ಮುಖಗಳು ಬೇಕಾಗಿವೆ ಅಂತ ಮುಖಪುಟದಾಗ ಓದಿದ ಮಂದಿಗೆ ಸ್ವಲ್ಪ ಆಶ್ಚರ್ಯನಏ ಆತು. “ಇದೇನೋ ಮಾರಾಯ, ಕಣ್ಣುಗಳು ಬೇಕಾಗಿವೆ, ಕಿಡ್ನಿಗಳು ಬೇಕಾಗಿವೆ ಅಂತ ಡಾಕ್ಟರು ಹೇಳೋದು ಕೇಳಿದ್ದಿವಿ. ಇದೇನಿದು ಹೊಸಾ ವಿಷಯ. ಯಾರಿಗೆ ಏನು, ಯಾಕ, ಏನೇನೂ ಬರೆದಿಲ್ಲಪಾ, ಮುಖಗಳು ಅಂದರ ಈ ಸಿನಿಮಾದವರು ಹೇಳತಾರಲಾ ಹಂಗೇನರ ಹೊಸಾ ಮುಖಗಳು ಬೇಕಾಗಿವೆ ಅಂತೇನರೆ ಅದನೋ ಏನೋ, ಆದರ ಎಂತಾ ಮುಖಗಳು ಬೇಕಾಗ್ಯಾವ ಅಂತನೂ ಹೇಳಿಲ್ಲ ನೋಡ ಮತ್ತ”. ಅಂತ ರಾಮ್ಯಾ ಮುಂಜ ಮುಂಜಾನೆ ಮೊಬೈಲು, ಟೀವಿ ಬಿಟ್ಟು ಓಡಿಕೋತ ಬಂದು ತನ್ನ ಗೆಳೆಯಾರಿಗೆ ಹೇಳಿದ.
“ಏ ಹೆಡ್ಡ ನನ ಮಗನ, ನೀ ಒಂದಿಲ್ಲಾ ಒಂದು ಹಿಂತಾ ಕಿತಿಬಿ ಮಾಡತೀ ನೋಡಲೇ. ಸುಮ್ಮಕ ದಿನದಾಂಗ ಮಕ್ಕೋಳೋದು ಬಿಟ್ಟು, ಇಂದ್ಯಾಕ ಪೇಪರ ಹಿಡದ್ಯಪಾ ನೀನು, ಬಂದ ನೋಡು ಎಲ್ಲಾರ ತಲೀ ತಿನ್ನಾಕ, ಅಲ್ಲೆ ನೋಡಿದರ ಮನ್ಯಾಗ ನಮ್ಮವ್ವ ಮುಂಜಾನೆ ಎದ್ದಾಕೀನ, “ದುಂಡು ಮುಖವುಳ್ಳ ಹುಡುಗನ ಕಂಡೀರಾಂತ” ಉದಯರಾಗ ಹಾಡಿಕೋತ ತಲೀ ತಿಂತಾಳ, ಯಾವ ಹುಡುಗಾಂತ ನೋಡೋದ ನಮಗ ಕಷ್ಟ ಅಂತಾದರಾಗ ಅವನ ಮುಖಾ ದುಂಡಗದನ ಅಂತ ಬ್ಯಾರೇ ನೋಡಬೇಕೇನೋ, ಅದೂ ಅಲ್ಲದೇನ ಗಜಮುಖ ಗಣಪನಂಘ್ರೀಯಲಿ ಅಂತ ಮನಷ್ಯಾರ ಮುಖಾ ಅಲ್ಲದನ ಈ ಗಜಮುಖ ಬ್ಯಾರೇಂತ, ಇದನ್ನ ಕೇಳೀ ಕೇಳೀ ಮಾರಿ ಕಿವಿಚಿ ಬಿಟ್ಟೇನಿ ಅಂತಾದರಾಗ, ಇವಾ ಮುಖ ತಿರಿವಿದ್ದೋ ಎಂತಾದೋ ಅದು ಬೇಕಾಗಿದ್ದಂತಾ ಮುಖಾ” ಅಂದವ ಭೀಮ.
“ಅಲ್ಲಲೇ, ನೀಯೇನು ನಿಮ್ಮವ್ವನ ಉದಯರಾಗ ಕೇಳಿ ಕೇಳಿ, ಸ್ವರ್ಗದಾಗ ಕೂತವರಂಗ ಬರೇ ದೇವರ ಹಾಡು, ಸುದ್ದಿ ಹೇಳತೀಯೇನಲೇ. ನೀ ತುಸಾ ಸುಮ್ಮಕಿರು, ಇಲ್ಲೆ ನೋಡು, ಈಗೆಲ್ಲಾ ಸುದ್ದಿ ಈ ವಾಟ್ಸಪ್ಪು, ಫೇಸ್ ಬುಕ್ಕು ಇಂತಾದರ ಮ್ಯಾಲೆ ಓಡಾಡತಾವಪಾ, ಅಂತಾದರಾಗ ಈ ಪೇಪರ್ ಗೀಪರ್ ಇವೆಲ್ಲಾ ಹಳೇ ಕಾಲದ್ವು. ಅದರಾಗ ಹೀಂಗ ಸುದ್ದಿ ಬಂದೈತೀ ಅಂದರ, ಇಲ್ಲೇ ಈ ಸುದ್ದಿ ಕಾದಿಡೋದಕ್ಕ ಒಂದು ಸಾಕ್ಷಿ ಅಂತಿರಬೇಕು,” ಅಂದ ಶ್ಯಾಮ.
“ನೋಡೋ, ಪತ್ತೇದಾರಿ ಪುರುಷೋತ್ತಮ, ಇಲ್ಲೆ ಮುಖಕ್ಕ ಮಂಗಳಾರತಿ ಮಾಡಬ್ಯಾಡಲೇ, ಅದೇನರ ಇರವಲ್ಲತ್ಯಾಕ, ನಿಂದಂತೂ ಹೇಪಲ್ಯಾನ ಮಾರಿ, ನಿನಗಂತೂ ಯಾವನೂ ಹೀಂಗ ಮುಖಗಳು ಬೇಕಾಗಿವೆ ಅನ್ನೋ ಪ್ರಚಾರದಿಂದ ಹುಡುಕೋ ಮಾರಿ ಅಲ್ಲ ಬಿಡಪಾ, ಮೂವತ್ತ ವರ್ಷಾದರೂ ಒಂದು ನೌಕರೀನೂ, ಒಂದು ಹೆಣ್ಣೂ ಸಿಗಲಾರದ ಮಾರಿ ಇದು” ಅಂದ ಸೋಮ.
“ಲೇ ಸೋಮ್ಯಾ, ನಿಂದ ಇನ್ನೇನಲೇ, ನಿಂದೂ ಹಂತಾದ ಮಾರಿ, ನೌಕರೀ ಹೆಣ್ಣು ಎರಡೂ ಸಿಗದೇ ಇದ್ದಂತಾದ ಮಾರಿ.” ಅಂತ ಇರೋ ಕರೇ ಮಾರೀನ ಕೆಂಪಗ ಮಾಡಿಕೊಂಡು ಸಿಟ್ಟಿನಿಂದ ಒದರೀದ ಶ್ಯಾಮ,
“ಲೇ ಲೇ ಇಲ್ಲೆ ನಿಮ್ಮ ಮುಖ ಹೆಂಗದ ಅಂತ ನೀವಿಬ್ಬರೂ ಶುರು ಮಾಡಬ್ಯಾಡರೀ, ನಮಗೆಲ್ಲಾ ಮೂವತ್ತಾದರೂ ನೌಕರೀ, ಹೆಣ್ನೂ ಸಿಗದೇ ಕೂತವರೆ, ಇದು ಎಲ್ಲಾರಿಗೂ ಗೊತ್ತಿದ್ದದ್ದೇ, ಈಗ ಈ ಶ್ಯಾಮ್ಯಾ ಹೇಳಿಧಂಗ, ಇದೇನೋ ಒಂದು ಹೊಸಾ ರೀತಿ ಅದ ಅಲ್ಲಪಾ, ಈ ಮುಖಗಳು ಬೇಕಾಗಿವೆ ಅಂತ ಅದನ್ನ ಹುಡುಕೋಣಷ್ಟ” ಅಂತ ನಾಲ್ಕೂ ಮಂದಿ ಒಪಿಗೊಂಡರು.
“ಅಲ್ಲಲೇ, ಈ ಬ್ಯಾರೆ ಬ್ಯಾರೆ ನೋಡಲಾರದ ಚಿತ್ರಕ್ಕ ನಮ್ಮ ಮುಖ ಅಂಟಸತಾರೇನ ಮತ್ತ, ಹಂಗಿದ್ದರ ನಾ ತಲೀ ಹಾಕೂದಿಲ್ಲ ಮತ್ತ ಈ ವಿಷಯದಾಗ, ಮನ್ನೆ ಮನ್ನೆ ಇನ್ನೂ ಯಾರೋ ಬುಸಿನೆಸ್ ಮನಷ್ಯಾನ ಇಂತಾದರಾಗ ಸಿಕ್ಕೊಂಡಾನಂತ, ನಮ್ಮಂತಾ ಪೆದ್ದರನ ಸಿಗಸೀ ತಾವು ಪಾರಾಗತಾರಪಾ ಅವರು” ಅಂತ ರಾಮಪ್ಪ ಹೆದರಿಕೊಂಡ,
ಆದರ ಇದರಾಗೇನದ ತಿಳೀಲೇ ಬೇಕು, ಎಂತಾ ಮುಖಗಳು ಬೇಕು ಅನ್ನೋದು ಮುಖ್ಯ ಆತು. ಅವರೂ ಒಂದು ರೀತಿ ವಿಚಾರ ಮಾಡಿದರು.
“ಸದಾ ನಗನಗತ ಇರೋಂತಹ ಗಗನ ಸಖಿಯರು, ಸ್ವಾಗತ ಕಾರಿಣಿಯರ ಮುಖಗಳೋ ಅಥವಾ ಎಂತಾ ದಡ್ಡತನದಾಗೂ ಏನೇನೂ ಭಾವನೇನ ತೋರಸದ, ಬರೇ ಹಲ್ಲು ತೋರಿಸೋ ಅಂತಹಾ ನಟನಟಿಯರು, ರೂಪದರ್ಶಿಯರ ಮುಖಗಳೋ, ಸದಾ ಕಣ್ನಿಗೆ ಹೊಡಿಯೋ ಹಂಗ ಮೇಕಪ್ ಮಾಡಿಕೊಂಡು ಅತಿ ಅಭಿನಯ ಮಾಡೋ ಈ ಧಾರಾವಾಹಿಯವರೋ ಎಂಥಾ ಮುಖಗಳು ಬೇಕಪಾ ಇವರಿಗೆ,”
“ಲೇ ಮಗನ, ಯಾವಗಲೂ ಬಣ್ಣ ಹಚಕೊಂಡು, ಬಣ್ಣದ ಬೀಸಣಿಕಿ ಹಂಗ ಬೆಳಕಿನ ಮುಂದ ನಿಂತತಾ ಮಂದೀಗೆ ಭಾವನೆ ಎಲ್ಲಿರತೈತಿ, ಅದೇನಿದ್ದರೂ ದುಡ್ಡಿನ ಮುಂದಿರತೈತಿ, ಅವರನ ಬಿಡು, ಅವರಿಗಿಂತ ಹೆಚ್ಚು ನಟನಾ ಮಾಡೋ ರಾಜಕಾರಣಿಗಳನೂ ಬಿಡು, ಅಂತಾ ಮುಖಗಳಾದರ, ಪೇಪರಿನ್ಯಾಗ ಸುದ್ದಿ ಬರೂದಿಲ್ಲ. ನಮ್ಮ ನಿಮ್ಮಂತಾ ಸಾಮಾನ್ಯ ಜನರ ಮುಖಗಳೇ ಬೇಕಾಗಿರಬೇಕು, ಅದಕ್ಕ, ಹಿಂಗ ಬರದಾರ,” ಅಂದರು.
“ನಮ್ಮ ನಿಮ್ಮಂತಾ ಮಾರಿ ಅಂದರ ಯಾವದಲೇ, ಹಳ್ಳಿಗ್ಹೋದರ, ರೈತರು ಮುದುಕರಾಗ್ಯಾರ, ಹರೇದವರು ಊರ ಬಿಟ್ಟಾರ, ಬೆಳೆ ಬೆಳೀಲಿಕ್ಕೆ ಜನಾ ಇಲ್ಲಾ, ಕೂಲಿ ಕೊಟ್ಟು ಲಾಭ ಇಲ್ಲಾ, ಖಾಲೀ ಭೂಮಿ ನೋಡಿ, ಕಣ್ಣೀರಿಡೋ ಮುಖಾ ಸಿಗತಾವ. ಇಲ್ಲಾಂದ್ರ, ಇಲ್ಲೆ ಪಟ್ಟಣದಾಗ ಬಂದರ, ಇಪ್ಪತ್ತನಾಲ್ಕು ತಾಸೂ ಕಂಪ್ಯೂಟರಿನ್ಯಾಗ ತಲಿ ಇಟ್ಟು, ಅಮೇರಿಕಾದ ಪಗಾರದ ಸುದ್ದಿ ಮಾತಾಡಕೋತ, ನಮ್ಮ ಕಡುಬು, ಹೋಳಿಗಿ, ಸೂಸಲಾ ಎಲ್ಲಾ ಮರತು, ಪಿಜ್ಜಾ ಫೋಟೋ ಸ್ಟೇಟಸ್ ಹಾಕೋ ಸಾಫ್ಟವೇರ್ ಇಂಜನೀಯರ್ ಮುಖಾ ಸಿಗತಾವ.”
“ಏ, ಅಂತಾ ಮುಖಗಳಿಗೆ ಊರ ತುಂಬಾ ಕಡಿಮಿ ಏನಿಲ್ಲ ಬಿಡು, ತಾವು ಪಿಜ್ಜಾ ತಿಂದು ಸುಖಾ ಪಡೋವಲ್ಲ ಅವು, ಬರೇ ಎಷ್ಟ ಮಂದಿ ತಮ್ಮ ಸ್ಟೇಟಸ್ ನೋಡಿ ಹೊಟ್ಟಿಕಿಚ್ಚು ಪಟ್ಟಾರ ಅನ್ನೋದನ್ನ ನೋಡಿ ಸುಖಾ ಪಡತಾವ ಬಿಡು.”
“ಅಲ್ಲಲೇ ಹುಚ್ಚಪ್ಯಾಲಿ ಹಂಗರ ಹೆಂತಾ ಮುಖಗಳು ಬೇಕು, ಅದನ್ನರೇ ಹೇಳು, ಈ ಅನಾಥಾಶ್ರಮದಾಗ, ವಯಸ್ಸಾದವರಿಗೆ, ಮಾತಾಡೋ ಚಪಲ ಜಾಸ್ತಿ ಅಂತಪಾ, ಅವರ ಹೇಳಿದ್ದನ್ನ ಕೇಳಿಸಿಕೊಂಡು, ನಾನು ನಿಮ್ಮ ಮಾತು ಕೇಳಿಸಿಕೊಂಡೆ ಅಂತ ತೋರಿಸೋ ಅಂತಾ ಮುಖಗಳೇನರೆ ಬೇಕನು ಮತ್ತ.”
“ನೋಡಪಾ, ಈ ರಾಜಕಾರಣಿಗಳು, ಮತ್ತ ಇನ್ನ ಯಾರು ಯಾರೋ ನಾಯಕರು, ಮುಖಂಡರು, ಇವರೆಲ್ಲಾ, ಒಂದಿಲ್ಲೊಂದು ಸಭಾ ಮಾಡಿ, ಏನರೆ ಹೇಳಿಕೆ ಕೊಟ್ಟರೂ, ಅದೊಂದು ಅಧ್ಭುತ ಸಂದೇಶ ಅಂತ ಸೀಟಿ ಹೊಡದು, ಚಪ್ಪಾಳಿ ತಟ್ಟಿ ಖುಷಿ ತೋರಿಸೋ ಅಂತಾ ಮುಖಗಳೇನರೆ ಹೋಲ್ ಸೇಲ್ ಬೇಕೆನು ಮತ್ತ.”
“ಅಲ್ಲಪಾ, ಈ ಆಫೀಸನ್ಯಾಗ ಬಾಸ್ ಇರತಾನಲಾ ಬೈದರ, ಏನೂ ಆಗೇ ಇಲ್ಲ ಅನ್ನೋ ಹಂಗ ಮುಖ ಮಾಡಿ, ಅವಾ ಹೇಳೋ ಕೆಟ್ಟ ಜೋಕಿಗೂ ನಕ್ಕೋತ, ಬಕೀಟು ಹಿಡಿಯೋ ಮುಖಗಳಿರಬೇಕು, ಇಲ್ಲಾಂದರ, ಹೆಂಡತಿ, ಏನು ಹೇಳಿದರೂ ಸರಿ ಅಂತ ನಕ್ಕೋತ ಇರೋಂತಹ ಮುಖಗಳಿರಬೇಕು. ನೋಡ ಮತ್ತ.”
“ಇಲ್ಲಪಾ, ಇದು ಮುಖ ಬೇಕಾಗಿದೆ ಅಂತಿಲ್ಲ, ಮುಖಗಳು ಬೇಕಾಗಿವೆ ಅಂತ ಬಹುವಚನ ಅದ. ಅಂದರ, ಬ್ರಹ್ಮನಂಗ ನಾಕು ಮುಖಾ ಅಥವಾ ದತ್ತಾತ್ರೇಯನಂಗ ಮೂರು ಮುಖಾ, ಷಣ್ಮುಖನಂಗ ಆರು ಮುಖಾ, ಇಲ್ಲಾಂದ್ರ ರಾವಣನ ಹಂಗ ಹತ್ತು ಮುಖಾ ಇರೋಹಂತಾದ್ದೇನರೆ ಇರಬೇಕು ನೋಡರಿ ಮತ್ತ.”
“ಒಂದ ನಿಮಿಷ ಸುಮ್ಮನಿರತೀರೆನು, ಶ್ಯಾಮ್ಯಾ, ಈ ಪೇಪರಿನ್ಯಾಗ ಕೊಟ್ಟಿರೋ ನಂಬರಿಗೆ ಫೋನು ಮಾಡಿ ಕೇಳಪಾ, ಆ ಹುಚ್ಚ ಫೋನ ನಂಬರ್ ಕೊಟ್ಟು ಮುಂದೇನೂ ಬರೀದ ಈ ಮುಖಗಳು ಬೇಕಾಗಿವೆ ಅಂತ ಬರದ ಕೂತಾನ. ಎಂತೆಂಥಾ ಮುಖಗಳು, ಮಾಡೋದೆಲ್ಲಾ ಮಾಡಿ, ಮಣಿ ಹಂಗ ಕೂತಂತವರು, ಮುಖಾ ನೋಡಿ ಮಣಿ ಹಾಕೋವರು, ಇಂಗು ತಿಂದ ಮಂಗ್ಯಾನಂಗ ಮಾರಿ ಮಾಡೋವರು, ನುಂಗಿ ನೀರು ಕುಡದ ನಿಶ್ಚಿಂತಿಂದ ಕೂತವರು, ಬರೇ ಹೆಣದ ಮುಂದ ಕೂತು ರುಡಾಲೀ ಹಂಗ ಅಳೋವರು. ಎಂತೆಂಥಾ ಮುಖಗಳು ಸಿಗತಾವ, ಎಂತಾ ಮುಖಾ ಬೇಕ ಕೇಳವಗ.”
“ಅಲ್ಲಲೇ, ಈ ಕೃತಕ ಬುದ್ಧಿಮತ್ತೆ ಅಂತ, ರೋಬೋಗಳು ಪಾಠ ಹೇಳತಾವಂತ. ಅವಕ್ಕೇನರ ಭಾವನಾ ಇರತದ, ಸತ್ತ ಸುದ್ದೀನೂ ನಕ್ಕೋತನ ಹೇಳತಾವ, ನಗೋ ಸುದ್ದೀನೂ ನಕ್ಕೋತನ ಹೇಳತಾವ, ಅವು ಹೇಳೋ ಪಾಠಾದಾಗ ಭಾವನಾನ ಇಲ್ಲಂತ ಹುಡುಗೂರಿಗೆ ಬ್ಯಾಸರಂತಪಾ. ಅದಕ್ಕ, ಈ ರೋಬೋಗಳ ಮಾತಿಗೆ, ಭಾವನಾನೇ ಇಲ್ಲದ ಧ್ವನಿಗೆ, ಭಾವನೆಗಳನ್ನೇ ತೋರಧಂಗ, ಇಡೀ ದಿನ ಪಿಳಿ ಪಿಳಿ ಕಣ್ಣು ಬಿಟಗೊಂಡು, ತುಟಿ ಅಲುಗಾಡಿಸೋ ಅಂತಾ ಮುಖಗಳು ಬೇಕಂತ. ಅದಕ್ಕ ಸೂಕ್ತ ಸಂಭಾವನೇನೂ ಅದ ಅಂತಪಾ.”
“ಹುಚ್ಚ ನನ್ನ ಮಗನ, ಭಾವನಾನೇ ತೋರಸದ, ಕಣ್ಣು ಬಿಟಗೋತ ಕೂಡಲಿಕ್ಕೆ ನಾವೇನು ಹುಚ್ಚರನಲೇ, ಹುಚ್ಚರಾದರೂ, ಅವರಿಗೂ ಸಿಟ್ಟು, ದುಃಖ, ನಗು, ಹಸಿವು ಎಲ್ಲಾ ಇರತಾವು. ಭಾವನೆಗಳು ಏನೇನೂ ಇಲ್ಲದ ಸುಮ್ಮನಿರೋದು ಅಂದರ, ಹೆಣಾ ಇದ್ದಂಗ, ಈಗ ನಮಗ ಮೂವತ್ತಾದರೂ ಹೆಣ್ಣು, ನೌಕರೀ ಸಿಕ್ಕಿರಲಿಕ್ಕಿಲ್ಲ, ಆದರೆ, ಕಣ್ಣು ತುಂಬ ಕನಸು ಅವ, ಭಾವನಾ ತುಂಬಿರೋ ಮನಸು ಅವ. ನಮಗಿದು ಆಗೋದಲ್ಲದ ಕೆಲಸಾ”
“ನಡೀರಿ, ನಡೀರಿ, ಇದೆಲ್ಲಾ ಆಗದ ಹೋಗದ ಕೆಲಸಾ, ಕನಸು, ಮನಸು, ಜೊತೀಗೆ ಹೊಟ್ಟಿ ಅದ ನಮಗ, ಈಗ ಅದು ಭಾಳ ಹಸಿದದ, ಆ ಕೆಲಸಕ್ಕಂತೂ ತಪ್ಪಸದ ಹೋಗೋಣ ಏಳರೀ.”
“ಹೂಂ ಹೀಂಗ, ದಿನಾ ತಪ್ಪದ ಊಟಕ್ಕ ಹಾಜರಾಗೋ ಮುಖಗಳು ಬೇಕಾಗಿದ್ದರ ನೋಡರೀ ಮತ್ತ.”
-ವೃಂದಾ ಸಂಗಮ್