ವಿರಹಕ್ಕೊಂದು ಪತ್ರ: ಪೂಜಾ ಗುಜರನ್. ಮಂಗಳೂರು.

“ಪ್ರೀತಿಸಿದ ತಪ್ಪಿಗೆ ವಿರಹಕ್ಕೊಂದು ಪತ್ರ”. ಇದು ನನ್ನೆದೆಯ ಬೀದಿಯಲ್ಲಿ ದಿನ ಬಂದು ಕಾಡಿಸುವ ನೋವಿಗೆ ಸಮಧಾನಿಸುವ ಸಲುವಾದರೂ ಬಿಡಿಸಿ ಕಣ್ಣಾಡಿಸು‌.ಇದು ನನ್ನ ಅಭಿಪ್ರಾಯವಷ್ಟೆ.

ಸುಮ್ಮನ್ನೆ ಇದ್ದವಳ ಬದುಕಿನಲ್ಲಿ ನಿನ್ನ ಆಗಮನ ಒಂದು ವಿಶೇಷವಾದ ಚೈತನ್ಯವನ್ನು ನೀಡಿತ್ತು.
ನಿನ್ನ ಮಾತಿನ ಚಾತುರ್ಯಕ್ಕೆ ಸೋತು ನನ್ನ ಹೃದಯವನ್ನೇ ನಿನ್ನ ಅಂಗೈಯಲ್ಲಿ ಇಟ್ಟು ನಿನ್ನ ಬೊಗಸೆಯೊಳಗೆ ಬೆಚ್ಚಗೆ ಶರಣಾಗಿದ್ದೆ.
ನಿನ್ನ ಜೊತೆ ಬೆಸೆದುಕೊಂಡು ಬಂಧಕ್ಕೆ ನನಗೆ ಸಿಕ್ಕಿದ್ದು ಒಂದೇ. ಅದು ಕೊನೆವರೆಗೂ ನನ್ನ ಜೀವ ಜೀವನವನ್ನು ಕಿತ್ತು ತಿನ್ನುವ ಸಂಕಟವಷ್ಟೆ..

ನನ್ನ ಅತಿರೇಕದ ಪ್ರೀತಿಗೆ ನೀನು ಬಂಡೆಯಂತಿದ್ದೆ. ಮೊದ ಮೊದಲ ಸಲಿಗೆಯಾಗಲಿ ಆ ಪ್ರೀತಿಯ ನೋಟವಾಗಲಿ ಮತ್ತೆಂದೂ ನಿನ್ನಿಂದ ಕಾಣಿಸಲೇ ಇಲ್ಲ. ಅದೆಷ್ಟು ಅಂಗಲಾಚಿದರೂ ನಿನ್ನನ್ನು ಮರಳಿ ಪಡೆಯುವ ಪ್ರಯತ್ನಕ್ಕೆ ನಾನು ಸೋತು ಹೋಗಿದ್ದೆ. ಇರಲಿ ಬಿಡು.. ನನ್ನ ಅಗಾಧವಾದ ಪ್ರೀತಿ ನಿನ್ನನ್ನು ನಿನ್ನ ಯೋಚನೆಯನ್ನು ಎಳ್ಳಷ್ಟು ಕರಗಿಸಲಿಲ್ಲ. ನಿನಗೇನಾಯಿತು ಯಾಕೆ ಹೀಗಾಡುತ್ತೀಯಾ ಎಂದು ಹಗಲು ರಾತ್ರಿ ಯೋಚಿಸಿದ್ದೆ. ಕೊನೆಗೂ ಅದರ ಕಾರಣ ತಿಳಿದಾಗ ನಾನು ಬೆಚ್ಚಿ ಬಿದ್ದಿದ್ದೆ.
ಪ್ರೇಮದಲ್ಲಿ ಏನಿಲ್ಲದಿದ್ದರೂ ಸಹಿಸಬಲ್ಲೆ ಆದರೆ ಆ ನಂಬಿಕೆಯ ಅಡಿಪಾಯವೇ ಗಟ್ಟಿಯಿಲ್ಲ ಅಂದ ಮೇಲೆ ಆ ಪ್ರೇಮವನ್ನು ಉಳಿಸಬೇಕು ಎನ್ನುವ ಕಿಂಚಿತ್ತು ಇರಾದೆ ಕೂಡ ಸತ್ತು ಹೋಗಿದೆ.
ನನ್ನೊಳಗಿನ ಪ್ರೇಮಕ್ಕೆ ನನ್ನ ಮೌನದ ಬಿಸಿ ತಾಕಿದರೆ ಅದು ಅಲ್ಲಿಯೇ ಸತ್ತು ಸಮಾಧಿಯಾಗುತ್ತದೆ. ಮತ್ತೆಲ್ಲವೂ ನೀರವ ಮೌನ.

ಅಂದು ವಿದಾಯ ಹೇಳಿದ ಕೊನೆಯ ಕಂಬನಿ ಕಣ್ಣಲ್ಲೇ ಸತ್ತು ಹೋಗಿತ್ತು.
ಎಷ್ಟೋ ಬಾರಿ ಮರೆಯಬೇಕೆಂದರೂ ಜೀವ ಹಿಂಡುವ ನೆನಪಿನ ಸಾಲುಗಳು ಚುಚ್ಚುತ್ತವೆ. ಕೇಳುವ ಪ್ರತಿ ಗೀತೆಯಲ್ಲೂ ಮರೆತ ಭಾವಗಳು ಎದೆಯನ್ನು ಹಿಂಡಿ ಇನ್ನಷ್ಟು ನೋವನ್ನು ನೀಡುತ್ತದೆ. ಮುಂಜಾನೆಯ ಕನಸಲ್ಲೂ ನಿನ್ನದೇ ಒಲವಿನ ಗುಂಗು. ತಟ್ಟನೆ ಎಚ್ಚರವಾದಾಗ ಎಲ್ಲೆಲ್ಲೂ ಕತ್ತಲೆ ಥೇಟು ಈ ನನ್ನ ಬದುಕಿನಂತೆ.ನೆನಪು ಕನಸಾಗಿ ಕಾಡುವುದು ಅಂದ್ರೆ ಇದೇನಾ..ಮತ್ತದೆ ತಲೆದಿಂಬಿನಲ್ಲಿ ಸದ್ದಿಲ್ಲದೆ ಬರುವ ಬಿಕ್ಕಳಿಕೆ.
ಅದೆಷ್ಟು ಖುಷಿಯಾಗಬೇಕು ಅಂದಾಗಲೆಲ್ಲ ಮತ್ತೆ ದುಃಖ ಉಮ್ಮಳಿಸಿ ಬರುತ್ತದೆ. ಬೊಗಸೆ ತುಂಬಾ ಪ್ರೀತಿಗಾಗಿ ಹಂಬಲಿಸಿದ್ದೆ. ಸಾಗರದಷ್ಟು ವಿಶಾಲವಾದ ಆ ನಿನ್ನ ಎದೆಯಲ್ಲಿ ನಿರಾಳವಾಗಿ ಮಲಗಿ ನಿದ್ರಿಸಬೇಕು ಅಂದುಕೊಂಡಿದ್ದು ಮನಸ್ಸಲ್ಲೆ ಉಳಿದು ಹೋಗಿದೆ. ಅನುಮಾನದ ಆ ಬರಡು ಹೃದಯದಲ್ಲಿ ಪ್ರೀತಿಯನ್ನು ಹುಡುಕುವ ಮೂರ್ಖತನವನ್ನು ನಾನೆಂದು ಮಾಡಲಾರೆ.

ಆ ದಿನ ನಿನ್ನ ಕಣ್ಣಲ್ಲಿ ಕಂಡಿದ್ದು ಬರೀ ನಿರ್ಲಿಪ್ತ ಭಾವ. ನನ್ನ ಎದೆಯೊಳಗಿನ ಅಖಂಡ ಪ್ರೀತಿಗೆ ಆ ನಿನ್ನ ಉದಾಸೀನದ ನೋಟವನ್ನು ಎದುರಿಸುವ ಶಕ್ತಿ ಇರಲಿಲ್ಲ. ಇರಲಿ ಬಿಡು ಬಲವಂತವಾಗಿ ಉಳಿಸಿ ಬೆಳೆಸುವ ಆ ಪ್ರೀತಿಯ ಅವಶ್ಯಕತೆಯನ್ನು ನಾನೆಂದು ಬಯಸಿದವಳಲ್ಲ. ನೀನಿಲ್ಲದ ಬದುಕು ಅದು ಬದುಕೇ ಅಲ್ಲ ಅಂತ ನಿನಗೆ ಮನಸ್ಸು ಕೊಟ್ಟ ದಿನ ಅಂದುಕೊಂಡಿದ್ದೆ. ಒಂದು ಕ್ಷಣ ನೀನು ಮರೆಯಾದರೂ ಸಹಿಸಲಾಗುತ್ತಿರಲಿಲ್ಲ. ಆಗ ಇದ್ದದ್ದು ನಿನ್ನನ್ನು ಎಲ್ಲಿ ಕಳೆದುಕೊಂಡು ಬಿಡುತ್ತೀನೋ ಅನ್ನುವ ಭಯ. ಅದು ನಿಜವಾಗುತ್ತದೆ ಅನ್ನುವ ಆ ಸಣ್ಣ ಸುಳಿವು ಅಂದು ಇರಲಿಲ್ಲ. ಕೊನೆವರೆಗೂ ಬದುಕಲ್ಲಿ ನಿನ್ನನ್ನು ಉಳಿಸಿಕೊಳ್ಳುವ ಮಹದಾಸೆಯೊಂದು ಹೃದಯದಲ್ಲಿ ಇತ್ತು. ಈ ಘನಘೋರ ವಿರಹ ಮನಸಾರೆ ಪ್ರೀತಿಸಿಕೊಂಡ ತಪ್ಪಿಗೆ ಸಿಗುವ ಅತ್ಯಮೂಲ್ಯವಾದ ಕಾಣಿಕೆ.
ಅಕ್ಕರೆಯೊಳಗಿನ ಸಕ್ಕರೆಯ ಸವಿಯಂತೆ ನಿನ್ನ ಮುದ್ದು ಮಾತು ಅಂದವನಿಗೆ ಮಾತುಗಳ ರುಚಿ ಕಳೆದು ಹೋಗಲು ಕಾರಣವಾದರೂ ಏನೂ ಅಂತ ಪ್ರತಿದಿನ ತಲೆಕೆಟ್ಟು ಯೋಚಿಸಿದ್ದೆ. ಕಾರಣ ತಿಳಿದಾಗ ಮನಸ್ಸು ಸುಮ್ಮನೇ ನಕ್ಕಿತ್ತು. ಆಗುವುದೆಲ್ಲ ಒಳ್ಳೆಯದಕ್ಕೆ ಅಂತ ಸುಮ್ಮನ್ನಿದ್ದೆ‌.

ನಿನ್ನ ನೆನಪು ತೀರಾ ಕಾಡಿದಾಗ ನನ್ನೊಳಗೊಂದು ಕಾಣದ ಅಸಹಾಯಕತೆ ಕಾಡುತ್ತದೆ.
ಒಂಟಿತನವನ್ನು ಅಕ್ಕರೆ ಮಾಡಿದಷ್ಟು ಇನ್ಯಾವುದನ್ನು ನಾನು ಮಾಡುತ್ತಿಲ್ಲ. ಎಲ್ಲರೂ ಇಲ್ಲಿ ಒಬ್ಬಂಟಿಯೇ. ಮನಸ್ಸು ಬಯಸುವುದು ನೆಮ್ಮದಿಯನ್ನೇ ಹೊರತು ಇನ್ಯಾವುದನ್ನು ಅಲ್ಲ ಅನ್ನುವ ಸತ್ಯ ಅರಿವಾಗಿದೆ. ಬದುಕಿನಲ್ಲಿ ನಿನ್ನನ್ನು ಮರೆತಿರುವೆ ಅಂತ ಯಾವತ್ತು ಹೇಳಲಾರೆ. ಮರೆವೆನೆಂದರೂ ಮರೆಯಲಾಗದು ಆ ದಿನಗಳನ್ನು. ಅದಕ್ಕೆ ನಿನ್ನ ನೆನಪುಗಳನ್ನು ಮೂಟೆಕಟ್ಟಿ ಮೂಲೆಗೆಸೆದು ಸುಮ್ಮನಾಗಿದ್ದೇನೆ. ನನಗೊತ್ತು ಪ್ರಾಮಾಣಿಕ ಸಂಬಂಧಗಳು ಶುದ್ಧ ನೀರಿನಂತೆ. ಅದನ್ನು ಯಾವುದರಲ್ಲಿ ಹಾಕಿದರು ಆಕಾರವಾಗುತ್ತದೆ. ಆದರೆ ಸ್ಥಿರವಾಗಿ ನಿಲ್ಲದು. ನನಗೆ ನಿಲ್ಲಿಸಿ ಬಯಸುವ ಯಾವ ಸಂಬಂಧಗಳು ಬೇಕಾಗಿಲ್ಲ. ಅದು ಶುದ್ಧವಾಗಿ ಜೊತೆಯಲ್ಲಿ ಇದ್ದರಷ್ಟೆ ಚಂದ.

ಬೊಗಸೆ ತುಂಬಿ ಬೊಕ್ಕಸವಾಗಿಸಿದ್ದ ಆ ಪ್ರೀತಿಯ ಖಜಾನೆಯನ್ನು ಬರಿದು ಮಾಡಿ ಹೋದಾಗಲೂ ನಾ ಅತ್ತಿರಲಿಲ್ಲ. ಹೋದವರನ್ನು ಮರಳಿ ಬನ್ನಿ ಎಂದು ಅಂಗಲಾಚುವ ಮನಸ್ಥಿತಿಯನ್ನು ಬೆಳೆಸದೆ ಬೆಳೆದವಳು ನಾನು. ನಿನ್ನ ಅನುಮಾನದ ರೇಖೆಯಲ್ಲಿ ನನ್ನ ಅಂಗೈಯನ್ನು ಇಟ್ಟು ಸುಟ್ಟುಕೊಂಡಿರುವುದು ಸತ್ಯ.

ಇನ್ನೊಬ್ಬರ ವ್ಯಕ್ತಿತ್ವದ ಬಗ್ಗೆ ಅನುಮಾನ ಪಡುವ ಮೊದಲು ನಾವು ನಮ್ಮ ಅಂತರಾಳವನ್ನು ಅರಿತಿರಬೇಕು. ನಮ್ಮೊಳಗೆ ಅನುಮಾನದ ಹುಳ ಬೆಳೆದಿರುವಾಗ ಮಾತ್ರ ನಮ್ಮ ಸುತ್ತಮುತ್ತಲಿನವರ ಮೇಲೆ ಈ ಅನುಮಾನ ಹುಟ್ಟುತ್ತದೆ. ನಿನ್ನಲ್ಲೂ ಇಂತಹದೇ ಒಂದು ಕೆಟ್ಟ ಹುಳ ಇದೆ ಎಂದು ಅರಿವಾಗದೆ ಮನಸ್ಸು ಕೊಟ್ಟುಬಿಟ್ಟೆ. ಆ ಹುಳ ದಿನ ಪ್ರತಿದಿನ ನನ್ನ ಅಂತರಂಗವನ್ನೆ ಚುಚ್ಚಿ ಚುಚ್ಚಿ ಗಾಯ ಮಾಡಿ ಬಿಡುತ್ತದೆ ಅನ್ನುವ ಯೋಚನೆಯೂ ನನಗಿರಲ್ಲಿಲ್ಲ. ಇರಲಿ ಈ ನೋವು ನನಗೆ ಸಮ್ಮತವೇ ಜೀವನ ಪೂರ್ತಿ ನಿನ್ನ ಜೊತೆಗಿದ್ದು ಸಹಿಸಿ ಸಾಯುವ ಬದಲು ಹೀಗೆ ನೆನಪುಗಳ ಜೊತೆ ಬದುಕನ್ನು ಬದುಕಿ ಬಿಡುತ್ತೇನೆ.

ಬದುಕನ್ನು ಹೇಗೆ ಬದುಕಬೇಕೆಂದು ಹುಟ್ಟಿನಿಂದಲೇ ಕಲಿಯುತ್ತೇವೆ. ಬೆಳೆದಂತೆ ಅದು ಇನ್ನಷ್ಟು ಕಲಿಸುತ್ತದೆ.
ಜೊತೆಯಿರುವರೆಲ್ಲ ಕೊನೆವರೆಗೂ ಜೊತೆಯಲ್ಲಿ ಹೆಜ್ಜೆ ಇಡಲಾರರೂ. ಈ ಸತ್ಯವನ್ನು ಅರಿತು ಬದುಕು ಕಟ್ಟಿಕೊಂಡವಳಿಗೆ ನಿನ್ನ ಗೈರುಹಾಜರಿಯಿಂದ ಯಾವುದೇ ರೀತಿಯ ಅಘಾತಗಳಾಗದು. ಒಮ್ಮೆ ಮನಸ್ಸು ಮುದುಡಿದರೂ ಮತ್ತೆ ಚಿಗುರುತ್ತದೆ. ಕೆಟ್ಟ ಹುಳವನ್ನು ಬದುಕಿನಿಂದ ದೂರವಿಟ್ಟ ಮೇಲೆ ಬದುಕು ಸುಂದರವಾಗಿ ಅರಳುತ್ತದೆ. ನಿನ್ನ ನೆರಳಿನಲ್ಲಿ ನರಳುವ ಆ ದುರಾದೃಷ್ಟವನ್ನು ನಂಬಿರುವ ಆ ನಂಬಿಕೆ ಕೈ ಹಿಡಿದು ರಕ್ಷಿಸಿದೆ. ಇನ್ನೇನೂ ಬೇಕು.. ನಗುತ್ತ ಬದುಕಲು. ಪ್ರೀತಿ ಇರುವ ಬದುಕು ಚಂದ. ಅದರೇ ಬದುಕನ್ನು ನರಕ ಮಾಡುವ ಆ ಪ್ರೀತಿ ಇದ್ದರೆಷ್ಟು ಹೋದರೆಷ್ಟು.. ಬದುಕಲ್ಲಿ ಎರಡನ್ನು ಆ ಭಗವಂತ ಪ್ರತಿಯೊಬ್ಬರ ಜೋಳಿಗೆಯಲ್ಲಿ ಇಟ್ಟು ಈ ಭೂಮಿಗೆ ಕಳಿಸಿರುತ್ತಾನೆ. ಅದು ಪ್ರೀತಿ ಮತ್ತು ನೋವು. ಇದನ್ನು ಸರಿಸಮವಾಗಿ ತೆಗೆದುಕೊಳ್ಳುತ್ತೇನೆ ಎಂದರೂ ಸಾಧ್ಯವಾಗದು. ಮನುಷ್ಯ ಜನ್ಮವೇ ಅಂತಹದ್ದು. ಎಲ್ಲವೂ ಅತಿಯಾಗಿಯೇ ಒಲಿಯುತ್ತದೆ. ಒಮ್ಮೆ ಅತಿಯಾದ ಪ್ರೀತಿ. ಮತ್ತೊಮ್ಮೆ ಅಗಾಧವಾದ ನೋವು. ಇವತ್ತು ಎಲ್ಲವನ್ನು ನೆನಪಿನ ಜೋಳಿಗೆಯಲ್ಲಿ ಹಾಕಿ ಸಾಗುತ್ತಿರುವೆನು. ದಾರಿಯು ನನ್ನದೇ ಆಯ್ಕೆಯು ನನ್ನದೇ.. ಏಳುಬೀಳುಗಳನ್ನು ಕಂಡ ಬದುಕು ಉತ್ತಮವಾಗಿರುತ್ತದೆಯಂತೆ. ಆ ನಂಬಿಕೆ ನನ್ನೊಳಗಿದೆ. ಮನಸ್ಸಿನ ಭಾರವನ್ನು ಈ ಪತ್ರದ ಜೊತೆ ಇಳಿಸಿರುವೆ. ಮತ್ತೊಮ್ಮೆ ಪತ್ರವನ್ನು ಬರೆಯುವವರೆಗೂ…ಹೃದಯವನ್ನು ಅಪ್ಪಿ ಸಂತೈಸುವೆ.

ಪೂಜಾ ಗುಜರನ್. ಮಂಗಳೂರು.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x