ಸತ್ಯ-ಸುಳ್ಳಿನ ನಡುವೆ ಮನದ ಮಂಟಪ
ಮನದಾಳದಲ್ಲಿ ಒಮ್ಮೊಮ್ಮೆ ಮತ್ತೇರಿಮಿಡಿದ
ಭಾವನಾತ್ಮಕ ನುಡಿಗಳಿಗೆ ಕೊನೆಯಿಲ್ಲ
ಅಲ್ಲಿ ಜನಿಸುವ ಭಾವಗಳೆಷ್ಟರ ಮಟ್ಟಿಗೆ ಸತ್ಯವೋ?
ಸಂದರ್ಭಕ್ಕೆತಕ್ಕಂತೆ ಬಿಂಬಿಸುವ ಆಸೆಗಳೆಷ್ಟು ಮಿಥ್ಯವೋ?
ಪ್ರತಿಬಾರಿ ಅದರ ಮೂಲ ಹುಡುಕುತ್ತಾ ಹೋದರೆ
ಸತ್ಯ ಪ್ರಪಂಚದ ಅನಾವರಣ ಆದರೂ ಆಗಬಹುದು
ಇಲ್ಲವೇ ಸುಳ್ಳಿನ ಪ್ರಪಂಚದ ಕಗ್ಗತ್ತಲು ಆವರಿಸಿ
ನಕಾರಾತ್ಮಕತೆಯನ್ನು ಸೃಷ್ಟಿಸಿ ನರ್ತಿಸಬಹುದು
ಒಮ್ಮೊಮ್ಮೆ ಸತ್ಯ ಜೀವನದ ಸಂಬಂಧಗಳೆಲ್ಲಾ
ಸತ್ಯವೆಂದು ಸಮರ್ಥಿಸುವ ಪ್ರಯತ್ನದಲ್ಲಿ ಬಿದ್ದರೆ
ಮತ್ತೊಮ್ಮೆ ಭಾವಗಳಲೆಯಲ್ಲಿ ಸುಳ್ಳುಕೋಟೆ ನಿರ್ಮಿಸಿ
ಅದರಲ್ಲಿ ಸಿಲುಕಿ ಒದ್ದಾಡುವಂತಾಗುವುದು
ಕಲ್ಪನಾಲೋಕ ಪ್ರತಿಬಿಂಬಿಸುವ ಸತ್ಯ-ಸುಳ್ಳಿನ
ನಡುವೆ ಸಿಲುಕಿ ಒಮ್ಮೆ ಆಸೆಯ ಆಶಾಗೋಪುರದ
ತುತ್ತತುದಿಯಲ್ಲಿ ಕುಣಿದಂತೆ ಭಾಸವಾದರೆ
ಮತ್ತೊಮ್ಮೆ ಕೆಳಗೆಬೀಳಿಸಿ ಮಣ್ಣುಪಾಲಾದಂತಾಗುವುದು
ಕೊನೆಗೆ ಆಸೆಗಳ ಲೋಕದಲ್ಲಿ ವಿಹರಿಸುವಾಗ
ವಾಸ್ತವ ಪ್ರಪಂಚದರಿವು ಸತ್ಯದ ಗುರುತು ತೋರಿಸಿದರೆ
ಕಲ್ಪನಾಲೋಕದಲ್ಲಿ ಮೂಡಿದ ಅದೆಷ್ಟೋ ಕನಸುಗಳು
ಸುಳ್ಳರಿವು ಮೂಡಿಸಿ ಅನುಭವ ಪಾಠ ತೋರಿಸುತ್ತದೆ
-ಚಂದ್ರು ಪಿ ಹಾಸನ್
ಮಣ್ಣು
ಮಣ್ಣ ಅಗೆಯುವಾಗ ಎಷ್ಟೋ
ಕಡೆ ಗಾಯದ ಗುರುತು
ಅಗೆದಷ್ಟು ರಕ್ತದ ಕಲೆಗಳು
ಮಣ್ಣಲ್ಲಿ ಹುಟ್ಟಿ
ಮಣ್ಣಲ್ಲೇ ಸತ್ತ ಎಷ್ಟೋ ಹುಳ
ಗಳು ಉಸಿರ ಚೆಲ್ಲಿದ್ದ ಕಂಡು
ಆಗತಾನೇ ಅರಳದ ಹೂ ಕಿತ್ತ ನೋವು!
ಮಣ್ಣ ಹಾಡಿಗೆ ಮನುಜ ಕಿವಿಯಾಗದೇ
ಕವಿ ದೂರ, ಮನುಜನೂ ಆಗಲಾರ
ನೂರಾರು, ಸಾವಿರಾರು ಬೇರುಗಳ ಪೊರೆದ
ಮಣ್ಣಿಗೆ ಮೈ ತುಂಬಾ ಸೂಜಿ
ಚುಚ್ಚಿದ ಕರೊನ ಹಿಂಸೆ!
ಬೀಜ ಮೈ ಮುರಿದ, ಟಿಸಿಲೊಡೆದ ಮೈ
ಕೆಂಪಿಂದ ಹಸಿರಾದ ಎಲೆ
ಗಂಟು ಮೊಗ್ಗಾದ ಪರಿ
ಕಾಯಿ ಹಣ್ಣಾಗೋ ರೂಪಾಂತರಕ್ಕೆ ಕಣ್ಣಾಗದ,
ಕಿವಿಯಾಗದ ನಾವು ನೀವು
ಅಗಣಿತ ಪದ್ಯ ಬರೆದರೂ
ದುಂಡ್ಗಲ್ಲ ಮಳೆಯೆ!
ಎದೆಗೊರಗಿದ ಸಖಿಯ ವಾಕಿಟಾಕಿ ಮಾತಿಗೆ
ಕತೆಗಾರ ಮಂಜಣ್ಣನೆದುರು ‘ ಹ್ಞುಂ’ ಗುಡುವ
ಮಕ್ಕಳಂತೆ
ಸದಾ ಅಜ್ಞಾಧಾರಕರು; ಮಳೆಗೆ..ಮನಕೆ…ಮನೆಗೆ
ಜೀವಾಮೃತವೀ
ಮಣ್ಣ ಹಾಡಿಗೆ ಕಿವುಡು!
ಒಂದು ಸಸಿ ಒಂದು ಹೂ
ಒಂದೇ ಬಳ್ಳಿಗೆ ವಾರಸುದಾರನಾಗಿ ನೋಡು,
ಎದೆಯ ಕಿಲುಬು ಕರಗಿ
ಅಲ್ಲೂ ಒಲವ ಸಸಿ ಟಿಸಿಲೊಡೆಯದಿರೆ
ಜಗದೊಲವ ಹುಸಿ
ಎನ್ನು…ಸಾಗು ಮಣ್ಣಿನೆಡೆ ನೀನು…ಅನ್ನಕೆ
ಕರೆದೊಯ್ವ ರಹದಾರಿಯದು!
ಒಲವೆಂದರೆ ಸುದ್ದಿ ನೋಡಿ ಸತ್ತ ಕೊರೋನ ಬಂಧುಗಳಿಗೆ
ಹಲ್ಲಿ ಲೊಚ್ ಅಲ್ಲ:
ಎಲ್ಲೋ ನಲುಗಿದ ಸೋದರಿಗೆ ಬರಿದೆ ಸಾಂತ್ವನ ಅಲ್ಲ
ಬೀದಿ ಬದಿಯ ಕೈಗಳಿಗೆ ಕಣ್ ಬಿಟ್ಟು ನಡೆವ ನಡೆಯಲ್ಲ
ಅದರಾಚೆ ಒಂದು ಬೀಜವ ಸಸಿಯಾಗಿಸುವುದೂ
ಪ್ರೀತಿಯೇ!
ನಾ ಒಲವಾಗ ಹೊರಟೆ
ಮಣ್ಣು ಜೊತೆಲಿದೆ
ಕೊನೆಯ ತಾಣವೂ ಅದೇ ತಾನೇ?
-ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು
ನನ್ನಪ್ಪ
ನನ್ನಪ್ಪ
ಗಾರೆ ಕೆಲಸದ ಮೇಸ್ತ್ರೀ
ಇಟ್ಟಿಗೆ,ಮರಳು,ಸಿಮೆಂಟ್ಗಳಲ್ಲಿ
ಬದುಕು ಕಟ್ಟಿಕೊಂಡವನು.
ಬಂಧುಗಳ ಬಾಚಿಕೊಂಡ ಆಲದಮರ
ಸಂಸಾರದ ಮಣಭಾರ ಹೊತ್ತು
ನೆಲಕ್ಕಿಳಿದ ಆಳದ ಬೇರು ಅಪ್ಪ…
ಬಲು ಚೊಕ್ಕ ಕೆಲಸ ಅಪ್ಪನದು
ಶಿಸ್ತಿನ ಸಿಪಾಯಿ,ಕಡು ಕೋಪಿಷ್ಟ,ನಿಷ್ಠುರವಾದಿ
ನಾನು ನನ್ನದು ಎನ್ನುವ ಸರ್ವಾಧಿಕಾರತ್ವ
ಮಕ್ಕಳು ಎಲ್ಲೆ ಮೀರಲು ಬಿಡಲಿಲ್ಲ
ದುಂದುವೆಚ್ಚಕ್ಕೆ ಜಾಗವಿಲ್ಲ ಅಪ್ಪನಲ್ಲಿ
ಅಪ್ಪ ಅಪಾರ ದೈವಭಕ್ತ
ನಮ್ಮನೆಯ ಜ್ಯೋತಿಷಿ
ಮದುವೆ,ಮುಂಜಿ,ಜವಳಕ್ಕೆ
ಶುಭದಿನ,ಶುಭಸಮಯ,ಶುಭಗಳಿಗೆ ಸೂಚಿಸುವವನು..
ಅಪ್ಪ ಮೂಡನಂಬಿಕೆಯ ಜಾಲಕ್ಕೆ
ಸಿಲುಕಿ ಸಾವಿರ ಸಾವಿರ ಕಳಕೊಂಡಿದ್ದಾನೆ
ಯಾವುದು ತನಗಾಗಿ ಅಲ್ಲ
ಮಕ್ಕಳ ಭವಿಷ್ಯಕ್ಕಾಗಿ…
ಅಪ್ಪ ಕೆಲವೊಮ್ಮೆ ಮುಂಗೋಪಿ
ಕೆಲವೊಮ್ಮೆ ಅಪ್ಪಟ್ಟ ಮಗು
ಕೆಲವೊಮ್ಮೆ ವೇದಾಂತಿ
ಕೆಲವೊಮ್ಮೆ ಅನಾಗರೀಕ
ಕೆಲವೊಮ್ಮೆ ಒಳ್ಳೆಯವ
ಕೆಲವೊಮ್ಮೆ ಕೆಟ್ಟವ ಎಲ್ಲಾವೂ ಆಗಿದ್ದ..
ಅಮ್ಮನ ಕೈ ತುತ್ತಿನ ಸವಿಯಲಿ
ಅಪ್ಪ ಬೆವರು ಸುರಿಸಿದ್ದು ಕಾಣಿಸಲೇ ಇಲ್ಲ!
ಅಮ್ಮನ ಲಾಲಿ ಹಾಡಿನ ಮುಂದೆ
ಅಪ್ಪನ ಹೆಗಲ ಸವಾರಿ ಮರೆತೇ ಬಿಟ್ಟೇವು..
ಅಪ್ಪ ವಿದ್ಯೆ ಕಲಿಯದ ಅಕ್ಷರಸ್ಥ
ಗಣಿತ ಕಲಿಯದ ಲೆಕ್ಕದ ಮೇಷ್ಟ್ರು
ವಿದ್ಯೆ ಕಲಿತ ನಮಗೆ
ಮಹಾನ್ ವಿಶ್ವವಿದ್ಯಾಲಯ ..
-ಶಿವರಾಜ್.ಡಿ.ಚಳ್ಳಕೆರೆ
ಗೋರಿಯ ಕೂಗು
ಗೋರಿಗೆ ಹೋಗಿ ಮಲಗಲು
ಸಿದ್ದರಿಲ್ಲ ನಾವು ಅದರೂ ಗೋರಿಗಳು
ಸಿದ್ದವಾಗುತ್ತಿವೆ ….!!!??
ಸ್ಮಶಾನ ಕರೆಯುತ್ತಿದೆ …..
ಸುಟ್ಟು ಬೂದಿಯಾಗಲು
ಬದ್ದರಿಲ್ಲ ನಾವು ಆದರೂ
ಲೆಕ್ಕವಿಲ್ಲದೆ ಸಾಮೂಹಿಕವಾಗಿ
ಅಗ್ನಿ ದಹಿಸುತ್ತಿದೆ….
ಎದೆಯಗೊಡಿನಲ್ಲಿ ಉಸಿರು
ಖಾಲಿಯಾಗಿದೆ ….
ಮನದಲ್ಲಿ ಸಾವಿರ ಸಾವಿರ
ಕನಸು ಮೊಳಕೆ ಹೊಡೆದಿವೆ
ನಾಳೆ ಇದೆಯೆಂದು ಹೇಳುತ್ತಲೆ
ನಿರ್ಗಮನ ಶಾಶ್ವತವಾಗುತ್ತಿದೆ …….
ಸಾಲು ಸಾಲು ಹೆಣಗಳು
ಊರತುಂಬಾ ಗೋರಿಗಳು
ಅಪ್ಪ, ಅಮ್ಮ,ಅಜ್ಜ ಅಣ್ಣ
ಅಕ್ಕ ಹೀಗೆ ಸಾಗುವದು
ಹೆಣಗಳು ತಣ್ಣಗೆ ಗೋರಿಗೆ ….
ಅಳುತಿಹುದು ಗೋರಿ
ತನ್ನವರ ನೆನೆದು …!!!
ಬೂದಿಯು ಹವಣಿಸುತ್ತಿದೆ
ತನ್ನ ಮನೆಯ ಧೂಳಾಗಿ ಉಳಿಯಲು …!!!
ಭೋರ್ಗರೆದು ಸುರಿದ ಮಳೆಯು
ಗೋರಿಯ ತಣಿಸುತ್ತಿಲ್ಲ
ಮನದೂಳಗಿನ ನೆನಪುಗಳ
ಹರಿವು ನಿಲ್ಲುತ್ತಿಲ್ಲ ….ಕಾರಣ
ಗೋರಿ ಕೂಗುತಿದೆ …..
ಗೋಡೆಯ ಮೇಲಿನ ಭಾವಪಟಗಳು
ಮಾತಾಡುತ್ತಿವೆ …..
-ರೇಶ್ಮಾಗುಳೇದಗುಡ್ಡಾಕರ್
ಚೈತನ್ಯವಿದ್ದರೆ ಉತ್ತರಿಸು ಗೆಳೆಯಾ….
ನೀ ಹೋಗಿ ಆಗಲೇ ಈ ಭೂಮಿ ಸೂರ್ಯನ
ಸುತ್ತಲೂ ಪ್ರದಕ್ಷಿಣೆ ಹಾಕಿ ಮತ್ತಲ್ಲಿಗೇ ಬಂದಿದೆ,
ನೀ ಮೆರೆದಾಡಿದ ಮಣ್ಣಿನಡಿಯಲ್ಲಿಯೇ
ನಿನ್ನ ಹೆಮ್ಮೆಯ ದೇಹವು ಕರಗಿ ಹೋಗುತ್ತಿದೆ…
ಒಂದಷ್ಟು ಜೀವಗಳು ನಿನ್ನ ಹಾದಿಯಲ್ಲಿ ಬಂದಿವೆ
ಇನ್ನಷ್ಟು ಜೀವಗಳು ಈ ಭೂಮಿಯನು ತುಂಬಿವೆ
ನಿನ್ನಿಷ್ಟದ ಕುರ್ಚಿಯನ್ನು ಅವನು ತುಂಬಿದ್ದಾನೆ
ನಿನ್ನದೇ ಪಟಾಲಮ್ಮು ಈಗ ಅವನ ವಶವಾಗಿದೆ
ನೀ ಕುಳಿತು ಘರ್ಜಿಸಿದ ಕೋಣೆ-ಕುರ್ಚಿಗಳಿಗಾಗಿ
ಶಕ್ತ್ಯಾನುಸಾರ ಪೂಜೆ-ಪುಣ್ಯಾಹವನು ‘ಸಲ್ಲಿಸಿ’
ಅವನು ಅಲ್ಲಿ ಪ್ರತಿಷ್ಟಾಪನೆಗೊಂಡು
ನಿನ್ನದೇ ತದ್ರೂಪಿಯಾಗುವ ಹವಣಿಕೆಯಲ್ಲಿ ನಿರತ
ಕುರ್ಚಿಯಲಿ ಕುಳಿತ ಕಾರಣಕ್ಕಾಗಿ ನಿನಗೆ ಸಂದ
ಕಾಣಿಕೆಗಳು ಕಪಾಟಿನಂಚಿನಲಿ ಕಣ್ಮರೆಯಾಗಿವೆ
ಕುರ್ಚಿಯಲ್ಲಿ ಕುಳಿತು ಗತ್ತಿನಿಂದ ನೀ ಒತ್ತಿದ ದಸ್ತಕಗಳನು
ಹೊತ್ತ ಕಡತಗಳು ದಫ್ತರುಗಳ ಕೋಣೆಯಲಿ ಧೂಳು ತಿನ್ನುತ್ತಿವೆ
ನಿನ್ನ ಆರ್ಭಟಕ್ಕಂಜಿ ಅವಿತಿದ್ದ ಮಡದಿ-ಮಕ್ಕಳು ಸದ್ಯ
ಅವರವರದೇ ಬದುಕಿನ ಹುಡುಕಾಟದಲ್ಲಿ ಮಗ್ನರು
ಉದ್ದೇಶಕ್ಕಾಗಿ ಗೆಳೆಯರೆನಿಸಿಕೊಂಡವರು ಅವರದೇ
ಗೋಜಲುಗಳಲ್ಲಿರುವಾಗ ನಿನ್ನ ನೆನಪಿಗೆ ಪುರುಸೊತ್ತೆಲ್ಲಿ?
ನಿನ್ನದಾಗಿದ್ದ ಮನೆಯಲ್ಲಿ ತೂಗಿರುವ ನಿನ್ನ ಚಿತ್ರಪಟವು
ಜೇಡನಾಶ್ರಯದಿಂದ ತೂಗಿಹುದೋ ಎನಿಸುತಿದೆ
ನಿನ್ನ ನೆನಪು ಕೂಡಾ ದಿನಕಳೆದಂತೆ ಎಲ್ಲರ
ನೆನಪಿನಂಗಳದಿಂದ ಅಳಿಸಿಹೋಗುತ್ತಿದೆ…
ಚೈತನ್ಯ ಉಳಿದಿದ್ದರೆ,
ಈಗ ಉತ್ತರಿಸು ಗೆಳೆಯಾ…
ಕುರ್ಚಿ ಕಾರಣಕ್ಕೆ ಅಹಂ ಹುತ್ತವಾಗಿ
ಸಹಜೀವಿಗಳು ನಿನ್ನ ಕಣ್ಣಿಗೆ ತುಚ್ಛವಾಗಿ
ಪೊಳ್ಳು ಗೌರವದ ಗುಳ್ಳೆಯೊಳಗೆ
ನೀ ಬದುಕಿದ್ದು ಒಂದು ಬದುಕೇ?
-ಕಾಂತರಾಜು ಕನಕಪುರ
ಪೇಪರೋದು
ನಲ್ವತ್ತರಲ್ಲಿ ಬಂದ ಚಾಳೀಸು
ಅರವತ್ತು ಮುಗಿದರೂ ತೊರೆಯದು
ಮುವ್ವತ್ತರಲ್ಲಿ ಬಂದ ಮಡದಿ
ಮುಖ ಮುರಿದು ಕಾಲವಾಯಿತು!
ಹೊಸದರಲ್ಲಿ ದಿನಕ್ಕೆ ಹತ್ತು
ಬಾರಿ ನವಿರು ಬಟ್ಟೆ ಹಿಡಿದು
ಕನ್ನಡಕದ ಗಾಜು ಒರೆಸಿ
ಓರೆ ಹಿಡಿದು; ಜಿಡ್ಡು ಅಳಿಸಿ
ಫಳಫಳ ಹೊಳೆಸಿ
ಎರಡೂ ಕಿವಿಗಂಟಿಸಿ
ಬೆಳಗಿನೋದಿಗೆ ಪತ್ರಿಕೆಯರಳಿಸಿ
ಕಣ್ಣು ಕಿರಿದಾಗಿ; ದೃಷ್ಟಿ ಮಂಜಾಗಿ;
ಪಕ್ಕದಲ್ಲವಳು ತಂದಿಟ್ಟ ಬಿಸಿ
ಕಾಫಿ ತಣ್ಣಗಾಗುವುದು
ಬರ
ಬರುತ್ತಾ ಪೇಪರಿಂದ ಅಕ್ಷ
ರಗಳೇ ಮಾಯ!
ಭಯ; ಕಾಣುತ್ತಿಲ್ಲ ಮತ್ತೆ
ಒರೆಸೊರೆಸಿ ಕನ್ನಡಕ
ದ ತುಂಬಾ ಗಾಯ ಸಣ್ಣಗೆ
ಚೀರಿದೆ ʼಏನೂ ಕಾಣದೆ!?ʼ
ಕಿವಿ ಚುರುಕು
ಮಡದಿ ಗೊಣಗಿದ್ದು ಕೇಳಿಸಿತು
ʼಪವರ್ ಬದಲಾಗಿದೆ
ಬದಲಾಯಿಸಬೇಕಿದೆ!ʼ
ಕನ್ನಡಕವೋ, ನಾನೋ!?
ʼಕಾಫಿಗಿಷ್ಟು ಬಿಸಿ ಬೇಕಾಗಿದೆʼ
ಕೇಳದಂತೆ ಗುಡುಗಿದೆ!
-ಅನಂತ ರಮೇಶ್
ನಿನ್ನೊಂದಿಗೆ ನಾನು
ಮಕರಂದ ಸೂಸುವ ಮಂದಾರ ಪುಷ್ಪವು ನೀನು
ಮಧು ಹೀರುವ ದುಂಬಿ ನಾನು
ಭಯವೇಕೆ ನಿನಗೆ ನಿನ್ನೊಂದಿಗೆ ನಾನಿಲ್ಲವೇನು?
ನಿನ್ನೊಲಿದ ಬಾಳು, ನಿನ್ನ ಜೊತೆ ನನ್ನ ಬದುಕಿಲ್ಲವೇನು
ಬಾಳಿಗೆ ಜೀವತುಂಬಿದ ಸಿಹಿಯಾದ ಮಧುರ ನೀನು
ನಿನ್ನ ತೊರೆದು ನಾ ಬಾಳುವೇನೇನು ,
ನನ್ನ ಹೃದಯ ಮಂದಿರದಲ್ಲಿ ಪ್ರಜ್ವಲಿಸುವ
ದಿವ್ಯಜ್ಯೋತಿ ನೀನು, ನೀ ಇಲ್ಲದ ಕಲ್ಪನೆಯ ಬಾಳು
ಮರುಭೂಮಿಯ ಬಿಸಿಲುಗುದುರೆಯಂತೆ ಕಾಣು
ಇಳೆಯನು ಸಂತೈಸಲುವ ಮಳೆರಾಯ ಕಾಯುವನು
ನಿನ್ನ ಮನದಲ್ಲಿ ಹರ್ಷ ತುಂಬಲು ಅನುದಿನವು ಕಾಯುವೆನು
ಒಲಿದ ಜೀವ ಬಿಡಿಸಲಾಗದ ಪ್ರೇಮಬಂಧನ,
ಬಾಳಲ್ಲಿ ತುಂಬುವುದು ಒಲುಮೆಯ ಗಾಯನ
ಒಲಿದ ಜೀವ ಹುಣ್ಣಿಮೆಯ ಚಂದ್ರನ ಬೆಳಕಿನಂತೆ
ನೈದಿಲೆಯ ನಾಟ್ಯಕ್ಕೆ ಚಂದ್ರನ ಚಂದ್ರಿಕೆಯಂತೆ,
ಅರಿತು ಬಾಳಿದರೆ ಅಮೃತಧಾರೆಯಂತೆ,
ಬದುಕಿನ ದಾರಿ ಮರೆತರೆ ನೀ ಮಸಣದ ಮೌನಕ್ಕೆ ಜಾರಿದಂತೆ,
ಒಂದಾಗಿ ಬಾಳಿದರೆ ಭಯವೇಕೆ ನಿನಗೆ ಭಯವೇಕೆ.
-ತಿಮ್ಮಣ್ಣ ಭೇರ್ಗಿ ಸಿಂಧನೂರು
ಚಂದ್ರು ಪಿ. ಹಾಸನ್ ಅವರ ‘ಸತ್ಯ ಸುಳ್ಳಿನ ನಡುವೆ ಮನದ ಮಂಟಪ’ ಸಂತೆ ಬೆನ್ನೂರ್ ಫೈಜ್ನಬಾದ್ ಅವರ ‘ಮಣ್ಣು’ , ಶಿವರಾಜ್ ಡಿ.ಚೆಳ್ಳಕೆರೆ ಅವರ ‘ನನ್ನಪ್ಪ’ , ರೇಶ್ಮಾ ಗುಳೇದಗುಡ್ಡಾಕರ್ ಅವರ ‘ಗೋರಿಯ ಕೂಗು’ , ಶಾಂತರಾಜು ಕನಕಪುರ ಅವರ ‘ಚೈತನ್ಯವಿದ್ದರೆ ಉತ್ತರಿಸು ಗೆಳೆಯ’ , ಅನಂತ ರಮೇಶ್ ಅವರ ‘ಪೇಪರೋದು’ , ತಿಮ್ಮಣ್ಣ ಭೇರ್ಗಿ ಸಿಂಧನೂರು ಅವರ ‘ನಿನ್ನೊಂದಿಗೆ ನಾನು’ ಹೊಸತನದಿಂದ ಕೂಡಿದ ಕವಿತೆಗಳು. ಇಲ್ಲಿನ ಒಂದೆರಡು ಕವಿತೆಗಳು ಗದ್ಯ ರೂಪದವು. ಕೆಲವು ವಾಚ್ಯವಾಗಿವೆ.