ಗಜಲ್ 1
ಸುಂದರ ವದನ ಇಂದೇಕೆ ಬಾಡಿದೆ ಹೇಳು ಗೆಳತಿ
ಕಣ್ಣುಗಳಲ್ಲಿ ಎಂದಿನ ಕಾವ್ಯ ಕಳೆ ಇಲ್ಲ ಗೆಳತಿ
ನೀಳ ನಾಸಿಕ ಅದೇಕೆ ಕೆಂಪಾಗಿದೆ ಹೇಳಲಾರೆಯಾ
ಅಳು ನುಂಗಿ ನಗುವ ಪ್ರಮೇಯ ಯಾಕೆ ಗೆಳತಿ
ಹಣೆಯ ಕಾಸಿನಗಲ ಕುಂಕುಮದಲಿ ಸಂಭ್ರಮ ನಗುತ್ತಿಲ್ಲ
ಬಾಗಿದ ಹುಬ್ಬುಗಳಲಿ ಕಾಮನ ಬಿಲ್ಲಿನಂದ ತೋರುತ್ತಿಲ್ಲ ಗೆಳತಿ
ತೊಂಡೆಯ ತುಟಿಗಳಲ್ಲಿ ಜೇನು ವಸರುವದು ಕಾಣುತ್ತಿಲ್ಲ
ಕೆನ್ನೆಯಲ್ಲಿ ಗುಲಾಬಿ ರಂಗು ಸೊರಗಿದೆ ಏಕೆ ಹೇಳು ಗೆಳತಿ
ಭರವಸೆಯಲ್ಲಿ ಬೆಳಕು ಚೆಲ್ಲುವ ನೀನೇ ಹೀಗಾದರೆ ಹೇಗೆ
ಜುಮಕಿಯ ನಾದದಲ್ಲಿಯೂ ಅದೇಕೊ ಇಂಪಿಲ್ಲ ಗೆಳತಿ
ಕಪ್ಪಾದ ಕೂದಲಿನ ಬೈತಲೆಯಲಿ ಶೋಭಿಸುವ ಸಿಂಧೂರವಿಲ್ಲ
ನಿನ್ನೀ ನೋವಿಗೆ ಗೆಳೆಯನ ಕಲ್ಲು ಮನಸೇ ಕಾರಣವೇ ಗೆಳತಿ
ಗಜಲ್ 2
ತಾಜಮಹಲಿನಂತ ಪ್ರೇಮಸೌಧವನ್ನು ನನಗಾಗಿ ಕಟ್ಟಿಸುವೆಯಾ ಗೆಳೆಯಾ
ನೀನಿಗಲೇ ಭಾಷೆ ಕೊಟ್ಟರೆ ನಾನು ಈ ತಾಜನಿಂದ ಜಿಗಿದು ಪ್ರಾಣ ಬಿಡುವೆ ಗೆಳೆಯಾ.
ಶ್ರೀರಾಮನಂತೆ ಬಂಗಾರದ ಜಿಂಕೆ ತರಲು ನೀ ಸಿದ್ಧನಾದರೆ
ನಾನೀಗಲೇ ಸೀತೆಯಾಗಿ ನಿನ್ನ ಜೊತೆ ವನವಾಸಕ್ಕೆ ಬರಲು ಸಿದ್ಧ ಗೆಳೆಯಾ
ಕೃಷ್ಣ ರಾಧೆಗೆ ನೀಡಿದ ಪವಿತ್ರ ಪ್ರೇಮ ನೀ ನೀಡುವೆಯಾದರೆ
ನಾನೀಗಲೇ ನಿನಗೆ ರಾಧೆಯಾಗಲು ಸಿದ್ಧ ಗೆಳೆಯಾ
ಗೋಲ್ ಗುಂಬಜದಂತೆ ಏಳು ಬಾರಿ ಪ್ರತಿಧ್ವನಿಸಲು ನೀ ಸಿದ್ಧನಾದರೆ
ನಾನೀಗಲೇ ಗುಂಬಜದ ಶಿಲೆಯೊಳಗೆ ಧ್ವನಿಯಾಗಲು ಸಿದ್ದ ಗೆಳೆಯಾ
ಬಾಳ ಮುಸ್ಸಂಜೆಯವರೆಗೂ ನೀ ದೋಣಿಯಾಗಿ ಬರಲು ಸಿದ್ಧನಾದರೆ
ನಾನಿಗಲೇ ಜೀವನಯಾನಕೆ ಹರಿಗೋಲಾಗಲು ಸಿದ್ಧ ಗೆಳೆಯಾ.
ಏನೇ ಬರಲಿ ಈ ಬದುಕು ಜೇನ ಹೊಳೆಯಾಗಲಿ
ನಿಶ್ಚಿಂತೆಯಾಗಿ ಈ ಜಯ ನಿನ್ನೊಡನೆ ಬರುವಳು ಗೆಳೆಯಾ
–ಜಯಶ್ರೀ.ಭ.ಭಂಡಾರಿ.