ಒಮ್ಮೆ ವಿಧವಿಧದ ಮಸಾಲ ಪುಡಿಯ ಚಿತ್ರಗಳನ್ನು ಇವರು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದರು. ಅವು ತಮ್ಮ ಮನೆಯಲ್ಲಿ ತಯಾರು ಮಾಡಿದ ಮಸಾಲೆಗಳೆಂದು, ಮಾರಾಟಕ್ಕೆ ಲಭ್ಯವಿವೆ ಎಂದು ಪೋಸ್ಟ್ ಹಾಕಿದ್ದರು. ಇವರ ಅನೇಕ ಎಫ್ ಬಿ ಬಳಗದಿಂದ ಇವರಿಗೆ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ನಂತರ ಇವರ ತಂದೆಯವರ ಸಮಾಧಿ ಸ್ಥಳವನ್ನು ಲೋಕಲ್ ವ್ಯಕ್ತಿಯೊಬ್ಬ ದ್ವಂಸಗೊಳಿಸಿದನೆಂಬ ಕಾರಣಕ್ಕೆ ದಾವಣಗೆರೆಯಲ್ಲಿ ಪುಟ್ಟ ಹೋರಾಟವನ್ನು ಮಾಡುತ್ತಿರುವ ಇವರ ಭಾವಚಿತ್ರಗಳು ಕಣ್ಣಿಗೆ ಬಿದ್ದಿದ್ದವು. ಇವೆರಡು ವಿಷಯಗಳಿಗೆ ಬಿಟ್ಟು ಅನೇಕ ವರ್ಷದಿಂದ ಇವರ ಫೇಸ್ ಬುಕ್ ಗೆಳೆಯನಾಗಿದ್ದರೂ ಇವರು ಕತೆಗಾರರು ಅಂತಾಗಲಿ, ಬರಹಗಾರರು ಅಂತಾಗಲಿ ಸಾಹಿತ್ಯದ ವಿದ್ಯಾರ್ಥಿಯಲ್ಲದ ನನಗೆ ಎಲ್ಲಿಯೂ ಕಂಡಿರಲಿಲ್ಲ. ಮೊನ್ನೆ ಮೊನ್ನೆ “ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ”ಯು ಇವರಿಗೆ ದೊರಕಿದೆ ಎಂಬ ಸುದ್ದಿಯನ್ನು ಓದಿದಾಗ, ಅದೇ ಸಮಯಕ್ಕೆ ಇವರ ಸಮಗ್ರ ಕತೆಗಳ ಪುಸ್ತಕ ಪ್ರಕಟವಾಗುತ್ತಿದೆ ಎನ್ನುವುದು ಸಹ ಕಣ್ಣಿಗೆ ಬಿದ್ದಾಗ ಬಿ ಟಿ ಜಾಹ್ನವಿಯವರು ಕತೆಗಾರ್ತಿ ಎಂದು ತಿಳಿಯಿತು.
ಇವರ ತಲೆಮಾರಿನ ಒಂದಷ್ಟು ಲೇಖಕರು ಹೊಸ ಕತೆಗಾರರಿಗೆ ಮುನ್ನುಡಿ ಬೆನ್ನುಡಿ ಬರೆಯುತ್ತಲೋ, ಕಥಾಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೋ, ಪುಸ್ತಕಬಿಡುಗಡೆ ಕಾರ್ಯಕ್ರಮಗಳಲ್ಲಿ ಅತಿಥಿಗಳಾಗಿ ಭಾಗವಸಹಿಸುತ್ತಲೋ, ಇಲ್ಲ ಯಾವುದಾದರೂ ಕಥಾ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಕಾರಣಕ್ಕೆ ಆ ಕತೆಗಾರರ ಹೆಸರುಗಳು ನಮಗೆ ಆಗಾಗ ಕಣ್ಣಿಗೆ ಬೀಳುತ್ತಲೇ ಇರುತ್ತದೆ. ಇದಕ್ಕೆ ವ್ಯಕ್ತಿರಿಕ್ತವಾದ ಜಾಹ್ನವಿ ಅವರು ಇತ್ತೀಚೆಗೆ ಬುಕ್ ಬ್ರಹ್ಮ ವೆಬ್ ತಾಣಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಕಾರಣಗಳಿಗೆ ಸಾಹಿತ್ಯಲೋಕದ ಜೊತೆ ಒಂದಷ್ಟು ವರ್ಷಗಳು ನಂಟನ್ನು ಕಳೆದುಕೊಂಡಿದ್ದನ್ನು ವಿವರವಾಗಿ ಹೇಳಿದ್ದಾರೆ. ಆ ಕಾರಣಕ್ಕೆ ಎಷ್ಟೋ ಹೊಸ ಓದುಗರಿಗೆ ಇವರು ಕತೆಗಾರ್ತಿ ಅನ್ನುವುದು ತಿಳಿದಿರಲಿಲ್ಲ. ಖುಷಿಯ ಸಂಗತಿ ಎಂದರೆ ಈಗ ಫೀನಿಕ್ಸ್ ಹಕ್ಕಿಯಂತೆ ಮತ್ತೆ ” ಒಬ್ರು ಸುದ್ಯಾsssಕೆ…. ಒಬ್ರು ಗದ್ಲ್ಯಾsssಕೆ….” ಎನ್ನುವ ಅವರ ಸಮಗ್ರ ಕತೆಗಳ ಪುಸ್ತಕದ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಮೊದಲಿಗೆ ಅವರಿಗೆ ಅಭಿನಂದನೆಗಳು.
“ಒಬ್ರು ಸುದ್ಯಾಕೆ…. ಒಬ್ರು ಗದ್ಲ್ಯಾಕೆ…” ಪುಸ್ತಕದಲ್ಲಿ ಜಾಹ್ನವಿ ಅವರು ಬರೆದಿರುವ ಒಟ್ಟು ೨೯ ಕತೆಗಳಿವೆ. ಈ ಪುಸ್ತಕವನ್ನು ಆನೇಕಲ್ ನ ಮುರುಳಿ ಮತ್ತು ಮಮತಾ ಅವರು ತಮ್ಮ ಕೌದಿ ಪ್ರಕಾಶನದಿಂದ ಪ್ರಕಟಿಸಿದ್ದಾರೆ. ಬೀ ಕಲ್ಚರ್ ನ ವಿಷ್ಣುಕುಮಾರ್ ಚಂದದ ಮುಖಪುಟ ಮಾಡಿದ್ದರೆ, ಆನೇಕಲ್ ನಾರಾಯಣ ಅವರು ಒಳಪುಟ ವಿನ್ಯಾಸ ಮಾಡಿದ್ದಾರೆ. ಬೆಂಗಳೂರಿನ ಒನ್ ಪ್ರಿಂಟ್ ನವರು ಈ ಪುಸ್ತಕವನ್ನು ಮುದ್ರಿಸಿದ್ದಾರೆ. ಯುವ ಲೇಖಕಿ ಸೌಮ್ಯ ಕೋಡೂರು ಅವರ ಮುನ್ನುಡಿ ಹಾಗು ಹಿರಿಯ ಲೇಖಕರಾದ ಎಚ್ ಎಸ್ ರಾಘವೇಂದ್ರರಾವ್ ಅವರ ಸುದೀರ್ಘವಾದ ಆಶಯ ನುಡಿ ಈ ಪುಸ್ತಕದಲ್ಲಿದೆ. ೧೯೮೭ ರಿಂದ ಬಹುಶಃ ೨೦೧೩ ರವರೆಗೂ ಜಾಹ್ನವಿಯವರು ಬರೆದಿರುವ ಅಷ್ಟೂ ಕತೆಗಳ ಸಮಗ್ರ ಈ ಪುಸ್ತಕ.
ಮುನ್ನೂರ ಮೂವತ್ನಾಲ್ಕು ಪುಟಗಳ ಈ ಸಂಕಲನವನ್ನು ಕೈಗೆತ್ತಿಕೊಂಡಾಗ ಈ ಪುಸ್ತಕದಲ್ಲಿ “ಕಳೆದುಕೊಂಡವಳು” ಕತೆಯನ್ನು ಮೊದಲು ಓದಿದೆ. ಆ ಕತೆಯನ್ನು ಓದಿ ಲೇಖಕಿಯ ಕಥನ ಶೈಲಿಗೆ ಬೆರಗಾಗಿ ಹೋದೆ. ನಂತರ ಇಷ್ಟ ಬಂದ ಹಾಗೆ ಒಂದೊಂದೇ ಕತೆಯನ್ನು ಓದುತ್ತಾ ಹೋದಂತೆ ಅನೇಕ ವಿಚಾರಗಳು ಕಣ್ಣಿಗೆ ಕಾಣುತ್ತಾ ಹೋದವು. ಅವುಗಳ ಕುರಿತ ಒಂದು ಪುಟ್ಟ ವಿವರಣಾತ್ಮಕ ನೋಟ ಈ ಕೆಳಗಿನಂತಿದೆ.
ನಿರೂಪಣಾ ಶೈಲಿ
ಜಾಹ್ನವಿ ಅವರು ಗಂಡು ಹೆಣ್ಣಿನ ಸಂಬಂಧಗಳ ಸಂಕೀರ್ಣತೆಗಳನ್ನು ಬರೆಯುವಾಗ ಒಂದು ಕಥನ ಶೈಲಿಯನ್ನು ಅನುಸರಿಸುತ್ತಾರೆ. ಕತೆಯ ಮೊದಲಿಗೆ ಎರಡು ಹೆಣ್ಣು ಪಾತ್ರಗಳ ನಡುವಿನ ಸಂಭಾಷಣೆಯನ್ನು ಶುರುಮಾಡುತ್ತಾರೆ. ಉದಾಹರಣೆ ನೋಡಬೇಕು ಎಂದರೆ “ವಿಮುಖ” ಕತೆಯ ಸರಳ-ಮೈತ್ರ, “ಬದುಕೂ ಒಂದು ಕಲೆ” ಕತೆಯ ಸುದಿ-ಸರಸ, “ನೆಲಬಾನಿನ ಗೆಳೆತನ”ದ ಪ್ರಭಾ-ಪಾರ್ವತಿ, “ವ್ಯಭಿಚಾರ ಕತೆ”ಯ ಸುಜೀ-ಸವಿ, “ಕಳೆದುಕೊಂಡವಳು” ಕತೆಯ ಕೀರ್ತಿ-ರಾಜಿ, “ಅನಿವಾರ್ಯ ಕತೆ”ಯ ಪರೀ-ಸುಮಿ.. ಹೀಗೆ ಅನೇಕ ಜೋಡಿ ಪಾತ್ರಗಳು ನಮಗೆ ಇವರ ಹಲವು ಕತೆಗಳಲ್ಲಿ ಕಾಣಸಿಗುತ್ತವೆ. ಆ ಜೋಡಿ ಪಾತ್ರಗಳ ನಡುವಿನ ಸಂಬಂಧಗಳು ಹೆಚ್ಚಿನದಾಗಿ ಗೆಳತನವೇ ಆಗಿದ್ದರೂ ಒಮ್ಮೊಮ್ಮೆ ಸಹೋದರತೆ ಕೂಡ ಆಗಿರುತ್ತದೆ. ಹೆಚ್ಚಾಗಿ ಇವರ ನಡುವಿನ ಸಂಭಾಷಣೆ ನಿರ್ದಿಷ್ಟ ವ್ಯಕ್ತಿಗಳ ಕುರಿತೇ ಆಗಿರುತ್ತದೆ.
ಆ ವ್ಯಕ್ತಿಗಳೊಂದಿಗೆ ಕಥಾ ನಿರೂಪಕಿ ಅಥವಾ ಆ ನಿರೂಪಕಿಯ ಸಖಿಯ ಜೊತೆ ಯಾವುದೋ ಒಂದು ಲಿಂಕ್ ಸಂಬಂಧದ ರೂಪದಲ್ಲೋ ಇಲ್ಲ ಇನ್ನೊಂದು ರೂಪದಲ್ಲೋ ಕನೆಕ್ಟ್ ಆಗುತ್ತದೆ ಅಥವಾ ಆಗಿರುತ್ತದೆ. ಆ ಕನೆಕ್ಟ್ ಆಗುವುದನ್ನು ಅಥವಾ ಆಗಿರುವುದನ್ನು ಫ್ಲಾಸ್ ಬ್ಯಾಕ್ ನಲ್ಲಿ ಹೇಳುವುದು, ನಂತರ ವಾಸ್ತವದಲ್ಲಿ ಒಂದು ಸಮಸ್ಯೆ ಕುರಿತು ಮಾತನಾಡುವಾಗ ಆ ಸಮಸ್ಯೆಗೆ ಸಂಬಂಧಿಸಿದಂತೆ ಒಂದು ಪಾತ್ರ ಸಮಸ್ಯೆಯ ಪರ ವಹಿಸಿದರೆ, ಮತ್ತೊಂದು ಪಾತ್ರ ವಿರೋಧ ವ್ಯಕ್ತಪಡಿಸುತ್ತದೆ.
ಉದಾಹರಣೆಗೆ ಗಂಡ ಸತ್ತ ಮೇಲೆ ವಿಧವೆ ಹೇಗೆ ಬದುಕಬೇಕು? ಗಂಡನಿದ್ದರೂ ವೈವಾಹೇತರ ಸಂಬಂಧ ಒಳ್ಳೆಯದಾ ಕೆಟ್ಟದ್ದಾ? ವಿವಾಹದಲ್ಲಿ ಸುಖವಿಲ್ಲ ಎಂದ ಮೇಲೆ ಹೆಣ್ಣು ಆ ಸಂಬಂಧದಲ್ಲಿ ಉಳಿಯಬೇಕಾ ಹೊರನಡೆಯಬೇಕಾ? ಸಂಬಂಧದಲ್ಲಿ ಲೈಂಗಿಕ ಸುಖ ಮುಖ್ಯನಾ ಪ್ರೀತಿಸುವುದು ಮುಖ್ಯನಾ?
ಹೀಗೆ ಎರಡು ಪಾತ್ರಗಳು ವಾದಕ್ಕಿಯುತ್ತವೆ. ವಾದಕ್ಕಿಳಿಯುವ ಪಾತ್ರಗಳನ್ನು ಕತೆಯಲ್ಲಿ ಬರುವ ಮುಖ್ಯ ಪಾತ್ರಗಳ ಜೊತೆ ಒಂದು ಕೊಂಡಿಯ ಮೂಲಕ ಒಟ್ಟುಗೂಡಿಸಿ ಒಂದು ತರ್ಕವನ್ನು ಮಂಡಿಸುವುದು ಇವರ ಕಥನ ಶೈಲಿಯ ಒಂದು ಬಗೆಯ ತಂತ್ರಗಾರಿಕೆ.
ಕೊನೆಗೆ ಕಥೆಗೊಂದು ತಾರ್ಕಿಕ ಅಂತ್ಯ ನೀಡಿಯೋ ನೀಡದೆಯೋ, ಸರಿ ತಪ್ಪುಗಳ ಅವಲೋಕನವನ್ನು ಓದುಗರಿಗೆ ಬಿಟ್ಟುಬಿಡಲು ಪ್ರಯತ್ನಿಸುವ ಜಾಹ್ನವಿಯವರು ಗಂಡು ಹೆಣ್ಣಿನ ಸಂಬಂಧಗಳ ನಡುವಿನ ಅನೇಕ ಕಟುಸತ್ಯಗಳನ್ನು ಓದುಗರೆದುರು ತೆರೆದಿಡುತ್ತಾರೆ.
ಹಾಗೆಯೇ ಮನೆಯಲ್ಲಿನ ಯಾವುದಾದರೂ ಸಮಸ್ಯೆಯನ್ನು ಕುರಿತು ಹೇಳಬೇಕೆಂದರೆ ಒಂದು ಪ್ರೌಢಾವಸ್ಥೆಯ ಹೆಣ್ಣಿನ ಪಾತ್ರ ಸೃಷ್ಟಿಸಿ ಅದಕ್ಕೆ ತಕ್ಕ ಹಾಗೆ ಅಜ್ಜಿಯನ್ನೋ, ಅಜ್ಜನನ್ನೋ, ಅಪ್ಪನನ್ನೋ, ಅತ್ತೆಯನ್ನೋ, ಅಮ್ಮನನ್ನೋ ಒಟ್ಟು ಆ ಹುಡುಗಿಗಿಂತ ವಯಸ್ಸಿನಲ್ಲಿ ದೊಡ್ಡವರನ್ನು ಸೃಷ್ಟಿಸುತ್ತಾರೆ. ಆ ಹೆಣ್ಣಿನ ಪಾತ್ರದಲ್ಲಿ ಒಂದಷ್ಟು ತುಂಟತನವನ್ನೋ ಒರಟುತನವನ್ನೋ ತುಂಬಿ ಭಾವನಾತ್ಮಕವಾಗಿ ಸಂಬಂಧವನ್ನು ಆ ಪಾತ್ರಗಳ ಜೊತೆ ಕಟ್ಟಿಕೊಡುತ್ತಾ ಹೋಗುವುದು ಇವರ ಇನ್ನೊಂದು ಕಥನ ಶೈಲಿ.
ಈ ಶೈಲಿಗೆ “ಅವ್ವಯ್ಯನ ಹಂಡೇವು” ಕತೆಯ ಗಂಗಾ-ಶಿವಮ್ಮ, “ಅಜ್ಞಾತ” ಕತೆಯ ಅವ್ವ-ಕಮಲಮ್ಮ, “ಬೋರಜ್ಜಿ ಬಸವ, ಹಂದಿ ಹಿಂಡು” ಕತೆಯ ಭಾಗ್ಯಮ್ಮ-ಬೋರಜ್ಜಿ, “ಆಸರೆ” ಕತೆಯ ಗಂಗಾ-ಅಪ್ಪಯ್ಯ, “ಮನಸ್ಸಿನಂತೆ ಮಹಾದೇವ” ಕತೆಯ ಅಮ್ಮ-ವಿನಾಯಕ, “ಬಿಚ್ಚಿ ನೋಡಿದರೆ” ಕತೆಯ ಪಾರು-ಅಜ್ಜ, “ತಾಯ್ತನ” ಕತೆಯ ಪೃಥ್ವಿ-ತಂದೆ ಹೀಗೆ ಅನೇಕ ಉದಾಹರಣೆಗಳನ್ನು ನಾವು ನೋಡಬಹುದು. ಅಚ್ಚರಿಯೆಂದರೆ ಈ ಶೈಲಿಯ ಕತೆಗಳಿಗೆ ಲೇಖಕಿ ಒಂದು ತಾರ್ಕಿಕ ಅಂತ್ಯ ನೀಡಿರುವುದನ್ನು ನಾವು ಗಮನಿಸಬಹುದು.
ಇವೆರಡು ಪ್ರಕಾರಗಳನ್ನು ಹೊರತುಪಡಿಸಿ ಯಾವುದಾದರೂ ಸಾಮಾಜಿಕ ಸಮಸ್ಯೆಯ ಕುರಿತು ಕತೆ ಹೇಳಬೇಕಾದಾಗ ಕತೆಗಳನ್ನು ಲೇಖಕಿ ಒಂದು ತರ್ಕದಿಂದ ಅಥವಾ ಸಂಭಾಷಣೆಗಳಿಂದ ಶುರುಮಾಡುತ್ತಾರೆ. ನಂತರ ಪಾತ್ರಗಳನ್ನು ಪರಿಚಯಿಸುತ್ತಾ ಒಂದು ವಂಶ ವೃಕ್ಷವನ್ನು ನಮ್ಮೆದುರಿಗಿಡುತ್ತಾರೆ. ಆ ವಂಶವೃಕ್ಷದಲ್ಲಿನ ಕೆಲವು ಪಾತ್ರಗಳು ಮುಖ್ಯ ಪಾತ್ರಧಾರಿಯಾಗುತ್ತಾ ಹೋಗುತ್ತವೆ. ನಂತರ ಆ ಪಾತ್ರಗಳು ಅನುಭವಿಸುವ ಸಾಮಾಜಿಕ ತೊಂದರೆಗಳನ್ನು ಲೇಖಕಿ ಬರೆಯುತ್ತಾ ಹೋಗುತ್ತಾರೆ. ಆ ತರಹದ ಕತೆಗಳಲ್ಲಿ ಲೇಖಕಿ ಅತ್ಯಾಚಾರ, ಬಾಲಕಾರ್ಮಿಕ ಸಮಸ್ಯೆ, ಅಸ್ಪೃಶ್ಯತೆ, ವರದಕ್ಷಿಣೆ, ವಂಚನೆ ಹೀಗೆ ಅನೇಕ ವಸ್ತು ವಿಷಯಗಳನ್ನು ತಮ್ಮ ಕಥನಕ್ರಮಕ್ಕೆ ಅಳವಡಿಸಿಕೊಂಡಿದ್ದಾರೆ.
ಇದಲ್ಲದೆ ಜಾಹ್ನವಿ ಅವರ ಕತೆಗಳಲ್ಲಿ ಕೆಲವು ಕತೆಗಳು ಮನೋವಿಜ್ಞಾನಕ್ಕೆ ಸಂಬಂಧಿಸಿದ ಕತೆಗಳಾಗಿ ನಿರೂಪಣೆಗೊಂಡಿವೆ. “ತಾಯ್ತನ”, “ಒಳಗುದಿ”, “ಚುಕ್ಕಿಗೆರೆ”, “ಹುಯ್ಯೋ ಹುಯ್ಯೋ ಮಳೆರಾಯ”, “ಅಜ್ಞಾತ”, “ದೂಪ್ದಳ್ಳಿ ಸೆಕ್ಸಿ ದುರ್ಗ”, “ದೇವರ್ ಬಂದಾವ್ ಬನ್ನಿರೋ” ಹೀಗೆ ಈ ಕತೆಗಳಲ್ಲಿ ಹಾಗು ಇತರ ಕತೆಗಳಲ್ಲೂ ನಿರ್ದಿಷ್ಟ ಪಾತ್ರಗಳು ವಿವಿಧ ಕಾರಣಗಳಿಗೆ ತಮ್ಮೊಳಗಿನ ನೋವುಗಳನ್ನು ಅದುಮುತ್ತಲೋ ಪ್ರಕಟ ಮಾಡುತ್ತಲೋ ಮತ್ತೊಂದು ಪಾತ್ರವಾಗಿ ರೂಪಾಂತರಗೊಳ್ಳುವುದನ್ನು ನಾವು ಕಾಣಬಹುದು.
ಶಿಕ್ಷಣ
ಜಾಹ್ನವಿಯವರು ಬಹುಶಃ ತಮಗರಿವಿಲ್ಲದಂತೆಯೇ ಅಂಬೇಡ್ಕರ್ ಅವರ ಮೂರು ಮೂಲ ಮಂತ್ರಗಳಲ್ಲಿ ಬಹುಮುಖ್ಯವಾದ ಮಂತ್ರವಾದ ಶಿಕ್ಷಣದ ಮಹತ್ವವನ್ನು ತಮ್ಮ ಎಲ್ಲಾ ಕತೆಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಇವರ ಕತೆಗಳಲ್ಲಿನ ನಿರೂಪಕಿಯಾದ ಹೆಣ್ಣು ವಿದ್ಯಾವಂತೆಯೇ ಆಗಿರುತ್ತಾಳೆ. ಆಕೆ ನಿರೂಪಿಸುವ ಅನೇಕ ಕತೆಗಳಲ್ಲಿನ ಪಾತ್ರಗಳು ಓದಲು ಹಾತೊರೆಯುತ್ತವೆ. ಹಾಗೆಯೇ ಆ ಪಾತ್ರಗಳ ಪೋಷಕರು ಮಕ್ಕಳಿಗೆ ಹೇಗಾದರು ಮಾಡಿ ಅಕ್ಷರ ಜ್ಞಾನ ಕಲಿಸಿಕೊಡಬೇಕೆಂದು ಶ್ರಮಿಸುವವರೇ ಆಗಿರುತ್ತಾರೆ. ಇವರ ಕತೆಗಳಲ್ಲಿ ಒಂದೊಂದು ವಯೋಮಾನದ ವಿದ್ಯಾರ್ಥಿಗಳು ನಮಗೆ ಕಾಣಸಿಗುತ್ತಾರೆ. ಜೊತೆಗೆ ಆ ವಯೋಮಾನದಲ್ಲಿ ವಿದ್ಯಾರ್ಥಿ ಹಾಗು ಅವರ ಪೋಷಕರು ಎದುರಿಸುವ ಸಮಸ್ಯೆಗಳನ್ನು ಕತೆಗಳ ಓದುವಾಗ ನಾವು ತಿಳಿಯಬಹುದು. ವಿದ್ಯೆಯೆ ಎಲ್ಲದಕ್ಕೂ ಪರಿಹಾರ ಎನ್ನುವ ಥೀಮಿನ ಇವರ ಕೆಲವು ಕತೆಗಳ ಸಾಲುಗಳು ಹೀಗಿವೆ.
“ನನ್ ದೇವೀರಿಗೆ ಈಗೂ ವೋದ ಆಸೆ ತುಂಬ್ಕಂಡೈತೆ. ಏಳ್ನೆ ಕಲಾಸ್ವರ್ಗೂ ಕಲ್ತವ್ಳೆ, ಆದ್ರೆ ಮುಂದೆ ಇನ್ನೂ ಕಲೀಬೇಕನ್ನ ಇಚ್ಛೆ ಆಕೀದು. ಅದನ್ನ ಪೂರೈಸಕೆ ಸಾಧ್ಯವಾ ಮೇಷ್ಟೆ….? ನೀವು ಏನಾರ ಮಾಡಕೆ ಆಯ್ತದಾ…..?”
(ಕತೆ: ಬಸವಿ).
“ಪದುಮಳ ಎರಡನೆಯ ಪಿ.ಯು.ಸಿ.ಯ ಪ್ರಿಪರೇಟರಿ ಪರೀಕ್ಷೆಗಳು ಪ್ರಾರಂಭ ಆಗುವವರೆಗೆ ಇದು ಹೀಗೆ ನಡೆದೇ ಇತ್ತು ಯಾವ ಅಡೆತಡೆಯಿಲ್ಲದೆ. ಅನಂತರ ಫೈನಲ್ ಪರೀಕ್ಷೆ ಬರುವ ಸಮಯಕ್ಕೆ ಸಂಪೂರ್ಣ ಓದಿನಲ್ಲಿ ಮಗ್ನಳಾಗಿ ಬಿಟ್ಟ ಪದ್ಮಾ ಬ್ಯಾಲದಳ್ಳಿಗೆ ಹೋಗುವುದೇ ಅಪರೂಪವಾಯ್ತು. ತನ್ನ ಅಪ್ಪನಂತೆ ತಾನೂ ಡಾಕ್ಟರೇಟ್ ಪಡೆದು, ಪ್ರೊಫೆಸರ್ ಆಗುವುದೇ ಅವಳ ಜೀವನದ ಏಕೈಕ ಗುರಿಯಾಗಿತ್ತು. ಸೆಕೆಂಡ್ ಪಿ.ಯು.ಸಿ.ಯಲ್ಲಿ ಕಾಲೇಜಿಗೇ ಫಸ್ಟ್ ಬಂದಿದ್ದ ಅವಳು ತನ್ನ ಮುಂದಿನ ಜೀವನದ ಗುರಿ ಸಾಧನೆಗೆ ಕಂಕಣ ತೊಟ್ಟು ನಿಂತಳು. ಅದನ್ನು ಸಾಧಿಸಿಯೂ ತೋರಿಸಿದಳು.” (ಕತೆ: ಪರಿವರ್ತನೆ)
“ಅಲ್ಲಪ್ಪ ನಾನಿಷ್ಟು ಕಷ್ಟಪಟ್ಟು ಓದಿದ್ದು, ಬರೆದದ್ದೆಲ್ಲ ಮದ್ದೆಯಾಗಕೇ ಅಂದ್ಕಂಡಿಯಾ………? ನಾನಿನ್ನೂ ತುಂಬ ಓದ್ದೇಕು.. ಏನೇನೋ ಸಾಧಿಸ್ಬೇಕು.” (ಕತೆ: ಹೋರಾಟ)
“ಓಬಳಾಪುರದ ಮಾಸ್ತಿಯವ್ವ ಎಲ್ಲರ ಪ್ರೀತಿಯ ಮಸ್ತಿ, ತನ್ನ ಓರಗೆಯ ಮೇಗಳಟ್ಟಿಯ ಮಕ್ಕಳು ಶಾಲೆಗೆ ಹೋಗುವುದನ್ನು ನೋಡುತ್ತ, ನೋಡುತ್ತ ಅದಕ್ಕಾಗಿ ಕನವರಿಸಿ, ಕನಸುತ್ತ ಬೆಳೆದವಳು. ಬೆಳೆದಂತೆ ಶಾಲೆಯ ಬಗ್ಗೆ, ವಿದ್ಯೆ ಬಗ್ಗೆ ಮೋಹ, ಆಸೆ ಬಿಟ್ಟಿದ್ದಳೇ ಹೊರತು ಅದರ ಬಗ್ಗೆ ಇದ್ದ ಭಕ್ತಿ ಹಾಗೇ ಇತ್ತು. ಓದಿದವರು, ಓದುವವರು ಎಂದರೆ ಅವರೇನು ದೇವತೆಗಳೊ, ಯಕ್ಷ ಗಂಧರ್ವರೋ ಎಂಬಂತೆ ಅವರನ್ನು ಸ್ಪರ್ಶಿಸಿ, ಕಣ್ಣಿಗೊತ್ತಿಕೊಳ್ಳುವಷ್ಟು ಭಕ್ತಿ, ಗೌರವ ಅವಳಿಗೆ. ಬಿ.ಎ. ಪಾಸು ಮಾಡಿದ ಮುತ್ತ, ಅದಕ್ಕಾಗಿ ಬೆವರು ಹರಿಸಿದ ಅವನ ಮನೆಮಂದಿ ಅವಳ ಕಣ್ಣಲ್ಲಿ ದೇವರ ಸಮಾನ. ತಾನೇತಾನಾಗಿ ಅವರ ಬಗ್ಗೆ ಪ್ರೀತಿ, ಗೌರವಾದರಗಳು ಹುಟ್ಟಿದವು. ತನ್ನ ಜನ್ಮ ಸಾರ್ಥಕವಾಯಿತೆಂಬಂತೆ
ಭಾವಿಸಿದಳು. (ಕತೆ: ನೆಪ)
“ನಮ್ ಪಡಿಪಾಟ್ಲು, ನಮ್ ಬವಣೆ ಆ ಮಗಿಗೆ ಬ್ಯಾಡ ಅಂತ ಇಸ್ಕೂಲಿಗಾಕಿದ್ರೆ, ಇವತ್ತು ಅದಕ್ಕೂ ಕಲ್ಲು ಬಿತ್ತು. ನನ್ಮಗನಿಗೂ ಕಂಡೋರ್ಮನೆ ಚಾಕರೀನೆ ಗತಿಯಾಯ್ತಲ್ಲಾ…” (ಕತೆ: ಕಳ್ಳುಬಳ್ಳಿ)
“ಉಹೂಂ ನಾನೋತ್ತಿದೀನಿ ನಂದೇ ಸಂಪಾದ್ನೆಲಿ..” (ಕತೆ: ನೆರೆ ಹಾವಳಿ)
“ನಿಮ್ಮ ಮಗನ ಭವಿಷ್ಯ ನನಗೆ ಬಿಡಿ. ಅವನಿಲ್ಲೇ ಇದ್ದರೆ ಅವನ ಭವಿಷ್ಯ ಖಂಡಿತ ಹಾಳಾಗುತ್ತದೆ. ಅವನಿಗೆ ಹೆಚ್ಚಿನ ವ್ಯಾಸಂಗ ಅದೂ ಅತ್ಯುನ್ನತವಾದ ವ್ಯಾಸಂಗದ ಅನುವು ಮಾಡಿಕೊಡುತ್ತೇನೆ ಅದು ನನ್ನ ಜವಾಬ್ದಾರಿ..
(ಕತೆ: ಆಶ್ರಿತರು)
ಹೀಗೆ ಶಿಕ್ಷಣ ಕುರಿತ ಇಂತಹ ಹಲವು ಸಾಲುಗಳನ್ನು “ಹುಡುಕಾಟ” “ಕನಸು”, “ಜೀರ್ಣ” “ಕಳೆಕೊಂಡವಳು” ಹಾಗು ಇತರ ಕತೆಗಳಲ್ಲೂ ನಾವು ಕಾಣಬಹುದು.
ಹೆಣ್ಣು ಗಂಡು ಶೋಷಣೆ
ಜಾಹ್ನವಿ ಅವರ ಕತೆಗಳಲ್ಲಿ ಹೆಣ್ಣುಗಳ ಪಾತ್ರಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಗಂಡು ಪಾತ್ರಗಳು. ಬಹುಶಃ ಗಂಡು ಪಾತ್ರಗಳು ಇವರ ಕತೆಗಳಲ್ಲಿ ಇಲ್ಲದಿದ್ದರೆ ಇವರ ಯಾವ ಕತೆಗಳಿಗೂ ಅರ್ಥವೇ ಇರುತ್ತಿರಲಿಲ್ಲ. ಗಂಡನ್ನು ಮುದ್ದಿಸುವುದಕ್ಕೋ, ಪ್ರೀತಿಸುವುದಕ್ಕೋ, ದ್ವೇಷಿಸುವುದಕ್ಕೋ, ನಿಂದಿಸುವುದಕ್ಕೋ, ಆರಾಧಿಸುವುದಕ್ಕೋ, ಅಸಹ್ಯಪಟ್ಟುಕೊಳ್ಳುದಕ್ಕೋ, ಅನುಮಾನಿಸುವುದಕ್ಕೋ ಯಾವುದಕ್ಕಾದರೂ ಗಂಡು ಮುಖ್ಯ ಎನ್ನುವುದನ್ನು ಇವರು ಕತೆಗಳು ಒತ್ತಿ ಹೇಳುತ್ತವೆ. ಕತೆಗಳನ್ನು ಓದುತ್ತಾ ಓದಂತೆ ಈ ಎಲ್ಲಾ ಭಾವಗಳು ಅನುಭವಕ್ಕೆ ಬರುತ್ತವೆ.
ಲೇಖಕಿ ಸ್ತ್ರೀ ಆದ ಕಾರಣಕ್ಕೆ ಸ್ತ್ರೀ ಮೇಲೆ ನಡೆಯುವ ಶೋಷಣೆಗಳನ್ನು ವಿವಿಧ ಕತೆಗಳಲ್ಲಿ ಕಟ್ಟಿಕೊಡುತ್ತಾರೆ. ಅನೇಕ ಕತೆಗಳಲ್ಲಿ ಶೋಷಣೆ ಒಂದಲ್ಲ ಒಂದು ರೀತಿಯಲ್ಲಿ ಕಾಣಸಿಗುತ್ತದೆ. ಉಳ್ಳವರು ಇಲ್ಲದವರ ಮೇಲೆ ನಡೆಸುವ ಶೋಷಣೆ, ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಗಂಡಿನ ಮೇಲೆ ಹೆಣ್ಣಿನ ದರ್ಪ ದವಲತ್ತುಗಳನ್ನು ಸಹ ಇವರ ಕತೆಗಳಲ್ಲಿ ನಾವು ಕಾಣಬಹುದು. ಹೀಗೆ ನಿರಂತವಾಗಿ ಒಬ್ಬರ ಮೇಲೆ ಒಬ್ಬರ ಶೋಷಣೆ ಕತೆಯನ್ನಾಗಿಸುವ ಇವರು ಕತೆಗಳಲ್ಲಿ ಕೇವಲ ಕೊಲುವವನನ್ನು ಮಾತ್ರ ಸೃಷ್ಟಿಸದೆ ಗೆಳೆತನದ ರೂಪದಲ್ಲಿ, ತಮ್ಮನ ರೂಪದಲ್ಲಿ, ಗುರುವಿನ ರೂಪದಲ್ಲಿ ಕಾಯುವವರನ್ನು ತಪ್ಪದೇ ತಮ್ಮ ಕತೆಗಳಲ್ಲಿ ಇವರು ತರದೆ ಇರುವುದಿಲ್ಲ.
ಕೊಲ್ಲುವವ ಕಾಯುವವ ಜೋಡಿಗೆ ಒಂದಷ್ಟು ಉದಾಹರಣೆ ಎಂದರೆ; ಕುಲಕರ್ಣಿಯ ಮಗ-ದರಣೆಪ್ಪ (ಕತೆ: ಹೋರಾಟ), ಚೇರ್ಮನ್ ಶನಿದೇವಯ್ಯ-ಮರಿಯಾ (ಕತೆ: ಬಸವಿ), ನಾಗರಾಜಪ್ಪ- ಮನು (ಕತೆ: ನೆರೆ ಹಾವಳಿ) ಹೀಗೆ ಜಾಹ್ನವಿಯವರ ಕತೆಗಳಲ್ಲಿ ಹುಡುಕಿದರೆ ತದ್ವಿರುದ್ಧ ವ್ಯಕ್ತಿತ್ವದ ಪಾತ್ರಗಳು ಯಥೇಚ್ಛವಾಗಿ ನಮಗೆ ಸಿಗುತ್ತಾ ಹೋಗುತ್ತವೆ. ಹಾಗೆಯೇ ಹೆಣ್ಣು ಪಾತ್ರದ ನೆಗಟೀವ್ ನೆರಳುಗಳನ್ನು “ಕಳ್ಳು ಬಳ್ಳಿ” ಕತೆಯ ಇಂದ್ರನಲ್ಲಿಯೂ, “ಕನಸು ಕತೆ”ಯ ಮೀನಕ್ಕನಲ್ಲಿಯೂ ಹಾಗು ಇದೇ ತರಹದ ವ್ಯಕ್ತಿತ್ವಗಳನ್ನು ಇತರ ಕತೆಗಳಲ್ಲೂ ನಾವು ಕಾಣಬಹುದು.
ಒಂದಷ್ಟು ಇನ್ನಿತರ ವಿಷಯಗಳು
ಇನ್ನು ಜಾಹ್ನವಿಯವರು ಕಥನ ಕಲೆಯಲ್ಲಿ ಪಳಗಿದವರಾದರೂ ಅವರ ಕೆಲವು ಕತೆಗಳ ನಿರೂಪಣ ಶೈಲಿ ಚೂರು ಕನ್ಫೂಸ್ ಆಗಿಬಿಡುತ್ತದೆ. ಒಂದು ಪ್ಯಾರಾದಲ್ಲಿ ಪಾತ್ರ ಒಂದು ಕಡೆ ಇದ್ದರೆ ಮುಂದಿನ ಪ್ಯಾರಾದಲ್ಲಿ ಮತ್ತೊಂದು ಕಡೆ ಸ್ಥಳಾಂತರಗೊಳ್ಳುತ್ತದೆ. ಈ ರೀತಿಯ ಅನಿರೀಕ್ಷಿತ ಸ್ಥಾನಪಲ್ಲಟವನ್ನು ನಿರೀಕ್ಷಿಸದಿದ್ದ ಓದುಗ ಕತೆ ಓದುತ್ತಾ ಕತೆಯನ್ನು ಗ್ರಹಿಸಿಕೊಳ್ಳಲು ಮತ್ತೊಮ್ಮೆ ಹಿಂದಿನ ಪ್ಯಾರಾಗಳನ್ನು ಓದಬೇಕಾಗುತ್ತದೆ.
ಶೋಷಣೆ ಕುರಿತು ಕತೆಗಳನ್ನು ರಚಿಸುವಾಗ ಲೇಖಕಿ ಕತೆಗೊಂದು ತಾರ್ಕಿಕ ಅಂತ್ಯ ಕೊಡಲೇಬೇಕು ಅಂದುಕೊಂಡು ಅದಕ್ಕೆ unusual ಅನಿಸುವಂತಹ ಅಂತ್ಯ ಕೊಟ್ಟುಬಿಡುತ್ತಾರೆ (ಉದಾ: ಒಬ್ರು ಸುದ್ಯಾಕೆ.. ಒಬ್ರು ಗದ್ಲ್ಯಾಕೆ…) ಅಥವಾ ನೇರವಾಗಿ ಕಥಾ ಸಾರಾಂಶ ತಿಳಿಯುವ ಹಾಗೆ ಕತೆಗೆ ಶೀರ್ಷಿಕೆ ಬಳಸುತ್ತಾರೆ (ಉದಾ: ಹೋರಾಟ). ಬಹುಶಃ ಇದನ್ನು ಮುಂದಿನ ಕತೆಗಳಲ್ಲಿ ಇದನ್ನು ತಪ್ಪಿಸಬಹುದೇನೋ…
ಹಾಗೆಯೇ ಈ ಪುಸ್ತಕದಲ್ಲಿ ಅನೇಕ ಸಣ್ಣಪುಟ್ಟ ಅಕ್ಷರ ದೋಷಗಳಾಗಿವೆ. ಅದರಲ್ಲೂ ಇಂಗ್ಲೀಷ್ ಪದಗಳು ಯೂನಿಕೋಡ್ ಗೆ ಬದಲಾದಾಗ ಅಕ್ಷರಗಳು ತಪ್ಪಾಗಿವೆ. ಮುಂದಿನ ಮುದ್ರಣದಲ್ಲಿ ಅವುಗಳನ್ನು ಪ್ರಕಾಶಕರು ಸರಿಪಡಿಸಲಿ.
ಕೊನೆಯದಾಗಿ
“ಒಬ್ರು ಸುದ್ಯಾಕೆ… ಒಬ್ರು ಗದ್ಲ್ಯಾಕೆ…” ಎನ್ನುವ ಶೀರ್ಷಿಕೆ ಈ ಪುಸ್ತಕಕ್ಕಿದ್ದರೂ ಈ ಪುಸ್ತಕ ಹಲವರ ಸುದ್ದಿಗಳನ್ನು ಹಲವರ ಗದ್ದಲಗಳನ್ನು ತನ್ನ ಒಡಲಾಳದಲ್ಲಿ ತುಂಬಿಕೊಂಡಿದೆ ಎಂದರೆ ತಪ್ಪಾಗಲಾರದು. ಇದು ಬರೀ ಪುಸ್ತಕದ ಒಡಲಾಳವಷ್ಟೇ ಅಲ್ಲದೇ ಲೇಖಕಿಯ ಒಡಲಾಳವೂ ಆದ ಕಾರಣ ಲೇಖಕಿಯ ಅಭಿವ್ಯಕ್ತಿಯೇ ಈ ಪುಸ್ತಕದ ತಿರುಳು. ಇವರ ಕತೆಗಳ ಕುರಿತು ಬರೆಯುವಾಗ ಅಥವಾ ಪುಸ್ತಕದ ಕುರಿತು ಬರೆಯುವಾಗ ಇವರ ಸಾಹಿತ್ಯವನ್ನು ವಿಮರ್ಶೆ ಮಾಡುವಾಗ ಅನೇಕರು ಜಾಹ್ನವಿ ಅವರಿಗೆ ದಲಿತ ಲೇಖಕಿ, ಸ್ತ್ರೀ ವಾದಿ ಎನ್ನುವ ಹಣೆಪಟ್ಟಿ ಕೊಟ್ಟುಬಿಡುವ ಅಪಾಯವಿರುವ ಕಾರಣಕ್ಕೆ ಆ ಅಪಾಯಗಳನ್ನು ದಾಟಿ ಇವರ ಕತೆಗಳಲ್ಲಿನ ವಿವಿಧ ವಿಚಾರಗಳು ಓದುಗರಿಗೆ ತಲುಪಬೇಕಾದ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಕೌದಿ ಪ್ರಕಾಶನ ಜಾಹ್ನವಿ ಅವರ ಸಮಗ್ರ ಕತೆಗಳ ಸಂಕಲನ ತಂದಿರುವುದು ಖುಷಿಯ ವಿಷಯ. ಜಾಹ್ನವಿ ಅವರು ಬರಹಗಾರರಾಗಿರುವುದರ ಜೊತೆಗೆ ಪ್ರಕಾಶನ ಕ್ಷೇತ್ರದ ಒಳಹೊರವುಗಳನ್ನು ತಿಳಿದುಕೊಂಡು ದೃತಿಗೆಡದೆ ಮತ್ತೆ ಕತೆಗಳ ಬರೆಯಲಿ. ಹಾಗೆಯೇ ತಮ್ಮ ವಿಶಿಷ್ಟ ಕಥಾ ಪರಂಪರೆಯನ್ನು ಹೊಸ ಪೀಳಿಗೆಯ ಓದುಗರಿಗೂ ಬರಹಗಾರರಿಗೂ ಮುಟ್ಟಿಸಲಿ ಎಂದು ಹಾರೈಸುತ್ತೇನೆ.
ವಿಸೂ: ಗೊತ್ತಿಲ್ಲ ಜಾಹ್ನವಿ ಅವರ ಅಷ್ಟೂ ಕತೆಗಳನ್ನು ಓದಿಕೊಂಡ ಮೇಲೆ ಅವರ ಭಾಷೆಯ ಸೊಗಡಿನ ಮೇಲೆ ವಿಶೇಷ ಪ್ರೀತಿ ಉಕ್ಕುತ್ತಿದೆ. ಇವರ ಕಥನ ಶೈಲಿಯನ್ನು ನೀವು ಪುಸ್ತಕ ಓದಿಯೇ ಆಹ್ವಾದಿಸಬೇಕು. ನೋಡಿ ಪುಸ್ತಕ ತರಿಸಿಕೊಂಡು ಓದಲು ಟ್ರೈ ಮಾಡಿ…
-ಡಾ. ನಟರಾಜು ಎಸ್ ಎಂ
ಕೃತಿ: ಒಬ್ರು ಸುದ್ಯಾಕೆ… ಒಬ್ರು ಗದ್ಲ್ಯಾಕೆ (ಕಥಾಸಂಕಲನ ಸಮಗ್ರ)
ಪ್ರಕಟಣೆಯ ವರ್ಷ: ೨೦೨೪
ಲೇಖಕರು: ಬಿ ಟಿ ಜಾಹ್ನವಿ
ಪುಟಗಳು: ೩೩೪
ಬೆಲೆ: ರೂ. ೩೫೦/-
ಪ್ರತಿಗಳಿಗಾಗಿ ಸಂಪರ್ಕಿಸಿ: 9008660371
ಇವರ ಕೆಲವು ಕತೆಗಳನ್ನು ಓದಿದ್ದೆ….
ಅಷ್ಟೂ ಕತೆಗಳ ನಿಮ್ಮ ವಿಶ್ಲೇಷಣೆ ತುಂಬಾ ಸಮರ್ಪಕವಾಗಿದೆ….
ಧನ್ಯವಾದಗಳು ಸರ್ 😍👌👏
ಅಪರೂಪದ ರಿವ್ಯೂ. ಕಥೆಗಳ ಆಖ ಅಗಲ ಪರಿಚಯಿಸಿದ್ದೀರಿ. ಕಥೆಗಳ ನಿರೂಣೆ, ಕಥೆಗಳಲ್ಲಿ ಶಿಕ್ಷಣ, ಸ್ತ್ರೀ ನೆಲೆ, ದಲಿತ ನೆಲೆ, ಹೋರಾಟದ ನೆಲೆ, ಹೀಗೆ ವಿಮರ್ಶಾ ವಿಧಾನ ಭಿನ್ನವಾಗಿದೆ. ಇವರ ಕಥೆಗಳನ್ನು ಪಿ.ಲಂಕೇಶ್ ಸಂಪಾದಕತ್ವದ ಲಂಕೇಶ್ ಪತ್ರಿಕೆಯಲ್ಲೆ ಓದಿ ಆಸ್ವಾದಿಸಿದ್ದೆ. ಬಿ.ಟಿ.ಜಾಹ್ನವಿ ಕನ್ನಡದ ಎಲ್ಲ ಬರಹಗಾರರು ಓದಲೇಬೇಕಾದ ಕಥೆಗಾರ್ತಿ.
ಎಂ.ಜವರಾಜ್