“ಪೋಸ್ಟ್ ಮ್ಯಾನ್ ಗಂಗಣ್ಣ” (ಭಾಗ ೧): ಎಂ.ಜವರಾಜ್

-೧-

ಕರೋನ ಅಪ್ಪಳಿಸಿ ಜನ ಆಚೀಚೆ ಹೋಗಲೂ ಆಗದ ಸ್ಥಿತಿ. ಸರ್ಕಾರದ ಕಟ್ಟುನಿಟ್ಟಿನ ನಿಯಮಾವಳಿ. ಲಾಕ್ಡವ್ನ್ ಕಾರಣ ಜನಜೀವನವೇ ತತ್ತರಿಸಿತ್ತು. ನ್ಯೂಸ್ ಚಾನೆಲ್ಗಳ ಬ್ರೇಕಿಂಗ್ ನ್ಯೂಸ್ಗಳು, ಸೋಶಿಯಲ್ ಮೀಡಿಯಾಗಳ ಪೋಸ್ಟ್ಗಳು ಭೀತಿಯನ್ನು ಹುಟ್ಟಿಸಿದ್ದವು. ಈ ತತ್ತರದ ಭೀತಿಯಲ್ಲೇ ಸರ್ಕಾರಕ್ಕೆ ತನ್ನ ಬೊಕ್ಕಸದ ಚಿಂತೆಯಾಗಿತ್ತು. ಕೇಂದ್ರ ಸರ್ಕಾರದ ರಾಜ್ಯವಾರು ಸಡಿಲ ನಿಯಮಾವಳಿಗಳ ಅಡಿಯಲ್ಲಿ ಎಂದಿನಂತೆ ಜನರ ಓಡಾಟ ಕೆಲಸ ಕಾರ್ಯಗಳು ನಿಧಾನಕೆ ಎಂದಿನ ಸ್ಥಿತಿಗೆ ಮರಳತೊಡಗಿತು. ನನಗೂ, ಒಂದೂ ಒಂದೂವರೆ ತಿಂಗಳು ಮನೆಯಲ್ಲಿ ಕುಂತು ಕುಂತು ಲೈಫ್ ಇಷ್ಟೇನಾ..? ಥತ್ ಅನ್ನಿಸಿತ್ತು. ಇವತ್ತಿಂದ ಡ್ಯೂಟಿಗೆ ಹೋಗಬೇಕು. ನೆನ್ನೆಯೇ ಆಫೀಸಿಂದ ನಾಳೆ ಕೆಲಸಕ್ಕೆ ಹಾಜರಾಗಬೇಕು ಅಂತ ನನ್ನ ಮೊಬೈಲ್ಗೆ ಮೆಸೇಜ್ ಬಂದಿತ್ತು.

ಸರಿ, ಬೆಳಗ್ಗೆ ಎದ್ದವನೆ ಒಂದೂ ಒಂದೂವರೆ ತಿಂಗಳ ಕರೋನ ಬರುವುದಕ್ಕೆ ಹಿಂದಿನ ಉತ್ಸಾಹದಲ್ಲೆ ರೆಡಿಯಾಗಿ ತಿಂಡಿ ತಿಂದು ಬಲದಿಂದ ಎಡಕ್ಕೆ ಬರುವಂತೆ ಬ್ಯಾಗು ಹೆಗಲಿಗೇರಿಸಿ ಮುಸಡಿಗೆ ಮಾಸ್ಕು ಹಾಕಿ ಹೆಂಡತಿ ಮಕ್ಕಳಿಗೆ ಟಾಟಾ ಮಾಡಿ ಕರೋನಾ ಅಳುಕಿನಲ್ಲೆ ಬಸ್ ಪ್ರಾಬ್ಲಂ ಕಾರಣ ನೇರ ನಮ್ಮೂರ ಮೈನ್ ರೋಡ್ ಬಸ್ಟಾಪ್ಗೆ ಬದಲು ಸಿಲ್ಕ್ ಫ್ಯಾಕ್ಟರಿ ಹಿಂಭಾಗ ತ್ರಿವೇಣಿ ನಗರದ ನಮ್ಮ ಹೊಲದ ಮಾರ್ಗವಾಗಿ ಗೌರ್ಮ್ನಮೆಂಟ್ ಆಸ್ಪತ್ರೆ ಕಡೆಯಿಂದ ಬರ‌್ರ ಬರ‌್ರನೆ ದಾಪುಗಾಲಾಕುತ್ತ ಬಸ್ಟ್ಯಾಂಡ್ ಕಡೆ ನಡೆದೆ. ರಸ್ತೆಯಲ್ಲಿ ಹೋಗುವಾಗ ಜನ ಮೊದಲಿನಂತಿರದೆ ಹತ್ತಿರವು ಸುಳಿಯದೆ ಮಾಸ್ಕು ಹಾಕಿದ ಕಾರಣದಿಂದಲೊ ಏನೋ ಸಡನ್ ಗುರುತು ಸಿಗದ ಕಾರಣವೊ ಮಾತಾಡಿಸಿದರೂ ಮಾತಾಡದ, ದೂರದಲ್ಲೇ ಕೈ ಎತ್ತಿ ಹಾಯ್ ಹೇಳಿಯಷ್ಟೇ ಹೋಗುವಷ್ಟು ಭೀತಿ ಆವರಿಸಿದಂತಿತ್ತು. ಆಗ ಎದುರಿಗೆ ಯಾವ ಮಾಸ್ಕೂ ಹಾಕದೆ ತುಟಿ ಕುಣಿಸುತ್ತ ಕಂಕುಳಿಗೆ ಉಂಡುಂಡೆಯಾಗಿ ಸುತ್ತಿದ ಬ್ಯಾಗು ಸಿಕ್ಕಿಸಿಕೊಂಡು ಕುಳ್ಳಗಿನ ವ್ಯಕ್ತಿಯೊಬ್ಬ ಬರುತ್ತಿದ್ದುದು ಕಂಡಿತು. ನನ್ನ ದಾಪುಗಾಲಿನ ಸ್ಪೀಡಿಗೆ ಅವನು ಯಾರೆಂದು ಗುರುತು ಸಿಗದೆ ಅವನನ್ನು ಎಲ್ಲೊ ನೋಡಿದಂತೆನಿಸಿ ಆತ ಹೋಗುವುದನ್ನೇ ತಿರುಗಿ ತಿರುಗಿ ನೋಡುತ್ತ ಮುಂದೆ ಮುಂದೆ ದಾಪುಗಾಲು ಹಾಕುತ್ತಲೇ ಸಡನ್ ‘ಅರೆ ಅಂವ ನಮ್ ಗಂಗ ಅಲ್ವ’ ಅನ್ನಿಸುವುದಕ್ಕು ನಾನು ಹತ್ತಬೇಕಾದ ಬಸ್, ಬಸ್ಟ್ಯಾಂಡ್ ಒಳಗಿಂದ ನಿಧಾನಕೆ ಮೇಲತ್ತಿ ತಿರುವಿನಲಿ ಮೈಸೂರು ರಸ್ತೆ ಕಡೆ ಕ್ರಾಸ್ ಮಾಡಿತು. ನಾನು ಓಡಿ ಹೋಗಿ ಬಸ್ ಹತ್ತುವುದೊ ಇಲ್ಲ, ಹತ್ತಿಪ್ಪತ್ತು ವರ್ಷದಿಂದ ನೋಡದ ಗಂಗನನ್ನು ಮಾತಾಡಿಸಲು ಹೋಗುವುದೊ ಅನ್ನೊ ಗೊಂದಲದಿಂದ ಒಂದೆರಡು ಸೆಕೆಂಡ್ ಯೋಚಿಸುತ್ತಲೇ ಥಟ್ಟನೆ ‘ಸರಿ ನೆಕ್ಸ್ಟ್ ಬಸ್ಗೆ ಹೋದ್ರಾಯ್ತು’ ಅಂತ ಹಿಂತಿರುಗಿ ಗಂಗನೆಡೆಗೆ ದಾಪುಗಾಲಾಕಿ ‘ಗಂಗಣ್ಣ.. ಗಂಗಣ್ಣ’ ಅಂತ ಕೂಗುತ್ತಾ ಹಿಂದಿನಿಂದ ಅವನ ಭುಜ ಹಿಡಿದೆ. ನಾನು ಹಿಡಿದ ರಭಸಕ್ಕೆ ಅವನು ಗಾಬರಿ ಬಿದ್ದವನಂತೆ ಗಕ್ಕನೆ ನಿಂತು ತಿರುಗಿದ. ಅದೇ ಮುಖ. ಅದರೆ ವಯಸ್ಸಿನ ಕಾರಣವೋ ಏನೊ ಮುಖದ ಅಲ್ಲಲ್ಲಿ ನೆರಿಗೆಗಳು ಎದ್ದು ಕಾಣುತ್ತಿದ್ದವು. ಮೇಲಿಂದ ಕೆಳಕ್ಕೆ ನೋಡಿದೆ. ದೇಹ ಕುಗ್ಗಿ ಇನ್ನಷ್ಟು ಕುಳ್ಳಗಿದ್ದಂತೆ ಕಂಡಿತು. ಅವತ್ತಿನ ತರದ್ದೇ ಅಂಗಿ, ಅವತ್ತಿನ ತರದ್ದೇ ತುಂಡು ಪ್ಯಾಂಟು, ಅವತ್ತಿನ ತರಾನೇ ಅವನ ತಿಕದ ಎರಡೂ ಕುಂಡಿಯಲ್ಲಿ ಆ ತುಂಡು ಪ್ಯಾಂಟು ಸವೆದು ಸವೆದು ಹರಿದು ಜೂಲು ಜೂಲಾಗಿ ಅವನ ತಿಕ ಯಾವ ಎಗ್ಗೂ ಇಲ್ಲದೆ ಹಿಂದಿನ ಎಲ್ಲ ಆಗುಹೋಗುಗಳನ್ನು ಕಾಣುತ್ತ ಕಂಡಕಂಡವರ ಗೇಲುಗನ್ನಕ್ಕೆ ಗುರಿಯಾಗುತ್ತಿದ್ದುದು ಗಂಗಣ್ಣನಿಗೂ ಗೊತ್ತಿತ್ತು ಅನಿಸಿತು.

*

ಗಂಗ, ಗಂಗಣ್ಣ, ಗಂಗಶೆಟ್ಟಿ, ಪೋಸ್ಟ್ ಮ್ಯಾನ್ ಗಂಗ – ಹಿಂಗೆ ಯಾರಿಗೆ ಹೇಗೋ ಹಾಗೆ ಕರೆಸಿಕೊಳ್ಳುತ್ತಿದ್ದ ಪೋಸ್ಟ್ ಮ್ಯಾನ್ ಗಂಗಣ್ಣ ನಮ್ಮೂರ ಪೋಸ್ಟಾಫೀಸ್ ವ್ಯಾಪ್ತಿಯಲ್ಲಿ ಫೇಮಸ್ಸಾಗಿದ್ದ.

ಆ ಪೋಸ್ಟಾಫೀಸ್ ಇದ್ದುದು ಸರ್ಕಾರಿ ಮೂಲ ಶಿಕ್ಷಣ ಹಿರಿಯ ಪ್ರಾಥಮಿಕ ಪಾಠಶಾಲೆ ಬೈರಾಪುರ, ಸ್ಕೂಲಿನ ಗೋಡೆ ಮಗ್ಗುಲಿಗಿದ್ದ ಹೊಸ ತಿರುಮಕೂಡಲು ಬೀದಿಯ ಒಕ್ಕಲಿಗರ ಚೌಡಮ್ಮನ ಮನೆಯ ಮೈಯಿನ್ ಬಾಗಿಲಿಗೆ ಹೊಂದಿಕೊಂಡಿದ್ದ ಅಂಗಡಿ ಮಳಿಗೆ ತರದ ಪೂರ್ವಕ್ಕಿದ್ದ ರೂಮಿನಲ್ಲಿ.

ಆ ರೂಮಿನ ಬಾಗಿಲು – ಒಂದೊಂದು ಸೈಡಿಗೆ ಎರಡೆರಡು ಹಲಗೆ ಫ್ರೇಮ್ ತರ ಜೋಡಿಸಿ ಮೇಲೊಂದು ಕೆಳಗೊಂದು ನಡುಮಧ್ಯೆ ಮೂರು ಮೂರು ಕೀಲು ಕೂಡಿಸಿದ್ದರು. ಅದನ್ನು ತೆರೆದರೆ ಎರಡೂ ಕಡೆ ಸಮ ಭಾಗವಾಗಿ ಮಂದಲಿಗೆ ಮಡಚಿದಂಗೆ ಮಡಚಿಕೊಂಡು ಗೋಡೆಯ ಸೈಡಿಗೆ ನೀಟಾಗಿ ನಿಲುತಿತ್ತು. ಬಾಗಿಲ ಮುಂದೆ ರೆಡ್ ಆಸಿಡ್ ಬಣ್ಣ ಹೊತ್ತ ಒಂದಿಬ್ಬರು ಆರಾಮಾಗಿ ಕೂರಬಹುದಾದ ಚಿಕ್ಕ ಜಗುಲಿ. ಅದೇ ಜಗುಲಿಯ ಬಲ ತುದಿಯಲ್ಲಿ ಚಿಕ್ಕದಾದ ಡಿಸೈನ್ ಇಳಿಜಾರು ಆಸನ. ಆ ಆಸನ ಅನುಸರಿಸಿ ಬಾಗಿಲ ಮೇಲೆ ಸೂರಿನ ಕೆಳಕ್ಕೆ ಒಂದಡಿ ಅಂತರದಲ್ಲಿ ಗೋಡೆಗೆ ತಾಕಿಸಿದಂತೆ ಸುಮಾರು ಒಂದೂ ಒಂದೂಕಾಲಡಿ ಉದ್ದದ ಗುಂಡಾದ ಕೆಂಪು ಬಣ್ಣದ ಪೋಸ್ಟ್ ಬಾಕ್ಸ್ ಇತ್ತು. ಆ ಬಾಕ್ಸಿನ ಬಾಯಿ ಕೆಳಗೆ ‘ಅಂಚೆ ಕಛೇರಿ – ಬೈರಾಪುರ’ ಅಂತ ಬಿಳಿ ಬಣ್ಣದಲ್ಲಿ ಬರೆದು ಪಿನ್ ಕೋಡ್ ನಂಬರ್ ಕೂಡ ಬರೆದಿತ್ತು. ಆ ಬಾಕ್ಸಿಗೆ ಸುತ್ತ ಮುತ್ತಲಿನವರು ತಮ್ಮ ನೆಂಟರಿಷ್ಟರಿಗೆ ದೂರದೂರಿಗೆ ಇನ್ ಲ್ಯಾಂಡ್ ಲೆಟರ್, ಪೋಸ್ಟ್ ಕಾರ್ಡು, ಪೋಸ್ಟ್ ಕವರ್ ನಲ್ಲಿ ಬರೆದು ಪೋಸ್ಟ್ ಮಾಡುವವರು ಆ ಜಗುಲಿ ತುದಿಯ ಇಳಿಜಾರು ಆಸನದ ಮೇಲೆ ನಿಂತು ನಿಗುರಿ ನಿಗುರಿ ಕೈಗೆ ಎಟುಕಿಸಿಕೊಂಡು ಪೋಸ್ಟ್ ಬಾಕ್ಸ್ ಬಾಯಿಗೆ ಹಾಕುತ್ತಿದ್ದುದುಂಟು.

ಈ ಪೋಸ್ಟ್ ಆಫೀಸ್ ನ ಪೋಸ್ಟ್ ಮೇಷ್ಟ್ರು ಷಣ್ಮುಖಸ್ವಾಮಿ. ಪಕ್ಕದ ಕೇತಳ್ಳಿಯವರು. ಶಿಸ್ತಿನ ವ್ಯಕ್ತಿ. ಕುಡಿತ ಮೆರೆತ ಮಾಂಸ ಮಡ್ಡಿಯಿಂದ ದೂರವಿದ್ದವರು. ಕುಂಬಾರ ಜಾತಿಯ ಅವರ ಕುಟುಂಬದ ತಲತಲಾಂತರದ ಮಡಿಕೆ ಕುಡಿಕೆಯಂಥ ಕುಂಬಾರಿಕೆ ಕೆಲಸ ಮಾಡದಿದ್ದರು ಅವರ ಪೂರ್ವಿಕರು ಶರಣ ಪರಂಪರೆಯನ್ನು ಮೈಗೂಡಿಸಿಕೊಂಡು ನಾಟಕ ಸಂಗೀತ ರಂಗಾಸಕ್ತರಾಗಿ ತೊಡಗಿ ಅವರದೇ ಆದ ಶಿಷ್ಟಾಚಾರದ ಬದುಕು ಮಾಡಿಕೊಂಡು ಬಂದವರು. ಹೀಗಾಗಿ ಪೂರ್ವಿಕರ ಸಹಿತ ಮಾಂಸ ಮದ್ಯಯಿಂದ ದೂರವಿದ್ದು ಆಚಾರ ವಿಚಾರ ಮಡಿ ಮೈಲಿಗೆ ಪಾಲಿಸುತ್ತಿದ್ದು.. ಅದನ್ನು ಚಾಚೂ ತಪ್ಪದೆ ಪೋಸ್ಟ್ ಮೇಷ್ಟ್ರು ಷಣ್ಮುಖಸ್ವಾಮಿ ತಮ್ಮ ಜೀವನದಲ್ಲು ಕಂಟಿನ್ಯೂ ಮಾಡಿದ್ದರು. ಮನೆಯಲ್ಲಿ ಕಡು ಬಡತನ. ಇಂಥ ಬಡತನದ ಬೇಗೆಯಲ್ಲಿಯೂ ಬಿಎಸ್ಸಿ ಪದವಿ ಪಡೆದು ಕೇತಳ್ಳಿಯ ಜನ ತಿರುಗಿ ನೋಡುವಂತೆ ಬೀಗಿದ್ದರು. ಈ ಬೀಗುವಿಕೆ ಹೆಚ್ಚು ಕಾಲ ಉಳಿಯದೆ ಮುಂದೆ ಓದಲೂ ಆಗದೆ ಇರಲೂ ಆಗದೆ ಕೆಲಸವಿಲ್ಲದೆ ಅಲ್ಲಿ ಇಲ್ಲಿ ಅಲೆಯುತ್ತಿದ್ದವನಿಗೆ ಅವ್ವ ಅಪ್ಪನ ಕೊಂಕು. ಈ ಕೊಂಕಿನ ನಡುವೆ ಅಪ್ಪ ಅವ್ವನ ಒತ್ತಾಸೆಗೆ ಕಟ್ಟುಬಿದ್ದು ಮದುವೆಯಾಗಿ ಸಂಸಾರದ ನೊಗ ಹೊತ್ತ ಭಾರ. ಈಗಲಾದರು ಮಗನಿಗೆ ಜವಾಬ್ದಾರಿ ಬರಬಹುದೆಂದು ಆಸೆಗಣ್ಣು ಅವರಿಗೆ. ಇದರ ನೆವದಲ್ಲಿ ಅಲ್ಲಿ ಇಲ್ಲಿ ಸಿಕ್ಕ ಸಿಕ್ಕ ಕೆಲಸ ಮಾಡಿ ಯಾವುದೂ ಕೈಗೂಡದೆ ಪಡಬಾರದ ಪಡಿಪಾಟಲು ಪಟ್ಟುದ್ದುಂಟು. ಬ್ಯಾಂಕು ಮತ್ತಿತರ ಕಡೆ ಗೋಗರೆದು ಪಿಗ್ಮಿ ಕಲೆಕ್ಟರಾದರು. ಮತ್ತದೂ ಇದೂ ಅಂತ ಸುತ್ಮುತ್ತಲ ಊರೂರು ತಿರುಗುವುದೇ ಆಯ್ತು.

ಈ ಎಲ್ಲ ಪಡಿಪಾಟಲಲ್ಲಿ ಕಟ್ಟಿಕೊಂಡ ಹೆಂಡತಿ ತವರಲ್ಲಿ. ಅಲ್ಲಿ ಅವರ ಅವ್ವ ಅಪ್ಪ ಅಳಿಯನ ಬಗ್ಗೆ ಕೊಂಕು. ಈ ಕೊಂಕಗೆ ಬೇಸತ್ತು ಹೆಂಡತಿ ಕರೆದುಕೊಂಡು ಬರುವ ಅನಿವಾರ್ಯತೆ. ಅತ್ತ ಇತ್ತ ಎತ್ತೆತ್ತಲೂ ಕತ್ತಲಾವರಿಸಿದಂತಾಯ್ತು. ಈ ಕತ್ತಲಲ್ಲೆ ಹೇಗೋ ನರಸೀಪುರ ಟೌನಲ್ಲಿ ಒಂದು ಸಣ್ಣ ಮನೆ ಮಾಡಿದ್ದಾಯ್ತು. ಮುಂದೆ ಏನು ಮಾಡುವುದೆಂದು ಹೆಂಡತಿ ಮುಂದೆ ಕುಂತು ಯೋಚಿಸುವಾಗ ಥಟ್ಟನೆ ಸರ್ಕಾರದ ಒಂದು ಆದೇಶ ಓದಿದ ನೆನಪಾಯ್ತು. ಅದು ಜನಸಂಖ್ಯೆಗೆ ಅನುಗುಣವಾಗಿ ಪಂಚಾಯ್ತಿಗೊಂದು ಪೋಸ್ಟ್ ಆಫೀಸ್ ಇರುವುದು. ಈ ಆದೇಶದ ಬೆನ್ನಿಡಿದು ರಾತ್ರಿ ಪೂರ ನಿದ್ದೆ ಮಾಡದೆ ಅದೇ ಗುಂಗಲ್ಲಿ ಇದ್ದವರಿಗೆ ಸೂರ್ಯ ಮೂಡುವುದರೊಳಗೆ ಜಾಡು ಸಿಕ್ಕೇ ಬಿಟ್ಟಿತು. ಆ ಜಾಡು, ನಾನೂರರಿಂದ ಐನೂರು ಜನ ಕೆಲಸ ಮಾಡುವ ಸಿಲ್ಕ್ ಫ್ಯಾಕ್ಟರಿ ಇರುವ ಬೈರಾಪುರ ಪಂಚಾಯ್ತಿ ವ್ಯಾಪ್ತಿಗೊಂದು ಸಬ್ ಪೋಸ್ಟ್ ಆಫೀಸ್ ಬೇಕೆಂದು. ಈ ಬಗ್ಗೆ ಅಲ್ಲಿ ಇಲ್ಲಿ ತಲಾಶ್ ಮಾಡಿ ಸಂಬಂಧಪಟ್ಟವರಿಗೆ ಅರ್ಜಿ ಗುಜರಾಯಿಸಿಯೇ ಬಿಟ್ಟರು. ಅವರ ಅದೃಷ್ಟವೋ ಏನೊ ಸಬ್ ಪೋಸ್ಟ್ ಆಫೀಸ್ ಸ್ಯಾಂಕ್ಷನ್ ಆಯ್ತು. ಅದಾದ ಮೇಲೆ ಅಲ್ಲಿನ ಒಂದು ಪೋಸ್ಟಿಗೆ ಲೋಕಲ್ಲಾಗಿ ಪೈಪೋಟಿ ಶುರುವಾಗಿ ಅರ್ಜಿ ಮೇಲೆ ಅರ್ಜಿ ಗುಜರಾಯಿಸುವವರಿಗೇನು ಕಮ್ಮಿ ಇರಲಿಲ್ಲ. ಇದಕ್ಕಾಗಿ ಊರಲ್ಲಿ ದೊಡ್ಡ ರಾಜಕೀಯವೇ ನಡೆದು ಹೋಯ್ತು. ಅಂತೂ ಇಂತು ಹೇಗೊ ಏನೊ ಷಣ್ಮುಖಸ್ವಾಮಿ ಪೋಸ್ಟ್ ಮೇಷ್ಟ್ರಾಗಿ ನೇಮಕವಾಗಿದ್ದು ಸಾಹಸವೇ ಸರಿ.

ಈ ಸಾಹಸದ ಪರಿಯನ್ನು ಅವರು ತನ್ನೊಂದಿಗೆ ಸಲಿಗೆ ಇರುವವರೊಂದಿಗಲ್ಲದೆ ಪೋಸ್ಟಾಫೀಸ್ ನಲ್ಲಿ ರಿಜಿಸ್ಟರ್ ಲೆಟರ್, ಎಂ.ಓ, ಟೆಲಿಗ್ರಾಂ ಕುರಿತು ಯಾರಾದರು ಏನಾದರು ಮಾತಾಡುವಾಗ ಸಣ್ಣಪ್ಪನ ಹೋಟೆಲಲ್ಲೊ ಮಲ್ಲಣ್ಣನ ಹೋಟೆಲಲ್ಲೊ ಪೆಟ್ಟಿಗೆ ಅಂಗಡಿಯಲ್ಲಿ ಪೇಪರ್ ಓದುತ್ತ ರಾಜಕೀಯ ವಿಚಾರ ಪ್ರಸ್ತಾಪವಾದಾಗಲೆಲ್ಲ ಎಲ್ಲೆಂದರಲ್ಲಿ ಬಲು ರೋಚಕವಾಗಿ ಬಿತ್ತರಿಸುತ್ತಿದ್ದರು. ಅದನ್ನು ಕೇಳಿಸಿಕೊಂಡವರು ಮತ್ತೆಲ್ಲೊ ಯಾರಾದರೊಂದಿಗೆ ಮಾತಾಡುವಾಗ ಬೈರಾಪುರಕ್ಕೆ ಪೋಸ್ಟಾಫೀಸ್ ಬಂದ ಬಗೆಯನ್ನು ವಿವರಿಸುತ್ತ ಅದು ಜನರಿಂದ ಜನರಿಗೆ ತಲುಪಿ ಜಗಜ್ಜಾಹೀರಾಗಿದ್ದು ಸುಳ್ಳಲ್ಲ.

ಅದೇನೆಂದರೆ, ಹೊಸ ಪೋಸ್ಟಾಫೀಸ್ ಸ್ಯಾಂಕ್ಷನ್ ಆಗಿ ಷಣ್ಮುಖಸ್ವಾಮಿ ಪೋಸ್ಟ್ ಮೇಷ್ಟ್ರಾಗಿ ಬಂದ ಮೇಲೆ ಪೋಸ್ಟ್ ಆಫೀಸಿಗೆ ಒಂದು ಜಾಗ ಬೇಕಾಗಿತ್ತು. ಅದರ ಜವಾಬ್ದಾರಿ ಪೋಸ್ಟ್ ಮೇಷ್ಟರೇ ಹೊತ್ತ ಕಾರಣ ಅವರು ಈ ಅಹವಾಲನ್ನು ಬೈರಾಪುರದ ಮಂದಾಳುಗಳ ಗಮನಕ್ಕೆ ತಂದು ‘ನೋಡ್ರಪ್ಪ ನಿಮ್ಮೂರ‌್ಗ ಒಂದು ಪೋಸ್ಟಾಫೀಸ್ ಸ್ಯಾಂಕ್ಷನ್ ಆಗಿದೆ. ಈಗ ಅದ್ಕೆ ಒಂದು ಜಾಗ ಬೇಕು. ನೋಡಿ ನೀವು ಗ್ರಾಮಸ್ಥರು ಒಂದು ವ್ಯವಸ್ಥೆ ಮಾಡಿ ಕೊಡಿ ನಿಮ್ಗೂ ಒಳ್ಳೆದಾಗೋದಲ್ದೆ ಊರಿಗೆ ಒಂದು ಹೆಸರು ಬರುತ್ತೆ” ಅಂತ ಮನವರಿಕೆ ಮಾಡಿದರು.

ಈ ಮಾತು ಎತ್ತೆತ್ತಲೋ ತಿರುಗಿ ಊರಿನ ಬೀದಿಬೀದಿನು ಬಳಸಿತು. ರಾಜಕೀಯ ಮಾತುಗಳೂ ಬರತೊಡಗಿದವು. ಕೊನೆಗೆ ಏನೇನೂ ಆಗದೆ ನಿರಾಶರಾದ ಪೋಸ್ಟ್ ಮೇಷ್ಟ್ರು ತಡ ಮಾಡಿದರೆ ಪೋಸ್ಟ್ ಆಫೀಸ್ ಕೆಲಸ ಕೈತಪ್ಪುವ ಭೀತಿಯಾಗಿ ಕೊನೆಗೆ ಉಪಾಯ ಹೊಳೆದು ತನಗೆ ಪರಿಚಿತರಿದ್ದ ಬೈರಾಪುರಕ್ಕೆ ಪರ್ಲಾಂಗ್ ದೂರದ ಒಕ್ಕಲಿಗರ ಚೌಡಮ್ಮನ ಮಜಬೂತಾದ ಮಂಗಳೂರು ಹೆಂಚಿನ ದೊಡ್ಡ ಮನೆಯ ಜಗುಲಿ ಪಾಸಿನಲ್ಲಿದ್ದ ಅಂಗಡಿ ತರದ ರೂಮು ನೆನಪಾಯ್ತು.

ಕುಳ್ಳಗೆ ದಢೂತಿಯಾಗಿ ಗುಂಗುರು ಕೂದಲಿನ ಚೌಡಮ್ಮ ಬಲು ಚೆಂದದ ಹೆಂಗಸು. ಎರಡೂ ಕಿವಿಗೆ ಓಲೆ ಧರಿಸಿ ಶಿಸ್ತಾಗಿದ್ದ ಗಂಡ ಕೆಇಬಿಯಲ್ಲಿ ತುಂಬು ಸಂಬಳದ ಕೆಲಸಕ್ಕಿದ್ದ. ಬರುವ ಸಂಬಳದಲ್ಲಿ ಎರಡು ಹೆಣ್ಣು ಒಂದು ಗಂಡುವಿನ ತಾಯಿಯಾಗಿ ಮನೆ ನಿರ್ವಹಣೆ ಮಾಡುತ್ತ ಅಷ್ಟು ಇಷ್ಟು ಉಳಿಸಿ ಸ್ಕೂಲು ರೇಷ್ಮೇಗೂಡಿನ ಮಾರುಕಟ್ಟೆ ಹತ್ತಿರದಲ್ಲೆ ಮಂಗಳೂರು ಹೆಂಚಿನ ಮನೆ ಕಟ್ಟಿಸಿದ್ದರು. ಅವರು ಕಟ್ಟಿಸಿದ್ದ ಮನೆಯ ಆ ಸೈಟು ಗಂಡನ ಪಿತ್ರಾರ್ಜಿತ ಆಸ್ತಿಯೋ, ದುಡ್ಡು ಕೊಟ್ಟು ಖರೀದಿಸಿದ್ದೋ – ಅಂತೂ ಇಂತು ವ್ಯಾಪಾರ ವಹಿವಾಟು ಇರೊ ಮೈಯಿನ್ ರೋಡಿನ ಕಡೆ ಇರುವ ಜಾಗದಲ್ಲಿ ದೂರಾಲೋಚನೆಯಿಂದಲೋ ಏನೊ ಈಚೆ ಕಡೆ ಒಂದು ಅಂಗಡಿ ಮಳಿಗೆ ಇರುವಂಗೆ ಪ್ಲಾನ್ ಮಾಡಿ ಮನೆ ಕಟ್ಟಿಸಿದ್ದ ಚೌಡಮ್ಮ ಷಣ್ಮುಖಸ್ವಾಮಿ ಮಾತಿಗೆ ನಗುತ್ತಲೇ “ಅದಕ್ಕೇನಂತೆ ಬನ್ನಿ ಸಾ.. ಜನುಕ್ಕ ಒಳ್ಳೇದಾಗ್ಲಿ ಅಂತ ಪೋಸ್ಟಾಪೀಸ್ ಸಾಂಕ್ಷನ್ ಮಾಡುಸ್ಕ ಬಂದಿದರಿ ನಿಮ್ಗ ಒಂಚೂರ್ ಜಾಗ ಕೊಡ್ದೆ ಇರಕಾದ್ದ ಬನ್ನಿ. ಅಲ್ಲ ಹೋಗಿ ಹೋಗಿ ಆ ಮಾದಿಗೇರಿಲಿ ಜಾಗ ಕೇಳಿದರೆಲ್ಲ ಅಲ್ಲಿಗ ನಾವೆಲ್ಲ ಮಡಿ ಮೈಲ್ಗ ಬುಟ್ಟು ಬಂದು ಯವಾರ ಮಾಡಕಾದ್ದ..? ಅದಲ್ದೆ ಅವ್ಕ ಕೊಡಿ ಅಂದ್ರ ಅವೆಲ್ ಕೊಟ್ಟವು..? ಅವ್ಕೇನ್ ಗೊತ್ತು ಹೇಳಿ..? ಹೆಂಡ ಕುಡ್ದು ದನ ತಿನ್ನದ್ ಬುಟ್ರ” ಅಂತ ರೇಗ್ತಾ ಗೇಲಾಡ್ತ ಹದಿನೈದು ರೂಪಾಯಿ ಬಾಡಿಗೆ ಫಿಕ್ಸ್ ಮಾಡಿ ಪೋಸ್ಟ್ ಆಫೀಸಿಗೆ ಅಂತ ರೂಮು ಕೊಟ್ಟರು.

ನಮ್ ಕೇರಿಲಿ ಓಪನ್ ಆಗಬೇಕಾದ ಪೋಸ್ಟಾಫೀಸು ಒಕ್ಕಲಿಗೇರಿಲಿ ಓಪನ್ ಆಯ್ತು. ಇದು ಎಲ್ಲ ಕಡೆ ಗೊತ್ತಾಯ್ತು. ಬೈರಾಪುರ ಮಾದಿಗೇರಿ, ಕೆಲವರ ಮುಂದಾಳುತನದಲ್ಲಿ ಒಳಗೊಳಗೆ ಬೇಯತೊಡಗಿತು. ಷಣ್ಮುಖಸ್ವಾಮಿ ಊರವರ ಬಾಯಲ್ಲಿ ನಿಂತರು. ಎಗ್ಗಿಲ್ಲದ ಮಾತುಗಳು ಊರಾಳುತ್ತ ಅವು ಅವರಿವರ ಪಡಸಾಲೆಯಲ್ಲಿ ನಲಿಯತೊಡಗಿದವು. ಆ ನಲಿದಾಟದಲ್ಲಿ ಹೆಂಡದ ಬಾಟಲಿ ಉರುಳಾಡತೊಡಗಿದವು. ಚಾಕ್ಣದ ಪೀಸುಗಳು ಉಪ್ಪು ಖಾರ ಬೆರೆಸಿಕೊಂಡು ಕುಣಿಯತೊಡಗಿದವು. ಆ ಖಾರದ ಮಾತುಗಳು “ನಮ್ಮೂರ್ ಪೋಸ್ಟಾಪೀಸ್ ತಕ್ಕವೋಗಿ ಗೌಡ್ರ ಮನಲಿ ಮಾಡನಲ್ಲ ಅಂವ ಎಸ್ಟಿರ‌್ಬೇಡ.. ಅಂವ ನೋಡುದ್ರ ಕೇತಳ್ಳಿಯಿಂದ ಬಂದಿರಂವ. ಲೆಕ್ದಲ್ಲಿ ಈ ಕೆಲ್ಸ ನಮ್ಗೇ.. ಇಲ್ಲಿಯವ್ರಿಗೇ ಆಗ್ಬೇಕು ಅದೆಂಗ್ ಅವ್ನಿಗ್ ಕೊಟ್ರು..? ಅವುನ್ನ ಹಿಂಗೆ ಬುಡಕಾದ್ದ.. ಮಡ್ಕ ಮಾಡೋನ್ಗೆ ಇಸ್ಟ್ ಜೂರೊತ್ ಇರಬೇಕಾದ್ರ ಆ ಮಡ್ಕಲೇ ಮೂಳ ಬೇಯ್ಸಿ ತಿನ್ನ ನಮ್ಗೆಸ್ಟ್ ಇರ‌್ಬೇಡ… ” ಅನ್ನೋದು ಬೀದಿಬೀದಿ ಅಲೆಯಿತು..

ಹಿಂಗೆ ಕುಡ್ದಾಗ ತಿಂದಾಗ ಟೀ ಅಂಗಡಿತವು ಸಾರಾಯಿ ಅಂಗಡಿತವು ತರಾವರಿ ಮಾತಾಡುತ್ತ ಅದು ಹೊಸ ರೂಪ ಪಡೆಯುತ್ತಿತ್ತು. ಅಕಸ್ಮಾತ್ ಪೋಸ್ಟ್ ಮೇಷ್ಟ್ರು ಷಣ್ಮುಖಸ್ವಾಮಿ ಸೈಕಲ್ ತುಳಿಯುತ್ತಾ ಬರುವಾಗಲೊ ಅಥವಾ ಇನ್ನೆಲ್ಲೊ ಸಿಕ್ಕಸಿಕ್ಕಲ್ಲಿ ಅವರ ಮುಂದೆ ಜೋರ್ ಅಲ್ಲದಿದ್ದರು ಗುಸುಗುಸು ಪಿಸಿಪಿಸಿ ದನಿಯಲ್ಲಿ ಅನಾವರಣವಾಗುತ್ತಲೂ ಇತ್ತು. ಆಗ ಅವರು ಸೈಕಲಿಂದ ಇಳಿದು ಅನ್ನೋರನ್ನ ಆಡೋರನ್ನ ಹತ್ತಿರಕ್ಕೆ ಕರೆದು ಬುದ್ದನಂತೆಯೋ ಬಸವಣ್ಣನಂತೆಯೊ ತಣ್ಣಗೆ ಮಾತಾಡಿಸಿ ತಮ್ಮ ಪಾಡಿಗೆ ತಾವು ಏನೂ ಆಗಿಲ್ಲವೇನೊ ಅನ್ನೊ ತರ ಮುಖದಲ್ಲೇ ನಗುತ್ತ ತುಟಿ ಕುಣಿಸಿ ಹಾಡು ಗುನುಗುತ್ತ ಸಾಗುತ್ತಿದ್ದುದು ಮಾಮೂಲಾಗಿತ್ತು.

ಇಂಥ ಷಣ್ಮುಖಸ್ವಾಮಿ ಬೆಳಗ್ಗೆ ಎಂಟ್ಹೊಂಭತ್ತು ಗಂಟೆಗೆಲ್ಲ ವಿಭೂತಿ ಧರಿಸಿ ದೇವರ ಗೀತೆಯೋ ಭಾವಗೀತೆಯೋ ಜಾನಪದ ಗೀತೆಯೋ ಯಾವುದೋ ಒಂದು ತಮ್ಮ ಪಾಡಿಗೆ ತಾವು ತಮ್ಮೊಳಗೇ ಕೇಳಿಕೊಳುವಂತೆ ತುಟಿ ಕುಣಿಸಿ ಗುನುಗುತ್ತ ಚಿಣ್ಣಕೊಪ್ಪಲು ಮಾಳದ ಮೂಲಕವೊ ಹಳೇ ಪೆಟ್ರೋಲ್ ಬಂಕ್ ಕಡೆಯಿಂದಾನೊ ಸೈಕಲ್ ನಲ್ಲಿ ಬರುತ್ತಿದ್ದರು. ಹಾಗೆ ಬರುವಾಗ ದಾರಿಯಲ್ಲಿ ಯಾರು ಮಾತಾಡಿಸಿದರು ನಗುನಗುತಾ ಮಾತಾಡೋರು. ಅದಾಗಲೇ ಒಕ್ಕಲಿಗರ ಚೌಡಮ್ಮ ತಮ್ಮ ಮನೆ ಬಾಗಿಲ ಕಸ ಕುಡಿಸಿ ಸಗಣಿ ನೀರು ಎರಚಿ ರಂಗೋಲಿ ಇಡುವುದು ಅವರ ನಿತ್ಯದ ಕೆಲಸವಾಗಿತ್ತು. ಬರೀ ಅವರ ಮನೆಯ ಬಾಗಿಲಿಗೇ ರಂಗೋಲಿ ಬಿಡದೆ ಹದಿನೈದು ರೂಪಾಯಿಗೆ ಬಾಡಿಗೆ ಕೊಟ್ಟಿದ್ದ ಪೋಸ್ಟಾಫೀಸಿನ ಬಾಗಿಲ ಮುಂದೆಯೂ ಸಗಣಿ ಎರಚಿ ರಂಗೋಲಿ ಇಡುವುದನ್ನು ಮರೆಯುತ್ತಿರಲಿಲ್ಲ.

ಅದಕ್ಕು ಮುಂಚೆ ನನ್ನನ್ನು ಸೇರಿದಂತೆ ಕಾಂತು, ಗಸಗಿ, ಪರ್ಸಿ, ನಾಗ, ವಾಟೀಸು, ರಾಜೇಶ ಇನ್ನು ಒಂದಷ್ಟು ಹುಡುಗ್ರು ಜೊತೆಗೊಂದಿಬ್ಬರು ಹುಡುಗೀರು ತಂಗಳು ತಿಂದುಕೊಂಡು ಎಂಟ್ಹೊಂಭತ್ತು ಗಂಟೆಗೆಲ್ಲ ಸ್ಲೇಟು ಪುಸ್ತಕ ತುಂಬಿದ್ದ ಬ್ಯಾಗು ನ್ಯಾತಾಕಿಕೊಂಡು ಹರಟೆ ಹೊಡಕೊಂಡು ಹಾಡು ಹಾಡುತ್ತಲೊ ಕೂಗುತ್ತಲೊ ಅರಚುತ್ತಲೊ ಕಿಚಾಯಿಸುತ್ತಲೊ ದಂಡಿನಮಾರಿ ಗುಡಿ, ಸೊಸ್ಮಾರಿ ಗುಡಿಗೆ ಕೈ ಮುಗಿದು ದೊಡ್ಡಾಲದ ಮರ ಬಳಸಿಕೊಂಡು ಕಾಲು ದಾರಿ ಹಿಡಿದು ಒಕ್ಕಲಗೇರಿ ದಾರಿಗೆ ಬಂದರೆ – ಅದೇ ಸ್ಕೂಲು. ಅಲ್ಲೆ ಪೋಸ್ಟಾಫೀಸ್ ಜಗುಲಿ.

ಅದಾಗಲೇ ದಢೂತಿ ಚೌಡಮ್ಮ ಕಸ ಗುಡಿಸಿ ರಂಗೋಲಿ ಬಿಟ್ಟು ಮನೆ ಒಳಗೆ ಸೇರಿಕೊಂಡಿರುತ್ತಿದ್ದರು. ಅವರ ಮನೆ ಒಳಗಿಂದ ಎರಡು ಬ್ಯಾಂಡಿನ ರೇಡಿಯೋದಲ್ಲಿ ಚಿತ್ರಗೀತೆಯೋ ವಾರ್ತೆಯೋ ರೈತರ ಬಗ್ಗೆನೊ ಇನ್ನೇನೋ ದಿನಾ ಒಂದೊಂದು ತರಾವರಿ ಹೇಳ್ತ ಇರುತ್ತಿತ್ತು. ಅದನ್ನು ಕೇಳ್ತ ರಂಗೋಲಿ ದಾಟಿಕೊಂಡು ಜಗುಲಿ ಏರಿ ಅಲ್ಲಿ ಲೈನಾಗಿ ಠಿಕಾಣಿ ಹೂಡಿ ಓದುತ್ತ ಬರೆಯುತ್ತ ಮಾತಾಡುತ್ತ ಇದ್ದರೆ ಚೌಡಮ್ಮ ಒಂದೆರಡು ಸಲ ಬಂದು ಬಂದು ‘ಏಯ್ ಈಗ್ತಾನೆ ಸಗಣಿ ಹಾಕಿ ರಂಗೋಲಿ ಬುಟ್ಟಿನಿ ಕಸಗಿಸ ಚೆಲ್ಲಿ ಗಲಾಟಿ ಗಿಲಾಟಿ ಮಾಡ್ಬೇಡಿ. ಅಲ್ಲ, ಸ್ಕೂಲ್ ಬೆಲ್ಲೊಡೆದು ಹತ್ತುವರೆ ಗಂಟೆಗ ಈಗ್ಲೇ ಯಾಕ್ ಬಂದರಿ..’ ಅಂತ ರೇಗುತ್ತ ಒಳಗೆ ಹೋಗುವರೆ ಹೊರತು ಯಾರನ್ನು ಬೆದರಿಸಿ ಕಳುಹಿಸಿದವರೇ ಅಲ್ಲ. ಇದೆಲ್ಲ ನಮಗೆ ಮಾಮೂಲಾಗಿ ನಮ್ಮ ಪಾಡಿಗೆ ನಾವು ತಲೆ ಬಗ್ಗಿಸಿಕೊಂಡು ಅವರು ಒಳ ಹೋಗುವ ತನಕ ಪಿಸಿಪಿಸಿ ಮಾತಾಡ್ತ ನಗಾಡ್ತ ಇದ್ದುದು ಉಂಟು.

ಆಗ ಪೋಸ್ಟ್ ಮೇಷ್ಟ್ರು ಬೆಲ್ ಮಾಡುತ್ತಾ ಸೈಕಲ್ನಲ್ಲಿ ಬಂದು ನಿಧಾನಕೆ ಇಳಿಯುತ್ತಿರುವಾಗಲೇ ಅವರು ಬೆದರಿಸದಿದ್ದರು ನಾವು ನಾವೇ ಪಿಸಿಪಿಸಿ ಮಾತಾಡಿಕೊಂಡು ಪೋಸ್ಟ್ ಆಫೀಸ್ ಜಗುಲಿಯಿಂದ ಸ್ಕೂಲ್ ಜಗುಲಿಗೆ ನಿಧಾನಕೆ ಕಾಲೆದುಕೊಂಡು ಒಬ್ಬೊಬ್ಬರಾಗಿ ಶಿಫ್ಟ್ ಆಗುತ್ತಿರುವಾಗಲೆ ಸೈಕಲ್ ಬೆಲ್ ಕೇಳಿಯೋ, ನಮಗೆ ವಾರ್ನ್ ಮಾಡಲೊ ಮನೆ ಒಳಗಿಂದ ಬಂದ ಚೌಡಮ್ಮ ಪೋಸ್ಟ್ ಮೇಷ್ಟ್ರು ಷಣ್ಮುಖಸ್ವಾಮಿಯತ್ತ ನೋಡುವರು. ಅವರು ನಕ್ಕು “ಚೌಡಮ್ಮನೋರೆ ಟೀ ಮಾಡುದ್ರ.. ಕೆಲ್ಸ ಎಲ್ಲ ಮುಗಿತಾ” ಅಂತಂತ ಅಂದರೂ ಚೌಡಮ್ಮ ಮರು ಮಾತಾಡದೆ ಇತ್ತ ಪೋಸ್ಟ್ ಮೇಷ್ಟ್ರೂ ಅವರು ಮಾತು ಆಡುತ್ತಾರೊ ಇಲ್ಲವೊ ಎಂಬುದರತ್ತ ಕಿವಿಗೊಡದೆ ಎಂದಿನ ದಿನಂಪ್ರತಿ ಮಾತಿನಂತೆ ಮಾತಾಡುತ್ತ ಹಾಡು ಗುನುಗುತ್ತ ಆಫೀಸ್ ಬೀಗ ತೆಗೆದು ಒಳ ಹೋಗುವರು. ಒಳಗೆ ಕಾಲಿಟ್ಟು ದೇವರನ್ನು ಧ್ಯಾನಿಸಿದವರಂತೆ ಎದೆ ಮೇಲೆ ಕೈಯಿಟ್ಟು ಬ್ಯಾಗು ಪಕ್ಕಕ್ಕಿಟ್ಟು ಟೇಬಲ್ ಒರೆಸಿ ಡ್ರಾಯರ್ ತೆಗೆದು ಬೇಕಾದ ರೆಕಾರ್ಡ್ಸ್ ಮೇಲಿಟ್ಟು ನೋಡುವರು. ಅದೊ, ಕೆಳಗೆ ಕಬ್ಬಿಣದ ಪೆಟ್ಟಿಗೆ ಓಪನ್ ಮಾಡಿ ಅಲ್ಲಿ ನೆನ್ನೆ ಮೊನ್ನೆಯ ಎಂ.ಓ , ರಿಜಿಸ್ಟರ‌್ಡ್ ಲೆಟರ್ ಎತ್ತಿಕೊಂಡು ಅದರ ಮೇಲೆ ಷರಾ ಬರೆವರು. ಅದೇ ಹೊತ್ತಲ್ಲಿ ಟ್ರಿಣ್ ಟ್ರಿಣ್ ಅನ್ನಿಸುತ್ತ ಬಾಡಿಗೆ ಸೈಕಲ್ನಲ್ಲಿ ಹಿಂದೆ ಕ್ಯಾರಿಯರ‌್ಗೆ ಪೋಸ್ಟ್ ಚೀಲ ಹಾಕಿಕೊಂಡು ಬಂದಿಳಿವ ಪೋಸ್ಟ್ ಮ್ಯಾನ್ ಗಂಗ, ಸೈಕಲ್ ಸ್ಟ್ಯಾಂಡ್ ಹಾಕಿ ಕ್ಯಾರಿಯರ‌ಲ್ಲಿದ್ದ ಪೋಸ್ಟ್ ಚೀಲ ಎತ್ತಿ ಲಟ್ಟಂತ ಜಗುಲಿಲಿಟ್ಟು ‘ನಮಸ್ತೆ ಸಾರ್’ ಅಂತನ್ನೊಷ್ಟರಲ್ಲಿ ಒಂಭತ್ಹತ್ತು ಗಂಟೆಯ ಚುರುಗುಟ್ಟುವ ಬಿಸಿಲು. ಆ ಬಿಸಿಲ ಬೇಗೆಗೆ ಉಸ್ ಅಂತ ಕುಂತ ಗಂಗಣ್ಣನ್ನ ನೋಡಿದ ಷಣ್ಮುಖಸ್ವಾಮಿ ‘ಏನಪ್ಪ ಬಂದ್ಯಾ.. ಬಾ. ಯಾಕ್ ಲೇಟೂ..’ ಅಂತ ರಾಗವಾಗಿ ಅನ್ನೋರು. ಗಂಗ ‘ಅಯ್ಯೊ. ಏನ್ಮಾಡದು ಸಾರ್, ಎಲ್ಲನು ರೆಡಿ ಮಾಡಿ ಅವ್ರು ಕೊಡತಂಕ ಲೇಟಾಯ್ತು’ ಅಂತಿರುವಾಗಲೆ ನೆನ್ನೆ ಮೊನ್ನೆ ಬ್ಯಾಲೆನ್ಸ್ ಲೆಟರ್ರು ಎಂ.ಓ ಫಾರಂ, ರಿಜಿಸ್ಟರ‌್ಡ್ ಲೆಟರ್ ಕೊಟ್ಟು ‘ನೋಡ್ಕೊ ಸರಿಯಾಗಿ. ಇವತ್ತು ಇವೆಲ್ಲ ಖಾಲಿ ಆಗ್ಬೇಕು. ಯಾರು ಸಿಕ್ನಿಲ್ಲ ಅಂತ ನೆಪ ಮಾಡ್ಕಂಡ್ ಬಂದ್ರೆ ಹೆಡ್ಡಾಫೀಸ್ಗೇಳಿ ನಿನ್ನ ಬೇರೆ ಕಡೆ ಕಳಿಸ್ತಿನಿ” ಅಂತ ಸಿಟ್ಟಾಗೋರು. ಗಂಗ “ಅಯ್ಯೋ ಬುಡಿ ಸಾರ್ ಯಾಕ್ ರೇಗ್ತಿರಾ ಕಾಲಿ ತಾನೆ.. ಮಾಡ್ಕ ಬರಾಣ ಬುಡಿ” ಅಂತ ಅವರ ಸಿಟ್ಟನ್ನು ಮೂಲೆಗೆಸೆದು ಅವರು ಕೊಟ್ಟದ್ದನ್ನ ಓದುತ್ತಾ ಸೀರಿಯಲ್ಲಾಗಿ ಜೋಡಿಸಿಕೊಂಡು ತೊಡೆ ಸಂದಿಗೆ ಹಾಕೊಂಡು ಈಗ ತಂದ ಪೋಸ್ಟ್ ಚೀಲ ಎತ್ತಿಕೊಂಡು ಅರಗು ಮೆತ್ತಿದ ಸೀಲ್ ನ ಬ್ಲೇಡಿನಲ್ಲೊ ಕತ್ತರಿಯಲ್ಲೊ ಕಟ್ ಮಾಡಿ ಚೀಲ ಅಗಲಿಸಿ ಅಂಡು ಮಗುಚಿ ಸುರಿವನು. ಆ ಚೀಲದೊಳಗಿಂದ ಎಂ.ಓ ಫಾರಂ, ರಿಜಿಸ್ಟರ‌್ಡ್ ಲೆಟರ್, ಇನ್ ಲ್ಯಾಂಡ್ ಲೆಟರ್, ಓಪನ್ ಪೋಸ್ಟ್ ಕಾರ್ಡು, ಫೋನ್ ಬಿಲ್ಲು, ವ್ಹೀಕ್ಲಿ ಪೇಪರು, ಮಾಸ ಪತ್ರಿಕೆ ಎಲ್ಲ ಇರುತ್ತಿದ್ದವು. ಅವನ್ನೆಲ್ಲ ಸೆಪರೇಟ್ ಸೆಪರೇಟ್ ಡಿವೈಡ್ ಮಾಡುತ್ತ ಮಾಡುತ್ತ ತೊಡೆ ಸಂದಿಗೆ ಮಡಚಿ ಭದ್ರವಾಗಿ ಕೂರುವನು. ಬಿಸಿಲು ಏರ‌್ತಾ ಏರ‌್ತಾ ಅವನು ಲೆಟರ್ ಜೋಡುಸ್ತಾ ಜೋಡುಸ್ತಾ ಮುಲುಕಾಡುತ್ತ ಅವನಿಗೇ ಅರಿವಿಲ್ಲದೆ ಮೊದಲು ಕಾಲ ಮೇಲೆ, ಆಮೇಲೆ ಹಿಮ್ಮಡಿ ಮೇಲೆ, ಹಾಗೇ ಕುಕ್ಕರಗಾಲಲ್ಲಿ ಕುಂತು ಬಾಯಿ ಕುಣಿಸುತ್ತ ಓದುತ್ತ ಎಲ್ಲವನ್ನೂ ಜೋಡಿಸುತ್ತಿರುವನು.

ಷಣ್ಮುಖಸ್ವಾಮಿ ಟೇಬಲ್ ಹಿಂದೆ ಸರಿಸಿ ಮೇಲೆದ್ದು ಹೊರ ಬಂದು ಪ್ಯಾಂಟ್ ಸರಿ ಮಾಡಿಕೊಂಡು “ನೋಡಪ್ಪ ಎಲ್ಲನು ರೆಡಿ ಮಾಡ್ತ ಇರು ನಾನು ಟೀ ಕುಡ್ದು ಬತ್ತಿನಿ ಹುಷಾರು” ಅಂತ ಸರ್ಕಲ್ನಲ್ಲಿದ್ದ ಮಲ್ಲಣ್ಣನ ಹೋಟಲ್ಗೊ, ಸಣ್ಣಪ್ಪನ ಹೋಟಲ್ಗೊ ಹೋಗುವುದು ದಿನದ ವಾಡಿಕೆಯಾಗಿತ್ತು. ಪೋಸ್ಟ್ ಮೇಷ್ಟ್ರು ಹೋಟೆಲ್ಗೆ ಹೋಗೋದನ್ನೇ ಕಾಯ್ದಿದ್ದ ನಾವು ಗುಸುಗುಸು ಪಿಸಿಪಿಸಿ ಮಾತಾಡ್ತ ಸ್ಕೂಲ್ ಜಗುಲಿಯಿಂದ ‘ಹೊಹೊ..’ ಅಂತ ಛಂಗನೆ ನೆಗೆದು ಪೋಸ್ಟ್ ಆಫೀಸ್ ಜಗುಲಿಗೆ ಶಿಫ್ಟ್ ಆಗುತ್ತಿದ್ದಂತೆ ಗಂಗಣ್ಣ ಬೆಚ್ಚುವುದು ನಮಗೇನು ಹೊಸದಲ್ಲ.

ಅವನು ಬೆಚ್ಚಿದ ರೀತಿಗೆ ನಾವೆಲ್ಲ ಗೇಲಿ ಮಾಡ್ತ ನಗಾಡ್ತ ಅವನ ಸುತ್ತ ಕೇಕೆ ಹಾಕುತ್ತಿದ್ದೆವು. ಆಗ ಅವನು ಅಷ್ಟೂ ಹೊತ್ತು ಕಷ್ಟಪಟ್ಟು ಜೋಡಿಸಿದ್ದ ಎಲ್ಲ ಲೆಟರು, ಕಾರ್ಡು, ಎಂ.ಓ ಫಾರಂ ಇನ್ನು ಏನೇನೊ ಎಲ್ಲವನ್ನು ತನ್ನ ಕಡೆ ಎಳೆದು ಮಿಕ್ಸ್ ಮಾಡಿ ಅದರ ಮೇಲೆ ಪೋಸ್ಟ್ ಚೀಲ ಹಾಕಿ “ಏಯ್ ಹೋಗಿ ಹಂಗೆಲ್ಲ ಬರಬಾರ‌್ದು ಗೊತಾಯ್ತ… ಮೇಸ್ಟ್ರು ಬೊಯ್ತಾರೆ ಕಂಡ್ರಪ್ಪ” ಅನ್ನೋನು. ನಮ್ಮ ಸದ್ದು ಗಲಾಟೆ ಕೇಳಿ ಓಡಿ ಬಂದ ಚೌಡಮ್ಮ ಹಳೇ ಕೊಳದಪ್ಪಲೇಲಿ ನೀರು ಎರಚಿ “ಏಯ್ ನಾಯ್ಗೊಳೆ ಯಾಕಿಂಗಾಡ್ದರಿ.. ನಡರಿ ಮೇಸ್ಟ್ರುಗೇಳ್ತಿನಿ” ಅಂತ ಬೀದಿಗೆ ಕಾಲಿಟ್ಟದ್ದೇ ತಡ ನಾವು ಅಲ್ಲಿಂದ ಪರಾರಿ.

(ಮುಂದುವರೆಯುವುದು…)

-ಎಂ.ಜವರಾಜ್


[ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. “ಕತ್ತಲ ಹೂವು” (ನೀಳ್ಗತೆ) ಪ್ರಕಟಣೆಗೆ ಸಿದ್ದಗೊಳ್ಖುತ್ತಿದೆ. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಪ್ರಸ್ತುತ “ಪೋಸ್ಟ್ ಮ್ಯಾನ್ ಗಂಗಣ್ಣ” ಎಂಬ ನೀಳ್ಗತೆ ಮುಗ್ಧ ಪೋಸ್ಟ್ ಮ್ಯಾನ್ ಒಬ್ಬನ ಜೀವನ ಚಿತ್ರವನ್ನು ಹೇಳುವ ಒಂದು ಕುತೂಹಲಕಾರಿ ಕಥೆಯಾಗಿದೆ]


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x