ತಮ್ಮ ಶ್ರೇಷ್ಟತೆಯನ್ನು ಬೇರೆಯವರ ನಿಮ್ನತೆಯಲ್ಲಿ ಕಾಣುವವರ ಮೂಲಗುಣಗಳ ಅನಾವರಣ ಮಾಡುವ “ಸ್ನೇಕ್‌ ಟ್ಯಾಟೂ”: ಡಾ. ನಟರಾಜು ಎಸ್‌ ಎಂ

ಬೆಳ್ಕೆ ಮಹಾದೇವ ಗಿರಿರಾಜರವರು ಕಳೆದ ಒಂದು ದಶಕದಿಂದ ಎಫ್‌ ಬಿ ಗೆಳೆಯರು. ಸಿನಿಮಾ ನಟರಾಗಿ, ನಿರ್ದೇಶಕರಾಗಿ, ನಾಟಕಕಾರರಾಗಿ ಹೆಸರು ಮಾಡಿದವರು. ಈಗ “ಕಥೆಗೆ ಸಾವಿಲ್ಲ” ಪುಸ್ತಕದ ಮೂಲಕ ಕಾದಂಬರಿಕಾರರಾಗಿದ್ದಾರೆ. ಜೊತೆಗೆ “ಸ್ನೇಕ್‌ ಟ್ಯಾಟೂ” ಎಂಬ ಹೊಸ ಕಥಾಸಂಕಲನದ ಮೂಲಕ ಕಥೆಗಾರರಾಗಿದ್ದಾರೆ. ಬಿ ಎಂ ಗಿರಿರಾಜರವರ “ನವಿಲಾದವರು” ಚಿತ್ರವನ್ನು ಯೂ ಟ್ಯೂಬ್‌ ನಲ್ಲಿ ನೋಡಿದ್ದೆ. ಆ ಚಿತ್ರದಲ್ಲಿನ ಅವರ ನಟನೆ ನನಗೆ ತುಂಬಾ ಇಷ್ಟವಾಗಿತ್ತು. ಒಬ್ಬ ಆತಂಕವಾದಿಯ ಪಾತ್ರವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ನಂತರ ಬಂದ ಅವರ ಚಿತ್ರಗಳನ್ನು ನೋಡಲು ಅವಕಾಶ ಸಿಗದೇ ಇದ್ದರೂ ಅವರ “ಅಮರಾವತಿ” ಚಿತ್ರ ಬಿಡುಗಡೆಯಾದಾಗ ಬೆಂಗಳೂರಿನಲ್ಲಿ ನೋಡಿ ಬಂದಿದ್ದೆ. ಚಿತ್ರ ಮುಗಿದ ಮೇಲೆ ಚಿತ್ರ ಕುರಿತ ಅನಿಸಿಕೆಗಳನ್ನು ತಿಳಿಯಲು ಕಾತುರರಾಗಿ ಚಿತ್ರಮಂದಿರದ ಹೊರಗೆ ತನ್ನ ಹುಡುಗರ ಜೊತೆ ಗಿರಿರಾಜರು ನಿಂತಿದ್ದರು. ಫಿಲಂ ಚೆನ್ನಾಗಿದೆ ಸರ್‌ ಎಂದು ಕೈ ಕುಲುಕಿದ್ದು ಇವತ್ತಿಗೂ ನೆನಪಿದೆ. ಅಮರಾವತಿ ಚಿತ್ರ ನೋಡಿದಾಗ ಆ ಸಿನಿಮಾ ಕುರಿತು ಒಂದು ವಿಮರ್ಶೆಯನ್ನು ಬರೆಯಲು ಮನಸ್ಸು ಮಾಡಿ ಕಾರಣಾಂತರದಿಂದ ಆ ವಿಮರ್ಶೆಯನ್ನು ಮುಗಿಸಲಾರದೆ ಹಾಗೆಯೇ ಟ್ಯಾಪ್‌ ಟಾಪ್‌ ನಲ್ಲಿ ಬಿಟ್ಟುಬಿಟ್ಟಿದ್ದೆ. ಇವತ್ತಿಗೂ ಆ ವಿಮರ್ಶೆ ಹಾಗೆಯೇ ಇದೆ.

ಕನ್ನಡದ ಅನೇಕ ಚಿತ್ರಗಳಲ್ಲಿ ಸಹ ನಟರಾಗಿ ಅಭಿನಯಿಸುತ್ತಿದ್ದ ಪರಮೇಶ್ವರ್‌ ರವರು ನನ್ನ ಸ್ನೇಹಿತರು ನಮ್ಮ ಕನಕಪುರದವರು. ಇವತ್ತು ಕಲಾಮಾಧ್ಯಮ ಅನ್ನೋ ಯೂಟ್ಯೂಬ್‌ ಚಾನೆಲ್‌ ಮೂಲಕ ದೊಡ್ಡ ಹೆಸರು ಮಾಡಿದ್ದಾರೆ. ಅವರು ಆಗಾಗ ನಾಟಕಗಳಲ್ಲಿ ನಟಿಸುತ್ತಿದ್ದ ತಮ್ಮ ನಾಟಕದ ಪ್ರದರ್ಶನದ ವಿವರಗಳನ್ನು ನನಗೆ ವಾಟ್ಸ್‌ ಅಪ್‌ ಮಾಡುತ್ತಿದ್ದರು. ೨೦೧೬ ರ ಏಪ್ರಿಲ್‌ ತಿಂಗಳಿನಲ್ಲಿ ಎಡಿಎ ರಂಗಮಂದಿರದಲ್ಲಿ ಪ್ರದರ್ಶನಗೊಂಡ ಶಿವರಾಮ ಕಾರಂತ ಅವರ ಕಾದಂಬರಿ “ಸರಸಮ್ಮನ ಸಮಾಧಿ” ಪ್ರೇರಿತ “ಮಾಸ್ತಿಕಲ್ಲು” ನಾಟಕದಲ್ಲಿ ಪರಮೇಶ್ವರ್‌ ಅಭಿನಯಿಸಿದ್ದರು. ಗಿರಿರಾಜರವರು ಆ ನಾಟಕದ ಸೂತ್ರಧಾರಿಯಾಗಿದ್ದರು. ಆ ನಾಟಕ ನೋಡಿ ಗಿರಿರಾಜರ ಅಧ್ಬುತವಾದ ನಿರ್ದೇಶನಕ್ಕೆ ಮಾರುಹೋಗಿದ್ದೆ. ನಮಗೆ ತಿಳಿದಂತೆ ಗಿರಿರಾಜರು ಅದ್ವೈತ, ನವಿರಾದವರು, ಜಟ್ಟ, ಮೈತ್ರಿ, ಕನ್ನಡಿಗ ಚಿತ್ರಗಳನ್ನು ನಿರ್ದೇಶಿಸಿ ಹೆಸರು ಮಾಡಿದ್ದಾರೆ. ಗಿರಿರಾಜರು ನಿರ್ದೇಶಿಸಿದ ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಕುರಿತ ಯಶೋಗಾಥೆ “ಭಾರತ ಭಾಗ್ಯವಿಧಾತ” ದ್ವನಿ, ಬೆಳಕು, ದೃಶ್ಯ ವೈಭವಗಳ ರೂಪಕ ನಾಡಿನೆಲ್ಲೆಡೆ ಜನರ ಗಮನ ಸೆಳೆದಿತ್ತು. ಹಾಗೆಯೇ ಅಂಬೇಡ್ಕರ್‌ ರವರ ಕೊಡುಗೆಗಳ ಕುರಿತ ಪುಟ್ಟ ರೀಲ್ಸ್‌ ಕೂಡ ಮಾಡಿದ್ದರು. ಅದೂ ಕೂಡ ತುಂಬಾ ಪರಿಣಾಮಕಾರಿಯಾಗಿ ಮೂಡಿಬಂದಿತ್ತು.. ಹೀಗೆ ದಶಕದಿಂದ ಗಿರಿರಾಜರ ಸಿನಿಮಾ, ನಾಟಕಗಳನ್ನು ನೋಡುತ್ತಾ ಬಂದಿದ್ದ ನನಗೆ ಅವರ ಸಾಹಿತ್ಯ ಪಯಣದ ಕುರಿತು ಅಷ್ಟು ತಿಳಿದಿರಲಿಲ್ಲ. ಮೊನ್ನೆ ಅಚನಕ್ಕಾಗಿ “ಸ್ನೇಕ್‌ ಟ್ಯಾಟೂ” ಪುಸ್ತಕ ಎಫ್‌ ಬಿಯಲ್ಲಿ ಕಣ್ಣಿಗೆ ಬಿದ್ದಾಗ ಕುತೂಹಲಕ್ಕೆ ಅವರ ಎಫ್‌ ಬಿ ಪುಟಕ್ಕೆ ಭೇಟಿ ನೀಡಿದೆ. ಅವರು ಈಗಾಗಲೆ “ಕಥೆಗೆ ಸಾವಿಲ್ಲ” ಅನ್ನೋ ಕಾದಂಬರಿ ಕೂಡ ತಂದಿದ್ದಾರೆ ಎನ್ನುವುದ ತಿಳಿದು ಅಚ್ಚರಿಯಾಯಿತು. ತಡ ಮಾಡದೆ ಎರಡೂ ಪುಸ್ತಕಗಳನ್ನು ತರಿಸಿ ನಿನ್ನೆಯಷ್ಟೇ “ಸ್ನೇಕ್‌ ಟ್ಯಾಟೂ” ಪುಸ್ತಕವನ್ನು ಓದಿ ಮುಗಿಸಿದೆ. ಓದಿ ಮುಗಿಸಿದ ಮೇಲೆ ಪುಸ್ತಕದ ಕುರಿತು ಬರೆಯಲೇಬೇಕು ಅನಿಸಿತು. ಅದಕ್ಕೆ ಈ ಲೇಖನ.

“ಸ್ನೇಕ್‌ ಟ್ಯಾಟೂ” ಗಿರಿರಾಜರ ಮೊದಲ ಕಥಾಸಂಕಲನ. ಅವರೇ ಹೇಳಿಕೊಂಡಂತೆ ಕಳೆದ ೨೨ ವರ್ಷಗಳಲ್ಲಿ ಅವರು ಬರೆದ ಕತೆಗಳಲ್ಲಿ ಆಯ್ದ ೯ ಕತೆಗಳು ಈ ಸಂಕಲನದಲ್ಲಿವೆ. ಕನ್ನಡದ ಹಿರಿಯ ಲೇಖಕರಾದ ಕೆ ವೈ ನಾರಾಯಣಸ್ವಾಮಿ ಯವರು ಒಂದೊಳ್ಳೆ ಮುನ್ನುಡಿಯನ್ನು ಈ ಪುಸ್ತಕಕ್ಕೆ ನೀಡಿದ್ದಾರೆ. ಹಾಗೆಯೇ ವಿಮರ್ಶಕರಾದ ನಟರಾಜ್‌ ಹುಳಿಯಾರ್‌ ರವರ ಹಿನ್ನುಡಿ ಈ ಪುಸ್ತಕಕ್ಕಿದೆ. ಮುನ್ನುಡಿಯಲ್ಲಿ “ಗಿರಿರಾಜರ ಕತೆಗಳಿಗೆ ಭಾವತೀವ್ರತೆಯ ಜೊತೆಜೊತೆಗೆ ವೈನೋದಿಕ ದಾಟಿಯೂ ಪ್ರಾಪ್ತವಾಗಿರುವುದರಿಂದ ಓದಿನ ಪಯಣ ಸುಖದಾಯಕವಾಗಿದೆ. ಕೆಲವು ಕತೆಗಳಲ್ಲಿ ಮ್ಯಾಜಿಕಲ್‌ ರಿಯಲಿಸಮ್‌ ಎನ್ನಬಹುದುದಾದ ನಿರೂಪಣಾ ಶೈಲಿಯೂ ಮಿಳಿತವಾಗಿರುವುದನ್ನು ಕಾಣುಬಹುದಾಗಿದೆ.” ಎಂದು ನಾರಾಯಣಸ್ವಾಮಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, “ಕನ್ನಡದ ದಕ್ಷ ಫೈರ್‌ ಬ್ರಾಂಡ್‌ ಕತೆಗಾರರಾಗಿ ಗಿರಿರಾಜರು ವಿಕಾಶಗೊಳ್ಳಬಲ್ಲರು” ಎಂದು ಹುಳಿಯಾರ್‌ ರವರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡದ ಯುವ ಕವರ್‌ ಡಿಸೈನರ್‌ ಮದನ್‌ ಸಿ ಪಿ ಇತ್ತೀಚೆಗೆ ಅನೇಕ ಪುಸ್ತಕಗಳಿಗೆ ಮುಖ ಪುಟ ವಿನ್ಯಾಸ ಮಾಡಿಕೊಡುತ್ತಿದ್ದಾರೆ. ಅವರು ವಿನ್ಯಾಸಗೊಳಿಸಿದ ಶೀರ್ಷಿಕೆಗೆ ಒಪ್ಪುವ ಮುಖಪುಟ ಈ ಪುಸ್ತಕಕ್ಕಿದೆ. ಕನ್ನಡದ ಅನೇಕ ಹೊಸ ಬರಹಗಾರರನ್ನು ಮುನ್ನೆಲೆಯಲ್ಲಿ ತರಲು ಸಂಕಲ್ಪ ತೊಟ್ಟಿರುವ ಕಾನ್‌ ಕೇವ್‌ ಮೀಡೀಯಾದ ನಂದೀಶ್‌ ದೇವ್‌ ಈ ಪುಸ್ತಕದ ಪುಕಾಶಕರು. ಈಗಾಗಲೆ ಇವರು ಕರಣಂ ಪವನ್‌ ಪ್ರಸಾದ್‌, ಸೋಮುರೆಡ್ಡಿ, ಕಾರ್ತಿಕಾದಿತ್ಯ ಬೆಳ್ಗೋಡು, ಎಸ್‌ ರತ್ನ ವಿಠ್ಠಲ್ಕರ್‌, ವಿನುತಾ ವಿಶ್ವನಾಥ್‌, ನಾಗರಾಜ್‌ ಕೂವೆ, ಮತ್ತು ಪಲ್ಲವಿ ಇಡೂರರ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕನ್ನಡದ ಟಾಪ್‌ ಪ್ರಿಂಟರ್ಸ್‌ ಗಳಲ್ಲಿ ಒಂದಾದ ಬೆಂಗಳೂರಿನ ಲಕ್ಷ್ಮೀ ಮುದ್ರಣಾಲಯ ಈ ಪುಸ್ತಕವನ್ನು ಪ್ರಿಂಟ್‌ ಮಾಡಿದೆ.

ಇನ್ನು ಕತೆಗಳ ಕುರಿತು ಹೇಳಬೇಕೆಂದರೆ ಈಗಾಗಲೆ ಹೇಳಿದ ಹಾಗೆ ಈ ಪುಸ್ತಕದಲ್ಲಿ ಒಟ್ಟು ಒಂಬತ್ತು ಕತೆಗಳಿವೆ. ಏಳರಿಂದ ಹತ್ತು ಪುಟಗಳ ಒಳಗಿನ ಮೂರು ಕತೆಗಳಿದ್ದರೆ, ಉಳಿದ ಆರು ಕತೆಗಳು ೧೪ ರಿಂದ ೨೩ ಪುಟಗಳಷ್ಟಿರುವ ದೊಡ್ಡ ಕತೆಗಳಾಗಿವೆ. ಈ ಅಷ್ಟೂ ಕತೆಗಳಲ್ಲಿ ಬಹುಮುಖ್ಯವಾಗಿ ಕಾಣುವ ಥೀಮ್‌ ಎಂದರೆ ಒಡೆದ ಸಂಬಂಧಗಳು. ನಮಗೆ ಅಷ್ಟೂ ಕತೆಗಳಲ್ಲಿ ಸಂಬಂಧಗಳು broken love (ಭಗ್ನ ಪ್ರೇಮ) ರೂಪದಲ್ಲಿ, broken marriage (ಮುರಿದ ಮದುವೆ) ರೂಪದಲ್ಲಿ, broken family (ಮುರಿದ ಕುಟುಂಬ) ರೂಪದಲ್ಲಿ ಕಾಣಸಿಗುತ್ತವೆ. ಭಗ್ನ ಪ್ರೇಮ ಮತ್ತು ಅದರ ನಂತರದ ಪ್ರರಿಣಾಮಗಳು ಒಂದಷ್ಟು ಕತೆಗಳಲ್ಲಿ ಚಿತ್ರಿತವಾಗಿವೆ. ಮುರಿದ ಮದುವೆಗಳಾಗಿದ್ದರೆ, ದಂಪತಿಗಳು ಮತ್ತು ಅವರ ಮಕ್ಕಳು ಅನುಭವಿಸುವ ಸಂಕಷ್ಟಗಳು ಒಂದಷ್ಟು ಕತೆಗಳಲ್ಲಿ ಜಾಗ ಪಡೆದಿವೆ. ಮುರಿದ ಕುಟುಂಬದ ಬಿಕ್ಕಟ್ಟುಗಳು ಒಂದಷ್ಟು ಕತೆಗಳಲ್ಲಿ ಕಥಾರೂಪ ಪಡೆದಿವೆ. ಈ ಥೀಮ್‌ ಗಳ ಮಧ್ಯೆ ಮನುಷ್ಯನೇ ಹುಟ್ಟು ಹಾಕಿಕೊಂಡ ಜಾತಿ, ಧರ್ಮ, ಮೇಲು, ಕೀಳು, inferiority, superiority ಇವೂ ಕೂಡ ಕತೆಗಳಲ್ಲಿ ಮಿಳಿತವಾಗಿವೆ. ಜೊತೆಗೆ ಒಂದಷ್ಟು ಗೆಳೆತನಗಳು, ವಯೋ ಸಹಜ ಕಾಮ ವಾಂಛೆಗಳನ್ನು ಗಿರಿರಾಜರ ಕತೆಗಳಲ್ಲಿ ನಾವು ಕಾಣಬಹುದು. “ಭವಿಷ್ಯವಿಲ್ಲದ ಭವಿಷ್ಯದಲ್ಲಿ” ಕತೆ ನೂರು ವರ್ಷದ ಭವಿಷ್ಯತ್‌ ಕಾಲದ ಕತೆಯನ್ನು ಹೇಳಿದರೆ ಉಳಿದೆಲ್ಲಾ ಕತೆಗಳು ಈ ಆಧುನಿಕ ಕಾಲಘಟ್ಟದಲ್ಲೇ ರೂಪುಗೊಂಡಿವೆ. ಒಂದು ಕತೆಯಲ್ಲಿ ಬಿಟ್ಟರೆ ಬೇರೆ ಯಾವ ಕತೆಯಲ್ಲೂ ಯಾವ ಊರಿನ ಹೆಸರೂ ಕಾಣಿಸುವುದಿಲ್ಲ. ಒಂದಷ್ಟು ಕತೆಗಳು suspense thriller ಗಳ ಅಂಶಗಳನ್ನು ಹೊಂದಿದ್ದು suspense ಜೊತೆಜೊತೆಗೆ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತವೆ.

ಕಥಾ ಸಂಕಲನದ ಮೊದಲ ಕತೆ “ಅಹಂ ಬ್ರಹ್ಮಾಸ್ಮಿ” ರೋಚಕವಾದ suspense thriller. Personality disorder ಥೀಮ್‌ ಇಟ್ಟುಕೊಂಡು ಲೇಖಕರು ಹೆಣೆದಿರುವ ಈ ಕತೆ ಸಿನಿಮಾ ರಂಗದಲ್ಲಿ ಸಸ್ಪೆನ್ಸ್‌ ಥ್ರಿಲ್ಲರ್‌ ಗಳ ಪಿತಾಮಹ ಎಂದು ಹೆಸರು ಮಾಡಿರುವ “ಆಲ್ಫ್ರೆಡ್‌ ಹಿಚ್ಕಾಕ್‌” ರವರ ಸಿನಿಮಾಗಳನ್ನು ಈ ಕತೆ ನೆನಪಿಸುತ್ತದೆ. ಪ್ರಕಾಶ, ರಾಜೀವ ಎಂಬ ಇಬ್ಬರು ವ್ಯಕ್ತಿಗಳನ್ನು ಮುಖ್ಯ ಭೂಮಿಕೆಯಲ್ಲಿ ಇಟ್ಟುಕೊಂಡು ಒಂದು ಮನೆಯ ಒಳಗೆ ನಡೆಯುವ ಕತೆ ಓದುತ್ತಿದ್ದಂತೆ ಕುತೂಹಲ ಕೆರಳುತ್ತದೆ. ಮೊದಲ ಕತೆ ಒಂದು ಮನೆಯೊಳಗೆ ನಡೆದರೆ ಎರಡನೇ ಕತೆ “ಭವಿಷ್ಯವಿಲ್ಲದ ಭವಿಷ್ಯದಲ್ಲಿ” ನಮ್ಮನ್ನು ಕಲ್ಪನಾ ಲೋಕಕ್ಕೆ ಕರೆದೊಯ್ಯುತ್ತದಾದರೂ ಕತೆಗಾಗರ ತಲೆಯೊಳಗೆ ಕತೆ ರೂಪು ಪಡೆದಿರುವುದರಿಂದ ಈ ಕತೆಯನ್ನು ಅರ್ಥೈಸಿಕೊಳ್ಳಲು ಮತ್ತೊಮ್ಮೆ ಓದಿಕೊಳ್ಳಬೇಕು. ಹಲವು ಥೀಮ್‌ ಗಳನ್ನು ಒಂದೆಡೆ ಕಲೆ ಹಾಕಿ ಭವಿಷ್ಯದಲ್ಲಿ ಮನುಷ್ಯನಿಗೆ ಭವಿಷ್ಯವಿಲ್ಲ ಎನ್ನುವುದ ಫ್ರೂ ಮಾಡಲು ಶ್ರಮಿಸುವ ಕಾರಣಕ್ಕೆ ಕತೆ ಸ್ವಲ್ಪ ಕ್ಲಿಷ್ಟವಾಗಿದೆ ಎನ್ನಬಹುದು. ಆದರೂ ಕತೆಯಲ್ಲಿ ಬರುವ ಪಂಚಿಂಗ್‌ ಸಂಭಾಷಣೆಗಳು ಹಾಗು ಕೆಎಸ್‌ ನಿಸಾರ್‌ ಅಹಮ್ಮದರ ಕವಿತೆ ನೆನಪಿನಲ್ಲಿ ಉಳಿಯುತ್ತವೆ. ಮೂರನೇ ಕತೆ “ಅನಾಹತ” ಗಿರಿರಾಜರ ಮತ್ತೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಅಂಶಗಳುಳ್ಳ ಕತೆ. ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ವಾಂಛೆಯಾದ ಇಂಗ್ಲೀಷ್‌ ನಲ್ಲಿ Paedophilia ಎನ್ನುವ ಒಂದು ಕ್ರೈಂ ಈ ಕಥೆಯ ಕಥಾವಸ್ತುವಾಗಿದೆ. ಪುಸ್ತಕದಲ್ಲಿನ ಆರನೇ ಕತೆ ಪ್ರಾಣಿಗಳ ಜೊತೆ ಲೈಂಗಿಕ ಕ್ರಿಯೆ ನಡೆಸುವ ಅಪರಾಧವಾದ ಇಂಗ್ಲೀಷ್‌ ನಲ್ಲಿ Bestiality ಎನ್ನುವುದರ ಕುರಿತಾಗಿದೆ. “ಅನ್‌ಟಚೆಬಲ್”‌ ಕತೆ ವಿಶಿಷ್ಟ ಶಕ್ತಿಯನ್ನು ಪಡೆದಿರುವ ದುರಂತ ವ್ಯಕ್ತಿ ಸಿದ್ದರಾಜುವಿನ ಕತೆ ಹೇಳುತ್ತದೆ.

ಈ ಕಥಾ ಸಂಕಲನದಲ್ಲಿ “ಸ್ನೇಕ್‌ ಟ್ಯಾಟೂ”, “ರತಿ ಎಂಬ ದೇಶದ್ರೋಹಿ”, “ಮಂಗಳಂಗೆ ಮೊದಲಿಂದಲೂ ಹಾಗೆ” ಹಾಗೂ “ಪ್ರೀತಿಗೊಂದು ಆಯುರ್ವೇದಿಕ್‌ ಮದ್ದು” ಈ ಕತೆಗಳು ವಿಶಿಷ್ಟವಾಗಿದ್ದು ಸಂಬಂಧಗಳ ಸಂಕೀರ್ಣತೆಯ ತಾಕಲಾಟಗಳನ್ನು ತುಂಬಾ ಸಶಕ್ತವಾಗಿ ಗಿರಿರಾಜರು ಕಟ್ಟಿಕೊಟ್ಟಿದ್ದಾರೆ. ಜೊತೆ ಜೊತೆಗೆ ಆಧುನಿಕ ಭಾರತದ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಕೂಡ ಮಾಡಿದ್ದಾರೆ. ಅದರಲ್ಲೂ ಸ್ತ್ರೀ ಸ್ವಾತಂತ್ರ್ಯದ ಮೇಲೆ ಹೆಚ್ಚು ಒತ್ತುಕೊಟ್ಟು ಕತೆಗಳಲ್ಲಿ feminism ಅಂಶಗಳನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಧರ್ಮದ ವಿಷಯಕ್ಕೆ, ಜಾತಿಯ ವಿಷಯಕ್ಕೆ ಒಡೆಯಲ್ಪಡುತ್ತಿರುವ ಸಾಮಾಜದ ಸೂಕ್ಷ್ಮಗಳನ್ನು ಗಿರಿರಾಜರು ತಮ್ಮ ಇಷ್ಟೂ ಕತೆಗಳಲ್ಲಿ ಒಂದಲ್ಲ ಒಂದು ಕಡೆ ಚರ್ಚಿಸಿರುವುದಲ್ಲದೇ, ಆ ಒಡೆಯುವಿಕೆ ನಿಲ್ಲುವ ಪ್ರಕ್ರಿಯೆಯನ್ನು ಹೇಗೆ ಹುಟ್ಟುಹಾಕಬಹುದು ಎನ್ನುವ ಸುಳಿವು ನೀಡಿದ್ದಾರೆ. ಗಿರಿರಾಜರು ಕತೆ ಹೇಳುವ ರೀತಿ, ಅವರ ಭಾಷೆ ಒಂಚೂರು raw ಅನಿಸಿದರೂ ಮನುಷ್ಯತ್ವದ ಪ್ರತಿಪಾದನೆಯು ಅವರ ಈ ಕತೆಗಳ ಮೂಲ ತಿರುಳಾಗಿದೆ.

ಇಂತಹ ಗಟ್ಟಿ ತಿರುಳುಳ್ಳ ಕತೆಗಳನ್ನು ಬರೆಯುವ ಗಿರಿರಾಜರು ೨೦೧೩ ರ ಡಿಸೆಂಬರ್‌ ನಲ್ಲಿ ನಮ್ಮ ಪಂಜು ಪತ್ರಿಕೆಗೆ ಒಂದು ಕತೆ ಕಳುಹಿಸಿ “ಈ ಕತೆಗೆ ಹೆಸರಿಟ್ಟಿಲ್ಲ. ನೀವೇ ಒಂದು ಹೆಸರು ಕೊಟ್ಟು ಸಾಧ್ಯವಾದರೆ ಪ್ರಕಟಿಸಿ” ಎಂದು ತಮ್ಮ ಕತೆಯನ್ನು ಮೇಲ್‌ ಮಾಡಿದ್ದರು. ಕತೆಯ ಒಂದೆರಡು ಪುಟಗಳನ್ನು ಓದಿ ಯಾಕೋ ಅದರ ಭಾಷೆ ಸರಿಕಾಣದ ಕಾರಣ “ಕತೆಯ ಭಾಷೆ ಯಾಕೋ ಇಷ್ಟವಾಗಲಿಲ್ಲ. ಆದ ಕಾರಣ ಈ ಕತೆಯನ್ನು ಪ್ರಕಟಿಸಲಾಗುತ್ತಿಲ್ಲ” ಅಂತ ಅವತ್ತು ಗಿರಿರಾಜರಿಗೆ ಮೇಲ್‌ ಬರೆದಿದ್ದೆ. ಅದೇ ಕತೆಯನ್ನು ಇಷ್ಟು ವರ್ಷಗಳ ನಂತರ ಈ ಪುಸ್ತಕದಲ್ಲಿ ಶೀರ್ಷಿಕೆಯ ಕತೆಯಾಗಿರುವ “ಸ್ನೇಕ್‌ ಟ್ಯಾಟೂ” ಕತೆಯನ್ನು ಪೂರ್ತಿ ಓದಿದಾಗ “ಅವತ್ತು ಈ ಕತೆಯನ್ನು ಪೂರ್ತಿ ಓದದೆ ಯಾಕೆ ನಾನು ತಪ್ಪು ಮಾಡಿದೆ ಅನಿಸುತ್ತಿದೆ.” ಒಂದೊಳ್ಳೆ ಕತೆಯ ಕೇವಲ ಮೊದಲೆರಡು ಪುಟಗಳನ್ನು ಓದಿ ಒಂದಷ್ಟು ಅಶ್ಲೀಲ ಶಬ್ದಗಳಿದ್ದ ಮಾತ್ರಕ್ಕೆ ಕತೆಗಳನ್ನು ನಿರಾಕರಿಸಿದ್ದಕ್ಕೆ ಇವತ್ತು ನನಗೆ ಬೇಸರವಾಗುತ್ತಿದೆ. ಈ ಅನುಭವದಿಂದ, ಕತೆಯನ್ನು ಪೂರ್ತಿ ಓದದೆ ಯಾವತ್ತಿಗೂ ಕತೆ ಸರಿ ಇಲ್ಲ ಎನ್ನಬಾರದು ಎನ್ನುವುದು ನಾನು ಕಲಿತ ದೊಡ್ಡ ಪಾಠ. ಅವರ ಕತೆಯನ್ನು ಅವತ್ತು ಪೂರ್ತಿ ಓದದೆ ಇದ್ದುದ್ದಕ್ಕೆ ಗಿರಿರಾಜರ ಕ್ಷಮೆ ಯಾಚಿಸುತ್ತೇನೆ. ಒಬ್ಬ ಸಿನಿಮಾ ನಿರ್ದೇಶಕರಾಗಿ, ರಂಗಕರ್ಮಿಯಾಗಿ ಹೆಸರು ಮಾಡಿರುವ ಗಿರಿರಾಜರು ಕನ್ನಡ ಸಾಹಿತ್ಯ ಲೋಕಕ್ಕೆ ಇನ್ನಷ್ಟು ಕೊಡುಗೆಗಳನ್ನು ನೀಡಲಿ. ವಿಭಿನ್ನ ಕಥಾವಸ್ತುಗಳನ್ನು ಉಳ್ಳ ಪುಸ್ತಕವಾದ “ಸ್ನೇಕ್‌ ಟ್ಯಾಟೂ” ವನ್ನು ಕನ್ನಡದ ಓದುಗರು ಕೊಂಡು ಓದಲಿ ಎಂದು ಆಶಿಸುತ್ತೇನೆ. ಹಾಗೆಯೇ ಬಿ ಎಂ ಗಿರಿರಾಜರ ಲೇಖನಿಯಿಂದ ಇನ್ನಷ್ಟು ಕೃತಿಗಳು ಮೂಡಿಬರಲಿ ಎಂದು ಶುಭ ಹಾರೈಸುತ್ತೇನೆ.

-ಡಾ. ನಟರಾಜು ಎಸ್‌ ಎಂ

ಪುಸ್ತಕ: ಸ್ನೇಕ್‌ ಟ್ಯಾಟೂ (ಕಥಾ ಸಂಕಲನ)

ಲೇಖಕರು: ಬಿ ಎಂ ಗಿರಿರಾಜ

ಪ್ರಕಾಶನ: ಕಾನ್ಕೇವ್‌ ಮಿಡೀಯಾ

ಪ್ರತಿಗಳಿಗಾಗಿ ಸಂಪರ್ಕಿಸಿ: 9902590303


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಪ್ರವೀಣಕುಮಾರ ಸುಲಾಖೆ ದಾಂಡೇಲಿ
ಪ್ರವೀಣಕುಮಾರ ಸುಲಾಖೆ ದಾಂಡೇಲಿ
1 year ago

ಚಂದದ ವಿಮರ್ಶೆ.

1
0
Would love your thoughts, please comment.x
()
x