ಕನ್ನಡದ ಸಾಹಿತ್ಯದಲ್ಲಿ ಜ್ಯೋತಿ, ಹಣತೆ, ದೀಪ ಈ ಪದಗಳು ಯಾವುದೋ ಒಂದು ವಿಚಾರದ ಘನತೆ ಅಥವಾ ಹೆಮ್ಮೆಯ ಸಂಕೇತವಾಗಿ ಬಂದು ಹೋಗುತ್ತವೆ. ಸು 16ನೇ ಶತಮಾನದಲ್ಲಿ ಜೀವಿಸಿದ್ದ ಸರ್ವಜ್ಞ ಜಾತಿ ವ್ಯವಸ್ಥೆಯ ವಿರುದ್ದ ಮಾತುನಾಡುವಾಗ “ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ” ಎಂದಿದ್ದಾನೆ. ಅಂದರೆ ಜಾತಿಗನ ಮನೆಯೇ ಆಗಿರಲಿ ಜಾತಿ ಹೀನನ ಮನೆಯೇ ಆಗಿರಲಿ ಹಣತೆಯ ಕೆಲಸವೇನಿದ್ದರೂ ಬೆಳಕನ್ನು ನೀಡುವುದು. ಅದು ಯಾವುದೇ ತಾರತಮ್ಯ ಮಾಡುವುದಿಲ್ಲ. ಅದಕ್ಕಾಗಿಯೇ ಚೆನ್ನವೀರ ಕಣವಿ ಅವರು “ಅರಿವೇ ಗುರು; ನುಡಿ ಜ್ಯೋತಿರ್ಲಿಂಗ” ಎಂದಿದ್ದಾರೆ. ಆದೆನೇ ಇರಲಿ. ಕನ್ನಡ ಕವಿಗಳು ಹಣತೆಯನ್ನು ವಸ್ತುವಾಗಿಟ್ಟು ಕವಿತೆಗಳನ್ನು ರಚಿಸಿ, ಆ ಮೂಲಕ ಸೃಹಯನಿಗೆ ಯಾವ ಬಗೆಯ ಸವಿಯನ್ನು ಉಣಿಸಬಡಿಸಲೆತ್ತಿಸಿದ್ದಾರೆ ಎಂಬುದನ್ನು ಈ ಲೇಖನದ ಮೂಲಕ ಅರ್ಥೈಸಿಕೊಳ್ಳೋಣ. ಪ್ರಮುಖವಾಗಿ ಶಿ ಎಸ್ ಶಿವರುದ್ರಪ್ಪ, ಕೆ ಎಸ್ ನರಸಿಂಹಸ್ವಾಮಿ, ಬೇಂದ್ರೆ, ಎಸ್ ವಿ ಪರಮೇಶ್ವರ ಭಟ್ಟ, ಡಿ ಎಸ್ ಕರ್ಕಿ ಮುಂತಾದ ಕವಿಗಳ ರಚನೆಯನ್ನು ಇಲ್ಲಿ ಆಯ್ದುಕೊಳ್ಳಲಾಗಿದೆ.
ಮೊದಲಿಗೆ ಡಿ ಎಸ್ ಕರ್ಕಿ ಅವರು ಹಚ್ಚಿರುವ ದೀಪ ಅಂತಿಂಥದ್ದಲ್ಲ ! ಅದು ಕನ್ನಡದ ದೀಪ. ಒಲವನ್ನು ಎತ್ತಿ ಹಿಡಿಯುವ ದೀಪ. ಕನ್ನಡ ನಾಡಿನ ಕಂಪನ್ನು ಸಾರಲು ಕವಿತೆಯೆಂಬ ದೀಪವನ್ನು ಡಿ ಎಸ್ ಕರ್ಕಿ ಹಚ್ಚಿದ್ದಾರೆ. ತಲೆತಲೆಮಾರುಗಳಿಂದ ನಾವು ಮೈಮರೆತು ಕೂತಿದ್ದೇವೆ. ಮೈಮರೆವಿನಿಂದ ಹುಟ್ಟಿರುವಂತಹ ಕೊಳೆ ಏನಿದೆಯೋ ಅದನ್ನೆಲ್ಲಾ ತೊಡೆದು ಹಾಕಿ ಕನ್ನಡದ ಕಂಪನ್ನು ಪಸರಿಸಲು ನಾವು ಕೈಯ ಚಾಚಬೇಕಿದೆ. ಹಣತೆ ಹಚ್ಚಬೇಕಿದೆ.ನಡು ನಾಡೋ ಗಡಿನಾಡೋ ಯಾವುದೂ ಲೆಕ್ಕಕ್ಕಿಲ್ಲ ಈಗ ಕನ್ನಡದ ಕಂಪನ್ನು ಪಸರಿಸಬೇಕಿದೆ. ಏಕೆಂದರೆ ಈಗಾಗಲೇ ನಾವು ಮೈಮರೆವಿನಿಂದ ಎಚ್ಚೆತ್ತುಕೊಂಡಿದ್ದೇವೆ. ದ್ವೇಷದಿಂದಲ್ಲ ಒಲವಿನಿಂದ ನಮ್ಮ ದೇಹದ ನರನಾಡಿಗಳೇನಿದೆಯೋ ಅದನ್ನೆಲ್ಲಾ ಕನ್ನಡಕ್ಕೆ ಹುರಿಯಾಗಿ ಹೊಸೆದು ಕನ್ನಡದ ದೀಪವನ್ನು ಹಚ್ಚಬೇಕಾಗಿದೆ. ಅದನ್ನೇ ಕವಿ ಹಚ್ಚೇವು ಕನ್ನಡದ ದೀಪ ಎಂದಿದ್ದಾರೆ.
ಇಲ್ಲಿ ದೀಪ ಕೇವಲ ದೀಪವಲ್ಲ. ಕನ್ನಡಿಗರ ಸ್ವಾಭಿಮಾನ, ಕನ್ನಡಿಗರ ಅಭಿಮಾನ, ಕನ್ನಡಿಗರ ಪ್ರೀತಿ. ಕನ್ನಡಕ್ಕಾಗಿ ಜನ ಯಾವ ತ್ಯಾಗಕ್ಕಾದರೂ ಸಿದ್ಧರಿರುತ್ತಾರೆ ಎಂಬುದನ್ನು ಈ ಕವಿತೆ ತಿಳಿಯಪಡಿಸುತ್ತಿದ್ದಾರೆ. ಅದನ್ನೇ ಮುಂದಿನ ಸಾಲಿನಲ್ಲಿ :
ನಮ್ಮವರು ಗಳಿಸಿದ ಹೆಸರ ಉಳಿಸ
ಲೆಲ್ಲಾರು ಒಂದುಗೂಡೇವು
ನಮ್ಮದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆ ಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು
ತೊರೆದೇವು ಮರುಳ, ಕಡೆದೇವು ಇರುಳ
ಪಡೆದೇವು ತಿರುಳ ಹಿಡಿನೆನಪ
ಕರುಳೆಂಬ ಕುಡಿಗೆ ಮಿಂಚನ್ನೇ ಮುಡಿಸಿ
ಹಚ್ಚೇವು ಕನ್ನಡದ ದೀಪ.
ಇಲ್ಲಿ ಕನ್ನಡಿಗರ ಕನ್ನಡ ಪ್ರೇಮ, ಅಭಿಮಾನ, ಕನ್ನಡಿಗರಿಗೆ ಇರುವ ಜವಾಬ್ದಾರಿ ಎಲ್ಲವೂ ಎದ್ದು ಕಾಣುತ್ತಿದೆ. ಇದೆಲ್ಲದರ ಪೂರಕವಾಗಿ ಮರಳುತನವನ್ನು ತೊರೆಯಲು, ಕತ್ತಲನ್ನು ಕಳೆಯಲು, ಬದುಕಿನ ತಿರುಳನ್ನ ಅರ್ಥಮಾಡಿಕೊಳ್ಳಲು ಕರುಳೆಂಬ ಕುಡಿಗೆ ಮಿಂಚನ್ನೇ ಮುಡಿಸಿ ಹಚ್ಚೇವು ಕನ್ನಡದ ದೀಪ ಎಂದಿದ್ದಾರೆ ಕವಿ. ಒಟ್ಟಾರೆ ಡಿ ಎಸ್ ಕರ್ಕಿ ಅವರು ಹಚ್ಚಿದ ದೀಪ ಕನ್ನಡದ ದೀಪ, ಕನ್ನಡಿಗರ ಅಭಿಮಾನ ದೀಪ, ಕನ್ನಡಿಗರನ್ನು ಎಚ್ಚರಿಸುವ ದೀಪ. ಕನ್ನಡ ನಾಡಿನಲ್ಲಿ ಶಾಶ್ವತವಾಗಿ ಬೆಳಗುವ ದೀಪ.
ಇನ್ನೂ ಪ್ರೇಮ ಕವಿ ಕೆ ಎಸ್ ನರಸಿಂಹಸ್ವಾಮಿ ಅವರು ತಮ್ಮ ಕಾವ್ಯದಲ್ಲಿ ತಂದಿರುವ ದೀಪ ಬಣ್ಣನೆ ವಿಭಿನ್ನ. ದೀಪಾವಳಿ ಎಂಬ ಕವಿತೆಯಲ್ಲಿ ಕವಿ ಹೀಗೆ ಹೇಳುತ್ತಾರೆ.
ಹೂವು ಬಿಟ್ಟ ಬಳ್ಳಿಗೆ ದೀಪದಂತೆ ಕಾಣುತ್ತದೆ. ಬಳ್ಳಿಯ ಬೆಳೆಕೇ ಹೂವಲ್ಲವೆ ? ಆಗೇ ಬಯಲಿಗೆ ಹಸಿರೇ ಬೆಳಕು, ಬೆಳಕಿನ ದೀಪ. ಕಾಡಿನಲ್ಲಿ ಹುಲಿಯ ಕಣ್ಣೇನಿದೆಯೋ ಅದೇ ದೀಪ. ಕತ್ತಲಿನ ದಾರಿಯಲಿ ಬೆಕ್ಕಿನ ಕಣ್ಣಿನ ಬೆಳಕಿನ ರೀತಿ. ಕಡಲಿನಲ್ಲಿ ಮುತ್ತು, ಗಾಳಿಗೆ ಪಕ್ಷಿ, ಬಾನಿಗೆ ಗ್ರಹತಾರೆಗಳು ದೀಪವಾಗಿರುತ್ತವೆ ಎಂಬುದಾಗಿ ಕವಿ ಹೇಳಿದ್ದಾರೆ. ಮುಂದಿನ ಸಾಲುಗಳಲ್ಲಿ :
ಬಲ್ಮೆ ತೋಳಿಗೆ ದೀಪ
ದುಡಿಮೆ ಬೆವರಿನ ದೀಪ
ಸಹನೆ ಅನುಭವ – ದೀಪ ಬದುಕಿನಲ್ಲಿ
ಮುನಿಸು ಒಲವಿಗೆ ದೀಪ
ಉಣಿಸು ಒಡಲಿಗೆ ದೀಪ
ಕರುಣೆ ನಂದಾದೀಪ ಲೋಕದಲ್ಲಿ
ಈ ಸಾಲುಗಳನ್ನು ಗಮನಿಸಿದಾಗ ದುಡಿಮೆಗೆ ತಕ್ಕ ಬೇವರಿರಬೇಕು, ಮನುಷ್ಯ ಎಂದಮೇಲೆ ಕಿಂಚಿತ್ತಾದರೂ ಕರುಣೆ ಇರಬೇಕು. ಹಸಿವಿಗೆ ದಕ್ಕುವ ಉಣಿಸು ಏನಿದೆಯೋ, ಒಲವಿನಲ್ಲಿ ಮುನಿಸೇನಿದೆಯೋ ಇದೆಲ್ಲವೂ ಕೂಡ ಒಂದು ಬಗೆಯ ದೀಪ. ಅವುಗಳಿಂದ ಹೊಮ್ಮುವ ಬೆಳಕು ಸಾಮಾನ್ಯ ಬೆಳಕಲ್ಲ. ಬದುಕಿನ ದಿಕ್ಕನ್ನೇ ಬದಲಿಸುವ ಬೆಳಕು. ಅದಕ್ಕಾಗಿಯೇ ಕವಿ ಇವುಗಳನ್ನು ದೀಪಕ್ಕೆ ಹೋಲಿಸಿದ್ದಾರೆ.
ಬೆಳಕಿನ ಅಸ್ತಿತ್ವವನ್ನು ಅಣಕಿಸುವ ಕತ್ತಲೆಗೆ ತಕ್ಕ ಉತ್ತರ ಕೇಳಿ ಬಂದೇ ಬರುತ್ತದೆ. ದೀಪಾವಳಿಯ ಜ್ಯೋತಿ ಅಭಯ ಹಸ್ತವನೆತ್ತಿ ಶುಭ ಕೋರಿಯೇ ಕೋರುತ್ತದೆ ಎಂದಿದ್ದಾರೆ ಕವಿ. ಇಲ್ಲಿ ಹಣತೆ ಭರವಸೆಯಾಗಿ, ಭರವಸೆಯ ಬೆಳಕಾಗಿ ಕೆಲಸ ಮಾಡುತ್ತಿರುವುದನ್ನು ನಾವು ಗಮನಿಸಬಹುದು.
ಇನ್ನೂ ದೇಹ ಮತ್ತು ಆತ್ಮನಂತೆ ದೀಪ ಮತ್ತು ಗಾಳಿ ಎರಡೂ ಕಾಣದ ಕೈಯಲ್ಲಿದೆ. ಆ ಕಾಣದ ಕೈ ಯಾವ ಆಯ್ಕೆ ತೆಗೆದುಕೊಳ್ಳಬಹುದೋ ಏನೋ ? ಆದರೆ ಕವಿ ಮಾತ್ರ “ದೀಪವೂ ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು” ಎಂಬುದಾಗಿ ಪ್ರಾರ್ಥನೆಯನ್ನು ಮಾಡಿದ್ದಾರೆ. ಇಲ್ಲಿ ಕವಿಯ ಆಶಯ ಪ್ರೀತಿಯೆಂಬುದು ಸದಾ ಹಬ್ಬಿ ನಲಿಯುತ್ತಿರಬೇಕೆಂದು. ಇಲ್ಲಿ ಹಣತೆ ಒಂದು ವಿಶೇಷವೇ ಸರಿ.
ಮುಂದೊಂದು ಕವಿತೆಯಲ್ಲಿ ಕೆ ಎಸ್ ನರಸಿಂಹಸ್ವಾಮಿ ಅವರು ತನ್ನ ಬಾಳ ಸಂಗಾತಿಯನ್ನು ಕುರಿತು :
ದೀಪವನು ಹಚ್ಚಿ ಬಹ ಹೆಣ್ಣೆ ! – ಆ ಬೆರಳ
ಮಿಂಚಿನಲಿ ಬಳ್ಳಿ ಬರೆದಂತೆ
ಹಣತೆಗಳ ನಡುವೆ ಹೊಂಬೆರಳು ಹರಿದಾಡುತ್ತಿದೆ
ವೀಣೆಯಲಿ ಬೆರಳು ಬರುವಂತೆ.
ಇಲ್ಲಿ ದೀಪವನ್ನು ಹಚ್ಚಿ ತಂದ ಹೆಣ್ಣಿನ ವರ್ಣನೆಯನ್ನು ಕವಿ ಮಾಡಿದ್ದಾರೆ. ಆ ದೀಪದ ಬೆಳಕಿನಲ್ಲಿ ಆಕೆ ಕೈಬೆರಳುಗಳು ಹೇಗೆ ಹರಿದಾಡುತ್ತಿದೆ ಎಂಬುದನ್ನು ಕವಿ ಬಣ್ಣಿಸಿದ್ದಾರೆ. ಆದರೆ ಅದೆ ಕವಿತೆಯಲ್ಲಿ ಕವಿ :
ಹಣತೆಯನು ಹಚ್ಚಿ ಬಿಡು,
ಬಾಗಿಲಲಿ ಇಟ್ಟುಬಿಡು
ನಿನ್ನಿಂದ ದೀಪಾವಳಿ
ಬರುವ ಸಡಗರದಲ್ಲೆ
ಮುತ್ತೊಂದ ಕೊಟ್ಟು ಬಿಡು
ಕೊಡೆನೆಂದು ನಗುತ ಹೇಳಿ.
ಇಲ್ಲಿ ಹಣತೆ ಪ್ರೀತಿ ನಿವೇದನೆಗೆ ಸಹಕರಿಸುವಂತಿದೆ. ಪ್ರೀತಿಯ ಪ್ರತಿಕವಾಗಿ ಕೆಲಸ ಮಾಡುತ್ತಿದೆ.
ಮುಂದೆ ಜಿ ಎಸ್ ಶಿವರುದ್ರಪ್ಪ ಅವರು ತಮ್ಮ ಹಣತೆ ಎಂಬ ಕವಿತೆಯಲ್ಲಿ ಹಣತೆ ಸಣ್ಣದಾದರೂ ದೊಡ್ಡದಾಗಿದ್ದರೂ ಅದರ ಕೆಲಸ ಬೆಳಕನ್ನು ನೀಡುವುದಷ್ಟೇ… ಅರಮನೆಯಲ್ಲೇ ಇರಲಿ ಕಿರುಮನೆಯಲ್ಲೆ ಇರಲಿ; ಬೆಳಗುವುದಷ್ಟೇ ಅದರ ಕರ್ತವ್ಯ. ಸೂರ್ಯ ಧರೆಗೆ ಹಿರಿದಾದ ಬೆಳಕಾದರೆ, ಹಣತೆ ಕಿರಿದಾದ ಬೆಳಕು ಮಣ್ಣಿನ ಗುಡಿಸಲಿಗೆ. ತಾರೆಯಲಿ ಹೊಳಪು, ಬೆಂಕಿಯಲ್ಲಿ ಬಿಸಿ ಹೀಗೆ ನಾನಾ ಬಗೆ.
ಅದಕ್ಕಾಗಿಯೇ ಕವಿ :
ಕಿರಿಹಣತೆ ಕಿರಿದಾದರೇನು ?
ಬೆಳಕ ಬೀರುವ ಶಕ್ತಿ ಹಿರಿದಲ್ಲವೇನು ? – ಎಂದಿದ್ದಾರೆ.
ಮತ್ತೊಂದು ಕವಿತೆಯಲ್ಲಿ ಜಿ ಎಸ್ ಎಸ್ ಹಣತೆ ಹಚ್ಚುತ್ತೇನೆ ನಾನೂ ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ ಎಷ್ಟೋ ದೀಪಾವಳಿಯ ಹಡುಗುಗಳೇ ಇಲ್ಲಿ ಮುಳುಗಿರುವಾಗ ನಾನು ಹಚ್ಚುವ ಹಣತೆ ಶಾಶ್ವತ ಎಂಬ ಭ್ರಮೆಯಿಂದಲ್ಲ ಎನ್ನುತ್ತಾರೆ. ಇಲ್ಲಿ ಯಾರೂ ಯಾವುದು ಶಾಶ್ವತವಲ್ಲವೆಂಬುದು ಕವಿಯ ನಿಲುವು.
ಹೀಗಿದ್ದೂ ಯಾವ ಕಾರಣಕ್ಕಾಗಿ ಕವಿ ಹಣತೆ ಹಚ್ಚಲು ಹಂಬಲಿಸುತ್ತಿದ್ದಾರೆ ಎಂದರೆ:
ಹಣತೆ ಹಚ್ಚುತ್ತೇನೆ ನಾನೂ
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ ನಾನು ಯಾರೋ
ಕವಿ ಇಲ್ಲಿ ಹಣತೆಯ ಬೆಳಕೂ ಶಾಶ್ವತವಲ್ಲ ಎಂದಿದ್ದಾರೆ. ನಶ್ವರ, ಜೀವಾತ್ಮವಿದ್ದಂತೆ. ಎಣ್ಣೆ ತೀರಿದ ಹಣತೆ ಹೇಗೆ ನಂದುವುದೋ ಆಗೇ ಬದುಕೂ ಕೂಡ. ಹಚ್ಚಿದ ಹಣತೆಯ ಬೆಳಕಿನಲ್ಲಿ ಇರುವಷ್ಟು ಹೊತ್ತು ಒಬ್ಬರ ಮುಖ ಒಬ್ಬರು ನೋಡಿಕೊಂಡುಬಿಡೋಣ. ಹಣತೆ ಆರಿದ ಮೇಲೆ ನೀನ್ಯಾರೋ, ನಾನ್ಯಾರೋ ಎಂದಿರುವುದು ಬದುಕಿನಲ್ಲಿ ವ್ಯಕ್ತಿ ಆಯುಷ್ಯ ಮುಗಿಯುವುದರ ಸಂಕೇತವೂ ಹೌದು.
ಇನ್ನೂ ಬೇಂದ್ರೆ ತಮ್ಮ ದೀಪ ಎಂಬ ಕವಿತೆಯಲ್ಲಿ ಶೃಂಗಾರಮಾಸದ ಸಮಯದಲ್ಲಿ ನಲ್ಲೆಯ ಜೊತೆಗೂಡಿ ನದಿ ತಡದಲಿ ನಿಂತು ಸಾನುರಾಗದಿಂದ ತೇಲಿಬಿಟ್ಟೆವೇ ದೀಪ ತೇಲಿ ಬಿಟ್ಟೆವು ಎಂದಿದ್ದಾರೆ. ಇಲ್ಲಿ ದೀಪ ಒಲವಿನ ಪ್ರತೀಕವಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.
ಮುಂದೆ ಈ ಮಹತ್ವದ ಕವಿತೆಗಳ ಸಾಲಿನೊಳಗೆ ಹೇಳದೇ ಬಿಡಲಾಗದ ಕವಿತೆಯೆಂದರೆ ಅದು ಎಸ್ ವಿ ಪರಮೇಶ್ವರ ಭಟ್ಟರ ದೀಪ ಹಚ್ಚ ಕವಿತೆ. ಒಬ್ಬ ಹೆಣ್ಣು ಮಗಳು ತನ್ನ ನಲ್ಲನನ್ನು ಒಲವಿನ ದೀಪವನ್ನು ಹಚ್ಚುವಂತೆ ಕಳಕಳಿಯಿಂದ ಇಲ್ಲಿ ಕೇಳಿಕೊಳ್ಳುತ್ತಿದ್ದಾಳೆ :
ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ
ನೀ ಬಂದು ನಿಂದಿಲ್ಲಿ ದೀಪ ಹಚ್ಚ
ನಲ್ಲ ನೀ ಬಂದಂದು ಕಣ್ಣಾರೆ ಕಂಡಂದು
ಮನೆಯೆಲ್ಲ ಹೊಳೆದಂತೆ ದೀಪ ಹಚ್ಚ
ಆಕೆ ತನ್ನ ಪ್ರೀತಿಯ ಕರೆಯನ್ನಾದರೂ ಕೇಳಿ ಈ ಆತ್ಮ ನಿನಗಾಗಿ ಮೊರೆಯಿಡುತ್ತಾ ಇರುವುದನಾದರೂ ಅರಿತು ನಲ್ಲ ನೀನಿಲ್ಲಿಗೆ ಬಂದು ಒಲವಿನ ದೀಪ ಹಚ್ಚಬಾರದೆ ? ಎಂದು ಕೇಳುವಂತಿದೆ ಕವಿತೆ. ಕತ್ತಲೆಂಬುದೇ ನನ್ನ ಪಾಡು ನೋಡಲಾಗದೆ ಕಣ್ಣೀರು ಸುರಿಸು ನಿಂತಿದೆ. ಬಾನಿನ ಅಂಗಳದಲ್ಲಿ ಚುಕ್ಕಿ ತಾರೆಗಳು ಮೂಡಿರುವಂತೆ ನನ್ನ ಮನದಂಗಳದಿ ನೀನು ಒಲವೆಂಬ ದೀಪವನ್ನು ಹಚ್ಚಿಸಬಾರದೆ ಎಂಬುದು ಆ ಹೆಣ್ಣಿನ ಬಯಕೆ. ಮುಂದಿನ ಸಾಲುಗಳ ಸುಮಧುರತೆ :
ಹಳೆಬಾಳು ಸತ್ತಿತ್ತು ಕೊಳೆಬಾಳು ಸುಟ್ಟಿತು
ಹೊಸಬಾಳು ಹುಟ್ಟಿತ್ತು ದೀಪ ಹಚ್ಚ
ಪ್ರೀತಿಯರತಿಗೆ ನೀ ಬೆಳಕಿನ ಆರತಿ
ಬೆಳಗಿ ಕಲ್ಲಾರತಿ ದೀಪ ಹಚ್ಚ
ಈ ಸಾಲುಗಳು ಹೇಳಲೋರಟಿರುವ ಧಾಟಿ ನೋಡಿ. ಈ ಹಿಂದೆ ಏನಾಗಿದೆಯೋ ಅದರ ಅಗತ್ಯವಿಲ್ಲ ಈಗ. ಪ್ರಸ್ತುತ ಹೊಸ ಬಾಳಿನ ಕಡೆಗೆ ಗಮನ ಕೊಡುವ ಆ ಬಾಳಿಗೆ ಆರತಿ ಬೆಳಗಿ ಒಲವಿನ ಹಣತೆ ಹಚ್ಚು ಎನ್ನುತ್ತಿದ್ದಾಳೆ ಕಾವ್ಯ ನಾಯಕಿ. ನೀನು ಜ್ಯೋತಿ ನಾನು ಪತಂಗ. ನನಗೆ ಗೊತ್ತು ಜ್ಯೋತಿಯ ಸಹವಾಸಕ್ಕೆ ಹೋದರೆ ಸುಟ್ಟು ಬೂದಿಯಾಗುತ್ತೇನೆ. ಆದರೆ ನಮ್ಮ ಪ್ರೀತಿ ನಿಜವೇ ಆಗಿದ್ದರೆ ಸೋಲಾಬೇಕಾಗಿರುವುದು ನಾವಲ್ಲ ಎನ್ನುವ ಆಕೆ :
ನೀನೆಂಬ ಜ್ಯೋತಿಯಲಿ ನಾನೆಂಬ ಪತಂಗ
ಸೋತ ಉಲಿ ಹೇಳಲಿ ದೀಪ ಹಚ್ಚ – ಎಂದಿದ್ದಾಳೆ.
ಆಕೆ ತನ್ನ ಅಂತರಂಗದಿ ಅವನೆಂಬ ದೀಪ ಎಂದೂ ನಂದಿ ಹೋಗದೆ ನಂದಾದೀಪವಾಗಿರಲಿ ಎಂದು ಪ್ರಾರ್ಥಿಸಿಕೊಂಡಿದ್ದಾಳೆ. ಇಲ್ಲಿ ಎಸ್ ವಿ ಪರಮೇಶ್ವರ ಭಟ್ಟರು ಬೆಳಗಿಸಿರುವ ಹಣತೆ ಒಲವಿನ ಹಣತೆಯಾಗಿದೆ.
ಒಟ್ಟಾರೆಯಾಗಿ ಕನ್ನಡ ಸಾಹಿತ್ಯದಲ್ಲಿ ನಾನಾ ಬಗೆಯಲ್ಲಿ ಹಣತೆಯನ್ನು ಬೆಳಗಿಸಿದ ಕವಿಗಳು ಅಪಾರವಾಗಿ ಇದ್ದರಾದರೂ ನಾನು ಕೇಲವೇ ಕೆಲವು ಕವಿಗಳ ಕವಿತೆಗಳನ್ನು ಆಯ್ದುಕೊಂಡು ಅವರು ಬೆಳಗಿಸಿದ ಕನ್ನಡದ ಹಣತೆ, ಒಲವಿನ ಹಣತೆ, ಜ್ಞಾನದೀಪ್ತಿಯ ಬಗ್ಗೆ ಸುದೀರ್ಘವಾಗಿ ಈ ಲೇಖನದಲ್ಲಿ ಚರ್ಚಿಸಿದ್ದೇನೆ. ಹಣತೆಯನ್ನು ಬೆಳಗುವುದೆಂದರೆ ಸುಲಭದ ಮಾತಲ್ಲ; ಗಾಳಿ, ಮಳೆಗೆ ಸಿಕ್ಕಿ ನಂದದಂತೆ ಎಚ್ಚರವಹಿಸಬೇಕು. ಸದಾ ಬೆಳಗುತ್ತಿರುವಂತೆ ಕಾಯ್ದುಕೊಳ್ಳಬೇಕು. ಬೆಳಕು ನೀಡುವುದಷ್ಟೇ ಹಣತೆಯ ಕೆಲಸ.
-ಮನು ಗುರುಸ್ವಾಮಿ