹಣೆಯೇ ತಲೆನೋವು ನಂನಮ್ಮ ಬಾಳಿಗೆ. ನುಡಿದರೆ ಮುತ್ತಿನ ಹಾರ; ತಿಂದಂತೆ ಸ್ವಾದಿಷ್ಟ ಆಹಾರ. ಅನ್ನುವುದು ಹಾಗೂ ತಿನ್ನುವುದು ಅರ್ಥಾತ್ ಮಾತು ಮತ್ತು ಆಹಾರಗಳೇ ನಮ್ಮ ಬದುಕಿನ ಮಿತ್ರ ಅಂತೆಯೇ ಶತ್ರು. ಜೀವಮಾನಪೂರ್ತ ಇವನ್ನು ಬ್ಯಾಲೆನ್ಸ್ ಮಾಡುತ್ತಲೇ ಇರಬೇಕು; ಕೊನೆವರೆಗೂ ಕಲಿಯುತ್ತಲೇ ಇರಬೇಕು. ‘ಅಂದ ಮೇಲೆ ಮತ್ತು ತಿಂದ ಮೇಲೆ ಜೀರ್ಣಿಸಿಕೊಳ್ಳಬೇಕು; ಇಲ್ಲದಿರ್ದೊಡೆ ಅನ್ನಬಾರದು ಮತ್ತು ತಿನ್ನಬಾರದು ಅಷ್ಟೇ!’ಈ ವಿಚಾರದಲ್ಲಿ ಇದು ನನ್ನ ಕೊನೆಯ ಮಾತು.
-ಡಾ. ಹೆಚ್ ಎನ್ ಮಂಜುರಾಜ್,
ಪಂಜುವಿಗೆ ಧನ್ಯವಾದಗಳು🙏〽️
ಮಾತು ಎ೦ಬುದು ಜ್ಯೊತಿರ್ಲಿಂಗ
ಮಾತು ಆಡಿದರೆ ಹೋಯಿತು ಮುತ್ತು ಒಡೆದು ಹೋದರೆ ಹೋಯಿತು….
ಮಾತೇ ಮಾಣಿಕ್ಯ ಸರ್ವಜ್ಞ . ಎಷ್ಟೊಂದು ಮಾತುಕತೆ ಸಾಗಿದೆ…..
ಉತ್ತಮವಾದ ಲೇಖನ ಗುರೂಜಿ