ಅದಪ್ಪ ಮೇಸ್ಟ್ರು ಎಂದರೆ ಮಕ್ಕಳಿಗೆ ಬಲು ಪ್ರೀತಿ. ಅವರು ಎಂದೂ ಯಾವ ಮಕ್ಕಳಿಗೂ ಶಿಕ್ಷಿಸಿರಲಿಲ್ಲ. ಅದರ ಬದಲು ಅವರು ಮಕ್ಕಳಿಗೆ ತಮ್ಮ ತುಂಬು ಪ್ರೀತಿಯನ್ನು ಕೊಡುತ್ತಿದ್ದರು. ತಿಂಗಳಿಗೊಮ್ಮೆ ಯಾವುದಾದರೂ ಒಂದು ಸಿಹಿ ತಿಂಡಿಯನ್ನು ತಮ್ಮ ಮನೆಯಲ್ಲಿ ತಯಾರಿಸಿ ತಂದು ಶಾಲೆಯಲ್ಲಿ ಮಕ್ಕಳಿಗೆ ಹಂಚುತ್ತಿದ್ದರು. ಅಲ್ಲದೇ, ತಮ್ಮ ಬೋಧನಾ ಅವಧಿಯಲ್ಲಿ ಯಾವುದೋ ವಿಶೇಷವಾದ ಘಟನೆ ಅಥವಾ ಮನ ಮುಟ್ಟುವ ಒಂದು ಕಥೆಯನ್ನು ಐದರಿಂದ ಹತ್ತು ನಿಮಿಷಗಳಲ್ಲಿ ಹೇಳಿ ಮುಗಿಸುತ್ತಿದ್ದರು. ಹಾಗಾಗಿ, ಅವರ ಸ್ವಭಾವ, ಮಕ್ಕಳ ಬಗ್ಗೆ ಚಿಂತನೆ ಮತ್ತು ಸಾಮಾಜಿಕ ಕಳಕಳಿ ಮಕ್ಕಳ ಮನ ಗೆದ್ದಿತ್ತು. ಮಕ್ಕಳಾದರೋ, ಅವರು ಹೇಳುವ ಪಾಠ, ಬೋಧನೆ ಮತ್ತು ಇತರ ಚಟುವಟಿಕೆಯಲ್ಲಿ ಆಸಕ್ತಿ ತೋರಿಸುತ್ತಿದ್ದರು. ಆದರೆ, ಅಲ್ಲಿ ಕೆಲವು ವಿದ್ಯಾರ್ಥಿಗಳು ಅವರ ಕಡೆಗೆ ಸರಿಯಾಗಿ ಗಮನ ಕೊಡುತ್ತಿರಲಿಲ್ಲವಲ್ಲದೇ ಮೇಸ್ಟ್ರ ಗೋಜಿಗೆ ಅವರು ಹೋಗುತ್ತಿರಲಿಲ್ಲ. ಈ ವಿಷಯ ಮೇಸ್ಟ್ರುಗೆ ಅರ್ಥವಾಗಿತ್ತು. ಹಾಗಾಗಿ, ಒಂದು ದಿನ ಆ ಹತ್ತು ವಿದ್ಯಾರ್ಥಿಗಳನ್ನು ಕರೆದು ಮುಂದಿನ ಸಾಲಿನಲ್ಲಿ ಕುಳ್ಳಿರಿಸಿ, ಅವರ ಕಡೆಗೆಯೇ ಸಂಪೂರ್ಣವಾಗಿ ತಮ್ಮ ಲಕ್ಷ್ಯವನ್ನು ಹರಿಸಿ ಹೀಗೆ ಹೇಳಿದರು;
‘ಮಕ್ಕಳಾ ನೀವು ಕೂಡಾ ಪ್ರತಿಭಾವಂತರು ಎಂದು ನನಗೆ ಅನ್ನಿಸುತ್ತದೆ, ಆದರೆ ನೀವು ನಿಮ್ಮ ಮನದಲ್ಲಿದ್ದ ಮೂಡಿದ ಯೋಚನೆಗಳು ಮತ್ತು ವಿವೇಚನೆಗಳ ಬಗ್ಗೆ ನೀವು ತಿಳಿಸುತ್ತಿಲ್ಲ ಮತ್ತು ಹೊರ ಹಾಕುತ್ತಿಲ್ಲ ಎಂದು ನನಗೆ ಅನ್ನಿಸುತ್ತದೆ. ಸಧ್ಯಕ್ಕೆ ನಿಮ್ಮಲ್ಲಿ ಮೂರು ಜನರನ್ನು ಆಯ್ಕೆ ಮಾಡಿಕೊಳ್ಳಬೇಕೆಂದಿದ್ದೇನೆ. ಆ ಮೂವರಿಗೆ ಒಂದು ಕಾರ್ಯ ಸಾಧನೆಯ ಕೆಲಸವನ್ನು ಕೊಟ್ಟು, ಅದನ್ನು ಪೂರ್ಣ ಗೊಳಿಸಲು ಮೂರು ದಿನದ ಅವಧಿ ಕೊಡುತ್ತೇನೆ. ಅಷ್ಟರಲ್ಲಿ ನೀವು ಅದನ್ನು ಪೂರ್ತಿ ಮಾಡಬೇಕು’ ಎಂದು ಹೇಳಿದರು. ಆಗ ಈ ಮಕ್ಕಳಿಗೆ ಬಹಳೇ ದಿಗಿಲಾಯಿತು. ಅವರು ಮನಸ್ಸಿಲ್ಲದೆಯೇ ಒಪ್ಪಿಕೊಂಡು ತಲೆ ಹಾಕಿದರು. ಆಮೇಲೆ ಮೇಸ್ಟ್ರು ಮುಂದುವರೆದು ಹೀಗೆ ಹೇಳಿದರು;
ನಾನು ನಿಮ್ಮಲ್ಲಿ ಶಿವು , ಚಿಕ್ಕಣ್ಣ ಮತ್ತು ಮಾದೇವ ಮೂವರನ್ನು ಆಯ್ಕೆ ಮಾಡುತ್ತಿದ್ದೇನೆ.
ಈ ಮೂವರಿಗೆ ಈಗ ಎದೆ ಬಡಿತ ಶುರು ಆಗಿ ಸಪ್ಪೆ ಮೊರೆ ಮಾಡಿದರು. ಅದನ್ನು ಗಮನಿಸಿದ ಗುರುಗಳು ಹೀಗೆ ಹೇಳಿದರು;
‘ಮಕ್ಕಳಾ, ನಾನು ನಿಮಗೆ ಯಾವ ಶಿಕ್ಷೆಯನ್ನು ಕೊಡುತ್ತಿಲ್ಲ. ನಿಮ್ಮಲ್ಲಿ ಅಘಾದವಾದ ಬುದ್ಧಿವಂತಿಕೆ ಅಡಗಿದೆ, ಅದನ್ನು ಹೊರ ಹಾಕಲು ಪ್ರಯತ್ನಿಸುತ್ತಿದ್ದೇನೆ.’ ಎಂದರು.
ಮಕ್ಕಳು ಏನೂ ಉತ್ತರ ಹೇಳಲಿಲ್ಲವಾದರೂ, ಮೌನವಾಗಿ ತಲೆ ಹಾಕಿ ತಮ್ಮ ಸೂಚಿಸಿದರು. ಆಗ ಮೇಸ್ಟ್ರು ಹೀಗೆ ಹೇಳಿದರು;
‘ಮಕ್ಕಳಾ, ನೀವು ಮೂವರು ನಾನು ಸೂಚಿಸಿದಂತೆ ಒಂದೊಂದು ಕಥೆಯನ್ನು ಒಂದು ಪುಟ ಮೀರದಂತೆ ನಿಮ್ಮ ಮನೆಯಲ್ಲಿ ಬರೆದು ಕೊಂಡು ಬಂದು ನನಗೆ ತೋರಿಸಬೇಕು, ಮತ್ತು ಯಾವ ವಿದ್ಯಾರ್ಥಿಗಳ ಸಹಾಯ ಪಡೆಯಬಾರದು’ ಎಂದು ಹೇಳಿ ಉಳಿದ ವಿದ್ಯಾರ್ಥಿಗಳಿಗೆ ‘ನೀವೂ ಅವರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಬಾರದು’ ಎಂದು ಖಡಾ ಖಂಡಿತವಾಗಿ ಹೇಳಿದರು.
ಇನ್ನು ನಾನು ಆಯ್ಕೆ ಮಾಡಿದ ಶಿವು ‘ಒಬ್ಬ ರಾಜನ ಕಥೆ ಬರೆಯಬೇಕು’, ಚಿಕ್ಕಣ್ಣ ‘ ಒಂದು ಭೂತದ ಬಗ್ಗೆ ಬರೆಯ ಬೇಕು’ ಕೊನೆಯದಾಗಿ ಮಾದೇವ ‘ ಹಸಿವು’ ಅದರ ಬಗ್ಗೆ ಬರೆಯಲಿ ಎಂದು ಹೇಳಿ ಆ ಮೂವರನ್ನು ಮೂರು ದಿನ ಶಾಲೆಗೆ ಬರದಿರಲು ಹೇಳಿ, ನಾಲ್ಕನೇ ದಿನ ಮೊದಲ ಅವಧಿಯಲ್ಲಿ, ಈ ಮೂವರು ಬರೆದ ಕಥೆಗಳನ್ನು ಓದಿ ಚರ್ಚಿಸೋಣ ಎಂದು
ಹೇಳಿ ಮುಗಿಸಿದರು.
ಆಮೇಲೆ ವಿದ್ಯಾರ್ಥಿಗಳು ತಮ್ಮ ತಮ್ಮಲ್ಲಿಯೇ ಗುಸು ಗುಸು ಮಾತಾಡಲು ಪ್ರಾರಂಭಿಸಿ, ತಮಗೆ ಈ ಅವಕಾಶ ಸಿಕ್ಕಿದ್ದರೆ ಚೆನ್ನಾಗಿತ್ತು ಎಂದು ಪರಸ್ಪರ ಹೇಳಿಕೊಳ್ಳುತ್ತಿದ್ದರು. ಈ ಮೂವರಾದರೋ ಪೆಚ್ಚಾಗಿ ಏನು ಮಾಡಬೇಕೆಂದು ತಿಳಿಯದೇ ತಮ್ಮ ತಮ್ಮ ಮನೆಗಳಿಗೆ ಹೋದರು.
ಶಿವು ತನ್ನ ಮನೆಗೆ ಹೋಗಿ ತನ್ನ ತಾಯಿಗೆ ಈ ವಿಷಯ ತಿಳಿಸಿದ. ಆಗ ಅವನ ತಾಯಿ ಸಂತೋಷಗೊಂಡಳು. ಆಕೆಯೂ ಕೂಡ ರಾಜನ ಕಥೆಯನ್ನು ಬರೆಯಲು ಅವನನ್ನು ಹುರಿದುಂಬಿಸಿದಳು. ಅವನಿಗೋ, ರಾಜನ ಕಥೆ ಹೇಗೆ ಬರೆಯಬೇಕೆಂಬುದು ಹೊಳೆಯಲಿಲ್ಲ. ಹಾಗಾಗಿ, ತನ್ನ ತಾಯಿಯ ಸಹಾಯ ಕೋರಿದ. ಆಕೆ ಸಹಾಯ ಮಾಡಲು ನಿರಾಕರಿಸಿ, ಮೊದಲು ನೀನು ಆರಂಭಿಸು ಆಮೇಲೆ ಅದನ್ನು ನೋಡಿ ಸೂಕ್ಷ್ಮವಾಗಿ ತಿಳಿ ಹೇಳುತ್ತೇನೆ ಎಂದಳು. ‘ಅಗಲಿ’ ಎಂದು ತಲೆ ಹಾಕಿದ.
ಚಿಕ್ಕಣ್ಣನಿಗೆ ಭೂತದ ಕಥೆ ಮೂಡಿಸಬೇಕಾಗಿತ್ತು. ಅವನೂ ಕೂಡ ತನ್ನ ಅಮ್ಮನಿಗೆ ಹೇಳಿದ. ಆದರೆ ಅವನ ಅಮ್ಮ ಆಸಕ್ತಿ ತೋರಿಸಲಿಲ್ಲವಾದರೂ ‘ಏನೋ ಒಂದು ತಿಳಿದಂತೆ ಬರೆದು ಬಿಡು. ಹೇಗೂ ಮೇಸ್ಟ್ರು ಒಳ್ಳೆಯವರಿದ್ದಾರೆ, ಸಹಾಯ ಮಾಡುತ್ತಾರೆ’ ಎಂದು ಹೇಳಿ ಆಕೆ ಜಾರಿ ಕೊಂಡಳು.
ಇನ್ನು ಮಾದೇವನ ತಲೆ ಕೆಟ್ಟು ಹೋಯಿತು. ಅವನಿಗೆ ಏನು ಬರೆಯಬೇಕೆಂಬುದೇ ತಿಳಿಯಲಿಲ್ಲ. ಇವನೂ ಕೂಡಾ ಅಮ್ಮನ ಸಹಾಯ ಕೋರಿದ. ಆಗ ಅಮ್ಮ ಹೀಗೆ ಹೇಳಿದಳು;
‘ನೋಡು ಮಾದ ಮೊದಲು ನೀನು ಆ ವಿಷಯದ ಬಗ್ಗೆ ತಿಳಿದುಕೊಂಡು ಅನುಭವಿಸಬೇಕು. ಆಗಲೇ, ಅದು ಅರ್ಥವಾಗುತ್ತದೆ.’ ಎಂದಳು.
‘ಹೌದಾ, ಅದಕ್ಕಾಗಿ ನಾನು ಏನು ಮಾಡಬೇಕು ?’ ಎಂದ.
‘ಇವತ್ತು ಅದರ ಬಗ್ಗೆ ಏನೂ ವಿಚಾರ ಬೇಡ ನಾಳೆ ನಾನು ತಿಳಿಸುತ್ತೇನೆ’ ಎಂದಾಗ ಅವನು ಖುಷಿಗೊಂಡನು ಮತ್ತು ಅದರ ಬಗ್ಗೆ ಚಿಂತನ ಮಾಡುವದನ್ನು ಬಿಟ್ಟುಬಿಟ್ಟ !
ಮಾರನೇ ದಿನ ಮಾದೇವನ ಅಮ್ಮನಿಗೆ ಹುಷ್ಯಾರು ತಪ್ಪಿತು. ಹಾಗಾಗಿ ಅವಳು ಧೊಪ್ಪನೇ ಕುಸಿದು ಬಿದ್ದು ಬಿಟ್ಟಳು. ಮಾದೇವ ಗಾಬರಿಯಾದ. ಹೇಗೋ ಆಕೆಯನ್ನು ಮಲಗುವ ಕೊಣೆಯವರೆಗೆ ಕರೆದುಕೊಂಡು ಹೋಗಿ ಮಲಗಿಸಿದ. ಆಗ ಅಮ್ಮನಿಗೆ ನಿದ್ರೆ ಮೂಡಿತು, ಹಾಗೆಯೇ ಮಲಗಿಕೊಂಡಳು. ಆಕೆ ಏಳುವ ಲಕ್ಷಣ ಕಾಣಲೇ ಇಲ್ಲ. ಆಗ ಮಾದೇವನಿಗೆ ದಿಗಿಲಾಯಿತು. ಅಮ್ಮ ಏಳದಿದ್ದರೆ ತನಗೆ ತಿಂಡಿ ಯಾರು ಮಾಡಿ ಕೊಡುತ್ತಾರೆ ? ಎಂದು ಯೋಚಿಸಿದ. ಮನೆಯಲ್ಲಿ ಅಪ್ಪನೂ ಇಲ್ಲ, ಇದ್ದಿದ್ದರೇ ಹೊರಗಿನಿಂದ ಏನಾದರೂ ತಂದು ಕೊಡುತ್ತಿದ್ದ ಎಂದು ಅನಿಸಿತು.
ಹಾಗೆಯೇ, ಸಮಯ ಕಳೆದು ಮಧ್ಯಾನ್ಹದ ಒಂದು ಗಂಟೆಯಾಯಿತು, ಅವನು ಊಟ ಇಲ್ಲದೆ ಚಡಪಡಿಸುತ್ತಿದ್ದ. ಅವನಿಗೆ ತಕ್ಷಣ ಏನೋ ಹೊಳೆದಾಗ, ಅಡಿಗೆ ಮನೆ ಕಡೆಗೆ ಹೋದ. ಅಲ್ಲಿ ಏನಾದರೂ ತಿನ್ನುವ ಪದಾರ್ಥ ಸಿಗಬಹುದೇನೋ ಎಂದು ಹುಡುಕ ತೊಡಗಿದ. ಅಲ್ಲಿ ಏನೂ ದೊರಕಲಿಲ್ಲ. ಕೊನೆ ಪಕ್ಷ ಅಮ್ಮ ಏನನ್ನಾದರೂ ತಿಂಡಿ ಇಟ್ಟಿರುತ್ತಾಳೆ ಎಂಬ ಭರವಸೆಯಿಂದ ಎಲ್ಲಾ ಕಡೆ ಹುಡುಕಾಡಿದ ತಡಕಾಡಿದ. ಆದರೆ, ಏನೂ ಸಿಗಲೇ ಇಲ್ಲ. ಇನ್ನು ಕಡ್ಲೆಕಾಯಿ, ಬೆಲ್ಲ, ಹುರಿಗಡಲೆ, ಮಂಡಕ್ಕಿ, ಸಕ್ಕರೆ ಇವೆಲ್ಲವನ್ನೂ ಹುಡುಕಿದ. ಅವೂ ಕೂಡಾ ಎಲ್ಲಿಯೂ ಕಾಣಲಿಲ್ಲ. ಅವನಿಗೆ ತೀರಾ ವಿಚಿತ್ರವೆನಿಸಿತು. ಅವುಗಳಿಲ್ಲದಿದ್ದರೆ ಹೇಗೆ ಅಮ್ಮ ತಿಂಡಿಗಳನ್ನು ಮಾಡುವಳು ಎಂದು ಅಂದುಕೊಂಡ. ಆಗ ಮತ್ತೇ ಅಡಿಗೆ ಮನೆಯಿಂದ ಹೊರಗೆ ಬಂದು ಅಮ್ಮನ ಬಳಿ ಬಂದು, ಎಚ್ಚರವಾಗಿದ್ದಾಳೆಯೇ ಎಂದು ನೋಡಿದ. ಆದರೆ, ಆಕೆ ಕಣ್ಣು ಮುಚ್ಚಿಕೊಂಡೇ ಮಲಗಿದ್ದಳು. ಈಗ ಮಾದೇವನಿಗೆ ಪ್ರಾಣ ಹೋಗುವಂತೆ ಆಯಿತು. ತನ್ನ ತಾಯಿಯನ್ನು ಎಬ್ಬಿಸಲು ಪ್ರಯತ್ನಿಸಿದ. ಅವಳು ಏಳಲೇ ಇಲ್ಲ. ಆಮೇಲೆ ಅವನಿಗೆ ಒಂದು ವಿಷಯ ಹೊಳೆಯಿತು. ಅದು ಏನೆಂದರೆ, ಪಕ್ಕದ ಮನೆಯ ಆಂಟಿ ಅವಾಗವಾಗ ಅಮ್ಮನ ಬಳಿ ಬಂದು ಹರಟೆ ಹೊಡೆಯುತ್ತಾಳೆ. ಅವರ ಮನೆಗೆ ಹೋಗಬೇಕೆಂದು ನಿರ್ಧರಿಸಿದ. ಮೆಲ್ಲಗೆ ಹೊರಟ. ಆದರೆ, ಆತನಿಗೆ ಅಲ್ಲಿ ಆಶ್ಚರ್ಯ ಕಾದಿತ್ತು. ಪಕ್ಕದ ಮನೆಯ ಆಂಟಿ ಮನೆಗೆ ಬೀಗ ಹಾಕಿತ್ತು.!
ಈಗ ಅವನಿಗೆ ದುಃಖ ಒತ್ತಿ ಬಂದಿತು. ಇರೋ ಒಂದು ಆಸೆ ಕೂಡಾ ಬತ್ತಿ ಹೋಯಿತು. ಆತ ಮೆಲ್ಲಗೆ ಹೆಜ್ಜೆ ಹಾಕುತ್ತಾ ತಮ್ಮ ಮನೆ ಕಡೆಗೆ ನಡೆದ. ಆಗ ಮತ್ತೇ ‘ಅಮ್ಮ’ ಎದ್ದಿದ್ದಾಳೋ ಏನೋ ಎಂದು ಇಣುಕಿದ. ಅಮ್ಮ ಹಾಗೆಯೇ ಎಚ್ಚರ ತಪ್ಪಿದವಳಂತೆಯೇ ಮಲಗಿಕೊಂಡಿದ್ದಳು. ಆ ಕ್ಷಣ ಅಮ್ಮನ ಬಗ್ಗೆ ಯೋಚಿಸಿದ ;
‘ಅಮ್ಮನಿಗೂ ಹಸಿವೆ ಆಗಿರಬೇಕಲ್ಲ, ಆಕೆಗೆ ಹಸಿವಿನಿಂದ ಎಚ್ಚರ ಏಕೆ ಆಗುತ್ತಿಲ್ಲ ?’ ಎಂದುಕೊಂಡ.
ಆಮೇಲೆ ಗಂಟೆ ನಾಲ್ಕು ಆಯಿತು, ಅವನ ಹೊಟ್ಟೆಯಲ್ಲಿ ಏನೋ ಒಂದು ಥರಾ ಸಂಕಟ ಆಗುತ್ತಿದೆ ಎನಿಸಿದಾಗ, ತಣಿಸಲು ಒಂದು ಲೋಟ ನೀರು ಕುಡಿದ. ಆ ಕ್ಷಣಕ್ಕೆ ಸ್ವಲ್ಪ ನೆಮ್ಮದಿ ಹುಟ್ಟಿಕೊಂಡಿತು. ಆಮೇಲೆ ಅಮ್ಮನ ಮುಂದೆ ಕುಳಿತ. ಆಗ ತನ್ನ ಹೊಟ್ಟೆಯ ಚಿಂತೆ ಬಿಟ್ಟು, ಆಕೆಯ ಕಡೆಗೆ ಗಮನಿಸಿದ. ಅಮ್ಮನಿಗೆ ಏನು ಆಗಿದೆ, ಅವಳು ಏಳುತ್ತಿಲ್ಲ. ಏನೇ ಆಗಲಿ ಆ ಬಗ್ಗೆ ತಿಳಿದುಕೊಳ್ಳಲು ಆಕೆಯನ್ನು ಎಬ್ಬಿಸಲೇ ಬೇಕು ಎಂದು ಆಕೆಯನ್ನು ಅಲುಗಾಡಿಸುತ್ತಲೆಯೇ ‘ಅಮ್ಮ… ಅಮ್ಮ ಏಳಮ್ಮ’ ಎನ್ನುತ್ತಲೆಯೇ ಇದ್ದ. ಆಗ ಅಮ್ಮ ಮೆಲ್ಲನೇ ತನ್ನ ಕಣ್ಣುಗಳನ್ನು ಅರ್ಧವಾಗಿಸಿ ತೆರೆದಳು. ಮಾದೇವನಿಗೆ ಈಗ ಸಂತೋಷವಾಯಿತು. ಆಮೇಲೆ ಆಕೆ ಪೂರ್ತಿ ಕಣ್ಣು ತೆರೆದು ಮಗನನ್ನು ನೋಡಿ;
‘ಕಂದಾ.. ನೀನು ಇಲ್ಲಿಯೇ ಇದ್ದೀಯಾ. ನನಗೇನೂ ಆಗಿಲ್ಲವಪ್ಪಾ, ಆದರೂ ಏನೋ ತೊಂದರೆ ಎನ್ನಿಸುತ್ತಿದೆ’ ಎಂದಳು.
‘ಅದು ಏನು ತೊಂದರೆ ಹೇಳಮ್ಮಾ’ ಎಂದು ಗೋಗರೆದ.
‘ಅದು ಬಿಡು, ನೀನು ಏನಾದರೂ ತಿಂದೆಯಾ ?’
‘ಇಲ್ಲಮ್ಮ.. ತಿಂಡಿ ಕೊಡೋಳು ನೀನೆ ಮಲಗಿ ಕೊಂಡಿದ್ದೀಯಾ.. ನನಗೆ ಯಾರು ಕೊಡ್ತಾರೆ ?’ ಎಂದು ಅಳುವುದಕ್ಕೆ ಪ್ರಾರಂಭಿಸಿದ.
‘ಏಕೋ.. ಅಳ್ತೀಯಾ ?’
‘ಅಮ್ಮಾ ನನಗೆ ಕೆಟ್ಟ ಹಸಿವು, ಇದನ್ನು ತಾಳಲಾರೆ’ ಎಂದ.
‘ಹೌದಾ ಕಂದ, ನಿನಗೆ ಹಸಿವು ಆಗಿದೆಯೇ ? ಅದು ಹೇಗೆ ತಿಳಿಯಿತು ?’
‘ಅಮ್ಮಾ ಅದರಿಂದ ನಾನು ಸಂಕಟ ಪಡುತ್ತಿದ್ದೇನೆ. ನಿನಗೆ ಹೇಗೆ ಹೇಳಲಿ’
‘ನಿನ್ನ ಕಷ್ಟ ನನಗೆ ಹೇಗೆ ಅರ್ಥವಾಗಬೇಕಪ್ಪ ಕಂದ. ತಿಳಿಸಿ ಹೇಳು ‘. ಎಂದು ಕೇಳಿದಾಗ;
‘ಅಮ್ಮಾ ನಾನು ಸತ್ತು ಹೋಗುತ್ತೇನೋ ಎಂದು ಆತಂಕವಾಗ್ತಿದೆ, ಕಣ್ಣು ಸುತ್ತುತ್ತಿವೆ, ಕೈಕಾಲುಗಳು ನಡುಗುತ್ತಿವೆ. ಒಟ್ಟಿನಲ್ಲಿ ಸಮಾಧಾನವೇ ಇಲ್ಲ’ ಎಂದ.
‘ಒಹ್ … ಈಗ ನಿನಗೆ ಹಸಿವು ಏನೆಂದು ತಿಳಿಯಿತು ಅಲ್ವ ? ನಿಮ್ಮ ಮೇಸ್ಟ್ರು ಏನೋ ಬರೆಯಲು ಹೇಳಿದ್ದಾರಲ್ಲ, ಈಗಲೇ ಅದನ್ನು ಅನುಭವಿಸಿ ಬರೆದು ಬಿಡು’ ಆಕೆ ಎಂದಾಗ,
ಆತನಿಗೆ ಮೇಸ್ಟ್ರ ನೆನಪು ಮೂಡಿತು ಮತ್ತು ಹಸಿವೆಯ ಬಗ್ಗೆ ಪ್ರಜ್ಞೆ ಮೂಡಿತು’ ಆಗ ಮಾದೇವ ಹೀಗೆ ಹೇಳಿದ;
‘ಅಮ್ಮಾ.. ಇನ್ನೂ ಸ್ವಲ್ಪ ಹೊತ್ತು ಇದನ್ನು ಸಹಿಸಿಕೊಂಡು, ಮೇಸ್ಟ್ರು ಹೇಳಿದ ಹಸಿವಿನ ಬಗ್ಗೆ ಬರೆದು ನಿನಗೆ ಮೊದಲು ತೋರಿಸುತ್ತೇನೆ, ಆಮೇಲೆ ಖಂಡಿತವಾಗಿ ಮೇಷ್ಟ್ರಿಗೆ ತೋರಿಸುತ್ತೇನೆ’ ಎಂದು ತನ್ನ ಬರವಣಿಗೆ ಆರಂಭಿಸಿದ.
ಸ್ವಲ್ಪ ಹೊತ್ತಾದ ಮೇಲೆ ಅಮ್ಮ ಬಿಸಿ ಬಿಸಿ ತಿಂಡಿಯನ್ನು ತಯಾರು ಮಾಡಿ ತನ್ನ ಮಗನಿಗೆ ಕೊಟ್ಟು ಹೀಗೆ ಕೇಳಿದಳು;
‘ತಿಂಡಿ ರುಚಿಯಾಗಿದೆಯಾ ಕಂದ’ ಎಂದು ಕೇಳಿದ್ದುದಕ್ಕೆ ಆತ;
‘ಅಮ್ಮಾ ಪ್ರತಿ ದಿನ ನೀನು ಮಾಡಿದ್ದುದಕ್ಕಿಂತ ಇಂದು ಬಹಳೇ ರುಚಿಯಾಗಿದೆ’ ಎಂದ.
‘ಅದು ಹೇಗೆ ?’
‘ಏನೋ ಅಮ್ಮ ಇವತ್ತು ನಿನ್ನ ಕೈರುಚಿ ತುಂಬಾ ಚೆನ್ನಾಗಿದೆ’ ಎಂದ.
‘ಅದು ಹಾಗಲ್ಲ ಕಣಪ್ಪ, ನೀನು ಹಸಿವಿನಿಂದ ಏನಾದರೂ ತಿನ್ನು ಅದು ರುಚಿಯಾಗಿರುತ್ತದೆ’ ಎಂದಳು.
ಅಮ್ಮನ ಈ ಹೇಳಿಕೆ ಕೂಡಾ ಮನನ ಮಾಡಿಕೊಂಡು, ತನ್ನ ಹಸಿವಿನ ಪ್ರಬಂಧದಲ್ಲಿ ಅದನ್ನೂ ಸೇರಿಸಿದ.
ಆಗ ಅವನು ಅಮ್ಮನಿಗೆ ಒಂದು ಪ್ರಶ್ನೆ ಹೀಗೆ ಕೇಳಿದ;
‘ಅಮ್ಮ ನಿನಗೆ ಹುಶ್ಯಾರು ಇರಲಿಲ್ಲ, ಅದ್ಹೇಗೆ ಎದ್ದು ಬಿಟ್ಟೆ ?’
‘ಅದೆಲ್ಲಾ ನಿನಗೆ ಹಸಿವಿನ ಪಾಠ ಕಲಿಸಲು ‘ ಎಂದು ಹೇಳಿದಾಗ;
‘ಅಯ್ಯೋ ನೀನೂ ಮೇಷ್ಟ್ರ ಜೊತೆ ಸೇರಿಕೊಂಡೀಯಾ ‘ ಎಂದು ನಗುತ್ತಾ ಕೇಳಿದ.
‘ಹ್ಞೂ.. ನಿನಗೆ ಪಾಠ ಕಲಿಸಲು ಗುರುಗಳೂ ಬೇಕು ಮತ್ತು ಅಮ್ಮನೂ ಬೇಕು ಅಲ್ವ ?’
‘ಹೌದಮ್ಮ’ ಎಂದು ನಕ್ಕ.
ಮಾರನೇ ದಿನ ಯಥಾ ಪ್ರಾಕಾರ ಮೇಷ್ಟ್ರು ಈ ಮೂವರನ್ನು ವಿಚಾರಿಸಿದಾಗ;
ಶಿವೂ ರಾಜನ ಬಗ್ಗೆ ಕಥೆ ಬರೆದದ್ದು ಓದಿದ. ಅದರಲ್ಲಿ ರಾಜನಿಗೆ ಒಂದು ಅರಮನೆ ಇತ್ತು, ರಾಣಿ ಮತ್ತು ರಾಜಕುಮಾರಿ ಇದ್ದಳು. ಅವರು ಭೋಗ ಜೀವನವನ್ನು ನಡೆಸುತ್ತಿದ್ದರು . ರಾಜನಿಗೆ ಬೇಟೆಯಾಡುವ ಹವ್ಯಾಸ ಇತ್ತು. ಹಾಗಾಗಿ, ಆತನು ತನ್ನ ಜೀವನವನ್ನು ಭೋಗದಿಂದ ಮತ್ತು ಬೇಟೆಯಾಡುವುದರಿಂದ ಕಾಲ ಕಳೆಯುತ್ತಿದ್ದ. ಆಮೇಲೆ ಒಂದು ದಿನ ಆತನು ರೋಗಗ್ರಸ್ತನಾಗಿ ಮರಣಿಸಿದ’ ಎಂದು ಹೇಳಿ ಮುಗಿಸಿದ.
ಆಮೇಲೆ, ಚಿಕ್ಕಣ್ಣ ತನ್ನ ಭೂತದ ಕಥೆಯನ್ನು ಪ್ರಾರಂಭಿಸಿದ ;
‘ನನಗೆ ಭೂತಗಳು ಎಲ್ಲೂ ಕಾಣಲಿಲ್ಲ, ನಮ್ಮ ಮನೆಯಲ್ಲಿ ಎಲ್ಲರನ್ನೂ ವಿಚಾರಿಸಿದೆ. ಅವರೆಲ್ಲಾ ಭೂತ ಇಲ್ಲವೇ ಇಲ್ಲ ಎಂದು ಹೇಳಿದರು. ಆದರೆ, ಮೇಸ್ಟ್ರಾದ ನೀವು ಭೂತದ ಬಗ್ಗೆ ಬರೆದುಕೊಂಡು ಬಾ ಎಂದಾಗ, ಬಹುಶಃ ಭೂತಗಳು ಇರಲೇಬೇಕು ಎಂದುಕೊಂಡೆ. ಅಂದು ರಾತ್ರಿ ಹಾಗೆಯೇ ಕನವರಿಸುತ್ತಾ ಮಲಗಿಕೊಂಡೆ. ರಾತ್ರಿಯಲ್ಲಿ ನನಗೆ ಕನಸು ಮೂಡಿ, ಅದರಲ್ಲಿ ಘನ ಘೋರ ಭೂತವೊಂದು ಬಂದು ನನ್ನನ್ನು ಕಾಡಲು ಪ್ರಾರಂಭಿಸಿತು. ಆಗ ತಕ್ಷಣವೇ ‘ ಅಮ್ಮಾ’ ಎಂದು ಕೂಗಿಕೊಂಡು ಎಚ್ಚರಗೊಂಡೆ. ಇಷ್ಟೇ ಭೂತದ ಕಥೆ ಎಂದ.
ಈಗ ಮಾದೇವನ ಸರದಿ ಬಂದು, ಅವನು ಎದ್ದು ನಿಂತು ಸ್ವಲ್ಪ ಹೊತ್ತು ಮೌನವಹಿಸಿದ. ಆಮೇಲೆ ಅವನ ಕಣ್ಣಲ್ಲಿ ನೀರು ಹುಟ್ಟಿಕೊಂಡವು. ಅಲ್ಲದೆ, ಆತ ದುಃಖಿಸತೊಡಗಿದ. ಅವನ ದುಃಖದ ದೃಶ್ಯ ನೋಡಿದ ಮಿಕ್ಕುಳಿದ ವಿದ್ಯಾರ್ಥಿಗಳು ಗಾಭರಿಗೊಂಡರು. ಆಗ ಮೇಸ್ಟ್ರು ಆತನ ಹತ್ತಿರಕ್ಕೆ ಹೋಗಿ, ಆತನ ತಲೆ ಮೇಲೆ ಕೈ ಇಟ್ಟು ನೇವರಿಸಿ ಹೀಗೆ ಕೇಳಿದರು ;
‘ನಿನಗೆ ಏನಾಯಿತು ಮಾದೇವ ? ಹೀಗೇಕೆ ಅಳುತ್ತಿದ್ದೀಯಾ ? ನೀನು ಏನೂ ಬರೆಯದಿದ್ದರೂ ಪರವಾ ಇಲ್ಲ, ಮುಂದೆ ಯಾವಾಗಲಾದರೊಮ್ಮೆ ಅದನ್ನು ಬರೆಯುವಂತೆ. ಈಗ ಅದರ ಚಿಂತೆ ಬೇಡ. ನಾನು ನಿನ್ನನ್ನು ಈಗ ಒತ್ತಾಯಿಸುವುದಿಲ್ಲ ಶಾಂತನಾಗು’ ಎಂದರು.
‘ಮೇಷ್ಟ್ರೇ.. ಮೇಷ್ಟ್ರೇ.. ನನಗೆ ಹೇಳಲು ಆಗುತ್ತಿಲ್ಲ. ಇಲ್ಲಿ ಬರೆದಿದ್ದೇನೆ ನೀವೇ ಓದಿ’ ಎಂದು ಅವರ ಕೈಗೆ ಬರೆದದ್ದನ್ನು ಕೊಟ್ಟ. ಅಲ್ಲಿ ಬರೆದಿದ್ದು ಮೇಸ್ಟ್ರು ಓದಿ ಮತ್ತೆ ಮತ್ತೇ ಅವನ ಕಡೆಗೆ ನೋಡಿದರು, ಆಗ ಆತ ಇನ್ನೂ ದುಃಖಿಸುತ್ತಲೆಯೇ ಇದ್ದ. ಆಗ ಮೇಸ್ಟ್ರು ಎಲ್ಲಾ ವಿದ್ಯಾರ್ಥಿಗಳನ್ನು ಕುರಿತು ಹೀಗೆ ಹೇಳಿದರು;
‘ಮಾದೇವ ಹಸಿವಿನ ಬಗ್ಗೆ ಬರೀ ತಿಳಿದುಕೊಂಡಿಲ್ಲ, ಆತನು ಅನುಭವಿಸಿ ಇಲ್ಲಿ ಬರೆದುದ್ದರ ಸಾರಾಂಶ ಓದಿ ಹೇಳುತ್ತೇನೆ ಕೇಳಿ ಎಂದು ಆರಂಭಿಸಿದರು;
ಸಾಮಾನ್ಯವಾಗಿ ತಾಯಿಯಾದವಳು ತನ್ನ ಮಗನಿಗೆ ಎಂದೂ ಹಸಿವೆ ಮೂಡಬಾರದೆಂದು, ತನ್ನ ತಿಂಡಿಯಲ್ಲಿನ ಅರ್ಧ ಭಾಗವನ್ನೂ ತನ್ನ ಮಕ್ಕಳಿಗೆ ಕೊಡುತ್ತಾಳೆ. ಹಾಗಾಗಿ, ತನ್ನ ಮಗುವಿಗೆ ಹಸಿವೆ ಎಂಬುದು ಮೂಡುವುದೇ ಆಕೆಗೆ ಇಷ್ಟವಿರುವುದಿಲ್ಲ. ನಿನ್ನೆಯ ದಿನ ಅವನ ತಾಯಿ ಹಸಿವಿನ ಬಗ್ಗೆ ತಿಳಿಸಿ ಹೇಳಬಹುದಿತ್ತು, ಆದರೆ, ತನಗೆ ಕಾಯಿಲೆ ಎಂದು ನಾಟಕವಾಡಿ, ಯಾವ ತಿಂಡಿ ತಯಾರಿಸದೆ, ಅಸ್ವಸ್ಥತೆಯ ನೆಪ ಹೇಳಿ ಮಲಗಿಬಿಟ್ಟಳು. ಆಗ ಆತನಿಗೆ ಮೆಲ್ಲಗೆ ಹೊಟ್ಟೆಯಲ್ಲಿ ಸಂಕಟ ಆರಂಭವಾಯಿತು. ಆಮೇಲೆ ಕ್ರಮೇಣವಾಗಿ ಅದು ತೀರಾ ಹಿಂಸೆ ಕೊಡಲು ಪ್ರಾರಂಭಿಸಿತು. ಆ ಹಿಂಸೆ, ಸಂಕಟವನ್ನು ಆತನು ಈ ಹಿಂದೆ ಅನುಭವಿಸಿದ ನೆನಪೇ ಇಲ್ಲ. ಈಗ ಅದು ಹಸಿವೆಯ ಸಂಕಟ ಎಂದು ಅರಿವಾಯಿತು. ಅವನ ಅಮ್ಮ ಅದನ್ನು ಈ ರೀತಿ ಮನದಟ್ಟು ಮಾಡಿ, ಪರೋಕ್ಷವಾಗಿ ತಿಳಿಸಿ ಹೇಳಿದಳು. ಆತನಿಗೆ ಈಗ ಅಳು ಬಂದದ್ದು ಏಕೆಂದರೆ, ಒಂದು ದಿನ ಒಂದು ಮೂಕ ಬಾಲಕ ಬರಿ ಮೈಯಲ್ಲೇ ಇದ್ದವನು ಅವರ ಮನೆ ಮುಂದೆ ನಿಂತು, ತನಗೆ ತಿನ್ನಲು ಏನಾದರೂ ಕೊಡಿ ಎಂದು ಒಮ್ಮೆ ಹೊಟ್ಟೆಯ ಮೇಲೆ ಕೈ ಎಳೆಯುತ್ತಿದ್ದ ಇನ್ನೊಮ್ಮೆ ತನ್ನ ಬಾಯಿವರೆಗೆ ಕೈ ಒಯ್ದು ಸಂಜ್ಞೆ ಮಾಡುತ್ತಿದ್ದ. ಅದನ್ನು ಸರಿಯಾಗಿ ಅರಿಯದೆ, ‘ನಿನ್ನದೇನು ಕಿರಿಕಿರಿ’ ಎಂದು ಮಾದೇವ ಆತನನ್ನು ಓಡಿಸಿಬಿಟ್ಟಿದ್ದ.
ಆ ಪಾಪದ ನೆನಪು ಈಗ ಬಂದಾಗ ದುಃಖವಾಯಿತು’ ಎಂದು ಇಲ್ಲಿ ಬರೆದಿದ್ದಾನೆ.
ಅದೆಪ್ಪ ಮೇಸ್ಟ್ರು ಮಾದೇವನನ್ನು ತಮ್ಮ ಬಳಿ ಕರೆದು ಎಲ್ಲಾ ವಿದ್ಯಾರ್ಥಿಗಳ ಸಮಕ್ಷಮ ಆತನನ್ನು ಆಲಂಗಿಸಿಕೊಂಡರು. ಅವನ ಹಣೆಯ ಮೇಲೆ ಒಂದು ಮುತ್ತು ಇಟ್ಟರು. ಆಗ ಮಾದೇವ ಮತ್ತೇ ದುಃಖಿಸತೊಡಗಿದ. ಮೇಸ್ಟ್ರು ಹಾಗೇಕೆ ಎಂದು ಕೇಳಿದ್ದುದಕೆ;
‘ನನ್ನ ಗುರುಗಳು ನೀವು, ಬರೀ ಶಾಲೆ ಪಾಠ ಹೇಳುತ್ತಿಲ್ಲ, ನೀತಿ ಪಾಠವನ್ನು ಹೇಳುತ್ತಿದ್ದೀರಿ ಇಷ್ಟು ದಿನ ನಿಮ್ಮನ್ನು ಅಷ್ಟಾಗಿ ಲಕ್ಷಿಸುತ್ತಿದ್ದಿಲ್ಲ. ಈಗ ನನಗೆ ತುಂಬಾ ಅರ್ಥವಾಗಿದೆ ಎಂದ. ಅಲ್ಲದೇ , ಎರಡೂ ಕೈ ಜೋಡಿಸಿ ಅವರ ಕ್ಷಮೆ ಯಾಚಿಸಿದ. ಆಗ ಗುರುಗಳು ಹೀಗೆ ಹೇಳಿದರು;
‘ಮಕ್ಕಳೇ, ನೀವು ಎಲ್ಲರೂ ಪ್ರಪಂಚವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿರಿ, ಏಕೆಂದರೆ, ಯಾರೂ ಎಲ್ಲಾ ಪಾಠವನ್ನು ಎಲ್ಲರಿಗೆ ಕಲಿಸಲು ಸಾಧ್ಯವಿಲ್ಲ. ಈ ಪ್ರಪಂಚದಲ್ಲಿ ಅರಿತು ಹೆಜ್ಜೆ ಇಡಬೇಕು ಆಗ ಜೀವನವೇ ಪಾಠ ಕಲಿಸುತ್ತದೆ.’ ಎಂದು ಹೇಳಿ ಅಂದಿನ ಪಾಠ ಮುಗಿಸಿದರು.
-ಬಿ.ಟಿ.ನಾಯಕ್,
ಹಸಿವಿನ ಕಥೆ ಚನ್ನಾಗಿದೆ. ಪ್ರಾಯೋಗಿಕವಾಗಿ ಅನುಭವಿಸಿದಾಗ ಆಗುವ ಅರ್ಥ ವಿಶೇಷ. ಅಭಿನಂದನೆಗಳು ಬಿ. ಟಿ.ನಾಯಕ್ ಅವರೇ.
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ಒಳ್ಳೆಯ ನೀತಿ ಪಾಠ ನಾಯಕರೇ. ಕಲಿಕೆ ನಿರಂತರ ಅಲ್ಲವೇ…?
ಅಭಿನಂದನೆಗಳು.
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ಗುರುಗಳ ಪಾಠ ಶಿಕ್ಷಣ ಕ್ರಮದ ಒಂದು ಭಾಗವಾಗಿ ಮಕ್ಕಳಲ್ಲಿ ಸೃಜನಶೀಲತೆಯನ್ನು ಕಲಿಸುವ ಉಪಕ್ರಮವಾಗಿ ಮೂಡಿದೆ. ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಬುದ್ಧಿವಂತರೆ. ವಿವಿಧ ಅಭಿರುಚಿಗಳಲ್ಲಿ ಶಕ್ತರೆ. ಅವರ ಈ ಪ್ರತಿಭೆಯನ್ನು ಹೊರ ತೆಗೆಯುವುದು ಗುರುಗಳ ಆದ್ಯ ಕರ್ತವ್ಯವೂ ಹೌದು.
ಹಸಿವಿನ ಕಥೆ ಅನುಭವದಿಂದ ಮೂಡಿ ಸಶಕ್ತವಾಗಿದೆ.
ಅಭಿನಂದನೆಗಳು.
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ಯಾರಿಗೆ ಆಗಲಿ ತಾವು ಸ್ವತಃ ಅನುಭವಿಸಿದಾಗ ಮಾತ್ರ
ಕಷ್ಟಗಳ ಅರಿವು ಆಗುತ್ತದೆ. ಮಾದೇವನ ತಾಯಿಯ ಉಪಾಯ ಫಲಿಸಿತು. ಮಗನಿಗೆ ಹಸಿವಿನ ಅರಿವು ಜೀವನ ಪಾಠವಾಯ್ತು. ಕತೆಯ ನೀತಿ ಚೆನ್ನಾಗಿದೆ.
ನಿಮ್ಮ ಅನಿಸಿಕೆ ನನಗೆ ಪ್ರೋತ್ಸಾಹ ತಂದಿದೆ.