ಕಾವ್ಯಧಾರೆ

ಪಂಜು ಕಾವ್ಯಧಾರೆ

ಮತ್ತೆ ಮಳೆಯಾಗಿದೆ

ನಿನ್ನ ಕಣ್ಣ ಬಿಂಬಲಿ
ನಾನು ಪ್ರತಿಬಿಂಬವಾದಾಗ
ಮೋಡ ಕವಿದು ಪ್ರೀತಿಯ ಮಳೆಯಾಗಿದೆ

ನಿನ್ನ ಮುಂಗುರಳ ಚಾಚಿ
ನನ್ನ ಕೈ ಹಿಡಿದು ಕರೆದಾಗ
ಮತ್ತೆ ಮಳೆಯಾಗಿದೆ

ನಿನ್ನ ಸನಿಹ ನಾ ಬಂದು ನಿಂತಿರುವೆ
ಬಿಸಿಯುಸಿರು ತಾಕಿಸಿದಾಗ
ಹೃದಯ ಬಡಿತ ಜೋರಾಗಿ
ಮತ್ತೆ ಮಳೆಯಾಗಿದೆ

ತುಟಿಗೆ ತುಟಿಯು ಸೇರಿಸಿ
ಪ್ರೀತಿಯ ಚುಂಬನ ನೀಡಿದಾಗ
ಪ್ರೇಮಲೋಕದಲಿ ತೇಲಾಡುವಾಗ
ಮತ್ತೆ ಮಳೆಯಾಗಿದೆ

ಮುಖ ಕೆಂಪಾಗಿಸಿ ನಾಚಿದಾಗ
ಅಕ್ಕರೆಯಿಂದ ಅಪ್ಪಿಕೊಂಡು
ಕಳ್ಳ ನೋಟದಿ ನೋಡುವಾಗ
ಮತ್ತೆ ಮಳೆಯಾಗಿದೆ

ಉಮಾಸೂಗೂರೇಶ ಹಿರೇಮಠ….

ಹಳ್ಳಿ ಮತ್ತು ಅಪಾರ್ಟ್‍ಮೆಂಟು

ಪ್ರತಿ ಮುಂಜಾನೆ ಕಾಫಿ ಹೀರುತ್ತಾ
ಕಿಟಕಿಯಾಚೆಯ ನೂರಾರು ಮನೆಗಳುಳ್ಳ
ಒಂದು ಅಪಾರ್ಟ್‍ಮೆಂಟನ್ನು ನೋಡುತ್ತಲೇ ಇರುತ್ತೇನೆ
ಅಪಾರ್ಟ್‍ಮೆಂಟ್ ಏಕೆ ಒಂದು ಊರಾಗುವುದಿಲ್ಲ
ದೊಡ್ಡ ಕೇರಿಯಾಗುವುದಿಲ್ಲ ಎಂದು ಪ್ರಶ್ನಿಸಿಕೊಳ್ಳುತ್ತಲೇ ಇರುತ್ತೇನೆ
ಹಲವು ಮನೆಗಳಿಂದ ಹಿಡಿದು ನೂರಾರು ಮನೆಗಳಿದ್ದು ಸಾವಿರಾರು ಜನರಿದ್ದರೆ
ಅದೊಂದು ಊರಂತೆ; ಹಳ್ಳಿಯಂತೆ; ಅದಕ್ಕೊಂದು ಹೆಸರಂತೆ
ಹೆಸರಿಗೊಂದು ಇತಿಹಾಸ ಐತಿಹ್ಯವಂತೆ
ಅಲ್ಲೊಂದು ಹಳೆಯ ದೇಗುಲವಂತೆ
ಊರಾಚೆ ಮಾರಮ್ಮ ಹನುಮನ ಗುಡಿಯಂತೆ
ನಾವು ಕಂಡಿದ್ದೇವೆ; ಕೇಳಿದ್ದೇವೆ
ಅಂತಹ ಹಳ್ಳಿಯಲ್ಲಿ ಹುಟ್ಟಿದ್ದೇನೆ; ಬಾಳಿದ್ದೇನೆ
ಊರ ದೇವರ ಜಾತ್ರೆಯಲ್ಲಿ ಸುತ್ತಾಡಿ ನಲಿದಿದ್ದೇನೆ
ಬಿದ್ದ ಮಳೆಯ ಹನಿಗಳಂತೆ
ಆಗಾಗ ಜೀವನದ ಹಲವು ನೆನಪುಗಳು

ನೂರಾರು ಮನೆ ಇರುವ ಅಪಾರ್ಟ್‍ಮೆಂಟ್‍ಗೂ ಒಂದು ಹಳ್ಳಿಗೂ
ವ್ಯತ್ಯಾಸವೇನಿಲ್ಲ
ಆದರೂ ಅಪಾರ್ಟ್‍ಮೆಂಟ್ ಎಂದಿಗೂ ಊರಾಗುವುದಿಲ್ಲ
ಹಳ್ಳಿಯಾಗುವುದಿಲ್ಲ
ಅಷ್ಟೇ ಜನ; ಅಲ್ಲಿರುವಷ್ಟೇ ಮನೆಗಳು
ಥರಾವರಿ ಮನಸುಗಳು
ಹಳೆಯ ಹಿರಿತಲೆಗಳಿಂದ ಹಿಡಿದು ಹುಟ್ಟಿದ
ಹಸಿಗೂಸು ಕುಡಿಯವರೆಗೂ
ಎಲ್ಲರೂ ಇದ್ದಾರೆ ಹಳ್ಳಿಯಲ್ಲಿರುವಂತೆ
ಅಪಾರ್ಟ್‍ಮೆಂಟ್‍ನಲ್ಲೂ…

ಅಪಾರ್ಟ್‍ಮೆಂಟ್- ಒಂದು ಗೋಡೆಗೆ ಅಂಟಿದ
ಹಲವು ಮನೆಗಳ ಗೂಡು
ಒಂದು ಮನೆಯ ಹಲವು ಕೋಣೆಗಳಂತೆ
ಅಕ್ಕಪಕ್ಕದ ಬಾಗಿಲುಗಳು ಊರುಕೇರಿಯ ಮನೆಗಳಂತೆ
ವಾರಿಗೆಯವರಾದರೂ ಸ್ನೇಹ ಸಂಬಂಧಕ್ಕೆ
ನೂರು ಮೈಲು ದೂರ
ಫ್ಲಾಟು ಫ್ಲಾಟುಗಳ ನಡುವೆ ನಂಬಿಕೆಯಿಲ್ಲ
ಎರಡು ಮನೆಗೆ ಒಂದೇ ಗೋಡೆಯಾದರೂ
ಎರಡು ಕುಟುಂಬಗಳ ನಡುವೆ
ಚೀನಾದ ಮಹಾಗೋಡೆಯಷ್ಟು ಅಂತರ
ಒಂದು ಹಳ್ಳಿಗೆ ನೂರಾರು ವರ್ಷಗಳ ಇತಿಹಾಸವು
ಮಹಾನಗರದ ಬಡಾವಣೆಗಳು ಅಪಾರ್ಟ್‍ಮೆಂಟ್‍ಗಳು
ಸಾಯಿಸಿದ ಒಂದು ಹಳ್ಳಿಯ ಮೇಲೆ
ನಿಂತ ಮಸಣದ ಗೋರಿಯ ರೂಪಕಗಳು
ಅಪಾರ್ಟ್‍ಮೆಂಟ್‍ನಲ್ಲಿ ಆಗಾಗ ತುಂಬುವ ಮಳೆ ನೀರು
ಕೊಂದ ಹಳ್ಳಿಯ ಕೆರೆಗಳ ಒಂದು ಕುರುಹು ಅಷ್ಟೇ!
ಬದುಕು ಕಟ್ಟಿಕೊಂಡ ಥರಾವರಿ ಜನರು
ಜಗದ ಮೂಲೆ ಮೂಲೆಗಳಿಂದ
ಒಂದು ಹಳ್ಳಿ ಸಾಕಾಗುವುದೇ?
ಅರಸಿ ಬಂದವರಿಗೆ ಆಶ್ರಯ ಕೊಡಲು
ಸಾವಿರಾರು ಜನರಿಗೆ ನೆರಳು ಕೊಡುವ ಊರು
ಇಂದು ಲಕ್ಷ ಜನರನ್ನು ಸಾಕುತ್ತಿದೆ
ಹತ್ತು ಹಲವು ಅಪಾರ್ಟ್‍ಮೆಂಟ್‍ಗಳ ಸಾಲಾವಳಿಯ ಮೂಲಕ
ಊರು ಎಂದಿಗೂ ಅಪಾರ್ಟ್‍ಮೆಂಟ್‍ನ ಮುಖವಲ್ಲ
ಅದೊಂದು sಸತ್ತ ಒಂದು ಹಳ್ಳಿಯ ಕುರುಹು ಅಷ್ಟೇ!

ಹಳ್ಳಿಗಳು ಇಂದಿಗೂ ಬರಿದಾಗುತ್ತಲೇ ಇವೆ
ಊರು ಕೆರೆ ಕಾಡುಗಳು ಬಡಾವಣೆಗಳು ನಗರಕ್ಕೆ
ಸೇರಿಕೊಳ್ಳುತ್ತಿವೆ
ಮರೆತು ಬಿಟ್ಟವೇ ನಾವು
ನಮ್ಮ ಊರ ಸಂಸ್ಕøತಿಯನ್ನು
ಹಳೆಯ ತಲೆಮಾರನ್ನು ಒಂದು ಪರಂಪರೆಯನ್ನು
ಕೂಡಿ ಬಾಳುವ ಸುಖವನ್ನು

ಕಿಟಿಕಿಯಾಚೆಗಿನ ಮನೆಗಳುಳ್ಳ ಅಪಾರ್ಟ್‍ಮೆಂಟ್
ಎಂದಾದರೂ ಊರಾಗುವುದೇ?
ಸುಂದರ ಹಳ್ಳಿಯಾಗಬಹುದೇ?
ಸದಾಶೆ ಇದೆ; ನಿರೀಕ್ಷೆ ಇದೆ; ಜನ ಬದಲಾಗಬಹುದೇ?
ಮುಂಜಾನೆ ಬಿಸಿ ಬಿಸಿ ಕಾಫಿ ಹೀರುತ್ತಾ ದೃಷ್ಟಿ ಹರಿಸುತ್ತಾ
ಯೋಚಿಸುತ್ತಲೇ ಇದ್ದೇನೆ
ನನ್ನ ಪುಟ್ಟ ಫ್ಲಾಟಿನ ಕೋಣೆಯಿಂದ…

-ಫಕೀರ (ಶ್ರೀಧರ ಬನವಾಸಿ)

ಕಳೆದು ಹೋಗಬೇಕಾಗಿದ್ದವರು

ಮುಗ್ಧರ ಮತಿಯ ಮೇಲೆ
ಎಡಬಲಗಳ ಮಂಕುಬೂದಿ ಸಿಡಿಸಿ
ತಮ್ಮ ಬಡಿವಾರದಮಲಿಗೆ
ಬಲಿಪಶುಗಳನು ವೃದ್ಧಿಸಿಕೊಳುವವರು…

ಭಿನ್ನತೆಯ ಬೇಗೆಗೆ ಅರ್ಘ್ಯ ಸುರಿದು
ಊರಿಗೆ ಉರಿಹಚ್ಚಿ ಕೆನ್ನಾಲಿಗೆಯಲಿ
ತಮ್ಮಿಷ್ಟದ ಚುಟ್ಟಾ ಹಚ್ಚಿಕೊಂಡು
ನಿತ್ಯ ಅಮಲು ಹೆಚ್ಚಿಸಿಕೊಳ್ಳುವವರು…

ಜವಾಬ್ದಾರಿ ನಿಭಾವಣೆ ಮರೆತು
ಸಾಲು ಸಾಲು ಸಾವಿನ ಶೋಕ
ಧೂಮದಲ್ಲೂ ಪರಸ್ಪರ ಕೆಸರೆರಚಾಟದ
ಜುಗಲ್ಬಂದಿಯನು ನಡೆಸುವವರು…

ಮಸಣದ ಬಾಗಿಲಿಗೂ
ಸ್ವಾಗತ ಕಮಾನು ಇಕ್ಕಿ
ಪುನರ್ಜನ್ಮದ ಕತೆಯನು
ಕಟ್ಟುವ ವಿಘ್ನ ಸಂತೋಷಿಗಳು…
-ನಿಚಿಕಾ

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *