ಸೋನೆ ಮುಗಿಲಿನ ಕವಿ ಡಾ.ನಲ್ಲೂರು ಪ್ರಸಾದ್ ಅವರ ಕಾವ್ಯ ಜಿಜ್ಞಾಸೆ: ಸಂತೋಷ್ ಟಿ

“ಕವಿತೆ ನನ್ನೊಳಗೆ ಕೂತು ಪದ ಹಾಡುವುದಿಲ್ಲ
ಜೇಡನಾಗಿ ಅದು ಬಲೆ ನೇಯುವುದೂ ಇಲ್ಲ
ಬದಲಾಗಿ ಕಾಡುತ್ತದೆ ಸುತ್ತೆಲ್ಲಾ ನೋಡುತ್ತದೆ
ಬತ್ತಲಾದ ಬಯಲಲ್ಲಿ ಸೋಮನ ಕುಣಿತ ಮಾಡುತ್ತದೆ”
(ಕಾಡುತ್ತವೆ ನೆನಪುಗಳು ಕವಿತೆ, ನವಿಲು ಜಾಗರ)

ಎನ್ನುವ ಕಾವ್ಯ ಪ್ರೀತಿಯ ಆಶಯ ಹೊಂದಿರುವ ಕವಿ ಕೆ.ಆರ್. ಪ್ರಸಾದ್ ತಮ್ಮ ಸ್ವ-ಅನುಭವದಿಂದ ಗಟ್ಟಿಗೊಳ್ಳಿತ್ತಾ ಮೊದಲ ಕವಿತೆಯಲ್ಲಿಯೆ ತನ್ನ ತನವನ್ನು ಕಾವ್ಯದ ಬಗೆಗಿನ ಉತ್ಕಟ ಆಕಾಂಕ್ಷೆಯನ್ನು ತೆರೆದಿಡುತ್ತಾರೆ. ಇಲ್ಲಿ ಕಾವ್ಯವು ಸಾರ್ವಜನಿಕ ಇತ್ಯಾತ್ಮಕ ದೃಷ್ಟಿಗೆ ನಿಲುಕುವ ಬತ್ತಲಾದ ಬಯಲಲ್ಲಿ ಇರುವಂತದ್ದು ಮತ್ತು ಸೋಮನ ಕುಣಿತ ಮಾಡುವಂತದ್ದು ಎಂದರೆ ನೇರವಾಗಿ ಅಲ್ಲಮಪ್ರಭುವಿನ ಆತ್ಮ ಜಿಜ್ಞಾಸೆಯಾಗಿ ಆದರೂ, ನುಡಿಯುವ ಪರಿ ಜಾನಪದ ದಾಟಿಯನ್ನು ಒಳಗೊಂಡು ಹೆಚ್ಚು ಗ್ರಾಮ್ಯ ಜೀವನದ ಒಳನೋಟಗಳನ್ನು ಕೊಡುತ್ತಾರೆ.

“ಮುಂಗಾರು ಮೋಡಗಳ ಹನಿನೀರ ಮುತ್ತುಗಳ
ಸವಿಯುಂಡ ನೆಲದೊಡಲಿಂದ
ಕವಿತೆ ಕೆಂಪಾಗಿ ಅರಳುತ್ತದೆ
ಹೊಲಗದ್ದೆ ತೋಟ ತುಡಿಕೆಗಳಲ್ಲಿ
ಹಿಪ್ಪು ನೇರಳೆಯ ಸೊಪ್ಪಿನಾ ಮರೆಯಲ್ಲಿ
ದುಷ್ಯಂತ ಶಕುಂತಲೆಯರ ಪ್ರೇಮಾಲಾಪವ
ಕಂಡು ಕವಿತೆ ನಾಚಿ ಪಿಸುಗುಟ್ಟುತ್ತದೆ

ಕರಿಕಾಲ ವೊಡ್ಡನ ಮೀನು ಖಂಡಗಳಲಿ
ಸೋಪಾನ ಕಟ್ಟೆಯ ಸುಂದರಿಯರ ದಿವ್ಯ ಸ್ತನಗಳುಯ್ಯಾಲೆಯಲಿ
ಮಡಕೆ ಹುಲಿಯ ಬುಂಡೆ ಹೆಂಡಗಳಲಿ
ತೂಗಾಡುತ್ತದೆ ಕವಿತೆ ತೂರಾಡುತ್ತದೆ
ಹಾಗೆಂದೇ ಕವಿತೆ ನನ್ನೊಳಗಿನಿಂದಲ್ಲ
ಮಣ್ಣೊಳಗೆ ಮುಲುಕುತ್ತದೆ

ನನ್ನವರ ನಗೆಯಾಗಿ ಹೊಗೆಯಾಗಿ
ಬೆವರಾಗಿ ಬದುಕಾಗಿ ನೋವಾಗಿ
ನನ್ನೆದುರು ಧುತ್ತೆಂದು ನಿಲ್ಲುತ್ತದೆ”

ಇಲ್ಲೆಲ್ಲ ದಟ್ಟ ಗ್ರಾಮೀಣ ಪರಿಸರದ ಲವಲವಿಕೆಯಿದೆ. ದೇಸಿ ನುಡಿಗಳ ತನಿತನಿಯಾದ ಓಜಸ್ಸು ದಟ್ಟವಾಗಿದೆ. ಜನಪದರ ಬದುಕು ಇಲ್ಲಿ ಕೃತಿ. ಶ್ರಮಿಕರ ಜನಪದ ಶ್ರಮಣಧಾರೆಗಳು ಇಲ್ಲಿ ಮಡುಗಟ್ಟಿ ಕಾಣುತ್ತದೆ. ಇದು ಒಳ್ಳೆಯ ಪ್ರತಿಭೆಯ ವಿಲಾಸವಾಗಿ ಕಂಡಿದೆ. ಇವರು ಹುಟ್ಟು ಕವಿ ಎನ್ನಲು ಬೇರಾವ ವೈಯುಕ್ತಿಕ ಕವಿ ಕಾವ್ಯ ವಿಚಾರಗಳ ಮೌಲ್ಯಮಾಪನ ಬೇಡವೆನ್ನಿಸುವ ಹಂತದ ಉತ್ತಮವಾದ ಕವಿತೆಗಳು ಇದಕ್ಕೆ ಸಾಕ್ಷಿಯಾಗಿವೆ ಎಂದರೆ, ಅತಿಶಯೋಕ್ತಿಯಾಗಲಾರದು. ಇದು ಕವಿಯ ಕವಿತೆಗೆ ಇರುವ ಮಣ್ಣಿನ ವಾಸನೆಯ ಪ್ರಜ್ಞೆ ಮತ್ತು ಗುಣ ಸ್ವರೂಪವೇ ಆಗಿದೆ. “ಜನ ವಾಣಿ ಬೇರು ಕವಿ ವಾಣಿ ಹೂವು” ಎಂಬ ಬಿ.ಎಂ. ಶ್ರೀಕಂಠಯ್ಯನವರ ಮಾತು ಇಲ್ಲಿ ಔಚಿತ್ಯವಾಗಿದೆ. ಜಾನಪದವೆ ನಮ್ಮ ಮೂಲ ಕಾವ್ಯದ ಅಂತರಂಗ , ಅಲ್ಲಿಂದಲೇ ಕವಿ ಕಟ್ಟಿಕೊಡುವ ಪ್ರತಿಮೆ ರೂಪಕಗಳು ದೇಸಿ ರೂಪದಲ್ಲಿ ಮೈಪಡೆದು ಕವಿತೆಯ ಸೊಗಸನ್ನು ಹೆಚ್ಚಿಸಿದೆ.

.ಕೆ.ಆರ್. ಪ್ರಸಾದರ ” ಸೋನೆಯಾಡುವ ಮುನ್ನ ಇದೇನು ಮಿಂಚು ಗುಡುಗು” ನಗುನಗುತ್ತಲೇ ಪ್ರೀತಿ ನೆಮ್ಮದಿಗಳ ಎದೆಗೆ ನೀಟಾಗಿ ಚೂರಿ ಸೇರಿಸುವ ಊರೊಳಗಿನ ವೀರಪ್ಪನ್ ” ಎಂಬ ಮಾತುಗಳು ಕವಿತೆಯ ವಸ್ತು, ವಿನ್ಯಾಸ ಹಾಗೂ ಅಭಿವ್ಯಕ್ತಿಯ ಮಾಧ್ಯಮದಲ್ಲಿ ಬಂಡಾಯ ಮನೋಭಾವ ಮತ್ತು ಪ್ರತಿಭಟನೆಯ ಕಾವು ಕವಿತೆಗಳಲ್ಲಿ ಕಾಣಬಹುದು. ಇದರ ಮೂಲಕ ಧ್ವನಿಯಿಲ್ಲದವರ ಧ್ವನಿಯಾಗಿ ಶೋಷಣೆ ಮುಕ್ತ ಸಮಾನತೆ ಸ್ವಾತಂತ್ರ್ಯವನ್ನು ಸಾಧಿಸಿಕೊಳ್ಳಬೇಕೆಂಬ ಹೋರಾಟದ ಜೀವನ ಜಿಜ್ಞಾಸೆಯನ್ನು ಅವರ ಬಹುತೇಕ ಕವಿತೆಗಳಲ್ಲಿ ಕಾಣಬಹುದು. ತಮ್ಮ ಮನಸಿನ ಸಂವೇದನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಮಾಧ್ಯಮವಾಗಿ ಸಾಹಿತ್ಯ ಅವರಿಗೆ ಪ್ರಮುಖವಾದ ಅಭಿವ್ಯಕ್ತಿಯಾಗಿ ಕಂಡಿದೆ. ಆ ಮೂಲಕವೇ ಅವರು ಕಾವ್ಯಕೃಷಿ ಮಾಡಿದರು. ಕಾವ್ಯ ಜೀವನವು, ಜೀವನ ಸಂಗ್ರಾಮದಿಂದ ಹೊರತಲ್ಲ. ಅದು ಮಾಗಿದ ಪಕ್ವ ಮನಸಿನ ಜೀವನದಿಂದ ಕಂಡುಕೊಂಡ ಸತ್ಯ. ಈ ಕಾವ್ಯ ಸತ್ಯ ಎಂತದ್ದು. ಭಾವನಾತ್ಮಕ ಸಾಮಾಜಿಕ ಪಲ್ಲಟಗಳ ತಲ್ಲಣಗಳ ಸಂವೇದನೆಗಳು. ಈ ಸತ್ಯವು ಅಂತಿಮವಲ್ಲ. ಇದರ ಆಚೆಗೂ ಅನೇಕ ವೈಚಾರಿಕ ವೈಜ್ಞಾನಿಕ ಸತ್ಯಗಳಿರಬಹುದು. ಕವಿಮನಸಿಗೆ ತೋಚಿದ ಕವಿತೆ ಅಥವಾ ಸಾಹಿತ್ಯದ ಅನುಭೂತಿ ಭಾವನಾತ್ಮಕ ಜಗತ್ತಿನಲ್ಲಿ ಇರುವಂತದ್ದು. ಅದು ವಾಸ್ತವ ಪ್ರಪಂಚದಲ್ಲಿ ನಿಜವೇ ಎಂದು ವಿವರಿಸಿಕೊಳ್ಳಲು ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆಗಳಿಂದ ಸಾಧ್ಯವಿದೆ. ಇಲ್ಲವೆ ಅದರ ಭಾಷಿಕ ಛಂಧಸ್ಸು ವ್ಯಾಕರಣಗಳಿಂದ ಮತ್ತೊಂದೆಡೆ ವಿವೇಚಿಸಿಕೊಳ್ಳಬಹುದೇ ವಿನಾಃ ಅದು ವಿಜ್ಞಾನದಂತೆ ನಿಖರವಾರಬೇಕೆಂಬ ಮಾನವಿಕಗಳ ಲ್ಯಾಬ್ ಅಲ್ಲ. ಕಾವ್ಯ ಸತ್ಯವು ನೈಜ ಅನುಭವಗಳ ಭಾಷಿಕ ಪದ ವಿನ್ಯಾಸ , ಚಂದ – ಬಂಧಗಳಲ್ಲಿ ಸಹೃದಯ ಮನಸುಗಳ ಅಥವಾ ಓದುಗರ ನಡುವೆ ಚಲಿಸುವಂತದ್ದು. ಬುದ್ಧಿಗೆ ನಿಲುಕುವ ಭಾವ ಪ್ರಪಂಚದಲ್ಲಿ ತನ್ನ ಪ್ರತಿಭೆಯ ಎಸ್ಥಟೀಕ್ ಅನುಭವಗಳಿಂದ ಪರಿಣಾಮವಾಗುವಂತದ್ದು. ಹೀಗಾಗಿ ಕವಿ ತಾನು ಬರೆದ ಸಾಹಿತ್ಯ ಸರಕನ್ನು ಓದುಗ ವಿಮರ್ಶಕರ ಕಡೆ ತಳ್ಳಿ ಹಾಕುತ್ತಾರೆ. ಅದರ ಓರೆ ಕೋರೆ , ಸೌಮ್ಯ ವೈಷಮ್ಯ ಸಾಮಾಜಿಕ ,ಕಾಲ ದೇಶ ಅಂತರ, ಸಂಸ್ಕೃತಿ ಇತ್ಯಾದಿ ನೆಲೆಗಳಲ್ಲಿ ವಿಮರ್ಶಕ ವಲಯ ಅದರ ವಿವೇಚನೆ ಮೌಲ್ಯಮಾಪನ ಮಾಡುತ್ತದೆ.

ಸಾಮಾನ್ಯವಾಗಿ ನವ್ಯ ಸಾಹಿತಿಗಳ ಸಾಹಿತ್ಯ ಸರ್ವಶ್ರೇಷ್ಠ ಎಂದು ವಾದಿಸುವ ವಿಮರ್ಶಕರಿಗೆ ಕಾಲಕ್ರಮೇಣ ಬಂಡಾಯದ ದೇಸಿ ಮೌಲ್ಯಗಳು ಸರಿಯಾಗಿ ಕಂಡಿರಬಹುದು. ನವ್ಯದ ಏಕತಾನತೆ ಸಿನಿಕಥನ, ಓಂಟಿತನ , ತಾನು ಹೇಳಿದ್ದೇ ಸತ್ಯ ಎನ್ನುವ ಭ್ರಮೆ ಇತ್ಯಾದಿಗಳಿಗೆ ಪೂರ್ಣಚಂದ್ರ ತೇಜಸ್ವಿಯವರು ಬರೆದ ಅಬಚ್ಚೂರಿನ ಪೋಸ್ಟಾಫೀಸು ಕೃತಿಯ ಮುನ್ನುಡಿಯಲ್ಲಿ ಉತ್ತರವಿದೆ. ಇದು ಸಾಹಿತ್ಯ ಪಠ್ಯ ಕ್ರಮವಾಗಿಯು ಇತ್ತು ಎಂಬುದು ಈಗ ಇತಿಹಾಸ. ಬಂಡಾಯ ಸಾಹಿತ್ಯದಲ್ಲಿ ಪ್ರಗತಿ ಚಿಂತನೆಗಳನ್ನು ಬಿಟ್ಟು ಬೇರೇನೂ ಇಲ್ಲ. ಅದು ಬರೀ ಆಕ್ರಂದನ, ಆವೇಶ, ಹೋರಾಟ – ಕೂಗಾಟ ಎಂದು ಲೇವಡಿಯಾದ ಸನ್ನಿವೇಶಗಳೂ, ಸೆಮಿನಾರುಗಳು ಉಂಟು. ಈ ಹಿನ್ನೆಲೆಯಲ್ಲಿ ಬಂಡಾಯ ಸಾಹಿತ್ಯದ ಪ್ರಮುಖ ಅಭಿವ್ಯಕ್ತಿ ಕ್ರಮದಲ್ಲಿ ಕಾವ್ಯ ಸಾಹಿತ್ಯದ ಪರಿಣಾಮ, ಹೋರಾಟ, ಮಾನವೀಯ ಸಂವೇದನೆಗಳು, ಸಮಾಜದ ಕ್ರೌರ್ಯ, ಶೋಷಣೆ, ದುಷ್ಟತನ, ಅಸ್ಪೃಶ್ಯತೆ, ದಾಸ್ಯ, ಅಸಮಾನತೆ, ಮೂಢನಂಬಿಕೆ, ಆಳುವ ವರ್ಗದ ನೆಲೆಬೆಲೆಗಳು, ಅಂಬೇಡ್ಕರ್ ವಾದ ,ಲೋಹಿಯಾ ವಾದ, ಮಾರ್ಕ್ಸ್ ವಾದ, ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್, ತೆಲುಗಿನ ದಿಗಂಬರ ಕಾವ್ಯ ಇವೆಲ್ಲ ಪ್ರಭಾವ ಪರಿಣಾಮಗಳ ಮೊತ್ತವಾಗಿ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಒಂದು ಚಳುವಳಿಯಾಗಿ ಬಂಡಾಯ ಮತ್ತು ದಲಿತ ಸಾಹಿತ್ಯ ರೂಪುಗೊಂಡಿತು. ಇದು ಹಿಂದುಳಿದ ಬಡ ವರ್ಗದ ಆಶಯಗಳನ್ನು ಎತ್ತಿ ಹಿಡಿಯಿತು. ಇಪ್ಪತ್ತನೆ ಶತಮಾನದ ಎಪ್ಪತ್ತರ ಕಾಲಘಟ್ಟದಲ್ಲಿ ರಚನೆಯಾದ ಸಾಹಿತ್ಯ ಚಳುವಳಿ ಎಂದರೆ ಬಂಡಾಯ ದಲಿತ ಸಾಹಿತ್ಯ ಕಾಲಘಟ್ಟ ಎಂದಾಗಬಹುದು. ಇವುಗಳ ವ್ಯಾಖ್ಯಾನ ಆಖ್ಯಾನಗಳು ಸಂಶೋಧನೆಗಳು ಬಹುಮಟ್ಟಿಗೆ ಅಧ್ಯಯನ ಶಿಸ್ತಾಗಿ ಯುನಿವರ್ಸಿಟಿ ಗ್ರಂಥಾಲಯಗಳಲ್ಲಿ ಥೀಸಿಸ್ ಗಳು ಆಗಿ ಕೂತಿವೆ.

ಈ ಕಾಲಘಟ್ಟದಲ್ಲಿ ಬೆಳೆದು ಬಂದ ಕನ್ನಡದ ಕವಿ ನಲ್ಲೂರು ಪ್ರಸಾದ್ ತಮ್ಮ ಸಾಹಿತ್ಯ ಸೇವೆಯಲ್ಲಿ ತೊಡಗಿದರು. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ನಲ್ಲೂರಿನವರಾದ ಇವರು ಹಳ್ಳಿಗಾಡಿನ ಆಡುನುಡಿಯಲ್ಲಿ ಕನ್ನಡದ ದೇಸಿ ಎನ್ನುವಂತ ಭಾಷೆಯಲ್ಲಿ ಕಾವ್ಯ ಬರೆದರು. ಅವರು ಬದುಕಿದ ನೆಲದಲ್ಲಿನ ಸಾಂಸ್ಕೃತಿಕ ಪರಿಸರ ಅವರ ಮೇಲೆ ದಟ್ಪ ಪ್ರಭಾವ ಬೀರಿದೆ. ಅಲ್ಲಿನ ಬುಡಕಟ್ಟು ಸಮುದಾಯ ಸಮಾಜಗಳ ಜೀವನ ಅವರು ಕಂಡಿದ್ದಾರೆ. ಅವುಗಳ ಸಹಜ ಭಾವನೆಗಳನ್ನು ಕಾವ್ಯದ ಮೂಲಕ ಕಟ್ಟಿಕೊಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ನಿರಾಳ ಬಾಳ್ವೆಯ ಹರಿಕಾರರಾಗಿ ಗಾಂಧಿವಾದ ಸಿದ್ಧಾಂತ, ಸ್ವಾತಂತ್ರ್ಯ ಹೋರಾಟಗಾರರ ಮನೆತನ ಮತ್ತು ಅಲ್ಲಿನ ಒಕ್ಕಲುತನದ ಭಾಷೆಯಲ್ಲಿ ತಮ್ಮ ಜೀವಂತಿಕೆಯನ್ನು ಮೈಗೂಡಿಸಿಕೊಂಡ ಅವರು ಜೀವನೋತ್ಸಾಹದಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ರಾಜಕಾರಣದ ನಿರೀಕ್ಷೆಯಲ್ಲಿ ಒಂದು ತಮ್ಮದೇ ಮಾದರಿಯ ಒಳನೋಟಗಳನ್ನು ಸಾಹಿತ್ಯದಲ್ಲಿ ದಾಖಲಿಸುತ್ತಾ ಬಂದಿದ್ದಾರೆ. ತಮ್ಮಿಂದಲೇ ಸಮಾಜದ ಕುಂದುಕೊರತೆ ನಿಗಿಸಲು ಸಾಧ್ಯವಿಲ್ಲವೆಂದು ಅರಿತರು, ಅವರ ‘ಸುತ್ತಲ ಜಗತ್ತು ‘ಅವರನ್ನು ಸುಮ್ಮನಿರುವುದಿಲ್ಲ. ಅವರ ಕವಿತೆಗಳು ಆನಂದ ಅನುಭವವನ್ನು ಕೊಟ್ಟಿದ್ದರು, ಅವೆಲ್ಲ ಶ್ರೇಷ್ಠ ಎಂಬ ಭ್ರಮೆ ಅಥವಾ ಭ್ರಾಂತಿ ಅವರಿಗಿಲ್ಲ. ತಮ್ಮ ಕಾವ್ಯ ಸಂದರ್ಭದಲ್ಲಿ ಅವರು ಹೀಗೆ ಹೇಳಿದ್ದಾರೆ.

೧) ಎಲ್ಲವನ್ನೂ ನುಂಗಿ ಇಲ್ಲವಾಗಿಸಿ ಮಳ್ಳಿಯಂತೆ ವರ್ತಿಸುವ ‘ಹವಾಲ ಅಣ್ಣಗಳು’ ನಮ್ಮ ಸುತ್ತ ತುಂಬಿ ಹೋಗಿದ್ದಾರೆ.
೨) ಇಂಥ ಉಸಿರು ಕಟ್ಟಿಸುವ ಲೋಕದಲ್ಲಿ ಪ್ರೀತಿಗೆ ‘ಬರ’ವಿದೆ, ಕರುಣಿಯ ಕ್ಷಾಮವಿದೆ.ನಗೆ ಮರೆತು ಹೋಗಿದೆ.
೩) ಸ್ನೇಹ ವಲಯ, ವೃತ್ತಿ ವಲಯ, ರಾಜಕೀಯ, ವ್ಯಾವಹಾರಿಕ ಜಗತ್ತು, ಸಾಹಿತ್ಯ ಕ್ಷೇತ್ರ ಎಲ್ಲಾ ಕಡೆಯೂ ‘ ಕಿಲಾಡಿ ಕಿರಾತಕ ಲೋಕ ‘ ನನ್ನೆದುರು ನಿಂತು ಖಳನಾಯಕನಂತೆ ವಿಕಾರವಾಗಿ ನೆಕ್ಕಿದೆ.
೪)ಇಂಥ ಜಾತ್ರೆಯಲ್ಲಿನ ಜನಗಳ ನಡುವೆ ನಾನು ಕಳೆದು ಹೋಗದ ಹಾಗೆ ನೋಡಿಕೊಳ್ಳಬೇಕು. ನನ್ನೊಳಗಿನ ಕವಿಯನ್ನೂ ಕೂಡ.
೫) ಅದರ ಎದೆ ಬಗೆದು ಇರುವುದೆಲ್ಲ ಓದಬೇಕು ಹೀಗಾಗಿ ಈ ನನ್ನೊಳಗಿನ ಕವಿಗೆ ಇಂಥ ಅನುಭವಗಳ ಲೋಕವೊಂದನ್ನು ಆಸಕ್ತರ ಎದುರು ಅನಾವರಣಗೊಳಿಸುವ ಅವಕಾಶವಿದೆ.
೬)ಅಷ್ಟೆ ಅಲ್ಲ , ಒಳಗಿನ ಎಲ್ಲಾ ನೋವು ನಲಿವುಗಳಿಗೆ ಕಾವ್ಯ ರೂಪ ಕೊಟ್ಟು ಕವಿ ಮನಸ್ಸನ್ನು ಹಗುರಾಗಿಸಿಕೊಳ್ಳುವ ಅನುಕೂಲವಿದೆ.
೭) ಈ ಎಲ್ಲಾ ವಿಷಾದಗಳ ಗುಂಗಿನಲ್ಲಿಯೇ ನನ್ನ ಕವಿತೆಗಳು ಉಸಿರಾಡುತ್ತವೆ.

ಈ ಪರಿಕಲ್ಪನೆಗಳ ಅಂಶಗಳು ಕಾವ್ಯ ರಚನೆಯ ಹಿನ್ನೆಲೆಯ ಬಹುತೇಕ ಸೌಮ್ಯ ವೈಷಮ್ಯಗಳನ್ನು ಸಾಧಕ ಬಾಧಕಗಳನ್ನು ಹೇಳುತ್ತಿವೆ. ಆಧುನಿಕ ಪ್ರಪಂಚದಲ್ಲಿ ಕವಿಯೊಬ್ಬನಿಗೆ ಇರುವ ಮತ್ತು ಇರಬೇಕಾದ ಬದ್ಧತೆಗಳ ನಡುವೆ ಅನೇಕ ವಿಷಾದಗಳು ಇವೆ. ಇಲ್ಲಿ ಯಾವ ಆಸ್ಥಾನ ಪಂಡಿತ ಮಂಡಳಿಯೂ ಇಲ್ಲ. ಆಸ್ಥಾನ ಸಭಾ ಸದರು, ರಾಜರು ಇಲ್ಲ. ಪ್ರಜಾಪ್ರಭುತ್ವದ ಕಾಲದಲ್ಲಿ ಶ್ರೀ ಸಾಮಾನ್ಯ ಸಾಹಿತ್ಯದ ವಿದ್ಯಾರ್ಥಿಯಾಗಿ ಕವಿ ಸಾಹಿತಿಯಾಗುವ ಪಜೀತಿಯಲ್ಲಿ ಇಷ್ಟು ಹೈರಾಣಗಳಿವೆ. ಇವು ಕವಿ ಮತ್ತು ಇತರ ಲೇಖಕರ ಸ್ವ-ಅನುಭವವು ಆಗಿದೆ ಎಂದರೆ ತಪ್ಪಾಗಲಾರದು. ಇತ್ತೀಚಿನ ಜಾಗತಿಕ ಮಟ್ಟದಲ್ಲಿ ಸಾಹಿತ್ಯಾದಿ ಕಲೆಗಳಿಂದ ಆಗುವ ಪ್ರಯೋಜನವೇನು ? ಎಂಬ ಒಂದು ಮಾದರಿ ಪ್ರಶ್ನೆ ಪ್ರಾಧ್ಯಾಪಕರಿಂದ ಹೊರಟಿರುವುದು ವಿಚಾರನೀಯ. ಕಲೆಯಿಂದ ಕಲೆ ಕಲೆಗಾಗಿ ಕಲೆ ಎಂಬ ಕಾಲ ಹೊರಟುಹೋಗಿ ಆಧುನಿಕವಾದ ವಿರಾಟ ಮತ್ತು ವಿಕಟ ಪರಿಸ್ಥಿತಿಗಳು ಸಮವಾಗಿ ನಮ್ಮ ಮುಂದಿರುವಾಗ ನಾವು ವಿವೇಚಿಸಿಕೊಳ್ಳಬಹುದಾದ ಜನಪ್ರಿಯ ಪ್ರಶ್ನೆ ಇದು.

“ಮತ್ತೆಲ್ಲಿ ಹುಡುಕಲಿ ಗತದ ಸುಖವ” ಕವಿತೆಯು ಪ್ರಸಾದರ ಅಂತರಂಗದ ನೆನಪುಗಳು ಅಥವಾ ತಲ್ಲಣಗಳನ್ನು ಸತತವಾಗಿ ಹುಡುಕುತ್ತದೆ. ಲೋಕ ಪ್ರೀತಿಯನ್ನು ಹೃದಯ ಶ್ರೀಮಂತಿಕೆಯಲ್ಲಿ ತನ್ನದಾಗಿಸಿಕೊಳ್ಳುತ್ತ ಹೋಗುವ ಕವಿ ಜಿಜ್ಞಾಸು

“ಗಿಡ ಟೊಂಗೆ ಹಸಿರೆಲೆ ಋಷಿಯಿತ್ತ ಚೆಲುನೆಲೆಯ
ಪದಗಳಲಿ ಮಿದಿಯುತ್ತಾ ಹಾಡು ಹೊರಟವ ನಾನು
ಏನೆಲ್ಲಾ ಆ ಸೊಗಸು ಕಟ್ಟಿಕೊಂಡಾ ಕನಸು
ಕಾಮನ ಕಾರಂಜಿ ಚಿಮ್ಮು ಹೊರಟವನು

ಯುಗದ ಅಚ್ಚರಿಯೆಂದು ಜಗಕೆ ದಾನವಿದೆಂದು
ಮೆಚ್ಚುಗಣ್ಣೊಳಗೆ ಊರ ಬಚ್ಚಿಟ್ಟುಕೊಂಡವನು
ಬಿರಿವ ನಾಲೆಗಳೊಳಗೆ ಹರಿವ ನೀರನು ನೋಡಿ
ಬರಿಗೈಲಿ ಮೊಗೆಮೊಗೆದು ಕುಡಿದು ದಣಿದವನು”

ಎನ್ನುವ ಕವಿ ಕಂಡ ಅನುಭವ ಹೇಮಾವತಿ ನದಿ ಹರಿಯುವ ನಾಡಿನ ಕೆರೆ ಹೊಲ ಗದ್ದೆಗಳ ನೆನಪುಗಳನ್ನು ಜೀವಂತವಿಡುತ್ತದೆ. ತಮ್ಮ ಪ್ರತಿಭೆಯ ಔನತ್ಯದಿಂದ ಅನುಭವಗಳ ಮಿದಿಯುವ ಪದಗಳ ಕೊಟ್ಟ ತಾಯಿಗೆ ಋಷಿಯಿಂದ ಚೆಲುನೆಲೆಯ ಹಸಿರೆಲೆಯ ಹಾಡು ಕಟ್ಟುವ ಕವಿಯನ್ನು ಕುರಿತು ‘ಹುಟ್ಟು ಕವಿ’ ಎಂಬುದನ್ನು ಸಾಬೀತು ಪಡಿಸಿದವು. ಪ್ರಕೃತಿಯ ವಿಚಾರ, ರಾಜಕೀಯ ವಿಪರ್ಯಾಸ, ಸಾಹಿತ್ಯದ ತುರ್ತುಪರಿಸ್ಥಿತಿ, ನೈಜ ಬದುಕಿನ ಸವಾಲುಗಳು, ವೈಯುಕ್ತಿಕ ಕೊರತೆಗಳು, ಸ್ನೇಹವಲಯದ ಕಾವ್ಯ ಅರಿಕೆಯ ಕಾವ್ಯಾನ್ವೇಷಣೆಯಲ್ಲಿ ಅಂದಂದಿನ ಸಾಹಿತ್ಯ ಚಳುವಳಿಯೊಳಗಿನ ಅಭಿಲಾಷೆಗಳನ್ನು ಪರಂಪರೆಗನುಗುಣವಾಗಿ ಮನಗಾಣುವ ಕವಿಯ ಪ್ರಮಾಣ ಸಮಾಜವೇ ಆಗಿದೆ. “ನೀನೆಂಬ ನಾನು” ಕವನ ಸಂಕಲನದಲ್ಲಿ ನವ್ಯ ಕಾವ್ಯದ ಹೂರಣವಿದ್ದರೂ ಬಂಡಾಯದ ರೂಪುರೇಷೆ ಕಾಣಲು ಸಾಧ್ಯವಿದೆ. ನಂತರ ನವ್ಯೋತ್ತರ ಕಾವ್ಯ ಸಂದರ್ಭ ಮತ್ತು ೧೯೭೫ರ ನವ್ಯ ಸಾಹಿತ್ಯದ ಹಿನ್ನಡೆಯಿಂದ ಹೊಸದೊಂದು ಸಾಹಿತ್ಯ ಚಳುವಳಿ ರೂಪುಗೊಂಡಿತು. ಅದು ಬಂಡಾಯ -ದಲಿತ ಸಾಹಿತ್ಯವೆಂದೆ ಆ ಕಾಲಘಟ್ಟವನ್ನು ಪಠ್ಯಗಳಲ್ಲಿ ಊರ್ಜಿತಗೊಳಿಸಲಾಯಿತು. ಇಂತಹ ಬದಲಾದ ಪರಿಸ್ಥಿತಿಗಳಲ್ಲಿ ಸಹಜವಾಗಿ ಕವಿ ಬದುಕಿನ ವಿರೋಧಾಭಾಸಗಳಿಂದ ನೊಂದು “ದಗ್ಧ” ಕವನ ಸಂಕಲನ ತಂದರು.

ಸಮಾಜದ ವಿವಿಧ ಮುಖವಾದ ವಿಚಾರಗಳನ್ನು ಜೀರ್ಣಿಸಿಕೊಂಡು ಕವಿತೆಯಲ್ಲಿ ಕಲಾತ್ಮಕವಾಗಿ ವಸ್ತು ಸಂಗತಿಗಳ ಬೆಸೆಯುತ್ತಾ, ಸೃಜನಶೀಲ ಸಾಹಿತ್ಯ ಪ್ರಕಾರವಾದ ಕಾವ್ಯದಿಂದ ಜಗತ್ತನ್ನು ಕಟ್ಟುವ ವರ್ತಮಾನ ಮತ್ತು ಭೂತಕಾಲವನ್ನು ಏಕಿರ್ಭವಿಸಿದ ಪ್ರತಿಮೆ ರೂಪಕಗಳ ಮೂಲಕ ನುಡಿಯ ಸೊಬಗನ್ನು ವಿಪರ್ಯಾಸಗಳಲ್ಲಿ ಅಥವಾ ವೈರುಧ್ಯಗಳಲ್ಲಿ ಸೃಜಿಸಿದರು. ನಗರ ಮತ್ತು ಗ್ರಾಮ ಜೀವನದ ಅಂತರದಲ್ಲಿ ಕವಿಭಾಷೆ ಪಡೆದ ತಿರುವು ರೋಚಕ ಅನುಭವ. ಕವಿ ಬದುಕಿದ ಬುಡಕಟ್ಟು ಜನಜಾತೀಯ ಸಮುದಾಯಗಳ ಒಂದು ಸಂಸ್ಕೃತಿ ಮತ್ತು ನಗರ ಪರಿಸರದ ಪರಿತಾಪದ ಜೀವನವನ್ನು ಕಟ್ಟುವಾಗ ನಡೆದ ಮಾನಸಿಕ ತಳಮಳ ಕವಿತೆಗಳಲ್ಲಿ ಕಾಣಬಹುದು. ಇವು ತಲ್ಲಣಗಳಾದರೂ ಸರಿ. ಮತ್ತೇಲಿ ಹುಡುಕಲಿ ಗತದ ಸುಖವ , ಭೂತ – ಭವಿಷ್ಯ, ತಾತ- ಅಪ್ಪ- ನಾನು, ನನ್ನೂರು ಕವಿತೆಗಳು ಮಾದರಿಯಂತೆ ಕಾಣುತ್ತವೆ. ಇಂಥ ನೋವುಗಳ ನಡುವೆಯೂ ನಗರದ ವಿಡಂಬನೆ ವ್ಯಂಗ್ಯದ ಭಾಷೆಯೊಂದು ಕವಿತೆಯಲ್ಲಿ ಕಾಣಿಸಿದೆ. ಶುಭ ನುಡಿಯೆ ಶಕುನದ ಹಕ್ಕಿ, ಪ್ರಭುಗಳಿಗೊಂದು ಪತ್ರ, ಭಸ್ಮಾಸುರ, ಭ್ರಮಾಲೋಕದ ಭೂಪರು, ಬರಗುಳ, ಕುರ್ಚಿ ಕ್ರಾಂತಿ, ಹಿಂಸಗರ್ಭಾ ವಸುಂಧರಾ ಮೊದಲಾದ ಕವಿತೆಗಳಲ್ಲಿ ಈ ರೀತಿಯ ವಿನ್ಯಾಸವನ್ನು ಗುರುತಿಸಬಹುದು.

” ಎದೆಯಲ್ಲಿನ ನೋವಿಗೆ
ನಿಟ್ಟುಸಿರಿನ ಕೂಗಿಗೆ
ಕಿವಿಯ ತೆರೆದು ಕೇಳದಾದ ಆ ದರಿದ್ರಕಲ್ಲಿಗೆ
ದೇವರೆಂದು ಹೆಸರನಿಟ್ಟು ಕೂತೆವಿಲ್ಲಿ ತಣ್ಣಗೆ

ಕುಂಕುಮದ ಕಲ್ಲಿಗೆ
ಬೆಳ್ಳಿ ಕಣ್ಣ ಮಾಯಿಗೆ
ಕೋಳಿ ಕೋಣ ಕುರಿಯನೆಲ್ಲ ನುಂಗುವಂತ ಬಾಯಿಗೆ
ಲೀಲೆಯೆಂದು ಕೊಂಡಾಡಿ ಧನ್ಯವಾಯ್ತು ನಾಲಗೆ

ಸೂರ್ಯನಿತ್ತ ಬೆಳಕಿಗೆ
ಚಂದ್ರನಿತ್ತ ಚೆಲುವಿಗೆ
ಗಿಡ ಮರವೇ ಅರಳಿ ನಿಂತ ಅನಂತ ಪ್ರೀತಿಗೆ
ತಪ್ಪಿ ಕೂಡ ಕರೆಯಲಿಲ್ಲ ದೈವವೆಂದು ಮೆಲ್ಲಗೆ

ಭೂಮಿ ಗೆಯ್ವ ಎತ್ತಿಗೆ
ಬೆವರ ಬಸಿವ ರೈತಗೆ
ಹಾಲು ಕರೆವ ಕಾಮಧೇನು ಹಸು ಎಮ್ಮೆಯ ಬಾಳಿಗೆ
ನುಡಿಯಲಿಲ್ಲ ಶ್ರೇಷ್ಠವೆಂದು ಒಂದು ಮಾತು ಸುಮ್ಮಗೆ

ಬಡವನಿಗಿಲ್ಲೇನಿದೆ ?
ಉಳ್ಳವನಿಗೆ ಬೇರಿದೆ
ಕಳ್ಳಕಾಕರಿಗಿಲ್ಲಿ ಸ್ವರ್ಗವೇ ತೆರೆದಿದೆ
ನಡುವೆ ಕಲ್ಲು ಕೊನರಿ ಇಲ್ಲಿ ದೇವರಾಗಿ ಮೆರೆದಿದೆ

ಹೀಗೆ ಸಹಜ ಜನಪದ ಧಾಟಿಗಳಿಂದ ಇವರ ಕಾವ್ಯ ಒಂದು ಸೋಪಾಜ್ಞ ಶೈಲಿಯನ್ನು ಪಡೆದಿವೆ. “ಈ ಕವಿತೆಗಳಲ್ಲಿ ಪ್ರಸಾದ್ ತಾವೊಬ್ಬ ಹುಟ್ಟು ಕವಿ ಎಂಬುದನ್ನು ರುಜುವಾತು ಪಡಿಸಿದ್ದಾರೆ.” (ಡಾ.ಸಿದ್ದಲಿಂಗಯ್ಯ)
ಇಲ್ಲಿನ ಅನುಭವ ಪ್ರಪಂಚವೊಂದರ ಗ್ರಹಿಕೆಗಳು ಬೇರೆಯದೆ ಆದ ನಿಲುವಿನಲ್ಲಿ ವೈಚಾರಿಕವು ಹೌದು, ಬಂಡಾಯವು ಹೌದು. ವಾಸ್ತವ ಜಗತ್ತಿನ ಸುತ್ತ ಇರುವ ದ್ವಂದ್ವಗಳು ( Deltyness) , ತವಕ ತಲ್ಲಣಗಳು, ಮೌಲ್ಯಗಳ ಅಧಃಪತನ, ಆತಂಕ ಈ ಕವಿತೆಗಳಲ್ಲಿ ಬಹುತೇಕ ಕಾಳಜಿಯಾಗಿ ಮಾನವ ಜೀವನವನ್ನು ಕಾಪಿಡುವ ಹಾಗೂ ನೈತಿಕ ನೆಲೆಗಟ್ಟಿನ ಮೇಲೆ ನಂಬಿಕೆಗಳು ಸಡಿಲವಾದ ಕಾಲದ ವಿವೇಚನೆ ಅಡಗಿದೆ. ” ದಗ್ಧನಾದವನ ಅಥವಾ ಸುಟ್ಟುಕೊಂಡವನ ಮನಸ್ಥಿತಿಯನ್ನು ಇಲ್ಲಿನ ಕವಿತೆಗಳಲ್ಲಿ ಚಿತ್ರಿಸುವ ಕ್ರಮ ಪ್ರಶಂಸಾರ್ಹವಾಗಿದೆ.” ( ಡಾ.ಜಿ.ಎಸ್.ಶಿವರುದ್ರಪ್ಪ) ಇಂತಹ ಸೂಕ್ಷ್ಮ ಸಂವೇದನೆಗಳ ಶಕ್ತಿ ಕವಿತೆಗಳಿಗೆ ದಕ್ಕಿದೆ ಎಂದರೆ ಅದು ಅವರ ನೆಲಮೂಲ ಸಂಸ್ಕೃತಿಯ ವೈವಿಧ್ಯತೆಯಾಗಿದೆ. ಬದುಕಿನ ನಂಬಿಕೆಗಳನ್ನು ಪರೀಕ್ಷಿಸಿಕೊಳ್ಳುವ ಕವಿತೆಗಳು ಇಲ್ಲಿವೆ ದ್ವಂದ್ವತೆಗೆ ಸಾಕ್ಷ್ಯವಾಗಿವೆ. ಮಾನಸಿಕವಾದ ತಳಮಳಗಳಿಗೆ ದ್ಯೋತಕವಾಗಿ ಹೃದಯ ಸಂವೇದನೆಗಳನ್ನು ಸಮೀಕ್ಷೆಗೆ ಒಡ್ಡಿಕೊಂಡು ತನ್ನನ್ನು ತಾನು ಸುಟ್ಟುಕೊಂಡು ಮುಖಾಮುಖಿಯಾಗಿಸುತ್ತದೆ.

” ಎದೆಗೆ ಚೂರಿ ಬಿದ್ದಿದೆ
ನೆತ್ತರುಕ್ಕಿ ಹರಿದಿದೆ
ಜೀವದನ್ನ ಬೇಯುತೈತೆ ಕೊತಕೊತನೆ ಕೆಂಪಗೆ
ಹಲ್ಲುಕಿಸಿದು ಕರಿಯಕಲ್ಲು ಕುಂತೆಐತೆ ತೆಪ್ಪಗೆ”

ಎನ್ನುವ ಕುಂಕುಮ ಕಲ್ಲುಗಳು ಕವಿತೆಯ ಕೊನೆಯ ಹಂತವಿದು. ಸಮಕಾಲೀನ ಸಾಮಾಜಿಕ ಮೌಢ್ಯಗಳ ತೊರೆಯದ ಹೊರತು ನಿರಂಕುಶಮತಿಗಳು ಆಗಲೂ ಸಾಧ್ಯವಿಲ್ಲ ಎನ್ನುವ ಕುವೆಂಪು ಮಾತುಗಳು ಇಲ್ಲಿ ಮನನೀಯ.

“‘ನಲ್ಲೂರು ದೊರೆಕಾಳಿ’ಯ ಮೂಲಕ ಕನ್ನಡ ಸಾಹಿತ್ಯ ಜಗತ್ತಿಗೆ ಪರಿಚಿತರಾದ ಪ್ರಸಾದರು ಇಂದಿಗೂ ಆ ಪರಿಚಯದ ಮೂಲವನ್ನು ತಮ್ಮ ವ್ಯಕ್ತಿತ್ವದ ಅಸ್ಮಿತೆಯಾಗಿಸಿಕೊಂಡು ಬಾಳಿದವರು. ದೊರೆಕಾಳಿ ನಲ್ಲೂರಿನ ಗ್ರಾಮದೇವತೆ; ಗ್ರಾಮ ಸಂಸ್ಕೃತಿಯ ಪ್ರತಿಮಾರೂಪಿ. ಕಾಯಕಜೀವಿಗಳ ಜಗತ್ತಿನಲ್ಲಿ ಸಂಸ್ಕೃತಿಯೆಂಬುದು ಮಾರ್ಗದ ರೀತಿಯ ಕಟ್ಟುಪಾಡಿನ ಕರ್ಮದ ಸಂಕೋಲೆಯಲ್ಲ ; ಜೀವನದಿಯಂತೆ ಚೈತನ್ಯದಾಯಿ. ಹರಿವ ನೆಲದ ಗಂಧಗುಣವನ್ನು ಮೈತುಂಬ ತುಂಬಿಕೊಂಡು ಋತುಗತಿಗೆ ಹೊಂದಿ ಉಕ್ಕಿಸೊಕ್ಕಿ ಕಡೆಗೆ ಬಿಕ್ಕುತ್ತಾ ಹರಿಯುವ ಗಂಗೆ ; ಸಮೃದ್ಧಿ ಸೆಡವು ಸಂಕಟ ಸಂತಾಪಗಳ ಕುಕ್ಕುಲಾತಿಯಲ್ಲಿ ಬಳ್ಳಿವರಿದ ಬಳಗಸಾಲು. ಅವುಗಳದೆ ಉರವಣಿಗೆ. ಇಂಥ ಸಂಸ್ಕೃತಿಯ ಪ್ರತಿಮಾರೂಪಿ ದೊರೆಕಾಳಿ. ಅವಳು ದೊರೆ. ಅವಳು ಕಾಳಿ. ಕಾಪಾಡುವ ಕರುಣೆ – ಕಾರುವ ಕೋಪ ; ಆಳುವ ಅಹಂ – ಪೊರೆಯುವ ಅಂತಃಕರಣ. ಇವಳು ಮಹಾಕಾಳಿ, ಇವಳು ಮಹಾಮಾಯಿ. ಜನಪದರ ನಂಬಿಕೆ ತಾಯಿಯ ಈ ಎರಡೂ ಗುಣಧರ್ಮಗಳನ್ನು ಸಮಾನಶೀಲಭಾವದಲ್ಲಿ ಸ್ವೀಕರಿಸಿದೆ ; ಒಪ್ಪಿಸಿಕೊಂಡಿದೆ. ಸಂದರ್ಭವಶದಲ್ಲಿ ಒದಗಿ ಬರುವ ಆಗುಹೋಗುಗಳಿಗೆ ಮುಖಾಮುಖಿಯಾಗುತ್ತಾ ಈ ಗುಣಧರ್ಮಗಳನ್ನು ಸ್ವವಿಮರ್ಶೆಯ ಮುಖೇನ ಅರ್ಥೈಸಿಕೊಳ್ಳುತ್ತದೆ. ಹೀಗಾಗಿ ಇಲ್ಲಿ ತಾಯಿ ನಿಮಿತ್ತ. ನಂಬಿಕೆ ಸ್ವಾಯತ್ತ. ದೊರೆಕಾಳಿಯನ್ನು ಕುರಿತ ಮೇಲಿನ ವಿವರಗಳೆಲ್ಲವೂ ಪ್ರಸಾದರ ಕಾವ್ಯದ್ರವ್ಯದ ಒಳಲಕ್ಷಣಗಳು ; ಅವರ ವ್ಯಕ್ತಿತ್ವದ ಅಸ್ಮಿತೆಯ ಮೂಲಧಾತುಗಳು. “( ಊರು ಕಡೆ ದಾರಿ, ಮುನ್ನುಡಿ , ನವಿಲು ಜಾಗರ , ಎಸ್.ಜಿ.ಸಿದ್ದರಾಮಯ್ಯ) ಎಂಬುದು ಅವರ ಕಾವ್ಯಕ್ಕೆ ಸಹೃದಯ ಹಿರಿಯ ಕವಿ ಬರೆದ ಷಾರವಾಗಿದೆ. ಇಂತಹ ರುಸುವತ್ತುಗಳನ್ನು ಕವಿ ಕಾವ್ಯ ಸ್ವೀಕರಿಸಿದೆ. “ನಲ್ಲೂರು ದೊರೆಕಾಳಿ” ಕೃತಿಯು ಕೆ.ಆರ್.ಪ್ರಸಾದ್ ರು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂಎ ವಿದ್ಯಾರ್ಥಿ ಇರುವಾಗ ಜಾನಪದ ಕ್ಷೇತ್ರ ಕಾರ್ಯಕ್ಕೆ ತಮ್ಮ ಗ್ರಾಮವನ್ನೆ ಆಯ್ದುಕೊಂಡು ಅಧ್ಯಯನ ಮಾಡಿದ ಜಾನಪದ ಗ್ರಾಮದೇವತೆಗಳ ಅಧ್ಯಯನದ ಅಕಾಡೆಮಿಕ್ ಶಿಸ್ತು. ಆಗ ದೇ. ಜವರೇಗೌಡರು ಆ ಊರಿಗೆ ಅವರ ಜೊತೆ ಹೋಗಿದ್ದರು. ವಿದ್ಯಾರ್ಥಿಯೊಬ್ಬನ ವಿಕಸಿತ ಜೀವನಕ್ಕೆ ಇದು ನಾಂದಿ ಎನ್ನಬಹುದು.

“ಕಾಡಿನೊಡಲಲಿ ನೀನು ಕಾಣದಂತೆ ಕುಳಿತು
ಇನ್ನೆಷ್ಟು ದಿನ ಹೀಗೆ ಬಚ್ಚಿಟ್ಟುಕೊಳುವೆ
ದಿನದಿನವೂ ಮೇಲೇರಿ ಗುರಿ ಬಿಚ್ಚಿ ಹಾರದೆ
ಬರಿಯ ಬಂಧನದೋಳೆಕೆ ಸೊರಗುತಿರುವೆ ?

ಪ್ರೀತಿಸುವರಾರಿಲ್ಲ ಎಂದೇಕೆ ಕೊರಗುತಿಹೆ
ನಾನಿಹೆನು ಬಾಯಿಲ್ಲಿ ಭಾಗ್ಯದೊಲವೆ
ಹೃದಯವನು ಬಿಚ್ಚಿಟ್ಟು ಮನಸಾರೆ ಮುತ್ತಿಟ್ಟು
ಬಾನಲ್ಲಿ ಹಾರೋಣ ಬಾರೆ ಚೆಲುವೆ.”(ಕರೆವ ಕೊರಳು ಕವಿತೆ)

ಡಾ.ನಲ್ಲೂರು ಪ್ರಸಾದ್ ಅವರು ಮೌಖಿಕ ಸಂಸ್ಕೃತಿಯ ಜನಪದ (Papular antiquity or folklore ) ಕ್ಷೇತ್ರದಲ್ಲಿ ಹೆಸರಾದವರು. ಹೆಸರು ಡಾ.ಕೆ.ಆರ್.ಪ್ರಸಾದ್ ,ಕಾವ್ಯ ನಾಮ ಡಾ.ನಲ್ಲೂರು ಪ್ರಸಾದ್. ೧೯೪೭ರ ನವೆಂಬರ್ ೨೬ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಎನ್.ಕೆ.ಸಂಜೀವಯ್ಯ ಮತ್ತು ಶಾಂತಮ್ಮ (ತಾಯಮ್ಮ) ದಂಪತಿಗಳ ಮಗನಾಗಿ ಒಕ್ಕಲುತನದ ಕುಟುಂಬದಲ್ಲಿ ಜನಿಸಿದರು. ಅವರು ಬಾಲ್ಯದಲ್ಲಿ ಶಿಕ್ಷಣವನ್ನು ನಲ್ಲೂರು , ಆನೇಕೆರೆ, ಚನ್ನರಾಯಪಟ್ಟಣಗಳಲ್ಲಿ ಮೆಟ್ರಿಕ್ ಪಡೆದು ಪದವಿಪೂರ್ವ ಮತ್ತು ಪದವಿ ಶಿಕ್ಷಣವನ್ನು ಶ್ರವಣಬೆಳಗೊಳದ ಶ್ರೀಗೋಮ್ಮಟೇಶ್ವರ ಮಹಾವಿದ್ಯಾಲಯದಲ್ಲಿ ಬಿಎ ಅನಾರ್ಸ್ ಪದವಿ ಪಡೆದರು. ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ ಎಂ ಕನ್ನಡ ಪದವಿ ವ್ಯಾಸಂಗ ಮಾಡಿ ಪಡೆದರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ “ಗಂಗಡಿಕಾರ ಒಕ್ಕಲಿಗರು – ಒಂದು ಅಧ್ಯಯನ” ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿ ಪಿ.ಎಚ್.ಡಿ ಪದವಿ ಪಡೆದರು. ಬೆಂಗಳೂರಿನ ಒಕ್ಕಲಿಗರ ಸಂಘದ ವಿಶ್ವೇಶ್ವರಪುರಂ ಕಲೆ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ ,ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಾನಪದ ತರಗತಿಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಮಾಡುತ್ತಾ ಮುಂದೊಂದು ದಿನ ಅದರ ಕೇಂದ್ರ ಸ್ಥಾನಕ್ಕೆ ಸ್ವರ್ಧಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಆಗಿದ್ದರು. ಅವರ ಕೃತಿಗಳು ಹೀಗಿವೆ: ಕವನ ಸಂಕಲನಗಳು; ನೀನೆಂಬ ನಾನು, ದಗ್ಧ, ಸೋನೆ ಮುಗಿಲು, ರೆಕ್ಕೆ ಬಡಿಯುವ ಮುನ್ನ, ನಿವೃತ್ತೋಪನಿಷತ್ತು, (ಆಯ್ದ ಕವನಗಳು) ನವಿಲು ಜಾಗರ. ಜಾನಪದ ಕ್ಷೇತ್ರದಲ್ಲಿ: ನಲ್ಲೂರು ದೊರೆಕಾಳಿ , ಗಂಗಡಿಕಾರ ಒಕ್ಕಲಿಗರು. ಸಂಪಾದನೆಯಲ್ಲಿ: ಕಮಲಾಕೃತಿ ವಿಮರ್ಶೆ, ಜಾನಪದ ಭಾರತಿ, ಜಾನಪದ ಕರ್ನಾಟಕ, ಹೆಜ್ಜೆ ಗುರುತು, ಇಂದಿನ ಕವಿತೆ, ನಮನ, ಮಂದಾರ, ಸ್ಕಾಲರ್ಷಿಪ್ ಸ್ಟೀಕ್ಸ್, ಬಸವ ಕಾವ್ಯ ಇತ್ಯಾದಿ. ಅವರ ಸಂಪಾದಕತ್ವದ ಪತ್ರಿಕೆಗಳು : ಕನ್ನಡ ನುಡಿ – ಕನ್ನಡ ಸಾಹಿತ್ಯ ಪರಿಷತ್ತು, ಜಾನಪದ ಸಮಾಚಾರ -ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಅನಿಕೇತನ – ಕರ್ನಾಟಕ ಸಾಹಿತ್ಯ ಅಕಾಡೆಮಿ ಪತ್ರಿಕೆಗಳನ್ನು ಅವರು ನಿಯಮಿತ ಅವಧಿಯವರೆಗೆ ತಂದರು.ಸರ್ಕಾರದ ಸಂಸ್ಥೆಗಳಲ್ಲಿ ಫ್ಯಾನಲಿಸ್ಟ್ ಸದಸ್ಯರಾಗಿ ದುಡಿದಿರುವರು.
ಅಲ್ಲದೆ ಸರ್ಕಾರೇತರ ಸಂಸ್ಥೆಗಳಲ್ಲೂ ಪ್ರೇರಣಾ ಜಾನಪದ, ಅಖಿಲ ಭಾರತ ಮುಂಡಲ ಸಮಾಜ, ಜನಪದರು, ಪ್ರಜ್ಞಾ ಸಾಂಸ್ಕೃತಿಕ ವೇದಿಕೆ ಮೊದಲಾದ ಸಂಸ್ಥೆಗಳಲ್ಲಿ ಅವರ ಕೊಡುಗೆ ಇದೆ. ಅವರ ಅಮೂಲ್ಯವಾದ ಸೇವೆಯನ್ನು ಮನಗೊಂಡು ಶ್ಲಾಘಿಸಿ ಬಂದ ನಾಡಿನ ಪ್ರಶಸ್ತಿ ಪುರಸ್ಕಾರಗಳು ಹಲವು ; ರಾಜ್ಯೋತ್ಸವ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಕನ್ನಡ ಕುಲ ತಿಲಕ ಪ್ರಶಸ್ತಿ, ಗೊಮ್ಮಟ ವಿದ್ಯಾಪೀಠ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ, ಜೀಶಂಪ ಜಾನಪದ ಪ್ರಶಸ್ತಿ, ಗೌತಮ ಪ್ರಶಸ್ತಿ, ಚೆನ್ನರಾಯಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವವನ್ನು ವಹಿಸಿದ್ದರು. ಯುವ ಮನಸ್ಸುಗಳಿಗೆ ಸದಾ ಸ್ಫೂರ್ತಿದಾಯಕವಾಗಿರುವ ಇವರು ಕನ್ನಡಿಗರ ಮನಗೆದ್ದಿದ್ದಾರೆ. ಅವರ ಸಮಯದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆಯಲ್ಲಿ ಎಲ್ಲರಿಗೂ ಒಪ್ಪುವಂತೆ ಕೆಲಸ ಮಾಡಿದರು .ಯಶಸ್ವಿ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿ ನಡೆಸಿದರು. ದಲಿತ ಹಿಂದುಳಿದ ವರ್ಗದವರಿಗೆ ಸಮಾನವಾದ ಆದ್ಯತೆ ನೀಡಿದರು. ಹಿರಿಯ ಪಂಡಿತ ಪಾಮರರ ಆಶೀರ್ವಾದ ಬಲದಿಂದ ಅವರು ಒಳ್ಳೆಯ ಕೆಲಸ ಮಾಡಿದರು. ಅವರ ಕಾವ್ಯವನ್ನು ಅನುಸಂಧಾನ ಮಾಡುವುದೆಂದರೆ ಅದೊಂದು ಅಥೆಂಟಿಕ್ ಆದ ಜೀವಂತ ಪ್ರಾಕ್ಟಿಕಲ್ ಅನುಭವವಿದ್ದ ಹಾಗೆ. ಇಂತಹ ನಿರೀಕ್ಷೆಯಲ್ಲಿ ಅವರ ಕವಿತೆಗಳು ಹೆಚ್ಚು ಆಪ್ಯಾಯಾಮಾನವಾಗಿವೆ. “ಕರೆವ ಕೊರಳು” ಭಾವಗೀತೆಗಳ ಧ್ವನಿ ಮುದ್ರಣ Lirics ಬಂದಿದೆ. ಮೃತ್ಯುಂಜಯ ದೊಡ್ಡವಾಡ ಹಾಡಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರು ಜನಸಮುದಾಯಗಳಿಗೆ ಅಥವಾ ಜನಜಾತೀಯ ಬುಡಕಟ್ಟು ಸಮಾಜಗಳಿಗೆ ನೀಡಿದ ಸ್ಪಂದನ ಮರೆಯುವಂತಿಲ್ಲ. ಗ್ರಾಮ ಸಂಸ್ಕೃತಿಯ ನೈಜ ಬದುಕಿನ ಚಲನಶೀಲ ವಿಶ್ವಕೋಶದಂತೆ ಕಲಾತ್ಮಕ ಅನುಭವದ ಪ್ರೀತಿಯ ಕಾವ್ಯವನ್ನು ಅವರು ಬರೆದರು. ಇದು ನಲ್ಲೂರು ಪ್ರಸಾದ್ ಅವರ ಕಾವ್ಯ ಜಿಜ್ಞಾಸೆಯ ಒಂದಿಷ್ಟು ಹೊಳಹುಗಳು. ಕವಿತೆಗೆ ಏನು ಬೇಕು ಏನು ಬೇಡ ಎಂಬುದು ಕವಿಗೆ ತಿಳಿದ ವಿಚಾರವೇ ಆಗಿದೆ. ಅಂದು ಇಂದಿನ ಕವಿತೆಗಳ ಒಡನಾಟ ಹೇಗಿತ್ತು ಹೇಗಾಯಿತು ಎಂಬ ಚಿಂತನೆಯೂ ಇದೆ.

“ಮೊದಲು ಅವಳ ನೋಡಿದಾಗ
ಏನಿತ್ತು ವಯ್ಯಾರ
ಅವಳ ಯೌವ್ವನದ ದಿನಗಳಲ್ಲಿ
ಅರಳಿನಿಂತ ಮೈ
ಮಲ್ಲಿಗೆ, ಗುಲಾಬಿ, ಸಂಪಿಗೆ
ನೂರು ಯೋಜನದಾಚೆಗೂ
ರೋಮಾಂಚನ, ಗಮಗಮಿಸಿ
ಗಾನಪಾಡುವ ಮತ್ಯ್ಸಗಂಧಿ
ನಡೆದು ಬಂದರೆ ಸಾಕು
ಹಂಸೆ, ನವಿಲು ನಾಚಬೇಕು
ಮಾತು ಮೋಡಿಯಹಾಕಿ
ಉದುರಿಸುತ್ತಿದ್ದಳು ಮುತ್ತು
ಕೂಗಿ ಕಣ್ಣು ಹೊಡೆದರೆ
ಬಂದೇ ಬಿಡುತ್ತಿದ್ದಳು
ಹಗಲು ರಾತ್ರಿಯ ಹೊತ್ತು.
ಕವಿತಾ
ಏನಾದರೂ ಸರಿ
ಕಂಡಕಂಡದ್ದು ಕೇಳಿದ್ದು
ಕವಿ, ತಾ….ತಾ….
ಎಂದು ತಬ್ಬಿ ಮೊರೆಯುತ್ತಿದ್ದಳು
ಮುಂಗಾರು ಮಳೆಯ ಭೋರ್ಗರೆತ
ಹದವಾದ ಹದಿವಯಸು
ಆಡಿದ್ದೇ ಮಾತು
ಹಾಡಿದ್ದೇ ರಾಗ
ಬುದ್ಧಿ ಹೇಳುವ ರಸಿಕ
ಬಿದ್ದು ಬಿಡುತ್ತಿದ್ದ ಕಾಲಡಿಗೆ.
ಆದರೆ ಈಗೇನಾಯಿತು
ಮೊದಲ ಜೂಲಿಲ್ಲ
ಬಣಬಣಿಸುವುದಿಲ್ಲ ನೂರು ಮಾತು
ಹೂವು ಬೆಳದಿಂಗಳು
ಪ್ರೇಮ ಪ್ರೀತಿ….
ಉತ್ಸವ ಉಲ್ಲಾಸಗಳಿಲ್ಲ
ಪ್ರಾಸಗಾನದ ದಾಸಳೂ ಅಲ್ಲ
ಅನಿಸಿದ ಮಾತ ನೂರು ಸಾರಿ ಹಾಕಿ ತೂಕ
ನಿಧಾನಕ್ಕೆ ತೆರೆಯುತ್ತಾಳೆ ಅಂತಃಪುರಲೋಕ
ಯಾಕೆ ವಯಸ್ಸಾಯಿತೆ
ನಮ್ಮ ಕವಿತಾಗೆ ?
ಎಲ್ಲಿ ಹೋಯಿತು ಆ ನಗೆ ?” (ಕವಿತಾ)

ಎಂಬುದು ಒಂದು ಹೆಣ್ಣಿನ ಆತ್ಮಾವಲೋಕನದ ಕತೆ ಪ್ರತೀಕ ರೂಪಕದ ಧಾಟಿಯಲ್ಲಿ ಯವ್ವನದ ತೀವ್ರತೆ ಮುಗಿದ ಬಳಿಕ ಹೆಣ್ಣಿನ ಸ್ಥಿತಿಯಂತೆ ಕವಿತೆಗೆ ಜೀವನೋತ್ಸಾಹ ಮತ್ತು ಪ್ರಾಸ ಗಾನವಾಗಬೇಕೆಂಬ ಬಯಕೆಯಿಲ್ಲ ಬದಲು ಅದು ಇನ್ನೇನು ಬೇಡುತ್ತದೆ.

“ನನ್ನ ಕವಿತೆ,
ಸಿಂಹಾಸನದಲ್ಲಿ ಕೂತು ಮೆರೆವ
ರಾಣಿಯ ಮುಡಿಯ ಮುಕುಟವಾಗಬೇಕಿಲ್ಲ
ಬೆವರ ಬಸಿದ ಬಡವರ ಹರಿದ ಬಟ್ಟೆಗೆ
ತೇಪೆ ಚಿಂದಿಯಾದರಷ್ಟೇ ಸಾಕು
ಸುಲಿಗೆಕೋರರ ಕೈ ಬಂದೂಕವಾಗದೆ
ಉಳುಮೆ ಮಾಡುವ ನೇಗಿಲಾದರಷ್ಟೇ ಸಾಕು
ವೀರಾಧಿವೀರರ ಒರೆಯ ವಜ್ರ ಖಚಿತ
ಖಡ್ಗವಾಗದೆ ಬೆಳೆದ ಕಳೆಗಳ ಕೊಚ್ಚಿ ತೆಗೆವ
ಕುಡುಗೋಲಾದರಷ್ಟೇ ಸಾಕು
ವೇದಿಕೆಯ ಕೂಗುಮಾರಿಯಾಗದೆ
ಕುಣಿವ ಕೊಳ್ಳಿದೆವ್ವವಾಗದೆ
ನೊಂದವರ ಬೆಂದವರ ಅಪ್ಪಿ
ಸಾಂತ್ವನಿಸುವ ತಾಯಿಮಮತೆಯಾದರೆ ಸಾಕು

ಬೇಕಾಗಿಲ್ಲ ನನ್ನ ಕವಿತೆಗೆ
ಅವರಿವರ ಭೋಪರಾಕು
ಅದು ನೊಂದು ನಲುಗಿ ಅಯ್ಯೋ ಅಪ್ಪ
ಎಂದವರ ಕಂದನಾದರೆ ಸಾಕು
ತಳ್ಳುಗಾಡಿಯ ತಂದೆ ಗಾರೆಕೆಲಸದ ಅಣ್ಣ
ಕಸತೊಡೆವ ಸೊಸಿ ನೆಡುವ
ದನ ಕುರಿಯ ಕಾಯುತ್ತಾ
ನೆಲ ಉತ್ತು ಸೋಲುತ್ತಾ
ಇರುಳ ಕತ್ತಲಲಿ ತಡವರಿಸಿ ಕುಂತವಗೆ
ಉರಿವ ದೀಪವಾದರೆ ಸಾಕು
ಹೇಳಿ ಕವಿಗೆ ಇದಕಿಂತ ಇನ್ನೇನು ಬೇಕು ? (ನನ್ನ ಕವಿತೆ)

ಹೀಗೆ ಕವಿತೆಯ ಆಶಯಗಳು ನೊಂದವರ, ಬೆಂದವರ,ಶ್ರಮಿಕ ಕಾರ್ಮಿಕರ ನೋವು ನಲಿವಿಗೆ ಆಧ್ಯಾಹಾರವಾಗುವ ಹಂತಕ್ಕೆ ಕವಿತೆ ಹೋದರೆ ಅದು ಸಾರ್ಥಕದ ಭಾವ. ಕವಿಗೆ ಇದಕ್ಕಿಂತ ಯಾವ ಭೋಗಭಾಗ್ಯ ಪ್ರಶಸ್ತಿಗಳು ಬೇಕಾಗಿಲ್ಲ ಎನ್ನುವ ಮೀಮಾಂಸೆ ಸಾರ್ವಜನಿಕ ಇತ್ಯಾತ್ಮಕ ನೆಲೆಯನ್ನು ತಲುಪಿಬಿಡುತ್ತದೆ.

“ತೂತು ಮನೆಯಲ್ಲಿ ಕೂತು ಮಳೆನೀರ ಒದ್ದೆಯಲಿ
ಅರಮನೆ ಅದ್ಭುತವ ಕನಸಿದವನು
ಚಾಪೆ ತೇಪೆಯ ಒಳಗೆ ಕಂಬಳಿಯ ಚಿಂದಿಯಲಿ
ನಾಕ ಲೋಕವ ಕಂಡು ಸುಖಿಸಿದವನು.

ಅವ್ವ ಅಜ್ಜರ ನೆರಳು ಪ್ರೀತಿ ದನಿಗಳ ಕೊರಳು
ಮತ್ತೆಲ್ಲಿ ತಡಕಲಿ ಗತದ ಸುಖವ

ಅಂದಿತ್ತು ಇಂದಿಲ್ಲ ಬಂದು ಹೋಯಿತು ಅಷ್ಟೆ
ಅದೇ ಬೇಕು ಎನಲು ನನ್ನ ಸೊತ್ತೆ !
ಕೆಟ್ಟು ಹೋಯಿತು ಕಾಲ ಎಂದು ಕೊರಗಲು ಸಲ್ಲ
ಊರಕಡೆ ದಾರಿಯನು ಸವೆಸು ಮತ್ತೆ.”

ಎಂಬ ಜಿಜ್ಞಾಸೆ ತನ್ನ ಎಲ್ಲಾ ಇರಾದೆಗಳನ್ನು ತೊಡೆದು ಊರ ದಾರಿಯ ಕಡೆಗೆ ಸರಳ ರಸಿಕನ ಹಾಗೆ ನಡೆದು ಬಿಡುವುದು ಲೇಸೆಂಬ ಬಾಳಿನ ಎಚ್ಚರಿಕೆ ಕವಿಗೆ ಇದೆ.

“ನನಗೋ ಈಗ ಕಟ್ಟು ಕಳಚಿ ನಿಂತ ಪರಿ
ಗಗನದೆತ್ತರದಲ್ಲಿ ಗರುಡ ವಾಯುವಿಹಾರ
ಎಲ್ಲ ಕಿತ್ತು ಬಿಸುಟುನಿಂತ ಬಾಹುಬಲಿ
ಬಯಲಲ್ಲಿ ಬಯಲಾದ ಅಕ್ಕ ನಡೆದ ದಾರಿ
ಇನ್ನು ನನ್ನಷ್ಟಕ್ಕೆ ನಾನು
ಸುಖವಾಗಿ ಹಾಸಿಗೆಯಲಿ ಬಿದ್ದು
ಬೇಕೆಂದಾಗ ಎದ್ದು ಆನಂದ ಮುಕ್ಕಳಿಸುತ್ತೇನೆ
ಕಟ್ಟುಕಟ್ಟಳೆ ಇಲ್ಲ
ಬೆಳೆದ ಗಡ್ಡ ಬೋಳಿಸಬೇಕಿಲ್ಲ
ಕಾಫಿ ಕುಡಿಯಲು ಹಲ್ಲುಜ್ಜಲೇಬೇಕಲ್ಲ
ಸ್ನಾನ ಈಗ ನನಗೆ ಕಡ್ಡಾಯವಲ್ಲ
ಹತ್ತಕ್ಕೆ ಹಾಜರಾಗಿ ಗುಜರಾಯಿಸಿ ಸಹಿ
ಅಪರಾಧಿ ನಾನಲ್ಲ ಎಂದು ಮಾಡಬೇಕಿಲ್ಲ
ಪುಸ್ತಕ, ಪೆನ್ನು, ಕರ್ಚೀಪು, ಕೀ
ಬಾಚಣಿಗೆ ಕಡೆಗೆ ಹಾಕಿಕೊಂಡ ಕನ್ನಡಕ
ಈಗ ಹುಡಕಬೇಕಿಲ್ಲ “

“ಈಗ ಎಲ್ಲ ಖುಲ್ಲಂ ಖುಲ್ಲಾ
ಗಡಿಯಾರದ ಮುಳ್ಳುಮೊನೆ ತೋರುಬೆರಳಿಗೆ ನಾನಾಳಲ್ಲ
ವೇಳಾಪಟ್ಟಿ ನೊಗ ಹೊತ್ತು ಗಾಣದೆತ್ತಾಗಬೇಕಿಲ್ಲ
ಯಾರು ಅಂಜಿಕೆಯಿಲ್ಲ ಅಂಕುಶವಿಲ್ಲ ಸರ್ವತಂತ್ರ ಸ್ವತಂತ್ರ

ಅದಕ್ಕೆ ಸ್ವಾಮಿ ನಾನು ಹೇಳುವುದು
ನಿವೃತ್ತ ಎಂದರೆ ಮೃತ ಅಲ್ಲ
ಅದು ಮೊಸರು ಕಡೆದು ತೆಗೆದ ನವನೀತ
ಸಮುದ್ರ ಮಥನದ ಸೃಷ್ಟಿಯ ಅಮೃತ
ಶಾಂತಿ ಪ್ರಶಾಂತ ಈ ನಿವೃತ್ತ.” ( ನಿವೃತ್ತೋಪನಿಷತ್ತು)

ಹೀಗೆ ಅವರ ಕವಿತೆ ಒಂದಿಷ್ಟು ತುಂಟತನದ ಹರುಷವನ್ನು ಹೇಳಿಕೊಳ್ಳುವ ವಸ್ತುವಾಗಿದೆಯೆಂದರೆ ಕವಿ ಬಹಳ ಸಹಜ ಮತ್ತು ಜೀವನೋತ್ಸಾಹಿ ಎಂಬುದು ಖಚಿತ. ಅಂದರೆ ಹಿಂದಿನ ಯಾವ ನಿಯಮಗಳು ಈಗ ಬಾದಿಸಲಾರವು. ಅವರು ಮುಕ್ತ ಸ್ವತಂತ್ರರು. ಹಿರಿಯರು. ನಾಡು ಕಟ್ಟಿದವರು ನುಡಿ ಬೆಸೆಸಿದವರು ನಮ್ಮ ಮೇಷ್ಟ್ರು ನಲ್ಲೂರು ಪ್ರಸಾದ್.

ಹಾಸನ ಸೀಮೆಯ ಹಳ್ಳಿಗಾಡಿನ ಭಾಷಿಕ ಸೊಗಸು ಬಹಳ ಸುಂದರವಾಗಿದೆ. ದೇಸಿ ಮಾತಿನ ಲಯವೆ ಅಂತದ್ದು. ಅಕ್ಷರ ಸೂರ್ಯನಿಗೆ ನಮನಗಳು. ತೆಂಗು ಬಾಳೆ ಅಡಕೆ ಭತ್ತದನೆಲ್ಲು ರಾಗಿತೆನೆ ಉಚ್ಚೇಳು ತೊಗರಿ ಅವರೆ ಕಸ್ತೂರಿ ಸೇವಂತಿಗೆ ಮಲ್ಲಿಗೆಯ ರೀತಿ ಈ ಭಾಷೆಯ ಸೊಗಡು ಸಮೃದ್ಧಿಯ ಸಂಕೇತ. ಕಂಚಿನ ತಟ್ಟೆಯ ಆರತಿ ದೀಪದಂತೆ ದೇದಿಪ್ಯಮಾನ. ಬೆಣ್ಣೆ ತುಪ್ಪವಾಗುವ ಸಣ್ಣ ಉರಿಯ ಹದವಾದ ಘಮಲು. ಕಾಲುಂಗರ ಮಿಂಚುಗಳ ಭತ್ತಕ್ಕೆ ಎಸೆದು ಹೋದ ಅಳಿಮಯ್ಯನ ರೀತಿ ಹಾಸನ ಭಾಷೆಯ ಅರಿವು. ಎತ್ತಿನ ಕೊರಳ ಗಂಟೆ ನಾದದಂತೆ, ಹಸುವು ಕರುವಿಗೆ ಮೊಲೆಯೂಡಿದಂತೆ, ನೇಗಿಲ ಗೆರೆ ಸಾಲು ಬಳಗ ಹಸಿರು ಪೈರಿನಂತೆ, ಹೇಮಾವತವ್ವನ ಎದೆಯ ಹಾಲುಂಡು ಚಿಗುರಿ ಲಕಲಕಿಸುವಂತೆ ಆ ಭಾಷೆಯಲ್ಲಿನ ಚಂದವನ್ನು ನಿಜವಾಗಿ ಸವಿಯಲು ಗೊರುರು ರಾಮಸ್ವಾಮಿ ಅಯ್ಯಂಗಾರ್, ಎಸ್.ಎಲ್ .ಬೈರಪ್ಪ ,ನಲ್ಲೂರು ಪ್ರಸಾದ್ , ಬೇಲೂರು ಕೃಷ್ಣಮೂರ್ತಿ, ಬೇಲೂರು ರಘುನಂದನ್ ಇಂತವರನ್ನು ಓದಿದಾಗ ಅದರ ಗತ್ತುಗಮ್ಮತ್ತು ಅರಿವಿಗೆ ಬರುತ್ತದೆ ಮತ್ತು ನಿಲುಕುತ್ತದೆ.

-ಸಂತೋಷ್ ಟಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x