ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಕೊನೆಯ ಭಾಗ): ಎಂ. ಜವರಾಜ್

-೮೦-

‘ಏಯ್,
ಗೊತ್ತಾಯ್ತ..
ಈಗ್ಲಾದ್ರು ಗೊತ್ತಾಯ್ತ
ಇಲ್ಲಿಗಂಟ ಹೇಳುದ್ದು ನಿನ್ನೆದ್ಗ ಇಳಿತಾ..’

ಗದುರ್ತು

ನನ್ಗ ನಿದ್ರ ಮಂಪ್ರು
ತೂಕುಡ್ಕ

ಆ ತೂಕುಡ್ಕಲೆ
ಈ ಅಯ್ನೋರ್ ಕತ ಕೇಳ್ತ ಕೇಳ್ತ
ಗುಡುಗುಡು ಗುಡಗಾ ಸದ್ದು
ಕಿವಿಗ ಅಪ್ಪುಳುಸ್ತು

‘ಏಯ್,
ನಾ ಮಾತಾಡ್ತನೆ ಅವ್ನಿ
ನಿ ತಲ ಬಗ್ಗುಸ್ಕಂಡು
ತೂಕುಡುಸ್ತನೆ ಇದ್ದಯಲ್ಲ..’

ಆಗ ಸುಂಯ್ಯಂತ ಸುಂಯ್ಗುಟ್ತ
ಪಣ್ಕ ಪಣ್ಕಂತ ಪಣ್ಗುಡ
ಮಿಂಚು ಮಿಂಚ್ತಾ..
ಆ ಪಣ್ಗುಡ ಮಿಂಚು ಕಣ್ಗ ರಾಚ್ತ
ನಿಧಾನುಕ್ಕ ಕಣ್ಬುಟ್ಟು
ಬೀದಿದಿಕ್ಕ ನೋಡ್ದಿ,

ಆಗ ಆ ಮೆಟ್ಟು..
ಆ ಮಿಂಚುನ್ ಸಂದಿಲೂ
ದಗ ದಗ ದಗಾಂತ
ಉರಿತಾ

“ತೂ..
ನಾ ಅಂಗ್ಳ ಹರ್ಕಂಡೂ..
ಆಗ್ಗಿಂದ ಈಗ್ಗಂಟೂ..
ನಿದ್ದನು ಮಾಡ್ದೇ..
ಒನ್ನಂಕ್ರೂ ಬುಡ್ದೇ..
ಈ ಅಯ್ನೋರ್ ಕತ ಒಪ್ಸುದ್ನಲ್ಲಾ..
ನಂಗೇನ್ ತೀಟಿಡ್ದಿತ್ತೂ..

“ನೋಡು ಸಟ್ಗ..

“ಗುಡುಗು ಗುಡುಗ್ತಾ ಅದ..
ಮಿಂಚು ಮಿಂಚ್ತಾ ಅದ..
ಮ್ಯಾಲ ಆಕಾಶ್ವೇ ಬಾಯ್ಬಿರಿತಾ ಅದ..
ಈ ಭೂಮ್ತಾಯ್ನು ಮುಳುಗ್ಸತರ ಅದ..
ನೀನು ನಿದ್ದ ಮಾಡಿಯಾ…”

ಅಂತ

ಇನ್ನೂ ಒಂದಾಳುದ್ದ ಮೇಲೆದ್ದು
ಕಿಡಿಕಿಡಿ ಕಿಡಿ ಕಾರಿ
ಇನ್ನೂ ದಗ್ಗಂತ ಉರಿ
ಉರಿತಾ..
ಆ ಉರಿ
ಇನ್ನೂ ಮೇಲೇಳ್ತ ಏಳ್ತಾ..

“ಏಯ್, ಅದೇನ ನೋಡದು
ಬಾ..

“ಬಾ ಇಲ್ಗ
ಎತ್ಗ ನನ್ನ
ಜ್ವಾಪನ ಮಾಡು..

“ನಾ ಯಾರ ಗೊತ್ತಾ..
ನಾ ಯಾರ ಗೊತ್ತಾ ಅಂದಿ..
ಆ ಚಂದ್ರಿ,
ಅದೆ ಆ ಚಂದ್ರವ್ವೋರ್ ಕಾಣ್ಕ ಕಣ..

“ಆ ಚಂದ್ರವ್ವೋರ ನೋಡಿದ್ದಿ
ಒಂದ್ಸತಿ
ಆ ನೆಪ್ಪು ಇನ್ನೂ ಅದ

“ನನ್ನ ರೂಪ್ಸಿ
ಈ ರೂಪ್ವ ಕೊಟ್ಟ
ಆ ನನ್ನ ಒಡಿಯ
ಕಾಲಯ್ಯನ ಸಂಗ್ಡ
ಆ ಚಂದ್ರವ್ವೋರ ನೋಡಿದ್ದಿ

“ಮೂಲಲಿ ಗುಡ್ಡ ಹಿಡ್ದು
ನನ್ ಜೊತ್ಗಾರೊಂದ್ಗ
ಯಾತಿಕ್ಕು ಬ್ಯಾಡ್ದೆ ಬಿದ್ದಿದ್ದಾಗ..

“ಆ ನನ್ ಒಡಿಯ ಕಾಲಯ್ನೊಂದ್ಗ
ಆ ಚಂದ್ರವ್ವೋರೂ…
ಆ ಹುಣ್ಮ ರಾತ್ರಲಿ
ತಿಂಗ್ಳು ಬೆಳುಗ್ದಂಗಿ ಬೆಳುಗ್ತ
ಕಣ್ಣುನ್ ರಪ್ಪನು ಬಡಿದೆ
ನಾನಿದ್ದ ಗುಡ್ಡನ ಕೆದ್ಕಿ ಕೆದ್ಕಿ
ನನ್ನ ಕಂಡೇಟ್ಗೆ
ಕಾಜ್ಗ ತಗ್ದು ಗೀಟ ಎಳ್ದು
‘ಈತರ ಈ ಚರ್ಮ್ದಲ್ಲಿ
ಅಯ್ನೋರ್ ಪಾದ್ಗ
ಗಿರುಕ್ ಗಿರುಕ್ ಅನ್ನಂಗಿ
ಮಾಡಿ ಮೆಟ್ಸು’ ಅಂತ
ನನ್ನ ಎತ್ತಿ ಇಡ್ಸಿ
ಆ ಉರಿಯ ಬಿಸುಲ್ಲಿ
ಚತ್ರಿ ಇಡ್ಕ ಹೋದ್ದು
ಇನ್ನೂ ಈ ಕಣ್ಲಿ ಕಟ್ದಂಗದ

“ಈ ಕಣ್ಲಿ ಕಟ್ದಂಗಿರ
ಆ ಚಂದ್ರವ್ವೋರ್ ಕಣ್ಣು
ಕೊತ್ತಿಗಿರ ಕಣ್ತರನೆ ಮಿನ್ಗ ಕಣ್ಣಿದ್ದಂಗಿತ್ತು

“ಈಗ ಈ ಮಿಂಚಾ ಮಿಂಚ್ಲಿ
ಈ ನಿನ್ ಮಿನ್ಗ ಕಣ್ಣೂ
ಆ ಚಂದ್ರವ್ವೋರ್ ಮಿನ್ಗ ಕಣ್ಣೂ
ಒಂದೆ ತರ ಕಾಣಂಗದ..”

ಈ ಮಾತ್ಗ ಬೆಚ್ಚಿ
ನನ್ ಮೈ ಬೆವ್ತು ನೀರಾಡ್ತು
*

ನಾನು ಹೊದ್ದ ರಗ್ಗೆಸ್ದು
ಜಗುಲಿ ಕಂಬ ಹಿಡ್ದು ನಿಂತಿ

ಆಗ ಆ ಕತ್ಲೊಳ್ಗ
ಆ ಮೆಟ್ಟು ಫಳಾರ್ ಅಂತು
ದಗದಗಾಂತ ಉರಿತು

ಒಂದಾಳುದ್ದ ಮೇಲೆದ್ದೆದ್ದು
ಉರಿದು ಬೆಂಕಿಯ ಕೆನ್ನಾಲಿಗೆ
ಸುತ್ಮುತ್ಗೂ ಹರುಡ್ತಾ
ಈ ಕಣ್ಗೂ ರಾಚ್ತ..
ಆ ಮೆಟ್ಟುರಿಯೊಳ್ಗ
ಚಿನ್ನದ ಗೊಂಬೆತರ
ನನ್ನೆತ್ತವ್ವ ಫಳಫಳ ಹೊಳಿತಾ
ನಿಟಾವಟು ನಿಂತು ನೋಡ್ತಾ..
ಆತರ ನೋಡ್ತಿದ್ದ
ಆ ನನ್ನವ್ವನ ಕಣ್ಣು ಬೆಳುಗ್ತಾ..
ಆ ಬೆಳ್ಗ ಕಣ್ಣ
ಈ ಕಣ್ಲಿ ನೋಡ್ತಾ..
ಆ ಅವ್ವುನ್ ಕಣ್ಣೂ
ಆ ಮೆಟ್ಟು ಹೇಳ್ದಂಗಿ
ಆ ಚಂದ್ರವ್ವೋರ್ ಕಣ್ಣಂಗಿ ಕಾಣ್ತಲ್ಲಾ…

ಆಗ
ಹಿಡ್ದ ಕಂಬ ಸಡುಲ್ಸಿ
ಜಗುಲಿ ಕೆಳಕ್ಕೆ
ಮೆಲ್ಗ ಪಾದ ಊರಿದೆ

“ಬಾ..
ಬಾ ಇಲ್ಗ
ಎತ್ಗ ನನ್ನ
ಜ್ವಾಪಾನ ಮಾಡು..”

ಕೆಕ್ಕಳಿಸಿ ಕೇಳ್ತು

ನಾನು ಇನ್ನೂ ಒಂದು
ಪಾದ ಊರಿದೆ

ಒಳ್ಗ
ಆ ಅಯ್ನೋರು,

“ಏ ಕಾಲ ಅದ್ಯಾತಿಕೆಲ
ಗಳುಗಳುಕ್ಕು ಬಂದೈ..
ಏ ಚೆಲ್ವಿ ನಿಂಗಾರು ಬುದ್ದಿ ಬ್ಯಾಡ್ವಲೇ..

“ಪುಂಡ್ಕಟ್ಟಿ ಮೆರಿತಾ
ಸಾಮ್ರಾಜ್ಯ ಕಟ್ತ ಅವ್ನ
ಆ ನಿನ್ನೈದ ಪರ್ಶು…

“ಬಿಂಕಿ ಹಸ್ಸಿ
ಬೂದಿ ಮಾಡ ತಾಕತ್ತದ ತಾಕತ್ತು
ಆ ನಿನ್ ನಿನ್ನೈದುನ್ ಸಾಮ್ರಾಜ್ಯನ
ಯ್ಯಾ..ಉಹ್ಹ್ ಉಹ್ಹ್ ಉಹ್ಹ್..”

ಗುಕ್ಕುಗುಕ್ಕನೆ ಕೆಮ್ತಿರ ಸದ್ಗಾ
ಹಿಂದಕ್ಕೆ ತಿರುಗಿದೆ

“ಏಯ್, ಬಂಚೊತ್
ಲೌಡೆ ಸುವ್ವರ್
ಅದೇನ ತಿರ್ಗದು ಹಿಂದುಕ್ಕ..

“ಹುಚ್ಚೊಳ ಬತ್ತುದ ಹುಚ್ಚೊಳ..
ನೆನ್ನಯಿಂದ ಅದೆ ಮಾತು
ಈ ಬೀದ್ಗುಂಟ…

“ಆ ಹೊಸೂರ್ ಬೀದಿ
ಚಿಕ್ದು ದೊಡ್ದು ಅನ್ನದೂ ಕಾಣ್ದೆ
ಈ ದಾರಿಲೆ ಹೊಯ್ತ ಬತ್ತಾ
ಆ ಹೆಣ್ಣೊಳುವ ಆ ಗಂಡೊಳುವ
ತುಂಬಿ ಹರಿತಾ
ಕರ ಕಟ್ಟಿದ್ದಂತ
ಮೇಲುಕ್ಕ ಏರಿ ಹರಿತಿದ್ದಂತ
ಆ ಕಣುವ ಬಾಗ್ದಲ್ಲಿ ಮಳ ಜೋರಂತ..
ಈತರ ಆದ್ರ
ಈ ಹಳ ಊರೂ ಮುಳುಗುತ್ತ..

ಅವತ್ತೂ ಹಿಂಗೆ,
ಹುಚ್ಚೊಳ ಬಂದು
ಈ ಊರೂ ಮುಳ್ಗಿ
ಈ ಜನ್ವೂ ದಿಕ್ಕೆಟ್ಟು
ಈ ಊರ ತೊರುದು
ಆ ಹೊಸೂರು ಹುಟ್ತು..

ಆಗ
ಈ ಅಯ್ನೋರು
ಈ ಹಳ ಊರ ಬುಡ್ದೆ
ತಾತ ಮುತ್ತಾತುನ್ ಕಾಲ್ದಿಂದು
ಬಾಳಿ ಬದ್ಕಿರ ಮನ
ನನ್ ತಲ ಹೋದ್ರೂ
ಈ ಮನ ಬುಡದಿಲ್ಲ
ಅಂತ ನಿಚಾಯಿಸ್ಕಂಡೂ
ಜಿನ ಕಳಿತಾ
ಆ ನ್ಯರುವೂ ಇಳ್ದು
ಈ ನೆಲ್ದಲ್ಲೆ ನೆಲ್ವಾದ್ರು

ಈಗ ಏನ್ಮಾಡಿರೂ..

ಅದ್ಕಾಗಿ
ಬ್ಯಾಗ್ನೆ ಬಾ..
ಬಾ ಇಲ್ಗ
ಎತ್ಗ ನನ್ನ
ಜ್ವಾಪಾನ ಮಾಡು..”

ಹಿಂಗೆ
ಒಂದೇ ಸಮ್ಕ ಕೂಗ್ತಿತ್ತು

ಈಗ
ಗಾಳಿ ಬೀಸ್ತಾ
ಗುಡುಗು ಗುಡುಗ್ತಾ
ಮಿಂಚು ಮಿಂಚ್ತಾ
ಸಿಡ್ಲು ಸಿಡಿಸಿಡಿ ಸಿಡಿತಾ
ಬೆಳ್ಕು ಕತ್ಲು ಕಣ್ಗ ರಾಚ್ತ
ಜೀವ ಅಳುಕ್ತು

ಗಾಳಿ ಇನ್ನೂ ಜೋರಾಯ್ತು

ಬಾ..
ಬ್ಯಾಗ್ನೆ ಬಾ
ಬಾ ಇಲ್ಗ
ಎತ್ಗ ನನ್ನ

ಅದು ಕೂಗ್ತನೇ ಇತ್ತು

ಅದು ಎಂಥ ಕೂಗು ಅಂದ್ರ
ಇಲ್ಲಿಗಂಟ ಅಂಥ ಕೂಗ
ಕೂಗೇ ಇಲ್ಲದ ಕೂಗು

ಇಲ್ಲಿ ಒಳ್ಗ
ಗುಕ್ಕಗುಕ್ಕನೇ ಕೆಮ್ತಿರ ಕೆಮ್ಮು
ಈ ಮನ್ವೇ ಬಿದ್ದೋಗತರ ಆಗಿ
ಹಿಡ್ದ ಜಗುಲಿ ಕಂಬ ಬೀಳಂಗಾಯ್ತು

ಆ ಬೆಳ್ಕು ಕತ್ಲೊಳ್ಗ
ಗುಡುಗು ಸಿಡ್ಲು ಮಿಂಚು
ಒಂದೆ ಸಲ
ಹೊಯ್ತ ಬತ್ತ
ಕಣ್ಣು ಕತ್ಲಿಡ್ದು
ಸದ್ದು ಜೋರಾಗಿ
ಆ ಸದ್ದೊಳ್ಗೇ
ಆ ಮೆಟ್ಟೂ ಕೂಗ್ತ
ಗಾಳಿಗ ತೂರಿ ತೂರಿ
ಬೀದಿ ಉದ್ದುಕ್ಕ ಜರುಗ್ತಿತ್ತು

ನಾನೀಗ
ಇನ್ನೂ ಒಂದ್ಪಾದ ಮುಂದಿಟ್ಟಿ

ಆಗ
ಬಂತು..
ಬಂತು..
ಬಂತು ನೋಡು ಮಳೆ
ಪಟಪಟಾಂತ ಹನಿ ಹಾಕ್ತು
ದಿಕ್ದಿಕ್ಕೂ ಗಾಳಿ ಬೀಸ್ತು
ಆ ಬೀಳ ಹನಿಯೂ ಜೋರಾಯ್ತು
ಆ ಬೀಸ ಗಾಳಿಯೂ ಜೋರಾಯ್ತು

ಆ ಜೋರು ಗಾಳಿ‌ಗೆ
ಮನೆ ಮೇಲಿನ ಸೂರು ಕಿತ್ತು
ಕೈಯಂಚು ತೂರಿ
ಆ ಮುಂಬಾಗಿಲು ದಾರಂದ
ಆ ಜೋರು ಗಾಳಿಗೆ
ಆಚೆಗೂ ಈಚೆಗೂ ಆಡುತ್ತಾ..
ಲಟಕ್ ದಡಕ್
ಕೀ..ರ್.. ಕಿರುಕ್
ಕೀ..ರ್.. ಕಿರುಕ್
ದಡ್ ದಡ್ ದಡಕ್

ಸದ್ದು ಜೋರಾಗ್ತ

ಆ ಅಯ್ನೋರು
“ಏ..ಏ…ಏನಲೇ
ಏ..ಏ.. ಏನಲೇ
ಬನ್ನಿ ಎಲ್ಲ ಬನ್ನಿ..”

ಅಂತ ಕೂಗದು ಚಿಟ್ಟಿಡಿತಿತ್ತು

ನಾ ಆ ದಾರಂದ ಹಿಡ್ದು
ಚಿಲ್ಕ ಹಾಕಿ ಬೀದಿದಿಕ್ಕ ಬಿದ್ದಿ

ಆ ಬೀದಿ ಗವ್ವಂತ
ಆ ಗವ್ವನ್ನ ಕತ್ಲಲ್ಲಿ
ನಾನೂ ತೂರಾಡ್ತ
ಮೆಲ್ ಮೆಲ್ಗ ಪಾದ ಊರಿದೆ

ದಿಕ್ದಿಕ್ಕೂ ಗುಡುಗ್ತಾ ಮಿಂಚ್ತಾ
ಆ ಮಿಂಚ ಬೆಳುಕ್ಲಿ
ಆ ಮೆಟ್ಟುನ್ ತಾವ ಹುಡುಕ್ತ ಹೋದಿ

ಆ ಗುಡುಗು ಮಿಂಚನ್ ಜೊತ್ಗೇ
ಮೊರ್ಗುಟ್ಟಿ ಸುರಿತಿರ ಮಳೆಲಿ
ಆ ಬೀದಿ ಕೊನೆಲಿ
ಆ ಮೆಟ್ಟು ಇನ್ನೂ ಜೋರಾಗಿ
ಕೂಗ್ತಾ ಇರದು ಕೇಳ್ತು
ಆ ಕೂಗ ಜಾಡು ಹಿಡ್ದು
ಆ ಕತ್ಲೊಳ್ಗೇ
ಹರಿತಿರ ನೀರೊಳ್ಗ ಓಡಿದೆ

ಪೂರ್ವಕ್ಕೆ ಹರಿತಿದ್ದ
ಆ ಮಳೆ ನೀರು
ಎಡಕ್ಕೆ ವಾಲಿ ಉತ್ತರಕ್ಕೆ ಹರಿತಾ
ಆ ಉತ್ತರದ ತುದಿಲಿ
ಬೆಳ್ಕು ಬೆಳುಗ್ತ
ಮೇಲೆದ್ದೆದ್ದು ಕುಣಿತಾ
ಆ ಆಕಾಶ್ಕು ಈ ಭೂಮ್ಗು
ನಿಟಾವಟ್ ಏಣಿ ಹಾಕ್ದಂಗಿತ್ತು

ಬಾ..
ಬಾ,
ನಾ ಇಲ್ಲೆ ಅವ್ನಿ
ಆ ಹೆಣ್ಣೊಳುವ ಆ ಗಂಡೊಳುವ
ಈ ಭೂಮ್ತಾಯ ಮುಳುಗುಸ್ತ ಅವ
ಮುಳುಗುಸ್ತ ಮುಳುಗುಸ್ತ
ಈ ಹಳ ಊರ ಸೇರತಂಕ
ಬಾ..
ಬಾ ಇಲ್ಗ
ಎತ್ಗ ನನ್ನ
ಜ್ವಾಪಾನ ಮಾಡು..

ಅಂತ ಕಣ್ಣೀರಾಕ್ತ
ದುಕ್ಕುಳ್ಸಿ ದುಕ್ಕುಳ್ಸಿ ಅಳ್ತ
ಆ ಬೆಳ್ಕು,
ಆ ಹರಿತಿರ ನೀರೊಳ್ಗ
ಮುಳುಗ್ತಿತ್ತು

ಈ ಮಳೆ
ಈ ಗಾಳಿ
ಇನ್ನೂ ಜೋರಾಗ್ತ
ಸುಂಯ್ಯ್ ಸುಂಯ್ಯ್
ಸುಂಯ್ಗುಟ್ಟ ಮಿಂಚು
ಕಣ್ಗ ರಾಚ್ತ
ಆ ಮಿಂಚಾ ಬೆಳುಕ್ಲಿ
ಆ ಗಂಡೊಳುವ
ಆ ಹೆಣ್ಣೊಳುವ
ಮೊರ್ಗರಿತಾ
ನನ್ದಿಕ್ಕೇ ಮೊಖ ಮಾಡ್ತು

ಆ ಮಿಂಚೂ..
ಆ ಗುಡುಗೂ..
ಆ ಸಿಡ್ಲೂ..
ಆ ಗಾಳೀ..
ಆ ಮಳೇ..
ಆ ನೀರೂ..
ಆ ಹೆಣ್ಣೊಳಾ..
ಆ ಗಂಡೊಳಾ..
ನನ್ನೇರಿ ಮೇಲೇರಿ ಬರ್ತಿರತರ ಆಯ್ತು

ನಾನು ದಿಕ್ದಿಕ್ಕು ಕಣ್ಣಾಡ್ಸಿ
ಆ ಹಳ ಊರ್ ಬೀದಿದಿಕ್ಕ
ಸರಕ್ಕನೆ ತಿರುಗಿ
ಮೊರಿತಾ ಹರಿತಿರ
ಮಳೆ ನೀರ ಒದಿತಾ
ಓಡ್ತಾ ಓಡ್ತಾ..
ನನ್ ಕಣ್ಣು
ನನ್ನೆತ್ತವ್ವುನ ಕಣ್ಣು
ಅವ್ಳೆತ್ತವ್ವುನ ಕಣ್ಣು..
‘ಒಂದೆ ತರ ಕಾಣಂಗದ’
ಅಂತ
ಆ ಮೆಟ್ಟಾಡಿದ
ಆ ಮಾತು ಗೆಪ್ತಿಗ್ಬಂದು
ಎದ್ಗ ಒದ್ದಂಗಾಯ್ತು

ಆ ಗೆಪ್ತಿಲಿ
ನಳ್ತಾ ಪೇಚಾಡ್ತ ಬಿದ್ದಿದ್ದ
ಆ ಅಯ್ನೋರ್ ಕಣ್ನೂ..
ಒಂದ್ಸಲ ನೋಡ ತವ್ಕ ಆಗಿ
ಆ ಹರಿತಿರ ಮಳೆ ನೀರ್ಲಿ
ಎಗರಿ ಎಗರಿ ಓಡಿದೆ

ಓಡ್ತಾ ಓಡ್ತಿದ್ದಂಗೆ
ದಿಕ್ದಿಕ್ಕೂ ಗಪ್ಪಂತು

ಆ ಮಿಂಚು ಆ ಗುಡುಗು
ಆ ಸಿಡ್ಲು
ಆ ಮಳೆ ಆ ಗಾಳಿ
ಸುಳ್ವಿಲ್ದೆ ಗಕುಂ ಅಂತಿತ್ತು

ಆಗ
ಆ ಬೀದಿಯೂ ಕಾಣ್ದೆ
ಆ ಮನೆಯೂ ಕಾಣ್ದೆ
ಆ ಹಳ ಊರೂ ಕಾಣ್ದೆ
ತಡಕಾಡ್ತ ಹುಡುಕಾಡ್ತ
ಆ ನೀರೊಳ್ಗ ಕಾಲೂರಿ ನಡಿತಾ
ದಿಕ್ದಿಕ್ಕೂ ದಿಕ್ಕಾಪಾಲು ಈಜ್ತ
ಆ ಅಯ್ನೋರ್ ಕಣ್ಣೂ
ಕಾಣ್ದೆ ಕಂಗಾಲಾದಿ

ಆಗ ಆ ನೀರೊಳ್ಗ
ಕಾಲ್ಗ ಅದೇನ ತಗುಲಿ
ಮೆಲ್ಗ ಬೆಸ್ದು
ಮೈ ನಡುಗ್ತು

ನಡುಗ್ತ ನಡುಗ್ತ
ಬೆಸ್ದ ಕಾಲ ಎಳಿತಾ
ಅತ್ತಗ ಇತ್ತಗ ನೋಡ್ತ
ಜಮ್ನೇರಳೆ ಮರ ಕಾಣ್ತು

ಆ ಜಮ್ನೇರಳೆ ಮರ
ಮಿಂಚು ಗುಡುಗು
ಮಳೆ ಗಾಳಿ ಹೊಡ್ತುಕ್ಕ
ಬೀಸಿ ವಾಲಾಡಿ
ಸುಸ್ತಾಗಿ ಬಗ್ಗಿ
ಹರಿತಿರ ಮಳೆ ನೀರ ನೋಡ್ತಿತ್ತು

ನಾನು ಆ ಮರದ ಬೇರು ಹಿಡ್ದು
ಮೇಲೇರಿ ಕುಂತು ದಿಕ್ದಿಕ್ಕೂ ಕಣ್ಣಾಡಿಸಿದೆ

ಕತ್ಲು ಕಳ್ದು ಮೊಬ್ಬು ಆದಂಗಿತ್ತು

ಮೇಲ ಮೋಡ ಗವ್ವರಾಕಂಡು
ಆ ಮೋಡ ಸೀಳಿ ನಡುಮಧ್ಯ
ಸೂರ್ಯ ಇಣುಕ್ತಂಗಿತ್ತು

ಕಾಲು ಎಳ್ದಂಗಾಗಿ
ಕಾಲ್ದೆಸ್ಗ ಕಾಣ್ಣಾಡಿಸಿದೆ
ಆ ಮೆಟ್ಟು ಕಾಲ್ಗ ಬೆಸ್ಗಂಡು
ಉರಿಗಣ್ಲಿ ನೋಡ್ತಿತ್ತು

ಉರಿಗಣ್ಲಿ ನೋಡ್ತ
ಭೂಮ್ತಾಯ್ಗ ಸಣ್ಮಾಡ್ತ..

ಆ ಸೂರ್ಯದೇವ ಇಣುಕ್ತ ಅವ್ನ ತಾಯಿ..
ಇಣುಕ್ಲಿ, ಅವ್ನೂ ನೀನು ಇಲ್ದೆ ಲೋಕಿದ್ದ ತಾಯಿ..

ಕಾಲ, ಕಾಲಯ್ಯ ಗೊತ್ತಾ ತಾಯಿ..
ಕಾಲ್ ಕಾಲುಕ್ಕು ಅಳಿದೆ ಇರ ಕಾಲ ತಾಯಿ..
ಈ ರೂಪ್ವ ರೂಪ್ಸಿ ಕಾಲ್ವಾದ ಕಾಲ ತಾಯಿ..
ಈ ಕಾಲ ಒಂದ್ಸತ್ಯ ನುಂಗ್ದ ತಾಯಿ..
ನುಂಗ್ದ ನುಂಗ್ದಂಗಿದ್ರ ತಕರಾರು ಇಲ್ಲ ತಾಯಿ..
ಆದ್ರ ನುಂಗುದ್ದ ನುಂಗ್ದಂಗೇ ಕಕ್ಕುದ್ನ ತಾಯಿ..

ಅಯ್ನೋರು ಅಂತನ್ನಂವ ಇದ್ದ ತಾಯಿ..
ಅವ್ನ್ ಪಾದ್ವ ಆಳ್ದಂವ ನಾನೇ ತಾಯಿ..
ಆತರ ಆಳಕ ಕಾರ್ಣ ಆ ಕಾಲ ತಾಯಿ..
ಅದ್ಕ ಇನ್ನೂ ಒಂದ್ ಕಾರ್ಣ ಚಂದ್ರಿ ತಾಯಿ..
ಆ ಚಂದ್ರಿ ಯಾರ ಗೊತ್ತಾ ತಾಯಿ..
ಆ ಕಾಲನ ಕಣ್ದೆಸಲಿ ಬೆಳ್ದ ಸವ್ವಿ ಹೆತ್ತವ್ವ ತಾಯಿ..
ಆ ಅಯ್ನೋರ್ ಬೆಳುದಿಂಗ್ಳು ಬಾಲೆ ತಾಯಿ..
ತಾಯಿ..ತಾಯಿ..ತಾಯಿ.. ಆ ಸವ್ವಿ..
ತೂ..
ಈ ನರ ಮುನುಸ್ರ ನಂಬ್ಯಾಡ ತಾಯಿ..
ಯಾಕ ಅನ್ನದ್ಕ ಒಂದ್ಕತ ಹೇಳ್ತಿನಿ ತಾಯಿ..

ಅಂತ

ಲೋಕ್ ಲೋಕುಕ್ಕು ಕೇಳತರ
ಜಿರಿಕ್ಕು ಜಿರಿಕ್ಕು ಸದ್ದು ಮಾಡ್ತ
ಅಳ್ತ ನಗ್ತ ಗದುರ್ತ ಕತ ಹೇಳ್ತಿದ್ರ

ಆ ಸೂರ್ಯ
ಗವ್ವರಾಕಂಡಿದ್ದ ಆ ಮೋಡನ ಸೀಳಿ
ನಿಗುರಿ ಮೇಲೇರಿ ಉರಿಗಣ್ಣ ಬೀರಿ
ಮೆಟ್ಟೇಳ ಕತ ಕೇಳ್ತ ಕೇಳ್ತ
ಮಂಡಿ ಊರಿ ಜೀವ ತುಂಬ್ತು

*

-ಎಂ.ಜವರಾಜ್

ಮುಗಿಯಿತು..

ಸಂಪಾದಕರ ಟಿಪ್ಪಣಿ:

ಒಟ್ಟು ಎಂಬತ್ತು ಅಧ್ಯಾಯಗಳಿರುವ ಈ ನೀಳ್ಗಾವ್ಯ ಪಂಜುವಿನಲ್ಲಿ ಇಷ್ಟು ದಿನ ಪ್ರಕಟವಾಯಿತು. ಇದು ಕೊನೆಯ ಭಾಗ. ಪಂಜುವಿಗಾಗಿಯೇ ತುಂಬಾ ಆಸ್ಥೆಯಿಂದ ಈ ಮೆಟ್ಟು ಹೇಳಿದ ಕಥಾ ಪ್ರಸಂಗವನ್ನು ನಮಗೆ ಬರೆದುಕೊಟ್ಟು ಶ್ರೀ ಎಂ. ಜವರಾಜ್‌ ರವರಿಗೆ ಪಂಜು ಬಳಗದಿಂದ ಅನಂತ ವಂದನೆಗಳು. ಅವರ ಸಾಹಿತ್ಯ ಕೃಷಿ ಹೀಗೆಯೇ ನಿರಂತವಾಗಿರಲಿ ಎಂದು ಹಾರೈಸುತ್ತೇವೆ.

ಧನ್ಯವಾದಗಳೊಂದಿಗೆ

ಪಂಜು ಬಳಗ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಅಮೂಲ್ಯ
ಅಮೂಲ್ಯ
2 years ago

ಬಹಳ ಚೆನ್ನಾಗಿದೆ.

ಎಂ.ಜವರಾಜ್
ಎಂ.ಜವರಾಜ್
2 years ago

ಧನ್ಯವಾದ ಮೇಡಂ

2
0
Would love your thoughts, please comment.x
()
x