ದೇಶಪ್ರೇಮವೆನ್ನುವುದು ಪ್ರತಿಯೊಬ್ಬ ಪ್ರಜೆಗೂ ಆತ್ಮಾಭಿಮಾನದ ಸಂಕೇತ: ಶಿವಲೀಲಾ ಹುಣಸಗಿ ಯಲ್ಲಾಪುರ

“ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ನಿಜ ತಾನೆ?

ಎದೆಯ ಸೀಳಿ ಹುಡುಕದಿರಿ
ಮದ್ದು ಗುಂಡುಗಳ ಬಳಸದಿರಿ
ಬಂದೂಕಿನ ಎದೆಗೂಡಲಿ
ಪ್ರೀತಿ, ಅನುರಾಗ, ಅನುಬಂಧ ಚಿಗುರಿ
ದೇಶವೆಂಬ ಆತ್ಮಾಭಿಮಾನ ಹೊಮ್ಮಿ
ನರನಾಡಿಗಳಲಿ ಚೈತನ್ಯ ತುಂಬಲಿ. . .

ದೇಶಪ್ರೇಮವೆನ್ನುವುದು ಪ್ರತಿಯೊಬ್ಬ ಪ್ರಜೆಗೂ ಆತ್ಮಾಭಿಮಾನದ ಸಂಕೇತ. ದೇಶ ರಕ್ಷಣೆಯಲ್ಲಿ ಇದರ ಪಾತ್ರ ಪ್ರಮುಖವಾದದ್ದು. ಕೇವಲ ದೇಶ ರಕ್ಷಣೆಯಷ್ಟೇ ಅಲ್ಲ ಸಮಾಜದ ರಕ್ಷಣೆಯಲ್ಲೂ ಮುಖ್ಯವಾದುದು. ಹಾಗಿದ್ದ ಮೇಲೆ ದೇಶಪ್ರೇಮ ಎಂದರೇನು? ಯಾಕಾಗಿ ದೇಶವನ್ನು ಪ್ರೀತಿಸಬೇಕು? ದೇಶ ಪ್ರೀತಿಸುವುದರ ಪ್ರತಿಫಲವೇನು? ವಿಶ್ವದಾದ್ಯಂತ ಅನೇಕ ದಾರ್ಶನಿಕರು ತಮ್ಮದೇ ಆದ ರೀತಿಯಲ್ಲಿ ದೇಶ ಪ್ರೇಮವನ್ನು ಬಿಂಬಿಸಿದ್ದಾರೆ. ಅಮೇರಿಕಾದ “ಥಿಯೊಡರ್ ರೂಸ್ ವೆಲ್ಟ್ “ರವರು, “ದೇಶದ ಜೊತೆ ನಿಲ್ಲುವುದು ಆದರೆ ದೇಶದ ಅಧ್ಯಕ್ಷ ಅಥವಾ ಯಾವುದೇ ಸಾರ್ವಜನಿಕ ಅಧಿಕಾರಿಯ ಜೊತೆ ನಿಲ್ಲುವುದಲ್ಲ” ಎನ್ನುತ್ತಾರೆ. ಅಮೇರಿಕಾದ ಇನ್ನೋರ್ವ ಸೈನಿಕ “ನಾಥೆನ್ ಹೇಲ್” ರ ಪ್ರಕಾರ “ದೇಶಕ್ಕಾಗಿ ಕೊಡಲು ನನ್ನ ಬಳಿ ಕೇವಲ ಒಂದೇ ಜೀವ ಇರುವುದು ಎಂದು ಬಹಳ ಬೇಸರವಾಗುತ್ತದೆ” ಎಂದು.

ನಾವು ಭಾರತಾಂಬೆಯ ಹೆಮ್ಮೆಯ ಭಾರತೀಯರು. ದೇಶಪ್ರೇಮದ ಬದಲಾಗಿ ಗೌರವ, ಆತ್ಮದ ಹಿರಿಮೆ. ಸ್ವಾಭಿಮಾನದ ಕುಡಿ, ಅದಕೂ ಒಂದು ಹೆಜ್ಜೆ ಮುಂದಿಡುತ್ತಾ “ದೇಶಭಕ್ತಿ ” ಎಂದಾಗ, ದೇಶ ಮನಗೆ ದೇವರ ಸಮಾನ. ಇಂತಹ ಪದವೇ ಸೂಚಿಸುವಂತೆ ದೇಶದ ಮೇಲಿರುವ ಭಕ್ತಿಯೇ ದೇಶಭಕ್ತಿ. ದೇಶವನ್ನು ನಾವು ದೇವರಂತೆ ಕಂಡು ಪೂಜಿಸುತ್ತೆವೆ. ಅದರಲ್ಲೂ “ಜನನಿ ಜನ್ಮಭೂಮಿಶ್ಚ ಸ್ವರ್ಗದಪಿ ಗರೀಯಸಿ” ಅಂದರೆ ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು ಎಂಬ ಧ್ಯೇಯ ವಾಕ್ಯದ ನೆರಳಲ್ಲಿ ಬೆಳೆದವರು
ತ್ರೇತಾಯುಗದಿಂದಲೂ ರಾಮಾಯಣದ ಕಾಲಘಟ್ಟದಿ ದೇಶಭಕ್ತಿ ಮೈಗೂಡಿಸಿಕೊಂಡು ಬೆಳೆದವರು ಭಾರತಿಯರು. ನಿಜ ಹೆಮ್ಮೆಯ ವಿಚಾರ ಆದರೆ ಯಾವುದೋ ಕಾಲಕ್ಕೆ ಸರಿಹೋಗಿರುವುದು ಎಲ್ಲ ಕಾಲ, ಪರಿಸ್ಥಿತಿಗಳಲ್ಲಿ ಒಂದೇ ಆಗಿರಲು ಸಾಧ್ಯವಿಲ್ಲ. ಪುರಾಣ ಪುಣ್ಯಕಥೆಗಳು ಸಾತ್ವಿಕ ಭಾವ ಬಿತ್ತಿದರೆ ಸನ್ಮಾರ್ಗದಲ್ಲಿ ನಡೆಯುವುದು ಖಚಿತ. ಆದ್ರೆ ಸದ್ಯದ ಪರಿಸ್ಥಿತಿಗಂತೂ ಇದಕೆ ಪೂರಕವಾಗಿಲ್ಲ. ಕಾರಣ ಎಲ್ಲರಿಗೂ ಗೊತ್ತಿದೆ. ಅತ್ಯಾಚಾರ, ಒಳಜಗಳ, ಕೋಮುಗಲಭೆ, ವೈಮನಸ್ಸು, ಹಿಂಸಾತ್ಮಕ ಸನ್ನಿವೇಶಗಳು. ದಿನದಿಂದ ದಿನಕ್ಕೆ ಹೊಸ ಹೊಸ ರೂಪಗಳಲ್ಲಿ ಮೈದಳೆದು ನಿಂತಾಗ…ಇಂತಹ ಕಾರಣಗಳು ಭಾರತೀಯರಲ್ಲಿ ದೇಶಭಕ್ತಿಯನ್ನು ಕ್ಷೀಣಿಸುವಂತೆ ಮಾಡುತ್ತಿರುವುದು ದುರಾದೃಷ್ಟವೇ ಸರಿ.

ನಮ್ಮ ದೇಶದ ದೇಸಿಯ ಕಲೆಗಳನ್ನು ಕರಗತ ಮಾಡಿಕೊಂಡ ಮಣ್ಣಿನ ಮಕ್ಕಳು ನಾವೆಂಬುದನು ಮರೆಯಬಾರದೆಂದು ಪುರಾತನ ಕಾಲದಿಂದಲೂ ಪ್ರತಿ ಹಬ್ಬಗಳಿಗೆ ವಿಶೇಷ ಮಹತ್ವ ನೀಡುತ್ತ, ಆಚರಿಸುತ್ತ ಬಂದಿರುವುದು ಹಳೆ ತಲೆಮಾರಿಗೆ ಗೊತ್ತು. ವೇದ, ಉಪನಿಷತ್ತುಗಳ ಬಗ್ಗೆ ನಮಗೆ ಪರಿಪೂರ್ಣ ಜ್ಞಾನವಿಲ್ಲ. ಇಂದು ನಮ್ಮ ಸಂಸ್ಕೃತಿಯನ್ನು ವಿದೇಶಿಯರು ಮೆಚ್ಚುತ್ತಾರೆ ಹಾಗೂ ಅನುಸರಿಸುತ್ತಾರೆ. ನಾವು ನಮ್ಮ ಸಂಸ್ಕೃತಿಯನ್ನು ನಿರ್ಲಕ್ಷಿಸಿ ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಪದ್ಧತಿಗೆ ಮಾರುಹೋಗುತ್ತಿದ್ದೇವೆ. ದಿನದಿಂದ ದಿನಕ್ಕೆ ನಮ್ಮ ಆಚಾರ, ವಿಚಾರಗಳು ಎತ್ತ ಸಾಗಿವೆ ಎಂಬುದನ್ನು ಚಿಂತಿಸಬೇಕಿದೆ. ಕಟ್ಟಿ ಕೊಟ್ಟ ಬುತ್ತಿ, ಹೇಳಿಕೊಟ್ಟ ಮಾತು ಬಹಳ ಕಾಲ ಜೀವಿಸಲಾರದು. ದೇಶ ಪ್ರೇಮದ ಜಾಗೃತಿಯನ್ನು ತಳಹಂತದಿಂದ ಹಾಗೂ ಮೌಲ್ಯಗಳ ಅಡಿಪಾಯದಿಂದ ಕಟ್ಟಿದರೆ ಮಾತ್ರ ಅರಿವಿನ ಬೆನ್ನ ಹತ್ತಲು ಮಾರ್ಗ ತೋರುತ, ಪಾಠದ ಸಾರಾಂಶವನ್ನು ಮಕ್ಕಳ ಮನಸ್ಸಿಗೆ ಇಳಿಸುವ ತಂತ್ರಹೆಚ್ಚಾಗಬೇಕಿದೆ. ಶಾಲೆಗಳು ಶಿಕ್ಷಣ ನೀಡುವ ದೇವಾಲಯ. ವಿದ್ಯಾದೇವತೆ ನೆಲೆಸಿರುವ ತಾಣಗಳು ಇಂದು ಶಿಕ್ಷಣ ಬದುಕಿಗೆ ಅತ್ಯವಶ್ಯಕವೆಂಬ ಸಂದೇಶ ಸಾರುವ ಕೇಂದ್ರಗಳಾದರೆ ಒಳಿತು. ಆದರೆ ಇಂದು ಶಿಕ್ಷಣ ವ್ಯಾಪಾರದ ಮೊದಲ ಅಸ್ತ್ರವಾಗಿ ಪರಿಣಮಿಸಿದೆ. ಏಕಸ್ವಾಮ್ಯತೆ ಬಯಸದ ರಾಜಕಾರಣಿ ಉದ್ಯಮಿಗಳು ತಮ್ಮ ಕಪ್ಪುಹಣವನ್ನು ಬಿಳಿಯಾಗಿಸಿ ಬೀದಿ ಬೀದಿಗಳಲ್ಲಿ ನಾಯಿ ಕೊಡೆಗಳಂತೆ ಶಾಲೆಗಳನ್ನು ಕಟ್ಟಿದ್ದಾರೆ. ಇಂತಹ ಶಾಲೆಗಳು ಆದಾಯಕ್ಕಾಗಿ ಮಾತ್ರವೇ ಹೊರತು, ಉತ್ತಮ ರಾಷ್ಟ್ರ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕಂತೂ ಅಲ್ಲ. ಕಾರಣ ನಮ್ಮೊಳಗಿನ ಅಸಹಾಯಕ, ಅಸಹನೀಯ ಮನೋಭಾವಗಳು. ಇವುಗಳನ್ನು ಹೊಡೆದೊಡಿಸಬೇಕಾಗಿರುವುದು ಹಾಗೂ ಶಾಲೆ ದೇಶಭಕ್ತಿ ಸಾರುವ ಕುಟುಂಬವಾಗಿ ನಿರ್ಮಾಣದ ಜೊತೆಗೆ ಅಭಿವೃದ್ಧಿಯತ್ತ ಬೆಳೆಯಬೇಕಿದೆ.

ಒಮ್ಮೆ ಸ್ವಾಮಿ ವಿವೇಕಾನಂದರು ಜಪಾನ್ ಪ್ರವಾಸದಲ್ಲಿದ್ದರು. ರಾತ್ರಿ ಮಲಗುವಾಗ ಅಲ್ಲಿನ ಒಬ್ಬ ಹುಡುಗನಿಗೆ ಒಂದು ಬಾಳೆಹಣ್ಣು ತರುವಂತೆ ಹೇಳುತ್ತಾರೆ. ಆ ಹುಡುಗ ಹೋದವನು ಬರುವುದೇ ಇಲ್ಲ. ವಿವೇಕಾನಂದರು ಕಾದು ಕಾದು ಮಲಗಲು ಹೋಗುತ್ತಾರೆ. ಆಗ ಹುಡುಗ ಬಾಳೆಹಣ್ಣಿನೊಂದಿಗೆ ಓಡೋಡಿ ಬರುತ್ತಾನೆ. ಏಕೆ ಇಷ್ಟು ಹೊತ್ತು ಎಂದು ಕೇಳಿದಾಗ ಆ ಹುಡುಗ “ನಮ್ಮೂರಿನ ಎಲ್ಲಾ ಅಂಗಡಿಗಳು ಮುಚ್ಚಿದ್ದರೂ ಪಕ್ಕದ ಊರಿಗೆ ಹೋಗಿ ಬರಲು ತಡವಾಯಿಯಿತು. ಒಂದು ಬಾಳೆಹಣ್ಣು ತರಲಿಲ್ಲವೆಂದರೆ ನೀವು ನಿಮ್ಮ ದೇಶಕ್ಕೆ ಹೋಗಿ ಜಪಾನ್ ನಲ್ಲಿ ಒಂದು ಬಾಳೆಹಣ್ಣಿಗೂ ಗತಿಯಿಲ್ಲ ಎಂದು ಹೇಳಬಾರದಲ್ಲವೇ” ಎನ್ನುತ್ತಾನೆ. ಅವನ ದೇಶಪ್ರೇಮವನ್ನು ನೋಡಿ ವಿವೇಕಾನಂದರು ಬೆರಗಾಗುತ್ತಾರೆ. ಅಲ್ಲಿದ್ದಾಗಲೇ ಇನ್ನೊಬ್ಬ ಹುಡುಗನನ್ನು “ಬುದ್ಧ ನಿಮ್ಮ ಆರಾಧ್ಯ ದೈವ, ಅಕಸ್ಮಾತ್, ಭಾರತದಿಂದ ಬುದ್ಧ ನಿಮ್ಮ ಮೇಲೆ ಯುದ್ದಕ್ಕೆ ಬರುತ್ತಾನೆ ಎಂದು ಊಹಿಸಿ. ಆಗ ಏನು ಮಾಡುತ್ತೀರಾ?” ಎಂದು ವಿವೇಕಾನಂದರು ಕೇಳುತ್ತಾರೆ. ಆಗ ಆ ಹುಡುಗ “ಹಾಗೇನಾದರೂ ಆದರೆ ನಾವು ಯುದ್ಧ ಮಾಡಿ ಬುದ್ಧನನ್ನು ಸೋಲಿಸುತ್ತೇವೆ” ಎನ್ನುತ್ತಾನೆ.

ಎಷ್ಟೋ ಮಕ್ಕಳಿಗೆ ಭಾರತದ ಅಸ್ತಿತ್ವ ಮೂಲ ಮಂತ್ರ ದೇಶಭಕ್ತಿ ಎಂಬುದನ್ನು ಮನದಟ್ಟು ಮಾಡುವುದು ಹಿಂದಿಗಿಂತಲೂ ಈಗ ಅನಿವಾರ್ಯ, ಭಾರತೀಯತೆ ಭಾರತದ ಗ್ರಂಥಗಳ, ವೇದಗಳ, ಮಹಾಪುರುಷರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳುವುದು. ಭಾರತ ತನ್ನದೇ ಆದ ಕೆಲವು ವಿಶೇಷತೆಗಳನ್ನು ಹೊಂದಿದೆ. ಜರಾಯುವೆಂಬ ಪೊರೆಯಿಂದ ಗರ್ಭವು ಮುಚ್ಚಲ್ಪಟ್ಟಿದೆ ಎಂದು ಶ್ರೀ ಕೃಷ್ಣ ಭಗವದ್ ಗೀತೆಯಲ್ಲಿ ಬೋಧಿಸಿರುವ ನೆಲ ಭಾರತವೆಂದರೆ ತಪ್ಪಾಗದು. ಆಯುರ್ವೇದ, ಚದುರಂಗ, ದಶಾಂಶ ಪದ್ಧತಿ, ಬೀಜಗಣಿತ, ಕ್ಯಾಲ್ಕುಲಸ್ ಶುರುವಾಗಿದ್ದೇ ಭಾರತದಲ್ಲಿ. ರಾಮಾನುಜರೊಬ್ಬರೇ ಬರೋಬ್ಬರಿ 3542 ಗಣಿತ ಸಿದ್ಧಾಂತಗಳನ್ನು ಬರೆದಿದ್ದಾರೆಂದರೆ ಹೆಮ್ಮೆಯಲ್ಲವೇ? ಹದಿಮೂರನೇ ಶತಮಾನದಲ್ಲಿ ಹಾವು-ಏಣಿ ಆಟವನ್ನು ಮೋಕ್ಷಪತ್ ಎಂಬ ಹೆಸರಿನಿಂದ ಆಡುತ್ತಿದ್ದರು. ಸಂಸ್ಕೃತ ಕಂಪ್ಯೂಟರ್ ಸಾಫ್ಟ್­ವೇರ್­ಗೆ ಸರಿಯಾಗಿ ಹೊಂದುತ್ತದೆ. ವಿಶ್ವದ ಪ್ರಥಮ ವಿಶ್ವವಿದ್ಯಾಲಯ ಶುರುವಾಗಿದ್ದು ತಕ್ಷಶಿಲಾದಲ್ಲಿ. ಇಲ್ಲಿ 10500 ವಿದ್ಯಾರ್ಥಿಗಳು ಸುಮಾರು 60 ವಿಷಯಗಳನ್ನು ಅಭ್ಯಸಿಸಿದ್ದರೆಂದರೆ ಹೆಮ್ಮೆ. . ಇಂದು ಓದಲು ವಿದೇಶಕ್ಕೆ ಹಾರುವ ಎಷ್ಟೋ ವಿದ್ಯಾರ್ಥಿಗಳಿಗೆ ಇದು ಗೊತ್ತೇ ಇಲ್ಲ ಅವರಿಗಿಂತ ಅವರ ಪಾಲಕರಿಗೂ ಅರಿವಿಲ್ಲ.

ದೇಶದ ಸಂರಕ್ಷಣೆಯ ಮರೆತು, ಓಟಿಗೆ ಮುನ್ನ ಜನ ದೇಶದ ಬದಲು ಜಾತಿ, ನೋಟು ನೋಡುತ್ತಿದ್ದಾರೆ. ಆಸೆ ಆಮಿಷಕ್ಕೆ ಬಲಿಯಾಗುತ್ತ ದೇಶಭಕ್ತಿ ಬದಲು ಸ್ವಾರ್ಥ ಬೆಳೆಯುತ್ತಿದೆ. ಜೊತೆಗೆ ಸೌಹಾರ್ದ ಮನಸ್ಥಿತಿಗಳು ಹದಗೆಟ್ಟಿವೆ. ಭ್ರಾತೃತ್ವ ಮನೋಭಾವ ಸಂಶಯಗಳಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಸಂತೈಸುವ ಕಾಲಘಟ್ಟದಲ್ಲಿ ಹಿರಿ ತಲೆಗಳು ಮೌನತಾಳಿವೆ. ಪ್ರತಿ ಪ್ರತಿಭಟನೆಯ ಸಂದರ್ಭಗಳಲ್ಲಿ ಸರಕಾರಿ ವಾಹನಗಳಿಗೆ ಕಲ್ಲು ಎಸೆದು, ಸರ್ಕಾರಿ ಆಸ್ತಿ ನಮ್ಮದೇ ಎಂಬ ಪರಿಜ್ಞಾನವೂ ಇರದೇ, ಮಂಕಾಗಿ ಬೂದಿಮುಚ್ಚಿದ ಕೆಂಡದಂತೆ ದ್ವೇಷ ಅಸೂಯೆಗಳು ಮನೆಮಾಡಿವೆ. ಬಾಹ್ಯ ಶಕ್ತಿಗಳು ಭಾರತವನ್ನು ದುರ್ಬಲವಾಗಿಸಲು ಹೊಂಚು ಹಾಕಿ ಕುಳಿತಿವೆ. “ಭಾರತ ವಿಶ್ವಗುರು”ವಾಗಿ ಮೆರೆಯಬೇಕೆಂದರೆ ‘ಭಾರತೀಯತೆ’ ಬೆಳೆಯಬೇಕು. ಅಂದರೆ ದೇಶಾಭಿಮಾನ ಆತ್ಮಸಮ್ಮಾನ ಪ್ರತಿ ಭಾರತಿಯನಲ್ಲೂ ಜಾಗೃತಿಯಾಗಬೇಕು.

ಬಾಯಿಮಾತಲ್ಲಿ ಮಾತ್ರ ದೇಶಭಕ್ತಿ ಎನ್ನದೇ ತನು, ಮನ, ಧನ ಅರ್ಪಿಸಿ ಧನ್ಯನಾಗುವ ಕುವರರ ಅವಶ್ಯಕತೆ ಇದೆ. ಸ್ವಾಮಿ ವಿವೇಕಾನಂದರ ರಾಷ್ಟ್ರದ ಸಂಸ್ಕೃತಿಗಳ ಪ್ರಭಾವದಿಂದಾಗಿ ಇಡೀ ವಿಶ್ವ ನಿಬ್ಬೆರಗಾಗಿಸಿದ ಕೀರ್ತಿಗೆ ಸರಿಸಮನಾರು? . . .

-ಶಿವಲೀಲಾ ಹುಣಸಗಿ ಯಲ್ಲಾಪುರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x