“ಏನ್ ಸರ್ ಸಮಾಚಾರ ? ಮತ್ತೇನ್ ಡ್ಯೂಟಿಗ್ ಹೊರಟ್ರಾ..? ಏನಿಲ್ಲ ಸರ್, ನೀವು ಯಾರನ್ನಾದ್ರು ಲವ್ ಮಾಡಿದೀರಾ..? ಇಲ್ವಾ…? ಹಾಗಿದ್ರೆ ನೀವು ವೇಸ್ಟ್ ಬಿಡಿ ಸಾರ್. ನಾನು ಈ ಪ್ರೀತಿ ಗೀತಿ ಅಂತೆಲ್ಲಾ ಅದೆಷ್ಟು ಸರ್ಕಸ್ ಮಾಡಿದೀನಿ ಗೊತ್ತಾ? ಬಿಡಿ, ನಿಮಗೆಲ್ಲಾ ಅದು ಎಲ್ಲಿ ಅರ್ಥ ಆಗ್ಬೇಕು? ಅನುಭವ ಇದ್ರೆ ತಾನೆ..” ಹಾಗಂತ ಅವನು ವ್ಯಂಗವಾಡುತ್ತಲೇ ಹೋದ. ಜೊತೆಗಿದ್ದವರು ಅದೇ ವ್ಯಂಗದಲ್ಲಿ ಜೋರಾಗಿ ನಗತೊಡಗಿದರು.
ಆ ಒಂದು ಕ್ಷಣಕ್ಕೆ ಏನನ್ನಬೇಕೆನ್ನುವುದ ತಿಳಿಯದೆ ಮುಜುಗರಕ್ಕೊಳಗಾಗುತ್ತೀರಿ. ಮೊದಲೇ ಡ್ಯೂಟಿಗೆ ಹೊರಟಿದ್ದೀರಿ. ಒಳ್ಳೆಯ ಮೂಡ್ ನಲ್ಲಿದ್ದೀರಿ. ಡ್ಯೂಟಿಗೆ ಹೋಗುವ ಮುಂಚೆ ಒಂದು ಧಮ್ ಅಂತ ಎಳೆದು ಟೀ ಕುಡಿದು ಮುಂದಿನ ಪ್ರಯಾಣ ಬೆಳೆಸುವುದು ನಿಮ್ಮ ಎಂದಿನ ಅಭ್ಯಾಸ. ನೀವೋ ಮಾಮೂಲಿಯಂತೆ ನಿಮ್ಮ ಅಡ್ಡಾದ ಟೀ ಶಾಪ್ ನಲ್ಲಿದ್ದೀರಿ. ಇನ್ನೇನು ಅಂಗಡಿಯಾತ ಕೊಟ್ಟ ಟೀಯನ್ನು ಕುಡಿಯಬೇಕು. ಆ ವೇಳೆಗೆ ದಿಢೀರ್ ಎದುರಾಗುವ ಈ ಆಸಾಮಿ ಏನ್ ಸಾರ್ ಸಮಾಚಾರ ಅಂತಾ ಮಾತಿಗೆಳೆಯುತ್ತಾನೆ. ನೋಡು ನೋಡುತ್ತಿದ್ದಂತೆ, ಪ್ರೀತಿ ಗೀತಿ ಅಂತೆಲ್ಲಾ ನಿಮ್ಮನ್ನು ಎಳತಂದು ನಿಮ್ಮ ಮೂಡನ್ನು ಡಿಸ್ಟರ್ಬ್ ಮಾಡಿಬಿಡುತ್ತಾನೆ. ಹಾಗಂತ ಆತ ತೀರಾ ಪರಿಚಿತನೆನಲ್ಲ. ಆದರೆ ನಿಮ್ಮದೆ ಬೀದಿಯವನು. ಮುಖ ಪರಿಚಯ ಇರುವವನು. ಅವನ ಕತೆಯೂ ನಿಮಗೆ ಗೊತ್ತಿಲ್ಲದೆ ಏನಿಲ್ಲ. ಈ ಕೆಲ ದಿನಗಳ ಹಿಂದೆ ಪ್ರೀತಿ ಪ್ರೇಮ ಅಂತಾ ಒಂದು ಹುಡುಗಿಯ ಹಿಂದೆ ಬಿದ್ದು, ಅದು ವರ್ಕೌಟ್ ಆಗದೆ ಇದ್ದಾಗ ಕುಡಿದು ಬೀದಿರಂಪಾಟ ಎಲ್ಲಾ ಮಾಡಿ, ಆಮೇಲೆ ಪೋಲೀಸರ ಅತಿಥಿಯಾಗಿ ಒದೆತಿಂದು, ಅಷ್ಟಾದರೂ ಬುದ್ದಿ ಕಲಿಯದೆ ಮತ್ತದೆ ಚಾಳಿಯನ್ನ ಮುಂದುವರೆಸುತ್ತಿರುವವನು. ಬಿಡಿ, ಎಲ್ಲವೂ ಗೊತ್ತಿರೋ ಮ್ಯಾಟರ್ರು. ಆದ್ರೆ ಅದನ್ನೆ ಏನೋ ಕಡಿದು ಗುಡ್ಡೆ ಹಾಕಿದೋರ ಹಾಗೆ ಆಡ್ತಿದಾನೆ. ಏನು ಹೇಳೋಣ ಇವನಿಗೆ..? ಖಂಡಿತಾ ಈ ತರಹದ ಪ್ರೀತಿ ಹುಚ್ಚಾಟಗಳೆಲ್ಲ ನಿಮ್ಮ ಅನುಭವವಲ್ಲ. ಆದರೂ ಇಂತಾ ಹೊತ್ತಿನಲ್ಲಿ ಪ್ರೀತಿ ಅಂತೆಲ್ಲ ವಿಷಯ ತೆಗೆದು ಅದರಲ್ಲಿ ನಿಮ್ಮನ್ನೂ ಎಳೆತಂದು, ನಾಲ್ಕು ಜನರ ಎದುರಿನಲ್ಲಿ ನಗೆಪಾಟಾಲಾಗಿಸಿದವನಿಗೆ ಇಲ್ಲೆ ನಾಲ್ಕು ಬಿಗಿಯುವಷ್ಟು ಕೋಪ ಖಂಡಿತಾ ನಿಮಗೀಗ ಇದೆ. ಏಕೆಂದರೆ ಅವನು ನಿಮ್ಮನ್ನು ಕೆಣಕಿದ್ದಾನೆ. ಆದರೇನು, ವಿಚಾರಿಸಿಕೋಳ್ಳೊದಕ್ಕೆ ಇದು ಸಮಯ ಅಲ್ಲ. ಅದಕ್ಕಿಂತ ಹೆಚ್ಚಾಗಿ ಅದಕ್ಕವನು ಅರ್ಹನೂ ಅಲ್ಲ. ಏಕೆಂದರೆ ಗಲೀಜಿನಲ್ಲಿ ಕುಂತಿದ್ದ ನೋಣವೊಂದು ಆಚಾನಕ್ ಆಗಿ ಟೀ ಗ್ಲಾಸ್ ಒಳಗೆ ಬಿದ್ದಂತ ರೀತಿಯಲ್ಲೆ ಇವನೂ. ಎಲ್ಲಿ ಏನು ಎತ್ತ ಅನ್ನದೆ ಬೀಳುವವನು. ಬಿಗಿಯುವ ಮಾತು ಬಿಡಿ. ಇನ್ನೊಂದು ಸ್ವಲ್ಪ ಹೊತ್ತು ಅಲ್ಲಿದ್ದರೂ ತಿರುಗಾ ಆ ನೋಣ ಗಲೀಜಿನಲ್ಲಿ ಕುಂತು ಮತ್ತೆ ನಿಮ್ಮ ಹತ್ತಿರಕ್ಕೆ ಬಂದು ತಾಕಬಹುದು. ಹಾಗಂತ ಅಂದುಕೊಂಡು ಮರುಮಾತನಾಡದೆ ಡ್ಯೂಟಿಗೆ ತೆರಳುತ್ತೀರಿ.
ಊಹ್ಹೂ… ಏನೇ ಸಹಿಸಿಕೊಂಡು ಸೈಲಂಟಾಗಿ ಬಂದೆ ಎಂದರೂ ದಾರಿಯುದ್ದಕ್ಕೂ ಮನಸು ಸಿಡು ಸಿಡು ಅಂತಲೇ ಇದೆ. ಇದೀಗ ಆಫೀಸಿನ ಒಳಹೊಕ್ಕು ನಿಮ್ಮ ಛೇಂಬರ್ ನಲ್ಲಿ ಕುಂತಿದ್ದು ಆಯಿತು. ಆದರೂ ಮನಸಿನ ಒದ್ದಾಟ ಮಾತ್ರ ನಿಲ್ಲುತ್ತಿಲ್ಲ. ಅದು ಅಕ್ಷರಶಃ ಪೆಟ್ಟು ತಿಂದ ಹುಲಿಯಂತಾಗಿ ಗುರುಗುಟ್ಟುತಿದೆ. ಸಾಲದ್ದಕ್ಕೆ ಕುಂತ ಜಾಗದಲ್ಲಿ ಕೂರಲಾರದಂತಹ ಅಂಡು ಸುಟ್ಟ ಬೆಕ್ಕಿನ ಚಡಪಡಿಕೆ ಅದನ್ನ ಹಿಂಡಿ ಹಿಪ್ಪೆ ಮಾಡುತ್ತಿದೆ.
ಹಾಗಿದ್ರೆ ಆತ ಮಾಡಿದ್ದು ಅವಮಾನವಾ..? ಹೌದು. ತೀರಾ ಇಂತದ್ದೆಲ್ಲಾ ಗೊತ್ತಿಲ್ಲದೆ ನಡಿತಿರತ್ತೆ ಅಂತಾ ಸುಮ್ಮನಾಗಬಹುದಾದರೂ, ಇದು ಅಷ್ಟು ಸುಲಭದಲ್ಲಿ ಬಿಡುವಂತ ವಿಚಾರವಲ್ಲ. ಏಕೆಂದರೆ ದೊಡ್ಡದಾಗಿ ಪ್ರೀತಿ ಗೀತಿಯಲ್ಲ ನಿಮಗೆಲ್ಲಿ ಅರ್ಥವಾಗಬೇಕು ವೇಸ್ಟ್ ನೀವು ಅಂದನಲ್ಲ. ಅದು ಮಾತ್ರ ನೊಣ ಅಚಾನಾಕ್ಕಾಗಿ ಟೀ ಗ್ಲಾಸ್ ಒಳಗೆ ಬಿದ್ದಂತಲ್ಲ. ಎಸ್… ಅದು ಅವನ ಎಂದಿನ ಕೊಳಕು ಮನಸ್ಥಿತಿಯ ಪ್ರದರ್ಶನ. ಅವನಿಗೆ ಸಂಸ್ಕಾರ ಅನ್ನೋದು ಬಿಡಿ. ಕಾಮನ್ ಸೆನ್ಸ್ ಕೂಡಾ ಇಲ್ಲ. ಅವನದು ಸದಾ ಕೊರಗುವ ಅತೃಪ್ತ ಆತ್ಮ. ಆದರೆ ಅದನ್ನು ಮರೆಮಾಚಲು ಹೀಗೆಲ್ಲ ರಾಡಿ ಎಬ್ಬಿಸುವುದು ಅವನ ನಿತ್ಯದ ಕೆಲಸ. ಅದನ್ನ ಯಾರು ಎಲ್ಲಿ ಯಾವಾಗ ಅಂತಲೂ ನೋಡದೆ ಮಾಡುತ್ತಿರುತ್ತಾನೆ. ಇದೀಗ ನಿಮ್ಮ ಮನಸ್ಸು ಸಮಧಾನವಾಗದೆ ಕುದಿತಾ ಇದೆ ಎಂದರೆ ಅವನು ನಿಮ್ಮ ತಿಳಿಯಾದ ಮನಸ್ಸಿನ ಮೇಲೂ ಕಲ್ಲು ಹೊಡೆದಿದ್ದಾನೆ. ಹೌದು, ಅದು ನಿಮ್ಮನ್ನು ಅವಮಾನಿಸಿದ್ದಕ್ಕಿಂತ ಹೆಚ್ಚಾಗಿ ನಿಮ್ಮ ಪ್ರೀತಿಯನ್ನು ಅವಮಾನಿಸಿದ್ದು! ಆದರೂ ನೀವು ಏನಂದರೆ ಏನೂ ಅನ್ನದೆ ವಾಪಾಸ್ಸಾಗಿದ್ದೀರಿ! ಇದೀಗ ವಿಲಿವಿಲಿ ಒದ್ದಾಡುತ್ತಿದ್ದೀರಿ! ಅದೇ ನಿಮಗೀಗ ನಿಮ್ಮ ಬಗ್ಗೆ ಅರ್ಥವಾಗದೆ ಇದ್ದಿದ್ದು!!
ಆದರೆ ತಿಳಿದಿರಲಿ, ಅವನಿಗೋ ಒಂದು ಸಂಸ್ಕಾರ, ವ್ಯಕ್ತಿತ್ವ ಅಂತಾ ಇಲ್ಲ. ಆದರೆ ನಿಮಗೆ..? ಸಂಸ್ಕಾರ ನೀಡಿದವರಲ್ಲಿ ವ್ಯಕ್ತಿತ್ವ ರೂಪಿಸಿದವರಲ್ಲಿ ತಂದೆ ತಾಯಿಯರಂತೆ ಒಂದು ಹುಡುಗಿಯ ಪ್ರೀತಿ ಕೂಡಾ ಇತ್ತು. ಇವತ್ತು ನೀವು ಏನಾಗಿದ್ದೀರಿ ಅದಕ್ಕೆ ಆ ನಿಮ್ಮ ಪ್ರೀತಿಯೂ ಕೂಡಾ ಕಾರಣ. ಹಾಗಂತ ನಿಮ್ಮದೇನು ಒನ್ ಸೈಡ್ ಪ್ರೀತಿಯೆನಲ್ಲ. ಅದು ಪ್ರೀತಿಗಾಗಿ ಹುಡುಗಿಯ ಹಿಂದೆ ಅಲೆದದ್ದಲ್ಲ. ಅಥವಾ ಪ್ರೀತಿಯನ್ನು ಸೆಳೆಯುವುದಕ್ಕಾಗಿ ಸರ್ಕಸ್ ಗಿರ್ಕಸ್ ಅಂತಾ ಮಾಡಿದ್ದಲ್ಲ. ಈ ನಿಮ್ಮ ಪ್ರೀತಿ ಅದು ನೀವು ಇರುವಂತೆಯೇ ಒಪ್ಪಿಕೊಂಡಿದ್ದು. ಅದು ನಿಮ್ಮಲ್ಲಿನ ದೌರ್ಬಲ್ಯ ನ್ಯೂನತೆಗಳನ್ನ ಗೌರವದಿಂದಲೇ ಕಂಡಿದ್ದು. ಅದು ನಿಮ್ಮಲ್ಲಿನ ಪಾಸಿಟಿವ್ ಅಂಶಗಳನ್ನಷ್ಟೇ ಎತ್ತಿ ಹಿಡಿದಿದ್ದು. ಯಾವಾಗ ದೌರ್ಬಲ್ಯ, ನ್ಯೂನತೆಗಳನ್ನು ಗೌರವದಿಂದ ಕಂಡು ನೀವಿರುವಂತೆ ಅದು ಒಪ್ಪಿಕೊಂಡಿತೊ ಆಗ ನಿಮ್ಮಲ್ಲಿ ಬೆಳೆದಿದ್ದು ಪ್ರೀತಿಯೆಡೆಗಿನ ಅಭಿಮಾನವಷ್ಟೇ. ಮುಂದೆ ಆ ನಿಮ್ಮ ಪ್ರೀತಿ, ನಿಮಗೆ ಬದುಕು ಕಟ್ಟಿಕೊಳ್ಳೊದಕ್ಕೆ ಬುನಾದಿ ಆಯಿತೆ ವಿನಃ, ಅದರೊಂದಿಗೆ ಬದುಕು ಸಾಗಿಸೋದಕ್ಕಾಗಲಿಲ್ಲ. ಅಂತದ್ದೊಂದು ಕನಸು ಹಾಗೊಂದು ಯೋಗ್ಯತೆ ನಿಮಗಿತ್ತಾದರೂ, ಆ ಹೊತ್ತಿಗೆ ಅದರೊಂದಿಗೆ ಬದುಕು ಕಟ್ಟಿಕೊಳ್ಳುವ ಅರ್ಹತೆ ನಿಮ್ಮದಾಗಿರಲಿಲ್ಲ. ಹಾಗಾಗಿ ಆ ಪ್ರೀತಿ ಹೊರಟು ನಿಂತಾಗಲೂ ಅದೇ ಗೌರವ ಅಭಿಮಾನದಲ್ಲಿ ಭೀಳ್ಕೊಡುತ್ತೀರಿ. ಆ ಕೆಲ ಕ್ಷಣ ನಿಮ್ಮ ಹೃದಯ ಭಾರವಾಗಿದ್ದು ಬಿಟ್ಟರೆ ನಿಮ್ಮ ಆ ಪ್ರೀತಿ ಇಲ್ಲಿಯ ತನಕವೂ ನಿಮ್ಮ ಬದುಕನ್ನ ಬದುಕಾಗಿಸಿಯೇ ಇಟ್ಟಿದೆ. ಕಾರಣ, ಆ ಪ್ರೀತಿ ನಿಮ್ಮ ಬದುಕಿಗೆ ಬತ್ತಲಾರದಷ್ಟು ಸ್ಪೂರ್ತಿಯನ್ನೂ ನೀಡಿದೆ. ಸದ್ಯಕ್ಕೆ ಆ ಪ್ರೀತಿ ನಿಮ್ಮ ಜೊತೆಗೆ ಇಲ್ಲ ಅನ್ನುವುದು ಬಿಟ್ಟರೆ ಈಗಲೂ ಆ ಪ್ರೀತಿಯ ಮೇಲೆ ಅಷ್ಟೇ ಅಕ್ಕರೆ, ಅಭಿಮಾನವಿದೆ. ಈಗ ಹೇಳಿ..? ನಿಮ್ಮ ಪ್ರೀತಿ ನಿಮ್ಮ ಜೊತೆ ಇಲ್ಲ ಅಂದ ಮಾತ್ರಕ್ಕೆ ಅದು ಸೋತಂತಾಯಿತಾ.? ಹಾಗಿದ್ರೆ ನಿಮ್ಮದು ಲವ್ ಫೇಲ್ಯೂರ್ರಾ..? ಅದು ನೀವು ಪ್ರೀತಿನಾ ತ್ಯಾಗ ಮಾಡಿದಂತೆನಾ…? ಖಂಡಿತಾ ಅಲ್ಲ. ಹಾಗಂತ ಈ ಕ್ಷಣಕ್ಕೆ ಅವನಿದ್ದಲ್ಲಿಗೆ ಹೋಗಿ ಕಪಾಳಕ್ಕೆ ನಾಲ್ಕು ಬಿಗಿದು ಇದನ್ನೆಲ್ಲವನ್ನ ಹೀಗಿಗೆ ಅಂತ ಹೇಳುತ್ತೀರಾ..? ಅದು ನಿಮ್ಮಿಂದ ಸಾಧ್ಯವಾ..? ದೊಡ್ಡದಾಗಿ ಪ್ರೀತಿ ಗೀತಿಯೆಲ್ಲ ನಿಮಗೆಲ್ಲಿ ಅನುಭವವಿದೆ ವೇಸ್ಟು ನೀವು ಅಂದನಲ್ಲ? ಹಾಗಂದು ವೇಳೆ ಹೇಳಲು ಸಾಧ್ಯವಾಗದಿದ್ದರೆ ಆಗ ನಿಮ್ಮ ಪ್ರೀತಿ ಸೋತಂತಾಗುತ್ತಾ.? ಹಾಗಿದ್ದರೆ ಇದನ್ನ ಅಲ್ಲೆ ಅದೇ ಜಾಗದಲ್ಲೆ ಹೇಳಬಹುದಿತ್ತಲ್ಲ? ಯಾಕೆ ನಿಮ್ಮಿಂದ ಹೇಳಲು ಸಾಧ್ಯವಾಗಲಿಲ್ಲ? ಮತ್ತೆ ಈಗ್ಯಾಕೆ ಈ ಪರಿ ಒದ್ದಾಡುತ್ತಿದ್ದೀರಿ? ಒಂದು ವೇಳೆ ನಿಮ್ಮಿ ಪ್ರೀತಿ ನಿಮ್ಮ ಬಳಿ ಇರುತ್ತಿದ್ದರೆ ಹೀಗೆಲ್ಲ ಆಗುತ್ತಿತ್ತಾ..? ಹಾಗಿದ್ದರೆ ನೀವು ಆ ಒಂದು ಕ್ಷಣದಲ್ಲಿ ಸೋತು ಹೋದಿರಾ..? ನಿಮ್ಮ ಹುಡುಗಿಯ ಹೃದಯದಲ್ಲಿ ಬಹು ಎತ್ತರದ ಸ್ಥಾನ ಪಡೆದ ನೀವು ಆ ಒಂದು ಕ್ಷಣದಲ್ಲಿ ಹಾಸ್ಯಾಸ್ಪದರಾಗಿದ್ದಾದರೂ ಹೇಗೆ.? ಉತ್ತರ ಕೊಡಲು ಗೊತ್ತಿದ್ದರೂ ಸಮಯ ಸಂಧರ್ಭ ಅಂತ ನಿಮ್ಮನ್ನ ಸೈಲಂಟಾಗಿಸಿದ್ದಾದರೂ ಯಾವ ಸಂಗತಿ..? ಅದೂ ಬಿಡಿ. ಈಗ ಹೋಗಿ ಹೇಳಿದರೂ ಇದೆಲ್ಲಾ ಅವನಿಗೆ ಅರ್ಥವಾಗುತ್ತದೆ ಅಂತೀರಾ…?
ಖಂಡಿತಾ ಡೌಟು. ಹಾಗೊಂದು ವೇಳೆ ಅರ್ಥ ಮಾಡಿಕೊಂಡರೂ ಅವನೆನ್ನಬಹುದು. ‘ಅಯ್ಯೊ, ನಿಮ್ಮ ಜಾಗದಲ್ಲಿ ನಾನ್ ಇದ್ದಿದ್ರೆ ಇಷ್ಟೊತ್ತಿಗಾಗಲೆ ಮ್ಯಾಟರ್ರು ಮುಗಿಸಿ ಜುಮ್ ಜಾಮ್ ಅಂತಾ ಓಡಾಡ್ಕೊಂಡ್ ಇರ್ತಿದ್ದೆ’ ಅನ್ನಬಹುದು. ಅಷ್ಟು ಬಿಟ್ಟರೆ ಅವನ ಬಾಯಿಂದ ಹೆಚ್ಚಿನದೇನು ದಿವ್ಯವಾಣಿ ಉದುರುವುದಿಲ್ಲ. ಏಕೆಂದರೆ ಅದು ಅವನು ಪ್ರೀತಿಯನ್ನು ನೋಡುವ ರೀತಿ.
ಆದರೆ ಒಂದು ನೆನಪಿಟ್ಟುಕೊಳ್ಳಿ, ಇಲ್ಲಿಯವರೆಗೂ ನಿಮ್ಮ ಪ್ರೀತಿ ಸೋಲಲಿಲ್ಲ. ಆದರೆ ಯಾವಾಗ ಇದನ್ನೆಲ್ಲಾ ಹೇಳಿಕೊಳ್ಳುವ ಸಾಹಸ ಮಾಡುತ್ತಾ ನಿಮ್ಮ ಪ್ರೀತಿಯನ್ನು ಸಮರ್ಥಿಸಿಕೊಳ್ಳಲು ಹೋಗುತ್ತಿರೋ ಆಗ ಅದು ಸೋಲಲಾರಂಭಿಸುತ್ತೆ. ಎಸ್…. ಇಲ್ಲಿಯವರೆಗೆ ನಿಮ್ಮ ಸ್ವಚ್ಛಂದ ಪ್ರೀತಿಯ ಮೇಲೆ ಅಚಾನಾಕ್ಕಾಗಿ ಒಂದು ಗಲೀಜು ಬಂದು ಬಿದ್ದಿತ್ತು ಅಷ್ಟೇ. ಅದನ್ನು ಆ ಕ್ಷಣಕ್ಕೆ ಅಳಿಸಿ ಸ್ವಚ್ಛ ಮಾಡಿಕೊಳ್ಳಬಹುದು ಹಾಗೂ ಮುಂದೆ ಹಾಗಾಗದಂತೆ ಎಚ್ಚರ ವಹಿಸಬಹುದು. ಆದರೆ ಅದೇ ಗಲೀಜಿದ್ದಲ್ಲಿಗೆ ಹೋಗಿ ನೋಡು ನನ್ನ ಸ್ವಚ್ಛತೆ ಅಂತಾ ತೋರಿಸೋಕೆ ಹೋದರೆ ಅದು ಎಂದಿನಂತೆ ತನ್ನ ಹುಚ್ಚುಭಂಗಿಯಲ್ಲಿ ನಿಮ್ಮನ್ನು ಅಪ್ಪಿಕೊಳ್ಳಬಹುದು. ಏಕೆಂದರೆ ಅದಕ್ಕೂ ಗಲೀಜು ಮಾಡುವುದಕ್ಕೆ ಸ್ವಚ್ಛವಾಗಿರುವ ಜಾಗವೇ ಬೇಕು. ಎಷ್ಟಿದ್ದರೂ ಗಲೀಜು ಮಾಡಿಕೊಳ್ಳುವುದು, ಗಲೀಜಲ್ಲೆ ಬದುಕುವುದು ಅದರ ರೀತಿ. ಹಾಗಿದ್ದು ನೀವು ಆ ಪ್ರಯತ್ನ ಮಾಡುತ್ತಿರೆಂದರೆ ಮುಂದೆ ನಿಮಗೂ ಗಲೀಜಿಗೂ ಯಾವ ವ್ಯತ್ಯಾಸವೂ ಇರುವುದಿಲ್ಲ ಅಷ್ಟೇ.
ಬಿಡಿ, ಇವತ್ತೆನೋ ನಿಮ್ಮ ತಿಳಿಯಾದ ಮನಸ್ಸಿನ ಮೇಲೆ ಎಲ್ಲಿಂದಲೊ ಒಂದು ಕಲ್ಲು ಬಿದ್ದು ಅದು ರಾಡಿ ಆಯಿತು. ಆದರೆ ಅದು ಮತ್ತೆ ಮೊದಲಿನಂತಾಗಲೂ ಅದಕ್ಕೆ ಅದರದ್ದೆ ಸಮಯ ಬೇಕು. ನೀವೆಷ್ಟೆ ಒದ್ದಾಡಿದರೂ ಸಿಡಿ ಸಿಡಿ ಅಂದರೂ ಅದು ಮತ್ತಷ್ಟು ಎಳೆದಾಡುತ್ತಲೇ ಇರುತ್ತದೆ. ನಿಮ್ಮ ಸಮಸ್ಯೆ ಖಂಡಿತಾ ಅರ್ಥವಾಗುತ್ತೆ. ದಿನ ಬೆಳಗಾದರೆ ಮತ್ತೆ ಅವನ ಮುಖ ನೋಡಬೇಕು. ಅವನನ್ನು ನೋಡಿದಾಕ್ಷಣ ಮತ್ತೆ ಆ ಅವಮಾನದ ಜ್ವಾಲೆ ಹೊತ್ತಿಕೊಳ್ಳುತ್ತಿರುತ್ತೆ. ಬಿಡಿ, ಒಂದು ಸಾರಿ ಜೋರಾಗಿ ಮೈ ಕೊಡವಿಕೊಂಡು ಎದ್ದ ಮೇಲೆ ಮುಗೀತು. ಮತ್ತೆ ಅದೆಷ್ಟೇ ಹಲ್ಕಿರಿದರೂ, ಮುಗಿಬಿದ್ದರೂ ರೆಸ್ಪಾಂಡ್ ಮಾಡೋದಿರಲಿ ಮುಖ ನೋಡಿದರೆ ತಾನೆ..? ಹಾಗಿದ್ದು ಬಿಡಬೇಕು. ನೆನಪಿಟ್ಟುಕೊಳ್ಳಿ, ಈ ಪ್ರಪಂಚದಲ್ಲಿ ತಿರಸ್ಕಾರ ನಿರ್ಲಕ್ಷಕ್ಕಿಂತ ಬೇರೆ ಒಳ್ಳೆಯ ರೀವೆಂಜೇ ಇಲ್ಲ.
ಹೌದು, ಒಮ್ಮೊಮ್ಮೆ ಹೀಗೆಲ್ಲಾ ನಡಿತಿರತ್ತೆ. ಆದರೂ ಏನೂ ಮಾಡುವಂತಿಲ್ಲ. ಹಾಗಂತ ಇದೆನ್ನೆಲ್ಲ ತೀರಾ ಅವಮಾನ ಅಂತ ಭಾವಿಸಬೇಕಿಲ್ಲ. ಆದರೂ ಅದು ಹೀಗಲ್ಲ ಹೀಗೆ ಅಂತಾ ಎದೆ ಬಗೆದು ತೋರಿಸುವುದಕ್ಕೆ ಮನಸ್ಸು ಸಿಕ್ಕಾಪಟ್ಟೆ ಒದ್ದಾಡುತ್ತಿರುತ್ತೆ. ಆದರೇನು, ಸಮಯ ಸಂಧರ್ಭ ಅದಕ್ಕೆ ತಕ್ಕನಾಗಿರುವುದಿಲ್ಲ. ಬಿಡಿ, ಯಾವ ಕಾರಣಕ್ಕೂ ನಿಜವನ್ನು ಅರ್ಥ ಮಾಡಿಸುವುದಕ್ಕೆ, ಸ್ಪಷ್ಠೀಕರಣ ನೀಡುವುದಕ್ಕೆ ತುಂಬಾ ಪ್ರಯತ್ನಪಡಬೇಡಿ. ಏಕೆಂದರೆ ಎಡವಿ ಬಿದ್ದಾಗ ತಮಾಷೆ ನೋಡೋರೆ ಜಾಸ್ತಿ ಅನ್ನೊ ಹಾಗೆ ಆ ಸಮಯದಲ್ಲಿ ನೀವಾಡೋ ಮಾತು ಮತ್ತಷ್ಟು ಅಪಾರ್ಥ, ಅಪಹಾಸ್ಯಕ್ಕಿಡಾಗುವುದೇ ಹೆಚ್ಚು. ಹೌದು, ಪ್ರಪಂಚದಲ್ಲಿ ಎಲ್ಲರಿಗೂ ಎಲ್ಲದು ಎಲ್ಲಾ ಸಮಯದಲ್ಲೂ ಅರ್ಥವಾಗುವುದಿಲ್ಲ. ಅದು ಅವರ ತಪ್ಪು ಅಂತಾ ಅನ್ನಲಿಕ್ಕಾಗುವುದೂ ಇಲ್ಲ. ನೀವೆನೋ ನಿಮ್ಮ ವಿಷಯದ ಬಗ್ಗೆ ಸ್ಪಷ್ಟವಾಗಿದ್ದು ಅರ್ಥಮಾಡಿಸಲು ಬಹಳಾನೆ ಪ್ರಯತ್ನಿಸುತ್ತಿರಬಹುದು. ಆದರೆ ಎದುರಿದ್ದವರಿಗೆ ಅದೇ ರೀತಿಯಲ್ಲಿ ಅರ್ಥವಾಗಬೇಕಲ್ಲ. ಬಿಡಿ, ಈ ಪ್ರಪಂಚದಲ್ಲಿ ಎಲ್ಲರಿಗೂ ಎಲ್ಲದು ಅರ್ಥವಾಗದೆ ಇರಬಹುದು. ಆದರೆ ಎಲ್ಲೊ ಕೆಲವರು ನಿಮ್ಮನ್ನ ಅರ್ಥ ಮಾಡಿಕೊಂಡಿರುತ್ತಾರೆ. ಅವರಿಗೆ ನಿಮ್ಮ ಮಾತು, ನಡೆ, ಕೆಲಸಗಳು ಅರ್ಥವಾಗದೆ ಇರಬಹುದು. ಆದರೂ ಅವರು ನಿಮ್ಮ ನಡೆಯನ್ನು ಪ್ರಶ್ನಿಸಲಾರರು. ನಿಮ್ಮ ಬಗ್ಗೆ ತಪ್ಪಾಗಿ ತಿಳಿದುಕೊಳ್ಳಲಾರರು. ನಿಮ್ಮನ್ನು ಅನುಮಾನಿಸಲಾರರು, ಅವಮಾನಿಸಲಾರರು. ಅವರು ನಿಮ್ಮ ಬಗ್ಗೆ ಸಂಪೂರ್ಣ ವಿಶ್ವಾಸ, ನಂಬಿಕೆ ಇರುವವರು. ಅವರು ನಿಮ್ಮ ಪ್ರೀತಿ ಪಾತ್ರರು. ಅವರ ಬಗ್ಗೆ ಯಾವತ್ತಿಗೂ ಯಾವತ್ತಿದ್ದರೂ ಅಭಿಮಾನವಿರಲಿ. ಏಕೆಂದರೆ ಅಭಿಮಾನವಿರುವಲ್ಲಿ ಅನುಮಾನವಿಲ್ಲ, ಅಂತೆಯೇ ಅಭಿಮಾನವಿರುವಲ್ಲಿ ಅವಮಾನವೂ ಇರುವುದಿಲ್ಲ.
-ಮಧುಕರ್ ಬಳ್ಕೂರ್