ಬೆಳಿಗ್ಗೆ ಐದೂವರೆಗೆಲ್ಲ ಅಲಾರ್ಮ್ ಹೊಡೆದುಕೊಳ್ಳುತ್ತದೆ. ಇನ್ನೊಂದೈದು ನಿಮಿಷ ಎಂಬಂತೆ ಮಗ್ಗುಲು ಬದಲಿಸಿ ನೋಡುವುದರಲ್ಲೇ ಹತ್ತು ನಿಮಿಷ ದಾಟಿರುತ್ತದೆ. ಎದ್ದು ದೇಹ ವಿಸರ್ಜನೆಗಳನ್ನು ಮುಗಿಸಿ, ಹಲ್ಲುಜ್ಜಿ ಬರ್ಮುಡಾ, ಮೇಲೊಂದು ತೆಳು ಟೀಶರ್ಟ್ ಒಳಗೆ ತೂರಿಕೊಂಡು ಬೈಕ್ ಸ್ಟಾರ್ಟ್ ಮಾಡುವುದರೊಳಗೆ ಒಮ್ಮೆ ಕೃಷ್ಣನಿಗೆ ಕರೆ ಮಾಡುತ್ತೇನೆ.
” ಈಗ ಮನೆ ಬಿಡ್ತಿದೀನಿ ಸರ್” ಅನ್ನುತ್ತಾನೆ.
ಅವನು ಸೈಕಲ್ ಏರಿ ಬಂದು, ನಾನು ಬೈಕ್ ನಿಲ್ಲಿಸುವುದಕ್ಕೂ ಹೊಸದಾಗಿ ಲೇ ಔಟ್ ಆದ ಜಾಗದ ಎಂಟ್ರೆನ್ಸ್ ನಲ್ಲಿರುತ್ತೇವೆ. ರಾತ್ರಿ ಪೂರ್ತಿ ಕಾದು, ಬೆವರಿ, ” ಏನ್ ಕೆಟ್ ಬ್ಯಾಸ್ಗಿನೋ ಇವ್ನೌನ್” ಎಂದು ಬೈದುಕೊಳ್ಳುತ್ತಾ, ಸೆಖೆ ತಡ್ಕಳಕ್ಕಾಗದೇ, ಸರಿಯಾಗಿ ನಿದ್ದೇನೂ ಮಾಡದೇ ಬೆಳಗಿನ ಜಾವಕ್ಕೆ ಇಲ್ಲಿ ಬಂದಾಗ ಮಾತ್ರ ಕೊಂಚ ತಣ್ಣನೇ ಗಾಳಿ ಸುಳಿಯುತ್ತಲೇ ಮೈ ಅರಳಿ ಆಹಾ!!!!! ಎನ್ನುತ್ತದೆ.
ಮಬ್ಬುಗತ್ತಲಲ್ಲಿ ಇಡೀ ಲೇ ಔಟ್ ನಲ್ಲಿ ವಾಕ್ ಮಾಡುವವರೆಷ್ಟು? ಯಾರು? ಹತ್ತಿರಾಗುವವರೆಗೂ ಗೊತ್ತೇ ಆಗುವುದಿಲ್ಲ… ಕೇವಲ ಅಕೃತಿಗಳಷ್ಟೇ ಚಲಿಸುತ್ತಿರುವ ನೋಟ. ಅಲ್ಲಿಗೆ ಕೃಷ್ಣ ಮತ್ತು ನಾನು ಬರ್ ಬರ್ ಅಂತ ಹೆಜ್ಜೆ ಹಾಕುತ್ತಾ ಸಾಗುತ್ತೇವೆ…
ಆದರೆ ….
ಒಂದೇ ಒಂದು ಆಬ್ಸೆನ್ಸು ಕಾಣುತ್ತದೆ. ಅದನ್ನು ಕೃಷ್ಣನಿಗೆ ನೇರ ಹೇಳಿಬಿಡುತ್ತೇನೆ…
” ಆಕೆ ಇವತ್ತು ಕಾಣಿಸುತ್ತಿಲ್ಲ.”
ಕೃಷ್ಣ ನನ್ನ ಮುಖ ನೋಡುತ್ತಾನೆ… ” ಹೌದು ಸಾ… ನಾನೂ ಬರೋ ದಾರಿಯಲ್ಲಿ ನೋಡುತ್ತಲೇ ಬರುತ್ತೇನೆ… ಎಲ್ಲೂ ಕಾಣಿಸುತ್ತಿಲ್ಲ” ಅನ್ನುತ್ತಾನೆ.
ವಾಕ್ ಮಾಡುತ್ತಾ ಸುತ್ತ ಕಾಣುವ ಒಂಟಿ ಗಂಡಸರನ್ನು ಹುಡುಕುತ್ತೇವೆ. ಮೊದಲಿನಂತಿಲ್ಲ. ಕಡಿಮೆಯಾಗಿದ್ದಾರೆ. ಈಗಲೂ ಬರುವವರಿದ್ದಾರೆ ಬಿಡಿ, ಅವರಲ್ಲಿ ನಾಲ್ಕು ರೌಂಡ್ ಹೊಡೆದು ಕಾರ್ನರ್ ನಲ್ಲಿ ಇರುವ ಸಿಮೆಂಟ್ ಸೀಟುಗಳು , ಕಟ್ಟೆ ಮೇಲೆ ಕುಳಿತು ತಮ್ಮ ತಮ್ಮಲ್ಲೇ ಇರಬಹುದಾದ ಸುದ್ದಿ ಸಂಗ್ರಹಗಳನ್ನು ಶಕ್ತ್ಯಾನುಸಾರವಾಗಿ ಡಿಫೆನ್ಸಿವ್ ಆಗಿ ಹೇಳುತ್ತಾ ಹರಟೆ ಮತ್ತು ಪ್ರತಿಪಾದನೆಗೆ ನಿಂತುಬಿಡುವ ಹತ್ತತ್ತಿರ ಐವತ್ತರ ಗಂಡು ಪಡೆ ನಿಂತು ಬಿಡುತ್ತದೆ.
ಮುಖಗಳು ಸ್ಪಷ್ಟವಾಗುತ್ತಾ ಹರಿದ ಬೆಳಕಾದಂತೆಲ್ಲಾ ನೈಟಿ ಮೇಲೊಂದು ವೇಲ್ ಧರಿಸಿ ನಡೆವ, ಅರವತ್ತು ದಾಟಿದ ಸಮ ತೂಕದ ಸೀರೆಯುಟ್ಟ ಹೆಂಗಸರು, ತಾನು ವಾಕ್ ಮಾಡದಿದ್ದರೂ ಪರವಾಗಿಲ್ಲ, ತನ್ನ ಎರಡು ವರ್ಷವೂ ದಾಟದ ಮಗನನ್ನು ಮೂರು ಗಾಲಿ ಸೈಕಲ್ ನಲ್ಲಿ ಕೂರಿಸಿ ತಳ್ಳುವ ಮಾಣಿಕ್ ಚಂದ್ ಬಾಯ್(ಯಿ), ಚೂಡಿದಾರ್ ಧರಿಸಿ ತಮ್ಮ ತಮ್ಮ ಗಂಡಂದಿರೊಡನೆ ಆಗತಾನೇ ಫೀಲ್ಡಿಗಿಳಿವ ಜೋಡಿಗಳು, ಎಂಭತ್ತು ದಾಟಿದ ಅತ್ಯಂತ ಹುರುಪಿನ ಯಜಮಾನ, ನಮಸ್ಕಾರ ಯಜಮಾನ್ರೆ ಅಂದರೆ “ಜೈ ಶ್ರೀರಾಮ್” ಎಂದು ಸಂಭೋಧಿಸುವ ಸಂತನಂತಿರುವ ಮತ್ತೊಬ್ಬ ಗಡ್ಡಧಾರಿ, ಎಲ್ಲರೂ ಎದುರಾಗುತ್ತಾರೆ.
ಅದೆಲ್ಲಕ್ಕೂ ಕೆಲ ದಿನಗಳ ಮುನ್ನ ನಾವು ಇನ್ನೇನು ಮಬ್ಬೆಳಕಲ್ಲಿ ವಾಕ್ ಶುರು ಮಾಡಬೇಕು…. ಅಷ್ಟರಲ್ಲೇ ಬಿರು ನಡಿಗೆಯ ಆಕೃತಿಯೊಂದು ಮಿಂಚಿನಂತೆ ನಮ್ಮನ್ನು ದಾಟಿ ಹೆಜ್ಜೆಯಿಡುತ್ತಾ ನಮ್ಮಿಂದ ಮುಂದಕ್ಕೆ ಮುಂದಕ್ಕೆ ಸಾಗುತ್ತದೆ… ಮೊದ ಮೊದಲು ನಾನಿದನ್ನು ಎಲ್ಲರಂತೆ ವಾಕ್ ಮಾಡಲು ಬಂದವರೆಂದೇ ಅಂದುಕೊಂಡಿದ್ದೆನು.
ಅದಲ್ಲವೇ ಅಲ್ಲ..
ಪ್ರತಿ ದಿನ ಕರೆಕ್ಟಾಗಿ ಶುರು ಮಾಡುವ ನಮ್ಮ ವಾಕ್ ಗಿಂತ ಎರಡು ಹೆಜ್ಜೆ ಮುಂದೆಯಷ್ಟೇ ಶುರುಮಾಡಿ ನಡೆವ ಆಕೃತಿಯನ್ನು ನೋಡಬೇಕು… ಅದೊಂದು ಸುಂದರ, ಸೌಮ್ಯ ಮುಖದ, ಗಂಭೀರ ನಡಿಗೆಯ, ಯಾರನ್ನೂ ಅತ್ತಿತ್ತ ನೋಡದ, ಮಾತನಾಡಿಸದ, ಕೇವಲ ತನ್ನ ಬಿರುನಡಿಗೆಯ ಮೇಲಷ್ಟೇ ಗಮನವಿಟ್ಟ ಒಬ್ಬಳು ಹೆಂಗಸು.
ಆಕೆಯನ್ನು ಪ್ರತಿದಿನ ಹಿಂದಿಕ್ಕಿ ಮುಂದೆ ಸಾಗುವುದಿರಲಿ, ಕನಿಷ್ಠ ಪಕ್ಷ ಜೊತೆ ಜೊತೆಗೆ ಹೆಜ್ಜೆ ಹಾಕುವಷ್ಟು ಅವಕಾಶ ಸಿಗದೇ ಮುಂದೆ ನಡೆಯುತ್ತಿದ್ದ ಹೆಂಗಸು. ಒಮ್ಮೆ ಮಾತ್ರ ನಮ್ಮನ್ನು ಹಿಂದಿಕ್ಕಿ ನಡೆಯುವಾಗ ತಿಳಿ ಬೆಳಕಲ್ಲಿ ಸೈಡಲ್ಲಿಂದ ನೋಡಿದಂತೆ ಕೆಂಪು ರಂಗಿನ ದುಂಡು ಮುಖ, ದೊಡ್ಡ ಕಣ್ಣು, ಕಾದ ಸೀಸದಂಥ ನೋಟ, ಟ್ರ್ಯಾಕ್ ಸೂಟ್, ಶೂ ಧರಿಸುತ್ತಾಳೆ. ಆಕೆಯೇನಾದರೂ ಸ್ಪೋರ್ಟ್ಸ್ ವುಮನ್ನಾ?!! ಗೊತ್ತಿಲ್ಲ. ಕಿವಿಯಲ್ಲಿ ಹೆಡ್ ಫೋನ್ ಹಾಕಿಕೊಂಡು ತನ್ನ ಪಾಡಿಗೆ ತಾನು ನಡೆಯುತ್ತಿದ್ದರೆ ಐದಡಿಗಿಂತ ಚೂರು ಹೆಚ್ಚು ಎತ್ತರದ ಆಕೆಯ ಕಡುಗಪ್ಪು ಮುಂದಲೆ ಕೂದಲ ಜೊಂಪು ಹಣೆಯನ್ನು ಲೆಕ್ಕವಿಡದೇ ಮುತ್ತಿಡುತ್ತವೆ… ಹಿಂದಲೆಗೆ ಬಿಗಿದ ಬ್ಯಾಂಡ್ ಒಂದೇ… ಆದರೆ ಸಡಿಲ ಬಿದ್ದ ಉದ್ದನೆಯ ಕೂದಲು ಜಿದ್ದಿಗೆ ಬಿದ್ದು ಗಾಳಿಗೆ ಸೋಕಿ ಜಿಮ್ನಾಸ್ಟಿಕ್ ಮೂಡಲ್ಲಿರುತ್ತದೆ.
ಆಕೆಯನ್ನು ಹಿಂಬಾಲಿಸಿ, ಮಾತಾಡಿಸಿ, ಇಂಪ್ರೆಸ್ ಮಾಡಿ, ಒಲಿಸಿಕೊಂಡು ಪ್ರೀತಿಸುವ ವಯಸ್ಸಾ ನಮ್ಮದು?!!! ಆಕೆಯಾದರೂ ಅಷ್ಟೇ. ನಡಿಗೆ, ಗಂಭೀರತೆ, ನೋಡಿದರೆ ಆಗಲೇ ಆಕೆ ಮದುವೆಯಾದವಳೇ ಇರಬೇಕು. ಮಕ್ಕಳು ಇದ್ದಾವಾ?! ಇರಬಹುದು ಹಾಗಂತ ಆಕೆ ಬೆಳ್ ಬೆಳಿಗ್ಗೇನೆ ಬಂದು ಹೀಗೆ ಬ್ರಿಸ್ಕ್ ವಾಕ್ ಮಾಡುವುದನ್ನು ನೋಡುತ್ತಿದ್ದರೆ ಹೆಲ್ತ್ ಕಾನ್ಷಿಯಸ್ ಅದನ್ನು ಖಾತರಿಪಡಿಸುತ್ತದೆ….
ಅದೆಲ್ಲ ಸರಿ ಆದರೂ…. ಆಕೆ ಅದೆಷ್ಟು ಸ್ಪೀಡು!???
ಬಹುಶಃ ಅಲ್ಲಿಗೆ ಹಾಗೆ ಬಂದು ಹೀಗೆ ಕಾಲೆಳೆದುಕೊಂಡು ವಾಕ್ ಮುಗಿಯಿತೆಂದು ಬಂದು ಕುಳಿತು ದಣಿವಾರಿಸಿಕೊಂಡ ಗಂಡು ಪಡೆಯ ಸಮಯ ಅವರು ವಾಕ್ ಮಾಡಿದ್ದಕ್ಕಿಂತ ಹೆಚ್ಚು… ಅಂಥವರೂ ಸಹ ಈಕೆಯ ಸರಿಸಮನಕ್ಕಾದರೂ ಒಂದು ದಿನ ವಾಕ್ ಮಾಡಬೇಕೆಂದು ಹುರುಪುಗೊಂಡವರೇ..
ನಾನು ಬಿಡಿ, ಈಗ್ಗೆ ಒಂದು ತಿಂಗಳಾಗಿರಬಹುದು… ನಾಲ್ಕಾರು ರೌಂಡು ಬೆವರು ಕಿತ್ತುವಂತೆ ವಾಕ್ ನಂತರ ಐದಾರು ರೌಂಡು ಸೈಕ್ಲಿಂಗ್ ಮಾಡಿ ಕೃಷ್ಣನಿಗೆ ಬೈ ಹೇಳಿ ಮುಂದಿನ ಹರಟೆ ಕಾರ್ಯಕ್ರಮ ಸಹಿತ ದೇಹ ಮಣಿಸಲು ಹೊರಟುಬಿಡುತ್ತೇನೆ.. ನಾನು ಸಹ ವಾಕ್ ಮಾಡುವ ಹೆಂಗಸರನ್ನು ನೋಡಿದ್ದೇನೆ. ಒಂದೇ ಹದದ ಸ್ಪೀಡು, ದಣಿವಿಲ್ಲದಂತೆ ಆರೆಂಟು ರೌಂಡು ನಡುವಯಸ್ಸಿರಲಾರದೆಂಬ ಡೌಟು ಉಳಿಸಿ ಬ್ರಿಸ್ಕ್ ವಾಕ್ ಮಾಡುವ ಸದೃಢ ದೇಹದ ಹೆಂಗಸಿನಂತೆ ಯಾರನ್ನೂ ನೋಡಿಲ್ಲ….
ಪ್ರತಿ ದಿನ ಈಗಲೂ ಸಮಯ ತಪ್ಪಿಲ್ಲ. ಕೃಷ್ಣ ಮತ್ತು ನಾನೂ ತಪ್ಪಿಸುತ್ತಿಲ್ಲ…. ವಾಕ್ ಮಾಡುತ್ತೇವೆ. ನಾನು ಸೈಕ್ಲಿಂಗ್ ಮಾಡುತ್ತೇನೆ. ದೇಹ ಬೆವೆತು ಹಸಿಯಾಗುತ್ತದೆ. ಮಧ್ಯೆ ಹಲವು ಪುಸ್ತಕಗಳೂ ಹೆಸರಾಗುತ್ತವೆ, ಕವಿತೆಗಳಿಗೂ ಕಿವಿಗೂಡುತ್ತವೆ, ಹಾಡುಗಳ ಸಾಹಿತ್ಯಕ್ಕೂ ಕಣ್ಣರಳುತ್ತವೆ…
ಮತ್ತೆ…..
ನಾನು ಮತ್ತು ಕೃಷ್ಣ ಪಿಸುಗುಡುತ್ತೇವೆ…. ” ಆಕೆ ಇವತ್ತೂ ಬಂದಿಲ್ಲ”….
ಅಸಲಿ ವಿಷಯ ಏನೆಂದರೆ ಹರಟೆಗೆ ಕುಳಿತು ಚಟಾಕಿ ಹಾರಿಸಿ ” ಗಂಡಸರ ಕನಸಲ್ಲಿ ಯಾವತ್ತಾದ್ರೂ ಅವರ ಹೆಂಡತಿಯರು ಬಂದಿದ್ದು ಇದೆಯಾ “. ಅನ್ನುವ ಗಂಡಸರು ಐವತ್ತು ದಾಟಿದರೆ ಉಳಿದ ಆಯುಷ್ಯ ಗ್ರೇಸ್ ಪೀರಿಯಡ್ ಅಂದುಕೊಳ್ಳುವ ಬದಲು ಒಂದಿಷ್ಟು ವಾಕಿಂಗು, ಚೂರು ದೇಹ ದಣಿದು ಹುರಿಗೊಳ್ಳುವಂತೆ ಆದೀತು… ಆ ಕಾರಣಕ್ಕಾದರೂ ಬೆಳಿಗ್ಗೆ ಬೇಗ ಎದ್ದೇಳಿ ಅಂತಷ್ಟೇ ಹೇಳೋದಿತ್ತು… ಹಾಗಂತ ನೀವು ವಾಕ್ ಮಾಡುವ ದಾರಿಯಲ್ಲಿ ಇನ್ಸ್ಪಿರೇಷನ್ ಗಾಗಿ ಸುಂದರಿಯರು ಸಿಗಲಿ ಎಂಬ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಹಾಗೆಯೇ ನಾನು ಯಾವ ಲೇಔಟಲ್ಲಿ ವಾಕಿಂಗು, ಸೈಕ್ಲಿಂಗು ಮಾಡುತ್ತೇನೆಂದು ಕೇಳಿ ಬರುವುದಾದರೆ ಬಂದು ಸೇರಿಕೊಳ್ಳಿ…ಆದರೆ “ಎಲ್ಲಿ ಆ ಬಿರುನಡಿಗೆಯ ಹೆಂಗಸು ?” ಅಂತ ಕೇಳಬೇಡಿ. ಈಗಾಕೆ ಕಾಣುತ್ತಿಲ್ಲ.
ಕಡೆ ಮಾತು:
ಒಬ್ಬ ಹೆಂಗಸಿನ ವರ್ಣನೆ, ಚೆಂದಗಾಣುವ ಬಗ್ಗೆಯಾಗಲೀ ಅಥವಾ ಆರೋಗ್ಯದ್ದಾಗಿದ್ದರೂ ಸರಿ ಗುಣಗಾನ ಮಾಡಿದರೆ ಇನ್ನೊಬ್ಬ ಹೆಂಗಸು ಮೊದಲೇ ಸಹಿಸಲಾರಳು…. ಅದರಲ್ಲೂ ಹೆಂಡತಿಯಾದವಳಿಗೆ ವಾಕಿಂಗ್ ಹೋದಾಗ ಕಂಡ ಹೆಂಗಸಿನ ವಿಷಯ ಹೇಳಿದ್ದೇ ಆದರೆ ” ನಿಮ್ಗೆ ಮನೆ ಹೆಂಡ್ರುಗಿಂತ ಕಂಡವ್ರ ಹೆಂಡ್ರೇ ಚೆಂದ್ ಕಾಣುಸ್ತಾರ…. ಅವರಿವರನ್ನು ನೋಡಂಗಿತ್ತಂದ್ರ ನಮ್ಮುನ್ ಯಾಕ್ ಕಟ್ಗ್ಯಂಡ್ ಬಂದ್ರಿ…?” ಅಂತೆಲ್ಲಾ ಅನ್ನಿಸಿಕೊಳ್ಳುವ ಎಲ್ಲ ಗಂಡಂದಿರಿಗೆ ಆಗಬಹುದಾದಂಥ ಸಾರ್ವತ್ರಿಕ ಅಪಾಯವಿರುತ್ತದೆ..
ಮಕ್ಕಳು ಹರೆಯಕ್ಕೆ ಬಂದ ಮೇಲೆ ಇದೆಲ್ಲಾ ಬೇಕಾ?!
ಅದೇನೋ ಅಂತಾರಲ್ಲ, ಏನೋ ಹೇಳಲು ಹೋಗಿ ಅವಘಡ ಮಾಡಿಕೊಳ್ಳೋದಕ್ಕಿಂತ ವ್ಯವಸ್ಥಿತವಾಗಿ ಸಾಕ್ಷಿ ಸಹಿತ ಮುಖಾಮುಖಿಯಾದ ಹಳೇ ಅಪಘಾತದಂಥ ಹೆಂಡತಿ ಜೊತೆ ಆಕೆಗೆ ಇಷ್ಟವಾಗಿದ್ದನ್ನಷ್ಟೇ ಹೇಳಿ ಸುಮ್ಮನಿರುವುದು ವಾಸಿ….
ಅದಕ್ಕೆ ಹೆಣ್ತಿಗೆ ಇದನ್ನು ಹೇಳಲಿಲ್ಲ….
-ಪಿ.ಎಸ್. ಅಮರ ದೀಪ್
Hilarious and good story.. 😀