“ಕತ್ತಲ ಹೂವು” ನೀಳ್ಗತೆ (ಭಾಗ ೧೪): ಎಂ.ಜವರಾಜ್

ಒಂಭತ್ತನೇ ಅಟೆಂಪ್ಟ್ ನಲ್ಲಿ ಎಸೆಸೆಲ್ಸಿ ಪಾಸು ಮಾಡಿದ ಚಂದ್ರ ಊರಲ್ಲಿ ಬೀಗುತ್ತಿದ್ದ. ಅವನ ಕಾಲು ನಿಂತಲ್ಲಿ ನಿಲ್ಲುತ್ತಿಲ್ಲ. ‘ಲೆ ಇವ್ನೆ ಎಸ್ಸೆಲ್ಸಿ ಪಾಸ್ ಮಾಡ್ಬುಟೆಂತ್ಯಾ ಸಕ್ರ ಬಾಳೆಣ್ಣು ಕೊಡಲ್ವ’ ಅಂತ ರೇಗಿಸಿದರೆ ಉಬ್ಬಿ ‘ಊ್ಞ ಕೊಡ್ತಿನಿ ಇರಿ’ ಅಂತ ಛಂಗನೆ ನೆಗೆದು ಓಡಿಬಿಡುತ್ತಿದ್ದ. ಈಗವನು ಅವನಣ್ಣ ಸೂರಿ ಮುಂದೆ ಹೆದರಿಕೆ ಇಲ್ಲದೆ ಕುಂತ್ಕತಿದ್ದ ನಿಂತ್ಕತಿದ್ದ ಮಾತಾಡ್ತಿದ್ದ. ಸೂರಿನು ತಮ್ಮನ ಎಸೆಸೆಲ್ಸಿ ಪಾಸಾದದ್ದನ್ನು ತನ್ನ ಜೊತೆಗಾರರಿಗೆ ‘ಅವ್ನ ಎಲ್ಯಾರ ಸೇರುಸ್ಬೇಕು. ಅಂತು ಇಂತು ಪಾಸಾಯ್ತಲ್ಲ’ ಅಂತ ಹೇಳ್ತ ಇದ್ದುದು ಚಂದ್ರನ ಆನಂದ ಮುಗಿಲು ಮುಟ್ಟಿತ್ತು. ಜಗುಲಿಯಿಂದ ಛಂಗನೆ ಜಿಗಿದು ಹೋಗ್ತಿದ್ದ ಚಂದ್ರನ ಅಂಗಿಯ ಕತ್ತಿನಪಟ್ಟಿ ಹಿಡಿದು “ಸಕ್ರ ಬಾಳೆಣ್ಣು ಕೊಡುಡಾ.. ಎಸ್ಸೆಲ್ಸಿ ಪಾಸ್ ಆಯ್ತು ಅಂತ ನಲಿತಿದೈ.. ಸಕ್ರ ಬಾಳೆಣ್ಣು ಕೊಡ್ನಿಲ್ಲ ಅಂದ್ರ ನಿನ್ ಜುಟ್ ಕಿತ್ತಾಕ್ತಿನಿ ನನೈದುನ್ ಕುಸೆ” ಅಂತ ಜಾಡಿಸಿ ಜಗ್ಗಿದಳು. ಚಂದ್ರ ‘ಬುಡಲೆಯ್ ತಂದ್ಕೊಡ್ತಿನಿ’ ಅಂತ ಅವಳಿಂದ ಕಿತ್ತುಕೊಂಡು ಸಂದಿಗುಂಟ ಓಡಿದ. ಅಲ್ಲಿ ಚೆನ್ನಬಸವಿ ಜಗುಲಿ ಮೇಲೆ ಅಯ್ಯೊ ಉಸ್ಸೊ ಅಂತ ನರಳುತ್ತ ಮಲಗಿದ್ದನ್ನು ನೋಡಿ ‘ಇದ್ಯಾಕ ದೊಡವ ಉಸಾರಿಲ್ವ’ ಅಂತ ಕೇಳಿದ. ಅವಳು ‘ಅಯ್ಯೋ ನನ್ ಕಸ್ಟ ಯಾರ‌್ಗೇಳ್ಳಿ.. ಸುಸ್ತು ಸಂಕ್ಟಕಪ್ಪ. ಅದಿರ‌್ಲಿ ಅದೇನ ಪಾಸಾಯ್ತಂತಲ್ಲ. ಹೋಗಪ್ಪ ನೀವೇ ಚೆನ್ನಗಿರಿ..’ ಅಂತಂದಳು. ಚಂದ್ರನಿಗೆ ದೊಡ್ಡವ್ವನ ಮಾತು ಅರ್ಥ ಆಯ್ತೊ ಏನೋ ಹಿರಿಹಿರಿ ಹಿಗ್ಗುತ್ತ ಜಗುಲಿ ಮೇಲೇ ಆಟ ಆಡ್ತ ಕುಂತಿರೋನು.

ಚೆನ್ನಬಸವಿ ಬಿದ್ದು ವಾರಾಯ್ತು. ಜನರಲ್ ಆಸ್ಪತ್ರೆಗೆ ಹೋಗಿ ಹೋಗಿ ಬಂದ್ರು ಏನೂ ಗುಣ ಆಗ್ದು. ಅಕ್ಕಪಕ್ಕದ ಹೆಂಗಸರು ಬಂದು ಕೇಳೋರು. ಅವರೊಂದಿಗೆ ಪಿಸುಗುಡುತ್ತ ಹೇಳೋಳು. ಚಂದ್ರ ಅವರ ಮಾತುಕತೆನ ವಾರೆಗಣ್ಣಲ್ಲಿ ನೋಡ್ತ ಕೇಳೋನು. ಅವನ ಅವ್ವನ ಕೂಗಿಗೆ ಓಡಿ ದಸ್ಸಬುಸ್ಸನೆ ಏದುತ್ತಾ ನಿಂತಾಗ ‘ಹೆಂಗುಸ್ರಿರ ಜಾಗ್ದಲ್ಲಿ ನಿಂಗೇನ್ ಕೆಲ್ಸ’ ಅಂತ ರೇಗ್ತಾ ಇದ್ದಳು. ಅದಕ್ಕೆ ಅವನು ‘ಅವ್ವ ದೊಡ್ಡವ್ವುನ್ಗ ಉಸಾರಿಲ್ಲ.. ನಳ್ತಿದ್ದ. ಅದೇನ ಸೆರಗಂತಕವ್ವ..’ ಅಂದ. ಅದಕ್ಕೆ ಸಿದ್ದಿ ಹಲ್ಲುಮುಡಿ ಕಚ್ಚಿ ಗದರಿದ್ದಳು.

ಇತ್ತ ನೀಲಳ ಜಡೆ ಬರ‌್ತಾ ಬರ‌್ತಾ ತಲೆ ಮೇಲೆ ಗುಪ್ಪೆಯಾಗಿ ಕುಂತಿತ್ತು. ಹಂಗೆ ಅದು ಉದ್ದವಾಗಿ ಬೆನ್ನಿಗಂಟ ಬಿದ್ದಿತ್ತು. ಮುಖ ಕಪ್ಪಿಟ್ಟು ಮೈಕೈ ಗಬ್ಬು ವಾಸನೆ ಹೊಡೆಯುತ್ತಿತ್ತು. ಯಾರೊ ಹಳೆದು ಒಂದ್ಜೊತೆ ಲಂಗದಾವಣಿ ಕೊಟ್ಟು ಹಾಕ ಚೆನ್ನಾಗ್ ಕಾಣುತ್ತ ಅಂದಿದ್ದರು. ಹಂಗೆ ಬದಲಾಯಿಸಿ ಬದಲಾಯಿಸಿ ಹಾಕ ಅಂತಾನೂ ಅಂದಿದ್ದರು. ಹಂಗಂದೇಟಿಗೆ ಒಳಗೋಗಿ ಉಟ್ಟಿದ್ದ ಲಂಗದಾವಣಿನ ಬಿಚ್ಚಾಕಿ ಮೂಲೆಗೆ ಇಟ್ಟು ಅವರು ಕೊಟ್ಟಿದ್ದನ್ನು ಹಾಕೊಂಡಳು. ಆಗ ಅವಳು ಐನಾತಿ ಹೆಣ್ತರ ಕಾಣ್ತ.. ಹೋಗೋರು ಬರೋರು ಚೆನ್ನಾಗ್ ಕಾಣ್ತ ಇದ್ದಯ್ ಅಂತ ಕೊಂಡಾಡ್ತ ಇದ್ದರೆ ನೀಲ ಕಿಸಿಕಿಸಿ ನಗೋಳು. ಅದರೊತ್ತಿಗೆ ಚೆನ್ನಬಸವಿ ‘ಮೇಯ್ ನೀಲ ಅವ್ರು ಬೇರೆ ಬಟ್ಟ ಕೊಟ್ರಲ್ಲ ನೀರುಯ್ಕಂಡು ಹಾಕಬಾರ‌್ದ” ಅಂತ ಅಂದಳು. ಅದಕ್ಕೆ ನೀಲ “ಅವೈ ನಿಂಗ ಬುದ್ದಿ ಇದ್ದ. ನೀರುಯ್ಕಳ್ದೆ ಹಾಕಂಡಿದ್ದನ.. ಹೋದೊರ‌್ಸ ಉಗಾದಿ ಹಬ್ದಲ್ಲಿ ಹೊಳಲೋಗಿ ಮುಳಿಕ ಬಂದರ‌್ನಿಲ್ವ..” ಅಂದಳು. ಚೆನ್ನಬಸವಿ “ನಿನ್ಗ ಹೇಳದು ಒಂದೆ ಬಾಯ್ಮುಚ್ಕ ಇರದು ಒಂದೆ” ಅಂತ ರೇಗುತ್ತ ಇದೇ ಒಂದು ಸವುಳು ಅಂತ ಅವಳು ಬಿಚ್ಚಾಕಿದ್ದ ಮುಟ್ಟಾಗಿರ ರಕ್ತ ಅಂಟಿ ರಟ್ಟುಗಟ್ಟುಕೊಂಡು ಕೊಳೆಕೊಳೆಯಾಗಿ ಗಬ್ಬುನಾತ ಬೀರುತ್ತಿದ್ದ ಲಂಗದಾವಣಿನ ಅವಳಿಗೆ ಗೊತ್ತಾಗದ ಹಾಗೆ ಮುದುರಿಕೊಂಡು ದಂಡಿನ ಮಾರಿಗುಡಿ ಮುಂಡುಗಳ್ಳಿ ಬೇಲಿಗೆ ಎಸೆದು ಬಂದಿದ್ದಳು.

ರಾತ್ರಿ ಸರೊತ್ತಿನ ತನಕ ತೆಂಗಿನ ಮರ ಒರಗಿ ನಿಂತು ಸಾಕಾಗಿ ಮಲಗಲು ಮನೆಗೆ ಬಂದು ರೂಮಿಗೆ ಹೋಗಿ ತಾನೀಗ ಹಾಕಿದ್ದ ಲಂಗದಾವಣಿ ಬಿಚ್ಚಿ ಕತ್ತಲಲ್ಲಿ ಕೈಯಾಡಿಸಿದಳು. ಅವಳು ಬೆಳಗ್ಗೆ ಬಿಚ್ಚಾಕಿದ್ದ ಕೊಳೆ ತುಂಬಿ ಗಬ್ಬುನಾತ ಬೀರುತ್ತಿದ್ದ ಲಂಗದಾವಣಿ ಕೈಗೆ ಸಿಗದೆ ಆ ಸರೊತ್ತಲ್ಲಿ ಕಿರುಚಿಕೊಂಡಳು. ಮಲಗಿದ್ದವರು ದಡಬಡ ಎದ್ದು ಬಂದು ಕಡ್ಡಿಗೀರಿ ಲಾಟೀನು ಹಸ್ಸಿ ಏರಿಸಿದರು. ಲಾಟೀನು ಬೆಳಕು ಮನೆನೆಲ್ಲ ಅಡರಿಕೊಂಡು ನೀಲಳ ರೂಮನ್ನೂ ಹೊಕ್ಕಿತು. ಅವಳು ಮೈಮೇಲೆ ಬಟ್ಟೆ ಇಲ್ಲದೆ ಕಿರುಚುತ್ತಲೇ ಇದ್ದಳು. ಚೆನ್ನಬಸವಿ ಎಲ್ಲರನ್ನು ಈಚೆ ಕಳಿಸಿ ರಗ್ಗು ಹೊದ್ದಿಸಿ “ಏ ಏನ.. ಏನಾಗಿದ್ದು ನಿಂಗ.. ಯಾಕ ನಮ್ಮ ಹಿಂಗ್ ಗೊಳುಯ್ಕಂಡೈ” ಅಂತ ಅಂದಳು. ನೀಲ “ಇಂಜದಲಿ ಲಂಗದಾವ್ಣಿ ಬಿಚ್ಚಾಕಿದ್ನಲ್ಲ ಅದಿಲ್ಲ.. ಅದ್ಯಾರ ಎತ್ಕ ಹೋಗರ… ನಾ ಏನ್ಮಾಡ್ಲಿ” ಅಂತ ಗೋಳಾಡಿದಳು. ಚೆನ್ನಬಸವಿ ಏಯ್ ನಾಯಿಮುಂಡ ಅದ್ಯಾತಿಕ್ಯ ನಿಂಗ. ಹೋದ್ರ ಹೊಯ್ತು. ಇಲ್ಲಿಲ್ವ ಅದ್ನೆ ಹಾಕ’ ಅಂತ ರಗ್ದು ಎಳೆದು ಅವಳ ಮೈಮೇಲೆ ಹೊದ್ದಿಸಿದಳು. ಆಗ “ಬ್ಯಾಡ ಬುಡು.. ಅದದ್ನೆ ಹಾಕಂಡರ.. ಬದ್ಲಾಯ್ಸಿ ಹಾಕಬೇಕು ಅಂತ ಹೇಳರ. ಇಂಜದಿಂದ ಇದ್ನೆ ಹಾಕಂಡಿದ್ದಿ ಈಗ್ಲು ಇದ್ನೆ ಹಾಕಬೇಕ.. ನಾ ಹಾಕಳಲ್ಲ ನಂಗ ಅದೇ ಬೇಕು. ಅದ್ಯಾರ ಕದ್ಕ ಹೋಗರ ನಡಿ ಕಂಪ್ಲೇಟ್ ಕೊಟ್ಬುಟ್ ಬರಂವ್” ಅಂತ ಚಂಡಿ ಹಿಡಿದು ಅಳತೊಡಗಿದಳು. ಚೆನ್ನಬಸವಿ “ಏನ್ನ ಕಂಪ್ಲೇಟ್ ಕೊಡದು.. ಅದು ಬಂಗಾರ ನೋಡು ಕಂಪ್ಲೇಟಂತ ಕಂಪ್ಲೇಟು” ಅಂತ ಅಂದರೂ ಅವ ಬಿಡದೆ ರಂಪ ಮಾಡತೊಡಗಿದಳು. ಮಗ ಸಿದ್ದೇಶ ಗವ್ ಅಂತಿದ್ದ ಸಂದಿಲಿ ನಿಂತು ದೊಣ್ಣೆ ಹುಡುತ್ತ “ಅವ್ಳ ಸಿಗ್ದಾಕ್ತಿನಿ ಬುಡಿಲ್ಲಿ” ಅಂತಿದ್ದ. ನೀಲ ಅರಚುತ್ತಲೇ ಇದ್ದಳು. ಚೆನ್ನಬಸವಿ ಹೊರಕ್ಕೆ ಬಂದು ರೂಮಿಗೆ ಚಿಲಕ ಹಾಕಿ ಲಾಟೀನು ಹಿಡಿದುಕೊಂಡು ಸಿದ್ದೇಶನನ್ನು ಕರೆದುಕೊಂಡು ದಂಡಿನ ಮಾರಿಗುಡಿ ಮುಂಡಗಳ್ಳಿ ಬೇಲಿ ಹತ್ತಿರಕ್ಕೆ ಹೋಗಿ ಆ ಗಬ್ಬುನಾತ ಬೀರುತ್ತಿದ್ದ ಲಂಗದಾವಣಿನ ಎತ್ತಿಕೊಂಡು ಬಂದು ಅವಳ ಮುಖಕ್ಕೆ ಎಸೆದಿದ್ದಳು. ಅದನ್ನು ನೋಡಿದ ನೀಲ ರೂಮಿನೊಳಗೆ ಅತ್ತಿತ್ತ ಹೆಜ್ಜೆ ಇಡುತ್ತ ತುಟಿ ಕುಣಿಸುತ್ತ ಗಬ್ಬುನಾತ ಬೀರುತ್ತಿದ್ದ ಲಂಗದಾವಣಿ ಹಾಕೊಂಡು ಕುಣಿಯತೊಡಗಿದಳು.

                         *

ಅವತ್ತು ಅಮವಾಸೆ ಕತ್ತಲು. ಗವ್ವ್ ಅಂತಿತ್ತು. ಬೀದಿಲಿ ನಿಂತು ತೂ ತೂ ಅಂತ ಗವ್ಗತ್ತಲನ್ನ ಉಗಿತ ಬೈಯೋಳು. ದಾವಣಿಗೆ ಮಣ್ಣು ತುಂಬಿಕೊಂಡು ಬಂದು ತೆಂಗಿನ ಮರದ ಬುಡಕ್ಕೆ ಸುರಿದು ಗುಡ್ಡೆ ಹಾಕಿ ಅದರ ಮೇಲೆ ಕುಂತು ನಗೋಳು. “ಅವ್ನೆ ಬಾಗುಲ್ ತಟ್ಟುದ್ದು.. ಅವ್ನ್ ಬಂದಾಗ ಹಿಂಗೆ ಕತ್ಲಿತ್ತು.. ತೂ ನನೈದುನ್ ಕತ್ಲೆ. ಅದ್ಯಾತಿಕ್ ಬಂದಿದ್ದ.. ಬ್ಯಾಡ ಬ್ಯಾಡ ಅಂದ್ರುವ ಹಿಡ್ದೆಲ್ಲ.. ನನ್ನ ಹಿಡ್ದು ಎಳ್ಕಂಡೆಲ್ಲ.. ಆ ಕೂಸು ಅಳ್ತಿತಲ್ಲ.. ನನ್ ಗಂಡ ಇರ‌್ನಿಲ್ಲ.. ಇದ್ದಿದ್ರ ನಿನ್ ರಕ್ತ ಕುಡಿಯಂವ… ತೂ ನನೈದುನ್ ಕುಸೆ. ಲೇಯ್ ಎಲ್ಲಿಗೋದ.. ಕತ್ಲೊಳ್ಗ ಸೇರ‌್ಕಂಡು ನಗ್ತಿದ್ದಯ.. ಬಾ ಸಟ್ಗ ಇಲ್ಲಿ ನಿನ್ ರಕ್ತ ಕುಡಿತಿನಿ… ಅಲ್ಲ ಬ್ಯಾಡ ಬ್ಯಾಡ ಅಂದ್ರುವ ಕೂಸು ಅಳ್ತುದ ಅಂದ್ರುವ ನನ್ ಬಟ್ಟ ಬಿಚ್ಚಿ ಕೆಡಿಕಂಡ್ಯಲ್ಲ.. ಆ ಕೂಸ್ಮೇಲ ಕಾಲಿಟ್ಟೆಲ್ಲ… ಕಾಲಿಟ್ಬುಟ್ಟು ಅದ್ರ ಅಳ ನಿಲ್ಲುಸ್ದೆಲ್ಲ.. ಎಲ್ಲಿದ್ದಯ್ ಬಾ ನನೈದುನ್ ಕೂಸೆ ನಿನ್ ರಕ್ತ ಕುಡಿತಿನಿ..” ಅಂತಂತ ಆ ಕತ್ತಲಾದ ಕತ್ತಲಿಗೆ ತೂ ತೂ ಅಂತ ಉಗಿಯತೊಡಗಿದಳು.

ಸರೊತ್ತು ಆಗಿತ್ತು. ಇವಳ ಬೊಯ್ಯೊದು ಉಗಿಯೋದು ಸಂದಿಗೆಲ್ಲ ಕೇಳ್ತ ಆಚೀಚೆ ಮನೆಗಳಿಗೂ ಕೇಳ್ತಿತ್ತು. ಆಗ ಕೆಮ್ಮಿ ಕ್ಯಾಕರಿಸಿ ಕಡ್ಡಿಗೀರಿ ಬೀಡಿ ಹಸ್ಸಿ ಸೇದುತ್ತಾ ತಾಳ ತಗ್ದು ಈಚೆ ಬಂದ ಶಿವಯ್ಯ ಆ ಕತ್ತಲೊಳಗೆ ದಮ್ಮು ಎಳೆಯುತ್ತ ಸುಮ್ಮನೆ ಅವಳ ಮುಂದೆ ನಿಂತನು. ಬುಡ್ತಿ ಕೊಡ್ದೆ ಒಂದೇ ಸಮ ತೂ ತೂ ಅಂತ ಉಗಿತಾ ಬೈತಾ ಇದ್ದ ನೀಲ ಬೀಡಿಲಿದ್ದ ಕಿಡಿ ನೋಡ್ತ ಬೈಯೊದನ್ನ ನಿಲ್ಲಿಸಿ “ಶಿವಪ್ಪ ಶಿವಪ್ಪವ್ ಇದ್ಯಾಕ ಇಸ್ಟೊತ್ಲಿ ಹಿಂಗ್ಬಂದು ನಿಂತಿದ್ದಯ್.. ಹೋಗು ಮನಿಕ. ಅಮಸ ಕತ್ಲಲಿ ಐಕ್ಳ ಬುಟ್ಬುಟ್ಟು ಈಚ್ಬಂದು ನಿಂತಿದ್ದಯಲ್ಲ.. ಹೋಗು ನಾ ಅವ್ನಿ ಯಾರ್ ಬಂದ್ರು ಬಾಗ್ಲು ತಟ್ಟಕ ಬುಡದಿಲ್ಲ ಕಣ. ಯಾರ‌್ಯಾರ ಬಂದು ಬಾಗ್ಲು ತಟ್ಟುದ್ರ ಅವ್ರ್ ರಕ್ತ ಕುಡಿತಿನಿ ಹೋಗು ಮನಿಕ. ಹೋಗು ಐಕ ಎದ್ದು ಅತ್ತವ್..’ ಅಂದಳು.

ಶಿವಯ್ಯ ಬೀಡಿ ಸೇದ್ತಾ ಕೆಳಗಿಟ್ಟು ” ನೀ ಹೋಗವ ಮನಿಕ ನಿದ್ರಗೆಟ್ರ ಸಲಿರ ಯಾತಿಕಾದ್ದು ಹೋಗವ..” ಅನ್ನುವಾಗ ಚೆನ್ನಬಸವಿ ಸೆರಗ ತಲೆ ಮೇಲೆ ಹಾಕೊಂಡು ಸಂದಿ ಗೋಡೆ ಹಿಂಡ್ಕಂಡು ಬಂದು “ಬಮ್ಮಿ ಯಾಕ ಹೊಟ್ಟ ಉರಿಸ್ದಯ್.. ನಡ್ರಾತ್ರಲಿ ಹಿಂಗ್ ನಿಂತಿದ್ದಯಲ್ಲ ನಿನ್ ಬೆರ‌್ಗೆತ್ತ ಬಾ..” ಅಂತ ಬೈದಳು. ಶಿವಯ್ಯ “ಸುಮ್ನಿರಿ ಅಮಾಸ.. ಏನು ಅನ್ಬೇಡಿ” ಅಂತ ಮೆಲ್ಲಗೆ ಅಂದ. ಆಗ ನೀಲ ಕಟಕಟ ಹಲ್ಲು ಕಡಿಯುವುದು ಕೇಳಿತು. “ಏಯ್.. ಏಯ್ ನಂಗ ಬೆರ‌್ಗ.. ನಿಂಗ.. ನಿಂಗ ಬೆರ‌್ಗು” ಅಂತ ಆ ಗವ್ಗತ್ತಲೊಳಗೆ ಅವರಿಬ್ಬರನ್ನು ಜೋರಾಗಿ ತಳ್ಳಿದ. ಅವಳು ತಳ್ಳಿದ ರಭಸಕ್ಕೆ ಶಿವಯ್ಯ ಮೋರಿಗೆ ಬಿದ್ದ. ಚೆನ್ನಬಸವಿ ಅಯ್ಯೊ. ಅಂತ ತಿರುಗಿದಳು. ಅವಳು ಅರಚುತ್ತ “ನಿಮ್ ಬಾಯ್ಗಳ್ಗ ನನ್ನುಚ್ಚ ಉಯ್ಯಕಣಕು.. ಉಣ್ಣಕು ಬುಡಲ್ಲ ತಿನ್ನಕು ಬುಡಲ್ಲ.. ನಿಂತ್ಕಳಕು ಬುಡಲ್ಲ ಕುಂತ್ಕಳಕು ಬುಡಲ್ಲ.. ನಾ ಇರದೆ ಸಂದಿ ಕಾಯಕ.. ಅಂವ ಬಂದ್ರ ಬಾಗ್ಲ ತಟ್ಟಿ ಕೂಗುದ್ರ ಹಿಡ್ದು ರಕ್ತ ಕುಡಿಯಾಕ ಅಂತ ನಾ ನಿಂತಿರದು.. ಊ್ಞ, ಓಡ್ಬಂದರ ಮನಿಕಳ್ದೆ.. ನಂಗೇನ ಹೋಗು ಏನಾರ ಆಗ್ಲಿ ತಕ್ಕ. ನೋಡ್ಕಳಿ ಇವತ್ತಲ ನಾಳ ಅಂವ ಬತ್ತನ. ಬಂದೇ ಬತ್ತನ. ಬಾಗ್ಲ ತಟ್ತನ. ನಿಮ್ಮೆಲ್ರು ಬಟ್ಟನು ಬಿಚ್ಚಾಕ್ತನ. ಕೂಸುಕುರಿನೆಲ್ಲ ತುಳ್ದು ಸಾಯಿಸ್ತನ..” ಅಂತ ಮನೆಯೊಳಕ್ಕೋಗಿ ದಡಾರನೆ ಬಾಗಿಲು ತಳ್ಳಿದ್ದು ಸಂದಿಗೆಲ್ಲ ತಟ್ಟಿ ಆ ಸದ್ದಿಗೆ ಆ ಗವ್ಗತ್ತಲೂ ಅಂಜಿ ಗೂಡಿನ ಮಕ್ಕರಿ ಹೊತ್ತು ಸಾಕಾಗಿ ಕುಡಿದು ಮಲಗಿದ್ದ ಸೂರಿಯನ್ನು ಬಡಿದೆಬ್ಬಿಸಿತು.

ಆ ಸೂರಿ ಮೈಕೈ ಕೆರೆಯುತ್ತ ಈಚೆ ಬಂದು ಮೋರಿಯಲ್ಲಿ ಬಿದ್ದ ಅಪ್ಪನನ್ನು ಮೇಲೆತ್ತಿ ಕೇಳಿದ. ಶಿವಯ್ಯ ಸೂರಿಗೆ ಹೇಳಿದ. ಕಾಲು ತೊಳೆದುಕೊಳ್ಳಲು ಕೊಳದಪ್ಪಲೆಯಲ್ಲಿ ನೀರು ತಂದುಕೊಟ್ಟ ಸೂರಿ “ನೀನ್ಯಾಕ ಈಚ ಬರಕೋದ ಈ ಅಮಾಸ ಕತ್ಲಲಿ. ಹೊಸ್ದ ಇದು. ಅವ ಹಂಗೆ ತಾನೆ. ಅಮಸ ಹುಣ್ಮ ಬಂದ್ರ ಇದೊಂದ್ ಗೋಳು ನಮ್ಗ. ಅವತ್ತು ನೋಡುದ್ರ ನಂಜನಗೂಡವ್ರು ಮನ ನೋಡಕ ಬಂದಾಗ ಇವ್ಳ ಯಾಸ ನೋಡಿ ನಮ್ ಮನ್ಗ ಹೆಣ್ ಕೊಡದ ಬ್ಯಾಡ್ವ ಅಂತಿದ್ರಂತ..” ಅಂತ ಒಂದೇ ಸಮನೆ ಮಾತಾಡಿ ಬಾಗಿಲಾಕಿ ರಗ್ಗು ಮುದುಡಿ ಮಲಗಿದ.

                       *

ಸೂರ್ಯ ಮೂಡ್ತಿತ್ತು. ನೀಲ ಆ ಸೂರ್ಯ ಮೂಡೋ ಮುನ್ನವೇ ಬಂದು ತೆಂಗಿನ ಮರ ಒರಗಿ ನಿಂತಿದ್ದಳು. ಚೆನೈನ್ ಗುಡಿ ಎದುರ‌್ಗ ಸೋಮಯ್ಯ ಟೀ ಅಂಗಡಿ ಇಟ್ಟುಕೊಂಡಿದ್ದ. ಅಲ್ಲಿಗೆ ಹೋಗಿ ನಿಂತರೆ ಅವನೇ ಕರೆದು ಲೋಟ ತಕ್ಕ ಬಾ ಟೀ ಕೊಡ್ತಿನಿ ಅಂತ ಅನ್ನುತ್ತಿದ್ದ. ಇದು ಹೊಸದಲ್ಲ ಮೊದಲಿಂದಲು. ಅವಳು ಗುಡುಗುಡನೆ ಓಡಿ ಹೋಗಿ ತೆಂಗಿನ ಮರದ ಬುಡದಲ್ಲಿ ಮಣ್ಣು ತುಂಬಿ ಇಟ್ಟಿದ್ದ ಲೋಟ ಎತ್ತಿಕೊಂಡು ಮಣ್ಣನ್ನು ಕೆಳಕ್ಕೆ ಸುರಿದು ಸೋಮಯ್ಯನಿಂದ ಟೀ ಉಯ್ಯಿಸಿಕೊಂಡು ಬಂದು ತೆಂಗಿನ ಮರದಡಿ ನಿಂತು ಕುಡಿಯುತ್ತ ನೊಚ್ಚಗೆ ಮಾಡಿಕೊಳ್ಳುತ್ತಿದ್ದಳು.

ಆಗ ಮೊಬ್ಬಿಗೆ ಎದ್ದು ನೀರ‌್ಕಡೆ ಹೋಗಿದ್ದ ಸೂರಿ ಹೊಳೆ ದಾರಿಗುಂಟ ಬಂದು ಸೋಮಯ್ಯನ ಅಂಗಡಿ ಕಲ್ಲಾಸಿನ ಮೇಲೆ ಕುಂತು ಟೀ ಈಸಿಕೊಂಡು ಕುಡಿಯುತ್ತಿದ್ದ ಸೂರಿಯನ್ನು ಮದುವೆ ಬಗ್ಗೆ ಕೇಳಿ “ಲಗ್ನಗಿಗ್ನ ಕಟ್ಸುದ್ರ್ಯಾ” ಅಂದ.

ಈಗಾಗಲೇ ಸೂರಿಗೆ ಮದುವೆ ಫಿಕ್ಸ್ ಆಗಿತ್ತು. ಮನಶಾಸ್ತ್ರನೂ ಆಗಿತ್ತು. ಅವತ್ತು ಮನಶಾಸ್ತ್ರ ದಿನ ನೀಲ ಬಂದವರಿಗೆಲ್ಲ ಕ್ಯಾಕರಿಸಿ ಉಗಿದಿದ್ದಳು. ಆಮೇಲೆ ಚೆನ್ನಬಸವಿನೆ ಬಂದು ಈಗೀಗ ಅಂತೇಳಿ ನೆಂಟರಿಗೆಲ್ಲ ಹೇಳಿದ್ದಳು. ಸೋಮಯ್ಯನ ಮಾತಿಗೆ “ಇಲ್ಲ ಈಗ್ಲೆ ಯಾಕ ಕಡ ಲಗ್ನುಕ್ಕ ಇಡಂವ್ ಅಂತ” ಅಂದ. “ಸೂರಿ ಒಂದ್ಮಾತು ಹೇಳ್ತಿನಿ.. ಮದ್ವಗಿದ್ವ ಆದ್ರ ನೆಂಟ್ರು ಗಿಂಟ್ರು ಬಂದವ್ರು ಗಬ್ಬುನಾತ ಬೀರ ನೀಲನ್ನ ನೋಡಿ ಸಿಬ್ರಿ ಪಡ್ತರ. ಅವ್ಳ ವಸಿ ಕ್ಲೀನ್ ಮಾಡುದ್ರ ಸರ‌್ಯಾಗಲ್ವ ನೋಡು” ಅಂದ. ಸೂರಿ ಮನಸ್ಸಲ್ಲೆ ‘ಹ್ಞು ಇಲ್ಲಿಗಂಟ ನಂಗ ಈ ಐಡಿಯಾನೇ ಬಂದಿರ‌್ನಿಲ್ಲ. ಸೋಮಯ್ಯ ಹೇಳ್ತಿರದು ಸರಿ” ಅಂತ ಅಂದುಕೊಂಡು ‘ಅವ ಬಗ್ಗಿಳ.. ದೊಡ್ಡವ್ವ ಇದ್ಕ ಒಪ್ಪಿಳಾ.. ಮೊದ್ಲೇ ನಮ್ ಕಂಡ್ರ ಕಿತ್ತು ನಿಂತ್ಕತಳ ಏನ್ಮಾಡದು’ ಅಂತಾನೆ ಸೋಮಯ್ಯನಿಗೆ ಈಗೀಗ ಅಂತಂದ. ಸೋಮಯ್ಯ “ನಿಮ್ ದೊಡ್ಡವ್ವ ಬಂದ್ರ ನಾ ಹೇಳ್ತಿನಿ ಒಂದಷ್ಟು ಐಕ್ಳ ಕರ‌್ಕಂಡೋಗಿ ವಸಿ ಮುತುವರ್ಜಿ ವಯಿಸು” ಅಂದ.

                            *

ವಾರ ಕಳಿತು. ಅವತ್ತು ಭಾನುವಾರ. ಅಯ್ಯೊ ಉಸ್ಸೊ ಅಂತಿದ್ದ ಚೆನ್ನಬಸವಿಗೆ ಯಂಕ್ಟಪ್ಪ ಬಂದನೇನ. ತಾರ‌್ಸಿ ಗುಡ್ಸಿ ರಂಗೋಲ ಬುಟ್ಟಿರದು ನೋಡುದ್ರ ಬಂದೆ ಬರಬೋದು. ಈ ಸುಶೀಲ ಐಕ್ಳ ಕಟ್ಕಂಡು ನೆನ್ನ ಬಂದಾಗ್ಲೆ ಗೊತ್ತಾಗಿತ್ತು.

ಸಿದ್ದಿ ಹಳೆ ಒಲೆ ಹಸ್ಸಿ ನೀರು ಕಾಯಿಸುತ್ತಿದ್ದಳು. ಆ ನೀರು ಕಾದು ಹಳಗದಿಂದ ಹೊಗೆ ಏಳುತ್ತಿತ್ತು.

ಮೊಬ್ಬಿಗೆ ನಾಲ್ಕಕ್ಕೆ ಎದ್ದಿದ್ದ ಸೂರಿ ನೀರ‌್ಕಡೆ ಹೋಗಿ ಬಂದಾಗ ಮನ್ಗಿದ್ದ ಜನಾನು ಎದ್ದಿರಲಿಲ್ಲ ಹೊತ್ತೂ ಮೂಡಿರಲಿಲ್ಲ. ಆಗ “ಅವೈ ಅವ್ವ ವಸಿ ನೀರ್ ಕಾಯಿಸ್ದಯ ತಲ ಕಟಿಂಗ್ ಮಾಡುಸ್ಕ ಬತ್ತಿನಿ ಎಲ್ಯಾ ಹೋಗ್ಬೇಕು. ಹೊತ್ತುಮುಂಚೆ ವಸಿ ಕೆಲ್ಸ ಅದ” ಅಂದ. ಸಿದ್ದಿ “ಇದ್ಯಾಕ ಇಂವ ಎಂದು ಇಲ್ದೆ ಇವತ್ತು ಇಸ್ಟೊತ್ಗೆ ನೀರ್ ಕಾಯ್ಸು ಅಂತಂದನು” ಅಂತ ಗೊಣುಗ್ತ ಏನೂ ಕೇಳ್ದೆ ಹಳೆ ಒಲೆ ಮೇಲುಕ್ಕೆ ದೊಡ್ಡಳಗ ಮಡ್ಗಿ ಚಂದ್ರನ್ನ ಏಳ್ಸಿ ಎರಡು ಪ್ಲಾಸ್ಟಿಕ್ ಬಿಂದ್ಗ ತಗಂಡು ಬೋರಿಂಗಿಗೆ ಹೋಗಿ ಬೋರಿಂಗ ಒತ್ತಿ ಒಂದೆರಡು ಸಲ ನೀರು ತಂದು ಹಳಗ ತುಂಬ ತುಂಬಿ ಆಲದ ತರಗು ಕಸ ಕಡ್ಡಿ ತಂದು ಒಲೆ ಒಳಕ ಹೊಟ್ಟಿ ಬೆಂಕಿ ಹಸ್ಸಿದ್ದಳು.

ಈ ಸೂರಿ, ಅವ್ವುನ್ಗ ನೀರ್ ಕಾಯ್ಸು ಅಂತೇಳಿ ಓಡ್ಬಂದು ಚೆನೈನ್ ಗುಡಿಲಿ ಮನ್ಗಿದ್ದ ಪುಂಡೈಕಳ ಏಳ್ಸಿ ತೆಂಗಿನ ಮರ ಒರಗಿ ನಿಂತಿದ್ದ ನೀಲನ್ನ ಬಾಯಿ ಅಮಿಕಂಡು ತಬ್ಬಿಡಿದು ತಿರುಮಕೂಡಲು ಸರ್ಕಲ್ಗ ಎತ್ಕಂಡೋಗಿ ಸೇತುವೆ ಮಗ್ಗುಲಲ್ಲಿ ಕೆಡಿಕಂಡು ಹಿಡಿದು ಈಗಾಗಲೇ ಕಟಿಂಗ್ ಶಾಪಿನವನಿಗೆ ದುಡ್ಡುಕೊಟ್ಟು ಅಡ್ಜೆಸ್ಟ್ ಮಾಡಿಕೊಂಡಿದ್ದವನು ಬ್ಲೇಡು ಕತ್ತರಿ ತಂದು ಅವಳ ತಲೆ ಕೂದಲು ಕತ್ತರಿಸಿ ನೀರು ಚಿಮುಕಿಸಿ ಬ್ಲೇಡಿನಲ್ಲಿ ತಲೆ ಬೋಳಿಸಿದ.

ಒಂದು ವಾರದಿಂದ ನೀಲಳಿಗೆ ಕಟಿಂಗ್ ಮಾಡಿ ತಲೆ ಬೋಳಿಸಲು ಕೇಳಿ ಕೇಳಿ ಸಾಕಾಗಿತ್ತು ಸೂರಿಗೆ. ಅವನು ಒಪ್ಪದೆ ನೆಪ ಹೇಳಿ ತಿರುಗುತ್ತಿದ್ದ. ನೆನ್ನ ರಾತ್ರಿ ಸಿಟ್ಟುಗೊಂಡ ಆ ಕಟಿಂಗ್ ಶಾಪ್ ಹುಡುಗ “ನೀ ಲಕ್ಸ ಕೊಟ್ರು ಆ ಹುಚ್ಚಿಗ ನಾ ಕಟಿಂಗ್ ಮಾಡಲ್ಲ. ಮುಂದ ನಿಂತ್ಕಂಡ್ರೇ ಅಪಾಟಿ ನಾತ ಹೊಡಿತಳ ಅಂತದ್ರಲ್ಲಿ ಅವ್ಳ್ ತಳ ಕಟ್ಮಾಡಿ ಬೋಳುಸ್ಬೇಕಾ.. ತೂ ನಾ ಮಾಡಲ್ಲಕಪ. ಇದ ನಮ್ಮೊರೆಲ್ಲ ನೋಡುದ್ರ ನಾ ಇಲ್ಲಿ ತಲ ಎತ್ಕ ತಿರ‌್ಗದಿರ‌್ಲಿ ಬದ್ಕಕೂ ಬುಡಲ್ಲ..” ಅಂತ ಅಂದಿದ್ದ. ಆಮೇಲೆ ಸೂರಿ ಅವನಿಗೆ ಏನೇನೋ ಹೇಳಿ ಒಪ್ಸಿದ್ದ. ಅದೂ ಅಲ್ದೆ ಸೂರಿ ಅವನಿಗೆ ಗೂಡುನ್ ಮಾರ್ಕೆಟ್ ನಲ್ಲಿ ಗೂಡು ವ್ಯಾಪಾರಕ್ಕೆ ಸಾಬರಿಗೆಲ್ಲ ಹೇಳಿ ದುಡ್ಡುಕಾಸು ಕೊಡ್ಸಿ ಚಿಲ್ರ ಗೂಡ್ನೆಲ್ಲ ಇವ್ನೇ ಖರೀದಿ ಮಾಡತರ ಮಾಡಿದ್ದ. ಕಟಿಂಗ್ ಶಾಪ್ ಜೊತ್ಗ ಗೂಡುನ್ ವ್ಯಾಪಾರನು ಅವನಿಗೆ ಜೇಬು ತುಂಬಿಸಿತ್ತು. ಇನ್ನು ಸೂರಿನ ಎದುರಾಕೊಂಡ್ರೆ ಗೂಡುನ್ ವ್ಯಾಪಾರ ಕಷ್ಟ ಅಂತ ಉಪಾಯದಲ್ಲಿ ಒಂದ್ ಕಂಡೀಷನ್ ಹಾಕ್ದ. ಮೊಬ್ಗೆ ಜನ ಏಳಕು ಮುಂಚೆ ಕರ‌್ಕ ಬಂದ್ರ ನನ್ ಕೆಲ್ಸ ಮುಗಿಸಿಕೊಡ್ತಿನಿ ಅಂತ ಅವನೇ ಜಾಗನು ಹೇಳಿದ್ದ. ಹಾಗಾಗಿ ಸೂರಿ ಪ್ಲಾನ್ ಮಾಡಿ ಮೊಬ್ಬಿಗೆ ಅರೆಂಜ್ ಮಾಡಿದ್ದ.

ನೀಲ ಕಿತ್ತಾಡುತ್ತಿದ್ದಳು. ಇವಳಿಗೆ ಕಟಿಂಗ್ ಮಾಡಿ ತಲೆ ಬೋಳಿಸೊ ಹೊತ್ತಿಗೆ ಸಾಕುಸಾಕಾಗಿ ಹೊತ್ತು ಮೂಡೋ ಹೊತ್ತಾಗಿ ಹೊಳೆಗೆ ನೀರ‌್ಕಡೆ ಬಂದ ಜನ ಗಾಬರಿ ಬಿದ್ದು ಉದ್ದಕ್ಕು ನಿಂತು ನೋಡ್ತ ಇದ್ರು. ಬಂದು ಬಂದು ಕೇಳೋರಿಗೆಲ್ಲ ಹೇಳೋದೇ ಆಯ್ತು. ಅವಳು ಕಿರುಚುತ್ತಲೇ ಇದ್ದಳು. ಆ ಕಟಿಂಗ್ ಶಾಪ್ ಹುಡುಗ ಮುಖಕ್ಕೆ ಟವೆಲ್ ಕಟ್ಟಿಕೊಂಡು ಹೊಳೆ ಅಂಚಿಗೆ ಹೋಗಿ ನೀರು ಹಾಯ್ಕೊಂಡು ಆ ಕಡೆ ದಡಕ್ಕೆ ಯಾರಿಗೂ ಕಾಣದಾಗೆ ಹೊಂಟ. ಸೂರಿ ತನ್ನ ಜೊತೆ ಕರೆದುಕೊಂಡು ಬಂದಿದ್ದ ಪುಂಡೈಕಳು ಅವಳನ್ನು ಹಂಗೇ ಹಿಡಿದು ದರದರ ಎಳೆದುಕೊಂಡು ಹೋದರು.

                           *

ಆಗ ತಾನೆ ಸೂರ್ಯ ಮೂಡ್ತಿದ್ದ. ಮೊಬ್ಗೆ ನಾಕ್ಗಂಟ ರಾತ್ರುಕೆ ಎದ್ದು ನೀರ್ ಕಾಯ್ಸು ಅಂದಂವ ಅದೆಲ್ಲಿಗೋದ್ನ ಅಂತ ಸಿದ್ದಿ ಒಳಗೊಳಗೇ ಮಾತಾಡ್ಕಂಡು ಗೊಣಗುತ್ತಿದ್ದಳು

ಯಾವತ್ತು ಎಲ್ಲಿಗೂ ಹೋಗದ ನೀಲ ಇವತ್ತು ಕಾಣ್ತಿಲ್ಲ. ಮಡಿ ಮಾಡಿಕೊಂಡು ಯಂಕ್ಟಪ್ಪನ್ನ ಕೇಳಲು ಒಕ್ಕಲಗೇರಿಯವರು ಬರೋದನ್ನೇ ನೋಡ್ತಾ ಕಾಯ್ತಾ ಸುಸ್ತು ಸಂಕ್ಟದಲ್ಲಿ ಕುಂತಿದ್ದ ಚೆನ್ನಬಸವಿ ಸುಶೀಲಳನ್ನು, ತನ್ನ ಕಿರಿ ಮಗನನ್ನು ಕರೆದು “ಆ ಮೊಲ್ಲಗ್ರ ನೀಲ ಎಲ್ಲೋಗಿದ್ದಳು ನೋಡ್ರವ್ವ” ಅಂತ ಉಸ್ಸೋ ಅಂದಳು. ಸುಶೀಲ ಅವ್ವ ಹೇಳಿದ್ದನ್ನು ಕೇಳಿ “ಇದೆಲ್ಲಿಗೋಯ್ತು ಮೂದೇವಿ.. ಎಲ್ಲ ನಮ್ ಪ್ರಾಣ ತೆಗೇಕೆ ಅವ” ಅಂತ ಈಚ ಬಂದಾಗ ಅವರಣ್ಣ ಸಿದ್ದೇಶ ಕುಡಿದು ಚಿತ್ತಾಗಿ ಬೀದೀಲಿ ನಿಂತು ಲಕಲಕ ಅಂತಿದ್ದನ್ನು ನೋಡ್ತ ಅವನಿಗೂ ಉಗಿತಾ ನೀಲಳನ್ನು ನೋಡಲು ರೋಡಿಗೆ ಹೋದಳು. ಆ ರೋಡಿನಲ್ಲಿ ನಿಂತು ಅಲ್ಲಿ ಹೋಗೊ ಬರೋರ ಕೇಳ್ತ “ಇದ್ರು ಮಾರುನ್ ಬರದು ಅದೆಲ್ಲಿಗೋಯ್ತ..” ಅಂತಂತಿರುವಾಗ್ಲೆ ನೀಲ ದಾವಣಿನ ಎತ್ತೆತ್ತಗೊ ಎಳಕೊಂಡು ಅರಚುತ್ತ ಬೋಳು ತಲೇಲಿ ಓಡಿ ಬರುತ್ತಿದ್ದಳು. ಅವಳ ಹಿಂದೆ ಸೂರಿನು ಆ ಪುಂಡೈಕಳು “ಏ ನಿಂತ್ಗ ನಿಂತ್ಗ” ಅಂತ ಕೂಗಿಕೊಳ್ತ ಓಡಿ ಬರುತ್ತಿದ್ದುದು ಕಾಣ್ತು. ಸುಶೀಲ ಗಾಬರಿಗೊಂಡು ಅವಳು ಓಡಿ ಬರುತ್ತಿರುವ ಕಡೆಗೆ ಓಡುತ್ತ ಹೋದಳು.

ಇತ್ತ ಸಿದ್ದಿ ನೀರು ಕಾಯಿಸಿ ಕುಂತಿದ್ದವಳು ಹೊರಗೆ ನೀಲ ಅರಚುತ್ತಿದ್ದುದು ಕೇಳಿ ಮನೆಯವರೆಲ್ಲ ದಡಬಡ ಓಡಿ ಬಂದರು. ಸುಸ್ತಿನಲ್ಲಿ ಕುಂತಿದ್ದ ಚೆನ್ನಬಸವಿಯೂ ಅಯ್ಯೊ ಉಸ್ಸೊ ಅಂತ ಈಚೆ ಬಂದು ಸಂದಿಗುಂಟ ನಡೆದು ರೋಡಿಗೆ ಬಂದಳು. ಹಿಂದೆ ಬರುತ್ತಿದ್ದವರು ಅವಳನ್ನು ಹಿಡಿದರು. ಸುಶೀಲ “ಇದೇನ ಸೂರಣ್ಣ.. ಇದ್ಯಾಕ.. ಎಲ್ಲಿದ್ದ.. ಇದ್ಯಾರ ಹಿಂಗ್ ಮಾಡಿರವ್ರು” ಅಂತ ಅವಳನ್ನು ನೋಡಿ ಕಣ್ಣೀರು ತುಂಬಿಕೊಂಡಳು. ಚೆನ್ನಬಸವಿಯೂ ನೋಡ್ತ ಅತ್ತು ಕರೆದು “ಇದೇನಪ್ಪ ಉಸ್ಸೋ.. ಇದ್ಯಾಕಪ್ಪ” ಅಂತ ಹಲ್ಲು ಕಡಿಯತೊಡಗಿದಳು. ಸೂರಿ ಸುಶೀಲಳನ್ನು ಕರೆದು “ನಾನು ನೀರೆತ್ಕ ಬತ್ತಿನಿ ಬಾ ವಸಿ ಇಲ್ಲಿ” ಅಂತ ಇನ್ನೊಂದಿಬ್ಬರು ಹೆಂಗಸರನ್ನು ಕರೆದು ಆಕಡ ಇದ್ದ ಬಚ್ಚಲು ಸಂದಿಗ ಗೋಣಿ ತಾಟು ಕಟ್ಟಿ ನೀಲನ್ನ ಅಲ್ಲಿ ಕೂರಿಸಿದರು. ಅವಳು ಇದ್ಯಾಕಿಂಗ್ ಮಾಡಿರಿ ಅಂತ ಹಿಡಿದುಕೊಂಡಿದ್ದವರನ್ನು ಕೈಲಿ ಬಡಿಯುತ್ತಿದ್ದಳು. ಈಗ ರೋಡಲ್ಲಿ ಜನ ಮಿತಿಮಿತಿ ಮುತ್ತಿಕೊಂಡು ನೋಡತೊಡಗಿದರು. ಸೂರಿ ಹಳಗದಲ್ಲಿ ಕಾದು ಕುದಿತಿದ್ದ ನೀರ ಎರಡು ಹಂಡೆಗೆ ತಲಿಕ ಬಂದು ಎರಡು ಗೀರ್ ಭವಾನಿ ಸೋಪು ತಂದು ಕೊಟ್ಟನು. ಸುಶೀಲ ಅವಳ ಲಂಗದಾವಣಿ ಬಿಚ್ಚಿ ಚುರುಗುಟ್ಟೊ ನೀರ ಊದು ಭವಾನಿ ಸೋಪಾಕಿ ಗಸಗಸ ಉಜ್ಜಿ ಮೈತೊಳ್ದು ಲಂಗ ಜಾಕೀಟಾಕಿ ಸೀರ ಉಡ್ಸುದ್ರು. ಈಗ ನೀಲ ಕೆಂಪಟ ಕೆಂಪ್ಗೆ ಮಿರ ಮಿಂಚುತ್ತ ಕಿಸಕಿಸ ನಗತೊಡಗಿದಳು. ನಿಂತಿದ್ದವರು ಕುಂತಿದ್ದವರು ‘ಅವೈ ಎಸ್ಟ್ ಚೆಂದಗ್ ಕಾಣ್ತಳ’ ಅಂತ ಅವಳನ್ನೇ ನೋಡ್ತ ಇದ್ದರು.

ಚೆನ್ನಬಸವಿಯೂ ನೋಡ್ತ ನೀಲಳ ಅಂದ ಚೆಂದ್ವ ಕಣ್ತುಂಬಿಕೊಂಡು ಕಡ್ಡಬುಡ್ಡಯ್ಯನ ಕಡ್ಡಬುಡ್ಡಿ ಸದ್ದು ಗುಂಯ್ಞ್ ಗುಡ್ತಿದ್ದು ಕಿವಿಗೋಗ್ತ ಗಳಗಳ ಅಳತೊಡಗಿದಳು.

-ಎಂ.ಜವರಾಜ್


[ ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ]


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x