ಅಂಕಲ್ ಮತ್ತು ಮಿ. ಬ್ರೂಮ್‌ಫೀಲ್ಡ್: ಜೆ ವಿ ಕಾರ್ಲೊ

ಮೂಲ ಇಂಗ್ಲಿಷ್: ಜೇಮ್ಸ್ ಹೆರಿಯಟ್
ಕನ್ನಡಕ್ಕೆ: ಜೆ ವಿ ಕಾರ್ಲೊ

(ಬ್ರಿಟಿಷ್ ಪಶು ವೈದ್ಯಕೀಯ ಶಸ್ತ್ರಚಿಕಿತ್ಸಕರಾದ ಜೇಮ್ಸ್ ಆಲ್‌ಫ್ರೆಡ್ ವೈಟ್ (1916-1995) ಜೇಮ್ಸ್ ಹೆರಿಯಟ್ ಹೆಸರಿನಲ್ಲೇ ಹೆಚ್ಚು ಪರಿಚಿತರು. 1939ರಲ್ಲಿ ಗ್ಲಾಸ್ಗೊ ಪಶು ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದುಯಾರ್ಕ್‌ಷೈರ್‌ನಲ್ಲಿ ಸುಮಾರು 50 ವರ್ಷಗಳ ಕಾಲ ತಮ್ಮ ವೃತ್ತಿ ಜೀವನವನ್ನು ನಡೆಸಿದರು. ತಮ್ಮ 50ನೇ ವಯಸ್ಸಿನಲ್ಲಿ ಮಡದಿಯ ಒತ್ತಾಯದ ಮೇರೆಗೆ ತಮ್ಮ ವೃತ್ತಿ ಜೀವನದ ಅನುಭವಗಳನ್ನು ಜೇಮ್ಸ್ ಹೆರಿಯಟ್ ಎಂಬ ಹೆಸರಿನಿಂದ ಬರೆಯತೊಡಗಿದರು. ಇಂಗ್ಲೆಂಡಿನಲ್ಲಿ ಪ್ರಕಟವಾದ ಅವರ ಎರಡು ಪುಸ್ತಕಗಳು ಅಮೆರಿಕದಲ್ಲಿ ‘All Creatures Great and Small’ ಹೆಸರಿನಲ್ಲಿ ಪ್ರಕಟವಾಗಿ ಜೇಮ್ಸ್ ಹೆರಿಯಟ್ ಪ್ರಸಿದ್ಧಿ ಪಡೆದರು. ಈ ಅನುವಾದವನ್ನು ಮೇಲಿನ ಪುಸ್ತಕದಿಂದ ಮಾಡಲಾಗಿದೆ.)

ತೆರೆದುಕೊಂಡಿದ್ದ ಕೊಟ್ಟಿಗೆಯ ಬಾಗಿಲಿನೊಳಗಿನಿಂದ ನನ್ನ ತೆರೆದ ಬೆನ್ನಿನ ಮೇಲೆ ಬೀಳುತ್ತಿದ್ದ ಹಿಮದ ಬಗ್ಗೆ ನನ್ನ ಪಠ್ಯ ಪುಸ್ತಕಗಳಲ್ಲಿ ಒಂದಿನಿತೂ ಉಲ್ಲೇಖವಿರಲಿಲ್ಲ! ನಾನು, ಕೊಟ್ಟಿಗೆಗೆ ಹಾಸಿದ್ದ ಚಪ್ಪಡಿ ಕಲ್ಲುಗಳ ಮೇಲೆ ಬಿದ್ದಿದ್ದ ಸೆಗಣಿ, ಮತ್ತಿತರ ಹೇಸಿಗೆಯ ಮೇಲೆ ಅಂಗಾತ ಮಲಗಿಕೊಂಡಿದ್ದೆ. ನನ್ನ ಬಲ ತೋಳು ಸಂಪೂರ್ಣವಾಗಿ ದೊಡ್ಡದಾಗಿ ಏದುಸಿರು ಬಿಡುತ್ತಾ ತಿಣುಕುತ್ತಿದ್ದ ಹಸುವಿನ ಗರ್ಭಾಶಯದೊಳಗೆ ಸೇರಿತ್ತು. ನನ್ನ ಕಾಲ್ಬೆರಳುಗಳು, ನಾನು ಜಾರದಂತೆ ಕಲ್ಲು ಚಪ್ಪಡಿಗಳ ಅಂಚನ್ನು ಹುಡುಕುತ್ತಿದ್ದವು. ನಾನು ಶರಟನ್ನು ಬಿಚ್ಚಿಟ್ಟಿದ್ದರಿಂದ ಸೆಗಣಿ, ರಕ್ತ ಮತ್ತು ಇತರೆ ತ್ಯಾಜ್ಯಗಳಲ್ಲಿ ಮುಳುಗಿ ಹೋಗಿದ್ದೆ. ನನ್ನನ್ನು ಕರೆದುಕೊಂಡು ಬಂದಿದ್ದ ರೈತನು ಹಿಡಿದಿದ್ದ ಮಿಣುಕು ದೀಪದ ಬೆಳಕಿನ ವರ್ತುಲದ ಹೊರಗೆ ಬೇರೆ ಏನೂ ಕಾಣಿಸುತ್ತಿರಲಿಲ್ಲ.

ಕತ್ತಲಿನಲ್ಲಿ ನನ್ನ ಪರಿಕರಗಳನ್ನು ಹುಡುಕುವುದು ಹೇಗೆ ಎಂದು ಖಂಡಿತವಾಗಿಯೂ ನನ್ನ ಪಠ್ಯ ಪುಸ್ತಕಗಳಲ್ಲಿ ತಿಳಿಸಿರಲಿಲ್ಲ. ಅರ್ಧ ಬಕೆಟ್ ಉಗುರು ಬೆಚ್ಚನೆಯ ನೀರಿನೊಂದಿಗೆ, ಕಾಲ್ಬೆರಳುಗಳನ್ನು ಊರಲು ಜಾಗವನ್ನು ಹುಡುಕುತ್ತಾ ಈ ರೈತ ಮಹಾಶಯನ ಹಸು ಕರು ಈಯಲು ನಾನು ನೆರವಾಗಬೇಕಿತ್ತು. ನನ್ನ ತೋಳು ಮರಗಟ್ಟತೊಡಗಿತ್ತು. ಹಸುವಿನ ಬಲವಾದ ತಿಣುಕಾಟಕ್ಕೆ ನನ್ನ ಕೈ ಬೆರಳುಗಳು ಸೋಲತೊಡಗಿದ್ದವು.
ಕ್ರಮೇಣವಾಗಿ ಕವಿಯುತ್ತಿದ್ದ ದಣಿವು, ಅಸಹಾಯಕತೆ, ನಿರರ್ಥಕತೆ ಗಾಬರಿ ಇದಾವುದರ ಬಗ್ಗೆಯೂ ನನ್ನ ಪಠ್ಯ ಪುಸ್ತಕದಲ್ಲಿ ತಿಳಿಸಿರಲಿಲ್ಲ.

ನನ್ನ ನೆನಪು ನಾನು ಓದಿದ ಪ್ರಸವಶಾಸ್ತ್ರದ ಪಠ್ಯದೊಳಗಿದ್ದ ಚಿತ್ರದ ಕಡೆಗೆ ಜಾರಿತು: ಮಿರಮಿರನೆ ಮಿಂಚುತ್ತಿದ್ದ ಕೊಟ್ಟಿಗೆಯ ಶುಭ್ರ ನೆಲಹಾಸಿನ ಮೇಲೆ ನಿಂತಿರುವ ಹಸು, ಹಾಗೆಯೇ ಹೊಳೆಯುವ ಬೂಟುಧಾರಿಯಾಗಿ, ಹೆರಿಗೆ ಮಾಡಿಸಲು ಗರಿ ಗರಿಯಾದ ಬಿಳಿ ಮೇಲೊದಿಕೆಯನ್ನು ಧರಿಸಿ ಮಾರು ದೂರದಿಂದ ತನ್ನ ತೋಳನ್ನು ಹಸುವಿನ ಗರ್ಭಾಶಯದೊಳಗೆ ತೂರಿಸಿ ನಿಂತಿದ್ದ ಪಶುವೈದ್ಯನ ಚಿತ್ರ ನನ್ನ ಕಣ್ಣ ಮುಂದೆ ತೇಲಿ ಬಂದಿತು. ಪಶುವೈದ್ಯನ ಮುಖವು ಯಾವುದೇ ಆತಂಕ ದುಮ್ಮಾನಗಳಿಲ್ಲದೆ ತುಟಿಗಳು ತೃಪ್ತಿಯಿಂದ ಬಿರಿದಿದ್ದವು. ಅವನ ಸುತ್ತ ಸಾಕಷ್ಟು ದೂರದಲ್ಲಿ ಕೈಕಟ್ಟಿ ನಿಂತಿದ್ದ ರೈತ ಕುಟುಂಬದವರ ಮುಖದ ಮೇಲೂ ಯಾವುದೇ ಆತಂಕದ ಗೆರೆಗಳು ಕಾಣಿಸುತ್ತಿರಲಿಲ್ಲ. ಹಸುವೂ ಕೂಡ ಯಾವುದೇ ಆತಂಕವನ್ನು ತೋರಿಸದೆ ಮುಗುಳ್ನಗುತ್ತಿರುವಂತೆ ಕಾಣಿಸುತ್ತಿತ್ತು. ಎಲ್ಲೂ ರಕ್ತವಾಗಲೀ ಇತರೆ ಸ್ರಾವಗಳು ಕಾಣಿಸುತ್ತಿರಲಿಲ್ಲ.

ಚಿತ್ರದೊಳಗಿದ್ದ ಪಶುವೈದ್ಯ ಆಗ ತಾನೇ ಸಂತೃಪ್ತಿಯಾಗಿ ಉಂಡು, ಹೀಗೇ ಮೋಜಿಗಾಗಿ ಪಕ್ಕದ ಮನೆಯವನ ಹಸುವಿಗೆ ಕರುವನ್ನೀಯಲು ಸಹಾಯ ಮಾಡೋಣವೆಂದು ಬಂದಿರುವನಂತೆ ಕಾಣಿಸುತ್ತಿದ್ದ. ಅವನು ಮರಗಟ್ಟುವ ಚಳಿಗಾಲದಲ್ಲಿ ಬೆಳಗಿನ ಜಾವ ಎರಡು ಗಂಟೆಗೆ ರೈತನೊಬ್ಬನು ಬಾಗಿಲು ಬಡಿದು, ಕೂಗಿ ಎದ್ದವನಂತೆ ಕಾಣಿಸುತ್ತಿರಲಿಲ್ಲ. ಅವನು ತನ್ನ ಮುರುಕಲು ವ್ಯಾನಿನಲ್ಲಿ ದಟ್ಟವಾಗಿ ಹಿಮ ಹರಡಿದ ಜಾಡಿನಲ್ಲಿ ಹನ್ನೆರಡು ಮೈಲು ದೂರದಲ್ಲಿ ಮಿಣುಕು ಹುಳದಂತೆ ನಿಸ್ತೇಜವಾಗಿ ಬೆಳಕು ಸೂಸುತ್ತಿದ್ದ ಒಂಟಿ ಮನೆಯ, ಬಾಗಿಲಿರದ ಕೊಟ್ಟಿಗೆಯನ್ನು ಕಂಡೇ ಇರಲಿಲ್ಲ.

ನಾನು ಮತ್ತೂ ಒಂದು ಇಂಚು ನನ್ನ ತೋಳನ್ನು ಹಸುವಿನೊಳಗೆ ತೂರಿಸಲು ಪ್ರಯಾಸ ಪಡುತ್ತಿದ್ದೆ. ಕರುವಿನ ತಲೆ ಹಿಂಭಾಗದಲ್ಲಿತ್ತು. ಕುಣಿಕೆಹಾಕಿದ ಸಪೂರವಾದ ಹಗ್ಗವನ್ನು ಕರುವಿನ ಕೆಳಗಿನ ದವಡೆಗೆ ನನ್ನ ಬೆರಳ ತುದಿಯಿಂದ ತೂರಿಸುವುದು ನನ್ನ ಪ್ರಯತ್ನವಾಗಿತ್ತು. ಆದರೆ, ಕರು ಮತ್ತು ಹಸುವಿನ ಸೊಂಟದ ಎಲುಬುಗಳ ಮಧ್ಯದ ಕಿರುದಾದ ಜಾಗದಿಂದ ಅದು ಸಾಧ್ಯವಾಗುತ್ತಿರಲಿಲ್ಲ. ಹಸುವಿನ ಬಲವಾದ ತಿಣುಕು ನನ್ನ ಪ್ರಯತ್ನವನ್ನು ನಿಷ್ಫಲಗೊಳಿಸುತ್ತಿತ್ತು. ಎರಡು ತಿಣುಕುಗಳ ಮಧ್ಯದ ಶೂನ್ಯ ಸಮಯದಲ್ಲಿ ನಾನು ಹಗ್ಗವನ್ನು ಒಂದೊಂದೇ ಇಂಚು ಮುಂದೆ ತೂರಿಸುತ್ತಿದ್ದೆ. ಎಲ್ಲಿಯವರೆಗೆ ಇದನ್ನು ಮುಂದುವರಿಸಿಕೊಂಡು ಹೋಗಬಹುದೆಂದು ನಾನು ಹತಾಶನಾಗತೊಡಗಿದೆ. ನಾನು ಹಗ್ಗವನ್ನು ಕರುವಿನ ಕೆಳದವಡೆಗೆ ಸಿಗಿಸಿ ಎಳೆಯದಿದ್ದರೆ ಅದನ್ನು ತಿರುಗಿಸಿ ಹೊರತರುವುದು ಸಾಧ್ಯವೇ ಇಲ್ಲವೆಂದು ನಾನು ಆತಂಕಗೊಳ್ಳತೊಡಗಿದೆ. ನಾನು ಅವಡುಗಚ್ಚಿ ಮತ್ತೊಮ್ಮೆ ತೋಳನ್ನು ಮುಂದೂಡಿದೆ…

ಮತ್ತೊಮ್ಮೆ ಗಾಳಿ ಬೀಸಿದ ರಭಸಕ್ಕೆ ಹಿಮಪಕಳೆಗಳು ಹಾರಿ ಬಂದು ಬೆವರುತ್ತಿದ್ದ ನನ್ನ ಬೆನ್ನ ಮೇಲೆ ಬಿದ್ದವು. ನನ್ನ ಬಿಸಿ ಬೆನ್ನಿನ ಮೇಲೆ ಅವು ಚಟಪಟಗೊಳ್ಳುತ್ತಿರುವಂತೆ ಭಾಸವಾಯಿತು. ನನ್ನ ಹಣೆಯ ಮೇಲಿಂದಲೂ ಬೆವರು ಬಸಿಯುತ್ತಾ, ನನ್ನ ಕೈ ಮುಂದಕ್ಕೆ ತೂರಿಸುತ್ತಿದ್ದಂತೆ ನನ್ನ ಕಣ್ಣೊಳಗೆ ಇಳಿಯುತ್ತಿತ್ತು.
ಕೆಲವೊಮ್ಮೆ ಇಂತ ಸನ್ನಿವೇಶಗಳು ಎದುರಾಗುತ್ತವೆ. ನಾನು ಕರುವನ್ನು ಹೊರಗೆಳೆಯಬಲ್ಲನೇ ಎಂಬ ನನಗೆ ಸಂಶಯ ಕಾಡತೊಡಗಿತು. ನಾನು ಹತಾಶ ಸ್ಥಿತಿಗೆ ತಲುಪತೊಡಗಿದ್ದೆ.
ನೋಡುತ್ತಾ ಕುಳಿತುಕೊಂಡವರ ಮಾತುಗಳು ನನಗೆ ಕೇಳಿಸತೊಡಗಿದವು:
“ಈ ಹಸು ಮಾಂಸಕ್ಕಷ್ಟೇ ಲಾಯಕ್ಕು ಅಂತ ಕಾಣಿಸುತ್ತೆ. ಅದರ ಸೊಂಟ ನೋಡು, ಎಷ್ಟೊಂದು ಸಣ್ಣಗಿದೆ. ಅದರಿಂದ ಕರು ಹೊರಗೆ ಬರುವುದು ಸಾಧ್ಯವಿಲ್ಲ…”
“ಇದು ಎಷ್ಟೊಂದು ಕೊಬ್ಬಿದೆ ಅಂದ್ರೆ ಬೀಫ್‌ಗಷ್ಟೇ ಲಾಯಕ್ಕು. ಇದನ್ನು ಕಟುಕರಿಗೆ ಮಾರಿದರೆನೇ ನೀನು ಏನಾದ್ರೂ ಲಾಭ ನೋಡಬಹುದೇನೋ!” ಇತ್ಯಾದಿ, ಇತ್ಯಾದಿ…
ಕರುವಿನ ಕತ್ತಿಗೆ ತಂತಿಯನ್ನು ಬಿಗಿದೆಳೆದು ರುಂಡವನ್ನು ಬೇರ್ಪಡಿಸಿ ಹಸುವಿಗೆ ಹೆರಿಗೆ ಮಾಡಿಸಬಹುದಿತ್ತು. ಬಹಳಷ್ಟು ಭಾರಿ ಈ ರೀತಿ ನಡೆದು ಕೊಟ್ಟಿಗೆಯ ನೆಲದ ಮೇಲೆಲ್ಲಾ ಮೃತ ಕರುವಿನ ಬಿಡಿ ಬಿಡಿ ಅಂಗಾಂಗಗಳು ಚೆಲ್ಲಾಡಿರುವುದನ್ನು ನಾನು ಕಂಡಿದ್ದೇನೆ.

ಆದರೆ, ಅದನ್ನು ಇಲ್ಲಿ ಮಾಡುವಂತಿರಲಿಲ್ಲ. ಕರು ಜೀವಂತವಾಗಿತ್ತು. ನಾನು ನನ್ನ ಕೈಯನ್ನು ಮತ್ತಷ್ಟು ಒಳಕ್ಕೆ, ಅಂದರೆ ಕರುವಿನ ಬಾಯಿಯ ಅಂಚಿನವರೆಗೆ ತಳ್ಳಲು ಸಫಲನಾದೆ. ನನ್ನ ಕೈಗೆ ಆ ಪುಟ್ಟ ಜೀವಿಯ ನಾಲಗೆ ಸವರಿದಂತಾಗಿ ಅಚ್ಚರಿಯಾಯಿತು. ಸಾಮಾನ್ಯವಾಗಿ ಹಸುವಿನ ಗರ್ಭಕೋಶದ ಆ ಇಕ್ಕಟ್ಟಿನ ಸ್ಥಾನದಲ್ಲಿ ಸಿಕ್ಕಿಕೊಂಡಿರುವ ಕರು, ಹಸುವಿನ ಬಲವಾದ ಸಂಕೋಚನದಿಂದಲೇ ಉಸಿರುಗಟ್ಟಿ ಸತ್ತಿರುತ್ತದೆ. ಆದರೆ, ಆಶ್ಚರ್ಯಕರವಾಗಿ ಈ ಕರು ಇನ್ನೂ ಜೀವಂತವಾಗಿದೆ ಎಂದರೆ ಅದನ್ನು ಜೀವಂತವಾಗಿಯೇ ಹೊರಗೆ ತೆಗೆಯಬೇಕು.
ನಾನು ಎದ್ದು ನನಗೆ ಕೊಟ್ಟಿದ್ದ ಬಕೆಟ್ ನೀರಿನ ಕಡೆಗೆ ಹೋದೆ. ಅದು ತಣ್ಣಗಾಗಿತ್ತಷ್ಟೇ ಅಲ್ಲದೆ ಪೂರಾ ರಕ್ತಮಯವಾಗಿತ್ತು. ನಾನು ಸೋಪಿನಿಂದ ನನ್ನ ಕೈಗಳನ್ನು ತೊಳೆದು ಮತ್ತೊಮ್ಮೆ ಆ ಕಲ್ಲು ನೆಲದ ಮೇಲೆ ಅಂಗಾತ ಮಲಗಿದೆ. ಈ ಭಾರಿ ಆ ಕಲ್ಲು ನೆಲ ಮತ್ತಷ್ಟು ಕಠೋರವಾಗಿ ನನ್ನ ಎದೆಯನ್ನು ಒತ್ತತೊಡಗಿತು. ಎರಡೂ ಕಾಲುಗಳ ಹೆಬ್ಬೆರಳುಗಳನ್ನು ಚಪ್ಪಡಿ ಕಲ್ಲಿನ ಅಂಚಿಗೆ ಒತ್ತಿ ನನ್ನ ನಿಸ್ತೇಜ ಕೈಯನ್ನು ಮತ್ತೆ ಹಸುವಿನ ಗರ್ಭಾಶಯದೊಳಗೆ, ಕರುವಿನ ಒಣಗಿದ ಕಾಲುಗಳ ಪಕ್ಕದಿಂದ ತೂರಿಸಿದೆ. ಕರುವಿನ ಕಾಲುಗಳು ಎಷ್ಟು ಒಣಗಿದ್ದವು ಎಂದರೆ ನನ್ನ ಕೈಗಳಿಗೆ ಉಪ್ಪಿನ ಕಾಗದದಲ್ಲಿ ಉಜ್ಜಿದಂತಾಯಿತು. ನನ್ನ ಕೈ ಮುಂದುವರಿಯುತ್ತಾ ಕರುವಿನ ಪಕ್ಕದಿಂದ ಕುತ್ತಿಗೆ, ಕಿವಿ, ಕೆನ್ನೆ ಮತ್ತು ನನ್ನ ನಿರ್ದಿಷ್ಟ ಗುರಿಯಾದ ಕೆಳದವಡೆಯ ಕಡೆಗೆ ತಳ್ಳತೊಡಗಿದೆ.

ಸುಮಾರು ಎರಡು ಗಂಟೆಗಳ ಕಾಲದಿಂದ ಒಂದು ಸಣ್ಣ ಕುಣಿಕೆಯನ್ನು ಕರುವಿನ ದವಡೆಗೆ ಸಿಕ್ಕಿಸುವ ಸಾಹಸಕ್ಕೆ ನಾನು ಕೈ ಹಾಕಿದ್ದೆ. ಕರುವನ್ನು ಹೊರಗೆಳೆಯಲು ನನ್ನ ಈ ಮೊದಲ ಯೋಜನೆಗಳೆಲ್ಲಾ ವಿಫಲವಾಗಿದ್ದವು.

ಒಟ್ಟಿನಲ್ಲಿ ಇದೊಂದು ಶೋಚನೀಯ ಸಂಗತಿಯಾಗಿತ್ತು. ಹಸುವಿನ ಧಣಿ, ಮಿಸ್ಟರ್ ಡಿನ್ಸ್ಡೇಲ್ ಮಿತ ಮಾತಿನ, ನೋಡಲಿಕ್ಕೆ ಯಾವಾಗಲೂ ದುಃಖ ತಪ್ತನಾಗಿ ಕೆಡುಕನ್ನೇ ನಿರೀಕ್ಷಿಸಿರುವಂತೆ ಕಾಣಿಸುತ್ತಿದ್ದ ಮನುಷ್ಯನಾಗಿದ್ದ. ಅವನ ಜೊತೆಯಲ್ಲಿ ಅವನ ಮಗ ಕೂಡ ಇದ್ದ. ಅವನೂ ಕೂಡ ಮಿತಭಾಷಿ. ಇಬ್ಬರೂ ಏನೂ ಮಾತನಾಡದೇ ನನ್ನ ಕಾರ್ಯವನ್ನು ವಿಷಣ್ಣತೆಯಿಂದ ಗಮನಿಸುತ್ತಿದ್ದರು.
ಇವರ ಜತೆ ಹುಡುಗ ಅಂಕಲ್ ಎಂದು ಕರೆಯುತ್ತಿದ್ದ ಅಸಾಧ್ಯ ಮುದುಕನೊಬ್ಬನಿದ್ದ. ನಾನು ಕೊಟ್ಟಿಗೆಗೆ ಕಾಲಿಟ್ಟಂತೆಯೇ, ಹ್ಯಾಟು ಧರಿಸಿದ್ದ ಹೊಳೆಯುವ ಕಣ್ಣುಗಳ ಈ ಮುದುಕ ಒಂದು ಪಿಂಡಿ ಒಣ ಹುಲ್ಲು ಎಳೆದುಕೊಂಡು ಅದರ ಮೇಲೆ ಆರಾಮಾಗಿ ಕುಳಿತಿದ್ದನ್ನು ಕುತೂಹಲದಿಂದ ಗಮನಿಸಿದ್ದೆ. ಅವನು ತನ್ನ ಪೈಪನ್ನು ಹೊರತೆಗೆದು ತಂಬಾಕು ತುಂಬಿಸುತ್ತಾ ಒಂದು ದೀರ್ಘ ಅವಧಿಯ ನಾಟಕ ನೋಡಲು ಕುಳಿತಿರುವವನಂತೆ ಕಾಣಿಸುತ್ತಿದ್ದ.

“ಹಲೋ ಯಂಗ್‌ಮ್ಯಾನ್! ನಾನು ಮಿಸ್ಟರ್ ಡಿನ್ಸ್ಡೇಲನ ಅಣ್ಣ ಕಣಪ್ಪ. ನನ್ನ ಫಾರಂ ಇಲ್ಲೇ ಸ್ವಲ್ಪ ದೂರದಲ್ಲಿದೆ,” ಎಂದು ನನ್ನನ್ನು ನೋಡುತ್ತಲೇ ಮುದುಕ ಆ ಪ್ರಾಂತ್ಯದ ಶೈಲಿಯಲ್ಲಿ ಪರಿಚಯಿಸಿಕೊಂಡಿದ್ದ.
ನಾನು ನನ್ನ ಪರಿಕರಗಳನ್ನೆಲ್ಲಾ ಕೆಳಗಿಡುತ್ತಾ, “ತುಂಬಾ ಸಂತೋಷ. ನನ್ನ ಹೆಸರು ಹೆರಿಯಟ್,” ಎಂದೆ.
ಮುದುಕ ನನ್ನನ್ನು ತೀಕ್ಷ್ಣವಾಗಿ ನೋಡುತ್ತಾ, “ನಮ್ಮ ದನದ ಡಾಕ್ಟರ್ ನಿನಗೆ ಖಂಡಿತ ಗೊತ್ತಿರಬೇಕು, ಅವರು ಇಲ್ಲಿ ಸುತ್ತಮುತ್ತ ಎಲ್ಲರಿಗೂ ಗೊತ್ತು, ಮಿಸ್ಟರ್ ಬ್ರೂಮ್‌ಫೀಲ್ಡ್ ಅಂತ. ವಂಡರ್‌ಫುಲ್ ಮನುಷ್ಯ. ಕರು ಹೊರತೆಗೆಯುವುದರಲ್ಲಂತೂ ನಿಷ್ಣಾತ. ನನಗೆ ಗೊತ್ತಿರುವಂತೆ, ಅವರಿಗೆ ಸರಿಸಾಟಿ ಯಾರೂ ಇಲ್ಲ.”
ನಾನು ಕಷ್ಟಪಟ್ಟು ಒಂದು ಒಣ ಮುಗುಳ್ನಗೆ ಬೀರಿದೆ. ಬೇರೆ ಯಾವ ಸಮಯದಲ್ಲಿಯಾದರೂ ನನ್ನ ಸಹೋದ್ಯೋಗಿ ಎಷ್ಟು ಜಾಣ ಎಂದು ಕೇಳುವುದನ್ನು ಇಷ್ಟಪಡುತ್ತಿದ್ದೆನೇನೋ…ಆದರೆ, ನಾನು ಇಂದು ಖುಷಿ ಪಡುವ ಮನಸ್ಥಿತಿಯಲ್ಲಿ ಇರಲಿಲ್ಲ.

“ಇಲ್ಲ ಸರ್, ನನಗೆ ಮಿಸ್ಟರ್ ಬ್ರೂಮ್‌ಫೀಲ್ಡರ ಪರಿಚಯವಿಲ್ಲ,” ನನ್ನ ಜಾಕೆಟು ಮತ್ತು ಅನಿವಾರ್ಯವಾಗಿ ಶರ್ಟನ್ನು ಬಿಚ್ಚುತ್ತಾ ನಾನು ಹೇಳಿದೆ. “ನಾನು ಈ ಪ್ರದೇಶಕ್ಕೆ ಹೊಸಬ.”
“ಏನೂ?! ಬ್ರೂಮ್‌ಫೀಲ್ಡ್ ಗೊತ್ತಿಲ್ಲವೇ?” ಆಶ್ಚರ್ಯಗೊಂಡವರಂತೆ ಅಂಕಲ್ ಉದ್ಗರಿಸಿದರು. “ನಿನಗೊಬ್ಬನಿಗೇ ಗೊತ್ತಿಲ್ಲ ಅನಿಸುತ್ತೆ! ಲಿಸ್ಟನ್‌ಡೇಲ್ ಸುತ್ತಮುತ್ತ ಬ್ರೂಮ್‌ಫೀಲ್ಡ್ ಅಂದರೆ ಆಗತಾನೇ ಹುಟ್ಟಿದ ಮಕ್ಕಳಿಗೂ ಗೊತ್ತು!!” ಅಂಕಲ್ ಅಘಾತಗೊಂಡವರಂತೆ ಸ್ತಬ್ಧರಾಗಿ ತಮ್ಮ ಪೈಪಿಗೆ ಕಡ್ಡಿ ಗೀರಿದರು ನಂತರ ಅವರ ದೃಷ್ಟಿ ನನ್ನ ನಗ್ನ ದೇಹದ ಮೇಲೆ ಹರಿಯಿತು. “ಒಹ್! ಬಾಕ್ಸರ್ ಚಡ್ಡಿಯಲ್ಲೊಮ್ಮೆ ಬ್ರೂಮ್‌ಫೀಲ್ಡರನ್ನು ನೋಡಬೇಕು. ವ್ಹಾಹ್! ಎಂತಾ ಹುರಿಗಟ್ಟಿದ ದೇಹ! ಆಹಾ, ಏನು ಮಸಲ್ಸ್!! ಅಂತ ಗಂಡಸನ್ನು ನಾನು ನೋಡೇ ಇಲ್ಲ.”

ನನ್ನ ಮೈಮೇಲೆ ಒಂದು ನಮೂನೆಯ ನಿಶ್ಶಕ್ತಿ ಹರಿದಂತಾಯಿತು. ಬಲಹೀನತೆಯಿಂದ ಕುಸಿದು ಬೀಳುವಂತಾಯಿತು. ನಾನು ನನ್ನ ಪರಿಕರಗಳನ್ನು ಒಂದು ಶುಭ್ರವಾದ ಟವೆಲಿನ ಮೇಲೆ ಜೋಡಿಸುತ್ತಿರುವಾಗ ಮುದುಕ ನನ್ನೆಡೆಗೆ ಮತ್ತೊಂದು ಪ್ರಶ್ನೆ ಎಸೆದ:
“ಯಂಗ್‌ಮ್ಯಾನ್, ನೀನು ಪದವಿ ಪಡೆದು ಎಷ್ಟು ಸಮಯವಾಯಿತು?”
“ಸುಮಾರು ಏಳು ತಿಂಗಳಾಯಿತು ಸರ್…”
“ಏಳು ತಿಂಗಳು?!” ಪೈಪಿಂದ ನೀಲಿ ಧೂಮವನ್ನು ಹೊರಬಿಡುತ್ತಾ ಅಂಕಲ್ ಮುಗುಳ್ನಕ್ಕರು. “ನಾನು ಯಾವಾಗಲೂ ಹೇಳುತ್ತಿರುವಂತೆ ಅನುಭವಕ್ಕಿಂತ ಮಿಗಿಲಾದುದು ಇಲ್ಲ. ಮಿಸ್ಟರ್ ಬ್ರೂಮ್‌ಪೀಲ್ಡ್ ಹತ್ತು ವರ್ಷಗಳಿಂದ ನಮ್ಮ ಪಶುವೈದ್ಯರಾಗಿದ್ದಾರೆ. ಅವರ ಬಗ್ಗೆ ಮಾತನಾಡುವಂತೆಯೇ ಇಲ್ಲ. ನನ್ನ ಬಗ್ಗೆ ಹೇಳುವುದಾದರೆ, ಪುಸ್ತಕದ ಬದನೆಕಾಯಿಗಿಂತ ನಾನು ಅನುಭವಕ್ಕೆ ಬೆಲೆ ಕೊಡುವವನು.”
ಬಕೆಟೊಳಗೆ ಸ್ವಲ್ಪ ಆಂಟಿಸೆಪ್ಟಿಕ್ ದ್ರಾವಣವನ್ನು ಹಾಕಿ ನಾನು ನನ್ನ ಎರಡೂ ಕೈಗಳನ್ನು ಮೊಣಕೈಗಳವರೆಗೆ ಚೆನ್ನಾಗಿ ಉಜ್ಜಿ ತೊಳೆದು ಹಸುವಿನ ಹಿಂದೆ ನಿಂತುಕೊಂಡೆ.

“ಮಿಸ್ಟರ್ ಬ್ರೂಮ್‌ಫೀಲ್ಡ್ ಕೈಗಳಿಗೆ ಅದ್ಯಾವುದೋ ಎಣ್ಣೆ ತರದ ದ್ರಾವಣ ಹಚ್ಚುತ್ತಾರೆ,” ಪೈಪನ್ನು ಜೋರಾಗಿ ಎಳೆಯುತ್ತಾ ಅಂಕಲ್ ಮುಂದುವರಿಸಿದರು, “ಬರೇ ಸೋಪು ಮತ್ತು ನೀರು ಹಾಕಿದರೆ ಗರ್ಭಕೋಶದ ಸೋಂಕು ತಗಲುತ್ತದೆ ಎಂಬುದು ಅವರ ಅಭಿಮತ.”
ನಾನು ಹಸುವಿನೊಳಗೆ ಕೈ ಹಾಕಿ ಸುತ್ತಮುತ್ತ ಪರೀಕ್ಷಿಸತೊಡಗಿದೆ. ನನ್ನ ಕೆಲಸ ಹದಿನೈದು ನಿಮಿಷಗಳಲ್ಲಿ ಮುಗಿಯುವುದೋ, ಇಲ್ಲ ತಾಸೇ ಹಿಡಿಯುವುದೋ ಎಂಬುದು ಇನ್ನು ಕೆಲವೇ ಸೆಕೆಂಡುಗಳಲ್ಲಿ ಗೊತ್ತಾಗುವುದರಲ್ಲಿತ್ತು.

ಈ ಭಾರಿ ನನ್ನ ಅದೃಷ್ಟ ನೆಟ್ಟಗಿರಲಿಲ್ಲ. ನನಗೆ ದಕ್ಕಿದ್ದ ಕೇಸು ತುಂಬಾ ಜಟಿಲವಾಗಿತ್ತು. ಕರುವಿನ ತಲೆ ಹಿಂಭಾಗದಲ್ಲಿದ್ದು ಒಳಗೆ ಸಲೀಸಾಗಿ ಕೈಯಾಡಿಸದಷ್ಟು ಹಸುವಿನ ಸೊಂಟ ಇಕ್ಕಟ್ಟಾಗಿತ್ತು. ಈ ಹಸುವಿನ ಗರ್ಭಕೋಶ ಚೊಚ್ಚಲ ಕರು ಈಯುವ ಹಸುವಿನಂತಿದ್ದು, ಎರಡನೇ ಕರು ಈಯುವ ಹಸುವಿನಂತಿರಲಿಲ್ಲ. ಅಲ್ಲದೆ ಹಸುವಿನ ಗರ್ಭಕೋಶ ಒಣಗಿ ಬೆಂಡಾದಾಂಗಿತ್ತು. ಅದರೊಳಗಿಂದ ಗರ್ಭಕೋಶದ ನೀರು ಕೆಲವು ತಾಸುಗಳ ಹಿಂದೆಯೇ ಹೊರಗೋಗಿರಬೇಕು. ಅದು ಹೊರಗಡೆ ಗುಡ್ಡಗಾಡು ಪ್ರದೇಶದಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡಿದ್ದ ಹಸು. ಅಲ್ಲದೆ ಅದು ಪೂರಾ ದಿನಗಳು ತುಂಬುವ ಕೆಲ ವಾರಗಳ ಮೊದಲೇ ಕರು ಹಾಕಲು ಸಜ್ಜಾಗಿತ್ತು. ಅದಕ್ಕಾಗಿಯೇ ಡಿನ್ಸ್ಡೇಲ್‌ರು ಅದನ್ನು ತಕ್ಷಣಕ್ಕೆ ಈ ಪಾಳು ಬಿದ್ದಿದ್ದ ಕೊಟ್ಟಿಗೆಗೆ ಹೊಡೆದುಕೊಂಡು ಬಂದಿದ್ದರು. ಅಂತೂ, ನಾನು ಹಾಸಿಗೆ ಕಾಣುವ ಸೌಭಾಗ್ಯ ಸದ್ಯಕ್ಕಂತೂ ಕಾಣಿಸುತ್ತಿರಲಿಲ್ಲ.
“ಏನಾಗಿದೆ ಅನ್ನೋ ಅಂದಾಜು ಸಿಕ್ಕಿತೇನಪ್ಪಾ ಯಂಗ್‌ಮ್ಯಾನ್?” ಅಂಕಲ್‌ರ ತೀಕ್ಷ್ಣ ಸವಾಲು ಅಲ್ಲಿಯ ನೀರವತೆಯನ್ನು ಭೇದಿಸಿ ನನ್ನೆಡೆಗೆ ತೂರಿ ಬಂತು. “ತಲೆ ಹಿಂಭಾಗದಲ್ಲಿದೆಯಾ? ಅದೇನು ದೊಡ್ಡ ಸಮಸ್ಯೆ? ಮಿಸ್ಟರ್ ಬ್ರೂಮ್‌ಫೀಲ್ಡ್ ಹಿಂದಿನ ಕಾಲುಗಳಿಂದಲೇ ಕರುವನ್ನು ಹೊರಗೆಳೆದದನ್ನು ನಾನು ನೋಡಿದ್ದೇನೆ.”

ಈ ತರದ ಅಪಲಾಪವನ್ನು ನಾನು ಈ ಮೊದಲೂ ಕೇಳಿದ್ದೆ. ನನ್ನ ಕೆಲವೇ ತಿಂಗಳುಗಳ ಅನುಭವದಲ್ಲಿ ಹೇಳುವುದಾದರೆ, ಕೆಲವು ರೈತರು ಬೇರೆಯವರ ಪಶುಗಳ ಬಗ್ಗೆ ಮಾತನಾಡುವಾಗ ತಮಗೆ ತುಂಬಾ ಗೊತ್ತಿದೆ ಎನ್ನುವಂತೆ ಮಾತನಾಡುತ್ತಿರುತ್ತಾರೆ. ತಮ್ಮ ಪಶುಗಳಿಗೆ ಜಡ್ಡಾದಾಗ ಮಾತ್ರ ಅವರ ಬುದ್ಧಿವಂತಿಕೆ ಕೈಕೊಡುತ್ತದೆ! ಮೊಟ್ಟ ಮೊದಲು ತಮ್ಮ ಪಶುವೈದ್ಯರ ಬಳಿಗೆ ಓಡುತ್ತಾರೆ. ತಮ್ಮ ನೆರೆಯವರ ಪಶುಗಳಿಗೆ ಏನಾದರೂ ಆದರೆ, ಇವರು ಮುಫತ್ತಾಗಿ ಕೊಡುವ ಸಲಹೆಗಳು, ಹೇಳುವ ಔಷದಗಳು ನೋಡಿದರೆ ವೈದ್ಯರೇ ತಲೆ ತಗ್ಗಿಸಬೇಕು! ಇನ್ನೊಂದು ತಮಾಷೆಯ ವಿಚಾರವೇನೆಂದರೆ ಈ ರೈತರೂ ಕೂಡ ವೈದ್ಯರ ಸಲಹೆಗಿಂತಲೂ ಇವರ ಸಲಹೆಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ! ಇಲ್ಲಿ ಈ ಮುದುಕ, ತನ್ನ ಮಾತಿನ ವೈಖರಿ ಮತ್ತು ವಯಸ್ಸಿನ ಆಧಾರದಿಂದ ಹೆಚ್ಚು ಗೌರವಾನ್ವಿತನಾಗಿದ್ದ. ಅವನ ಮಾತನ್ನು ಹಸುವಿನ ಒಡೆಯರು ತುಂಬಾ ಗೌರವ ಕೊಟ್ಟು ಕೇಳಿಸಿಕೊಳ್ಳುತ್ತಿದ್ದರು.

“ಇಲ್ಲಿ, ಮತ್ತೊಂದು ವಿಧಾನದಿಂದ ಕರುವನ್ನು ಹೊರಗೆಳೆಯಬಹುದು. ಕೆಲವು ಗಟ್ಟಿಮುಟ್ಟಾದ ಗಂಡಾಳುಗಳನ್ನು ಕರೆದು, ಕರುವಿನ ಕೊರಳಿಗೆ ಹಗ್ಗ ಬಿಗಿದು ರಪ್ಪನೇ ಹೊರಗೆಳೆಯುವುದು,” ಅಂಕಲ್ ಮತ್ತೊಂದು ಅಮೂಲ್ಯ ಸಲಹೆ ಕೊಟ್ಟರು.ಹಸುವಿನೊಳಗೆ ತಡಕಾಡುತ್ತಿದ್ದ ನಾನು ಅಂಕಲ್‌ನ ಈ ಸಲಹೆ ಕೇಳಿ ಹೌಹಾರಿದೆ. ಕರುವಿನ ತಲೆಯನ್ನು ಮುಂದಕ್ಕೆ ತರದೆ ಹೊರಗೆಳೆಯಲು ಪ್ರಯತ್ನಪಟ್ಟರೆ ಖಂಡಿತವಾಗಿಯೂ ಹಸುವಿನ ಕಿಳ್ಗುಳಿ ಮುರಿದುಹೋಗುತ್ತದೆ.
ಅಂಕಲ್‌ನ ಸಲಹೆ ಕೇಳಿದ ಡಿನ್ಸ್ಡೇಲ್‌ರ ಕಣ್ಣುಗಳು ಕಿರಿದಾದವು. ಅಂಕಲ್‌ನ ಅನುಭವದ ಮುಂದೆ ಅವರಿಗೆ ನಾನೊಬ್ಬ ಹುಡುಗಾಟದ ಹುಡುಗನಂತೆ ಕಂಡಿರಬೇಕು.

ಆಗಾಗಲೇ ಎರಡು ತಾಸುಗಳು ಕಳೆದಿದ್ದವು. ನನ್ನ ಸೋಲು ಸನಿಹದಲ್ಲೇ ನಿಂತು ಕೇಕೆ ಹಾಕತೊಡಗಿತ್ತು. ಆ ಕಲ್ಲು ನೆಲದ ಗಲೀಜಿನ ಮೇಲೆ ನಾನು ಉರುಳಾಡುತ್ತಿರುವಾಗ ಡಿನ್ಸ್ಡೇಲ್‌ರು ದೆವ್ವಗಳಂತೆ ಕುಳಿತು ನನ್ನನ್ನು ಮರುಕ ತುಂಬಿದ ಕಣ್ಣುಗಳಿಂದ ನೋಡುತ್ತಿದ್ದರು. ಮುದುಕ ಅಂಕಲ್‌ನ ಕಾಮೆಂಟರಿ ಕೇಳಿ ಬರುತ್ತಲೇ ಇತ್ತು. ಅವನ ಕಣ್ಣುಗಳು ಏನೋ ಸಂತೃಪ್ತಿಯಿಂದ ಫಳಫಳನೆ ಹೊಳೆಯುತ್ತಿದ್ದವು. ಅಂಕಲ್ ಇಷ್ಟೊಂದು ಸಂತೋಷ ಅನುಭವಿಸದೆ ವರ್ಷಗಳೇ ಆಗಿತ್ತೇನೋ! ಅಂಕಲ್‌ಗಂತೂ ಇವತ್ತು ತನ್ನ ಗುಡ್ಡದ ಮನೆಯ ಹಾದಿ ಹತ್ತುವುದು ಕಠಿಣವಾಗಲಾರದು. ಅವರು ಇಂದಿನ ಪ್ರತಿನಿಮಿಷವನ್ನೂ ತುಂಬಾ ತುಂಬ ಆನಂದಪಟ್ಟು ಸವಿದಿದ್ದರು.
ನಾನು ಆ ಗೊಚ್ಚೆಯನ್ನು ಮುಖಕ್ಕೆಲ್ಲಾ ಮೆತ್ತಿಸಿಕೊಂಡು, ಕಣ್ಣುಗಳೆರಡನ್ನೂ ಮುಚ್ಚಿಕೊಂಡು ಬಿದ್ದುಕೊಂಡಿರುವಾಗ ಅಂಕಲ್ ತಮ್ಮ ಪೈಪನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದ ಹುಲ್ಲಿನ ಕಂತೆಯ ಮೇಲಿಂದ ಮುಂದಕ್ಕೆ ಬಾಗಿದರು.

“ಇದು ನಿನ್ನಿಂದಾಗೋ ಕೆಲಸವಲ್ಲ ಯಂಗ್‌ಮ್ಯಾನ್,” ಅವರು ಬಹಳ ಖುಷಿಯಿಂದ ತೀರ್ಪು ಕೊಟ್ಟರು. ಆಗಷ್ಟೇ ನನ್ನ ಕೈ ಕರುವಿನ ಬಾಯಿಯ ಬಳಿ ಮುಟ್ಟಿದಾಗ ನನಗೆ ನಂಬಲಿಕ್ಕೇ ಆಗಿರಲಿಲ್ಲ. ಕೈಯಲ್ಲಿದ್ದ ಸಪೂರವಾದ ಹುರಿಯ ಕುಣಿಕೆಯನ್ನು ನಾನು ಕರುವಿನ ಬಾಚಿ ಹಲ್ಲಿನ ಮೇಲಿಂದ ಬಾಯಿಗೆ ಇಳಿಸಲು ಸಫಲನಾದೆ. ಅಭ್ಯಾಸ ಬಲದಿಂದ ದೇವರನ್ನು ಪ್ರಾರ್ಥಿಸುತ್ತಾ ಎಡಗೈಯಿಂದ ಹುರಿಯನ್ನು ಎಳೆದು ಕುಣಿಕೆಯನ್ನು ಬಿಗಿಗೊಳಿಸಿದೆ. ಕರುವಿನ ಕೆಳದವಡೆ ನನ್ನ ಹಿಡಿತಕ್ಕೆ ಸಿಕ್ಕಿತ್ತು.
ಕೊನೆಗೂ, ಮುಂದಿನ ಕಾರ್ಯಾಚರಣೆಗೆ ನನಗೊಂದು ದಾರಿ ಸಿಕ್ಕಿದಂತಾಯಿತು.

ನಾನು ಹಸುವಿನ ದಣಿಯನ್ನು ನನ್ನ ಸನಿಹಕ್ಕೆ ಕರೆದೆ. “ಮಿಸ್ಟರ್ ಡಿನ್ಸ್ಡೇಲ್, ನಾನು ಒಳಗೆ ಕರುವನ್ನು ಒಮ್ಮೆಲೇ ತಡವುತ್ತೇನೆ. ನೀವು ಆ ತಕ್ಷಣ ಈ ಹುರಿಯನ್ನು ಮೆಲ್ಲಗೆ ಒತ್ತಡ ಹಾಕಿ ಎಳೆದರೆ ಸಾಕು. ಕರುವಿನ ತಲೆ ಮುಂದಕ್ಕೆ ಬರುತ್ತದೆ.”
“ಹುರಿಯೇ ಕಿತ್ತುಕೊಂಡು ಬಂದರೆ?” ಅಂಕಲ್ ಆಶಾಭಾವನೆಯಿಂದ ಕೇಳಿದರು. ನಾನು ಅವರಿಗೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ನಾನು ಕರುವಿನ ಭುಜವನ್ನು ಹಸುವಿನ ತಿಣುಕಿಗೆ ಸರಿಯಾಗಿ ಚುಚ್ಚಿದೆ. ಆ ಪುಟ್ಟ ದೇಹ ನನ್ನಿಂದ ದೂರ ಸರಿದಂತೆ ಭಾಸವಾಯಿತು. “ಮಿಸ್ಟರ್ ಡಿನ್ಸ್ಡೇಲ್ ಈಗ ಮೆಲ್ಲಗೆ ಎಳಿತಾನೇ ಇರಿ. ಸಡಿಲ ಬಿಡಬೇಡಿ,” ಎನ್ನುತ್ತಾ, ನನ್ನಷ್ಟಕ್ಕೆ, “ಹುರಿ, ಕರುವಿನ ಬಾಯಿಂದ ಹೊರಗೆ ಜಾರಲು ಬಿಡಬೇಡ ದೇವರೇ…” ಎಂದು ಪ್ರಾರ್ಥಿಸತೊಡಗಿದೆ.
ಕರುವಿನ ತಲೆ ಮೆಲ್ಲನೆ ಹಸುವಿನ ಗರ್ಭಕಂಠದ ಕಡೆಗೆ ತಿರುಗುತ್ತಿತ್ತು. ಅದರ ಕತ್ತು ನೆಟ್ಟಗಾಗುತ್ತಿದ್ದುದ್ದು ನನ್ನ ಕೈ ನೇರಕ್ಕೆ ಬಂದಾಗ ಗೊತ್ತಾಯಿತು. ಕರುವಿನ ಕಿವಿ ನನ್ನ ಕೈಯನ್ನು ಸ್ಪರ್ಶಿಸಿತು. ನಾನು ಕರುವಿನ ಭುಜವನ್ನು ಬಿಟ್ಟು ಅದರ ಮುಸುಡಿಯನ್ನು ಹಿಡಿದುಕೊಂಡೆ. ಅದನ್ನು ಮೆಲ್ಲಗೆ ಮುಂದಕ್ಕೆ ಎಳೆದು ಅದರ ಮುಂಗಾಲುಗಳ ಮೇಲೆ ಇರಿಸಿದೆ. ತಕ್ಷಣ ಕುಣಿಕೆಯನ್ನು ಸಡಲಿಸಿ ಕರುವಿನ ಕಿವಿಗಳ ಮೇಲಿಂದ ಮುಂದಕ್ಕೆಸರಿಸಿದೆ.

“ಮಿಸ್ಟರ್ ಡಿನ್ಸ್ಡೇಲ್, ಹಸು ಮುಂದಿನ ಭಾರಿ ತಿಣುಕಿದಾಗ ಕರುವಿನ ತಲೆಯನ್ನು ಹಿಡಿದು ಹೊರಕ್ಕೆ ಎಳೆಯಿರಿ…” ನಾನು ಹೇಳಿದೆ.
“ಹೇ…ಹೇ… ಇಲ್ಲ! ಕಾಲುಗಳನ್ನು ಮೊದಲು ಎಳೆಯಬೇಕು!” ಅಂಕಲ್ ಕೂಗುತ್ತಾ ಹೇಳಿದರು.
“ಮಿಸ್ಟರ್ ಡಿನ್ಸ್ಡೇಲ್, ನೀವು ನಾನು ಹೇಳಿದ್ದನ್ನಷ್ಟೇ ಮಾಡಿ,” ನಾನು ಗದರಿಸಿದಂತೆ ತಾರಕ ಸ್ವರದಲ್ಲಿ ಕೂಗಿ ಹೇಳಿದೆ. ಯಾಕೋ ನಾನು ಕೂಗಿ ಹೇಳಿದ್ದು ನನಗೆ ಸಮಾಧಾನ ತಂದಿತು. ಅಂಕಲ್ ಮುಂದೆ ಮಾತನಾಡಲಿಲ್ಲ. ತೆಪ್ಪಗೆ ಹುಲ್ಲಿನ ಹೊರೆಯ ಮೇಲೆ ಕುಳಿತರು.
ನಾನು ಹೇಳಿದಂತೆ ಮೊದಲು ಕರುವಿನ ತಲೆಯು ಹೊರಗೆ ಬಂದಿತು, ನಂತರ ಪೂರಾ ಕರು ಸಲೀಸಾಗಿ ಹೊರಗೆ ಬಂದಿತು. ಹೊರಗೆ, ಕಲ್ಲು ಚಪ್ಪಡಿಯ ಮೇಲೆ ಬಿದ್ದಿದ್ದ ಕರು ಕೊಂಚವೂ ಮಿಸುಕಾಡುತ್ತಿರಲಿಲ್ಲ. ಅದರ ಕಣ್ಣುಗಳು ಗಾಜಿನ ಗೋಲಿಗಳಂತೆ ಜೀವವಿಲ್ಲದಂತೆ ಕಾಣಿಸುತ್ತಿದ್ದವು. ನಾಲಿಗೆ ನೀಲಿ ಬಣ್ಣಕ್ಕೆ ತಿರುಗಿ ಊದಿಕೊಂಡಿತ್ತು.
“ಅದು ಉಳಿಯಲಾರದು…” ಅಂಕಲ್ ಮತ್ತೆ ಶುರುವಿಟ್ಟುಕೊಂಡರು.

ನಾನು ಕರುವಿನ ಬಾಯೊಳಗೆ ತುಂಬಿಕೊಡಿದ್ದ ಲೊಳೆಯನ್ನೆಲ್ಲಾ ಹೊರತೆಗೆದು ಶುಚಿಗೊಳಿಸಿದೆ. ಅದರ ಗಂಟಲಿಗೆ ನನ್ನ ಉಸಿರನ್ನು ಜೋರಾಗಿ ಊದಿ ಕೃತಕ ಉಸಿರಾಟಕ್ಕೆ ತೊಡಗಿಸಿದೆ. ನಂತರ ಅದರ ಪಕ್ಕೆಗಳನ್ನು ಒತ್ತಲು ಶುರುಮಾಡಿದಂತೆ ಕರು ಒಮ್ಮೆಲೇ ಉಸಿರು ಎಳೆದುಕೊಂಡಿತು ಮತ್ತು ನಿಧಾನಕ್ಕೆ ಅದರ ಕಣ್ಣುಗಳು ತೆರೆಯಲಾರಭಿಸಿದವು. ಸರಾಗವಾಗಿ ಉಸಿರಾಡಲು ತೊಡಗಿ ಕಾಲು ಕೊಡವತೊಡಗಿತು.
ಅಂಕಲ್ ತಮ್ಮ ಹ್ಯಾಟನ್ನು ತೆಗೆದು ತಲೆ ಕೆರೆದು ಕೊಳ್ಳತೊಡಗಿದರು. ಅವರಿಗೆ ಆಶ್ಚರ್ಯವಾಗಿತ್ತು. “ದೇವರೇ! ನೀನು ಆ ಹಸುವಿನ ಹೊಟ್ಟೆಯೊಳಗೆ ಆ ಪಾಟಿ ರಾದ್ಧಾಂತ ಎಬ್ಬಿಸಿದ ಮೇಲೂ ಅದು ಇನ್ನೂ ಜೀವಂತವಿದೆ ಎಂದರೆ ಅದರ ಅದೃಷ್ಟಚೆನ್ನಾಗಿದೆ!” ಅಂಕಲ್‌ನ ಮೊದಲಿನ ನಂಜು ಇಳಿದಿತ್ತು. ಅವರ ಪೈಪೂ ಕೂಡ ನಂದಿ ಹೋಗಿ ಅವರ ಬಾಯಿಂದ ಇಳಿಬಿದ್ದಿತ್ತು.

“ಈ ಪುಟ್ಟ ಪೋರನಿಗೆ ಏನು ಬೇಕೆಂದು ನನಗೆ ಗೊತ್ತು,” ಎನ್ನುತ್ತಾ ನಾನು ಅದರ ಮುಂಗಾಲುಗಳನ್ನು ಹಿಡಿದು ಹಸುವಿನ ಬಾಯೆಡೆಗೆ ಎಳೆದುಕೊಂಡು ಹೋದೆ. ಹಸು ನಾಲ್ಕೂ ಕಾಲುಗಳನ್ನು ಉದ್ದಕ್ಕೆ ಚಾಚಿಕೊಂಡು, ಯಾವುದರ ಪರಿವೆಯೂ ಇಲ್ಲದಂತೆ ತಲೆಯನ್ನು ನಿಡಿದಾಗಿ ಬಿಟ್ಟುಕೊಂಡು ಸುಸ್ತಾಗಿ ಮಲಗಿತ್ತು. ಅದರ ಪಕ್ಕೆಲಬುಗಳು ತಿದಿ ಒತ್ತಿದಂತೆ ಮೇಲೆ ಕೆಳಗಾಡುತ್ತಿದ್ದವು. ಕಣ್ಣುಗಳು ಹೆಚ್ಚು ಕಮ್ಮಿ ಮುಚ್ಚೇ ಹೋಗಿದ್ದವು. ಅದರ ಮುಖಕ್ಕೆ ಕರುವಿನ ಸ್ಪರ್ಶವಾದ ಕೂಡಲೇ ಹಸು ತನ್ನ ಆಯಾಸವನ್ನು ಮರೆತೇ ಬಿಟ್ಟಂತೆ ಒಮ್ಮೆಲೇ ಕಣ್ಗಳನ್ನು ದೊಡ್ಡದಾಗಿ ತೆರೆದು ಎಚ್ಚರಗೊಂಡಿತು. ಕರುವನ್ನು ಮೂಸತೊಡಗಿತು. ಮೂಸು ಮೂಸುತ್ತಾ ಅದರ ಆಸಕ್ತಿ ಹೆಚ್ಚಾಗತೊಡಗಿತು. ಅದು ಮಾಮೂಲಿಯಂತೆ ಕಾಲುಗಳನ್ನು ಮಡಚಿಕೊಂಡು ಕುಳಿತು ಕರುವನ್ನು ನೆಕ್ಕತೊಡಗಿತು. ನಿಸರ್ಗವೂ ಕೂಡ ಎಂಥಾ ಒಂದು ಚೈತನ್ಯದಾಯಕ ಮಾಲೀಶು ದಯಪಾಲಿಸಿದೆ ಎಂದರೆ ಕರು ಕೂಡ ಕಣ್ಣು ಮುಚ್ಚಿ ಆನಂದಿಸತೊಡಗಿತು. ನನ್ನ ಬಾಯಿ ಒಣಗಿ ತುಟಿಗಳು ಒಂದಕ್ಕೊಂದು ಬೆಸೆದುಕೊಂಡಂತಾಗಿತ್ತು.

ನನ್ನ ಪಕ್ಕದಲ್ಲಿ ತಮ್ಮ ದುಃಖಿತ ಮುಖ ಹೊತ್ತುಕೊಂಡು ಮಿಸ್ಟರ್ ಡಿನ್ಸ್ಡೇಲ್ ಬಂದು ನಿಂತುಕೊಂಡರು.
“ಡಾಕ್ಟ್ರೇ, ಕುಡಿಯಲು ಏನಾದರೂ ಕೊಡಲೇ?”
ನನ್ನ ಒಣಗಿದ ಮುಖದ ಮೇಲೊಂದು ಮುಗುಳ್ನಗು ಮೂಡಿತು. ವ್ಹಿಸ್ಕಿ ಬೆರೆಸಿದ ಒಂದು ಕಪ್ ಬಿಸಿ ಬಿಸಿ ಟೀ ನನ್ನ ಕಣ್ಣ ಮುಂದೆಉದಯಿಸಿತು. “ಖಂಡಿತವಾಗಿಯೂ ಮಿಸ್ಟರ್ ಡಿನ್ಸ್ಡೇಲ್. ಒಹ್! ನೀವೇ ನೋಡಿದಿರಲ್ಲ? ಎರಡು ತಾಸು ಮೇಲಾಗಿರಬೇಕಲ್ಲವೇ? ಒಂದು ಡ್ರಿಂಕ್ ಧಾರಾಳವಾಗಿ ತೆಗೆದುಕೊಳ್ಳುತ್ತೇನೆ.”
“ನಾನು ಹಸುಗೆ ಕೇಳಿದ್ದು ಡಾಕ್ಟ್ರೇ…” ಮಿಸ್ಟರ್ ಡಿನ್ಸ್ಡೇಲ್ ಅದೇ ದುಃಖತಪ್ತ ಮುಖದಿಂದ ನನ್ನನ್ನೇ ದಿಟ್ಟಿಸುತ್ತಾ ಹೇಳಿದ.
“ಒಹ್, ಖಂಡಿತ… ಖಂಡಿತ!” ನಾನು ತೊದಲಿದೆ. “ಧಾರಾಳವಾಗಿ ಕೊಡಿ ಪಾಪ.”
“ಕರು ಈದ ನಂತರ ಹಸುವಿಗೆ ಕುಡಿಯಲು ಕೊಡುವುದನ್ನು ಮಿಸ್ಟರ್ ಬ್ರೂಮ್‌ಫೀಲ್ಡ್ ಒಪ್ಪುವುದಿಲ್ಲ. ಅದು ಹಸುವಿನ ಹೊಟ್ಟೆ ತಣ್ಣಗಾಗಿಸುತ್ತದೆಯಂತೆ,” ಅಂಕಲ್‌ನ ತೀಕ್ಷ್ಣ ದನಿ ಕೊನೆಯಬಾರಿಗೆ ಎಂಬಂತೆ ನನ್ನನ್ನು ಹಿಂಬಾಲಿಸಿತು.
ನನ್ನ ಪರಿಕರಗಳನ್ನು ಎತ್ತಿಕೊಂಡು ನಾನು ಕೊಟ್ಟಿಗೆಯಿಂದ ಹೊರಬಿದ್ದೆ. ಹಿಮಗಾಳಿ ಇನ್ನೂ ಬೀಸುತ್ತಲೇ ಇತ್ತು.

-ಜೆ ವಿ ಕಾರ್ಲೊ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಜಾನ್ ಸುಂಟಿಕೊಪ್ಪ
ಜಾನ್ ಸುಂಟಿಕೊಪ್ಪ
29 days ago

ಅತ್ಯದ್ಭುತ ಅನುವಾದ ಸರ್….

ಬಿ.ಟಿ.ನಾಯಕ್
ಬಿ.ಟಿ.ನಾಯಕ್
29 days ago

ಇದು ಒಂದು ಪಶು ವೈದ್ಯಕೀಯ ವೃತ್ತಿಯ ಭಾಗ. ಅದರಲ್ಲಿ ಸಹಜ ಪ್ರಾಣಿ ಪ್ರೀತಿ ಇದ್ದದ್ದು ನಿಚ್ಚಳವಾಗಿ ಗೋಚರಿಸುತ್ತದೆ. ಪ್ರಾಣಿಗಳಿಗೂ ಮನುಷ್ಯರಂತೆ ಬದಕುವ ಹಕ್ಕಿದೆ ಏಂಬ ದಿಸೆಯಲ್ಲಿ ಪಶು ವೈದ್ಯಕೀಯ ವೃತ್ತಿ ಪರರು ಶ್ರಮಿಸುತ್ತಾರೆ ಎಂಬುವುದು ಇಲ್ಲಿ ಕಾಣುವ ನೈಜತೆ. ಸುಂದರ ಮತ್ತು ನೈಸರ್ಗಿಕ ದೃಷ್ಟಾಂತವನ್ನು ಹೊರ ತಂದ ಲೇಖಕರಿಗೆ ಅಭಿನಂದನೆಗಳು. : ಬಿ.ಟಿ.ನಾಯಕ್.

2
0
Would love your thoughts, please comment.x
()
x