ಅಮ್ಮ ಆಯ್ ಲವ್ ಯು
ಕರವ ಹಿಡಿದು ನನ್ನ ಎತ್ತಿ ಆಡಿಸಿದೆ
ಅಪ್ಪಿ ಮುದ್ದಾಡುತ್ತಾ ಹಾಲು ಉಣ್ಣಿಸಿದೆ
ಅತ್ತು ಕರೆದಾಗ ಗುಮ್ಮನ ಕರೆದು
ಸುಮ್ಮನಾಗಿಸಿದೆ
ಚಂದಿರನ ತೋರಿಸುತ
ಊಟವ ಮಾಡಿಸಿದೆ
ಜೋ ಜೋ ಲಾಲಿಹಾಡಿ ನಿದ್ದೆಯ
ಮಾಡಿಸಿದೆ
ಹಠವ ಮಾಡಿದಾಗ ಒಂದು
ಪೆಟ್ಟು ಹಾಕಿದೆ
ಜೋರಾಗಿ ಅಳಲು ಎದೆಗೆ ಅಪ್ಪಿ
ನೋವನ್ನು ಮರೆಸಿದೆ
ಗಲ್ಲವ ಹಿಡಿದು ಮುತ್ತನು ನೀಡಿದೆ
ಪಪ್ಪಿಯ ನೀಡೆಂದು ಕಾಡಿಬೇಡಿದೆ
ಮಡಿಲಲ್ಲಿ ಇಟ್ಟುಕೊಂಡು ಬೆಚ್ಚನೆಯ
ಭಾವ ಮೂಡಿಸಿದೆ
ಅರಳು ಹುರಿದಂತೆ ಮಾತನಾಡುವ
ಪರಿಗೆ ನಕ್ಕು ನಲಿದೆ
ಹೆಜ್ಜೆ ಹೆಜ್ಜೆಗೂ ತಡವರಿಸಿ ಬೀಳದಂತೆ ಜೊತೆಯಾದೆ
ಎಷ್ಟೇ ಕಷ್ಟವಾದರೂ ನನ್ನ ನೋಡಿ ನೀ ಎಲ್ಲವನ್ನೂ ಮರೆತೆ
ಜಗದ ಸಂಭ್ರಮ ನನಗಾಗಿ ನೀ ತಂದೆ
ನೀನೇ ನನ್ನ ಸರ್ವಸ್ವ ನೀನೇ ನನ್ನ
ಜೀವವೆಂದೆ
ಇಷ್ಟು ಪ್ರೀತಿಯ ತೋರಿಸಿದ ನೀನು
ಇಂದೇಕೆ ಹೀಗಾದೆ
ಕಫದ ಸಿರಪ್ ಕುಡಿಸಿ ನಿದ್ದೆಯ
ಮಂಪರು ಬರೆಸಿದೆ
ತಲೆದಿಂಬಿನಿಂದ ಒತ್ತಿ ಉಸಿರುಗಟ್ಟಿಸಿದೆ ಹೂವಂತ ನಿನ್ನ ಕೈಗೆ ರಕ್ತದ
ಕಲೆ ಏಕೆ ಅಮ್ಮ
ಇದು ನಿನಗೆ ಬೇಕಿತ್ತೇ ಅಮ್ಮ
ನೀನಾದೆ ಏಕೆ ಅರೆಕ್ಷಣ ಗುಮ್ಮ
ಅಪ್ಪನ ಮೇಲಿನ ಸಿಟ್ಟಿಗೆ ನನ್ನೇಕೆ ಬಲಿ ತೆಗೆದುಕೊಂಡೆ
ದೇವತೆಯಂತಿದ್ದ ನೀನು ಕ್ಷಣ ಮಾತ್ರದಲ್ಲಿ
ಏಕೆ ದೆವ್ವದಂತಾದೆ
ನಿನ್ನ ನೋವು ಹತಾಶೆ ಉದ್ದೇಶ
ಗೊತ್ತಿದ್ದರೆ ನಾನೇ ಆಟ ಆಡುತ್ತಾ
ಈಜುಕೊಳಕ್ಕೆ
ಬಿದ್ದು ಸಾಯುತ್ತಿದ್ದೆ
ಅಮ್ಮನ ಹೆಸರಿಗೆ ಬರುವ
ಕಳಂಕ ತಪ್ಪಿಸುತ್ತಿದ್ದೆ ಅಮ್ಮ ಎಂದರೆ ದೇವರಲ್ಲವೇನಮ್ಮ ನೀನೆಂದರೆ
ನನಗೆ ಇಷ್ಟವಮ್ಮ
ನಿನ್ನ ಮೇಲೆ ಬೆಟ್ಟದಷ್ಟು ಪ್ರೀತಿಯಮ್ಮ
ಐ ಲವ್ ಯು ಅಮ್ಮ
ಹೋಗಿ ಬರುವೆನಮ್ಮ
ಮತ್ತೊಮ್ಮೆ ನಿನ್ನ ಹೊಟ್ಟೆಯಲ್ಲೇ ಹುಟ್ಟಿ ಬರುವೆನಮ್ಮ
ಮತ್ತೊಮ್ಮೆ ಈ ತಪ್ಪು ಮಾಡಬೇಡವಮ್ಮ
ಆಶಯ
ಹೊರಲಾರೆವು ನಾಳೆ ಸತ್ತಾಗ
ನಮ್ಮ ಹೆಣವನ್ನೇ ನಾವು
ಹೊತ್ತುಕೊಳ್ಳಬೇಕು ನಾವು
ನಮ್ಮ ಕಷ್ಟ ನಷ್ಟ ನೋವು
ನಲಿವುಗಳನ್ನ
ಅನುಭವಿಸಬೇಕು ಸುಖ
ದುಃಖಗಳನ್ನ
ಸಹಿಸಿಕೊಳ್ಳಬೇಕು ಎಲ್ಲ
ತಾಪತ್ರಯಗಳನ್ನ
ಒಂದಿಷ್ಟು ಸ್ಮರಣೆ ಒಂದಿಷ್ಟು
ಉಪಕಾರ ಮಾಡಿ ಹೋಗಬೇಕು
ನಾವು ನಮ್ಮತನವನ್ನು ಉಳಿಸಿ
ನಮ್ಮತನವನ್ನು ಬೆಳೆಸಿ
ಒಳ್ಳೆಯತನವನ್ನು ಸಂಪಾದಿಸಿ
ಬಿಟ್ಟು ಹೋಗಬೇಕು
ಕೊಟ್ಟು ಹೋಗಬೇಕು ನಾವು
ನಮ್ಮೆಲ್ಲ ಸದ್ಗುಣಗಳನ್ನ
ನಶಿಸಿಹೋಗುವ ಮೊದಲು
ನಮ್ಮವರ ಮನದಲ್ಲಿ ಉಳಿದು
ಹೋಗಬೇಕು
ನಮ್ಮವರಿಗಾಗಿ ದುಡಿದು ಬೆವರ
ಹನಿಯನ್ನು ಸುರಿಸಿ
ನೆಮ್ಮದಿಯ ಕೊಟ್ಟು
ಸಂತೃಪ್ತಿಯಲಿ ಇಟ್ಟು
ಬಾಳ ಸಂಜೆಗೆ ಹಿಡಿ ಮುಷ್ಟಿಯಷ್ಟು
ಉಳಿಸಿ ಹೋಗಬೇಕು
ಹೊಸ ಬೆಳಕಿನ ಜೊತೆ
ಸಾಗಬೇಕು
-ನಾಗರಾಜ ಜಿ. ಎನ್. ಬಾಡ