ರಾಜಕುಮಾರ ಮತ್ತು ಭಿಕ್ಷುಕ: ಬಿ. ಟಿ. ನಾಯಕ್

ಪಾಲ್ಮರ್ ಎಂಬ ರಾಜ್ಯಕ್ಕೆ ಶುಭೋಧನ ಮಹಾರಾಜರು ಆಡಳಿತ ನಡೆಸುತ್ತಿದ್ದರು. ಅವರ ರಾಜ್ಯ ಬಹಳೇ ಸುಭೀಕ್ಷೆಯಿಂದ ಕೂಡಿ, ಅಲ್ಲಿಯ ಪ್ರಜೆಗಳು ಸಕ್ಷೇಮವಾಗಿ ಸುಖಿಯಾಗಿದ್ದರು. ತಮ್ಮ ಪ್ರಜೆಗಳಿಗೆ ಯಾವ ತರಹದ ಕಷ್ಟ ನಷ್ಟ ಉಂಟಾಗುವುದನ್ನು ಮಹಾರಾಜರು ಸಹಿಸುತ್ತಿರಲಿಲ್ಲ. ಬಹಳ ದಿನಗಳ ಹಿಂದೆ ಅಲ್ಲಿ ಒಮ್ಮೆ ಕ್ಷಾಮ ಉಂಟಾದಾಗ, ಅರಮನೆಯಲ್ಲಿಯ ಎಲ್ಲಾ ಭೋಗ್ಯ ವಸ್ತುಗಳನ್ನು ತಮ್ಮ ಪ್ರಜೆಗಳ ಮನೆ ಮನೆಗೆ ಹಂಚಿಬಿಟ್ಟರು. ಆ ಘಟನಾವಳಿಯಾದ ನಂತರ ಕ್ಷಾಮ ಮುಗುದೊಮ್ಮೆ ಅಲ್ಲಿಗೆ ಬರಲು ಹಿಂಜರಿಯಿತೇನೋ ಎನ್ನೋ ಹಾಗೆ ಅದು ಅನಂತರ ಮೂಡಲೇ ಇಲ್ಲ. ಆ ತರಹದ ಪ್ರಜೆಗಳ ಪರ ರಾಜ್ಯಭಾರ ಬೇರೆ ರಾಜ್ಯಗಳಲ್ಲಿ ಇರಲಿಲ್ಲ. ಅಲ್ಲದೆ, ಸುತ್ತಲಿನ ಮಾಂಡಲೀಕರು ಮತ್ತು ಸಾಮಂತರು ಇವರಿಗೆ ಬಹಳೇ ವಿಧೇಯರಾಗಿ ಅವರ ದಾರಿಯಲ್ಲಿಯೇ ಹೋಗುತ್ತಿದ್ದರು. ಆದರೆ, ನಿಂದಕರು ಮತ್ತು ಪೂರ್ವಗ್ರಹ ಪೀಡಿತರು ಯಾವಾಗಲೂ ಎಲ್ಲಾ ಸಮಯದಲ್ಲಿ ಇರುತ್ತಾರೆ ಎನ್ನುವದು ಸಹಜ. ಹಾಗಾಗಿ, ಕೆಲವು ಪಕ್ಕದ ನಾಡಿನ ದೊರೆಗಳು ಇವರ ಬಗ್ಗೆ ಅಸೂಯೆ ಮತ್ತು ಈರ್ಷೆ ಎಗ್ಗಿಲ್ಲದೆ ಇತ್ತು. ಹಾಗಾಗಿ, ಮಹಾರಾಜರಿಂದ ಆ ನಾಡಿನ ಏಳ್ಗೆಯನ್ನು ಅವರು ಸಹಿಸುತ್ತಿರಲಿಲ್ಲ.

ಆ ನಾಡಿನ ಇನ್ನೊಂದು ವಿಶೇಷತೆ ಏನೆಂದರೆ ಅಲ್ಲಿ ‘ಭಿಕ್ಷಾಟನೆ’ ವರ್ಜ್ಯವಿತ್ತು. ಯಾವುದೇ ಭಿಕ್ಷುಕನು ರಾಜ್ಯದಲ್ಲಿ ಕಂಡರೆ, ಆತನನ್ನು ಕೂಡಲೇ ಕರೆ ತಂದು ಆತನಿಗೆ ಪುನರ್ವಸತಿ ಮಾಡಿ, ಉದ್ಯೋಗವನ್ನು ಕೊಡುತ್ತಿದ್ದರು. ಇದನ್ನು ಅರಿತ ಬೇರೆ ರಾಜ್ಯಗಳ ಗೂಢಾಚಾರರು ಆ ವೇಷವನ್ನು ಎಂದೂ ಹಾಕಲಿಲ್ಲ. ನಾಡಿನ ಪ್ರಜೆಗಳು ಮಹಾರಾಜರನ್ನು ದೇವರ ಸ್ವರೂಪಿ ಎಂದುಕೊಂಡಿದ್ದರು. ಅಲ್ಲದೆ, ಅಲ್ಲಿಯ ಪ್ರಜೆಗಳು ನ್ಯಾಯ ನೀತಿಯಿಂದ ದುಡಿದು ಸಂಪಾದನೆ ಮಾಡುತ್ತಿದ್ದರು. ಆಮೇಲೆ ತಮ್ಮ ಲಾಭದಲ್ಲಿ ರಾಜರ ನಿಧಿಗೆ ಹಣ ಸಮರ್ಪಿಸುತ್ತಿದ್ದರು. ಹೀಗಾಗಿ, ಅಲ್ಲಿ ಬಡತನ ಮತ್ತು ದಾರಿದ್ರ್ಯಕ್ಕೆ ಆಸ್ಪದವಿರಲಿಲ್ಲ. ಮಹಾರಾಜರು ಒಂದು ತಂಡವನ್ನು ಸದಾ ಸನ್ನದ್ಧವಾಗಿ ಇಟ್ಟಿದ್ದರು. ಆ ತಂಡ ಗುಟ್ಟಾಗಿ ಪ್ರಜೆಗಳ ಯೋಗ ಕ್ಷೇಮ ಮತ್ತು ಅವರ ಸಮಸ್ಯೆಗಳನ್ನು ಅರಿಯುತ್ತಿತ್ತು ಮತ್ತು ಕಾಲ ಕಾಲಕ್ಕೆ ಅದರ ವರದಿಯನ್ನು ಒಪ್ಪಿಸುತ್ತಿತ್ತು.

ಮಹಾರಾಜರ ಪರಿವಾರವೆಂದರೆ , ಮಹಾರಾಣಿ ಕುಶಲಾ ದೇವಿ ಮತ್ತು ಅವರ ಏಕಮೇವ ಸುಪುತ್ರ ಆದಿತ್ಯ ಕೌಶಲ್. ಮಹಾರಾಣಿಯವರು ಅರಮನೆಯ ಜವಾಬ್ದಾರಿಯನ್ನು ಹೊತ್ತು ಯಾವುದೇ ಕುಂದು ಕೊರತೆ ಬರದಂತೆ ನಿಭಾಯಿಸುತ್ತಿದ್ದರು. ಅವರ ಪುತ್ರ ಆದಿತ್ಯ ಪ್ರವರ್ಧಮಾನಕ್ಕೆ ಬಂದು, ಆತನಲ್ಲಿ ಯುವ ಪ್ರತಿಭೆಯ ಲಕ್ಷಣಗಳು ಅಪ್ರತಿಮವಾಗಿ ಸಂಚಲನಗೊಂಡಿದ್ದವು. ಆತನು ತಮ್ಮ ರಾಜ್ಯದಲ್ಲಿಯೇ ಇದ್ದ ಮಹೇಂದ್ರ ಜ್ಞಾನದೇವರಲ್ಲಿ ವಿದ್ಯಾಭ್ಯಾಸ ಪಡೆದು ಸಾಧನೆಗೈದಿದ್ದ. ಆತನು ಅವರಲ್ಲಿ ವಿಶೇಷವಾಗಿ ನೀತಿ ಪಾಠಗಳನ್ನು ಅರಿತುಕೊಂಡಿದ್ದ. ಅವುಗಳ ಸಾರಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಉತ್ಸುಕನಾಗಿದ್ದ.
ಅದನ್ನು ಅರಿತ ಮಹಾರಾಜ ಮತ್ತು ಮಹಾರಾಣಿಯವರು ಪುತ್ರನ ಬಗ್ಗೆ ಹೆಮ್ಮೆ ಪಡುತ್ತಿದ್ದರು.

ಆಗೊಂದು ದಿನ ರಾತ್ರಿಯಲ್ಲಿ ರಾಜಕುಮಾರ ಘಾಡ ನಿದ್ರೆಯಲ್ಲಿದ್ದವನಿಗೆ ಒಂದು ಕನಸು ಮೂಡಿತು. ಅಲ್ಲಿ ಆತನಿಗೆ ಒಬ್ಬ ಭಿಕ್ಷುಕ ಗೋಚರಿಸಿಕೊಂಡು ಓಡಾಡುತ್ತಲೆಯೇ ಇದ್ದ. ಆ ಭಿಕ್ಷುಕನ ಮುಖ ಚರ್ಯೆ ಹೇಗಿತ್ತೆಂದರೇ, ಅವನ ಮುಖದ ತುಂಬಾ ಕೂದಲುಗಳೇ ಕಾಣುತ್ತಿದ್ದವು. ಆ ಕೂದಲುಗಳಲ್ಲಿ ಕಣ್ಣುಗಳು ಮತ್ತು ಮೂಗು ಮಾತ್ರ ಕಾಣುತ್ತಿದ್ದವು. ಅದು ಹೇಗೆಂದರೆ, ಆತನ ಘಾಡವಾದ ಹುಬ್ಬುಗಳು, ತಲೆಯ ಕೂದಲುಗಳು ಚದುರಿ ಅವನ ಹಣೆಯ ತುಂಬೆಲ್ಲಾ ಇದ್ದವು. ಅವನ ಮೀಸೆ ಮತ್ತು ಗಡ್ಡಗಳು ಕೂಡಾ ದಟ್ಟವಾಗಿಯೇ ಬೆಳೆದಿದ್ದವು. ಇನ್ನು ಆತನು ಸಹಜವಾಗಿ ಬರಿ ಮೈಯಲ್ಲೇ ಇರುವುದರಿಂದ, ಆತನ ಎದೆ ಭಾಗದಲ್ಲಿ , ಎರಡೂ ಭುಜಗಳ ಮೇಲೆ ಮತ್ತು ಬೆನ್ನಿನ ಭಾಗಗಳಲ್ಲಿ ದಟ್ಟವಾದ ರೋಮಗಳು ಎದ್ದು ಕಾಣುತ್ತಿದ್ದವು. ಹಾಗಾಗಿ, ಆತ ನೋಡಲಿಕ್ಕೆ ಹೆಚ್ಚು ಕಡಿಮೆ ಕರಡಿಯಂತೆಯೇ ಕಾಣಿಸುತ್ತಿದ್ದ.

ಆತ ನಾಡಿನ ಎಲ್ಲಾ ಮನೆ ಮನೆಗಳಿಗೆ ಹೋಗಿ ಆರ್ತನಾದ ಮಾಡಿ ಭಿಕ್ಷೆ ಕೇಳುತ್ತಿದ್ದ. ರಾಜಕುಮಾರನಿಗೋ ಆಶ್ಚರ್ಯವಾಯಿತು, ಅದು ಏಕೆಂದರೆ ಅವರ ರಾಜ್ಯದಲ್ಲಿ ಬಿಕ್ಷುಕರೇ ಇಲ್ಲ ಎಂದು ಡಣಾ ಡಂಗುರವಾಗಿ ಹೇಳುತ್ತಿದ್ದರು. ಹಾಗಾದರೆ, ಈತನು ಎಲ್ಲಿಂದ ಬಂದ ? ಈ ವ್ಯಕ್ತಿ ಹೊರಗಿನವನೇ ? ಎಂದು ತನಗೆ ತಾನೇ ಪ್ರಶ್ನಿಸಿಕೊಂಡ. ಆತ ಭಿಕ್ಷೆಯನ್ನು ಕೇಳಲು ಮನೆ ಮನೆಗೆ ಹೋದಾಗ, ಅಲ್ಲಿಯ ಜನರು ಭಿಕ್ಷುಕನನ್ನು ಕಂಡು ಹೆದರಿ ತಮ್ಮ ತಮ್ಮ ಮನೆಯ ಬಾಗಿಲುಗಳನ್ನು ಹಾಕಿ ಕೊಳ್ಳತೊಡಗಿದರು. ಆದರೆ, ಹಠಮಾರಿಯಂತಿದ್ದ ಭಿಕ್ಷುಕ, ಅವರವರ ಬಾಗಿಲುಗಳ ಮುಂದೆ ನಿಂತು ಕೂಗುತ್ತಿದ್ದ. ಅವರು ಬಾಗಿಲುಗಳನ್ನು ಹಾಕಿಕೊಂಡಾಗ, ಅವರ ಮನೆಯ ಕಿಟಕಿಗಳ ಬಳಿಗೆ ಹೋಗಿ ಇಣುಕಿ ನೋಡುತ್ತಿದ್ದ. ಅಷ್ಟಾದ ಮೇಲೆ, ಅಲ್ಲಿಯ ಜನತೆ ಕಿಟಕಿಗಳನ್ನು ಕೂಡಾ ಮುಚ್ಚಿಕೊಳ್ಳತೊಡಗಿದರು. ಆಮೇಲೆ, ಕೆಲವು ಸಮಯದ ಬಳಿಕ ಆತನು ಅಲ್ಲಿಂದ ಹೋದನೇನೋ ಎಂದು ಕಿಟಕಿಗಳನ್ನು ಅರ್ಧ ತೆರೆದು ನೋಡಿ, ಆತ ಅಲ್ಲಿಂದ ಹೋಗಿದ್ದಾನೆಂದು ಅರಿತಾದ ಮೇಲೆ ನಿಟ್ಟುಸಿರು ಬಿಡುತ್ತಿದ್ದರು. ಇವೆಲ್ಲಾ ದೃಶ್ಯಗಳನ್ನು ಗಸ್ತು ಹೊಡೆಯುವ ರಾಜ ಕಾವಲುಗಾರರು ನೋಡಿ, ಭಿಕ್ಷುಕನನ್ನು ಸೆರೆ ಹಿಡಿದರು. ಆಗ ಭಿಕ್ಷುಕ ಮತ್ತಷ್ಟು ಕ್ಷುದ್ರಗೊಂಡು ಕೆಟ್ಟ ಧ್ವನಿಯಲ್ಲಿ ಕಿರುಚಿಕೊಳ್ಳುತ್ತಿದ್ದ. ಆದರೆ, ಬಿಗಿಯಾಗಿ ಹಿಡಿದುಕೊಂಡು ಕಾವಲುಗಾರರು ಆತನನ್ನು ಗಡಿ ಪಾರು ಮಾಡಲು ಕಾಡಿನಾಚೆಗೆ ಕರೆದುಕೊಂಡು ಹೋದರು.

ಆಗ ಭಿಕ್ಷುಕ ಒಂದೇ ಸಮನೆ ಅಳಲು ಪ್ರಾರಂಭಿಸಿದ. ಅವನ ಕಣ್ಣುಗಳು ತೇವವಾದವು. ಹಾಗೆಯೇ ಅಳುತ್ತಾ ಮತ್ತು ನರಳುತ್ತಾ ಕಾವಲುಗಾರರಿಗೆ ಹೀಗೆ ಕೇಳಿಕೊಂಡ;
‘ಸ್ವಾಮಿ, ನಾನು ಸಿಕ್ಕಾ ಪಟ್ಟೆ ಹಸಿವಿನಿಂದ ಬಳಲುತ್ತಿದ್ದೇನೆ. ನೀವೂ ಸೇರಿ ನನ್ನನ್ನು ಯಾರೂ ಅರ್ಥಮಾಡಿಕೊಳ್ಳಲಿಲ್ಲ. ನನಗೆ ಹೊಟ್ಟೆಯ ಹಸಿವು ನನ್ನನ್ನು ಕಂಗೆಡಿಸಿದೆ. ಹಾಗಾಗಿ, ತಿನ್ನುವ ಆಹಾರಕ್ಕಾಗಿ ಕೂಗಿದೆನೇ ವಿನಃ ಯಾರಿಗೂ ಕಷ್ಟ ಕೊಡುವುದಕ್ಕಲ್ಲ. ನೀವು ನನ್ನ ಕೈ ಬಿಟ್ಟುಬಿಡಿ, ಈ ಕಾಡಿನೊಳಕ್ಕೆ ಹೋಗಿ ನನಗಾಗಿ ಆಹಾರ ಹುಡುಕಿಕೊಳ್ಳುತ್ತೇನೆ. ಅಷ್ಟಾದರೂ ನನ್ನ ಮೇಲೆ ಕೃಪೆ ತೋರಿಸಿ ಎಂದು ಗೋಗರೆದ. ಅಲ್ಲದೆ, ಮುಂದುವರೆದು, ನನಗೆ ಅಲ್ಲಿಯೂ ಕೂಡ ಏನೂ ದೊರಕದಿದ್ದರೆ, ಕೊನೆ ಪಕ್ಷ ಅಲ್ಲಿಯ ಹಸಿದ ಪ್ರಾಣಿಗಳಿಗೆ ನಾನೇ ಆಹಾರವಾಗುತ್ತೇನೆವಿನಃ ಈ ಹಸಿವು ತಾಳಲಾರೆ ‘ ಎಂದ. ಆಗ ಭಟರಲ್ಲೊಬ್ಬ ಹೀಗೆ ಕೇಳಿದ;
‘ನಿನಗೆ ತುಂಬಾ ಹಸಿವು ಎಂದು ಅನ್ನಿಸುತ್ತದೆ ? ನೀನು ಸುಳ್ಳು ಹೇಳುತ್ತಿಲ್ಲ ತಾನೇ ?’ ಎಂದಾಗ;
‘ಹೌದು ಸ್ವಾಮಿ., ಆ ಭಗವಂತನ ಮೇಲೆ ಆಣೆ ಮಾಡಿ ಹೇಳುತ್ತೇನೆ, ನನಗೆ ತುಂಬಾ ಎಂದರೆ ತುಂಬಾ ಹಸಿವು. ಇನ್ನೂ ಒಂದು ಘಳಿಗೆ ನನಗೆ ಆಹಾರ ಸಿಗದಿದ್ದರೆ ನನ್ನ ಪ್ರಾಣವೇ ಹೊರಟು ಹೋಗುತ್ತದೆ.’ ಎಂದ.
ಆಗ ಅವನ ಬಗ್ಗೆ ಅವರಿಗೆ ಅನುಕಂಪ ಮೂಡಿ, ತಮ್ಮಲ್ಲಿದ್ದ ಒಂದೆರಡು ಹಣ್ಣುಗಳನ್ನು ಆತನಿಗೆ ಕೊಟ್ಟರು. ಹಾಗೆ ಪಡೆದ ಹಣ್ಣುಗಳನ್ನು ಸಿಪ್ಪೆ ಕೂಡಾ ತೆಗೆಯದೆ ಕ್ಷಣ ಮಾತ್ರದಲ್ಲಿ ಹೊಟ್ಟೆಯೊಳಕ್ಕೆ ಸೇರಿಸಿಕೊಂಡ. ಆಮೇಲೆ ಕಾವಲುಗಾರರು ತಮ್ಮ ಬಳಿ ಇದ್ದ ನೀರನ್ನು ಆತನಿಗೆ ಕೊಟ್ಟರು. ಅವರು ಕೊಟ್ಟ ನೀರನ್ನೂ ಗಟ ಗಟನೆ ಕುಡಿದು, ಹಸಿವು ಶಮನ ಮಾಡಿದ ಅವರಿಗೆ ಕೈ ಜೋಡಿಸಿ ಧನ್ಯವಾದಗಳನ್ನು ಹೇಳಿದ.

ರಾಜ ಭಟರು ನಿಜಾಂಶವನ್ನು ಅರಿತಾಗ , ಇನ್ನೂ ಅನುಕಂಪ ಮೂಡಿ ಆತನನ್ನು ತಮ್ಮ ಜೊತೆಗೆ ಬರಲು ಹೇಳಿ ಅವನಿಗೆ ಹೀಗೆ ಪ್ರಶ್ನಿಸಿದರು;
‘ನಿನ್ನ ಹೆಸರು ಏನು ? ನಿಮ್ಮದು ಯಾವ ಪ್ರದೇಶ ?’ ಎಂದಾಗ;
‘ನನ್ನ ಹೆಸರು ಸೌಮಿತ್ರ, ನನ್ನವರ್ಯಾರೂ ಇಲ್ಲ, ಅಲ್ಲದೆ, ಈಗ ನನ್ನದೇ ಆದ ಯಾವ ಸ್ಥಳವಿಲ್ಲ’ ಎಂದಾಗ;
‘ಸರಿ, ನಮ್ಮ ಜೊತೆಗೆ ಅರಮನೆಗೆ ಬಾ, ಅಲ್ಲಿ ನಿನಗೆ ಕುದುರೆಗಳನ್ನು ಕಾಯುವ ಕೆಲಸವನ್ನು ಕೊಡಿಸುತ್ತೇವೆ, ಅಲ್ಲದೆ, ನೀನು ಅಲ್ಲಿ ಹೊಟ್ಟೆ ತುಂಬಾ ಊಟವನ್ನೂ ಮಾಡಬಹುದು. ಹೀಗೆ ಅಲ್ಲಿ ಇಲ್ಲಿ ಅಲೆಯುವುದು ಬೇಡ’ ಎಂದರು. ಆಗ ತಕ್ಷಣವೇ ಭಿಕ್ಷುಕ ಕಾಲು ಘಳಿಗೆಯಲ್ಲಿಯೇ ಬರುತ್ತೇನೆ ಎಂದು ಕಾಡಿನೊಳಕ್ಕೆ ಓಡಿ ಹೋಗಿ ಬಿಟ್ಟ. ಬಹುಶಃ ಅವನು ಶೌಚಕ್ಕೆ ಹೋಗಿರಬೇಕೆಂದು ಅಂದುಕೊಂಡು ರಾಜ ಭಟರು ಕೆಲ ಹೊತ್ತು ಅವನಿಗಾಗಿ ಕಾಯ್ದರು. ಆದರೆ, ಸುಮಾರು ಘಳಿಗೆ ಕಳೆದರೂ ಆತ ಮರಳಲೇ ಇಲ್ಲ. ಆಗ ರಾಜ ಭಟರಿಗೆ ಗಾಭರಿ ಉಂಟಾಗಿ, ಆತನನ್ನು ಮೃಗಗಳೇನಾದರೂ ತಿಂದು ಬಿಟ್ಟಿವೆಯೋ ಏನೋ ಎಂದು ಯೋಚಿಸುತ್ತಾ ಆತನನ್ನು ಹುಡುಕಲು ಪ್ರಾರಂಭಿಸಿದರು. ಆತ ಅಲ್ಲಿ ಮತ್ತು ಎಲ್ಲೆಲ್ಲಿಯೂ ಕಾಣಲೇ ಇಲ್ಲ. ಅವರ ಸುಧೀರ್ಘ ಪ್ರಯತ್ನಕ್ಕೆ ಫಲ ಸಿಗಲಿಲ್ಲವಾದುದ್ದರಿಂದ ರಾಜ ಭಟರು ಹತಾಶರಾಗಿ ಅರಮನೆಗೆ ಮರಳಿದರು. ಅವರಿಗೆ ಅದೊಂದು ವಿಚಿತ್ರ ಘಟನೆ ಎಂದೆನಿಸಿತು. ಆ ಭಿಕ್ಷುಕನ ಹಾವ ಭಾವ, ಆತನ ಅಳುವಿಕೆ, ಕಣ್ಣೀರು ಹರಿಸುವಿಕೆ ಮತ್ತು ಹಣ್ಣುಗಳನ್ನು ಕೊಟ್ಟ ನಂತರ ಅವನ ಕೃತಜ್ಞತೆಯ ಭಾವ ಅವರಿಗೆ ಮರೆಯಲಾಗಲಿಲ್ಲ.

ಅರಮನೆಯಲ್ಲಿಯೇ ಮಲಗಿ ಈ ತರಹದ ಭಿಕ್ಷುಕನ ಕನಸು ಕಾಣುತ್ತಿದ್ದ ರಾಜಕುಮಾರನಿಗೆ ಒಮ್ಮಿಂದೊಮ್ಮೆಲೆ ಎಚ್ಚರವಾಯಿತು. ತಾನು ಕಂಡ ಕನಸನ್ನು ಯಾರಿಗೆ ಹೇಳಿಕೊಳ್ಳಬೇಕು ಎಂದು ಯೋಚಿಸುತ್ತಲೇ ಇದ್ದ. ಇದನ್ನು ಮಹಾರಾಜರ ಬಳಿಯಲ್ಲಿಯೇ ಹೇಳಿದರೆ ಉತ್ತಮ ಎಂದು ಕೊಂಡು ಅವರ ಬಳಿಗೆ ಹೋಗಿ ಕಂಡ ಕನಸನ್ನು ವಿಸ್ತಾರವಾಗಿ ಹೇಳಿದ. ಆಗ ಮಹಾರಾಜರು;
‘ಕುಮಾರ, ಕನಸುಗಳು ನಮ್ಮಲ್ಲಿ ಹುದುಗಿರುವ ಅಧೈರ್ಯವನ್ನು ಜಾಲಾಡಿಬಿಡುತ್ತವೆ. ನಾವು ಯಾವುದೋ ಒಂದು ವಿಷಯದ ಬಗ್ಗೆ ಚಿಂತಾಕ್ರಾಂತರಾಗಿರುವಾಗ ಅವು ಮೂಡುವದು ಸಹಜ. ನೀನು ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ’ ಎಂದು ಒಂದೇ ಮಾತಿನಲ್ಲಿ ಮುಗಿಸಿದರು.
ಆದರೆ, ರಾಜಕುಮಾರನಿಗೆ ಮಹಾರಾಜರ ಹೇಳಿಕೆಯಿಂದ ಸಮಾಧಾನವಾಗಲಿಲ್ಲ. ಆತ ತನ್ನ ಪರಮ ಮಿತ್ರನಾದ ವಿಷ್ಣು ಸಿಂಹನಿಗೆ ಇದರ ಬಗ್ಗೆ ವ್ಯಾಖ್ಯಾನ ಮಾಡಿ ತಿಳಿಸಿದ. ಆದರೆ, ಆತನ ಮಿತ್ರ ಕೂಡ ಮಹಾರಾಜರ ಧಾಟಿಯಲ್ಲೇ ಹೇಳಿದಾಗ ;
‘ಇಲ್ಲ.. ಇಲ್ಲ… ಇದನ್ನು ನಾನು ಒಪ್ಪುವುದಿಲ್ಲ ‘ ಎಂದ ಆದಿತ್ಯ.

‘ಅವು ಹಾಗೆಯೇ.. ನಮ್ಮಲ್ಲಿರುವ ದೌರ್ಬಲ್ಯಗಳನ್ನು ಸೂಚಿಸುತ್ತವೆ’ ಎಂದ ವಿಷ್ಣು.
‘ಮಿತ್ರಾ, ನೀನು ನನಗೆ ಒಂದು ಸಹಾಯ ಮಾಡಬಹುದೇ ?’ ಎಂದಾಗ ;
‘ಅದೇನು ನನ್ನಿಂದ ಸಹಾಯ ? ನಿನ್ನ ಬಳಿ ರಾಜ್ಯಾನೇ ಇದೆ. ನಾನೇನು ಸಹಾಯ ಮಾಡ ಬಲ್ಲೆ ?’ ಎಂದ. ಆಗ ಆದಿತ್ಯ ಹೀಗೆ ಹೇಳಿದ;
‘ನಾನು ಭಿಕ್ಷುಕನ ವೇಷ ಧರಿಸಬೇಕಿದೆ. ಆತನು ಅನುಭವಿಸುವ ಯಾತನೆಗಳನ್ನು ಅರಿಯಬೇಕಿದೆ. ಹಾಗಾಗಿ, ನೀನು ನನಗೆ ಭಿಕ್ಷುಕನ ವೇಷ ಹಾಕಿಸು’ ಎಂದ.
‘ಬೇಡ.. ಬೇಡ.. ಮಹಾರಾಜರಿಗೆ ತಿಳಿದರೆ, ನಾನು ನೇಣಿಗೆ ಹೋಗಬೇಕಾಗುತ್ತದೆ’ ಎಂದಾಗ;
‘ಮಿತ್ರಾ, ನಿನಗೆ ನಾನು ಅಭಯ ಕೊಡುತ್ತಿದ್ದೇನೆ.. ಹಾಗೇನೂ ಆಗದು. ನನ್ನ ಜೊತೆ ಸಹಕರಿಸು’ ಎಂದು ಗೋಗರೆದ.
‘ಆಯಿತು ಕುಮಾರ ನಾಳೆಯೇ ಅದರ ಬಗ್ಗೆ ವ್ಯವಸ್ಥೆ ಮಾಡುತ್ತೇನೆ’ ಎಂದು ಹೇಳಿ ಆತ ಹೊರಟು ಹೋದ.

ಮಾರನೆಯ ದಿನ ರಾಜಕುಮಾರ ಆದಿತ್ಯ ಯಾರಿಗೂ ಹೇಳದೆ, ಅರಮನೆಯಿಂದ ಹೊರಟು ಹೋಗಿ ದೂರದ ಒಂದು ಪ್ರದೇಶಕ್ಕೆ ಹೋದ. ಅಲ್ಲಿ ಕೆಲವು ಆಶ್ರಮದ ಗುಡಿಸಲುಗಳು ಇದ್ದವು. ಅಲ್ಲಿ ಆದಿತ್ಯನಿಗೆ ಭಿಕ್ಷುಕನ ವೇಷ ಹಾಕಲು ಸಿದ್ಧತೆಯಾಗಿತ್ತು. ಸ್ವಲ್ಪ ಸಮಯದ ಬಳಿಕ ಆದಿತ್ಯ ವೇಷಭರಿತ ಬಿಕ್ಷುಕನೂ ಅಗಿ ತಮ್ಮದೇ ರಾಜ್ಯದಲ್ಲಿ ಯಾರಿಗೂ ಅನುಮಾನ ಬರದಂತೆ ಮನೆ ಮನೆಗೆ ಹೋಗಿ ಭಿಕ್ಷೆ ಬೇಡಲು ಆರಂಭಿಸಿದ. ಯಾರೋ ಒಬ್ಬಿಬ್ಬರು ತಿನ್ನಲು ಏನೋ ಕೊಡುತ್ತಿದ್ದರು. ಆಗ ಆತ ತನ್ನ ಹಸಿವನ್ನು ಇಂಗಿಸಿಕೊಳ್ಳುತ್ತಿದ್ದ. ಅಂದು ರಾತ್ರಿಯ ಸಮಯದಲ್ಲಿ ಹೊರ ಪ್ರದೇಶದ ‘ಮಾಂಕಾಳಿ’ ಮಂಟಪದಲ್ಲಿ ಮಲಗಿಕೊಂಡ. ಆತನಿಗೆ ಆಯಾಸ ಮೂಡಿ ನಿದ್ರೆಯು ಘಾಢವಾಗಿ ಆವರಿಸಿತು. ಕೆಲವು ಸಮಯದ ನಂತರ, ಆತನಿಗೆ ಯಾರೋ ದಂಡದಿಂದ ತಿವಿದ ಹಾಗೆ ಆಯಿತು. ಆತ ಎಚ್ಚರಗೊಂಡಾಗ ಇಬ್ಬರು ರಾಜ ಭಟರು ನಿಂತಿದ್ದರು. ಅವರನ್ನು ನೋಡಿ ಏನೋ ಹೇಳಬೇಕೆಂದಾಗ, ಆತನ ಮನಸ್ಸು ಅವನನ್ನು ತಡೆಯಿತು.

ಆತನಲ್ಲಿಗೆ ಬಂದ ರಾಜ ಭಟರು ಹೀಗೆ ಪ್ರಶ್ನಿಸಿದರು;
‘ಏನೋ.. ಅವಿವೇಕಿ.. ನಮ್ಮ ನಾಡಿನಲ್ಲಿ ಬಿಕ್ಷುಕರೇ ಇಲ್ಲ. ನೀನು ಭಿಕ್ಷೆ ಬೇಡಿ, ಇಲ್ಲಿ ಮಲಗಿಕೊಂಡು ನಮ್ಮ ರಾಜ್ಯಕ್ಕೆ ಅವಮಾನ ಮಾಡಬೇಕೆಂದಿಯಾ ? ಯಾರು ನೀನು ? ಎಲ್ಲಿಂದ ಬಂದೆ ? ಎಂದು ಕೇಳಿದಾಗ ಆತ ಸುಮ್ಮನಾಗಿಬಿಟ್ಟನು. ಅವರಿಗೆ ಅನುಮಾನ ಮೂಡಿ, ಬಹುಶಃ ಇವನು ಧರೋಡೆಕೋರನೇ ಇರಬೇಕು ಎಂದು ದರ ದರನೇ ಆತನನ್ನು ಎಳೆದುಕೊಂಡು ಒಯ್ದು ಅರಮನೆಯ ಕಾರಾಗೃಹಕ್ಕೆ ಸೇರಿಸಿದರು. ಆ ವಿಷಯವನ್ನು ತಮ್ಮ ಸೇನಾಧಿಪತಿಗೆ ಭಟರು ತಿಳಿಸಿದಾಗ, ‘ಒಳ್ಳೆಯ ಕೆಲಸವನ್ನೇ ಮಾಡಿದ್ದೀರಿ ‘ ಎಂದು ಸೇನಾಪತಿ ಅವರನ್ನು ಪ್ರಶಂಸಿದ.

ಇತ್ತ ಅರಮನೆಯಲ್ಲಿ ಮಹಾರಾಣಿ ತಮ್ಮ ಪುತ್ರ ಕಾಣದಿದ್ದಕ್ಕೆ ಆತಂಕಗೊಂಡರು. ಅಲ್ಲದೆ, ಆತ ಎಲ್ಲಿಗಾದರೂ ಹೋಗಬೇಕಾದರೆ ಮಹಾರಾಣಿಯವರಿಗೆ ತಿಳಿಸಿಯೇ ಹೋಗುತ್ತಿದ್ದ. ಅಂದು ಹಾಗೆ ಆಗಲಿಲ್ಲವಲ್ಲ ಎಂದು ಚಿಂತಿತರಾಗಿ, ಮಹಾರಾಜರಿಗೂ ಕೂಡಾ ತಮ್ಮ ಅಂತಾರಾಳದ ದುಃಖವನ್ನು ತೋಡಿಕೊಂಡರು. ಆಗ ಮಹಾರಾಜರು ಮಾನಸಿಕವಾಗಿ ವಿಚಲಿತರಾಗಿ, ತಮ್ಮ ಗುಪ್ತ ಚರ ದಳದ ಮುಖ್ಯಸ್ಥ ಶೇಷನಾಗನನ್ನ ಕರೆದು, ರಾಜಕುಮಾರನ ಬಗ್ಗೆ ಅರಿಯಲು ಎರಡೆರಡು ತಂಡದಲ್ಲಿ ಹೋಗಲು ಆಜ್ಞಾಪಿಸಿದರು. ಅದರ ಹಾಗೆ, ಕುಮಾರನನ್ನು ಹುಡುಕುವ ತಂಡದವರು ಇಡೀ ರಾಜ್ಯವನ್ನೇ ಸುತ್ತಿದರಲ್ಲದೇ, ಅಕ್ಕ ಪಕ್ಕದ ರಾಜ್ಯಗಳಲ್ಲಿಯೂ ಶೋಧಿಸಿದರು. ಅವರಿಗೆ ಆತನ ಯಾವ ಸುಳಿವೇ ಸಿಗಲಿಲ್ಲ. ಅದನ್ನು ಅರಿತ ಮಹಾರಾಜರು ಬಹಳೇ ನೊಂದುಕೊಂಡು ಚಿಂತಿತರಾದರು. ಮಹಾರಾಣಿಯವರಂತೂ ಕಣ್ಣೀರು ಹಾಕಿದ್ದೇ ಹಾಕಿದ್ದು. ಹೀಗೆಯೇ ದಿನಗಳು ಕಳೆದವು. ರಾಜಕುಮಾರ ಕಾರಾಗೃಹದಲ್ಲೇ ಇದ್ದ ಮತ್ತು ಆತನನ್ನು ಶೋಧಿಸುವ ಕಾರ್ಯ ಅವ್ಯಾಹತವಾಗಿ ಅರಮನೆಯಿಂದ ಹೊರಗೆ ನಡೆದೇ ಇತ್ತು !

ಒಂದು ದಿನ ಸೇನಾಧಿಪತಿ ಶೂರ ಸೇನ ಕಾರಾಗೃಹಕ್ಕೆ ಬಂದು, ಅಲ್ಲಿ ಮುದುಡಿಕೊಂಡು ಮಲಗಿದ್ದ ಭಿಕ್ಷುಕನನ್ನು ವಿಚಾರಿಸಲು ಬಂದವನು, ಹೀಗೆ ಕೇಳಿದ;
‘ಏಯ್.. ನಿನ್ನ ಯೋಜನೆ ಏನು ? ನಮ್ಮ ನಾಡಿನಲ್ಲಿ ಏನಾದರೂ ಗೂಢಚಾರಿಕೆ ಮಾಡಲು ಬಂದಿದ್ದೀಯಾ ಹೇಗೆ ? ಎಂದಾಗ, ಮೈತುಂಬಾ ವಸ್ತ್ರದಿಂದ ಹೊದ್ದುಕೊಂಡಿದ್ದ ಭಿಕ್ಷುಕ ಎದ್ದು ಕುಳಿತ. ಏನೂ ಮಾತಾಡಲೇ ಇಲ್ಲ. ಆಗ ಮತ್ತೆ ಸೇನಾಪತಿ ಹೀಗೆ ಹೇಳಿದ;
‘ನೀನು ನಿಜವಾಗಿ ಬಿಕ್ಷುಕನೇ ಆಗಿದ್ದರೆ, ನಮ್ಮ ಅನುಕಂಪ ನಿನ್ನ ಜೊತೆಗೆ ಇದೆ, ಆದರೆ, ಒಂದು ವೇಳೆ ಯಾವುದಾದರೂ ವೈರಿ ಗುಂಪಿಗೆ ಏನಾದರೂ ಸೇರಿದ್ದು ತಿಳಿದರೆ, ನಿನ್ನನ್ನು ಸಿಗಿದು ಹಾಕಿಬಿಡುತ್ತೇನೆ’ ಎಂದ.
ಆಗ ಭಿಕ್ಷುಕನ ವೇಷದಲ್ಲಿದ್ದ ಕುಮಾರ ತನ್ನ ಸ್ಥಿತಿಯನ್ನು ತೋರಗೊಡದೇ ಎರಡೂ ಕೈಗಳನ್ನು ಜೋಡಿಸಿ ತಲೆ ತಗ್ಗಿಸಿದ.
‘ಅಯಿತಾಯಿತು.. ನೀನು ಬಿಕ್ಷುಕನೇ ಎಂದು ಮನದಟ್ಟು ಆಯಿತು. ನಾಳೆ ನಮ್ಮ ಮಹಾರಾಜರಿಗೆ ವಿಷಯ ಅರುಹಿ ನಿನ್ನನ್ನು ಬಿಡುಗಡೆ ಮಾಡಿಸುತ್ತೇನೆ ಚಿಂತಿಸಬೇಡ’ ಎಂದು ಹೇಳಿದ ಸೇನಾಧಿಪತಿ.
ಸೇನಾಧಿಪತಿಯು ತಾನು ಅಲ್ಲಿಂದ ಕದಲುವ ಮುನ್ನ ಕಾವಲುಗಾರನಿಗೆ ಹೀಗೆ ಕೇಳಿದ;
‘ಅವನು ನಿಜವಾಗಿಯೂ ಬಿಕ್ಷುಕನೇ ? ಅವನ ಹಾವ ಭಾವಗಳನ್ನು ಪರೀಕ್ಷಿಸಿದೆಯಾ ?’ ಎಂದು ಕೇಳಿದಾಗ ಕಾವಲುಗಾರ;
‘ಸೇನಾಧಿಪತಿಗಳೇ, ಆತ ನಿಜವಾಗಿಯೂ ಭಿಕ್ಷುಕ ಎಂದು ಸುಮಾರು ದಿನಗಳಿಂದ ಕಾಯುವ ನನಗೆ ಹಾಗೆಯೇ ಅನ್ನಿಸುತ್ತದೆ ‘ ಎಂದ.

‘ಸರಿ.. ನೋಡೋಣ. ಏನಾದರೂ ಆತಂಕದ ವಿಷಯ ಇದ್ದರೆ ತಿಳಿಸು.’ ಎಂದು ಹೇಳಿ ಸೇನಾಧಿಪತಿ ಹೊರಟು ಹೋದ. ಆಗ ತಕ್ಷಣವೇ ಕಾವಲುಗಾರ ತನ್ನ ಗೂಢಚಾರಿಕೆಯ ವರಸೆಯನ್ನು ಪ್ರಾರಂಭಿಸಿದ. ಅಲ್ಪ ಸ್ವಲ್ಪ ಮರೆಯಲ್ಲಿ ನಿಂತು ಆ ಭಿಕ್ಷುಕನ ಕಡೆಗೆಯೇ ಆತ ದೃಷ್ಟಿ ಹಾಯಿಸಿದಾಗ, ಆತನಿಗೆ ಒಂದು ಆಶ್ಚರ್ಯದ ದೃಶ್ಯ ಗೋಚರವಾಯಿತು. ಆ ಭಿಕ್ಷುಕನ ಕುರುಚಲು ಬಿಳಿ ಗಡ್ಡ ಮೀಸೆ ಹೋಗಿ, ಕಪ್ಪನೆಯ ಗಡ್ಡ ಮೀಸೆಗಳು ಕಂಡವು. ಕಾವಲುಗಾರನಿಗೆ ದಟ್ಟವಾದ ಅನುಮಾನ ಮೂಡಿ, ಈ ಸುದ್ದಿಯನ್ನು ತಕ್ಷಣ ಸೇನಾಧಿಪತಿಗೆ ತಲುಪಿಸಿದ. ಆಗ ಸೇನಾಧಿಪತಿ ತಡ ಮಾಡದೆಯೇ ಒಂದು ಬೇಟೆಯಾಡುವ ಚಾವಟಿಯೊಂದಿಗೆ ಅಲ್ಲಿಗೆ ಬಂದು, ಸೆರೆಮನೆಯ ಬಾಗಿಲು ತೆರೆದು ಒಳಕ್ಕೆ ಹೋದ. ತನ್ನ ಜೊತೆ ಬಂದಿರುವವರಿಗೆ ಹೀಗೆ ಹೇಳಿದ;
‘ಅವನನ್ನು ವಿವಸ್ತ್ರ ಮಾಡಿರಿ’ ಎಂದ. ಆಗ ಆ ಭಿಕ್ಷುಕನ ವೇಷದಲ್ಲಿದ್ದ ರಾಜಕುಮಾರ ಆತನಿಗೆ ಹೀಗೆ ಹೇಳಿದ;
‘ಸೇನಾಧಿಪತಿಗಳೇ.. ನಿಮಗೆ ಅದ್ಯಾವ ತೊಂದರೆ ಬೇಡ. ನಾನೇ ಎಲ್ಲಾ ತೆಗೆಯುತ್ತೇನೆ ‘ ಎಂದು ತನ್ನ ವೇಷವನ್ನು ಕಳಚಿದ. ಆಗ ಸೇನಾಧಿಪತಿಗೆ ನೈಜ ವೇಷ ನೋಡಿ ನಡುಕ ಉಂಟಾಯಿತು. ಅಲ್ಲಿದ್ದುದು ತಮ್ಮ ರಾಜಕುಮಾರ ಎಂದು ಅರಿತು ಬಾಗಿ ನಮಸ್ಕರಿಸಿ ಕ್ಷಮೆ ಕೋರಿದ. ಆನಂತರ ರಾಜಕುಮಾರ ಅವರೆಲ್ಲರಿಗೆ ಸಮಾಧಾನ ಹೇಳಿ ಅರಮನೆಯೊಳಕ್ಕೆ ಹೋದನು.

ಅಲ್ಲಿ ಮಹಾರಾಜ ಅಪ್ಪಾಜಿಯವರಿಗೆ ತಾನು ಬಿಕ್ಷುಕನಾಗಿ ಅನುಭವಿಸಿದ ನೋವನ್ನು ತಿಳಿಸಿದ. ಸಾಮಾನ್ಯರಂತೆ ಪ್ರಜೆಗಳ ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿ, ನಾಡಿನ ದೇವಿ ಮಂಟಪದಲ್ಲಿ ಮಲಗುತ್ತಿದ್ದೆ ಎಂದು ಕೂಡಾ ತಿಳಿಸಿದ. ಮಹಾರಾಜರಿಗೆ ಆತನ ಬಗ್ಗೆ ಹೆಮ್ಮೆ ಮೂಡಿತು. ಮಹಾರಾಣಿ ಕೂಡ ಪುತ್ರನನ್ನು ನೋಡಿ ಸಂತೋಷಗೊಂಡರು. ಈ ವಿಷಯ ನಾಡಿನ ಉದ್ದಗಲಕ್ಕೂ ಪಸರಿಸಿದಾಗ, ಅಲ್ಲಿಯ ಕೆಲವರು ತಾವು ಅರಿಯದೇ ರಾಜಕುಮಾರರಿಗೆ ಭಿಕ್ಷೆ ನೀಡಿದ್ದೇವೆಂದು ಹೇಳಿಕೊಂಡರು. ಆದರೆ, ಆ ನಾಡು ‘ಬಿಕ್ಷುಕರಿಲ್ಲದ ನಾಡು’ ಎಂಬ ಮರು ಹೆಗ್ಗಳಿಕೆ ಪಡೆದು, ಮಹಾರಾಜಾ ಮತ್ತು ರಾಜಕುಮಾರನನ್ನು ಪ್ರಶಂಸಿಸಿ ಪ್ರಜೆಗಳು ಕೊಂಡಾಡಿದರು.

-ಬಿ. ಟಿ. ನಾಯಕ್


ಕನ್ನಡದ ಬರಹಗಳನ್ನು ಹಂಚಿ ಹರಡಿ
4 1 vote
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Baburajendra Joshi
Baburajendra Joshi
3 months ago

Good story

Prakash Joshi
Prakash Joshi
3 months ago

ರಾಜಕುಮಾರ ಹಾಗೂ ಭಿಕ್ಷುಕ ಕಥೆ ಚೆನ್ನಾಗಿದೆ. ರಾಜರ ಕಾಲದಲ್ಲಿ ರಾಜ, ಮಂತ್ರಿ ವೇಷ ಬದಲಿಸಿ ರಾಜ್ಯ ಪರ್ಯಟನೆ ಮಾಡಿ ಪ್ರಜೆಗಳ ಸುಖ ದುಃಖ ಅರಿಯುತ್ತಿದ್ದರಂತೆ. ಅದೆ ರೀತಿ ಕಥೆಯಲ್ಲಿ ಬರುವ ರಾಜಕುಮಾರ ಕೂಡ ಪ್ರಯತ್ನಿಸಿದ್ದು ಕುತೂಹಲಕಾರಿಯಾಗಿದೆ.
ಉತ್ತಮ ಲೇಖನ.

Prakash Kundapur
Prakash Kundapur
3 months ago

ರಾಜನಾದವನು ಪ್ರಜೆಗಳ ಹಿತರಕ್ಷಣೆಗೆ ತಾನು ಸ್ವತಃ ಅವರ ಕಷ್ಟಗಳು ಏನೆಂದು ಅನುಭವಿಸಿದಾಗಲೇ ಅದಕ್ಕೆ
ನ್ಯಾಯ ಒದಗಿಸಲು ಸಾಧ್ಯ ಎಂದು ಚೆನ್ನಾಗಿ ಕತೆಯಲ್ಲಿ
ಮೂಡಿಸಿದ್ದರಿ. ಮಕ್ಕಳಿಗೆ ಇಂತಹ ಕತೆಗಳನ್ನು ಕೇಳಿಸಬೇಕು.
ಚಂದಮಾಮ/ಬಾಲಮಿತ್ರ ದಲ್ಲಿ ಇಂತಹ ಕತೆಗಳು ಬಹಳಷ್ಟು ಮುದ್ರಿತವಾಗುತ್ತಿದ್ದವು.. ಈಗ ಅದೆಲ್ಲವೂ
ನೆನಪು ಮಾತ್ರ.
ನಿಮ್ಮ ಲೇಖನಿಯಿಂದ ಇನ್ನಷ್ಟು ಕತೆಗಳು ಮೂಡಿಬರಲಿ.
ಅಭಿನಂದನೆಗಳು.

3
0
Would love your thoughts, please comment.x
()
x