ಒಂದು ದಿನ ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರಕ್ಕೆ ಹೋಗಿದ್ದ ನಾನು ಹಿಂದಿರುಗಲು ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬರುವ ಒಂದು ಖಾಸಗಿ ಬಸ್ಸಿನಲ್ಲಿ ಎರಡು ಸೀಟ್ ಇರುವ ಕಡೆ ಕಿಟಕಿಯ ಪಕ್ಕ ಕುಳಿತಿದ್ದೆ. ಸ್ವಲ್ಪ ಹೊತ್ತಾದ ನಂತರ ಇನ್ನೊಬ್ಬ ಹೆಂಗಸು ನನ್ನ ಪಕ್ಕದ ಸೀಟಿನಲ್ಲಿ ಕುಳಿತರು. ಕಿಟಕಿಯ ಪಕ್ಕದಲ್ಲಿ ಕುಳಿತಿದ್ದರಿಂದ ಎಂದಿನಂತೆ ನನ್ನ ಗಮನ ಹೊರಗಿನ ದೃಶ್ಯಗಳನ್ನು ಕಿಟಕಿಯಿಂದ ಇಣುಕಿ ನೋಡುವಂತೆ ಮಾಡಿತ್ತಾದ್ದರಿಂದ ಪಕ್ಕದಲ್ಲಿದ್ದವರ ಕಡೆ ಅಷ್ಟಾಗಿ ಗಮನ ಕೊಟ್ಟಿರಲಿಲ್ಲ. ಆಕೆ ಕುಳಿತು ಬಹುಶಃ ಒಂದೈದು ನಿಮಿಷವಾಗಿರಬಹುದು ಒಂದು ಮಗುವನ್ನು ಎತ್ತುಕೊಂಡಿದ್ದ ಒಬ್ಬ ಹೆಂಗಸು ಈ ಸೀಟಿನ ಹತ್ತಿರ ಬಂದಾಗ ನನ್ನ ಪಕ್ಕದಲ್ಲಿರುವ ಮಹಿಳೆ ನೀವೆಲ್ಲಿ ಇಳಿಯುವುದು ಎಂದು ಆಕೆಯನ್ನು ಕೇಳಿದಾಗ ಆಕೆ ದೇವನಹಳ್ಳಿ ಎಂದು ಹೇಳಿದ್ದು ನನ್ನ ಗಮನಕ್ಕೆ ಬಂದಿತ್ತು. ಆಗ ಆ ಮಹಿಳೆ ತಾನು ಕುಳಿತಿದ್ದ ಜಾಗವನ್ನು ಆ ಮಗುವಿನ ತಾಯಿಗೆ ಬಿಟ್ಟುಕೊಟ್ಟು ತಾನು ನಿಂತಳು, ಬಹುಶಃ ನಾನೂ ಸೀಟಿನ ಕೊನೆಯಲ್ಲಿ ಕುಳಿತಿದ್ದರೆ ಹಾಗೆ ಮಾಡುತಿದ್ದೆ ಅನಿಸುತ್ತೆ. ಆದರೂ ಈ ಘಟನೆಯ ಬಗ್ಗೆ ನನ್ನ ಗಮನವಷ್ಟಾಗಿ ಇರಲಿಲ್ಲ ಏಕೆಂದರೆ ಏನೋ ಯೋಚನೆ ಮಾಡುತ್ತ ಕಿಟಕಿಯ ಹೊರಗಿನ ದೃಶ್ಯಗಳನ್ನು ನೋಡುವುದರಲ್ಲಿ ನಾನು ತಲ್ಲೀನಳಾಗಿದ್ದೆ.
ಎತ್ತರ ನಿಲುವಿನ ಸದೃಢವಾಗಿದ್ದ, ರಾಡಿಯಾಗಿ ಅಲಂಕಾರ ಮಾಡಿಕೊಂಡಿದ್ದ ಆಕೆಯು ನನ್ನ ಪಕ್ಕದಲ್ಲಿ ಕುಳಿತುಕೊಳ್ಳಲು ಬಂದಾಗ ನನ್ನ ಗಮನ ಆಕೆಯ ಕಡೆ ಹೋಯಿತು, ಅವಳನ್ನು ನೋಡಿದ ತಕ್ಷಣ ನನಗೆ ಆಕೆಯ ಬಗ್ಗೆ ಏಕೋ ಒಳ್ಳೆಯ ಅಭಿಪ್ರಾಯ ಬರಲಿಲ್ಲ. ಆ ಮಗುವಿನ ತಾಯಿ ನನ್ನ ಪಕ್ಕದಲ್ಲಿ ಕುಳಿತ ತಕ್ಷಣ ನಾನು ಈಗಾಗಲೇ ಅರ್ಧ ತೆರೆದಿದ್ದ ಕಿಟಕಿಯ ಗ್ಲಾಸನ್ನು ತನ್ನ ಎಡಗೈಯ ಅಂಗೈಯಿಂದ ಇನ್ನಷ್ಟು ತೆರೆಯಲು ಪ್ರಯತ್ನಪಟ್ಟಳು, ಕಿಟಕಿ ಪಕ್ಕದಲ್ಲೇ ಕುಳಿತಿದ್ದ ನನಗೆ ಹೇಳದೆ ಮಗುವನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡಿದ್ದರೂ ತುಂಬಾ ಚಟುವಟಿಕೆಯಿಂದ ಎರಡು ಕೈಗಳನ್ನು ಅಡ್ಡಾದಿಡ್ಡಿಯಾಗಿ ಆಡಿಸುತ್ತಿದ್ದ ಆಕೆಯನ್ನು ನಾನು ಏಕೆ? ಏನು? ಎಂದು ಕೇಳುವ ಮೊದಲೇ, ಆಕೆಯೇ ಇಪ್ಪತ್ತು ರೂಪಾಯಿ ಬಿದ್ದುಹೋಗಿದೆ ತೆಗೆದುಕೊಡಿ ಎಂದು ತುಂಬಾ ಲಗುಬಗೆಯಿಂದ ಕೇಳಿದಳು, ಆಕ್ಷಣ ನನ್ನ ಗಮನ ಆ ನಿಟ್ಟಿಗೆ ಹರಿಯಿತು.
ಅವಳು ಹೇಳಿದಂತೆ ದುಡ್ಡು ಬಿದ್ದಿರುವುದಂತೂ ನಿಜವಾಗಿತ್ತು ಆದರೆ ಆಕೆ ಹೇಳಿದ ಹಾಗೇ ಅದು ಇಪ್ಪತ್ತು ರೂಪಾಯಿ ಆಗಿರಲಿಲ್ಲ ೨ ಮತ್ತು ೧ ರೂಪಾಯಿಗಳ ೪-೫ ಕಾಯಿನ್‍ಗಳು ನಾ ಕುಳಿತಿದ್ದ ಸೀಟು ಮತ್ತು ಕಿಟಕಿಯ ನಡುವಿನ ರೇಕಿನ ನಡುವೆ ತಗಲಿಕೊಂಡು ಬಿದ್ದಿದ್ದವು, ಇಷ್ಟೆಲ್ಲ ಕ್ಷಣಾರ್ಥದಲ್ಲಿ ಆದ ಘಟನೆಯಾಗಿತ್ತು. ಆ ಕ್ಷಣದಲ್ಲಿ ನನಗೆ ಅನಿಸಿದ್ದು ಮಗುವನ್ನು ತೊಡೆಯಮೇಲೆ ಕೂರಿಸಿಕೊಂಡಿದ್ದ ಆಕೆ ಕಿಟಕಿಯ ಗ್ಲಾಸನ್ನು ಇನ್ನಷ್ಟು ತೆರೆಯಲು ನನಗೇ ಹೇಳಬಹುದಾಗಿತ್ತು ಎಂದು. ನಾನು ಒಂದು ಕೈಯಿಂದ ಕಿಟಕಿಯ ಗ್ಲಾಸನ್ನು ಇನ್ನಷ್ಟು ತೆರೆಯಲು ಹೊರಟೆ ಇನ್ನೊಂದು ಕೈಯಿಂದ ಆಕೆಯ ಕೈಯಿಂದ ಜಾರಿದ್ದ ಕಾಯಿನ್‍ಗಳನ್ನು ಎತ್ತಿಕೊಡಲು ಅನುವಾದೆ. ಕಷ್ಟಪಟ್ಟು ಒಂದು ಕಾಯಿನ್ ತೆಗೆದು ಆಕೆಗೆ ಕೊಡಲು ತಿರುಗಿದಾಗ ಆಕೆಯ ಮುಖ ವಿಚಲಿತವಾದಂತೆ ಕಂಡಿತು, ತನ್ನ ಬಲಗೈಯಿಂದ ಕಾಯಿನ್ ತೆಗೆದುಕೊಂಡಳು, ಉಳಿದ ಕಾಯಿನ್‍ಗಳನ್ನು ತೆಗೆದುಕೊಡುವೆ ಸಂದಿಯಲ್ಲಿ ಸಿಕ್ಕಿಹಾಕಿಕೊಂಡಿದೆ ಎನ್ನುತ್ತಿದ ಹಾಗೆ ನನ್ನ ಗಮನ ಆಕೆ ತನ್ನ ಸೆರಗನ್ನು ನಾನು ನನ್ನ ತೊಡೆಯ ಮೇಲೆ ಇಟ್ಟುಕೊಂಡಿದ್ದ ಬ್ಯಾಗಿನ ಮೇಲೆ ಮರೆಯಾಗಿ ಇಟ್ಟುಕೊಂಡು ಅದರ ಕೆಳಗೆ ತನ್ನ ಎಡಗೈಯಿಂದ ನನ್ನ ಬ್ಯಾಗಿನ ಜಿಪ್ ಅನ್ನು ತೆರೆಯಲು ಪ್ರಯತ್ನಪಡುತ್ತಿದ್ದಂತೆ ಕಾಣಿಸಿತು, ತಕ್ಷಣವೇ ನಾನು ನನ್ನ ಬ್ಯಾಗನ್ನು ಕಿಟಕಿಯ ಕಡೆಗೆ ಸೆಳೆದುಕೊಂಡು ಸುಮ್ಮನೆ ಕೂರದೆ ಇನ್ನೊಂದು ಕಾಯಿನ್ ತೆರೆಯಲು ಸಿದ್ದವಾದೆ ಆದರೆ ಅವುಗಳು ಬಿದ್ದಿದ್ದ ಜಾಗ ತುಂಬಾ ಕಿರಿದಾಗಿದ್ದರಿಂದ ಆಗಲಿಲ್ಲ. ಆಕೆಗೆ ತೆಗೆಯಲು ಆಗುತ್ತಿಲ್ಲ ಎಂದೆ, ಪರವಾಗಿಲ್ಲ ಹೋಗಲಿ ಬಿಡಿ ಎಂದು ಬಹಳ ಕೂಲಾಗಿ ಹೇಳಿದಳು, ನನಗೆ ಆಕೆಯ ವರ್ತನೆ ವಿಚಿತ್ರ ಅನಿಸಿತು, ಅನಿಸಿದ ತಕ್ಷಣವೇ ನನ್ನ ಬ್ಯಾಗಿನ ಜಿಪ್ ಅನ್ನು ತೆರೆಯಲು ಪ್ರಯತ್ನ ಪಡುತ್ತಿದ್ದ ಘಟನೆ ನೆನಪಾಗಿ ಆಕೆ ಬೇಕಾಗೆ ಕಾಯಿನ್‍ಗಳನ್ನು ಬೀಳಿಸಿ ನನ್ನ ಗಮನ ಆ ಕಡೆಗೆ ಹೋದಾಗ ನನ್ನ ಬ್ಯಾಗಿನಿಂದ ಹಣವನ್ನು ಕಸಿಯಲು ಸಂಚು ಮಾಡಿದ್ದಾಳೆ ಅನಿಸಿತು. ಆಕೆಯ ಗಡಿಬಿಡಿ ವರ್ತನೆಯಿಂದ ವಿಚಲಿತಗೊಂಡು ಗಾಬರಿಯಿಂದ ಆ ಕಾಯಿನ್‍ಗಳನ್ನು ತೆಗೆದುಕೊಡಲು ಮಗ್ನಳಾಗಿದ್ದ ನನಗೆ ಎಲ್ಲಾ ಕಾಯಿನ್‍ಗಳನ್ನೂ ತೆಗೆದುಕೊಡಲು ಸಾಧ್ಯವಾಗದೆ ಇದ್ದ ಸಮಯದ ಅರೆಕ್ಷಣದಲ್ಲಿ ನನ್ನ ಜಾಗೃತ ಮನಸ್ಸು ತನ್ನ ಕೆಲಸ ಮಾಡಿತ್ತು, ಹಾಗೆ ನಾನು ನನ್ನ ಬ್ಯಾಗನ್ನು ಇತ್ತ ಕಡೆಗೆ ಇಟ್ಟುಕೊಂಡಾಗ ಆಕೆ ಏನನ್ನೋ ಗೊಣಗಿದ್ದು ನೆನಪಿಗೆ ಬಂತು ಆದರೆ ಏನು ಎಂದು ಅರ್ಥವಾಗಿರಲಿಲ್ಲ. ದಿನ ಪತ್ರಿಕೆಗಳಲ್ಲಿ, ಟಿ.ವಿ.ಗಳಲ್ಲಿ ಜನ ಸಾಮಾನ್ಯರ ದುಡ್ಡನ್ನು ಎಗರಿಸಲು ಕಳ್ಳರೇ ದುಡ್ಡು ಬೀಳಿಸಿ ನಿಮ್ಮ ದುಡ್ಡಿರಬೇಕು ನೋಡಿ ಎಂದು ಅವರ ಗಮನ ಆ ಕಡೆ ಸೆಳೆದು ಅವರು ಆ ದುಡ್ಡನ್ನು ತೆಗೆದುಕೊಳ್ಳಲು ಹೊರಟಾಗ ಇವರ ಬ್ಯಾಗ್/ಪರ್ಸನ್ನು ಎಗರಿಸಿದ್ದ ಸಾಕಷ್ಟು ಉದಾಹರಣೆಗಳು ಕ್ಷಣಾರ್ಧದಲ್ಲಿ ಹಾದು ಹೋದವು, ಆದರೆ ಇಲ್ಲಿ ಆಕೆಯೇ ತನ್ನ ದುಡ್ಡನ್ನು ಬೀಳಿಸಿದ್ದಳು, ಅದೃಷ್ಟಕ್ಕೆ ಆ ಕಾಯಿನ್‍ಗಳು ಕೆಳಗೆ ಬೀಳದೆ ಸೀಟಿನ ಪಕ್ಕದಲ್ಲಿ ಬಿದ್ದಿದ್ದರಿಂದ ನನಗೆ ಅನುಕೂಲವಾಯಿತು, ಇಲ್ಲದಿದ್ದರೆ ನಾನು ಕೆಳಗೆ ಬಿದ್ದ ಕಾಯಿನ್‍ಗಳನ್ನು ಎತ್ತಿಕೊಡಲು ಬಾಗಿದಾಗ ಆಕೆ ನನ್ನ ಬ್ಯಾಗಿನ ಒಳಗಿನ ಪರ್ಸ್ ಅನ್ನು ಎಗರಿಸುತ್ತಿದ್ದಳು ಎಂದು ಮನದಟ್ಟಾಯಿತು.
ಸಾಮಾನ್ಯವಾಗಿ ಕಿಟಿಕಿಯ ಪಕ್ಕದಲ್ಲಿ ಕುಳಿತ್ತಿದ್ದರೆ ಪ್ರಯಾಣದುದ್ದಕ್ಕೂ ನನ್ನ ಗಮನ ಕಿಟಕಿಯಿಂದ ಕಾಣುವ ಹೊರನೋಟವನ್ನೇ ಇಣುಕಿ ನೋಡುವಂತೆ ಮಾಡುತ್ತಿತ್ತು, ಆದರೆ ಆದ ಈ ಘಟನೆಯಿಂದ ಆಕೆಯನ್ನು ಗಮನಿಸುವುದೇ ನನ್ನ ಕೆಲಸವಾಯಿತು. ನನ್ನಿಂದ ಏನನ್ನೂ ಕಸಿಯುವುದಕ್ಕೆ ಆಗುವುದಿಲ್ಲ ಎಂದು ಅರಿತಾದ ಮೇಲೆ ಆಕೆಯ ಗಮನ ಆಕೆಯ ಸೀಟಿನ ಪಕ್ಕ ನಿಂತಿದ್ದ ಒಬ್ಬ ವ್ಯಕ್ತಿಯ ಕಡೆ ಕೇಂದ್ರಿಕೃತವಾಗಿತ್ತು. ಆದರೆ ಆತ ಆಕೆಯ ಸ್ವಲ್ಪ ಹಿಂದೆ ನಿಂತಿದ್ದ, ಸ್ವಲ್ಪ ಮುಂದೆ ಈಕೆಗೆ ಸೀಟು ಬಿಟ್ಟುಕೊಟ್ಟ ಮಹಿಳೆ ನಿಂತಿದ್ದರು, ಆ ಇಬ್ಬರಿಗೂ ಹುಷಾರಾಗಿರಿ ಎಂದು ಸನ್ನೆ ಮಾಡಿ ತಿಳಿಸಲು ನನ್ನ ಕಡೆ ನೋಡಲಿ ಎಂದು ನಾನು ಹಾತೊರಿಯುತ್ತಿದ್ದೆ, ಕಡೆಗೊಮ್ಮೆ ತನ್ನ ಸೀಟನ್ನು ಬಿಟ್ಟುಕೊಟ್ಟು ನಿಂತಿದ್ದ ಆ ಮಹಿಳೆ ನನ್ನ ಕಡೆ ನೋಡಿದಾಗ ನನ್ನ ಬ್ಯಾಗನ್ನು ಮುಂದಿಟ್ಟುಕೊಂಡು ಈಕೆ ಹಣವನ್ನು ಕದಿಯುವ ಕಳ್ಳಿ ಎಂದು ಸನ್ನೆಯಿಂದ ತಿಳಿಸಲು ಪ್ರಯತ್ನಿಸಿದೆ, ಆಕೆ ಅರ್ಥವಾಯಿತು ಎಂದು ತಲೆಯಾಡಿಸಿದಳು. ಆ ಸಂದರ್ಭದಲ್ಲಿ ಈ ಕಳ್ಳಿಯು ನಮ್ಮ ಕಡೆ ತಿರುಗಿ ನೋಡಿದಳು, ಈಕೆಗೆ ಅರ್ಥವಾಯಿತೊ ಇಲ್ಲವೊ ತಿಳಿಯದು. ಕಳ್ಳಿಯ ಹಿಂದೆ ನಿಂತಿದ್ದ ವ್ಯಕ್ತಿಗೆ ಕಳ್ಳಿಯ ಬಗ್ಗೆ ಸೂಚನೆ ಕೊಡಲು ತುಂಬಾ ಪ್ರಯತ್ನಪಟ್ಟೆ ಆದರೆ ಆತ ನನ್ನ ಕಡೆ ನೋಡಲೇ ಇಲ್ಲ. ಏನಾದರೂ ಆಗಲಿ ಈಕೆಯನ್ನು ಹಿಡಿದುಕೊಡಲೇಬೇಕು ಎನಿಸಿ ನಾನು ಸಹ ಈ ಕಳ್ಳಿಯ ಎರಡೂ ಕೈಗಳು ಅತಿಯಾದ ಚಟುವಟಿಕೆಯಿಂದ ಆಡಿಸುತ್ತಿದ್ದ ಪರಿಯನ್ನು ಹಾಗು ಕೂತಲ್ಲಿ ಕೂರದೆ ನಿಂತಲ್ಲಿ ನಿಲ್ಲದೆ ಕುಳಿತು ನಿಂತು ಸರ್ಕಸ್ ಮಾಡುತ್ತಿರುವುದನ್ನು ಗಮನಿಸುತ್ತಾ ಕುಳಿತಿದ್ದೆ.
ಅಷ್ಟರಲ್ಲಿ ಸ್ವಲ್ಪ ಚಿಕ್ಕ ವಯಸ್ಸಿನ ಒಬ್ಬ ತರುಣ ಆ ವ್ಯಕ್ತಿಯ ಪಕ್ಕಕ್ಕೆ ಬಂದು ಈ ಕಳ್ಳಿ ಕುಳಿತಿದ್ದ ಸೀಟಿಗೆ ಒರಗಿ ನಿಂತ. ಆತನ ಕರಿ ಪ್ಯಾಂಟಿಗೆ ಎರಡು ಜೇಬುಗಳು ಇದ್ದದ್ದು ನನ್ನ ಗಮನಕ್ಕೆ ಬಂದಿತು. ಕದಿಯಲು ಆ ವ್ಯಕ್ತಿಗಿಂತ ಈ ತರುಣನೇ ಕಳ್ಳಿಗೆ ಸೂಕ್ತವಾಗಿ ಕಂಡಿರಬೇಕು ಅನಿಸಿತು, ಆಕೆ ಕದಿಯಲು ಹೊಂಚು ಹಾಕುತ್ತಿದ್ದಳು ಹಾಗೆ ನಾನು ಈಕೆಯನ್ನು ಹಿಡಿದುಕೊಡಲು ಹೊಂಚುಹಾಕುತ್ತಿದ್ದೆ. ತರುಣ ಸ್ವಲ್ಪ ಹಿಂದೆ ನಿಂತಿದ್ದರಿಂದ ಈ ಕಳ್ಳಿ ತನ್ನ ಕೈಯನ್ನು ಹಿಂದೆ ಹಾಕಿ ಜೇಬಿಗೆ ಕತ್ತರಿ ಹಾಕುವುದಕ್ಕೆ ಕಷ್ಟವಾಗಿರಬಹುದಾದ್ದರಿಂದ ಇರಬೇಕು ಈಕೆ ಮಗುವನ್ನು ಮಾತ್ರ ಸೀಟಿನ ಮೇಲೆ ಕುಳ್ಳರಿಸಿ ಅವಶ್ಯಕತೆ ಇಲ್ಲದೆ ಇದ್ದರೂ ತಾನು ನಿಂತುಕೊಂಡಳು, ಇವಳ ಈ ರೀತಿಯ ವರ್ತನೆ ಬಹುಶಃ ನನಗೆ ಬಿಟ್ಟು ಬೇರೆಯವರಿಗೆ ಸಹಜವಾಗೆ ಕಾಣಿಸುವಂತಿತ್ತು. ಬಗ್ಗಿದಂತೆ ಮಾಡಿ ಒಮ್ಮೆ ಆತನ ಪ್ಯಾಂಟಿನ ಜೇಬಿಗೆ ಕೈಹಾಕಿದಳು ಸಹ ಆಗಲೂ ಸಹ ತನ್ನ ಸೀರೆಯ ಸೆರಗನ್ನು ಕೈಮೇಲೆ ಹಿಡಿದು ಜೇಬಿನಲ್ಲಿ ಕೈತೂರಿಸಲು ಪ್ರಯತ್ನಪಟ್ಟು ಸ್ವಲ್ಪ ಕೈ ತೂರಿಸಿದಳು ಸಹ ಆದರೆ ಜೇಬಿನಲ್ಲಿರುವುದನ್ನು ತೆಗೆಯಲು ಅಗಲಿಲ್ಲ, ಹಾಗೆ ಕೆಲ ನಿಮಿಷ ನಿಂತಿದ್ದು ಮತ್ತೇ ಕುಳಿತು ಚಡಪಡಿಸಹತ್ತಿದಳು. ಆಷ್ಟರಲ್ಲಿ ಆ ತರುಣ ನಿಂತಿದ್ದ ಎದುರಿನ ಸೀಟಿನ ಹಿಂದಿನ ಸೀಟು ಖಾಲಿಯಾದ್ದರಿಂದ ಆತ ಅಲ್ಲಿ ಹೋಗಿ ಕುಳಿತ. ರಶ್ ಸ್ವಲ್ಪ ಕಮ್ಮಿಯಾದ ಮೇರೆಗೆ ಈಕೆಗೆ ಆನಿಸಿಕೊಳ್ಳುವಂತೆ ಹತ್ತಿರದಲ್ಲಿ ಯಾರೂ ನಿಂತಿರಲಿಲ್ಲ. ನನಗೆ ಅನಿಸಿದ ಹಾಗೆ ಈಕೆ ತನ್ನ ಕಸುಬನ್ನು ಮಾಡಲು ಕಷ್ವ ಅನಿಸಿರಬೇಕು ದೇವನಹಳ್ಳಿಗೆ ಎಂದು ಕಂಡಕ್ಟರ್‍ಗೆ ಹಣ ನೀಡಿದ್ದ ಈಕೆ ಇನ್ನೂ ಒಂದೆರೆಡು ಸ್ವಾಪ್ ಇರುವಾಗಿಲೇ ಅಂದರೆ ವೆಂಕಟಗಿರಿಕೋಟೆ ಸ್ಟಾಪ್‍ನಲ್ಲೆ ಇಳಿದಳು, ಏನಾದರಾಗಲಿ ಈ ಕಳ್ಳಿಯನ್ನು ಕಳ್ಳತನದಲ್ಲಿ ತೊಡಗಿರುವಾಗಲೇ ಹಿಡಿದುಕೊಡಬೇಕೆಂದು ನನ್ನ ಗಮನವನ್ನೆಲ್ಲಾ ಈ ಕಳ್ಳಿಯ ಕಡೆಗೇ ಕೇಂದ್ರಿಕರಿಸಿ ಕುಳಿತಿದ್ದ ನನಗೂ ಒಂದು ಕ್ಷಣ ಬೇಜಾರಾದರೂ, ಯಾರ ಜೇಬಿನಿಂದಲೂ ಈಕೆ ದುಡ್ಡನ್ನು ಎಗರಿಸಲು ಸಾಧ್ಯವಾಗಲಿಲ್ಲವೆಂದು ಸಮಾಧಾನವಾಯಿತು.
ಒಂದು ಸ್ಮಾರ್ಟ್ ಫೋನ್ ಮತ್ತೊಂದು ಬೇಸಿಕ್ ಫೋನ್ ಎರಡು ಮೊಬೈಲ್ ಫೋನ್‍ಗಳಲ್ಲಿ ಒಂದಾದ ಮೇಲೆ ಒಂದರಂತೆ ಆಕೆಗೆ ಕರೆ ಬರುತ್ತಿದ್ದವು ಆ ಕರೆಗಳಿಗೆ ಕಿರುದ್ವನಿಯಲ್ಲಿ ಉತ್ತರಿಸುತ್ತಿದ್ದಳು ಏನಂತ ನನಗೆ ಸರಿಯಾಗಿ ಗೊತ್ತಾಗುತ್ತಿರಲಿಲ್ಲ, ಆಕೆ ಇಳಿದ ಮೇಲೆ ಅನಿಸಿದ್ದು ಬಹುಶಃ ಅವಳ ಗ್ಯಾಂಗ್‍ನವರು ಇನ್ನೂ ಈ ಬಸ್ಸಿನಲ್ಲಿ ಇದ್ದಿರಬಹುದು, ಅವರು ಈ ಕಸುಬಿನಿಂದ ಹಣವನ್ನು ಕದ್ದಿರಬಹುದು ಅದಕಾರಣ ಅವರ ಜೊತೆಗೆ ಈ ಕಳ್ಳಿಯೂ ಸಹ ಮುಂಚೆಯೇ ಇಳಿದಿರಬೇಕು ಇಲ್ಲವೆಂದರೆ ಏನೂ ಉಪಯೋಗವಾಗದೇ ಇದ್ದಿದ್ದರಿಂದ ಇನ್ನೊಂದು ಬಸ್ಸನ್ನು ಹತ್ತಿ ತನ್ನ ಕಸುಬನ್ನು ಮುಂದುವರೆಸಲು ಇರಬೇಕು ಈ ಕಳ್ಳಿ ವೆಂಕಟಗಿರಿಕೋಟೆಯಲ್ಲಿ ಇಳಿದಿದ್ದು ಎಂದು ಊಹಿಸಿದೆ.
ಈ ಕಳ್ಳಿ ಇಳಿದಾದ ಮೇಲೆ ಆಕೆಗೆ ಸೀಟು ಬಿಟ್ಟುಕೊಟ್ಟಿದ್ದ ಮಹಿಳೆ ನನ್ನ ಪಕ್ಕದಲ್ಲಿ ಬಂದು ಕುಳಿತರು. ಆಗ ನಾನು ಹೇಳಿದೆ, ಆಕೆ ಮಗುವಿನ ತಾಯಿ ಎಂದು ನೀವು ಕುಳಿತಿದ್ದ ಸೀಟನ್ನು ಬಿಟ್ಟುಕೊಟ್ಟಿರಿ ಆದರೆ ಆಕೆ ಮಾಡಲು ಹೊರಟಿದ್ದೇನು ಎಂದು ನಡೆದ ವಿಷಯವನ್ನು ಹೇಳಿದೆ, ಆಗ ಆ ಮಹಿಳೆ ನನಗೂ ಸಹ ಆಕೆಯ ವರ್ತನೆಯನ್ನು ನೋಡಿ ಅನುಮಾನವಾಯಿತು ನೀವು ಸೂಚನೆ ನೀಡಿದ ಮೇಲೆ ಹುಷಾರಾದೆ ಎಂದೇಳಿದಳು. ಮಗುವನ್ನು ಎತ್ತಿಕೊಂಡಿದ್ದ ಮಹಿಳೆ ಎಂದು ಕರುಣೆಯಿಂದ ಸೀಟನ್ನು ಬಿಟ್ಟುಕೊಟ್ಟರೆ ಆಕೆ ಈ ರೀತಿ ದುರುಪಯೋಗ ಮಾಡಿಕೊಂಡಳು ಎಂದು ಇಬ್ಬರೂ ಮಾತನಾಡಿಕೊಂಡೆವು, ಯಾಕೊ ಯಾರಿಗೂ ಉಪಕಾರ ಮಾಡಬಾರದು ಎನಿಸಿತು.
ಹಾಗೇ ಮಾತನಾಡುತ್ತ ಕುಳಿತಾಗ ಈ ಹಿಂದೆ ಬಸ್ಸಿನಲ್ಲಿ ಒಬ್ಬಾಕೆ ನನ್ನ ಬ್ಯಾಗಿನಿಂದ ಹಣ ಕದಿಯಲು ಪ್ರಯತ್ನ ಮಾಡಿದ್ದನ್ನು ಆಕೆಗೆ ಹೇಳತೊಡಗಿದೆ… ಒಮ್ಮೆ ನಾನು ಮೆಜೆಸ್ಟಿಕ್‍ನಿಂದ ಮಹಾಲಕ್ಷ್ಮಿ ಲೇ ಔಟ್‍ಗೆ ಹೋಗಲೆಂದು ಒಂದು ಬಿ.ಟಿ.ಎಸ್. ಬಸ್ಸನ್ನು ಹತ್ತಿದ್ದೆ, ಬಸ್ ತುಂಬಾ ನೂಕುನಿಗ್ಗಲಿನಿಂದ ಕೂಡಿತ್ತು. ಕಂಡಕ್ಟರ್ ಟಿಕೇಟ್ ನೀಡಲು ಬಂದಾಗ ನಾನು ಟಿಕೇಟ್ ತೆಗೆದುಕೊಂಡಾದ ಮೇಲೆ ನನ್ನ ಪಕ್ಕದಲ್ಲೇ ನಿಂತಿದ್ದ ಒಬ್ಬಾಕೆ ಜೈ ಭುವನೇಶ್ವರಿ ನಗರಕ್ಕೆ ಒಂದು ಟಿಕೇಟ್ ನೀಡಲು ಕೇಳಿದಳು, ತುಂಬಾ ಢಾಳಾಗಿ ಅಲಂಕರಿಸಿಕೊಂಡಿದ್ದರಿಂದಲೊ ಅಥವಾ ಮೈಮೇಲೆ ಬೀಳುವಂತ ಆಕೆಯ ವರ್ತನೆಯಿಂದಲೋ ಗೊತ್ತಿಲ್ಲ, ನನ್ನ ಗಮನ ಒಂದು ಕ್ಷಣ ಆ ಕಡೆಗೆ ಹೋಗಿತ್ತು. ಬಸ್ಸು ಸಾಗುತ್ತಾ ನವರಂಗ್ ಸ್ಟಾಪ್ ಹತ್ತಿರವಾದಂತೆ ಒಮ್ಮೆ ಯಾರದೋ ಕೈ ಬೆರಳುಗಳು ನನ್ನ ತೊಡೆಯನ್ನು ಸವರಿದಂತೆ ಆಯಿತು, ಬಸ್ಸು ನೂಕುನಿಗ್ಗಲಿನಿಂದ ಕೂಡಿದ್ದರಿಂದ ಯಾರದೋ ಕೈ ತಗಲಿರಬೇಕು ಅನಿಸಿದ ತಕ್ಷಣವೇ ನಾ ನನ್ನ ಹೆಗಲಿಗೆ ನೇತುಹಾಕಿಕೊಂಡಿದ್ದ ಬ್ಯಾಗಿನ ಹತ್ತಿರ ಕೈ ಬೆರಳುಗಳು ಸವರಿದ್ದು ನೆನಪಾಗಿ ಅನುಮಾನಗೊಂಡು ನನ್ನ ಬ್ಯಾಗನ್ನು ಗಟ್ಟಿಯಾಗಿ ಹಿಡಿಯಲು ಮುಂದಾದೆ ಆಗ ಆಕೆಯ ಕೈ ಬೆರಳುಗಳು ನನ್ನ ಬ್ಯಾಗಿನ ಅರ್ಧ ಜಿಪ್ ಅನ್ನು ತೆಗೆದಿರುವುದು ಗಮನಕ್ಕೆ ಬಂತು, ಗಟ್ಟಿಯಾಗಿ ಆಕೆಯ ಕೈ ಬೆರಳುಗಳನ್ನು ಹಿಡಿದುಕೊಂಡು ಬೇರೆಯವರ ಸಹಾಯ ಕೋರಿದೆ. ಬ್ಯಾಗನ್ನು ಬಲಗಡೆಯಿಂದ ಎಡಗಡೆಯ ಹೆಗಲಿಗೆ ತಗಲಾಗಿಸಿಕೊಂಡೆ. ಈ ಕಳ್ಳತನವನ್ನು ಮಾಡುತ್ತಿರುವಾಗಲೇ ಹಿಡಿದುಕೊಂಡು ಈಕೆ ಕಳ್ಳಿ ಎಂದು ಹೇಳಿದರೂ ಯಾರೋಬ್ಬರು ಎನೋಂದು ಮಾತನಾಡಲಿಲ್ಲ, ಕಡೆಗೆ ಬಸ್ ಕಂಡಕ್ಟರ್‍ಗೆ ಹೇಳಿದಾಗ ಅವರು ಸಹ ಇದು ಸಾಮಾನ್ಯವಾದ ವಿಷಯವೆಂದು ಉದಾಸೀನ ಮಾಡಿದರು. ಕಡೆಗೆ ನವರಂಗ್ ಸ್ಟಾಪ್‍ನಲ್ಲಿ ಅಂದರೆ ಜೈಭುವನೇಶ್ವರಿ ನಗರದ ಸ್ವಾಪ್‍ಗೆ ಇನ್ನೂ ಐದಾರು ಸ್ವಾಪ್ ಮುಂಚೆಯೇ ಇಳಿದಳು, ಆಗ ಕಂಡಕ್ಟರ್ ನಿಮ್ಮ ಅದೃಷ್ಟ ನಿಮ್ಮ ಬ್ಯಾಗಿನ ಹಣ ಕದಿಯುತ್ತಿರುವಾಗ ಸಿಕ್ಕಿಬಿದ್ದಿದ್ದರಿಂದ ಇಲ್ಲಿಯೇ ಇಳಿಯುತ್ತಿದ್ದಾಳೆ, ಇವಳಂತವರು ಇನ್ನೂ ಐದಾರು ಜನ ಇದ್ದಾರೆ, ಇವರ ಕಸುಬೆ ಇದು ಈ ರೀತಿ ಯಾವಾಗಲು ಇಷ್ಟ ಬಂದ ಕಡೆ ಟಿಕೇಟ್ ತೆಗೆದುಕೊಂಡು ಸ್ವಾಪ್ ಬರುವ ಮುಂಚೆಯೇ ಇಳಿಯುತ್ತಾರೆ, ಹಣ ಕದ್ದಿದ ನಂತರ ಸನೀಹದಲ್ಲಿರುವ ಸ್ಟಾಪ್‍ನಲ್ಲಿ ಇಳಿಯುತ್ತಾರೆ, ಆದರೆ ಈ ದಿನ ಆಕೆ ಸಿಕ್ಕಿಹಾಕಿಕೊಂಡದ್ದರಿಂದ ಏನು ಉಪಯೋಗವಿಲ್ಲವೆಂದು ಇಳಿದಿದ್ದಾಳೆ, ಇಳಿದು ಇನ್ನೊಂದು ಬಸ್ಸನ್ನು ಹತ್ತುತ್ತಾಳೆ ಎಂದು ಹೇಳಿದ. ಅಗ ನನಗನಿಸಿದ್ದು ನಾ ಪ್ರತ್ಯಕ್ಷವಾಗಿ ಹಿಡಿದಿದ್ದೆ ಕಂಡಕ್ಟರ್ ಸೇರಿ ಬೇರೆಯವರು ಕೈಜೋಡಿಸಿದ್ದರೆ ಇವಳನ್ನು ಪೊಲೀಸ್ ಠಾಣೆಗೆ ಕಳಿಸಬಹುದಾಗಿತ್ತು, ಆ ಕ್ಷಣದಲ್ಲಿ ಕಂಡಕ್ಟರ್ ಮತ್ತು ಜನರ ವರ್ತನೆ ಸಹ ಬೇಜಾರಾಯಿತು ಎಂದು ಈ ಮಹಿಳೆಗೆ ವಿವರಿಸಿದೆ.
ಅಷ್ಟರಲ್ಲಿ ದೇವನಹಳ್ಳಿಯ ನಿಲುಗಡೆ ಬಂದಿತು, ಆಗ ಈ ಖಾಸಗಿ ಬಸ್ಸಿನ ಕಂಡಕ್ಟರ್ ಎಲ್ಲರೂ ಇಲ್ಲಿಯೇ ಇಳಿಯಿರಿ, ಬಸ್ಸಿನಲ್ಲಿ ಏನೋ ತೊಂದರೆ ಇದೆ ಬೇರೆ ಬಸ್ಸನ್ನು ಈ ವೇಳೆಯಲ್ಲಿ ಹೊಂದಿಸಲು ಆಗುತ್ತಿಲ್ಲ ಎಂದು ಜೋರಾಗಿ ಕೂಗುಹಾಕಿ ಎಲ್ಲರೂ ಇಳಿಯುವಂತೆ ಮಾಡುತ್ತಿದ್ದ. ನಾವಿಬ್ಬರೂ ನಮ್ಮದೇ ಆದ ಮಾತುಕತೆಯಲ್ಲಿ ಮುಳುಗಿದ್ದರಿಂದ ಆ ಕಡೆಗೆ ನಮ್ಮ ಗಮನ ಹೋಗಿರಲಿಲ್ಲ. ಎಲ್ಲರೂ ಇಳಿಯುತ್ತಿದ್ದಾಗ ಏನೆಂದು ವಿಷಯ ಕೇಳಿ ವಿಧಿಯಿಲ್ಲದೆ ನಾವು ಸಹ ದೇವನಹಳ್ಳಿಯಲ್ಲೇ ಬಸ್ಸಿನಿಂದ ಇಳಿದೆವು. ಕಂಡಕ್ಟರ್ ನಾವು ನೀಡಿದ್ದ ಹಣದಲ್ಲಿ ಅರ್ಧ ಹಣವನ್ನು ವಾಪಸ್ಸು ನೀಡುತ್ತಿದ್ದ, ತುಂಬಾ ಜನ ಆತನನ್ನು ಸುತ್ತುವರಿದಿದ್ದರು, ಆ ರಶ್‍ನಲ್ಲಿ ಆತನಿಗೂ ಏನೊಂದು ತೋಚದೆ ಜನಗಳು ಕೇಳಿದಷ್ಟು ಹಣವನ್ನು ವಾಪಸ್ಸು ಕೊಡುತ್ತಿದ್ದ, ಏಕೆಂದರೆ ಆತ ಯಾರಿಗೂ ಟಿಕೇಟ್ ಅನ್ನು ನೀಡಿರಲಿಲ್ಲ, ಈ ದಿನವಲ್ಲ ಯಾವ ದಿನದಂದೂ ಖಾಸಗಿ ಬಸ್ಸುಗಳಲ್ಲಿ ಟಿಕೇಟ್ ಕೊಡುತ್ತಿರಲಿಲ್ಲ, ಅದರ ಪರಿಣಾಮ ಲೆಕ್ಕವಿಲ್ಲದೆ ಜನ ಕೇಳಿದಷ್ಟು ಹಣ ನೀಡುವಂತಾಗಿತ್ತು. ನಮ್ಮ ಸರದಿ ಬಂದಾಗ ನಾನು ಚಿಕ್ಕಬಳ್ಳಾಪುರದಿಂದ ಯಲಹಂಕವರೆಗೆ ಟಿಕೇಟ್ ಹಣ ನೀಡಿದ್ದೆ ಎಂದೆ, ನಾ ನೀಡಿದ್ದ ಹಣದಲ್ಲಿ ಅರ್ಧದಷ್ಟು ಹಣ ವಾಪಸ್ಸು ನೀಡಿದ, ಆದರೆ ನನ್ನ ಜೊತೆ ಪ್ರಯಾಣಿಸಿದ ಆ ಮಹಿಳೆ ನಾನು ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಎರಡು ಟಿಕೇಟ್‍ಗಳನ್ನು ಪಡೆದಿದ್ದೆ ಎಂದರು, ಆತ ಆಕೆಗೆ ಅರ್ಧದಷ್ಟು ಹಣವನ್ನು ವಾಪಸ್ಸು ಕೊಟ್ಟ. ಅಂದರೆ ಆಕೆ ಫ್ರೀಯಾಗಿ ಪ್ರಯಾಣ ಮಾಡಿದಂತೆ ಆಯಿತು. ಯ್ಯಾರಾರು ಎಷ್ಟು ವಸೂಲಿ ಮಾಡಿದರೋ ನನಗೆ ಗೊತ್ತಿಲ್ಲ, ಆದರೆ ಈಕೆ ನನ್ನ ಜೊತೆಯಲ್ಲೇ ಪ್ರಯಾಣಿಸಿದ್ದರಿಂದ ಅದರ ಜೊತೆಗೆ ಇಬ್ಬರೂ ಒಟ್ಟಾಗಿಯೇ ಟಿಕೇಟ್ ವಾಪಸ್ಸು ಕೇಳಿದ್ದರಿಂದ ನನಗೆ ಸಾಕಷ್ಟು ಜನ ಈ ರೀತಿಯಲ್ಲಿ ಹಣ ವಸೂಲಿ ಮಾಡಿರಬಹುದೆನಿಸಿತು. ಆದರೂ ಕಳ್ಳತನ ಮಾಡಲು ಬಂದು ಬಸ್ ಹತ್ತಿದ ಕಳ್ಳಿಯ ಮುಖ, ಒಂದು ಟಿಕೇಟ್ ಬದಲಿಗೆ ಎರಡು ಟಿಕೇಟ್ ಎಂದು ಹೆಚ್ಚಿನ ಹಣ ಪಡೆದ ಮಹಿಳೆಯ ಮುಖ ಕಣ್ಣಮುಂದೆ ಹಾದು ಹೋಯಿತು. ಇದಲ್ಲಕ್ಕಿಂತ ಮುಖ್ಯವಾಗಿ ಈ ಬಸ್ಸಿನಲ್ಲಿ ಹಾಗು ಸಾಮಾನ್ಯವಾಗಿ ಎಲ್ಲಾ ಖಾಸಗಿ ಬಸ್ಸುಗಳಲ್ಲೂ ಪೂರ್ತ ಟಿಕೇಟ್ ಹಣ ಪಡೆಯುತ್ತಾರೆ ಆದರೆ ಟಿಕೇಟ್ ನೀಡುವುದಿಲ್ಲ, ಈ ರೀತಿಯ ಸಮಸ್ಯೆಗಳು ಉಂಟಾಗಿ ಲಾಸ್ ಆದರೂ ಸಹ ಟಿಕೇಟ್ ನೀಡುವುದಿಲ್ಲ. ಟಿಕೇಟ್ ನೀಡದೆ ಸಿಕ್ಕಿಹಾಕಿಕೊಂಡಿದ್ದ ಕಂಡಕ್ಟರ್, ಆ ಸಂದರ್ಭದಲ್ಲಿ ಅನಿಸಿದ್ದು ನಿಜವಾಗಿ ಕಳ್ಳತನ ಮಾಡುವವರು ಯಾರು? ಬಸ್ಸಿನ ಕಂಡಕ್ಟರ? ಪ್ರಯಾಣಿಕರ? ಅಥವ ಪ್ರಯಾಣಿಕರ ಸೋಗಿನಲ್ಲಿ ಕಳ್ಳತನ ಮಾಡಲು ಬರುವವರ?
ದೇವನಹಳ್ಳಿಯಲ್ಲಿ ಯಲಹಂಕ ಕಡೆಗೆ ಹೋಗುವ ಒಂದು ಸರ್ಕಾರಿ ಬಸ್ಸನ್ನು ಏರಿದೆ. ಸೀಟು ಸಹ ಸಿಕ್ಕಿತು, ಆದರೆ ಕಿಟಕಿ ಪಕ್ಕದಲ್ಲಿ ಅಲ್ಲ. ಮುಂದಿನ ಸ್ಟಾಪಿನಲ್ಲಿ ಒಬ್ಬ ಮಹಿಳೆ ಒಂದು ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ಬಸ್ಸನ್ನು ಏರಿದಳು, ಯಥಾಪ್ರಕಾರ ಸೀಟಿಗಾಗಿ ಸುತ್ತಲೂ ನೋಡತೊಡಗಿದಳು. ಯಾರು ಸೀಟನ್ನು ಬಿಟ್ಟುಕೊಡದೇ ಇದ್ದ ಕಾರಣ ನಾನು ಬಿಟ್ಟುಕೊಡಲು ಏಳಬೇಕೆಂದು ಕೊಂಡಾಗ ಆ ಕಳ್ಳಿಯ ನೆನಪಾಯಿತು, ಏಕೊ ಸೀಟನ್ನು ಬಿಟ್ಟುಕೊಟ್ಟರೆ ನನಗೆ ತೊಂದರೆಯಾಗಬಹುದು ಅನಿಸಿತು, ತಕ್ಷಣವೇ ಸಾವರಿಸಿಕೊಂಡು ಆಕೆಗೆ ಸೀಟು ಬಿಟ್ಟುಕೊಟ್ಟು ನಾ ಬಸ್ಸಿನಲ್ಲಿ ನಿಂತು ಕೊಂಡು ಪ್ರಯಾಣಿಸಿದೆ. ತನ್ನ ಪಾಡಿಗೆ ತಾನು ಮಗುವನ್ನು ನೋಡಿಕೊಳ್ಳುತ್ತ ಸೀಟಿನಲ್ಲಿ ಕುಳಿತಿದ್ದ ಮಹಿಳೆಯನ್ನು ನೋಡಿದಾಗ ನನ್ನ ಮನಸ್ಸಿನಲ್ಲಿ ಉಂಟಾಗಿದ್ದ ಕ್ಲಿಷ್ಟತೆಗೆ ಒಂದು ಉತ್ತರ ಸಿಕ್ಕಿತ್ತು.
–ಶೈಲಜ ಮಂಚೇನಹಳ್ಳಿ
ನಿಜ, ಈ ರೀತಿಯ ಅನುಭವಗಳು ನಮಗೂ ಆಗಿವೆ.
ಹಣ ಕಳೆದುಕೊಳ್ಳುವ ಮುಂಚೆ ಎಚ್ಚೆತ್ತುಕೊಂಡ
ಘಟನೆಗಳೂ ಜರುಗಿವೆ. ಅವೆಲ್ಲ ಈಗ ನೆನಪಿಗೆ ಬಂತು.
ನನ್ನ ಕಣ್ಣ ಮುಂದೆಯೇ ಒಬ್ಬರು ಆಸ್ಪತ್ರೆಗೆ ಕಟ್ಟಲೆಂದು
ಎಟಿಎಂ ನಿಂದ ತಂದ ನಗದು ಹಣವನ್ನು ಕಳೆದುಕೊಂಡರು.
ಚಾಣಾಕ್ಷ ಕಳ್ಳರು ಚಕಚಕನೇ ಇಳಿದರು. ಇವೆಲ್ಲ
ಕಣ್ಣು ಬಿಡುವಷ್ಟರಲಿ ನಡೆದವು. ಜಗತ್ತನ್ನು ಬದಲಿಸಲು
ಹೋಗಬಾರದು. ನಾವು ಎಚ್ಚೆತ್ತುಕೊಳ್ಳಬೇಕು. ಹಣ ಕಳೆದುಕೊಂಡ
ವ್ಯಕ್ತಿಗೆ ಹೇಳಿದೆ: ತುಂಬ ದುಡ್ಡು ತೆಗೆದುಕೊಂಡು ರಶ್ ಇರುವ
ಬಸ್ಸಿನಲ್ಲೇಕೆ ಪ್ರಯಾಣಿಸಿದಿರಿ? ನೂರು ರೂಪಾಯಿ ಖರ್ಚಾಗುತ್ತದೆಂದು
ಆಟೋ ರಿಕ್ಷ ಬಳಸದೇ ಇದ್ದುದಕೆ ಇದು ಒದಗಿ ಬಂದ ಶಿಕ್ಷೆ!
ನಾನು ಯಾವುದರಲ್ಲಾದರೂ ಬರುವೆ; ಅವರೇಕೆ ಕದಿಯಬೇಕು?
ಎಂಬ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ. ಬೇರೆಯವರನ್ನು ನಿಂದಿಸುವ
ಬದಲು ನನ್ನನ್ನು ತಿದ್ದಿಕೊಳ್ಳುವುದು ಸರ್ವಥಾ ಕ್ಷೇಮ.
-ಮಂಜುರಾಜ್ಮೈಸೂರು