“ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 2)”: ಎಂ.ಜವರಾಜ್

-೨-
ಸ್ಕೂಲಿನೊಳಗೆ ಗೊಳಗೊಳ ಮಾತು. ಒಂದೇ ರೂಮಿನಲ್ಲಿ ಎರಡು ಕ್ಲಾಸಿನವರು ಒಟ್ಟಿಗೆ ಕುಳಿತಿದ್ದೆವು. ಅಲ್ಲೆ ಕ್ಲಾಸು ಅಲ್ಲೆ ಸ್ಟಾಫ್ ರೂಮು. ಪ್ರೆಯರ್ ಮುಗಿದ ಮೇಲೆ ಎಲ್ಲ ಟೀಚರುಗಳು ಇಲ್ಲೆ ಬಂದು ಮಾತಾಡುತ್ತಿದ್ದುದು ನಮಗೆ ಮಜ. ನಾವೆಷ್ಟೆ ಗಲಾಟೆ ಮಾಡಿದರು ಯಾವ ಮೇಷ್ಟ್ರೂ ಏನೂ ಅಂತಿರಲಿಲ್ಲ. ಗಂಟೆಗಟ್ಟಲೆ ಕುಂತು ಮಾತಾಡೋರು. ಸೋಸಲೆ ಮೇಷ್ಟ್ರು ಯಾವಾಗಲೊ ಒಂದು ಸಲ ಎದ್ದು ನಿಂತು ‘ಏಯ್ ಸುಮ್ನಿರ‌್ರೊ ಅದೇನ್ ವಟವಟ ಅಂತಿರ.. ” ಅಂತ ಬೋರ್ಡ್ ಹತ್ರ ಬಂದು ಬೋರ್ಡಿನ ಮೇಲೆ ತುದಿ ಮಧ್ಯೆದಲ್ಲಿ ‘ಶ್ರೀ’ ಅಂತ ಬರೆದು ಬಲಭಾಗ ತಾರೀಖು ಎಡಭಾಗ ನಾವು ಎಷ್ಟಿದ್ದೀವಿ. ಇಷ್ಟಕ್ಕೆ ಇಷ್ಟು ಅಂತ ‘ಹಾಜರಿ’ ಬರೆದು ಬುಕ್ ನೋಡಿ ಕಾಗುಣಿತಾನೊ, ಲೆಕ್ಕನೊ, ಎಬಿಸಿಡಿನೊ ಇನ್ನೇನೊ ಬರೆದು “ಇದನ್ನ ತಪ್ಪಿಲ್ದೆ ನೂರ್ ಸಲ ಬರೀರಿ. ಏನಾದ್ರು ತಪ್ಗಿಪ್ ಮಾಡುದ್ರೆ ಒಂಟಿ ಕಾಲಲ್ಲಿ ನಿಲ್ಲುಸ್ತಿನಿ” ಅಂತ ವಾರ್ನ್ ಮಾಡಿ ತಮ್ಮ ಸೀಟಲ್ಲೆ ಕುಂತು ಟೀಚರುಗಳ ಜೊತೆ ಮಾತಾಡೋರು.

ಈ ಸೋಸಲೆ ಮೇಷ್ಟ್ರು ಅಂದ್ರೆ ನಮ್ ಸ್ಕೂಲಿಗೆ ಹೆಡ್ ಮೇಷ್ಟ್ರು. ಸ್ಟ್ರಿಕ್ಟು ಅನ್ನಿಸಿಕೊಂಡಿದ್ರು. ಮೂಗಿನ ತುದಿಲೆ ಕೋಪ. ನಟಿನಟಿ ಮಾತಾಡೋದು. ಮುಖ ಗಂಟಿಕ್ಕಿಕೊಂಡೆ ಇರೋದು. ಬಿಳಿ ಪಂಚೆ ಬಿಳಿ ಅಂಗಿ ತೊಟ್ಟು ಮೇಲಿನ ಎರಡು ಗುಂಡಿ ಯಾವಾಗಲೂ ತೆರೆದಿರುತ್ತಿದ್ದವು. ಹೆಗಲಿಗೊಂದು ಬಿಳಿ ಟವೆಲ್. ಅಂಗಿ ಜೇಬಲ್ಲಿ ಒಂದು ಕಟ್ಟು ಮಂಗಳೂರು ಗಣೇಶ ಬೀಡಿ ಒಂದು ಬೆಂಕಿ ಪೊಟ್ಣ ಇದ್ದೇ ಇರ‌್ತಿತ್ತು. ಅದು ತೆಳುವಾದ ಅಂಗಿಯೊಳಗಿಂದ ನಿಟಾವಟ್ ಕಾಣ್ತಿತ್ತು. ಆ ಟೈಮಲ್ಲೇನಾದ್ರ ಆಫೀಸರುಗಳು ಬಂದ್ರೆ ಬೀರು ಸೈಡಿಗೋಗಿ ಅವನ್ನ ಸರಸರ ಎತ್ತಿ ಪಂಚೆ ಸರಿಸಿ ಚೆಡ್ಡಿ ಜೇಬಿಗೆ ಹಾಕೋತಿದ್ರು. ಚಾಡಿ ಮಾತು ಕೇಳೋದ್ರಲ್ಲಿ ಇವರೇ ಫಸ್ಟ್ ಅನ್ನಿಸ್ತಿತ್ತು. ಯಾರಾದರು ಒಬ್ಬರ ಮೇಲೆ ಚಾಡಿ ಹೇಳಿದರೆ ಮರು ಮಾತಾಡದೆ ಏಕ್ದಂ ಕರೆಸಿ ಹೊಡೆಯೋರು. ಅವರ ಎದುರಿಗೆ ಯಾರೇ ತಪ್ಪು ಮಾಡಿದ್ರು ಅದು ತಪ್ಪಲ್ಲದಿದ್ದರು ಅವರು ತಪ್ಪು ಅಂತ ಡಿಸೈಡ್ ಮಾಡಿದ್ರೆ ಮುಗೀತು. ಉದ್ದವಾಗಿದ್ದ ಸಣ್ಣದಾದ ಹಸಿ ಹುಣಸೇ ಕಡ್ಡಿಲಿ ದೂರದಿಂದಲೇ ನಿಂತ ಚಾವಟಿ ಬೀಸಿದಂಗೆ ಸೊಂಯ್ ಅಂತ ಎಳೆದು ಬಿಡೋರು. ಹಸಿ ಹುಣಸೇ ಕಡ್ಡಿ ಏಟಿನ ಎಳೆತ ಅದು ಬಿದ್ದ ಜಾಗ ಕೆಂಪಗೆ ಬಾಸುಂಡೆ ಬಂದು ಉರಿಉರಿ ಉರಿಯೋದು. ಅದಕ್ಕೆ ಸೋಸಲೆ ಮೇಷ್ಟ್ರು ಅಂದ್ರೆ ನಾವು ಗಡಗಡ ನಡುಗುತಿದ್ದೆವು.

ಅವತ್ತು ಅದೇ ಹಸಿ ಹುಣಸೇ ಕಡ್ಡಿ ಹಿಡಿದು ನಾವಿರೊ ಜಾಗಕ್ಕೆ ಬಂದು ಒಬ್ಬೊಬ್ಬರ ತಲೆ ಮೇಲೆ ಕಡ್ಡಿ ಇಟ್ಟು ‘ನಿಂತ್ಕೊ ನಿಂತ್ಕೊ’ ಅಂತ ದುರುಗುಟ್ಟಿ ನೋಡಿದರು. ನಮಗೆ ಗಂಟಲು ಕಟ್ಟಿತು. ಬೆಳಗ್ಗೆ ಗಂಗಣ್ಣನ ಸುತ್ತ ಸುತ್ತುತ್ತ ಗಲಾಟೆ ಮಾಡುವಾಗ ಚೌಡಮ್ಮ ಬಂದು ಕೊಳದಪ್ಪಳದಲ್ಲಿ ನೀರು ತಂದು ಎರಚಿ ರೇಗಿದ್ದು ನೆನಪಾಯ್ತು. ಕೈ ನೀಡಿ ಅಂದರು. ಅವರು ಹುಣಸೇ ಕಡ್ಡಿಲಿ ಸೊಂಯ್ ಅಂತ ಎಳೆದೇಟಿಗೆ ನಾವು ಕಿಟಾರನೆ ಕಿರುಚಿಕೊಂಡೆವು. ಆಗ ಕ್ಲಾಸು ಗಪ್ ಚುಪ್. ಬೆದರಿಸಿದರು. ನಾವು ಬಾಯಿ ಅಮುಕಿಕೊಂಡು ಕಣ್ಣಲ್ಲಿ ನೀರು ತುಂಬಿಕೊಂಡು ದುಕ್ಕಳಿಸುತ್ತಿದ್ದರು ಬೆದರಿಸುವುದ ನಿಲ್ಲಿಸಲಿಲ್ಲ. ಹಂಗೆ ಒಂಟಿ ಕಾಲಲ್ಲಿ ನಿಲ್ಲಿಸಿದರು. ಒಂಟಿ ಕಾಲಲ್ಲಿ ನಿಲ್ಲುವಾಗ ನಿಲ್ಲಲಾಗದೆ ತೂರಾಡುವ ಹಾಗೆ ಆಗುತ್ತ ಹಿಂದಕ್ಕು ಮುಂದಕ್ಕು ವಾಲಾಡ್ತ ಇದ್ದರೆ ಒಕ್ಕಲಿಗ ಕೇರಿಯ ಹುಡುಗೀರು ಅಕ್ಕಪಕ್ಕ ಪಿಸಿಪಿಸಿ ಮಾತಾಡ್ತ ಬಗ್ಗಿಕೊಂಡು ಗೊಳ್ಳನೆ ನಗುತಾ ಇದ್ದವು. ಅವರನ್ನು ನೋಡಿ ಉಳಿದವರೂ ಕೈ ಮರೆ ಮಾಡಿಕೊಂಡು ನಗುತ್ತಿದ್ದರು. ನಮಗೆ ಒಂಥರಾ ಆಗಿ ತಲೆ ತಗ್ಗಿಸಿ ಕಣ್ಣೀರು ಸುರಿಸುತ್ತಿದ್ದರೆ ಎದುರಿಗಿದ್ದ ಸೋಸಲೆ ಮೇಷ್ಟ್ರು ‘ಹೆಂಗಿದೆ ಲೆಯ್ ನನ್ ಮಕ್ಳ.. ಎಲ್ಲ ನಗ್ತಾ ಅವ್ರ.. ನಾಚ್ಕೆ ಆಗಲ್ವ… ದನ ತಿಂದು ತಿಂದು ಕೊಬ್ಬು ಜಾಸ್ತಿ ಆಗದ ಕಂಡ್ರುಲ ಮಾದುಗ್ ಬಡ್ಡೆತವ.. ಪೋಸ್ಟಾಫೀಸು ಅಂದ್ರ ಏನಂತ ತಿಳ್ಕಂಡಿದ್ದರಿ… ನಿಮ್ ಯೋಗ್ಯತೆಗೆ ನಿಮ್ ಊರವ್ರು ಒಂದ್ ಜಾಗ ಕೊಡಕಾಗ್ನಿಲ್ಲ.. ಜಾಗ ಕೊಟ್ಟವ್ರ್ ಆಫೀಸ್ಗೋಗಿ ಪೋಸ್ಟ್ ಮ್ಯಾನ್ ಕಾಗ್ದ ಪತ್ರನೆಲ್ಲ ಚೆಲ್ಲಿರ‌್ಯಾ ನನ್ ಮಕ್ಳ..” ಅಂತ ಬಾಯಿಗೆ ಬಂದಾಗೆ ಬಯ್ಯೋಕೆ ಶುರು ಮಾಡುದ್ರು. ಆಗ ನಮ್ಮೂರಿನ ಕುಂಟ ಸಿದ್ದಪ್ಪ ಬಂದು “ನಮಸ್ತೆ ಸಾರ್” ಅಂದ್ರು. ಕುಂಟ ಸಿದ್ದಪ್ಪ ಅಂದರೆ ನಮ್ಮೂರಿನ ಲೀಡರು. ಲೀಡರು ಅಂದರೆ ಎಲ್ಲರಿಗೂ ಹೊಂದಿಕೊಂಡು ಹೋಗುತ್ತಿದ್ದ ಮನುಷ್ಯ. ವಯಸ್ಕರ ಶಿಕ್ಷಣ ಸಂಸ್ಥೆಯಿಂದ ನೇಮಕವಾಗಿ ನೈಟಿಸ್ಕೊಲ್ ಮಾಡ್ತಿದ್ದ. ಈ ಕಾರಣ ಅವನನ್ನು ‘ಮೇಷ್ಟ್ರೇ, ಸಾ’ ಅಂತ ಕರೀತಿದ್ರು. ರಾತ್ರಿ ಚೆನೈನ್ ಗುಡಿಲಿ ನೈಟಿಸ್ಕೂಲ್ ನಡೀತಿತ್ತು. ಅಲ್ಲಿಗೆ ಬರೊ ವಯಸ್ಸಾದವರಿಗೆ ಕುಂಟ ಸಿದ್ದಪ್ಪ ಹೇಳೋದೇ ವೇದವಾಕ್ಯ.

ಆ ಕುಂಟ ಸಿದ್ದಪ್ಪನ ನಮಸ್ತೆಗೆ ಸೋಸಲೆ ಮೇಷ್ಟ್ರು “ಬನ್ನಿ ಸಿದ್ದಪ್ಪೋರೆ ನೋಡಿ ನಿಮ್ಮೂರ್ ಐಕ್ಳ. ಪಾಪ ಆ ಗಂಗಣ್ಣ ಏನೊ ಮಾಡ್ಕತಾ ಕೂತಿದ್ರ ಕಾಗ್ದ ಪತ್ರನೆಲ್ಲ ಚೆಲ್ಲಿದರಂತ. ಆ ಚೌಡಮ್ಮೋರು ಹೇಳುದ್ರು. ಅವ್ನು ಮೊದ್ಲೇ ಪೆದ್ದ ಏನಾದ್ರು ಹೆಚ್ಚುಕಮ್ನಿ ಆದ್ರ ನಮ್ ಸ್ಕೂಲ್ಗೆತಾನೆ ಕೆಟ್ಟೆಸ್ರು.. ಹಂಗೆ, ಪಂಚಾಯ್ತಿ ಅದ ಅಂತ ಊರ‌್ಗೊಂದು ಪೋಸ್ಟಾಫೀಸ್ ಕೊಟ್ಟರ. ಹಿಂಗೆಲ್ಲ ಆದ್ರ ಆ ಪೋಸ್ಟಾಫೀಸ್ ಉಳುದ್ದಾ..'” ಅಂತ ಒಂದೇ ಸಮ ಹೇಳ್ತಿದ್ದರೆ ಕುಂಟ ಸಿದ್ದಪ್ಪ “ಸರ್ ನೀವು ಏನ್ ಬೇಕಾದ್ರು ಮಾಡಿ ಇವ್ರು ಬುದ್ದಿ ಕಲಿಲಿ. ನಮ್ಮೂರು ತಮ್ಮೂರು ಅಂತ ನಾನ್ ವಯಿಸ್ಕಳಲ್ಲ. ಮನಲಿ ತಂದಾಕ್ತರ ತಿಂದು ತಿಂದು ಕೊಬ್ಬರ. ನೋಡಿ ಸರ್ ನಾನ್ ಹೇಳ್ತಿನಿ ಈ ಬಡ್ಡೆತವ್ಕ ನೀವ್ ಕೊಡೊ ಮದ್ಯಾಹ್ನದ ಉಪ್ಪಿಟ್ನೂ ಕೊಡ್ಬೇಡಿ ಹಸುದ್ರ ಗೊತ್ತಾಯ್ತುದ” ಅಂತ ಕುರ್ಚಿಯಲ್ಲಿ ಕುಂತು ದುರುಗುಟ್ಟಿ ಮಾತಾಡ್ತ ಕಂಪ್ಲೆಂಟ್ ಮಾಡ್ತ ಇದ್ದರೆ ನಾವು ಒಂಟಿ ಕಾಲಲಿ ನಿಂತು ನಿಲಲಾಗದೆ ವಾಲಾಡ್ತ ನಾಚಿಕೆಯಿಂದ ಯಾರ ಮುಖನು ನೋಡದೆ ತಲೆ ಬಗ್ಗಿಸಿ ನೆಲ ನೋಡ್ತ.. ಹಂಗೆ ಕಿಟಕಿ ಕಡೆ ನೋಡ್ತ.. ಹಂಗೆ ಮೇಲೆ ಆಂತು ಸೂರು ನೋಡ್ತ.. ಹಂಗೆ ಹೆಂಚು ನೋಡ್ತ.. ಹಂಗೆ ಹೆಡ್ ಮೇಷ್ಟ್ರು ಕುಂತುಕೊಳ್ಳುವ ನೇರಕ್ಕೆ ಮೇಲೆ ಮಹಾತ್ಮ ಗಾಂಧೀಜಿ, ಜವಹರಲಾಲ್ ನೆಹರು, ಸರದಾರ ವಲ್ಲಭಬಾಯ್ ಪಟೇಲ್, ಇಂದಿರಾಗಾಂಧಿ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ರವೀಂದ್ರನಾಥ ಠಾಕೂರ್, ಕುವೆಂಪು ಶಿವರಾಮ ಕಾರಂತರು ಫೋಟೋ ನೋಡ್ತ ಆ ಫೋಟೋದಲ್ಲಿ ಬರೆದಿದ್ದನ್ನು ಓದುತ್ತಾ ಓದುತ್ತಾ ಕುಂಟ ಸಿದ್ದಪ್ಪನ ಕಡೆ ನೋಡಿದೆವು. ಕುಂಟ ಸಿದ್ದಪ್ಪ ಗುರಾಯಿಸುತ್ತಲೇ ಇದ್ದ.

ಆಗ ಪೋಸ್ಟ್ ಮ್ಯಾನ್ ಗಂಗಣ್ಣ ಎಡಗೈ ಬೆರಳಿಗೆ ಎಂ.ಓ ಫಾರಂ, ಆ ಈ ಲೆಟರ್ ತುಂಬಿದ್ದ ಬ್ಯಾಗು ಸಿಕ್ಕಿಸಿಕೊಂಡು ಅದೇ ಕೈಲಿ ಇನ್ನೊಂದಷ್ಟು ಲೆಟರ್ ಜೋಡಿಸಿ ಹಿಡಿದು ಬಲಗೈಲಿ ಡೆಲಿವರಿ ಆಗಬೇಕಾದ ಲೆಟರ್ ಹಿಡಿದು “ಮೇಷ್ಟ್ರೇ ಲೆಟರ್ ತಗಳಿ” ಅಂತ ಒಳ ಬಂದ. ಹೆಡ್ ಮೇಷ್ಟ್ರು “ಏನಪ್ಪ ಗಂಗಾ ಲೆಟರ್ ತಂದ್ಯಾ.. ಕೊಡು ಕೊಡು ಎಲ್ಲಿಂದ ಬಂದಿದೆ.. ನಿಮ್ ಮೇಷ್ಟ್ರು ಷಣ್ಮುಖಸ್ವಾಮಿ ಆಫೀಸಲಿದಾರಾ.. ಓ ಲೇಟರ್ ನಮ್ ಹೆಡ್ ಆಫೀಸಿಂದ ಕಂಡ್ರಿ..” ಅಂತ ರಿಸೀವರ್ ಪೇಪರ್ ಗೆ ಸೀಲ್ ಹಾಕಿ ಸಹಿ ಹಾಕಿ ಗಂಗಣ್ಣನಿಗೆ ಕೊಟ್ರು. ಅಲ್ಲಿತಂಕ ಅವರ ಮಾತು ಕೇಳಿಸಿಕೊಳ್ತ ಅವರ ಮಾತಿಗೆ ‘ಹ್ಞು’ ‘ಹ್ಞು’ ಅಂತ ಅವರನ್ನೆ ನೋಡುತ್ತಿದ್ದ ಗಂಗಣ್ಣ ನಿಧಾನಕೆ ಮೇಲೆ ಕೆಳಗೆ ನೋಡ್ತ ನೋಡ್ತ ನಮ್ಮ ಕಡೆ ತಿರುಗಿ “ಅಯ್ಯೋ ಯಾಕ್ ಸಾ ನಮ್ನುಡುಗ್ರನ್ನ ಈ ತರ ನಿಲ್ಸಿದಿರಾ” ಅಂದ. ಸಿದ್ದಪ್ಪ “ಏ ಗಂಗಣ್ಣ ಇವ್ರ ನಿನ್ನತ್ರ ಸೇರುಸ್ಬೇಡ ಗೊತ್ತಾಯ್ತ.. ನೋಡು ನಿಂಗ ಕಾಟ ಕೊಟ್ಟವತ್ಗ ಇವ್ರಿಗೆಲ್ಲ ನಮ್ ಮೇಷ್ಟ್ರು ಶಿಕ್ಷ ಕೊಟ್ಟರ” ಅಂದ. ಗಂಗಣ್ಣ “ಅಯ್ಯೊ ಬುಡಿ ಸಾ ಅವ್ಕೇನ್ ಗೊತ್ತು ಚಿಕ್ಕುಡುಗ್ರು.. ಪಾಪ ಅವ್ರೇನು ಮಾಡಿಲ್ಲ ಕೂರ‌್ಸಿ ಸಾ..” ಅಂತ ಲೊಚಗುಟ್ಟುತ್ತಾ ನಡೆದ.

ಕುಂಟ ಸಿದ್ದಪ್ಪ, ಸೊಸಲೆ ಮೇಷ್ಟ್ರು ಆಡಿದ ಯಾವುದೊ ಒಂದು ಮಾತಿಗೆ ಜೋರಾಗಿ ನಗ್ತ ‘ಸಾ.. ಹೆಂಗೊ ಅಂಬೇಡ್ಕರ್ ಮಾಡಿರ ಕಾನೂನಿಂದ ನಾವೆಲ್ಲ ಈತರ ಕುಂತು ಮಾತಾಡ ತರ ಆಗದ.. ಇಲ್ಲ ಅಂದ್ರ ಆಯ್ತಿತ್ತಾ ಸಾ. ನಾವ್ ನಾವೇ ಅರ್ತ ಮಾಡ್ಕಂಡು ಇನ್ನೊಸಿ ಗಟ್ಟಿ ಆಗ್ಬೇಕು ಸಾ..ಮೊದ್ಲು ನಮ್ ನಮ್ಮಲ್ಲೆ ಹೊಲ್ಗೇರಿ ಮಾದಿಗೇರಿ ಅಂತ ತಂದಾಕ ಜನ ಅವ್ರ. ಅಂಬೇಡ್ಕರ್ ಸಾಯೇಬ್ರು ಇದ್ನೆಲ್ಲ ನೋಡಿ ನಾವು ದಲಿತ್ರು ಉದ್ದಾರ ಆಗ್ಲಿ ಅಂತ ಸಮ್ಮಿದಾನ ಬರುದ್ರು.. ಆದ್ರ ಇವು ಯಂಗಿರ‌್ಬೇಕು ” ಅಂತ ನಮ್ ಕಡೆ ಕೈತೋರಿ ಮುಖ ಸಿಂಡರಿಸಿಕೊಂಡು ಹೇಳ್ತಿದ್ದ. ಹೆಡ್ ಮೇಷ್ಟ್ರು “ಸಿದ್ದಪ್ಪೋರೆ ನಿಮ್ತರ ಊರೂರಲ್ಲಿ ಇಬ್ಬಿಬ್ರು ಸಿಕ್ಕುದ್ರ ಸಾಕು ಜನುಕ್ಕು ತಿಳಿವಳಿಕೆ ಬರುತ್ತ” ಅಂತಂದು ನಮ್ಕಡೆ ತಿರುಗಿ “ಕುಂತ್ಕಳಿ ಇನ್ನೊಂದ್ಸಲ ಹಿಂಗ್ ಮಾಡುದ್ರ ಚರ್ಮ ಸುಲಿತಿನಿ” ಅಂದ್ರು. ಕುಂಟ ಸಿದ್ದಪ್ಪ “ಬಡ್ಡತವೆ ಈತರ ಊರತ್ರ ಯಾವೂರಲ್ಲು ಸ್ಕೂಲಿಲ್ಲ ಒಂದ್ ಪೋಸ್ಟಾಫೀಸಿಲ್ಲ. ಇಲ್ಲಿ ನಮ್ತವು ಎಲ್ಲ ಅದ. ಅದ್ನ ನೋಡ್ಕಂಡು ಒಳ್ಳೆ ಬುದ್ದಿ ಕಲಿರಿ” ಅಂತ ಮೇಷ್ಟ್ರು ಕಡೆ ತಿರುಗಿ ಷಣ್ಮುಖಸ್ವಾಮಿ ಹೇಳಿದ್ದ ಗಂಗಣ್ಣನ ವಿಚಾರಕ್ಕೆ ಬಂದ.

                            *

ಗಂಗಣ್ಣ ನಮ್ಮೂರಿಗೆ ಪೋಸ್ಟ್ ಮ್ಯಾನ್ ಆಗಿ ಬರುವ ಮುಂಚೆನೆ ನರಸೀಪುರ ಹೆಡ್ ಪೋಸ್ಟಾಫಿಸಲ್ಲಿ ಪೋಸ್ಟ್ ಮ್ಯಾನ್ ಆಗಿದ್ದ. ಆ ಪೋಸ್ಟಾಫೀಸು ತಾಲ್ಲೊಕು ಆಫೀಸ್ ರೋಡಿಗುಂಟ ಕೆಳಕ್ಕೆ ಹೋಗುವಾಗ ಸಿಗುವ ಕಡ್ಲೇರಂಗಮ್ಮನ ಏರಿಯಾದತ್ರ ಮೆಯಿನ್ ರೋಡಿನ ಎನ್ಸಿ ಸುಬ್ಬಣ್ಣನ ಅಂಗಡಿ ಹಿಂಭಾಗದ ಎಸ್ಬಿಎಂ ಪಕ್ಕದಲ್ಲಿತ್ತು.

ತಲಕಾಡು ಮುಡುಕುತೊರೆ ಸಮೀಪದ ಹ್ಯಾಂಡ್ ಪೋಸ್ಟ್ ಹತ್ತತ್ತಿರ ಇರುವ ಮಳವಳ್ಳಿ ತಾಲ್ಲೋಕು ವ್ಯಾಪ್ತಿಗೆ ಬರುವ ಬೆಳಕವಾಡಿಯ ಗಾಣಿಗರ ಬೆಟ್ಟಯ್ಯಶೆಟ್ಟಿಯ ಕಿರಿಯ ಮಗ ಓಂ ಗಂಗಶೆಟ್ಟಿ ಅಷ್ಟೇನು ಬುದ್ದಿವಂತನಲ್ಲ ಎಂಬುದು ಅವನ ಮಾತುಕತೆ ನಡವಳಿಕೆಯಿಂದಲೇ ಗೊತ್ತಾಗುತ್ತಿತ್ತು. ಸ್ಕೂಲಿಗೆ ಕಳುಹಿಸಿದರು ಆರಕ್ಕೆ ಏರದೆ ಮೂರಕ್ಕೆ ಇಳಿಯದೆ ಓದಲು ಬರೆಯಲಷ್ಟೆ ದಕ್ಕಿದ್ದು. ಅದನ್ನು ಪುಣ್ಯ ಅಂದುಕೊಂಡ ಬೆಟ್ಟಯ್ಯಶೆಟ್ಟಿ ಹೇಗಾದರು ಮಾಡಿ ಇವನಿಗೊಂದು ದಾರಿ ತೋರಲು ಅಲ್ಲಿ ಇಲ್ಲಿ ಸುತ್ತಿದರು ಯಾವುದೂ ಕೈಗೂಡದ ಸ್ಥಿತಿಯನ್ನು ಬೆಟ್ಟಯ್ಯಶೆಟ್ಟಿಯನ್ನು ಬಲ್ಲ ಅವನ ಸ್ನೇಹಿತರು ಹೆಡ್ ಪೋಸ್ಟಾಫಿಸಿನ ಹಿರಿಯರು ಕಂಡಿದ್ದರು. ನರಸೀಪುರದ ಪೋಸ್ಟಾಫಿಸಲ್ಲಿ ಪೋಸ್ಟ್ ಮ್ಯಾನ್ ಆಗಿದ್ದ ಬೆಟ್ಟಯ್ಯಶೆಟ್ಟಿಗೆ ಓಂ ಗಂಗಶೆಟ್ಟಿ ಅಲ್ಲದೆ ಮಾದಶೆಟ್ಟಿ, ಕರಿಯಣ್ಣಶೆಟ್ಟಿ ಜೊತೆಗೆ ಒಬ್ಬ ಹೆಣ್ಣು ಮಗಳೂ ಇದ್ದಳು. ಇದ್ದೊಬ್ಬ ಮಗಳನ್ನು ಯಳಂದೂರಿಗೆ ಕೊಟ್ಟು ಮದುವೆ ಮಾಡಿ ಅವಳಿಗೊಬ್ಬಳು ಚೆಂದುಳ್ಳಿ ಹೆಣ್ಣೂ ಇತ್ತು. ಅಪ್ಪನ ಸುಪರ್ದಿಯಲ್ಲಿ ಹಿರಿಮಗ ಪೋಸ್ಟ್ ಮೇಷ್ಟ್ರೂ ಆದ. ಕರಿಯಣ್ಣ ಶೆಟ್ಟಿ ಆ ಕೆಲಸ ಈ ಕೆಲಸ ಮಾಡಿಕೊಂಡಿದ್ದ. ಇಷ್ಟಾಗಿ ಬೆಟ್ಟಯ್ಯಶೆಟ್ಟಿಗೆ ಓಂ ಗಂಗಶೆಟ್ಟಿಯದೆ ಚಿಂತೆಯಾಗಿ ಆ ಚಿಂತೆಯ ಜೊತೆಯಲ್ಲೆ ನಿವೃತ್ತಿಯೂ ಆಯ್ತು. ಇದಾದ ಕೆಲ ಕಾಲದಲ್ಲೆ ಬೆಟ್ಟಯ್ಯಶೆಟ್ಟಿ ಕಾಲವಾದ. ಓಂ ಗಂಗಶೆಟ್ಟಿಗೆ ತನ್ನ ಜೀವಿತಾವಧಿಯಲ್ಲಿ ನೆಲೆ ಕಲ್ಪಿಸಲು ಪರದಾಡಿ ಏನೂ ಮಾಡಲಾಗದೆ ಸತ್ತು ಹೋದ ಬೆಟ್ಟಯ್ಯಶೆಟ್ಟಿಯ ಸೇವೆ ನೆನೆದು ಅಲ್ಲಿನ ಸೀನಿಯರ್ ಸಾಹೇಬ್ರು ಓಂ ಗಂಗಶೆಟ್ಟಿಗೆ ಅನುಕಂಪದ ಆಧಾರದಲ್ಲಿ ತಮ್ಮ ವಿವೇಚನೆ ಬಳಸಿ ಮೇಲಾಧಿಕಾರಿ ಗಮನಕ್ಕೆ ತಂದು ಹೇಗೋ ಕಛೇರಿಗೆ ಸೇರಿಸಿಕೊಂಡರೂ ಸಹ ಇವನ ಬುದ್ದಿಮತ್ತೆಗೆ ಕಛೇರಿಯಲ್ಲಿ ಇವನಿಂದ ಆಗಬಾರದ ತೊಡಕು ಅಷ್ಟಿಷ್ಟಲ್ಲ. ಕಛೇರಿ ಸಾಹೇಬರು ಅವನ ಎಲ್ಲಾ ಆಟಾಟೋಪವನ್ನು ಹೇಗೋ ತಳ್ಳಿಕೊಂಡು ಹೋಗ್ತಾ ಹೋಗ್ತಾ ನಿಧಾನಕೆ ಒಂದೊಂದೆ ಸಣ್ಣಪುಟ್ಟ ಜವಾಬ್ದಾರಿ ಕೊಡ್ತಾ ಹೋದರು. ಅದರ ನಿಮಿತ್ತ ಏರಿಯಾವೊಂದಕ್ಕೆ ಲಿಮಿಟ್ ಆಗಿ ಲೆಟರ್ ಹಂಚಲು ಪೋಸ್ಟ್ ಮ್ಯಾನ್ ಆಗಿ ಮಾಡಿದರು. ಅದಾದ ಮೇಲೆ ಏರಿಯ ವಿಸ್ತರಿಸಿದರು.

ಹೀಗೆ ಏರಿಯಾಗಳ ಪರಿಚಯ ಆಯ್ತ ಸರಿಸುಮಾರಾಗಿ ಮಾಡ್ತ ಹೋದ. ಒಂದ್ಸಲ ಪಂಚಾಯ್ತಿ ಚೇರ್ಮನ್ ಆಗಿದ್ದ ತಿರುಮಕೂಡಲು ಟಿ.ಎಲ್. ಚೌಡಯ್ಯನವರಿಗೆ ಸೊಸೈಟಿಯಿಂದ ಬಂದ ಒಂದು ಲೆಟರು ತಿಂಗಳಾದರು ತಲುಪದೆ ಅವರು ಪೋಸ್ಟಾಫಿಸಲ್ಲಿ ವಿಚಾರಿಸಿದರು. ಅದು ಡಿಸ್ಪ್ಯಾಚ್ ಆಗಿರುವ ರೆಕಾರ್ಡ್ ಸಿಕ್ತು. ಅಲ್ಲಿ ಡಿಸ್ಪ್ಯಾಚ್ ರೆಕಾರ್ಡ್ಸ್ ಇದ್ದರು ಆ ಲೆಟರು ಟಿ.ಎಲ್. ಚೌಡಯ್ಯರಿಗೆ ತಲುಪಿರಲಿಲ್ಲ. ಇದು ಹೇಗೆ ಸಾಧ್ಯ ಅಂತ ತಲಾಶ್ ಶುರುವಾದಾಗ ಓಂ ಗಂಗಶೆಟ್ಟಿಯ ಎಡವಟ್ಟು ಗೊತ್ತಾಯ್ತು. ಅದು ದೊಡ್ಡ ರಾದ್ಧಾಂತವಾಗಿ ಮೆಯಿನ್ ಪೋಸ್ಟಾಫೀಸ್ ಹೆಡ್ ಗೆ ತಲುಪಿತು. ಇದಾಗುವ ಹೊತ್ತಲ್ಲಿ ಪಂಚಾಯ್ತಿಗೊಂದು ಪೋಸ್ಟಾಫೀಸ್ ಪ್ರಸ್ತಾವನೆಯಲ್ಲಿತ್ತು. ಇದು ಪಂಚಾಯ್ತಿ ಆಸುಪಾಸಿನ ಮುಖ್ಯ ಲೀಡರುಗಳಿಗೆ ತಲುಪಿ ಅಲ್ಲಿ ಇದಕ್ಕೆ ಕಾರಣನಾದ ಷಣ್ಮಖಸ್ವಾಮಿ ಹೆಸರು ಮುಂಚೂಣಿಯಲ್ಲಿತ್ತು. ಇದನ್ನೆಲ್ಲ ಗಮನಿಸಿದ ಬೈರಾಪುರ ವ್ಯಾಪ್ತಿಯ ಮಂದಿಯಿಂದ ಜನಸಂಖ್ಯೆಗನುಗುಣವಾಗಿ ಬೈರಾಪುರ ಪಂಚಾಯ್ತಿ ವ್ಯಾಪ್ತಿಗೆ ಸಬ್ ಪೋಸ್ಟ್ ಆಫೀಸ್ ಸಾಂಕ್ಷನ್ ಆಗಿ ನರಸೀಪುರ ಪೋಸ್ಟ್ ಆಫೀಸಲ್ಲಿ ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಂಡಿದ್ದ ಓಂ ಗಂಗಶೆಟ್ಟಿಯನ್ನು ಅಲ್ಲಿನ ಸಾಹೇಬ್ರು ಷಣ್ಮುಖಸ್ವಾಮಿಗೆ “ನೋಡಿ ಇವುನ್ನ ನಿಮ್ಮ ವಶಕ್ಕೆ ಒಪ್ಪಿಸ್ತಾ ಇದಿನಿ. ತಂದೆ ಇಲ್ಲದ ತಬ್ಬಲಿ. ಇವುನ್ನ ತಿದ್ದಿ ತೀಡಿ ಕೆಲ್ಸ ಕಲ್ಸಿ ನಿಮಗೂ ಪುಣ್ಯ ಬರುತ್ತೆ.. ಅವರಪ್ಪ ಏನು ಅಂತ ನಿಮಗೂ ಗೊತ್ತು” ಅಂತ ಕೈ ಹಿಡಿಸಿ ಹೊಸದಾಗಿ ಆದ ಬೈರಾಪುರ ಪೋಸ್ಟ್ ಆಫೀಸಿಗೆ ವರ್ಗ ಮಾಡಿಸಿ ಪೋಸ್ಟ್ ಮ್ಯಾನ್ ಆಗಿ ಬಂದಾಗ ಅವನ ಆಕಾರ, ಉಟ್ಟ ಬಟ್ಟೆ, ಮಾತಾಡೊ ರೀತಿಗೆ ನೋಡಿದವರು ಅವನನ್ನು ಮಾತಾಡಿಸಿ ಕಿಚಾಯಿಸಿ ಮಜಾ ತೆಗೆದುಕೊಳ್ಳುತ್ತಿದ್ದುದು ರೂಢಿಯಾಯ್ತು. ಆ ರೂಢಿಗೆ ಕುಂಟ ಸಿದ್ದಪ್ಪನೂ ಒಗ್ಗಿ ಎಲ್ಲರಿಗಿಂತ ಅವನೇ ರೇಗಿಸುತ್ತ ನಗಿಸುತ್ತ ಗಂಗಣ್ಣನ ಕೈಲಿದ್ದ ಲೆಟರುಗಳನ್ನು ಈಸಿಕೊಂಡು – ಇದು ಇವರದು, ಇದು ಅವರದು, ಇಂತಿಂಥ ಬೀದಿ – ಅಂತ ಹೇಳ್ತ ಇದ್ದದ್ದು ಸೋಸಲೆ ಮೇಷ್ಟ್ರು ಮುಂದೆ ಬಿತ್ತರವಾಗ್ತ ಟೈಮ್ ಆಗ್ತಾ ಮದ್ಯಾಹ್ನದ ಬೆಲ್ಲು ಹೊಡೆಯಿತು.

ಆಗ ಓಓಹೊ ಅಂತ ಕೂಗುತ್ತ ಬ್ಯಾಗಲ್ಲಿದ್ದ ಪ್ಲೇಟು ಎತ್ತಿಕೊಂಡು ಒಬ್ಬರನ್ಬೊಬ್ಬರು ನೂಕಿ ತಳ್ಳಾಡಿಕೊಂಡು ಮೇಲೆ ಮೇಲೆ ಬಿದ್ದು ಉಪ್ಪಿಟ್ಟು ಈಸಿಕೊಳ್ಳಲು ಹೊರಗೆ ಸ್ಕೂಲು ಜಗುಲಿ ಉದ್ದಕ್ಕು ಲೈನಾಗಿ ನಿಂತಿದ್ದೆವು. ಬಾಂಡಲಿಯಲ್ಲಿ ಗೋದಿ ಉಪ್ಪಿಟ್ಟು ಗಮಗಮ ಅಂತಿಂತು. ಆ ಗಮಲಿಗೆ ಹೊಟ್ಟೆ ಲಬಗುಟ್ಟುತ್ತ ಬಾಯಿನೀರು ಸೋರುತ್ತ ಇರುವಾಗ ಕ್ಲಾಸಿನ ಮಾನಿಟರ್ ಬಂದು “ಹೆಡ್ ಮೇಷ್ಟ್ರು ಹೇಳರ ಇವ್ರ್ ನಾಕ್ ಸೀಟ್ಗ ಉಪ್ಪಿಟ್ ಕೊಡ್ಬೇಡಿ” ಅಂದ. ಮಾನಿಟರ್ ಆತರ ಹೇಳ್ತಿದಂಗೆ ಲೈನಿನಲ್ಲಿದ್ದ ಒಕ್ಕಲಗೇರಿ ಹುಡುಗರು ನಮ್ ನಾಲ್ಕು ಸೀಟನ್ನು ಲೈನಿಂದ ತಳ್ಳಿದರು. ಅವರು ತಳ್ಳಿದ ರಭಸಕ್ಕೆ ಅಂಗಾತ ಬಿದ್ದು ಅಲ್ಲಿದ್ದ ಧೂಳು ಮೈಗೆಲ್ಲ ಅಂಟಿಕೊಂಡು ಕಣ್ಣೀರು ಬಂದು ಅಳತೊಡಗಿದೆವು.

ಅಷ್ಟೊತ್ತಿಗೆ ಒಳಗಿದ್ದ ಕುಂಟ ಸಿದ್ದಪ್ಪ ಹೊರ ಬಂದು ಒಂದು ಕೈಲಿ ಪಂಚೆ ತುದಿ ಹಿಡಿದು ಕುಂಟುತ್ತ ನಮ್ಮನ್ನೇ ದುರುಗುಟ್ಟಿ ನೋಡುತ್ತ ಹೋದ.

(ಮುಂದುವರಿಯುವುದು)

-ಎಂ.ಜವರಾಜ್

[ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. “ಕತ್ತಲ ಹೂವು” (ನೀಳ್ಗತೆ) ಪ್ರಕಟಣೆಗೆ ಸಿದ್ದಗೊಳ್ಖುತ್ತಿದೆ. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಪ್ರಸ್ತುತ “ಪೋಸ್ಟ್ ಮ್ಯಾನ್ ಗಂಗಣ್ಣ” ಎಂಬ ನೀಳ್ಗತೆ ಮುಗ್ಧ ಪೋಸ್ಟ್ ಮ್ಯಾನ್ ಒಬ್ಬನ ಜೀವನ ಚಿತ್ರವನ್ನು ಹೇಳುವ ಒಂದು ಕುತೂಹಲಕಾರಿ ಕಥೆಯಾಗಿದೆ]


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x