ಸಂಜೆ ಬಾನಿನಂಚಿನಲ್ಲಿ ಬಿದ್ದ ಬಿದಿಗೆ ಚಂದ್ರಮ: ಡಾ. ವೃಂದಾ. ಸಂಗಮ್

ನಾನು ಛಂದಾಗಿ ಓದಿ, ಶ್ಯಾಣ್ಯಾಕ್ಯಾಗಿ, ಛೊಲೋ ಕೆಲಸಾ ಹಿಡದು, ಅವ್ವಾ ಅಪ್ಪನ್ನ ಸುಖದಿಂದ ನೋಡಿಕೋಬೇಕು, ದಿನಾ ಇದ ಆಶೀರ್ವಾದ ಕೇಳಿ ಕೇಳಿ ನನಗ ಸಣ್ಣಕಿದ್ದಾಗ ಹೆಂಗನಸತಿತ್ತಂದರ, ಏನು ಮಾಡತಿದ್ದರೂ, ಅಯ್ಯೋ ಇದು ಬ್ಯಾಡ, ನಾನು ಬರೇ ಓದಕೋತ ಇರಬೇಕು, ಬ್ಯಾರೆ ಏನು ಮಾಡಿದರೂ ಅದು ತಪ್ಪು. ಆಮ್ಯಾಲೆ, ಆಮ್ಯಾಲೆ ನನಗ ಅರ್ಥ ಆತು. ಈ ಹಿರೇ ಮನಶ್ಯಾರಿಗೆ ಬ್ಯಾರೆ ಕೆಲಸಿಲ್ಲ. ಆಶೀರ್ವಾದ ಮಾಡೋದರಾಗೂ ತಮ್ಮ ಸುಖಾನ ನೋಡತಿರತಾರ. ನಾನು ಖರೇನ ಶಾಣ್ಯಾಕಿ ಆಗ ಬೇಕಂದ್ರ, ಆಟ ನೋಟ ಎಲ್ಲಾನೂ ಬೇಕು, ಪಾಠದ ಜೊತೆಗೇನ. ಓದಿನ್ಯಾಗ ಮುಂದಿದ್ರ ಶ್ಯಾಣ್ಯಾ ಅಂತನ ಅಂತಾರ. ಆದರೂ ಸಣ್ಣ ವಯಸ್ಸಿನ್ಯಾಗ ಓದು ಓದು ಅಂತ ತಲ್ಯಾಗ ತುಂಬಿದರಲ್ಲ, ಅದಕ ಅಂತನ ನಾನೂ ಓದಿದೆ. ಅದರ ಜೊತೀಗೆ ಆಟನೂ ಆಡಿದ್ದಕ್ಕ, ಮುಂದ ಪೋಲೀಸ ಇಲಾಖೆ ಒಳಗ ದೊಡ್ಡ ನೌಕರಿ ಸಿಕ್ತು. ಆಟದಾಗ ಬ್ಯಾಟ್ ಬೀಸಿದಂಗ, ನೌಕರಿಯೊಳಗ ಲಾಠೀ ಬೀಸಿದ್ದಕ್ಕ, ಖಡಕ್ ಮ್ಯಾಡಂ ಅಂತ ಹೆಸರೂ ಬಂತು. ಯಾರಿಗೂ ತಲೀ ಬಾಗದಿದ್ದದ್ದಕ್ಕ ಎಲ್ಲಾರು ಬಯಸದಿರೋ ಜಾಗಕ್ಕ ನನ್ನನ್ನ ಫುಟ್ ಬಾಲ್ ಒದ್ದಂಗ ಒದಿಯೋ ಹಂಗಾತು. ನಾನೂ ಹೋದಲ್ಲೆಲ್ಲಾ ತಿಪ್ಪೀ ಕೆದರತೇನಿ. ಅದಕ್ಕ ಭಾಳ ಮಂದಿ ತಮ್ಮ ಹೊಲಸು ಹೊರಗ ಬಂದ ಕೂಡಲೇ ಇನ್ನೊಂದು ಕಡೆ ಒದೀತಾರ. ನಾನೂ ನಕ್ಕೋತನ ಹೋಗತೇನಿ. ನನ್ನ ನಗು ಅವರನ ಇನ್ನೂ ಕೆಣಕತದ. ಮನ್ಯಾಗ ಅವ್ವಾ ಅಪ್ಪನ್ನ ಬಿಟ್ಟರ ಜಗತ್ತಿಗೆಲ್ಲಾ ನಾನು ಧಡ್ಡಿನ. ಬದುಕೋ ದಾರಿ ತಿಳೀದಿರೋ ಧಡ್ಡಿ.

ಹಂಗ ಈಗ ಎಲ್ಲಾ ಹಸೀ ಹಸೀ ಆಗಿ ಕೈ ಒದ್ದಿ ಆಗೋಹಂಗ ಇರೋ ಜಾಗಕ್ಕ ನನ್ನ ಹಾಕೂದ ಇಲ್ಲ, ನನಗದು ಬೇಕಾಗಿನೂ ಇಲ್ಲ. ಅದಕ ಅಂತ ಲೋಕಾಯುಕ್ತಕ್ಕ ಹಾಕಿದರು. ಅಲ್ಲಿನ ಹಳೇ ಫೈಲು ತಗದೆ. ಈಗ ಈ ಜೈಲಿಗೆ ಹಾಕ್ಯಾರ. ಅಂದ್ರ ನನ್ನನ್ನ ಜೈಲಿನ್ಯಾಗ ಹಾಕಿಲ್ಲ. ಜೈಲಿನ್ಯಾಗ ನೌಕರಿಗೆ ಹಾಕ್ಯಾರ. ಇಲ್ಲಿ ತನಕಾ ಇಷ್ಟು ದೊಡ್ಡ ಅಧಿಕಾರಿನ್ನ ಜೈಲಿನ ಕೆಲಸಕ್ಕ ಯಾರನ್ನೂ ಹಾಕಿದ್ದಿಲ್ಲ. ಖರೇನ ನನ್ನ ಸೊಕ್ಕು ಮುರೀಲಿಕ್ಕೆ ಹಾಕ್ಯಾರೋ, ನನ್ನಿಂದ ಕೆಲಸಾ ತಗೀಲಿಕ್ಕೆ ಹಾಕ್ಯಾರೋ ಗೊತ್ತಿಲ್ಲ. ಅಂತೂ ಜೈಲಿನ ಖೈದಿಗಳ ಜೊತೆ ದಿನಾ ಕಳೀತನ, ನನಗ ತಿಳೀಲಿಕ್ಕೆ ಹತ್ತೇದ, ಹೊರಗ ಇರೋ ಕ್ರಿಮಿನಲ್ ಗಳಿಗಿಂತ ಒಳಗಿರೋ ಖೈದಿಗಳು ಭಾಳಂದ್ರ ಭಾಳ ಮುಗ್ಧರಿದ್ದಾರ. ನೂರಕ್ಕ ಎಂಬತ್ತರಷ್ಟು ಮಂದಿ, ಯಾವುದೋ ಸಿಟ್ಟಿನಾಗ ತಿಳೀದ ತಪ್ಪ ಮಾಡಿ, ಈಗ ಕೊರಗತಿರತಾರ. ಇಲ್ಲಾಂದರ, ಬ್ಯಾರೆಯವರ ತಪ್ಪು ತಮ್ಮ ತಲೀ ಮ್ಯಾಲ ಹೊತಗೊಂಡು ಶಿಕ್ಷಾ ಅನುಭವಿಸತಿರತಾರ. ಖರೇನ ತಪ್ಪ ಮಾಡಿ, ಶಿಕ್ಷಾ ಅನುಭವಿಸುವರ ರಕ್ಷಾ ಮಾಡಲಿಕ್ಕೆ ಭಾಳ ಮಂದಿ ಇರತಾರ. ಆದರ, ಅಂತಹವರು ಹೊರಗ ಹೋದರ ಇದಕಿಂತಾ ದೊಡ್ಡ ಶಿಕ್ಷಾ ಕಾದದ ಅನ್ನೋವರು ಮಾತ್ರ ಒಳಗಿರತಾರ.

ಇಂತಾವರನ ನೋಡಿಕೋಬೇಕು. ಖರೇ ಅಂದರ ಇದು ಅಂಗನವಾಡಿ ಟೀಚರ ಕೆಲಸ. ಅವರು ಮಕ್ಕಳನ ನೋಡಿಕೋತಾರ, ನಾವು ದೊಡ್ಡವರನ, ಅದೂ ತಪ್ಪು ಮಾಡ್ಯಾರ ಅಂತ ಹಣಿ ಪಟ್ಟಿ ಕಟಿಗೊಂಡವರನ ನೋಡಿಕೋಬೇಕು ಅಷ್ಟ ಫರಕ. ಅಲ್ಲಿನೂ ಊಟಕ್ಕ ಹಾಕತಾರ ಇಲ್ಲಿನೂ. ಆದರ ಅಲ್ಲಿ ಹುಡುಗರು ರಾತ್ರಿ ಮನಿಗೆ ಹೋದರ, ಇಲ್ಲಿ ರಾತ್ರಿ ಪಾಳೀನೂ ಇರತದ. ನಾವು ಅವರಿಗೆ ಹೆದರಲಿಲ್ಲಾಂದರ, ಅವರಿಗೆ ಗೌರವ ಕೊಟ್ಟರ, ನಮಗ ತೊಂದರಿ ಏನಿಲ್ಲ. ಇಲ್ಲಾಂದರ, ಸಾಲ್ಯಾಗ ಹುಡಗೂರು ಝಗಳಾಡತಾರಲ್ಲ ಹಂಗ ಝಗಳ. ಈ ಝಗಳಾ ಬಿಡಸೋದು ಬ್ಯಾಸರ ಮತ್ತ ಭಾಳ ಕಷ್ಟದ ಕೆಲಸ. ಅದಕ ಯಾವಾಗಲೂ ಝಗಳ ಏಳಧಂಗ ಕಾಯಬೇಕು. ಯಾವಾಗ್ಲೂ ಒಂದ ಕಣ್ಣು ಇಟಗೊಂಡೇ ಇರಬೇಕು. ನನಗೇನೂ ಬ್ಯಾಸರಿಲ್ಲ. ಎಷ್ಟೋ ಮಂದಿ, ನಾನು ಜೈಲಿನ ಒಳಗ ಒಂದು ರೌಂಡ ತಿರಗಲಿಕ್ಕೆ ಹೋದೇ ಅಂದರ ಸಾಕು. ಹೆದರಿಕಿಗಿಂತ ಪ್ರೀತಿ ತೋರಸವರ ಜಾಸ್ತಿ ಮಂದಿ ಇದ್ದಾರ. ಭಾಳ ಮಂದಿ ಇಲ್ಲಿ ಬರಲಿಕ್ಕೆ ನಮ್ಮ ಸಮಾಜದ ನಿಯಮಗಳೂ ಕಾರಣ ಅವ. ಅದು ನನಗ ಅರ್ಥ ಆಗಿದ್ದರೂ ನಾನು ಈ ವಿಷಯ ಅವರಿಗೆ ಹೇಳಬಾರದು ಅಷ್ಟ. ಹಿಂಗ ಅಂತ ಅನಕೋತ ನನಗ ಜೈಲಿನ್ಯಾಗಿನ ಎಲ್ಲಾರ ಹಿನ್ನೆಲೆನೂ ಬಾಯಾಗ ಅದ. ಮತ್ತ ಜೈಲಿನ ನಿಯಮನೂ. ಅದಕ್ಕ ಭಾಳ ಮಂದಿ ಹೆದರತಾರ ನನ್ನ ಮುಂದ ಮಾತಾಡಲಿಕ್ಕೆ, ಝಗಳಾಡಲಿಕ್ಕೆ.

ಜೋರಾಗಿ ಯಾರೋ ಕಿರಿಚಿದಂಗಾತು. ನನ್ನ ಕಿವಿ ಚುರುಕಾಗಿ ಲಾಠಿ ಹಿಡಿದು, ಓಡಿದೆ. ಈಗ ಗದ್ದಲ ಕೇಳಿ ಬಂದಿದ್ದು ಅನ್ನಪೂರ್ಣದಿಂದ, ಅಂದರ ಅಡಗಿಮನಿಯಿಂದ. ಅಲ್ಲಿ ಏನಪಾ ಝಗಳಾ ಅನಕೋತ ಒಳಗ ಹೋದರ, ಇಬ್ಬರು ಮಹಿಳಾ ಕೈದಿಗಳು, ಇನ್ನೊಬ್ಬಾಕಿನ್ನ ಎತಿಗೊಂಡು ಬಂದರು, ಅಕಿ ಕೈ ನೋಡಿದರ ರಾಮಾ ರಗತ. ಬಲಗೈ ಎರಡು ಬೆರಳು ಕತ್ತರಿಸ್ಯಾವ, ಅದನ್ನ ಇನ್ನೊಬ್ಬಾಕಿ ತಂದಳು. ಲಗೂನ ದವಾಖಾನಿಗೆ ಕರಕೊಂಡು ಹೋದಿವಿ. ಅಲ್ಲೆ, ಆ ಎರಡೂ ಬೆರಳಿಟ್ಟು ಆಪರೇಷನ್ ಮಾಡಿ ಹೊಲಿಗಿ ಹಾಕಿದರು. ಆ ಹೆಣಮಗಳ ಹೆಸರು ಪರಿಣೀತ. ಭಾಳ ಅಂದರ ಭಾಳ ಶಾಂತ ಸ್ವಭಾವದಾಕಿ. ಅಕಿ ಜೋಡಿ ಯಾರರೆ ಝಗಳಾ ಮಾಡೋ ಅವಕಾಶನ ಇಲ್ಲ. ಯಾಕ್ಹಿಂಗಾತು.

ಜೈಲಿಗೆ ಬಂದು ವಿಚಾರ ಮಾಡಿದರ, ಇವತ್ತ, ಪರಿಣೀತಾನದು ಕಾಯಿಪಲ್ಲೆ ಹೆಚ್ಚು ಕೆಲಸ. ಮುಂಜಾನೆದ್ದು ಪೇಪರ ಓದಿ ಭಾಳು ಅತ್ತಳಂತ. ಆಮ್ಯಾಲ ತಾನ ಸಮಾಧಾನ ಆಗಿ, ಕೆಲಸಕ್ಕ ಬಂದಳಂತ. ಆದರ ಏನು ಮಾಡೋದು. ಇನ್ನೂ ಕಾಯಿಪಲ್ಲೆ ಹೆಚ್ಚೋಕಿಂತ ಮದಲ ತಾನ, ತನ್ನ ಬಲಗೈಯ ಹೆಬ್ಬಟ್ಟು ಮತ್ತ ಮದಲನೇ ಬಟ್ಟು ತಾನ ಕತ್ತರಿಸಿಕೊಂಡು ರಕ್ತ ಹರೀತಿದ್ದರೂ ನೋಡಿಕೋತ ಸುಮ್ಮನ ಕೂತಿದ್ದಳಂತ. ಇನ್ನೊಬ್ಬರು ಯಾರೊ ನೋಡಿದಾಗನ ಗೊತ್ತಾಗಿದ್ದು. ಜೈಲಿನಾಗ ರಕ್ತ ಹರೀತಿರತದ. ಆದರ, ಇಂತಾದಲ್ಲ.

ಯಾಕೋ ಮನೀಗೆ ಬಂದ ಮ್ಯಾಲನೂ ಪರಿಣೀತಾನ ನೆನಪು ಮಾಸಲಿಲ್ಲ. ಅವ್ವ ಸಂಜೀ ಮುಂದ ಊಟಕ್ಕ ಕೂತಾಗ ಬೈದಳು. “ಸುಟ್ಟ ಸುಡಗಾಡ ಆಫೀಸಿಗೆ ಹೋಗತೀದಿ. ನೋಡು ಮಾತಿಲ್ಲ ಕತಿಯಿಲ್ಲ. ಮಾರಿ ನೋಡು, ದೃಷ್ಟಿ ಆಗಿರಬೇಕು. ಆ ರೌಡಿಗಳದು.” ನನಗ ನಗು ಬಂತು, “ನಿನ ಮಗಳೇನೂ ಸಣ್ಣ ಪಾಪಾ ಅಲ್ಲ ದೃಷ್ಟಿ ಆಗಲಿಕ್ಕೆ.” ಅಂದೆ. ಸರಕ್ಕನ ಸಿಟ್ಟ ಮಾಡಿಕೊಂಡು, “ಎಲ್ಲಾರ ನೋಟಾನೂ ಒಂದ ಥರಾ ಇರೂದಿಲ್ಲ. ದೊಡ್ಡವರ ಮಾತಿಗೆ ಸ್ವಲ್ಪ ಬೆಲಿ ಕೊಡೋದನ್ನ ಕಲಿ.” ಅಂದಳು. ನಾ ಸುಮ್ಮನಾಗಿ ಬಿಟ್ಟೆ. ಇದು ಅಂತಃಕರಣದ ಮದಲನೆ ಮೆಟ್ಟಲಾ. ಇನ್ನ ಮುಂದ ಎರಡು ಮೂರನೇ ಮೆಟ್ಟಲದಾಗ ಗಂಗಾ ಭವಾನಿ ಇರತಾರ. ಯಾಕ ಬೇಕು.

ಆದರ, ರಾತ್ರಿ ಅಪ್ಪ, “ಯಾಕವಾ ಕೂಸು, ಭಾಳ ಸಪ್ಪಗಿದ್ದಿ.” ಅಂದರು. ನನಗ ತಡೀಲಿಕ್ಕೆ ಆಗಲಿಲ್ಲ. ಪರಿಣೀತಾ ತಲೆತಿನಲಿಕ್ಕೆ ಹತ್ಯಾಳ. “ಸಂಜೀಮುಂದ ಅಕಿಗೆ ಎಚ್ಚರಾಗೇದ. ಎಷ್ಟು ಮುತ್ತ ಮಾಡಿ ಕೇಳಿದರೂ “ನನಗ ಆ ಎರಡು ಬೆರಳು ಬ್ಯಾಡಾ, ಅದಕ, ಕತ್ತರಿಸಿಕೊಂಡೆ.” ಅಂದಳು. ಮುಂದೇನು ಕೇಳಿದರೂ ಹೇಳಲಿಲ್ಲ.” ಅಂದೆ. “ನಾಳೆ ನಾನ ಅಕಿಗೆ ಛಾ ಬ್ರೆಡ್ಡು ತೊಗೊಂಡು ಹೋಗತೇನಿ ಮುಂಜಾನೆ, ಅಕಿ ಚಿಂತಿ ನನಗ ಬಿಡು, ಈಗ ನಿನಗ ನಿಮ್ಮ ಅಪ್ಪನ ಮ್ಯಾಲ ನಂಬಿಕಿ ಬಂದಿದ್ದರ, ಹೋಗಿ ಕಣ್ಣುತುಂಬಿ ನಿದ್ದೀ ಮಾಡು” ಅಪ್ಪ ಅಂದರು. ಅಪ್ಪನ ಮಾತು ಮತ್ತ ಕೆಲಸ ಎರಡರ ಮ್ಯಾಲೂ ನಂಬಿಕಿ ಅದ. ನಾನೂ ಮಲಗೇ ಬಿಟ್ಟೆ.

ಮುಂದ ಪರಿಣೀತಾ ಒಂದು ವಾರ ದವಾಖಾನ್ಯಾಗ ಇದ್ದಳು. ಆ ವಾರ ಅನ್ನೂದರಾಗ ನಮ್ಮ ಅಪ್ಪ ತಮ್ಮ ಪ್ರಭಾವ ಅಕಿ ಮ್ಯಾಲೆ ಬೀರಿದ್ದರು. ಅವರು ಮಾಸ್ತರಾಗಿದ್ದರಿಂದ, ಹಿಂಗ ಸೆಟಗೊಂಡ ಹುಡುಗರನ್ನ ದಾರಿಗೆ ತರೂದೇನು ಕಷ್ಟ ಅನಸೂದಿಲ್ಲ ಅವರಿಗೆ. ಎರಡು ದಿನ ಪರಿಣೀತಾ ಸಿಟ್ಟು ಮಾಡಿಕೊಂಡೆ ಇದ್ದಳಂತೆ, ಒಂಚೂರು ತನ್ನ ಕೋಪದ ಕೋಟೆ ಬಿಟ್ಟು ಹೊರಗ ಬರಲಿಲ್ಲ. ಮೂರನೆಯ ದಿನಕ್ಕ “ಆಮಿ” ತನ್ನ ಕವಚಾ ಬಿಟ್ಟು ಸ್ವಲ್ಪ ಹೊರಗ ಹಣಿಕೆ ಹಾಕಿತ್ತಂತ. ಅಷ್ಟಾದರ ಸಾಕು. ಅವರನ್ನ ಹೆಂಗ ಹಾದಿಗೆ ತರೂದಂತ ಅಪ್ಪಗ ಗೊತ್ತು. ನಾಲ್ಕನೆ ದಿನದಿಂದ ಅಪ್ಪನ ಹಾದಿ ಕಾಯಕೋತ ಕೂಡತಿದ್ದಳಂತ. ಇಬ್ಬರೂ ಕೂಡಿ ಇಡೀ ದವಾಖಾನಿ ಜನರನೆಲ್ಲಾ ನಗಸತಿದ್ದರಂತ. ಜೈಲಿಗೆ ವಾಪಸ ಬರೋ ದಿನ ಅಳತಾಳ ಅಂದುಕೊಂಡದ್ದರಂತ ಅಪ್ಪ. ಆದರ, ಭಾಳ ಗಟ್ಟಿ ಮನಸಿನ ಹುಡುಗಿ. ನಕ್ಕೋತನ ಹೇಳಿ ಹೊಂಟಳಂತ. “ಅಂತಾ ವಿದ್ಯಾರ್ಥಿ ಒಬ್ಬರರ ನನ್ನ ಇಡೀ ಸರ್ವೀಸಿನ್ಯಾಗ ಸಿಗಲಿಲ್ಲ ನೋಡು” ಅಂದು ನನ್ನನ್ನೂ ಅಕೀಕಿಂತಾ ಕೆಳಗ ಮಾಡಿದರು. ಆದರೂ ಅಪ್ಪ ಅಕಿ ಕಥಿ ಏನೂ ಹೇಳಿರಲಿಲ್ಲ. ಆದರ, ನನಗ ಗೊತ್ತದ, ಅಪ್ಪ, ಯಾವಾಗಲೂ ನನಗ ಕಲಸಿದ ಪಾಠ ‘ಗುಣಕೆ ಮತ್ಸರಮುಂಟೆ’. ಅದನ್ನ ಅವರು ಪಾಲಿಸಿರತಾರ. ಆದರ, ಖರೇನ ಬ್ಯಾಸರಾಗಿದ್ಯಾಕಂದರ, ಅಷ್ಟು ಒಳ್ಳೇ ಹುಡುಗಿಗೆ ಇವತ್ತ ಬಂದ ದುರ್ಗತಿ ನೋಡಿ.

ಅಕಿ ಹೆಸರು ಪರಿಣೀತಾ. ಬಂಗಾಲಿ ಹೆಸರು, ಭಾಳ ಅಪರೂಪದ ಹೆಸರು. ಸಾಮಾನ್ಯರಿಗೆ ಇಂತಾ ಹೆಸರಿರೋದು ಅಪರೂಪ. ಅಕಿ ಅವ್ವಾ ಅಪ್ಪಾ ಯಾರೋ ಸಾಹಿತ್ಯದ ಒಲವು ಇದ್ದವರು ಇರಬೇಕು, ಈ ಹುಡುಗೀನೂ ಸದಾ ಓದತಿರತಾಳ. ಏನೇನೋ ಬರಕೋತನೂ ಇರತಾಳಂತ. ಆದರ ಭಾಳ ಸಂಭಾವಿತ ಹುಡುಗಿ, ಕೈ ನೋವಾಗೇದಂತ ಎರಡ ದಿನ ಅಕೀಗೆ ಜೈಲಿನ್ಯಾಗಿನ ಅಕಿ ಕೆಲಸಕ್ಕ ಅರಾಮ ಕೊಟ್ಟಿದ್ರು. ಈಗ ಮತ್ತ ಮಾಮೂಲಿ ಹಂಗ ಕೆಲಸ ನಡದದ. ಇಷ್ಟ ಆಗಿದ್ರ ಈ ಕತಿ ಮರತ ಹೋಗತಿತ್ತು. ಆದರ ಹಂಗಾಗಲಿಲ್ಲ. ಮುಂದ ನಾಕು ದಿನದ ಮ್ಯಾಲ, ಪರಿಣೀತಾ ಒಂದು ಪಾಕೀಟು ತಂದು ನನಗ ಕೊಟ್ಟಳು. “ಮ್ಯಾಡಂ, ಇದನ್ನ ನಿಮ್ಮ ತಂದೆಗೆ ಕೊಡತೀರಾ ಪ್ಲೀಸ್” ಭಾಳ ಸಂಕೋಚದಿಂದ ಕೇಳಿದಳು.

ನಾನು ನಕ್ಕೋತನ ಕೇಳಿದೆ. “ಏನು ನಮ್ಮಪ್ಪಗ ಲವ್ ಲೆಟರ್?” “ಛೆ, ಛೆ, ಅವರು ಗುರುಗಳು ಮತ್ತ ಅಂತಾ ಅಂತಃಕರಣದ ಮನಷ್ಯಾರನ ನಮ್ಮಪ್ಪನ ನಂತರ ನೋಡಿದ್ದು ಇವರನ. ಹೆಂಗಸರು ಗಂಡಸರನ್ನ ಮಾತಾಡಿಸಿದರ ಇದೊಂದ ಕಾರಣ ನೀವೂ ತಿಳಕೋತೀರಿ ಅಂತ ನನಗ ಗೊತ್ತಿರಲಿಲ್ಲ.” ಭಾಳ ಸಿಟ್ಟಿನಿಂದ ಅಕಿ ಧನಿ ಅಕಿಗೆ ತಿಳೀದನ ಸ್ವಲ್ಪ ಜೋರಾಗಿತ್ತು. ಮಾರಿ ಮೂಗು ಕೆಂಪಗಾಗಿತ್ತು. “ನೀನು ಸಿಟ್ಟಿನ್ಯಾಗ ಭಾಳ ಛಂದ ಕಾಣತಿ. ಅದಕ್ಕ ಯಾವಾಗಲೂ ನೀನು ತಾಳ್ಮೆಯಿಂದ ಇರತೀದಿ. ನಾನು ಏನಂದೆ ಈಗ. ನಮ್ಮಪ್ಪಗ ನೀನು ಪತ್ರಾ ಬರದೀ ಅಂದರ. ಅವರ ಮ್ಯಾಲೆ ನಿನಗ ಪ್ರೀತಿ ಅದ ಅಂತ ಹೌದಲ್ಲೊ. ಅದು ಅಪ್ಪನ ಪ್ರೀತಿ ಇರಬಹುದು. ಗುರುಗಳ ಪ್ರೀತಿ ಇರಬಹುದು. ಅಥವಾ ಸಹೃದಯರ ಪ್ರೀತಿನೂ ಆಗಿರಬಹುದು. ಒಟ್ಟಿನ ಮ್ಯಾಲೆ ಅದು ಪ್ರೀತಿನ ಅಲ್ಲ.” ನಾ ನಕ್ಕೋತನ ಹೇಳಿದ್ದಕ್ಕ, ಅಕಿ ಹೊಸಾ ಅರ್ಥ ಮಾಡಿಕೊಂಡಳು. ಜೊತೆಗೆ ಒಂದು ಹೊಸಾ ಸಂಬಂಧ ಹುಡುಕಿದಳು. “ನಾ ನಿಮ್ಮ ತಂಗಿ ಅಂತ ನಿಮಗ ಒಪ್ಪಿಕೊಳ್ಳಲಿಕ್ಕೆ ಆಗತದ?” “ಯಾಕಾಗೂದಿಲ್ಲ, ನಿನಗೇನು ಕೈಯಿಲ್ಲ, ಕಾಲಿಲ್ಲ, ಕಣ್ಣಿಲ್ಲ. ನಿನ್ನ ರಕ್ತನೂ ಕೆಂಪಗದ ಅಂದ ಮ್ಯಾಲೆ ಮನುಷ್ಯಾಳ ಇದ್ದಿ. ಅಂದರ ನಮ್ಮ ತಂಗಿ ಯಾವಾಗಿಂದನೂ ಇದ್ದಿ. ಈಗ ಹೊಸದಾಗಿ ಯಾಕ ಬದಲಾತು?” ಅಂದೆ.

“ಮೇಡಂ, ನಿಮ್ಮದೂ ನಿಮ್ಮ ತಂದಿ ಹಂಗ ದೊಡ್ಡ ಮನಸು.” ಕಣ್ಣಾಗ ನೀರು ತುಂಬಿದ್ದವು. ಅಕಿ ಕಣ್ಣೀರು ನನಗ ನೋಡಲಿಕ್ಕೆ ಆಗಲಿಲ್ಲ. “ನಡಿ ನಡಿ. ಮನಸು ಅನ್ನೋ ಒಂದು ಅಂಗ ದೇಹದಾಗ ಇಲ್ಲ.” ಅಂದೆ. “ಮನಸು ಅಲ್ಲ ಹೃದಯ” ಅಂದಳು, ನಕ್ಕೋತ. “ಕಣ್ಣಾಗ ನೀರು ತುಟಿ ಮ್ಯಾಲೆ ನಗಿ. ಸೂರ್ಯೋದಯ ಸೂರ್ಯಾಸ್ತ ಎರಡೂ ಒಂದ ಕಡೆ. ನೋಡಲಿಕ್ಕೆ ಭಾಳ ಛಂದದ. ಹೃದಯ ದೊಡ್ಡದದ ಅಂದರ ಹಾರ್ಟ ಎನಲಾರ್ಜ ಅಂತ ಹಾಸ್ಪಿಟಲ್ ಗೆ ಸೇರಸತಾರ ಸುಮ್ಮನಿರು.” ಅಂದೆ. ಆದರ ಪತ್ರದಾಗ ಏನದ ಅನ್ನೋ ಕುತೂಹಲ ಭಾಳಿತ್ತು. ಆದರ, ಪತ್ರಾ ಓದಿ ಅಪ್ಪ ಏನೂ ಹೇಳಲಿಲ್ಲ. ನಾಕು ದಿನ ಏನೇನೋ ಓಡಾಟ ಮಾಡತಿದ್ರು. ಮುಂದ ಒಂದು ದಿನ ಫೇಮಸ್ ಕ್ರಿಮಿನಲ್ ಲಾಯರ್ ಚಂದ್ರಹಾಸ ಜೈಲಿಗೆ ಬಂದಿದ್ರು. ಅಷ್ಟ ಅಲ್ಲ. ಅಪ್ಪನ ಬಗ್ಗೆ ಭಾಳ ಗೌರವದಿಂದ ಮಾತಾಡಿದರು.

ಪರಿಣೀತಾನ ಭೆಟ್ಟಿ ಆಗಲಿಕ್ಕೆ ಕೋರ್ಟಿನ ಪತ್ರ ತಂದಿದ್ದರು. ನಾಕು ತಾಸು ಕುತಗೊಂಡು ಮಾತಾಡಿ ಏನೇನೋ ಸಹಿ ಹಾಕಿಸಿಕೊಂಡು ಹೋಗಿದ್ದರು. ಮುಂದ ನಡೆದಿದ್ದು ನೋಡಿದರ ಯಾರಿಗೂ ನಂಬಲಿಕ್ಕೆ ಆಗೂದಿಲ್ಲ. ನಾನು ಪೋಲೀಸ ಡಿಪಾರ್ಟಮೆಂಟ್ ನೊಳಗಿದ್ದೂ ನಂಬಲಿಲ್ಲ ಅಂದರ ನೀವಂತೂ ನಂಬೂದೇಯಿಲ್ಲ. ಹೇಳೋದು ನನ್ನ ಕರ್ತವ್ಯ ಹೇಳತೇನಿ. ನಂಬೋದು ಬಿಡೋದು ನಿಮಗ ಬಿಟ್ಟಿದ್ದು.

ದೊಡ್ಡ ಕಾಡಿನೊಳಗ ಇರೋ ಅರಮನಿ ಅಂತಾ ಮನಿ, ತುಂಬಿದ ಮನಿಯೊಳಗ ಹತ್ತು ಮಕ್ಕಳು. ಆ ಮಕ್ಕಳನ್ನ ದಿನಾ ಸಾಲಿಗೆ ಕಳಸಲಿಕ್ಕೆ ದಾರಿ ಮತ್ತ ಮಳಿ ಎರಡರ ತೊಂದರೆ. ಪರಿಣೀತಾನ ಅಪ್ಪ ಆ ಮಕ್ಕಳಿಗೆ ದಿನಾ ಮನಿಯೊಳಗ ಪಾಠ ಮಾಡಿತಿದ್ದ. ಎಸ್ ಎಸ್ ಎಲ್ ಸಿ ವರೆಗೂ ಮನೀಯೊಳಗ ಓದು, ವರ್ಷಕೊಮ್ಮೆ ಪರೀಕ್ಷಾ. ಇದು ಮಕ್ಕಳಿಗೆ ರೂಢಿ ಆತು. ಅವರ ಜೊತಿಗೆ ಪರಿಣೀತಾನಿಗೂ ಪಾಠ ಹೇಳಿದ. ಆದರ, ಅಕೀಗೆ ಅವ್ವ ಇಲ್ಲ.

ಅಲ್ಲಿ ಅಕಿಗೆ ಕಲಿಸಿದ್ದು ಮಾತ್ರ, ಸಾಲಿ ಪಾಠ ಒಂದ ಅಲ್ಲ. ಸಾಹಿತ್ಯ-ಸಂಗೀತ ಎರಡೂ. ಕೂತಾಗ ನಿಂತಾಗ ಪ್ರಕೃತಿ ವರ್ಣನಾ ಮಾಡಿ ಕವನಾ ಬರೆಯೋದು ಇಬ್ಬರಿಗೂ ಒಂದು ಆಟ ಆಗಿತ್ತು. ಮತ್ತ ಅವರ ಜೀವನದಾಗ ಅದೊಂದ ಖುಷಿ ತರೋ ಸಂಗತೀನೂ ಆಗಿತ್ತು. ಸಾಧ್ಯ ಆದರ ಆ ಕವನಕ್ಕ ಧಾಟೀ ಕೂಡಿಸಿ ಹಾಡೋದೂ ಒಂದು ಆಟನ ಆಗಿತ್ತು. ಆದರ ಅಕಿ ಅಪ್ಪಗ ಆ ಕಾಡಿನ ಹವಾ ತಡೀಲಿಲ್ಲ. ಮನ್ಯಾಗ ಕಾಳಜೀ ಮಾಡೋವರೂ ಇರಲಿಲ್ಲ. ನ್ಯೂಮೋನಿಯದಿಂದ ಸತ್ತೇ ಹೋದ. ಅದಕ್ಕೂ ಒಂದು ತಿಂಗಳ ಮೊದಲ ಅದೇನನಿಸಿತೋ ಪಾಡ್ಯದಿಂದ ಪೌರ್ಣಮಿ ಮತ್ತ ಮರುದಿನದ ಪಾಡ್ಯದಿಂದ ಅಮಾವಾಸ್ಯೆಯ ಚಂದ್ರನ ಬಗ್ಗೆ, ಜೀವನದ ಪ್ರತಿಯೊಂದು ಘಟ್ಟಕ್ಕೂ ಹೋಲಿಸಿ ಕವನಗಳನ್ನ ಬರೆದಿದ್ದ. ಪರಿಣೀತಾ ಇನ್ನೂ ಎಸ್ ಎಸ್ ಎಲ್ ಸಿ ಓದತಿದ್ದರೂ ಕಾವ್ಯವನ್ನ ಅರದ ಕುಡಿಸಿದ್ದ. ಅಲ್ಲದ ಅಕೀಗೆ ಅವರಪ್ಪ ಹೇಳಿದ್ದು, “ಸಂಗೀತ ಸಾಹಿತ್ಯ ಕಲಾ ವಿಹೀನಃ ಪಶು ಪುಚ್ಛ ಹೀನಃ:” ಅಂತ. ಹಾಡು ಬರೆಯೋದು ಅದನ್ನ ಹಾಡೋದು ಎರಡೂ ಭಾಳ ಇಷ್ಟ ಅವಗ. “ಸುಖಾ ಅನ್ನೋದು ಬಿಸಿ ಅನ್ನಾ ಉಣ್ಣೋದರಾಗೋ, ರೊಕ್ಕಾ ಘಳಿಸಿ ತಿಜೂರಿಯೊಳಗ ಇಡೋದರಾಗೋ ಇಲ್ಲ ಕೂಸ, ಅದು ಕಾವ್ಯವನ್ನು ಅರ್ಥಾ ಮಾಡಕೋಳೋದರಾಗದ. ಅದನ್ನ ಹಾಡೋದರಾಗದ. ಅವೆರನ್ನೂ ನೀನು ಬಿಡಬ್ಯಾಡ.” ಅಂತಿದ್ದ.

ಬಡತನ ಅಪ್ಪಿಕೊಂಡು ಬಾಳುವೆ ಮಾಡೋದು ತಾಯಿಯಿಲ್ಲದ ಕೂಸಿಗೆ ಹೊಸಾದಾಗಿದ್ದಿಲ್ಲ. “ನನಗೇನರ ಆದರೆ ನನ್ನ ಹಂಗ ನೀನೂ ಇಲ್ಲೆ ಮಕ್ಕಳಿಗೆ ಪಾಠ ಹೇಳು. ಈ ಮನಿ ಯಜಮಾನರೇ ನಿನ್ನ ಜೀವನಕ್ಕ ದಾರಿ ಮಾಡತಾರ. ಸಾಯೋ ಹೊತ್ತಿನಾಗೂ ನನಗ ಒಂದ ಆಶಾ ಅದ. ಸಾಧ್ಯ ಆದರ, ಮತ್ತ ಈ ಚಂದ್ರನ ಕವಿತಾಗಳನ್ನ ಸೇರಿಸಿ ಒಂದು ಪುಸ್ತಕ ಪ್ರಕಟ ಮಾಡು.” ಅಂದಿದ್ದ.

ಮುಂದ ಯಜಮಾನರ ಮನೀಯವರೇ ಅಕೀಗೆ ಮನಿಯೊಳಗೇ ಟೈಪಿಂಗ್ ಕಲೀಲಿಕ್ಕೆ ವ್ಯವಸ್ಥಾ ಮಾಡಿದರು, ಅಪ್ಪನ ಬಾಯಾಗ ಕೂಸು ಆಗಿದ್ದ ಅಕಿ, ಅಪ್ಪ ಪ್ರೀತೀಲೇ ಇಟ್ಟ ಹೆಸರು ಪರಿಣೀತಾ ಅಂತ ಕರೆಸಿಕೊಂಡಿದ್ದು, ಟೈಪಿಸ್ಟ ಅಂತ ಬೆಂಗಳೂರಿಗೆ ಬಂದಾಗಲೇನ. ಇಲ್ಲೆ ಅಕಿಗೊಬ್ಬಳು ಕ್ರಿಶ್ಚಿಯನ್ ಗೆಳತಿ ಸಿಕ್ಕಳು. ಸಣ್ಣಂದಿರತ ಕಾಡಿನ್ಯಾಗ ಬೆಳದ ಅಕಿಗೆ, ನಾಡಿನ ದುಷ್ಟತನದ ಬಗ್ಗೆ ಎಚ್ಚರಿಸಿದಳು. ನೀನು ‘ಪರಿ’, ಅಂದರ ‘ಪವಿತ್ರವಾದ ಹೂವು’ ಅಂದಳು. ಪರಿಣೀತಾ ಬರದಂತಹಾ ಹಾಸ್ಯದ ಲೇಖನಗಳನ್ನ ಓದಿ ಸಂತೋಷ ಪಟ್ಟಳು. ಅಕೀ ಬರೆದಿದ್ದು, ಬರೆದು ಒಗದದ್ದನ್ನ ಎಲ್ಲಾ ಜೋಡಿಸಿ ಫೈಲ್ ತಂದು ಹಾಕಿಟ್ಟಳು. ಒಂದು ದಿನಾ, ತನ್ನ ಬಾಯ್ ಫ್ರೆಂಡ್ ನ ಪರಿಚಯದಿಂದ ಒಬ್ಬ ಯೂನಿವರ್ಸಿಟಿ ಲೆಕ್ಷರರ್, ಸಾಹಿತಿ ಮನೀಗೆ ಕರಕೊಂಡು ಹೋಗಿ, ಈ ಲೇಖನಗಳನ್ನ ತೋರಿಸಿದಳು. ಅವರು ಮೆಚ್ಚಿ, ಅದರಾಗ ನಾಕು ಲೇಖನಾ ಎತ್ತಿಟಕೊಂಡರು,. ‘ನಾನು ಇದನ್ನ ವಾರ ಪತ್ರಿಕೆಯ ಹಾಸ್ಯದ ಅಂಕಣಕ್ಕೆ ಕಳಿಸುತ್ತೇನೆ. ಕೇರಾಫ್ ಹೆಸರು ನನ್ನದೇ ಹಾಕಿರುತ್ತೇನೆ. ಇಲ್ಲದಿದ್ದಲ್ಲಿ, ಹೊಸಬರ ಲೇಖನಗಳನ್ನ ಪತ್ರಿಕೆಯವರು ಪ್ರಕಟಿಸೋದಿಲ್ಲ. ಮತ್ತೆ ಈ ಕವಿತೆಗಳಿಗೆ ನಾನೇ ಮುನ್ನುಡಿ ಬರೆದು, ಪ್ರಕಾಶಕರನ್ನ ಸಂಪರ್ಕಿಸುತ್ತೇನೆ.’ ಎಂದು ಹೇಳಿ ತಾವೇ ಕವನ ಮತ್ತೆ ಲೇಖನಗಳನ್ನ ಇಟ್ಟುಕೊಂಡರು.

ಅವತ್ತ ಅಕೀಗಂತೂ, ಸಾಹಿತ್ಯದ ವಲಯದಲ್ಲಿ ಒಂದು ಕಾಲಿಟ್ಟಂತೆ ಭಾಸವಾಗಿ ಖುಷಿ ಏಣಿ ಏರಿದ್ದಳು. ಮುಂದೆ ಎರಡು ವಾರದವರೆಗೆ ಏನೂ ಮಾಹಿತಿ ಇರಲಿಲ್ಲ. ನಂತರದಲ್ಲಿ ಪ್ರಸಿದ್ಧ ವಾರಪತ್ರಿಕೆಯ ರಸಾಯನ ವಿಭಾಗದಲ್ಲಿ, ಪರಿಣೀತಾ ಬರೆದ, ಚಂದವಿದೆ ಎಂದು ಸಾಹಿತಿಗಳು ಎತ್ತಿಟ್ಟುಕೊಂಡ ಹಾಸ್ಯ ಲೇಖನವೊಂದು ಪ್ರಕಟವಾಗಿತ್ತು. ಆದರೆ ಹೆಸರು ಮಾತ್ರ ಸಾಹಿತಿಗಳದೇ ಆಗಿತ್ತು. ಪರಿಣೀತಾಗ ಆಶ್ಚರ್ಯ. ಗೆಳತಿಗೆ ತೋರಿಸಿದಳು. ಅವಳೂ ಕೂಡ ಆಶ್ಚರ್ಯದಿಂದ, ‘ಬಾ ಅವರನ್ನ ಕೇಳಿಬರೋಣ’ ಎಂದು ಅಕಿ ಕೈ ಎಳೆದು ಕೊಂಡು ಹೊರಟೇಬಿಟ್ಟಳು.

ಯೂನಿವರ್ಸಿಟಿಯಲ್ಲಿ ಅವರಿಬ್ಬರನ್ನೂ ನೋಡಿಯೂ ನೋಡದಂತೆ ಓಡಾಡಿದ ಆ ಸಾಹಿತಿಗಳು, ಕೊನೆಗೆ, “ನಿಮ್ಮ ಲೇಖನವನ್ನು ನನ್ನದೇ ಎಂದು ಪತ್ರಿಕೆಯವರು ಭಾವಿಸಿದ್ದಿರಬೇಕು, ಯಾಕೆಂದರೆ, ನನ್ನ ಲೇಖನ, ಕಥೆ, ಕವಿತೆ ಯಾವಾಗಲೂ ಪೇಪರಲ್ಲಿ ಬರತಾ ಇರತಾವಲ್ಲ. ನಮ್ಮ ಹೆಸರು ಸಾಹಿತ್ಯ ಮತ್ತೆ ಪತ್ರಿಕಾ ವಲಯದಲ್ಲಿ ಪದೇ ಪದೇ ಕೇಳಿ ಬರುತ್ತೆ.. ಅದಕ್ಕೇ ಇರಬೇಕು. ಆಯಿತು ಬಿಡಿ. ಅಕಸ್ಮಾತ್, ಗೌರವಧನ ಅದಕ್ಕೆ ಐವತ್ತೋ ನೂರೋ ಬಂದರೆ ನಿಮಗೇ ಕೊಡತೇನಿ. ಆಯಿತಲ್ಲ. ಅದೇ ನಿಮಗೆ ಬೇಕಲ್ಲವೇ? ಏನೀಗ’ ಎಂದು ತುಬಾ ಅಸಡ್ಡೆಯಿಂದ ಉತ್ತರಿಸಿದರು. ಪರಿಣೀತಾಳ ಗೆಳತಿ ಧ್ವನಿಯೇರಿಸಿ, “ಅದು ಹೇಗೆ ಇವಳ ಲೇಖನಕ್ಕೆ ನಿಮ್ಮ ಹೆಸರು ಹಾಕುತ್ತಾರೆ. ನಾಚಿಕೆಯಾಗಲ್ಲವಾ ನಿಮಗೆ. ಬಿಡಿ ನಮ್ಮ ಲೇಖನಗಳನ್ನ ನಮಗೆ ವಾಪಸುಕೊಡಿ.” ಎಂದು ಗಲಾಟೆ ಮಾಡಲು ಪ್ರಾರಂಭಿಸಿದಳು. ‘ನೀವೀಗ ಇಲ್ಲಿಂದ ಹೊರಡಿ. ಸಾಯಂಕಾಲ ಮನೆಗೆ ಬನ್ನಿ, ನಿಮ್ಮ ಎಲ್ಲಾ ಹಾಳೆಗಳನ್ನೂ ನಿಮ್ಮ ಮುಖಕ್ಕೆ ಎಸೀತೀನಿ. ಏನೋ ಒಂದು ಚೂರು ಹಿಂದೆ ಮುಂದೆ ಆದರೆ ಯೂನಿವರ್ಸಿಟಿಗೆ ಬಂದು ಬಿಟ್ಟಿರಾ? ನಡೀರಿ, ನಡೀರಿ.” ಎಂದು ಬಿಟ್ಟರು. ಕೊನೆಗೆ ಪರಿಣೀತಾಳೆ, ಹೋದರೆ ಹೋಗಲಿ ಎಂದು ಗೆಳತಿಯನ್ನು ಎಳೆದು ಕೊಂಡು ಬಂದುಬಿಟ್ಟಳು.

ಕೋಪ, ಅಸಹಾಯಕತೆಗಳ ಮಿಶ್ರಣದಿಂದ ಅಕಿ ಗೆಳತಿ ಒದ್ದಾಡಿಬಿಟ್ಟಳು. ಪರಿಣೀತಾಳೇ ಅವಳಿಗೆ ಸಮಾಧಾನ ಮಾಡಬೇಕಾಯಿತು. ಸಾಯಂಕಾಲ ಅವರ ಮನೆಗೆ ಹೋದರೆ, ಪಕ್ಕದವರಿಗೆ ಈ ಲೇಖನ ತೋರಿಸಿ ತಾನೇ ಬರೆದದ್ದೆಂದೂ, ಸ್ವಂತ ಅನುಭವವೆಂದೂ ಹೇಳುತ್ತಿದ್ದ. ಅವಳಿಗೆ ಹೇಸಿಕೆಯಾಯಿತು. ನಂತರ ಪರಿಣೀತಾನ ನಾಲ್ಕೂ ಲೇಖನಗಳನ್ನೂ ವಿವಿಧ ಪತ್ರಿಕೆಗಳಿಗೆ ಈಗಾಗಲೇ ಕಳಿಸಿರುವುದಾಗಿಯೂ, ಪುಸ್ತಕದ ಪ್ರಕಟಣೆಗಾಗಿ ಕವನಗಳನ್ನು ಕೊಟ್ಟಿರುವುದಾಗಿಯೂ ತಿಳಿಸಿದ. ಮರುದಿನ ಬಂದರೆ ಪ್ರಕಾಶಕರಲ್ಲಿಗೆ ಕರೆದೊಯ್ದು ಕವನಗಳನ್ನು ಹಿಂದಿರುಗಿಸುವುದಾಗಿ ತಿಳಿಸಿದ. ಪೆಚ್ಚುಮೋರೆ ಹಾಕಿಕೊಂಡು ಮನೆಗೆ ಬಂದರು.

ಮೇಲೆ ಎಷ್ಟೇ ಸಮಾಧಾನವಾಗಿದ್ದರೂ ರಾತ್ರಿ ಪರಿಣೀತಾಗೆ ಚಳಿಜ್ವರ ಬಂದಿತ್ತು. ಮರುದಿನ ಅಕೀಗೆ ಧೈರ್ಯ ಹೇಳಿ ಕೆಲಸಕ್ಕೆ ಹೋದ ಗೆಳತಿ ಹಿಂದಿರುಗಿ ಬಂದಾಗ ಆಗಿದ್ದು ದೊಡ್ಡ ಆಘಾತ. ಒಬ್ಬಳೇ ಬಂದಾಳೆಂದು ಅವಳ ಮೇಲೆ ಅತ್ಯಾಚಾರ ಮಾಡಿ ಕಳಿಸಿದ್ದ ಪಾಪಿ. ವಿಷಯ ಹೊರಗೆ ಬಂದರೆ, ಅವಳ ಜೀವನಕ್ಕೆ ತೊಂದರೆಯಂದು, ಸುಮ್ಮನಿರಬೇಕೆಂದು ಇಬ್ಬರೂ ನಿರ್ಧಾರ ಮಾಡಿದರು. ಆದರೂ ಮನಸಿಗೆ ಭಾಳ ಬ್ಯಾಸರಾಗಿತ್ತು.

ಮುಂದೊಂದು ತಿಂಗಳಲ್ಲಿ, ಚಂದ್ರ ಕವನಗಳ ಕವನ ಸಂಕಲನ ಪ್ರಿಂಟಾಯಿತು. ಅದೂ ಆ ಸಾಹಿತಿಯ ಹೆಸರಲ್ಲಿಯೇ. ಕವನಗಳಿಗೆ ಸಾಹಿತ್ಯ ವಲಯದಲ್ಲಿ ಆ ಕವನಗಳಿಗೆ ತುಂಬ ಒಳ್ಳೆಯ ಅಭಿಪ್ರಾಯ ಕೇಳಿಬಂತು. ಆ ದಿನ ಸಾಯಂಕಾಲವೇ ಪರಿಣೀತಾಳ ಗೆಳತಿಗೆ ಒಂದು ಮೆಸೇಜ್, ಅವಳೊಡನೆ ಅವನಿದ್ದ ಫೋಟೋ ಹಾಗೂ ಮರುದಿನ ತಪ್ಪದೇ ಒಬ್ಬಳೇ ಬರಲು ಆಹ್ವಾನ. ಇಲ್ಲದಿದ್ದಲ್ಲಿ ಅವಳು ಮದುವೆಯಾಗಬೇಕೆಂಬ ಹುಡುಗನಿಗೆ ಈ ಫೋಟೋ ಕಳಿಸುವುದಾಗಿ ಬ್ಲಾಕ್ ಮೇಲ್ ಮಾಡಿದ್ದ. ಪರಿಣೀತಾಳೆ ಗೆಳತಿಗೆ ಧೈರ್ಯ ತುಂಬಿದಳು. ಮುಂದೆ ಮದುವೆಯಾಗೋ ಹುಡುಗಿಗೆ ಇದೊಂದು ದೊಡ್ಡ ಶಾಕ್. ಪರಿಣೀತಾಗ ಈ ಸುದ್ದಿ ಭಾಳ ಸಿಟ್ಟು ತಂದಿತ್ತು.

ಪರಿಣೀತಾ ಮರುದಿನ ಸಾಯಂಕಾಲ, ಗೆಳತಿಗೆ ಹೇಳದೇ ಆ ಸಾಹಿತಿ ಲೆಕ್ಚರರ್ ಮನೆಗೆ ಹೋಗಿದ್ದಳು. ಅವನು, ವ್ಯಂಗ್ಯವಾಗಿ ನಗುತ್ತಾ, “ನೋಡಿದ್ಯಾ, ನನ್ನ ಶಕ್ಯಿಯನ್ನು. ನೇರವಾಗಿ ನೀವೇ ಬರತಿದ್ರಾ? ಈಗ ಗೆಳತಿಯ ರಕ್ಷಣೆಗೆ ಓಡಿ ಬಂದಿರಲ್ಲವಾ? ಸರಿ ಸರಿ, ನನಗೇನು, ನೀವಾದ್ರೂ ಒಕೆ. ಅವರಾದ್ರೂ ಒಕೆ. ಬೇಕಿದ್ರೆ ನನ್ನ ಮುಂದಿನ ಕವನ ಸಂಕಲನ ನಿಮ್ಮ ಹೆಸರಿಗೆ ಪ್ರಿಂಟ್ ಹಾಕಿಸೋಣ, ನೀವು ನನಗೆ ನಿಷ್ಟರಾಗಿದ್ರೆ.” ಎಂದ.

ಕ್ರೋಧ ಮನದೊಳಗೆ ತುಂಬಿದ್ದರೂ, ಪರಿಣೀತಾ, ನಿಧಾನವಾಗಿ ಆದರೆ ದೃಢವಾಗಿ, “ನನಗೂ ಒಕೆ ಸರ್, ಆದರೆ ಅದಕ್ಕೆ ಮೊದಲು ನನಗೆ ಸ್ವಲ್ಪ ಸ್ಪಷ್ಟೀಕರಣ ಬೇಕು.” ಎಂದಳು. ಮದ್ಯಪಾನ ಮಾಡಿದ್ದನೇನೋ, ಹುಳ್ಳಗೆ ನಗುತ್ತಾ, “ನಿನಗೇನು ಬೇಕೋ ಕೊಡತೀನಿ ಬಾ ಕೋಣೆಗೆ” ಎಂದು ತೂರಾಡುತ್ತಾ ಅವಳನ್ನು ಹಿಡಿಯಬಂದ. ತಪ್ಪಿಸಿಕೊಳ್ಳಲು ಎದ್ದ ಅವಳ ಸೀರೆಯ ಸೆರಗನ್ನು ಎಳೆಯುವ ರಭಸದಲ್ಲಿ, ಮುಂದೆ ಇದ್ದ ಅಲಂಕಾರಿಕ ಸೈನಿಕನ ವೇಷದ ಬೊಂಬೆಯ ಮೇಲೆ ಬಿದ್ದ. ಓಡಿದ ಪರಿಣೀತಾಳ ಸೀರಿಯ ಅಂಚು ಸೋಫಾದ ಮೊಳೆಗೆ ಸಿಕ್ಕು ಹರಿಯಿತು. ಅವನಿಂದ ತಪ್ಪಿಸಿಕೊಂಡು ಓಡಿ ಹಾಸ್ಟೆಲ್ ಸೇರಿದಳು.

ಮರು ದಿನದ ಪತ್ರಿಕೆಯ ತುಂಬ ಯೂನಿವರ್ಸಿಟಿಯ ಪ್ರಾಧ್ಯಾಪಕರ ಕೊಲೆಯ ಸುದ್ದಿ. ಸೋಫಾದ ಅಂಚಿಗೆ ಸಿಕ್ಕ ಸೀರಿಯ ಗುರುತಿನಿಂದ ಪೋಲೀಸರು ಪರಿಣೀತಾಳನ್ನ ಬಂಧಿಸಿದರು. ಸುಲಭವಾಗಿ ತಪ್ಪೊಪ್ಪಿಕೊಂಡಳು. ಆ ದಿನ ತಾನಲ್ಲಿಗೆ ಹೋಗಿದ್ದು, ಪುರಾವೆಯಾಗಿತ್ತು. ಇವಳ ಬಳಿ ವಕೀಲರಿರಲಿಲ್ಲ. ಇವಳೇ ಕೊಲೆ ಮಾಡಿದ್ದಾಳೆಂದು ನಿರ್ಧಾರವಾಗಿ ಜೀವಾವಧಿ ಶಿಕ್ಷೆಯಾಯ್ತು. ಆದರ ಕ್ರಿಮಿನಲ್ ಲಾಯರ್ ಚಂದ್ರಹಾಸ ಕೇಸ್ ನ ಮತ್ತೊಮ್ಮೆ ತಗದರು. “ಅಕೀನ ಹಿಡೀಲಿಕ್ಕೆ ಬಂದಾಗ ತಾನ ಗೊಂಬಿ ಮ್ಯಾಲೆ ಬಿದ್ದು, ಗೊಂಬೀ ಕೈಯಾಗಿನ ತ್ರಿಶೂಲ ಕುತ್ತಿಗೀಗೆ ನಟ್ಟು, ರಕ್ತ ಸೋರಿ ಹೋಗೇದ. ಗೊಂಬೀ ಮ್ಯಾಲೆ ಅಕಿ ಗುರುತಿಲ್ಲ. ಮತ್ತ ಇಕೀನ ಚುಚ್ಚಿ ಸಾಯಿಸಿದರ, ಮುಂದಿನಿಂದ ಗೊಂಬಿ ಸಮೇತ ಚುಚ್ಚಲಿಕ್ಕೆ ಸಾಧ್ಯ ಇಲ್ಲ.” ಅಂತ ವಾದಿಸಿದರು.

ಕೋರ್ಟು ಒಪಿಗೊಂಡು ಇನ್ನುಳಿದಿದ್ದ ಶಿಕ್ಷಾ ಮಾಫ್ ಮಾಡಿತು. ಜೈಲಿನಿಂದ ಹೊರಗ ಬಂದಾಗ ಅಪ್ಪ ನಿಂತಿದ್ದ. ಅಕಿನ್ನ ಕರಕೊಂಡು ಹೋಗಲಿಕ್ಕೆ. ಹೆಗಲ ಮ್ಯಾಲ ಕೈಯಿಟ್ಟ, “ಬಾ ಕೂಸು ಮನೀಗೆ ಹೋಗೋಣು.” ಅಂತ ಕರಕೊಂಡು ಬಂದ. ಸಂಜೀಮುಂದ ನಾ ಮನೀಗೆ ಬಂದಾಗ ಅಪ್ಪಾ ಅವ್ವನ ಜೊತೀಗೆ ಪರಿಣೀತಾನ ಕುಲುಕುಲು ನಗು ಕೇಳಿಸಿತ್ತು. ಆದರ, ಇಷ್ಟೆಲ್ಲಾ ಆಗಿ ಜೈಲು ಸೇರಿ, ಎರಡ ವರ್ಷದ ಮ್ಯಾಲೆ ಯಾಕ ಬೆರಳು ಕತ್ತರಿಸಿಕೊಂಡಳು. ಅದಕ್ಕ ಉತ್ತರ ತಿಳೀಲಿಲ್ಲ.

“ನೀನ ಕೇಳು” ಅಂದರು ಅಪ್ಪ. ಕೇಳೋದೇನದ, “ನಮ್ಮಪ್ಪ ಬರದಿರೋ ಕವನಗಳ ಸಂಕಲನ, “ಸಂಜೆ ಬಾನಿನಂಚಿನಲ್ಲಿ” ಅದಕ್ಕ ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ ಬಂದಿತ್ತು. ಆದರ, ಅವನ ಹೆಸರಿಗೆ ಮರಣೋತ್ತರವಾಗಿ ಪ್ರಶಸ್ತಿ ಘೋಷಣಾ ಮಾಡಿದ್ದು ಪೇಪರನ್ಯಾಗ ಓದಿದೆ. ನಮ್ಮಪ್ಪಗ ನಾನು ಕೊಟ್ಟ ಮಾತು ನೆನಪಾತು. ಅದನ್ನ ಈಡೇರಿಸಲಿಲ್ಲ. ಅದಕ್ಕ, ಅಪ್ಪಗ ನನ್ನ ಎರಡು ಬೆರಳು ಗುರುದಕ್ಷಿಣಾ ಕೊಟ್ಟು ಬಿಡೋಣು. ಇನ್ನು ಮುಂದ ಏನೂ ಬರಿಯೋದ ಬ್ಯಾಡ.” ಅಂತ ಬೆರಳು ಕತ್ತರಿಸಿಕೊಂಡಿದ್ದೆ.

“ಆಹಾ ಕಲಿಯುಗದ ಏಕಲವ್ಯ!” ಹಂಗಿಸಿದೆ. “ಆದರ ಏನು ಮಾಡೋದು, ನನಗ ಸಿಕ್ಕ ದ್ರೋಣಾಚಾರ್ರು, ಅರ್ಜುನ ಆ ಎರಡು ಬೆರಳು ಹೊಲಿಸಿ ಬಿಟ್ಟಾರ.” ಪರಿಣೀತಾ ಮಾತಿಗೆ ಸೋಲಲಿಲ್ಲ. “ಹಂಗಾರ ಮುಂದೇನು ಬರತೀದಿ. ತಿಂಗಳ ಚಂದ್ರನ ದಿನಗಳು ಮುಗದ ಬಿಟ್ಟಾವಲ್ಲ.” ಅಂದೆ, “ಚಂದ್ರ ಮುಗದ್ರ ಸೂರ್ಯಾ ಇದ್ದಾನ ದಿನಾ ಬೆಳಕ ಕೊಡತಾನ, ಚಂದ್ರನಂಗ ಕೆಲವೊಮ್ಮ ಕತ್ತಲೀ ಇರೂದಿಲ್ಲ. ಮರಾ ಗಿಡಾ ಹೂವು ಎಲ್ಲಾ ಅವ. ಅಪ್ಪಾ ಅವ್ವಾ ಅಕ್ಕಾ ಇದ್ದಾರ. ನಿಮಕಿಂತ ನನ್ನ ಬಲಾನ ಜೋರದ. ಯಾಕಂದರ, “ಫೂಲೋಂಕಾ ತಾರೋಂಕಾ ಸಬಕಾ ಕೆಹನಾ ಹೈ, ಏಕ ಹಜಾರೋಂಮೆ, ಮೇರಿ ಬೆಹನಾ ಹೈಂ. ತುಮ್ಹಾರಿ ಜೈಸಿ ಬೆಹನಾ ಹೈಂ” ಅಂತ ರಾಗವಾಗಿ ಹಾಡಿದಳು. ವ್ಹಾ ವ್ಹಾ ಅಂದೆ ಮನಸನ್ಯಾಗನ.

-ಡಾ. ವೃಂದಾ. ಸಂಗಮ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x