ಕಲಿಕೆಯೋ ನರಳಿಕೆಯೋ !? ಜಿಜ್ಞಾಸೆ: ಡಾ. ಹೆಚ್ ಎನ್ ಮಂಜುರಾಜ್

ಕಲಿಕೆ ನಿರಂತರ ಎಂಬ ಮಾತನ್ನು ಎಲ್ಲರೂ ಬಲ್ಲೆವು. ಆದರೆ ಯಾವುದು ಕಲಿಕೆ? ಯಾವುದು ಅಲ್ಲ? ಎಂಬುದನ್ನು ತಿಳಿಯುವುದು ಕಷ್ಟವೇ. ಇದು ಒಬ್ಬರಿಂದ ಒಬ್ಬರಿಗೆ ಬೇರೆಯೇ ಆಗುವಂಥದು. ನಂಬಿಕೆ ಮತ್ತು ಮೂಢನಂಬಿಕೆಗಳ ವಿಚಾರದಂತೆ. ‘ನನ್ನದು ಮಾತ್ರ ವೈಜ್ಞಾನಿಕ ಮನೋಭಾವ, ಉಳಿದವರದು ಕೇವಲ ನಂಬಿಕೆ’ ಎಂಬ ಅಹಂಭಾವ ಬಹುತೇಕರದು. ಕೆಲವರು ಇನ್ನೂ ಮುಂಬರಿದು ‘ಅವರದು ಮೂಢನಂಬಿಕೆ’ ಎಂದು ಜರಿಯುವರು. ವಿಚಾರವಾದಿಗಳ ವರಸೆ ಇದು. ಇನ್ನೊಬ್ಬರನ್ನು ಮತ್ತು ಇನ್ನೊಂದನ್ನು ಹೀನಾಯವೆಂದು ಪರಿಗಣಿಸುವುದೇ ಮಾನವತೆಗೆ ಮಾಡುವ ದ್ರೋಹ. ತಮ್ಮಂತೆಯೇ ಇತರರೂ ಇರಬೇಕೆಂಬ ಹಕ್ಕೊತ್ತಾಯವೇ ಇದರ ಮೂಲ. ಹೀಗಾಗಿ ನಂಬಿಕೆ, ಅಪನಂಬಿಕೆ, ಮೂಢನಂಬಿಕೆಗಳ ವ್ಯಾಖ್ಯಾನ ಅಷ್ಟು ಸುಲಭವಲ್ಲ. ‘ದೇವರು ಎಂಬುದು ನಂಬಿಕೆ; ಆದರೆ ನಾನೇ ದೇವರು ಎಂಬುದು ಮೂಢನಂಬಿಕೆ ಎಂದರು ಒಬ್ಬ ಪ್ರಾಜ್ಞರು.’ ಅಂದರೆ ನನ್ನ ತಪ್ಪುಗಳಿಗೆ ವಕೀಲನಾಗಿಬಿಡುವೆ; ಆದರೆ ಪರರ ತಪ್ಪುಗಳಿಗೆ ನ್ಯಾಯಾಧೀಶನಾಗುವೆ! ಹೀಗೆ ಮನುಷ್ಯ ಮೂಲತಃ ವಿತಂಡವಾದಿ! ಇದರಿಂದ ಹೊರ ಬರಲು ಯಾವುದು ಕಲಿಕೆ? ಎಂಬುದನ್ನು ತಿಳಿಯಬೇಕು. ಎಷ್ಟೋ ಬಾರಿ ನಮ್ಮದಲ್ಲದ ಮತ್ತು ನಮಗೆ ಸರಿ ಹೊಂದದ ಕಲಿಕೆಗಳನ್ನು ಅರ್ಧದಲ್ಲೇ ಕೈ ಬಿಟ್ಟು, ಸುಮ್ಮನಾಗಬೇಕು. ಕಾಲಾ ನಂತರ ಅಂಥವನ್ನು ನೆನಪಿಸಿಕೊಂಡರೆ ಆಗ ನಮಗೆ ಎಂಥ ತೆವಲಿತ್ತು !? ಎಂದು ನಮ್ಮೊಳಗಿಗೇ ಅಚ್ಚರಿಯಾಗುವಷ್ಟು! ಆಧುನಿಕ ಶಿಕ್ಷಣ ಪದ್ಧತಿ ಮತ್ತು ಕ್ರಮಗಳು ವಿಚಿತ್ರ ಮತ್ತು ಅಹಂಕಾರ ಪೋಷಕ. ಏಕ ಮನೋಧರ್ಮದ ಶಿಕ್ಷಣವನ್ನು ಬಲವಂತವಾಗಿ ಇಷ್ಟವಿರಲಿ, ಇಲ್ಲದಿರಲಿ ಹೇರುವುದು ಇದರ ಲಕ್ಷಣ.

ನಾವೆಲ್ಲ ಒಂದೇ ರೀತಿಯಲ್ಲಿ ಬದುಕಲಾರೆವು. ನಂನಮ್ಮ ಹುಟ್ಟು, ಪರಿಸರ, ಪೋಷಕರು, ಮನೆತನ, ವಂಶ, ಕುಲ, ಊರು, ಸುತ್ತಮುತ್ತಲಿನ ವಾತಾವರಣ, ಲಭಿಸುವ ನೆರೆಹೊರೆ, ವಿಶ್ವಾಸವಿಡುವ ಸ್ನೇಹ ಸಮೂಹ, ಸಂಪ್ರದಾಯ, ಆಚರಣೆ, ಪದ್ಧತಿಗಳು ಇವೆಲ್ಲವೂ ನಮ್ಮ ಮೇಲೆ ಖಂಡಿತ ಪ್ರಭಾವ ಬೀರಿಯೇ ಇರುತ್ತವೆ. ಹೀಗಾಗಿ ಪ್ರತಿ ಒಬ್ಬರೂ ವಿಭಿನ್ನ ಮತ್ತು ವಿಶೇಷ. ನಾವು ಒಂದೇ ರೀತಿ ವಿಚಾರ ಮಾಡುವುದಿಲ್ಲ; ಏಕೆಂದರೆ ನಾವು ಜ಼ೆರಾಕ್ಸ್ ಪ್ರತಿಗಳಲ್ಲ. ವೈವಿಧ್ಯವೇ ಈ ಸೃಷ್ಟಿಯ ಸ್ವರೂಪ. ಅಂದ ಮೇಲೆ ನಂನಮ್ಮ ಆಹಾರ ಪದ್ಧತಿ, ಉಡುಗೆ ತೊಡುಗೆ, ಭಾಷೆ, ಭಾವ, ಅಭಿವ್ಯಕ್ತಿ ಎಲ್ಲವೂ ವಿವಿಧತೆಗಳ ಮೇಲೆಯೇ ಅವಲಂಬಿತ. ಹಾಗಿದ್ದ ಮೇಲೆ ಒಂದೇ ರೀತಿ ಶಿಕ್ಷಣವೇಕೆ? ಎಂಬ ಪ್ರಶ್ನೆ ಏಳುವುದು ಸಹಜ. ಏಕೆಂದರೆ ಇದು ಸುಲಭ ಮತ್ತು ಇದರ ನಿರ್ವಹಣೆ ಸಲೀಸು ಅದಕ್ಕಾಗಿ. ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಪ್ರತಿ ಕಲಿಕಾರ್ಥಿಯ ಆಸಕ್ತಿ, ವೃತ್ತಿಪರತೆ ಮತ್ತು ಸೃಷ್ಟಿಶೀಲ ಪ್ರತಿಭೆಗಳನ್ನು ಪ್ರೋತ್ಸಾಹಿಸಲಾಗುತ್ತಿತ್ತು. ಆಗ ಜನಸಂಖ್ಯೆ ಕಡಮೆ ಇತ್ತು. ಸಮುದಾಯ ಪುಟ್ಟದಿತ್ತು. ಥಿಯರಿ ಮತ್ತು ಪ್ರಾಕ್ಟಿಕಲ್ಲು ಒಂದೇ ಆಗಿತ್ತು. ಈಗ ಹಾಗಲ್ಲ. ಈಗ ಅಂಥ ಸಂಕೀರ್ಣ ಕಲಿಕಾ ವ್ಯವಸ್ಥೆ ಅಸಾಧ್ಯ. ಹಾಗಾಗಿ ನಮ್ಮೀ ಆಧುನಿಕ ಪ್ರಪಂಚದಲ್ಲಿ ನಮ್ಮಿಷ್ಟದ ಬದುಕನ್ನು ರೂಪಿಸಿಕೊಳ್ಳುವಾಗ ವ್ಯವಸ್ಥೆ ಕೇಳುವುದನ್ನು ಮತ್ತು ಕೇಳುವಷ್ಟು ಕಲಿತರೆ ಸಾಕು. ವಿಚಿತ್ರ ಸತ್ಯವೇನೆಂದರೆ, ಎಲ್ಲವನ್ನೂ ಕಲಿಯಬೇಕಾಗಿಲ್ಲ ಎಂದು ಗೊತ್ತಾಗುವುದೇ ಜೀವನ ಒಂದು ಸಮಸ್ಥಿತಿಯಲ್ಲಿ ರೂಪಿತಗೊಂಡ ಮೇಲೆ. No knowledge is wasted ಎಂಬ ಮಾತೊಂದಿದೆ.

ಯಾವ ಜ್ಞಾನವೂ ನಿರರ್ಥಕವಲ್ಲ! ನಮ್ಮಲ್ಲಿ ಆನ್ವಯಿಕ ಪ್ರತಿಭೆ ಮತ್ತು ಅಂತರ್ದೃಷ್ಟಿಗಳಿದ್ದರೆ ವಿಭಿನ್ನ ಜ್ಞಾನಶಾಖೆಗಳನ್ನು ಒಂದುಗೂಡಿಸಿ ಹೊಸದನ್ನು ಕಂಡುಕೊಳ್ಳಲೂ ಬಹುದು ಅಥವಾ ಹೊಸದನ್ನು ಸೃಷ್ಟಿಸಲೂ ಬಹುದು. ಮಾಹಿತಿಯು ತನ್ನಷ್ಟಕೇ ಜ್ಞಾನ ಅಲ್ಲ. ಅದನ್ನು ಅರಿವು ಆಗಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಅಂಥವರೇ ಜ್ಞಾನಿ ಎನಿಸಿಕೊಳ್ಳುತ್ತಾರೆ. ಜ್ಞಾನವೂ ತನ್ನಷ್ಟಕೇ ತಾನಡಗಿರುತ್ತದೆ; ಅದನ್ನು ವಿವೇಕವಾಗಿಸಿಕೊಳ್ಳಬೇಕು. ಈ ವಿವೇಕವೂ ಜಾಸ್ತಿಯಾಗಬಾರದು; ಆಗ ಉಳಿದವರೆಲ್ಲರೂ ಅವಿವೇಕಿಗಳಂತೆ ಭಾಸವಾಗಿ ಬಿಡಬಹುದು. ಇದೇ ಜ್ಞಾನದ ಮರೆವು. ಹಾಗಾಗಿಯೇ ಒಬ್ಬರ ಸಾಧನೆಯು ಇನ್ನೊಬ್ಬರಿಗೆ ನಿರರ್ಥಕ ಮತ್ತು ವ್ಯರ್ಥ ಕಾಲ ಹರಣ ಎನಿಸಬಹುದು. ಇದೆಲ್ಲವೂ ಅಹಮಿನ ಆಟಗಳೇ. ಮೇಲರಿಮೆ (Superiority Complex) ಎಂಬುದು ಕೀಳರಿಮೆ (Infiriority Complex) ಗಿಂತಲೂ ಹೆಚ್ಚು ಅಪಾಯಕಾರಿ. ಕಲಿಕೆ ಮತ್ತು ಜ್ಞಾನಾರ್ಜನೆ ತರುವ ಅನಾಹುತಗಳಲ್ಲಿ ಇದಕ್ಕೆ ಮೊದಲನೆಯ ಬಹುಮಾನ! ಇದಕ್ಕಾಗಿ ಅಕಲಿಕೆ ಬೇಕು. ಇದನ್ನೇ ಡಿಲರ್ನಿಂಗ್ ಎನ್ನುವುದು. ಆಗ ನಮ್ಮ ನೆರವಿಗೆ ಬರುವುದು ವಿವೇಚನೆ, ಔಚಿತ್ಯ ಮತ್ತು ಕಾರುಣ್ಯ. ಜ್ಞಾನವು ತರಬಹುದಾದ ಅಹಮಿನ ನಿರಸನಕ್ಕೇ ಈ ಎಲ್ಲದರ ಧಾರಣೆ. ವಿವೇಕವು ಆನಂದ ತರುವುದರ ಜೊತೆಗೆ ಒಂದೊಮ್ಮೆ ನಮಗರಿವಿಲ್ಲದಂತೆಯೇ ಸೊಕ್ಕನ್ನೂ ತಂದಿಟ್ಟು ಬೀಗುವಂತೆ ಮಾಡಿ ಬಿಡುತ್ತದೆ. ಆಗ ಬೇಕಾಗಿರುವುದು ಈ ವಿವೇಚನ ಮತ್ತು ವಿಚಕ್ಷಣ. ಎಲ್ಲವನ್ನೂ ಎಲ್ಲರನ್ನೂ ಒಂದೇ ತಕ್ಕಡಿಯಲಿಟ್ಟು ತೂಗಬಾರದೆಂಬ ವಿನಯವಂತಿಕೆಯಿದು. ‘ನಾನೇ ಸರಿ; ಉಳಿದವರು ಸರಿ ಇಲ್ಲ’ ಎಂದು ಬೀಗುತ್ತಿರುವ ಮನಕ್ಕೆ ಚಿಕಿತ್ಸೆ ನೀಡುವ ಅವುಷಧಿ. ‘ನೀನು ಸರಿ; ನಾನು ಸರಿಯಿಲ್ಲ’ ಎಂಬುದು ಕೀಳರಿಮೆ. ‘ನಾನೇ ಸರಿ’ ಎಂಬುದು ಮೇಲರಿಮೆ. ‘ನಾನೂ ನೀನೂ ಇಬ್ಬರೂ ಸರಿಯಿಲ್ಲ’ವೆಂಬುದು ದೂರುವ ಮನೋಬೇನೆ. ಹಾಗಾಗಿ ‘ನಾನೂ ನನ್ನಮಟ್ಟಿಗೆ ಸರಿ; ಅವರೂ ಅವರಮಟ್ಟಿಗೆ ಸರಿ. ಆನೆಯ ಭಾರ ಆನೆಗೆ; ಇರುವೆಯ ಭಾರ ಇರುವೆಗೆ’ ಎಂಬುದೇ ಸಮಾಧಾನಚಿತ್ತತೆ. ಇದಕ್ಕೆ ಬೇಕಿರುವುದು ಔಚಿತ್ಯಪ್ರಜ್ಞೆ. ಇದಾದ ಮೇಲೆ ಬೇಕಾಗಿರುವ ಅಂತಿಮ ಸೂತ್ರವೇ ಕಾರುಣ್ಯ. ಇದೇ ಲೋಕದ ಅಲ್ಟಿಮೇಟ್ ಪ್ರ-ಬುದ್ಧ ಮನಸ್ಥಿತಿ. ‘ಕರುಣ ಬಂದರೆ ಕಾಯೋ; ಮರಣ ಬಂದರೆ ಒಯ್ಯೋ; ಕರುಣಿ ಕಲ್ಯಾಣಿ ಬಸವಣ್ಣ ಕಡೆತನಕ ಕಾಯೋ ಅಭಿಮಾನ’ ಎಂಬ ಮೂರು ಸಾಲಿನ ಜನಪದರ ತ್ರಿಪದಿಯಲ್ಲಿ ಇವೆಲ್ಲಾ ಹರಳುಗಟ್ಟಿದೆ. ಇದು ಮಮತೆಯುಳ್ಳ ಘನತೆ! ದೂರುವ, ಬಯ್ಯುವ, ಸಿಡುಕುವ, ಅಳಲುಪಡುವ, ನೋಯುವ, ಹೀನಾಯಗೊಳುವ ಎಲ್ಲವುಗಳಿಂದ ದೂರಾದ ಮೆಚೂರ್ಡ್ಮನೋಧರ್ಮ; ಪಕ್ವತೆ ಎಂದರೆ ಇದೇ.

ನಾನು ಬರುವ ಮೊದಲೂ ನಾನು ಹೋದ ಮೇಲೂ ಈ ಲೋಕ ಹೀಗೆಯೇ! ನನ್ನ ಬಾಳಿನ ಚಂದವನ್ನು ಮನಗಂಡು ಲೋಕದ ಚೆಂದಕ್ಕೆ ಜೊತೆಯಾಗಬೇಕೆಂಬ ಸಕಾರಾತ್ಮಕತೆ. ಇಂಥದು ನಿಜಕಲಿಕೆ. ಅಹಮನ್ನು ಪೋಷಿಸಿ, ನಾನತ್ವವನ್ನು ವಿಜೃಂಭಿಸಿ, ನಾಶಗೈಯುವುದು ಕಲಿಕೆಯಲ್ಲ; ನರಳಿಕೆ! ‘ಬಿಂಕಕ್ಕೆ ಡೊಳ್ಳೀವುದದು ವಿದ್ಯೆಯೆ? ಅವಿದ್ಯೆ! ತವಿಪುದಾವುದೊ ಅಹಂಕಾರಮಂ ಅದು ವಿದ್ಯೆ; ಮಿಕ್ಕುದೆಲ್ಲಂ ಅವಿದ್ಯೆ! ವಿದ್ಯೆಯೆಂಬಾ ಪೆಸರ ಮರೆಯೊಳಾನ್ ಅವಿದ್ಯೆಯಂ ಪೋಷಿಸುವ ಗುರುವಾದೆನಲ್ತೆ!’ ಎಂದು ದ್ರೋಣಾಚಾರ್ಯರು ಕುವೆಂಪು ವಿರಚಿತ ‘ಬೆರಳ್ಗೆ ಕೊರಳ್’ ನಾಟಕಕೃತಿಯಲ್ಲಿ ತನ್ನಂಥ ಸಕಲಗುರುಗಡಣದ ಪರವಾಗಿ ಅಲವತ್ತುಕೊಳ್ಳುತ್ತಾರೆ. ಅರ್ಜುನನೆಂಬ ಹೆಸರಿನ ಗರ್ಜಿನನನ್ನು ಶಿಷ್ಯನನ್ನಾಗಿ ಸ್ವೀಕರಿಸಿದ ತನ್ನ ಹೀನಾಯವನ್ನು ಹಳಿದುಕೊಳ್ಳುತ್ತಾರೆ. ಯಾವುದು ಕಲಿಕೆ? ಎಂಬುದನ್ನು ತಿಳಿಸುವುದರ ಜೊತೆಗೆ ಯಾರಿಗೆ ಕಲಿಸಬೇಕೆಂಬುದಕ್ಕೂ ಇದು ಉತ್ತರವಾಗುತ್ತದೆ. ಇಂಥಲ್ಲಿ ಕಲಿಕೆ ಯಾವುದು? ಎಂದು ತಿಳಿಯುವಂತೆ, ಕಲಿಸುವುದು ಹೇಗೆ? ಎಂಬುದೂ ಮುನ್ನೆಲೆಗೆ ಬರುತ್ತದೆ. ಕಲಿಸುವುದು ಎಂದರೆ ನೋವಾಗದಂತೆ ಮನವರಿಕೆ ಮಾಡುವುದು. ‘ಮನುಷ್ಯರ ಘನತೆಗೆ ಕುಂದುAಟಾಗದAತೆ ಕಲಿಸುವುದು ಸಾಧ್ಯವಿಲ್ಲವೆಂದರೆ ನಿಮಗೆ ಕಲಿಸುವುದು ಗೊತ್ತಿಲ್ಲವೆಂದೇ ಅರ್ಥ’ ಎಂದಿದ್ದಾರೆ ಓಶೋ ರಜನೀಶರು. ಕಲಿತವರಿಗೆ ಹೆಮ್ಮೆ ಮತ್ತು ವಿಶ್ವಾಸ ಮೂಡಬೇಕು; ಕಲಿಸಿದವರಿಗೆ ಧನ್ಯತೆ ಪ್ರಾಪ್ತವಾಗಬೇಕು. ಇದೇ ಕಲಿಸುವಿಕೆಯ ಮರ್ಮ ಮತ್ತು ಧರ್ಮ.

ತಪ್ಪುಗ್ರಹಿಕೆ ಮತ್ತು ಪೂರ್ವಗ್ರಹಿಕೆಗಳನ್ನು ತಿದ್ದುವುದೇ ನಿಜಶಿಕ್ಷಣ. ಅಜ್ಞಾನಕಿಂತ ಅರೆಜ್ಞಾನ ಅಪಾಯಕಾರಿ ಎನ್ನುವುದು ಇದರ ಕಾರಣವಾಗಿಯೇ. ಇದಕ್ಕೆ ಪೂರಕವಾಗಿ ಒಂದು ಸ್ವಕಥನ: ಹುಟ್ಟಿನಿಂದ ಸಸ್ಯಾಹಾರಿಯಾದ ಹುಡುಗನೊಬ್ಬ ತನ್ನ ಮನೆಯ ಎದುರಿನ ಅಂಗಡಿಗೆ ಬಂದವನೇ ‘ಥೂ, ಅಸಹ್ಯ, ಗಬ್ಬುನಾತ, ದುರ್ವಾಸನೆ’ ಎಂದು ಚೀರುತ್ತಾ ಮೂಗು ಮುಚ್ಚಿಕೊಂಡು ಮುಖ ಸಿಂಡರಿಸಿಕೊಂಡ. ಅಂಗಡಿಯ ಮುಂಭಾಗ ಕೋಳಿಮೊಟ್ಟೆಗಳನ್ನು ಖರೀದಿ ಮಾಡಿದವರು ತೆಗೆದುಕೊಂಡು ಹೋಗುವಾಗ ಕೆಳಕ್ಕೆ ಬೀಳಿಸಿ, ರಂಪ ಮಾಡಿದ್ದೇ ಇದಕ್ಕೆ ಮೂಲ. ಅಂಗಡಿಯ ಮಾಲೀಕರು ತಕ್ಷಣವೇ ಅದನ್ನು ಶುಚಿಗೊಳಿಸುವ ಕಾರ್ಯದಲ್ಲಿ ತಲ್ಲೀನರಾಗಿದ್ದರು. ಅಷ್ಟರಲ್ಲಿ ಈ ಸಸ್ಯಾಹಾರೀ ಬಾಲಕನ ವರಾತ ನಡೆದಿತ್ತು. ನಾನು ಅಲ್ಲಿಯೇ ನಿಂತಿದ್ದವನು, ನನ್ನೊಳಗಿನ ಮೇಷ್ಟ್ರುತನ ಜಾಗೃತವಾಗಿ ಆ ಹುಡುಗನನ್ನು ಕರೆದು, ತಿಳಿ ಹೇಳುವ ಪ್ರಯತ್ನ ಮಾಡಿದೆ. ‘ಇನ್ನೊಬ್ಬರ ಆಹಾರವನ್ನು ಹೀಗಳೆಯಬಾರದು. ನೀನು ತಿನ್ನದಿದ್ದರೇನಂತೆ, ಅವರ ಆಹಾರವನ್ನು ಅಗೌರವಿಸುವ ಹಕ್ಕು ನಮಗಿಲ್ಲ. ಲೋಕೋಭಿನ್ನರುಚಿಃ ಎಂಬ ನಮ್ಮ ಪರಂಪರೆಯ ಮಾತಿನ ಅರ್ಥ ಇದೇ’ ಎಂದು ಪರಿಪರಿಯಾಗಿ ಮನಕ್ಕೆ ನಾಟುವ ಹಾಗೆ ಹೇಳಿದೆ. ನೀನು ತಿನ್ನುವ ಆಹಾರವನ್ನು ಇನ್ನೊಬ್ಬರು ಅಸಹ್ಯಸಿದರೆ ನಿನಗೆ ನೋವಾಗುವುದಿಲ್ಲವೇ? ನಿನಗೆ ಚಿಕ್ಕಂದಿನಿಂದ ಸಸ್ಯಾಹಾರ ಪರಿಚಿತ; ಅದೇ ನಿನ್ನ ತಾಯ್ತಂದೆಯರು ಮಾಂಸಾಹಾರಿಗಳಾಗಿದ್ದರೆ ನೀನು ಹೀಗೆ ಮುಖ ಸಿಂಡರಿಸುತ್ತಿದ್ದೆಯಾ? ಎಂದು ಅವನಿಗೆ ದೃಷ್ಟಾಂತಗಳ ಮೂಲಕ ಮನವರಿಕೆ ಮಾಡಿದೆ.

ಅಂದಿನಿಂದ ಅವನ ವರ್ತನೆ ಬದಲಾಯಿತು. ಮೂಲತಃ ಶುದ್ಧ ಸಸ್ಯಾಹಾರಿಯಾದ ನಾನೇ ಹೀಗೆ ಹೇಳಿದ್ದು ಅವನನ್ನು ಕಾಡಿರಬೇಕು. ‘ಶಾಲೆಯಲ್ಲಿ ತನ್ನ ಸಹಪಾಠಿಗಳು ತಿನ್ನುವಾಗ ತಾನೀಗ ಸಮಸ್ಥಿತಿಯನ್ನು ಕಾಪಾಡಿಕೊಂಡು ಪ್ರಬುದ್ಧವಾಗಿ ವರ್ತಿಸುವೆ. ನಿಮ್ಮ ಪಾಠ ನನಗೆ ಜೀವನಪರ್ಯಂತ ಜೊತೆಗಿರುತ್ತದೆ’ ಎಂದು ಪತ್ರ ಬರೆದು ಕೊಟ್ಟನು. ಅವನ ಬಗೆಗೆ ಹೆಮ್ಮೆ ಆದದ್ದರ ಜೊತೆಗೆ ನನ್ನ ಮಾತುಗಳು ಪರಿಣಾಮ ಬೀರಿದ್ದು ಖುಷಿ ತಂದಿತು. ಹೀಗೆ ನಾವು ನೋವು ತಿಂದರೂ ಇನ್ನೊಬ್ಬರಿಗೆ ನೋವು ಕೊಡಬಾರದು. ಇದೇ ಕಾರುಣ್ಯ. ಘನತೆಯನ್ನು ಕಳೆಯದೇ ಮಮತೆಯಿಂದ ಕಲಿಸಬೇಕಾದುದು ಇಂದಿನ ಅಗತ್ಯ. ಕಲಿಯುತ್ತಿದ್ದೇನೆಂಬ ದೈನ್ಯವಾಗಲೀ ಕಲಿಸುತ್ತಿದ್ದೇನೆಂಬ ಗರ್ವವಾಗಲೀ ಇಂಥಲ್ಲಿ ಸುಳಿಯದು. ಮಾನವತೆಯನ್ನು ಕಳೆದು ಕಲಿಸುವ ಯಾವುದೂ ನಿಜಕಲಿಕೆಯಲ್ಲ. ಇದೆಲ್ಲವನ್ನು ಕಂಡುಕೊಳ್ಳುವುದೇ ಡಿ-ಲರ್ನಿಂಗ್ ಪ್ರೊಸೆಸ್, ಅಕಲಿಕೆ ಎನಿಸಿಕೊಳ್ಳುತ್ತದೆ. ಜೊತೆಗೆ ಮಕ್ಕಳನ್ನು ಬೆಳೆಸುವಾಗ ಪೋಷಕರು ಸ್ವತಃ ಪ್ರಬುದ್ಧರಾಗಿರಬೇಕು. ಸಹಿಷ್ಣುತೆಯನ್ನು ಮೈಗೂಡಿಸಬೇಕು. ಪ್ರತಿಯೊಬ್ಬರೂ ವಿಭಿನ್ನ ಮತ್ತು ವಿಶಿಷ್ಟ. ನಮ್ಮ ಹಾಗೆ ಅವರು ಬದುಕುತ್ತಿಲ್ಲ ಎಂದ ಮಾತ್ರಕೇ ಅವರದು ಬದುಕೇ ಅಲ್ಲ ಎಂಬ ತೀರ್ಮಾನಕೆ ಬಂದರೆ ಅದು ಮನೋವೈಕಲ್ಯ; ಮಕ್ಕಳಲ್ಲಿ ಬೆಳೆಸಬೇಕು ಹೃದಯವೈಶಾಲ್ಯ!
‘ಬದುಕುವುದನ್ನು ಬಿಟ್ಟು ಬದುಕಿನ ಬಗ್ಗೆ ವಿಪರೀತ ಮಾತಾಡುತ್ತಿರುವುದೇ ಇಂದಿನ ದುರಂತ. ಹಾಗೆಯೇ ಶಿಕ್ಷಣ!’ ಎಂದು ಒಂದೆಡೆ ವಿಸ್ತಾರವಾಗಿ ಬರೆದಿದ್ದೇನೆ. ಕಲಿಯಬೇಕು ಮತ್ತು ಕಲಿತದ್ದನ್ನು ಎದೆಯೊಳಿಟ್ಟು ಮರೆತಂತೆ ಮುಂದಕ್ಕೆ ಸಾಗಬೇಕು. ಪ್ರತಿದಿನವೂ ಹೊಸದನ್ನು ಕಲಿಯಬೇಕು. ಕಲಿಕೆ ನಿರಂತರ; ಹರಿವ ನೀರಿನ ಥರ. ಕಲಿತದ್ದನ್ನು ಮರೆತ ಮೇಲೆ ಉಳಿಯುವುದೇ ನಿಜವಾದ ಶಿಕ್ಷಣ ಎಂಬುದನ್ನು ನಾವು ತುಂಬ ತಡವಾಗಿ ಅರಿಯುತ್ತಿದ್ದೇವೆ. ಇದೂ ಶಿಕ್ಷಣದ ಒಂದು ಭಾಗವೇ. ಇದನ್ನೇ ಲರ್ನಿಂಗ್ ಮತ್ತು ಡಿ ಲರ್ನಿಂಗ್ ಎನ್ನುವುದು.

ಏನನ್ನು ಕಲಿಯಬೇಕು? ಮತ್ತು ಅದನ್ನು ಹೇಗೆ ಕಲಿಯಬೇಕು? ಎಂಬುದನ್ನು ಕಲಿಸುವುದೇ ಶಿಕ್ಷಣದ ಪ್ರಮುಖ ಭಾಗ. ಜಗತ್ತನ್ನು ಅರಿಯುತ್ತಾ ಅದರಲ್ಲಿ ನನ್ನ ಪಾತ್ರವೇನು? ನನ್ನ ಕೊಡುಗೆಯೇನು? ನನ್ನ ಜವಾಬ್ದಾರಿಯೇನು? ಎಂದು ನನ್ನ ಕಾಲಧರ್ಮ, ವಯೋಧರ್ಮ ಮತ್ತು ಮನೋಧರ್ಮಗಳ ಚೌಕಟ್ಟಿನಲ್ಲಿ ನನ್ನನ್ನೇ ಪ್ರಶ್ನಿಸಿಕೊಳ್ಳುತ್ತಾ (ಉಳಿದವರನ್ನಲ್ಲ) ಉತ್ತರ ಕಂಡುಕೊಳ್ಳುವಂತೆ ಮಾಡುವುದೇ ಶಿಕ್ಷಣದ ಸಾರ್ಥಕ್ಯ. ಅಹಂಕಾರ ಪೋಷಕವಾಗುವ ಯಾವುದೂ ವಿದ್ಯೆಯಲ್ಲ; ಅಂಥವನ್ನು ಅವಿದ್ಯೆ ಎಂದು ಭಾರತೀಯ ಪರಂಪರೆ ಗುರುತಿಸಿ ಕೊಟ್ಟಿದೆ. ಇಂದಿನ ಜಗತ್ತಿನಲ್ಲಿ ನಿಧಾನವಾಗಿ ಕಲಿಕೆಯ ಸಾಧ್ಯತೆಗಳಿಗೆ ಮತ್ತು ಕೌಶಲ್ಯಗಳಿಗೆ ಆದ್ಯತೆ ಕೊಡಲಾಗಿದೆ. ಜ್ಞಾನಮೂಲ ಶಿಕ್ಷಣವು ಬದುಕನ್ನು ಕಟ್ಟಿಕೊಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಇದಕ್ಕೊಂದು ಕಾಯಕಲ್ಪ ಬೇಕೆಂಬುದು ಶಿಕ್ಷಣತಜ್ಞರ ಆಲೋಚನೆ. ಪ್ರಥಮವಾಗಿ ಮಾನವೀಯ ಮತ್ತು ಅಂತಿಮವಾಗಿ ದರ್ಶನೀಯವಾಗದ ಯಾವ ಕಲಿಕೆಯೂ ಹೆಚ್ಚು ದಿವಸ ಬಾಳಲಾರದು ಎಂಬುದನ್ನು ನಮ್ಮ ಭಾರತವು ಜಗತ್ತಿಗೆ ಪದೇ ಪದೇ ಮನವರಿಕೆ ಮಾಡಿಕೊಡುತ್ತಿದೆ.

ಕಲಿಕೆಯ ಸಾಧನಗಳು ಬದಲಾಗಿವೆ; ಕಲಿಸುವ ಪದ್ಧತಿಗಳು ಹೊಸದಾಗಿವೆ. ಹೊಸ ಕಾಲಕ್ಕೆ ಹೊಸ ಸವಾಲುಗಳಿಗೆ ಹೊಸ ಜನಾಂಗ ತೆರೆದುಕೊಂಡು ತಂತಮ್ಮ ಬದುಕನ್ನು ಜಾಗತಿಕ ಮಟ್ಟದಲ್ಲಿ ಕಟ್ಟಿಕೊಳ್ಳಬೇಕಿದೆ. ಇವೆಲ್ಲವನ್ನು ನಾವಿಂದು ಮನದಟ್ಟು ಮಾಡಿಕೊಳ್ಳುತ್ತಿದ್ದೇವೆ. ಹಾಗಾಗಿ ಶಾಲಾ ಕಾಲೇಜುಗಳಲ್ಲಿ ಕಲಿತದ್ದು ಮಾತ್ರ ಶಿಕ್ಷಣವಲ್ಲ ಎಂಬ ಪರಿಜ್ಞಾನ ನಮ್ಮಲ್ಲಿರಬೇಕು. ನಾಲ್ಕು ಗೋಡೆಗಳ ನಡುವೆ ಕಲಿತ ಮಗು ಬುದ್ಧಿಮಾಂದ್ಯ ಶಿಶು ಎಂದು ಹೇಳಿರುವುದು ಇದಕ್ಕೇ. ‘ಕಲಿಯುವುದು ವಿದ್ಯೆ; ಕಲಿಸುವುದು ಶಿಕ್ಷಣ’ ಎಂಬ ಸರಳ ಸತ್ಯ ನಮಗೆ ಇನ್ನಾದರೂ ಅರಿವಾಗಬೇಕಿದೆ. ಘನತೆ ಮತ್ತು ಮಮತೆಗಳಿಂದ ಬದುಕುವುದನ್ನು ಹೇಳಿ ಕೊಡದಿದ್ದರೆ, ಅವನ್ನು ಕಲಿಯದಿದ್ದರೆ ಮತಿವಂತ ಮಾನವ ನಿರ್ಮಾಣವಾಗುವುದಿಲ್ಲ. ಜೊತೆಗೆ ಸೋತು ಸುಖಿಸುವ ಮಾರ್ಗವನ್ನು ಕಂಡುಕೊಳ್ಳದಿದ್ದರೆ ಪ್ರಪಂಚ ನೆಮ್ಮದಿಯಾಗಿರುವುದಿಲ್ಲ. ಸೋಲುವುದನ್ನು ಕಲಿಯಿರಿ; ಗೆಲುವು ತಾನಾಗಿಯೇ ಹುಡುಕಿಕೊಂಡು ಬರುತ್ತದೆಂಬ ತರ್ಕ ನನ್ನದು. ಏಕಲವ್ಯನ ಮುಂದೆ ಅಂಥ ಅರ್ಜುನ ಸಣ್ಣವನಾಗಿ ಬಿಡುತ್ತಾನೆ. ತನ್ನವರನ್ನು ಕೊಲ್ಲಲು ಬಿಲ್ವಿದ್ಯೆ ಕಲಿತ ಪಾರ್ಥನೆಲ್ಲಿ? ತನ್ನ ಸಮುದಾಯದ ಸಾಕುಪ್ರಾಣಿಗಳನ್ನು ರಕ್ಷಿಸಲೆಂದೇ ಬಿಲ್ಲುಗಾರಿಕೆ ಕಲಿತ ಏಕಲವ್ಯನೆಲ್ಲಿ? ಇಂಥ ಸಾಕ್ಷಾತ್ಕಾರ ಮಾಡಿಸದ ವಿದ್ಯೆಯಾಗಲಿ, ಹೀಗೆ ಕಲಿಸದ ಶಿಕ್ಷಣವಾಗಲಿ ವ್ಯರ್ಥ.

ಈ ಜಗತ್ತಿನ ಬಹು ದೊಡ್ಡ ಸಮಸ್ಯೆ ಏನೆಂದರೆ ಏನನ್ನು ಕಲಿಯಬೇಕು ಮತ್ತು ಏನನ್ನು ಕಲಿಯಬಾರದು ಎಂಬುದೇ ಆಗಿದೆ. ಏಕೆಂದರೆ ಇದು ಗೊತ್ತಾಗುವ ವೇಳೆಗೆ ಸಾಕಷ್ಟು ಕಲಿತಿರುತ್ತೇವೆ! ನಮ್ಮ ತಾಯ್ತಂದೆ, ಕುಟುಂಬವರ್ಗ, ಸುತ್ತಲ ಸಮಾಜ- ಇವು ಬೇಕಿದ್ದನ್ನು ಮತ್ತು ಬೇಡದಿರುವುದನ್ನು ಕಲಿಸಿಬಿಟ್ಟಿರುತ್ತವೆ. ಇದು ನಮ್ಮ ಕೈಯಳತೆಯನ್ನು ಮೀರಿದ್ದು. ಹಾಗಾಗಿ ನಮ್ಮರಿವಿಗೆ ಮತ್ತು ಪ್ರಜ್ಞೆಯಾಳಕ್ಕೆ ತಲಪಿ ಎದೆಯ ಬೆಳಕಾಗದ ಕಲಿಕೆಗಳನ್ನು ಗುರುತಿಸಿ ಕೈ ಬಿಡುವ ಪ್ರಕ್ರಿಯೆ ನಡೆಯಬೇಕು. ಇದನ್ನೇ ಅಕಲಿಕೆ ಎನ್ನುವುದು. ಲರ್ನಿಂಗು, ಡಿಲರ್ನಿಂಗು ಮತ್ತು ಅನ್ ಲರ್ನಿಂಗು ಎಂದೆಲ್ಲಾ ಕರೆದು ನಾನು ಗೊಂದಲಗೊಳಿಸಲಾರೆ. ಸರಳಗೊಳಿಸಿ ಮುಂದುವರಿಯುತ್ತಿದ್ದೇನೆ! ತಾತ್ಪರ್ಯ ಮುಖ್ಯ; ಪದಗಳನ್ನು ಗುಡ್ಡೆ ಹಾಕಿಕೊಂಡು ಒದ್ದಾಡಬಾರದು. ಅಕಲಿಕೆಯೂ ಒಂದು ಕಲಿಕೆಯೇ; ಇದನ್ನೇ ನಾನೀಗ ಕೇಂದ್ರವಾಗಿರಿಸಿಕೊಂಡಿರುವುದು.

ಕಲಿತದ್ದು ಎರಡು ರೀತಿ: ಸ್ವತಃ ನಾನೇ ಅನುಕರಣೆಯಿಂದ, ಇನ್ನೊಂದು ನಮಗೆ ಕಲಿಸಿದವರ ಸ್ಮರಣೆಯಿಂದ. ಇವೆರಡರಿಂದಲೂ ನಾವು ಪರಿಷ್ಕೃತಗೊಳ್ಳಬೇಕು. ಕಲಿಸಿದ್ದು ಮುಂದೊಂದು ಕಾಲಕ್ಕೆ ನಮಗೇ ಸರಿಯೆನಿಸದಿರಬಹುದು ಅಥವಾ ಉಪಯೋಗಕ್ಕೆ ಬರದೇ ಇರಬಹುದು. ಕಲಿಸಿದವರ ಮತ್ತು ಕಲಿಸಿದ ಆಕರಗಳ ದೋಷಗಳಿಂದ ನಾವು ಸುತ್ತುವರೆದು, ಅಜ್ಞಾನವನ್ನೇ ಜ್ಞಾನವೆಂದುಕೊಂಡಿರಬಹುದು! ಇದನ್ನು ಆಧುನಿಕ ತತ್ತ್ವಜ್ಞಾನವು ದೃಷ್ಟಿಕೋನ ಎಂದು ಕರೆದು ಕೈ ಬಿಡುತ್ತದೆ. ನಾವೆಲ್ಲ ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆ ಬೇರೆ ದೇಶ-ಸಮಾಜ-ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಬದುಕಬೇಕಾಗಿರುವುದರಿಂದ ದೃಷ್ಟಿಕೋನಗಳ ಜೀವನ ನಡೆಸುತ್ತಿರುತ್ತೇವೆ. ನಂನಮ್ಮ ಅರಿವು ಅನುಭವದ ಜೊತೆಗೆ ಸೇರಿ ಸದಾ ಸಂಘರ್ಷದಲ್ಲಿದ್ದು, ಯಾವುದೋ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅನಿವಾರ್ಯದಲ್ಲಿ ಸಿಲುಕಿರುತ್ತೇವೆ. ಸಮತೆ ಮತ್ತು ಮಮತೆಗಳ ಆಶಯದಲ್ಲಿದ್ದು, ಘನತೆಯಿಂದ ವರ್ತಿಸುವ ಜವಾಬ್ದಾರಿ ನಮ್ಮದಾಗಿರುತ್ತದೆ.

ಎಲ್ಲ ತತ್ತ್ವ-ಸಿದ್ಧಾಂತಗಳಿಗೂ ಮಿಗಿಲಾದದ್ದು ಮಾನವತೆ; ಸಕಲ ಜೀವರಾಶಿಗಳಲಿ ಲೇಸನು ಬಯಸುವುದು. ಇದನ್ನು ನಮ್ಮ ಪೂರ್ವಜರು ಧರ್ಮ ಎಂದು ಕರೆದರು. ಈಗ ನಾವು ಮಾಡಿಕೊಂಡಿರುವ ಮತ್ತು ಅನುಸರಿಸುತ್ತಿರುವ ಜಾತಿ-ಮತಧರ್ಮಗಳು ನಿಜವಾದ ಧರ್ಮವಲ್ಲ; ಧರ್ಮದ ಆಭಾಸ ಅಷ್ಟೇ. ಧರ್ಮವೆಂಬುದು ತುಂಬ ಸರಳ ಮತ್ತು ಸಹಜವಾಗಿರುವಂಥದು: ‘ಅನ್ನವನು ಇಕ್ಕುವುದು, ನನ್ನಿಯನು ನುಡಿಯುವುದು, ತನ್ನಂತೆ ಪರರ ಬಗೆಯವುದು ಅಷ್ಟೇ!’ ದಯೆ, ಮರುಕ, ಅನುಕಂಪ, ಕರುಣೆ, ಔದಾರ್ಯ, ಸೈರಣೆ, ಸಮತೆಗಳೇ ಮಾನವತಾಧರ್ಮದ ಮಾಪನಗಳು.

ಹಾಗಾಗಿ, ನಾವು ಕಲಿತದ್ದನ್ನು ಆಗಿಂದಾಗ್ಗ್ಯೆ ಪರಾಮರ್ಶಿಸುವ ಸಂದರ್ಭ ಎದುರಾಗುತ್ತಿರುತ್ತದೆ. ಶಾಲಾ ಕಾಲೇಜುಗಳು ಕಲಿಸಿದ್ದನ್ನು ನಮ್ಮ ಅನುಭವದ ಮೂಸೆಯಲ್ಲದ್ದಿ, ವಿಚಾರಗಳ ನಿಕಷಕ್ಕೊಡ್ಡಿ, ಎದೆಯ ಅರಿವಿನ ಬೆಳಕಿನಲ್ಲಿ ‘ಒಳಗಣ್ಣು’ ಬಿಟ್ಟು ನೋಡಿದಾಗಲೇ ಗೊತ್ತಾಗುತ್ತದೆ! ವಿದ್ಯೆ ಯಾವುದು? ನಾ ಕಲಿತು, ಕಲಿತಿದ್ದೇನೆಂಬ ಅಹಮಿನಲಿ ಭೋರ್ಗರೆಯುತ್ತಿರುವ ಅವಿದ್ಯೆ ಯಾವುದು? ಅಂತ. ಕುವೆಂಪು ಅವರನ್ನು ‘ಸರಿಯಾಗಿ ಓದಿಕೊಂಡವರಿಗೆ’ ಚೆನ್ನಾಗಿ ಮನದಟ್ಟಾಗಿರುತ್ತದೆ. ಅವರು ತಮ್ಮ ಪಂಚಮಂತ್ರಗಳಲ್ಲಿ ಒಂದಾದ ‘ಪೂರ್ಣದೃಷ್ಟಿ’ ಯನ್ನು ತಮ್ಮ ಸಾಹಿತ್ಯದಲ್ಲಿ ಬಲವಾಗಿ ಪ್ರತಿಪಾದಿಸುತ್ತಾರೆ; ಬರೀ ಪ್ರತಿಪಾದಿಸುವುದಿಲ್ಲ; ಅಮೋಘವಾಗಿ ಸೃಜಿಸಿದ್ದಾರೆ. ನಮ್ಮ ಪರಂಪರೆಯನ್ನು ಗೌರವಿಸುತ್ತಾರೆ. ಡಿವಿಜಿಯವರ ‘ಹಳೆ ಬೇರು ಹೊಸ ಚಿಗುರನ್ನು’ ಸಮನ್ವಯಿಸಿ, ಸಾಧ್ಯತೆಗಳನ್ನು ಮನಗಾಣಿಸುತ್ತಾರೆ. ಅವರೇ ಹೇಳಿದಂತೆ, ನಮ್ಮ ಅಜ್ಜಿಯ ಕಾಲದ ಒಡವೆಗಳನ್ನು ಹಳೆಯ ಡಿಸೈನುಗಳೆಂದು ತಿಪ್ಪೆಗೆ ಎಸೆಯುತ್ತೇವೆಯೇ? ಅದರ ಚಿನ್ನವನ್ನು ಕರಗಿಸಿ, ಈಗಿನ ಕಾಲಕೆ ಬೇಕಾದ ವಿನ್ಯಾಸಕ್ಕೆ ಒಗ್ಗಿಸಿ, ಆಭರಣಗಳನ್ನು ತಯಾರಿಸುತ್ತೇವಲ್ಲವೆ? ಇದನ್ನೇ ಪರಂಪರೆ ಎನ್ನುವುದು.

ಕಲಿಯುವಾಗ ಸರಿಯಾದುದನ್ನು ಕಲಿತರೆ ಅಕಲಿಕೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ! ಆದರೆ ಅದು ಹೀಗಾಗುವುದಿಲ್ಲ. ಬೇಕಿದ್ದು ಮತ್ತು ಬೇಡದ್ದು ಎಲ್ಲವೂ ಕಲಿಕೆಯೇ ಆಗಿಬಿಟ್ಟಿದೆ. ಜ್ಞಾನ ಬೇರೆ, ಕಲಿಕೆ ಬೇರೆ. ಕಲಿತದ್ದು ಮತ್ತು ಕಲಿಸಿದ್ದು ನನ್ನೆದೆಯ ಬೆಳಕಾದರೆ ಮತ್ತು ಸಮಾಜೋಪಯೋಗಿಯಾದರೆ ಅದು ಜ್ಞಾನ. ನನ್ನೆತ್ತರಕೆ ಉಳಿದವರನ್ನೂ ಕರೆದುಕೊಂಡು ಹೋಗುವುದು ಮತ್ತು ದೀಪದಿಂದ ದೀಪ ಹಚ್ಚುತಾ ಲೋಕವನ್ನು ಕ್ಷೇಮದತ್ತ ಕೊಂಡೊಯ್ಯಲು ಸಹಕರಿಸುವುದು ವಿವೇಕ. ಜ್ಞಾನವು ಅಹಮನು ಬೆಳೆಸಬಹುದು; ಆದರೆ ವಿವೇಕ ಹಾಗಲ್ಲ! ಅದರದೇನಿದ್ದರೂ ಆನಂದ, ಸತ್ಯವೂ ಶಿವವೂ ಸುಂದರವೂ ಆದದ್ದು. ಏನೆಲ್ಲ ತಿಳಿದಿದೆಯೆಂಬ ಅಹಂ ಜ್ಞಾನದ್ದಾದರೆ, ಏನೆಲ್ಲವನೂ ಇನ್ನೂ ತಿಳಿಯಬೇಕಿದೆ ಎಂಬ ನಮ್ರತೆ ವಿವೇಕದ್ದು. ಬೇರೊಂದು ರೀತಿಯಲಿ ಹೇಳುವುದಾದರೆ, ಎಷ್ಟನ್ನು ತಿಳಿಯಬಹುದೋ ಅಷ್ಟೂ ಜ್ಞಾನ; ತಿಳಿದಿದ್ದರಲಿ ಎಷ್ಟನ್ನು ಅಳವಡಿಸಿ-ಕೊಂಡಿದ್ದೇವೆಯೋ ಅಷ್ಟೇ ವಿವೇಕ! ಉಳಿದದ್ದು ಇದ್ದೇ ಇದೆ: ಅದೇ ನಮ್ಮಾಚೆಗಿನ ವಿಶ್ವದರಿವು.

ಅಕಲಿಕೆ ಎಂದರೆ ಕಲಿತದ್ದನ್ನು ಪುನರ್ವಿಮರ್ಶಿಸುವುದು ಮತ್ತು ಮರು ಜೋಡಿಸುವುದು ಹಾಗೂ ಜ್ಞಾನವನ್ನು ವಿವೇಕದ ಕಣ್ಣಿಂದ ಕಂಡು ನನ್ನನ್ನೂ ನಾನಿರುವ ಜಗತ್ತನ್ನೂ ‘ಸರಿಯಾಗಿ’ ಅರ್ಥೈಸುವುದು ಅಷ್ಟೇ. ಇದನ್ನೇ ‘ದರ್ಶನ’ ಎನ್ನುವುದು. ಭಕ್ತರೊಬ್ಬರು ರಮಣ ಮಹರ್ಷಿಗಳನ್ನು ಕೇಳಿದರಂತೆ: ‘How should we treat others?’ ಎಂದು. ಆಗ ರಮಣರು ನಕ್ಕು ಹೇಳಿದರಂತೆ: ‘There are no others!’ ಇದರಿಂದ ಅಂತರ್ಗತವಾಗುವ ದರ್ಶನ ಇದೆಯಲ್ಲಾ ಅದೇ ಮರುಕಲಿಕೆ! ‘ಪರರು’ ಎಂಬ ಭಾವನೆಯೇ ತಪ್ಪಾದುದು, ಇಂಥ ಬೇರ್ಪಡಿಸುವ ಆಲೋಚನೆಯೇ ಅಜ್ಞಾನ. ಎಲ್ಲರೂ ನನ್ನವರೇ ಆಗಿರುವಾಗ ಪರರು ಯಾರು? ಪೂರ್ಣದೃಷ್ಟಿ ಎಂದರೆ ಇದೇ! ಅಲ್ಲಮನ ವಚನಗಳಲ್ಲಿ, ಜ಼ೆನ್ ತಿಳಿವಳಿಕೆಯಲ್ಲಿ, ಸೂಫಿಗಳ ಕವಿತಾ ಸಾಲುಗಳಲ್ಲಿ ನಮಗಿಂಥ ‘ಅಕಲಿಕೆಯ ಕಲಿಕೆ’ ಅರಿವಿಗೆ ಬರುತ್ತದೆ. ನಿಜವಾದ ಗುರುವು ನಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಾ ಕೂರುವುದಿಲ್ಲ, ಪ್ರಶ್ನೆಗಳೇ ಹುಟ್ಟದಂತೆ ಮಾಡುತ್ತಾರೆ. ಮತ್ತೆ ಮತ್ತೆ ಕಲಿಸುತ್ತಲೇ ಇರುತ್ತಾರೆ.

ಪ್ರತಿಯೊಬ್ಬರೂ ನಮಗೆ ಗುರುವೇ. ಕೆಲವರಿಂದ ಕಲಿಯುತ್ತೇವೆ; ಹಲವರಿಂದ ‘ಏನನು ಕಲಿಯಬಾರದು’ ಎಂಬುದನು ಕಲಿಯುತ್ತೇವೆ! ಆದ್ದರಿಂದ ಎಲ್ಲವೂ ಕಲಿಕೆಯೇ; ಅಕಲಿಕೆಯೂ ಕಲಿಕೆಯ ಒಂದು ಭಾಗವೇ. ಓಶೋ ರಜನೀಶರ ಮಾತಿನಿಂದ ಮುಕ್ತಾಯ ಹೇಳುವೆ: ‘ತಿಳಿವಳಿಕೆಯಿಂದ ಮೂಡುವ ಅರಿವು ಏನೆಂದರೆ, ಕೇವಲ ತಿಳಿವಳಿಕೆ ಮಾತ್ರ ಸಾಲದೆಂಬುದು.’

-ಡಾ. ಹೆಚ್ ಎನ್ ಮಂಜುರಾಜ್,


ಕನ್ನಡದ ಬರಹಗಳನ್ನು ಹಂಚಿ ಹರಡಿ
3 2 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
MANJURAJ H N
MANJURAJ H N
7 months ago

ಪಂಜುವಿಗೆ ಅನಂತ ಧನ್ಯವಾದಗಳು……

1
0
Would love your thoughts, please comment.x
()
x