ವಾರೆಂಟ್…!: ಶರಣಗೌಡ ಬಿ ಪಾಟೀಲ ತಿಳಗೂಳ

ಅಕ್ಟೋಬರ್ ನಾಲ್ಕರ ರಾತ್ರಿ ಹತ್ತು ಗಂಟೆ ಸುಮಾರಿಗೆ ವೆಂಕಟೆಮ್ಮ ಟಿ.ವಿ ಚಾಲು ಮಾಡಿದಾಗ ವಾರೆಂಟ ಅನ್ನುವ ಕಾರ್ಯಕ್ರಮ ಮೂಡಿ ಬರುತಿತ್ತು. ಅದನ್ನು ನೋಡಿ ಮುಗಿಸುತಿದ್ದಂತೆ ಇವಳ ಮೈ ಜುಮ್ ಎಂದು ಮುಖ ಸಂಪೂರ್ಣ ಬೆವರಿ ಹೋಯಿತು. ಕೈಕಾಲು ಶಕ್ತಿ ಹೀನವಾದವು. ಗಂಟಲು ಒಣಗಿ ಹೋಯಿತು. ಇಳಿ ವಯಸ್ಸಿನವಳಾದ ಇವಳ ಮೇಲೆ ದುಷ್ಪರಿಣಾಮ ಬೀರಿತು. ಮಾನಸಿಕ ನೆಮ್ಮದಿ ಕಳೆದುಕೊಂಡು ವಿಚಿತ್ರವಾಗಿ ವರ್ತಿಸಲು ಆರಂಭಿಸಿದಳು. ಅಂದು ಮನೆಯಲ್ಲಿ ಯಾರೂ ಇಲ್ಲದ ಕಾರಣ ಬೇಸರ ಕಳೆಯಲು ಟಿವಿ ಚಾಲು ಮಾಡಿದ್ದಳು. ಟಿವಿಯಲ್ಲಿನ ಆ ಆತಂಕ ಸೃಷ್ಟಿಸುವ ಆ ಕಾರ್ಯಕ್ರಮ ಬೆಚ್ಚಿ ಬೀಳಿಸಿತು. ಮಗ ಶ್ರೀಪಾದ ಹೆಂಡತಿ,‌ ಮಕ್ಕಳ ಜೊತೆ ಹೊರಗಡೆ ಹೋಗಿದ್ದ. ತಡ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಹೋದವರು ಇನ್ನೂ ಬಂದಿಲ್ಲ ಇಷ್ಟು ಹೊತ್ತಿಗೆ ಬರಬೇಕಾಗಿತ್ತು ಅಂತ ಯೋಚಿಸುತ್ತಲೇ ಟೀವಿ ನೋಡುತಿದ್ದಳು. ಬೆವರು ಬಿಟ್ಟ ತನ್ನ ಮುಖ ಸೀರೆ ಸೆರಗಿನಿಂದ ಒರೆಸಿಕೊಂಡು ನಡುಗುವ ಕೈಯಿಂದ ಟಿವಿ ಬಂದ್ ಮಾಡಿದಳು. ಕುರ್ಚಿಯಿಂದ ಮೇಲೆದ್ದು ಸೀದಾ ದೇವರ ಕೋಣೆಗೆ ಬಂದು ಒಳಗೆ ಇಣುಕಿದಳು. ಜಗುಲಿಯ ಮೇಲೆ ಸಾಲಾಗಿ ಜೋಡಿಸಿಟ್ಟ ದೇವರ ಮೂರ್ತಿಗಳು ಇದ್ದ ಜಾಗದಲ್ಲೇ ಇದ್ದವು ಆದರೆ ಆದರೆ ಲಕ್ಷ್ಮಿಯ ಬೆಳ್ಳಿಯ ಮೂರ್ತಿ ಕ್ಛಣ ಕಾಲ ಅಲುಗಾಡಿದಂತೆ ಭಾಸವಾಯಿತು. ವೆಂಕಟೆಮ್ಮ ಪುನಃ ವಾಪಸ್ ಬಂದು ಮಂಚದ ದಿಂಬಿಗೆ ತಲೆಕೊಟ್ಟು ಶೂನ್ಯ ದಿಟ್ಟಿಸಿದಳು.

ಸ್ವಲ್ಪ ಸಮಯದ ನಂತರ ಹೊರಗಿನಿಂದ ಬಾಗಿಲು ಬಡಿಯುವ ಸದ್ದು ಕೇಳಿಸಿತು. ಆಗ ಅವಳಿಗೆ ಮತ್ತಷ್ಟು ಗಾಬರಿ ಆವರಿಸಿ ಯಾರು? ಬಾಗಿಲು ಬಾರಿಸೋರು? ಅಂತ ನಡುಗುವ ದನಿಯಿಂದ ಪ್ರಶ್ನಿಸಿದಳು. ಏ ಅವ್ವಾ ಯಾಕೆ ಗಾಬರಿಯಾಗ್ತಿ ನಮಗ ಬಿಟ್ಟು ಈ ಸಮಯದಾಗ ಮತ್ಯಾರು ಮನೆಗೆ ಬರ್ತಾರೆ ಅಂತ ಶ್ರೀಪಾದ ಜೋರು ದನಿಯಲ್ಲಿ ಹೇಳಿದ. ಮಗನ ಮಾತಿನಿಂದ ಧೈರ್ಯ ಬಂದಂತಾಗಿ ಮೆಲ್ಲಗೆ ಬಂದು ಬಾಗಿಲು ತೆಗೆದಳು. ನಮಗೆ ಬರಲು ತಡಾ ಆಯಿತು. ನೀನು ಇಷ್ಟೋತನಕ ನಮ್ಮ ದಾರೀನೇ ಕಾದಿರಬೇಕು? ಏನು ಮಾಡೋದು ದಾರಿಯಲ್ಲಿ ಅಚಾನಕ ಶ್ರೀನಿವಾಸ ಸಿಕ್ಕಿದ್ದ ಇವತ್ತು ಆತನ ಮದುವೆ ವಾರ್ಷಿಕೋತ್ಸವ. ಊಟ ಮಾಡಿಕೊಂಡು ಹೋಗಲು ಬಹಳ ಒತ್ತಾಯ ಮಾಡಿದ. ಅವನ ಜೊತೆ ಹೋಟಲಿಗೆ ಹೋಗಿ ಊಟ ಮಾಡಿಕೊಂಡು ಬರಲು ಇಷ್ಟು ತಡಾ ಆಯಿತು ಅಂತ ಸಮಜಾಯಿಷಿ ನೀಡಿದ. ನಿನಗೂ ಕರೆದುಕೊಂಡು ಹೋಗಿದ್ದರ ಛೊಲೊ ಆಗ್ತಿತ್ತು ಊಟ ಮಾಡಿ ಬರ್ತಿದ್ದೆ ಅಂತ ನಾಗಲಕ್ಷ್ಮಿ ಕೂಡ ದನಿಗೂಡಿಸಿದಳು. ಮಗ ಸೊಸೆ ಮಾತಿಗೆ ವೆಂಕಟೆಮ್ಮ ಯಾವುದೇ ಪ್ರತಿಕ್ರಿಯೆ ನೀಡದೆ ಹಾಗೇ ಬಂದು ಮೌನವಾಗಿ ಕುಳಿತಳು. ಹೋಟೆಲಿನಿಂದ ನಿನಗೂ ಪಾರ್ಸಲ್ ಊಟ ತಂದೀವಿ ಊಟ ಮಾಡಿ ಮಲಗು ಅಂತ ಮೊಮ್ಮಗಳು ಒತ್ತಾಯ ಪಡಿಸಿದಳು. ವೆಂಕಟೆಮ್ಮ ಅವಳ ಮಾತಿಗೆ ಹ್ಞೂಂ ಹ್ಞಾಂ ಎನ್ನಲಿಲ್ಲ. ನಾವು ಹೊರಗಡೆ ಊಟ ಮಾಡಿ ಬಂದಿದ್ದು ನಿಮ್ಮ ಅಜ್ಜಿಗೆ ಬೇಸರವಾಗಿರಬೇಕು ಅದಕ್ಕೆ ನಮ್ಮ ಜೊತೆ ಮಾತಾಡತಿಲ್ಲ ಅಂತ ನಾಗಲಕ್ಷ್ಮಿ ಹೇಳಿದಳು. ನಾವು ಊಟ ಮಾಡಿ ಬರೋದು ಮೊದಲೇ ಗೊತ್ತಿದ್ದರೆ ಇವಳಿಗೂ ಜೊತೆಗೆ ಕರಕೊಂಡು ಹೋಗ್ತಿದ್ದೇವು ಏನು ಮಾಡೋದು ಗೊತ್ತಿರಲಿಲ್ಲವಲ್ಲ ಅಂತ ಮೊಮ್ಮಗ ಪ್ರವೀಣ್ ಮಾತಿನ ಮಧ್ಯೆ ಸಮಜಾಯಿಷಿ ನೀಡಿದ.

ಅದೇ ಊಟಾ ಇಲ್ಲಿಗೆ ತಂದೀವಲ್ಲ ಊಟ ಮಾಡಿದರೆ ಆಗೋದಿಲ್ಲವೇ? ಅಂತ ಪ್ರಶ್ನಿಸಿ ನಾಗಲಕ್ಷ್ಮಿ ಊಟ ಬಡಿಸಿ ಮುಂದಿಟ್ಟಳು. ನನಗೆ ನಿದ್ದೆ ಬರ್ತಿದೆ ಮಲಗ್ತೀನಿ ಅಂತ ಶ್ರೀಪಾದ ರೂಮಿಗೆ ಹೋಗಿ ಮಲಗಿದ. ಹೋಂ ವರ್ಕ್ ಮಾಡಬೇಕು ಅಂತ ಮಕ್ಕಳು ತಮ್ಮ ರೂಮು ಸೇರಿಕೊಂಡರು. ಆದರೆ ವೆಂಕಟೆಮ್ಮನಿಗೆ ಊಟ ಮಾಡಲು ಮನಸ್ಸಾಗದೆ ಗಂಗಾಳ ಬದಿಗೆ ಸರಿಸಿ ಒಂದು ಗ್ಲಾಸ್ ನೀರು ಕುಡಿದು ಹಾಗೇ ಮಲಗಿದಳು. ಇಡೀ ರಾತ್ರಿ ಯೋಚನೆಯಲ್ಲಿ ಕಾಲ ಕಳೆದಾಗ ನಿದ್ದೆ ಬರಲಿಲ್ಲ ಹತ್ತಾರು ಬಾರಿ ಮಗ್ಗುಲ ಹೊರಳಿಸಿ ಉರುಳಾಡಿದಳು. ತಲೆಯಲ್ಲಿನ ಯೋಚನೆಗಳಿಗೆ ಪರಿಹಾರವೇ ಕಾಣದಾಯಿತು. ಮುಂಜಾನೆ ನಾಗಲಕ್ಷ್ಮಿ ಎದ್ದು ನೋಡಿದಾಗ ಇವಳ ಪಕ್ಕದಲ್ಲಿನ ಗಂಗಾಳ ಖಾಲಿಯಾಗದೇ ಹಾಗೇ ಇತ್ತು ಆಗ ಅತ್ತೆಯ ಮೇಲೆ ಕೋಪಗೊಂಡು ಇಳಿ ವಯಸ್ಸಿನ್ಯಾಗ ನಿನಗ ಇಷ್ಟೊಂದು ಜಿದ್ದು ಇರಲೇಬಾರದು ಉಣ್ಣುವ ಅನ್ನದ ಮ್ಯಾಲ ಜಿದ್ದು ತೋರಿಸಬಾರದು ಅಂತ ನೀನೇ ಎಷ್ಟೋ ಸಲ ನಮಗೇ ಉಪದೇಶ ಕೊಡುತಿದ್ದೆ ಈಗ ನೀನೇ ಹಿಂಗ ಮಾಡತಿದ್ದಿಯಲ್ಲ ಪ್ರಶ್ನಿಸಿದಳು. ಸೊಸೆಯ ಮಾತಿಗೆ ಮೌನವೇ ಅವಳ ಉತ್ತರವಾಗಿತ್ತು.. ವೆಂಕಟೆಮ್ಮ ಬಚ್ಚಲು ಮನೆಗೆ ಹೋಗಿ ಸ್ನಾನ ಮುಗಿಸಿ ಪೂಜೆ ಮಾಡಲು ದೇವರ ಕೋಣೆ ಪ್ರವೇಶಿಸಿದಳು ಜಗಲಿಯ ಮೇಲಿನ ಎಲ್ಲಾ ದೇವರ ಮೂರ್ತಿಗಳನ್ನು ತಿಕ್ಕಿ ತೊಳೆದು ಸಾಲಾಗಿ ಜೋಡಿಸಿ ಪೂಜೆಮಾಡಿ ಊದಬತ್ತಿ ಬೆಳಗಿದಳು. ಲಕ್ಷ್ಮಿ ಮೂರ್ತಿ ಕಡೆ ದೃಷ್ಟಿ ಹರಿದಾಗ ಇವಳ ಕೈ ನಡುಗಲು ಶುರುವಾಯಿತು. ಹಾಗೇ ಹೊರ ಬಂದು ಯೋಚಿಸುತ್ತಾ ಕುಳಿತಳು. ಇದನ್ನಾದರೂ ತಿನ್ನು ನಿನ್ನೆ ರಾತ್ರಿನೂ ಊಟ ಮಾಡಿಲ್ಲ ಹಂಗೇ ಉಪವಾಸ ಇದ್ದರ ಹ್ಯಾಂಗ ಮೊದಲೇ ಶಕ್ತಿ ಕಡಿಮೆ ಆಗ್ಯಾದ ಅಂತ ನಾಗಲಕ್ಷ್ಮಿ ಚಹಾ ಬಿಸ್ಕಿಟ್ ತಂದು ಇವಳ ಮುಂದಿಟ್ಟಳು.

ಆಗಲೂ ವೆಂಕಟೆಮ್ಮ ಅಲುಗಾಡಲಿಲ್ಲ ನಾವೆಲ್ಲ ನಿನಗೇನು ಕಮ್ಮಿ ಮಾಡೀವಿ ನಿನ್ನೆಯಿಂದ ನೋಡತಾನೇ ಇದ್ದೀನಿ ಒಂದು ತರಹ ಇದ್ದೀದಿ ಯಾಕೆ ಅಂತ ಗೊತ್ತಾಗುತಿಲ್ಲ? ಅಂತ ಪುನಃ ನಾಗಲಕ್ಷ್ಮಿ ಪ್ರಶ್ನಿಸಿದಳು ನನಗೇನೂ ಕೇಳಬೇಡ ಸುಮ್ಮನಿರು ಅಂತ ವೆಂಕಟೆಮ್ಮ ಸಿಟ್ಟಾಗಿ ಮುಖ ತಿರುಗಿಸಿದಳು. ಯಾಕೋ ಇವಳ ವರ್ತನೆ ವಿಚಿತ್ರವಾಗಿದೆ ಮೈಗೆ ಹುಷಾರಾದೊ? ಇಲ್ಲೊ? ಅಂತ ಯೋಚಿಸಿ ನಿಮ್ಮ ಅವ್ವಗ ಮೈ ಹುಷಾರಿಲ್ಲ ಅಂತ ಕಾಣಸ್ತಾದೆ ಡಾಕ್ಟರಗ ಕರಕೊಂಡು ಬಂದು ತೋರಸ್ರಿ ಅಂತ ಗಂಡನಿಗೆ ಕರೆದು ಹೇಳಿದಳು. ಶ್ರೀಪಾದ ಅವಳ ಹಣೆಯ ಮೇಲೆ ಕೈ ಇಟ್ಟು ನೋಡಿದ. ಅದು ಕಾದ ಹಂಚಿನಂತೆ ಸುಡುತಿತ್ತು. ವಿಪರೀತ ಜ್ವರ ಬಂದಿದ್ದು ಖಾತ್ರಿಯಾಗಿ ಡಾಕ್ಟರಗ ಕರೆಸಿ ಆರೋಗ್ಯ ತಪಾಸಣೆ ಮಾಡಿಸಿದ. ಡಾಕ್ಟರ್ ಗೋಲಿ ಔಷಧಿ ಕೊಟ್ಟು ಗಾಬರಿಯಾಗುವ ವಿಷಯವೇನಿಲ್ಲ ಒಂದೆರಡು ದಿನದಲ್ಲಿ ಆರಾಮ ಆಗ್ತಾದೆ ಅಂತ ಹೇಳಿ ಹೊರಟು ಹೋದರು. ಅಂದು ರಾತ್ರಿ ನಾಗಲಕ್ಷ್ಮಿ ಇವಳಿಗೆ ಗಂಜಿ ಕುಡಿಸಿ ಗೋಲಿ ನುಂಗಿಸಿ ಮಲಗಿಸಿದಳು. ಮನೆಯಲ್ಲಿ ಎಲ್ಲರೂ ಗಾಢ ನಿದ್ದೆಗೆ ಜಾರಿದಾಗ ವೆಂಕಟೆಮ್ಮ ಮಧ್ಯೆ ರಾತ್ರಿ ಹಾಸಿಗೆಯಿಂದ ಎದ್ದು ಕುಳಿತು ಚಟ್ಟನೆ ಚೀರಿ ಯಾರೋ ಬಂದಿದ್ದಾರೆ ಗೇಟ ಸಪ್ಪಳ ಆಗ್ತಿದೆ ಲಕ್ಷ್ಮಿ ಮೂರ್ತಿ ಒಯ್ತಾರೆ ನಮ್ಮ ಮಾನ ಮರ್ಯಾದೆ ಹೋಗ್ತಾದೆ ಅಂತ ಜೋರು ದನಿಯಲ್ಲಿ ಕಿರುಚಿದಳು. ಅವಳ ಧನಿ ಕೇಳುತಿದ್ದಂತೆ ಮಗ ಸೊಸೆ ಇಬ್ಬರೂ ಗಾಬರಿಯಾಗಿ ಅವಳು ಹತ್ತಿರ ಬಂದರು. ಏನಾಗಿದೆ ನಿನಗೆ ಎರ್ಡ್ಮೂರು ದಿನದಿಂದ ಹಿಂಗ್ಯಾಕ ಮಾಡತೀದಿ? ಯಾರು ಬಂದರು? ಎಲ್ಲಿ ಬಂದರು ? ನಾವೆಲ್ಲಾ ಇಷ್ಟು ಜನ ಇರ್ಬೇಕಾದರೆ ಯಾರು ಬರ್ತಾರೆ ಅಂತ ಶ್ರೀಪಾದ ಪ್ರಶ್ನಿಸಿದ. ಏನೋ ಕೆಟ್ಟ ಕನಸು ಬಿದ್ದಿರಬೇಕು ಇಳಿ ವಯಸ್ಸಿನ್ಯಾಗ ಹಿಂಗೆಲ್ಲಾ ಆಗೋದು ಸಹಜ ಅಂತ ನಾಗಲಕ್ಷ್ಮಿ ಹೇಳಿ ಸುಮ್ಮನಾದಳು.

ಆದರೆ ಪ್ರತಿ ದಿನವೂ ರಾತ್ರಿ ಅವಳ ಸಮಸ್ಯೆ ಹಾಗೇ ಮುಂದುವರೆಯಿತು. ಎಲ್ಲರಿಗೂ ಅವಳದೇ ಚಿಂತೆಯಾಯಿತು. ಸಮಸ್ಯೆ ಅರ್ಥವಾಗದೇ ಕಗ್ಗಂಟಾಗಿ ಉಳಿಯಿತು. ವೆಂಕಟೆಮ್ಮನ ಕೈಗೆ ನಾಗಲಕ್ಷ್ಮಿ ಹೋದ ತಿಂಗಳು ಎರಡು ಸಾವಿರ ರುಪಾಯಿ ಕೊಟ್ಟು ಈ ವರ್ಷದಿಂದ ನಾವೂ ವರಮಹಾಲಕ್ಛ್ಮಿ ಪೂಜೆ ಮಾಡೋಣ ಒಂದು ಬೆಳ್ಳಿ ಮೂರ್ತಿ ತಂದು ಕೊಡು ಅಂತ ಹೇಳಿದ್ದಳು. ದೇವರು ದಿಂಡಿರ ಬಗ್ಗೆ ಭಯ ಭಕ್ತಿ ಹೊಂದಿದ್ದ ವೆಂಕಟೆಮ್ಮ ಸೊಸೆಯ ಮಾತಿಗೆ ತಲೆಯಾಡಿಸಿ ಮೂರ್ತಿ ಖರೀದಿಸಲು ಹೊರಟಳು ದಾರಿಯಲ್ಲ ಬಟ್ಟೆ ಅಂಗಡಿ ಸರಸ್ವತಿ ಎದುರಾಗಿ ಎಲ್ಲಿಗೆ ಹೊರಟಿರುವೆ? ಅಂತ ಪ್ರಶ್ನಿಸಿದಳು ಸರಾಫ ಬಾಜಾರಿಗೆ ಹೋಗಿ ಲಕ್ಷ್ಮಿ ಮೂರ್ತಿ ತರ್ತೀನಿ ಈ ವರ್ಷ ಸೊಸೆ ವರಮಹಾಲಕ್ಷ್ಮಿ ವೃತ ಮಾಡ್ತಾಳೆ ಅಂತ ಖುಷಿಯಿಂದ ಹೇಳಿದಳು ಲಕ್ಷ್ಮಿ ಮೂರ್ತಿ ತರಲು ಬಾಜಾರಿಗೆ ಯಾಕ ಹೋಗತಿ ಇಲ್ಲೇ ಒಬ್ಬಳು ಲಕ್ಷ್ಮಿ ಮೂರ್ತಿ ಮಾರಾಟ ಮಾಡ್ತಾಳೆ ಅವಳ ಹತ್ರಾ ತೊಗೊಂಡ್ರೆ ಕಡಿಮೆ ಬೆಲೆಗೆ ಕೊಡ್ತಾಳೆ ಖರ್ಚೂ ಉಳಿತಾದೆ ಅಂತ ಸಲಹೆ ಕೊಟ್ಟಳು. ಗುರುತು ಪರಿಚಯ ಇಲ್ಲದವಳ ಹತ್ತಿರ ಬೆಳ್ಳಿ ಮೂರ್ತಿ ತೊಗೊಂಡ್ರ ಹ್ಯಾಂಗ? ಕಲ್ಲಬೆಳ್ಳಿ ಮೂರ್ತಿ ಕೊಟ್ಟು ಮೋಸ ಮಾಡಿದರ ಏನು ಮಾಡೋದು ಅಂತ ವೆಂಕಟೆಮ್ಮ ಆತಂಕ ವ್ಯಕ್ತಪಡಿಸಿದಳು. ನೂರಾರು ಮಂದಿ ಅವಳ ಹತ್ರಾನೇ ತೊಗೊಳ್ತಾರೆ ಹೋದ ವರ್ಷ ನಾನೂ ಅವಳ ಹತ್ರಾನೇ ತೊಗೊಂಡೆ ಅಂತ ಸರಸ್ವತಿ ಭರವಸೆಯಿಂದ ನುಡಿದಳು. ಸರಸ್ವತಿ ಮಾತಿನಿಂದ ವೆಂಕಟೆಮ್ಮನಿಗೆ ಭರವಸೆ ಮೂಡಿ ಮೂರ್ತಿ ಮಾರುವವಳ ಹತ್ರಾ ನನಗೂ ಕರಕೊಂಡು ಹೋಗು ಎಂದಳು. ಮೂರ್ತಿ ಮಾರುವವಳು ಆ ದೊಡ್ಡ ರಸ್ತೆಯಿಂದ ಬರ್ತಾಳೆ ಒಂದು ಸಾವಿರದಾಗೇ ಮೂರ್ತಿ ಕೊಡ್ತಾಳೆ ಬಾ ತೋರಸ್ತೀನಿ ಅಂತ ಸರಸ್ವತಿ ಕರೆದುಕೊಂಡು ಹೋದಳು.

ಮೂರ್ತಿ ಮಾರುವ ಆ ಮಹಿಳೆ ಕೈಯಲ್ಲಿ ಒಂದು ಚೀಲ ಹಿಡಿದು ಅದೇ ರಸ್ತೆಯಲ್ಲಿ ನಡೆದು ಬರುತಿದ್ದಳು. ಅಲ್ಲಿ ನೋಡು ಅವಳೇ ಬರ್ತಿದ್ದಾಳೆ ನಿನ್ನ ಅದೃಷ್ಟ ಛೊಲೊ ಇದೆ ಅಂತ ಸರಸ್ವತಿ ಹೇಳಿದಾಗ ವೆಂಕಟೆಮ್ಮನ ಮುಖದ ಮೇಲೆ ಖುಷಿ ತೇಲಾಡಿತು. ಏ ಅಮ್ಮ ಬಾ ಇಲ್ಲಿ ಅಂತ ಸರಸ್ವತಿ ಅವಳನ್ನು ಕೂಗಿ ಕರೆದು ಒಂದು ಲಕ್ಷ್ಮಿ ಮೂರ್ತಿ ಬೇಕಾಗಿದೆ ಎಂದಳು. ಅವಳು ತನ್ನ ಚೀಲದಲ್ಲಿ ಕೈ ಹಾಕಿ ಹತ್ತು ಹಲವು ಸಣ್ಣ ದೊಡ್ಡ ಮೂರ್ತಿ ಹೊರ ತೆಗೆದು ಯಾವುದು ಬೇಕೋ ಅದನ್ನು ತೊಗೊಳ್ರಿ ಅಂತ ಹೇಳಿದಳು. ಮೂರ್ತಿಗಳು ಒಂದಕ್ಕಿಂತ ಒಂದು ಚನ್ನಾಗಿದ್ದವು ಅವುಗಳಲ್ಲಿ ಒಂದನ್ನು ಆರಿಸಿ ಎಷ್ಟು ಕೊಡಬೇಕು? ಅಂತ ಸರಸ್ವತಿ ಪ್ರಶ್ನಿಸಿದಳು. ಜಾಸ್ತಿ ಏನಿಲ್ಲ ಬರೀ ಸಾವಿರ ರೂಪಾಯಿ ನೀವು ಇದನ್ನು ಸರಾಫ ಅಂಗಡ್ಯಾಗ ಕೊಂಡರ ಎರಡು ಸಾವಿರದ ಕೆಳಗೆ ಕೊಡೋದೇ ಇಲ್ಲ ಏನೋ ನನ್ನ ಗಂಡನೇ ಈ ಮೂರ್ತಿ ತಯಾರ ಮಾಡ್ತಾನೆ ಬೆಳ್ಳಿ ಕಿಲೋಗಟ್ಟಲೇ ತರೋದ್ರಿಂದ ಮೂರ್ತಿ ಕಡಿಮೆ ರೇಟಿಗೆ ಮಾರಾಟ ಮಾಡತೀವಿ ಎಂದಳು. ಅವಳ ಮಾತಿನ ಮೇಲೆ ನಂಬಿಕೆ ಮೂಡಿ ವೆಂಕಟೆಮ್ಮ ಸಾವಿರ ಕೊಟ್ಟು ಮೂರ್ತಿ ಖರೀದಿಸಿದಳು. ಅದನ್ನು ಸೊಸೆಯ ಕೈಗೆ ಕೊಟ್ಟಳು. ನಮ್ಮ ಅತ್ತೆ ಬಹಳ ಶ್ಯಾಣ್ಯಾ ಛೊಲೊ ಮೂರ್ತಿ ತಂದಿದ್ದಾಳೆ ಅಂತ ನಾಗಲಕ್ಷ್ಮಿ ಅಕ್ಕ ಪಕ್ಕದ ಮನೆಯವರ ಮುಂದೆ ಗುಣಗಾನ ಮಾಡಿದ್ದಳು. ವೆಂಕಟೆಮ್ಮ ಇದನ್ನೆಲ್ಲಾ ನೆನಪಿಸಿಕೊಂಡು ಮೂರ್ತಿ ತಂದಾಗ ನಾನು ಎಲ್ಲರ ಕಡೆಯಿಂದ ಹೊಗಳಿಸಿಕೊಂಡಿದ್ದೆ ಈಗ ಮೂರ್ತಿ ಅಸಲಿಯತ್ತು ಗೊತ್ತಾದರೆ ಎಲ್ಲರ ಕಡೆಯಿಂದ ಬೈಸಾಕೊಳ್ಳುವ ಪರಸ್ಥಿತಿ ಬಂತಲ್ಲ? ಮೂರ್ತಿ ಮಾರಾಟ ಮಾಡಿದ ಹೆಂಗಸು ಬೆಳ್ಳಿ ಕಳ್ಳಿ ಅನ್ನುವದು ಗೊತ್ತಾದರೆ ಏನು ಮಾಡುವುದು? ಟೀವ್ಯಾಗ ನೋಡಿದ ಮ್ಯಾಲೇ ನನಗೂ ಆ ಕಳ್ಳಿಯ ಬಗ್ಗೆ ಗೊತ್ತಾಯ್ತು ಅವಳಿಂದ ಲಕ್ಷ್ಮಿ ಮೂರ್ತಿ ಖರೀದಿಸಿ ತಪ್ಪು ಮಾಡಿದೆ.

ಮೊದಲೇ ಗೊತ್ತಿದ್ದರೆ ನಾನೆಲ್ಲಿ ತೊಗೊಳ್ಳತಿದ್ದೆ. ಸರಸ್ವತಿ ಮಾತು ಕೇಳಬಾರದಿತ್ತು ಪೋಲೀಸರು ಬಂದು ವಿಚಾರಣೆ ಮಾಡಿದರೆ ಏನು ಮಾಡೋದು? ಮನೆತನದ ಮರ್ಯಾದೆಯ ಗತಿ ಎನು? ಹೇಗಾದರೂ ಮಾಡಿ ಲಕ್ಷ್ಮಿ ಮೂರ್ತಿ ಪೋಲಿಸರ ಕೈಗೆ ಸಿಗದಂತೆ ಮುಚ್ಚಿಡಬೇಕು ಅಂತ ಯೋಚಿಸಿ ಅಂದು ರಾತ್ರಿ ಜಗುಲಿಯ ಮೇಲಿನ ಮೂರ್ತಿ ತೆಗೆದು ಯಾರ ಕಣ್ಣಿಗೂ ಬೀಳದಂತೆ ಅರಿವೆಯೊಂದರಲ್ಲಿ ಸುತ್ತಿ ಮುಚ್ಚಿಟ್ಟಳು. ಮರುದಿನ ನಾಗಲಕ್ಷ್ಮಿ ದೇವರ ಕೋಣೆಗೆ ಹೋದಾಗ ಲಕ್ಷ್ಮಿ ಮೂರ್ತಿ ಕಾಣೆಯಾಗಿದ್ದು ಕಂಡು ಗಾಬರಿಯಾಯಿತು. ಯಾರೋ ನಮ್ಮ ಮನೆಯ ಲಕ್ಷ್ಮಿ ಮೂರ್ತಿ ಕಳವು ಮಾಡಿದ್ದಾರೆ ಅಂತ ಗುಲ್ಲೆಬ್ಬಿಸಿದಳು ವಿಷಯ ಒಬ್ಬರ ಬಾಯಿಂದ ಒಬ್ಬರಿಗೆ ಹರಡಿ ಓಣಿ ತುಂಬಾ ಪುಕಾರಾಯಿತು ಮನ್ಯಾಗಿನ ಎಲ್ಲಾ ಸಾಮಾನು ಬಿಟ್ಟು ಜಗಲಿ ಮ್ಯಾಲಿನ ಮೂರ್ತಿ ಒಂದೇ ಒಯ್ದಾರಲ್ಲ? ಕಳ್ಳರು ಏನಿದು ವಿಚಿತ್ರ ಅಂತ ಪರಸ್ಪರ ಹಳಾಳಿಸಿದರು. ಪೋಲೀಸರಿಗೆ ಕಂಪ್ಲೇಂಟಾದರು ಕೊಡ್ರಿ ಅಂತ ಕೆಲವರು ಸಲಹೆ ನೀಡಿದರು ಇದು ಮೂರ್ತಿ ಕಳ್ಳಿಯ ಕೈ ಚಳಕಾನೇ ಇರಬೇಕು ಅವಳು ಏನಾದರೂ ನೆವ ಮಾಡಿ ಮನೆಯೊಳಗೆ ಬಂದು ಬೆಳ್ಳಿ ಮೂರ್ತಿ ಕದೀತಾಳೆ ಬಹಳ ಜನರ ಮನ್ಯಾಗನೂ ಮೂರ್ತಿ ಕದ್ದಿದ್ದಾಳೆ ಆದರೆ ಯಾರೂ ಈ ವಿಷಯ ಗಂಭೀರವಾಗಿ ತೊಗೊಂಡಿಲ್ಲ ಅಂತ ಪಕ್ಕದ ಮನೆಯ ಶಾಂಭವಿ ಹೇಳಿದಳು. ಹೌದು ಆ ಕಳ್ಳಿ ನೀರಿನ ನೆವ ಮಾಡಿಕೊಂಡು ನಮ್ಮ ಮನೀಗೂ ಒಂದೆರಡು ಸಾರಿ ಬಂದಿದ್ದಳು ಆ ಕಡೆ ಈ ಕಡೆ ಇಣುಕಿ ನೊಡಿದಾಗ ಹಿಂಗ್ಯಾಕ ನೋಡ್ತಾಳೆ ಅಂತ ನನಗೂ ಆಶ್ಚರ್ಯವಾಗಿತ್ತು ಅಂತ ಚಂದ್ರಾಬಾಯಿ ತನಗಾದ ಅನುಭವ ನೆನಪಿಸಿದಳು.

ಆ ಕಳ್ಳಿ ಈಗೇನು ಕಳವು ಮಾಡ್ತಾಳೆ? ಅವಳು ಸಿಕ್ಕಿ ಬಿದ್ದಾಳೆ ಪೋಲೀಸರು ಸರಿಯಾಗಿ ಬುದ್ಧಿ ಕಲಿಸ್ತಾರೆ ಅಂತ ಸುನಂದಾ ಹೇಳಿದಳು. ಅವಳಿಗೆ ಛೊಲೊ ಶಿಕ್ಷಾ ಆಗಬೇಕು ಅಂದರೇ ಮುಂದೆ ಕಳವು ಮಾಡೋದು ಬಿಡ್ತಾಳೆ ಅಂತ ಮಾತಾಡಿಕೊಂಡರು. ಅವಳೇ ಮಾಡಿರಲಿ ಮತ್ತೆ ಯಾರೇ ಮಾಡಿರಲಿ ಪೋಲೀಸರಿಗೆ ಕಂಪ್ಲೇಂಟ್ ಕೊಟ್ಟರೆ ತಾನೇ ಸತ್ಯ ಹೊರ ಬರ್ತಾದೆ ಅಂತ ಕೆಲವರು ಶ್ರೀಪಾದನಿಗೆ ಸಲಹೆ ಕೊಟ್ಟರು. ಅವರ ಮಾತು ಕೇಳಿಸಿಕೊಂಡ ವೆಂಕಟೆಮ್ಮನಿಗೆ ಒಳ ಮನೆಯಿಂದ ತಕ್ಷಣ ಹೊರ ಬಂದು ನಮ್ಮ ಮನೆಗೆ ಯಾವ ಪೋಲೀಸರು ಬರೋದು ಬೇಡ ನಮ್ಮ ಮನ್ಯಾಗಿನ ಲಕ್ಷ್ಮಿ ಮೂರ್ತಿ ಯಾರೂ ಕಳವು ಮಾಡಿಲ್ಲ ನಾನೇ ಮುಚ್ಚಿಟ್ಟಿದ್ದು ಅಂತ ವಾಸ್ತವ ಹೇಳಿದಾಗ ವೆಂಕಟೆಮ್ಮನ ಮಾತಿಗೆ ಎಲ್ಲರೂ ಗಾಬರಿಯಾಗಿ ದೇವರು ದಿಂಡಿರು ಪೂಜೆ ಪುನಸ್ಕಾರ ಅನ್ನುವ ನೀನೇ ಮೂರ್ತಿ ಮುಚ್ಚಿಟ್ಟರ ಹ್ಯಾಂಗ ? ಅಂತ ಪ್ರಶ್ನಿಸಿದರು. ಆಗ ಸತ್ಯ ಹೇಳುವ ಅನಿವಾರ್ಯತೆ ಉಂಟಾಗಿ ನಾನು ಆ ಬೆಳ್ಳಿ ಕಳ್ಳಿಯಿಂದ ಮೂರ್ತಿ ಖರೀದಿಸಿ ತಪ್ಪು ಮಾಡಿದೆ ಅವಳು ಸಿಕ್ಕಿ ಬಿದ್ದು ನಮಗೂ ಸಂಕಟ ತಂದೊಡ್ಡಿದ್ದಾಳೆ ಯಾವಾಗ ಬೇಕಾದರೂ ಪೋಲೀಸರು ನಮ್ಮ ಮನೆಗೆ ಬಂದು ವಿಚಾರಣೆ ಮಾಡಬಹುದು ಅಂತ ಗಾಬರಿಯಾಗಿ ಮೂರ್ತಿ ಮುಚ್ಚಿಟ್ಟಿದ್ದೇನೆ ಅಂತ ವೆಂಕಟೆಮ್ಮ ಸತ್ಯ ಬಾಯ್ಬಿಟ್ಟಳು. ಇವಳ ಮಾತು ಕೇಳಿತಿದ್ದಂತೆ ಎಲ್ಲರೂ ಅವಳ ಮುಖ ಪ್ರಶ್ನಾರ್ಥಕವಾಗಿ ನೋಡತೊಡಗಿದರು!!!

-ಶರಣಗೌಡ ಬಿ ಪಾಟೀಲ ತಿಳಗೂಳ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x