ರಾಧಾ ಕೃಷ್ಣರ ಪ್ರೇಮವೆಂದರೆ ಅದೊಂದು ಅಪೂರ್ವ ಕಾವ್ಯಾ; ಭಾಗಶಃ ಹೊಸಗನ್ನಡ ಸಾಹಿತ್ಯದಲ್ಲಿ ಈ ಪ್ರೇಮ ಕಾವ್ಯದ ಬಗ್ಗೆ ಹಾಡಿ ಹೊಗಳದ ಕವಿಗಳಿಲ್ಲ. ಈ ಪ್ರೇಮಕಥೆಯನ್ನು ಕೇಳಿ ತಣಿಯದ ಕನ್ನಡ ಮನಗಳಿಲ್ಲ. ರಾಧೆ ಕೃಷ್ಣನೇ ಆಗಿ ಕೃಷ್ಣನನ್ನು ಆರಾಧಿಸುತ್ತಾ, ಪ್ರೇಮಿಸುತ್ತಾ, ಸಂಭ್ರಮಿಸುತ್ತಾ ಬಂದ ಕಥೆಯೇ ಈ ರಾಧಾಕೃಷ್ಣ ಪ್ರೇಮ.
ಕುವೆಂಪು, ಪು.ತಿ.ನ, ಕೆಎಸ್ ನರಸಿಂಹಸ್ವಾಮಿ, ಜಿ ಎಸ್ ಶಿವರುದ್ರಪ್ಪ , ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ, ವೆಂಕಟೇಶಮೂರ್ತಿ ಮೊದಲಾದ ಹಲವಾರು ಕವಿಗಳು ತಮ್ಮ ಕಾವ್ಯಗಳಲ್ಲಿ ರಾಧಾಕೃಷ್ಣ ಪ್ರೇಮವನ್ನು ಬಹಳ ಮಾಧುರ್ಯವಾಗಿ ಹಿಡಿದಿಟ್ಟಿದ್ದಾರೆ.
ಒಮ್ಮೆ ರಾಧಾಕೃಷ್ಣರ ಪ್ರೇಮ ಪ್ರೇಮಗೀತೆಯಾಗಿ ಕಿವಿಗೆ ಇಂಪನ್ನು ಕೊಟ್ಟರೆ, ಮತ್ತೊಮ್ಮೆ ವಿರಹಗೀತೆಯಾಗಿ ಹೃದಯಬೇಗೆಯನು ನೀಡೇ ನೀಡುತ್ತದೆ. ಪ್ರೇಮವೆಂಬುದೇ ಆಗೇ ತಾನೇ ಒಮ್ಮೆ ಸನಿಹ, ಮತ್ತೊಮ್ಮೆ ವಿರಹ. ಈ ರಾಧಾಕೃಷ್ಣ ಪ್ರೇಮ ಇಂದಿನ ಎಷ್ಟೋ ಯುವಪ್ರೇಮಿಗಳಿ ಸ್ಫೂರ್ತಿ. ಎಷ್ಟೋ ಬರಹಗಾರರಿಗೆ ವಸ್ತು ಸ್ಥಿತಿ. ಓದುಗನಿಗೆ ಕಥೆ; ಕೇಳುಗರಿಗೆ ಕಾವ್ಯ.
ಕುವೆಂಪು ಇದೇ ರಾಧಾಕೃಷ್ಣರ ಪ್ರೇಮವನ್ನು ಕುರಿತು ‘ಬೃಂದಾವನಕೆ ಹಾಲನು ಮಾರಲು’ ಎಂಬ ಒಂದು ಕವಿತೆಯನ್ನು ರಚಿಸಿದ್ದಾರೆ. ಇಲ್ಲಿ ರಾಧೆ ಶ್ಯಾಮನನ್ನು ಕಾಣುವ ಕಾತುರದಲ್ಲಿದ್ದಾಳೆ. ಇದೇ ಕಾರಣಕ್ಕಾಗಿಯೇ ತನ್ನ ಗೆಳತಿಯನ್ನು ಬೃಂದಾವನಕೆ ಹಾಲನು ಮಾರಲು ಹೋಗುವ ಬಾ ಸಖಿಯೆ ಎಂದು ಕರೆಯುತ್ತಿರುವುದು ಇಲ್ಲಿ ವಿಶೇಷ.
ಬೃಂದಾವನಕೆ ಹಾಲನು ಮಾರಲು
ಹೋಗುವ ಬಾರೆ ಬೇಗ ಸಖಿ ||
ಬೃಂದಾವನದಿ ಹಾಲನು ಕೊಳ್ಳುವ
ಆರಿಹರೆ ಹೇಳ್ ಇಂಧುಮುಖಿ?
ತನ್ನನ್ನು ಬೃಂದಾವನಕೆ ಕರೆದ ರಾಧೆಯನ್ನು ತನ್ನ ಗೇಳತಿ ಕೇಳುತ್ತಿದ್ದಾಳೆ : ಬೃಂದಾವನದಲ್ಲಿ ಹಾಲನು ಮಾರಲು ಹೋದರೆ ಕೊಳ್ಳುವವರು ಯಾರಿದ್ದಾರೆ ಹೇಳು ಚಂದ್ರಮುಖಿ ಎಂದು. ಮುಂದಿನ ಸಾಲಿನಲ್ಲಿ ರಾಧೆ ತನ್ನ ಗೆಳತಿಗೆ ಉತ್ತರವನ್ನು ನೀಡುತ್ತಿದ್ದಾಳೆ :
ಗೋವನು ಕಾಯುವ ಗೋವಿಂದನಿಹನೆ?
ಹಾಲನು ಕೊಳ್ಳುವ ಹೇಳೆ ಸಖಿ
ಚಿನ್ನವ ಕೊಡನೆ ರನ್ನವ ಕೊಡನೆ
ತನ್ನನೆ ಕೊಡುವನು ಬಾರೆ ಸಖಿ
ಬೃಂದಾವನದಲ್ಲಿ ಗೋವುಗಳನ್ನು ಕಾಯುವ ಗೋವಿಂದ, ಗೋಪಾಲ, ಗೋಪಾಲಕೃಷ್ಣ ಇರುವನು. ಆತನೆ ಹಾಲನು ಕೊಳ್ಳುವ. ಹಾಲಿಗೆ ಬದಲಾಗಿ ಚಿನ್ನ,ರನ್ನ, ಮುತ್ತು, ಬಂಗಾರವನ್ನು ಆತ ಕೊಡುವುದಿಲ್ಲ. ಬದಲಿಗೆ ತನ್ನನ್ನೇ ತಾನು ನನಗರ್ಪಿಸುತ್ತಾನೆ. ಈ ಕಾರಣಕ್ಕಾಗಿ ಬೃಂದಾವನಕೆ ಹೊರಡಲು ರಾಧೆಯ ತುಡಿಯುತ್ತಿದ್ದಾಳೆ.
ಕೃಷ್ಣನ ಕಣ್ಣನು ಸೆಳೆಯುವ ಪೀತಾಭರವನ್ನು ಧರಿಸಿ, ಯಮುನಾ ನದಿ ತೀರವ ಅಲೆದು ‘ಹಾಲುಬೇಕೆ ಹಾಲು’ ಎನ್ನುತ್ತಾ ಸಾರಿ ಹಾಲನು ಮಾರುವ ನೆಪದಲಿ ಕೃಷ್ಣನನ್ನು ಮೋಹಿಸಿ ಕರೆದು ಕಣ್ತುಂಬಿಕೊಳ್ಳುವ ಕಾತುರ ರಾಧೆಗೆ. ಹರಿಗೆ ಹಾಲು ತೆಗೆದುಕೊಳ್ಳುವಂತೆ ನಿವೇದನೆಯಿಟ್ಟು, ನನ್ನ ಆತ್ಮವನ್ನು ಆತನಿಗೆ ಅರ್ಪಿಸಿ ಮುಕ್ತಿ ಹೊಂದವ ಬಯಕೆ ಒಂದುಕಡೆ ರಾಧೆಗೆ. ಮತ್ತೊಂದು ಕಡೆ ಹಾಲನ್ನು ಮಾರಿ ಕೃಷ್ಣನನ್ನೇ ತನ್ನವನ್ನಾಗಿಸಿಕೊಳ್ಳುವ ಕಾತುರ. ಕೃಷ್ಣನನ್ನು ನನ್ನವನಾಗಿಸಿಕೊಂಡುಬಿಟ್ಟರೆ ಅದೇ ಲಾಭ. ಅದಕ್ಕಿಂತಲೂ ಮಿಗಿಲಾದ ಲಾಭವಿದೆಯೇ ಎಂದು ತನ್ನ ಸ್ನೇಹಿತೆಯನ್ನು ಪ್ರಶ್ನಿಸುವ ರಾಧೆ ಬಾ ಬೇಗ ಹೋಗಿ ಬೃಂದಾವನದಲ್ಲಿ ಹಾಲನು ಮಾರಿ ಬರುವ ಎಂಬುದಾಗಿ ಕೂಗುತ್ತಿದ್ದಾಳೆ.
ಕವಿ ಕುವೆಂಪು ಇಲ್ಲಿ ರಾಧೆಯ ಮನದ ತವಕವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪ್ರೇಮದಲ್ಲಿ ಗಂಡಾಗಲಿ ಹೆಣ್ಣಾಗಲಿ ಸಮಮನಸ್ಕರೂ ಇಬ್ಬರ ತುಡಿತವೂ ಒಂದೇ ಇಬ್ಬರ ಮಿಡಿತವೂ ಒಂದೇ. ಒಬ್ಬರನ್ನೊಬ್ಬರು ಸಂಧಿಸುವ ಸಮಯಕ್ಕಾಗಿ ಆತೋರೆಯುವ ಬಗೆಯೂ ಒಂದೇ. ಈ ರೀತಿಯ ತವಕವನ್ನು ರಾಧೆ ಕೃಷ್ಣನ್ನನ್ನು ಕಾಣುವ ಸಲುವಾಗಿ ಮಾಡುವ ಪ್ರಯತ್ನದಲ್ಲೇ ಕಾಣಬಹುದಾಗಿದೆ.
ಅಕೋ ಶ್ಯಾಮ ಅವಳೇ ರಾಧೆ
ನಲಿಯುತಿಹರು ಕಾಣಿರೇ ||
ನಾವೆ ರಾಧೆ ಅವನೇ ಶ್ಶಾಮ
ಬೇರೆ ಬಗೆಯ ಮಾಣಿರೇ
ಇದು ಪು ತಿ ನರಸಿಂಹಾಚಾರ್ ಅವರ “ಅಕೋ ಶ್ಯಾಮ ಅವಳೇ ರಾಧೆ” ಎಂಬ ಕವಿತೆಯ ಸಾಲುಗಳು. ಇಲ್ಲಿ ಕವಿ ರಾಧಾಕೃಷ್ಣರ ನಡುವಿನ ಪ್ರೇಮವನ್ನು ತನ್ನದೇ ಆದ ರೀತಿಯಲ್ಲಿ ಅರ್ಥೈಸಲು ಪ್ರಯತ್ನಿಸಿದ್ದಾರೆ.
ಇಲ್ಲಿ ರಾಧೆ ಶ್ಯಾಮ ಇಬ್ಬರೂ ತಮ್ಮ ಪ್ರೇಮದ ಅಲೆಯಲ್ಲಿ ಕಳೆದು ಹೋಗಿದ್ದಾರೆ. ಇದನ್ನು ದೂರದಿ ನಿಂತು ಹಲವು ತರಣಿಯರು ಕಂಡಿದ್ದಾರೆ. ಅಷ್ಟೇ ಅಲ್ಲ ತಮ್ಮನ್ನೇ ತಾವೇ ರಾಧೆಯೆಂದೂ ಬಗೆದು ಅವನೇ ನಮ್ಮ ಶ್ಯಾಮನೆಂದೂ ಭ್ರಮಿಸುತ್ತಿದ್ದಾರೆ. ಅಂದರೆ ಈ ರಾಧಾಕೃಷ್ಣರ ಪ್ರೇಮ ಎಂತಹದು ? ಅಂದಿನ ಯುವಕರಿಗೆ ಈ ಈರ್ವರು ಪ್ರೀತಿ ಎಷ್ಟು ಸ್ಪೂರ್ತಿಯಾಗಿರಬಲ್ಲದು ? ಊಹಿಸಿಕೊಳ್ಳಲು ಅಸಾಧ್ಯವೆನಬಹುದು.
ಮುಂದೆ ಪ್ರೇಮಕವಿ, ದಾಂಪತ್ಯ ಕವಿ ಎಂದೇ ಹೆಸರಾಗಿರುವಂತಹ ಕೆ ಎಸ್ ನರಸಿಂಹಸ್ವಾಮಿ ಅವರು ರಾಧಾಕೃಷ್ಣರ ಪ್ರೇಮವನ್ನು ಮುಗಿಲಿಗೆ ಹೋಲಿಸಿದ್ದಾರೆ. ಅದೇಗೇಂದರೆ :
ಶ್ರೀ ಕೃಷ್ಣನಂತೊಂದು ಮುಗಿಲು
ರಾಧೆಯಂತಿನ್ನೊಂದು ಮುಗಿಲು
ಅಲ್ಲೊಂದು ಇಲ್ಲೊಂದು ಮುಗಿಲು
ಮುಗಿಲೆಲ್ಲ ಕೃಷ್ಣನ ಕೊಳಲು
ರಾಧೆ, ಕೃಷ್ಣ, ಬೆಣ್ಣೆಗಿರಿ, ಯಮುನಾ ನದಿ ಎಲ್ಲವೂ ಒಂದು ಮುಗಿಲಿನಂತೆ. ಈ ಎಲ್ಲಾ ಮುಗಿಲಿಗೆಲ್ಲಾ ಆಧಾರ ಕೃಷ್ಣ. ಆ ಕೃಷ್ಣನಿಗೆ ಈ ಮುಗಿಲೆಲ್ಲವೂ ಕೊಳಲಿನ ರೀತಿ ಎಂದುದಾಗಿ ಚಿತ್ರಿಸಿದ್ದಾರೆ.
ಇನ್ನೂ ಹೆಚ್ ಎಸ್ ವೆಂಕಟೇಶಮೂರ್ತಿ ಅವರ “ತೂಗುಮಂಚದಲ್ಲಿ ಕೂತು” ಕವಿತೆ ಬಹಳ ಮನೋಜ್ಞವಾಗಿದೆ. ಇಲ್ಲಿ ತೂಗು ಮಂಚದಲ್ಲಿ ಕೂತಿರುವ ಕೃಷ್ಣ ಯಾರದೋ ಮಾತಿಗಾಗಿ ಕಾಯುತ್ತಿದ್ದಾನೆ :
ತೂಗು ಮಂಚದಲ್ಲಿ ಕೂತು
ಮೇಘಶಾಮ ರಾಧೆಗಾತು
ಆಡುತಿಹನು ಏನೋ ಮಾತು
ರಾಧೆ ನಾಚುತಿದ್ದಳು
ತೂಗು ಮಂಚದಲ್ಲಿ ಕೂತಿರುವ ಕೃಷ್ಣ ರಾಧೆಗಾಗಿ ಏನೋ ಪಿಸುಮಾತಗಳನ್ನು ಆಡುತ್ತಿದ್ದಾನೆ. ಇದನ್ನು ಕೇಳಿ ರಾಧೆಯೂ ಕೂಡ ನಾಚುತ್ತಿದ್ದಾಳೆ. ಆಕೆ ತನ್ನ ಬೆರಳುಗಳಿಗೆ ಸೆರಗಿನ ತುದಿಯನ್ನು ಸುತ್ತಿ, ತನ್ನ ಜಡೆಯ ತುದಿಯನ್ನು ಕೆನ್ನೆಗೊತ್ತಿಕೊಂಡು ಮುಖವನ್ನು ಜುಮ್ಮೆನುವಂತೆ ಮಾಡಿಕೊಂಡು ರೋಮಾಂಚನ ಭಾವವನ್ನು ವ್ಯಕ್ತಪಡಿಸುತ್ತಿದ್ದಾಳೆ. ಮುಂದಿನ ಸಾಲುಗಳಲ್ಲಿ :
ಮುಖವ ಎದೆಯ ನಡುವೆ ಒತ್ತಿ
ತೋಳಿನಿಂದ ಕೊರಳ ಸುತ್ತಿ
ತುಟಿಯು ತೀಡಿ ಬೆಂಕಿ ಹೊತ್ತಿ
ಕಮ್ಮನುಸಿರ ಬಿಟ್ಟಳು
ಹೀಗೆ ನಿಂತಲ್ಲಿಯೇ ಕೃಷ್ಣನನ್ನು ಪ್ರೇಮಿಸುವ, ಆರಾಧಿಸುವ, ಆಲಂಗಿಸುವ ರಾಧೆಯ ಪ್ರೇಮ ಒಂದು ರೋಮಾಚನ ಕಾವ್ಯ.
ಸೆರಗು ಜಾರುತಿರಲು, ತುಟಿ ಅದರುತಿರಲು, ಯುಮುನೆಯ ದಡದಲ್ಲಿ ಚಂದ್ರ ಬರಲು
ರಾಧೆ ತನಗೆ ತಾನೇ ತೂಗುಮಂಚವಾಗಿ ಕೃಷ್ಣನನ್ನು ಮೋಹಿಸುವ ಪರಿ ಇಲ್ಲಿದೆ. ಅಲ್ಲದೆ ಈ ಕವಿಯ “ಗೋಕುಲದಲ್ಲಿ ಗೊಲ್ಲರ ನಡುವೆ” ಎಂಬ ಕವಿಯೂ ಕೂಡ ಬಹಳ ಮನೋಜ್ಞವಾಗಿದೆ.
ಮುಂದೆ ಇದೇ ಕವಿಯ ಇನ್ನೊಂದು ಕವಿತೆಯನ್ನು ಇಲ್ಲಿ ಗಮನಿಸಬಹುದು.
ಲೋಕದ ಕಣ್ಣಿಗೆ ರಾಧೆಯು ಕೂಡ
ಎಲ್ಲರಂತೆ ಒಂದು ಹೆಣ್ಣು
ನನಗೋ ಆಕೆ ಕೃಷ್ಣನ ತೋರುವ
ಪ್ರೀತಿಯು ನೀಡಿದ ಕಣ್ಣು
ಜಗತ್ತಿನ ದೃಷ್ಟಿಯಲ್ಲಿ ರಾಧೆ ಕೇವಲ ಒಂದು ಹೆಣ್ಣಾಗಿರಬಹುದು. ಆದರೆ ಕೃಷ್ಣನ ದರುಶನಕ್ಕೆ ರಾಧೆಯ ಪಾತ್ರ ಎಷ್ಟಿದೆ ? ಎಂಬುದನ್ನು ಮೊದಲು ಅರ್ಥೈಸಿಕೊಳ್ಳಬೇಕಾಗುತ್ತದೆ. ಮೊದಲಿಗೆ ಇಲ್ಲಿನ ವಿರಹ ವೇದನೆಯನ್ನು ಗಮನಿಸಿ :
ತಿಂಗಳ ರಾತ್ರಿ ತೊರೆಯ ಸಮೀಪ
ಉರಿದರೆ ಯಾವುದೋ ದೀಪ
ಯಾರೋ ಮೋಹನ ಯಾವ
ರಾಧೆಗೊ ಪಡುತಿರುವನು ಪರಿತಾಪ
ಜಗತ್ತಿನಲ್ಲಿ ಪ್ರೇಮಿಸುತ್ತಿರುವವರೆಲ್ಲಾ ಪ್ರೇಮಿಗಳು. ಕೇವಲ ಪ್ರೇಮಿಗಳೆ ? ಅಲ್ಲಲ್ಲ ತಮ್ಮನ್ನು ರಾಧಾಕೃಷ್ಣರೆಂದೇ ಭಾವಿಸಿಕೊಂಡಿರುವವರು. ಇವರ ಸಾಲಿನಲ್ಲಿ ಯಾವನೋ ಮೋಹನ ತನ್ನ ರಾಧೆಗಾಗಿ ಪರಿತಪಿಸುವ ಸನ್ನಿವೇಶವಿದೆಯಲ್ಲ ? ಅದು ಪ್ರೇಮಿಗಳಿಗಷ್ಟೇ ಗೊತ್ತು.
ನಾನು ನನ್ನದು ನನ್ನವರೆನ್ನುವ
ಹಲವು ತೊಡಕುಗಳ ಮೀರಿ
ಧಾವಿಸಿ ಸೇರಲು ಬೃಂದಾವನವ
ರಾಧೆ ತೋರುವಳು ದಾರಿ
ಇಲ್ಲಿ ನಾನು, ನನ್ನವರು, ನನ್ನದು ಎಂಬ ಹಲವಾರು ಅಡೆತಡೆಗಳನ್ನೂ ಮೀರಿ ನಿಮ್ಮ ನಿಮ್ಮ ಮಾಧವನ ಸೇರಲು ರಾಧೆ ತೋರುವಳು ದಾರಿ ಎಂದು ಕವಿ ಒಂದು ಕಡೆ ಹೇಳುತ್ತಾರೆ. ಅಲ್ಲದೆ ಈ ಪ್ರೇಮವೆಂಬುದು ಮಹಾಪ್ರವಾಹ :
ಮಹಾ ಪ್ರವಾಹ ತಡೆಯುವರಿಲ್ಲ
ಪಾತ್ರವಿರದ ತೊರೆ ಪ್ರೀತಿ
ತೊರೆದರು ತನ್ನ ತೊರೆಯದು ಪ್ರಿಯನ
ರಾಧೆಯ ಪ್ರೀತಿಯ ರೀತಿಯಿದು
ಇದನ್ನು ತಡೆಯುವವರಿಲ್ಲ. ಯಾರೇ ತೊರೆದರೂ ತನ್ನ ತಾ ತೊರೆದರೂ ತನ್ನ ಪ್ರೇಮವನ್ನೂ ತೊರೆಯಲಾಗದು. ರಾಧೆಯ ಪ್ರೀತಿಯ ಧಾಟಿ ಇದು. ಇದೇ ಎಲ್ಲರಿಗೂ ಸ್ಪೂರ್ತಿ, ಮಾದರಿ ಎಂಬುದು ಕವಿಯ ನಿಲುವು.
ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರು ತಮ್ಮದೊಂದು ಕವಿತೆಯಲ್ಲಿ “ನೀ ಸೀಗದೇ ಬಾಳೊಂದು ಬಾಳೇ ಕೃಷ್ಣ” ಎಂಬುದಾಗಿ ರಾಧೆಯ ನಿಲುವನ್ನು ಎತ್ತಿ ಹಿಡಿದು ಹಾಡಿದ್ದಾರೆ. ಇಲ್ಲಿ ರಾಧೆಯ ವಿರಹ ವೇದನೆ ಹೇಳತೀರದಾಗಿದೆ.
ನೀ ಸಿಗದೇ ಬಾಳೊಂದು ಬಾಳೆ ಕೃಷ್ಣ
ನಾ ತಾಳಲಾರೆ ಈ ವಿರಹ ಕೃಷ್ಣ
ಕಮಲವಿಲ್ಲದ ಕೆರೆ ನನ್ನ ಬಾಳು
ಚಂದ್ರ ಇಲ್ಲದ ರಾತ್ರಿ ಬೀಳು
ನೀ ಸಿಗದೇ ಉರಿ ಉರಿ ಕಳೆದೆ ಇರುಳ
ಮಾತಿಲ್ಲ ಬಿಗಿದಿದೆ ದುಃಖ ಕೊರಳ
ಕಮಲವಿಲ್ಲದ ಕೆರೆಯ ರೀತಿ, ಚಂದ್ರನಿಲ್ಲದ ರಾತ್ರಿಯ ರೀತಿ ಕೃಷ್ಣನಿಲ್ಲದ ಬದುಕು. ಆತನಿಲ್ಲದೆ ಆತನ ದನಿಯಿಲ್ಲದೆ ಇಡೀ ರಾತ್ರಿಯನ್ನು ಉರಿ ಉರಿಯಲ್ಲಿ ಕಳೆದಿರುವೆ, ದುಃಖವೇ ಗಂಟಲ ಬಿಗಿದಿರೆ ಮಾತನಾಡಲು ಸಾಧ್ಯವೆ ? ಅನ್ನ, ನೀರು, ನಿದ್ದೆ ಸೇರದ ಈ ಯಾತನೆಯನ್ನು ಯಾರು ಅರಿವರು ಹೇಳು ? ನನ್ನ ನೋವ ಅರಿತವರಾರು ? ಎಂದು ಗೋಳಿಡುವ ರಾಧೆ –
ನಿನಗಾಗಿ ಕಾಯುತ್ತಿದೆ ಈ ಜೀವ, ನನ್ನೊಳಗೆ ಇರುವ ಗಿರಿಧರೆನೆ ಹೊರಗೆ ಬಂದು ನನ್ನೆದುರು ನಿಂತು ನಿನ್ನ ಮುಖ ತೋರು ನನ್ನ ಪ್ರೀತಿ ನೆನ್ನೆ ಮೊನ್ನೆಯದಲ್ಲ ಜನುಮ ಜನುಮದ ಪ್ರೀತಿ ನಿನ್ನೊಳಗೂ ಹರಿದಿದೆ ಅದು; ಇದೆ ರೀತಿಯಲ್ಲಿ ಎಂಬುದಾಗಿ ರಾಧೆ ತನ್ನ ನೋವನ್ನು ವ್ಯಕ್ತಪಡಿಸಿಕೊಳ್ಳು ಸನ್ನಿವೇಶ ಇಲ್ಲಿದೆ. ಜಿ ಎಸ್ ಶಿವರುದ್ರಪ್ಪ ಅವರ “ಇನ್ನೂ ಕಾಣೆನು ಕೃಷ್ಣನ ನಾ” ಎಂಬ ಕವಿಯೂ ಕೂಡ ಇಲ್ಲಿ ಉಲ್ಲೇಖನೀಯ.
ಒಟ್ಟಾರೆ ಪ್ರೇಮವೆಂಬುದು ಇದ್ದರೆ ರಾಧೆ ಕೃಷ್ಣರ ಪ್ರೇಮದಂತಿರಬೇಕು. ಪ್ರೇಮ ಜನರ ಕಣ್ಣಿಗೆ ಸೋತರೂ ನಮ್ಮೊಳಗೆ ಗೆಲುವನ್ನು ಕಾಣಬೇಕು. ಪಾಶ್ಚಾತ್ಯ ಪ್ರೇಮವನ್ನು ಉದಾಹರಣೆ ನೀಡುವ ಬದಲು ಭಾರತ ಸಾಹಿತ್ಯ, ಕನ್ನಡ ಸಾಹಿತ್ಯದಲ್ಲಿ ಅಮರರಾಗಿರುವ ರಾಧಾಕೃಷ್ಣರ ಪ್ರೇಮವನ್ನು ಮೆಚ್ಚಬೇಕು. ಈ ದೃಷ್ಟಿಯಿಂದಲೇ ರಸಖುಷಿ ಕುವೆಂಪು, ಪ್ರೇಮಕವಿ ಕೆ ಎಸ್ ನರಸಿಂಹಸ್ವಾಮಿ , ಪು ತಿ ನರಸಿಂಹಾಚಾರ್, ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಮೊದಲುಗೊಂಡು ಎಚ್ ಎಸ್ ವೆಂಕಟೇಶಮೂರ್ತಿ, ಎನ್ ಎಸ್ ಲಕ್ಷ್ಮೀನಾರಾಯಣರಹತಹ ಮಹಾನ್ ಕವಿಗಳು ಈ ಅಮರ ಪ್ರೇಮದ ಬಗ್ಗೆ ಕವಿತೆಗಳನ್ನು ಕಟ್ಟಿ ಹಾಡಿದ್ದಾರೆ. ಈ ಒಂದು ಲೇಖನದಿಂದ ಅವರೆಲ್ಲರನ್ನೂ ಪುನರ್ಮನನ ಮಡಿಕೊಳ್ಳಲು ಸಿಕ್ಕ ಅವಕಾಶಕ್ಕೆ ಕೃತಜ್ಞ.
-ಮನು ಗುರುಸ್ವಾಮಿ