ಸಮಯ ಪ್ರಜ್ಞೆ ಇಲ್ಲದ ಕಾಲಭಕ್ಷಕರು: ಎಂ. ಆರ್, ವೆಂಕಟರಾಮಯ್ಯ

‘ಕಾಲ’ ಎಂಬ ಪದಕ್ಕೆ ಸಮಯ, ವೇಳೆ, ಅವಧಿ, ಯುಗ, ಪ್ರಹರ, ಎಂಬ ವಿವಿಧಾರ್ಥಗಳುಂಟು. ಸಮಯವೆಂಬುದು ಬಹು ಅಮೂಲ್ಯವಾದ ಸಂಪತ್ತು. ಮತ್ಯಾವುದೇ ವಸ್ತುವನ್ನು ಕಳೆದುಕೊಂಡರೂ ನಾವು ಅದನ್ನು ಸಂಪಾದಿಸಬಹುದು. ಆದರೆ ಒಮ್ಮೆ ಕಳೆದುಹೋದ ಕಾಲ, ಸಮಯವನ್ನು ಸಂಪಾದಿಸಲಾರೆವು. ಕಳೆದುಹೋದ ಕಾಲ ಮತ್ತೆಂದೂ ಹಿಂತಿರುಗುವುದಿಲ್ಲ. ‘ಟೈಮ್ ಅಂಡ್ ಟೈಡ್ ವೈಟ್ಸ್ ಫಾರ್ ನನ್, ಟೈಮ್ ಈಸ್ ಪ್ರೆಶಸ್’ ಮೊದಲಾದ ಅನುಭವೀ ಹಿರಿಯರ ವಾಕ್ಯಗಳೆಲ್ಲವೂ ನಮಗೆ ಚಿರಪರಿಚಿತ ವಾದದ್ದೇ. ಆದರೂ, ಸಮಯ ಪಾಲನೆಯಲ್ಲಿ, ಸಮಯವನ್ನು ಸದುಪ ಯೋಗಪಡಿಸಿಕೊಳ್ಳುವುದರಲ್ಲಿ ಬಹಳಷ್ಟು ಜನರು ಬಹು ಹಿಂದುಳಿದವರು ಎಂದರೆ ಮಾತು ಅತಿಶಯೋಕ್ತಿಯಾಗಲಾರದು. ವಿನಾ ಕಾರಣ ಸಮಯವನ್ನು ನಿಷ್ಪ್ರಯೋಕವಾಗಿ ಬಳಸುವವರು ನಮ್ಮಲ್ಲಿ ಅನೇಕ ಮಂದಿ ಇದ್ದಾರೆ ಎಂದರೆ ನಂಬಲಾಗದೆ ! ಅದಕ್ಕಾಗಿಯೇ ‘ಟ್ರುತ್ ಇಸ್ ಸ್ಟ್ರೇಂಜರ್ ದ್ಯಾನ್ ಫಿಕ್ಚನ್’ ಎಂಬ ಗಾದೆ ನಿತ್ಯ ಬಳಕೆಯಲ್ಲಿದೆ.

ಇಂತಹಾ ಗುಂಪಿನ ವ್ಯಕ್ತಿಗಳು ತಮ್ಮ ಸ್ವಂತ ಸಮಸ್ಯೆಗಳನ್ನು ನಿರ್ಲಕ್ಷಿಸಿಯಾದರೂ ಅವರಿವರ ಸಮಸ್ಯೆ ಪರಿಹರಿಸಿ, ‘ಪರೋಪಕಾರಾರ್ಥಂ ಇದಂ ಶರೀರಂ’ ಎಂಬ ನೀತಿ ತಮ್ಮಿಂದಲೇ ಪ್ರಾರಂಭವಾಯಿತು ಎಂಬಂತೆ ವರ್ತಿಸಿ, ‘ಪರೋಪಕಾರಿ ಪಾಪಯ್ಯ’ ಎಂಬ ಬಿರುದನ್ನು ಧರಿಸಿ ಆನಂದಿಸುವವರು. ಇವರು ‘ಕೇರ್ ಫ್ರೀ’ ಜನರು. ತಮ್ಮ ಮನೆಯಲ್ಲೇ ಹಲವಾರು ಜರೂರು ಕೆಲಸಗಳಿದ್ದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ, ತಮ್ಮ ಹೊಟ್ಟೆ, ಬಟ್ಟೆ, ಆರೋಗ್ಯ, ಅಂದ, ಅಲಂಕಾರಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ ತಮ್ಮ ಕಾರ್ಯ ಕ್ಷೇತ್ರದಲ್ಲಿ ಬೇಗ ಹಾಜರಾಗಲು ಬೆಳಗ್ಗೆ ಮನೆಯಿಂದ ಹೊರಡುವವರು. ಇಂದೇ ಲೈಟ್ ಬಿಲ್, ನೀರಿನ ಬಿಲ್, ಫೋನ್ ಬಿಲ್ ಹಣ ಕಟ್ಟಲು ಕೊನೆಯ ದಿನ, ಇಂದು ಹಣ ಕಟ್ಟದಿದ್ದರೆ ನಾಳೆ ಅವರು ಬಂದು ಡಿಸ್ಕನೆಕ್ಟ್ ಮಾಡತಾರೆ, ರೇಷನ್ ಶಾಪಿನಲ್ಲಿ ಅಕ್ಕಿ ಸಕ್ಕರೆ ಬಂದಿದೆಯಂತೆ, ಇಂದೇ ತಂದರೆ ಅನುಕೂಲ, ಮಗುವಿಗೆ ಹುಷಾರಿಲ್ಲ, ವೈದ್ಯರ ಬಳಿ ಕರೆದುಕೊಂಡು ಹೋಗಬೇಕು ಇತ್ಯಾದಿ ಮನೆಯ ತೊಂದರೆಗಳನ್ನು ಪತ್ನಿ ಪತಿಗೆ ತಿಳಿಸಿದರೂ, ‘ಏ, ನಿನ್ನೀ ಗೋಳು ದಿನವೂ ಇರುವುದೇ, ಈ ಸಣ್ಣ ಪುಟ್ಟ ಕೆಲಸಗಳನ್ನೂ ನೀ ಮಾಡಿದರಾಗದೆ ? ಎಲ್ಲಕ್ಕೂ ಗಂಡಸಾದ ನಾನೇ ಮಾಡಬೇಕೆ ? ಆಫೀಸಿನಲ್ಲಿ ನನಗೆ ಸಾವಿರ ಕೆಲಸಗಳು ಅರ್ಜೆಂಟ್ ಇವೆ. ನಾ ಇಂದು ಬೇಗ ಹೋಗಲೇಬೇಕು’ ಎಂದು ಅಬ್ಬರಿಸಿ, ಬೊಬ್ಬಿಟ್ಟು, ಪತ್ನಿ ಮಾಡಿರುವ ತಿಂಡಿ : ಅಡುಗೆಯನ್ನು ಹೊಟ್ಟೆಯ ತುಂಬಾ ಉಂಡು, ನೀಟಾಗಿ ಡ್ರೆಸ್ ಮಾಡಿಕೊಂಡು ಅಡಾವುಡಿಯಿಂದ ಮನೆಯಿಂದ ಹೊರಟ ಇವನು ಮುಂದೇನು ಮಾಡುವವ ! ಎಂಬುದನ್ನು ಸ್ವಲ್ಪ ಗಮನಿಸೋಣ.

ಇವನು ಸಿದಾ ತನ್ನ ಸಹೋದ್ಯೋಗಿಯ ಮನೆ ಸೇರಿ, ‘ಏನಯ್ಯಾ, ಇನ್ನೂ ಹೊರಡಲಿಲ್ಲ, ಯಾಕೆ ! ಎಂಬ ಕುಶಲೋಪರಿ ವಿಚಾರಿಸಿ, ಆ ಮನೆಯಾಕೆ ಕೊಟ್ಟ ಕಾಫಿ : ತಿಂಡಿಯನ್ನು, ‘ಬೇಡ ಈಗ ತಾನೇ ಮುಗಿಸಿ ಬಂದೆ’ ಎನ್ನುತ್ತಲೇ ತಿಂದು, ಸ್ನೇಹಿತನನ್ನು ತನ್ನ ಗಾಡಿಯಲ್ಲಿ ಪಿಕಪ್ ಮಾಡಲು ಕಾದಿರುವವ, ಅವ ಏನಾದರೂ ತನ್ನ ಮನೆಯ ಕೆಲಸ ಮಾಡಿ ಹೋಗೋಣ ಎಂದರೆ ಅವನ ಸಹಾಯಕ್ಕಾಗಿ ತಾನೂ ಮುಂದಾಗುವ ಇಂತಹವರನ್ನು ‘ಮನೆಗೆ ಮಾರಿ, ಪರರಿಗೆ ಉಪಕಾರಿ’ ಎನ್ನೋಣವೇ ! ಸಮಯ ಪ್ರಜ್ಞೆ ಇಲ್ಲದ ಕಾಲಭಕ್ಷಕರು, ಕಾಲಹರಣರು ಎಂದರೆ ಸರಿಯಾದೀತೇ ?

ಇಂತಹಾ ಅಲೆಮಾರಿಗಳು ತಮ್ಮ ಸಮಯವನ್ನೂ ಹಾಳುಮಾಡಿಕೊಳ್ಳುವುದರ ಜೊತೆಗೆ ಬೇರೆಯವರ ಅಮೂಲ್ಯ ಸಮಯವನ್ನೂ ತಿಂದು, ತಮ್ಮ ಬಾಯಿ ತೀಟೆ ತೀರಿಸಿಕೊಳ್ಳಲು, ಪರಾವಲಂಭಿಗಳಾಗಿ ಅವರ ಮನದ ನೆಮ್ಮದಿ, ಶಾಂತಿಯನ್ನೂ ಹಾಳು ಮಾಡುವ ಜನ ಇವರು. ಇಂತಹವರ “ಮೋಡಸ್ ಆಪರೆಂಡಿ” ಹೀಗಿರುತ್ತದೆ :

ಬೆಳ್ಳಂ ಬೆಳಗ್ಗೆಯೇ ಮನೆಗೆ ಆಗಮಿಸಿದ ಇಂತಹಾ ಅಗಂತುಕನನ್ನು ಏನ್ ಬಂದ್ರಿ ! ಎಂದು ವಿಚಾರಿಸಿದಾಗ, ದೇಶಾವರಿ ನಗೆ ಬೀರಿ, ಇಲ್ಲೇ, ಪಕ್ಕದ ಬೀದಿಯ ಶಾಪಿಗೆ ಅಂತ ಬಂದೆ, ಡಾಕ್ಟರ್ ಬರಲು ಇನ್ನು 1 ಗಂಟೆಯಾಗುತ್ತಂತೆ, ಅಲ್ಲಿ ಕೂತು ಏನು ಮಾಡುವುದು ! ಎಂದೋ, ನಿಮ್ಮ ಏರಿಯಾದಲ್ಲೇ ನನ್ನ ಪರಿಚಯದವ ಕೈ ಸಾಲ ತಗೊಂಡು ಬಹಳ ಕಾಲದಿಂದ ಕೊಟ್ಟಿರಲಿಲ್ಲ, ಇಂದು ಏನಾದರೂ ಮಾಡಿ ಅವನಿಂದ ಹಣ ವಸೂಲಿ ಮಾಡಲೇಬೇಕು ಎಂದು ಅವನ ಮನೆಗೆ ಬಂದರೆ ಅವ ವಾಕಿಂಗ್ ಹೋಗಿದ್ದ, ಬರಲು ಅರ್ಧ ಗಂಟೆ ಎಂದರು ಮನೆಯವರು, ಅಲ್ಲಿ ಕೂತು ಕಾಲ ಕಳೆಯುವುದು ಏಕೆ, ಇಲ್ಲಿ ನಿಮ್ಮೆಲ್ಲರನ್ನೂ ನೋಡಿ ಬಹಳ ಕಾಲವಾಗಿತ್ತಲ್ಲಾ ! ಮಾತನಾಡಿಸಿ ಹೋಗೋಣ ಅಂತ ಬಂದೆ ಅಂದಾಗ, ಬೇಗನೇ ಮನೆ ಕೆಲಸ ಮುಗಿಸಿ, ಮಗುವನ್ನು ಶಾಲೆಗೆ ಬಿಟ್ಟು ನಿಮ್ಮ ಕಛೇರಿಯನ್ನು ಸಕಾಲದಲ್ಲಿ ಸೇರುವ ಆತುರದಲ್ಲಿರುವ ನಿಮ್ಮ ಪಾಡು ಹೇಗಿರುತ್ತೆ !
ಹೀಗೇನೇ, ಸ್ನಾನಕ್ಕೋ, ಪೂಜೆಗೋ ಸಿದ್ದವಾಗುತ್ತಿರುವ ಸಮಯಕ್ಕೇನೇ, ನಿಮ್ಮ ಬಂಧುವೊಬ್ಬ ಆಗಮಿಸಿ, ಚೆನ್ನಾಗಿದ್ದೀರಾ ! ಬಹಳ ದಿನಗಳಾಗಿತ್ತು ನಿಮ್ಮನ್ನೆಲ್ಲಾ ನೋಡಿ ಎನ್ನುವ, ಏನು ಬೆಳಗ್ಗೇನೇ ಬಂದುಬಿಟ್ಟಿರಿ, ಎಲ್ಲಿಂದ ಬರ್ತಿದ್ದೀರಿ ಎಂದ ಕೂಡಲೇ, ನಿಮ್ಮ ಏರಿಯಾದಲ್ಲೇ ಒಂದು ಕಾರ್ಯ ಮಾಡಿಸುವುದಿತ್ತು, ಅಲ್ಲಿಗೆ ಹೋಗಿ ನೋಡಿದರೆ, ಅವರು ಸಿದ್ಧವಾಗೇ ಇಲ್ಲ, ಸರಿ, ನೀವು ಎಲ್ಲಾ ರೆಡಿಯಾಗಿ ನನಗೊಂದು ರಿಂಗ್ (ಮೊಬೈಲ್ ಕಾಲ್) ಕೊಡಿ ಬರ್ತೀನಿ ಎಂದು ಹೇಳಿ, ನಿಮ್ಮ ಮನೆಯ ಕಡೆ ಬಂದೆ ಎನ್ನುತ್ತಾ, ಈತ, ಆತನ-ನಿಮ್ಮ ಕಡೆಯ ಸಂಬಂಧದ ಅವರು, ಇವರ ಮನೆಗಳ ಪುರಾಣಗಳನ್ನೆಲ್ಲಾ ಹೇಳ್ತಾ ನಿಮ್ಮ ಸಮಯ ತಿಂದರೆ ನಿಮಗೆ ಬೇಸರ, ಕೋಪ ಬರದಿರುತ್ತದೆಯೇ ಹೀಗೆ, ಈ ವರ್ಗದವರೆಲ್ಲರೂ ತಮ್ಮ ಸಮಯವನ್ನು ವ್ಯರ್ಥ ಮಾಡುವುದಲ್ಲದೆ ಇತರರ ಅಮೂಲ್ಯ ಸಮಯವನ್ನೂ ಹಾಳುಮಾಡಿ, ಅವರ ನಿತ್ಯ ಕರ್ಮಗಳಿಗೆ ಅಡ್ಡಿಪಡಿಸುವುದೇ ಅಲ್ಲದೆ, ಯಾರ ಪ್ರಯೋಜನಕ್ಕೂ ಬಾರದ ಹರಟೆಯಲ್ಲಿ ನಿರತರಾಗಿ ನಮ್ಮ ಮನಸ್ಸಿನ ನೆಮ್ಮದಿ ಶಾಂತಿ ಕೆಡಿಸುವ ‘ಕಾಲ ಭಕ್ಷಕರು.

ನೂರು ವರ್ಷಗಳ ಮನುಷ್ಯನ ಆಯುಸ್ಸಿನ ಬಹು ಭಾಗ, ಬಾಲ್ಯ, ಯೌವನ, ಅವರಿವರ ಸೇವೆ, ವ್ಯಾಧಿ, ವಿಯೋಗ, ವೃದ್ಧಾಪ್ಯ, ದುಃಖ ಇತ್ಯಾದಿಗಳಿಂದ ಕಳೆದು ಹೋಗುತ್ತದೆ. ಕಳೆದು ಹೋದ ಆಯುಸ್ಸಿನ ಉಳಿದ ಅಲ್ಪ ಭಾಗವನ್ನಾದರೂ ಸಾರ್ಥಕ ಪಡಿಸಿಕೊಂಡ ಮನುಷ್ಯ ವಿವೇಕಿಯಾಗುತ್ತಾನೆ. ಹಾಗಿಲ್ಲವಾದರೆ, ಆಹಾರ, ನಿದ್ದೆ ಇತ್ಯಾದಿಗಳಲ್ಲೇ ಜೀವನ ಕಳೆಯುವ ಪಶುವಿನಂತಾಗುತ್ತಾನೆ ಎಂದಿದ್ದಾರೆ, ಹಿರಿಯರು. ಅಮೂಲ್ಯವಾದ ಕಾಲದ ಬಗ್ಗೆಯೇ ಪ್ರಸ್ತಾವಿಸುತ್ತಾ, ‘ಕಲಿಯಬೇಕಾದದ್ದು ಬೆಟ್ಟದಷ್ಟಿದೆ, ಆದರೆ ಅದಕ್ಕಾಗಿ ನಿನಗಿರುವ ಆಯುಷ್ಯ ಬಹು ಅಲ್ಪ, ಅದಕ್ಕಾಗಿ ಸಮಯವನ್ನು ವ್ಯರ್ಥಮಾಡದೆ ಸದುಪಯೋಗಪಡಿಸಿಕೊ, ಜಾಗ್ರತೆ, ಜಾಗ್ರತೆ, ಜಾಗ್ರತೆ ಎಂದು ಮನುಷ್ಯನನ್ನು ಶ್ರೀ ಶ್ರೀ ಶಂಕರಾಚಾರ್ಯರು ಎಚ್ಚರಿಸಿರುವುದರಿಂದ ನಮಗೆ ದೊರೆತ ಸಮಯವನ್ನು ಸಣ್ಣ ಪುಟ್ಟ, ಕ್ಷುಲ್ಲಕ ವಿಚಾರಗಳಿಗಾಗಿ, ಅನಗತ್ಯ ಚರ್ಚೆ, ಸಂಕುಚಿತ ಭಾವನೆಗಳಿಗೆ ವಿನಿಯೋಗಿಸಿ, ನಮ್ಮ ಹಾಗೂ ಇತರರ ಸಮಯವನ್ನು ವ್ಯರ್ಥ ಮಾಡದೆ, ದೊರೆತ ಕಾಲವನ್ನುಸದುಪಯೋಗ ಪಡಿಸಿಕೊಳ್ಳೋಣ. ಪ್ರತಿ ಕೆಲಸಕ್ಕೂ ನಿಶ್ಚಿತ ಸಮಯ ನಿಗದಿಪಡಿಸಿಕೊಂಡು, ಆಯಾ ಕಾಲದಲ್ಲೇ ಆ ಕೆಲಸಗಳನ್ನು ಮಾಡಿ ಮುಗಿಸುವ ನೀತಿ ನಾವು ಕಲಿಯಬೇಕು. ಇದೇ ಸಂದರ್ಭದಲ್ಲಿ ‘ಇಂದಿನ ದಿನ ಮುಂದೆಂದೂ ನಮಗೆ ಹಿಂತಿರುಗಿ ಬರಲಾರದು ಎಂಬ ಸತ್ಯ ಯೋಚಿಸು’ ಎಂದ ಸುಪ್ರಸಿದ್ಧ ಲೇಖಕ ಡಾಂಟೆಯ ಕಿವಿ ಮಾತು, “ನಮಗೆ ದೊರೆತಿರುವ ಇಂದಿನ ದಿನ, ಕ್ಷಣವೆ ನಮಗೆ ದೇವರಿತ್ತ ಪ್ರೆಸೆಂಟ್ ; ಗಿಫ್ಟ್ ಎಂದು ಭಾವಿಸಿ, ದೊರೆತ ಅಮೂಲ್ಯ ಸಮಯವನ್ನು ಸಾರ್ಥಕ ಪಡಿಸಿಕೊಂಡು ಯಶಸ್ವಿಯಾಗಿ ಬದುಕಲು ಪ್ರಯತ್ನಿಸಿ. ಆಗ ಮಾತ್ರ ನಮ್ಮ ಬಾಳಿಗೆ ಹುರುಪು. ಹೊಸತನ, ಬೆಳಕು ಬರಲು ಸಾಧ್ಯ” ಎಂಬ ಸ್ವಾಮಿ ಜಗದಾತ್ಮಾನಂದಜೀಯವರ ಉಪದೇಶ ಸದಾ ನಮ್ಮ ನೆನಪಿನಲ್ಲಿರಲಿ.

-ಎಂ. ಆರ್, ವೆಂಕಟರಾಮಯ್ಯ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x