ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸದ ಹೊರೆ ಜಾಸ್ತಿ ಇರುತ್ತೆ.ಪ್ರತಿ ದಿನ ಪ್ರಯಾಣ, ಬೆಳಿಗ್ಗೆಯಿಂದ ಸಂಜೆವರೆವಿಗೂ ವೃತ್ತಿ ನಂತರ ಸಂಜೆ ರಾತ್ರಿಯಾಗಿ ಇಡೀ ದಿನದ ಆಗು ಹೋಗುಗಳ ಅರಿವೇ ಇಲ್ಲದಂತಾಗುತ್ತೆ, ಆದರೂ ನಮ್ಮ ಸುತ್ತ-ಮುತ್ತಲಿನ ವಿದ್ಯುನ್ಮಾನಗಳೆಲ್ಲ ನಾವು ತಿಳಿದುಕೊಂಡು ವಿದ್ಯಾರ್ಥಿಗಳಿಗೆ ಅವರ ಜ್ಞಾನಾರ್ಜನೆಯಲ್ಲಿ ಪ್ರಗತಿ ಕಾಣುವಂತೆ ಮಾಡಬೇಕಾಗುತ್ತೆ.
ಸಮಾಜದಲ್ಲಿ ಶಿಕ್ಷಕರಿಗೆ ಅತ್ಯಂತ ಗೌರವ ದೃಷ್ಠಿಯಿಂದ ಸ್ವೀಕರಿಸಿದರೂ ಶಿಕ್ಷಕರಿಗೂ ಅಂತಃಕರಣ ವಿರುತ್ತೆ ಅವರದೇ ಆದ ಅನೇಕ ಸಮಸ್ಯೆಗಳು ಅವರೊಂದಿಗೆ ಮನದ ಮೂಲೆಯಲ್ಲಿ ಚರ್ಚಾ ಗೋಷ್ಠಿಗಳನ್ನೇ ಏರ್ಪಡಿಸಿರುತ್ತವೆ. ಇವುಗಳನ್ನು ಗೌಣವಾಗಿಟ್ಟುಕೊಂಡು ಮೇಲ್ನೋಟಕ್ಕೆ ಹಸನ್ಮುಖಿಗಳಾಗಿ ಎಲ್ಲರಿಗೂ ಕಾಣಿಸಿಕೊಳ್ಳುತ್ತಾರೆ. ಬದುಕು ನಿತ್ಯದ ಬವಣೆಗಳೊಂದಿಗೆ ಸಾಗಿರುತ್ತದೆ. ಹೋರಾಟ ಒಂದು ಕಡೆಯಾದರೆ ಮತ್ತೊಂದುಕಡೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವಲ್ಲಿಯು ಅತ್ಯಂತ ಶ್ರಮದ ಕಾಯಕ ಮಾಡಬೇಕಾಗಿರುತ್ತದೆ. ಶಾಲೆಯಲ್ಲಿ ಶಿಸ್ತು, ಸಂಯಮ ದಿಂದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವಲ್ಲಿ ಅವರಿಗೆ ಪಾಠ, ಪ್ರವಚನಗಳೇ ಅವರ ಶ್ರಮ. ಪ್ರತಿ ಅವಧಿ ಅವಧಿಗೂ ಅವರಿಗಾಗಿಯೇ ಶಕ್ತಿ ಮತ್ತು ಸಮಯವನ್ನು ಮೀಸಲಿಡಬೇಕಾಗುತ್ತದೆ. ಒಂದು ದಿನ ಪೂರ್ತಿಯಾದರೇ ಸಾಕು ನೆಮ್ಮದಿಯ ನಿದ್ದೆ ಕಳೆದು ಮತ್ತೆ ನಾಳಿನ ಸರ್ಕಸ್ಸಿಗೆ ಸಿದ್ಧವಾಗಬೇಕಾಗುತ್ತದೆ.
ಹೀಗಿರುವಾಗ ಒಂದು ದಿನ ನಾನು ಮತ್ತು ನನ್ನ ಮಗಳು ಬಸ್ಸಿನಿಂದ ಬರುತ್ತಿರುವಾಗ ನನಗೆ ಕೆಮ್ಮು ಇದ್ದಕ್ಕಿದ್ದಂತೆ ಶುರುವಾಯ್ತು, ಸ್ವಲ್ಪ ನೀರು ಕುಡಿದೆ. ಮಗಳು ಜತೆಗಿದ್ದಳು, ಮತ್ತೆ ಮತ್ತೆ ಕೆಮ್ಮು ಶುರುವಾಗ್ತಾನೇ ಇತ್ತು, ಕೆಮ್ಮುತ್ತಿದ್ದೆ ಕೆಮ್ಮುತ್ತಿದ್ದೆ, ಅಕ್ಕ ಪಕ್ಕದಲ್ಲಿ ಕುಳಿತಿದ್ದ ಸಹ ಪ್ರಯಾಣಿಕರು ನನ್ನತ್ತ ನೋಡಿ ಅವರಿಗೆ ಅವರ ಆರೋಗ್ಯದ ತೊಂದರೆಯಾದಿತು ಎಂಬ ಕಾರಣದಿಂದ ಬೇರೆ ಬೇರೆ ಕಡೆ ಹೋಗಿ ಕೂತುಕೊಂಡರು. ನಾನು ಎಷ್ಟೇ ತಡೆದರೂ ಕೆಮ್ಮು ಜಾಸ್ತಿನೇ ಆಯ್ತು, ಕೆಮ್ಮುತ್ತಿದ್ದ ನಾನು ಪರಿಸರವನ್ನು ಗಮನಿಸುತ್ತಿದ್ದೆ, ಕಣ್ಣುಗುಡ್ಡೆ ಕಿತ್ತು ಬರುವ ಅನುಭವ ನನಗಾಗುತ್ತಿತ್ತು. ಕಣ್ಮುಚ್ಚಿದರೆ ನಕ್ಷತ್ರಗಳಂತೆ ಕಾಣುವುದು, ಬೆವತು ಹೋಗುವಷ್ಟು ಬೆವರು, ಮಗಳಿಗೆ ಗಾಬರಿಯಾಯಿತು, ಅವಳು ಅಳುವುದಕ್ಕೆ ಶುರುಮಾಡಿದಳು ಅಳುತ್ತಲೆ ನನ್ನೆದೆಯ ಮೇಲೆ ತನ್ನ ಕೈಗಳಿಂದ ಸಾಂತ್ವಾನ, ಸಮಾಧಾನ ಮಾಡುತ್ತಾ ನೆವರಿಸುತ್ತಿದ್ದಳು. ಕೆಲವರು ನನ್ನತ್ತ ನೋಡಿ, ನೀರು ಬೇಕಾ ಎಂದರೂ ಸುಮ್ಮನೆ ಇರಿ ಏನುಗಾಬರಿ ಪಡುವಂಥದಿಲ್ಲ ಎನ್ನುತ್ತಿದ್ದರು. ಆ ದಿನದ ಆ ಘಳಿಗೆಯ ಆ ಕೆಮ್ಮು ವಿಪರೀತದ ರೂಪಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಕೆಮ್ಮಿ ಕೆಮ್ಮಿ ಕಣ್ಣುಗಳಿಗೆ ಕತ್ತಲೆ ಆವರಿಸಿತು, ನಾನು ಕಣ್ಮುಚ್ಚಿದೆ ಕೆಮ್ಮು ಇದ್ದಕ್ಕಿದ್ದಂತೆ ಶಾಂತವಾಯಿತು. ನನ್ನ ದಾಹವೆಲ್ಲ ಬೆವರಾಗಿ ಹರಿದು ಹೋಗಿದ್ದು ತಣ್ಣನೆಯ ಸ್ಪರ್ಶ ನನಗಾದಂತೆ ಭಾಸವಾಯಿತು, ನಾನು ಮೌನವಹಿಸಿದೆ.
ಬಸ್ಸು ವೇಗವಾಗಿಯೇ ಚಲಿಸುತ್ತಿತ್ತು, ಬಸ್ಸು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಏನಾಗಿದೆಯೆಂದು ನೋಡುವುದಕ್ಕೆ ಕೆಲವು ಪ್ರಯಾಣಿಕರು ಡ್ರೈವರ್‍ಗೆ ಹೇಳಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ನನ್ನನ್ನು ನನ್ನ ಸ್ಥಿತಿಯನ್ನು ಅಧ್ಯಯನ ಮಾಡಲು ನನ್ನ ಸುತ್ತ ಸುತ್ತುವರಿದ್ದರು. ನಾನು ಪ್ರಜ್ಞಾಹೀನನಾಗಿಬಿಟ್ಟಿದ್ದೆ ಯಾರೋ ತಣ್ಣೀರು ಬಟ್ಟೆ ಒದ್ದೆಮಾಡಿಕೊಂಡು ಮುಖ ಒರೆಸಲು ನನ್ನ ಮಗಳಿಗೆ ಹೇಳಿದರೂ ಮತ್ತೊಬ್ಬರು ನನ್ನ ಕೈ ನಾಡಿ ಹಿಡಿದು ನೋಡುತ್ತಿದ್ದರು, ಮತ್ತೊಬ್ಬ ನನ್ನ ಎದೆ ಬಡಿತ ಆಲಿಸುತ್ತಿದ್ದ ನನ್ನ ಮಗಳು ಜೋರಾಗಿ ಅಳುತ್ತಲೇ ಇದ್ದಳು. ಇದ್ದಕ್ಕಿದ್ದಂತೆ ನಾನು ಕಣ್ಣು ಬಿಟ್ಟೆ, ನೋಡಿದೆ ಸುಮಾರು ಜನ ನನ್ನ ಸುತ್ತ ಇರುವುದನ್ನು ನೋಡಿ ಏನು-ಎಂದೆ ಅವರಿಗೆಲ್ಲ ಸಮಾಧಾನವಾಯಿತು. ಅಬ್ಭಾ! he is safe ಎಂದರೂ ಮಗಳು ಅಳುತ್ತಿದ್ದಳು. ನನ್ನ ಕಷ್ಟವನ್ನು ಪಕ್ಕಕ್ಕೆ ಇಟ್ಟೆ. ಮಗಳು ನನ್ನನ್ನು ತಬ್ಬಿಕೊಂಡಳು ನಾನು ನನಗೇನು ಆಗಿಲ್ಲ ವೆಂಬಂತೆ ಇದ್ದೆ ಬೆವತು ಹೋಗಿದ್ದೆ, ಒದ್ದೆ ಬಟ್ಟೆ ಹಾಕಿದ್ದರು, ಅಲಿದ್ದವರಲ್ಲಿ ಒಬ್ಬ ಡ್ರೈವರ್‍ಗೆ ಹೇಳಿದರೂ start ಮಾಡಪ್ಪ ಏನು ತೊಂದರೆ ಇಲ್ಲ್ಲ he is safe ನಡೆಯಿರಿ ಎಂದು ಬಸ್ಸಿನಲ್ಲಿದ್ದವರೆಲ್ಲ ಹೇಳಿದರು.
“ನಿಮಗೇನು ಆಗಿಲ್ಲ ಧೈರ್ಯವಾಗಿರಿ” ಎಂದ ಒಬ್ಬ
“ದೇವರು ದೊಡ್ಡವನು ಸಧ್ಯ ಬಚಾವ್ ಆದಿರಿ” ಎಂದ ಮತ್ತೊಬ್ಬ
“ಅವರು ಮಾಡಿರೋ ಪುಣ್ಯನೇ ಅವರನ್ನು ರಕ್ಷಿಸಿದೆ” ಎಂದಳು ಒಬ್ಬ ಅಜ್ಜಿ
ಪ್ರಯಾಣಿಕರ ಸಂಭಾಷಣೆ ಇದೇ ವಿಚಾರವಾಗಿ ಶುರುವಾಯ್ತ ನೋಡ್ರಿ ಅವನ ಅಣತಿಯಂತೆನೆ ಎಲ್ಲವೂ ನಡೆಯೋದು ಎಂದರು. ಮತ್ತೊಬ್ಬರು ಹೌದು ನಿಮ್ಮ ಮಾತು ಸತ್ಯ ಒಂದು ಪವಾಡನೇ ನಡೆದಂತಾಯಿತು. ಅಂತು ದೇವರ ಅನುಗ್ರಹ ಅವರಿಗಿತ್ತು ಬಿಡಿ ಬದುಕಿದರು. ಎಲ್ರು ಗಾಬರಿಯಾಗಿ ಪರಸ್ಥಿತಿಯನ್ನು ಅವಲೋಕಿಸುತ್ತಿದ್ದರು. ಯಾರೋ ಮೊಸಂಬಿ ತಿರುಳುಗಳನ್ನು ಬಿಡಿಸಿ ತಂದು ಕೊಟ್ರು, ಅಲ್ಲಿದ್ದವರೆಲ್ಲ ತಿನ್ನಿ ತಿನ್ನಿ ಸ್ವಲ್ಪ ಶಕ್ತಿ ಬರುತ್ತೆ ಎಂದರು ನಾನು ತಿಂದೆ, ಮಗಳಿಗೆ ಮನೆಗೆ ಜೋಪಾನವಾಗಿ ಕರೆದುಕೊಂಡು ಹೋಗು ಎಂದು ತಿಳುವಳಿಕೆ ಹೇಳಿದರು. ನಾನು ಎಲ್ಲರಿಗೂ ನನ್ನ ಬಗ್ಗೆ ಕೇರ್ ತಗೊಂಡಿದ್ದಕ್ಕೆ ತುಂಬಾ ಥ್ಯಾಂಕ್ಸ್ ಅಂದೆ, ಅವರು ಥ್ಯಾಂಕ್ಸ್ ನಮಗಲ್ಲ ದೇವರಿಗೆ ಹೇಳಿ ಎಂದರು.
ನಮ್ಮೂರು ಬಂತು ಬಸ್‍ನಿಂದ ಇಳಿದಾಗ ಎಲ್ಲರೂ ನನಗೆ ಕೈ ಬೀಸಿ wish ಮಾಡಿದ್ದು ನಾನು ಇನ್ನು ಮರೆತಿಲ್ಲ. ನಂತರ ಆಟೋದಲ್ಲಿ ಮನೆಗೆ ಬಂದು ಸ್ವಲ್ಪ ಸುಧಾರಿಸಿಕೊಂಡು ವೈಧ್ಯರನ್ನು ಭೇಟಿಯಾಗಿ ಔಷಧಿ ಮಾತ್ರೆ ತಂದು ಊಟ ಮಾಡಿ ಹೊತ್ತಿಗೆ ಮುಂಚೆನೇ ಮಾತ್ರೆ ತಗೊಂಡು ಮಲಗಿದೆ. ನನ್ನ ಮಗಳು ನನಗಾಸರೆಯಾಗಿದ್ದಳು. ನನಗೆ ಬಂದಿದ್ದ ಸಾವು ಅವಳಿಗಾಗಿಯೇ ದೂರ ಸರಿಯಿತು ಎಂದು ಕೊಂಡೆ ಆದರೂ ಸಾವಿನ ರೂಪವನ್ನು ನಾನು ಕಂಡೆ ಎಂದೆನಿಸಿತು. ನಡೆದ ವಿಷಯವೆಲ್ಲವು ನನ್ನ ಮಗಳು ಅವಳ ತಾಯಿಗೆ ಹೇಳಿದಾಗ ಮುಂದೇನಾಯಿತೋ ಎನ್ನುವದಕ್ಕಿಂತಲೂ ನಮ್ಮ ಮುಂದೆ ಇರುವ ಬದುಕು, ಮನೆ, ಸಂಸಾರ, ಜೀವನ ಚಕ್ರ ನಡೆಯುತ್ತಲೇ ಇರಬೇಕಲ್ಲ, ವಿಧಿಯು ನನ್ನ ಪರ ದೇವರಲ್ಲಿ ವಕಾಲತ್ತು ವಹಿಸಿರಬಹುದೇನು ನಾನು ಸತ್ತು ಬದುಕುಳಿದೆ. ನನ್ನನ್ನೆ ನಂಬಿರುವ ನನ್ನ ಮನೆಯವರಿಗಾಗಿ ಮತ್ತು ನನ್ನ ಕಾಯಕ ಶಿಕ್ಷಕ ವೃತ್ತಿಗಾಗಿ, ನನ್ನ ಪ್ರೀತಿಯ ವಿದ್ಯಾರ್ಥಿಗಳಿಗಾಗಿ ಮುಂದೆಯು ಹತ್ತಾರು ವರ್ಷ ಸೇವೆ ಸಲ್ಲಿಸುವಂತೆ ಭಗವಂತ ಬದುಕು ಕರುಣಿಸಲಿ.
“ಕರ್ತವ್ಯಂ ದೈವ ಮಾನಿಕ್ಕಂ”
ಬದುಕು ಬೇಕು ನಿಜ ಸೇವೆಗಾಗಿ ಬದುಕು ಬಯಸಬೇಕು, ನನಗಾಗಿ ಅಥವಾ ನನ್ನವರಿಗಾಗಿ ಬದುಕುವುದು ಬದುಕಲ್ಲ. ಬದುಕು ಅನ್ಯರಿಗೆ ದಾರಿ ದೀಪವಾಗಬೇಕು ನಿಜವಾದ ಬದುಕು ಸ್ವಾರ್ಥವಿಲ್ಲದ ಬದುಕು, ನಿಸ್ವಾರ್ಥ ಸೇವೆಯ ಬದುಕು ಅರ್ಥ ನೀಡುವ ಸುಂದರ ಬದುಕಿಗಾಗಿ ಹಂಬಲಿಸೋಣ, ಬದುಕು ಇರುವ ತನಕ ಒಂದಷ್ಟು ಒಳ್ಳೆ ಕೆಲಸ ಕಾರ್ಯಗಳನ್ನು ಮಾಡೋಣ, ಸಮಾಜಮುಖಿಯಾಗೋಣ ಅನ್ನೊ ಸದಾಶಯ ನನ್ನೊಂದಿಗೆ ಇದೆ.
-ಹೆಚ್. ಷೌಕತ್ ಆಲಿ, ಮದ್ದೂರು