ವೆಂಕಿ ಬಂದನೇ?: ಸುವ್ರತಾ ಅಡಿಗ ಮಣೂರು


ವೆಂಕಿ ಬರ್ತಾನೆ ಅಂತ ಹೇಳಿದ್ದ, ಇನ್ನು ಬಂದಿಲ್ಲ. ಕಳೆದ ಭಾನುವಾರ ಅವನ ಸೊಸೆಯ ಫೋನಿಗೆ ಕಾಲ್ ಮಾಡಿದ್ದೆ. ʻಪದೇ ಪದೇ ಕಾಲ್ ಮಾಡ್ಬೇಡ್ವೋ ಇವರಿಗೆ ಕಿರಿಕಿರಿ ಆಗುತ್ತೆʼ ಅಂತ ಹೇಳಿದ್ದ. ಮುಂದಿನ ಭಾನ್ವಾರ ಬರ್ತಿನಿ ಅಂತ ಹೇಳಿದ್ದ. ಇನ್ನೂ ಬಂದಿಲ್ವಲ್ಲ ಎಂದುಕೊಳ್ಳುತ್ತಾ ರಾಯರು, ಬಾಗಿಲು ತೆರೆದು ನೋಡಿದರು.
“ಮಾವ … ಧೂಳ್ ಬರುತ್ತೆ ಬಾಗಿಲು ಹಾಕಿ” ಎಂದು ಅಡುಗೆ ಮನೆಯಿಂದ ಸುಮ ಕೂಗಿಕೊಂಡಳು.
ಅಬ್ಬ.. ಅವಳ ಕಿವಿ ಎಷ್ಟು ಚುರುಕು. ಎಲ್ಲವೂ ಕೇಳಿಸುತ್ತೆ, ಹಿಂದೊಮ್ಮೆ ವೆಂಕಿ ಬಂದಾಗ, ನಾವು ನಿಧಾನವಾಗಿಯೆ ಮಾತನಾಡುತ್ತಿದ್ವಿ, ಆದರೂ “ ಮೆತ್ತಗೆ ಮಾತಾಡಿ ಮಗು ಮಲ್ಕೊಂಡಿದೆ “ ಅಂತ ಹೇಳಿಹೋದಳಲ್ವಾ. ಅಂದಿನಿಂದ ವೆಂಕಿ ಬಂದಾಗ ಇಬ್ಬರು ಪಾರ್ಕಗೆ ಹೋಗಿ ಮಾತನಾಡಿಕೊಳ್ತೀವಿ. ನಂತರ ವೆಂಕಿನೆ ಹೇಳಿದ, “ ನಿನ್ನ ದನಿ ಗಟ್ಟಿ ಮರಾಯ, ನಿನಗೆ ಮೆತ್ತಗೆ ಮಾತನಾಡಲು ಬರಲ್ಲ” ಎಂದು ನನ್ನ ಸೊಸೆಯ ಪರ ವಹಿಸಿ ಮಾತನಾಡಿದ. ಮೊದಲಿಂದಲೂ ಅವ ಅಷ್ಟೆ, ನಾನೇನಾದರು ಸೊಸೆ ಬಗ್ಗೆ ಹೇಳಿದರೆ, “ ನೀನು ಪುಣ್ಯವಂತ, ಇಂತಹ ಸೊಸೆ ಪಡೆಯಲು ಪುಣ್ಯ ಮಾಡಿರಬೇಕು “ ಎಂದು ಹೇಳುತ್ತಿರುತ್ತಾನೆ.

ನಾನೇನು ಸುಮ ಕೆಟ್ಟವಳು ಎಂದು ಹೇಳಿರಲೇಇಲ್ಲ, ಎಂದು ಸೊಸೆ ಬಗ್ಗೆ ಯೋಚಿಸುತ್ತಾ ಕುಳಿತರು.
ಅವಳು ಯಾವಾಗಲೂ ಹಾಗೆ ಏನಾದರು ಹೇಳುತ್ತಿರುತ್ತಾಳೆ, ಅದರಲ್ಲು ಗಟ್ಟಿಯಾಗಿ ಕೂಗುತ್ತಾಳೆ. ವೆಂಕಿ ಮನೆಗೆ ಬಂದಾಗ ಅವಳ ಮಾತುಗಳನ್ನು ಕೇಳಿ ನಗುತ್ತಿರುತ್ತಾನೆ, “ ನಿನ್ನ ಸೊಸೆ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ ಮರಾಯ” ಎಂದು ಹೇಳುತ್ತಿರುತ್ತಾನೆ ಎಂದು ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡರು ರಾಯರು.

ಹೀಗೆ ಒಂದು ದಿನ. ನನಗೆ ಅಸಿಡಿಟಿ ಜೋರಾಗಿತ್ತು. ಅಂದು ವೆಂಕಿ ಬಂದಿದ್ದ. ಹೀಗೆ ಮಾತನಾಡುತ್ತಾ ಕುಳಿತಿದ್ದೆವು. ಹೊಟ್ಟೆಯೆಲ್ಲ ಗುಡುಗುಡು ಅನ್ನುತ್ತಿತ್ತು. ಹೂನ್ಸು ಬಿಡಬೇಕು. ಬಿಡಲು ನಾಚಿಕೆ. ವೆಂಕಿ ಇದ್ದಾನೆ ಅಂತ ಅಲ್ಲ. ನಾನು ವೆಂಕಿಯ ಮುಂದೆ ಯಾವ ಮುಲಾಜಿಲ್ಲದೆ ಬಿಡುತ್ತೇನೆ. ನಂತರ ಅದರ ಬಗ್ಗೆನೆ ಮಾತನಾಡುತ್ತಾ ನಗುತ್ತಿರುತ್ತೇವೆ. ಆದರೆ ಅಲ್ಲೆ ಸೊಸೆ ಕೂತು ಟಿವಿ ನೋಡುತ್ತಿದ್ದಾಳೆ. ಆದರು ಧೈರ್ಯ ಮಾಡಿ ಬಿಟ್ಟೆ. ಆ ಶಬ್ದದಲ್ಲೆ ಏನೋ ಹೆಚ್ಚುಕಮ್ಮಿ ಆದದ್ದು ಗೊತ್ತಾಯಿತು, ಪುರ್ ಎನ್ನುವ ಸದ್ದು ಚಿರ್ ಎಂದಾಗಲೇ ಎನೋ ಭಯ ಆಯಿತು. ನಿಧಾನಕ್ಕೆ ಪಂಚೆ, ಕೂತ ದಿವಾನ ಒದ್ದೆ ಆದಂತೆ ಅನುಭವ, ಎದ್ದು ನೋಡಲು ಭಯ. ಸುಮ ಕೂತಲಿಂದ ಎದ್ದಳು, “ ಮಾವಯ್ಯ ಏಳಿ” ಎಂದಳು. ದಿವಾನಕ್ಕೆ ಹಾಸಿದ್ದ ಬಟ್ಟೆಗೆ ಹಳದಿ ಕಲೆ. ದಿವಾನದ ಬಟ್ಟೆಯನ್ನು ಬಕೀಟಲ್ಲಿ ನೆನಸಿ ಇಟ್ಟಳು. ದಿವಾನವನ್ನು ಬಿಸಿಲಿಗೆ ಹಾಕಿದಳು. ನಾನು ಬೆಪ್ಪನಂತೆ ನಿಂತಿದ್ದೆ, ನಾಚಿಕೆಯಿಂದ ಮುದುಡಿದ್ದೆ. ವೆಂಕಿನೂ ಏನು ಹೇಳದೆ ಸುಮ್ಮನೆ ಕೂತಿದ್ದ, ಹೀಗೆ ಐದು ನಿಮಿಷ ಕಳೆದಿರಬಹುದು. “ ಬಟ್ಟೆ ಒಗೆಯಲು ಹಾಕಿ ಸ್ನಾನ ಮಾಡಿ ಮಾವ, ನೀರು ಬಿಸಿಯಾಗಿದೆ” ಎಂದಳು. ಮರು ಮಾತಿಲ್ಲದೆ ಅನುಸರಿಸಿದೆ. ಲೂಸ್ ಮೊಶನ್ ಆಗಿತ್ತು. ಜೊತೆಗೆ ಅಸಿಡಿಟಿ ಬೇರೆ. ನೀರು ನೀರಾದ ಕಕ್ಕ. ಸ್ನಾನ ಆದ ಮೇಲು ನಾಕು ಬಾರಿ ಹೋಗಿ ಬಂದೆ. ಹೂನ್ಸು ಹೊರ ಹೋಗುವ ನೆಪದಲ್ಲಿ ಚೂರು ಚೂರೇ ಕಕ್ಕ ಅಸರುತ್ತಿತ್ತು. ಅವಳು ಬಂದು ಮಾತ್ರೆ ಕೊಟ್ಟಳು. ಅರ್ಧ ಗಂಟೆ ನಂತ್ರ ಎಲ್ಲಾ ಸರಿಯಾಯ್ತು.

ವೆಂಕಿ ಅಲ್ಲೆ ಕೂತಿದ್ದ. ಏನು ಮಾತೆ ಆಡದೆ ಟಿವಿ ನೋಡುತ್ತಿದ್ದ. ಅವಳು ಸುಮ್ಮನೆ ಇದ್ಲು. “ವೆಂಕಿ ಸ್ವಲ್ಪ ಗಜಿಬಿಜಿ ಆಯ್ತು ಮರಾಯ” ಎಂದು ನಕ್ಕೆ. ಸುಮ ಕೂಗಾಡಿದಳು “ ಗಜಿಬಿಜಿ ಅಂತೆ … ಏನ್ ಗಜಿಬಿಜಿ. ನಿನ್ನೆನೆ ಹೇಳಿದ್ದೇ ಆಲೂ ಬೋಂಡ ತಿನ್ಬೇಡಿ ಅಂತ ಕೇಳ್ಲಿಲ್ಲ ನೀವು, ಇನ್ನೊಮ್ಮೆ ಹಾಕ್ಸಕೊಂಡು ತಿಂದ್ರಿ, ಮುಂಚೆನೆ ನಿಮ್ಗೆ ಇತ್ತಲ್ವಾ ಗ್ಯಾಸು. ಈಗ ಇನ್ನು ಜಾಸ್ತಿ ಆಯ್ತು, ನಿಮ್ಮ ಮಗ ಬರ್ಲಿ, ಅವ್ನು ಹೇಳಿದ್ರೆ ನೀವ್ ಕೇಳ್ತಿರ, ನನ್ ಮಾತು ಎಲ್ ಕೇಳ್ತಿರಾ” ಎಂದಳು. ವೆಂಕಿ ನಗಾಡುತ್ತಿದ್ದ. ವೆಂಕಿ ಹತ್ತಿರ ತಿರುಗಿ, “ನೋಡಿ ಅಂಕಲ್ ನೀವೇ ಹೇಳಿ, ವರ್ಷ ಆಯಿತು ಅವ್ರಿಗೆ ಶುಗರ್ ಇದೆ, ಈಗ ಅಸಿಡಿಟಿ ಕೂಡ ಇದೆ. ಪಥ್ಯ ಮಾಡಲ್ಲ. ನಾನು ಅವ್ರ ಒಳ್ಳೆದಕ್ಕೆ ಹೇಳ್ತಿನಿ, ಕೇಳಲ್ಲ, ನಿನ್ನೆ ಎಂಗೆಜ್ಮೆಂಟಿಗೆ ಹೋದಾಗ ಎರೆಡು ಸಲ ಬೋಂಡ ಹಾಕ್ಸಕೊಂಡು ತಿಂದ್ರು. ನಂತರ ಮತ್ತೆ ಕಿಚನ್ನಿಗೆ ಹೋಗಿ ಕೇಳಿ ತಿಂದರು, ನೋಡ್ಕೊಳೋಕೆ ನಾವ್ ಇದ್ದಿವಿ ಅಂತನೇ ಆರೋಗ್ಯದ ಬಗ್ಗೆ ಸಸಾರ ಇವರಿಗೆ” ಎಂದಳು. ಅವತ್ತೆ ವೆಂಕಿ ಹೋಗುವಾಗ ಹೇಳಿದ್ದು “ ನಿನ್ ಸೊಸೆ ನಿನ್ನ ಚೆನ್ನಾಗಿ ನೋಡ್ಕೊಳ್ತಾಳೆ, ನನ್ಗೆ ಆ ಬಾಗ್ಯ ಇಲ್ಲ. ಪಟ್ ಅಂತ ಹೋಗ್ಬೇಕು ನಾನು”. ವೆಂಕಿಗೆ ಅದೇನು ಭಾದೆ ಸರಿಯಾಗಿ ಬಾಯಿಬಿಟ್ಟು ಹೇಳುವುದೇ ಇಲ್ಲ ಎಂದು ಅಂದುಕೊಳ್ಳುತ್ತಾ, ಸೊಸೆಯನ್ನು ಮಾತನಾಡಿಸಿದರು,

“ವೆಂಕಿ ಈ ಭಾನುವಾರ ಬರ್ತಿನಿ ಅಂದಿದ್ದ ಇನ್ನು ಯಾಕೆ ಬಂದಿಲ್ಲ ಅಂತ ನಿಂಗೆ ಗೊತ್ತಾ?”
“ಇಲ್ಲ, ನಿಮ್ಮ ಫ್ರೆಂಡು ತಾನೆ ನಿಮಗೆ ಗೊತ್ತಿರ್ಬೇಕಿತ್ತು, ಇನ್ನು ಹನ್ನೊಂದು ಅಷ್ಟೆ ಸಂಜೆ ಬರಬಹುದು ಬಿಡಿ”
“ಇಲ್ಲ, ಬೆಳಗ್ಗೆ ಹತ್ತಕ್ಕೆ ಬರ್ತೀನಿ, ಇಲ್ಲೆ ಸಂಜೆ ತನ್ಕ ಇರ್ತೇನೆ ಮರಯ ಅಂದಿದ್ದ”
“ಅಯ್ಯೊ ಬರ್ತಾರೆ ಬಿಡಿ ಮಾವ, ಯಾಕೆ ಸುಮ್ನೆ ತಲೆ ಕೆಡಿಸ್ಕೊಳ್ತೀರಾ, ಅವ್ರ ಹತ್ರ ಯಾಕೆ ಮೊಬೈಲ್ ಇಲ್ಲ?”
ಎಂಬ ಸುಮಳ ಪ್ರಶ್ನೆಗೆ ರಾಯರು ಉತ್ತರಿಸದೆ ಸೋಫದಲ್ಲಿ ಕುಳಿತು ಯೋಚಿಸತೊಡಗಿದರು.

ಎಷ್ಟು ಬಾರಿ ನಾನೆ ಹೇಳ್ಲಿಲ್ಲ, ಫೋನ್ ತಕೋ ಅಂತ, ಬೇಡ ಅಂತಾನೆ, ಮಗನ ದುಡ್ಡಲ್ಲಿ ಯಾಕೆ, ನಿನ್ನದೆ ಪೆನ್ಷನ್ ಬರುತ್ತಲ್ವಾ ಅದರಲ್ಲಿ ತಕೋ ಅಂದರೆ, ಬೇಡ ಅಂದ, ಕೊನೆಗೆ ಗೊತ್ತಾಯಿತು ಪೆನ್ಷನ್ ದುಡ್ ಎಲ್ಲ ಮಗನಿಗೆ ಹೋಗುವ ಹಾಗೆ ಮಾಡಿದ್ದಾನಂತೆ, ಅವನ ಹಣದಲ್ಲಿ ಅವನಿಗೆ ಕೇಳಲು ಮುಜುಗರ, ಅವನ ಮಗನಿಗೆ ಗೊತ್ತಾಗೋದು ಬೇಡ್ವಾ, ಅವನು ದುಡಿತಿದ್ದಾನೆ, ಅದರಲ್ಲು ಅಪ್ಪನ ಹಣ ಕೇಳೋದು ತಪ್ಪು ಅಂತ. ಇರಲಿ ಇದೆಲ್ಲ ನನಗ್ಯಾಕೆ, ಅವರವರ ಮನೆ ಸುದ್ದಿ ಅವರಿಗೆ. ಗೆಳೆಯ ಅಂತ ಜಾಸ್ತಿ ನಾನು ಕೆದಕಿ ಮಾತನಾಡುವುದು, ಸಲಹೆ ಕೊಡುವುದು ಸರಿಯಲ್ಲ ಎಂದು ಸುಮ್ಮನಾದರು, ಮತ್ತೊಮ್ಮೆ ಬಾಗಿಲು ತೆರೆಯಲು ಹೋದಾಗ, ಧೂಳು ಬರುತ್ತೆ ಅಂತ ಹೇಳಿದ ಸೊಸೆ ಮಾತು ನೆನಪಾಗಿ, ಕಿಟಕಿ ಇಣುಕುತ್ತಾ ಅಲ್ಲೆ ನಿಂತು ಕೊಂಡರು.

ಇವಳು ಹೋದ ತುಂಬ ದಿನ ನಾನು ಮಂಕಾಗಿದ್ದೆ. ಆಗ ಇವನು, ಹಳೆ ಪರಿಚಯ, ಜೊತೆಗೆ ಒಂದಿಷ್ಟು ವರ್ಷ ಕೆಲಸ ಮಾಡಿದ ನೆಪ, ಒಂದೆರೆಡು ಬಾರಿ ಮಾತಾಡಿಸಿಕೊಂಡು ಹೋಗಿದ್ದ. ಅಲ್ಲಿ ತನಕ ಅವನು ಗೊತ್ತು ಅಷ್ಟೆ, ಆದರೆ ಪ್ರತಿಬಾರಿ ಭೇಟಿ ಆಗುವಷ್ಟು ಒಡನಾಡಿಗಳಲ್ಲ. ʻಮಗ ಇಲ್ಲೆ ಮನೆ ಮಾಡಿದ್ದಾನೆ ಬಸ್ಸಿನಲ್ಲಿ ಬಂದರೆ ಮೂರು ಸ್ಟಾಪ್ ದೂರ ಅಷ್ಟೆʼ ಎಂದು ಮಾತನಾಡಿಸಿಕೊಂಡು ಹೋಗಿದ್ದ. ಸಂಬಂಧಿಕರು ಯಾರು ಹೀಗೆ ಕರುಣೆ ತೋರಿಸಲಿಲ್ಲ. ಇವನ ನಡವಳಿಕೆಯಿಂದ ಮನದುಂಬಿ ಬಂದಿತ್ತು. ಆಗ ಹೇಳಿದ್ದ ಎರೆಡು ವರ್ಷದ ಹಿಂದೆ ಇವಳ ಹೆಂಡತಿ ಕೂಡ ತೀರಿಕೊಂಡಿದ್ದಳಂತೆ, ʻನಾವೆಷ್ಟಾದರೂ ಹೆಂಡತಿ ಜೊತೆ ಜಗಳ ಆಡಬಹುದು, ಖುಷಿಯಿಂದ ಇರಬಹುದು. ಆದರೆ ಈ ವೃದ್ಯಾಪ್ಯದಲ್ಲಿ ಒಂಟಿಯಾಗಿ ಇರುವುದು ಕಷ್ಟ. ʼ

ʻಯಾಕೆ ಕಷ್ಟ ಅಂತ ಗೊತ್ತಿಲ್ಲ ನೋಡು, ಜೊತೆಗೆ ಒಬ್ಬಳು ನನ್ನ ನೋಡಿಕೊಳ್ಳಲು ಇರ್ತಾಳೆ ಅಂತ ಧೈರ್ಯ, ಅವಳಿಗೇನು ಬಾರಿ ಶಕ್ತಿಯಿದೆ ಅಂದಲ್ಲ, ಆದರೂ ಜೊತೆಗೊಬ್ಬರು ಇದ್ದಾರೆ ಅಂತ ಧೈರ್ಯ. ಮಗ ಇದ್ದಾನೆ, ಸೊಸೆ, ಮೊಮ್ಮಕ್ಕಳು ಇದ್ದಾರೆ. ಆದರೆ ವರ್ಷ ಕಳೆಯುತ್ತಾ ಮಕ್ಕಳು ಬದಲಾಗುತ್ತಾರೆ ಮರಯ, ನಾವು ಎತ್ತಿ ಆಡಿಸಿದ ಮಕ್ಕಳು ಹಾಗೆ ಇರುವುದಿಲ್ಲ, ಅವರ ಸಂಸಾರ ಅಂತ ನಮ್ಮನ್ನು ಮರೆತು ಬಿಡುತ್ತಾರೆ. ಹಾಗೆ ನೋಡಿದರೆ ನೀನೇ ಅದೃಷ್ಟವಂತʼ
ನಂತರ ಭೇಟಿ ಹೆಚ್ಚುತ್ತಲೆ ಹೋಯಿತು. ನನ್ನ ಮಗ ಸೊಸೆ ಕೂಡ ಸಂತೋಷದಿಂದ ಮಾತನಾಡಿಸುವರು. ತಾನು ಬರ್ತೀನಿ, ಬರಲ್ಲ ಅಂತ ಸೊಸೆ ಫೋನಿನಲ್ಲೆ ಕಾಲ್ ಮಾಡಿ ತಿಳಿಸುತ್ತಿದ್ದ. ನಾನು ಕೂಡ ಅತಿ ಅಗತ್ಯ ಬಂದಾಗ ಅವನ ಸೊಸೆಗೆ ಕಾಲ್ ಮಾಡಿ ಮಾತನಾಡಿಸುತ್ತೀನಿ. ನಾನು ಕಾಲ್ ಮಾಡುವುದೇ ಕಡಿಮೆ, ಬೇರೆಯವರ ಕಾಲ್ ಬಂದರೆ ಅವನ ಸೊಸೆಗೆ ತೊಂದರೆಯಾಗುತ್ತೆ ಅಂತ ಕಾಲ್ ಮಾಡುವುದು ಹೆಚ್ಚು ಕಮ್ಮಿ ನಿಲ್ಲಿಸಿದ್ದೆ.
ಒಟ್ಟಿಗೆ ಕೆಲಸ ಮಾಡಿದ್ವಿ, ಆ ಕಾಲದಲ್ಲಿ ಮನೆ ಸಂಸಾರ ಅಂತ ಮಾತುಕತೆ ತೀರ ಕಡಿಮೆ. ತದನಂತರ ಹೆಂಡತಿ ಕಳಕಂಡ ಈ ಮುದುಕರಿಬ್ಬರು ಕಷ್ಟ ಸುಖ ಹಂಚಿಕೊಳ್ಳಲು ಒಂದು ಸೇರುತ್ತಿದ್ದೆವು.

ʻಏನಾಯ್ತಪ್ಪ, ಯಾಕಿಲ್ಲಿ ನಿಂತಿದ್ದಿರಿ” ಎಂದು ಸಾಮಾನು ತೆಗೆದುಕೊಂಡು ಬಂದ ಮಗ, ರಾಯರನ್ನು ಕೇಳಿದ.
ʻವೆಂಕಿ ಬರ್ತಾನೆ ಅಂತ ಹೇಳಿದ್ದ, ಇನ್ನು ಬಂದಿಲ್ಲʼ ಎಂದರು ರಾಯರು.
“ಬರ್ತಾರೆ ಬಿಡಿ ಅಪ್ಪ, ಅದಿರಲಿ ಇಷ್ಟು ವರ್ಷ ಆಯ್ತು, ನೀವ್ಯಾಕೆ ಅವ್ರ ಮನೆಗೆ ಹೋಗಿಲ್ಲʼ ಎಂದು ಕೇಳಿದ ಮಗರಾಯ.
ಅದಕ್ಕೆ ರಾಯರೇನು ಹೇಳಿಯಾರು. ಹೇಳದೆ ಸುಮ್ಮನಿದ್ದರು. ಕೆಲ ಘಟನೆಗಳು ಹಂಚಿಕೊಳ್ಳಲು ಕಹಿ ಅನ್ನಿಸುತ್ತವೆ
ಅವನ ಮನೆಗೆ ನಾ ಹೋಗಿಲ್ಲವಾ, ಹೋಗಿದ್ದೆ, ಆ ದಿನದಿಂದ ನನಗೆ ನನ್ನ ಮಗ ಸೊಸೆ ಮೇಲೆ ಗೌರವ, ಪ್ರೀತಿ ಜಾಸ್ತಿಯಾಗಿದ್ದು, ಎಂದು ಆ ದಿನದ ಘಟನೆಯನ್ನು ಮೆಲುಕು ಹಾಕತೊಡಗಿದರು ರಾಯರು.

ಮನೆ ದೊಡ್ಡದಿತ್ತು, ಅಡುಗೆಗೆ, ಕ್ಲೀನಿಂಗಿಗೆ ಅಂತ ಪರ್ಮನೆಂಟು ಜನ ಇದ್ದಾರೆ, ಮೊಮ್ಮಕ್ಕಳು ಶಾಲೆಗೆ ಹೋಗಿದ್ದಾರೆ, ಮಗ ಕೆಲಸಕೆ ಹೊರಗೆ ಹೋಗಿದ್ದಾನೆ, ಸೊಸೆಯೂ ಕೆಲಸ ಮಾಡುತ್ತಾಳಂತೆ, ವರ್ಕ ಫ್ರಂ ಹೋಂ ಅಂತೆ, ಕಂಪನಿಯವರು ಇನ್ನು ಆಫೀಸಿಗೆ ಕರೆದಿಲ್ಲವಂತೆ. ರೂಂಮಿನಲ್ಲಿ ಕೂತು ಕೆಲಸ ಮಾಡುತ್ತಿರುತ್ತಾಳೆ. ಅಂದು ನಾ ಬಂದದ್ದು ಅವಳಿಗೆ ಗೊತ್ತಾದ ಹಾಗಿಲ್ಲ, ರೂಮಿನಿಂದ ಹೊರ ಬಂದೆ ಇಲ್ಲ. ಕೆಲಸದವಳೆ ಕಾಫಿ, ತಿಂಡಿ ಕೊಟ್ಟಳು. ಮಾತನಾಡಿದೆ. ಬಂದೆ. ಆ ಮೌನ ಮನ ಹಿಂಡುತ್ತಿತ್ತು.

ʻಮಂಜುಳ ಇದ್ದಾಗಲೂ ಹೀಗೆ ಮರಾಯ. ಆದರೆ ಅವಳಿದ್ದಳು ಏನೋ ಮಾತನಾಡುತ್ತಿದ್ದೆವು, ಮೊಮ್ಮಕ್ಕಳು ಸಣ್ಣವರು ಹೇಗೋ ದಿನ ಹೋಗುತ್ತಿತ್ತು. ಲಾಕ್ ಡೌನ್ ಅಂತು ಬಹಳ ಹಿಂಸೆ. ಒಬ್ಬೊಬ್ಬರು ಒಂದು ರೂಮಿನಲ್ಲಿ. ಅದೇನೊ ಆ ಸಮಯದಲ್ಲಿ ಗ್ರಾಚಾರ ಸರಿಇರಲಿಲ್ಲ ಏನೋ, ಎದೆ ನೋವು ಎಂದಳು, ಆಸ್ಪತ್ರೆಗೆ ಕರೆದುಕೊಂಡು ಹೋದೆವು, ಆ ರೂಲು, ಈ ರೂಲು ಅಂತ ಪೇಷೆಂಟ್ನ ಮಾತ್ರ ಒಳಗೆ ಕರೆದುಕೊಂಡರು. ಜೊತೆಗೆ ಒಬ್ಬರು ಎಂತ ಹೇಳಿದ್ದಕ್ಕೆ ಮಗ ಅಲ್ಲಿ ಉಳಿದ, ಏನೋ ಹೇಳಿದ್ರು, ಕೋವಿಡ್ ಅಂತೆ. ನೋಡಲು ಬಿಡಲ್ಲ ಅಂದ್ರು. ವಾರ ಆಯ್ತು, ಸೀರಿಯಸ್ ಅಂದ್ರು, ಮತ್ತೆರೆಡು ದಿನಕ್ಕೆ ಹೋದ್ರು ಎಂದ್ರು. ಹೆಣ ಕೊಡಲ್ಲ ಎಂದ್ರು. ಅವಳಿಗೆ ಏನಾಯ್ತು ಅಂತ ಗೊತ್ತೇ ಆಗಿಲ್ಲ ನಂಗೆ. ಅವಳಿಲ್ಲ ಅಂತ ಹೇಳಿದ್ದನ್ನು ನಂಬೊಕೆ ಆಗಿಲ್ಲ. ಹತ್ತು ದಿನದ ಹಿಂದೆ, ಎದೆನೋವು, ಹಾಸ್ಪಿಟಲ್ಗೆ ಹೋಗಿ ಬರತ್ತೀನಿ ಅಂದವ್ಳು ಬರ್ಲೇ ಇಲ್ಲ. ಹೆಣ ನೋಡುಕು ಆಗಿಲಿಲ್ಲ ಮರಯʼ ಎಂದು ಅಂದು ಹೇಳಿದ್ದ. ʻ ಆಗ ನೋಡು ನನಗೆ ಅರಿವಾಗಿದ್ದು ಈ ಮಾತಿಲ್ಲದ ಮೌನದ ಬದುಕು ಕಷ್ಟ ಅಂತ. ದಿನಗಳು ನಿಧಾನ ಹೋಗುತ್ತಿವಿ ಅಂತ ಅನ್ನಿಸಿತು. ಅವಳ ಕಾರ್ಯ ಸರಿಯಾಗಿ ಮಾಡಲಾಗಲಿಲ್ಲ ಎಂಬ ನೋವು ಬೇರೆ ಕಾಡುತ್ತಿರುತ್ತದೆ. ಅದಕ್ಕೆ ಇವನಿಗೆ ಹೇಳಿದೆ ನೋಡು, ನಾ ಹೋದರೆ ಎಲ್ಲರನ್ನು ವೈಕುಂಠ ಸಮಾರಧನೆಗಾದರು ಕರಿಯಲೇಬೇಕು ಅಂತ. ಸರಿಯಾಗಿ ಕಾರ್ಯಮಾಡು ಅದೇ ನನ್ನ ಹಾರೈಕೆ ಎಂದು ಬಿಟ್ಟೆ. ನನ್ನ ಬಳಗದವರ ಹೆಸರು ವಿಳಾಸವನ್ನೆಲ್ಲಾ ಬರೆದು ಕೊಟ್ಟಿದ್ದೇನೆ ಮರಯ, ಇವನಿಗೆ ಕೆಲಸ, ಹಣ ಬಿಟ್ಟು ಬೇರೇನು ಗೊತ್ತೇ ಇಲ್ಲʼ ಎಂದು ಮಾರ್ಮಿಕವಾಗಿ ನುಡಿದಿದ್ದ.

ಅಂದಿನಿಂದ ನಾನು ನನ್ನ ಮಗ ಸೊಸೆಯ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸತೊಡಗಿದೆ. ಮಾತು ಗಟ್ಟಿಯಾದರು ಆ ಮಾತಿನಲ್ಲಿ ನನ್ನ ಮೇಲಿನ ಕಾಳಜಿ ಕಾಣಿಸುತ್ತಿತ್ತು. ಎಂದು ಅಂದುಕೊಂಡರು.
ಸಂಜೆಯಾಯಿತು. ವೆಂಕಿ ಬರಲೇ ಇಲ್ಲ.

*

ಹೀಗೆ ದಿನಗಳೆರೆಡು ಕಳೆಯಿತು ರಾಯರ ಚಡಪಡಿಕೆ ಹೆಚ್ಚಾಯಿತು. ನಾಕು ಬಾರಿ ಸೊಸೆ ಹತ್ತಿರ ಕೇಳಿದರು, ʻವೆಂಕಿದು ಏನಾದರು ಕಾಲ್ ಬಂತಾʼ, ಹಾಗೆ ಕೇಳಿ ಬೈಸಿಕೊಂಡರು ಕೂಡ.

ಹೊರಹೋಗಿ ನೋಡಿದರು. ಮನೆಯ ಗೇಟ್ ಬಳಿ ಪೋಸ್ಟ್ ಬಿದ್ದಿತ್ತು. ತಮ್ಮದೆ ಹೆಸರಿಗೆ ಬಂದದ್ದು ಎಂದು ಅದನ್ನು ತೆಗೆದುಕೊಂಡು ಒಳನಡೆದರು. ಯಾರದ್ದು ವೈಕುಂಠ ಸಮಾರಾಧನೆಯ ಕಾರ್ಡು ಎಂದು ಅದನ್ನು ಬದಿಗಿಟ್ಟರು. ʻಬರಿ ಸಾವಿನ ಸುದ್ದಿ, ಯಾರು ಹೋದರೋ ಪುಣ್ಯತ್ಮರು ʼ ಎಂದು ಹೆಸರು ಓದಿದರು
ʻವೆಂಕಟರಮಣ ಜೋಯಿಸʼ
ಒಂದು ನಮೂನೆಯ ದುಃಖ, ಬೇಸರ ಆಯಿತು. ಗಂಟಲು ಕಟ್ಟಿ ಬಂತು, ಕಾರ್ಡು ಪೂರ ಓದಿ ಅಂದರು,
ʻವೆಂಕಿ ಇನ್ನು ಬರುವುದೇ ಇಲ್ಲʼ

-ಸುವ್ರತಾ ಅಡಿಗ ಮಣೂರು

ಕನ್ನಡದ ಬರಹಗಳನ್ನು ಹಂಚಿ ಹರಡಿ
4.2 6 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಶುಭಲಕ್ಷ್ಮಿ ನಾಯಕ
ಶುಭಲಕ್ಷ್ಮಿ ನಾಯಕ
2 months ago

ಅರ್ಥಪೂರ್ಣ, ಹೌದು ಬಾರದ ಲೋಕಕ್ಕೆ ವೆಂಕಿ ಹೋಗೇಬಿಟ್ಟರು. ಓದಿಸಿಕೊಂಡು ಹೋಗುವ ಕತೆ ಸುವ್ರತಾರವರೆ.

1
0
Would love your thoughts, please comment.x
()
x